ಮಿತ್ರನೊಂದಿಗೆ ಎರಡೂವರೆ ದಶಕಗಳ ಪಯಣ

(ಸಿನಿಜೋಷ್ ಪತ್ರಿಕೆಯ ಮಾರ್ಚ್ 2015ರ ಸಂಚಿಕೆಗಾಗಿ ಬರೆದ ಪತ್ರ)

ಪ್ರಿಯ ಗೆಳೆಯಾ,

ನಿನಗೀಗ ಐವತ್ತು ತುಂಬುತ್ತಿದೆ ಎಂದು ತಿಳಿಯಿತು. ಮೊದಲಿಗೆ ಹುಟ್ಟುಹಬ್ಬದ ಶುಭಾಶಯಗಳು. ಮೊದಲರ್ಧದ ಪಯಣ ಮುಗಿಸಿ ನೀನು ಎರಡನೆಯ ಅರ್ಧದ ಕಡೆಗೆ ಹೊರಳುತ್ತಿದ್ದೀಯ… ನಾನು ನಿನಗಿಂತ ಒಂದೆರಡು ವರುಷ ಮುಂದಿದ್ದೇನೆ… ಆದರೆ ಇಂತಹ ಸಮಯದಲ್ಲಿ ನಾವು ಸಾಗಿ ಬಂದ ಹಾದಿಯನ್ನು ನೆನೆಯುವುದು ಒಂದು ಮಜಾ ಕೆಲಸ. ಹಾಗಾಗಿಯೇ ಈ ಪತ್ರ ಬರೆಯುವುದಕ್ಕೆ ಕೂತಿದ್ದೇನೆ. ಆಗ ಗಾಬರಿ ಹುಟ್ಟಿಸಿದ ವಿಷಯ ಈಗ ನಗು ತರುವುದು ಹೇಗೆ ಸತ್ಯವೋ ಹಾಗೆಯೇ ಆಗ ನಗು ತರಿಸಿದ್ದ ವಿಷಯ ಈಗ ದುಃಖವನ್ನೂ ತರಬಹುದು. ಆದರೆ ಈ ನೆನಪುಗಳು ಮಾತ್ರ ನಮ್ಮ ಸಂಬಂಧಗಳನ್ನು ಸದಾ ಕಾಲ ಹಸಿರಾಗಿಸುತ್ತದೆ. 

ಮೊದಲ ಭೇಟಿ ಎಂಬ ಅಚಾನಕ್

ಅದು 1982ರ ಜೂನ್ ತಿಂಗಳು. ನಾನು ಬಿಎಚ್‍ಇಎಲ್ ಎಂಬ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾ ಇದ್ದೆ. ಆಗಲೇ ನನಗೂ ನಿನಗೂ ಗುರುಗಳಾಗಿದ್ದ ಎ ಎಸ್ ಮೂರ್ತಿಯವರು ತಾವು ನಡೆಸುತ್ತಾ ಇದ್ದ ಅಭಿನಯತರಂಗ ಭಾನುವಾರದ ರಂಗ ಶಾಲೆಯನ್ನು ನಡೆಸುವುದು ಕಷ್ಟವಾಗುತ್ತಾ ಇದೆ. ಸಹಾಯ ಬೇಕು ಎಂದು ನನ್ನನ್ನು ಕೇಳಿದ್ದು. ನಾನು ಕಾರ್ಖಾನೆಯ ಅವಧಿಯ ನಂತರ ಸಹಾಯ ಮಾಡಲು ಬರುವುದಾಗಿ ಒಪ್ಪಿಕೊಂಡದ್ದು. ಪ್ರೊ.ಬಿ.ಚಂದ್ರಶೇಖರ್ ಅವರು ಆಗ ಅಭಿನಯತರಂಗದ ಪ್ರಾಂಶುಪಾಲರಾಗಿದ್ದರು. ಅವರು ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು, `ನೀನು ಬರೀ ವ್ಯವಸ್ಥಾಪಕ ಅಲ್ಲ, ಉಪ ಪ್ರಾಂಶುಪಾಲ’ ಎಂದಿದ್ದರು. ಅವರು ಹಾಗೆಂದ ದಿನವೇ ನಿನ್ನ – ನನ್ನ ಮೊದಲ ಭೇಟಿ ಆಯಿತು ಎಂಬುದು ಕೇವಲ ಕಾಕತಾಳೀಯ. ಅದೇ ದಿನ ಆ ವರ್ಷದ ತರಗತಿಗಳಿಗೆ ಹೊಸ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ಸಂದರ್ಶನ ಏರ್ಪಾಡಾಗಿತ್ತು. ಬಂದಿದ್ದ ಐವತ್ತು ಅಭ್ಯರ್ಥಿಗಳಲ್ಲಿ ಹದಿನೈದು ಜನರನ್ನು ಮಾತ್ರ ತೆಗೆದುಕೊಳ್ಳುವುದೆಂದು ತೀರ್ಮಾನವಾಗಿತ್ತು. ರಂಗಭೂಮಿಯ ಹಿರಿಯರಾದ ಪ್ರೊ.ಬಿ.ಸಿ., ಸುಧೀಂದ್ರ ಶರ್ಮಾ, ಚಂದ್ರಕುಮಾರ್ ಸಿಂಗ್ ಮತ್ತು ಶಾಲೆಯ ಆಡಳಿತ ಮಂಡಳಿಯವರಾಗಿ ವಿಜಯಮ್ಮ ಅವರು ಒಂದೆಡೆ ಸಂದರ್ಶನ ಮಾಡುತ್ತಾ ಇದ್ದರೆ, ನಾನು ಮತ್ತೊಂದು ಕಡೆ ಆಯ್ಕೆಯಾದವರ ಹೆಸರು, ವಿಳಾಸ ಇತ್ಯಾದಿ ಬರೆದುಕೊಂಡು ಕೂತಿದ್ದೆ. ಸುಮಾರು ಮಧ್ಯಾಹ್ನದ ಹೊತ್ತಿಗೆ ನೀನು ನನ್ನ ಎದುರು ಬಂದಿದ್ದೆ. ಆಯ್ಕೆಯಾದ ಹದಿನೈದು ಮಂದಿಯ ಹೆಸರಲ್ಲಿ ನಿನ್ನ ಹೆಸರು ಇರಲಿಲ್ಲ ಎಂಬುದು ಮತ್ತು ನೀನು ಹೇಗಾದರೂ ಈ ಶಾಲೆ ಸೇರಲೇಬೇಕು ಎಂಬುದು ನಿನ್ನ ಬೇಡಿಕೆಯಾಗಿತ್ತು. ನಾನು ಈ ಸಣಕಲ ಹುಡುಗ ರಂಗಭೂಮಿಯಲ್ಲಿ ಬಹುಕಾಲ ಬಾಳಲಾರ ಎಂದು ಭಾವಿಸಿಯೇ, “ನಿನ್ನ ನಟನೆಯ ಶಕ್ತಿಯನ್ನು ತೋರಿಸು” ಎಂದೆ… ನೀನು ಯಾವುದೋ ನಾಟಕದ ಹುಚ್ಚನ ಪಾತ್ರವನ್ನು ಅಭಿನಯಿಸಿ ತೋರಿಸಿದ್ದೆ. ನನಗೆ ನಿನ್ನ ನಟನೆಯಲ್ಲಿ ವಿಶೇಷವೇನೂ ಕಾಣಲಿಲ್ಲ. ಆದರೆ ನಿನ್ನ ಒಳಗೆ ಯಾವುದೋ ಶಕ್ತಿ ಇದೆ ಎಂದೆನಿಸಿತ್ತು. ನಾನೇ ಖುದ್ದಾಗಿ ಆಡಳಿತ ಮಂಡಳಿಯವರ ಬಳಿಗೆ ಹೋಗಿ “ಹದಿನೈದರ ಮಿತಿಯನ್ನು ಇಪ್ಪತ್ತಕ್ಕೆ ಏರಿಸಿ. ಅದರಿಂದ ನಡುವೆ ಬಿಟ್ಟು ಹೋಗುವ ಕೆಲ ಹುಡುಗರ ನಡುವೆಯೂ ನಾವು ಕನಿಷ್ಟ ಹದಿನೈದು ಜನಕ್ಕೆ ತರಬೇತಿ ಕೊಡಬಹುದು” ಎಂದೆ. ಅರೆಮನಸ್ಸಿನಿಂದಲೇ ಎಲ್ಲರೂ ಒಪ್ಪಿಕೊಂಡರು. ಹೀಗಾಗಿ ಆ ವರ್ಷದ ಅಭಿನಯ ತರಂಗದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಿನ್ನ ಹೆಸರು ಹದಿನೇಳನೆಯವನದ್ದಾಗಿ ದಾಖಲಾಯಿತು. ಹೀಗೆ ನೀನು ಅಭಿನಯತರಂಗದ ವಿದ್ಯಾರ್ಥಿಯಾದೆ. ಹೊಸ ವಿದ್ಯಾರ್ಥಿಗಳಿಗೆ ಮೊದಲ ದಿನ ಪಾಠ ಮಾಡಿದವನು ನಾನೇ ಆಗಿದ್ದೆ. ಈ ಹುಡುಗರನ್ನು ಇಟ್ಟುಕೊಂಡು ಎಂತಹ ನಾಟಕ ಮಾಡಬಹುದು ಎಂದು ತಿಳಿಯುವುದಕ್ಕಾಗಿ ನಾನು ತರಗತಿ ತೆಗೆದುಕೊಂಡಿದ್ದೆ. ಅಂದು ನಾನು ಮಾಡಿಸಿದ ಅನೇಕ ರಂಗಕ್ರೀಡೆಗಳಲ್ಲಿ ನೀನು ಭಾಗವಹಿಸಿದ ಕ್ರಮ ಖುಷಿಯಾಗಿತ್ತು. ಹೀಗಾಗಿಯೇ ನಾನು ನಿರ್ದೇಶಿಸಿದ “ಅಪ್ಪಾಲೆ ತಿಪ್ಪಾಲೆ” ನಾಟಕದಲ್ಲಿ ನಿನಗೊಂದು ಪಾತ್ರ ಕೊಟ್ಟು ಕನಕಪುರದಲ್ಲಿ ಆದ ಪ್ರದರ್ಶನಕ್ಕೆ ಕರೆದೊಯ್ದೆ. ಪ್ರದರ್ಶನ ಮುಗಿದ ನಂತರ ನೋಡಿದವರೆಲ್ಲರೂ ನಿನ್ನನ್ನು ಮೆಚ್ಚಿಕೊಂಡಾಗ ಮೊದಲ ಗೆಲುವಿನ ಖುಷಿ ನನ್ನದಾಗಿತ್ತು.

ನಂತರ ನಾವಿಬ್ಬರೂ ಕ್ರಿಕೆಟ್ಟು ಸ್ನೇಹಿತರಾದೆವು, ರಂಗಮಿತ್ರರಾದೆವು… ಎಷ್ಟೆಲ್ಲಾ ನಾಟಕಗಳನ್ನು ಕಟ್ಟಿದೆವು… ನಿನ್ನ ನಿರ್ದೇಶನದಲ್ಲಿಯೂ ನಾಟಕವನ್ನು ಕಟ್ಟಲು ನಾನು ನೆರವಾಗಿದ್ದೆ. ಹಾಗೆಯೇ ನನ್ನ ನಿರ್ದೇಶನದ ಎಲ್ಲಾ ನಾಟಕಗಳಿಗೆ ನೀನು ನೆರವಾಗುತ್ತಾ ಇದೆ. ಜೊತೆ ಜೊತೆಯಾಗಿ ನಡೆಯತೊಡಗಿದೆವು. ನನ್ನ ಮನೆ ನಿನ್ನ ಮನೆ ಆಯಿತು. ನಮ್ಮಮ್ಮ ಮತ್ತು ಅತ್ತಿಗೆ ನನ್ನನ್ನು ಬಯ್ಯುತ್ತಾ ನಿನ್ನನ್ನು ಹೊಗಳಿ “ಎಷ್ಟು ಒಳ್ಳೆಯ ಹುಡುಗ!” ಎಂದಾಗೆಲ್ಲಾ ನಾನು ನಿನ್ನ ಸ್ವಾಟೆ ತಿವಿದು, “ಇವನ ಕಳ್ಳಾಟ ನನಗೆ ಗೊತ್ತು ಬಿಡಿ” ಎಂದದ್ದಿದೆ.

ಹೀಗೆ ಅಚಾನಕ್ಕಾಗಿ ಸಿಕ್ಕು ಜೀವದ ಗೆಳೆಯ ಆದವನು ನೀನು…

ಟೆಲಿವಿಷನ್ನು ಎಂಬ ಹೊಸ ಪ್ರಕಾರ…

1985 -86 ರಲ್ಲಿ ದೂರದರ್ಶನ ಬೆಂಗಳೂರು ಎಂಬ ಹೊಸ ಅಧ್ಯಾಯವೊಂದು ಶುರುವಾಯಿತು. ಅಲ್ಲಿಯವರೆಗೆ ಭಾರೀ ಮಡಿವಂತರ ಹಾಗೆ ರಂಗಭೂಮಿಯಲ್ಲಿಯೇ ಇದ್ದ ನಮಗೆಲ್ಲರಿಗೂ ಇದೊಂದು ಹೊಸ ಅವಕಾಶದ ಬಾಗಿಲು ಎನಿಸಿತ್ತು. ಆದರೆ ನಮ್ಮನ್ನು ಅಲ್ಲಿಗೆ ಸೇರಿಸುವ ಜನ ಇರಲಿಲ್ಲ. ನಾನೂ ನೀನೂ ಅದೆಷ್ಟು ಟೆಲಿವಿಷನ್ ಕಾರ್ಯಕ್ರಮ ಮಾಡುವವರ ಮನೆ ತಿರುಗಿದೆವೋ… ಆದರೆ 1988ರಲ್ಲಿ ನಾನು ನೀನು ಒಟ್ಟಿಗೆ ಅಭಿನಯಿಸಿದ “ಮ್ಯಾಕ್‍ಬೆತ್” (ನಿರ್ದೇಶನ: ಸುರೇಂದ್ರನಾಥ್) ನಾಟಕ ನಮಗೆ ಹೊಸ ಅವಕಾಶದ ಬಾಗಿಲು ತೆರೆಯಿತು. ಶ್ಯಾಮ್‍ಸುಂದರ್ ನಿರ್ದೇಶನದ “ಬಿಸಿಲುಗುದುರೆ” ಧಾರಾವಾಹಿಯಲ್ಲಿ ನಮ್ಮಿಬ್ಬರಿಗೂ ನಟನೆಗೆ ಅವಕಾಶ ಸಿಕ್ಕಿತ್ತು. ನನ್ನ ಬೈಕಿನಲ್ಲಿ ಇಬ್ಬರೂ ಒಟ್ಟಿಗೆ ಹೋಗಿ, ಮಲ್ಲೇಶ್ವರದಲ್ಲಿದ್ದ ಸಣ್ಣ ಹೋಟೆಲ್ ಒಂದರಲ್ಲಿ ಆಡಿಷನ್ ಕೊಟ್ಟದ್ದು, ಇಬ್ಬರೂ ಆಯ್ಕೆಯಾದದ್ದು… ನಾವೆಲ್ಲರೂ ಒಟ್ಟಾಗಿ ಸಿಡಿಪಿಯಲ್ಲಿ ಸೇರಿ ಸಂಭ್ರಮಿಸಿದ್ದು… ಆ ಧಾರಾವಾಹಿಯ ಪ್ರಸಾರ ಆರಂಭವಾಗಿ ನಾವಿಬ್ಬರೂ ದಿಢೀರನೆ ಬೆಂಗಳೂರಿನ ಬೀದಿಯಲ್ಲಿ ಹೋದಲೆಲ್ಲ ಆಟೋಗ್ರಾಫ್ ಕೊಡುವ ಹಾಗೆ ಆಗಿದ್ದು… ಹೀಗೆ ಅನೇಕ ನೆನಪಿನ ಚಿತ್ರಗಳು ತೆರೆದುಕೊಳ್ಳುತ್ತವೆ…

ಟೆಲಿವಿಷನ್ನು ನನಗೂ ನಿನಗೂ ಇಬ್ಬರಿಗೂ ಒಂದು ಬಿಡುಗಡೆಯನ್ನು ನೀಡಿತು. ನೀನಂತೂ ಟೆಲಿವಿಷನ್ನಿನ ಅತಿ ಬೇಡಿಕೆಯ ರೋಮ್ಯಾಂಟಿಕ್ ಬಾಯ್ ಆಗಿಹೋಗಿದ್ದೆ. “ಗೂಡಿನಿಂದ ಗಗನಕ್ಕೆ”, “ಗುಡ್ಡೆದ ಭೂತ” ತರಹದ ಧಾರಾವಾಹಿಗಳು ನಿನ್ನನ್ನು ಸ್ಟಾರ್ ಆಗಿಸಿದ್ದವು.

ಆಗಲೇ ನಾನು – ನೀನು ಸೇರಿ ಸಿನಿಮಾ ಪತ್ರಕರ್ತರಿಗೆ ಹಣ ಸಂಗ್ರಹಕ್ಕಾಗಿ “ಧನ್ವಂತರಿಯ ಚಿಕಿತ್ಸೆ” ನಾಟಕ ಮಾಡಿದ್ದು… ಆ ನಾಟಕದಲ್ಲಿ ಎಲ್ಲಾ ಪಾತ್ರಗಳನ್ನೂ ಪತ್ರಕರ್ತರೇ ಮಾಡಬೇಕಿತ್ತು. ಆದರೆ ಸೂತ್ರಧಾರನ ಪಾತ್ರಕ್ಕೆ ನನಗೆ ಕೊಂಚ ಅನುಭವ ಇರುವವರೇ ಬೇಕಿತ್ತು. ನಾನು ಹೇಗೆ ಹೇಗೋ ನೀನು ಸಹ ಪತ್ರಕರ್ತ ಎಂದು ಮಾಡಿಸಿ, ನಾನೇ ಸಂಪಾದಿಸುತ್ತಾ ಇದ್ದ “ಬೀದಿ” ಪತ್ರಿಕೆಗೆ ವರದಿಗಾರ ಎಂದು ತಿಳಿಸಿ ನಿನ್ನನ್ನು ಆ ಪಾತ್ರಕ್ಕೆ ಹಾಕಿದ್ದೆ. ನಾಟಕದ ಪ್ರದರ್ಶನ ತುಂಬಾ ಯಶಸ್ವಿಯಾಯಿತು. ಮೊದಲ ಬಾರಿಗೆ ಪತ್ರಿಕೆಗಳಲ್ಲಿ ನಮ್ಮ ಪ್ರಯತ್ನವನ್ನು ಹೊಗಳಿ ವಿಮರ್ಶೆಗಳು ಬಂದವು. ಅದಕ್ಕಿಂತ ಮುಖ್ಯವಾಗಿ ನಿನ್ನ ನಟನೆ ಸಿನಿಮಾ ತಯಾರಾಕರ ಕಣ್ಣಿಗೆ ಬಿತ್ತು. ಅದೆಷ್ಟು ಜನ ನಿರ್ದೇಶಕರು ನಿನಗೆ ಪಾತ್ರ ಕೊಡಲು ಸಿದ್ಧರಾದರು. ಆದರೆ ಆ ನಿರ್ದೇಶಕರ ಮಾತುಗಳು ವಾಸ್ತವ ಸತ್ಯವಾಗುವುದಕ್ಕೆ ಇನ್ನೂ ಸಮಯವಿತ್ತು. ಆಗಲೇ ನಾನು “ಮಿಥಿಲೆಯ ಸೀತೆಯರು” ಎಂಬ ಸಿನಿಮಾಕ್ಕೆ ಸಂಭಾಷಣೆ ಬರೆದು ಸಹಾನಿರ್ದೇಶಕನಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದೆ. ಆ ಸಿನಿಮಾದಲ್ಲಿ ನಮ್ಮ ತಂಡದಲ್ಲಿದ್ದ ಅಖಿಲಾಗೆ ಪ್ರಧಾನ ಪಾತ್ರವೂ ಸಿಕ್ಕಿತು. ನಿನ್ನನ್ನು ತಂಡಕ್ಕೆ ಕರಕೊಳ್ಳುವುದಷ್ಟೇ ಬಾಕಿಯಾಗಿತ್ತು. ನಾನು ವಿನಾಕಾರಣ ನಿನ್ನನ್ನು ಚಿತ್ರೀಕರಣ ನಡೆವ ಜಾಗಕ್ಕೆ ಕರೆಯುತ್ತಾ ಇದ್ದೆ. ಅಲ್ಲಿದ್ದವರನ್ನೆಲ್ಲಾ ಪರಿಚಯಿಸುತ್ತಾ ಇದ್ದೆ. ಕಡೆಗೆ ಒಂದು ದಿನ, ಡಾಕ್ಟರ್‍ನ ಪಾತ್ರವೊಂದನ್ನು ಮಾಡಲು ಬರಬೇಕಿದ್ದ ಅನಂತ್‍ನಾಗ್ ಅವರು ಬರಲೇ ಇಲ್ಲ. ಆಸ್ಪತ್ರೆಯನ್ನು ಚಿತ್ರೀಕರಣಕ್ಕೆ ಪಡೆಯುವುದು ಕಷ್ಟವಿತ್ತು. ಆ ದಿನ ಮುಖ್ಯ ದೃಶ್ಯವೊಂದು ಚಿತ್ರೀಕರಣ ಆಗಲೇ ಬೇಕಿತ್ತು. ಆಗಲೇ ನಾನು ನಿರ್ದೇಶಕರಾಗಿದ್ದ ಕೆ.ಎಸ್‍.ಎಲ್.ಸ್ವಾಮಿ ಅವರಿಗೆ ನಿನ್ನ ಹೆಸರನ್ನು ನೆನಪಿಸಿದ್ದು, ಅವರೂ ಒಪ್ಪಿಕೊಂಡದ್ದು, ನೀನು ಮೊದಲ ಬಾರಿಗೆ ಸಿನಿಮಾಗಾಗಿ ಕ್ಯಾಮೆರಾ ಎದುರಿಸಿ ಎಲ್ಲರ ಮೆಚ್ಚುಗೆ ಪಡೆದದ್ದು.

ಆ ಕ್ಷಣ ನನಗಿನ್ನೂ ಹಸಿರಾಗಿದೆ. ನಿನ್ನ ನಟನೆಯ ಆರಂಭಕ್ಕೆ ಮುನ್ನ ನಾವಿಬ್ಬರೂ ಆಸ್ಪತ್ರೆಯ ಹೊರಗೆ ಹೋಗಿ ಸಿಗರೇಟು ಹಚ್ಚಿದ್ದೆವು. ನಿನ್ನ ಕೈ ನಡುಗುತ್ತಿತ್ತು. ಆದರೆ ಮುಖದಲ್ಲಿ ಆತ್ಮವಿಶ್ವಾಸ ಇತ್ತು. ನಾನು ಬೆನ್ನು ತಟ್ಟಿ, “ಬಾರೋ, ಇದ್ಯಾವ ದೊಡ್ಡ ಯುದ್ಧ… ನೋಡೇ ಬಿಡೋಣ” ಎಂದಿದ್ದೆ. ನನ್ನ ಮಾತಿಗೆ ಬೆಂಬಲವಾಗಿ ನಾಗಣ್ಣ (ಆಗ ಸಹ ನಿರ್ದೇಶಕ ಈಗ ಭಾರೀ ನಿರ್ದೇಶಕ) ಇದ್ದ, ಸರ್ವೋತ್ತಮ ಕಣಗಾಲ್ ಇದ್ದ. ಎಲ್ಲರೂ ಸಮಾನ ಮನಸ್ಕರಾಗಿದ್ದೆವು. ನಿನ್ನ ನಟನೆಯ ಚಿತ್ರೀಕರಣಕ್ಕೆ ಮುಂಚೆ ನಟಿ ಗೀತಾಗೆ ಬೇಕೆಂದೆ ಜೋಕ್ ಹೇಳಿ ಆಕೆಯನ್ನು ನಿರಾಳವಾಗಿಸಿ, ಅಖಿಲಾಗೆ ನಿನ್ನ ಪಕ್ಕದಲ್ಲಿ ಇರು ಎಂದು ತಿಳಿಸಿ ಮೊದಲ ಷಾಟ್ ಚಿತ್ರೀಕರಣ ಆಯಿತು. ಅದು ನಿನ್ನ ವಯಸ್ಸಿಗೆ ಮೀರಿದ ಪಾತ್ರ. (ಅದು ನಿನಗೂ ನನಗೂ ಜೀವಮಾನವಿಡೀ ಬೆನ್ನತ್ತಿದ ವಿಷಯ. ನಾವು ಯಾವಾಗಲೂ ನಮ್ಮ ವಯಸ್ಸನ್ನು ಮೀರಿದ ಪಾತ್ರವನ್ನೇ ಮಾಡುತ್ತಾ ಇದ್ದೆವು.) ನೀನು ಅದೆಷ್ಟು ಸಲೀಸಾಗಿ ಆ ಷಾಟ್‍ನಲ್ಲಿ ಅಭಿನಯಿಸಿದೆ ಎಂದರೆ ಮೊದಲು ಕ್ಯಾಮೆರಾಮನ್ ಮಂಜುನಾಥ್ ಚಪ್ಪಾಳೆ ತಟ್ಟಿದರು. ನಂತರ ಗೀತಾ. ನಂತರ ನಿರ್ದೇಶಕರು. ಹೀಗೆ ಮೊದಲ ಷಾಟ್‍ನಲ್ಲೇ ನೀನು ಎಲ್ಲರ ಮನಸ್ಸನ್ನೂ ಗೆದ್ದಿದ್ದೆ. ಆ ಸಿನಿಮಾ ಬಿಡಗಡೆ ಆಯಿತು. ಸಾಕಷ್ಟು ಒಳ್ಳೆಯ ಹೆಸರೇ ಬಂದಿತ್ತು. ಆದರೆ ನಿನಗೆ ಅವಕಾಶ ಕೊಡುವವರೆಲ್ಲಾ ಸಣ್ಣ ಪಾತ್ರಗಳನ್ನು ಕೊಡುತ್ತಾ ಇದ್ದರು. ನೀನು ಕೆಲವು ಸಿನಿಮಾಗೆ ಸಹನಿರ್ದೇಶಕನೂ ಆಗಿ ಕೆಲಸ ಮಾಡಿದೆ. ಊಟವಿಲ್ಲದ ದಿನಗಳಲ್ಲಿ ನಮ್ಮ ಭೇಟಿಯಾಗುತ್ತಾ ಇತ್ತು. ನಮ್ಮ ಮನೆ ನಿನಗೆ ಮತ್ತೊಂದು ಖಾಯಂ ವಿಳಾಸ ಆಗಿತ್ತು.

ಆಗಲೇ ನಾನು ನಿರ್ದೇಶನ ಮಾಡಬೇಕೆಂದು “ಹರಕೆಯ ಕುರಿ” ಚಿತ್ರಕತೆ ಬರೆಯುತ್ತಾ ಇದ್ದೆ. ಆದರೆ ನನಗೆ ಸಿಕ್ಕ ನಿರ್ಮಾಪಕರು ಕಡೆಯ ಘಳಿಗೆಯಲ್ಲಿ ಕೈ ತಪ್ಪಿದರು. ಆಗ ಆ ಚಿತ್ರಕತೆ ಓದಿದ ಕೆ.ಎಸ್.ಎಲ್‍. ಸ್ವಾಮಿ ಅವರು ತಾವೇ ನಿರ್ಮಿಸಿ ನಿರ್ದೇಶಿಸುವುದಾಗಿ ಕೇಳಿದರು. ಪ್ರಕಾಶನನ್ನು ನಾಯಕನ ಪಾತ್ರಕ್ಕೆ ಹಾಕುವುದಾದರೆ ನಿಮಗೆ ಚಿತ್ರಕತೆ ಕೊಡುತ್ತೇನೆ ಎಂದು ಷರತ್ತು ಹಾಕಿ ಚಿತ್ರಕತೆ ಕೊಟ್ಟೆ. ನನ್ನ ಷರತ್ತಿಗೆ ಒಪ್ಪಿ ನಿನ್ನನ್ನು ನಾಯಕನನ್ನಾಗಿ ಹಾಕಿಕೊಂಡರು. ವಿಷ್ಣವರ್ಧನ್, ಗೀತಾ, ಸೋಮಶೇಖರ್ ರಾವ್ ತರಹದ ಘಟಾನುಘಟಿಗಳ ಜೊತೆಗೆ ನನ್ನ ಜೀವದ ಗೆಳೆಯಾ ನಾಯಕನಾಗಿ ನಟಿಸಿದ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಸದ್ದು ಮಾಡಲಿಲ್ಲ. ಆದರೆ ರಾಷ್ಟ್ರಪ್ರಶಸ್ತಿ ಪಡೆಯಿತು.

ಮದರಾಸು ಪಯಣ

“ಹರಕೆಯ ಕುರಿ” ಚಿತ್ರದ ಡಬ್ಬಿಯನ್ನು ಹೊತ್ತುಕೊಂಡು ನಾವಿಬ್ಬರೂ ಮದರಾಸಿಗೆ ಹೊಗಿದ್ದು ಸಹ ನನಗೆ ನೆನಪಿದೆ. ಅದನ್ನು ಬಾಲಚಂದರ್ ಅವರು ನೋಡಿದ್ದು ಹೌದು. ಆದರೆ ನಿನಗೆ ತಟ್ಟನೆ ಪಾತ್ರ ಕೊಟ್ಟಿರಲಿಲ್ಲ. ಮೂರು ನಾಲ್ಕು ತಿಂಗಳಾದ ಮೇಲೆ ನಮ್ಮ ಮನೆಗೆ ನಿನ್ನನ್ನು ಕೇಳಿಕೊಂಡು ಬಾಲಚಂದರ್ ಅವರ ಕಛೇರಿಯಿಂದ ಫೋನ್ ಬಂದಿತ್ತು. ನೀನು ನಾಪತ್ತೆಯಾಗಿದ್ದೆ. ನಿನ್ನ ಇರವನ್ನು ಹುಡುಕುವುದೇ ಒಂದು ಕಷ್ಟವಾಗಿತ್ತು. ಹೇಗೆ ಹೇಗೋ ಕಷ್ಟಪಟ್ಟು ನಿನ್ನನ್ನು ತಲುಪಿ, ರಾತ್ರಿ ಮದರಾಸಿಗೆ ಹೋಗಲು ನಮ್ಮಣ್ಣ ಗುರುವಿನಿಂದ ಒಂದು ನೂರು ರೂಪಾಯಿ ಕೈಗಡ ಪಡೆದು, ನಿನ್ನನ್ನು ಬಸ್ಸಿಗೆ ಹತ್ತಿಸಿದ್ದಷ್ಟೆ…

ಆಮೇಲಿನದು ಇತಿಹಾಸ… ನಿನ್ನ ಪ್ರಯಾಣ ದೇಶದ ಎಲ್ಲಾ ಮೂಲೆಗಳನ್ನು ತಲುಪಿತು. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದೆ. ಸ್ವತಃ ನಿರ್ಮಾಪಕನಾಗಿ ಅಪರೂಪದ ಕತೆಗಳನ್ನು ಸಿನಿಮಾ ಮಾಡಿದೆ. ನೀನೇ ನಿರ್ದೇಶಕನೂ ಆದೆ… ಈ ಎಲ್ಲಾ ಕತೆಯನ್ನು ಮತ್ತೆ ಹೇಳಬೇಕಿಲ್ಲ.

ಆದರೆ ನಾನು ಮಾಡುವ ಪ್ರತಿ ಕೆಲಸದಲ್ಲೂ ನೀನು ಹೇಗಾದರೂ ಭಾಗಿಯಾಗುತ್ತಾ ಇದ್ದೆ ಎಂಬುದು ನಮ್ಮಿಬ್ಬರ ಸ್ನೇಹವನ್ನು ಗಟ್ಟಿಯಾಗಿಸಿತು. ನಿನಗೆ ಮಾರ್ಚ್ ತಿಂಗಳಲ್ಲಿ ಐವತ್ತಾಗುತ್ತಾ ಇರುವ ಸಂದರ್ಭದಲ್ಲಿ ನಾನು ನನ್ನ ತಂಡ ನಿನಗೆ ನೂರುಕಾಲದ ಆನಂದವನ್ನು ಹಾರೈಸುತ್ತೇವೆ… ಮತ್ತಷ್ಟು ಅಪರೂಪದ ಪ್ರಯೋಗ ಮಾಡೋಣ… ನಮ್ಮೆಲ್ಲ ಕನಸುಗಳನ್ನು ನನಸಾಗಿಸೋಣ.

ಒಳಿತಾಗಲಿ ಗೆಳೆಯಾ… ನಿನ್ನ ಪಯಣ ಮತ್ತಷ್ಟು ಎತ್ತರಗಳನ್ನು ಮುಟ್ಟಲಿ…!

ನಿನ್ನವ

– ಬಿ.ಸುರೇಶ

12 ಫೆಬ್ರವರಿ 2015

ಕ್ಯಾಂಪ್: ಮೈಸೂರು

Advertisements

0 Responses to “ಮಿತ್ರನೊಂದಿಗೆ ಎರಡೂವರೆ ದಶಕಗಳ ಪಯಣ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 57,460 ಜನರು
Advertisements

%d bloggers like this: