ನಿರಂಜನ ಅವರ “ಮೃತ್ಯುಂಜಯ” (ನಾಟಕ ರೂಪದ ಪೂರ್ಣ ಪಾಠ)

ನಿರಂಜನ ಅವರ

“ಮೃತ್ಯುಂಜಯ”

ನಾಟಕ ರೂಪ: ಸಿ.ವೀರಣ್ಣ.                                  ರಂಗಪಠ್ಯ: ಬಿ.ಸುರೇಶ

[ಪ್ರಥಮ ಪ್ರದರ್ಶನ : ಏಪ್ರಿಲ್ 6 2015, ಸಂಸ ಬಯಲು ರಂಗಭಿನಯಮಂದಿರ, ಬೆಂಗಳೂರು

ಅಭಿನಯ: ನಟನಾ, ಮೈಸೂರು]

ನಾಟಕ ಕುರಿತು

ಕನ್ನಡದ ಪ್ರಖ್ಯಾತ ಲೇಖಕ ನಿರಂಜನ ಅವರ ಕಾದಂಬರಿಗಳಲ್ಲಿ “ಮೃತ್ಯುಂಜಯ” ಪ್ರಮುಖವಾದದ್ದು. ಅರಾಬಿಕ್ ಸೇರಿದಂತೆ, ಜಗತ್ತಿನ ಏಳಕ್ಕೂ ಹೆಚ್ಚು ಭಾಷೆಗಳಿಗೆ ಈ ಕಾದಂಬರಿ ಅನುವಾದವಾಗಿದೆ ಎಂಬುದು ಈ ಕಾದಂಬರಿಯ ಮಹತ್ವವನ್ನು ತಿಳಿಸುತ್ತದೆ. ಚರಿತ್ರೆಯುದ್ದಕ್ಕೂ ಶೋಷಣೆಯ ವಿರುದ್ಧ ಪ್ರತಿಭಟನೆಯ ದನಿಗಳು ರೂಪುಗೊಳ್ಳುತ್ತಲೇ ಇರುತ್ತವೆ ಎನ್ನುವುದನ್ನು ಸ್ಪಷ್ಟಪಡಿಸುವ ಹಾಗೆ ಫ್ಯಾರೋಗಳ ಕಾಲದ ಈಜಿಪ್ಟಿನ ರೈತ ಹೋರಾಟವನ್ನು “ಮೃತ್ಯುಂಜಯ” ಚಿತ್ರಿಸುತ್ತದೆ. “ಕತ್ತಲಾದ ಮೇಲೆ ಬೆಳಕು ಹರೀತದೆ. ಇದು ಸಾಮಾನ್ಯವೆಂದು ತೋರುವ ಅಸಾಮಾನ್ಯ ವಿಷಯ.” ಎಂಬ ಭರವಸೆಯನ್ನು ಈ ಕಾದಂಬರಿಯು ಅಕ್ಷರಗಳ ಮೂಲಕ ಶಾಶ್ವತಗೊಳಿಸುತ್ತದೆ.

ನಾಟಕಕಾರರ ಕುರಿತು:

ಜಗತ್ತಿನ ಅನೇಕ ಪ್ರತಿಭಟನೆಗಳಿಗೆ ಸ್ಪೂರ್ತಿ ನೀಡಬಹುದಾದ ಪ್ರತಿಭಟನೆಯನ್ನು ಕತೆಯಾಗುಳ್ಳ ಕಾದಂಬರಿಯನ್ನು ಆಧಾರವಾಗಿ ಇಟ್ಟುಕೊಂಡು ಡಾ.ಸಿ.ವೀರಣ್ಣ ಅವರು ನಾಟಕವನ್ನು ರಚಿಸಿದ್ದಾರೆ. ಡಾ.ಸಿ.ವೀರಣ್ಣ ಅವರು ಈ ಹಿಂದೆ ಮ್ಯಾಕ್ಸಿಂ ಗಾರ್ಕಿಯ “ತಾಯಿ”ಯನ್ನು ನಾಟಕ ರೂಪದಲ್ಲಿ ಕನ್ನಡಕ್ಕೆ ತಂದವರು. ನಿರಂತರವಾಗಿ ಶೋಷಣೆಯ ವಿರುದ್ಧದ ದನಿಗಳನ್ನು ತಮ್ಮ ನಾಟಕಗಳಲ್ಲಿ ಹಿಡಿದಿಟ್ಟಿರುವವರು. “ಮೃತ್ಯುಂಜಯ”ದಂತಹ ಬೃಹತ್ ಕಾದಂಬರಿಯನ್ನು ಅತ್ಯಂತ ಸಮರ್ಥವಾಗಿ ನಾಟಕವಾಗಿಸಿದ್ದಾರೆ.

ನಿರ್ದೇಶಕರ ಕುರಿತು:

ಬಿ.ಸುರೇಶ – ಬಾಲನಟರಾಗಿ ರಂಗಭೂಮಿ ಪ್ರವೇಶಿಸಿ, ನಂತರ ನಾಟಕಕಾರರಾಗಿ ನಿರ್ದೇಶಕರಾಗಿ ಕಳೆದ ಮೂರುವರೆ ದಶಕದಿಂದ ರಂಗಸಾಂಗತ್ಯ ಉಳಿಸಿಕೊಂಡವರು. ಸ್ವತಃ ನಾಟಕಕಾರರಾಗಿ ಹದಿನೆಂಟು ನಾಟಕ ಬರೆದಿದ್ದಾರೆ. ಐವತ್ತಕ್ಕೂ ಹೆಚ್ಚು ನಾಟಕ ನಿರ್ದೇಶಿಸಿದ್ದಾರೆ. ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಗಳಲ್ಲೂ ಬಿ.ಸುರೇಶ ನಿರಂತರವಾಗಿ ಕೆಲಸ ಮಾಡುತ್ತಾ ಇದ್ದಾರೆ.

ಅನೇಕ ದೈನಿಕ ಧಾರಾವಾಹಿಗಳನ್ನು ಮತ್ತು ಸಿನಿಮಾಗಳನ್ನು ನಿರ್ದೇಶಿಸಿ ಸಮ್ಮಾನಗಳನ್ನು ಪಡೆದಿದ್ದಾರೆ. ಇವರು ನಿರ್ದೇಶಿಸಿದ “ಪುಟ್ಟಕ್ಕನ ಹೈವೇ” “ಅರ್ಥ” ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳ ಗೌರವವಲ್ಲದೆ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗೌರವವೂ ದೊರೆತಿದೆ.

“ನಟನಾ” ತಂಡದ ಕುರಿತು

ಮೈಸೂರಿನ ಹವ್ಯಾಸೀ ರಂಗತಂಡಗಳಲ್ಲಿ ಅತೀಹೆಚ್ಚು ಚಟುವಟಿಕೆಯಿಂದ ನಿರಂತರವಾಗಿ ರಂಗಪ್ರದರ್ಶನ ನೀಡುತ್ತಾ ಇರುವ ತಂಡ “ನಟನಾ”. ಅದಾಗಲೇ ಹದಿನೈದು ದಶಕಗಳ ಕಾಲ ರಂಗಸೇವೆಯನ್ನು ಮಾಡುತ್ತಾ ಬಂದಿರುವ ಈ ತಂಡವು ಮಾಡಿರುವ “ರತ್ನಪಕ್ಸಿ”, “ಚೋರ ಚರಣದಾಸ”, “ಚಾಮ ಚೆಲುವೆ”, “ಗಾಂಧಿ ಅಂಬೇಡ್ಕರ್” ಮುಂತಾದ ನಾಟಕಗಳು ಅತ್ಯಂತ ಯಶಸ್ವಿ ನಾಟಕಗಳೆನಿಸಿವೆ. ಮಂಡ್ಯ ರಮೇಶ್ ಅವರ ನೇತೃತ್ವದಲ್ಲಿ ಈ ತಂಡವು ತನ್ನದೇ ಆದ ರಂಗಮಂದಿರವನ್ನೂ ಮೈಸೂರಿನಲ್ಲಿ ಕಟ್ಟುತ್ತಾ ಇರುವುದು ನಾಡಿನ ಜನರೆಲ್ಲರೂ ಮೆಚ್ಚಬೇಕಾದ ಸಂಗತಿಯಾಗಿದೆ. “ನಟನಾ” ತಂಡವು ನಿರಂತರವಾಗಿ ರಂಗಭೂಮಿಗೆ ಹೊಸ ನಟರು ಹಾಗೂ ತಂತ್ರಜ್ಞರನ್ನೂ ನೀಡುತ್ತಾ ಇರುವದು ಸಹ ಅಭಿನಂದನಾರ್ಹ ವಿಷಯವಾಗಿದೆ.

ನಿರ್ದೇಶಕರ ಮಾತು:

ನಿರಂಜನರು ನಾನು ಸದಾ ಕಾಲ ಮೆಚ್ಚುವ, ಗೌರವಿಸುವ ಲೇಖಕರು. 1985ರ ವಿಶ್ವಕನ್ನಡ ಸಮ್ಮೇಳನಕ್ಕಾಗಿ ನಿರಂಜನರ “ಚಿರಸ್ಮರಣೆ” ಕಾದಂಬರಿಯನ್ನು (ನಾಟಕ ರೂಪ: ಸೇತುಮಾಧವ ಜೋಡಿದಾರ್) ರಂಗಕ್ಕೆ ತಂದಿದ್ದೆ. ಆ ನಾಟಕವು ಸಾಕಷ್ಟು ಹೆಸರು ಪಡೆದು ಅನೇಕ ಪ್ರದರ್ಶನಗಳನ್ನು ಕಂಡಿತು. ಅದಾಗಿ ಮುವ್ವತ್ತು ವರ್ಷಗಳ ನಂತರ ಮತ್ತೆ ನಿರಂಜನರ ಕಾದಂಬರಿಯನ್ನು ರಂಗಕ್ಕೆ ತರುತ್ತಾ ಇರುವ ಆನಂದ ನನ್ನದು.

ಬೀದಿನಾಟಕದ ಹಿನ್ನೆಲೆಯಿಂದ ಬೆಳೆದು ಬಂದ ನನಗೆ ಹೋರಾಟದ ಕತೆಗಳು ಯಾವಾಗಲೂ ಸ್ಫೂರ್ತಿ ನೀಡುತ್ತವೆ. ನಿರಂಜನರ “ಮೃತ್ಯುಂಜಯ” (ನಾಟಕ ರೂಪ: ಸಿ.ವೀರಣ್ಣ) ಅಂತಹುದೇ ಹೂರಣವುಳ್ಳದ್ದು. ಇಲ್ಲಿರುವ ವಿವರವು ಮೂರು ಸಾವಿರ ವರ್ಷಗಳಷ್ಟು ಹಿಂದಿನ ವಿವರವನ್ನು ಹೊಂದಿದ್ದರೂ ಇಂದಿಗೂ ಪ್ರಸ್ತುತ. ಯಾವುದೇ ಸಮಾಜವು ತನ್ನ ಆಡಳಿತ ಯಂತ್ರದಲ್ಲಿ ಧರ್ಮವನ್ನು ಜೊತೆಗೂಡಿಸಿಕೊಂಡಾಗ ಆ ಸಮಾಜದಲ್ಲಿ ರಕ್ತಕ್ರಾಂತಿಗಳಾಗುತ್ತವೆ ಎಂಬುದನ್ನು ಈ ನಾಟಕವೂ ಸಹ ಮತ್ತೆ ಹೇಳುತ್ತದೆ.

ಮಯಾರ್ ಹೋಲ್ಡನ ‘ಬಯೋ ಮ್ಯಾಕಾನಿಕ್ಸ್’ ರಂಗತಂತ್ರವು ನನಗೆ ಅತೀವವಾಗಿ ಮೆಚ್ಚುಗೆಯಾಗಿರುವಂತಹದು. ಅದೇ ತಂತ್ರದ ಮೂಲಕ ಈ ನಾಟಕವನ್ನೂ ಕಟ್ಟಿದ್ದೇನೆ. ಬಹುತೇಕ ಹೊಸಬರನ್ನು ಕಟ್ಟಿಕೊಂಡು “ನಟನಾ” ತಂಡಕ್ಕಾಗಿ ರೂಪಿಸಿರುವ ಈ ಪ್ರಯೋಗವು ನೋಡುಗರ ಮೆಚ್ಚುಗೆಯನ್ನು ಪಡೆಯುತ್ತದೆ ಎಂಬ ನಂಬಿಕೆಯೊಡನೆ ನಿಮ್ಮ ಅಭಿಪ್ರಾಯಗಳಿಗೆ ಕಾಯುತ್ತೇನೆ.

* * *

ನಿರಂಜನ ಅವರ

“ಮೃತ್ಯುಂಜಯ”

ನಾಟಕ ರೂಪ : ಸಿ.ವೀರಣ್ಣ

ರಂಗಪಠ್ಯ/ ನಿರ್ದೇಶನ : ಬಿ.ಸುರೇಶ

ದೃಶ್ಯ 1 (ದೃಶ್ಯ ಸಂಖ್ಯೆ ಕೇವಲ ತಾಲೀಮಿನ ಅನೂಕೂಲಕ್ಕೆ ಮಾತ್ರ)

ವೇದಿಕೆಯ ಮೇಲೆ ನೀಲಿ ಹಿನ್ನೆಲೆ ಬೆಳಕಿದೆ. ಸೈಕಿನ ತುಂಬಾ ಸೂರ್ಯ ಹುಟ್ಟುತ್ತಾ ಇದ್ದಾನೆ ಎಂಬ ಭಾವ ಮೂಡಿಸುವ ಬೆಳಕು. ವೇದಿಕೆಯನ್ನು ಎರಡು ಬದಿಯಿಂದ ಪ್ರವೇಶಿಸುವ ಗುಂಪುಗಳು… ವೇದಿಕೆಯ ನಡುವೆ ಪಿರಮಿಡ್‍ ಸೃಷ್ಟಿಸುತ್ತವೆ… ಇದಾಗುವಾಗಲೇ ಅದೇ ಗುಂಪು ಒಂದೇ ಲಯದಲ್ಲಿ ಹೇಳುತ್ತವೆ…

ಪಿರಮಿಡ್ ಆದವರ ದನಿ:

ಮನುಕುಲದ ಕತೆಯೊಂದ ಹೇಳುವೆವು ನಾವು…!

ಗತಕಾಲದ ಪುಟವೊಂದ ಬಿಚ್ಚಿಡುವೆವು ನಾವು…!

ಪಿರಮಿಡ್ಡು ಕಟ್ಟಿದವರ ಲೋಕವಿದು ನೋಡಿ…!

ಅದಕೆಂದು ದುಡಿದವರ ಬದುಕು ಇದು ಕೇಳಿ…!

ಈ ದನಿಗಳು ಕೇಳುವಾಗಲೇ ಒಂದಷ್ಟು ಜನ ನಿರೂಪಕರಂತೆ ಪಿರಮಿಡ್ದಿನ ಎದುರಿಗೆ ಬಂದು ನಿಲ್ಲುತ್ತಾರೆ. ಈಗಲೂ ಹಿನ್ನೆಲೆ ಬೆಳಕು ಮಾತ್ರವಿದೆ. ಗುಂಪು ದೋಣಿಯಂತೆ ತೂಗುತ್ತಾ, ತೊನೆಯುತ್ತಾ ಒಟ್ಟಿಗೆ ಒಂದೇ ಲಯದಲ್ಲಿ ಮಾತಾಡುತ್ತದೆ… ಅದು ಹಾಡಿನಂತೆ ಕೇಳಬೇಕು…

ಗುಂಪು 1: ಕಾಲ ಯಾವುದಾದರೇನು ಕೂಲಿಕಾರರ ಕತೆಯು ಒಂದೇ…!

ದೇಶ ಯಾವುದಾದರೇನು ದುಡಿವವರ ನೋವು ಒಂದೇ…!

ಹಣವಂತರ ನಾಡಲ್ಲಿ ಹೆಗಲಾದವರು ನಾವು…!

ಬಲವುಳ್ಳವರ ಬದುಕಿಗೆ ಬಲಿಯಾದವರು ನಾವು…!

ಕತೆ ಕೇಳಿ ಸ್ವಾಮಿ ನಮ್ಮ ಕತೆ ಕೇಳಿ…!

ವೇದಿಕೆಯ ಎರಡು ಬದಿಗೆ ಇರುವ ಎರಡು ಗುಂಪುಗಳು ತೊನೆಯುವಿಕೆ ಮುಂದುವರೆಸಿರುವಾಗಲೇ

ಗುಂಪು 2: ಆವತ್ತು ನಮ್ಮ ಪರಮಪವಿತ್ರ ದೇವರಾದ ‘ರಾ’ನ ಮಗ ‘ಒಸೈರಿಸ್‍’ ದೇವರ ಉತ್ಸವ ಇತ್ತು…! ನಮ್ಮ ದೊರೆ ಫೆರೋ ಕೂಡ ದೇವರನ್ನು ನೋಡಲು ಬರುವರೆಂದು ಗೊತ್ತಾಗಿತ್ತು…! ನಾವೆಲ್ಲರೂ ಅಬ್ಟು ದೇವರ ಜಾತ್ರೆಗೆ ಹೋಗಿದ್ದೆವು…!

ದೃಶ್ಯ 2

ವೇದಿಕೆಯಲ್ಲಿ ಸಂತೆ ಸೃಷ್ಟಿಯಾಗುತ್ತದೆ. ವೇದಿಕೆಯ ಮೇಲೆ ಜಾತ್ರೆಯ ಗದ್ದಲ. ಬೇರೆ ಬೇರೆಯವರು ಬೇರೆ ಬೇರೆ ವಿಷಯ ಮಾರುತ್ತಾ ಇದ್ದಾರೆ. “ಬೆಳ್ಳಿ ಒಲೆ, ಬಂಗಾರದ ಓಲೆ”, “ತಾಳೆ ತೊಗಟೆ ಚಪ್ಪಲಿ”, “ದಂತದ ಗೊಂಬೆ”, “ಕುರ್ಚಿ, ಮೇಜು”, “ಕೈಗೋಲು, ನಡೆಗೋಲು” “ಕರವಸ್ತ್ರ, ನಡುವಸ್ತ್ರ”, “ಕವಡೆ, ಶಂಖ, ಮುತ್ತು”, “ಸರಗಳು, ಗೋಲಿ”, “ಗಮ್ಮೆನ್ನುವ ಎಣ್ಣೆ”… ಎಂದು ಕೂಗುತ್ತಾ ಇರುವ ಜನರು. ಅವರ ನಡುವೆ ಜಾಗ ಮಾಡಿಕೊಳ್ಳುತ್ತಾ ಓಡಾಡುತ್ತಾ ಇರುವ ಜನರು.

ಸಂತೆಯ ನಡುವೆ ನೆಫಿಸ್ ಮತ್ತು ರಾಮೆರಿ ಅವರ ಕೈ ಹಿಡಿದು ಮೆನೆಪ್‍ಟಾ ನಡೆಯುತ್ತಾನೆ.

ಸರಕು ಮಾರುತ್ತಾ ಇರುವವರ ಕೂಗು ಕೇಳುತ್ತಲೇ ಇರುವಾಗ ಜಾತ್ರೆಯ ಜನರ ನಡುವೆ ರಾಜಗುರುವಿನ ಅಥವಾ ದೇವಸೇವಕನ ಕೂಗು ಕೇಳುತ್ತದೆ… “ವೀರರ ವೀರ ಹೋರಸ್‍ನಿಗೆ ಉಘೇ !” ದೇವರ ಮುಖವಾಡ ಹೊತ್ತವನು ಕೂಗುತ್ತಾ ನಡೆವಾಗ ಗುಂಪು ಹಿಂಬಾಲಿಸುತ್ತಾ ಇದೆ.

ದೇವ ಸೇವಕ: ದೇವರ ಕತೆ ಕೇಳಿ… ದೇವರ ಕತೆ!

ರಾ ದೇವರ ಮಗ ಒಸೈರಿಸ್‍ ಅಣ್ಣ

ಅವನ ತಮ್ಮ ಸೆತ್ ತನ್ನ ಅಣ್ಣನನ್ನೆ ಕೊಂದನಣ್ಣ…

ಅಧಿಕಾರಕ್ಕೆ ಬಂದನಣ್ಣ.

ಒಸೈರಿಸ್‍ನ ಮಡದಿ ಐಸಿಸ್ ಆಗಿದ್ದಳಣ್ಣ

ತನ್ನ ಮಗ ಹೋರಸ್‍ನನ್ನು ಗುಪ್ತವಾಗಿ ಬೆಳೆಸಿದಳಣ್ಣ.

ಹೋರೆಸ್ ಯುದ್ಧ ವಿದ್ಯೆ ಕಲಿತು ರಣಧೀರನಾಗಿ ಬೆಳೆದನಣ್ಣ.

ದುರುಳ ಚಿಕ್ಕಪ್ಪ ಸೆತ್‍ನನ್ನು ಹೋರಾಟಕ್ಕೆ ಕರೆದನಣ್ಣ.

ಘೇಂಡಾಮೃಗವಾಗಿ ಸೆತ್ ಯುದ್ಧ‍ಕ್ಕೆ ನಿಂತನಣ್ಣ.

ಹೋರಸ್ ಎಸೆದ ಈಟಿ, ಸೆತ್‍ನ ಬಾಯಿಗೆ ಇಳಿಯಿತಣ್ಣ.

ದುಷ್ಟನ ಸಂಹಾರವಾಯಿತಣ್ಣ

ಜನ ಜಯಘೋಷ ಮಾಡಿದರಣ್ಣ

ವೀರರ ವೀರ ಹೋರಸ್‍ನಿಗೆ ಉಘೇ

ತಂದೆಯ ಕೊಂದವನ ಮಣ್ಣಾಗಿಸಿದ ಧೀರನಿಗೆ ಉಘೇ!

ಆಗಲೇ ಕೇಳುವ ಸದ್ದು “ಫೆರೋ ಬರುತ್ತಾ ಇದ್ದಾರೆ. ದಾರಿ ಬಿಡಿ”. ಜನರ ಗುಂಪು ದಾರಿ ಮಾಡಿ ನಿಲ್ಲುತ್ತದೆ. ಮೆನೆ ತನ್ನ ಮಡದಿ ಮಗುವಿನ ಜೊತೆಗೆ ಒಂದೆಡೆ ನಿಲ್ಲುತ್ತಾನೆ. ಚಾವಟಿಯವರು ಜನ ಹತ್ತಿರ ಬರದ ಹಾಗೆ ನೆಲಕ್ಕೆ ಅದನ್ನು ಬಡಿದು ಕೂಗುತ್ತಾ ಇದ್ದಾರೆ…

ಬಂಗಾರದ ಪೀಠದ ಮೇಲೆ ಕುಳಿತಿರುವ ಫೆರೋ. ಅವನನ್ನು ನಾಲ್ವರು ಹೊತ್ತಿದ್ದಾರೆ. ಫೆರೋ ಮೈತುಂಬಾ ಬಂಗಾರ ಹೊದ್ದವನಂತೆ ಕೂತಿದ್ದಾನೆ. ಜನ ಅವನಿಗೆ ನಮಿಸುತ್ತಾ ಇದ್ದಾರೆ.

ರಾಮೆರಿ: ನಾನು ಫ್ಯಾರೋನ ನೋಡಿದೆ! ನಾನು ಫೆರೋನ ನೋಡಿದೆ!

ಮೆನೆ ಮತ್ತು ನೆಫಿಸ್ ತಟ್ಟನೆ ಅವನ ಬಾಯಿ ಮುಚ್ಚುತ್ತಾರೆ.

ಮೆನೆ: ಷ್‍! ಹಾಗೆಲ್ಲಾ ಕೂಗಬಾರದು! ಸುಮ್ಮನಿರು!

ಹಿಂದೆಯೇ ಮತ್ತೆ ಕೂಗು ಕೇಳುತ್ತದೆ “ದಾರಿ ಬಿಡಿ! ದಾರಿ ಬಿಡಿ!… ರಾಜಗುರು ಹೇಪಾಟ್ ಬರುತ್ತಾ ಇದ್ದಾರೆ! ದಾರಿ ಬಿಡಿ” ಫೆರೋನ ಪಲ್ಲಕ್ಕಿಗೆ ವಂದಿಸುತ್ತಾ ಮುಂದೆ ಬಂದಿದ್ದ ಜನ ಮತ್ತೆ ಚಾಟಿಯ ಸದ್ದಿಗೆ ಜಾಗ ಬಿಡುತ್ತಾರೆ. ಮತ್ತೊಂದು ಪಲ್ಲಕ್ಕಿಯಲ್ಲಿ ಕೂತ ಹೇಪಾಟ್ ಜನರಿಗೆ ಕೈ ಬೀಸುತ್ತಾ ಸಾಗುತ್ತಾರೆ… ಜನರ ಗುಂಪಿನ ನಡುವೆ ಇರುವವ ಹೇಳ್ತಾನೆ

ಒಬ್ಬ ಮುದುಕ: ದೇವಸ್ಥಾನದ ಒಳಗೆ ಈಗ ಏನಾಗ್ತದೆ ಗೊತ್ತಾ…? ನಾನು ದೇವಸೇವಕನನ್ನ ಕೇಳಿ ಎಲ್ಲಾ ತಿಳಕೊಂಡೆ..! ಅಲ್ಲೊಂದು ಬಾರೀ ನೆಲಮಾಳಿಗೆ ಇದೆ…! ಅದು ಮೂರಂಕಣದ ಕಲ್ಲಿನ ಕಟ್ಟಡ. ಒಂದು ಅಂಕಣವನ್ನು ಶಿಲೆಯಿಂದ ಪೂರಾ ಮುಚ್ಚಿದ್ದಾರೆ…! ಅದರೊಳಗೆ ಒಸೈರಿಸ್‍ನ ಮಲಗಿಸಿರುವ ಶವದ ಪೆಟ್ಟಿಗೆ ಇದೆ. ಹೊರದ್ವಾರದಲ್ಲಿ ಧೂಪ ಹಚ್ಚುತ್ತಾರೆ. ಶವಪೆಟ್ಟಿಗೆಯನ್ನು ಇಟ್ಟು ಪ್ರಾರ್ಥಿಸುತ್ತಾರೆ. ಐಸಿಸ್ ವೇಷ ಧರಿಸಿದ ಹೆಣ್ಣುಮಗಳು ಒಸೈರಿಸ್‍ನ ಶವದ ಎದುರು ಓ ಎಂದು ಅಳತಾಳೆ… ಮಹಾ ಅರ್ಚಕ “ಶಾಂತಿ! ಶಾಂತಿ! ಮಹಾದೇವನಡೆಗೆ!” ಅಂತ ಕೂಗ್ತಾ ಇರ್ತಾನೆ… ಅಷ್ಟೆ… ಆಮೇಲೆ ಶವಪೆಟ್ಟಿಗೆಯನ್ನ ಭದ್ರ ಮಾಡಿ ಮಣ್ಣಿನ ಮುದ್ರೆಯನ್ನ ಬಾಗಿಲಿಗೆ ಒತ್ತಿ ಎಲ್ಲರೂ ಹೊರಗೆ ಬರ್ತಾರೆ… ಹೀಗೆ ನಮ್ಮ ಮೊದಲ ರಾಜ ಒಸೈರಿಸ್‍ನ ಪೂಜೆ ನಡೆದು, ನಂತರ ಹೋರಸ್‍ನ ಗುಣಗಾನ ಮಾಡ್ತಾರೆ… ಗೊತ್ತಾಯ್ತಾ…?

(ಈ ಮಾತಾಗುವಾಗ ಈಜಿಪ್ಟಿನಲ್ಲಿ ಶವವನ್ನು ಅಲಂಕರಿಸುವ ಕ್ರಿಯೆ ಏನು ಮಾಡುತ್ತಾರೆ. ಅವುಗಳನ್ನು ಸಹ ಕಾಣಿಸಬಹುದು)

ಜನ ಎಲ್ಲಾ ಅವನ ಮಾತಿಗೆ ಹೂಂಗುಡುತ್ತಾ ಇರುವಾಗಲೇ ಮತ್ತೆ ಕೂಗು ಕೇಳುತ್ತದೆ… “ದಾರಿ ಬಿಡಿ! ದೂರಸರಿಯಿರಿ! ನಡೆದಾಡುವ ದೇವರಾದ ಫೆರೋ ರಾಜಧಾನಿಗೆ ಹೊರಡುತ್ತಾ ಇದ್ದಾರೆ!” ಫೆರೋನ ಪೀಠ ಹೊತ್ತವರು ದಾರಿ ಮಾಡಿಕೊಳ್ಳುತ್ತಾ ಸಾಗುತ್ತಾರೆ. ಜನರು ಬೆರಗಾಗಿ ನೋಡುವಾಗ ಹಿಂದೆಯೇ ಚಾವಟಿ ಬೀಸುತ್ತಾ ಅರ್ಚಕನ ಪೀಠವೂ ಹೊರಡುತ್ತದೆ… ಜನರೆಲ್ಲಾ ಬೆರಗಾಗಿ ನೋಡುವಾಗ

ದೃಶ್ಯ 3

ಮರಗಳ ನಡುವೆ ನಡುವೆ ನಡೆಯುತ್ತಾ ಇರುವ ಮೆನೆ, ನೆಫಿಸ್, ರಾಮೆರಿ

ಮೆನೆ: ಅಂತೂ ಅಬ್ಟು ದೇವರ ಜಾತ್ರೆ ನೋಡಬೇಕು ಅನ್ನುವ ಆಸೆ ನೆರವೇರಿತು…

ನೆಫಿಸ್: ಆಸೆ ಏನೋ ನೆರವೇರಿತು… ಆದರೆ ದೇವರ ದರ್ಶನವೇ ಸರಿಯಾಗಿ ಆಗಲಿಲ್ಲವಲ್ಲಾ…!

ಮೆನೆ: ಈ ಫ್ಯಾರೋಗಳು, ಅವರ ಸೈನ್ಯದ ಜನ, ಆ ಮಹಾಪೂಜಾರಿಗಳ ದಂಡಿನ ನಡುವೆ ನಮ್ಮಂತಹ ಬಡವರಿಗೆ ಜಾಗವೆಲ್ಲಿರತ್ತೆ ಹೇಳು?…

ನೆಫಿಸ್: ಆದರೆ ನಮ್ಮ ರಾಮೆರಿಪ್‍ಟಾಗೆ ದೇವರು ಕಾಣಲೇ ಇಲ್ಲ ಗೊತ್ತಾ?

ಮೆನೆ: ಹೋಗಲಿಬಿಡು… ದೊಡ್ಡವನಾದ ಮೇಲೆ ಅವನ ಹೆಂಡತಿಯ ಸಹಿತ ಬಂದು ನೋಡ್ತಾನೆ… ಅಲ್ವಾ ರಾಮೆರಿ?

ರಾಮೆರಿ: ಷ್ಷೀ… ಮದುವೆ ಗಿದುವೆ ಎಲ್ಲಾ ನನಗೆ ಬೇಡಪ್ಪಾ…

ಮೆನೆ: ಮತ್ತೇನು ಬೇಕಪ್ಪ?

ರಾಮೆರಿ: ನಾನು ಫ್ಯಾರೋ ತರಾ ಹಾರುವ ರಥದಲ್ಲಿ ಕೂರಬೇಕು…

ಮೆನೆ, ನೆಫಿಸ್ ನಗ್ತಾರೆ.

ಮೆನೆ: ನೆಫಿಸ್, ನೀನು ದೇವರ ಬಳಿ ಏನು ಕೇಳಿಕೊಂಡೆ…

ರಾಮೆರಿ: ನಂಗೆ ಗೊತ್ತು… ನಂಗೆ ಗೊತ್ತು…! ಅಮ್ಮ ದೇವರ ಬಳಿ ಈ ರಾಮೆರಿಗೆ ತಂಗಿ ಸಿಗಲಿ ಅಂತ ಕೇಳಿಕೊಂಡಳು…

ನೆಫಿಸ್ ಸುಮ್ಮನಿರು ಎಂಬಂತೆ ಮಗನಿಗೆ ಸನ್ನೆ ಮಾಡ್ತಾಳೆ.

ಮೆನೆ: ಇಷ್ಟೇನಾ, ಮಗನಿಗೆ ವಿದ್ಯೆ ಬುದ್ಧಿ ಕೊಡು ಅಂತ ಕೇಳಲಿಲ್ಲವಾ?

ನೆಫಿಸ್: ನನ್ನ ಮಗನಿಗೆ ಎಷ್ಟು ಬುದ್ಧಿ ಬಂದರೂ ಅವನೇನೂ ಸಾಮಂತ ಆಗೋದಿಲ್ಲ. ಬಹಳ ಅಂದರೆ ಯಾವುದಾದರೂ ಸಾಮಂತನಿಗೆ ದಾಸ ಆಗಬಹುದು ಅಷ್ಟೆ… ಇನ್ನು ಬಲಶಾಲಿಯಾದರೆ ದಂಡಿಗೆ ಕರೆದೊಯ್ತಾರೆ ಅಥವಾ ಪಿರಮಿಡ್ ಕಟ್ಟೋಕ್ಕೆ, ಕಲ್ಲು ಬಂಡೆ ಒಡೆಯೋಕ್ಕೆ ಕರೆದೊಯ್ತಾರೆ… ಅದ್ಯಾವುದೂ ಬೇಡ… ನನ್ನ ಮಗ ನನ್ನ ಜೊತೆ ಕಡೇವರೆಗೆ ಇದ್ದರೆ ಸಾಕು.

ಮೆನೆ: ಹೂಂ… ನಾನೂ ಸಹ ಕಟ್ಟುಮಸ್ತಾಗಿದ್ದಾಗ ಜೀತ ಮಾಡಿ, ಕಲ್ಲು ಬಂಡೆ ಒಡೆದು ಹಳೆಯ ರಾಜನ ಪಿರಮಿಡ್ ಕಟ್ಟಿದವನೆ? ಜೀವನ ಅಂದರೆ ಏನು ಅಂತ ನಾನು ಕಲಿತದ್ದು ಅಲ್ಲಿಯೇ!

ನೆಫಿಸ್: ನನ್ನ ಮಗ ಹಾಗೆಲ್ಲಾ ಜೀವನವನ್ನ ಕಲಿಯಬೇಕಿಲ್ಲ… ರೈತನಾಗಿದ್ದರೆ ಸಾಕು. ಯಾರದೋ ತೋಟದಲ್ಲಿ ಕೂಲಿ ಮಾಡುವ ಕೆಲಸಕ್ಕಿಂತ ಸ್ವತಂತ್ರವಾಗಿ ಬದುಕುವುದೇ ಒಳ್ಳೆಯದು…

ಹಳ್ಳಿಯ ಗೆಳೆಯರು ಇವರನ್ನು ಕಂಡೊಡನೆ ಹತ್ತಿರಕ್ಕೆ ಬರುತ್ತಾರೆ.

ಸೆಬೆಕ್ಕು: ಮೆನೆ, ಮನೆ… ಕೇಳಿದ್ಯಾ ಸುದ್ದಿ? ನಾವು ಈ ಕಡೆ ಜಾತ್ರೆಗೆಂದು ಬಂದಿರುವಾಗಲೆ ಅತ್ತ ಸುಂಕ ವಸೂಲಿಯ ದಂಡು ನಮ್ಮ ಊರಿಗೆ ಬಂದಿದ್ಯಂತೆ…?

ಮೆನೆ: ಹೌದಾ? ಅಲ್ಲಪ್ಪಾ… ಇನ್ನೂ ಬೇಸಿಗೆಯೇ ಮುಗಿದಿಲ್ಲ… ಮಳೆಗಾಲ ದೂರ ಇದೆ… ಮಳೆ ಬೆಳೆ ನೋಡ್ಕೊಂಡು ವಸೂಲಿಗೆ ಬರಬೇಕಲ್ವಾ?

ಬೆಕ್: ಅಯ್ಯೋ… ಈ ಸುಂಕದೋರ ಮುಂದೆ ನಮ್ಮ ಸುಖ ದುಃಖ ಯಾವುದನ್ನೂ ಹೇಳೋಕ್ಕಾಗಲ್ಲ, ಬಿಡು…

ಮೆನೆ: ಸೆಬೆಕ್, ನಮ್ಮೂರಿಗೆ ಈಗ ಯಾರ್ಯಾರು ಬಂದಿದಾರಂತೆ?

ಸೆಬೆಕ್: ಫ್ಯಾರೋನ ಸಾಮಂತರು, ಜೊತೆಗೆ ಒಂದಷ್ಟು ಜನ ಸೈನಿಕರು.

ನೆಫಿಸ್: ಸೈನಿಕರಾ? ಯಾಕೆ? ನಾವೇನು ಸುಂಕ ಕೇಳೋರ ಮೇಲೆ ಯುದ್ಧಕ್ಕೆ ನಿಲ್ತೀವಾ?

ಸೆಬೆಕ್: ನೀವು ಮೇಲೆ ಬೀಳ್ತೀರಂತಲ್ಲ, ನೆಫಿಸ್…! ಹೋದ ಸಲ ಆದದ್ದು ಮರೆತೆಯಾ? ನಮ್ಮ ಪಕ್ಕದ ಹಳ್ಳಿಯ ಹುಡುಗ ಸುಂಕದವರ ಹತ್ತಿರ “ಮನೆಯಾಗೆ ಒಂದು ಕಾಳೂ ಇಲ್ಲ, ನೀವು ನನ್ನ ಪ್ರಾಣ ತಗೋಬೇಕಷ್ಟೆ” ಅಂದಾಗ, ಈ ಸೈನಿಕರು ಅವನ ಪ್ರಾಣವನ್ನೇ ತೆಗೆದಿರಲಿಲ್ವಾ? ಅವನ ಹೆಂಡತೀನ ಅರಮನೆಯ ದಾಸಿ ಮಾಡಲಿಲ್ವಾ?

ನೆಫಿಸ್: ಅದೇನು ಅವನೊಬ್ಬನ ಕತೇನಾ? ನನ್ನ ತಂದೆಯನ್ನು ಕೊಂದದ್ದು ಹಾಗೇ ಅಲ್ವಾ? ಎಷ್ಟೋ ವರ್ಷದಿಂದ ಇದೇ ಕತೆ ಆಗಿಹೋಗಿದೆ… ಛೇ (ಎಂದು ಅಳುತ್ತಾಳೆ)

ಅವಳನ್ನು ಸಂತೈಸುವ ಮೆನೆಪ್‍ಟಾ.

ಬೆಕ್: ಮೆನೆ, ಈಗ ನಾವೇನು ಮಾಡೋದು ಅಂತ ಹೇಳು?

ಮೆನೆ: ಮತ್ತೇನು ಮಾಡೋಕ್ಕಾಗತ್ತೆ…? ನಮ್ಮ ಕಷ್ಟ ಎಲ್ಲಾ ಅವರ ಮುಂದೆ ಹೇಳ್ಕೊಳೋಣ… ಈಗ ಸ್ವಲ್ಪ ಸುಂಕ ಕೊಡ್ತೀವಿ… ಮಳೆ ಬೆಳೆ ಆದಮೇಲೆ ಉಳಿದದ್ದು ಅನ್ನೋಣ…

ನೆಫಿಸ್‍: ಅವರು ನಿಮ್ಮ ಮಾತು ಕೇಳ್ತಾರಾ?

ಮೆನೆ: ಅವರೂ ನಮ್ಮ ಹಾಗೇ ಮನುಷ್ಯರೇ ತಾನೇ?

ಸೆಬೆಕ್ಕು: ಏನಾದರೂ ಆ ಸಾಮಂತರುಗಳ ಹತ್ತಿರ ಮಾತಾಡೋದು ಕಷ್ಟವೇ… ಒಂದು ಮಾತಾಡಿದರೆ ಹೆಚ್ಚು… ಒಂದು ಮಾತಾಡಿದರೆ ಕಡಿಮೆ…! ಅವರಂತೂ ತಕ್ಕಡಿ ಹಿಡಕೊಂಡೇ ಕೂತಿರ್ತಾರೆ…

ಬೆಕ್: ಅದಕ್ಕೆ ಅಲ್ವಾ, ಮೆನೆಪ್‍ಟಾ ಹತ್ತಿರ ಬಂದಿರೋದು… ಇವನನ್ನೇ ನಮ್ಮೆಲ್ಲರ ಪರವಾಗಿ ಅಧಿಕಾರಿಗಳ ಜೊತೆಗೆ ಮಾತಾಡೋಕ್ಕೆ ಕೇಳೋಣ…

ಮೆನೆ: ನಾನಾ? ನನ್ನ ಮಾತನ್ನ ಸಾಮಂತರು ಕೇಳ್ತಾರಾ? ಫೆರೋ ಪ್ರಭುಗಳಾದರೂ ಬಂದಿದ್ದರೆ  ಚೆನ್ನಾಗಿತ್ತು…

ಸೆಬೆಕ್ಕು: ಅಯ್ಯೋ ಮಾರಾಯಾ? ಅದನ್ನ ಮಾತ್ರ ಬಯಸ್ಬೇಡ! ಪ್ರಭುಗಳ ಕಣ್ಣಿಗೆ ನಮ್ಮಂತೋರು ಬಿದ್ದರೆ, ಅಷ್ಟೇ… ನಮ್ಮ ಬದುಕೇ ಸರ್ವನಾಶ…!

ಬೆಕ್: ಅಕಸ್ಮಾತ್ ಫ್ಯಾರೋ ನಮ್ಮ ಊರಿಗೆ ಬಂದರೆ ಸುಂಕದಲ್ಲಿ ರಿಯಾಯತಿ ಕೊಡುವ ಮಾತಿರಲಿ… ಊರಲ್ಲಿರೋ ಹೆಂಗಸರೆಲ್ಲಾ ಫ್ಯಾರೋನ ರಾಣಿವಾಸಕ್ಕೆ ದಾಸಿಯರಾಗ್ತಾರೆ… ಹುಡುಗರೆಲ್ಲಾ ಸೈನಿಕರಾಗ್ತಾರೆ… ಆಮೇಲೆ ನಮ್ಮ ಹೊಲ – ಮನೆ ಕೆಲಸಕ್ಕೆ ಯಾರೂ ಉಳಿಯೋಲ್ಲಾ…! ದೊಡ್ಡವರು ದೂರ ಇರೋದೇ ಸರಿ…!

ನೆಫಿಸ್: ಸಧ್ಯ ದೊರೆಗಳು ಬಂದಿಲ್ಲವಲ್ಲಾ… ಮುಂದೇನು ದಾರಿ ಅಂತ ಯೋಚಿಸಿ…?

ಬೆಕ್: ಮತ್ತೇನು ದಾರಿ? ಮನೆ ಅಣ್ಣಾ ನಮ್ಮೆಲ್ಲರ ಪರವಾಗಿ ಸಾಮಂತರ ಜೊತೆಗೆ ಮಾತಾಡಬೇಕಷ್ಟೆ… ಏನಂತೀ ಮೆನೆ?

ಮೆನೆ: ನೀವೆಲ್ಲರೂ ಬಯಸುವುದಾದರೆ ನಾನು ಇಲ್ಲ ಎನ್ನಲಾರೆ… ಆದರೆ…?

ಸೆಬೆಕ್: ಆದರೆ ಅಂದ್ರೇನು? ಏನಾದರೂ ಹೆಚ್ಚುಕಮ್ಮಿ ಆಗ್ತದೆ ಅಂತಲಾ…? ಯೋಚನೆ ಬೇಡ… ನಾವೆಲ್ಲಾ ಇದ್ದೀವಿ ನಿನ್ನ ಜೊತೆಗೆ…!

ಬೆಕ್: ಮೆನೆ ಅಣ್ಣಾ, ಯಾವ ಹೆಚ್ಚೂಕಮ್ಮಿಯೂ ಆಗಲ್ಲ… ನಿನ್ನ ಮಾತಲ್ಲಿ ಅವರನ್ನು ಗೆಲ್ಲೋದು ಖಂಡಿತಾ…

ಮೆನೆ: ನಿಮ್ಮ ನಂಬಿಕೆ ನಿಜಾ ಆಗಲಿ, ಆಗದೆ ಇರಲಿ… ನಿಮ್ಮ ಮಾತನ್ನು ನಡೆಸೋದು ನನ್ನ ಕರ್ತವ್ಯ… ಊರು ತಲುಪಿದ ಕೂಡಲೇ ಸಾಮಂತರ ಮನೆಗೆ ಹೋಗೋಣ. ನಡೆಯಿರಿ ಬಟಾನ ದೋಣಿಯ ಕಡೆಗೆ ಹೋಗೋಣ…

ಎಲ್ಲರೂ ಹೊರಡುತ್ತಾರೆ.

ನೆಫಿಸ್: ಮೆನೆ ನೀನು ಈ ಕೆಲಸ ಒಪ್ಪಿಕೊಳ್ಳಬಾರದಿತ್ತು…

ಮೆನೆ: ಯಾಕೆ? ಭಯವೇ? ತಲೆ ಹೋಗುವುದೇನೂ ಇಲ್ಲ ಇಲ್ಲಿ. ಇದ್ದಿದ್ದನ್ನ ಇದ್ದ ಹಾಗೆಯೇ ಹೇಳೋದು ಅಷ್ಟೆ…

ನೆಫಿಸ್: ಇರೋದನ್ನ ಇರೋಹಾಗೆಯೇ ಹೇಳಿದಾಗ ಒಪ್ಪಿಕೊಳ್ಳುವ ಜನ ಇದ್ರೆ ಈ ಭೂಮಿ ಮೇಲೆ ಯಾವ ಕಷ್ಟವೂ ಇರ್ತಾ ಇರ್ಲಿಲ್ಲ… ಸತ್ಯವನ್ನ ಯಾರೂ ಇಷ್ಟ ಪಡಲ್ಲ…

ಮೆನೆ: ನಾವು ಮಾಡುವ ಕೆಲಸ ಮಾಡೋಣ… ಉಳಿದಿದ್ದಕ್ಕೆ ರಾ ಸಾಕ್ಷಿಯಾಗಿ ಇರ್ತಾನಲ್ಲ…?

ನೆಫಿಸ್: (ಆಕಾಶ ನೋಡ್ತಾ) ಆ ರಾ ದೇವರು ಸರಿಯಾದ ಸಮಯಕ್ಕೆ ಕತ್ತಲಿಗೆ ದೂಡುತ್ತಾನೆ…

ಮೆನೆ: ಇರಲಿ ನಡಿ… ಕತ್ತಲಾಗೋದರಲ್ಲಿ ಊರ ದಾರಿ ಹಿಡಿಯೋಣ…

ಎಲ್ಲರೂ ಕುಳಿತ ದೋಣಿ ಹೊರಟಾಗ ಹಾಡು ಕೇಳುತ್ತದೆ…

ಯೋ ಯೋ….! ಯೋ ಯೋ ಯೋ…!

ರಾ ದೇವನ ಬೆಳಕೇ….! ಯೋ ಯೋ….!

ದಾರಿಯ ದೇವರೇ….! ಯೋ ಯೋ….!

ಒಸರಿಸ ದೇವ…! ಯೋ ಯೋ….!

ಪರಲೋಕದೊಡೆಯ…! ಯೋ ಯೋ….!

ಈ ಮಕ್ಕಳ ಸಲಹೋ…! ಯೋ ಯೋ…!

ನಮ್ಮ ದೋಣಿಯ ನಡೆಸೋ…! ಯೋ ಯೋ…!

ಯೋ ಯೋ…! ಯೋ ಯೋ ಯೋ…!

ಎಂದು ಹಾಡುವಾಗ ದೋಣಿಯಂತೆ ನಿಂತವರು ತೊನೆಯುತ್ತಾರೆ…

ದೃಶ್ಯ 4

ವೇದಿಕೆಯಲ್ಲಿ ಕಂಭಗಳಂತೆ ನಾಲ್ಕು ಜನ ನಿಂತಿದ್ದಾರೆ. ಅವರಿಗೆ ಮುಖದ ಮೇಲೆ ವಿಭಿನ್ನ ಐಗುಪ್ತದ ದೇವರುಗಳ ಮುಖವಾಡವಿದೆ. ಅವರ ನಡುವೆ ಬೆನ್ನಾಗಿ ನಿಂತಿರುವ ರಾಜಸೇವಕ ಟೆಹುಟಿಯ ಬಳಿಗೆ ಸಾಮಂತ ಗೇಬು ಬರುತ್ತಾನೆ.,.

ಗೇಬು: ಸಾಮಂತ ಟೆಹುಟಿ ಅವರಿಗೆ ಜಯವಾಗಲಿ… ಔತಣ ಸರಿಯಾಯಿತೇ?

ಟೆಹುಟಿ: (ಅವನತ್ತ ಬರುತ್ತಾ) ಔತಣದ ಮನೆ ಹಾಳಾಗಲಿ…! ನಾವು ಬಂದಿರುವಾಗ ನಿಮ್ಮ ರಾಣಿವಾಸದಲ್ಲಿ ನಮಗೆ ಸರಿಯಾಗುವ ಒಬ್ಬ ದಾಸಿಯೂ ಇಲ್ಲವಲ್ಲಾ…

ಗೇಬು: ಕ್ಷಮಿಸಿ ಟೆಹುಟಿ… ನೀವು ಬರುವ ಸೂಚನೆ ಮುಂಚಿತವಾಗಿ ಸಿಕ್ಕಿದ್ದರೆ ಒಂದಿಬ್ಬರನ್ನು ಕರೆಸುತ್ತಿದ್ದೆ…

ಟೆಹುಟಿ: ಅಂದರೆ ಈ ಊರಲ್ಲಿ ನಮಗೆ ಪಸಂದಾಗುವ ಹೆಣ್ಣುಗಳೇ ಇಲ್ಲವೇ…?

ಗೇಬು ಮಾತಾಡದೆ ತಲೆತಗ್ಗಿಸುತ್ತಾನೆ…

ಟೆಹುಟಿ: ನಾನು ಹೇಳ್ತೇನೆ ಕೇಳಿ… ನಿಮ್ಮ ಆಡಳಿತದಲ್ಲಿ ಬಿಗಿ ಇಲ್ಲ. ನೀವು ಬಡವರಿಗೆ ಸಲಿಗೆ ಕೊಟ್ಟಿದ್ದೀರಿ. ಆ ಜನ ನಮಗೆ ಮನವಿ ಸಲ್ಲಿಸೋದು ಅಂದರೇನು? ಫೆರೋನ ಪ್ರತಿನಿಧಿಯ ಎದುರು ನಿಂತು ಮಾತಾಡುವ ಎದೆಗಾರಿಕೆಯೆ ಈ ಜನಕ್ಕೆ? ಥತ್!

ಗೇಬು ತಲೆತಗ್ಗಿಸುತ್ತಾನೆ. ಟೆಹುಟಿ ಅತ್ತಿಂದಿತ್ತ ಠಳಾಯಿಸುತ್ತಾನೆ… ಒಂದು ಮೂಲೆಯಲ್ಲಿ ಬಂದು ನಿಲ್ಲುತ್ತಾನೆ. ಗೇಬು ಆತನ ಹತ್ತಿರಕ್ಕೆ ಬರುತ್ತಾನೆ.

ಗೇಬು: ಹೀಗೆ ಹೇಳ್ತಾ ಇದ್ದೇನಂತ ತಪ್ಪು ತಿಳಿಯಬೇಡಿ… ನನಗೆ ಸಂದೇಶವನ್ನೇ ಕಳಿಸದೆ ತಾವು ಬಂದಿದ್ದೀರಿ…

ಟೆಹುಟಿ: ಸಂದೇಶ ಕಳಿಸುವಷ್ಟು ವ್ಯವಧಾನ ಇರಲಿಲ್ಲ… ಅದಕ್ಕಾಗಿಯೇ ಇಂದು ಹಗಲಿನಲ್ಲಿ ತಿಳಿಸಿ, ನಾಳೆಗೆ ಕಂದಾಯ ವಸೂಲಿ ಎಂದು ಹೇಳಿದ್ದು… (ಮಾತು ಮುಂದುವರೆಸಲು ಇಷ್ಟವಿಲ್ಲದವನಂತೆ ದೂರಕ್ಕೆ ಹೋಗುತ್ತಾನೆ)

ಗೇಬು: (ಮೆಲ್ಲಗೆ ಅನುಮಾನದಲ್ಲಿ ಹತ್ತಿರ ಬಂದು) ನಿಜ ಹೇಳಬೇಕು ಅಂದರೆ ಟೆಹುಟಿಯವರು ಮಹಾ ಅಮಾತ್ಯ ಆಗಬೇಕಿತ್ತು…

ಟೆಹುಟಿ: ಮುಖಸ್ತುತಿ ಬೇಡ… ನಿನ್ನ ಸಮಸ್ಯೆ ಏನು ತಿಳಿಸು?

ಗೇಬು: ಹತ್ತು ಜನ ಕಾವಲುಭಟರನ್ನ ಕಟ್ಟಿಕೊಂಡು ಪ್ರಾಂತ್ಯ ಆಳೋದು ಕಷ್ಟವಾಗ್ತಾ ಇದೆ… ಭೂಮಾಲೀಕರ ಬೆಂಬಲ ಪಡೆದು ಆಳಬೇಕಾಗಿದೆ. ಹೀಗಿರುವಾಗ?

ಆಗಲೇ ಕೇಳುವ ಜನರ ಕೂಗು, “ಒಸೈರಿಸ್ ದೇವನಿಗೆ ಜಯವಾಗಲಿ! ಫೆರೋಗೆ ಜಯವಾಗಲಿ”

ಟೆಹುಟಿ: (ಜನ ಕೂಗುವ ದಿಕ್ಕಿನ ಕಡೆ ನೋಡಿ) ಇಡೀ ಹಳ್ಳಿಯೇ ಬಂದಹಾಗಿದೆ… ! ಏಯ್, ಪ್ರಾಂತಪಾಲ ಗೇಬು… ಹೆದರಬೇಡ… ನನ್ನ ಜನ ಇದ್ದಾರೆ… ನಡಿ, ನಡಿ, ಮೊದಲು ಮನವಿ ಸಲ್ಲಿಸಲು ಬಾಗಿಲಿಗೆ ಬಂದಿರುವವರನ್ನು ಭೇಟಿಯಾಗೋಣ… ಆಮೇಲೆ… ನಿನ್ನ ಸಂಕಟದ ಕತೆ…!

ಎಂದು ನಡೆಯುತ್ತಾನೆ…. ಹಿಂದೆಯೇ ಸಾಗುವ ಗೇಬು…

ದೃಶ್ಯ 4

ಜನರ ನೂಕು ನುಗ್ಗಲು. ಅವರನ್ನು ತಡೆಯುತ್ತಾ ಇರುವ ಸೈನಿಕರು.

ಅಲ್ಲಿಗೆ ಬರುವ ಟೆಹುಟಿ ಮತ್ತು ಗೇಬು. ಮತ್ತೊಂದು ಮೂಲೆಯಲ್ಲಿ ಅವರಿಗೆ ಕಾಯುವಂತೆ ನಿಂತಿರುವ ಭೂಮಾಲೀಕರು ನಮಸ್ಕರಿಸುತ್ತಾರೆ. ಗೇಬುವಿಗೆ ಭಾರೀ ಗಾಬರಿ ಇದೆ.

ಟೆಹುಟಿ: ಸೈನಿಕರೇ, ಆ ಜನರನ್ನು ಬಿಡಿ…

ಸೈನಿಕರು ಜಾಗ ಬಿಡುತ್ತಾರೆ. ಮೆನೆ, ಬೆಕ್, ಸೆಬೆಕ್ಕು ಮುಂತಾದ ಹಳ್ಳಿಗರ ತಂಡ ಎದುರಿಗೆ ಬಂದು ನಿಲ್ಲುತ್ತದೆ… ಟೆಹುಟಿ ಅವರಿಗೆ ಕೈ ಸನ್ನೆ ಮಾಡಿ ಸುಮ್ಮನಿರಲು ತಿಳಿಸುತ್ತಾನೆ. ಗೇಬುವಿಗೆ ಆರಂಭಿಸು ಎನ್ನುತ್ತಾನೆ. ಇಫ್ಯುವರ್ ಅವನಾಡಿದ ಮಾತೆಲ್ಲಾ ಬರೆದುಕೊಳ್ಳುತ್ತಾನೆ (ಉದ್ದ ಪ್ಯಾಪರಿಸ್ ಹಾಳೆಗಳಲ್ಲಿ ಎಂಬಂತೆ)

ಗೇಬು: ಮಹಾಜನಗಳೇ, ಇಫ್ಯುವರ್ ವರುಷದ ಬೇಸಿಗೆಯ ಅಬ್ಟು ದೇವರ ಜಾತ್ರೆಯ ಮೂರನೆಯ ದಿನದಂದು ನೀರಾನೆ ಪ್ರಾಂತ್ಯದಲ್ಲಿ ಕಂದಾಯ ವಸೂಲಿಗಾಗಿ ಸಭೆ ಸೇರಿದ್ದೇವೆ…

ಟೆಹುಟಿ: ಏಯ್ ಗೇಬು, ಅಷ್ಟೆಲ್ಲಾ ಕಂದಾಚಾರ ಬೇಡ… ಬಾ ಹಿಂದೆ… (ತಾನು ಮುಂದೆ ಹೋಗಿ, ಸಾರ್ವಜನಿಕರಿಗೆ ಮಾತಾಡುವಂತೆ) ಜಗತ್ತಿನಲ್ಲೇ ಶ್ರೇಷ್ಟ ಎನಿಸಿದ ಐಗುಪ್ತದ ಪ್ರಜೆಗಳು ನಾವು. ಸೃಷ್ಟಿಕರ್ತ ‘ರಾ’ನ ಮಕ್ಕಳು ನಾವು. ಮಹಾಕುರುಬ ಫ್ಯಾರೋನ ಪ್ರೀತಿ ಪಾತ್ರ ಕುರಿಗಳು ನಾವು. || ಈ ದೇಶವನ್ನ ಒಂದು ಮಾಡಿದವನು ನಮ್ಮ ಫ್ಯಾರೋ… ಜೋರಸ್‍ಗಾಗಿ ಎಂಬತ್ತಾರು ಆಳೆತ್ತರದ ಪಿರಮಿಡ್ ಕಟ್ಟಿಸಿದವನು ನಮ್ಮ ಫ್ಯಾರೋ… ನಮ್ಮ ಎಲ್ಲಾ ಸಾಧನೆಗೆ, ಸಂಪತ್ತಿಗೆ ಕಾರಣನಾದವನ್ನು ನಮ್ಮ ಫ್ಯಾರೋ… || ನಮ್ಮ ಫ್ಯಾರೋನ ಅರಮನೆಯ ವೆಚ್ಚಕ್ಕೆ, ಮೆಂಫಿಸ್‍ನ ದೇವಾಲಯದ ವೆಚ್ಚಕ್ಕೆ ಬೇಕಾಗುವ ದುಡ್ಡು ಅಪಾರ… ನಿಮಗೆ ನೆನಪಿರಲಿ, ಅರಮನೆಯಲ್ಲಿ ನಡೆಯುವ ಒಂದು ಔತಣಕೂಟಕ್ಕೆ ಸಾವಿರ ಬಾತುಕೋಳಿ ಸಾಲುವುದಿಲ್ಲ. ಇನ್ನು ಧಾನ್ಯ ಎಷ್ಟುಬೇಕು ನೀವೇ ಲೆಕ್ಕಾ ಹಾಕಿ…?

ಜನರಿಗೆ ಆತನ ಮಾತಿನಲ್ಲಿನ ಸುಳ್ಳುಗಳು ತಿಳಿದಂತೆ ಆಕಳಿಸುವುದು ಕಾಣುತ್ತದೆ. ಗೇಬು ಟೆಹುಟಿಯ ಹತ್ತಿರ ಬರುತ್ತಾನೆ.

ಗೇಬು: (ಒಮ್ಮೆ ಗಂಟಲು ಸರಿಪಡಿಸಿಕೊಂಡು) ನೀವು ಕಂದಾಯ ವ್ಯವಸ್ಥೆ ಬಗ್ಗೆ ಮಾತಾಡುವುದು ಒಳ್ಳೆಯದು…

ಟೆಹುಟಿ: (ಸಿಟ್ಟಿನಿಂದ ಅವನತ್ತ ನೋಡಿ ನಂತರ ಜನರಿಗೆ ಎಂಬಂತೆ) ಮಹಾಜನಗಳೇ, ನೀವು ಪ್ರತೀ ವರ್ಷ ರಾಜ ಬೊಕ್ಕಸಕ್ಕೆ ದಶಾಂಶ, ದೇವಮಂದಿರಕ್ಕೆ ದಶಾಂಶ ಕಂದಾಯ ಸಲ್ಲಿಸಬೇಕಾಗ್ತದೆ…  ಗೊತ್ತಾಯಿತೆ?

ಮೆನೆಪ್‍ಟಾ ಬಳಿ ಸೆಬೆಕ್ಕು ಮತ್ತು ಬೆಕ್ ಸನ್ನೆಯಿಂದ ಏನೋ ಮಾತಾಡುತ್ತಾರೆ. ಅವನು ತಡೆಯಿರಿ ಎಂದು ಸನ್ನೆ ಮಾಡುತ್ತಾನೆ.

ಟೆಹುಟಿ: ಗೇಬು, ನಾವು ಗೊತ್ತು ಮಾಡಿರುವ ಕಂದಾಯಕ್ಕೆ ಭೂ ಮಾಲೀಕರು ಏನನ್ನುತ್ತಾರೆ?

ಭೂ ಮಾಲೀಕ 1: ಫ್ಯಾರೋನ ಆಯುರಾರೋಗ್ಯ ವರ್ಧಿಸಲಿ! ನಮ್ಮ ಆಕ್ಷೇಪಣೆ ಏನೂ ಇಲ್ಲ…

ಟೆಹುಟಿ: ಇತರ ಮಿತ್ರರು?

ಭೂ ಮಾಲೀಕರು: ಇಲ್ಲ, ಇಲ್ಲ… ನಮ್ಮ ಆಕ್ಷೇಪಣೆಯೇ ಇಲ್ಲ…

ಜನ: ನಮ್ಮ ಆಕ್ಷೇಪಣೆ ಇದೆ…

ಟೆಹುಟಿ: (ಜನರ ಕಡೆಗೆ ನೋಡುತ್ತಾ) ವಿಸ್ಮಯದ ಸಂಗತಿ ಇದು… ಯಾವ ಭೂ ಮಾಲೀಕನೂ ವಿರೋಧಿಸದೆ ಇರುವ ನಿರ್ಧಾರವನ್ನ ಚರ್ಚಿಸೋದಕ್ಕೆ, ಮನವಿ ಕೊಡೋದಕ್ಕೆ ಸಾಮಾನ್ಯ ಜನ ಬಂದಿದ್ದಾರೆ… ಆಗಲಿ ಒಸೈರಿಸ್‍ನ ಕೊಂದ ಸೆತ್‍ನ ಜೊತೆಗೂ ನಾನು ಮಾತಾಡುವುದಕ್ಕೆ ಸಿದ್ಧವಾಗಿದ್ದೇನೆ… ಹೇಳಿ… ಅದೇನದು ನಿಮ್ಮ ಮನವಿ…?

ಸೆಬೆಕ್ಕು: ನಮ್ಮೆಲ್ಲರ ಪರವಾಗಿ ಮೆನೆಪ್‍ಟಾ ಮಾತಾಡುತ್ತಾನೆ…

ಟೆಹುಟಿ: ಯಾರವನು ಮೆನೆಪ್‍ಟಾ? ಮುಂದೆ ಬರಲಿ…

ಜನರ ಗುಂಪಿನಿಂದ ಮುಂದಕ್ಕೆ ಬರುವ ಮೆನೆಪ್‍ಟಾ… ಎಲ್ಲರಿಗೂ ತಲೆಬಾಗಿ ನಮಸ್ಕರಿಸುತ್ತಾನೆ.

ಟೆಹುಟಿ: (ಅರೆಕ್ಷಣ ಅವನನ್ನೇ ನೋಡಿ ನಂತರ) ಹೂಂ… ಮಾತಾಡು… ಆಡುವ ಮಾತು ಕ್ಲುಪ್ತವಾಗಿರಲಿ… ನಮಗೆ ಹೆಚ್ಚು ಸಮಯ ಇಲ್ಲ…

ಮೆನೆ: ಪ್ರಭುಗಳ ಆರೋಗ್ಯ ವರ್ಧಿಸಲಿ! ರೈತರು, ನೇಯ್ಗೆಯವರು, ಕಲ್ಲು ಗಾರೆಯವರು, ಮರಗೆಲಸದವರು, ಇಂತಹ ಬಡವರ ಪರವಾಗಿ ದೇಶದ ಕಂದಾಯ ಅಧಿಕಾರಿಯ ಸನ್ನಿಧಿಯಲ್ಲಿ ಮನವಿ ಸಲ್ಲಿಸೋಕ್ಕೆ ನಿಂತಿದ್ದೇನೆ…

ಟೆಹುಟಿ: (ಅಸಹನೆಯಿಂದ) … ಬೇಗ, ಬೇಗ ವಿಷಯಕ್ಕೆ ಬಾ…

ಮೆನೆ: ಧರ್ಮಾತ್ಮನಾದ ಒಸೈರಿಸ್ ದೇವರ ಜಾತ್ರೆಗೆ ನಾವೆಲ್ಲರೂ ಹೋಗಿದ್ದೆವು… “ದೇವತೆಗಳು ಸಂತೃಪ್ತರಾಗಿದ್ದಾರೆ. ನಮ್ಮ ಬದುಕು ಹಸನಾಗುತ್ತದೆ” ಎಂಬ ನಂಬಿಕೆಯೊಂದಿಗೆ ಹಿಂದಿರುಗಿದೆವು…  ಮನೆಯ ಬಾಗಿಲಿಗೆ ಬಂದವರಿಗೆ ಕಂದಾಯ ವಸೂಲಿಗೆ ನೀವು ಬಂದಿರುವುದು ತಿಳಿಯಿತು… ವಸೂಲಿ ಅಂದರೆ ಬಡವರಿಗೆ ಭಯ… ನಮ್ಮೆಲ್ಲರ ತಂದೆ ಫೆರೊ ಕಳಿಸಿರುವ ಅಧಿಕಾರಿಗೆ ನಮ್ಮ ಸಂಕಷ್ಟವನ್ನು ಹೇಳೋಕ್ಕೆ ಬಂದಿದ್ದೇವೆ…

ಟೆಹುಟಿ: ಏಯ್…! ಮಾತು ಅಂದರೆ ಪಂಜರ ಬಿಟ್ಟ ಕುರುಡು ಹಕ್ಕಿಯ ಹಾಗೆ… ಯಾವುದಕ್ಕಾದರೂ ಬಡಿದರೆ ರೆಕ್ಕೆ ಮುರಿದೀತು… ಎಚ್ಚರ…! ಮಾತು ಚುಟುಕಾಗಿರಲಿ!

ಮೆನೆ: ಮಹಾಸ್ವಾಮಿಗಳೇ, ನಮ್ಮದು ತಲತಲಾಂತರದ ನೋವಿನ ಕತೆ… ಇದು ಚುಟುಕಾಗೋದು ಹೇಗೆ ಸಾಧ್ಯ… || ಮಹಾಸ್ವಾಮಿ, ಸರ್ಕಾರದ ದಾಖಲೆ ಪ್ರಕಾರ ಕಳೆದ ವರುಷ ‘ಒಳ್ಳೆಯ ನೀಲ’. ಆದರೆ ಆಗಿದ್ದೇನು? ಹಗ್ಗ ಎಳೆಯುವವರು ಎಳೆದರು. ಮೋಜಣಿದಾರರು ನೆಲ ಅಳೆದರು. ನಾಲೆಗಳ ದುರಸ್ತಿ ಮಾತ್ರ ಆಗಲಿಲ್ಲ. ಕೆರೆಗಳ ಹೂಳು ತೆಗೆಯಲಿಲ್ಲ. ಬೆಳೆಗೆ ಸಾಕಷ್ಟು ನೀರು ಸಿಗಲಿಲ್ಲ.

ಟೆಹುಟಿ: ಮುಗಿಯಿತೇ ಮಾತು…

ಮೆನೆ: ಇಷ್ಟಕ್ಕೆ ಮುಗಿಯಲಿಲ್ಲ ಸ್ವಾಮಿ ನಮ್ಮ ಕಷ್ಟ. ಮುದಿ ಹೋರಿಗೆ ಬದಲು ಹೊಸ ಹೋರಿ ತರಬೇಕು. ನೇಗಿಲಿಗೆ ಹೊಸ ಮೊನೆ ಹಾಕಬೇಕು. ಮನೆಯವರಿಗೆ ಮತ್ತು ಜಾನುವಾರಿಗೆ ಹೊಟ್ಟೆತುಂಬಿಸಬೇಕು. ಜೊತೆಗೆ ಇಲಿ, ಹೆಗ್ಗಣ, ಕಾಡುಹಂದಿ, ಹುಳಹುಪ್ಪಟೆ ಕಾಟ… ಅದೂ ಸಾಲದೆಂಬಂತೆ ಕಳ್ಳರ ಕಾಟ… ಹೀಗಿರುವಾಗ ದಶಾಂಶ ರಾಜ ಕಣಜಕ್ಕೆ, ದಶಾಂಶ ದೇವಮಂದಿರಕ್ಕೆ ಕೊಡುವುದಾದರೂ ಹೇಗೆ?

ಟೆಹುಟಿ: ಮಾತು ಹೆಚ್ಚಾಯಿತು.

ಮೆನೆ: ಇನ್ನೂ ಇದೆ ಸ್ವಾಮಿ ಹೇಳುವುದಕ್ಕೆ… ನಮ್ಮ ಮಕ್ಕಳು ಸಹ ನಮಗೆ ಉಳಿಯುತ್ತಾ ಇಲ್ಲ. ಯುವಕರನ್ನೆಲ್ಲಾ ಸೈನ್ಯಕ್ಕೆ ಕಳಿಸಿದರೆ ಹೊಲದಲ್ಲಿ ಕೆಲಸ ಮಾಡುವವರು ಯಾರು ಹೇಳಿ?

ಟೆಹುಟಿ: ಏಯ್! ಏನು ಮಾತಾಡ್ತಾ ಇದೀಯಾ ಅನ್ನೋ ಎಚ್ಚರ ಇದೆಯಾ ನಿನಗೆ? ಪ್ರಭುವಿನ ಅಧಿಕಾರವನ್ನು ಪ್ರಶ್ನಿಸುವಷ್ಟು ಹೆಚ್ಚಿದೆಯಾ ಕೊಬ್ಬು? ನೆನಪಿಟ್ಟುಕೋ ಮನುಷ್ಯನಿಗೆ ಅವನ ನಾಲಿಗೆಯೇ ವೈರಿ!

ಮೆನೆ: ಕೋಪಿಸಿಕೊಳ್ಳಬೇಡಿ ಒಡೆಯಾ…! ರೈತರು, ಪಶುಪಾಲಕರು, ಕಸುಬುದಾರರು ಬೆಸ್ತರು, ದಶಾಂಶ ಕಂದಾಯ ಕೊಡಲೇಬೇಕು. ಆದರೆ ನಮ್ಮ ಭಾಗದ ಭೂಮಾಲೀಕರು ಮಾತ್ರ ಪುಣ್ಯವಂತರು… ಅವರ ಫಸಲಿನ ಲೆಕ್ಕವೂ ಆಗುವುದಿಲ್ಲ, ಅವರ ಬಳಿ ಇರುವ ಹಸು, ಕುರಿಗಳ ಲೆಕ್ಕವೂ ಆಗೋದಿಲ್ಲ.

ಟೆಹುಟಿ: ಅಂದರೆ ನಮ್ಮ ಅಧಿಕಾರಿಗಳು ಲಂಚ ತಗೊಂಡು ಸುಳ್ಳು ಲೆಕ್ಕ ಬರೀತಾರೆ ಅಂತ ಆರೋಪ ಮಾಡ್ತಾ ಇದೀಯಾ…?

ಮೆನೆ: ನಾವು ಬಡವರು ಸ್ವಾಮಿ. ಆರೋಪ ಮಾಡುವಷ್ಟು ದೊಡ್ಡವರಲ್ಲ. ನಮಗೆ ಗೊತ್ತಿರುವ ಸತ್ಯವನ್ನು ಹೇಳ್ತೇವೆ, ಅಷ್ಟೆ. ಕಳೆದ ಸಲ ರಾಜಕಣಜಕ್ಕೆ ದೇವಮಂದಿರಕ್ಕೆ ಅಂತ ಕಂದಾಯದ ಧಾನ್ಯ ಕೊಂಡೊಯ್ಯುತ್ತಿದ್ದ ನಾವೆಯಲ್ಲಿದ್ದ ಅರ್ಧ ಪಾಲು ರಾಜಧಾನಿಗೆ ತಲುಪಲೇ ಇಲ್ಲ ಅನ್ನೋದು ಮಾತ್ರ ನಮಗೆ ಗೊತ್ತು…

ಗೇಬು: (ಸಿಟ್ಟಿನಿಂದ) ಓ! ನಿನಗೆ ನಮ್ಮ ಬಹಳ ವಿಷಯ ಗೊತ್ತಿರುವ ಹಾಗಿದೆ…?

ಮೆನೆ: ನಮಗೆ ಗೊತ್ತಿರುವುದೆಲ್ಲಾ ಹೇಳಿದರೆ ಇಡೀ ದಿನ ನಾವೇ ಮಾತಾಡಬೇಕಾದೀತು…!

ಟೆಹುಟಿ: ಅಂದರೇನು? ಈಗ ನೀವು ಕಂದಾಯ ಕೊಡುವುದಿಲ್ಲವೋ?

ಮೆನೆ: ಕೊಡುವುದಿಲ್ಲ ಎನ್ನುತ್ತಾ ಇಲ್ಲ… ಕಂದಾಯದ ಹೊರೆಯನ್ನು ಇಳಿಸಿ ಅಂತ ಪ್ರಾರ್ಥಿಸ್ತಾ ಇದ್ದೇವೆ…

ಟೆಹುಟಿ: ಈ ಭಾಗದ ಭೂಮಾಲೀಕರು ಯಾವ ತಕಾರಾರು ಇಲ್ಲದೆ ಎಲ್ಲದಕ್ಕೂ ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದಿದೆಯೋ ನಿನಗೆ…?

ಮೆನೆ: ಗೊತ್ತಿದೆ ಮಹಾಸ್ವಾಮಿ. ನಮ್ಮ ಎದುರೇ ಅವರೆಲ್ಲರೂ ಒಪ್ಪಿದ್ದಾರೆ.

ಟೆಹುಟಿ: ಹಾಗಾದರೆ ನೀವು ಫ್ಯಾರೋ ವಿಧಿಸಿರುವ ಕಂದಾಯ ಕಟ್ಟದೆ ದಂಗೆ ಏಳುತ್ತಾ ಇದ್ದೀರಿ ಅನ್ನಬಹುದೋ?

ಮೆನೆ: ನಾವು ದಂಗೆ ಎದ್ದಿಲ್ಲ ಒಡೆಯಾ… ನಮ್ಮಂತಹ ಬಡವರ ಮೇಲೆ ಕರುಣೆ ತೋರಿಸಿ ಅಂತ ದೀನರಾಗಿ ಕೇಳ್ತಾ ಇದ್ದೇವೆ…

ಟೆಹುಟಿ: ಎಲಾ ದ್ರೋಹಿ! ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾಗತಿಯ ನಾಟಕ…! ಹೀಗೆ ಬಿಟ್ಟರೆ ನೀನು ಪ್ರಭುಗಳನ್ನೇ ಹರಾಜು ಹಾಕುತ್ತೀಯಾ… (ಸೈನಿಕನಿಗೆ) ಯಾರಲ್ಲಿ, ಇವನನ್ನು ಕಂಬಕ್ಕೆ ಕಟ್ಟಿ ಚಾವಟಿಯ ರುಚಿ ತೋರಿಸು…! ಉಳಿದವರನ್ನು ಇಲ್ಲಿಂದ ಓಡಿಸು…!

ಸೈನಿಕನೊಬ್ಬ ಸರ್ರನೆ ಬಂದು ಮೆನೆಪ್‍ಟಾನನ್ನು ಎಳೆದೊಯ್ಯುತ್ತಾನೆ… ಹಿಂದಿದ್ದ ಕಂಭಕ್ಕೆ ಕಟ್ಟುತ್ತಾನೆ… ಹಳ್ಳಿಗರನ್ನು ಉಳಿದ ಸೈನಿಕರು ಹೊರಗೆ ಓಡಿಸುತ್ತಾರೆ… ರಂಗದ ನಡುವೆ ಇರುವ ಕಂಬಕ್ಕೆ ಕಟ್ಟಿದ ಮೆನೆಪ್‍ಟಾಗೆ ಚಾವಟಿಯಲ್ಲಿ ಹೊಡೆಯಲಾಗುತ್ತದೆ… ಮೆನೆ ಕಿರುಚದೆ ನಿಲ್ಲುತ್ತಾನೆ…

ರಾಮೆರಿ: (ಅಪ್ಪನ ಬಳಿ ಬಂದು) ಬಿಡ್ರೀ… ನಮ್ಮಪ್ಪ ಒಳ್ಳೆಯವನು… ಅವನಿಗೆ ಹೊಡೆಯಬೇಡಿ… ಬಿಡ್ರೀ…

ಸೈನಿಕರು ರಾಮೆರಿಯನ್ನು ದೂರಕ್ಕೆ ತಳ್ಳುತ್ತಾರೆ… “ಅಮ್ಮಾ…!” ಎಂದು ಚೀರುತ್ತಾ ಬೀಳುವ ರಾಮೆರಿ. ಚಾವಟಿಗಳ ಸದ್ದಿನ ಜೊತೆಗೆ ಗುಂಪಿನವರು ಒಟ್ಟಾಗಿ ಹೇಳುವ ಸಂಗೀತ ಶುರುವಾಗುತ್ತದೆ.

ದೃಶ್ಯ 5

ರಾಮೆರಿ: ಅಮ್ಮಾ,.. ಅಮ್ಮಾ…!

ನೆಫಿಸ್: (ಅವನ ಬಳಿಗೆ ಓಡಿ ಬಂದು) ಏನಾಯ್ತು ಕಂದಾ?

ರಾಮೆರಿ ಮಾತಾಡದೆ ಅಮ್ಮನನ್ನು ಅಪ್ಪಿ ಹಿಡಿದು ನಿಲ್ಲುವನು…

ನೆಫಿಸ್: ಏನಾಯ್ತು ಹೇಳೋ? ನಿಮ್ಮಪ್ಪ ಎಲ್ಲಿದ್ದಾರೆ? ಏನಾಯ್ತು ರಾಜಗೃಹದಲ್ಲಿ ಹೇಳೋ?

ರಾಮೆರಿ: ಅಪ್ಪ ಮಾತಾಡಿದ ಅಮ್ಮಾ… ಚೆಂದವಾಗಿ ಮಾತಾಡಿದ… ಎಷ್ಟು ಚೆಂದ ಅಂದರೆ ನಮ್ಮ ಜನರ ಕಣ್ಣಲ್ಲಿ ನೀರು ಬಂತು… ಆ ಅಧಿಕಾರಿಯ ಕಣ್ಣಲ್ಲಿ ಸಿಟ್ಟು ಬಂತು… ಆಮೇಲೆ… ಆಮೇಲೆ…!

ನೆಫಿಸ್: ಆಮೇಲೆ ಏನು?

ರಾಮೆರಿ: ಅಪ್ಪನನ್ನು… ಅಪ್ಪನನ್ನು… (ಅಳುತ್ತಾ) ಕಂಭಕ್ಕೆ ಕಟ್ಟಿ ಚಾವಟಿಯಲ್ಲಿ ಹೊಡೀತಾ ಇದ್ದರು ಅಮ್ಮಾ…!

ನೆಫಿಸ್: ಅಯ್ಯೋ ದೇವರೇ! ನಾನು ಹೇಳಿದ್ದೆ ಮೆನೆಪ್‍ಟಾಗೆ… ನಿನಗ್ಯಾಕೆ ಬೇಕು ಊರ ಉಸಾಬರಿ ಅಂತ… ಕೇಳ್ಲಿಲ್ಲ ಅವನು…! (ಅತ್ತಿತ್ತ ಓಡಾಡುತ್ತಾ) ನಾನೀಗ ಏನು ಮಾಡಲಿ? ಯಾರ ಬಳಿ ಹೋಗಿ ದುಃಖ ಹೇಳಲಿ?

ಆಗಲೇ ಪ್ರವೇಶಿಸುವ ಊರವರು…

ಬೆಕ್: ನೀನು ಅಳಬೇಡ ಅತ್ತಿಗೆ…! ಮೆನೆಪ್‍ಟಾಗೆ ಈ ಕೆಲಸ ಒಪ್ಪಿಸಿದವರು ನಾವು…! ಅವನು ನಮ್ಮ ನಾಯಕ…! ಅವನ ರಕ್ಷಣೆಯ ಜವಾಬ್ದಾರಿ ನಮ್ಮದು…!

ನೆಫಿಸ್: ಆ ರಾಕ್ಷಸರ ಕೈಯಿಂದ ಮೆನೆಯನ್ನು ಬಿಡಿಸಿ ತರೋದು ಸಾಧ್ಯವೇ?

ಥಾನಿಸ್: ಅವರು ರಾಕ್ಷಸರಾದರೆ ನಾವು ಮಹಾರಾಕ್ಷಸರು!

ಖ್ನೆಮ್: ನಮಗಾಗಿ ಅಣ್ಣಾ ಕಷ್ಟಕ್ಕೆ ಸಿಕ್ಕಿದ್ದಾನೆ.

ಥಾನಿಸ್: ನಾವು ಹಿಂದೇಟು ಹಾಕಿದರೆ ನಾವು ತಿನ್ನೋ ಅನ್ನ ಮಣ್ಣಾಗ್ತದೆ…

ಖ್ನೆಮ್: ಅಣ್ಣನನ್ನು ಬಿಡಿಸಿಕೊಳ್ಳದೆ ನಾವು ಸುಮ್ಮನಿರೋಲ್ಲ…

ಸೆಬೆಕ್ಕು: ಅವನು ಕೇಳಿದ್ದರಲ್ಲಿ ತಪ್ಪೇನಿತ್ತು? ಕಂದಾಯ ಕಡಿಮೆ ಮಾಡಿ ಅಂತ ಮನವಿ ಕೊಡೋದು ತಪ್ಪೇ?

ಬೆಕ್: ಅಣ್ಣನನ್ನು ಅವರು ಬಿಡದೆ ಇದ್ದರೆ ಕಂದಾಯ ಇರಲಿ, ರಾಜಗೃಹದವರು ತಿನ್ನುವುದಕ್ಕೆ ಕಾಳು ಕೂಡ ಸಿಗುವುದಿಲ್ಲ…

ಥಾನಿಸ್: ಅಣ್ಣನನ್ನು ಕಟ್ಟಿದ ಕಂಭಕ್ಕೆ ಆ ದೈತ್ಯ ಟೆಹುಟಿಯನ್ನೂ ಕಟ್ಟುತ್ತೇವೆ.

ಸೆಬೆಕ್: ಮೊದಲು ಮೆನೆಪ್‍ಟಾನ ಬಿಡುಗಡೆ ಆಮೇಲೆ ಬೇರೆಯ ಮಾತು…

ಬೆಕ್: ನಡೆಯಿರಿ… ನಾವೇನು ಮಾಡಬೇಕು ಎಂದು ತೀರ್ಮಾನಿಸೋಣ…

ಎಲ್ಲರೂ “ಮೆನೆಪ್‍ಟಾಗೆ ಜಯವಾಗಲಿ! ರೈತರ ನಾಯಕ ಮೆನೆ ಅಮರವಾಗಲಿ!” ಎಂದು ಕೂಗುತ್ತಾ ಹೋಗುತ್ತಾರೆ…

ದೃಶ್ಯ 6

ಮೆನೆಪ್‍ಟಾನನ್ನು ಕಟ್ಟಿರುವ ಜಾಗ… ಲಿಪಿಕಾರನಾಗಿದ್ದ ಇಫ್ಯುವರ್ ಪ್ರವೇಶ.

ಇಫ್ಯೂ: (ಭಟರು ತೂಕಡಿಸುವುದನ್ನು ಗಮನಿಸಿ) ಏಯ್! ಬಾರಯ್ಯ ಇಲ್ಲಿ…!

ಭಟ: (ಹತ್ತಿರ ಬಂದು) ಏನು ಸ್ವಾಮಿ?

ಇಫ್ಯು: ನಿಮ್ಮದೆಲ್ಲಾ ಊಟ ಆಯಿತಾ?

ಭಟ: ದೊಡ್ಡವರದ್ದಾದ ಮೇಲೆ ನಮ್ಮ ಊಟ ಸ್ವಾಮಿ!

ಇಫ್ಯು: ಹಾಗಾದರೆ ನನಗಾಗಿ ಕುಡಿಯೋದಕ್ಕೆ ಏನಾದರೂ ತಾ…?

ಭಟ: ದ್ರಾಕ್ಷರಸ ತರಲಾ?

ಇಫ್ಯು: ಲಿಪಿಕಾರನಿಗೆ ಆ ಭಾಗ್ಯ ಇಲ್ಲ… ನನಗೆ ಖಿವವ ಸಾಕು… ಜೊತೆಗೆ ಬಾಯಾಡಿಸೋಕೆ ಇನ್ನೇನಾದರೂ ತಾ…

ಭಟ ಹೋಗುತ್ತಾನೆ… ಇಫ್ಯುವರ್ ತಟ್ಟನೆ ಮೆನೆಯ ಬಳಿಗೆ ಹೋಗುತ್ತಾನೆ…

ಇಫ್ಯು: ಮೆನೆ… ನೀನು ಇಷ್ಟು ಚೆನ್ನಾಗಿ ಮಾತಾಡ್ತೀಯ ಅಂತ ನನಗೆ ಗೊತ್ತಿರಲಿಲ್ಲ…

ಮೆನೆ: ಇಫ್ಯುವರ್… ನಿನ್ನ ಬಳಿ ನನ್ನದೊಂದೇ ಬೇಡಿಕೆ… ನನ್ನ ಮಗನಿಗೆ ಓದು ಬರಹ ಕಲಿಸು…

ಇಫ್ಯೂ: ಸಾವಿನ ಬಾಗಿಲಲ್ಲಿ ನಿಂತರೂ ನಿನ್ನ ಹಳೆಯ ಬೇಡಿಕೆ ಬಿಡಲಿಲ್ಲವಲ್ಲಾ… ನಾಳೆ ಹೇಗೋ ಏನೋ ನೋಡುವ…!

ಭಟ ಎರಡು ಪಾತ್ರೆಗಳನ್ನು ತಂದುಕೊಡ್ತಾನೆ…

ಇಫ್ಯು: (ಪಾತ್ರೆ ಪಡೆದು) ಭಟ, ಟೆಹುಟಿ ಸಾಹೇಬರು ಕರೆದಂತಾಯಿತು… ಒಮ್ಮೆ ನೋಡಿ ಬಾ… ನೀನು ಬರುವವರೆಗೆ ನಾನು ಇಲ್ಲಿರುತ್ತೇನೆ ಕಾವಲಿಗೆ…

ಭಟ ಮರಳಿ ಎತ್ತಲೋ ಸಾಗುತ್ತಾನೆ…

ಇಫ್ಯು: (ಮೆನೆಗೆ) ಕೊಂಚ ಖಿವವ ಕುಡಿ… ಶಕ್ತಿ ಬರಲಿ ದೇಹಕ್ಕೆ…

ಮೆನೆ: ನನಗ್ಯಾಕೆ ಬೇಕು ಶಕ್ತಿ…?

ಇಫ್ಯು: ನಾಳೆ ಆಗಬಹುದಾದ ಯುದ್ಧಕ್ಕೆ ದೇಹ ಸಿದ್ಧವಾಗಿರಬೇಕಲ್ವಾ?

ಮೆನೆ: ಯುದ್ಧ? ನಾಳೆ?… ಹಹ್ಹ… ನನಗೆ ಅಂತಹ ಭ್ರಮೆ ಇಲ್ಲ…

ಇಫ್ಯು: ಹೂಂ… ನಿನ್ನ ಮಾತಿನಿಂದ ಹಳ್ಳಿಯಲ್ಲಿ ಎಂತಾ ಶಕ್ತಿ ಸಂಚಲನ ಆಗಿದೆ ಅಂತ ಗೊತ್ತಿಲ್ಲ… ಭೂಮಾಲೀಕರೆಲ್ಲಾ ಹೆದರಿ ಊರು ಬಿಟ್ಟಿದ್ದಾರೆ… ಹಳ್ಳಿಗೆ ಹಳ್ಳಿಯೇ ಟೆಹುಟಿಯ ಮೇಲೆ ಬೀಳುವುದಕ್ಕೆ ಬರಲಿದೆ…

ಮೆನೆ: ಹೌದೇ? ಹಾಗಾದರೆ ನಮ್ಮ ಜನರಿಗೆ ಹಾಗೆಲ್ಲಾ ಮಾಡದಿರಿ ಎಂದು ಹೇಳಬೇಕಲ್ಲ ನೀವು…!

ಇಫ್ಯು: ಅದು ಜನಸಂತೆ ಮೆನೆಪ್‍ಟಾ! ಅದು ಯಾರ ಮಾತನ್ನೂ ಕೇಳುವುದಿಲ್ಲ… ತನಗೆ ಬೇಕಾದ್ದನ್ನು ತೆಗೆದುಕೊಳ್ಳದೆ ಉಳಿಯುವುದಿಲ್ಲ… ಕುಡಿ, ಕುಡಿ… ಬೇಗ, ಬೇಗ..!

“ಮೆನೆಪ್ಟಾಗೆ ಜಯವಾಗಲಿ” ಎನ್ನುವ ಕೂಗು ಕೇಳಿ ಬರುತ್ತದೆ… ಇಫ್ಯುವರ್ ಅವಸರದಿಂದ ಮರೆಗೆ ಸಾಗುತ್ತಾನೆ.

ದೃಶ್ಯ 7

ಟೆಹುಟಿ ಅದೇ ಜಾಗಕ್ಕೆ ಪ್ರವೇಶಿಸುತ್ತಾನೆ… ಜನರ ಕೂಗು ಕೇಳುತ್ತಲೇ ಇದೆ…

ಟೆಹುಟಿ: ಏನು? ಹಳ್ಳಿಗೆ ಹಳ್ಳಿಯೇ ಬರುತ್ತಾ ಇದೆಯೇ?… ಅದು, ಈ ಕಳ್ಳ ಕೊರಮನನ್ನು ಬಿಡಿಸಿಕೊಳ್ಳುವುದಕ್ಕೆ…? (ವೇದಿಕೆಗೆ ಬಂದು) ಬರಲಿ, ಬರಲಿ… ಈ ಟೆಹುಟಿಯ ಆರ್ಭಟ ಬಾಯಿಮಾತಿನದ್ದಲ್ಲ ಅಂತ ಅವರಿಗೆ ತೋರಿಸೋಣ… ಯಾರಲ್ಲಿ ಬಿಸಿ ನೀರನ್ನು ಪ್ರಾಕಾರದ ಗೋಡೆಯಿಂದ ಸುರಿಯಿರಿ…! ಕಾವಲು ಭಟರು ಬಿಲ್ಲು ಬಾಣ ಹಿಡಿದು ನಿಲ್ಲಿರಿ…! ಆ ಹಳ್ಳಿಗರಲ್ಲಿ ಒಬ್ಬನಿಗೂ ಒಳಗೆ ಪ್ರವೇಶ ಸಿಗಬಾರದು…!

ಗೇಬು: (ಓಡಿ ಬರುತ್ತಾ) ಟೆಹುಟಿಯವರೇ… ಊರಿನವರೆಲ್ಲಾ ಒಟ್ಟಿಗೆ ಬಂದರೆ ನಿಭಾಯಿಸುವುದು ಕಷ್ಟ…

ಟೆಹುಟಿ: ಯಾವ ಕಷ್ಟವೂ ಇಲ್ಲ… ಎಂತೆಂತಹ ಯುದ್ಧ ನೋಡಿದವನಿಗೆ ಈ ಹಳ್ಳಿಗರು ಏನು ಮಾಡುತ್ತಾರೆ…?

ಹೊರಗೆ “ಮೆನೆಪ್‍ಟಾಗೆ ಜಯವಾಗಲಿ!” ಎಂಬ ಬೃಹತ್ ಕೂಗು ಕೇಳುತ್ತದೆ…

ಗೇಬು: ಟೆಹುಟಿ… ಅದು ಜನಪ್ರವಾಹ! ಅವರ ಮುಂದೆ ನಿಮ್ಮ ಯುದ್ಧ ವಿದ್ಯೆಯು ಕೆಲಸಕ್ಕೆ ಬರುವುದಿಲ್ಲ…!

ಟೆಹುಟಿ: (ಅರೆಕ್ಷಣ ಯೋಚಿಸುತ್ತಾನೆ) ಈ ಕೊಬ್ಬಿದ ಹಂದಿಗಳ ಹುಟ್ಟಡಗಿಸಬೇಕು…! ತಡಮಾಡಬಾರದು…!

ಗೇಬು: ಟೆಹುಟಿ, ಹಳ್ಳಿಯ ಜನ ಹುಲ್ಲಿನ ಬಣವೆ ಇದ್ದ ಹಾಗೆ… ಹಸಿಯಾಗಿದ್ದರೆ ಎತ್ತು ದನ ಕರುಗಳಿಗೆ ಆಹಾರ… ಒಣಗಿದರೆ ಒಂದು ಕಿಡಿ ಸಾಕು… ಎಲ್ಲವೂ ಬೆಂಕಿ-ಬೂದಿ…

ಜನರ ಸದ್ದು ಹತ್ತಿರಕ್ಕೆ ಬರುತ್ತಾ ಇದೆ ಎನಿಸುತ್ತದೆ…

ಗೇಬು: ಟೆಹುಟಿ, ನಿಮ್ಮ ಜೀವದ ಮೇಲೆ ಆಸೆ ಇದ್ದರೆ ನನ್ನ ಮಾತು ಕೇಳಿ…! ಹಳ್ಳಿಗರು ತರುವುದು ಗುದ್ದಲಿ, ಪಿಕಾಸಿ, ಸುತ್ತಿಗೆ…! ಅವುಗಳನ್ನ ಎದುರಿಸುವುದನ್ನ ನಿಮಗೆ ಯಾವ ಯುದ್ಧ ಗುರುವು ಕಲಿಸಿರುವುದಿಲ್ಲ…! ಸಾಯುವುದಕ್ಕಿಂತ ಸೋತೆವು ಎಂದುಕೊಂದು ಜೀವ ಉಳಿಸಿಕೊಳ್ಳುವುದೇ ಸರಿಯಾದ ಮಾರ್ಗ…!

ಟೆಹುಟಿ: (ದನಿ ಬಂದ ಕಡೆ ನೋಡುತ್ತಾ) ಹೇಗೆ?

ಗೇಬು: ಪ್ರಾಕಾರದ ಹಿಂದೆ ಗುಪ್ತದ್ವಾರವಿದೆ…! ನೇರ ನೀಲ ನದಿಗೆ ಹೋಗುತ್ತದೆ…! ನಮ್ಮ ದೋಣಿಯೂ ಅಲ್ಲೇ ಇದೆ…!

ಟೆಹುಟಿ: ಹಾಗಾದರೆ ನಡೆಯಿರಿ… ಮೊದಲು ಇಲ್ಲಿಂದ ತಪ್ಪಿಸಿಕೊಳ್ಳೋಣ…

ಎಂದು ಇಬ್ಬರೂ ಹೊರಡುತ್ತಾರೆ.

ದೃಶ್ಯ 8

ಆಗಲೇ ಅವರಿಬ್ಬರನ್ನೂ ಮುಚ್ಚುವಂತೆ ಜನರು “ಮೆನೆಪ್‍ಟಾಗೆ ಜಯವಾಗಲಿ” ಎಂದು ಕೂಗುತ್ತಾ ಬರುತ್ತಾರೆ. ಹಳ್ಳಿಗರು ಗೋಡೆ ಹಾರಿದಂತೆ ಒಳಗೆ ಬರುತ್ತಾರೆ. ಹಲವರು ಮೆನೆಪ್‍ಟಾನನ್ನು ಕಟ್ಟಿದ ಕಂಭದ ಬಳಿಗೆ ಧಾವಿಸುತ್ತಾರೆ. ಅವರ ಜೊತೆಗೆ ಇಫ್ಯುವರ್ ಸೇರಿಕೊಳ್ಳುತ್ತಾನೆ. ಅವರೆಲ್ಲರೂ ಮೆನೆ ಬೀಳದಂತೆ ಹಿಡಿದುಕೊಳ್ಳುತ್ತಾರೆ. ಜನರು “ಮೆನೆಪ್‍ಟಾಗೆ ಜಯವಾಗಲಿ” ಎಂದು ಚೀರುತ್ತಿದ್ದಾರೆ.

ಬೆಕ್: ಆ ದುರಂಹಕಾರಿ ಟೆಹುಟಿ ಎಲ್ಲಿದ್ದಾನೆ ಹುಡುಕಿ? ಆ ಕೊಬ್ಬಿನ ಮೂಟೆ ಗೇಬುವನ್ನು ಎಳೆದು ತನ್ನಿ…!

ಮೆನೆ: ಬೇಡ… ಯಾರಿಗೂ ಹಿಂಸೆ ಮಾಡದಿರಿ… ಹಿಂಸೆಯಿಂದ ಏನನ್ನೂ ಗೆಲ್ಲಲಾಗದು…

ಸೆಬೆಕ್ಕು: ನೀನು ಮಾತಾಡಬೇಡ… ಸುಮ್ಮನಿರು ಮೆನೆ…

ಬೆಕ್: ಆ ಹಿಂಸ್ರ ಪಶುಗಳು ನಿಮಗೆ ಕೊಟ್ಟ ಚಾಟಿ ಏಟಿನ ಲೆಕ್ಕ ನಾವು ಪಡೆಯಲೇಬೇಕು.

ಮೆನೆ: ನಮ್ಮವರು ಯಾರಿಗೂ ಏನೂ ಆಗಲಿಲ್ಲ ತಾನೇ?

ಖ್ನೆಮ್: (ಮೆನೆಯ ತೋಳು ಹಿಡಿದು ಕರೆತರುತ್ತಾ) ನಮ್ಮ ಮಗ್ಗದವನಿಗೆ ಬಾಣ ತಗುಲಿದೆ.

ಮೆನೆ: ಹಾಗಾದರೆ ಅವನಿಗೆ ಮೊದಲು ಚಿಕಿತ್ಸೆ ಆಗಬೇಕು…

ಇಫ್ಯು: ಅದಕ್ಕೆ ವ್ಯವಸ್ಥೆ ಆಗಿದೆ…

ಸೆಬೆಕ್: ಮೊದಲು ಮನೆಯತ್ತ ನಡಿ ಮೆನೆ… ನಿನ್ನ ಮಡದಿ ನಿನಗಾಗಿ ಕಾಯುತ್ತಾ ಇದ್ದಾಳೆ…

ಮೆನೆ ಉಳಿದವರ ಜೊತೆಗೆ ನಿಧಾನವಾಗಿ ನಡೆಯುತ್ತಾನೆ… ಜನರು ಅವನ ಜೊತೆಗೆ ಸಾಗುವಾಗ ಹಾಡು ಆರಂಭವಾಗುತ್ತದೆ…

ಎದ್ದೇ ಬಿಟ್ಟರು ನಮ್ಮ ಜನ…!

            ಗೆಲ್ಲಲೇಬೇಕು ಹಳ್ಳಿ ಜನ…!

ದುಡ್ಡಿನ ಹಮ್ಮಿನ ದೊಡ್ಡ ಜನ…!

ಸೋಲಲೇಬೇಕು ಒಂದು ದಿನ…!

ಒಟ್ಟಾಗಿಹರು ನಾಡಿಗರು…!

ದೊಡ್ಡವರೆಲ್ಲಾ ನಡುಗಿಹರು…!

ನಾಳಿನ ದೇವರು ಬರುತಿಹನು…!

ನಮ್ಮದೇ ರಾಜ್ಯವ ಕಟ್ಟುವನು…!

ದೃಶ್ಯ 9

ಹಾಡು ಮುಗಿಯುವ ಹೊತ್ತಿಗೆ ಹಳ್ಳಿಗರೆಲ್ಲಾ ಒಂದೆಡೆ ಸೇರಿದ್ದಾರೆ. ಅವರ ಎದುರಿಗೆ ಮೆನೆಪ್‍ಟಾ, ಸೆಬೆಕ್, ಬೆಕ್ ಮುಂತಾದವರು ನಿಂತಿದ್ದಾರೆ. ಅಲ್ಲಿ ಮೌನವಿದೆ.

ಮೆನೆ: ಆಯಿತು… ಯಾರೂ ಮಾತಾಡುತ್ತಾ ಇಲ್ಲ… ನಾನೇ ಆರಂಭಿಸುತ್ತೇನೆ. ಮೊದಲು ನಮ್ಮ ಮಗ್ಗದವ ಹೇಗಿದ್ದಾನೆ ತಿಳಿಸಿ?

ಸೆಬೆಕ್: ಅವನ ಗಾಯಗಳಿಗೆ ಪಟ್ಟಿ ಕಟ್ಟಲಾಗಿದೆ. ಆದರೆ ಉಳಿಯುವುದು ಕಷ್ಟ.

ಮೆನೆ: (ನಿಟ್ಟುಸಿರಿಡುತ್ತಾನೆ) ಅವನ ಮಕ್ಕಳು ಸಣ್ಣವರು. ಅವನ ಹೆಂಡತಿಗೆ ಧೈರ್ಯ ಹೇಳಬೇಕು. ಅವನು ಸಂಪೂರ್ಣ ಗುಣವಾಗುವವರೆಗೆ ಅವನ ಕುಟುಂಬದ ರಕ್ಷಣೆ ನಮ್ಮದು.

ಬಟಾ: ಆಗಲಿ ಅಣ್ಣಾ…

ಮೆನೆ: ಊರ ಹಿರಿಯರು ಈ ಕಡೆ ಬನ್ನಿ

ಬೆಕ್: ಅದಕ್ಕೂ ಗಹನವಾದ ವಿಷಯ ಮತ್ತೊಂದಿದೆ.

ಮೆನೆ: ಏನು?

ಬೆಕ್: ರಾಜಗೃಹದ್ದು…

ಮೆನೆ: ಅದಕ್ಕೇನಾಗಿದೆ?

ಬೆಕ್: ಪ್ರಾಂತಪಾಲರಿಲ್ಲ, ಕಾವಲಿನವರು ಇಲ್ಲ ಅಂದ್ರೆ ಕಳ್ಳಾಟ ಹೆಚ್ಚಾಗ್ತದೆ. || ಜನ ಕೂಡ ದಂಗಾಗಿದ್ದಾರೆ. ಫ್ಯಾರೋನ ದಂಡೇ ನಮ್ಮ ಮೇಲೆ ಬೀಳಬಹುದು ಎಂಬ ಭಯವಿದೆ ಅವರಿಗೆ.

ಸೆಬೆಕ್: ಅಯ್ಯೋ ಬೆಕ್… ರಾಜಧಾನಿಯಲ್ಲಿ ದಂಡೇ ಇಲ್ಲ. ಅದನ್ನು ಉತ್ತರದ ಗಡಿಗೆ ಕಳಿಸಲಾಗಿದೆ. ಸೈನ್ಯ ಈಗ ರಾಜ ಗುರುವಿನ ಹಿಡಿತದಲ್ಲಿದೆ…

ಥಾನಿಸ್: ಹಾಗಾದರೆ ನಮಗೆ ಯಾವ ಭಯವೂ ಇಲ್ಲ ಎಂದಾಯಿತು…

ಮೆನೆ: ಭಯಗಳ ಮಾತು ಆಮೇಲೆ ಮೊದಲು ಈ ಬಗ್ಗೆ ನಮ್ಮ ದೇವಸ್ಥಾನದ ಧರ್ಮದರ್ಶಿಗಳು ಏನೆಂದರು ಹೇಳಿ?

ಬಟಾ: “ಯಾರು ಆಳಿದರೇನು? ದೇವರಿಗೆ ಹಿರಿತನ ಕೊಟ್ಟರೆ ಸಾಕು” ಅಂತ ಗೊಣಗುತ್ತಿದ್ದನಂತೆ…!

ಇಫ್ಯುವರ್: (ನಗುತ್ತಾ) ಅವನು ಹಳೆಯ ದಾಖಲೆಯನ್ನೆಲ್ಲಾ ನೋಡಿದನಂತೆ… ಹಿಂದೆ ಇಂಥಾ ಪ್ರಸಂಗ ಆಗಿಲ್ಲ ಅಂತ ಇದ್ನಂತೆ…!

ಸೆಬೆಕ್: ಹಾಗಾದರೆ ಫ್ಯಾರೋನ ತೀರ್ಪು ಬರುವವರೆಗೆ ನಿಶ್ಚಿಂತೆ…! (ಎಲ್ಲರ ನಗು)

ಖ್ನೆಮ್: ನಾನೊಂದು ಮಾತಾಡಬಹುದೇ?

ಮೆನೆ: ಹೇಳು ಖ್ನೆಮ್…

ಖ್ನೆಮ್: ನಮ್ಮ ನೀರಾನೆ ಪ್ರಾಂತಕ್ಕೆ ಹೊರಗಿನ ಪ್ರಾಂತಪಾಲರು ಬೇಡವೇ ಬೇಡ…

(ಜನರೊಂದಿಗೆ ಕೂಗುತ್ತಾನೆ)

ಖ್ನೆಮ್: ಮೆನೆ ಅಣ್ಣಾ – ನಮ್ಮ ನಾಯಕ… ಅವನೇ ನಮ್ಮ – ಪ್ರಾಂತಪಾಲ!

ತಟ್ಟನೆ ಖ್ನೆಮ್ ಮೆನೆಪ್‍ಟಾ ಬಳಿ ಬಂದು ಮಂಡಿಯೂರಿ ಕೂತು ಅವನ ಕೈ ಹಿಡಿದು ಚುಂಬಿಸುತ್ತಾನೆ.

ಖ್ನೆಮ್: ಈ ಮಾತಿಗೆ ನೀನು ಒಪ್ಪಲೇ ಬೇಕು ಅಣ್ಣಾ!

ಬೆಕ್: ಹೌದು… ನಮ್ಮ ಪ್ರಾಂತಪಾಲಕ ಇನ್ನು ಮುಂದೆ ಮೆನೆಪ್‍ಟಾ ಅಣ್ಣಾ…

ಗುಂಪು: ಹೌದು! ಮೆನೆಪ್‍ಟಾಗೆ ಜಯವಾಗಲಿ…! ಮೆನೆಪ್‍ಟಾ ನಮ್ಮ ನಾಯಕ…!

ಗುಂಪಿನಲ್ಲಿ ಇರುವ ನೆಫಿಸ್‍ ಮತ್ತು ರಾಮೆರಿಗೆ ಸಂಭ್ರಮ… ಅವರು ಅವಸರದಿಂದ ಮೆನೆಪ್‍ಟಾ ಬಳಿಗೆ ಬರುತ್ತಾರೆ.

ಮೆನೆ: ರಾಮೆರಿ, ನೆಫಿಸ್… ಈ ಆಟದಲ್ಲಿ ನೀವೂ ಸೇರುವುದು ಬೇಡ… ದೂರ ಇರಿ.

ಬಟಾ: ನಿನ್ನ ಮಡದಿ, ನಿನ್ನ ಮಗು ನಿನ್ನ ಬಳಿ ಅಲ್ಲದೆ ಬೇರೆಲ್ಲಿರಬೇಕು ಮೆನೆ ಅಣ್ಣಾ?

ಮೆನೆ: ಅಧಿಕಾರ ಎಂಬುದು ಎಂತಹವರನ್ನು ದಾರಿ ತಪ್ಪಿಸುತ್ತದೆ. ನನ್ನ ಮನೆಯವರಿಗೆ ಈ ಅಧಿಕಾರದ ಆಟದಲ್ಲಿ ಪಾಲೂ ಬೇಡ. ನನಗೂ ಯಾವುದೇ ಅಧಿಕಾರ ಬೇಡ.

ಬೆಕ್: ಹಾಗಾದರೆ ಪ್ರಾಂತವನ್ನು ನಡೆಸುವುದು ಹೇಗೆ?

ಮೆನೆಪ್‍ಟಾ ದೂರಕ್ಕೆ ಹೋಗುತ್ತಾನೆ.

ಸೆಬೆಕ್: (ಹತ್ತಿರ ಬರುತ್ತಾನೆ) ಮೆನೆ, ನೀನು ಈ ಕೆಲಸ ಒಪ್ಪಿಕೊಳ್ಳಬೇಕು. ಅಥವಾ ಪ್ರಾಂತವನ್ನು ನಡೆಸುವುದು ಹೇಗೆ ಎಂದು ನೀನೇ ಹೇಳಬೇಕು…

ಮೆನೆ: (ಉಳಿದವರ ಕಡೆಗೆ ತಿರುಗಿ) ನೀವು ನನ್ನ ಮಾತು ಕೇಳುತ್ತೀರಾ?

ಬೆಕ್: ಮೆನೆಪ್‍ಟಾ – ನಮ್ಮ ನಾಯಕ!  ಅವನ ಮಾತಿನಂತೆ – ನಾವು ನಡೆಯುತ್ತೇವೆ!

ಮೆನೆ: ಹಾಗಾದರೆ ಕೇಳಿ… ನಮ್ಮಲ್ಲಿ ಸಾಮಂತ ಗೀಮಂತನ ಅಗತ್ಯವಿಲ್ಲ. ಆಡಳಿತ ವಿದ್ಯೆಯಲ್ಲಿ ನುರಿತವರು ಆ ಕೆಲಸ ಮಾಡಲಿ. ಊರಿನ ಹಿರಿಯರ ಸಮಿತಿ ಮಾಡೋಣ. ಸೆಬೆಕ್, ಹೆಮ್‍ಟಿ, ಇಫ್ಯುವರ್, ಥಾನಿಸ್ ಈ ಸಮಿತಿಯಲ್ಲಿರಲಿ. ಏನಂತೀರಿ?

ಗುಂಪು: ಆಗಬಹುದು. ಆಗಬಹುದು

ಮೆನೆ: ಇಫ್ಯುವರ್‍ಗೆ ಅಕ್ಷರವೂ ಬರುವುದರಿಂದ ಅವನು ಲಿಪಿಕಾರ ಆಗಿರಲಿ. ಖ್ನೆಮ್ ನಮ್ಮ ಸೇನಾ ದಳದ ಮುಖ್ಯಸ್ಥ. ಬೆಕ್ ಸೇನೆಯ ಉಸ್ತುವಾರಿ ನೋಡಿಕೊಳ್ಳಲಿ

ಗುಂಪು: ಆಗಬಹುದು, ಆಗಬಹುದು.

ಬೆಕ್: ನಮ್ಮ ಸೇನೆಗೆ ಬೇಕಾದ ಆಯುಧ ಒದಗಿಸುವ ಜವಾಬ್ದಾರಿ ನನ್ನದು.

ಗುಂಪು: ಬೆಕ್‍ಗೆ ಜಯವಾಗಲಿ! ಮೆನೆಪ್‍ಟಾಗೆ ಜಯವಾಗಲಿ!

ಮೆನೆ: ಸಾಮಂತರ ಮನೆಯಲ್ಲಿ ಹಾಗೂ ಭೂಮಾಲೀಕರ ಮನೆಯಲ್ಲಿ ಇರುವ ಎಲ್ಲಾ ದಾಸ ದಾಸಿಯರಿಗೆ ಇಂದೇ ಬಿಡುಗಡೆ. ಸಾಮಂತ ಮತ್ತು ಭೂ ಮಾಲೀಕರ ಎಲ್ಲಾ ಭೂಮಿ, ರಾಸುಗಳನ್ನು ದಾಸ ದಾಸಿಯರಿಗೆ ಹಂಚಿಬಿಡೋಣ

ಗುಂಪು: ಮೆನೆಪ್‍ಟಾಗೆ ಜಯವಾಗಲಿ! ನೀರಾನೆ ಪ್ರಾಂತ್ಯದ ಹೊಸ ಆಡಳಿತಕ್ಕೆ ಜಯವಾಗಲಿ!

ಥಾನಿಸ್: ಹಾಗಾದರೆ ನಾಳೆಯಿಂದ ಮೆನೆ ಅಣ್ಣ ಸಾಮಂತರ ಮನೆಯಲ್ಲಿ ವಾಸಿಸಬೇಕು…

ಗುಂಪು: ಹೌದು ಹೌದು! ನಮ್ಮ ನಾಯಕರು ಸಾಮಂತರ ಮನೆಯಲ್ಲಿ ವಾಸ ಮಾಡಬೇಕು…

ಮೆನೆ: (ಮಡದಿಯ ಬಳಿ ಬಂದು ನಿಂತು) ನಾನು – ನನ್ನ ಮಡದಿ ನಮ್ಮ ಗುಡಿಸಲಿನಲ್ಲಿಯೇ ವಾಸಿಸುತ್ತೇವೆ. ಸಾಮಂತ ಮಂದಿರ ಇನ್ನು ಮುಂದೆ ನೀರಾನೆ ಪ್ರಾಂತದ ಆಡಳಿತ ಮಂದಿರ. ಅಲ್ಲಿ ನಮ್ಮ ಲಿಪಿಕಾರ ಮತ್ತು ಲೆಕ್ಕಿಗ ಇರಲಿ… ಊರ ಹಿರಿಯರ ಸಮಿತಿ ಪ್ರತಿ ದಿನ ಸಾಮಂತರ ಮನೆಯಲ್ಲಿ ಸಭೆ ಸೇರಿ ಆಡಳಿತ ಸರಿಯಾಗಿದೆಯೇ ಎಂದು ನೋಡಲಿ.

ಗುಂಪು: ಮೆನೆಪ್‍ಟಾಗೆ ಜಯವಾಗಲಿ! ನೀರಾನೆಯ ಹೊಸ ಆಡಳಿತಕ್ಕೆ ಜಯವಾಗಲಿ!

ಗುಂಪಿನ ನಡುವಿನಿಂದ ಬರುವ ನೆಫರೂರ.

ನೆಫರೂರ: ನಮಸ್ಕಾರ ಮೆನೆಪ್‍ಟಾ! ನನ್ನ ಹೆಸರು ನೆಫರೂರ. ನಾನು ಸಾಮಂತರ ಮನೆಯ ದಾಸಿಯರ ಮುಂದಾಳು. ಇಷ್ಟೂ ದಿನ ನಾವು ಸಾಮಂತ ಮಂದಿರದಲ್ಲಿ ನರ್ತನ ಮಾಡಿ ಬದುಕುತ್ತಾ ಇದ್ದವರು. ಈಗ ನಾವೇನು ಮಾಡಬೇಕು? ನಮ್ಮ ನೃತ್ಯ ನೋಡುವವರು ಯಾರು? ಊಟ ಹಾಕುವವರು ಯಾರು?

ಮೆನೆ ಉಳಿದವರ ಕಡೆ ನೋಡುತ್ತಾನೆ.

ಹಿರಿಯ: ಅವರು ಸಾಮಂತರ ಮನೆಯಲ್ಲಿಯೇ ಇರಲಿ, ಮೆನೆಪ್‍ಟಾ!… ನೃತ್ಯ ನೋಡುವುದಕ್ಕೆ ನಾವು ಇದ್ದೇವಲ್ಲಾ…?

ಮೆನೆ: ಇಲ್ಲಾ… ಇನ್ನು ಮುಂದೆ ಜನಮಂದಿರದಲ್ಲಿ ನೃತ್ಯಗೋಷ್ಟಿ, ಪಾನಗೋಷ್ಟಿ ಇರುವುದಿಲ್ಲ. ನೆಫರೂರ, ನಿಮಗೂ ಎಲ್ಲ ದಾಸ ದಾಸಿಯರಿಗೆ ಕೊಡುವಂತೆ ಮನೆಗಳನ್ನು ಕೊಡುತ್ತೇವೆ. ಯಾರೂ ದಿಕ್ಕಿಲ್ಲದವರಿಗೆ ಜನಮಂದಿರದ ದಾಸ್ತಾನಿನಲ್ಲಿ ಇರುವ ದವಸ ಧಾನ್ಯ ಕೊಡುತ್ತೇವೆ.

ಬಟಾ: (ಗುಂಪಿನಿಂದ ಬರುತ್ತಾ) ಮೆನೆ ಅಣ್ಣಾ… ಊರಿನ ಕಾಲುವೆಯಲ್ಲಿ ನೀರು ಸರಿಯಾಗಿ ಬರ್ತಾ ಇಲ್ಲ… ಹೂಳು ತುಂಬಿದೆ. ಅದನ್ನ ಮೊದಲು ಸರಿ ಮಾಡಿಸು ದೊರೆ.

ಮೆನೆ: ಕಾಲುವೆ ದುರಸ್ತಿಯ ಕೆಲಸ ನಾಳೆಯಿಂದಲೇ ಶುರು ಮಾಡೋಣ. ಮನೆಗೊಬ್ಬರಂತೆ ಆಳನ್ನು ಕಳಿಸಿ. ಕೆಲಸಕ್ಕೆ ಬಂದವರಿಗೆಲ್ಲಾ ಕೂಲಿಗೆ ದವಸ ಧಾನ್ಯ ನೀಡಲಾಗುತ್ತದೆ.

ಥಾನಿಸ್: ನಮ್ಮದೇ ಕೆಲಸಕ್ಕೆ ನಮಗೆ ಯಾಕೆ ದವಸ ಧಾನ್ಯ!

ಮೆನೆ:  ಬೆವರಿಗೆ ತಕ್ಕ ಕೂಲಿ ಕೊಡುವುದೇ ಈ ನಮ್ಮ ಹೊಸ ಸರ್ಕಾರದ ನೀತಿ…

ಬಟಾ: ಹಾಗಾದರೆ ದೇವಾಲಯದ ಖರ್ಚಿಗೆ ಏನು ದಾರಿ?

ಮೆನೆ: ದೇವಾಲಯದ ಖರ್ಚಿಗೆ ಬೇಕಾದ್ದನ್ನು ಜನಮಂದಿರವೇ ಕೊಡುತ್ತದೆ. ನಿಮ್ಮ ಪೂಜೆ, ಉತ್ಸವಗಳಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ.

ಬೆಕ್: ನಾಯಕರೇ, ಸಾಮಂತರು ಹಾಗೂ ಭೂಮಾಲೀಕರು ಬಿಟ್ಟುಹೋಗಿರುವ ಬಟ್ಟೆ ಬರೆ, ಒಡವೆಗಳಿಗೆ ಏನು ಮಾಡುವುದು?

ಮೆನೆ: ಅದೆಲ್ಲವನ್ನೂ ಲೆಕ್ಕ ಹಾಕಿ ಭದ್ರವಾಗಿ ಜನ ಮಂದಿರದಲ್ಲಿ ಒಂದು ಪೆಟ್ಟಿಗೆಯಲ್ಲಿರಿಸಿ. ಅವರು ಹಿಂದಕ್ಕೆ ಬಂದರೆ ಹಿಂದಿರುಗಿಸೋಣ. ಇಲ್ಲವಾದರೆ ಏನು ಮಾಡಬೇಕು ಎಂದು ನಂತರ ಆಲೋಚಿಸೋಣ.

ನೆಫಿಸ್: ಮೆನೆ, ಭೂಮಾಲೀಕರ ರಾಸುಗಳನ್ನ ಹಂಚುವಾಗ ನಮಗೆ ಒಂದು ಜೋಡಿ ಎತ್ತುಗಳನ್ನು ಕೊಡಿಸು…

ಮೆನೆ: ಭೂ ಮಾಲೀಕರ ಎಲ್ಲಾ ರಾಸುಗಳನ್ನು ದಾಸ ದಾಸಿಯರಿಗೆ ಹಂಚಲಾಗುತ್ತದೆ. ನಮಗೆ ಬೇಕಾದರೆ ಜಾತ್ರೆಯಲ್ಲಿ ಕೊಳ್ಳೋಣ.

ನೆಫಿಸ್: ಆದರೆ…?

ಮೆನೆ: ಮೆನೆಪ್‍ಟಾನ ಮನೆಯವರು ಎಂದು ಯಾರಿಗೂ ಯಾವುದೇ ವಿಶೇಷ ಸವಲತ್ತು ಸಿಗುವುದಿಲ್ಲ. ನಾನು ನನ್ನ ಮನೆಯವರು ಸಹ ಇಲ್ಲಿ ಕೇವಲ ಸೇವಕರು.

ನೆಫಿಸ್ ಮುನಿಸಿಕೊಂಡಂತೆ ರಾಮೆರಿಯ ಜೊತೆಗೆ ಹೊರಡುತ್ತಾಳೆ.

ಮೆನೆ: (ಅವರನ್ನು ಗಮನಿಸಿ) ಮತ್ತೊಂದು ಮುಖ್ಯ ವಿಷಯ. ನಮಗಾರಿಗೂ ಓದು ಬರಹ ಬರುವುದಿಲ್ಲ. ನಮ್ಮ ಮಕ್ಕಳು ಹಾಗಾಗ ಬಾರದು. ಇಫ್ಯುವರ್ ಅಯ್ಯನವರೇ, ಜನಮಂದಿರದಲ್ಲಿ ನಮ್ಮ ಮಕ್ಕಳಿಗೆ ಅಕ್ಷರ ಕಲಿಸಿ. ಮುಂಬರುವ ದಿನದಲ್ಲಿ ಪ್ರತ್ಯೇಕ ಶಾಲೆಯನ್ನು ಕಟ್ಟೋಣ.

ಇಫ್ಯು: ಮಕ್ಕಳಿಗೆ ಅಕ್ಷರ ಕಲಿಸುವುದಕ್ಕೆ ಏನು ತೊಂದರೆ. ಇಂದಿನಿಂದಲೇ ಕಲಿಸುತ್ತೇನೆ.

ಬೆಕ್: ನಾಯಕರೇ, ಮತ್ತೊಂದು ಮನವಿ…

ಮೆನೆ: ಬೆಕ್, ಮೊದಲಿಗೆ ನನ್ನನ್ನು ನಾಯಕ ಎಂದು ಕರೆಯುವುದನ್ನು ನಿಲ್ಲಿಸು. ಈಗ ಅದೇನು ಎಂದು ಹೇಳು?

ಬೆಕ್: ಊರಿನ ಜನ ಸಾಮಂತರ ಮನೆಯ ವೈಭವ ನೋಡಬೇಕಂತೆ…

ಮೆನೆ: ನೋಡಲಿ. ಅದಕ್ಕೇನಂತೆ… ಈಗ ಅದು ಜನಗಳ ಮನೆ. ಜನ ಮಂದಿರ. ಇಫ್ಯುವರ್ ಅಯ್ಯನವರೇ, ಜನರೆಲ್ಲಾ ಮಂದಿರ ನೋಡಿದ ನಂತರ ಮುಂಬಾಗಿಲನ್ನು ಭದ್ರಪಡಿಸಿ. ಸೆಬೆಕ್, ನಾವು ಕಾಲುವೆಯ ಕೆಲಸ ಏನಾಗಬೇಕು ಎಂದು ಅಂದಾಜು ಮಾಡೋಣ.. (ಒಂದಷ್ಟು ಜನರ ಜೊತೆ ಹೊರಡುವನು)

ಗುಂಪು: ಮೆನೆಪ್‍ಟಾಗೆ ಜಯವಾಗಲಿ…! ನೀರಾನೆ ಪ್ರಾಂತ್ಯಕ್ಕೆ ಜಯವಾಗಲಿ…!

ನೆಫರೂರ: (ಇಫ್ಯುವರ್ ಬಳಿಬಂದು) ಏನು ಅಯ್ಯನವರೇ, ಅದೃಷ್ಟವೋ ಅದೃಷ್ಟ. ಅರಮನೇಲ್ಲಿ ವಾಸ ಮಾಡೋ ಯೋಗ…!

ಇಫ್ಯು: ನನಗೇನು ಈ ಮನೆಯಲ್ಲಿ ವಾಸ ಮಾಡುವ ಆಸೆ ಇರಲಿಲ್ಲ. ನಾಯಕರ ಮಾತಿಗೆ ಇಲ್ಲ ಎನ್ನಲಾಗಲಿಲ್ಲ ಅಷ್ಟೆ… (ಆಕೆಯ ಬಗ್ಗೆ ಕಾಳಜಿಯಿಂದ) ನೀನೇನು ಮಾಡ್ತೀಯಾ?

ನೆಫ: ಒಂದೂ ಗೊತ್ತಾಗ್ತಾ ಇಲ್ಲ. ಬರೀ ನೃತ್ಯ ಕಲಿತವರಿಗೆ ಹೊಲದ ಕೆಲಸ ಮಾಡೋಕಾಗತ್ತಾ? ನನ್ನ ಗ್ರಹಚಾರಕ್ಕೆ ಊರಿಂದ ಅಮ್ಮ ಬೇರೆ ಬಂದಿದ್ದಾಳೆ. ನಾನು ಮುರುಕಲು ಮನೆಯಲ್ಲಿರುವುದನ್ನು ನೋಡಿದರೆ ಅವಳು ಏನಂತಾಳೋ? ನೀವು ಬಿಡುವಾದಾಗ ಒಮ್ಮೆ ಮನೆಯತ್ತ ಪಾದ ಬೆಳಸಿ…

ಇಫ್ಯು: ನಾನ್ಯಾವ ದೊಡ್ಡ ಮನುಷ್ಯ ಬಿಡು. ನಮ್ಮ ನಾಯಕ ಮೆನೆಪ್‍ಟಾ ಇದ್ದಾರಲ್ಲ, ಅವರು ದೊಡ್ಡವರು… ಸಾಕ್ಷಾತ್ ದೇವರು…!

ನೆಫ: ಆ ನಿಮ್ಮ ದೇವರಿಗೆ ನಮ್ಮ ನೈವೇದ್ಯ ಬೇಡವಾಗಿದೆಯಲ್ಲಾ… (ಎಂದು ಕಣ್ಣೊರೆಸಿಕೊಳ್ಳುತ್ತಾ ಸಾಗುವಳು)

ಮತ್ತೊಂದು ಹಾಡು ಕೇಳುವುದು…

ಜನರದ್ದೇ ಈ ಸರ್ಕಾರ…/  ಜನರಿಂದಲೇ ಈ ಸರ್ಕಾರ…!

ನಾಯಕರಿಲ್ಲ, ಸಾಮಂತರಿಲ್ಲ…/  ನಮ್ಮದೇ ನೋಡಿ ಸರ್ಕಾರ…!

ಸೈನ್ಯವಿಲ್ಲ, ಕಾವಲು ಇಲ್ಲ…/  ಸ್ವತಂತ್ರವಾಗಿದೆ ಸರ್ಕಾರ…!

ಗದ್ದಲವಿಲ್ಲ, ನೆಮ್ಮದಿ ಎಲ್ಲಾ…./  ನಗುತಿದೆ ನೋಡಿ ಸರ್ಕಾರ…!

ಚಾವಟಿ ಇಲ್ಲ, ಬೈಗುಳವಿಲ್ಲ…/  ಇದುವೇ ನೋಡಿ ಸರ್ಕಾರ…!

ನಮ್ಮ ನಾಡಿಗರದು ಸರ್ಕಾರ…/  ನಮ್ಮ ಗೆಲುವಿನದು ಸರ್ಕಾರ…!

– ಹಾಡು ಕೇಳುವಾಗ ಸಾಮಾನ್ಯ ಜನರು ಕುಣಿದು ಕುಪ್ಪಳಿಸುವುದು,

– ಇಫ್ಯುವರ್ ಮಕ್ಕಳಿಗೆ ಶಾಲೆ ನಡೆಸುವುದು,

– ಹೆಂಗಸರು ಹಾಡುತ್ತಾ ಕೆಲಸ ಮಾಡುವುದು,

– ರೈತರು ಹಾಡುತ್ತಾ ಗದ್ದೆಯಲ್ಲಿ ದುಡಿಯುವುದು

– ಮೆನೆ ಮತ್ತು ಊರ ಹಿರಿಯರ ಸಭೆ ನಡೆಸುವುದು…

– ಇಫ್ಯುವರ್, ಬೆಕ್ ಮತ್ತು ಖ್ನೆಮ್ ಅವರ ಎದುರಿಗೆ ಸಾಲಾಗಿ ನಿಂತ ಹಳ್ಳಿಗರು ಕಂದಾಯ ಕಟ್ಟುತ್ತಾ ಇರುವುದು…  ವಿವರಗಳು ದೃಶ್ಯಗಳಾಗಿ ಕಾಣುತ್ತವೆ.

ದೃಶ್ಯ 10

ಜನ ಸಾಲಾಗಿ ಕಂದಾಯ ಕಟ್ಟುತ್ತಾ ಇರುವಾಗ ಇಫ್ಯುವರ್ ಬರೆದುಕೊಳ್ಳುತ್ತಾ ಇದ್ದಾನೆ.

ಖ್ನೆಮ್: ನೆಫರೂರಾ… ಎರಡು ಚೀಲ ಬಾರ್ಲಿ… (ಆ ರೈತ ಹೊರಡುತ್ತಾನೆ. ಮತ್ತೊಬ್ಬ ಸಾಲಿನಲ್ಲಿ ಬರುತ್ತಾನೆ) ರೈತ ಕೆಫ್ಟು, ನಾಲ್ಕು ಚೀಲ ತರಕಾರಿ (ಅವನು ಹೊರಡುತ್ತಾನೆ. ಮೂರನೆಯವ ಎದುರಿಗೆ ಬರುತ್ತಾನೆ) ರೈತ ಅಹೂರ, ಮೂರು ಚೀಲ ಭತ್ತ…

ಆಗಲೇ ಅಲ್ಲಿಗೆ ಊರ ಹಿರಿಯರ ಜೊತೆಗೆ ಬರುವ ಮೆನೆ. ಅವನನ್ನು ಕಂಡು ಎಲ್ಲರೂ ನಮಸ್ಕರಿಸುತ್ತಾರೆ.

ಮೆನೆ: ಛೇ ಛೇ! ಈ ನೀರಾನೆ ಪ್ರಾಂತ್ಯದಲ್ಲಿ ಯಾರೂ ನಾಯಕರಲ್ಲ, ಯಾರೂ ಸಾಮಂತರಲ್ಲ…! ನೀವು ನನಗೆ ಹೀಗೆ ಗೌರವ ಸಲ್ಲಿಸಬೇಕಿಲ್ಲ. (ಇಫ್ಯುವರ್‍ಗೆ) ಕಂದಾಯ ಪಡೆಯುವಾಗ ಯಾರ ಮೇಲೂ ಒತ್ತಡಗಳನ್ನು ಹೇರುತ್ತಾ ಇಲ್ಲ ತಾನೇ…

ಇಫ್ಯು: ಇಲ್ಲ ಅಣ್ಣಾ, ರೈತರು ತಾವೇ ಹೇಳಿದ ಲೆಕ್ಕದಲ್ಲಿ ದಶಾಂಶ ಮಾತ್ರ ತಗೊಳ್ತಾ ಇದ್ದೇವೆ.

ಮೆನೆ: ಹಾಗಿದ್ದರೆ ಸರಿ. ನಿಮ್ಮ ಸಂಗ್ರಹ ಮುಗಿದ ನಂತರ ಸಂಪೂರ್ಣ ಲೆಕ್ಕ ಊರ ಹಿರಿಯರಿಗೆ ತೋರಿಸಬೇಕು. ಅವರು ಅದಕ್ಕೆ ಒಪ್ಪಿಗೆ ನೀಡಿದ್ದೇವೆ ಎಂದು ಬರೆಯಬೇಕು. ಆಮೇಲೆ ಆಡಳಿತ ಮಂದಿರದ ಮುಂಬಾಗಿಲ ಬಳಿ ಈ ವರ್ಷ ಸಂಗ್ರಹವಾದ ಕಂದಾಯದ ಲೆಕ್ಕ ಬರೆಯಬೇಕು.

ಸೆಬೆಕ್: ಅದ್ಯಾಕೆ ಮೆನೆಪ್‍ಟಾ… ಹಿಂದಿನ ಪ್ರಾಂತಪಾಲ ಹಾಗೆ ಮಾಡುತ್ತಾ ಇರಲಿಲ್ಲವಲ್ಲಾ…?

ಮೆನೆ: ಹಿಂದಿನವರು ಆ ಕೆಲಸ ಮಾಡಲಿಲ್ಲ ಎಂದೇ ನಾವು ಮಾಡಬೇಕಾಗಿದೆ. ನಮಗೆ ಸಂಗ್ರಹವಾದ ಪ್ರತೀ ಕಾಳಿನ ಲೆಕ್ಕ ಮತ್ತು ನಾವು ರಾಜಧಾನಿಗೆ ಕಳಿಸಿದ್ದೆಷ್ಟು ಅನ್ನೋದು ಜನಕ್ಕೆ ಗೊತ್ತಿರಬೇಕು.

ಥಾನಿಸ್: ಇದೂ ಒಂದು ತರಾ ಚೆನ್ನಾಗಿದೆ. ನಮ್ಮ ಪ್ರಾಂತ್ಯದ ಆಡಳಿತದಲ್ಲಿ ಮೋಸವಿಲ್ಲ ಅಂತ ಜನಕ್ಕೆ ಗೊತ್ತಾಗೋದು ಒಳ್ಳೆಯದೇ!

ಇಫ್ಯು: ಮೆನೆ ಅಣ್ಣಾ, ಬೆಳಿಗ್ಗೆ ಒಂದು ರೈತರ ಗುಂಪು ಬಂದಿತ್ತು. ಅವರು ನಿಮ್ಮ ನೆರೆಹೊರೆಯವರಂತೆ. ನಿಮ್ಮ ಭೂಮೀನ ಅವರೇ ಉತ್ತು ಬಿತ್ತು ನೋಡಿಕೊಳ್ಳುತ್ತಾರಂತೆ.

ಮೆನೆ: ಯಾಕೆ?

ಇಫ್ಯು: ನೀರಾನೆ ಪ್ರಾಂತ್ಯವನ್ನೇ ನೀವು ನೋಡಿಕೊಳ್ಳುವಾಗ ನಿಮ್ಮ ನೆಲದ ಕೆಲಸಕ್ಕೆ ನಿಮಗೆ ಬಿಡುವು ಸಿಗುವುದಿಲ್ಲ ಎನ್ನುತ್ತಾ ಇದ್ದರು.

ಮೆನೆ: ಅದು ಅಗತ್ಯವಿಲ್ಲ ಎಂದು ಹೇಳಿ. ನನಗಿನ್ನೂ ಕೈ ಕಾಲು ಗಟ್ಟಿ ಇದೆ. ನನ್ನ ಹೊಲದ ಕೆಲಸ ನಾನೇ ಮಾಡುತ್ತೇನೆ.

ಬೆಕ್: (ಅಲ್ಲಿಗೆ ಬರುತ್ತಾ) ಮೆನೆ ಅಣ್ಣಾ, ರಾಜಧಾನಿಯಿಂದ ಇಬ್ಬರು ಭಟರು ಬಂದು ಈ ಸಂದೇಶವನ್ನು ನಿಮಗೆ ಕೊಟ್ಟಿದ್ದಾರೆ.

ಮೆನೆ: (ಅವನು ನೀಡಿದ ಪತ್ರ ಪಡೆಯುತ್ತಾ) ಅವರೆಲ್ಲಿದ್ದಾರೆ?

ಬೆಕ್: ಅವರು ಕೂಡಲೇ ಕೆಳಗಿನ ಮೊಸಳೆ ಪ್ರಾಂತ್ಯಕ್ಕೆ ಹೊರಟರು.

ಮೆನೆ: ಅವರಿಗೆ ಸರಿಯಾದ ಆತಿಥ್ಯ ಮತ್ತು ಗೌರವ ನೀಡಿದಿರಿ ತಾನೇ?

ಬೆಕ್: ಹೌದು ಅಣ್ಣಾ, ಸ್ವತಃ ನೆಫರೂರ ನಿಂತು ಅವರೆಲ್ಲರ ಊಟೋಪಚಾರ ನೋಡಿಕೊಂಡಳು.

ಮೆನೆ: (ತಲೆದೂಗಿ) ಇಫ್ಯುವರ್ ಅಯ್ಯನವರೇ, ಈ ಸಂದೇಶ ಓದಿ.

ಇಫ್ಯು: (ಪತ್ರ ಓದುತ್ತಾ) ರಾಜಾಧಿರಾಜ, ನಿಸ್ಸೀಮ ಭುಜಬಲ, ಚಕ್ರವರ್ತಿ ಪೃಥ್ವಿವಲ್ಲಭರ ಸನ್ನಿಧಿಯಿಂದ ಮಹಾಮಂತ್ರಿಗಳಾದ ಅಮೆರಬ್ ಅವರು ದಕ್ಷಿಣ ಪ್ರಾಂತ್ಯಗಳಲ್ಲಿ ಒಂದಾದ ನೀರಾನೆ ಪ್ರಾಂತ್ಯದ ಹೊಸ ನಾಯಕರಿಗೆ ಪ್ರೀತಿಪೂರ್ವಕವಾಗಿ ಕಳಿಸಿರುವ ಮಹರಾಜರ ವರ್ಧಂತಿ ಉತ್ಸವದ ಕರೆಯೋಲೆ.

ಎಲ್ಲರೂ ತಲೆದೂಗುತ್ತಾರೆ. ಹಿರಿಯರು ಚಪ್ಪಾಳೆ ತಟ್ಟುತ್ತಾರೆ.

ಹಳ್ಳಿಗೆ 1: ಪ್ರೀತಿಪೂರ್ವಕವಾಗಿ ಎಂದು ಬರೆದಿದ್ದಾರೆ. ಇದು ನಿಜಕ್ಕೂ ಒಳ್ಳೆಯದು.

ಮೆನೆ: ಪೂರ್ತಿ ಪತ್ರ ಓದಲಿ ಇರಿ… ನಂತರ ನಮ್ಮ ವಿಮರ್ಶೆಗೆ ಸಮಯ ಇರುತ್ತದೆ. ಅಯ್ಯನವರೇ ನೀವು ಮುಂದುವರೆಸಿ.

ಇಫ್ಯು: ಈ ಸಂದರ್ಭದಲ್ಲಿ ನೀರಾನೆ ಪ್ರಾಂತ್ಯದ ಮುಖ್ಯಸ್ಥರಾಗಿರುವ ಮೆನೆಪ್‍ಟಾ ಮತ್ತು ಪ್ರಾಂತ್ಯದ ಆಡಳಿತ ಸಮಿತಿಗೆ ತಿಳಿಸುವುದೇನೆಂದರೆ, ಮಹಾಪ್ರಭುಗಳು ತಮ್ಮ ಐವತ್ತನೆ ವರ್ಧಂತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದಾರೆ. ಸಾಮ್ರಾಜ್ಯದ ಎಲ್ಲಾ ಪ್ರಾಂತ್ಯಗಳ ಪ್ರತಿನಿಧಿಗಳು ಮತ್ತು ಸಾಮಂತರು ರಾಜಧಾನಿಯಲ್ಲಿದ್ದು ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಮಹಾಪ್ರಭುಗಳು ಆದೇಶ ನೀಡಿದ್ದಾರೆ. ಇಂತಿ ಮಹಾಮಂತ್ರಿ ಆಮೆರಬ್.

ಪತ್ರ ಮುಗಿದ ಮೇಲೆ ಅಲ್ಲೊಂದು ಮೌನವಿದೆ. ಮೆನೆ ಚಿಂತಿಸುತ್ತಾ ಇದ್ದಾನೆ.

ಸೆಬೆಕ್: ಅಲ್ಲಿಗೆ ನಮ್ಮ ಪ್ರಾಂತ್ಯದಲ್ಲಿ ಆಗಿದ್ದನ್ನು ಮಹಾಪ್ರಭು ಫ್ಯಾರೋ ಬೆಂಬಲಿಸಿದ್ದಾರೆ ಎಂದಾಯಿತು.

ಬೆಕ್: ಆದರೆ ಪತ್ರವು “ಪ್ರೀತಿಪೂರ್ವಕ” ಎಂದು ಆರಂಭವಾಗಿ “ಆದೇಶ” ಎಂದು ಮುಕ್ತಾಯವಾಗುತ್ತಾ ಇದೆಯಲ್ಲಾ?

ಮೆನೆ: ಹೌದು. ಆದೇಶ ಎನ್ನುವ ಮೂಲಕ ಯಾವ ಕಾರಣಕ್ಕೂ ತಪ್ಪಿಸಿಕೊಳ್ಳದೆ ಇರಲಿ ಎಂದು ಸೂಚಿಸುತ್ತಾ ಇರಬಹುದು.

ಇಫ್ಯು: ಮೊನ್ನೆ ನಮ್ಮಲ್ಲಿಗೆ ಬಂದಿದ್ದ ಆ ವ್ಯಾಪಾರಿಯು ಮಹಾಪ್ರಭುಗಳನ್ನು ಕಂಡಿರಬಹುದು. ಅವನ ಮಾತು ಕೇಳಿದ ಮೇಲೆ ದೊರೆಗಳು ಈ ಪತ್ರ ಬರೆಸಿರಬಹುದು ಅಲ್ಲವೇ?

ಬೆಕ್: ಅದು ಪ್ರೀತಿಯಾದರೆ ಸರಿ… ತಂತ್ರಗಾರಿಕೆಯಾಗಿದ್ದರೆ ನಾವು ಎಚ್ಚರದಿಂದ ಇರಬೇಕಾಗುತ್ತದೆ.

ಸೆಬೆಕ್: ಮೋಸ ಮಾಡುವುದಾಗಿದ್ದಾರೆ ಅವರು ಇಷ್ಟು ದಿನ ಕಾಯುತ್ತಿರಲಿಲ್ಲ, ಅಲ್ಲವೆ?

ಖ್ನೆಮ್: ಏನೇ ಆದರೂ ಈ ವಿಷಯದಲ್ಲಿ ಅವಸರದ ತೀರ್ಮಾನ ಬೇಡ…

ಮೆನೆ: ಆಯಿತು… ಅವಸರ ಬೇಡ… ಅಕಸ್ಮಾತ್ ನಾವು ಉತ್ಸವಕ್ಕೆ ಹೋಗಲಿಲ್ಲ ಎಂದು ದೊರೆಗಳು ಕುಪಿತರಾಗಿ ಇಲ್ಲಿಗೆ ದಂಡೆತ್ತಿ ಬಂದರೆ?

ಎಲ್ಲರೂ ಹೌದು ಎಂಬಂತೆ ತಲೆದೂಗುತ್ತಾರೆ.

ಮೆನೆ: ಅಕಸ್ಮಾತ್ ಸೈನ್ಯ ನಮ್ಮ ಮೇಲೆ ಬಿದ್ದರೆ ಎದುರಿಸುವುದಕ್ಕೆ ನಾವು ಸಿದ್ಧರಿಲ್ಲ ಅಲ್ಲವೇ?

ಎಲ್ಲರೂ ಹೌದು ಎಂದು ತಲೆದೂಗುತ್ತಾರೆ.

ಮೆನೆ: ಹಾಗಿರುವಾಗ ನಾವು ಉತ್ಸವಕ್ಕೆ ಹೋಗುವುದೇ ಸರಿಯಾದ ಯೋಚನೆ ಅಲ್ಲವೇ?

ಇಫ್ಯು: ಇಷ್ಟಕ್ಕೂ ನಾವು ಯಾವುದೇ ಪ್ರಭುದ್ರೋಹ ಮಾಡಿಲ್ಲ. ನಮ್ಮ ಪ್ರಾಂತ್ಯದ ಕಂದಾಯವನ್ನು ಸಹ ರಾಜಧಾನಿಗೆ ಕಳಿಸಿದ್ದೇವೆ. ನಾವೇಕೆ ಪ್ರಭುಗಳ ಆಹ್ವಾನವನ್ನು ಕಂಡು ಹೆದರಬೇಕು?

ಮೆನೆ: ಹೌದು. ಪ್ರಭುಗಳ ಎದುರು ನಮ್ಮ ಕಷ್ಟವನ್ನು ಹೇಳಿಕೊಳ್ಳುವ ಅವಕಾಶ ತಾನಾಗಿ ಬಂದಿರುವಾಗ ನಾವು ಒಲ್ಲೆ ಅನ್ನಬಾರದು. ಊರ ಹಿರಿಯರು ಒಪ್ಪಿಗೆ ಕೊಟ್ಟರೆ ನಿಮ್ಮೆಲ್ಲರ ಪರವಾಗಿ ನಾನೇ ರಾಜಧಾನಿಗೆ ಹೋಗಿ ಬರುತ್ತೇನೆ…

ಗುಂಪು: ನಮ್ಮದೇನೂ ಅಭ್ಯಂತರವಿಲ್ಲ.

ಮೆನೆ: ಹಾಗಾದರೆ ಇಂದೇ ರಾಜಧಾನಿಯ ಕಡೆ ದೋಣಿ ಹೊರಡಿಸೋಣ.

ಬೆಕ್: ಅಣ್ಣಾ, ನೀನು ಒಬ್ಬನೇ ಹೋಗುವುದು ಬೇಡ. ನಿನ್ನ ಜೊತೆಗೆ ನಾನು, ಖ್ನೆಮ್, ಸೆಬೆಕ್ ಮತ್ತು ಥಾನಿಸ್ ಬರುತ್ತೇವೆ.

ಮೆನೆ: ನಾನಾಡುವ ಮಾತಿಗೆ ನಮ್ಮ ಹಳ್ಳಿಗರು ಸಾಕ್ಷಿಯಾಗಿರಬೇಕಾದ್ದು ಸರಿಯೇ. ಆದರೆ ನೀವೆಲ್ಲರೂ ಬಂದರೆ ಇಲ್ಲಿನ ವ್ಯವಸ್ಥೆ ನೋಡಿಕೊಳ್ಳುವವರು ಯಾರು?

ಬೆಕ್: ಇಫ್ಯುವರ್ ಅಯ್ಯನವರು, ಮತ್ತು ಉಳಿದ ಹಿರಿಯರು ನೋಡಿಕೊಳ್ತಾರೆ.

ಮೆನೆ: ಆಗಲಿ… ನನ್ನ ಜೊತೆಗೆ ಹೊರಡುವವರು ಸಿದ್ಧರಾಗಿ… ನಾನೂ ಮನೆಗೆ ಹೋಗಿ ಮಡದಿ, ಮಗುವಿಗೆ ತಿಳಿಸಿ ಬರುತ್ತೇನೆ. ರಾ ಪಡುವಣಕ್ಕೆ ತಲುಪುವ ಮೊದಲು ದೋಣಿ ಹತ್ತೋಣ.

ಎಂದು ಹೊರಡುತ್ತಾನೆ. ಉಳಿದವರೂ ಹೊರಡುತ್ತಾರೆ.

ದೃಶ್ಯ 11

ಗುಂಪಿನ ನಡುವೆ ಸಿಟ್ಟಿನಿಂದ ನಡೆದು ಬರುವ ನೆಫಿಸ್ ಒಂದು ಮೂಲೆಯಲ್ಲಿ ನಿಲ್ಲುತ್ತಾಳೆ. ಅವಳಿರುವಲ್ಲಿಗೆ ಬರುವ ಮೆನ್‍ಪ್‍ಟಾ.

ಮೆನೆ: ನೆಫಿಸ್, ಈಗ ಸಿಟ್ಯಾಕೆ?

ನೆಫಿಸ್: ನೀನೇನೆ ಹೇಳಿದರೂ ಅಷ್ಟೇ, ನೀನು ರಾಜಧಾನಿಗೆ ಹೋಗೋ ವಿಷಯ ನನಗೆ ಭಯ ಆಗ್ತಾ ಇದೆ.

ಮೆನೆ: ಹಾಗಂತ ಸುಮ್ಮನೆ ಇಲ್ಲೇ ಇದ್ದು ಬಿಡು ಅಂತೀಯಾ?

ನೆಫಿಸ್: ಸುಮ್ಮನೆ ಇರು ಅಂತ ನಾನು ಹೇಳ್ತಾ ಇಲ್ಲ.

ಮೆನೆ: ಅಲ್ಲ ನೆಫಿಸ್… ನಮ್ಮಂತವರ ಬದುಕು ಸದಾ ನೆಮ್ಮದಿಯಾಗಿರೋಲ್ಲ… ಮೊನ್ನೆ ಆ ಟೆಹುಟಿಯೇ ನನ್ನನ್ನು ಕೊಂದಿದ್ದರೆ…

ನೆಫಿಸ್: ಥೂ…! ಬಿಡ್ತು ಅನ್ನು…! ಅಂಥಾ ಮಾತೇ ಆಡಬೇಡ…

ಮೆನೆ: ಆಯಿತು. ನಿನ್ನಿಷ್ಟ. ಸಾವಿನ ಮಾತಾಡೋಲ್ಲ… ಆದರೆ ನಾನು ಹೋಗಲಿಲ್ಲ ಅಂದ್ರೆ ಇನ್ಯಾರು ಹೋಗಬೇಕು ಹೇಳು?

ನೆಫಿಸ್: ಸೆಬೆಕ್ ಅಥವಾ ಖ್ನೆಮ್ ಹೋಗಬಹುದಲ್ಲಾ?

ಮೆನೆ: ಹಾಗಾದರೆ ನನಗೆ ಜೀವ ಕೊಡುವುದಕ್ಕೆ ಸಿದ್ಧವಾಗಿದವರನ್ನ ಸಾಯೋಕೆ ಬಿಟ್ಟು ನಾನು ಆರಾಮಾಗಿರಬೇಕು ಅಂತೀಯಾ?

ನೆಫಿಸ್ ಮೌನವಾಗಿ ನೋಡ್ತಾಳೆ.

ಮೆನೆ: ನೋಡು ನೆಫಿಸ್, ನಾನು ಹೋಗದೆ ಪ್ರಭುಗಳು ಸಿಟ್ಟಾಗುವುದಕ್ಕಿಂತ, ನಾವು ಅವರ ಬಳಿ ಖುದ್ದಾಗಿ ಮಾತಾಡುವುದರಿಂದ ನಮ್ಮ ಪ್ರಾಂತ್ಯಕ್ಕೆ ಒಳ್ಳೆಯದಾಗಬಹುದು. ಇಷ್ಟಾಗಿ ನಾವಂತೂ ಯಾವುದೇ ಕೆಟ್ಟದ್ದನ್ನು ಮಾಡಿಲ್ಲವಲ್ಲಾ?

ನೆಫಿಸ್: ನೀನು ಯಾವತ್ತಿಗೂ ಕೆಟ್ಟದ್ದು ಮಾಡೋನಲ್ಲ ಅಂತ ನನಗೊತ್ತಿ… ಅವರಿಗೆ ಗೊತ್ತಿಲ್ಲವಲ್ಲ…?

ಮೆನೆ: ಹೆದರಬೇಡ ನೆಫಿಸ್… ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ. ನೀನೀಗ ನನ್ನ ಎರಡನೆಯ ಕೂಸನ್ನು ಹೊತ್ತುಕೊಂಡಿದ್ದೀಯಾ… ಯಾವ ವಿಷಯವನ್ನು ತಲೆಗೆ ಹಚ್ಚಿಕೊಳ್ಳಬೇಡ… ಅವನೆಲ್ಲಿ? ರಾಮೆರಿ…? ರಾಮೆರಿ?

ರಾಮೆರಿ: (ಓಡಿ ಬರುತ್ತಾ) ಏನಪ್ಪಾ?

ಮೆನೆ: ನಾನು ಮನೆಯಲ್ಲಿ ಇಲ್ಲದಾಗ ಅಮ್ಮನ ಜವಾಬ್ದಾರಿ ನಿನ್ನದು. ಗೊತ್ತಾಯ್ತಾ?

ರಾಮೆರಿ: ಆಗಲಿ ಅಪ್ಪಾ…

ನೆಫರೂರ ಮತ್ತು ಇಫ್ಯುವರ್ ಬರುತ್ತಾರೆ.

ನೆಫರೂರ: ಆ ಹುಡುಗ ಏನು ತಾನೇ ಮಾಡ್ತಾನೆ? ಬಿಡು ದೊರೆ…

ಇಫ್ಯು: ನಾವೆಲ್ಲಾ ಇಲ್ವಾ ನಿನ್ನ ಮನೆಯವರ ಸಹಾಯಕ್ಕೆ…?

ನೆಫ: ಏನಮ್ಮಾ ನೆಫಿಸ್, ಗಂಡನಿಗೆ ದಾರಿ ಬುತ್ತಿ ಕಟ್ಟಿದ್ದೀಯೋ ಹೇಗೆ? ನಾನಂತೂ ಒಂದಷ್ಟು ರೊಟ್ಟಿ ತಂದಿದ್ದೇನೆ ತಗೊ ಮೆನೆಪ್‍ಟಾ…

ಮೆನೆ: ನಿಮ್ಮ ಪ್ರೀತಿಗೆ ಶರಣು… ನನ್ನ ಮನೆಯವರನ್ನು ನಿಮ್ಮ ಸುಪರ್ದಿನಲ್ಲಿ ಬಿಟ್ಟು ಹೊರಡುತ್ತಾ ಇದ್ದೇನೆ.

ಇಫ್ಯು: ಯಾವ ಚಿಂತೆಯೂ ಬೇಡ, ಹೊರಡು ಮೆನೆ ಅಣ್ಣಾ…!

ಬಟಾ, ಬೆಕ್ ಮತ್ತು ಸೆಬೆಕ್ ಬರುತ್ತಾರೆ

ಬಟಾ: (ಬರುತ್ತಾ) ದೊರೆ, ದೋಣಿ ಸಿದ್ಧವಾಗಿದೆ.

ಮೆನೆ: ಪ್ರಭುಗಳಿಗೆ ನಾವು ಕೊಡಬೇಕಾದ ಕಾಣಿಕೆ?

ಸೆಬೆಕ್‍: ಅದನ್ನೂ ತೆಗೆದುಕೊಂಡಿದ್ದೇವೆ.

ಮೆನೆ: ಹಾಗಾದರೆ ಹೊರಡೋಣ.

ನೆಫಿಸ್: ನಾನೂ ಒಂದಷ್ಟು ರೊಟ್ಟಿ, ಉಂಡೆ ಕಟ್ಟಿದ್ದಾನೆ. ತಗೊಂಡ್ ಹೋಗಿ. (ಎಂದು ಬೆಕ್‍ ಕೈಯಲ್ಲಿಟ್ಟು ಕಣ್ಣೊರೆಸಿಕೊಳ್ತಾಳೆ)

ಬೆಕ್: ತಿಳೀತು ಬಿಡಿ ಅತ್ತಿಗೆ… ನೀವು ಹೇಳಬೇಕಾಗಿಲ್ಲ. ಅಣ್ಣನ ಜವಾಬ್ದಾರಿ ನಮ್ಮದು. ಅವನನ್ನು ಕಣ್ಣಿನ ಹಾಗೆ ಕಾಪಾಡ್ತೀವಿ.

ನೆಫ: ನೀವೆಲ್ಲಾ ದಾರಿ ಸವೆಯೋಕ್ಕೆ ಒಂದಷ್ಟು ಖಿವವ, ಅದೂ ಇದೂ ತಿಂಡಿಯನ್ನು ಕೊಟ್ಟಿದ್ದೇನೆ… ಹಾಡುತ್ತಾ ದಾರಿ ಕಳೆಯಿರಿ…

ಎಲ್ಲರೂ ಹೊರಡುತ್ತಾರೆ….

ನೆಫರೂರ, ನೆಫಿಸ್, ರಾಮೆರಿ, ಇಫ್ಯುವರ್ ನಿಂತು ಹೋಗುವವರಿಗೆ ಕೈ ಬೀಸುವಾಗಲೇ ವೇದಿಕೆಯಲ್ಲಿ ಸೃಷ್ಟಿಯಾಗುವ ದೋಣಿಯಲ್ಲಿ ಕೂತವರು ಹಾಡುತ್ತಾರೆ. ದೋಣಿಯೂ ವೇದಿಕೆಯುದ್ದಕ್ಕೂ ಸಾಗುತ್ತದೆ.

ಯೋ ಯೋ…! ಯೋ ಯೋ…! ಯೋ ಯೋ…!

ಬೀಸು ಬೀಸೆಲೆ ಗಾಳಿ, ಹಾಯಿ ಹರಿಯದಂತೆ!

ಮಗುವ ತೂಗೆಲೆ ನೀಲ, ಮಾರುತ ಬೀಸದಂತೆ!

ಯೋ ಯೋ…! ಯೋ ಯೋ…! ಯೋ ಯೋ…!

ಇರುಳ ಕತ್ತಲೆ ಕಳೆಯಲಿ ಬೇಗ, ಬೆಳಕು ತುಂಬಲಿ ಬಾಳೀಗೀಗ!

ಯೋ ಯೋ…! ಯೋ ಯೋ…! ಯೋ ಯೋ…!

ಓ! ನೀಲಿ ಗಗನವೇ! ಓ! ನದ ನೀಲವೇ!  

ಯೋ ಯೋ…! ಯೋ ಯೋ…! ಯೋ ಯೋ…!

ದೃಶ್ಯ 12

ರಾಜಧಾನಿಗೆ ಮೆನೆ, ಖ್ನೆಮ್, ಥಾನಿಸ್ ಮತ್ತು ಸೆಬೆಕ್ ಇರುವ ಬಟಾನ ದೋಣಿಯು ಬಂದು ಮುಟ್ಟುತ್ತದೆ. ನಾವೆಯನ್ನು ಎದುರುಗೊಳ್ಳುವಂತೆ ಅವರ ಬಳಿಗೆ ಅವಸರದಿಂದ ಬರುವ ಗೇಬು…

ಗೇಬು: ನೀರಾನೆ ಪ್ರಾಂತ್ಯದ ನಾಯಕ ಮೆನೆಪ್‍ಟಾ ಅವರಿಗೆ ಸ್ವಾಗತ, ಸುಸ್ವಾಗತ!

ಬೆಕ್ ಮತ್ತು ಇತರರು ಅನುಮಾನದಿಂದ ನೋಡುತ್ತಾರೆ. ಮೆನೆಪ್‍ಟಾ ನಿರಾಳವಾಗಿ ಹತ್ತಿರಕ್ಕೆ ಹೋಗುತ್ತಾನೆ.

ಮೆನೆ: ನೀವು ನನ್ನನ್ನು ಸ್ವಾಗತಿಸುವ ಔದಾರ್ಯ ತೋರಿದ್ದಕ್ಕಾಗಿ ವಿಶೇಷ ವಂದನೆಗಳು.

ಗೇಬು: ನಿಮ್ಮ ಪ್ರಾಂತ್ಯದ ನಾಯಕರನ್ನು ನೀವೇ ಸ್ವಾಗತಿಸಬೇಕು ಎಂದು ಮಹಾ ಅಮಾತ್ಯರ ಅಪ್ಪಣೆಯಾಗಿತ್ತು…

ಮೆನೆ: (ಉಳಿದವರ ಕಡೆಗೆ ಒಮ್ಮೆ ನೋಡಿ) ಮಹಾ ಅಮಾತ್ಯರ ಮನಸ್ಸು ನಿಜಕ್ಕೂ ದೊಡ್ಡದು.

ಗೇಬು: ನಿಮ್ಮ ಮನಸ್ಸು ಅದಕ್ಕಿಂತ ದೊಡ್ಡದು… ನಿಮ್ಮಿಂದಾಗಿ ನನಗೆ ಆ ಕೊಂಪೆಯಿಂದ ಮುಕ್ತಿ ದೊರೆಯಿತು…

ಬೆಕ್: (ಸಿಟ್ಟಿನಿಂದ) ಯಾಕೆ? ನಮ್ಮ ಪ್ರಾಂತ್ಯ ನಿಮಗೆ ಕೊಂಪೆಯಾಗಿತ್ತಾ?

ಗೇಬು: ಅದೇನೆಂದರೆ, ನಾನೂ ನನ್ನ ಹೆಂಡತಿ ಮೊದಲಿಂದಲೂ ರಾಜಧಾನಿಯಲ್ಲಿ ಬೆಳೆದವರು… ಯಾವುದೋ ದುರಾದೃಷ್ಟ ನಮ್ಮನ್ನು ನೀರಾನೆ ಪ್ರಾಂತ್ಯಕ್ಕೆ ತಳ್ಳಿತ್ತು… ಸಧ್ಯ ನಿಮ್ಮಿಂದ ಬಿಡುಗಡೆ ದೊರೆಯಿತು…(ನಗುತ್ತಾ) ನಿಜ ಹೇಳಬೇಕೆಂದರೆ, ನನ್ನ ಮನವಿಗಳಿಗೆ ರಾಜಧಾನಿ ಉತ್ತರಿಸಲಿಲ್ಲ… ನಿಮ್ಮ ಕ್ರಾಂತಿ ಉತ್ತರ ನೀಡಿತು… ಹಹ್ಹ!

ಎಲ್ಲರ ನಗು.

ಗೇಬು: ಮೆನೆಪ್‍ಟಾ, ನನ್ನ ಮಡದಿಯಂತೂ ನಿಮ್ಮ ಭೇಟಿಗೆ ತುದಿಗಾಲಲ್ಲಿ ನಿಂತಿದ್ದಾಳೆ.

ಬೆಕ್: ನಿಮ್ಮ ಮನೆಯವರು ಕಾಯುತ್ತಾ ಇರುವುದು ನಾಯಕರನ್ನು ನೋಡುವುದಕ್ಕಲ್ಲ! ಆಡಳಿತ ಮಂದಿರದಲ್ಲಿದ್ದ ಅವರ ಆಭರಣಗಳನ್ನು ಪಡೆಯುವುದಕ್ಕೆ!

ಮೆನೆ: (ಆತ ಮಾತು ಮುಂದುವರೆಸದಂತೆ ತಡೆದು) ನಿಮ್ಮ ಮಡದಿಗೆ ಹೇಳಿ, ಅವರ ಆಭರಣಗಳನ್ನು ಪ್ರತ್ಯೇಕ ಪೆಟ್ಟಿಗೆಯಲ್ಲಿ ಇರಿಸಿ ಬೀಗ ಹಾಕಲಾಗಿದೆ. ಅವರು ಖುದ್ದಾಗಿ ಪ್ರಾಂತ್ಯಕ್ಕೆ ಬಂದು ಅದನ್ನು ಪಡೆಯಬಹುದು.

ಗೇಬು: ಸಧ್ಯ ನಾನು ಬದುಕಿದೆ… ಇನ್ನು ಅವಳ ಕೈಯಲ್ಲಿ ಬೈಗುಳ ಕೇಳುವುದು ತಪ್ಪಿತು… ಹಹ್ಹ

ಎಲ್ಲರ ನಗು…

ಗೇಬು: ನಿಮ್ಮ ಪ್ರಾಂತ್ಯದ ಕಡೆಯಿಂದ ಬರುತ್ತಾ ಇರುವ ವರ್ತಕರಂತೂ ನಿಮ್ಮನ್ನು ಹಾಡಿ ಹೊಗಳುತ್ತಾ ಇದ್ದಾರೆ. ಪ್ರಭುಗಳು ಆ ಕಾರಣಕ್ಕೆ ನಿಮ್ಮನ್ನು ಭೇಟಿಯಾಗಲು ತುದಿಗಾಲಲ್ಲಿ ನಿಂತಿದ್ದಾರೆ…

ಥಾನಿಸ್: ಆ ವರ್ತಕರು ಮಾತಾಡುವಾಗ ನಿಮ್ಮ ಗೆಳೆಯ ಟೆಹುಟಿ ಇರಲಿಲ್ಲವೇ?

ಗೇಬು: ಇಲ್ಲಾ… ಉತ್ತರದಲ್ಲಿ ಮಹಾಗುರುಗಳು ನಡೆಸುತ್ತಾ ಇರುವ ಧರ್ಮ ಜಿಜ್ಞಾಸೆಗೆ ಸೈನ್ಯದ ಸಮೇತ ಟೆಹುಟಿ ಹೋಗಿದ್ದಾರೆ…

ಮೆನೆ: ಅರೆ! ರಾಜಗುರುಗಳಿಲ್ಲದೆ ಉತ್ಸವ ನಡೆಸೋದು ಸಾಧ್ಯವೇ?

ಗೇಬು: (ವ್ಯಂಗ್ಯ ನಗೆ) ವರ್ಧಂತಿ ಉತ್ಸವಕ್ಕೆ ದಿನಾಂಕವನ್ನೇ ಇನ್ನೂ ಗೊತ್ತುಪಡಿಸಿಲ್ಲ…

ಎಲ್ಲರ ಅಚ್ಚರಿ.

ಖ್ನೆಮ್: ಹಾಗಾದರೆ ನಮ್ಮನ್ನು ಯಾಕೆ ಕರೆಸಿದ್ದು?

ಗೇಬು: ಹೇಳಿದೆನಲ್ಲಾ, ಪ್ರಭುಗಳು ನಿಮ್ಮನ್ನು ನೋಡಬೇಕಂತೆ… ಅದಕ್ಕಾಗಿಯೇ ಮಹಾಮಂತ್ರಿಗಳು ನಿಮಗೆ ಸಂದೇಶ ಕಳಿಸಿದ್ದು…!

ಎಲ್ಲರ ಮುಖದಲ್ಲಿ ಅನುಮಾನ

ಗೇಬು: (ಜೋರಾಗಿ) ಬನ್ನಿ, ಬನ್ನಿ ನಿಮ್ಮನ್ನು ಉಳಿಸಲು ಗೊತ್ತುಮಾಡಿರುವ ಜಾಗಕ್ಕೆ ಹೋಗೋಣ…

ಹೊರಟವರನ್ನು ತಡೆವ ಬೆಕ್…

ಬೆಕ್: ಹೊರಡುವ ಮುನ್ನ ಒಂದು ಮಾತಿಗೆ ಉತ್ತರಿಸಿ… ನೀವು ಕರೆದೊಯ್ಯುವುದು ರಾಜಗೃಹಕ್ಕೋ, ಕಾರಾಗೃಹಕ್ಕೋ?

ಗೇಬು: ಅಯ್ಯೋ, ನಿಮ್ಮನ್ನು ಕಾರಾಗೃಹಕ್ಕೆ ಹಾಕುವುದೇ? ಛೇ… ಛೇ!… ನಿಮ್ಮನ್ನು ಪ್ರಭುಗಳ ಆಪ್ತರು ಉಳಿದುಕೊಳ್ಳುವ ಅತಿಥಿ ಗೃಹಕ್ಕೆ ಕರೆದೊಯ್ಯುತ್ತೇನೆ! ಬನ್ನಿ, ಬನ್ನಿ!

ಎಲ್ಲರೂ ಅವನನ್ನು ಹಿಂಬಾಲಿಸುತ್ತಾರೆ.

ದೃಶ್ಯ 13

ಅನೇಕ ಕಂಭಗಳಿರುವ ಚಿತ್ತಾರದ ಗೋಡೆಗಳಿರುವ ಮನೆಯೊಂದಕ್ಕೆ ಬರುತ್ತಾರೆ…

ಗೇಬು: ಇದೇ ನೀವಿರುವ ಮನೆ… ವಿಶಾಲವಾಗಿದೆ… ಹಿಂಬಾಗಿಲಿಂದ ಹೋದರೆ ಬೃಹತ್ ಉದ್ಯಾನವನವೂ ಸಿಗುತ್ತದೆ… ನೀವು ಬೇಸರವಾದಾಗ ಅಲ್ಲಿ ಸುತ್ತಾಡಬಹುದು… (ನಗುತ್ತಾ) ನಾನಿನ್ನು ಬರುತ್ತೇನೆ…

ಮೆನೆ: ಮಹಾರಾಜರು ಅಥವಾ ಮಹಾಮಂತ್ರಿಗಳ ಭೇಟಿ ಯಾವಾಗ?

ಗೇಬು: ಅದು ಮಹಾಮಂತ್ರಿಗಳದ್ದೇ ನಿರ್ಧಾರ… ಅವರಿಗೆ ನೀವು ಬಂದಿರುವ ಸುದ್ದಿಯನ್ನಂತೂ ಮುಟ್ಟಿಸುತ್ತೇನೆ…ನಮಸ್ಕಾರ (ಎಂದು ಹೊರಡುತ್ತಾನೆ)

ಅವನನ್ನೇ ನೋಡುತ್ತಾ ನಿಂತಿರುವ ಮೆನೆ.

ಉಳಿದವರು ಮನೆಯನ್ನೆಲ್ಲಾ ನೋಡಿದವರಂತೆ ಸುತ್ತಾಡಿ ಮೆನೆಯ ಬಳಿಗೆ ಬರುತ್ತಾರೆ.

ಸೆಬೆಕ್: ಮೆನೆ, ಇಲ್ಲಿಗೆ ನಾವಾಗಿಯೇ ಬಂದದ್ದೋ ಇಲ್ಲಾ ಅವರು ನಮ್ಮನ್ನು ಹಿಡಿದು ತಂದರೋ?

ಮೆನೆ: ಯಾಕೆ ಹಾಗೆ ಕೇಳುತ್ತೀ? ನಾವೇ ನಿರ್ಧರಿಸಿ ಹೊರಟದ್ದಲ್ವಾ?

ಖ್ನೆಮ್: ಇಲ್ಲಿನ ವಾತಾವರಣ ನೋಡಿದರೆ ಹಾಗೆ ಕಾಣಿಸ್ತಾ ಇಲ್ಲ…

ಮೆನೆ ಅನುಮಾನದಿಂದ ನೋಡ್ತಾನೆ.

ಬೆಕ್: ನನಗೂ ಹಾಗೇ ಅನ್ನಿಸುತ್ತಾ ಇದೆ. ಇನ್ನೂ ದಿನಾಂಕ ಗೊತ್ತಾಗಿಲ್ಲದ ಉತ್ಸವಕ್ಕೆ ನಮ್ಮನ್ನು ಕರೆಸುವುದರ ಹಿಂದೆ ಏನಾದರೂ ತಂತ್ರವಿರಬಹುದೇ?

ಮೆನೆ: ತಂತ್ರವೋ – ಕುತಂತ್ರವೋ? ನಾವಂತೂ ಬಂದಾಗಿದೆ… ಮುಂದಿನ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡೋಣ…

ಎಲ್ಲರೂ ಹೌದು ಎಂದು ತಲೆದೂಗುತ್ತಾರೆ.

ಭಟ 1: (ಒಬ್ಬ ಬಳಿಗೆ ಬರುತ್ತಾ) ತಮಗೆ ಊಟ ಸಿದ್ಧವಿದೆ…

ಬೆಕ್: ಅಯ್ಯಾ, ನಮ್ಮ ನಾಯಕರಿಗೆ ಈಗಲೇ ಹಸಿವಿಲ್ಲವಂತೆ… ಸ್ವಲ್ಪ ಹೊತ್ತು ಉದ್ಯಾನವನದಲ್ಲಿ ಸುತ್ತಿ ಬರುತ್ತಾರೆ… ದಾರಿ ತೋರಿಸಿ.

ಭಟ 2: ದಾರಿ ತೋರಿಸವುದಷ್ಟೇ ಅಲ್ಲಾ, ನಾವು ನಿಮ್ಮ ಜೊತೆಗೆ ಇರುತ್ತೇವೆ…

ಮೆನೆ: ನಮಗೆ ನಿಮ್ಮ ರಕ್ಷಣೆಯ ಅಗತ್ಯವಿಲ್ಲ.

ಭಟ 1: ಮಹಾಮಂತ್ರಿಗಳ ಆಜ್ಞೆಯಾಗಿದೆ… ಪ್ರಭುಗಳ ವಿರುದ್ಧ ಬಂಡಾಯವೆದ್ದ ಪ್ರಾಂತ್ಯದವರು ನೀವು… ನಿಮಗೇನೆ ಹೆಚ್ಚೂಕಮ್ಮಿಯಾದರೂ ನಮ್ಮ ತಲೆಗೆ ಬರುತ್ತದೆ…

ಭಟ 2: ನಾವು ಸದಾ ಕಾಲ ನಿಮ್ಮ ಹಿಂದೆ – ಮುಂದೆ ಇರುತ್ತೇವೆ…

ಎಲ್ಲರ ಅಚ್ಚರಿ…

ಸೆಬೆಕ್: ಆಯಿತು, ನಡೆಯಿರಿ…

ಭಟನ ಜೊತೆಗೆ ಅವರು ಹೊರಡುತ್ತಾರೆ.

ದೃಶ್ಯ 14

ಹುಚ್ಚ ಮೆನ್ನ ರಸ್ತೆಯ ಮೂಲೆಯಲ್ಲಿ ಹಾಡುತ್ತಾ ಇದ್ದಾನೆ…

ಯಾರೊಡನೆ ನಾ ಮಾತಾಡಲಿ, ದೇವಾ!

ಯಾರೊಡನೆ ನಾ ಮಾತಾಡಲಿ…!

ಮನುಜನ ಹೃದಯ ದುರಾಸೆಯ ಕಡಲು…

ಪರರ ಸೊತ್ತನು ಬಾಚುವ ತೆವಲು… || ಯಾರೊಡನೆ ನಾ ಮಾತಾಡಲಿ ||

ಆಗಲೇ ಮೆನೆ, ಬೆಕ್, ಥಾನಿಸ್, ಖ್ನೆಮ್  ಭಟರ ಜೊತೆಗೆ ಅಲ್ಲಿಗೆ ಬರುತ್ತಾರೆ. ಭಟನೊಬ್ಬ ಹಾಡುತ್ತಾ ಇದ್ದವನನ್ನು ದೂರಕ್ಕೆ ಕಳಿಸುವಂತೆ ತನ್ನ ಭರ್ಜಿಯನ್ನು ಬೀಸುತ್ತಾನೆ. ಅವನಿಂದ ತಪ್ಪಿಸಿಕೊಂಡು ಹಾಡುವ ಮೆನ್ನಾ

ಧರ್ಮಶೀಲರೂ ಯಾರೂ ಇಲ್ಲ…

ದುಷ್ಟರೆ ತುಂಬಿಹ ಲೋಕವಿದಲ್ಲ… || ಯಾರೊಡನೆ ನಾ ಮಾತಾಡಲಿ ||

ಭಟ: ಏಯ್ ಹುಚ್ಚ…! ಮುಚ್ಚೋ ಬಾಯಿ…!

ಮೆನ್ನಾ ಅವನ ಮಾತಿಗೆ ನಗುತ್ತಾ, ಅವನ ಏಟಿಗೂ ನಗುತ್ತಾ ಹಾಡುತ್ತಾನೆ

ಪಾಪವೇ ತುಂಬಿದೆ ಈ ನೆಲವೆಲ್ಲಾ…

ಕೊನೆಯೇ ಇಲ್ಲ… ಕೊನೆಯೇ ಇಲ್ಲ… || ಯಾರೊಡನೆ ನಾ ಮಾತಾಡಲಿ ||

ಭಟ: ಏಯ್ ಹುಚ್ಚ…! ಏಳೋ ಇಲ್ಲಿಂದ…!

ಮೆನ್ನ: ಯಾಕೆ? ಮಹಾಪ್ರಭು ಫ್ಯಾರೋ ಬರ್ತಾ ಇದ್ದಾರಾ? ನಾನು ದಾರಿ ಬಿಡಬೇಕಾ?

ಭಟ: ಹುಚ್ಚರು ಉದ್ಯಾನವನದಲ್ಲಿ ಇರಬಾರದು… ನಡಿ…!

ಮೆನ್ನ: (ನಗುತ್ತಾ) ನನ್ನಂತವರಿಗೆ ಜಾಗ ಯಾವುದು ಅಂತ ತೋರಿಸಿ ಮಹಾಪ್ರಭುಗಳೇ? (ಎನ್ನುತ್ತಾ ಮೆನೆಪ್‍ಟಾ ಬಳಿಗೆ ಬರುತ್ತಾನೆ)

ಮೆನೆ: ನಾನು ಇಲ್ಲಿಯವನಲ್ಲ… ನಿಮ್ಮ ಹಾಡನ್ನು ಕೇಳಿ ಸಂಕಟವಾಗಿದ್ದಂತೂ ಹೌದು…

ಮೆನ್ನ: ಓಹೋ! ಇದೇನಿದು? ಯಾವ ದೊರೆಗಳು ಇಷ್ಟು ವಿನಯವಾಗಿ ಮಾತಾಡಿದ್ದನ್ನು ನಾನು ಕಂಡಿರಲೇ ಇಲ್ಲ…? ನೀಲ ನದಿ ಉತ್ತರಕ್ಕೆ ಹರಿಯುವ ಬದಲು ದಕ್ಷಿಣಕ್ಕೆ ಹರಿಯಲು ಆರಂಭವಾಯಿತೋ ಹೇಗೆ? ಹೇಳಿ, ಹೇಳಿ… ತಾವು ಯಾರು? ಎಲ್ಲಿಂದ ಬಂದಿರಿ?

ಮೆನೆ: ನನ್ನ ಹೆಸರು ಮೆನೆಪ್‍ಟಾ…!

ಮೆನ್ನ: ಓ! ನೀರಾನೆ ಪ್ರಾಂತ್ಯದ ನಾಯಕರು…! (ಖುಷಿಯಿಂದ) ನೀವು ರಾಜಧಾನಿಗೆ ಬಂದಿದ್ದೀರಿ ಎಂದರೆ, ಬಡವರ ಬಾಯಿಗೆ ಬಿಡುಗಡೆ ಸಿಕ್ಕಿದ ಹಾಗೆ… ಹಹ್ಹಹ್ಹ… (ತಾನೇ ಅವನ ಕೈ ಹಿಡಿದು ಮತ್ತೊಂದು ಮೂಲೆಗೆ ಕರೆದೊಯ್ಯುತ್ತಾ, ಮೆನೆಪ್‍ಟಾನನ್ನು ಮೇಲಿಂದ ಕೆಳಗೆ ನೋಡುತ್ತಾ) ಹಹ್ಹ… ಹೌದು… ಹಾಗೇ ಇದ್ದೀರಿ… ನಾನು ಕನಸಿನಲ್ಲಿ ಕಂಡದ್ದು ಇದೇ ಮುಖವನ್ನು… ಹಾಂ! ಹೀಗೆ ಇತ್ತು ಆ ಮುಖ…! ನೀವು ಮನುಷ್ಯರು…! ಹಹ್ಹ… ನಾಳೆ ನಿಮ್ಮನ್ನೂ ದೇವರು ಮಾಡುತ್ತಾರೆ ಈ ಜನ…! ನಿಜ ಹೇಳ್ತೀನಿ ಕೇಳಿ, ಈ ದೇಶದ ಸಾವಿರಾರು ದೇವರುಗಳು, ಒಂದಾನೊಂದು ಕಾಲದಲ್ಲಿ ಮನುಷ್ಯರೋ ಅಥವಾ ಪ್ರಾಣಿಗಳೋ ಆಗಿದ್ದವರು… ಅವರನ್ನೆಲ್ಲಾ ಅಧಿಕಾರ ಅನ್ನುವುದು ದೇವರಾಗಿಸಿಬಿಟ್ಟಿದೆ…! ಹಹ್ಹ…! ಈಗ ನೀವು ಹೇಳಿ? ನೀವು ಜನ ನಾಯಕರು, ಕ್ರಾಂತಿ ಪುರುಷರು… ನೀವು ಹೇಳಿ? ನಾನು ಹುಚ್ಚನೋ ಅಲ್ಲವೋ…? ಹ್ಹಹ್ಹಹ್ಹ (ಹುಚ್ಚನಂತೆ ನಗುತ್ತಾನೆ)

ಮೆನೆಪ್‍ಟಾ ಮಾತೇ ಆಡದೆ ನಿಲ್ಲುತ್ತಾನೆ. ಭಟ ಸರ್ರನೆ ಬಳಿಗೆ ಬರುತ್ತಾನೆ.

ಭಟ 1: ಮಹಾಸ್ವಾಮಿ, ನೀವಿನ್ನು ಅತಿಥಿಗೃಹಕ್ಕೆ ನಡೆಯಿರಿ…

ಭಟ 2: (ಮೆನ್ನನಿಗೆ) ಏಯ್ ಹುಚ್ಚ… ಮತ್ತೆ ಇಲ್ಲಿ ಕಾಣಿಸಿದರೆ ನಿನಗೆ ಚಡಿ ಶಿಕ್ಷೆ ಕೊಡಬೇಕಾಗುತ್ತದೆ…

ಮೆನ್ನ: ಜನನಾಯಕರೇ… ಈ ಮೆನ್ನ ನಿಮ್ಮ ಹಿಂದೆ ಇರುತ್ತಾನೆ… ಈ ನಾಡಿನ ಹುಚ್ಚು ಸುದ್ದಿಗಳನ್ನ ನಿಮಗೆ ಹೇಳುತ್ತಾ ಇರುತ್ತಾನೆ… (ನಗುತ್ತಾ ದೂರ ಸಾಗುತ್ತಾನೆ)

ಮೆನೆಪ್‍ಟಾ ಇತರರು ನಡೆಯ ತೊಡಗುತ್ತಾರೆ.

ಭಟ 1: ಮಹಾಸ್ವಾಮಿ ನೀವು ಅತಿಥಿಗೃಹದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ… ನನಗೆ ಹೇಳದೆ ರಾಜಧಾನಿಯ ಹೊರಗೆ ಹೋಗಬೇಡಿ. (ಎಂದು ಮುಂದೆ ನಡೆಯುತ್ತಾನೆ)

ಥಾನಿಸ್: (ಮೆನೆಪ್‍ಟಾ ಬಳಿ ಬಂದು) ಮೆನೆ, ಆ ಮನುಷ್ಯನನ್ನು ಹುಚ್ಚ ಅಂತ ಹೇಳೋಕ್ಕಾಗಲ್ಲ

ಬೆಕ್: ಸಧ್ಯ ಹುಚ್ಚ ಅನ್ನಿಸಿಕೊಂಡಿರೋದರಿಂದ ಬದುಕುಳಿದಿದ್ದಾನೆ…

ಸೆಬೆಕ್: ಅವನನ್ನು ನೊಡಿದರೆ ಕರುಳು ಚುರ್ ಅನ್ನುತ್ತದೆ…

ಮೆನೆ: ಅವನು ಮತ್ತೆ ನಮಗೆ ಸಿಗಬಹುದು… ಸಧ್ಯಕ್ಕೆ ರಾಜಧಾನಿಯ ಜನ ನಮಗೆ ತೊಂದರೆ ಮಾಡಲಾರರು ಎಂದು ಗೊತ್ತಾಯಿತಲ್ಲಾ ಅಷ್ಟು ಸಾಕು…

ಬೆಕ್: ನಾವಿರೋದೇ ಒಂದು ಕೋಟೆಯಲ್ಲಿ… ನಮಗೆ ಇನ್ಯಾರು ತೊಂದರೆ ಕೊಡ್ತಾರೆ…

ಥಾನಿಸ್: ಹೌದು… ಇಲ್ಲಿ ಉಸಿರುಗಟ್ಟುವ ವಾತಾವರಣ ಇರೋದಂತೂ ನಿಜ…

ಮೆನೆ: ದೊಡ್ಡವರ ಸಾಮಿಪ್ಯ ಎಂದರೆ ಹಾಗೆಯೇ…

ಸೆಬೆಕ್: ಅಂದರೆ ತಮ್ಮ ಸಹವಾಸವೋ?

ಮೆನೆ: (ನಗುತ್ತಾ) ನನ್ನದಲ್ಲ ಮಾರಾಯ! ಮಹಾಪ್ರಭುಗಳದ್ದು, ಮಹಾಮಂತ್ರಿಗಳದ್ದು!

ಎಂದು ನಗುತ್ತಾ ಮೂವರೂ ಹೋಗುವಾಗ ಹಿನ್ನೆಲೆಯಲ್ಲಿ ಮೆನ್ನನ ಹಾಡು ದೂರದಿಂದ ಎಂಬಂತೆ ಕೇಳುತ್ತಾ ಇದೆ.

ಹುಚ್ಚನ ಮಾಡಿದರೀ ಜನರು…!  ಹುಚ್ಚನ ಮಾಡಿದರೋ…!

ನಿಜವನು ಹೇಳಿದ ಜನರನ್ನು,  ಹುಚ್ಚನ ಮಾಡಿದರೋ…!

ದೇವರ ಮಾಡಿದರೀ ಜನರು…!  ದೇವರ ಮಾಡಿದರೋ…!

ಕುರ್ಚಿಯ ಹಿಡಿದ ಎಲ್ಲರನೂ ದೇವರ ಮಾಡಿದರೋ…!

ದೃಶ್ಯ 15

ಫ್ಯಾರೋನನ್ನು ಹೊತ್ತ ನಾಲ್ವರು ವೇದಿಕೆಗೆ ಬರುತ್ತಾರೆ. ಅಲ್ಲಿಗೆ ಮಹಾಮಂತ್ರಿ ಆಮೆರಬ್ ಸಹ ಮತ್ತೊಂದು ದಿಕ್ಕಿಂದ ಬರುತ್ತಾನೆ.

ಆಮೆರಬ್: ಮಹಾಪ್ರಭುಗಳಿಗೆ ಜಯವಾಗಲಿ…

ಫ್ಯಾರೋ: ನನಗಲ್ಲದೆ ಬೇರೆಯವರಿಗೆ ಜಯವಾಗುವುದುಂಟೇ? ಆ ವಿಷಯ ಬಿಡಿ… ರಾಜಗುರು ಹೇಪಾಟ್‍ನ ಸುದ್ದಿ ಹೇಳಿ? ಉತ್ತರದಿಕ್ಕಲ್ಲಿ ಮಹಾ ಧರ್ಮ ಸಮಾಜೋತ್ಸವ ಮಾಡುತ್ತಾ ಇದ್ದಾನಲ್ಲ… ಅದರ ಹಿಂದಿನ ಗುಟ್ಟೇನು?

ಆಮೆರಬ್: ಆತ ಹೆಸರಿಗೆ ಧರ್ಮ ಜಿಜ್ಞಾಸೆ ಎನ್ನುತ್ತಾ ನಿಮ್ಮ ವಿರುದ್ಧ ಸೈನ್ಯವನ್ನು ಕಟ್ಟುತ್ತಿದ್ದಾನೆ, ಮಹಾಪ್ರಭು…! ಅವನ ಜೊತೆಗೆ ದಕ್ಷಿಣ ಪ್ರಾಂತ್ಯದ ಭೂಮಾಲೀಕರು ಮತ್ತು ಕೆಲವು ರಾಜಪ್ರತಿನಿಧಿಗಳು ಕೈ ಜೋಡಿಸಿದ್ದಾರೆ. ನಮ್ಮ ಕಂದಾಯ ಮಂತ್ರಿ ಟೆಹುಟಿ ಸಹ ಅವನ ಬೆಂಬಲಕ್ಕೆ ನಿಂತಿದ್ದಾನೆ…

ಫ್ಯಾರೋ: ಓ! ಹಾಗಾದರೆ ರಾಜಗುರುವಿನ ಆಟಕ್ಕೆ ಸರಿಯಾದ ಉತ್ತರ ಹುಡುಕಿದ್ದೀರಾ ನೀವು?

ಆಮೆರಬ್: ಆ ಕೆಲಸ ಮಾಡುತ್ತಾ ಇದ್ದೇವೆ. ದಕ್ಷಿಣದ ನೀರಾನೆ ಪ್ರಾಂತ್ಯದ ರೈತ ನಾಯಕನನ್ನು ಸಹ ನಮ್ಮ ಬೆಂಬಲಕ್ಕೆ ಆಗಲಿ ಎಂದೇ ರಾಜಧಾನಿಗೆ ಕರೆಸಿದ್ದೇವೆ.

ಫ್ಯಾರೋ: ಹೇಗಿದ್ದಾನೆ ಆ ರೈತ ನಾಯಕ… ನೋಡುವುದಕ್ಕೆ ತೀರಾ ಸಾಮಾನ್ಯವಾಗಿದ್ದಾನೆ ಎಂದರು ಅಂತಃಪುರದ ಜೀತದಾಳುಗಳು…? ಸತ್ಯವೇ?

ಆಮೆರಬ್: ಹೌದು ಮಹಾಪ್ರಭು, ನೋಡುವುದಕ್ಕೆ ಅವನು ತೀರಾ ಸಾಮಾನ್ಯನೇ… ಆದರೆ ಯಾವ ಶಕ್ತಿಯೂ ಇಲ್ಲದೆ ಯಾರೂ ಒಂದು ಪ್ರಾಂತ್ಯಕ್ಕೆ ನಾಯಕರಾಗುವುದಿಲ್ಲ ಅಲ್ಲವೇ?

ಫ್ಯಾರೋ: ಈ ರೈತನಾಯಕನನ್ನು ಬಳಸಿ, ಆ ರಾಜಗುರು ಅನ್ನುವ ಕಾಯಿಯನ್ನು ಉರುಳಿಸಬಹುದೇ, ನಮ್ಮ ಚೌಕಮಣೆ ಆಟದಲ್ಲಿ?

ಆಮೆರಬ್: ಅದೇ ಉದ್ದೇಶದಿಂದ ನಿಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸುವ ಕೆಲಸ ಮಾಡುತ್ತಾ ಇದ್ದೇನೆ, ಪ್ರಭುಗಳೇ!

ಫ್ಯಾರೋ ತಲೆದೂಗುತ್ತಾನೆ.

ಆಮೆರಬ್: ನಾನೇ ಆ ನೀರಾನೆ ಪ್ರಾಂತ್ಯದ ನಾಯಕ ಮೆನೆಪ್‍ಟಾನನ್ನು ಒಮ್ಮೆ ಭೇಟಿ ಮಾಡಬೇಕಿದೆ. ತಾವು ಅಪ್ಪಣೆ ನೀಡಿದರೆ ಆ ಕೆಲಸ ಮಾಡುತ್ತೇನೆ…

ಫ್ಯಾರೋ: ಹೂಂ… ಯಾವ ಕಾರಣಕ್ಕೂ ಗುರುಮನೆಯೂ ಅರಮನೆಯನ್ನು ಆಳದಂತೆ ಎಚ್ಚರವಹಿಸಿ. ಸಾಮ್ರಾಜ್ಯದ ಐಕ್ಯತೆ ಮತ್ತು ನಮ್ಮ ಸಾರ್ವಭೌಮಾಧಿಕಾರಕ್ಕೆ ಧಕ್ಕೆ ಬರದ ಹಾಗೆ ವರ್ತಿಸುವಂತೆ ಆ ಸಾಮಾನ್ಯ ನಾಯಕನಿಗೆ ತಿಳಿಸಿ.

ಆಮೆರಬ್: ತಮ್ಮ ಅಪ್ಪಣೆಯಂತೆಯೇ ಆಗಲಿ…

ಫ್ಯಾರೋ: ಇನ್ನು ಹೊರಡಿ… ನಮ್ಮ ಪಾನಗೋಷ್ಟಿ ಮತ್ತು ನರ್ತನ ಗೋಷ್ಟಿ ಶುರುವಾಗಲಿ… ಉತ್ತರದ ನದಿ ತೀರದಿಂದ ಹೊತ್ತು ತಂದ ಹೆಣ್ಣುಗಳನ್ನು ಕರೆಸಿ… ನಾನವರ ಸೊಂಟಗಳನ್ನು ನೋಡಬೇಕಿದೆ…

ಹಿನ್ನೆಲೆಯಲ್ಲಿ ಹಾಡು ಕೇಳುತ್ತದೆ. ಇಬ್ಬರು ಸಖಿಯರು ವೇದಿಕೆಯಲ್ಲಿ ನರ್ತಿಸುತ್ತಾರೆ.

ದೃಶ್ಯ 16

ಮೆನ್ನ ಹಾಡುತ್ತಾ ಇದ್ದಾನೆ.

ಅರಮನೆಯಲ್ಲಿ ಹಾಡಿನ ಸಂತೆ,

ಬೀದಿಗಳಲ್ಲಿ ಬಡವರ ಬೊಂತೆ…!

ಕುಣಿಯುತ್ತಾರೆ ಯುವತಿಯರು,

ಕುಣಿಸುತ್ತಾರೆ ಸಿರಿಯುಳ್ಳವರು…!

ಕುದಿಯುತ್ತಾರೆ ಹಸಿದವರು,

ಮೈ ಮರೆಯುತ್ತಾರೆ ದೊಡ್ಡವರು…!

ಮೆನೆಪ್‍ಟಾ, ಬೆಕ್, ಥಾನಿಸ್ ಮತ್ತು ಖ್ನೆಮ್ ಬಂದುದನ್ನು ನೋಡಿ ಮೆನೆ ಬಳಿ ಅವಸರದಿಂದ ಓಡುವ ಮೆನ್ನ.

ಮೆನ್ನ: ಓ! ನೀವಿನ್ನೂ ಇಲ್ಲೇ ಇದ್ದೀರೋ?

ಮೆನೆ: ಯಾಕೆ? ನಾವೆಲ್ಲಿಗೆ ಹೋಗಬೇಕಿತ್ತು?

ಮೆನ್ನ: ಮೇಲಕ್ಕೆ…! ಹಹ್ಹ…! ಮನುಷ್ಯರಂತೆ ಕಾಣುವವರನ್ನೆಲ್ಲಾ ಮೇಲಕ್ಕೆ ಕಳಿಸುವುದೇ ಇವತ್ತಿನ ಆಡಳಿತ…! ಅದಕ್ಕೆ ನಿಮ್ಮ ಮನೆ ಇರುವ ಹಾದಿಯಲ್ಲಿ ಆ ಮಹಾ ಕುತಂತ್ರಿ, ಕ್ಷಮಿಸಿ ಮಹಾ ಮಂತ್ರಿ ಆಮೆರಬ್ ಬರುತ್ತಾ ಇದ್ದಾನೆ…! ತೆಗೆಯಿರಿ ಒರೆಯಿಂದ ಕತ್ತಿಯನ್ನು…! ಹಿಡಿಯಿರಿ ಸರಿಯಾಗಿ ಸಾಣೆಯನ್ನು…! ತೆಗೆದುಬಿಡಿ ತಲೆತೆಗೆವವರ ತಲೆಯನ್ನು…! (ಎನ್ನುತ್ತಾ ಮತ್ತೆ ಎತ್ತಲೋ ಓಡುತ್ತಾನೆ)

ಅವನನ್ನೇ ನೋಡುವ ಮೆನೆ, ಬೆಕ್, ಥಾನಿಸ್ ಮತ್ತು ಖ್ನೆಮ್…

ಖ್ನೆಮ್: ಅಂದರೆ, ತಲೆತೆಗೆಯುವುದಕ್ಕೆ ನಮ್ಮನ್ನು ಈ ಮನೆಯಲ್ಲಿ ಇರಿಸಿದ್ದಾರಾ?

ಬೆಕ್: ನನಗೆ ರಾಜಧಾನಿಗೆ ಬಂದಾಗಿನಿಂದ ಅನುಮಾನವಿದೆ… ಈ ರಾಜಕಾರಣಿಗಳು ಏನು ಬೇಕಾದರೂ ಮಾಡಿ ಅದನ್ನು “ರಾಜಧರ್ಮ” ಎಂದು ಬಿಡುತ್ತಾರೆ.

ಮೆನೆ: ಮೊದಲು ನೀವು ಎಲ್ಲರೂ ಒಳಗಡೆ ಇರಿ… ಇಲ್ಲೇನಾಗುವುದು ಗಮನಿಸುತ್ತೀರಿ…

ಬೆಕ್ ಉಳಿದವರ ಜೊತೆಗೆ ಒಳಗೆ ಹೋಗುತ್ತಾನೆ. ಮೆನೆಪ್‍ಟಾ ಯಾರದೋ ದಾರಿ ಕಾಯುವಂತೆ ಅಲ್ಲಿಯೇ ನಿಲ್ಲುತ್ತಾನೆ. ಮಹಾಮಂತ್ರಿ ಅಮೆರಬ್ ನಾಲ್ವರು ಭಟರು ಹೊತ್ತ ಮೇನೆಯಲ್ಲಿ ಬಂದಿಳಿಯುತ್ತಾನೆ.

ಆಮೆರಬ್ ಕೆಳಗೆ ಇಳಿಯುವಾಗ ಮೆನೆಪ್‍ಟಾ ಆತನ ಬಳಿಗೆ ಬರುತ್ತಾನೆ. ಭಟರು ನಾಲ್ಕು ಮೂಲೆಗಳಲ್ಲಿ ನಿಲ್ಲುತ್ತಾರೆ…

ಆಮೆರಬ್: ನೀರಾನೆ ಪ್ರಾಂತ್ಯದ ಜನನಾಯಕರಿಗೆ ನಮಸ್ಕಾರ…!

ಮೆನೆಪ್‍ಟಾ ಆತನಿಗೆ ಬಾಗಿ ವಂದಿಸುತ್ತಾನೆ.

ಆಮೆರಬ್: ಮಹಾಪ್ರಭುಗಳ ಆಹ್ವಾನವನ್ನು ಒಪ್ಪಿಕೊಂಡು ನೀವು ಉತ್ಸವಕ್ಕೆ ಬಂದದ್ದು ಸಂತೋಷದ ವಿಷಯ…!

ಮೆನೆ: ಮಹಾಮಂತ್ರಿಗಳು ಆಹ್ವಾನದ ಹೆಸರಲ್ಲಿ, ಆದೇಶ ಕಳಿಸಿದಾಗ ಬರದೆ ಇರುವುದು ಸಾಧ್ಯವಿರಲಿಲ್ಲ…

ಆಮೆರಬ್: (ನಗುತ್ತಾ) ನೀವು ನಾಯಕರಾಗಿದ್ದು ಹೇಗೆ ಎಂದು ಮತ್ತೆ ಸಾಬೀತು ಮಾಡಿದಿರಿ… ಹಹ್ಹ!

ಮೆನೆ: ಮಹಾಮಂತ್ರಿಗಳಲ್ಲಿ ನಮ್ಮದೊಂದು ಪ್ರಾರ್ಥನೆ ಇದೆ.

ಆಮೆರಬ್: ಯಾವ ಸಂಕೋಚವೂ ಇಲ್ಲದೆ ತಿಳಿಸಿ, ನಾಯಕರೇ!

ಮೆನೆ: ನಮ್ಮ ಪ್ರಾಂತ್ಯದಲ್ಲಿ ನಡೆದದ್ದೆಲ್ಲಾ ತಮ್ಮ ಗಮನಕ್ಕೆ ಬಂದಿರಬಹುದು…

ಆಮೆರಬ್: ಹೌದು, ಹೌದು… ಎಲ್ಲವೂ ಗೊತ್ತಾಗಿದೆ.

ಮೆನೆ: ನಾವು ಉದ್ದೇಶಪೂರ್ವಕವಾಗಿ ಹಾಗೆ ನಡೆದುಕೊಂಡದ್ದಲ್ಲ…

ಆಮೆರಬ್: (ಮೆನೆಯ ಮಾತನ್ನು ತುಂಡರಿಸುತ್ತಾ) ಆ ವಿಷಯವಾಗಿ ಮಹಾಪ್ರಭುಗಳು ನಿಮ್ಮೊಂದಿಗೆ ಮಾತಾಡುತ್ತಾರೆ… ಸಧ್ಯ ನಾನು ಹೇಳಬಹುದಾದ್ದು ಇಷ್ಟೆ…

ಭಟ 1: (ಆಮೆರಬ್‍ನ ಮಾತು ತುಂಡರಿಸುತ್ತಾ) ಛತ್ರಗಳ ಮೇಲ್ವಿಚಾರಕರು ಮಹಾಮಂತ್ರಿಗಳನ್ನು ಕಾಣಲು ಬಂದಿದ್ದಾರೆ.

ಆಮೆರಬ್: ಅವರ ಜೊತೆಗೆ ಇನ್ಯಾರಿದ್ದಾರೆ?

ಭಟ 2: ಸಾರಿಗೆ ವಿಭಾಗದವರಿದ್ದಾರೆ.

ಆಮೆರಬ್: ಮೊದಲು ಛತ್ರದವರನ್ನು ಕಳಿಸಿ… ನಂತರ ಮತ್ತೊಬ್ಬರು…

ಭಟರು ಅವರನ್ನು ಕರೆತರಲು ಹೋಗುತ್ತಾರೆ.

ಮೆನೆ: ಒಳಗಿನ ಕೋಣೆಯಿಂದ ನೀವು ಕೂರಲು ಆಸನ ತಂದಿಡಲೇ?

ಆಮೆರಬ್: ಮತ್ತೆ? ಈ ಜೀತದವರು ನಮ್ಮ ಆಸನವೇ ಅಲ್ಲವೇ…? ನೀವು ಆಸನ ತಂದಿಟ್ಟರೆ ಪಾಪದ ಆಳಿನ ಸಂಬಳಕ್ಕೆ ಖೋತ ಆಗುವುದಿಲ್ಲವೇ? ರೈತ ನಾಯಕರು ಬಡವರ ಹೊಟ್ಟೆಯ ಮೇಲೆ ಹೊಡೆಯಬಹುದೇ? (ಎಂದು ಭಟನೊಬ್ಬನನ್ನು ಸಿಂಹಾಸನ ಮಾಡಿಕೊಂಡು ಅವನ ಮೇಲೆ ಕೂರುತ್ತಾನೆ)

ಮೆನೆಪ್‍ಟಾಗೆ ಸಂಕಟ

ಆಗಲೇ ಅವರ ಬಳಿಗೆ ಭಟರ ಜೊತೆಗೆ ಬರುವ ಛತ್ರದ ಮೇಲ್ವಿಚಾರಕ.

ಛ ಮೇ: ಮಹಾಮಂತ್ರಿಗಳಿಗೆ ವಂದನೆಗಳು…

ಆಮೆರಬ್: (ಭಟನ ಬೆನ್ನ ಮೇಲೆ ಕಾಲ ಮೇಲೆ ಕಾಲು ಹಾಕಿ ಕೂತು) ಬನ್ನಿ, ಬನ್ನಿ ಏನು ಸಮಾಚಾರ?

ಛ.ಮೇ: ಈ ವರ್ಷ ಸಾಕಾಗುವಷ್ಟು ದವಸ ಇಲ್ಲ. ಹೊಸ ಬೆಳೆ ಬರುವವರೆಗೆ ಏನಾದರೂ ವ್ಯವಸ್ಥೆ ಮಾಡಬೇಕು ಎಂದು ಮನವಿ.

ಆಮೆರಬ್: ಏನು ಮಾಡುವುದು ಹೇಳಿ? ಈ ವರ್ಷ ಕಂದಾಯ ವಸೂಲಿಗೆ ಹೋದವರನ್ನೇ ರೈತರು ಹೊಡೆದೋಡಿಸಿದ್ದಾರೆ… (ಮೆನೆಯತ್ತ ಒಮ್ಮೆ ನೋಡಿ) ಮಳೆಯ ಕೊರತೆ ಇದೆ ದೇಶದಲ್ಲಿ… ಹಾಗೆಂದು ನಿಮಗೆ ಬೇಕಾದುದನ್ನು ಒದಗಿಸದೆ ಇರಲಾದೀತೇ? ರಾಜ ಕಣಜದಿಂದ ಕಳಿಸಲು ತಿಳಿಸುತ್ತೇನೆ.

ಛ.ಮೇ: ಅಪ್ಪಣೆ ಮಹಾಸ್ವಾಮಿ (ಎಂದು ಭಟರ ಜೊತೆಗೆ ಹೊರಡುತ್ತಾನೆ)

ಆಮೆರಬ್: (ಮೆನೆಗೆ) ಹೀಗಿದೆ ನೋಡಿ ರಾಜಧಾನಿಯ ಪರಿಸ್ಥಿತಿ. ಹಳ್ಳಿಗಳಿಂದ ಬರುವ ಭೂಮಾಲೀಕರು ಉಳಿಯಲು ಛತ್ರಗಳನ್ನು ನಡೆಸುವುದು ಅಗತ್ಯ. ಆದರೆ ಆ ಛತ್ರಗಳಿಗೆ ಬೇಕಾಗುವಷ್ಟು ದವಸವನ್ನೂ ನಾವೇ ಒದಗಿಸಬೇಕಾಗಿದೆ.

ಸಾರಿಗೆ ಅಧಿಕಾರಿಯು ಬರುತ್ತಾನೆ

ಸಾ.ಅ: ವಂದನೆಗಳು ಮಹಾಸ್ವಾಮಿ.

ಆಮೆರಬ್: ಹೇಳಿ, ಹೇಳಿ… ಏನು ಸಮಾಚಾರ?

ಸಾ.ಅ: ಉತ್ತರದಲ್ಲಿರುವ ಸೈನ್ಯಕ್ಕೆ ಕಳಿಸಬೇಕಾದ ಭತ್ಯೆಗೆ ಕೊರತೆ ಇದೆ. ಕೂಡಲೇ ಏನಾದರೂ ವ್ಯವಸ್ಥೆ ಮಾಡಬೇಕು ಮಹಾಸ್ವಾಮಿ.

ಆಮೆರಬ್: ಆಗಲಿ… ರಾಜಬೊಕ್ಕಸದಿಂದ ಕಳಿಸುವ ವ್ಯವಸ್ಥೆ ಮಾಡುತ್ತೇನೆ.

ಸಾರಿಗೆ ಅಧಿಕಾರಿ ಹೊರಡುತ್ತಾನೆ. ಆಮೆರಬ್ ತಾನು ಕುಳಿತಲ್ಲಿಂದ ಎದ್ದು ಮೆನೆಪ್‍ಟಾ ಬಳಿಗೆ ಬರುತ್ತಾನೆ

ಆಮೆರಬ್: ನಾಯಕರೇ,… ಮಹಾಮಂತ್ರಿ ಅಂದರೆ ಪ್ರಭುಗಳ ಕಣ್ಣು, ಕಿವಿ, ಬಾಯಿ… ಎಲ್ಲಾ ಆಗಬೇಕು! ಸ್ವಂತ ಅಂತ ನಮ್ಮದೂ ಏನೂ ಇಲ್ಲ. ಎಲ್ಲಾ ಚೆನ್ನಾಗಿ ನಡೆದರೆ ನಮ್ಮ ಸಮಾನ ಯಾರೂ ಇಲ್ಲ… ಸಣ್ಣ ವ್ಯತ್ಯಾಸ ಆದರೂ ತಲೆ ಉರುಳುತ್ತದೆ. ಸದಾ ಕಾಲವೂ ತಂತಿಯ ಮೇಲಿನ ನಡಿಗೆ… ಆ ರಾಜಗುರು ಬೇರೆ, ಆಡಳಿತ ಸರಿಯಿಲ್ಲ ಎಂದು ಸಾಮಂತರನ್ನೆಲ್ಲಾ ಸೇರಿಸಿಕೊಂಡು ಪಿತೂರಿ ಮಾಡುತ್ತಾ ಇದ್ದಾನೆ. ಮಹಾಪ್ರಭು ಎಂದರೆ ಭೂಮಿಯ ಮೇಲಿನ ನಡೆದಾಡುವ ದೇವರಲ್ಲವೇ? ಆದರೆ ರಾಜಗುರುಗಳಾದವರು ಮಹಾಪ್ರಭುಗಳ ವಿರುದ್ಧ ಆಲೋಚನೆ ಮಾಡುವುದು ಸರಿಯಲ್ಲ, ಅಲ್ಲವೇ?

ಮೆನೆ: ರಾಜಗುರುಗಳ ವಶದಲ್ಲಿ ಅಪಾರ ಸಂಪತ್ತಿದೆ ಎಂದು ಸುದ್ದಿ ಇದೆ?

ಆಮೆರಬ್: ಸುದ್ದಿಗಳು ಯಾವಾಗಲೂ ಸುಳ್ಳಾಗಿರುವುದಿಲ್ಲ… ಆದರೆ ಆನೆ ತೂಕ ಆನೆಗೆ, ಸೊಳ್ಳೆ ತೂಕ ಸೊಳ್ಳೆಗೆ… (ನಗುತ್ತಾ) ನಾಯಕರೇ, ನೀವಂತೂ ಮಹಾಪ್ರಭುಗಳ ಬೆಂಬಲಕ್ಕೆ ಸದಾ ಕಾಲ ಇರುತ್ತೀರಲ್ಲವೇ?

ಮೆನೆ: ಖಂಡಿತಾ…

ಆಮೆರಬ್: ಸರಿ ಹಾಗಾದರೆ. ನಾನಿನ್ನು ಹೊರಡುತ್ತೇನೆ. ನಾಳೆಯ ಔತಣಕೂಟದಲ್ಲಿ ಪ್ರಭುಗಳು ನಿಮ್ಮನ್ನು ಕಾಣುತ್ತಾರೆ.

ಅವನ ಸನ್ನೆಗೆ ಭಟರ ಮೇನೆ ಸಿದ್ಧವಾಗುತ್ತದೆ. ಮಹಾಮಂತ್ರಿ ಹೊರಡುತ್ತಾನೆ. ಆ ವರೆಗೆ ಕಂಭಗಳ ಮರೆಯಲ್ಲಿದ್ದ ಬೆಕ್, ಥಾನಿಸ್, ಖ್ನೆಮ್ ಸರ್ರನೆ ಬಳಿಗೆ ಬರುತ್ತಾರೆ.

ಬೆಕ್: ಮೆನೆ, ಏನನ್ನುತ್ತಾರೆ ಮಹಾಮಂತ್ರಿಗಳು?

ಮೆನೆ: ಅವರು ಆಡಿದ್ದಕ್ಕಿಂತ ಆಡದೆ ಇದ್ದ ಮಾತುಗಳಿಂದ ತಿಳಿಯಬೇಕಾದ್ದೇ ಹೆಚ್ಚು.

ಖ್ನೆಮ್: ಒಳ್ಳೇ ಒಗಟಾಯಿತಲ್ಲಾ ಇದು?

ಮೆನೆ: ಹೂಂ… ರಾಜಧಾನಿಯಲ್ಲಿ ಈಗ ಎರಡು ಗುಂಪುಗಳಿದೆ. ಒಂದು ಮಹಾಪ್ರಭುಗಳು ಮತ್ತು ಮಹಾಮಂತ್ರಿಯದ್ದು, ಮತ್ತೊಂದು ರಾಜಗುರುವಿನದ್ದು ಮತ್ತು ಆತನ ಜೊತೆಗಿರುವ ಸಾಮಂತರದ್ದು. ಮಹಾಪ್ರಭುಗಳ ಶಕ್ತಿಯನ್ನು ಕುಗ್ಗಿಸಿ ಅರಮನೆಯು ಗುರುಮನೆಗೆ ಅಧೀನವಾಗಿರುವಂತೆ ಮಾಡುವ ಸಂಚು ನಡೆದಿದೆಯಂತೆ. ಯಾರ ಕೈ ಮೇಲಾಗುವುದೋ ಅವರಿಗೇ ಜಯ.

ಬೆಕ್: ಹಾಗಾದರೆ ನಾವು ಆದಷ್ಟು ಬೇಗ ನಮ್ಮ ಪ್ರಾಂತ್ಯಕ್ಕೆ ಹಿಂದಿರುಗುವುದೇ ಒಳ್ಳೆಯದು.

ಮೆನೆ: ಮಹಾಪ್ರಭುಗಳಿಗೆ ನಮ್ಮ ನಿಷ್ಠೆಯನ್ನು ತೋರುವುದಕ್ಕಾದರೂ ನಾವು ವರ್ಧಂತಿ ಉತ್ಸವದ ವರೆಗೆ ನಿಲ್ಲಬೇಕಾಗುತ್ತದೆ.

ಬೆಕ್: ಆದರೆ ಮೆನೆ, ರಾಜನ ಬಲ ಕುಗ್ಗಿದರೆ ನಾವೇ ಮೊದಲ ಬಲಿಪಶು ಆಗಬಹುದು.

ಮೆನೆ: ಹೂಂ… ನಿನ್ನ ಊಹೆ ಸರಿಯಾಗಿದೆ…

ಖ್ನೆಮ್: ಬಾಗಿಲಿಗೆ ಯಾರೋ ಬಂದಂತಾಯಿತು…

ಬಾಗಿಲ ಬಳಿ ಎಲ್ಲರೂ ನೋಡುತ್ತಾರೆ. ಹೇಪಾಟ್‍ನ ಶಿಷ್ಯ ಪ್ರವೇಶಿಸುತ್ತಾನೆ

ಶಿಷ್ಯ: ನೀರಾನೆ ಪ್ರಾಂತ್ಯದ ನಾಯಕರಿಗೆ ರಾಜಗುರುವಿನ ಪ್ರಧಾನ ಸೇವಕನ ಪ್ರಣಾಮಗಳು…!

ಮೆನೆ: (ಆತನಿಗೆ ಬಾಗಿ ನಮಿಸುತ್ತಾ) ಹಿರಿಯರಿಗೆ ನಮಸ್ಕಾರಗಳು.

ಶಿಷ್ಯ: ನೀವು ರಾಜಧಾನಿಗೆ ಬಂದ ಕೂಡಲೇ ನೋಡಬೇಕೆಂದು ರಾಜಗುರುಗಳು ಹೇಳಿದ್ದರು. ಅದಕ್ಕಾಗಿ ಬಂದೆ. (ಮೆಲ್ಲಗೆ) ಹೀಗೆಂದೇ ಎಂದು ತಪ್ಪು ತಿಳಿಯಬೇಡಿ. ನಿಮ್ಮನ್ನು ಮಹಾಪ್ರಭುಗಳ ವರ್ಧಂತಿಯ ಹೆಸರಲ್ಲಿ ಕರೆಸಿದ್ದಾರೆ. ಆದರೆ ಅದು ಸಧ್ಯಕ್ಕೆ ನಡೆಯುವುದಿಲ್ಲ.

ಮೆನೆ: ಓ!… ಹಾಗೇನು?

ಶಿಷ್ಯ: ಮತ್ತೆ ಆ ಮಹಾಮಂತ್ರಿ ಏನನ್ನುತ್ತಾನೆ? ನಿಮ್ಮನ್ನು ಮಹಾಪ್ರಭುಗಳ ಔತಣಕೂಟಕ್ಕೆ ಕರೆದನೋ?

ಮೆನೆ: ಹೌದು. ನಾಳೆಯ ಔತಣಕ್ಕೆ ಆಹ್ವಾನ ನೀಡಿದ್ದಾರೆ.

ಶಿಷ್ಯ: ಅದೊಂದು ನಾಟಕ. ನೀವೂ ನೋಡಿ ಬಿಡಿ.! ಆದರೆ ನಿಮ್ಮ ಪ್ರೀತಿ ಮಾತ್ರ ರಾಜಗುರುವಿಗೆ ಇರಲಿ. ಎಷ್ಟೇ ಆಗಲಿ ದೇವರುಗಳ ಜೊತೆ ಮಾತಾಡಬಲ್ಲವರು ಅವರೇ ತಾನೇ…

ಮೆನೆ ತಲೆದೂಗುತ್ತಾನೆ.

ಶಿಷ್ಯ: ನಾನು ಸಿಗುತ್ತೇನೆ. ಔತಣಕೂಟ ಮುಗಿಸಿದ ಮೇಲೆ ನಿಮ್ಮ ಜೊತೆಗೆ ಮಾತಾಡುತ್ತೇನೆ…

ಎಂದು ಹೊರಡುತ್ತಾನೆ… ಅವನನ್ನೇ ನೋಡುತ್ತಾ ನಿಲ್ಲುವ ಮೆನೆ, ಬೆಕ್, ಥಾನಿಸ್, ಖ್ನೆಮ್…

ದೃಶ್ಯ 17

ದೃಶ್ಯ ಬದಲಾದಾಗ ಅರಮನೆಯ ವಿವರಗಳು ಕಾಣುತ್ತವೆ. ವೇದಿಕೆಯಲ್ಲಿ ಜನರಿಂದಲೇ ತಯಾರಾದ ಮೇಜು ಸಿದ್ಧಗೊಳಿಸುತ್ತಾ ಇರುವ ನೆಹನವೆಯ್ಟ್ (ಗೇಬುವಿನ ಪತ್ನಿ). ಆಗಲೇ ಬರುವ ಮಹಾರಾಣಿ ನೆಫರ್‍ಟೀಮ್.

ನೆಫರ್: ಓಹೋ! ನೆಹನವೆಯ್ಟ್… ರಾಜಧಾನಿಗೆ ಹಿಂದಿರುಗಿದ ಮೇಲೆ ಭಾರೀ ಒಳ್ಳೆಯ ಕೆಲಸವೇ ಸಿಕ್ಕಿರುವ ಹಾಗಿದೆ…

ನೆಹನ: ಹಾಂ! ಮಹಾರಾಜರಿಗಾಗಿ ಔತಣದ ವ್ಯವಸ್ಥೆ ಮಾಡುವುದರಲ್ಲಿಯೂ ಒಂದು ಆನಂದ ಇದೆಯಲ್ಲವೇ…?

ನೆಫರ್: ಅದು ಸರಿ… ಇದೇನಿದು ಇಷ್ಟೊಂದು ಅಲಂಕಾರ? ಇವತ್ತೇನು ವಿಶೇಷ?

ನೆಹನ: ಮಹಾರಾಣಿಯವರೊಂದಿಗೆ ಔತಣ ಎಂದಾಗ ಇಷ್ಟಾದರೂ ಅಲಂಕಾರ ಬೇಕಲ್ಲವೇ?

ನೆಫರ್: (ವ್ಯಂಗ್ಯ) ನಿನ್ನ ಅಲಂಕಾರ ಮಹಾರಾಣಿಗಾಗಿ ಅಲ್ಲ, ಮಹಾರಾಜರಿಗಾಗಿ ಅನ್ನೋದೂ ನನಗೂ ತಿಳಿಯುತ್ತದೆ ಬಿಡು…

ನೆಹನ: ಅಯ್ಯೋ! ನಮಗೀಗ ಅರಮನೆಯ ದಾರಿಯೇ ಗೊತ್ತಾಗದ ಹಾಗಾಗಿದೆ. ಅದು ನೀವು ನಮ್ಮನ್ನು ಆ ನೀರಾನೆ ಪ್ರಾಂತ್ಯಕ್ಕೆ ಕಳಿಸಿದ ಮೇಲೆ…

ನೆಫರ್: ಆದರೆ ಅರಸರು ಮಾತ್ರ ಇನ್ನೂ ನಿನ್ನ ಔತಣದ ವ್ಯವಸ್ಥೆ ನೋಡಲು ಬಂದಿಲ್ಲವಲ್ಲ…?

ನೆಹನ: (ಅತ್ತ ನೋಡುತ್ತಾ) ಹೌದು… ಯಾಕೋ ಅವರಿನ್ನೂ ಬಂದಿಲ್ಲ.

ನೆಫರ್: ಹೂಂ… ಮೊದಲಾಗಿದ್ದರೆ ನಾನೇ ನೋಡುತ್ತೇನೆ ಎಂದು ಕುಣಿಯುತ್ತಾ ಹೋಗುತ್ತಾ ಇದ್ದವಳು ಇನ್ನೂ ಇಲ್ಲೇ ನಿಂತಿದ್ದೀಯಲ್ಲಾ…?

ನೆಹನ: ಕಾಲ ಬದಲಾಗಿದೆ… ನಿಮ್ಮ ಹಾಗೆ ಸದಾ ಯೌವನದಲ್ಲಿರುವ ಭಾಗ್ಯವನ್ನು ನಾವು ರಾಜಗುರುಗಳಿಂದ ಪಡೆದಿಲ್ಲವಲ್ಲಾ… (ತಟ್ಟನೆ ವಿಷಯ ಬದಲಿಸಿ) ಆದರೆ ಮಹಾರಾಣಿ, ಇವತ್ತು ನೀವೂ ಬಹಳ ಸುಂದರವಾಗಿ ಕಾಣ್ತಿದ್ದೀರಿ… ರಾಜಗುರುಗಳು ಊರಲ್ಲಿಲ್ಲ ಅನ್ನುವುದಷ್ಟೇ ಬೇಸರದ ಸಂಗತಿ…

ನೆಫರ್: (ಅವಳನ್ನು ಸಿಟ್ಟಿನಿಂದ ನೋಡ್ತಾಳೆ) ಯಾರು ಯಾವಾಗ ಎಲ್ಲಿರುತ್ತಾರೆ? ಹೇಗೆ ಹೇಗೆ ಇರುತ್ತಾರೆ ಅನ್ನೋದು ನನಗೂ ಗೊತ್ತಿದೆ ನೆಹನವೆಯ್ಟ್… ನಿಮ್ಮ ಈ ಅಲಂಕಾರದಿಂದ ನೀವು ಮಹಾರಾಣಿಯಾಗುವುದಿಲ್ಲ ಅನ್ನೋದು ನೆನಪಿದ್ದರೆ ಸಾಕು.

ಅವಳು ಮತ್ತೇನೋ ಮಾತಾಡುವಾಗಲೇ ಅಲ್ಲಿಗೆ ಬರುವ ಗೇಬು.

ಗೇಬು: ಮಹಾರಾಣಿಯವರಿಗೆ ಜಯವಾಗಲಿ…!

ನೆಫರ್: ಓ! ಓಡಿಸಿಕೊಂಡ ಮಹಾಸಾಮಂತರು! ನಿಮ್ಮ ಹೆಂಡತಿಯನ್ನ ಇಷ್ಟೆಲ್ಲಾ ಅಲಂಕಾರದ ಜೊತೆಗೆ ಭೋಜನ ವ್ಯವಸ್ಥೆ ಮಾಡಲು ಬಿಟ್ಟಿದ್ದೀರಿ ಎಂದರೆ ದಂಪತಿಗಳ ಉದ್ದೇಶ ಸ್ಪಷ್ಟವಾಯಿತು ಬಿಡಿ…

ಗೇಬು: ಅದು ಮಹಾರಾಣಿಯವರೇ,… (ಸುಳ್ಳು ಎಂಬುದು ಗೊತ್ತಾಗುವಂತೆ ನೆಹನಾಳ ಸನ್ನೆಗೆ ತಕ್ಕಂತೆ) ಸ್ವತಃ ಮಹಾಮಂತ್ರಿಗಳು ಈ ವ್ಯವಸ್ಥೆ ಮಾಡಿದ್ದರು.

ನೆಫರ್: ಓ! ಮಹಾಮಂತ್ರಿಯೂ ನಿಮ್ಮ ತಂತ್ರಗಾರಿಕೆಯಲ್ಲಿ ಪಾಲುದಾರರೋ?

ನೆಹನ: ಮಹಾಪ್ರಭುಗಳ ಭೇಟಿಗೆ ನೀರಾನೆ ಪ್ರಾಂತ್ಯದ ನಾಯಕ ಬರುತ್ತಾ ಇರುವಾಗ ನಾವೂ ಜೊತೆಯಲ್ಲಿರುವುದು ಕೇವಲ ತಂತ್ರವಲ್ಲ ಮಹಾರಾಣಿ…! ನಮ್ಮ ಸುರಕ್ಷೆಯ ಮುಂದಾಲೋಚನೆ, ಅಷ್ಟೆ.

ಗೇಬು: ನಾನು ಮಹಾಪ್ರಭುಗಳನ್ನು ಕರೆತರುತ್ತೇನೆ…

ಮಹಾರಾಣಿ ನೆಫರ್ ಸಿಟ್ಟಲ್ಲಿ ನೋಡುವಾಗಲೇ ಅಲ್ಲಿಗೆ ಬರುವ ಆಮೆರಬ್ ಮತ್ತು ಮೆನೆಪ್‍ಟಾ. ಮೆನೆಪ್‍ಟಾನ ಕೈಯಲ್ಲಿ ಬೃಹತ್ ಬಟ್ಟೆಯ ಗಂಟು ಇದೆ.

ಆಮೆರಬ್: ಸಾಮ್ರಾಜ್ಞಿಯವರಿಗೆ ಸೇವಕನ ಪ್ರಣಾಮಗಳು. ಇವರೇ ದಕ್ಷಿಣದ ನೀರಾನೆ ಪ್ರ್ಯಾಂತ್ಯದ ನಾಯಕರು.

ಮೆನೆ: ಮಹಾರಾಣಿಯವರಿಗೆ ವಂದನೆಗಳು

ನೆಫರ್: ನಿಮಗೆ, ನಿಮ್ಮ ಪ್ರಾಂತ್ಯಕ್ಕೆ ಒಳಿತಾಗಲಿ. (ಎನ್ನುತ್ತಾ ನೆಹನ ಹತ್ತಿರ ಬರುತ್ತಾಳೆ.) ದಕ್ಷಿಣ ಪ್ರಾಂತ್ಯದ ನಾಯಕ ನೋಡಲು ಚೆನ್ನಾಗಿದ್ದಾನೆ ಅಲ್ಲವೆ?

ನೆಹನ ಅವಳತ್ತ ಸುಮ್ಮನೆ ನೋಡುತ್ತಾಳೆ.

ನೆಫರ್: ಯಾಕೆ? ನಿಮ್ಮನ್ನು ಅಲ್ಲಿಂದ ಓಡಿಸಿದವನ ಬಗ್ಗೆ ಕೋಪವೇ?

ನೆಹನ: ನಮ್ಮ ಕೋಪವನ್ನು ಕೇಳುವವರಾರು? ನಿಮ್ಮ ಕೋಪಕ್ಕಾದರೆ ಸಮುದ್ರವೂ ಹತ್ತಿ ಉರಿದೀತು?

ನೆಫರ್: ಪರವಾಗಿಲ್ಲ… ಸಾಮಂತನ ಮಡದಿಗೆ ನೆಲೆ ಕಳಕೊಂಡ ಮೇಲೆ ಮಾತು ಬಂದ ಹಾಗಿದೆ…

ಆಗಲೇ ನಾಲ್ವರು ಫ್ಯಾರೋನನ್ನು ಮೇನೆಯಲ್ಲಿ ತರುತ್ತಾರೆ. ಅವರ ಹಿಂದೆ ಗೇಬು… ನೆಹನ ಮತ್ತು ಗೇಬುವಿನ ನಡುವೆ ಸನ್ನೆಯ ಮಾತುಗಳು ನಡೆಯುವಾಗ…

ಫ್ಯಾರೋ: ಕುಳಿತುಕೊಳ್ಳಿ… ಔತಣದ ಜೊತೆಗೆ ಔಪಚಾರಿಕ ಸಭೆಯೂ ಆಗಿ ಹೋಗಲಿ. ಮಹಾರಾಣಿಯವರು ನನ್ನ ಎಡಮಗ್ಗುಲಿಗೆ… ಸುಂದರಿ ನೆಹನವೇಯ್ಟ್ ನನ್ನ ಬಲಮಗ್ಗುಲಿಗೆ… ಮಹಾಮಂತ್ರಿಗಳೇ ಕೂಡಿ… ಹೊಸ ನಾಯಕರೇ ನೀವೂ ಸಹ.

ಫ್ಯಾರೋ ಮೇನೆಯಿಂದ ಇಳಿಯದೆ ಕೂತೇ ಇದ್ದಾನೆ. ನೆಹನ ಅವಸರದಿಂದ ಫ್ಯಾರೋನ ಬಲ ಮಗ್ಗುಲಿಗೆ ಬಂದು ಮೇನೆಯ ಪಕ್ಕದಲ್ಲಿ ಕೂರುತ್ತಾಳೆ. ನೆಫರ್ ಬೇಸರದಿಂದ ಬಲ ಮಗ್ಗುಲಿಗೆ ಕೂರುತ್ತಾಳೆ. ಆಮೆರಬ್ ಮತ್ತೊಂದು ಕಡೆಗೆ ಅವನ ಮಗ್ಗುಲಿಗೆ ಮೆನೆಪ್‍ಟಾ ಕೂರದೇ ನಿಂತೇ ಇದ್ದಾನೆ. ಮತ್ತೆ ಕೂರಲು ಸನ್ನೆ ಮಾಡುವ ಫ್ಯಾರೋ…

ಮೆನೆ: ಮಹಾಪ್ರಭುಗಳ ಜೊತೆಗೆ ಈ ಕುರ್ಚಿಗಳ ಮೇಲೆ ಕೂರುವಷ್ಟು ದೊಡ್ಡವನು ನಾನಲ್ಲ… ನನ್ನ ಪ್ರಾಂತ್ಯದ ಜನ ನಿಮಗಾಗಿ ಕಳಿಸಿರುವ ಕಾಣಿಕೆಯನ್ನು ತಾವು ಸ್ವೀಕರಿಸಬೇಕು.

ಎಂದು ಮಹಾರಾಜನ ಎದುರಿಗೆ ತನ್ನ ಬಳಿ ಇದ್ದ ಬಟ್ಟೆಯ ಗಂಟು ಇಡುತ್ತಾನೆ.

ಫ್ಯಾರೋ: ಸ್ವೀಕರಿಸಲಾಗಿದೆ.

ಮೆನೆ: ಧನ್ಯರಾದೆವು. ನಮ್ಮ ಪ್ರಾಂತ್ಯದ ಜನ ತಮ್ಮ ಸೇವೆಗೆ ಕಂಕಣ ಬದ್ಧರಾಗಿದ್ದೇವೆ.

ಫ್ಯಾರೋ ಸುಮ್ಮನೆ ತಲೆದೂಗುತ್ತಾನೆ…

ಆಮೆರಬ್: ಮಹಾಪ್ರಭುಗಳ ಚಿತ್ತವನ್ನು ದಕ್ಷಿಣ ಪ್ರಾಂತ್ಯದ ನಾಯಕರಿಗೆ ತಿಳಿದಿದ್ದೇನೆ. ಅವರೂ ಸಹ ಪ್ರಭುಗಳ ಚಿತ್ತವೇ ತಮ್ಮ ಚಿತ್ತ ಎಂದು ತಿಳಿಸಿದ್ದಾರೆ. ಪ್ರಭುಗಳು ನಡೆದಾಡುವ ದೇವರು. ಅವರ ಮಾತೇ ಎಲ್ಲದಕ್ಕೂ ಕಡೆಯದು ಎಂಬುದು ನಾಯಕರ ಅಭಿಪ್ರಾಯ.

ಫ್ಯಾರೋ ಅನುಮಾನದಿಂದಲೇ ಮೆನೆಯನ್ನು ನೋಡುತ್ತಾನೆ.

ನೆಫರ್: ಔತಣದ ಹೊತ್ತಲ್ಲಿ ಭಾರವಾದ ಮಾತುಗಳು ಬೇಡ.

ಆಮೆರಬ್: ತಮ್ಮ ಚಿತ್ತ.

ಗೇಬು: ಮಹಾಮಂತ್ರಿಗಳೇ ತಮ್ಮ ಭೇಟಿಗೆ ಕೆಲವು ಸಾಮಂತರು ಹೊರಗೆ ಕಾಯುತ್ತಾ ಇದ್ದಾರೆ.

ಆಮೆರಬ್: ಓ!… ಹಾಗಾದರೆ ಆ ಸಾಮಂತರನ್ನು ಇದೇ ಸಮಯಕ್ಕೆ ಇಲ್ಲಿಗೆ ಕರೆಸಿದವರು ತಾವೇ ಇರಬೇಕು…?

ಫ್ಯಾರೋ: ಮಹಾಮಂತ್ರಿಗಳೇ… ಯಾರು ಯಾರನ್ನು ಕರೆಸಿದರು ಎಂಬುದು ಆಮೇಲಿನ ಮಾತು. ಅಲ್ಲಿ ಸಾಮಂತರೆಲ್ಲರೂ ಇದ್ದಾರೆ ಎಂದರೆ ಅವರನ್ನು ನಮ್ಮ ಬೆಂಬಲಿಗರಾಗಿಸುವುದು ಮುಖ್ಯ. ಮೊದಲು ಅಲ್ಲಿಗೆ ಹೋಗಿ. ಗೇಬು ಸಹ ನಿಮ್ಮ ಜೊತೆಗೆ ಇರಲಿ. ದಕ್ಷಿಣದ ನಾಯಕರನ್ನು ಮಹಾರಾಣಿಯವರು ಬೀಳ್ಕೊಡುತ್ತಾರೆ.

ಆಮೆರಬ್ ರಾಜನಿಗೆ ನಮಸ್ಕರಿಸಿ ಗೇಬು ಜೊತೆಗೆ ಒಂದು ದಿಕ್ಕಿಗೆ ಹೋಗುತ್ತಾನೆ. ಮೆನೆಪ್‍ಟಾನನ್ನು ನೆಫರ್‍ಟೇಟಿ ಮತ್ತೊಂದು ದಿಕ್ಕಿಗೆ ಹಿಂಬಾಲಿಸುವಂತೆ ಕರೆದೊಯ್ಯುತ್ತಾಳೆ. ಫ್ಯಾರೋ ಅಲ್ಲೇ ಉಳಿದ ನೆಹನಾವೇಯ್ಟ್‍ಳನ್ನು ನೋಡಿ ನಗುತ್ತಾನೆ.

ಫ್ಯಾರೋ: ನೆಹನಾ… ನಿನ್ನೊಡನೆ ಹೀಗೆ ಏಕಾಂತದಲ್ಲಿ ಇದ್ದು ಬಹಳ ದಿನವಾಯಿತಲ್ಲವೇ?

ನೆಹನಾ ನಾಚುತ್ತಾಳೆ. ಹಿನ್ನೆಲೆ ಸಂಗೀತದ ಜೊತೆಗೆ ದೃಶ್ಯ ಬದಲಾಗುತ್ತದೆ.

ದೃಶ್ಯ 18

ಸಾಮಂತರು ಹಾಗೂ ಶ್ರೀಮಂತರುಗಳ ತಂಡ ಒಂದು ಮೂಲೆಯಲ್ಲಿ ಸೇರಿದೆ. ಅಲ್ಲಿಗೆ ಬರುವ ಮಹಾಮಂತ್ರಿ ಆಮೆರಬ್ ಮತ್ತು ಗೇಬು. ಸಾಮಂತರು ಮಹಾಮಂತ್ರಿಗೆ ಬಾಗಿ ನಮಿಸುತ್ತಾರೆ.

ಆಮೆರಬ್: ತಮ್ಮಂತ ಶ್ರೀಮಂತರು ನನಗೆ ನಮಿಸಬಾರದು, ನಾನು ನಿಮಗೆ ನಮಿಸಬೇಕು. ಹೇಳಿ ಏನು ಸಮಾಚಾರ?

ಒಬ್ಬ: ಅಲ್ಲಾ ಸ್ವಾಮಿ, ನಮ್ಮನ್ನು ಶ್ರೀಮಂತರು ಎನ್ನುತ್ತಲೇ ನಮ್ಮನ್ನು ಭಿಕಾರಿ ಮಾಡಿದವನಿಗೆ ಔತಣ ನೀಡುತ್ತಾ ಇದ್ದೀರಲ್ಲಾ? ಇದ್ಯಾವ ನ್ಯಾಯ?

ಆಮೆರಬ್: ಓ! ಹಾಗಾದರೆ ಬಂದಿರುವವರೆಲ್ಲಾ ದಕ್ಷಿಣ ಪ್ರಾಂತ್ಯದ ಭೂಮಾಲೀಕರು ಮತ್ತು ಸಾಮಂತರೇನು?

ಇನ್ನೊಬ್ಬ: ಹೌದು… ಕಳೆದ ಐದು ತಿಂಗಳಿಂದ ನಮ್ಮ ಪ್ರಾಂತ್ಯಕ್ಕೂ ನಾವೂ ಹೋಗಿಲ್ಲ. ಆದರೆ ನೀವು ಆ ರೈತನಿಗೆ ಮಹಾಪ್ರಭುಗಳಿಂದಲೇ ಕೈ ತುತ್ತು ತಿನಿಸುತ್ತಾ ಇದ್ದೀರಿ?

ಆಮೆರಬ್: ಮೊದಲಿಗೆ ದಕ್ಷಿಣ ಪ್ರಾಂತ್ಯದಲ್ಲಿ ಬಂಡಾಯ ಯಾಕಾಯಿತು ಹೇಳಿ?

ಒಬ್ಬ: ನಿಮ್ಮ ಬಗಲಲ್ಲೇ ಇದ್ದಾರಲ್ಲಾ, ನಮ್ಮ ಪ್ರಾಂತ್ಯದ ಮುಖ್ಯಸ್ಥರಾಗಿದ್ದವರು ಅವರನ್ನು ಕೇಳಿ…

ಗೇಬು: ಅಂದು ರಾಜಪ್ರತಿನಿಧಿ ಟೆಹುಟಿಯವರು ದುಡುಕಿದರು. ಮನವಿ ಕೊಡಲು ಬಂದವರಿಗೆ ಚಡಿ ಏಟು ಕೊಟ್ಟರು. ಜನ ಸಿಟ್ಟಿಗೆದ್ದರು. ಪರಿಸ್ಥಿತಿ ಕೈ ಮೀರಿತು.

ಆಮೆರಬ್: ನನ್ನ ಪ್ರಕಾರ ಇದೊಂದು ಅಪೂರ್ವ ಘಟನೆ. ಆ ರೈತರ ಬಂಡಾಯ ಚಾರಿತ್ರಿಕವಾದದ್ದು…

ಇನ್ನೊಬ್ಬ: ಉತ್ಸವದಲ್ಲಿ ರಾಜರ ಮೇನೆ ಹೊತ್ತವನಾಗಿ ಹೇಳುತ್ತಾ ಇದ್ದೇನೆ, ಕೇಳಿ. ನಮ್ಮ ನೆಲ, ನಮ್ಮ ರಾಸುಗಳನ್ನು ಮರಳಿ ಕೊಡಿಸದಿದ್ದರೆ ನಾವೆಲ್ಲರೂ ರಾಜಗುರುಗಳ ಪಕ್ಷ ಸೇರುತ್ತೇವೆ.

ಆಮೆರಬ್ ಬೆರಗಾದವನಂತೆ ನೋಡುತ್ತಾನೆ.

ಒಬ್ಬ: ದಂಗೆ ಎದ್ದವರಿಗೆ ರಾಜೋಪಚಾರ, ಪಲ್ಲಕ್ಕಿ ಹೊತ್ತವರಿಗೆ ಭಿಕ್ಷೆ ಬೇಡುವ ಪರಿಸ್ಥಿತಿ…!

ಇನ್ನೊಬ್ಬ: ಮಹಾಮಂತ್ರಿಗಳೇ, ಬಂಡಾಯಗಾರರಿಗೆ ಬೆನ್ನು ತಟ್ಟಿದರೆ ಪ್ರಭುತ್ವ ಉಳಿಯೋಲ್ಲ ನೆನಪಿರಲಿ.

ಆಮೆರಬ್: ಈ ಮಾತುಗಳು ನಿಮ್ಮದೋ ಇಲ್ಲಾ, ಈ ಗೇಬು ನಿಮಗೆ ಕಲಿಸಿದ್ದೋ?

ಗೇಬು: ನಾನ್ಯಾಕೆ ಅವರಿಗೆ ಮಾತು ಕಲಿಸಲಿ? ಅವರ ಸಂಕಟ ಅವರು ಹೇಳಿಕೊಳ್ಳುತ್ತಾ ಇದ್ದಾರೆ. ಅಷ್ಟೆ.

ಆಮೆರಬ್: ಆಯಿತು, ನಿಮ್ಮ ಸಂಕಟದ ಅರಿವಾಗಿದೆ. ನೀವು ಮಹಾಪ್ರಭುಗಳ ಜೊತೆಗೆ ಇರುವವರಾದರೆ ನಿಮಗೆ ಮರಳಿ ಸಂತೋಷವನ್ನೂ ಕೊಡಲಾಗುವುದು… (ಮತ್ತಷ್ಟು ಅವರ ಹತ್ತಿರ ಬಂದು) ಕುರಿಯನ್ನು ಸಾಕುವ ಮಹಾಪ್ರಭುಗಳಿಗೆ ಚಿಗುರು ತಿನಿಸುವುದು ಯಾವಾಗ, ಕೊಡಲಿ ಇಳಿಸುವುದು ಯಾವಾಗ ಎಂಬುದು ಗೊತ್ತಿರುತ್ತದೆ. ನೀವು ನಿರಾತಂಕವಾಗಿರಿ. ನಿಮ್ಮ ರಕ್ಷಣೆಯ ಜವಾಬ್ದಾರಿ ನಮ್ಮದು.

ಎಲ್ಲರೂ ತಲೆದೂಗುತ್ತಾರೆ.

ಆಮೆರಬ್: ರಾಜಗುರುಗಳನ್ನು ಊರಿಗೆ ಕರೆತರಲು ನಾನೇ ಹೋಗುತ್ತಾ ಇದ್ದೇನೆ. ಆಮೇಲೆ ನ್ಯಾಯದಾನದ ಕೆಲಸ…! ಇದಕ್ಕೆ ನಿಮ್ಮ ಒಪ್ಪಿಗೆ ಇದೆಯಲ್ಲವೇ?

ಎಲ್ಲರೂ: ಆಗಲಿ… ಅದೇನು ಮಾಡುತ್ತೀರೋ ಬೇಗ ಮಾಡಿ…

ಮೆನ್ನನ ಹಾಡಿನ ಜೊತೆಗೆ ಮುಂದಿನ ದೃಶ್ಯಕ್ಕೆ ವೇದಿಕೆ ಸಜ್ಜಾಗುತ್ತದೆ.

ದೃಶ್ಯ 19

ಮೆನ್ನ ಹಾಡುತ್ತಾ ಇದ್ದಾನೆ. ಥಾನಿಸ್, ಬೆಕ್, ಖ್ನೆಮ್, ಬಟಾ ನೋಡುತ್ತಾ ಇದ್ದಾರೆ.

ಎಲ್ಲಿದ್ದಾರೋ…? ಎಲ್ಲಿದ್ದಾರೋ…?

ಸತ್ಯ ಕಂಡ ಜನರು ಎಲ್ಲಿದ್ದಾರೋ?

ಸಜ್ಜನರ ವೇಷದವರೆ ತುಂಬಿದ್ದಾರೋ…!

ಸತ್ತೇ ಹೋಗಿದೆಯಲ್ಲೋ ಸತ್ಯದ ಕುಲವು…!

ಬತ್ತಿ ಹೋಗಿದೆಯಲ್ಲೋ ಪ್ರೀತಿಯ ಮರವು…!

ಹಾಡು ಮುಗಿಯುವಾಗ ಅಲ್ಲಿಗೆ ಬರುವ ಮೆನೆಪ್‍ಟಾ

ಮೆನ್ನ: ಅರೆ, ಅರೆ, ಅರೆ, ಇದೇನಿದು ನಿಮ್ಮನ್ನು ಅರಮನೆಗೆ ಕರೆದು ಸೆರಮನೆಗೆ ಹಾಕಲಿಲ್ಲವೇ ಅವರು?

ಮೆನೆ: ನಿಮ್ಮೆದುರಿಗೆ ನಾನು ನಿಂತಿದ್ದೇನಲ್ಲಾ? ಮತ್ಯಾವ ಅನುಮಾನ?

ಬೆಕ್: ಹಾಗಾದರೆ ಮಹಾಪ್ರಭುಗಳ ಭೇಟಿಯಾಯಿತೇ?

ಮೆನೆ: ಆಯಿತು.

ಥಾನಿಸ್: ಅವರು ಊಟದಲ್ಲಿ ವಿಷ ಹಾಕಿರಲಿಲ್ಲವೇ?

ಮೆನೆ: ಮಹಾಪ್ರಭುಗಳೂ ಅದೇ ಊಟವನ್ನು ತಿಂದರಾದ್ದರಿಂದ ವಿಷ ಹಾಕಿರಲಿಲ್ಲ ಎನ್ನುವುದು ಖಾತ್ರಿ.

ಖ್ನೆಮ್: ನಿನ್ನ ಬೆನ್ನಿಗೆ ಆ ಗೇಬುವೇ ಬರೆ ಎಳೆದನಂತಲ್ಲಾ?

ಮೆನೆ: ಅಲ್ಲಿ ಯಾರ ಬೆನ್ನಿಗೂ ಬರೆ ಎಳೆಯುವ ಕೆಲಸ ಆಗಲಿಲ್ಲ.

ಬಟಾ: ಮತ್ತೇನಾಯಿತಣ್ಣಾ ಅಲ್ಲಿ?

ಮೆನೆ: ಮಹಾಪ್ರಭುಗಳು ನಮ್ಮ ಪ್ರಾಂತ್ಯದವರ ಕಾಣಿಕೆ ಸ್ವೀಕರಿಸಿದರು.

ಎಲ್ಲರೂ ಒಕ್ಕೊರಲಿನಿಂದ ಹೋ ಎನ್ನುತ್ತಾರೆ.

ಮೆನ್ನ: ಹಾಗಾದರೆ ಆ ರಾಜಗುರುಗಳ ಶಿಷ್ಯ ಹೇಳಿದ್ದೆಲ್ಲಾ ಸುಳ್ಳು ಅಂತಾಯಿತು.

ಮೆನೆ: ಅವನು ಮತ್ತೆ ಬಂದಿದ್ದನೆ ಇಲ್ಲಿಗೆ?

ಮೆನ್ನ: ಹೌದು. ನಿಮಗೆ ಚಾವಟಿಯಲ್ಲಿ ಹೇಗೆ ಬಾರಿಸಿದರು, ಹೇಗೆ ಬರೆ ಎಳೆದರು ಎಂದು ಬಣ್ಣ ಬಣ್ಣವಾಗಿ ಹೇಳಿದ…

ಮೆನೆ: (ನಗುತ್ತಾ) ನಿಮ್ಮನ್ನು ಹುಚ್ಚ ಎಂದುಕೊಂಡು ಹೇಳಿರುತ್ತಾನೆ.

ಮೆನ್ನ: ಹೂಂ… ನಾನು ಹುಚ್ಚ ಆಗಿರದಿದ್ದರೆ ಈ ಲೋಕದಿಂದಾಚೆಗೆ ನನ್ನನ್ನೂ ರವಾನಿಸ್ತಾ ಇದ್ದರು… ಅವರ ಲೋಕದಲ್ಲಿ ಇರುವವರೆಲ್ಲಾ ರಕ್ಕಸರೇ… ನಿಮ್ಮನ್ನು ಕಂಡಾಗಲೆ ನನಗೂ ಮನುಷ್ಯರ ಜಗತ್ತು ಮತ್ತೆ ಕಂಡಿದ್ದು… ಹಳೆಯದನ್ನ ಕಿತ್ತು ಹಾಕಿ ಹೊಸದನ್ನ ಕಟ್ಟುವ ಹೋರಾಟ ನಿಮ್ಮದು… ಆದರೆ ನಾಯಕರೇ, ಯಾರು ಏನನ್ನು ನುಂಗುತ್ತಾರೆ? ಯಾರು ಯಾರನ್ನು ಗೆಲ್ಲುತ್ತಾರೆ ಎಂಬುದು ನಾಳೆಗೆ ಬಿಟ್ಟ ವಿಷಯ… ನೀವು ಮಾತ್ರ ನಿದ್ರೆಯಲ್ಲೂ ಎಚ್ಚರವಾಗಿರಿ… (ಹೊರಟವನು ನಿಂತು) ಇನ್ನೊಂದು ಮಾತು… ನಿಮ್ಮಲ್ಲಿ ಕೆಲವರು ಮರಳಿ ನಿಮ್ಮೂರಿಗೆ ಹೋಗಿ ಇನ್ನಷ್ಟು ಜನರನ್ನು ಕರೆತರುವುದು ಉತ್ತಮ.

ಮೆನೆ: ಇನ್ನಷ್ಟು ಜನರೇ? ಯಾಕೆ?

ಮೆನ್ನ: ನಾಳೆ ಮಹಾಮಂತ್ರಿಗಳು ರಾಜಗುರುವನ್ನು ಕರೆತರುತ್ತಾರೆ. ಆಮೇಲೆ ಯಾರು ಕುರಿಯಾಗುತ್ತಾರೋ, ಯಾರು ಕೊಡಲಿಯಾಗುತ್ತಾರೋ ಹೇಳುವುದು ಕಷ್ಟ. (ಎಂದು ಹಾಡುತ್ತಾ ಓಡುತ್ತಾನೆ)

ಅವನನ್ನೇ ನೊಡುವ ಮೆನೆ‍ಪ್‍ಟಾ ಮತ್ತು ಗೆಳೆಯರು.

ಖ್ನೆಮ್: ಹಾಗಾದರೆ ಮೆನೆ ಅಣ್ಣಾ, ನಾನು ಮತ್ತು ಥಾನಿಸ್ ಈ ಕೂಡಲೇ ಊರಿಗೆ ಹೋಗಿ ಇನ್ನಷ್ಟು ಜನರನ್ನು ಕರೆದುಕೊಂಡು ಬರ್ತೇವೆ.

ಬೆಕ್: ಹೌದು… ನೀವು ಹೊರಡಿ. ನಾನೂ, ಥಾನಿಸ್ ಇಬ್ಬರೂ ಮೆನೆ ಅಣ್ಣನ ಜೊತೆಗೆ ಇರುತ್ತೇವೆ. ನೀವು ಹಗಲು ಹುಟ್ಟುವುದಕ್ಕೆ ಮೊದಲು ಹೊರಡಿ.

ಸೆಬೆಕ್: ನೀವು ಊರಿಗೆ ಹೋಗುತ್ತಾ ಇದ್ದೀರಿ ಎಂದು ಯಾರಿಗೂ ಅನುಮಾನ ಬರುವುದು ಬೇಡ. ವರ್ಧಂತಿ ಉತ್ಸವಕ್ಕೆ ಮೊದಲು ಜನರ ಜೊತೆಗೆ ಬಂದುಬಿಡಿ.

ಖ್ನೆಮ್, ಬಟಾ ಹೊರಡುತ್ತಾರೆ.

ಮೆನೆ: ಖ್ನೆಮ್, ಥಾನಿಸ್… ನಿಲ್ಲಿ (ಬೆಕ್ ಮತ್ತು ಸೆಬೆಕ್‍ ಕಡೆ ತಿರುಗಿ) ಸೆಬೆಕ್, ಬೆಕ್ ನೀವೂ ಊರಿಗೆ ಹೊರಡಿ…

ಬೆಕ್: ನಾವು ಹೋದರೆ ಇಲ್ಲಿ ನಿನ್ನ ಜೊತೆಗೆ…?

ಮೆನೆ: ನಾನು ಇಲ್ಲೇನಾದರೂ ನೋಡಿಕೊಳ್ಳುತ್ತೇನೆ… ನೀವೂ ಹಳ್ಳಿಗೆ ಹೋಗಿ ಜನರನ್ನು ಸೇರಿಸಿ ಕರೆತರುವುದು ಮುಖ್ಯ… ಹೊರಡಿ

ಅವರೆಲ್ಲರೂ ಹೊರಡುತ್ತಾರೆ. ಹಿಂದೆ ಮಂತ್ರದ ಹಾಗೆ ಸಂಗೀತ ಕೇಳುತ್ತದೆ.

ದೃಶ್ಯ 20

ರಾಜಗುರು ಹೇಪಾಟ್‍ನನ್ನು ಹೊತ್ತ ಮೇನೆಯು ವೇದಿಕೆಯ ನಡುವೆ ಬಂದು ನಿಲ್ಲುತ್ತದೆ. ಜೊತೆಯಲ್ಲಿ ಬರುವ ಟೆಹುಟಿ, ಹೊತ್ತು ತಂದವರು “ರಾಜಗುರು ಹೇಪಾಟ್ ಅವರಿಗೆ ಜಯವಾಗಲಿ” ಎನ್ನುತ್ತಾ ಇದ್ದಾರೆ. ಹೇಪಾಟ್ ಮೇನೆಯ ಮೇಲೆ ನಿಂತು ಕೈಯಾಡಿಸುತ್ತಾ ಇದ್ದಾನೆ.

ಶಿಷ್ಯ: ರಾಜಗುರುಗಳೇ, ತಮ್ಮ ಭೇಟಿಗೆ ಮಹಾಮಂತ್ರಿ ಸ್ವತಃ ಬಂದಿದ್ದಾನಂತೆ…

ಹೇಪಾಟ್: ಅವನೇ ಬಂದಿದ್ದಾನಾ?…

ಶಿಷ್ಯ: ಆತ ಇಲ್ಲಿಯವರೆಗೆ ಬಂದವನು, ನೇರವಾಗಿ ನಿಮ್ಮ ಬೆಂಬಲಕ್ಕೆ ನಿಂತ ಸಾಮಂತರು, ಭೂಮಾಲೀಕರನ್ನು ಭೇಟಿ ಮಾಡಿದ್ದಾನಂತೆ.

ಟೆಹುಟಿ: ಆ ಮಹಾಮಂತ್ರಿಗೆ ತಾನೇ ಮಹಾಬುದ್ಧಿವಂತ ಎಂಬ ಭ್ರಮೆ ಇದೆ ಗುರುಗಳೇ… ಇಂಥವರಿಂದಾಗಿಯೇ ನಮ್ಮ ಸಾಮ್ರಾಜ್ಯಕ್ಕೆ ಈ ದುಸ್ಥಿತಿ ಒದಗಿ ಬಂದಿರುವುದು.

ಹೇಪಾಟ್: ಇರಲಿ ಬಿಡು… ಅವನು ಏನಿದ್ದರೂ ಹಲ್ಲು ಕಿತ್ತ ಹಾವು. (ಶಿಷ್ಯನಿಗೆ) ಇಲ್ಲಿಗೆ ಅವನೇನಾದರೂ ಬಂದರೆ ರಾಜಗುರುಗಳು ಧ್ಯಾನದಲ್ಲಿದ್ದಾರೆ ಎಂದು ಹೇಳಿ ಕಳಿಸು. ನಾಲ್ಕು ದಿನ ಕಾಯಿಸಿದರೆ ಅವನಿಗೆ ಬುದ್ಧಿ ಬರುತ್ತದೆ.

ರಾಜಗುರುವಿನ ಶಿಷ್ಯ ಆಗಲಿ ಎಂದು ಬಾಗಿಲಿಗೆ ಬರುವಾಗಲೇ ಎದುರಿಗೆ ಬರುವ ಮಹಾಮಂತ್ರಿ ಆಮೆರಬ್

ಆಮೆರಬ್: ಓಹೋ! ಇದೇನಿದು? ಕಿರಿಯ ಸ್ವಾಮಿಗಳು! ರಾಜಧಾನಿಯನ್ನು ಬಿಟ್ಟು ಇಷ್ಟು ದೂರ ಬಂದಿದ್ದೀರಿ?

ಶಿಷ್ಯ: (ಸುಳ್ಳು ಹುಡುಕುತ್ತಾ) ಹಾಂ… ಅದು… ನನ್ನ ಬಂಧುವೊಬ್ಬರಿಗೆ ಆರೋಗ್ಯ ಸರಿ ಇರಲಿಲ್ಲ. ರಾಜಗುರುಗಳ ಬಳಿ ಔಷಧ ತೆಗೆದುಕೊಳ್ಳಲು ಬಂದಿದ್ದೆ.

ಆಮೆರಬ್: (ನಗುತ್ತಾ) ರಾಜಗುರುಗಳಿಗೆ ರಾಜಧಾನಿಯ ಸುದ್ದಿ ತಿಳಿಸಬೇಕಿತ್ತು ಎಂದು ಸತ್ಯವೇ ಹೇಳಿದ್ದರೂ ನಾನು ಆಕ್ಷೇಪ ಮಾಡುತ್ತಾ ಇರಲಿಲ್ಲ ಬಿಡಿ… ಏನನ್ನುತ್ತಾರೆ ಗುರುಗಳು?

ಶಿಷ್ಯ: ಅವರು ಧ್ಯಾನದಲ್ಲಿದ್ದಾರೆ.

ಆಮೆರಬ್: ಹಾಗಾದರೆ ನಾವು ಧ್ಯಾನ ಭಂಗ ಮಾಡುವ ಹಾಗಿಲ್ಲ ಎಂದಾಯಿತು. ಕಾಯೋಣ, ಕಾಯೋಣ.

ಶಿಷ್ಯ: ಅದು ಸಧ್ಯಕ್ಕೆ ಮುಗಿಯುವುದಲ್ಲ. ನೀವು ಕಾಯದೇ ಹೊರಡುವುದೇ ಕ್ಷೇಮ.

ಆಮೆರಬ್: ನಮಗೆ ಕಾಯುವುದೇ ಕ್ಷೇಮ ಎಂದು ಆಜ್ಞೆಯಾಗಿದೆ, ಮಹಾಪ್ರಭುಗಳಿಂದ. ಗುರುಗಳ ಜೊತೆ ಧ್ಯಾನಕ್ಕೆ ಯಾರು ಯಾರು ಜೊತೆಯಾಗಿದ್ದಾರೆ? ಸಾಮಂತರು, ಭೂಮಾಲೀಕರು, ಕಂದಾಯಾಧಿಕಾರಿ ಟೆಹುಟಿ ಇರಬೇಕಲ್ಲವೇ?

ಶಿಷ್ಯ: ಜಗತ್ತನ್ನು ಬಲ್ಲವರು ತಾವು… ನಮಗೇನು ತಿಳಿಯುತ್ತದೆ ಹೇಳಿ?

ಆಮೆರಬ್: ಆಹಾ! ರಾಜಗುರುವಿನ ಸ್ಥಾನ ತುಂಬುವಷ್ಟು ಜಾಣರಾಗುತ್ತಾ ಇದ್ದೀರಿ… ಸಂತೋಷ, ಸಂತೋಷ… ನೀವು ಒಪ್ಪುವುದಾದರೆ, ಇಂದಿನ ವಿರಾಟ್ ಸಭೆಯಲ್ಲಿ ನಿಮ್ಮನ್ನೇ ರಾಜಗುರು ಮಾಡುವ ಆಲೋಚನೆ ನನ್ನದು… ಏನನ್ನುತ್ತೀರಿ?

ಶಿಷ್ಯ ಗೊಂದಲಿತನಾಗಿ ಗುರುಗಳು ಇರುವ ಕಡೆಗೆ ನೋಡುತ್ತಾನೆ.

ಆಮೆರಬ್: ಯಾಕೆ? ಗುರುಗಳಿಗೆ ನಮ್ಮ ಮಾತು ಕೇಳುವುದಿಲ್ಲ ಬಿಡಿ. ಅವರು ಧ್ಯಾನದಲ್ಲಿದ್ದಾರೆ ಅಲ್ಲವೇ?

ರಾಜಗುರು: (ಜೋರಾಗಿ) ಯಾರದು ಬಂದಿರುವುದು?

ಧ್ವನಿ ಕೇಳಿ ರಾಜಗುರುವಿನ ಕಡೆಗೆ ಹೋಗುವ ಆಮೆರಬ್ ವಂದಿಸುತ್ತಾನೆ.

ಹೇಪಾಟ್: ಪ್ರಭುಗಳ ಬಲಗೈ ಭಂಟರು ಖುದ್ದಾಗಿ ಇಲ್ಲಿಯವರೆಗೆ ಬಂದಿದ್ದೀರಿ ಎಂದರೆ ತುರ್ತು ಕಾರ್ಯವೇ ಇರಬೇಕು…

ಆಮೆರಬ್: ರಾಜಗುರುಗಳು ಧ್ಯಾನಕ್ಕಾಗಿ ಇಷ್ಟು ದೂರ ಬಂದಿರುವಾಗ ಮಹಾಪ್ರಭುಗಳ ಆದೇಶವನ್ನು ನಾವೇ ತರಬೇಕಲ್ಲವೇ?

ಟೆಹುಟಿ: ಅಂದರೆ ರಾಜಗುರುಗಳು ಸಮಯ ಹಾಳು ಮಾಡುತ್ತಾ ಇದ್ದಾರೆ ಅನ್ನುವಷ್ಟು ಉದ್ಧಟತನವೇ? ರಾಜಗುರುಗಳ ಎದುರು ನಾಲಿಗೆ ಬಿಗಿಹಿಡಿದು ಮಾತಾಡಿ, ಮಹಾಮಂತ್ರಿಗಳೇ!

ಆಮೆರಬ್: ರಾಜಗುರುಗಳಿಗಿಂತ ಮುಂಚೆ ನೀವು ನನಗೆ ಶಾಪ ಕೊಡುವ ಹಾಗಿದೆ. ಗಾಬರಿಯಾಗಬೇಡಿ ಟೆಹುಟಿಯವರೇ…! ನಾನು ಒಂದು ಕಾಲನ್ನು ಈ ಲೋಕದಿಂದಾಚೆಗೆ ಇಟ್ಟೇ ಇಲ್ಲಿಗೆ ಬಂದಿರುವವನು. ನಡೆದಾಡುವ ದೇವರಾದ ಫ್ಯಾರೋಗಾಗಿ ಕೆಲಸ ಮಾಡುವಾಗ ನಾನು ಖಂಡಿತಾ ಸಾವಿಗೆ ಹೆದರುವವನಲ್ಲ.

ಟೆಹುಟಿ: ಅಂದರೆ ಗುರುಸೇವೆಗಿಂತ ರಾಜಸೇವೆ ದೊಡ್ಡದು ಎಂದು ತಮ್ಮ ಮಾತಿನ ಅರ್ಥವೇ?

ಆಮೆರಬ್: ನನ್ನ ನಂಬಿಕೆಯ ಪ್ರಕಾರ ರಾಜ ಬೇರೆಯಲ್ಲ, ದೇವರೂ ಬೇರೆಯಲ್ಲ… ಅಲ್ಲವೇ ರಾಜಗುರುಗಳೇ?

ಹೇಪಾಟ್: ಅದು ನಂಬಿಕೆ ಉಳಿಸಿಕೊಳ್ಳುವ ನಡವಳಿಕೆ ಇದ್ದಾಗ ಆಡುವ ಮಾತು.

ಆಮೆರಬ್: ಸಾಮಾನ್ಯ ಜನರಂತೂ ಮಹಾರಾಜನೇ ನಮ್ಮ ದೇವರು ಎನ್ನುತ್ತಾ ಇದ್ದಾರೆ. ಈಗ ಮಹಾಪ್ರಭುಗಳು ತಮ್ಮ ವರ್ಧಂತಿ ದಿನ ಗೊತ್ತು ಪಡಿಸುವುದಕ್ಕೂ ರಾಜಗುರುಗಳಿಗೆ ಕಾಯುತ್ತಾ ಜನರಿಗೆ ಸಿಟ್ಟು ಬರಿಸುತ್ತಾ ಇದ್ದಾರೆ. ಹೀಗಾದರೆ ರಾಜಧಾನಿಯ ದೇವಮಂದಿರಕ್ಕೆ ಹೊಸ ರಾಜಗುರುವನ್ನು ನೇಮಿಸುವ ಅಧಿಕಾರವೂ ಮಹಾಪ್ರಭುಗಳ ಕೈಯಲ್ಲೇ ಇದೆ.

ಟೆಹುಟಿ: ಅಂದರೆ ನೀವು…?

ಆಮೆರಬ್: ಬಹುಕಾಲ ಬಳಸದೆ ಇರುವುದು ಅನಗತ್ಯವಾಗಿ ಬಿಡುತ್ತದೆ ಎಂದು ತಿಳಿಸುತ್ತಾ ಇದ್ದಾನೆ,

ಹೇಪಾಟ್: ಆಯಿತು… ಆಯಿತು… ಅದೇನು ನಿಮ್ಮ ಮಹಾಪ್ರಭುಗಳ ಸಂದೇಶವೋ ಅದನ್ನು ಬೇಗ ಹೇಳಿ ಹೊರಡಿ…

ಆಮೆರಬ್: ಖಂಡಿತಾ ಹೊರಡುತ್ತೇನೆ. ಆದರೆ ಹೊರಡುವವನು ನಾನೊಬ್ಬನೇ ಅಲ್ಲ.

ಹೇಪಾಟ್: (ಅನುಮಾನದಿಂದ ಸುತ್ತ ನೋಡುತ್ತಾ) ಏನು ಹಾಗೆಂದರೆ?

ಆಮೆರಬ್: ನನ್ನ ಮಾತು ತಮಗೂ ಅರ್ಥವಾಗಿರಬೇಕಲ್ಲವೇ?

ಟೆಹುಟಿ: ಅಂದರೆ… ತಾವು… ರಾಜಗುರುಗಳನ್ನು… ಹೆಡೆಮುರಿ ಕಟ್ಟಿ…

ಆಮೆರಬ್: ಅಂತಹ ಮಾತನ್ನು ಕಂದಾಯಧಿಕಾರಿಗಳು ಮತ್ತು ಸೇನಾ ಮುಖ್ಯಸ್ಥರು “ಬಾಯಿಂದ” ಆಡಬಾರದು… (ರಾಜಗುರುವಿಗೆ) ಗುರುಗಳೇ, ನಾಳೆ ರಾ ಹೊರಗೆ ಬರುವ ಸಮಯಕ್ಕೆ ಒಟ್ಟಿಗೆ ಹೊರಡೋಣ… ನಿಮ್ಮ ಪಲ್ಲಕ್ಕಿ ಮುಂದೆ, ನಾವು ನಿಮ್ಮ ಹಿಂದೆ… (ವಂದಿಸಿ) ಸಂದೇಶ ತಲುಪಿದೆ ಎಂದುಕೊಂಡು ವಿಶ್ರಾಂತಿಗೃಹಕ್ಕೆ ಹೊರಡುತ್ತಾ ಇದ್ದೇನೆ. (ಎಂದು ಹೋಗುತ್ತಾನೆ)

ಹೇಪಾಟ್: ಇಲ್ಲ, ನೀವು ಹೊರಡಿ. ನಾವು ಈ ವಾರ ಕಳೆದು ಹೊರಡುತ್ತೇವೆ.

ಆಮೆರಬ್: (ಹೋಗುತ್ತಾ ಇದ್ದವನು ನಿಂತು) ವಾರ ಕಳೆಯುವಷ್ಟರಲ್ಲಿ ನೀಲ ನದಿಯಲ್ಲಿ ಹೊಸ ಪ್ರವಾಹ ಬರಬಹುದು. ದಕ್ಷಿಣದಲ್ಲಿ ಬಂಡಾಯವಾದ ಹಾಗೆ, ರಾಜಧಾನಿಯ ದೇವಸ್ಥಾನದಲ್ಲೂ ಬಂಡಾಯವಾಗಿ ಹೊಸ ರಾಜಗುರು ಬರಬಹುದು. ಯೋಚಿಸಿ. (ಎಂದು ಹೊರಟವನು ಮತ್ತೆ ನಿಂತು) ನಾಳೆ ನಾನು ನಿಮಗಾಗಿ ನೀಲ ನದಿಯ ದಂಡೆಯಲ್ಲಿ ಕಾಯುತ್ತೇನೆ. (ಎಂದು ಹೊರಡುತ್ತಾನೆ)

ಹೇಪಾಟ್ ಇದು ನಂಬಲು ಸಾಧ್ಯವೇ ಎಂಬಂತೆ ತಾನು ಕೂತಿದ್ದ ವೇದಿಕೆಯಿಂದ ಇಳಿದು ಕೆಳಗೆ ಬರುತ್ತಾನೆ.

ಟೆಹುಟಿ: ನೀವು ಹೆದರದಿರಿ ರಾಜಗುರುಗಳೇ… ಸೈನ್ಯ ನಮ್ಮ ಸುಪರ್ದಿನಲ್ಲಿದೆ… ಆ ಮಹಾಮಂತ್ರಿಯ ಮೆರೆದಾಟ ನಡೆಯುವುದಿಲ್ಲ…

ಹೇಪಾಟ್: ಮೆರೆಯಬೇಕು… ಮೆರೆಯುತ್ತಾ ಇರುವಾಗಲೇ ಕತ್ತು ಕುಯ್ಯಬೇಕು… (ಶಿಷ್ಯನಿಗೆ) ನೀನು… ಇಂದೇ ಸುದ್ದಿ ಕಳಿಸು… ನಾವು ಊರಿಗೆ ತಲುಪಿದ ಕೂಡಲೇ ನೆಫರ್‍ಟೀಮ್  ಭೇಟಿಯಾಗಲಿ…

ಶಿಷ್ಯ: ಮಹಾರಾಣಿಯವರೇ…

ಹೇಪಾಟ್: ಹೌದು… ನಿನಗೆ ಮಹಾರಾಣಿ – ನನಗೆ… (ಎಂದು ನಗುತ್ತಾನೆ)

ಹಿನ್ನೆಲೆಯಲ್ಲಿ ಹಾಡು ಆರಂಭವಾಗುತ್ತದೆ…

ದೃಶ್ಯ 21

ರಾಮೆರಿ ಮನೆಯಲ್ಲಿ ಲಿಪಿಯನ್ನು ಬರೆಯುತ್ತಾ ಇದ್ದಾನೆ. ನೆಫಿಸ್ ಒಂದೆಡೆ ಮತ್ತೊಂದು ಮುಗುವಿನ ಜೋಲಿಯನ್ನು ತೂಗುತ್ತಾ ಇದ್ದಾಳೆ.

ಓ ಧೀರಾ…! ಓ ಶೂರಾ…! ನೀ ಬಾರಾ…!

ನೀನುತ್ತ ನೆಲ ಕಾದಿದೆ ನೀ ಬಾರಾ…!

ನೀ ಬಿತ್ತ ಬೆಳೆ ಕರೆದಿದೆ ನೀ ಬಾರಾ…!  ನಿನ –

ನಾಡಿನ ಜನಕಾಗಿ ನೀ ಬಾರಾ…!  ನಿನ –

ಮಗುವಿನ ನಗು ಕಾಣಲು ನೀ ಬಾರಾ…!

ಓ ಧೀರಾ…! ಓ ಶೂರ…! ನೀ ಬಾರಾ…!

ಕಾದಿರುವೆ ನಿನಗಾಗಿ ಬಾಬಾರಾ..!

ನೆಫಿಸ್ ಈ ಹಾಡನ್ನು ಹಾಡುತ್ತಾ ಇರುವಾಗಲೇ ಮನೆಯೊಳಗೆ ಬರುವ ಬೆಕ್, ಬಟಾ, ಖ್ನೆಮ್ ಮತ್ತು ಥಾನಿಸ್

ಅವರನ್ನು ಕಂಡು ಅವರ ಹೆಸರು ಕೂಗುತ್ತಾ ಓಡಿ ಬರುವ ರಾಮೆರಿ

ರಾಮೆರಿ: ಓ ಸೆಬೆಕ್ ಮಾವ…! ನನಗಾಗಿ ರಾಜಧಾನಿಯಿಂದ ಏನು ತಂದೆ?

ಆ ದನಿಗೆ ತಿರುಗಿ ನೋಡುವ ನೆಫಿಸ್‍ಗೂ ಸಂಭ್ರಮ, ಅವಳು ಮೆನೆಪ್‍ಟಾಗಾಗಿ ಹುಡುಕುತ್ತಾ ಇದ್ದಾಳೆ. ಬಟಾ ತಾನು ತಂದಿದ್ದ ಪುಟ್ಟ ರಾಟೆಯಂತಹದನ್ನು ರಾಮೆರಿಗೆ ಕೊಡುತ್ತಾನೆ. ಬೆಕ್ ಮತ್ತು ಉಳಿದವರು ನೆಫಿಸ್ ಬಳಿಗೆ ಬರುತ್ತಾರೆ.

ನೆಫಿಸ್: ಮೆನೆ, ಮೆನೆ…. ಅವನೆಲ್ಲಿ ಬೆಕ್?

ಬೆಕ್: ಮೆನೆ ಅಣ್ಣಾ ಬಂದಿಲ್ಲ ಅಕ್ಕಾ…

ನೆಫಿಸ್: ಯಾಕೆ? ಏನಾಯಿತು ರಾಜಧಾನಿಯಲ್ಲಿ? ಆ ರಕ್ಕಸರು ನನ್ನ ಗಂಡನನ್ನು…

ಬೆಕ್: ಗಾಬರಿಯಾಗಬೇಡ ಅಕ್ಕಾ… ಅಣ್ಣನಿಗೆ ಏನೂ ಆಗಿಲ್ಲ.

ನೆಫಿಸ್: ಮತ್ತೆ? ಏನಾಯಿತು? ನಿಮ್ಮ ನಾಯಕನನ್ನು ಯಾರದೋ ಕತ್ತಿಯ ಮೊನೆಗೆ ಒಪ್ಪಿಸಿ ಬಂದಿರಾ?

ಖ್ನೆಮ್: ಹಾಗಾಗಿದ್ದರೆ ನಾವು ಓಡಿ ಬರುತ್ತಿದ್ದೇವಾ? ನಮ್ಮ ದೇಹವನ್ನೂ ಅದೇ ಕತ್ತಿಗೆ ಒಪ್ಪಿಸಿ ಬರ್ತಿದ್ವಿ?

ನೆಫಿಸ್: ಮತ್ತೆ ಮೆನೆಪ್‍ಟಾ ಎಲ್ಲಿದ್ದಾನೆ? ಅವನಿಗೇನಾಯಿತು?

ಬೆಕ್: ಅತ್ತಿಗೆ ಗಾಬರಿಯಾಗಬೇಡಿ… ಇದೋ ನಿಮಗಾಗಿ ಅಣ್ಣಾ ಈ ವಿಶೇಷ ಬಟ್ಟೆಯನ್ನು ರಾಜಧಾನಿಯಿಂದ ಕಳಿಸಿದ್ದಾನೆ… ಉತ್ಸವ ಮುಗಿದ ಕೂಡಲೇ ಅವನು ಹಿಂದಿರುಗಿ ಬರುತ್ತಾನೆ.

ನೆಫಿಸ್: ಹೌದೇ? ನಾನು ನಿಮ್ಮ ಮಾತನ್ನು ನಂಬಹುದೇ?

ಬಟಾ: ಅತ್ತಿಗೆ, ಆ ಬಟ್ಟೆಯನ್ನು ನೋಡಿ… ಮೆನೆ ಅಣ್ಣಾ ಬರುವ ದಿನ ಅದೇ ಬಟ್ಟೆಯನ್ನು ನೀವು ತೊಟ್ಟಿರಬೇಕಂತೆ… ನೆನಪಿರಲಿ…

ನೆಫಿಸ್ ಅವರ ಮಾತನ್ನೇ ಕೇಳದಂತೆ ಬಟ್ಟೆಯನ್ನು ನೇವರಿಸುವಾಗ “ಓ ಧೀರಾ!” ಹಾಡು ಮತ್ತೆ ಕೇಳುತ್ತದೆ.

ಬೆಕ್: ನಮಗೆ ಆಡಳಿತಮಂದಿರದಲ್ಲಿ ಸಭೆ ಇದೆ… ನಾವು ಬರುತ್ತೇವೆ.

ನೆಫಿಸ್‍ಗೆ ಆವರ ಮಾತು ಕೇಳದು. ಹಾಡಿನ ಜೊತೆಗೆ ದೃಶ್ಯ ಬದಲಾಗುತ್ತದೆ.

ದೃಶ್ಯ 22

ರಾಜಗುರು ಮೊಣಕಾಲೂರಿ ಕುಳಿತವರ ಮೇಲೆ ಕಾಲುಚಾಚಿ ಮಲಗಿದ್ದಾನೆ. ಅವನ ಹಿಂದೆ ಒಂದಷ್ಟು ಜನ ನಿಂತಿದ್ದಾರೆ. ಅವರಲ್ಲಿ ಟೆಹುಟಿ ಸಹ ಇದ್ದಾನೆ.

ನೆಫರ್‍ಟೀಮ್ ಬರುತ್ತಾಳೆ.ರಾಜಗುರು ಏಳದೆ ಮಲಗಿದ್ದಲ್ಲೇ ಅವಳತ್ತ ನೋಡುತ್ತಾನೆ. ನೆಫರ್‍ಟೀಮ್ ಅವನ ಬಳಿ ಬಂದು ವಯ್ಯಾರದಿಂದಲೇ ಕಾಲ ಬಳಿ ಕೂರುತ್ತಾಳೆ.

ನೆಫರ್‍: ರಾಜಗುರುಗಳಿಗೆ ದೇವಸೇವಕಿಯ ಪ್ರಣಾಮಗಳು…!

ಹೇಪಾ: ಹೂಂ… ಹೂಂ… ಏನು ನೆಫರ್? ನನ್ನನ್ನು ನೀನು ಸಂಪೂರ್ಣ ಮರೆತಂತಿದೆ?

ನೆಫರ್: ನಿಮ್ಮನ್ನು ಮರೆಯುವುದುಂಟೇ? ನೀವು ರಾಜಧಾನಿಯಲ್ಲಿ ಇಲ್ಲದ ಪ್ರತಿಕ್ಷಣವೂ ನಿಮ್ಮ ಬಗ್ಗೆಯೇ ಯೋಚಿಸಿದವಳು ನಾನು…

ಹೇಪಾ: ಈ ಮಾತನ್ನು ನಾನು ನಂಬಬೇಕೆ?

ನೆಫರ್: ಇದೇನು ಗುರುಗಳ ದನಿಯಲ್ಲಿ ಸಿಟ್ಟಿದೆಯಲ್ಲಾ… ಯಾಕೆ?

ಟೆಹುಟಿ: ಗುರುಗಳ ಕೋಪ ನಿಮ್ಮ ಮೇಲಲ್ಲ… ಸಾಮ್ರಾಜ್ಯದ ಆಡಳಿತದ ವಿಷಯದಲ್ಲಿ ಅವರಿಗೆ ಸಿಟ್ಟಿದೆ.

ನೆಫರ್: ಹೌದೆ ಗುರುಗಳೇ?

ಹೇಪಾ: ಧರ್ಮದ ರಕ್ಷಣೆಯಾಗದೆ ಸಾಮ್ರಾಜ್ಯ ಉಳಿಯುವುದಿಲ್ಲ ಎಂಬುದನ್ನು ಅರಮನೆ ಮರೆತ ಹಾಗಿದೆ…?

ನೆಫರ್:  ಧರ್ಮ ರಕ್ಷಣೆ ಆಗಲಿ ಎಂದೇ ಅಲ್ಲವೇ ನೀವಿಲ್ಲದೆ ಉತ್ಸವ ಮಾಡುವುದು ಬೇಡ ಎಂದು, ಮಹಾಮಂತ್ರಿಯವರನ್ನೇ ಕಳಿಸಿ, ನಿಮ್ಮನ್ನು ಕರೆತರುವ ವ್ಯವಸ್ಥೆ ಮಾಡಿದ್ದು…?

ಟೆಹುಟಿ: ಆದರೆ ಆ ನಿಮ್ಮ ನಾಯಿ ನಮ್ಮನ್ನು “ಕರೆತರಲಿಲ್ಲ” ಹೆಡೆಮುರಿ ಕಟ್ಟಿ ಎಳೆದು ತಂದಿತು ಎಂಬುದು ತಮಗೂ ಗೊತ್ತಿರಬೇಕಲ್ಲವೇ…?

ನೆಫರ್: ಹೌದೇ? ಹಾಗಾಯಿತೇ?… ಛೇ, ಮುಂದಿನ ರಾಜಸಭೆಯಲ್ಲಿ ಈ ಟೆಹುಟಿಯನ್ನೇ ಮಹಾಮಂತ್ರಿಯನ್ನಾಗಿಸುವ ಬಿಡಿ.

ಟೆಹುಟಿಗೆ ಸಣ್ಣ ಖುಷಿ. ಅವನು ರಾಣಿಗೆ ನಮಸ್ಕಾರಿಸುತ್ತಾನೆ.

ನೆಫರ್‍: ರಾಜಗುರುಗಳೇ, ನೀವು ಬಯಸುವ ಬಲಿ ಯಾವುದು ಎಂದು ತಿಳಿಸಿ… ನಾನು ವ್ಯವಸ್ಥೆ ಮಾಡುತ್ತೇನೆ…

ಹೇಪಾಟ್ ಮಾತಾಡುವುದಿಲ್ಲ

ನೆಫರ್: ಭಕ್ತರಿಂದ ತಪ್ಪಾದರೆ ಕೈ ಹಿಡಿದು ತಿದ್ದಬೇಕಲ್ಲದೇ ನೀವೇ ಅವರನ್ನು ಸುಟ್ಟು ಬೂದಿ ಮಾಡಲು ಹೊರಡಬಾರದಲ್ಲವೇ?

ಹೇಪಾ ಅನುಮಾನದಿಂದ ನೋಡುತ್ತಾನೆ.

ನೆಫರ್: ರಾಜಗುರುಗಳು ರಾಜಧಾನಿಯಿಂದ ದೂರ ಹೋದ ಮೇಲೆ ನನ್ನ ಮಗ ರಾಜಕುವರನಿಗೆ ಸಿಗಬೇಕಾದ ಪಾಠಾಗಳು ಸಿಗಲೇ ಇಲ್ಲ…

ಹೇಪಾ: ಅಂದರೆ ಮಹಾರಾಣಿಯವರು ಉತ್ತರಾಧಿಕಾರಿಯನ್ನು ಸಿದ್ದ ಮಾಡಿದ್ದಾರೋ?

ನೆಫರ್: ಮತ್ತಿನ್ನೇನು ಮಾಡುವುದು? ಸಲಹಬೇಕಾದ ತಾವೇ ಕತ್ತಿ ಹಿರಿದು ರಾಜಪೀಠದ ವಿರುದ್ಧ ನಿಂತಿದ್ದೀರಲ್ಲಾ?

ಹೇಪಾ: ಕತ್ತಿ ಹಿಡಿಯುವ ಮಾತೇನೂ ಇಲ್ಲ. ನಮ್ಮ ಸಿಟ್ಟಿರುವುದು ನಿಮ್ಮ ಅಂತಃಪುರದ ಒಡೆಯರ ಬಗ್ಗೆ…! ಅವರ ಅಪ್ರಬುದ್ಧತೆಯಿಂದ ಸಿಂಹಾಸನ ವರ್ಚಸ್ಸು ಕಳೆದುಕೊಳ್ಳುತ್ತಾ ಇದೆ…!

ನೆಫರ್: ನಾನಿದ್ದೇನಲ್ಲಾ… ಇನ್ನು ಮುಂದೆ ಅರಮನೆಯಿಂದ ಗುರುಮನೆಗೆ ಅಪಚಾರವಾಗದಂತೆ ನಾನು ನೋಡಿಕೊಳ್ಳುತ್ತೇನೆ… ನಾನು ಎಂದೆಂದಿಗೂ ನಿಮ್ಮ ಚರಣದಾಸಿ ಎಂಬುದನ್ನು ರುಜುವಾತು ಪಡಿಸುತ್ತೇನೆ.

ಹೇಪಾ: ಆಗಲಿ… ಅಷ್ಟಾದರೆ ನಾನು ಎಂದಿಗೂ ನಿಮ್ಮ ಜೊತೆಗೆ ಇರುತ್ತೇನೆ…

ನೆಫರ್: ಗುರುಗಳ ಕೃಪೆಗಾಗಿ ನಾನು ಆಭಾರಿ… ಆದರೆ ನೀವಿನ್ನೂ ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ.

ಹೇಪಾ: ಯಾವ ಪ್ರಶ್ನೆ?

ನೆಫರ್: ಅದೇ ಉತ್ಸವದಲ್ಲಿ ನೀವು ಬಯಸುವ ಬಲಿ?

ಕೆಲಕ್ಷಣ ಮೌನ

ಹೇಪಾ: ನಾನು ಬಯಸುವ ಬಲಿ ಏನೆದು ನಾಳೆ ಅರಮನೆಯಲ್ಲಿಯೇ ತಿಳಿಸುತ್ತೇನೆ…

ನೆಫರ್: ಆಗಲಿ, ನಾಳೆ ನಿಮಗಾಗಿ ಎಳೆಯ ಹಸುವಿನ ಮಾಂಸದ ಔತಣವನ್ನು ವ್ಯವಸ್ಥೆಗೊಳಿಸುತ್ತೇನೆ… (ಎಂದು ಹೊರಡುತ್ತಾಳೆ)

ಅವಳು ಹೋದ ಕಡೆಯೇ ನೋಡುವ ಉಳಿದವರು.

ಟೆಹುಟಿ: ರಾಜಗುರುಗಳೇ, ಎಲ್ಲವೂ ನೀವು ಬಯಸಿದ ಹಾಗೆಯೇ ಆಗುತ್ತಿದೆ… ಕಬ್ಬಿಣ ಕಾದಿರುವಾಗಲೇ ಸರಿಯಾಗಿ ಬಡಿದುಬಿಡಿ…

ಹೇಪಾ: ಹೂಂ… ಬರೀ ಕಬ್ಬಿಣ ಕಾದರೆ ಸಾಲದು ಟೆಹುಟಿ… ಜೊತೆಗಿರುವ ಚಿನ್ನ, ಬೆಳ್ಳಿ ವಜ್ರಗಳು ನಮ್ಮ ಕಡೆಗೆ ಉರುಳುವಂತಾಗಬೇಕು… ಅದನ್ನೂ ಮಾಡುವ… ಆಮೇಲೆ ಕಬ್ಬಿಣ ತಟ್ಟುವ ಕೆಲಸ…

ಎನ್ನುವಾಗ ಮತ್ತೆ “ಓ! ಧೀರಾ..” ಹಾಡು ಆರಂಭವಾಗುತ್ತದೆ. ದೃಶ್ಯ ಬದಲಾಗುತ್ತದೆ.

ದೃಶ್ಯ 23

ಆಡಳಿತ ಮಂದಿರದಲ್ಲಿ ಸೇರಿರುವ ಬೆಕ್, ಸೆಬೆಕ್, ಬಟಾ ಮತ್ತು ಇತರ ಹಳ್ಳಿಗರು.

ಸೆಬೆಕ್: ಹೌದು ಹಿರಿಯರೇ, ಮಹಾಪ್ರಭುಗಳ ವರ್ಧಂತಿ ಉತ್ಸವ ತಡವಾಗುವುದಕ್ಕೆ ಕಾರಣ ಐಗುಪ್ತದಲ್ಲಿ ನಡೆಯುತ್ತಾ ಇರುವ ಚೌಕಮಣೆ ಆಟ.

ಇಫ್ಯುವರ್: ಅಂದರೆ ಮೆನೆ ಅಣ್ಣನನ್ನು ಅವರು ಬಂಧನದಲ್ಲಿ ಇಟ್ಟಿದ್ದಾರಾ?

ಖ್ನೆಮ್: ಅದು ಬಂಧನವಲ್ಲ. ಆದರೆ ಹಾಗಲ್ಲ ಎನ್ನುವುದೂ ಸಾಧ್ಯವಿಲ್ಲ…

ಹಿರಿಯ: ಹಾಗಾದರೆ ನೀವು ಮೆನೆಪ್‍ಟಾನನ್ನು ಬಿಟ್ಟು ಬಂದದ್ದಾದರೂ ಯಾಕೆ?

ಬೆಕ್: ಹಿರಿಯರೇ, ನಮ್ಮನ್ನು ಅಲ್ಲಿಂದ ಕಳಿಸುವ ಮೊದಲು ಮೆನೆ ಅಣ್ಣಾ ನನಗೆ ಹೇಳಿದ್ದಿಷ್ಟೆ. ಮೆನೆಪ್‍ಟಾಗೆ ಏನಾಗುತ್ತದೆ ಎಂಬುದು ಮುಖ್ಯವಲ್ಲ. ಆದರೆ ನಮ್ಮ ಪ್ರಾಂತ್ಯದ ಜನರಿಗೆ ನೆಮ್ಮದಿಯಿಂದ ಬದುಕೋಕ್ಕೆ ಸಾಧ್ಯವಾಗಬೇಕು. ಅದಕ್ಕಾಗಿ ನಾನು ರಾಜಧಾನಿಯಲ್ಲಿದ್ದು ಪ್ರಯತ್ನಿಸ್ತೀನಿ. ನೀವು ಮಾತ್ರ ಊರವರಿಗೆ ಎಲ್ಲವನ್ನೂ ವಿವರಿಸಿ ಎಂದ…

ಇಫ್ಯುವರ್: ಮೆನೆ ಅಣ್ಣನಿಗೆ ಏನಾದರೂ ಆದರೆ, ಇಡಿಯ ನೀಲ ನದಿಯೇ ಹೊತ್ತಿ ಉರಿಯುತ್ತದೆ ಎಂಬುದನ್ನು ರಾಜಧಾನಿಯ ಜನರಿಗೆ ತಿಳಿಸಬೇಕಿತ್ತು.

ಥಾನಿಸ್: ಏನಾದರೂ ಹೇಳೋಕ್ಕೆ ನಮಗೆ ಆ ಜನ ಅವಕಾಶವನ್ನೇ ಕೊಡಲಿಲ್ಲವಲ್ಲ…

ಹಿರಿಯ: ಹಾಗಾದರೆ ಮುಂದಿನ ಹಾದಿ?

ಸೆಬೆಕ್: ರಾಜಧಾನಿಯಲ್ಲಿ ನಮಗೆ ಸಿಕ್ಕ ಹುಚ್ಚ ಹೇಳಿದ ಹಾಗೆ ನಮ್ಮ ಜನರು ರಾಜಧಾನಿಯಲ್ಲಿ ತುಂಬಿಕೊಳ್ಳಬೇಕು. ಆ ರಾಜಗುರು ಹೇಪಾಟ್ ಮತ್ತು ಅಧಿಕಾರಿ ಟೆಹುಟಿಯ ಮಾತುಗಳಿಗೆ ನೀರಾನೆ ಪ್ರಾಂತ್ಯ ಬಲಿಯಾಗದಂತೆ ನೋಡಿಕೊಳ್ಳಬೇಕು.

ಬೆಕ್: ಹೌದು, ನಮ್ಮ ಪ್ರಾಂತ್ಯದಿಂದ ಐದಾರು ದೋಣಿಗಳಷ್ಟು ಜನವಾದರೂ ರಾಜಧಾನಿಗೆ ಹೊರಡಬೇಕು.

ಗುಂಪಿನ ನಡುವಿನಿಂದ ರಾಮೆರಿಪ್‍ಟಾ ಸರ್ರನೆ ಮುಂದೆ ಬರುತ್ತಾನೆ.

ರಾಮೆರಿ: ಹಾಗಾದರೆ ನಾನೂ ಬರುತ್ತೇನೆ. ನಮ್ಮಪ್ಪನನ್ನು ಉಳಿಸಿಕೊಳ್ಳೋ ಹೋರಾಟದಲ್ಲಿ ನಾನು ಸೇರಲೇಬೇಕು.

ಬಟಾ: ಆದರೆ ನಿನಗೆ ನೆಫಿಸ್ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿದ್ದರಲ್ಲವೇ ಮೆನೆ ಅಣ್ಣಾ!

ನೆಫಿಸ್: (ಗುಂಪಿನಿಂದ ಬರುತ್ತಾ) ನಾನೂ ನಿಮ್ಮ ಜೊತೆಗೆ ಬರುತ್ತಾ ಇರುವಾಗ ನನ್ನ ಜೊತೆಗೆ ನನ್ನ ಮಗನೂ ಬರಲಿ ಬಿಡಿ.

ಬೆಕ್: ಅತ್ತಿಗೆ ನೀವು?

ನೆಫಿಸ್: ಹೌದು… ನೀವು ಮನೆಯ ಬಳಿ ಅರೆಬರೆ ಮಾತಾಡುತ್ತಾ ಇದ್ದಾಗಲೇ ನನಗೆ ಅನುಮಾನ ಬಂದಿತ್ತು. ಅದಕ್ಕೇ ನಾನೂ ರಾಮೆರಿ ಇಬ್ಬರೂ ಜನಮಂದಿರಕ್ಕೆ ಬಂದೆವು.

ಏನೋ ಮಾತಾಡಲು ಹೊರಟ ಬೆಕ್‍ನನ್ನು ತಡೆದು ಮಾತು ಮುಂದುವರೆಸುವ ನೆಫಿಸ್

ನೆಫಿಸ್: ನೀವು ಮುಚ್ಚಿಟ್ಟಿದ್ದೇನು ಎಂದು ತಿಳಿದ ಮೇಲೆ ನಾವು ಇಲ್ಲಿ ಉಳಿಯುವುದು ಸಾಧ್ಯವಿಲ್ಲ… ಮೆನೆಯನ್ನು ಸುರಕ್ಷಿತವಾಗಿ ಮನೆಗೆ ಕರೆತರುವ ಗುಂಪಲ್ಲಿ ನಾನೂ ರಾಮೆರಿ ಇಬ್ಬರೂ ಇರುತ್ತೇವೆ.

ಬೆಕ್: ಆದರೆ ಅತ್ತಿಗೆ, ನಿಮ್ಮ ಪುಟ್ಟ ಕಂದಮ್ಮ…? ಅದನ್ನು ನೋಡಿಕೊಳ್ಳುವುದು ಹೇಗೆ?

ನೆಫಿಸ್: ನನ್ನ ಮಗುವನ್ನು ನೆಫರೂರ ನೋಡಿಕೊಳ್ತಾಳೆ. ಅಲ್ವಾ ನೆಫರೂರ?

ನೆಫರೂರ: ಆಗಲಿ ಅಕ್ಕಾ… ನಾನು ನೋಡಿಕೊಳ್ಳುತ್ತೇನೆ…

ಸೆಬೆಕ್: ಹಾಗಾದರೆ ನಮ್ಮ ಜೊತೆಗೆ ಬರುವವರೆಲ್ಲರೂ ನಾಳೆ ಬೆಳಿಗ್ಗೆ ರಾ ಮೂಡುವ ಹೊತ್ತಿಗೆ ನೀಲ ನದಿ ತೀರದಲ್ಲಿ ಸೇರಿಕೊಳ್ಳಿ… ನಮ್ಮ ಪ್ರಾಂತ್ಯದ ಜನ ನಮ್ಮ ಒಗ್ಗಟ್ಟನ್ನು ರಾಜಧಾನಿಯಲ್ಲೂ ತೋರಿಸೋಣ.

ಎಲ್ಲರೂ: ಮೆನೆಪ್‍ಟಾ ನಮ್ಮ ನಾಯಕ… ನಾಡಿನ ಗೆಲುವಿಗೆ ನಮ್ಮ ಹೋರಾಟ

ಎನ್ನುವಾಗ ಮತ್ತೆ ಹಾಡು ಆರಂಭವಾಗಿ ವೇದಿಕೆಯ ಮೇಲೆ ಮತ್ತೊಂದು ದೃಶ್ಯ ಆರಂಭವಾಗುತ್ತದೆ.

ದೃಶ್ಯ 24

ಮೇನೆಯ ಮೇಲೆ ಕುಳಿತು ಬರುವ ಫ್ಯಾರೋಗೆ ಕಾಯುವಂತೆ ನಿಂತಿರುವ ಮಹಾಮಂತ್ರಿ ಆಮೆರಬ್

ಆಮೆರಬ್: ಮಹಾಪ್ರಭುಗಳಿಗೆ ಜಯವಾಗಲಿ! ಮಹಾಸಾಮ್ರಾಜ್ಯದ ಆರೋಗ್ಯ ವರ್ಧಿಸಲಿ!

ಫ್ಯಾರೋ: ನಮ್ಮ ಆರೋಗ್ಯ ವರ್ಧಿಸುವಂತೆ ನೀವು ಆ ರಾಜಗುರುವನ್ನು ಹೊತ್ತು ತಂದಿದ್ದೀರಲ್ಲಾ? (ನಗುತ್ತಾ)

ಆಮೆರಬ್: ಆದರೆ ರಾಜಧಾನಿಗೆ ಬಂದ ಮೇಲೆ ರಾಜಗುರುಗಳು ಭಾರೀ ಮೆತ್ತಗಿರುವುದರ ಹಿಂದೆ ಏನೋ ರಹಸ್ಯ ಇರುವಂತಿದೆ…?

ಫ್ಯಾರೋ: ಆ ರಹಸ್ಯವನ್ನೂ ಬೇಧಿಸೋಣ… ಅದಕ್ಕೆ ಅಲ್ಲವೇ ನೀವಿರೋದು?

ಆಮೆರಬ್: ಪ್ರಭುಗಳ ಆಶಯ ನೆರವೇರಲಿ. ಆದರೆ ರಾಜಗುರುವಿನ ಬತ್ತಳಿಕೆ ಸುಲಭವಾಗಿ ಬರಿದಾಗೋಲ್ಲ…

ಫ್ಯಾರೋ: ಅದನ್ನೂ ಬರಿದು ಮಾಡೋಣ… ಯುದ್ಧ ಅಂದ ಮೇಲೆ ಹೋರಾಟ ಇದ್ದದ್ದೇ!

ನೆಫರ್‍: (ಒಳಗೆ ಬರುತ್ತಾ) ಉತ್ಸವ ನಡೆಸುವ ಹೊತ್ತಲ್ಲಿ ಯುದ್ಧದ ಮಾತು ಅನಗತ್ಯ…

ಆಮೆರಬ್: ಓ! ಮಹಾರಾಣಿಯವರಿಗೆ ಜಯವಾಗಲಿ! (ನಮಿಸುತ್ತಾನೆ)

ನೆಫರ್: ಸೂಚನೆ ಕೊಡದೆ ಒಳಗೆ ಬಂದುದಕ್ಕೆ ಕ್ಷಮೆ ಇರಲಿ. ಆದರೆ ರಾಜಗುರುಗಳನ್ನು ಭೇಟಿ ಮಾಡಿದ ವಿಷಯವನ್ನು ನಿಮಗೆ ಹೇಳಲೇಬೇಕಿತ್ತು…

ಫ್ಯಾರೋ: ರಾಜಗುರುಗಳನ್ನ? ಯಾತಕ್ಕಾಗಿ ಭೇಟಿಯಾಗಿದ್ದಿರಿ?

ನೆಫರ್: ರಾಜಧಾನಿಯಲ್ಲಿ ಬೆಂಕಿ ಹತ್ತಿ ಉರಿಯುತ್ತಾ ಇರುವಾಗ ನಾವು ಕಣ್ಣುಮುಚ್ಚಿಕೊಂಡು ಇರಲಾಗದು ಅಲ್ಲವೇ?

ಫ್ಯಾರೋ: ಓ! ಆ ಬಿಸಿ ಮಹಾರಾಣಿಯವರನ್ನೂ ತಟ್ಟಿತೆ?

ನೆಫರ್: ತಟ್ಟದೆ ಇರುತ್ತದೆಯೇ? ಅರಮನೆ ಗುರುಮನೆಯ ವಿರಸ ಸಾಮ್ರಾಜ್ಯಕ್ಕೆ ಗಂಡಾಂತರ ಅಲ್ಲವೇ?

ಆಮೆರಬ್: (ಮಾತು ಬದಲಿಸುವಂತೆ) ಗುರುಗಳು ಏನಂದರು ಮಹಾರಾಣಿಯವರೇ?

ನೆಫರ್: ಅವರು ನೇರವಾಗಿ ಏನೂ ಹೇಳಲಿಲ್ಲ. ಆದರೆ ಅರಮನೆಯ ಮೇಲೆ ಮುನಿಸಿಕೊಳ್ಳಬೇಡಿ ಎಂದು ಮನವಿ ಮಾಡಿದೆ.

ಫ್ಯಾರೋ: ಅವರು ಮುನಿಸಿಕೊಂಡರೆ ನಾವು ತಣಿಸುವ ದಾರಿ ಹುಡುಕುತ್ತೇವೆ ಬಿಡಿ.

ನೆಫರ್: ಮಹಾಪ್ರಭುಗಳು ಈ ವಿಷಯದಲ್ಲಿ ದುಡುಕುವುದು ಬೇಡ… ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆಯಬೇಡಿ. ನಾನಿನ್ನು ಬರುತ್ತೇನೆ.

ಆಮೆರಬ್: ರಾಜಗುರುಗಳು ಈಗ ಇಲ್ಲಿಗೆ ಬರುವವರಿದ್ದಾರೆ. ಅವರೊಡನೆ ಮಾತುಕತೆ ಆಗುವಾಗ ನೀವೂ ಜೊತೆಗೆ ಇದ್ದರೆ ಒಳಿತು.

ನೆಫರ್: (ಹೊರಟಿದ್ದವಳು ನಿಂತು) ಇದೇನಿದು? ಮಂತ್ರಾಲೋಚನೆಯಲ್ಲಿ ಮಹಾರಾಣಿಯು ಇರಬೇಕು ಎಂದು ಸ್ವತಃ ನೀವೇ ಕೇಳುತ್ತಿದ್ದೀರಾ?

ಫ್ಯಾರೋ: ಮಹಾಮಂತ್ರಿಗಳ ಮಾತಲ್ಲಿ ಅರ್ಥವಿದೆ. ನೀವು ಗುರುಮನೆಯಲ್ಲಿ ಶುರುವಿಟ್ಟದ್ದನ್ನು ಇಲ್ಲಿ ಮುಗಿಸುವುದು ಬೇಡವೇ?

ನೆಫರ್: (ಹತ್ತಿರ ಬರುತ್ತಾ) ನಾನಂತೂ ರಾಜಗುರುಗಳಿಗೆ ಪರಿಪರಿಯಾಗಿ ವಿನಂತಿಸಿದ್ದೇನೆ. ಔತಣಕ್ಕೂ ಆಹ್ವಾನಿಸಿದ್ದೇನೆ. ಅವರು ಬೇಡುವ ಬಲಿಯನ್ನೂ ನೀಡುವುದಾಗಿ ಮಾತು ಕೊಟ್ಟಿದ್ದೇನೆ. ಮಹಾಪ್ರಭುಗಳು ಅದಕ್ಕೆ ಒಪ್ಪಿಕೊಂಡರಾಯಿತು.

ಫ್ಯಾರೋ: ಆಯಿತು… ಈಗ ಯಾವುದೇ ಸಂಘರ್ಷ ಬೇಡ. ಕಹಿಯಾದ್ದೇನೂ ಆಗೇ ಇಲ್ಲ ಎಂಬಂತೆ ಇದ್ದುಬಿಡೋಣ.

ಆಮೆರಬ್: ಹಾಗೆಯೇ ಆಗಲಿ…

ರಾಜಗುರುವನ್ನು ಮೇನೆಯಲ್ಲಿ ಹೊತ್ತು ತರುವ ಟೆಹುಟಿ, ಶಿಷ್ಯ ಮತ್ತು ಇಬ್ಬರು. ಅವರು “ರಾಜಗುರು ಹೇಪಾಟ್‍ಗೆ ಜಯವಾಗಲಿ” ಎನ್ನುತ್ತಾ ಬರುತ್ತಾರೆ.

ಹೇಪಾ: ಮಹಾಪ್ರಭುಗಳು ಚಿರಕಾಲ ಬಾಳಲಿ! ಅವರಿಗೆ ದೇವದೇವನ ಆಶೀರ್ವಾದ ಸದಾ ಸಿಗಲಿ. ಮಳೆ ಬೆಳೆಗಳು ಸಕಾಲದಲ್ಲಿ ಆಗಲಿ. ಸರ್ವಜನರೂ ಸುಖವಾಗಿರಲಿ!

ಫ್ಯಾರೋ: ಪ್ರಯಾಣದಲ್ಲಿ ಯಾವ ತೊಂದರೆಯೂ ಆಗಲಿಲ್ಲವೇ?

ಹೇಪಾ: ಮಹಾಮಂತ್ರಿಗಳೇ ನಾಯಕತ್ವ ವಹಿಸಿದ್ದಾಗ ತೊಂದರೆಯ ಮಾತೆಲ್ಲಿ?

ಫ್ಯಾರೋ: ನಿಮ್ಮ ವಿರಾಟ್ ಧರ್ಮ ಸಮಾವೇಶ ಯಶಸ್ವಿಯಾಯಿತೇ?

ಹೇಪಾ: ಅದು ಆಗಿಯೇ ಇಲ್ಲ ಎನ್ನುವವರು ಇಲ್ಲಿದ್ದಾರೆ ಎಂಬುದನ್ನು ನಾನು ಬಲ್ಲೆ. ಅಂತಹವರನ್ನು ದೇವರ ದೇವನೇ ಕ್ಷಮಿಸಲಿ. ಸಮಾಜ ಸುಧಾರಣೆಗೆ ನಮ್ಮಂತಹವರು ನಡೆಸುವ ವಿರಾಟ್ ಸಮಾವೇಶದಲ್ಲಿ ಉತ್ತರ ಸಿಕ್ಕಿರುವುದಂತೂ ಸತ್ಯ…

ಆಮೆರಬ್: ನೀವು ಸೂಚಿಸುವ ಬದಲಾವಣೆಗಳನ್ನು ಜನ ಒಪ್ಪಬೇಕಲ್ಲ…?

ಹೇಪಾ: ಜನರನ್ನು ಒಪ್ಪಿಸುವ ಕೆಲಸ ಮಾಡುವುದಕ್ಕೆ ನಿಮ್ಮನ್ನು ಮಹಾಮಂತ್ರಿ ಮಾಡಿರುವುದಲ್ಲವೆ? ಜನರ ಭಕ್ತಿ ಹೆಚ್ಚಿಸುವ ಜವಾಬ್ದಾರಿ ನಿಮ್ಮ ಮೇಲಿದೆಯಲ್ಲವೇ?

ಆಮೆರಬ್: ಸಾಮ್ರಾಜ್ಯದ ಬೆಳವಣಿಗೆ ಆಗುವುದು ಭಕ್ತಿಯಿಂದಲ್ಲ, ದುಡಿವವರ ಬೆವರಿನಿಂದ ಎಂಬುದು ತಮಗೂ ತಿಳಿದಿದೆಯಲ್ಲವೇ? ನಾವು ಬದುಕು ಕಟ್ಟದೆ ಭಕ್ತಿಯ ಮಾತಾಡಿದರೆ ಜನ ದಂಗೆ ಏಳುತ್ತಾರಲ್ಲವೇ?

ಹೇಪಾ: ಅವರು ದಂಗೆ ಏಳದಂತೆ ತಡೆಯುವುದಕ್ಕೆ ನಮ್ಮ ಟೆಹುಟಿಯಂತವರು ಇದ್ದಾರಲ್ಲವೇ?

ಆಮೆರಬ್: ಅಂದರೆ ನಿಮ್ಮ ಮೇನೆ ಹೊತ್ತವರು ನನಗಿಂತ ಗಟ್ಟಿಗರು, ನಾವು ದಡ್ಡರು ಎನ್ನುತ್ತಾ ಇದ್ದೀರೋ?

ಹೇಪಾ: ಎಲ್ಲವನ್ನೂ ನಾನು ಬಿಡಿಸಿ ಹೇಳದೆ ಇದ್ದರೂ ನಡೆದಿರುವುದು ಅದೇ ಅಲ್ಲವೇ?

ನೆಫರ್: (ಮಹಾಮಂತ್ರಿಯ ಮಾತನ್ನು ತಡೆಯುತ್ತಾ) ಈಗ ಹಳೆಯದನ್ನು ಕೆದಕಿ ಲಾಭವೇನು? ರಾಜಗುರುಗಳಿಲ್ಲದೆ ವರ್ಧಂತಿ ಉತ್ಸವ ನಡೆಯುವುದಿಲ್ಲ. ಉತ್ಸವಗಳನ್ನು ಮಾಡದೆ ಜನರ ಭಕ್ತಿ ಪ್ರದರ್ಶನಕ್ಕೆ ಅವಕಾಶವೂ ಇರುವುದಿಲ್ಲ.

ಹೇಪಾ: ಮಹಾರಾಣಿಯವರ ಸಮಯೋಚಿತ ನುಡಿಗೆ ನನ್ನ ಸಮ್ಮತಿ ಇದೆ. ಆದರೆ ಉತ್ಸವಕ್ಕೆ ಮೊದಲು ಬಗೆಹರಿಸಬೇಕಾದ ವಿಷಯವೊಂದಿದೆ.

ಫ್ಯಾರೋ: ಅದೇನು ವಿಷಯ ಎಂದು ತಿಳಿಸಿ… ನಂತರ ಬಗೆಹರಿಸುವ ಮಾತು…

ಹೇಪಾ: ನೀವು ದಂಗೆ ಎದ್ದ ರೈತ ಮುಖಂಡನಿಗೆ ಕರೆದು ರಾಜೋಪಚಾರ ಕೊಡುತ್ತಾ ಇದ್ದೀರಂತಲ್ಲ…?

ಆಮೆರಬ್: ರಾಜನೀತಿಯಲ್ಲಿ ಒಂದು ಸಮಸ್ಯೆ ಬಗೆಹರಿಸುವುದಕ್ಕೆ ಅನೇಕ ದಾರಿಗಳಿವೆ. ಪ್ರಭುಗಳು ನಿರ್ಧರಿಸದಂತೆ ನಾನು ನಡೆದಿದ್ದೇನೆ. ಆ ರೈತ ಮುಖಂಡನಿಗೆ ನಾಡಿನ ಎಲ್ಲಾ ವ್ಯಾಪಾರಿಗಳ ಬೆಂಬಲವಿದೆ ಎಂಬುದು ನಿಮಗೂ ತಿಳಿದಿದ್ದರೆ ಒಳ್ಳೆಯದು.

ಹೇಪಾ: ಹಾಗಾದರೆ ದಂಗೆ ಎದ್ದ ರೈತರಿಗೆ ನೀವು ಶಿಕ್ಷೆ ಕೊಡುವುದಿಲ್ಲವೋ?

ಫ್ಯಾರೋ: ಉತ್ಸವ ಮುಗಿದ ನಂತರ ಅದನ್ನು ಮಾಡಬಹುದು.

ಹೇಪಾ: ಹಾಗಾದರೆ ಉತ್ಸವದ ದಿನದವರೆಗೆ ಆ ಕ್ರಿಮಿಯನ್ನು ಕತ್ತಲ ಕೋಣೆಗೆ ತಳ್ಳಿರಿ. ದೇಶದ್ರೋಹಿಗೆ ಯಾವುದೇ ಆತಿಥ್ಯ ಕೊಡಬೇಕಾಗಿಲ್ಲ. ಅವನೇ ನಾನು ಬೇಡುವ ಬಲಿ.

ಆಮೆರಬ್ ಮಾತಾಡುವ ಮುನ್ನ ಅವನನ್ನು ತಡೆದು ಮಾತಾಡುವ ನೆಫರ್‍ಟೀಮ್.

ನೆಫರ್: ರಾಜಗುರುಗಳ ಇಚ್ಛೆ ಪೂರೈಸುತ್ತೇವೆ. ಟೆಹುಟಿಯವರೇ ಇಂದೇ ಆ ಕೆಲಸ ಮಾಡಿರಿ.

ಟೆಹುಟಿ: ತಮ್ಮ ಆಜ್ಞೆ! (ಎಂದು ನಮಿಸುತ್ತಾನೆ)

ಹೇಪಾ: ದೇಶದಲ್ಲಿ ಸನಾತನ ಧರ್ಮದ ಬಗ್ಗೆ ನಂಬಿಕೆ ಕಡಿಮೆಯಾಗಿದೆ. ನಾವು ಧರ್ಮದ ಜೈತ್ರಯಾತ್ರೆಗೆ ಹೋಗುತ್ತಾ ಇದ್ದೇವೆ. ಆಗ ನಮ್ಮ ಬೆನ್ನಿಗೆ ಸೈನ್ಯವನ್ನು ಕಳಿಸಬೇಕಾಗುತ್ತದೆ.

ನೆಫರ್‍: ಆಗಲಿ… ರಾಜಗುರುಗಳಿಗೆ ಬೇಕಾದ್ದೆಲ್ಲಾ ಒದಗಿಸಲಾಗುತ್ತದೆ…

ಹೇಪಾ: ಅರಮನೆಯು ಗುರುಮನೆಯ ಮಾತಿನಂತೆ ನಡೆದರೆ ಎಲ್ಲವೂ ಸರಿಯಾಗುತ್ತದೆ… ಮಹಾಪ್ರಭುಗಳ ವರ್ಧಂತಿ ಉತ್ಸವ ನಾಳೆಯೇ ಆಗಲಿ…

ಎನ್ನುವಾಗ ಜಯ ಜಯ ಘೋಷಗಳು ಆರಂಭವಾಗಿ ಫ್ಯಾರೋನ ಮೆರವಣಿಗೆ ಆಗುತ್ತದೆ. ಜಯಘೋಷದ ಜೊತೆಗೆ ಮುಂದಿನ ದೃಶ್ಯಕ್ಕೆ ವೇದಿಕೆ ಸಜ್ಜಾಗುತ್ತದೆ

ದೃಶ್ಯ 25

ಮೆನೆಪ್‍ಟಾ ಮತ್ತು ಕೆಲವರು ಮೆರವಣಿಗೆಯನ್ನು ನೋಡುತ್ತಾ ನಿಂತಿದ್ದಾರೆ.

ಮೆನೆ: ರಾಜಧಾನಿಯಲ್ಲಿ ಎಲ್ಲಾ ಉತ್ಸವಗಳೂ ಹೀಗೇನಾ?

ಮೆನ್ನ: ಹೀಗೇನಾ ಅಂದರೆ?

ಮೆನೆ: ಸಾಮಾನ್ಯ ಜನರಿಗೆ ಅದನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುವುದಿಲ್ಲವಾ?

ಮೆನ್ನ: ಸಧ್ಯ ಸಾಮಾನ್ಯ ಜನ ಬದುಕಲು ಬಿಟ್ಟಿದ್ದೀರಲ್ಲಾ? ಅದಕ್ಕೆ ಸಂತೋಷ ಪಡಬೇಕಲ್ಲವೇ ನೀವು?

ಮೆನೆಪ್‍ಟಾ ಅವನ ಮಾತಿಗೆ ನಗುತ್ತಾನೆ.

ಮೆನ್ನ: ಅಧಿಕಾರದಲ್ಲಿರೋ ಜನ ಆಗಾಗ ಉತ್ಸವ ಮಾಡುವುದು ಯಾಕೆ ಹೇಳಿ? ತಮ್ಮ ಶಕ್ತಿ ಪ್ರದರ್ಶನಕ್ಕೆ, ಮತ್ತೆ ಬಡವರಿಗೆ ಈ ಭಾಗ್ಯ ಇಲ್ಲ ಅಂತ ನೆನಪಿಸೋಕ್ಕೆ, ಅಷ್ಟೆ…

ಹೊರಗಿನ ಮೆರವಣಿಗೆಯನ್ನು ನೋಡಿ ಮತ್ತೆ ಮೆನೆಯ ಬಳಿಗೆ ಬಂದು

ಮೆನ್ನ: ಮಹಾಪ್ರಭುಗಳು ಚಿನ್ನದ ಮೇನೆಯಲ್ಲಿ ಊರ ತುಂಬ ಮೆರವಣಿಗೆ ಹೋಗುವಾಗ ಕಿಟಕಿಗಳಿಂದ, ಬಾಗಿಲ ಸಂದಿಯಿಂದ ನೋಡುವ ಜನರಿಗೆ ಹುಟ್ಟೋದು ಒಂದೇ ಭಾವ… “ಈ ರಾಜನ ಕಣ್ಣು ನಮ್ಮ ಮೇಲೆ ಬೀಳದೇ ಇರಲಿ… ನಮ್ಮ ಜೀವಕ್ಕೆ ಹಸಿವೆ ಇದ್ದರೂ ಪರವಾಗಿಲ್ಲ, ಸೆರೆಮನೆಯ ಸಹವಾಸ ಬೇಡ” ಅಂತಾನೇ ಸಾಮಾನ್ಯ ಜನ ನರಳೋದು…

ಮತ್ತೆ ಬಾಗಿಲ ಬಳಿಗೆ ಅವನು ಹೋಗುವಾಗಲೇ ಅವನನ್ನು ತಳ್ಳಿಕೊಂಡು ಒಳಗೆ ಬರುವ ಪಂಜು ಹಿಡಿದ ಭಟರು… ಮೆನ್ನ ತಟ್ಟನೆ ಅಡಗುತ್ತಾನೆ.

ಮೆನೆ: (ಗಾಬರಿಯಿಂದ) ಯಾರು? ಯಾರು ನೀವು?

ಭಟ: ಷ್! ಸದ್ದು ಮಾಡದಿರು! ನಮ್ಮ ಜೊತೆಗೆ ನಡೀತಾ ಇರು!

ಮೆನೆ: ಯಾಕೆ? ಎಲ್ಲಿಗೆ?

ಭಟ: ಮಹಾಪ್ರಭುಗಳ ಆಜ್ಞೆಯಾಗಿದೆ… ನಿನ್ನನ್ನು ಕಾರಾಗೃಹಕ್ಕೆ ತಳ್ಳುತ್ತಾ ಇದ್ದೇವೆ.

ಮೆನೆ: ಏನು ಮಹಾಪ್ರಭುಗಳೇ ನನ್ನ ಬಂಧನಕ್ಕೆ ಆಜ್ಞೆ ಹೊರಡಿಸಿದರೆ?

ಆಗ ಹಿಂದಿದ್ದ ಟೆಹುಟಿ ಮುಂದೆ ಬರುತ್ತಾನೆ.

ಟೆಹುಟಿ: ಮತ್ತೆ? ನಾನು ಆಜ್ಞೆ ಹೊರಡಿಸಿದೆ ಅಂದುಕೊಂಡೆಯಾ?

ಮೆನೆ: ಟೆಹುಟಿ?

ಟೆಹುಟಿ: ಹೌದು… ನಾನೇ… ಆ ದಿನ ನಿನಗೆ ಚಡಿ ಶಿಕ್ಷೆ ಕೊಡುವ ಬದಲಿಗೆ ತಲೆತೆಗೆಯಿರಿ ಎಂದಿದ್ದಾರೆ ಚೆನ್ನಾಗಿರುತ್ತಿತ್ತು. ಈಗ ನಿನ್ನಂಥಾ ಸಣ್ಣ ರೈತ ನನ್ನನ್ನು ಹೆಸರು ಹಿಡಿದು ಕರೆಯುವ ದಿನ ಬರುತ್ತಾ ಇರಲಿಲ್ಲ. (ಭಟರಿಗೆ) ಏಯ್ ಎಳೆದುಕೊಂಡು ನಡೆಯಿರೋ?

ಮೆನೆಪ್‍ಟಾನನ್ನು ಅವರು ಹಿಡಿದುಕೊಂಡು ಹೋಗುವಾಗ ಅಡ್ಡ ಬರುವ ಮೆನ್ನ.

ಮೆನ್ನ: (ಹುಚ್ಚನ ಹಾಗೆ ನಟಿಸುತ್ತಾ) ಏಯ್! ರಾಜನ ಎಂಜಲಿನ ನಾಯಿಗಳೇ! ಯಾರನ್ನಾದರೂ ಕಾರಾಗೃಹಕ್ಕೆ ತಳ್ಳುವ ಮೊದಲು ವಾದ – ಪ್ರತಿವಾದ ಆಗುವುದು ಬೇಡವೇನ್ರೋ?

ಟೆಹುಟಿ: (ಅರೆಕ್ಷಣ ಅವನನ್ನು ನೋಡಿ ನಂತರ) ಕತ್ತಿಯ ಮೊನೆ ನಿನ್ನ ಕೊರಳಿಗೆ ತಾಗುವ ಮೊದಲು ಜಾಗ ಬಿಡೋ ಹುಚ್ಚಾ (ಎಂದು ಅವನನ್ನು ದೂರಕ್ಕೆ ತಳ್ಳುತ್ತಾನೆ)

ಅವರೆಲ್ಲರೂ ಹೋಗುವಾಗ ಮೆನ್ನ ಕೂಗುತ್ತಾನೆ

ಮೆನ್ನ: ಹೇಳಿದ್ದೆ… ಮುಂಚೆಯೇ ಹೇಳಿದ್ದೆ… ಬಡವರಿಗಿಲ್ಲಿ ಬಾಯಿಲ್ಲ ಅಂತ ಹೇಳಿದ್ದೆ… ನ್ಯಾಯಕ್ಕಿಲ್ಲಿ ನೆಲೆಯಿಲ್ಲ ಅಂತ ಹೇಳಿದ್ದೆ…   (ಇದೇ ಮಾತುಗಳು ಹಾಡಾಗುತ್ತದೆ)

ಹೇಳಿದ್ದೆ ನಾ ಹೇಳಿದ್ದೆ.

ಬಡವರಿಗಿಲ್ಲಿ ಬಾಯೇ ಇಲ್ಲ.

ನ್ಯಾಯಕ್ಕಿಲ್ಲಿ ನೆಲೆಯಿಲ್ಲ.

ಹೇಳಿದ್ದೆ ನಾ ಹೇಳಿದ್ದೆ…

ವೇದಿಕೆಯ ಮೇಲಿನ ದೃಶ್ಯ ಹಾಡಿನ ಜೊತೆಗೆ ಬದಲಾಗುತ್ತದೆ.

ದೃಶ್ಯ 25

ಕತ್ತಲಕೋಣೆಯ ಜಾಗಕ್ಕೆ ಹಾಡುತ್ತಾ ಬರುವ ಮೆನ್ನ. ಅಲ್ಲಿರುವ ಕಾವಲು ಭಟರು ಅವನನ್ನು ತಡೆಯುತ್ತಾರೆ.

ಮೆನ್ನ: ಓಹೋಯ್! ಕಾವಲು ಭಟ! ದೇವರ ಶಾಪ ಪಡೆಯುವ ಇಚ್ಛೆಯಿದೆಯಾ ನಿನಗೆ?

ಕಾ.ಭಟ: ಸಧ್ಯಕ್ಕೆ ಮಹಾಪ್ರಭುಗಳ ಶಾಪ ತಟ್ಟದಿದ್ದರೆ ಸಾಕು… ದೂರ ಇರು… ಮಹಾಮಂತ್ರಿಗಳು ಯಾರನ್ನೂ ಕತ್ತಲಕೋಣೆಯ ಒಳಗೆ ಬಿಡಬಾರದೆಂದು ಆಜ್ಞೆ ಮಾಡಿದ್ದಾರೆ.

ಮೆನ್ನ: ಹಾಗಾದರೆ ನಿನಗೆ ಸುದ್ದಿಯೇ ಗೊತ್ತಾಗಿಲ್ಲವೋ?

ಕಾ.ಭಟ: ಯಾವ ಸುದ್ದಿ?

ಮೆನ್ನ: ಇವತ್ತಿನಿಂದ ದೊರೆಗಳು, ಮಂತ್ರಿಗಳು, ಗುರುಗಳು ಎಲ್ಲರೂ ಒಂದೇ ಆಗಿದ್ದಾರೆ. ಉತ್ಸವದ ಹೆಸರಲ್ಲಿ ದೊರೆಗಳು ಮಾಡಿರುವ ಬದಲಾವಣೆ ಇದು. ಅದಕ್ಕಾಗಿ ರಾಜಗುರುಗಳು “ಎಲ್ಲಾ ಪಾಪಿಗಳಿಗೂ ಪ್ರಸಾದವನ್ನು ತಿನ್ನಿಸಬೇಕು” ಎಂದಿದ್ದಾರೆ. ಹಾಗೆ ಮಾಡದಿದ್ದರೆ ದೊರೆಗಳಿಗೆ ಸಾವು ಬರುತ್ತದೆಯಂತೆ…

ಕಾ.ಭಟ: ಹೌದಾ? ಈಗೇನು ಮಾಡುವುದೆಂದು ಗೊತ್ತಾಗ್ತಾ ಇಲ್ವಲ್ಲಾ?

ಮೆನ್ನ: ಸರಿ ಬಿಡು, ನಾನು ದೇವಾಲಯಕ್ಕೆ ಹಿಂದಿರುಗ್ತೇನೆ… ರಾಜಗುರುಗಳಿಗೆ ನೀನು ಅಡ್ಡಿ ಪಡಿಸಿದ್ದರಿಂದ ಕತ್ತಲಕೋಣೆಯ ಪಾಪಿಗಳಿಗೆ ಪ್ರಸಾದ ತಿನ್ನಿಸಿಲ್ಲ ಎನ್ನುತ್ತೇನೆ…

ಕಾ.ಭಟ: ಅಯ್ಯೋ ಹಾಗೆ ಮಾಡಬೇಡಿ ಸ್ವಾಮಿ… ಗುರುಗಳ ಸಿಟ್ಟಿಗೆ ನಾನು ಬಲಿಯಾದರೆ ನನ್ನ ಹೆಂಡತಿ ಮಕ್ಕಳ ಗತಿಯೇನು?… ಬೇಗ ಹೋಗಿ, ಬೇಗ ಬನ್ನಿ…

ಮೆನ್ನ: ನೀನು ಆ ಕಡೆ ಇರು… ನಾನು ಸರ್ರನೆ ಹೋಗಿ ಬಿರ್ರನೆ ಬರ್ತೇನೆ… (ಎಂದು ಒಳಗೆ ಹೋಗ್ತಾನೆ) ಮೆನೆ, ಮೆನೆ…

ಒಳಗೆ ಮಲಗಿದ್ದ ಮೆನೆಪ್‍ಟಾ ಎದ್ದು ಕೂರುತ್ತಾನೆ

ಮೆನೆ: ಯಾರು?

ಮೆನ್ನ: ನಾನೇ! ನಿಮ್ಮ ಗೆಳೆಯ!

ಮೆನೆ: ಓ! ಹಾಡುಗಾರ ಮೆನ್ನ… ನೀನು ಹೇಗೆ ಬಂದೆ ಒಳಗೆ?

ಮೆನ್ನ: ಬುದ್ಧಿ ಚುರುಕಾಗಿದ್ದವರಿಗೆ ನರಕದಲ್ಲೂ ಬಾಗಿಲುಗಳು ತೆರೆಯುತ್ತವೆ… ಆದರೆ ಮಹಾಮಂತ್ರಿ ಆಮೆರಬ್ ಮಾತ್ರ ಇಲ್ಲಿಗೆ ಯಾರನ್ನೂ ಬಿಡುತ್ತಾ ಇಲ್ಲ… ಸೈನ್ಯವನ್ನೇ ಬಾಗಿಲಲ್ಲಿ ಇರಿಸಿದ್ದಾನೆ.

ಮೆನೆ: ಆದರೆ ಆತ ನಮ್ಮ ಸ್ನೇಹಿತರಂತೆ ಇದ್ದರು…

ಮೆನ್ನ: ಯಾವಾಗ? ರಾಜಗುರು ಅವರನ್ನು ದುರ್ಬಲರಾಗಿಸಲು ಹೊರಟಾಗ… ಈಗ ಅವರ ಸ್ಥಾನವೇ ಡೋಲಾಯಮಾನವಾಗಿದೆ. ಹೀಗಾಗಿ ರಾಜಗುರುವನ್ನು ಒಲಿಸಿಕೊಳ್ಳಲು ನಿಮ್ಮನ್ನು ಸೆರೆಗೆ ತಳ್ಳಿದರು… ಆದರೆ ಇಂದು ರಾತ್ರಿ ನಿಮಗೆ ಬಿಡುಗಡೆ…!

ಮೆನೆ: ಬಿಡುಗಡೆ? ನನ್ನ ಬಿಡುಗಡೆಯೇ? ನಾಳೆ ವಿಚಾರಣೆ ಅಂತ ಹೇಳ್ತಾ ಇದ್ದ್ರು?

ಮೆನ್ನ: ವಿಚಾರಣೆ ಅವರದ್ದು… ಬಿಡುಗಡೆ ನಮ್ಮದು… ಇಲ್ಲಿಂದ ಪಾರಾಗೋ ದಾರಿ ನನಗೆ ಗೊತ್ತಿದೆ… ಈಗಲೇ ಹೊರಡಿ.

ಮೆನೆ: ಅಂದರೆ ವಿಚಾರಣೆ ತಪ್ಪಿಸಿಕೊಂಡು ಹೋಗುವುದೇ? ಇಲ್ಲ ಮೆನ್ನ. ಇದು ದಕ್ಷಿಣ ಪ್ರಾಂತ್ಯದ ಜನರ ವಿಚಾರಣೆ. ನಾನು ತಪ್ಪಿಸಿಕೊಂಡು ಓಡಿದರೆ ನನ್ನ ಪ್ರಾಂತ್ಯದವರ ಮೇಲೆ ಸೇನೆ ನುಗ್ಗುತ್ತದೆ. ಇಲ್ಲ… ನಾನು ಓಡಬಾರದು! ಮೆನೆಪ್‍ಟಾ ಹೆದರಿ ಓಡಿದ ಎನ್ನುವುದು ನನ್ನ ಮಕ್ಕಳಿಗೆ ಪಾಠವಾಗಬಾರದು. ನಾನು ವಿಚಾರಣೆ ಎದುರಿಸುತ್ತೇನೆ. ನನ್ನ ಮಾತಿಂದಲೇ ಗೆಲ್ಲುತ್ತೇನೆ.

ಮೆನ್ನ: ಗೆಲುವು? ನಿಮಗೆ? ಅದು ಬರೀ ಭ್ರಮೆ…! ಅವರು ಖಂಡಿತ ನಿಮ್ಮನ್ನು ಜೀವಂತ ಉಳಿಸುವುದಿಲ್ಲ.

ಮೆನೆ: ನನಗೇನಾದರೂ ಆಗಲಿ. ನನ್ನ ಜನಕ್ಕೆ ಏನೂ ಆಗದೆ ಇದ್ದರೆ ಸಾಕು.

ಮೆನ್ನ: ಹಾಗಾದರೆ ನೀವು ನನ್ನ ಜೊತೆಗೆ ಬರುವುದಿಲ್ಲವೇ?

ಮೆನೆ: ಇಲ್ಲ… ಮೆನೆಪ್‍ಟಾ ಕಳ್ಳರು ಸುಳ್ಳರ ಹಾಗೆ ಓಡಿಹೋಗುವವನಲ್ಲ. ದಕ್ಷಿಣದ ಜನ ಧೈರ್ಯವಂತರು ಎಂದು ಜಗತ್ತಿಗೆ ತೋರಿಸುತ್ತೇನೆ.

ಮೆನ್ನ ಹಾಡುತ್ತಾನೆ

ಕೇಳಿರಿ ಕೇಳಿರಿ ನನ್ನಯ ಜನರೇ!

ಕತ್ತಲ ನಾಡಿನ ಕತೆಯನ್ನು!

ಧನಿಕರ ಚಾವಟಿ ಸದ್ದೇ ತುಂಬಿದ

ಬಡವರ ನೋವಿನ ವ್ಯಥೆಯನ್ನು!

ವೇದಿಕೆಯಲ್ಲಿನ ದೃಶ್ಯ ಬದಲಾಗುತ್ತದೆ.

ದೃಶ್ಯ 27

ಮೇನೆಯ ಮೇಲೆ ಬರುವ ಫ್ಯಾರೋ ಮತ್ತು ರಾಜಗುರು. ಮಹಾರಾಣಿ, ನೆಹನ, ಗೇಬು, ಟೆಹುಟಿ ಸಹ ಅಲ್ಲಿದ್ದಾರೆ. ಶ್ರೀಮಂತರು ಒಂದಷ್ಟು ಜನ ವೇದಿಕೆಯ ಒಂದು ಬದಿಗೆ ಇದ್ದಾರೆ. ಬಂಧಿತನಂತೆ ಕಟ್ಟಲ್ಪಟ್ಟ ಮೆನೆಪ್‍ಟಾನನ್ನು ಭಟರು ಕರೆದುತರುತ್ತಾರೆ.

ಆಮೆರಬ್: ಮಹಾಪ್ರಭುಗಳಿಗೆ ಜಯವಾಗಲಿ! ಮಹಾಪ್ರಭುಗಳ ದೇವಸಾಮ್ರಾಜ್ಯದ ವಿರುದ್ಧ ಬಂಡಾಯವೆದ್ದ ದಕ್ಷಿಣ ಪ್ರಾಂತ್ಯದ ನಾಯಕನ ವಿಚಾರಣೆ ಆರಂಭಿಸಲು ತಾವು ಅಪ್ಪಣೆ ಕೊಡಬೇಕು.

ಫ್ಯಾರೋ: ಪ್ರಾರಂಭವಾಗಲಿ.

ಆಮೆರಬ್: ಮಹಾಜನಗಳೇ, ಸ್ವತಃ ಮಹಾಪ್ರಭುಗಳು ಹಾಗೂ ಮಹಾರಾಣಿಯವರ ಸಮ್ಮುಖದಲ್ಲಿ ಈ ವಿಚಾರಣೆ ನಡೆಯುತ್ತಾ ಇದೆ. ರಾಜಗುರುಗಳು ಸಹ ಧಾರ್ಮಿಕ ಕಾರಣಕ್ಕಾಗಿ ಈ ಸಭೆಯಲ್ಲಿ ಇದ್ದಾರೆ. ಹಾಗಾಗಿ ಇದೊಂದು ಚಾರಿತ್ರಿಕ ಮಹತ್ವದ ವಿಚಾರಣೆ. ಈ ಆರೋಪಿಯು ಗುರುತರವಾದ ಅಪರಾಧಗಳನ್ನು ಮಾಡಿದ್ದಾನೆ ಎಂಬುದಕ್ಕೆ ಸಾಕ್ಷ್ಯಗಳು ಅಸಂಖ್ಯವಾಗಿವೆ. ಈತನ ತಪ್ಪುಗಳಿಗೆ ವಿಚಾರಣೆಯೇ ಇಲ್ಲದೆ ಶಿಕ್ಷೆ ವಿಧಿಸಬಹುದು. ಆದರೆ ನಮ್ಮದು ಧರ್ಮ ಪರಿಪಾಲನೆಯ ರಾಜ್ಯವಾದ್ದರಿಂದ ಅಪರಾಧಿಯ ವಿಚಾರಣೆಗೆ ಅವಕಾಶ ಮಾಡಿಕೊಡಲಾಗಿದೆ. ಅಪರಾಧಿಗೆ ತಪ್ಪುಗಳನ್ನು ಒಪ್ಪಿಕೊಳ್ಳಲು ಸಹ ಅವಕಾಶ ನೀಡಲಾಗಿದೆ.  ನ್ಯಾಯಾಸ್ಥಾನದ ಸಂಪ್ರಧಾಯದಂತೆ ಸಾಮಂತರು ಅಥವಾ ಅಧಿಕಾರಿಗಳು ದೂರಿನ ವಿವರ ಹೇಳಿರಿ.

ಟೆಹುಟಿ: (ಮುಂದೆ ಬಂದು ಮಾತಾಡುತ್ತಾನೆ) ಮಹಾಪ್ರಭುಗಳಿಗೆ ಜಯವಾಗಲಿ. ನಾವು ಸುಂಕ ವಸೂಲಿಗೆಂದು ದಕ್ಷಿಣ ಪ್ರಾಂತ್ಯಕ್ಕೆ ಹೋಗಿದ್ದೆವು. ಈ ಜನ ನಮ್ಮ ಬಳಿಗೆ ಮನವಿ ಸಲ್ಲಿಸುತ್ತೇನೆ ಎಂದು ಬಂದರು. ಆದರೆ ಇವರು ನಮ್ಮನ್ನೆಲ್ಲಾ ಕೊಂದು ನೀಲ ನದಿಗೆ ಎಸೆಯುವ ಯೋಜನೆ ಹಾಕಿದ್ದರು ಎಂದು ಗುಪ್ತದಳಗಳು ತಿಳಿಸಿದ್ದವು. ಆದರೂ ನಾವು ಮನವಿ ಸ್ವೀಕರಿಸಲು ಸಿದ್ಧರಾದೆವು. ಈ ರಕ್ಕಸ ಮನವಿ ಕೊಡಲು ಬಂದಾಗ ಮಹಾಪ್ರಭುಗಳನ್ನು, ರಾಜಗುರುಗಳನ್ನು ಮತ್ತು ಸಾಮ್ರಾಜ್ಯದ ಆಡಳಿತವನ್ನು ಬಾಯಿಗೆ ಬಂದಂತೆ ನಿಂದಿಸಿದ. ನನ್ನ ಮೇಲೆ ಕೈ ಮಾಡಿದ. ಇವನ ಜೊತೆಗೆ ಬಂದಿದ್ದವರು ನಮ್ಮನ್ನು ಹೊಡೆಯಲು ಬಂದರು. ನಾವು ಕಷ್ಟಪಟ್ಟು ಅಲ್ಲಿಂದ ಪಾರಾದೆವು. ಪ್ರಭುಗಳ ಸಾಮ್ರಾಜ್ಯದಲ್ಲಿ ಸಣ್ಣ ಕಿಡಿಯಾದ ಇದನ್ನು ಈಗಲೇ ಹೊಸಕದಿದ್ದರೆ ನಾಳೆ ಬೆಂಕಿಯಾಗಿ ಇಡಿಯ ಸಾಮ್ರಾಜ್ಯವನ್ನು ಇದು ಸುಡುತ್ತದೆ. ಅಷ್ಟೇ ಮಹಾಸ್ವಾಮಿ! (ಎಂದು ಮತ್ತೆ ನಮಿಸಿ ತನ್ನ ಜಾಗಕ್ಕೆ ಹೋಗುತ್ತಾನೆ)

ಆಮೆರಬ್: ಸಾಮಂತರಾಗಿದ್ದ ಗೇಬು ಅವರು ಏನಾದರೂ ಹೇಳುವುದಿದೆಯೇ?

ಗೇಬು: (ಮುಂದೆ ಬಂದು) ಮಹಾಪ್ರಭುಗಳಿಗೆ ಪ್ರಣಾಮಗಳು. ರಾಜಪ್ರತಿನಿಧಿಗಳು ಹೇಳಿದ್ದೆಲ್ಲವೂ ಅಕ್ಷರಶಃ ಸತ್ಯ. ಈ ಜನ ನಮ್ಮನ್ನು ಸಜೀವವಾಗಿ ಸುಡುವ ಯೋಚನೆ ಮಾಡಿದ್ದರು.

ನೆಹನ: ನಾವು ಸಿಕ್ಕಿದ್ದರೆ ಕೊಲ್ಲಲು ನಿರ್ಧರಿಸಿದ್ದರು. ರಾಜಮಂದಿರವನ್ನೆಲ್ಲ ಈ ಜನ ಲೂಟಿ ಮಾಡಿದರು.

ಗೇಬು: ನಾವು ತಪ್ಪಿಸಿಕೊಂಡು ಬಂದದ್ದು ಕೇವಲ ರಾಜಗುರುಗಳಂತಹ ಮಹಾಮಹಿಮರ ಆಶೀರ್ವಾದದಿಂದ.

ಆಮೆರಬ್: ಈ ಅಪರಾಧಿಯ ಬಗ್ಗೆ ಮತ್ಯಾರಾದರೂ ಏನಾದರೂ ಹೇಳುವುದಿದೆಯೇ?

ಹೇಪಾ: ಈತನ ವಿರುದ್ಧ ದಕ್ಷಿಣ ಪ್ರಾಂತ್ಯದ ದೇವಸೇವಕ ದೂರು ಕಳಿಸಿದ್ದಾನೆ. (ಶಿಷ್ಯನಿಂದ ಪತ್ರ ಪಡೆದು ಓದುತ್ತಾ) ರಾಜಗುರುಗಳಿಗೆ ದೇವಸೇವಕನ ನಮನಗಳು. ದಕ್ಷಿಣ ಪ್ರಾಂತ್ಯದಲ್ಲಿ ಬಂಡಾಯವಾದ ದಿನ ಆರೋಪಿಯು ದೇವಾಲಯಕ್ಕೆ ನುಗ್ಗಿದ. ದೇವಸೇವಕನನ್ನು ಹೊಡೆದ. ನಾನೇ ದೇವರು ಎಂದ. ದೇವರ ಆಭರಣಗಳನ್ನು ಲೂಟಿ ಮಾಡಿದ. ತಾನು ಮಹಾಪ್ರಭುಗಳನ್ನು ರಾಜಗುರುಗಳನ್ನು ಕೊಲ್ಲುವುದಾಗಿ ಕೂಗುತ್ತಾ ಬೀದಿ ತುಂಬಾ ಓಡಾಡಿದ. ಇವನದು ದೈವದ್ರೋಹ, ಇಂತಹ ದ್ರೋಹಿಯನ್ನು ಕ್ಷಮಿಸಬಾರದು.

ಆಮೆರಬ್: ದೂರು ಸಲ್ಲಿಸುವವರು ಇನ್ನಾರೂ ಇಲ್ಲವೆನಿಸುತ್ತದೆ. ತೀರ್ಪು ನೀಡಬಹುದು.

ನೆಫರ್: ಅಪರಾಧಿಯು ಏನಾದರೂ ಹೇಳುವುದಿದ್ದರೆ ಹೇಳಲಿ…!

ಆಮೆರಬ್: ಇನ್ನೂ ಕೆಲವೇ ಕ್ಷಣಗಳಲ್ಲಿ ರಾಜಕುಮಾರರ ಪಟ್ಟಾಭಿಷೇಕವಾಗಬೇಕು. ನೀನು ಹೇಳುವುದನ್ನು ಬೇಗ ಹೇಳು.

ನೆಫರ್: ಹೇಳುವುದನ್ನು ಕ್ಲುಪ್ತವಾಗಿ ಹೇಳು…

ಮೆನೆ: ಹೇಳುವುದಕ್ಕೆ ಸಾವಿರ ವಿಷಯ ಇರುವಾಗ ಬೇಗ ಹೇಳು ಎಂದರೆ ಹೇಗೆ?

ಫ್ಯಾರೋ: ಇದು ನಿಮ್ಮ ಪ್ರಾಂತ್ಯದ ರೈತರ ಸಭೆಯಲ್ಲ. ರಾಜಸಭೆ. ಇಲ್ಲಿ ಹರಟುವುದಕ್ಕೆ ಸಮಯವಿಲ್ಲ. ಬೇಗ ಮಾತಾಡಿ ಮುಗಿಸು.

ಮೆನೆ: ಪ್ರಭುಗಳ ಅಪ್ಪಣೆ… ದೇವರ ಹೆಸರಲ್ಲಿ ಆಣೆ ಮಾಡುತ್ತೇನೆ ನಾನು ಯಾರಿಗೂ ಯಾವುದೇ ಕೇಡು ಮಾಡಿಲ್ಲ.

ಹೇಪಾ: ದೈವದ್ರೋಹಿಗೆ ದೇವರ ಮೇಲೆ ಆಣೆ ಮಾಡುವ ಅವಕಾಶ ಇಲ್ಲ.

ಮೆನೆ: ಅವಕಾಶಗಳ ಪ್ರಶ್ನೆ ಆಮೇಲೆ… ಮೊದಲಿಗೆ ನನ್ನ ಪ್ರಶ್ನೆಗೆ ಉತ್ತರಿಸಿ… ನಮ್ಮ ಪ್ರಾಂತ್ಯದ ದೇವಸೇವಕರು ದೂರು ಸಲ್ಲಿಸಿದ್ದಾರೆ ಎಂದು ಪತ್ರ ಓದಿದಿರಲ್ಲಾ…? ಆ ಪತ್ರ ತಂದವರು ಯಾರು?

ಹೇಪಾ: ಅಲ್ಲಿಗೆ ಹೋಗಿದ್ದ ನಮ್ಮ ದೂತ.

ಮೆನೆ: ಹಾಗಾದರೆ ಸತ್ಯ ಹೇಳುತ್ತೇನೆ ಕೇಳಿ, ನಮ್ಮ ಪ್ರಾಂತ್ಯದ ದೇವಸೇವಕರಿಗೆ ಲಿಪಿ ಬರೆಯುವುದೇ ಗೊತ್ತಿಲ್ಲ. ಹೀಗಾಗಿ ನೀವು ಓದಿದ್ದು ಅವರು ಬರೆದ ಪತ್ರವಲ್ಲ.

ಆಮೆರಬ್: ಅಂದರೆ ನೀನು ನಮ್ಮ ವ್ಯವಸ್ಥೆಯನ್ನೇ ಅನುಮಾನಿಸುತ್ತಾ ಇದ್ದೀಯೋ?

ಮೆನೆ: ಆದರೆ ರಾಜಗುರುಗಳು ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಾ ಇದ್ದಾರೆ ಎಂದು ನನ್ನ ಬಳಿ ದೂರು ಹೇಳಿದವರು ತಾವೇ ಅಲ್ಲವೇ?

ಆಮೆರಬ್: ಇಲ್ಲ ಸಲ್ಲದ ಕತೆ ಕಟ್ಟಬೇಡ.

ಮೆನೆ: ನಮ್ಮ ಪ್ರಾಂತ್ಯದ ಸಾಮಂತರಾಗಿದ್ದ ಗೇಬು ಅವರು, ಸ್ವತಃ ಸ್ವಾಗತಿಸಿ, ನನಗೆ ಕೊಂಪೆಯಿಂದ ಬಿಡುಗಡೆ ಕೊಡಿಸಿದಿರಿ ಎಂದರು. ನಂತರ ಜನ ತಮ್ಮ ಒಡವೆಗಳೆಲ್ಲಾ ಭದ್ರವಾಗಿವೆ ಎಂದು ತಿಳಿದು ಕೊಂಡಾಡಿದ್ದನ್ನು ಮರೆತಿಲ್ಲ ಅಲ್ಲವೆ?

ಗೇಬು ಕಕ್ಕಾವಿಕ್ಕಿಯಾಗುತ್ತಾನೆ.

ಮೆನೆ: ನನ್ನನ್ನು ಅರಮನೆಗೆ ಔತಣಕ್ಕೆ ಕರೆಸಿಕೊಂಡಾಗ “ಸಂಸಾರದಲ್ಲಿದ್ದಂತೆ ಆಡಳಿತದಲ್ಲೂ ಸಣ್ಣ ಪುಟ್ಟ ವಿರಸಗಳು ಸಾಮಾನ್ಯ” ಎಂದು ಹೇಳುತ್ತಲೇ ಮಹಾಪ್ರಭುಗಳು ನಾನು ತಂದ ಕಾಣಿಕೆ ಸ್ವೀಕರಿಸಿದ್ದರಲ್ಲವೆ?

ಆಮೆರಬ್: ನ್ಯಾಯಾಲಯದಲ್ಲಿ ಪ್ರಭುಗಳ ಹೆಸರೆತ್ತುವಂತಿಲ್ಲ. ಅವರು ನಡೆದಾಡುವ ದೇವರು.

ಮೆನೆ: ಕೊನೇ ಮಾತು. ಇಷ್ಟು ದಿನ ಚೌಕಮಣೆ ಆಟದಲ್ಲಿ ನಾನೂ ನಿಮಗೆ ಕಾಯಿಯಾಗಿದ್ದೆ. ಈಗ ನೀವೆಲ್ಲಾ ಒಂದಾಗಿ ನನ್ನ ಮುಗಿಸೋಕ್ಕೆ ಸಿದ್ಧವಾಗಿದ್ದೀರಿ. ಮಹಾಪ್ರಭುಗಳೇ, ರಾಜಗುರುಗಳೇ, ಮಹಾಮಂತ್ರಿಗಳೇ, ಇಲ್ಲಿರುವ ಪ್ರತಿಷ್ಟಿತರೇ… ಕಿವಿಗೊಟ್ಟು ಕೇಳಿ! ನಮಗೆ, ಸಾಮಾನ್ಯ ಜನರಿಗೆ ಸಿಟ್ಟು ಬರೋದಿಲ್ಲ… ಸಿಟ್ಟು ಬಂದಾಗ ಅದು ಮಹಾಪೂರವಾಗ್ತದೆ…! ನೀವು ಏನು ಮಾಡಿದರು ಎಚ್ಚೆತ್ತ ಜನರ ಮಹಾಪೂರವನ್ನು ತಡೆಯಲಾಗುವುದಿಲ್ಲ. (ಎನ್ನುತ್ತಾ ಮಂಡಿಯೂರಿ ಕೂರುತ್ತಾನೆ)

ಆಮೆರಬ್: ಈ ರಾಜವಿರೋಧಿ ಮಾತಿಗೆ ನಿನ್ನನ್ನು ಕೊಲ್ಲಬೇಕಾಗುತ್ತದೆ.

ಮೆನೆ: ನಾನು ಸತ್ತರೆ ನನ್ನಂಥ ಸಾವಿರಾರು ಮಂದಿ ಹುಟ್ಟಿ ಬರುತ್ತಾರೆ. ನಿಮ್ಮ ಶೋಷಣೆಯನ್ನು ವಿರೋಧಿಸುತ್ತಾರೆ. ಈ ದೌರ್ಜನ್ಯದ ಆಡಳಿತ ಬಹುಕಾಲ ಬಾಳುವುದಿಲ್ಲ. ಧರ್ಮಗಳ ಹೆಸರಲ್ಲಿ ರಾಜಗುರುಗಳು ನಡೆಸುವ ಅನ್ಯಾಯ ಕೊನೆಯಾಗುವುದು ಖಂಡಿತಾ.

ಆಮೆರಬ್: ಮಾತು ಮೇರೆ ಮೀರುತ್ತಿದೆ. ನಿನ್ನ ಉಪದೇಶದ ಅಗತ್ಯ ಇಲ್ಲಿ ಯಾರಿಗೂ ಇಲ್ಲ. ಮಹಾಪ್ರಭುಗಳು ತೀರ್ಪು ನೀಡಲು ಅಪ್ಪಣೆ ಕೊಡಬೇಕು.

ಫ್ಯಾರೋ: ವಿಚಾರಣೆ ಮುಗಿದಿದೆ. ಮಹಾರಾಣಿಯವರು ಅದಾಗಲೇ ಸಿದ್ಧವಾಗಿರುವ ತೀರ್ಪು ಓದಬಹುದು.

ನೆಫರ್‍:  ತಾನು ಮಾಡಿದ ಅಪರಾಧವನ್ನೂ ಒಪ್ಪಿಕೊಳ್ಳದ ದುಷ್ಟ ಇವನು. ರಾಜದ್ರೋಹ ಮತ್ತು ದೈವದ್ರೋಹದ ಅಪರಾಧ ಮಾಡಿದ್ದಲ್ಲದೆ, ಮಹಾಪ್ರಭುಗಳ ಸಾಮ್ರಾಜ್ಯದ ವಿರುದ್ಧ ಬಂಡಾಯವೇಳುವ ಮಾತಾಡಿದ್ದಾನೆ. ಈತನಿಗೆ ಇದೇ ದಿನ ಊರ ಬಾಗಿಲ ಬಳಿ ಶಿರಚ್ಛೇದನವನ್ನು ಮಾಡಿರಿ, ಇವನ ದೇಹವನ್ನು ಮಹಾದ್ವಾರಕ್ಕೆ ನೇತು ಹಾಕಿರಿ. (ರಾಜಗುರುವಿನ ಬಳಿ ಸಾಗಿ) ಈ ಬಲಿಯಿಂದ ರಾಜಗುರುಗಳಿಗೆ ತೃಪ್ತಿಯಾಯಿತೇ?

ಭಟರು ಮೆನೆಪ್‍ಟಾನನ್ನು ಹೆಡೆಮುರಿ ಕಟ್ಟಿದಂತೆ ದರದರನೆ ಎಳೆದೊಯ್ಯುವಾಗ

ಹೇಪಾ: ಇದು ಧರ್ಮದ ವಿಜಯ. ಇನ್ನು ಈ ಕಿಡಿಯು ಎಲ್ಲೂ ಉರಿಯದ ಹಾಗೆ ಮಾಡಿ. ನಮ್ಮನ್ನು ವಿರೋಧಿಸುವವರನ್ನೆಲ್ಲಾ ಕತ್ತರಿಸಿ ಹಾಕಿ. ನಮ್ಮ ಧರ್ಮ, ನಮ್ಮ ಸನಾತನ ಧರ್ಮವನ್ನು ಪಾಲಿಸದವರನ್ನು ಅತ್ಯಾಚಾರ ಮಾಡಿ ನಾಯಿ ನರಿಗಳಿಗೆ ಹಾಕಿರಿ

ಮೆನ್ನನ ಹಾಡು ಕೇಳುತ್ತದೆ.

ದೃಶ್ಯ 28

ಮೆನ್ನ ಹಾಡುತ್ತಾ ವೇದಿಕೆಯ ಮಧ್ಯ ಭಾಗಕ್ಕೆ ಬರುವಾಗಲೇ ದಕ್ಷಿಣ ಪ್ರಾಂತ್ಯದಿಂದ ಬಂದವರೆಲ್ಲಾ ಹಿಂದೆ ಸೇರುತ್ತಾರೆ.

ಸಾವು ನನ್ನ ಮುಂದಿದೆ…!

ಸೊರಗಿ ಹೋದ ಸೂರ್ಯನಂತೆ…

ಸೋತು ಕುಳಿತ ಬಡವನಂತೆ…

ಸಾವು ನನ್ನ ಮುಂದಿದೆ…! ಸಾವು ನನ್ನ ಮುಂದಿದೆ…!

ಮೆನ್ನ: ನೀರಾನೆ ಪ್ರಾಂತ್ಯದ ಜನ ರಾಜಧಾನಿಗೆ ಬರುವಷ್ಟರಲ್ಲಿ ರೈತ ನಾಯಕನ ಕೊಲೆ ಆಗಿಹೋಗಿತ್ತು. ಆಮೇಲೆ… ರಾಜಗುರುವನ್ನು ಮೆಚ್ಚಿಸಲು ರಾಜನ ಸೈನ್ಯವೂ ದಕ್ಷಿಣ ಪ್ರಾಂತ್ಯದ ಮೇಲೆ ನುಗ್ಗಿತು. ಮನೆ ಮನೆಗಳಲ್ಲಿ ಇರುವವರನ್ನು ಹುಡುಕಿ ಹುಡುಕಿ ಕೊಂದರು. ಹೆಣ್ಣು ಮಕ್ಕಳನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದರು. ನಾನು ಮಾತ್ರ ಉಳಿದಿದ್ದೇನೆ. ನಿಜವಾಗಿಯೂ ಹುಚ್ಚನಾಗಿದ್ದೇನೆ. ಈ ಧರ್ಮಗಳ ಅಮಲಿನವರ ಮಧ್ಯೆ ಮರುಳನಾಗಿದ್ದೇನೆ.

ಜನರ ನಡುವಿನಿಂದ ರಾಮೆರಿಯು ರುಂಡವಿಲ್ಲದ ದೇಹವನ್ನು ಹೊತ್ತು ತರುತ್ತಾನೆ. ಅದು ರಕ್ತ ಸಿಕ್ತ ದೇಹ ಎಂಬಂತೆ ಕೆಂಪಾಗಿದೆ. ನೆಫಿಸ್ ಬಟ್ಟೆಯಲ್ಲಿ ಮುಚ್ಚಿದ ರುಂಡವನ್ನು ಮಗುವಿನಂತೆ ಹಿಡಿದು ತರುತ್ತಾಳೆ.

ರಾಮೆರಿ: ನಾನು ಹುಚ್ಚನಾಗಿಲ್ಲ… ನಾನು ಮರುಳನಾಗಿಲ್ಲ…

ಬೆಕ್/ ಸೆಬೆಕ್/ಖ್ನೆಮ್: ನಮ್ಮ ನಾಳೆಗಳನ್ನು ಈ ಅಧಿಕಾರಗ್ರಸ್ತ, ಧರ್ಮಾಂಧರಿಗೆ ಬಿಡುವುದಿಲ್ಲ… ನಮ್ಮ ರೈತ ನಾಯಕರು ಆರಂಭಿಸಿದ ಸಂಗ್ರಾಮ ಎಂದಿಗೂ ಮುಗಿಯುವುದಿಲ್ಲ…

ನೆಫರ್: ನಾವು ಈ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಯೇ ತೀರುತ್ತೇವೆ.

ಎಲ್ಲರೂ: ನಾವು ಕತ್ತಲೆಯಿಂದ ಬೆಳಕಿನೆಡೆಗೆ ಖಂಡಿತಾ ತಲುಪುತ್ತೇವೆ.

ಎಲ್ಲರೂ ಹಾಡುತ್ತಾರೆ… ದನಿ ಏರುತ್ತಾ ಸಾಗುತ್ತದೆ.

ನಾಳೆ ನಮ್ಮ ಮುಂದಿದೆ!

ಕನಸು ನಮ್ಮ ಎದುರಿದೆ!

* * *

Advertisements

0 Responses to “ನಿರಂಜನ ಅವರ “ಮೃತ್ಯುಂಜಯ” (ನಾಟಕ ರೂಪದ ಪೂರ್ಣ ಪಾಠ)”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: