ನನ್ನ ನೆನಪಿನಲ್ಲಿ “ಸಮುದಾಯ”ದ ನಾಲ್ಕು ದಶಕ…! (ಸಮುದಾಯ ರಂಗತಂಡದ ನಾಲ್ಕು ದಶಕಗಳ ಪಯಣವನ್ನು ನೆನೆಯುತ್ತಾ)

(ಪ್ರಜಾವಾಣಿಯ “ಮುಕ್ತಚಂದ”ದಲ್ಲಿ 27 ಏಪ್ರಿಲ್ 2015ರಲ್ಲಿ ಪ್ರಕಟವಾದ ಲೇಖನ)

ನಾನಾಗ ಐದನೆಯ ತರಗತಿಯ ವಿದ್ಯಾರ್ಥಿ. ನಮ್ಮ ಮನೆಗೆ ಪ್ರಸನ್ನ ಅವರು ಬರುತ್ತಿದ್ದರು. ಅವರು ಆಗಿನ್ನೂ ಎನ್‍ಎಸ್‍ಡಿ ವಿದ್ಯಾರ್ಥಿಯಾಗಿದ್ದವರು. ಅವರ ಎರಡನೆಯ ವರ್ಷದ ರಜೆಯ ಕಾಲದಲ್ಲಿ ಬೆಂಗಳೂರಿನಲ್ಲಿ ನಾಟಕವೊಂದನ್ನು ಆಡಿಸುವುದು ಅವರ ಆಲೋಚನೆಯಾಗಿತ್ತು. ನನ್ನ ತಾಯಿಯವರ (ವಿಜಯಮ್ಮ) ಜೊತೆಗೆ “ಪ್ಲೇ ಬಾಯ್ ಆಫ್ ದ ವೆಸ್ಟರ್ನ್ ವರ್ಲ್ಡ್” ನಾಟಕ ಕುರಿತು ಚರ್ಚೆ ನಡೆಸಿದ್ದರು. ನಾನು ಬೆರಗುಗಣ್ಣಿನ ಕೇಳುಗನಾಗಿದ್ದೆ. ಅದಾಗಿ ಕೆಲವು ವಾರಗಳಲ್ಲಿ ಆ ನಾಟಕವು “ಬಯಲು ಸೀಮೆ ಸರದಾರ” ಎಂಬ ಹೆಸರಲ್ಲಿ ಪ್ರದರ್ಶನವಾಯಿತು. ನನಗೆ ಪರಿಚಿತರಿದ್ದ ಅನೇಕರು ಅಭಿನಯಿಸಿದ್ದ ಈ ನಾಟಕ ಇಂದಿಗೂ ನನ್ನ ಕಣ್ಣೆದುರಿಗೆ ಚಿತ್ರವಾಗಿದೆ. ಆ ನಾಟಕದ ಹಾಡುಗಳು ಇಂದಿಗೂ ನನ್ನ ನೆನಪಲ್ಲಿ ಉಳಿದಿವೆ. ಅಂದು ಯಶ್ವಿಯಾಗಿ ಪ್ರದರ್ಶನ ಕಂಡ ನಾಟಕವು ನಂತರದ ದಿನಗಳಲ್ಲಿ “ಸಮುದಾಯ” ಎಂಬ ರಂಗತಂಡದ ಹುಟ್ಟಿಗೂ ಕಾರಣವಾಯಿತು.

ಅದಾಗಿ ಸುಮಾರು ಒಂದು ವರ್ಷದ ನಂತರ ಪ್ರಸನ್ನ ಅವರು ತಮ್ಮ ಎನ್‍ಎಸ್‍ಡಿ ಶಿಕ್ಷಣ ಮುಗಿಸಿ ಬಂದ ಅವಧಿಯಲ್ಲಿಯೇ ಸೆಂಟ್ರಲ್ ಕಾಲೇಜಿನ ಮರಗಳ ನಡುವೆ ಹರಟೆಗೆ ಸೇರುತ್ತಾ ಇದ್ದ ಮಿತ್ರರು (ಕೆ.ವಿ.ನಾರಾಯಣ, ಎಚ್‍ ಎಸ್ ರಾಘವೇಂದ್ರ ರಾವ್, ಚಿ.ಶ್ರೀನಿವಾಸ ರಾಜು, ಕಿ.ರಂ. ನಾಗರಾಜ್, ಸಿ.ವೀರಣ್ಣ, ಎ.ಎಸ್.ಮೂರ್ತಿ, ವಿಜಯಮ್ಮ, ಮುಂತಾದವರು) ಸಮಕಾಲೀನ ರಂಗಭೂಮಿ ಚಳುವಳಿಯು ಹೇಗೆ ಜನರಂಜನೆಯನ್ನೇ ಪ್ರಧಾನವಾಗಿಸಿಕೊಂಡಿದೆ ಎಂಬ ಮಾತಾಡುತ್ತಾ ಹೊಸದೊಂದು ರಂಗ ಚಳುವಳಿ ಕಟ್ಟುವ ಮಾತಾಡಿದ್ದರು. ಆಗ ಪ್ರಸನ್ನ ಆರಂಭಿಸಿದ ಹೊಸ ರಂಗ ತಂಡಕ್ಕೆ ಕಿ.ರಂ.ನಾಗರಾಜ್ ಅವರು ನೀಡಿದ ಹೆಸರು “ಸಮುದಾಯ” ಎಂದಾಗಿತ್ತು. ಈ ಸಂಘಟನೆಗೆ ಮೊದಲ ದೇಣಿಗೆಯನ್ನು ನನ್ನ ತಾಯಿಯವರು ನನ್ನ ಕೈಯಲ್ಲಿಯೇ ಕೊಡಿಸಿದ್ದರು ಎಂಬುದು ನನಗಿನ್ನೂ ಹಸಿರಾಗಿರುವ ನೆನಪು.

“ಮನರಂಜನೆಗಾಗಿ ಕಲೆ ಅಲ್ಲ, ಜನರಿಗಾಗಿ ಕಲೆ”

ಸಮುದಾಯ ರಂಗತಂಡ ಆರಂಭವಾದಾಗ ಕಟ್ಟಿಕೊಂಡ ‍ಘೋಷಾ ವಾಕ್ಯವಿದು. ಈ ವಾಕ್ಯದ ಹಿನ್ನೆಲೆಯಲ್ಲಿಯೇ ಸಂಸರ ೆರಡು ನಾಟಕಗಳನ್ನು ಸಂಯೋಜಿಸಿ ಕೆ.ವಿ.ನಾರಾಯಣ ಅವರು ಕಟ್ಟಿದ “ವಿಗಡ ವಿಕ್ರಮರಾಯ” ಮತ್ತು ಮ್ಯಾಕ್ಸಿಂ ಗಾರ್ಕಿಯ “ಮದರ್” ಕಾದಂಬರಿಯು “ತಾಯಿ” ಆಗಿ ಪ್ರದರ್ಶನ ಕಂಡಿತ್ತು. ಈ ನಾಟಕಗಳು, ಆ ವರೆಗೆ ರಂಗಾಸಕ್ತರು ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ನೋಡಿದ್ದ ನಾಟಕಗಳಿಗಿಂತ ಭಿನ್ನವಾಗಿ “ಕ್ಯಾಥರ್ಸಿಸ್” ಎಂಬುದು ಯಾವುದೇ ನಾಟಕಕ್ಕೆ ಅತ್ಯಂತ ಮುಖ್ಯವಾದ ಅಂಶ ಎಂಬುದನ್ನು ಪರಿಚಯಿಸಿದ್ದವು. ಈ ನಾಟಕಗಳು ತಮ್ಮೊಳಗಿನ ಹೂರಣದ ಮೂಲಕವೇ ಸಮಕಾಲೀನ ರಾಜಕೀಯ ಸಂಘರ್ಷಗಳಿಗೆ ಪರ್ಯಾಯವಾಗಿ ಹೊಸಮಾಜ ಕಟ್ಟುವ ನಿಟ್ಟಲ್ಲಿ ಆಲೋಚಿಸುವ ವಿವರಗಳನ್ನು ನೀಡಿದ್ದವು. ಹೀಗಾಗಿಯೇ “ವಿಗಡವಿಕ್ರಮರಾಯ” ನಾಟಕದಲ್ಲಿನ ಹಾಡುಗಳಾದ “ಮೈಸೂರು ರಾಜ್ಯದ ದೊರೆಯೇ” “ಹುತ್ತವ ಬಡಿದಾರೋ” ಮುಂತಾದ ಹಾಡುಗಳು ಕೇವಲ ಕಿವಿಗೆ ಮಾತ್ರವಲ್ಲ ಕಣ್ಣೆದುರಿಗಿನ ದೃಶ್ಯವಾಗಿಯೂ ಅನೇಕರ ನೆನಪಲ್ಲಿ ಇಂದಿಗೂ ಇದೆ. ಆವರೆಗಿನ ರಂಗಾಭಿನಯಕ್ಕಿದ್ದ ಉತ್ಸವದ ಶೈಲಿಯನ್ನು ಬಿಟ್ಟುಕೊಟ್ಟು ಕಲಾವಿದರಿಗೆ ಇರಬೇಕಾದ ಬದ್ಧತೆಯನ್ನು ಈ ನಾಟಕಗಳು ತೆರೆದಿಟ್ಟಿದ್ದವು. ಕಲಾವಿದನೊಬ್ಬ ಕೇವಲ ರಂಜಕನಲ್ಲ, ಸಮಕಾಲೀನ ಸಮಾಜದ ರಾಜಕೀಯ ವಿಶ್ಲೇಷಕ ಎಂಬಂತಹ ವಾತಾವರಣ “ಸಮುದಾಯ”ದ ಆರಂಭಿಕ ನಾಟಕಗಳಿಂದ ಸೃಷ್ಟಿಯಾಯಿತು ಎಂಬುದು ಆ ಕಾಲದಲ್ಲಿ ರಂಗಭೂಮಿ ಪ್ರವೇಶಿಸಿದ್ದ ನನ್ನಂತಹ ಅನೇಕರಿಗೆ ದೊರೆತ ದೊಡ್ಡ ಲಾಭ. “ತಾಯಿ” ನಾಟಕದಲ್ಲಿನ ಬಿ.ಜಯಶ್ರೀ ಅವರ ಅಭಿನಯ ಮತ್ತು ನಾಟಕದ ವಿನ್ಯಾಸವು ನೋಡುಗನಿಗೆ ದಾಟಿಸಿದ ಸಂಗತಿಗಳು; ನನ್ನಂತಹವರಿಗೆ ಮ್ಯಾಕ್ಸಿಂ ಗಾರ್ಕಿಯನ್ನು ಮಾತ್ರವಲ್ಲ ರಷ್ಯದ ಕ್ರಾಂತಿಯ ಎಲ್ಲಾ ವಿವರಗಳನ್ನೂ ಓದಲು ಪ್ರೇರೇಪಿಸಿದ್ದವು ಎಂಬುದು “ಸಮುದಾಯ” ತಂಡದ ಆರಂಭದ ದಿನಗಳ ಬಹುತೇಕ ನಾಟಕಗಳ ಕೊಡುಗೆ. ನಂತರ ಪ್ರಸನ್ನ ನಿರ್ದೇಶಿಸಿದ “ಗೆಲಿಲಿಯೋ” ತರಹದ ನಾಟಕಗಳು ರವೀಂದ್ರ ಕಲಾಕ್ಷೇತ್ರದ ವಿಶ್ರಾಂತಿಗೃಹದಲ್ಲಿ ಪ್ರದರ್ಶನವಾಯಿತು. ರಂಗಭೂಮಿಯೆಂದರೆ ಪ್ರೋಸಿನಿಯಂ ಆವರಣ ಮಾತ್ರವಲ್ಲ, ಅದು ಆಪ್ತತೆಯನ್ನು ತರಬಹುದಾದ ಆವರಣದಲ್ಲಿಯೂ ಆಗಬಹುದು ಎಂಬ ತಿಳುವಳಿಕೆಯ ಜೊತೆಗೆ “ಗೆಲಿಯೋ” ನಾಟಕ ಹೇಳುತ್ತಾ ಇದ್ದ ಧರ್ಮಾಂಧರು ಹೇಗೆ ತರ್ಕ ಶುದ್ಧಿಯನ್ನು ಕೊಲ್ಲುತ್ತಾರೆ ಎಂಬ ವಿವರವೂ ಸಹ ನನ್ನಂತಹ ಅನೇಕ ರಂಗಾಸಕ್ತರಿಗೆ ಹೊಸ ಲೋಕವನ್ನು ತೆರೆದಿಟ್ಟಿತ್ತು.

ಹೀಗೆ “ಜನರಿಗಾಗಿ ಕಲೆ” ಎಂಬ ಉದ್ದಿಶ್ಯದಿಂದ ಆರಂಭವಾದ ರಂಗತಂಡವೊಂದು ಆವರೆಗೆ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿದ್ದ ರಂಗತಂಡಗಳ ಆಲೋಚನಾ ಕ್ರಮವನ್ನೂ ಸಹ ಪರೋಕ್ಷವಾಗಿ ಬದಲಿಸಿತ್ತು. ಕೆಲವು ರಂಗತಂಡಗಳು ಹೊಸ ಮಾದರಿಯ ನಾಟಕಗಳನ್ನು ಆರಿಸಿಕೊಂಡು ಪ್ರದರ್ಶಿಸಲಾರಂಭಿಸಿದ್ದು ಸಹ ಕಂಡು ಬಂತು. ರಂಗತಂಡವೊಂದು ಮಾಡಬೇಕಾದ ಪ್ರಧಾನ ಕೆಲಸವಿದು, ತಾನು ಸೃಷ್ಟಿಸುವ ಮಾದರಿಗಳಿಂದಲೇ ತನ್ನ ಸುತ್ತಲ ಇತರರ ಆಲೋಚನಾ ಕ್ರಮಗಳನ್ನು ತಿದ್ದುವುದು. ಆ ಕೆಲಸವನ್ನು “ಸಮುದಾಯ” ರಂಗತಂಡವೂ ಯಶಸ್ವಿಯಾಗಿ ಮಾಡಿತು.

ಈ ಹಾದಿಯಲ್ಲಿ “ಸಮುದಾಯ” ತಂಡವು ನಗರಕ್ಕೆ ಬಾದಲ್ ಸರ್ಕಾರ್ ಅವರನ್ನು ಕರೆಸಿದ್ದು, ಅವರಿಂದ ವೃತ್ತ ರಂಗಭೂಮಿಯ ಪ್ರದರ್ಶನ ಹಾಗೂ ರಂಗಶಿಬಿರಗಳನ್ನು ಮಾಡಿಸಿದ್ದು ಸಹ ನಮ್ಮ ರಂಗಭೂಮಿಗೆ ದೊಡ್ಡ ಕೊಡುಗೆಯನ್ನು ನೀಡಿತು. ಅದಾಗಲೇ ಬೀದಿ ನಾಟಕಗಳನ್ನು ಮಾಡುತ್ತಾ ಇದ್ದ ತಂಡಗಳು ಸಹ ಬಾದಲ್ ಸರ್ಕಾರ್ ಅವರ ಮಾದರಿಯನ್ನು ಬಳಸಿ ವಿಶಿಷ್ಟ ನಾಟಕಗಳನ್ನು ಪ್ರದರ್ಶಿಸಿದರು. ಸ್ವತಃ ಸಮುದಾಯ ತಂಡದವರು ಮಾಡಿದ “ಮೆರವಣಿಗೆ” ಮುಂತಾದ ನಾಟಕಗಳು ಅತ್ಯಂತ ಕಡಿಮೆ ಪರಿಕರ ಮತ್ತು ರಂಗಸಜ್ಜಿಕೆಯಿಂದ ನೋಡುಗನಿಗೆ ಅಪರೂಪದ ಅನುಭೂತಿಯನ್ನು ನೀಡಲು ಸಾಧ್ಯ ಎಂದು ಸಾಬೀತು ಪಡಿಸಿದ್ದವು. ಈ ಪ್ರಯೋಗಗಳ ಪರಿಣಾಮವಾಗಿ ಅನೇಕ ಹೊಸಬರು ಕನ್ನಡ ರಂಗಭೂಮಿಯಲ್ಲಿ ಬದ್ಧತೆಯಿಂದ ದುಡಿಯಲಾರಂಭಿಸಿದ್ದಲ್ಲದೆ “ಸಮುದಾಯ” ಸ್ವತಃ ಸಾಂಸ್ಕೃತಿಕ ಜಾಥಾಗಳನ್ನು ನಡೆಸಲು ವೇದಿಕೆ ಸಿದ್ಧವಾಯಿತು.

ಜಾಥಾ ಎಂಬ ಮರೆಯಲಾಗದ ಗಾಥ  

ರಂಗಭೂಮಿಯು ಕಾಲಾಂತರದಲ್ಲಿ ಅನೇಕಾನೇಕ ಬದಲುಗಳನ್ನು ಕಂಡಿದೆ. ಆದರೆ ಎಪ್ಪತ್ತರ ದಶಕದ ಆದಿ ಭಾಗದಲ್ಲಿ ಕನ್ನಡ ಹವ್ಯಾಸೀ ರಂಗಭೂಮಿಯು ಬಿ.ವಿ.ಕಾರಂತರ ಆಗಮನದಿಂದ ಹೊಳೆದದ್ದು ಈಗ ಇತಿಹಾಸ. ಬಿ ವಿ ಕಾರಂತರ ರಂಗ ಚಳುವಳಿಯು ವೃತ್ತಿ ರಂಗಭೂಮಿಯ ಸಂಗೀತವನ್ನು ಹವ್ಯಾಸೀ ರಂಗಭೂಮಿಯ ಹುಮ್ಮಸ್ಸನ್ನು ಒಳಗೊಂಡು ಅರಳಿತ್ತು. ಕಾಲಾಂತರದಲ್ಲಿ ಈ ಮಾದರಿಯು ಸಂಗೀತ ಮತ್ತು ರಂಜನೆಯನ್ನು ಪ್ರಧಾನವಾಗಿಸಿ ಬೆಳೆದಿತ್ತು. ಇಂದಿಗೂ, ಈ ಕಾಲಘಟ್ಟದಲ್ಲಿ ಆದ ಅನೇಕ ನಾಟಕಗಳು ತಮ್ಮೊಳಗಿದ್ದ ಹಾಡುಗಳಿಂದಾಗಿ ಮಾತ್ರ ನೆನಪಲ್ಲಿವೆ. ಇಂತಹ ರಂಜನೀಯ ನಾಟಕಗಳ ನಡುವೆ “ಜನರಿಗಾಗಿ ಕಲೆ” ಎಂದು ಆರಂಭವಾದ ಸಮುದಾಯವು ತನ್ನೊಡಲಲ್ಲಿ ಎಡಪಂಥೀಯ ಆಲೋಚನೆಗಳನ್ನು ಇಟ್ಟುಕೊಂಡಿತ್ತು. ಈ ದೇಶದ ಬಡವರ ಕತೆಯನ್ನು ರಂಗಮುಖೇನ ದಾಟಿಸುವ ಮೂಲಕ ನಮ್ಮ ಆಳುವ ವರ್ಗವನ್ನು ಎಬ್ಬಿಸಲು ಹೊರಟಿತ್ತು. ಹಾಗಾಗಿಯೇ “ಸಮುದಾಯ” ನಡೆಸಿದ ಸಾಂಸ್ಕೃತಿಕ ಜಾಥಾಗಳು ಮತ್ತು ಆ ಜಾಥಾಗಳಲ್ಲಿ ಪ್ರದರ್ಶನವಾದ ನಾಟಕಗಳು ಇಂದಿಗೂ ನಮ್ಮನ್ನು ಕಾಡುವ ನಾಟಕಗಳಾಗಿವೆ. ಕರ್ನಾಟಕದಾದ್ಯಂತ ಮೂರು ಬಾರಿ ಬೀದಿ ನಾಟಕಗಳ ಜಾಥಾಗಳನ್ನು (1978ರಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಸಾಂಸ್ಕೃತಿಕ ಜಾಥ, 1981ರಲ್ಲಿ ರೈತರೆಡೆಗೆ ಸಾಂಸ್ಕೃತಿಕ ಜಾಥಾ, 1985ರಲ್ಲಿ ಬರಗಾಲದೆದುರು ಸಮುದಾಯದ ಜಾಥಾ) “ಸಮುದಾಯ” ನಡೆಸಿತು. ಮೊದಲ ಬಾರಿಯಂತೂ ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿಯವರು ಚುನಾವಣೆ ಎದುರಿಸುವಾಗಲೇ, ತುರ್ತು ಪರಿಸ್ಥಿತಿಯ ಕರಾಳ ವಿವರಗಳನ್ನುಳ್ಳ “ಇಂದಿರಗಾಂಧಿಯ ಸುಳ್ಳು ಪ್ರಮಾಣಪತ್ರ” ಎಂಬ ನಾಟಕವನ್ನು ಚಿಕ್ಕಮಗಳೂರಿನ ಬೀದಿ ಬೀದಿಗಳಲ್ಲಿ ಪ್ರದರ್ಶನ ಮಾಡಿತ್ತು. ಇವೆಲ್ಲವೂ ಆ ಕಾಲಕ್ಕೆ ಕ್ರಾಂತಿಕಾರಿಯಾದ ನಾಟಕಗಳಾಗಿದ್ದವು. ಯಾವುದೋ ಶಾಲಾ ಆವರಣದಲ್ಲಿಯೋ, ಸಣ್ಣ ಬಯಲಿನಲ್ಲಿಯೋ ಪ್ರದರ್ಶನವಾಗುತ್ತಿದ್ದ ಈ ನಾಟಕಗಳು ನೋಡುಗನಿಗೆ ಅವನದೇ ಕತೆಯನ್ನು ಬಿಚ್ಚಿಡುತ್ತಾ ಇದ್ದವು. ಹೀಗಾಗಿಯೇ ಆಯಾ ಊರಿನ ಜನ ಈ ರಂಗತಂಡಕ್ಕೆ ತಿನ್ನಲು ಊಟ ನೀಡಿ, ಮಲಗಲು ಜಾಗವನ್ನು ನೀಡಿ ಪ್ರೀತಿಯಿಂದ ಪೊರೆದರು.

ಸಮುದಾಯವು ಬೀದಿ ನಾಟಕ ಚಳುವಳಿಯನ್ನು ಆರಂಭಿಸುವ ಮೊದಲೇ ಚಿತ್ರಾ ತಂಡದ ಮೂಲಕ ಎ.ಎಸ್‍.ಮೂರ್ತಿಯವರು ಬೀದಿ ನಾಟಕಗಳನ್ನು 1974ರ ಆಸುಪಾಸಲ್ಲಿ ಆರಂಭಿಸಿದ್ದರಾದರೂ “ಸಮುದಾಯ”ದ ಬೀದಿ ನಾಟಕ ಚಳುವಳಿಗೆ ಇದ್ದ ರಾಜಕೀಯ ಬದ್ಧತೆ ಮತ್ತು ಚಳುವಳಿಯನ್ನು ಕಟ್ಟುವ ಶಿಸ್ತು ಈ ಬೀದಿ ನಾಟಕಗಳ ಜಾಥಾಗಳನ್ನು ಚಾರಿತ್ರಿಕವಾಗಿಸಿತು ಎಂಬುದು ಸತ್ಯ. ಈ ಜಾಥಾಗಳಲ್ಲಿ ಸಿಜಿಕೆಯವರ ನಿರ್ದೇಶನದ “ಬೆಲ್ಚಿ”, ಪ್ರಸನ್ನ ನಿರ್ದೇಶನದ “ಪತ್ರೆಸಂಗಪ್ಪನ ಪ್ರಕರಣ” ಮರೆಯಲಾಗದ ನಾಟಕಗಳಾಗಿದ್ದವು. ಈ ನಾಟಕಗಳು ದಲಿತರ ಮೇಲೆ ಆಗುವ ದೌರ್ಜನ್ಯವನ್ನು ಬಿಚ್ಚಿಡುತ್ತಾ ಆಳುವ ವರ್ಗಗಳನ್ನು ನಾವು ನೋಡಬೇಕಾದ ಕ್ರಮವನ್ನು ಸೂಚಿಸಿದ್ದಲ್ಲದೆ ಆಳುವವರನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಪ್ರೇರೇಪಿಸಿದ್ದವು.

ಈ ನಾಟಕಗಳು ಸಾಮಾಜಿಕವಾಗಿ ಮೂಡಿಸಿದ ಅರಿವಿಗೂ ಮೀರಿ ಅನೇಕ ಹೊಸ ರಂಗಕರ್ಮಿಗಳನ್ನು ನಾಡಿನಾದ್ಯಂತ ಸೃಷ್ಟಿಸಿತು. ಬೆಂಗಳೂರು ಕೇಂದ್ರಿತವಾಗಿದ್ದ “ಸಮುದಾಯ”ವು ಪ್ರತೀ ಊರಿನಲ್ಲು ತನ್ನ ಇರವನ್ನು ಸ್ಥಾಪಿಸಿತು. ಇದರಿಂದಾಗಿ ಗುಲ್ಬರ್ಗ, ರಾಯಚೂರು, ಮಾನ್ವಿಯಂತಹ ಅನೇಕ ಊರುಗಳಲ್ಲಿ ಹೊಸ ನಾಟಕಕಾರರು ಹಾಗು ಕಲಾವಿದರು ಹುಟ್ಟಿಕೊಂಡದ್ದು ಕನ್ನಡ ರಂಗಭೂಮಿಯ ವಿಕೇಂದ್ರೀಕರಣದ ಮೊದಲ ಹೆಜ್ಜೆ ಎಂದು ಭಾವಿಸಬಹುದಾಗಿದೆ.

ಬರೀ ರಂಗಭೂಮಿಯಲ್ಲ…

ಹೀಗೆ ಒಂದು ತಲೆಮಾರಿನ ರಂಗಚಿಂತನೆಯನ್ನು ಕಟ್ಟಿಕೊಟ್ಟ ರಂಗತಂಡವೊಂದಕ್ಕೆ ಈಗ ನಾಲ್ಕನೆಯ ದಶಕದ ರಂಗಪಯಣ. ಈ ಹಾದಿಯಲ್ಲಿ “ಸಮುದಾಯ” ಕೇವಲ ರಂಗಭೂಮಿಯ ಕೆಲಸವನ್ನು ಮಾತ್ರವಲ್ಲ, ವಿಚಾರಸಂಕಿರಣಗಳನ್ನು ನಡೆಸಿದೆ, ಪತ್ರಿಕೆಯನ್ನು ಹೊರತಂದಿದೆ, ಸಿನಿಮಾ ಸಂಸ್ಕೃತಿಯನ್ನು ಕಟ್ಟುವ ನಿಟ್ಟಿನಲ್ಲಿ ದುಡಿದಿದೆ. “ಸಮುದಾಯ ವಾರ್ತಾ ಪತ್ರ” ಎಂಬ ಬಹುಕಾಲ ಹೊರಬಂದ ಪತ್ರಿಕೆ ರಂಗಚರ್ಚೆಗಳನ್ನಲ್ಲದೆ, ಸಾಹಿತ್ಯಕ ಹಾಗೂ ರಾಜಕೀಯ ಚರ್ಚೆಗಳನ್ನೂ ಸಹ ನಡೆಸುತ್ತಾ ಇತ್ತು. ಈ ಪತ್ರಿಕೆಯನ್ನು ಆರಂಭದ ದಿನಗಳಲ್ಲಿ ರಾಮಚಂದ್ರ ದೇವ ಸಂಪಾದಿಸುತ್ತಾ ಇದ್ದರು. ಮೂರು ನಾಲ್ಕು ವರ್ಷಗಳ ಕಾಲ ನಿಯಮಿತವಾಗಿ ಬಂದ ಈ ಪತ್ರಿಕೆಯು ನಂತರ ಆಗೀಗ ಎಂಬಂತೆ ಮತ್ತೆರಡು ವರ್ಷಗಳ ಕಾಲ ಪ್ರಕಟವಾಗಿ ನಿಧಾನವಾಗಿ ಮರೆಗೆ ಸರಿಯಿತು. ಸಮುದಾಯ ಸಿನಿಮಾ ಸಹ ನಂತರದ ದಿನಗಳಲ್ಲಿ ಅಸ್ವಿತ್ವಕ್ಕೆ ಬಂದು ಅನೇಕ ಸದಭಿರುಚಿಯ ಸಿನಿಮಾಗಳ ಪ್ರದರ್ಶನ ಮತ್ತು ಚರ್ಚೆಗೆ ಕಾರಣವಾಯಿತು. ಹೀಗೆ ಹಲವು ಬಗೆಯಲ್ಲಿ ಸಾಂಸ್ಕೃತಿಕ ಲೋಕವನ್ನು ಕಟ್ಟಲು ಶ್ರಮಿಸಿದ ಕನ್ನಡದ ಇತಿಹಾಸದಲ್ಲಿ ಮರೆಯಲಾಗದ ಸಂಘಟನೆಯಾಗಿ ಇಂದಿಗೂ ಜೀವಂತವಾಗಿದೆ.

ಪ್ರಸನ್ನ – ಸಿಜಿಕೆಯಿಂದ ಗುಂಡಣ್ಣ – ವೆಂಕಿಯವರೆಗೆ

“ಸಮುದಾಯ” ಸಂಘಟನೆಯು ಮಹತ್ತರ ಉದ್ದೇಶಗಳೊಡನೆ ಆರಂಭವಾದ ನಂತರ ಆ ಸಂಘಟನೆಯಿಂದ ಅರಳಿದ ಪ್ರತಿಭೆಗಳು ಅನೇಕ. ಪ್ರಸನ್ನ ಮತ್ತು ಸಿಜಿಕೆಯವರ ನಾಯಕತ್ವದ ಆರಂಭದ ದಿನಗಳಲ್ಲಿ “ಸಮುದಾಯ” ತಂಡದಿಂದ ಹೊರಬಂದ ರಂಗಪ್ರತಿಭೆಗಳು ಇಂದಿಗೂ ನಾಡಿನೆಲ್ಲೆಡೆ ರಂಗಭೂಮಿಯಲ್ಲಿ ತೊಡಗಿದ್ದಾರೆ. ಮಂಗಳೂರಿನ ಚಂದ್ರಹಾಸ ಉಲ್ಲಾಳ, ವಾಲ್ಟೇರ್ ಡಿಸೋಜಾ, ಉಚ್ಚಿಲರು, ಕಾರಂತರು ಇರಬಹುದು, ಗುಲ್ಬರ್ಗಾದ ಶಂಕ್ರಯ್ಯ ಘಂಟಿ, ಆರ್ ಕೆ ಹುಡುಗಿಯವರಿರಬಹುದು, ರಾಣೆಬೆನ್ನೂರು ಭಾಗದಿಂದ ಬೆಳೆದು ಬಂದ ಮಂಜುನಾಥ ಬೆಳಕೆರೆಯಂತವರಿರಬಹುದು, ಹರಪನಹಳ್ಳಿ ಸಮುದಾಯದಿಂದ ಬಂದ ಹಾಡುಗಾರ್ತಿ ಶಾಂತ ಇರಬಹುದು, ಬೆಂಗಳೂರು ಸಮುದಾಯದ ಭಾಗವಾಗಿದ್ದ ಸಿ.ಬಸವಲಿಂಗಯ್ಯ, ಜನಾರ್ಧನ್ ಇರಬಹುದು, ಮೈಸೂರು ಭಾಗದಿಂದ ಬಂದ ಶಶಿಧರ್ ಭಾರಿಘಾಟ್, ರಮೇಶ್, ವಸುಧಾ ಇರಬಹುದು, ಕೆಜಿಎಫ್ ಸಮುದಾಯದ ಅಚ್ಯುತ್ ಇರಬಹುದು… ಇವರೆಲ್ಲರ ಪ್ರತಿಭೆಗೆ ನೀರೆರೆದದ್ದು “ಸಮುದಾಯ”ದ ಜಾಥಾಗಳು. ನಂತರ ಇದೇ ತಂಡವೂ ಆರಂಭಿಸಿದ ಸಮುದಾಯದ ವಿಭಿನ್ನ ಘಟಕಗಳು ಸಹ ನಿರಂತರವಾಗಿ ರಂಗಚಳುವಳಿ ಮತ್ತು ಇನ್ನಿತರ ಚಟುವಟಿಕೆಯಲ್ಲಿ ಇಂದಿಗೂ ತೊಡಗಿಕೊಂಡಿವೆ. ಹೀಗಾಗಿ ಇಂದು ಸಮುದಾಯ ತನಗೆ ನಲವತ್ತು ವರುಷಗಳ ನಡಿಗೆಯ ಅನುಭವ ಇದೆ ಎಂದರೆ ಈ ಹಾದಿಯಲ್ಲಿ ನಾಡಿನಾದ್ಯಂತ ಅನೇಕಾನೇಕ ಪ್ರತಿಭೆಗಳನ್ನು ಅರಳಿಸಿದ ಹಾಗೂ ಬೆಳೆಸಿದ ವಿವರವಿದೆ. ಈ ಹಿನ್ನೆಲೆಯಲ್ಲಿ “ಸಮುದಾಯ”ದ ನಾಲ್ಕು ದಶಕದ ನಡಿಗೆಯನ್ನು ಆಧುನಿಕ ಕನ್ನಡ ರಂಗಭೂಮಿಯ ಮತ್ತು ಕನ್ನಡ ಸಾಂಸ್ಕೃತಿಕ ಲೋಕದ ಜೀವನಾಡಿ ಎಂದೆನ್ನಬಹುದು. ಇಂದು ಈ ಸಂಸ್ಥೆಗೆ ಗುಂಡಣ್ಣ ಅಧ್ಯಕ್ಷರು, ವೆಂಕಟೇಶ್ ಪ್ರಸಾದ್ ಕಾರ್ಯದರ್ಶಿಗಳಾಗಿದ್ದಾರೆ. “ಸಮುದಾಯ”ವು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗಡೆ ನಡೆದು ಬಂದ ಅಪರೂಪದ ರಂಗ ಸಂಘಟನೆಯಾಗಿದೆ.

ಏಳು ಬೀಳುಗಳು..

ನಿರಂತರವಾಗಿ ನಾಲ್ಕು ದಶಕದ ಕಳೆದ ಹಾದಿಯಲ್ಲಿ ಅಲ್ಲಲ್ಲಿ ಈ ತಂಡವು ಎಡರು ತೊಡರುಗಳಿಗೆ ಸಿಲುಕಿರುವುದೂ ಉಂಟು. ಸಿಜಿಕೆಯಂತವರು ಈ ತಂಡದ ಎರಡನೆಯ ಜಾಥಾದ ಹೊತ್ತಿಗೆ ಸಿಡಿದು ಹೊರ ಬಂದ ಬೆನ್ನಲ್ಲೇ “ಸಮುದಾಯ”ದ ಚಟುವಟಿಕೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿತ್ತು. ಅದಾಗಿ ಕೆಲವೇ ವರ್ಷಗಳಲ್ಲಿ ಪ್ರಸನ್ನ ಸಹ ತಂಡದಿಂದ ದೂರ ನಡೆದರು. ಹೀಗಾಗಿ ಸುಮಾರು ವರ್ಷ ಚಟುವಟಿಕೆಯಿಲ್ಲದೆ ಇದ್ದ ತಂಡವನ್ನು ಮತ್ತೆ ಗುಂಡಣ್ಣ, ಶಶಿಶರ್ ಬಾರಿಘಾಟ್ ಅವರು ಜೀವಂತವಾಗಿಸಿದರು. ಈ ಹೊಸಬರು ನಡೆಸಿದ ಮೂರನೇ ಜಾಥಾ ಇದಕ್ಕೆ ಸಾಕ್ಷಿಯಾಯಿತು. ಬೆಂಗಳೂರು ಸಮುದಾಯವು ತಣ್ಣಗಿದ್ದ ಕಾಲದಲ್ಲಿ ಕೆಜಿಎಫ್, ಹಾವೇರಿ ಮತ್ತು ಗುಲ್ಬರ್ಗಾ ಸಮುದಾಯಗಳು ಬೀದಿ ನಾಟಕ ಚಳುವಳಿಯನ್ನು ಜೀವಂತವಾಗಿರಿಸಿದ್ದವು ಎಂಬುದನ್ನೂ ಸಹ ಮರೆಯಲಾಗದು. ಆದರೆ ದಾರ್ಶನಿಕ ನಾಯಕರುಗಳಿಲ್ಲದ ಕೊರತೆಯಿಂದ ಕೆಲಕಾಲ ತಣ್ಣಗಿದ್ದ “ಸಮುದಾಯ” ಈಗ ಮತ್ತೆ ಹುರಿದುಂಬಿದೆ. ಈಚೆಗೆ ಅನೇಕ ಹೊಸ ನಾಟಕಗಳನ್ನು ಪ್ರೊಸಿನೀಯಂ ರಂಗಭೂಮಿಗಾಗಿ ಸಿದ್ಧಪಡಿಸಿದೆ. ಮೂರನೆಯ ತಲೆಮಾರಿನ ಹುಡುಗರು “ಸಮುದಾಯ” ತಂಡವನ್ನು ಹಸಿರಾಗಿಡಲು ಶ್ರಮಿಸುತ್ತಾ ಇದ್ದಾರೆ.

“ಕಲೆಗಾಗಿ ಕಲೆ ಅಲ್ಲ, ಜನರಿಗಾಗಿ ಕಲೆ” ಎಂದು 1975ರಲ್ಲಿ ಆರಂಭವಾದ ರಂಗತಂಡವು ಸಮಾಜದ ಎಲ್ಲಾ ವಿಭಾಗಗಳನ್ನೂ ಒಳಗೊಳ್ಳುತ್ತಾ ನಾಲ್ಕು ದಶಕದ ಪಯಣವನ್ನು ನಡೆಸಿರುವುದು ಸದಾ ಕನ್ನಡ ರಂಗಭೂಮಿಯ ನೆನಪಿನ ಪುಟಗಳಲ್ಲಿ ಉಳಿಯಬೇಕಾದ ಸಂಗತಿಯಾಗಿದೆ.

* * *

– ಬಿ.ಸುರೇಶ

bsuresha@bsuresha.com

Advertisements

0 Responses to “ನನ್ನ ನೆನಪಿನಲ್ಲಿ “ಸಮುದಾಯ”ದ ನಾಲ್ಕು ದಶಕ…! (ಸಮುದಾಯ ರಂಗತಂಡದ ನಾಲ್ಕು ದಶಕಗಳ ಪಯಣವನ್ನು ನೆನೆಯುತ್ತಾ)”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: