ಶ್ರೀಮತಿ ಹೆಗಡೆ ಭೇಟಿ ಪ್ರಸಂಗ (ಸುರೇಶ ಆನಗಳ್ಳಿಯವರ ನಿರ್ದೇಶನದ ನಾಟಕ ಕುರಿತು ಒಂದು ಟಿಪ್ಪಣಿ)

ಮೊನ್ನೆ ಅಂದರೆ ಅಕ್ಟೋಬರ್ 10 2014 ರಂದು ನನ್ನ ನೆಚ್ಚಿನ ಗೆಳೆಯ ಸುರೇಶ ಆನಗಳ್ಳಿ ನಿರ್ದೇಶನದ ಅನೇಕ ತಂಡ ಅಭಿನಯಿಸಿದ “ಶ್ರೀಮತಿ ಹೆಗಡೆ ಭೇಟಿ ಪ್ರಸಂಗ” ನಾಟಕ ಮೊದಲ ಪ್ರದರ್ಶನವು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಆಯಿತು. ನನಗಿದು ವೈಯಕ್ತಿಕವಾಗಿ ತುಂಬ ಆಸಕ್ತಿ ಹುಟ್ಟಿಸಿದ್ದ ರಂಗಪ್ರದರ್ಶನ. ಏಕೆಂದರೆ “ಅನೇಕ” ತಂಡವು ತನ್ನ ದಶಮಾನೋತ್ಸವಕ್ಕಾಗಿ ಈ ನಾಟಕವನ್ನು ಅಭಿನಯಿಸಲು ಯೋಜಿಸಿತ್ತು. ಈ ತಂಡದ ಹುಟ್ಟಿನ ಅವಧಿಯಿಂದ ನನಗೆ ಪರಿಚಿತವಾದ ತಂಡವು ಈಗ ಹೊಸ ಸದಸ್ಯರಿಂದ ಚಟುವಟಿಕೆ ನಡೆಸಲು ಆರಂಭಿಸಿದೆ ಎಂಬುದು ಮತ್ತು ಸುರೇಶ ಆನಗಳ್ಳಿಯ ನಿರ್ದೇಶನವಿದೆ ಎಂಬುದು ನನ್ನ ನೋಡುವ ಆಸಕ್ತಿಯ ಹಿಂದೆ ಇದ್ದ ಮೂಲ ಕಾರಣ.

ಫ್ರೆಡರಿಕ್ ಡ್ಯೂರನ್‍ಮ್ಯಾಟ್ 1956ರ ಸುಮಾರಲ್ಲಿ “ದ ವಿಸಿಟ್” ನಾಟಕ ಬರೆದದ್ದು. ಈ ನಾಟಕವು ಆ ಕಾಲದಿಂದ ಜನಪ್ರಿಯ. ಈ ನಾಟಕದ ಅನೇಕ ಅನುವಾದಗಳು, ಅನೇಕ ಭಾಷೆಗಳಲ್ಲಿ ರಂಗಪ್ರದರ್ಶನಗಳು ಆಗಿವೆ. ಈ ನಾಟಕದ ಮೊದಲ ಅಮೇರಿಕನ್ ಪ್ರದರ್ಶನ 1958ರಲ್ಲಿ ಆಯಿತು. ನಂತರ ಈ ನಾಟಕವನ್ನು ಪೀಟರ್‍ ಬ್ರೂಕ್ ತರಹದ ಜಗತ್ತಿನ ಶ್ರೇಷ್ಟ ರಂಗನಿರ್ದೇಶಕರು ಸಹ ನಿರ್ದೇಶಿಸರುವುದಿದೆ. 1964ರಲ್ಲಿ ಈ ನಾಟಕದ ಸಿನಿಮಾ ಆವೃತ್ತಿಯೂ ತಯಾರಾಗಿತ್ತು. ಇನ್‍ಗ್ರಿಡ್ ಬರ್ಗ್‍ಮನ್ ಮತ್ತು ಆಂಟನಿ ಕ್ವಿನ್ ಈ ಸಿನಿಮಾದ ಪ್ರಧಾನ ಪಾತ್ರಧಾರಿಗಳಾಗಿದ್ದರು. (ಈ ಸಿನಿಮಾದಲ್ಲಿ ನಾಟಕಕ್ಕಿಂತ ಭಿನ್ನ ಅಂತ್ಯವನ್ನು ಮಾಡಲಾಗಿತ್ತು ಎಂಬುದು ಪ್ರತ್ಯೇಕ ಚರ್ಚೆಯ ವಿಷಯ.) ಈ ನಾಟಕವು ನಂತರ ಜಗತ್ತಿನಾದ್ಯಂತ ಅನೇಕ ಮಾಧ್ಯಮಗಳಲ್ಲಿ ಬಂದು ಕನ್ನಡದಲ್ಲಿ “ಮಾನಿನಿ” ಎಂಬ ಚಲನಚಿತ್ರವೂ ಆಗಿತ್ತು. “ಮಿಸ್ ಮೀನಾ” ಎಂಬ ಹೆಸರಲ್ಲಿ 1990ರಲ್ಲಿ ಬೆಂಗಳೂರಿನ ಇಂಗ್ಲೀಷ್ ನಾಟಕ ತಂಡವೊಂದು ಅಭಿನಯಿಸಿತ್ತು. “ಕಮಲಾಗಮನ” ಎಂಬ ಹೆಸರಲ್ಲಿ ಪ್ರೇಮ ಕಾರಂತ ಅವರು ಅಭಿನಯಿಸಿದ್ದ 90ರ ದಶಕದ ಪ್ರದರ್ಶನವಲ್ಲದೆ, ನೀನಾಸಂ ವಿದ್ಯಾರ್ಥಿಗಳು ಸಹ ಈ ನಾಟಕವನ್ನು ಅಭಿನಯಿಸುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಸುರೇಶ ಆನಗಳ್ಳಿಯವರ ಪ್ರಯತ್ನದ ಬಗ್ಗೆ ಕುತೂಹಲ ಇರುವುದು ಸಹಜ.

ನಾಟಕ ಪಠ್ಯ

ಮೇಲ್ನೋಟಕ್ಕೆ ಇದೊಂದು ದ್ವೇಷದ ಕತೆ (ರಿವೆಂಜ್ ಸ್ಟೋರಿ) ಎನಿಸುತ್ತದೆ. ಆದರೆ ಇದೊಂದು ರಾಜಕೀಯ ವಿಡಂಬನಾತ್ಮಕ ನಾಟಕ. ಶಿಲಾನಗರಿ ಎಂಬ ಸಣ್ಣ ಊರಲ್ಲಿ ಈ ನಾಟಕವು ಘಟಿಸುತ್ತದೆ. (ಮೂಲ ನಾಟಕದಲ್ಲಿ ಈ ಊರಿನ ಹೆಸರು “ಗಿಲ್ಲೆನ್”. ಹಾಗೆಂದರೆ ಅಮೇಧ್ಯ ಹರಿವ ಜಾಗ ಎಂದರ್ಥ. ಅನುವಾದಕರು ಇದನ್ನು “ಶಿಲಾನಗರಿ” ಎಂದು ಹೆಸರಿಸಿ ಮೂಲದ ಧ್ವನ್ಯಾರ್ಥಗಳನ್ನು ಕಳೆದುಕೊಂಡಿದ್ದಾರೆ.) ಇಡಿಯ ಊರು ಶಿಲೆಯಂತೆ ಬದಲಾಗದೆ ಎಷ್ಟೋ ಕಾಲದಿಂದ ಹಾಗೆಯೇ ಇದೆ ಎಂಬುದು ಗೂಡಾರ್ಥ ಎನ್ನಬಹುದೇನೋ. ಈ ಊರಿನ ಜನ ರೈಲ್ವೇ ಸ್ಟೇಷನ್ ಬಳಿ ನಿಂತು ಯಾರಿಗೋ ಕಾಯುತ್ತಾ ಆ ಊರಿನ ಹಿಂದಿನ ವೈಭವವನ್ನು ಕುರಿತು ಮಾತಾಡುತ್ತಾರೆ ಮತ್ತು ಅದೇ ದಿನ ಅಲ್ಲಿಗೆ ಬರಲಿರುವ ಭಾರೀ ಶ್ರೀಮಂತೆ ಕಮಲಾ ಹೆಗಡೆಯನ್ನು ಕುರಿತು ಮಾತಾಡುತ್ತಾರೆ. ಈ ಮಾತಾಡುವವರ ಜೊತೆಗೆ ಸೇರಿಕೊಳ್ಳುವ ಊರಿನ ಅಧ್ಯಕ್ಷ, ಡಿವೈಎಸ್‍ಪಿ, ಡಾಕ್ಟರ್ ಮತ್ತು ಇತರರ ಜೊತೆಗೆ ವಾಮನರಾವ್ ಶಾನುಭೋಗ ಎಂಬ ಕಮಲ ಹೆಗಡೆಯ ಮಾಜಿ ಪ್ರೆಮಿಯೂ ಇದ್ದಾನೆ. ಇವರೆಲ್ಲರ ಬಯಕೆ ಒಂದೇ. ಹೇಗಾದರೂ ಬರಲಿರುವ ಶ್ರೀಮಂತೆಯಿಂದ ಹಣವನ್ನು ದೇಣಿಗೆಯಾಗಿ ಪಡೆದು ಶಿಲಾನಗರಿಯ ಕಳೆದುಹೋದ ವೈಭೋಗವನ್ನು ಮರಳಿ ತರುವುದು. ಇದಕ್ಕಾಗಿ ಕಮಲಾಳ ಮಾಜಿ ಪ್ರೇಮಿಯನ್ನು ಬಳಸಿಕೊಳ್ಳಲು ಅವರು ತೀರ್ಮಾನಿಸುತ್ತಾರೆ. ಸಣ್ಣ ವ್ಯಾಪಾರಿಯಾದ ವಾಮನ ಸಹ ಊರಿನ ಏಳಿಗೆಗೆ ಒಪ್ಪುತ್ತಾನೆ. ಎಲ್ಲರೂ ಬರಲಿರುವ ನಾಳೆಗೆ ಸಂಭ್ರಮಿಸುವಾಗಲೇ ಎಂದು ಆ ಊರಲ್ಲಿ ನಿಲ್ಲದ ಎಕ್ಸ್‍ಪ್ರೆಸ್ ರೈಲು ನಿಂತುಬಿಡುತ್ತದೆ. ಅದರಿಂದ ಇಳಿದು ಬರುವ ಕಮಲ ಮತ್ತವಳ ಭಟ್ಟ, ಕುಟ್ಟ ಇತ್ಯಾದಿಗಳನ್ನು ಕಂಡು ಎಲ್ಲರೂ ಬೆರಗಾಗುತ್ತಾರೆ. ಚೈನ್ ಎಳೆದು ರೈಲು ನಿಲ್ಲಿಸಿದ್ದಕ್ಕೆ ಸಿಟ್ಟಾಗಿ ದಂಡ ಹಾಕಲು ಬರುವ ಅಧಿಕಾರಿಯನ್ನು ತನ್ನ ಹಣದಿಂದಲೇ ಕೊಳ್ಳುವ ಕಮಲಾ ಹೆಗಡೆಯನ್ನು ಕಂಡು ಊರಿನವರು ಬೆರಗಾಗುತ್ತಾರೆ. ಅವಳ ಪ್ರತೀಮಾತು ಆ ಜನಕ್ಕೆ ನಾಳೆಯೇ ಸಂಭ್ರಮಕ್ಕೆ ಮುನ್ನುಡಿ ಎನಿಸುತ್ತದೆ. ಆದರೆ ನೋಡುಗನಿಗೆ ಈ ವಿವರಗಳು ಬರಲಿರುವ ದುರಂತಕ್ಕೆ ಮುನ್ನುಡಿಯಾಗಿ ಕಾಣುತ್ತವೆ. ಅದೇ ಕ್ರಮದಲ್ಲಿ ನಗರಿಗರ ಜೊತೆಗೆ ಇರುವ ವಾಮನನ್ನು ಕಂಡು ಸಂಭ್ರಮದಿಂದ ಮಾತಾಡಿಸುವ ಕಮಲಾ ಹೆಗಡೆಯನ್ನು ಕಂಡು ಊರವರು ವಾಮನನ ಅದೃಷ್ಟಕ್ಕೆ ಕರುಬುತ್ತಾರೆ.

ಅಲ್ಲಿಂದಾಚೆಗೆ ಊರವರು ಕೊಡುವ ಸನ್ಮಾನ ಸ್ವೀಕರಿಸುವ ಹೆಗಡೆ ತಾನು ಈ ಊರಿಗೆ ನೂರು ಕೋಟಿ ಕೊಡುತ್ತೇನೆ ಒಂದು ಷರತ್ತಿನ ಮೇಲೆ ಎಂದು ವಾಮನನ ಹೆಣ ಬೀಳಿಸಿ ಎನ್ನುತ್ತಾಳೆ. ಊರವರು ಬೆರಗಾಗುವಾಗಲೇ ಆಕೆಯ ಜೊತೆಗೆ ಇರುವ ಭಟ್ಟ ತಾನು ಮಾಜಿ ಜಡ್ಜ್ ಎನ್ನುತ್ತಾ ಹೆಗಡೆಯ ಬೇಡಿಕೆಯ ಕಾರಣವನ್ನು ತಿಳಿಸುತ್ತಾನೆ. ವಾಮನ ತಮಾಷೆ ಎಂದುಕೊಂಡದ್ದು ಗಂಭೀರವಾಗುತ್ತದೆ. ಆದರೆ ಊರವರೆಲ್ಲರೂ ಅವನನ್ನು ಕೊಲ್ಲುವುದಿಲ್ಲ ಎನ್ನುತ್ತಾರೆ. ಹೆಗಡೆ ತಾನು ನ್ಯಾಯವನ್ನು ಕೊಳ್ಳುವುದಕ್ಕೆ ಕಾಯುತ್ತೇನೆ ಎಂದು ಅದೇ ಊರಲ್ಲಿ ಉಳಿಯುತ್ತಾಳೆ.

ಕಾಲ ಸಾಗಿದಂತೆ ಊರವರಿಗೆ ಕೊಳ್ಳುಬಾಕ ಸಂಸ್ಕೃತಿಯ ರೋಗ ಅಂಟಿಕೊಳ್ಳುತ್ತದೆ. ವಾಮನನಿಗೆ ತನ್ನ ಸಾವು ಹತ್ತಿರ ಬಂತು ಎಂಬ ಭಯ ಕಾಡುತ್ತದೆ. ಅವನ ಮಾತನ್ನು ಇನ್ಸ್‍ಪೆಕ್ಟರ್ ಆಗಲಿ ಊರಿನ ಯಾರೇ ಆಗಲಿ ಕೇಳುವುದಿಲ್ಲ. ನಿಧಾನವಾಗಿ ವಾಮನನು ಕಮಲಾಳಿಗೆ ಮೋಸ ಮಾಡಿದ್ದು ತಪ್ಪು ಎಂದು ಇಡೀ ಊರೇ ಮಾತಾಡುತ್ತಾ ಅಂತಿಮವಾಗಿ ನಾಲ್ಕು ಗೋಡೆಯ ಮಧ್ಯೆ ವಾಮನನ ಕೊಲೆಯನ್ನು ಇಡೀ ಊರವರೇ ಇನ್ಸ್‍ಪೆಕ್ಟರ್‍ನ ರಕ್ಷಣೆಯಲ್ಲಿ ಮಾಡುತ್ತಾರೆ. ಕಮಲಾ ಹೆಗಡೆ ಶಿಲಾನಗರಿಗೆ ದೊಡ್ಡ ದಾನ ಕೊಟ್ಟು ಹೊರಡುತ್ತಾಳೆ.

ಇಡಿಯ ನಾಟಕ ಹಣಕ್ಕಾಗಿ ಕೊಳೆಗೇರಿಯಾಗುವ ಮನಸ್ಸುಗಳನ್ನು ಮತ್ತು ಮಾತಿನ ಚಾತುರ್ಯಕ್ಕೆ ಸೋಲುವ ಮುಗ್ಧರನ್ನು ಬಿಡಿಸಿಡುತ್ತದೆ. ಈ ಕಾರಣಕ್ಕಾಗಿಯೇ ಇಡೀ ನಾಟಕಕ್ಕೆ ಗ್ರೀಕ್ ದುರಂತ ನಾಟಕದ ಛಾಯೆಯೂ ದೊರಕುತ್ತದೆ.

ರಂಗ ಪಠ್ಯ

ಈ ನಾಟಕದ ಅನೇಕ ರಂಗ ಪಠ್ಯಗಳು ಆಗಿವೆ. ಪ್ರೇಮ ಕಾರಂತ ಅವರು ಹೆಗಡೆಯ ಪಾತ್ರದಲ್ಲಿ ಅಭಿನಯಿಸಿದ್ದ ಕನ್ನಡ ಆವೃತ್ತಿಯನ್ನು ನಾನೂ ನೋಡಿದ್ದೆ. ಅದು ತೀರಾ ದುರ್ಬಲ ಪ್ರಯೋಗವಾಗಿತ್ತು. ನೀನಾಸಂನ ವಿದ್ಯಾರ್ಥಿಗಳು ಮಾಡಿದ್ದ “ಕಮಲಾಗಮನ” ಶಕ್ತ ಪ್ರಯೋಗವಾಗಿತ್ತಾದರೂ ಅದರಲ್ಲಿ ವಿಡಂಬನೆ ಹೆಚ್ಚಾಗಿ ದುರಂತ ನೋಡುಗನಿಗೆ ದಾಟಿರಲಿಲ್ಲ. ಪೀಟರ್‍ ಬ್ರೂಕ್‍ನ ನಾಟಕದ ಆವೃತ್ತಿಯೊಂದನ್ನು ಯೂ ಟ್ಯೂಬ್‍ನಲ್ಲಿ ನೋಡಿ ನಾನು ಬೆರಗಾಗಿದ್ದೆ. ಇದೇ ನಾಟಕದ ಜಪಾನಿ ಆವೃತ್ತಿ ಹಾಗೂ ರಷ್ಯನ್ ಬ್ಯಾಲೆ ಆವೃತ್ತಿಯೂ ಸಹ ಅತ್ಯಂತ ಜನಪ್ರಿಯವಾದವು.

ಈ ಹಿನ್ನೆಲೆಯಲ್ಲಿ ಸುರೇಶ್ ಆನಗಳ್ಳಿಯವರ ನಿರ್ದೇಶನದ ನಾಟಕವನ್ನು ನೋಡಿದ್ದು. ಸಮಕಾಲೀನ ಕನ್ನಡ ರಂಗಭೂಮಿಯಲ್ಲಿ ಹವ್ಯಾಸೀ ತಂಡಗಳು ಬೃಹತ್ ನಟಸಮೂಹವನ್ನು ಇಟ್ಟುಕೊಂಡು ನಾಟಕ ಮಾಡಲಾಗದು ಎಂಬ ಕಾಲದಲ್ಲಿ, ಆನಗಳ್ಳಿಯವರು ಐವತ್ತಕ್ಕಿಂತ ಹೆಚ್ಚು ನಟರನ್ನು ವೇದಿಕೆಗೆ ತಂದದ್ದು ನಿಜಕ್ಕೂ ಮೆಚ್ಚತಕ್ಕ ಅಂಶ. ಈ ಪ್ರದರ್ಶನದ ರಂಗಪಠ್ಯವನ್ನು ಕುರಿತು ಚರ್ಚಿಸೋಣ.

“ಶ್ರೀಮತಿ ಹೆಗಡೆ ಭೇಟಿ ಪ್ರಸಂಗ” ನಾಟಕವೂ ಸಹ ವಿಡಂಬನೆಯಾಗಿಯೇ ತನ್ನ ಕತೆಯನ್ನು ಬಿಚ್ಚಿಕೊಳ್ಳುತ್ತದೆ. ಇಡೀ ಊರಿನ ಜನ ತಮ್ಮ ಸ್ಥಿತಿಯನ್ನು ಕುರಿತು ತಾವೇ ತಮಾಷೆ ಮಾಡಿಕೊಳ್ಳುತ್ತಾ ಮಾತಾಡುತ್ತಾರೆ. ಆ ಹಾದಿಯಲ್ಲಿ ಅಚ್ಚರಿ ಉಂಟು ಮಾಡುವಂತೆ ರೈಲುಗಳ ಆಗಮನ ಮತ್ತು ನಿರ್ಗಮನವನ್ನು ಇಡೀ ಊರಿನವರು ನೋಡುವುದನ್ನು ಆನಗಳ್ಳಿಯವರು ಅತ್ಯಂತ ಸಮರ್ಪಕವಾಗಿ ಗುಂಪಿನ ನಿರ್ವಹಣೆ ಮಾಡುವುದರಿಂದ ಸಾಧಿಸುತ್ತಾರೆ. ರಂಗದ ಮುಂಬದಿಯನ್ನು ಮಾತ್ರವಲ್ಲದೆ ಎರಡು ಬದಿಗಳಿಗೆ ಹಂಚಿಕೊಂಡ ವಿನ್ಯಾಸದಿಂದಾಗಿ ವೇದಿಕೆಯ ಸಂಪೂರ್ಣ ಉಪಯೋಗವನ್ನು ಸಾಧಿಸುವಲ್ಲಿ ಆನಗಳ್ಳಿ ಯಶಸ್ವಿಯಾಗುತ್ತಾರೆ. ಈ ಹಿಂದೆ ಆನಗಳ್ಳಿಯವರು ನಿರ್ದೇಶಿಸಿದ್ದ “ಮಂಟೇಸ್ವಾಮಿ” ಮುಂತಾದ ನಾಟಕ ನೋಡಿದ್ದವರಿಗೆ ಇದು ವಿಶೇಷ ಎನಿಸದೆ ಇದ್ದರೂ ಶೇಕಡ 60ಕ್ಕಿಂತ ಹೆಚ್ಚು ಮೊದಲಿಗರನ್ನು ಕಟ್ಟಿಕೊಂಡು ಆನಗಳ್ಳಿಯವರು ಸಾಧಿಸುವ ಸಂಯೋಜನೆ ಬೆರಗುಗೊಳಿಸುತ್ತದೆ. ಇದು ನಾಟಕದುದ್ದಕ್ಕೂ ಕಾಣಿಸುವ ದೃಶ್ಯ ವೈಭವವಾಗಿ ಮನಸ್ಸಲ್ಲಿ ಉಳಿಯುತ್ತದೆ. ವಿಶೇಷವಾಗಿ ಎರಡನೇ ಅಂಕದ ಮೊದಲ ದೃಶ್ಯದಲ್ಲಿ ಬಳಸಲಾಗಿರುವ ಎರಡು ಸ್ತರದಲ್ಲಿ ನಾಟಕ ನಡೆವ ವಿನ್ಯಾಸ (ಎಡಿಎ ರಂಗಮಂದಿರವೇ ವೈಜ್ಞಾನಿಕವಾಗಿ ನಿರ್ಮಿತ ರಂಗಮಂದಿರವಲ್ಲದ್ದರಿಂದ ಇದನ್ನು ನಿರ್ವಹಿಸಲು ನಟರು ಕಷ್ಟ ಪಟ್ಟರು) ಮತ್ತು ನಾಟಕ ಮೂರನೆಯ ಅಂಕದ ಕಡೆಯ ದೃಶ್ಯದಲ್ಲಿ ಬರುವ ವಾಮನನು ಸೋತು ನೆಲಕ್ಕೆ ಒರಗುವ ದೃಶ್ಯಗಳು ಸಂಯೋಜನೆಯ ಕಾರಣಕ್ಕಾಗಿಯೇ ನೆನಪಲ್ಲಿ ಉಳಿಯುವಂತಹವು.

ಇಷ್ಟೆಲ್ಲಾ ಒಳ್ಳೆಯ ಮಾತಾಡಿದರೂ ನಾಟಕ ಪ್ರದರ್ಶನದಲ್ಲಿ ನೋಡಲು ಕಷ್ಟವಾಗಿದ್ದು ಪಾತ್ರಧಾರಿಗಳಿಗೆ ಬಳಸಿದ ವಸ್ತ್ರವಿನ್ಯಾಸದಲ್ಲಿ ಸ್ಪಷ್ಟ ಸೂತ್ರವೊಂದು ಕಾಣದೆ ಹೋಗಿದ್ದು ಮತ್ತು ಅಸಮರ್ಪಕವಾದ ಹಿನ್ನೆಲೆ ಸಂಗೀತಗಳಲ್ಲಿ. ಇದಕ್ಕಾಗಿ ಒಮ್ಮೆ ಜಪಾನಿನ ಕೊಜಿಕಿ ಕಿಟಾರೋನ ಸಂಗೀತ ಮತ್ತೊಮ್ಮೆ ಸಂಪೂರ್ಣ ಅಮೇರಿಕನ್ ಪಾಪ್ ಕಲ್ಚರ್‍ನ ಸಂಗೀತ ಹೀಗೆ ಗೊಂದಲವಾಗಿದದ್ದು ಕಿರಿಕಿರಿ ಉಂಟು ಮಾಡುತ್ತಾ ಇತ್ತು. ವಸ್ತವಿನ್ಯಾಸದಲ್ಲಿಯೂ ಬಣ್ಣಗಳ ಸಂಯೋಜನೆ ಮತ್ತು ಶೈಲಿಯಲ್ಲಿ ಒಂದು ಸೂತ್ರಬದ್ಧತೆ ಇಲ್ಲದೆ ಇದ್ದುದರಿಂದ; ವಾಮನನಿಗೆ ಬಳಸಿದ ಮಾಲೂರು ಪಂಚೆಗೂ ಉಳಿದವರು ಹಾಕಿಕೊಂಡ ವಸ್ತ್ರಗಳಿಗೂ ಕಾಲಸಾಮ್ಯ ಇಲ್ಲದೆ ಇದ್ದದ್ದು ಸಹ ಕಿರಿಕಿರಿಯಾಗುತ್ತಾ ಇತ್ತು ಮತ್ತು ಕಮಲಾ ಹೆಗಡೆಗೆ ಬಳಿಸಿದ ಬಿಳಿ ನಿಲುವಂಗಿಯಂತಹ ಪಾಶ್ಚಾತ್ಯ ಮದುವೆ ಹೆಣ್ಣಿನ ವಿನ್ಯಾಸವೂ ಪಾತ್ರಧಾರಿಯ ತೂಕಕ್ಕೆ ಹೊಂದುತ್ತಾ ಇರುತ್ತಿರಲಿಲ್ಲವಾಗಿ ಅಭಾಸ ಎನಿಸುತ್ತಿತ್ತು. ಆ ಪಾತ್ರವು ನಿರಂತರವಾಗಿ ಮದುವೆ ಮಾಡಿಕೊಳ್ಳುತ್ತಲೇ ಇರುತ್ತದೆ ಎಂಬುದನ್ನು ಸೂಚಿಸಲು ಮತ್ತೆ ಯಾವುದಾದರೂ ಮಾರ್ಗ ಹುಡುಕುವುದು ಒಳಿತು. ಸುತ್ತಾ ಇರುವ ಎಲ್ಲಾ ಪಾತ್ರಧಾರಿಗಳು ಭಾರತೀಯ (ಕೆಲವೆಡೆ ಉತ್ಪ್ರೇಕ್ಷಿತ ಭಾರತೀಯ) ಆಗಿರುವಾಗ ನಡುವೆ ಒಂದು ಸಂಪೂರ್ಣ ಪಾಶ್ಚಾತ್ಯ ಉಡುಗೆ ರಸಾಭಾಸದಂತೆಯೂ ಕಾಣುತ್ತಾ ಇತ್ತು. ಪ್ರಾಯಶಃ ಮುಂಬರುವ ಪ್ರದರ್ಶನಗಳಲ್ಲಿ ಇವುಗಳು ಉತ್ತಮವಾಗಬಹುದು ಎಂದು ಭಾವಿಸಿದ್ದೇನೆ.

ಬೆಳಕಿನ ನಿರ್ವಹಣೆಯ ದೃಷ್ಟಿಯಿಂದ ಪ್ರತಿ ದೃಶ್ಯದ ಅಂತ್ಯವನ್ನು ಸ್ತಂಭಿತವಾಗಿ ನಿಲಿಸುವಂತೆ ಮಾಡುತ್ತಾ ಇದ್ದ ಬ್ಲಾಕ್‍ಔಟ್‍ಗಳು ವಿಶಿಷ್ಟವಾದುದು. ಈ ಪ್ರಯೋಗವನ್ನು ಹಿಂದೆಯೂ ಅನೇಕರು ಮಾಡಿದ್ದರೂ ಈ ನಾಟಕದ ವಸ್ತುವಿನ ದೃಷ್ಟಿಯಿಂದ “ಸ್ತಂಭಿತ ಸಮಯ” ಎನಿಸುವ ಬೆಳಕಿನ ನಿರ್ವಹಣೆ ಮೆಚ್ಚುವಂತಹದು. ಅದರಲ್ಲೂ ಎಡಿಎ ತರಹದ ತೀರಾ ಸಾಧಾರಣ ರಂಗಮಂದಿರದಲ್ಲಿ ಈ ಪ್ರಯೋಗ ಮಾಡಿದ್ದು ವಿಶೇಷವಾದುದು. ಆದರೆ ಹೆಗಡೆ ಪಾತ್ರಧಾರಿಯ ಬಿಳಿ ಉಡುಪಿಗೆ ವೈರುಧ್ಯವೆಂಬಂತೆ ಕಂದು, ಬೂದುಗಳಲ್ಲಿ ಇದ್ದ ಉಳಿದ ಪಾತ್ರಗಳ ದಿರಿಸುಗಳು ಬಳಸಲಾದ ಬೆಳಕಲ್ಲಿ ಸಾಕಷ್ಟು ಪ್ರಭಾವಿಯಾಗಿ ದೃಶ್ಯವನ್ನು ಕಟ್ಟುವಲ್ಲಿ ಸಹಾಯ ಮಾಡಲಿಲ್ಲ. ಪ್ರಾಯಶಃ ಹೆಗಡೆ ಪಾತ್ರಧಾರಿಯ ಬಿಳಿ ಬಟ್ಟೆಯ ಮೇಲೆ ಬೇರೆ ಬೇರೆ ಬಣ್ಣಗಳ ಮೆಲುಡುಗೆಯನ್ನು ಏನಾದರೂ ಬಳಸಿದರೆ ಈ ಸಮಸ್ಯೆಯನ್ನು ಮುಂದಿನ ನಾಟಕಗಳಲ್ಲಿ ತಪ್ಪಿಸಿಕೊಳ್ಳಬಹುದು.

ಇನ್ನು ನಟನೆಯ ನಿರ್ವಹಣೆಯ ಮಾತು. ಈ ನಾಟಕದಲ್ಲಿ ಅಭಿನಯಿಸಿದ್ದ ಶೇಕಡ 60ರಷ್ಟು ಜನ ಹೊಸಬರು ಮತ್ತು ಮೊದಲ ಬಾರಿಗೆ ವೇದಿಕೆ ಹತ್ತಿದವರು. ಇನ್ನುಳಿದ ಶೇಕಡ 40ರಷ್ಟು ಜನ ಅನುಭವಿಗಳು ಮತ್ತು ಅದಾಗಲೇ ನಟನೆಯಿಂದಾಗಿಯೇ ಕನ್ನಡ ರಂಗಭೂಮಿಯಲ್ಲಿ ಹೆಸರು ಮಾಡಿದವರು. ಶ್ರೀಮತಿ ಹೆಗಡೆಯ ಪಾತ್ರದಲ್ಲಿ ಸುಷ್ಮಾ ಅವರ ನಟನೆಯು ದರ್ಪ ತೋರುವಲ್ಲಿ ಚೆನ್ನಾಗಿತ್ತು. ಆದರೆ ವಾಮನ ಮತ್ತು ಹೆಗಡೆಯ ನಡುವಿನ ರಮ್ಯ ವಿವರಗಳನ್ನು ಕಟ್ಟಿಕೊಡುವಾಗ ಸುಷ್ಮಾ ಅವರು ನವಿರಾಗಿರಲಿಲ್ಲ. ಅಲ್ಲಿ ಹಳತರ ನೆನಪಿಂದ ಹುಟ್ಟುವ ಅನುಭವ ಜನ್ಯ ಆನಂದವಾದರೂ ಇರಬಹುದಾಗಿತ್ತು. ಆದರೆ ವಾಮನನ ಪಾತ್ರಧಾರಿ (ಅಭಿರುಚಿ ಚಂದ್ರು) ಅವರು ಮಾತನ್ನು ದಾಟಿಸುವುದರಲ್ಲೇ ಹೆಚ್ಚು ಶ್ರಮ ಹಾಕಿದ್ದರಿಂದ ಸುಷ್ಮಾ ಅವರಿಗೆ ಅಲ್ಲಿ ಸಹಾಯ ದೊರೆಯಲಿಲ್ಲ ಎನಿಸುತ್ತದೆ. ಊರಿನ ಅಧ್ಯಕ್ಷನಾಗಿ ಸಾಯಿ ಅವರ ಅಭಿನಯ ಬಹು ಹಿಂದೆ ಅವರು ಅಭಿನಯಿಸಿದ್ದ ಹುಲಗೂರು ಹುಲಿಯೆವ್ವಾ ಮುಂತಾದ ಅನೇಕ ನಾಟಕಗಳನ್ನು ನೆನಪಿಸಿತು. ಉಳಿದಂತೆ ಶಾಲೆಯ ಮೇಷ್ಟ್ರ ಪಾತ್ರಧಾರಿಯವರು (ಹೆಸರು ಗೊತ್ತಿಲ್ಲ) ವಾಚಿಕ ಮತ್ತು ಆಂಗಿಕದ ಮೇಲೆ ಅವರಿಗಿರುವ ಪ್ರಭುತ್ವವನ್ನು ಸಾಬೀತು ಪಡಿಸಿದರು. ಆದರೆ ಬಹುತೇಕ ವಿಡಂಬನೆಯನ್ನೇ ಹೆಚ್ಚು ಪ್ರದರ್ಶಿಸುವ ಪ್ರಯತ್ನ ಅಲ್ಲಿತ್ತು. ಹೀಗಾಗಿ ಮೇಷ್ಟರು ಕುಡಿದು ಮಾತಾಡುವ ಎರಡನೆಯ ಅರ್ಧದಲ್ಲಿ ಬರುವ ಬಹುಮುಖ್ಯ ದೃಶ್ಯದಲ್ಲಿ ಇರುವ ವಿಷಾದ ದಾಟುವುದಕ್ಕಿಂತ ಹಾಸ್ಯ ಮಾತ್ರ ನೋಡುಗರನ್ನು ತಲುಪಿತು. ಬೀಡಿಯಿಂದ ಸಿಗರೇಟಿಗೆ ಬರುವ ಕೂಲಿಯವ, ಡಿವೈಎಸ್‍ಪಿಯವರ ಪಾತ್ರ ನಿರ್ವಹಣೆಯು ನೆನಪಲ್ಲಿ ಉಳಿಯುವಂತಹದು. ವಿಶೇಷವಾಗಿ ನಾಟಕದ ಆರಂಭದಲ್ಲಿ ರೈಲ್ವೆ ಅಧಿಕಾರಿಯಾಗಿ ಬರುವ ಪಾತ್ರಧಾರಿಯ ಅಭಿನಯ ಮತ್ತು ಮೊದಲ ದೃಶ್ಯದಲ್ಲಿ ಬರುವ ಹಳ್ಳಿಗರ ಅಭಿನಯ ನೋಡುಗರನ್ನು ನಾಟಕದ ಕಥಾ ಲೋಕಕ್ಕೆ ಕರೆದೊಯ್ಯುವಲ್ಲಿ ಸಹಾಯ ಮಾಡಿತು.

ಇದೊಂದು ಉತ್ತಮ ಪ್ರಥಮ ಪ್ರಯೋಗ ಎಂಬುದರಲ್ಲಿ ಎರಡು ಮಾತಿಲ್ಲ. ಮುಂಬರುವ ದಿನಗಳಲ್ಲಿ ಮತ್ತಷ್ಟು ತಾಲೀಮಿನಿಂದ ಈ ನಾಟಕವು ಗಟ್ಟಿಗೊಳ್ಳುತ್ತದೆ ಎಂಬ ಬಗ್ಗೆ ನನಗೆ ನಂಬಿಕೆ ಇದೆ.

ರಂಗ ಪಠ್ಯದಲ್ಲಿ ವಸ್ತು ನಿರ್ವಹಣೆ

ಮೂಲ ನಾಟಕದಲ್ಲಿ ಹಳೆಯ ಪ್ರೇಮ ಮುರಿದ ದುಃಖದಲ್ಲಿ ತನ್ನ ಬಸಿರಲ್ಲಿದ್ದ ಮಗುವನ್ನು ಕಳೆದುಕೊಂಡಾಕೆ ನಂತರ ಮೈಮಾರಿ ಹಣ ಸಂಪಾದಿಸಿ ಸೇಡು ತೀರಿಸಿಕೊಳ್ಳುವ ಕತೆ ಮೇಲ್‍ಸ್ತರದಲ್ಲಿದ್ದರೂ ಎರಡನೆ ಮಹಾಯುದ್ಧದ ನಂತರ ಯೂರೋಪಿನ ಬಹುಭಾಗಗಳಲ್ಲಿ ಬೃಹತ್ ಉದ್ಯಮಗಳು ಬಾಗಿಲು ಹಾಕಿಕೊಂಡ ವಿವರ ಹಾಗೂ ಹಣಕ್ಕಾಗಿ ಹಪಹಪಿಸುವ ಜನತೆಯಿದೆ. ಅಮೇರಿಕನ್ನರು ಅರವತ್ತರ ದಶಕದಲ್ಲಿ ಸಿನಿಮಾ ಮಾಡುವಾಗ ನಾಟಕದ ಅಂತ್ಯದಲ್ಲಿ ಬರುವ ನಾಯಕನ ಕೊಲೆಯನ್ನು ಸ್ವತಃ ನಾಯಕಿಯೇ ನಿಲ್ಲಿಸಿ, ಊರು ನನ್ನ ಹಣದಿಂದ ಬದಲಾಗಿದೆ ಇದರ ನಡುವೆಯೇ ನಾಯಕ ತಾನು ಮಾಡಿದ ತಪ್ಪಿಗೆ ನರಳಿ ಸಾಯಲಿ ಎಂದು ಹೊರಡುತ್ತಾಳೆ. ಇದು ಅತ್ಯಂತ ಪಾಸಿಟಿವ್ ಆದ ಸಿನಿಮಾಗಳು ಮಾತ್ರ ಗೆಲ್ಲುತ್ತವೆ ಎಂಬ ಅಮೇರಿಕನ್ ಮೆಲೋಡ್ರಾಮದ ಕಾರಣವಾಗಿ ಆದ ಬದಲಾವಣೆ. ಸುರೇಶ್ ಆನಗಳ್ಳಿಯವರು ಈ ನಾಟಕದ ವಿವರವನ್ನು ಆಧುನಿಕ ಕೊಳ್ಳುಬಾಕ ಸಂಸ್ಕೃತಿಗೆ ಸಮೀಕರಿಸುತ್ತಾರೆ ಮತ್ತು ಮಾತು ಬಲ್ಲವರು ಹಾಗೂ ಹಣ ಉಳ್ಳವರು ನ್ಯಾಯ ಕೊಳ್ಳುತ್ತಾರೆ ಎಂಬುದನ್ನು ಒತ್ತು ಕೊಟ್ಟು ಹೇಳುತ್ತಾರೆ. ಈ ಹಾದಿಯಲ್ಲಿ ಮೂಲ ನಾಟಕದಲ್ಲಿ ನಾಯಕಿಯ ಬದುಕಲ್ಲಿ ಆದ ದುರಂತದಲ್ಲಿ ಅವಳಿಗೆ ಮಗುವಾದ ವಿವರವನ್ನು ಕೈ ಬಿಡುತ್ತಾರೆ. (ಇದು ಅಮೇರಿಕನ್ ಅನುವಾದದಿಂದ ಕನ್ನಡಕ್ಕೆ ಬಂದ ಅನುವಾದವಾದರೆ, ಆ ಅನುವಾದಲ್ಲಿಯೇ ಈ ಬದಲಾವಣೆ ಆಗಿತ್ತು ಎಂಬುದು ನೆನಪಲ್ಲಿಡಬೇಕು.) ಮೂಲದಲ್ಲಿ ನಾಯಕನೇ ಖಳನಾಯಕನೂ ಆಗುವುದರಿಂದ ಎರಡನೆಯ ಅರ್ಧದಲ್ಲಿ ಆತ ತನ್ನನ್ನು ಬದುಕಿಸಿ ಎಂದು ಕೇಳುವುದು ಬರಲಿರುವ ದುರಂತವನ್ನು ಗಟ್ಟಿಗೊಳಿಸುತ್ತದೆ. ಆದರೆ ರೂಪಾಂತರಿತ ನಾಟಕದಲ್ಲಿ ಆತ ಕೇವಲ ಕೈ ಕೊಟ್ಟ ಪ್ರೇಮಿಯಷ್ಟೆ. ಆತನ ಪ್ರೇಮಕ್ಕೆ ಯಾವುದೇ ಫಲಗಳಿಲ್ಲ. ಅವು ಸತ್ತಿಲ್ಲ. ಹೀಗಾಗಿ ಕೈಕೊಟ್ಟ ಪ್ರೇಮಿಗೆ ಸಾವಿನ ಶಿಕ್ಷೆ ಎಂಬುದು ಢಾಳಾಗುವುದಿಲ್ಲ. ಪ್ರಾಯಶಃ ಮುಂಬರುವ ಪ್ರದರ್ಶನಗಳಲ್ಲಿ ಸಂಘರ್ಷದ ಪ್ರಧಾನ ಕಾರಣವನ್ನು ಗಟ್ಟಿಗೊಳಿಸಿ ಪ್ರದರ್ಶಿಸಿದರೆ ನಾಯಕಿಯ ವಿಲಾಪ ಮತ್ತು ಆಕೆ ಸೇಡು ತೀರಿಸಿಕೊಳ್ಳಲೆಂದೇ ಬಂದಿರುವುದು ಗಟ್ಟಿಯಾಗುತ್ತದೆ.

ರಂಗರೂಪದಲ್ಲಿ ಹಣದ ಆಸೆಗಾಗಿ ನಾಯಕನಿಗೆ ಸ್ವತಃ ಗನ್ ಕೊಟ್ಟು `ಆತ್ಮಹತ್ಯೆ ಮಾಡಿಕೊ’ ಎನ್ನುವ ಅಧ್ಯಕ್ಷನ ಮಾತು ಬಂದಾಗಲೇ ನಾಟಕ ಮುಗಿದು ಹೋಗುತ್ತದೆ. ನಂತರ ಬರುವ ವಿವರಗಳು ಕೇವಲ ಪುನರಾವರ್ತನೆಯಾಗುತ್ತದೆ. ಪ್ರಾಯಶಃ ಆ ನಿಟ್ಟಿನಲ್ಲಿ ಯೋಚಿಸಿ ಮುಂದಿನ ಪ್ರದರ್ಶನಗಳನ್ನು ಅವಧಿಯನ್ನೂ ಕ್ಲುಪ್ತಗೊಳಿಸಬಹುದು. (ವಿಶೇಷವಾಗಿ ದೃಶ್ಯ ಬದಲಾವಣೆಯಲ್ಲಿ ಆಗುವ ಸಮಯವನ್ನು ಕಡಿಮೆ ಮಾಡಲೇಬೇಕಾಗಿದೆ. ಎಡಿಎ ರಂಗಮಂದಿರದಲ್ಲಿ ವಿಂಗ್ ಸ್ಪೇಸ್ ಎಂಬುದು ಸುತಾರಂ ಇಲ್ಲ. ಅದನ್ನು ರಂಗಭೂಮಿಯಲ್ಲಿ ದುಡಿಯುತ್ತಾ ಇದ್ದವರೇ ಕಟ್ಟಿದರು ಎಂಬುದನ್ನೇ ನಂಬಲಾಗದ ಸ್ಥಿತಿಯ ವಿನ್ಯಾಸವಿದೆ. ಪ್ರಾಯಶಃ ರವೀಂದ್ರ ಕಲಾಕ್ಷೇತ್ರ ಅಥವಾ ರಂಗಶಂಕರದಲ್ಲಿ ಈ ನಾಟಕ ಇನ್ನೂ ಶಕ್ತ ಪ್ರದರ್ಶನ ಕಾಣಬಹುದು.)

ಭಾಷೆ

ಈ ನಾಟಕವು ನಡೆಯುವುದು ಒಂದು ಕಲ್ಪನಾ ನಗರಿಯಲ್ಲಾದರೂ ಇಲ್ಲಿ ಕನ್ನಡದ ಎಲ್ಲಾ ಸೊಗಡುಗಳೂ ಬಳಕೆಯಾಗಿವೆ ಎಂಬುದು ವಿಶೇಷ. ಶಾಲೆಯ ಹೆಡ್‍ಮೇಷ್ಟರ ಪಾತ್ರವು ಕಲ್ಬುರ್ಗಿ ಕನ್ನಡದ್ದಾದರೆ, ಹಳ್ಳಿಗರ ಅನೇಕ ಪಾತ್ರಧಾರಿಗಳು ದಕ್ಷಿಣ ಕನ್ನಡದ ಸೊಗಡನ್ನು ಮಾತಾಡುತ್ತಿದ್ದವು. ನಾಯಕನ ಪಾತ್ರವು ಮೈಸೂರು ಭಾಗದ ಮೇಲ್ವರ್ಗದ ಕನ್ನಡ ಮಾತಾಡಿದರೆ, ಅಧ್ಯಕ್ಷರ ಪಾತ್ರವು ಬೆಂಗಳೂರು ಗ್ರಾಮಂತರದ ಕನ್ನಡವನ್ನು ಮಾತಾಡುತ್ತಿತ್ತು. ಶ್ರೀಮತಿ ಹೆಗಡೆಯ ಪಾತ್ರವು ರಾಜಭಾಷೆಯನ್ನು (ಆಡಳಿತದಲ್ಲಿ ಇರುವವರು ಬಳಸುವ ಭಾಷೆಯನ್ನು) ಬಳಸಿತ್ತು. ಇದರಿಂದ ಅಪರೂಪದ ವೈವಿಧ್ಯ ಸೃಷ್ಟಿಯಾಗುತ್ತದೆ. ಆದರೆ ಹೀಗೆ ಅನೇಕ ಸೊಗಡುಗಳನ್ನು ಬಳಸಲು ಇರುವ ಕಾರ್ಯಕಾರಣ ಸಂಬಂಧ ತಿಳಿಯುವುದಿಲ್ಲ. ಬಹುಬಗೆಯ ಸೊಗಡುಗಳನ್ನಾಡುವವರು ತಾವೇ ಹೇಳುವ ಮಾತುಗಳಲ್ಲಿ ಅದೇ ಸ್ಥಳದಲ್ಲಿ ಎರಡು ದಶಕಗಳಿಂದಲೂ ಇದ್ದಾರೆ ಎಂಬುದು ಸಹ ಬಹುಬಗೆಯ ಸೊಗಡುಗಳ ಬಳಕೆಗೆ ಕಾರಣ ಒದಗಿಸುವುದಿಲ್ಲ. ಪ್ರಾಯಶಃ ಪಾತ್ರಧಾರಿಗಳಲ್ಲಿ ಬಹುತೇಕರು ಹೊಸಬರಾದ್ದರಿಂದ, ನಿರ್ದೇಶಕರು ಅವರೆಲ್ಲರನ್ನೂ ಒಂದು ಸೊಗಡಿಗೆ ಹೊಂದಿಸುವ ಬದಲಿಗೆ ಅವರವರ ಭಾಷೆಗಳನ್ನು ಆಡಲು ಬಿಟ್ಟಿರಬಹುದು. ಮುಂಬರುವ ಪ್ರದರ್ಶನಗಳಲ್ಲಿ ಆಯಾ ಪಾತ್ರಗಳನ್ನು ಬೇರೆ ಪಾತ್ರಧಾರಿಗಳು ಮಾಡಿದರೆ ಈ ಸೊಗಡುಗಳ ಬಳಕೆಯು ಆ ಪಾತ್ರಧಾರಿಯಂತೆಯೇ ಬದಲಾದರೆ ಇದು ಅನುಕೂಲ ಸಿಂಧು ಪ್ರಯೋಗವಾಗುತ್ತದೆ. ಹಾಗಾಗದೆ ವಾಚಿಕದ ನೆಲೆಯಲ್ಲಿ ಒಂದು ಸ್ಪಷ್ಟ ಚೌಕಟ್ಟು ಮಾಡಿಕೊಳ್ಳುವುದು ಸೂಕ್ತ ಎನಿಸುತ್ತದೆ.

ಇದಿಷ್ಟು ತಟ್ಟನೆ ನನಗನ್ನಿಸಿದ ವಿವರ. ಇನ್ನು ಮಾತಾಡಬಹುದಾದ ಅನೇಕ ಸಣ್ಣ ವಿವರಗಳಿವೆ. ಅವುಗಳನ್ನು ಇನ್ನೆಂದಾದರೂ ಮುಖತಃ ಮಾತಾಡುತ್ತೇನೆ.

“ಅನೇಕ” ತಂಡದ ನಿರಂತರ ಚಟುವಟಿಕೆಗಳಿಗೆ ಯಶ ಸಿಗಲಿ ಎಂದು ಹಾರೈಸುತ್ತಾ ವಿರಮಿಸುತ್ತೇನೆ

– ಬಿ.ಸುರೇಶ

12 ಅಕ್ಟೋಬರ್ 2014, ಬೆಂಗಳೂರು

Advertisements

3 Responses to “ಶ್ರೀಮತಿ ಹೆಗಡೆ ಭೇಟಿ ಪ್ರಸಂಗ (ಸುರೇಶ ಆನಗಳ್ಳಿಯವರ ನಿರ್ದೇಶನದ ನಾಟಕ ಕುರಿತು ಒಂದು ಟಿಪ್ಪಣಿ)”


  1. 1 balu October 23, 2014 at 10:03 am

    what a lovely explanation , brief great play and great article keep informing Sir, common people like us will learn… thank you

  2. 2 Manjunath Golageri October 23, 2014 at 11:52 am

    ನಿಜವಾಗಿಯು ನಾಟಕದ ತಮ್ಮ ಸಮೀಕ್ಷೆ ಚನ್ನಾಗಿತ್ತು ಸರ್. ನಾವೇ ನಾಟಕ ನೋಡಿದ feel ಇದೆ. ನಮ್ಮ ಊರುಗಳಲ್ಲಿ ಈ ತರಹದ ನಾಟಕಗಳು ಇರುವುದಿಲ್ಲ.ಹಾಗಾಗಿ ನೋಡಲಾಗಲಿಕ್ಕೆ ಆಗುವುದಿಲ್ಲ. ತಮ್ಮ ಬರಹಗಳಿಂದಾದರು ತಿಳಿದುಕೊಳ್ಳಬಹುದು


  1. 1 ‘ಶ್ರೀಮತಿ ಹೆಗಡೆ ಭೇಟಿ ಪ್ರಸಂಗ’ – ಬಿ ಸುರೇಶ್ « ಅವಧಿ / Avadhi Trackback on October 24, 2014 at 11:41 pm

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: