“ನಿರಂತರ, ಮೈಸೂರು” ರಂಗತಂಡದ’ಒಂದಷ್ಟು ಪ್ರಶ್ನೆಗಳು – ಬಿ.ಸುರೇಶ ಉತ್ತರಗಳು

ಮೈಸೂರಿನ ರಂಗತಂಡ “ನಿರಂತರ”ದವರು ಹಲವರಿಗೆ ಕೆಲವು ಪ್ರಶ್ನೆ ಕೇಳಿದ್ದರು. ಆ ಪ್ರಶ್ನೆಗಳಿಗೆ ನಾನು ನೀಡಿದ ಉತ್ತರ ಇಲ್ಲಿದೆ. ಪ್ರಧಾನವಾಗಿ ರಂಗ ನಾಟಕಗಳ ವಿಮರ್ಶೆಯನ್ನು ಕುರಿತ ಈ ಪ್ರಶ್ನೋತ್ತರವು ನಿಮಗೂ ಉಪಯುಕ್ತವಾಗಬಹುದು ಎಂದು ಭಾವಿಸಿದ್ದೇನೆ.

ನಿರಂತರ ಪ್ರಶ್ನೆ 1: ಪ್ರದರ್ಶಕ ಕಲೆಗಳಲ್ಲಿರುವಂತೆ ರಂಗಭೂಮಿಯಲ್ಲೇಕೆ ವಿಮರ್ಶೆ ಬೆಳೆದಿಲ್ಲ?
ಬಿ.ಸುರೇಶ ಉತ್ತರ: ಸಾಹಿತ್ಯ ವಿಮರ್ಶೆಯನ್ನು ಹೊರತು ಪಡಿಸಿ ಬೇರೆ ಎಲ್ಲಾ ಕಲೆಗಳ ವಿಮರ್ಶೆ ನಮ್ಮಲ್ಲಿ ಬೆಳೆದಿಲ್ಲ. ಇದಕ್ಕೆ ಈ ಕಲೆಗಳನ್ನು ನೋಡುವ ಕ್ರಮ ವಿಭಿನ್ನ ಚಾರಿತ್ರಿಕ ಘಟ್ಟಗಳಲ್ಲಿ ಬದಲಾದುದು ಬಹುಮುಖ್ಯ ಕಾರಣ ಎಂದು ಭಾವಿಸುತ್ತೇನೆ. ನಂದಿಕೇಶ್ವರನ ಕಾಲಕ್ಕೆ “ರಸಗ್ರಹಣ”ವನ್ನೇ ಪ್ರತ್ಯೇಕವಾಗಿ ಚರ್ಚಿಸುವ ಅಭ್ಯಾಸವಿದ್ದ ದೇಶವಿದು. ನಂತರ ಬೇರೆ ಬೇರೆಯ ಧರ್ಮಗಳ ಆಡಳಿತ ಬಂದಾಗೆಲ್ಲಾ ಈ ಪ್ರದರ್ಶಕ ಕಲೆಗಳನ್ನು ನೋಡುವ ಕ್ರಮ ಬದಲಾಗಿದೆ. ಮೈಸೂರು ಸಂಸ್ಥಾನದಲ್ಲಿಯೇ ಸಂಗೀತ ಪ್ರಿಯರಿದ್ದ ರಾಜರುಗಳ ಕಾಲಕ್ಕೂ ಆಧುನಿಕ ಪ್ರಜಾಸರ್ಕಾರದ ಕಾಲಕ್ಕೂ ಶಾಸ್ತ್ರೀಯ ಸಂಗೀತವನ್ನು ಗಮನಿಸುವ ಪದ್ಧತಿ ಬದಲಾಗಿರುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು.
ಇನ್ನು ರಂಗಭೂಮಿಯು ಮೂಲತಃ ಉತ್ಸವಗಳ ಭಾಗವಾಗಿ ಬದುಕಿದ್ದ ಕಲಾ ಪ್ರಾಕಾರವಾಗಿತ್ತು, ಕೆಲವೊಮ್ಮೆ ರಾಜರುಗಳ ನೆರಳಲ್ಲಿ ಜೀವಂತಿಕೆ ಪಡೆದಿತ್ತು. ವಸಾಹತುಶಾಹಿಯ ಕಾಲದಲ್ಲಿಯೇ ಈ ನಾಡಿಗೆ ಆಧುನಿಕ ರಂಗಭೂಮಿಯು ಪರಿಚಿತವಾದದ್ದು. ಹೀಗಾಗಿ ಸ್ವತಃ ರಂಗಭೂಮಿಗೆ ಸಾವಿರಾರು ವರ್ಷದ ಇತಿಹಾಸವಿದ್ದರೂ ರಂಗಭೂಮಿಯನ್ನು ಉತ್ಸವ ಹಾಗೂ ದೇವರುಗಳನ್ನು ಹೊರತು ಪಡಿಸಿ ಕಲೆ ಎಂದು ಗುರುತಿಸುವ ಕ್ರಮಕ್ಕಿರುವ ಇತಿಹಾಸ ಕಡಿಮೆ ಇದೆ.
ಇದರೊಂದಿಗೆ ಪಾರ್ಸಿ ವೃತ್ತಿ ರಂಗಭೂಮಿಯಿಂದ ಹುಟ್ಟಿದ ಕನ್ನಡ ವೃತ್ತಿ ರಂಗಭೂಮಿಯು ಕತೆಗೆ ಕೊಟ್ಟು ಪ್ರಾಮುಖ್ಯವನ್ನು ಕಥನಕ್ಕೆ ಮತ್ತು ರಂಗನಿರ್ಮಿತಿಗೆ ಕೊಡಲಿಲ್ಲ ಎಂಬುದನ್ನು ಸಹ ಗಮನಿಸಬೇಕು. (ಈ ಮಾತಿಗೆ ಅಪವಾದಗಳಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೇವಲ ಮೈಕಿನ ಮುಂದೆ ಮಾತಾಡುವ ವೃತ್ತಿ ರಂಗಭೂಮಿಯ ಉದಾಹರಣೆಗಳ ಸಹಿತ ಈ ಮಾತನ್ನು ಹೇಳಲಾಗಿದೆ.) ಹೀಗಾಗಿಯೇ ಭಾರತೀಯ ರಂಗಭೂಮಿಯಲ್ಲಿನ ಆಧುನಿಕ ಕಾಲವನ್ನು (1890ರ ಅವಧಿಯಿಂದ 1960ರ ವರೆಗೆ) ವಾಚಿಕ ರಂಗಭೂಮಿ ಎಂತಲೇ ಗುರುತಿಸಲಾಗುತ್ತದೆ. ಈ ಕಾಲಘಟ್ಟದಲ್ಲಿ ಮಾತಿನ ಚಕಮಕಿಯನ್ನು ಮತ್ತು ನಾಟಕದ ವಸ್ತುವನ್ನು ಕುರಿತು ಮಾತಾಡುವ ವಿಮರ್ಶಕರಿದ್ದರು. ಅವರು ಗುರುತಿಸಿರುವ ಮಹತ್ತರ ಪ್ರಯೋಗಗಳೆಲ್ಲವೂ ಆಯಾ ನಾಟಕದ ವಸ್ತು ಹಾಗೂ ವಾಚಿಕ ವಿವರವನ್ನೇ ದಾಖಲಿಸುತ್ತವೆ.
1960ರ ನಂತರದ ಕಾಲದಲ್ಲಿ ಭಾರತೀಯ ರಂಗಭೂಮಿ ಪ್ರಯೋಗದಲ್ಲಿ ಮಹತ್ತರ ಪ್ರಯೋಗಗಳು ಕಾಣಿಸಿಕೊಂಡವು. ಆದರೆ ಇವುಗಳನ್ನು ದಾಖಲಿಸುವ ವಿಮರ್ಶಕರು ಇರಲಿಲ್ಲ. ಹೀಗಾಗಿಯೇ “ಎನಾಕ್ಟ್” ಮುಂತಾದ ರಂಗಪತ್ರಿಕೆಗಳನ್ನು ರೂಪಿಸಲಾಯಿತು. ಆದರೆ ಅಲ್ಲಿ ಬರೆಯುತ್ತಾ ಇದ್ದವರು ಸಹ ರಂಗಭೂಮಿಯ ದೃಶ್ಯನಿರ್ಮಿತಿ ಬರೆದುದಕ್ಕಿಂತ ವಸ್ತುವನ್ನು ಕುರಿತೇ ಮಾತಾಡುತ್ತಾ ಇದ್ದರು.
ಕನ್ನಡಕ್ಕಂತೂ ಇದೇ 60ರ ದಶಕದ ಎರಡನೆಯ ಅರ್ಧದಲ್ಲಿ ದೃಶ್ಯನಿರ್ಮಿತಿಯೇ ಪ್ರಧಾನವಾಗಿದ್ದ ನಾಟಕಗಳು ಕಾಣಿಸಿಕೊಂಡವು. ಸಮಾನಂತರವಾಗಿ ಈ ನಾಟಕಗಳನ್ನು ಕುರಿತ ವಿಮರ್ಶಕರನ್ನು ತಯಾರಿಸುವ ಕೆಲಸ ಆಗಲಿಲ್ಲ. ಅಪವಾದವೆಂಬಂತೆ ಜಿಎನ್.ರಂಗನಾಥರಾಯರು, ಬಿ.ವಿ.ವೈಕುಂಠರಾಜು ತರಹದ ಕೆಲವರು ರಂಗಭಾಷೆಯನ್ನು ಅರಿತು ವಿಮರ್ಶೆ ಬರೆದ ಉದಾಹರಣೆಗಳಿವೆ. ಈ ಕೆಲಸವನ್ನು ವಿಸ್ತøತಗೊಳಿಸಬಹುದಾದ ಕಾಲಕ್ಕೆ “ರಂಗ ವಿಮರ್ಶೆಯಿಂದ ಲಾಭವಿಲ್ಲ” ಎಂದು ಪತ್ರಿಕೆಗಳು ರಂಗವಿಮರ್ಶೆಗೆ ನೀಡುತ್ತಾ ಇದ್ದ ಜಾಗವನ್ನೇ ಕಡಿತಗೊಳಿಸಿದರು. ಹೀಗಾಗಿ ದಿನಪತ್ರಿಕೆಯಲ್ಲಿ ರಂಗವಿಮರ್ಶೆ ಬರೆವವರ ಸಂಖ್ಯೆ ಬೆಳೆಯಲೇ ಇಲ್ಲ. ಆಕಸ್ಮಿಕವಾಗಿ ಬರೆವವರು ಸಹ ಪದ ಮಿತಿಗೆ ಒಳಪಟ್ಟವರಂತೆ ವಸ್ತುವನ್ನು ಕುರಿತು ಬರೆದರೇ ಹೊರತು ರಂಗನಿರ್ಮಿತಿಯನ್ನು ಕುರಿತು ಬರೆಯಲಿಲ್ಲ.
ಇಂತಹ ಕೊರತೆಗಳನ್ನು ನೀಗಲೆಂಬಂತೆ ಹಲವು ರಂಗಪತ್ರಿಕೆಗಳು ಮತ್ತು ದೃಶ್ಯಸಂಸ್ಕøತಿಯನ್ನೇ ಪ್ರಧಾನವಾಗಿ ಗಮನಿಸುವ ಪತ್ರಿಕೆಗಳನ್ನು ಆಯಾ ಕಲೆಗಳಲ್ಲಿ ದುಡಿಯುವವರೇ ಆರಂಭಿಸದರು. ಅವುಗಳಲ್ಲಿ “ಸಂಕುಲ”ದಲ್ಲಿ ದೃಶ್ಯನಿರ್ಮಿತಿಯನ್ನು ಪ್ರಧಾನವಾಗಿ ಗಮನದಲ್ಲಿರಿಸಿಕೊಂಡು ವಿಮರ್ಶೆಗಳು ಬಂದಿದ್ದವು. ಆದರೆ ಇಂತಹ ಪತ್ರಿಕೆಗಳ ಆಯಸ್ಸು ಕಡಿಮೆಯಾದ್ದರಿಂದ ಆ ಕಿರು ಪ್ರಯತ್ನಗಳು ಪರಂಪರೆಯಾಗಿ ಬೆಳೆಯಲಿಲ್ಲ.
ಇಂದು ನಾಡಿನಾದ್ಯಂತ ರಂಗಭೂಮಿಯನ್ನು ಕಲಿಸುವ ಅನೇಕ ಶಾಲೆಗಳಾಗಿವೆ. ಇಲ್ಲಿ ರಂಗತಜ್ಞರನ್ನು ಸೃಷ್ಟಿಸುವ ಜೊತೆಗೆ ರಂಗವಿಮರ್ಶಕರ ಬಳಗವನ್ನು ತಯಾರಿಸುವ ಕೆಲಸವೂ ಆಗಬೇಕಾಗಿದೆ. ಹಾಗಾದಾಗ ಮಾತ್ರ ರಂಗವಿಮರ್ಶೆಯು ಸಶಕ್ತ ದಾಖಲೆಗಳನ್ನು ನಾಳೆಗೆ ಉಳಿಸಬಹುದು.
ನಿರಂತರ ಪ್ರಶ್ನೆ 2: ನಟನೆ, ನಿರ್ದೇಶನ ಇತ್ಯಾದಿಗಳಂತೆ ರಂಗವಿಮರ್ಶೆ ರಂಗಭೂಮಿಯ ಪ್ರಮುಖ ಶಿಸ್ತಾಗಿ ಬೆಳೆಯದಿರುವುದಕ್ಕೆ ಕಾರಣಗಳೇನು?
ಬಿ.ಸುರೇಶ ಉತ್ತರ: ಈ ಪ್ರಶ್ನೆಗೆ ಅದಾಗಲೇ ಹಿಂದಿನ ಉತ್ತರದಲ್ಲಿ ಕೆಲವು ವಿವರ ನೀಡಲಾಗಿದೆ. ನಮ್ಮ ಸಮಾಜದಲ್ಲಿ ಬೆಳಕಿನ ಕೆಳಗೆ ಇರುವ ವಿವರಗಳಿಗೆ ಸಿಗುವ ಆದ್ಯತೆಯಂತೆ ಇತರ ವಿವರಗಳಿಗೆ ಆದ್ಯತೆ ದೊರೆಯುವುದಿಲ್ಲ. ಇದು ನಾವು ಸಮಾಜ ಕಟ್ಟಿರುವ ಮತ್ತು ನಮ್ಮ ಮೌಲ್ಯಮಾಪನ ಕ್ರಮದಲ್ಲಿಯೇ ಇರುವ ಹುಳುಕು.
ನಮ್ಮಲ್ಲಿ ಆರಂಭವಾದ ಅನೇಕ ರಂಗಶಾಲೆಗಳು ಎರಡು ಮೂರು ದಶಕಗಳ ಅನುಭವವನ್ನು ಹೊಂದಿವೆ. ವರುಷಕ್ಕೆ ಕನಿಷ್ಟ ಹದಿನೈದು ಜನ ರಂಗತಜ್ಞರನ್ನು ತಯಾರಿಸುತ್ತಿವೆ. ಈ ಕೊಡುಗೆಯನ್ನು ಅಲ್ಲಗಳೆಯಲಾಗದು. ಆದರೆ ರಂಗತಜ್ಞರನ್ನು ಸೃಷ್ಟಿಸಿ ಹಾಗೆಯೇ ರಂಗವಿಮರ್ಶಕರನ್ನೂ ಸೃಷ್ಟಿಸಬೇಕೆಂದು ಈ ರಂಗಶಾಲೆಗಳು ಯೋಚಿಸಬೇಕು. ಇಂತಹ ರಂಗಶಾಲೆಗಳಲ್ಲಿ ರಂಗವಿಮರ್ಶೆಯನ್ನು ಸಹ ಪ್ರಧಾನ ಪಠ್ಯವಾಗಿಸಿ ಇದೇ ರಂಗತಜ್ಞರು ಬರಹಗಾರರೂ ಆಗುವುದಕ್ಕೆ ಪ್ರೇರೇಪಿಸಬೇಕು. ಆಗ ಮುಂಬರುವ ತಲೆಮಾರುಗಳಲ್ಲಿ ರಂಗವಿಮರ್ಶೆ ಎಂಬುದು ಜೀವಂತವಾಗಿರಲು ಸಾಧ್ಯ.
ಇದೇ ಸಂದರ್ಭದಲ್ಲಿ ನಮ್ಮಲ್ಲಿನ ಸ್ನಾತಕೋತ್ತರ ಕೇಂದ್ರಗಳ ಮೂಲಕ ಬಂದ ಹೊಸ ಭಾಷಾ ತಜ್ಞರುಗಳನ್ನು ಸಹ ಗಮನಿಸಬೇಕು. ಈ ಮಾದರಿಯ ತಯಾರಿ ಪಡೆದವರು ಸಾಹಿತ್ಯ ವಿಮರ್ಶೆಯ ಮಾನದಂಡಗಳ ಮೂಲಕ ರಂಗಭೂಮಿ ವಿಮರ್ಶೆಯನ್ನು ಸಹ ಮಾಡಲು ಪ್ರಯತ್ನಿಸುತ್ತಾ ಇದ್ದಾರೆ. ಇಂತ ಸ್ನಾತಕೋತ್ತರ ಕೇಂದ್ರಗಳಲ್ಲಿಯೂ ದೃಶ್ಯ ಮಾಧ್ಯಮದ ವಿಮರ್ಶೆಗೆ ಪಠ್ಯೇತರ ಚಟುವಟಿಕೆಯಾಗಿ ಪ್ರತ್ಯೇಕ ಶಿಬಿರಗಳನ್ನು ನಡೆಸಬೇಕು. ಆ ಮೂಲಕ ಈ ವಿದ್ಯಾರ್ಥಿಗಳು ಸಹ ದೃಶ್ಯ ಮಾಧ್ಯಮದ ವಿಮರ್ಶೆಗೆ ಬಳಸಬೇಕಾದ ಮಾದರಿಗಳನ್ನು ರೂಪಿಸುವ ಕೆಲಸ ಆಗಬೇಕು.
ಈ ಮಾದರಿಯಲ್ಲಿ ಎಲ್ಲಾ ವಿದ್ಯಾರ್ಥಿ ತಯಾರಿಕ ಹಂತದಲ್ಲಿ ವಿಮರ್ಶೆಯನ್ನು ಕಲಿಸವ ಕೆಲಸವಾದಾಗ ನಮ್ಮಲ್ಲಿ ದೃಶ್ಯಮಾಧ್ಯಮ ವಿಮರ್ಶೆ ಶಕ್ತವಾಗುವ ಸಾಧ್ಯತೆ ಇದೆ.
ನಿರಂತರ ಪ್ರಶ್ನೆ 3: ರಂಗವಿಮರ್ಶೆ ಬೆಳೆಯುವಲ್ಲಿ ಅಕಾಡೆಮಿ, ರಂಗಪೀಠ, ರಂಗಶಾಲೆಗಳ ಪಾತ್ರವೇನು?
ಬಿ.ಸುರೇಶ ಉತ್ತರ: ಈ ಪ್ರಶ್ನೆಗೂ ಹಿಂದಿನ ಎರಡೂ ಉತ್ತರಗಳಲ್ಲಿ ಹಲವು ಸೂಚನೆಗಳಿವೆ. ಅವುಗಳನ್ನು ವಿಸ್ತರಿಸುವ ಅವಕಾಶವೂ ಇದೆ.
ನಮ್ಮಲ್ಲಿನ ಅಕಾಡೆಮಿಗಳು ಹಾಗೂ ರಂಗಪೀಠಗಳು ಕಳೆದ ಕೆಲವು ದಶಕಗಳಿಂದ ರಾಜಕೀಯ ಓಲೈಕೆಗಳಿಂದಾದ ಪ್ರತಿನಿಧಿಗಳಿಂದ ತುಂಬಿವೆ. ಇದರಿಂದಾಗಿ ಅಕಾಡೆಮಿ ಮತ್ತು ರಂಗಪೀಠಗಳು ಮಾಡಬೇಕಾದ ಅಕಾಡೆಮಿಕ್ ಕೆಲಸಗಳು ಸರಿಯಾದ ಕ್ರಮದಲ್ಲಿ ಆಗುತ್ತಾ ಇಲ್ಲ ಎಂಬುದು ಮೇಲ್ನೋಟಕ್ಕೇ ಕಾಣುತ್ತಾ ಇದೆ. ಮೊದಲಿಗೆ ಇಂತಹ ತಾಣಗಳನ್ನು ರಾಜಕೀಯ ಓಲೈಕೆಗಳಿಂದ ದೂರ ಇಡುವ ಕೆಲಸ ಆಗಬೇಕಿದೆ.
ನಾಟಕ ಅಕಾಡೆಮಿಯು ರಂಗಭೂಮಿಯ ಸರ್ವತೋಮುಖ ಬೆಳವಣಿಗೆಯನ್ನು ಅಕಡೆಮಿಕ್ ಆಗಿ ಯೋಚಿಸುವ ತಾಣವಾಗಬೇಕಿದೆ. ಅದಕ್ಕಾಗಿ ನಿರಂತರವಾಗಿ ನಾಟಕ ಶಿಬಿರಗಳ ಮಾದರಿಯಲ್ಲಿಯೇ ನಾಟಕ ವಿಮರ್ಶಾ ಶಿಬಿರಗಳನ್ನು ಸಹ ಅಕಾಡೆಮಿಗಳು ಮಾಡಬೇಕಿದೆ. ಈ ನಿಟ್ಟಿನಲ್ಲಿ ಹಿಂದೆ ಹಲವು ಪ್ರಯತ್ನಗಳಾಗಿವೆಯಾದರೂ ಇವುಗಳಲ್ಲಿ ದೂರಗಾಮಿ ದೃಷ್ಟಿಕೋನದ ಕೊರತೆ ಇದ್ದದ್ದು ಸ್ಪಷ್ಟ. ಹೀಗಾಗಿ ಈವರೆಗಿನ ಪ್ರಯತ್ನಗಳಿಂದ ಫಲಗಳು ದೊಡ್ಡ ಕೊಡುಗೆ ಆಗಿಲ್ಲ. ಪ್ರಾಯಶಃ ನಾಟಕ ಅಕಾಡೆಮಿ ಸ್ವತಃ ಒಂದು ರಂಗವಿಮರ್ಶೆಯ ತ್ರೈಮಾಸಿಕವನ್ನೋ ಅರ್ಧ ವಾರ್ಷಿಕ ಪತ್ರಿಕೆಯನ್ನೋ ಹೊರತರುವ ಪ್ರಯತ್ನ ಮಾಡಬೇಕು. ಸಾಹಿತ್ಯ ಅಕಾಡೆಮಿಯು ವಾರ್ಷಿಕವಾಗಿ ವಿಭಿನ್ನ ಸಾಹಿತ್ಯ ಪ್ರಾಕಾರಗಳ ಕುರಿತು ತರುವ ಹೊತ್ತಿಗೆಗಳ ಹಾಗೆ ಆಯಾ ವರ್ಷಗಳಲ್ಲಿ ರಂಗಭೂಮಿಯಲ್ಲಿ ಆದ ವಿಭಿನ್ನ ಪ್ರಯೋಗಗಳ ದಾಖಲೆಯೂ ಸಿಗುವಂತಹ ಹಾಗೂ ದೃಶ್ಯಮಾಧ್ಯಮ ವಿಮರ್ಶೆ ಇರುವಂತಹ ಲೇಖನಗಳು ಈ ಹೊತ್ತಿಗೆಯಲ್ಲಿ ಇದ್ದರೆ, ಅವು ಮುಂದಿನ ತಲೆಮಾರಿಗೆ ಮಾದರಿಯಾಗಿ ಉಳಿಯಬಲ್ಲವು.
ಇದೇ ಮಾದರಿಯನ್ನು ರಂಗಪೀಠಗಳು ಸಹ ಅನುಸರಿಸಬಹುದು.
ರಂಗಶಾಲೆಗಳ ದೃಷ್ಟಿಯಿಂದ ಹೇಳುವುದಾದರೆ ನೀನಾಸಂ ಶಾಲೆಯು “ಮಾತುಕತೆ” ಎನ್ನುವ ಹೊತ್ತಿಗೆಯ ಮೂಲಕ ಕೆಲವು ಮಾದರಿ ವಿಮರ್ಶೆಗಳನ್ನು ಪ್ರಕಟಿಸುವ ಪ್ರಯತ್ನ ಮಾಡಿದೆ. ಹಾಗೆಯೇ ವಸಂತ ಬನ್ನಾಡಿಯವರು ಸಹ ಕೆಲವು ಸಂಚಿಕೆಗಳನ್ನು ಪ್ರಕಟಿಸಿದ್ದಾರೆ. ಡಾ.ವಿಜಯಾ ಅವರ “ಸಂಕುಲ” ಪತ್ರಿಕೆಯು ಕೆಲವು ಕಾಲ ಅಪರೂಪದ ರಂಗವಿಮರ್ಶೆಗಳನ್ನು ಪ್ರಕಟಿಸಿದೆ. ಈ ಮಾದರಿಯ ಕೆಲಸಗಳು ನಿರಂತರತೆಯನ್ನು ಪಡೆಯುವಲ್ಲಿ ರಂಗಶಾಲೆಗಳು ಸ್ವತಃ ಪಾಲ್ಗೊಳ್ಳಬೇಕು. ಕನಿಷ್ಟ ಆಯಾ ರಂಗಶಾಲೆಯಲ್ಲಿ ಆದ ಪ್ರಯೋಗಗಳನ್ನು ದೃಶ್ಯಮಾಧ್ಯಮದ ವಿಮರ್ಶಾ ಸಾಧನಗಳ ಮೂಲಕ, ಸಿಮಿಯಾಟಿಕ್ಸ್ ಮೂಲಕ ವಿಶ್ಲೇಷಿಸುವ ಲೇಖನಗಳನ್ನು ಪ್ರಕಟಿಸಿದರೂ ಅದೊಂದು ದೊಡ್ಡ ಸಹಾಯವಾಗುತ್ತದೆ.
ನಿರಂತರ ಪ್ರಶ್ನೆ 4:ನಾಟಕ ನೋಡುವ ಬಗೆ ಯಾವುದು?
ಬಿ.ಸುರೇಶ ಉತ್ತರ: ನಾಟಕ ನೊಡುವ ಬಗೆ ಎಂಬುದು ಬೃಹತ್ ಮತ್ತು ಸುದೀರ್ಘ ಉತ್ತರವನ್ನು ಬೇಡುವ ಪ್ರಶ್ನೆಯಾಗಿದೆ. ಇದಕ್ಕೆ ಸರಳ ಉತ್ತರವೂ ಇಲ್ಲ.
ನಾಟಕ ನೋಡುವುದು ಎನ್ನುವಾಗಲೇ ಅಲ್ಲಿ ಒಬ್ಬ ನಾಟಕ ಅಭಿನಯಿಸುವವನು ಹಾಗೂ ಅದನ್ನು ನೋಡುವವನು ಎಂಬ ಎರಡು ಮನಸ್ಸುಗಳಿವೆ. ಇವೆರಡೂ ಮನಸ್ಸುಗಳ ಸಿದ್ಧತೆಯನ್ನು ಆಧರಿಸಿ ನಾಟಕ ನೋಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಒಬ್ಬಾತ ರಾತ್ರಿ ಹತ್ತರ ಬಸ್ಸಿಗೆ ತನ್ನ ಊರಿಗೆ ಹೊರಡಬೇಕಾದವನು ಸಂಜೆ ಬಸ್ ಸ್ಟಾಂಡಿನ ಬಳಿಯಲ್ಲಿ ನಾಟಕ ನೋಡುವುದಕ್ಕೂ ಮತ್ತೊಬ್ಬ ಸಕಲ ಸಿದ್ಧತೆಯೊಡನೆ ನಾಟಕವನ್ನೇ ನೋಡಬೇಕೆಂದು ಕೂರುವುದಕ್ಕೆ ಇರುವುದರಲ್ಲಿ ವ್ಯತ್ಯಾಸವು ನಾಟಕದ ನೋಡುವ ಕ್ರಮಗಳನ್ನು ಬದಲು ಮಾಡುತ್ತದೆ. ಹೀಗೆ ವಿಭಿನ್ನ ಕಾರಣಗಳಿಗಾಗಿ ನಾಟಕ ನೋಡಲು ಬಂದವನನ್ನು ಕಥನದ ಒಳಗೆ ಸೆಳೆಯುವುದು ಆಯಾ ನಾಟಕ ತಂಡದ ಕೆಲಸವಾದರೂ ಆ ನಾಟಕವನ್ನು ನೋಡುವವನನ್ನು ರಸಿಕ ಎಂದು ಗುರುತಿಸಿ ಅವನಲ್ಲಿ ಒಂದು ಅನುಭೂತಿ ಉಂಟಾಗುವ ಹಾಗೆ ಮಾಡುವುದೇ ನಾಟಕದ ಕೆಲಸ.
ಇನ್ನು ನೋಡುಗನಾದರೋ ನಾಟಕ ಮಂದಿರದೊಳಗೆ ಬರುವ ಕಾರಣ ಏನೇ ಇದ್ದರೂ ನಾಟಕ ನೋಡುವಾಗ ತನ್ನ ಅರಿವಿಲ್ಲದೆಯೇ ಅನೇಕ ನಾಟಕದ ಸತ್ಯಗಳನ್ನು ಗ್ರಹಿಸುವವನಾಗಿರುತ್ತಾನೆ. ಹಾಗಾಗಿಯೇ ಯಾವುದೇ ಪರಿಕರ/ಸಜ್ಜಿಕೆ ಇಲ್ಲದ ರಂಗತಾಣದಲ್ಲಿ ರಾಮ, ಸೀತೆ ಪಾತ್ರಗಳು ಇದು ದಂಡಕಾರಣ್ಯ ಎಂದರೂ ಅದನ್ನು ಒಪ್ಪುವ ಮನಸ್ಥಿತಿ ನೋಡುಗನಿಗೆ ಇರುತ್ತದೆ. ಈ ಎಲ್ಲಾ ಅದಾಗಲೇ ಗೊತ್ತಾಗಿರುವ ಮಾದರಿಯ ಆಚೆಗೆ ನಾಟಕವೊಂದರ ರಾಜಕೀಯ ಮತ್ತು ಸಾಮಾಜಿಕ ದೃಷ್ಟಿಕೋನಗಳು ಆಯಾ ನೋಡುಗನ ಪ್ರತಿಕ್ರಿಯೆಗಳನ್ನು ಬದಲಿಸುತ್ತವೆ. ಆಯಾ ನೋಡುಗನ ನಂಬುಗೆ ಅಥವಾ ನಿಲುವಿಗೆ ವಿರುದ್ಧವಾದುದು ರಂಗದ ಮೇಲೆ ನಡೆಯುತ್ತಾ ಇದ್ದರೆ ನೋಡುಗ ವ್ಯಗ್ರನಾಗುತ್ತಾನೆ. ನಾಟಕದ ಒಳಗೆ ತೊಡಗುವುದಕ್ಕಿಂತ ಹೊರಗುಳಿದು ವಾದಕ್ಕಿಳಿಯುತ್ತಾನೆ.
ಉದಾಹರಣೆಗೆ ಮಂಡ್ಯದ ಹುಡುಗರು ಅಭಿನಯಿಸಿದ ನಾಟಕವೊಂದರಲ್ಲಿ ನಟಿಯೊಬ್ಬಳು ನೇಗಿಲು ಹೂಡುವ ಪ್ರಸಂಗ ಬರುತ್ತದೆ. ಈ ದೃಶ್ಯಕ್ಕೂ ಹಿಂದಿನ ದೃಶ್ಯಕ್ಕೂ ನಡುವಿನ ಅಂತರ ಕಡಿಮೆ ಇದ್ದುದರಿಂದ ಮತ್ತು ಆ ನಾಟಕ ನಿರ್ದೇಶಕರು ಆಲೋಚಿಸಿದ ಕ್ರಮದ ಹಿನ್ನೆಲೆಯಲ್ಲಿ ನೇಗಿಲು ಹೂಡುವ ದೃಶ್ಯದಲ್ಲಿ ಆ ನಟಿಯು ಆಧುನಿಕ ಸಲ್ವಾರ್ ಕಮೀಜ್‍ನಂತಹ ಉಡುಗೆಯಲ್ಲಿಯೇ ಅಭಿನಯಿಸಿದ್ದಳು. ನಾಟಕ ನೋಡುತ್ತಾ ಇದ್ದ ಒಬ್ಬಾತನಿಗೆ ಇದು ತಪ್ಪು ಎನಿಸಿತು. ಆತನಿಗೆ ಭೂಮಿಯ ಕೆಲಸ ಮಾಡುವವರು ಸೀರೆ ಮಾತ್ರ ಉಡುಬೇಕು ಎಂಬ ನಂಬುಗೆ. ಹಾಗಾಗಿ ನಾಟಕ ನಡೆಯುವಾಗಲೇ ಆ ನೋಡುಗ ಗಲಾಟೆ ಶುರು ಮಾಡಿದ್ದನ್ನು ನಾನು ಕಂಡಿದ್ದೇನೆ.
ಇಂತಹ ಉದಾಹರಣೆಗಳನ್ನು ಮೀರಿ ಕಳೆದ ಮೂರು ದಶಕಗಳಿಂದ ರಂಗಭೂಮಿಯಲ್ಲಿ ಆಗುತ್ತಾ ಇರುವ ಅನೇಕ ಪ್ರಯೋಗಗಳನ್ನು ನೋಡುಗ ಗೌರವದಿಂದ ಸ್ವೀಕರಿಸಿದ್ದಾನೆ ಮತ್ತು ರಂಗಭೂಮಿಯನ್ನು ಪೋಷಿಸಿದ್ದಾನೆ. ಸಾಮಾನ್ಯ ನೊಡುಗನು ಎಲ್ಲಾ ಕಾಲದಲ್ಲಿಯೂ ರಂಗಚಳುವಳಿಯ ಬಾಗವಾಗಿಯೇ ಇದ್ದಾನೆ.
ಆದರೆ ನಿಮ್ಮ ಈ ಹಿಂದಿನ ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಗಮನಿಸುವುದಾದರೆ, ಇಲ್ಲಿ ನೋಡುಗ ಎನ್ನುವವನು ವಿಮರ್ಶಕ ಆಗುತ್ತಾನೆ. ಆ ಅರ್ಥದಲ್ಲಿ ನಾಟಕದ ನೋಡುಗ ಎಂಬುವವನು ನೊಡುವ ವಿಧಾನ ವಿಭಿನ್ನ. ವಿಮರ್ಶೆ ಮಾಡುವವನು ನಾಟಕ ನೋಡುವುದಕ್ಕೆ ರಸಗ್ರಹಣದ ಸಂಪೂರ್ಣ ತಿಳುವಳಿಕೆ ಉಳ್ಳವನಾಗಿರಬೇಕಾಗುತ್ತದೆ. ನಾಟಕವೊಂದರಲ್ಲಿ ದೃಶ್ಯ ಸಂಯೋಜನೆ, ವರ್ಣ ಸಂಯೋಜನೆ, ಬೆಳಕು ಸಂಯೋಜನೆ, ರಂಗ ಸಂಯೋಜನೆ, ವಾಕ್ ಸಂಯೋಜನೆ, ಧ್ವನಿ ಸಂಯೋಜನೆ…. ಹೀಗೆ ಅನೇಕ ಸಂಯೋಜನೆಗಳಿವೆ. ಈ ಸಂಯೋಜನೆಗಳು ಆಯಾ ನಾಟಕದ ರಾಜಕೀಯ ನಿಲುವುಗಳನ್ನು ಹೇಗೆ ದಾಟಿಸುತ್ತವೆ ಎಂಬುದರ ಬಗ್ಗೆ ವಿಮರ್ಶಕ ನೊಡುಗನಿಗೆ ತಿಳುವಳಿಕೆ ಇರಬೇಕಾಗುತ್ತದೆ. ದೃಶ್ಯವೊಂದರಲ್ಲಿ ತಟ್ಟನೆ ಹುಟ್ಟುವ ಸಂಗೀತವನ್ನು ಅರಿಯುವುದಷ್ಟೇ ಅಲ್ಲದೆ, ಆ ಸಂಗೀತದ ಹುಟ್ಟಿಗೆ ಕಾರಣವಾದ ಹೂರಣ ಹಾಗೂ ನಾಟಕದ ರಾಜಕೀಯ ನಿಲುವಿನ ಆಯ್ಕೆಯನ್ನು ಗ್ರಹಿಸುವ ಶಕ್ತಿ ಇರಬೇಕಾಗುತ್ತದೆ. ಅಂತಹ ನೋಡುಗರು ನಮ್ಮಲ್ಲಿ ಇದ್ದಾರೆ. ಆದರೆ ಆ ತಿಳುವಳೀಕೆ ಇರುವವರೆಲ್ಲಾ ಬರೆಯಬಲ್ಲ ವಿಮರ್ಶಕರಾಗಿಲ್ಲ ಎಂಬುದಷ್ಟೇ ನಮಗೆ ಸಧ್ಯಕ್ಕಿರುವ ಸಮಸ್ಯೆ. ಆ ನಿಟ್ಟಿನಲ್ಲಿ ಈ ಹಿಂದಿನ ಪ್ರಶ್ನೆಗಳಿಗೆ ಬರೆದ ಉತ್ತರಗಳನ್ನು ಮತ್ತೆ ಮತ್ತೆ ನೋಡಿ, ಹೊಸ ತಲೆಮಾರನ್ನು ರೂಪಿಸಬೇಕಾದ ಜವಾಬ್ದಾರಿ ಈಗಿನ ತಲೆಮಾರಿನ ಮೇಲೆ ಸದಾಕಾಲವೂ ಇರುತ್ತದೆ.
ನಿರಂತರ ಪ್ರಶ್ನೆ 5: ರಂಗವಿಮರ್ಶೆ ರಂಗಚಳುವಳಿಗೆ ಹಿನ್ನೆಡೆ ಉಂಟು ಮಾಡುತ್ತದೆಯೇ?
ಬಿ.ಸುರೇಶ ಉತ್ತರ: ಇಲ್ಲ. ರಂಗವಿಮರ್ಶೆಯು ಯಾವುದೇ ರಂಗ ಚಳುವಳಿಯ ಭಾಗ. ಇವೆರಡರ ನಡುವೆ ಕೊಡು-ಕೊಳೆಗಳ ಸಂಬಂಧ ಇದ್ದೇ ಇರುತ್ತದೆ. ರಂಗವಿಮರ್ಶೆ ಇದೇ ನೆಲೆಯಲ್ಲಿ ಕೆಲಸವನ್ನೂ ಮಾಡಬೇಕಾಗುತ್ತದೆ. ಒಂದು ರಂಗವಿಮರ್ಶೆ ಆ ನಾಟಕವನ್ನು ನೋಡಲು ಹೊಸ ಪ್ರೇಕ್ಷಕರನ್ನು ಸೃಷ್ಟಿಸುವುದಷ್ಟೇ ಅಲ್ಲದೆ ಆಯಾ ಪ್ರಯೋಗದ ದೃಶ್ಯವಿಮರ್ಶಾ ಕ್ರಮದಿಂದ ನಾಟಕ ತಂಡವನ್ನು ಸಹ ಚರ್ಚೆಗೆ ಎಳೆಯಬೇಕಾಗುತ್ತದೆ. ಆ ಮೂಲಕ ರಂಗಭೂಮಿ ಕಟ್ಟುವ ಮತ್ತು ರಂಗಚಳುವಳಿಯನ್ನು ದಾಖಲಿಸುವ ದ್ವಿಮುಖ ಕೆಲಸವನ್ನು ವಿಮರ್ಶೆಯು ಮಾಡಬೇಕಾಗುತ್ತದೆ.
ಕೆಲವೊಮ್ಮೆ ಹೀಗೂ ಆಗುವುದುಂಟು. ಒಂದು ನಾಟಕದ ರಾಜಕೀಯ ನಿಲುವಿಗೆ ವಿರುದ್ಧವಾದ ನಿಲುವುಳ್ಳ ವಿಮರ್ಶಕರು ಆ ನಾಟಕವನ್ನು ತಮ್ಮ ಅಭಿಪ್ರಾಯ ಮತ್ತು ನಿಲುವುಗಳ ಆಧಾರದಲ್ಲಿಯೇ ವಿಮರ್ಶಿಸಿ ಆ ನಾಟಕಕ್ಕೆ ಸಂಪೂರ್ಣ “ಬೈಗುಳ”ದ ವಿಮರ್ಶೆ ಬರೆಯಬಹುದು. ಇದರಿಂದಾಗಿ ಎರಡೂ ಬಣದ ನಡುವೆ ಮಾತು – ಸಂವಾದ ಆಗುವ ಬದಲು ವಾದ-ವಿವಾದ ಮತ್ತು ಜಗಳ ಹುಟ್ಟಬಹುದು. ಇದು ಮೆಚ್ಚತಕ್ಕ ಮಾದರಿಯಲ್ಲ. ಯಾವುದೇ ವಿಮರ್ಶಕ ತನ್ನ ರಾಜಕೀಯ ನಿಲುವುಗಳನ್ನು ತಾನು ನೋಡಿದ ಕೃತಿಯ ಮೇಲೆ ಆರೋಪಿಸುವುದು ಆ ರಂಗಕೃತಿಗೆ ಮಾಡಿದ ಅಪಚಾರವಾಗುತ್ತದೆ. ರಂಗವಿಮರ್ಶೆಯು ರಂಗ ಚಳುವಳಿಯನ್ನು ಕಟ್ಟುವ ನೆಲೆಯಲ್ಲಿಯೇ ಮೂಡಬೇಕು ಎಂಬುದು ನನ್ನ ಅಭಿಮತ.
ಕೆಲವು ಪತ್ರಿಕೆಗಳಂತೂ ತನ್ನ ಮಾಲೀಕರ ಮರ್ಜಿಯಲ್ಲಿ ಇರುತ್ತವೆ. ಅವು ಕೆಲವರ ರಂಗಚಟುವಟಿಕೆಯನ್ನು ದಾಖಲಿಸುವುದೂ ಇಲ್ಲ. ಇಂತಹ ದಿವ್ಯ ನಿರ್ಲಕ್ಷ್ಯದ ಧೋರಣೆಯೂ ಸಹ ಅಪಾಯಕಾರಿ. ಅಂತಹ ಪತ್ರಿಕೆಗಳು ಪತ್ರಿಕಾಧರ್ಮಕ್ಕೆ ಕಳಂಕ.
ಇಷ್ಟೆಲ್ಲಾದರ ಆಚೆಗೆ ಒಂದಂತೂ ಸತ್ಯ. ರಂಗವಿಮರ್ಶೆಯು ರಂಗಚಳುವಳಿಗೆ ಎಂದೆಂದಿಗೂ ಪೂರಕ.
ನಿರಂತರ ಪ್ರಶ್ನೆ 6: ರಂಗದ ಮೇಲಿನ ನಾಟಕಗಳಷ್ಟೇ ಮುಖ್ಯವಾಗಿ ಇತರೆ ನಾಟಕ ಪ್ರಕಾರಗಳನ್ನು ವಿಮರ್ಶೆಯ ಚೌಕಟ್ಟಿನೊಳಗೆ ನೋಡುವ ಬಗೆ ಹೇಗೆ?
ಬಿ.ಸುರೇಶ ಉತ್ತರ: ಇದು ನಿರಂತರ ಸಮಸ್ಯೆ. ಪ್ರೊಸಿನಿಯಂ ರಂಗ ಪ್ರದರ್ಶನವನ್ನು ಗಮನಿಸಿ ರಂಗವಿಮರ್ಶೆ ಬರೆಯುವ ಹಾಗೆ ಇನ್ನಿತರ ರಂಗ ಪ್ರಕಾರಗಳಾದ ಬೀದಿ ನಾಟಕ, ಪರಿಸರ ನಾಟಕ ಮುಂತಾದ ವಿಭಿನ್ನ ಪ್ರಯೋಗಗಳು ವಿಮರ್ಶೆಗೆ ಒಳಪಡುವುದು ಕಡಿಮೆ. ಇದು ಆಯಾ ಪ್ರಯೋಗಗಳನ್ನು ಚಳುವಳಿಯಲ್ಲಿ ಆಗುತ್ತಾ ಇರುವ ಹಿನ್ನಡೆ.
ಅದರಲ್ಲಿಯೂ ಬೀದಿ ನಾಟಕ ಎಂಬ ಪ್ರಕಾರವನ್ನು ಅರ್ಥ ಮಾಡಿಕೊಂಡ ರಂಗಕರ್ಮಿ ಸಿಗುವುದೇ ದುರ್ಲಭ. ಹೀಗಾಗಿಯೇ ಈ ನಾಟಕಗಳಲ್ಲಿನ ಸಂದೇಶಗಳನ್ನು ಮಾತ್ರ ಬರೆದು ಕೈ ತೊಳೆದುಕೊಳ್ಳುವ ವಿಮರ್ಶಕರಿರುವಂತೆ ಈ ನಾಟಕ ಕಟ್ಟುವ ರಂಗಕರ್ಮಿಗಳು ಸಹ ಸಂದೇಶ ಕೇಂದ್ರಿತ ನಾಟಕವಷ್ಟನ್ನೇ ಆಡಿಸಿ ಕೈ ತೊಳೆದುಕೊಳ್ಳುತ್ತಾರೆ. ಆ ಪ್ರಕಾರದ ಒಳಗಿನ ಅನೇಕ ಸಾಧ್ಯತೆಗಳನ್ನು ದುಡಿಸಿಕೊಳ್ಳುವ ನಾಟಕಗಳು ಆಗುವುದು ಸಹ ಕಡಿಮೆ. ಬೀದಿ ನಾಟಕದ ವಿಮರ್ಶೆಯು ಪ್ರಸನ್ನ, ಎ.ಎಸ್.ಮೂರ್ತಿ, ಬಾದಲ್ ಸರ್ಕಾರ್ ಅವರು ಮಾಡಿಸಿದ ಶೈಲಿಯನ್ನು ಅರಿಯುವುದೇ ಸಾಧ್ಯವಾಗಲಿಲ್ಲ. ನಂತರ ಪ್ರಯೋಗಳನ್ನು ಮಾಡಿದ ಪ್ರಬೀರ್ ಗುಹಾ ಮುಂತಾದವರ ಕಾವ್ಯಶಕ್ತಿಯುಳ್ಳ ವೃತ್ತ ರಂಗಭೂಮಿಯ ವಿವರಗಳು ಬಹುತೇಕ ರಂಗಕರ್ಮಿಗಳಿಗೂ ತಿಳಿದಿಲ್ಲ. ಇನ್ನು ರಂಗವಿಮರ್ಶಕರು ಹೊಸ ಪ್ರಯೋಗಗಳ ಸಿಮಿಯಾಟಿಕ್ ವಿವರಗಳನ್ನು ಅರಿಯುವ ಪ್ರಯತ್ನವನ್ನೂ ಮಾಡಿದಂತೆ ಕಾಣಲಿಲ್ಲ.
ಪ್ರಾಯಶಃ ರಂಗ ವಿಮರ್ಶೆಯನ್ನು ಬೆಳೆಸಲು ಅಕಾಡಮಿಗಳು, ರಂಗಪೀಠಗಳು ಮತ್ತು ರಂಗಶಾಲೆಗಳು ಈ ಹಿಂದೆ ಮಾತಾಡಿದ ವಿವರಗಳನ್ನು ಗಮನಿಸಿ ಮುಂಬರುವ ದಿನಗಳಲ್ಲಿ ಹೊಸ ರಂಗ ವಿಮರ್ಶಕರನ್ನು ತಯಾರಿಸಿದರೆ ಇಂತಹ ಅನೇಕ ಕೊರೆಗಳನ್ನು ದಾಟಬಹುದು.
***

Advertisements

1 Response to ““ನಿರಂತರ, ಮೈಸೂರು” ರಂಗತಂಡದ’ಒಂದಷ್ಟು ಪ್ರಶ್ನೆಗಳು – ಬಿ.ಸುರೇಶ ಉತ್ತರಗಳು”


  1. 1 prasadraxidi April 20, 2015 at 3:23 am

    ಇದರೊಂದಿಗೆ ಇನ್ನು ಒಂದು ಸಮಸ್ಯೆಯೆಂದರೆ ನಾಟಕಗಳ ಪಠ್ಯಕೃತಿಗಳನ್ನು( ಅಥವಾ ಕಥೆ-ಕಾದಂಬರಿಗಳ ರಂಗರೂಪವಾಗಿದ್ದರೆ ಅದನ್ನು) ಓದಿರುವ ರಂಗ ವಿಮರ್ಶಕರು ಅದರೊಂದಿಗೆ ರಂಗಕೃತಿಯನ್ನು ಹೋಲಿಸಿಕೊಳ್ಳುತ್ತಾ ಹೋಗುವದು. ನಮ್ಮ ಅಕಾಡೆಮಿಕ್ ವಿಮರ್ಶಕರಲ್ಲ ಈ ಮನೋಭಾವವೇ ಹೆಚ್ಚಾಗಿ ಕಂಡುಬರುವುತ್ತಿರುವುದು ಮುಖ್ಯ ತೊಡಕು. ನೀವೇಂದಂತೆ ರಂಗವಿಮರ್ಶೆಯ ಬಗ್ಗೆ ತರಬೇತಿ ಶಿಬಿರಗಳು ಹೆಚ್ಚಾಗಬೇಕು ಮತ್ತು ಅದರಲ್ಲಿ ರಂಗ ಕರ್ಮಿಗಳೇ ಹೆಚ್ಚಾಗಿ ಭಾಗವಹಿಸುವಂತಾಗಬೇಕು.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 57,460 ಜನರು
Advertisements

%d bloggers like this: