ಚಂಕು ಸಿಂಗ್ – ಚಮಕ್ ಚಮಕ್ ಸಿಂಗ್

(ನಾ ಕಂಡ ಚಂದ್ರಕುಮಾರ್ ಸಿಂಗ್)

– ಬಿ.ಸುರೇಶ

ಚಂದ್ರಕುಮಾರ್ ಸಿಂಗ್ – ಚಂಕು ಸಿಂಗ್ ಎಂದೇ ಕನ್ನಡ ರಂಗಭೂಮಿಯಲ್ಲಿ ಸುವಿಖ್ಯಾತರಾದ ನನ್ನ ಪಾಲಿನ ಚಮಕ್ ಚಮಕ್ ಸಿಂಗ್ ಅವರು ನನಗೆ ಎಪ್ಪತ್ತರ ದಶಕದಿಂದ ಪರಿಚಿತರು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಬೆನಕ ತಂಡವು ಅಭಿನಯಿಸಿದ ಅಶೋಕ ಬಾದರದಿನ್ನಿ ಅವರ ನಿರ್ದೇಶನದ “ಹ್ಯಾಮ್ಲೆಟ್” ನಾಟಕದ ಕಾಲದಿಂದ ಸಿಂಗಣ್ಣನ ಆಪ್ತವಲಯಕ್ಕೆ ನಾನೂ ಸೇರಿದವನಾದೆ. ಎಂಬತ್ತರ ದಶಕದಲ್ಲಿ ಆರಂಭವಾದ “ಅಭಿನಯತರಂಗ ಭಾನುವಾರದ ರಂಗಶಾಲೆ”ಯ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಚಂಕು ಸಿಂಗ್ ಬೆಳಕು ವಿನ್ಯಾಸವನ್ನು ಪಾಠ ಮಾಡಿದ ಮೇಷ್ಟರು. ಹಾಗಾಗಿ ನನಗೂ ಅವರಿಗೂ ಗುರು ಶಿಷ್ಯ ಸಂಬಂಧವೂ ಇದೆ. ನಾನು ಬರೆದ ಮೊದಲ ನಾಟಕ “ಕೋತಿ ಕತೆ”ಗೆ (ನಿರ್ದೇಶನ : ಅಶೋಕ ಬಾದರದಿನ್ನಿ)  ಚಂಕು ಸಿಂಗ್ ಅವರದ್ದೇ ಬೆಳಕು ವಿನ್ಯಾಸವಿತ್ತು. ನಂತರ ನಾನು ನಿರ್ದೇಶಿಸಿದ ಹದಿನೈದಕ್ಕೂ ಹೆಚ್ಚು ನಾಟಕಗಳಿಗೆ ಚಂಕು ಸಿಂಗ್ ತಮ್ಮ ಬೆಳಕು ವಿನ್ಯಾಸದ ಚಮಕ್ ನೀಡಿದ್ದರು. ಹೀಗಾಗಿ ನನ್ನ ಮತ್ತು ಚಂಕು ಸಿಂಗ್ ಅವರ ನಡುವಿನ ಸಂಬಂಧ ಗಟ್ಟಿಯಾಗುತ್ತಾ ಈ ವರೆಗೆ ಸಾಗಿ ಬಂದಿದೆ. ಇದಿಷ್ಟೂ ಪ್ರಿಲ್ಯೂಡ್‍ ನಂತರ ವಿಷಯಕ್ಕೆ ಬರುತ್ತೇನೆ.

ಚಂದ್ರಕುಮಾರ್ ಸಿಂಗ್ ಕೇವಲ ಬೆಳಕು ವಿನ್ಯಾಸಕರಲ್ಲ – ರಂಗಸಂಘಟಕರು, ನಾಟಕ ನಿರ್ದೇಶಕರು. ಜೊತೆಗೆ ಬೆಂಗಳೂರು ನೀರು ಸರಬರಾಜು ಮಂಡಳಿಯಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ದುಡಿದವರು. ಹೀಗಾಗಿಯೇ ಅವರ ಅನುಭವದ ವಿಸ್ತಾರ ದೊಡ್ಡದು, ಅರ್ಥಗ್ರಹಿಕೆಯ ಶಕ್ತಿಯೂ ದೊಡ್ಡದು. ನೃತ್ಯ ಕಾರ್ಯಕ್ರಮ ಮತ್ತು ಬ್ಯಾಲೆಗಳಿಗೆ ಚಂದ್ರಕುಮಾರ್ ಸಿಂಗ್ ಅವರ ಬೆಳಕು ವಿನ್ಯಾಸ ಕ್ರಮದಿಂದ ಸಿಕ್ಕಿರುವ ಲಾಭ ಎಷ್ಟು ದೊಡ್ಡದೋ ನಾಟಕಗಳಿಗೆ ಅವರ ಬೆಳಕು ವಿನ್ಯಾಸದ ಕೊಡುಗೆಯೂ ಅಷ್ಟೇ ದೊಡ್ಡದು.

ಚಮಕ್ ವಿನ್ಯಾಸ ಮತ್ತು ರಂಗನಿರ್ಮಿತಿ

ಚಂದ್ರಕುಮಾರ್ ಸಿಂಗ್ ಅವರ ಬೆಳಕು ವಿನ್ಯಾಸ ಕ್ರಮ ವಿಶಿಷ್ಟವಾದುದು. ಅವರು ನಾಟಕವೊಂದನ್ನು ಮೊದಲು ಪಠ್ಯದ ರೂಪದಲ್ಲಿ ಓದಿ ಟಿಪ್ಪಣಿ ಮಾಡಿಕೊಳ್ಳುತ್ತಾರೆ. ಯಾವ ದೃಶ್ಯಕ್ಕೆ ಯಾವ ಬಣ್ಣ ಹಾಗೂ ಕೋನದ ಬೆಳಕು ಬೇಕು ಎಂದು ಸ್ಪಷ್ಟವಾಗಿ ಗುರುತಿಸಿಕೊಳ್ಳುತ್ತಾರೆ. ನಂತರ ಆ ನಾಟಕದ ತಾಲೀಮನ್ನು ಕನಿಷ್ಟ ಮೂರು ನಾಲ್ಕು ಬಾರಿ ನೋಡುತ್ತಾರೆ. ಅವರು ಬಯಸುವ ಕೋನಕ್ಕೆ ಬೇಕಾದಂತೆ ತಾಲೀಮಿನ ಹಂತದಲ್ಲಿಯೇ ಕೆಲವು ಬದಲಾವಣೆಗಳನ್ನು ನಿರ್ದೇಶಕರಿಗೆ ಸೂಚಿಸುತ್ತಾರೆ. ಹೀಗಾಗಿ ರಂಗದ ಒಂದು ಮೂಲೆಯಲ್ಲಿ ಎಂದು ನಿರ್ಧಾರವಾಗಿದ್ದ ದೃಶ್ಯವು ರಂಗ ಮಧ್ಯಕ್ಕೆ ಬಂದಿರುವುದೂ ಉಂಟು, ರಂಗದ ಹಿಂಬದಿಯಲ್ಲಿದ್ದ ದೃಶ್ಯ ರಂಗದ ಮುನ್ನೆಲೆಗೆ ಬಂದಿರುವುದೂ ಉಂಟು. ಉದಾಹರಣೆಗೆ “ಹ್ಯಾಮ್ಲೆಟ್” (ನಿರ್ದೇಶನ: ಅಶೋಕ ಬಾದರದಿನ್ನಿ) ಗಮನಿಸಿ. ಈ ನಾಟಕದಲ್ಲಿ ಸ್ಮಶಾನವೊಂದರಲ್ಲಿ ಹ್ಯಾಮ್ಲೆಟ್‍ಗೆ ತಲೆಬುರುಡೆಯೊಂದು ಸಿಗುತ್ತದೆ. ಆ ದೃಶ್ಯವನ್ನು ರಂಗದ ಹಿಂಬದಿಯಲ್ಲಿ ಸಿಲೌಟ್‍ ಆಗಿ ತಾಲೀಮಿನಲ್ಲಿ ರೂಪಿಸಲಾಗಿತ್ತಂತೆ. ಆದರೆ ಪ್ರದರ್ಶನವಾಗುತ್ತಿದ್ದ ರವೀಂದ್ರ ಕಲಾಕ್ಷೇತ್ರದ ವೇದಿಕೆಯ ಮುಂಭಾಗದಲ್ಲಿರುವ ಮ್ಯೂಸಿಕ್ ಪಿಟ್ಟನ್ನು ಇದೇ ದೃಶ್ಯಕ್ಕಾಗಿ ಬಳಸಿಕೊಳ್ಳಲು ಚಂಕು ಸಿಂಗ್ ಸಲಹೆ ನೀಡಿದ್ದರಂತೆ. ಆ ಸಲಹೆಯನ್ನು ನಿರ್ದೇಶಕರು ಅದೇ ದಿನ ತಾಲೀಮಿನಲ್ಲಿ ಜಾರಿಗೆ ತಂದುದರ ಪರಿಣಾಮವಾಗಿ ಹ್ಯಾಮ್ಲೆಟ್‍ ನಾಟಕದ ತಲೆಬುರುಡೆ ದೃಶ್ಯವು ಆ ವರೆಗೆ ಆಗಿದ್ದ ಅದೇ ನಾಟಕದ ಪ್ರದರ್ಶನಗಳಿಗಿಂತ ಭಿನ್ನವಾಗಿ ಮತ್ತು ಪರಿಣಾಮಕಾರಿಯಾಗಿ ಬಂದುದನ್ನು ಸ್ವತಃ ನಾನೂ ಕಂಡಿದ್ದೇನೆ.

ನಮ್ಮಲ್ಲಿ ಬಹುತೇಕರು ವೇದಿಕೆಯೊಂದರ ಮಿತಿಗಳನ್ನು ಮತ್ತು ಪ್ರೇಕ್ಷಕರ ನೋಡುರೇಖೆಯ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ನಾಟಕದ ದೃಶ್ಯಗಳನ್ನು ಕಟ್ಟುವುದಿಲ್ಲ. ಹೀಗಾಗಿ ಹಲವು ದೃಶ್ಯಗಳು ನಾಟಕವನ್ನು ಕಟ್ಟುವುದಕ್ಕೆ ಸಹಾಯವಾಗುವುದರ ಬದಲಿಗೆ ನೋಡುಗನಿಗೆ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಚಂಕು ಸಿಂಗ್ ತಾವು ಬೆಳಕು ವಿನ್ಯಾಸ ಮಾಡುತ್ತಾ ಇದ್ದ ಎಲ್ಲಾ ಪ್ರದರ್ಶನಗಳನ್ನು ವೇದಿಕೆಯ ಮಿತಿ ಮತ್ತು ನೋಡುರೇಖೆಯ ಪರಿಧಿಯೊಳಗೆ ತರಲು ಪ್ರಯತ್ನಿಸುತ್ತಾ ಇದ್ದರು. ನಾನು ನಿರ್ದೇಶಿಸಿದ್ದ “ಚಿರಸ್ಮರಣೆ” ನಾಟಕದಲ್ಲಿನ ಬಹುತೇಕ ಪಾತ್ರಧಾರಿಗಳು ಮುವ್ವತ್ತರ ಹರೆಯದ ಒಳಗಿದ್ದವರು. ಆದರೆ ಕೃತಿಗೆ ಇನ್ನೂ ವಯಸ್ಕ ಪಾತ್ರಧಾರಿಗಳ ಅವಶ್ಯಕತೆ ಇತ್ತು. ಇದಕ್ಕಾಗಿ ಸೈಕ್ಲೋರಾಮದ ಬಳಕೆಯನ್ನು ತೀವ್ರಗೊಳಿಸಿ, ಮುನ್ನೆಲೆಯಿಂದ ಬರುವ ಬೆಳಕನ್ನು ಶೇಕಡ 60ರ ಲೆಕ್ಕದಲ್ಲಿ ಇರಿಸಿ, ಕಲಾವಿದರ ವಯಸ್ಸನ್ನು ಮುಚ್ಚಿ, ದನಿಗೆ ಪ್ರಾಶಸ್ತ್ಯ ಸಿಗುವಂತೆ ಮಾಡಿದ ಹಿರಿಮೆ ಚಂಕು ಸಿಂಗ್ ಅವರದ್ದು.  ಇಂತಹ ಹಲವು ಪ್ರಯೋಗಗಳನ್ನು ಚಂಕು ಸಿಂಗ್ ರಂಗಪ್ರಯೋಗಗಳಿಗೆ ಮಾಡಿದ್ದಾರೆ, ಇಂದಿಗೂ ಮಾಡುತ್ತಾ ಇದ್ದಾರೆ.

ಬೀದಿ ಸಿಂಗ್

ಬೀದಿನಾಟಕಗಳಿಗೂ ಚಂಕು ಸಿಂಗ್ ಅವರಿಗೂ ಒಂದು ವಿಶಿಷ್ಟ ಸಂಬಂಧವಿದೆ. ಎಎಸ್ ಮೂರ್ತಿ ಅವರು ಚಿತ್ರಾ ತಂಡದಿಂದ, ಪ್ರಸನ್ನ ಅವರು ಸಮುದಾಯ ತಂಡದಿಂದ ಬೀದಿ ನಾಟಕ ಚಳುವಳಿಯನ್ನು ರಾಜ್ಯದಾದ್ಯಂತ ಹಬ್ಬಿಸಿದ ನಂತರ ಬೀದಿನಾಟಕವನ್ನು ಮಾಡುವುದು ಕನ್ನಡ ರಂಗಭೂಮಿಯಲ್ಲಿ ಒಂದು ನಿರಂತರ ಪ್ರಕ್ರಿಯೆ ಆಗಿಹೋಗಿತ್ತು. ಅದರಿಂದಾದ ಒಳಿತು ಮತ್ತು ಕೆಡುಕುಗಳನ್ನು ಗಮನಿಸಿದ್ದ ಚಂಕು ಸಿಂಗ್ ಬೀದಿ ನಾಟಕ ಚಳುವಳಿಯನ್ನು ಗುಣಾತ್ಮಕವಾಗಿ ಬೆಳೆಸುವುದಕ್ಕೆ ಹೊಸ ಲೇಖಕರನ್ನು ಮತ್ತು ಹೊಸ ನಾಟಕ ತಂಡಗಳನ್ನು ಪ್ರೋತ್ಸಾಹಿಸಬೇಕೆಂದು ಯೋಚಿಸಿದರು. ಅದಕ್ಕಾಗಿ ಮಾವಳ್ಳಿಯ ದೇವಸ್ಥಾನದ ಎದುರಿನ ಬಯಲಲ್ಲಿ ಪ್ರತಿದಿನ ಹೊಸ ನಾಟಕಕಾರರು ಹಾಗೂ ಹೊಸ ರಂಗತಂಡದಿಂದ ಬೀದಿ ನಾಟಕಗಳ ಪ್ರದರ್ಶನ ಆಗುವಂತೆ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು.  ಒಂದು ವಾರ ಕಾಲ ನಡೆದ ಈ ಉತ್ಸವದಲ್ಲಿ ಒಟ್ಟು ಹದಿನಾಲ್ಕು ಹೊಸ ನಾಟಕಗಳು ಪ್ರದರ್ಶನ ಕಂಡವು. ಅತ್ಯುತ್ತಮ ಎನಿಸಿದ ಪ್ರಯೋಗಕ್ಕೆ ಪ್ರಶಸ್ತಿಯೂ ಸಿಕ್ಕಿತ್ತು. ಈ ಪ್ರಯತ್ನದ ಫಲವಾಗಿ ಆವರೆಗೆ ಇದ್ದ ಕರಪತ್ರ ಮಾದರಿಯ ಬೀದಿ ನಾಟಕಕ್ಕೆ ಬದಲಾಗಿ ವಿಶೇಷ ಪ್ರಯೋಗಗಳು ಪ್ರದರ್ಶನವಾಗಲು ಸಾಧ್ಯವಾಯಿತು. ಬೀದಿ ನಾಟಕ ಎಂಬುದು ರೂಕ್ಷವಾಗಿರುವ ಬದಲಿಗೆ ಕಲಾತ್ಮಕವಾಗಿ ಇರಬಹುದೆಂಬುದು ಸಾಬೀತಾಯಿತು. ಮೂಲತಃ ವೃತ್ತ ರಂಗಭೂಮಿಯ ವಿಸ್ತರಣೆಯಾಗಿದ್ದ ಬೀದಿ ನಾಟಕಗಳು ಪಡೆದುಕೊಂಡಿದ್ದ ರಾಜಕೀಯ ಬಣ್ಣಗಳಿಗೆ ಕಲಾತ್ಮಕತೆಯ ಬಣ್ಣವನ್ನು ತರುವುದಕ್ಕೆ ಚಂಕು ಸಿಂಗ್ ಅವರ ಈ ಪ್ರಯೋಗ ಕಾರಣವಾಯಿತು. ಹುಣಸವಾಡಿ ರಾಜನ್, ಜೆಎಂ ಪ್ರಹ್ಲಾದ್, ಸುದರ್ಶನ್ ಮುಂತಾದ ಹಲವು ಹೊಸ ಬೀದಿ ನಾಟಕ ಬರೆಯುವವರು ಈ ಉತ್ಸವದಿಂದ ಪರಿಚಿತರಾದರು. ಇಂತಹ ಹಲವು ಮೊದಲುಗಳು ಚಂದ್ರಕುಮಾರ್ ಸಿಂಗ್ ಅವರದ್ದು.

ನಾಟ್ಯ ಸಿಂಗ್

ಚಂದ್ರಕುಮಾರ್ ಸಿಂಗ್ ಅವರು ಕೇವಲ ರಂಗಭೂಮಿಗೆ ಮಾತ್ರ ಅಂಟಿಕೊಂಡು ಚಟುವಟಿಕೆ ನಡೆಸಿದವರಲ್ಲ. ಕರ್ನಾಟಕದಲ್ಲಿನ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳಿಗೂ ಬೆಳಕು ವಿನ್ಯಾಸಕರಾಗಿ ಹಾಗೂ ಸಂಘಟಕರಾಗಿ ಕೆಲಸ ಮಾಡಿದವರು. ಲಲಿತಾ ಶ್ರೀನಿವಾಸನ್ ಮುಂತಾದ ಪ್ರಖ್ಯಾತ ನೃತ್ಯ ಕಲಾವಿದರನ್ನು ಸೇರಿಸಿ ಚಂದ್ರಕುಮಾರ್ ಸಿಂಗ್ ಅವರು ನಡೆಸುತ್ತಾ ಇದ್ದ ವಸಂತ ನೃತ್ಯೋತ್ಸವಗಳನ್ನು ಮರೆಯಲಾಗದು. ಅದರಲ್ಲಿಯೂ ಅನೇಕ ಗೀತನೃತ್ಯಗಳಿಗೆ ಸ್ವತಃ ಚಂಕುಸಿಂಗ್ ರಂಗವಿನ್ಯಾಸಕರು ಹಾಗೂ ಬೆಳಕು ವಿನ್ಯಾಸಕರು ಆಗಿದ್ದರು. ಈ ಕಾರ್ಯಕ್ರಮಗಳಲ್ಲಿ ಅವರು ನೃತ್ಯದ ಭಾವಕ್ಕೆ ಪೂರಕವಾಗುವಂತೆ ಮತ್ತು ಕೆಲವೊಮ್ಮೆ ಗೀತೆಯ ಅರ್ಥವಿಸ್ತಾರವನ್ನು ಹೆಚ್ಚಿಸುವಂತೆ ಬಣ್ಣದ ದೀಪಗಳನ್ನು ಬಳಸುತ್ತಾ ಇದ್ದರು. ಚಿತ್ರಕಲಾಪರಿಷತ್ತಿನ ಬಯಲು ರಂಗಮಂದಿರದಲ್ಲಿ ನಡೆದ ಪ್ರಯೋಗ ಒಂದರಲ್ಲಿ ಲಲಿತಾ ಶ್ರೀನಿವಾಸನ್ ಅವರ ನಿರ್ದೇಶನದ ನೃತ್ಯರೂಪಕಕ್ಕೆ ಚಂದ್ರಕುಮಾರ್ ಸಿಂಗ್ ಅವರು ಮಾಡಿದ್ದ ಬೆಳಕು ವಿನ್ಯಾಸ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಲ್ಲಿದ್ದ ಶಿವ ಪಾರ್ವತಿಯವರ ಪ್ರೀತಿ, ಶಿವನ ಸಿಟ್ಟು, ನಂತರ ಶಿವೆಯು ಶಿವನ ಕೋಪ ತಣಿಸಲು ಮಾಡುವ ಪ್ರಯತ್ನಗಳು ಇತ್ಯಾದಿ ವಿವರಗಳು ಬಣ್ಣಗಳ ಬಳಕೆಯಿಂದಾಗಿ ವಿಶಿಷ್ಟ ಪರಿಣಾಮ ಮೂಡಿಸಿದ್ದವು. ಇಂತಹ ಅನೇಕ ಬೆಳಕು ವಿನ್ಯಾಸದ ಪ್ರಯೋಗಗಳನ್ನು ಚಂದ್ರಕುಮಾರ್ ಸಿಂಗ್ ಮಾಡಿದ್ದರು. ಸಮುದ್ರದ ಹಿನ್ನೆಲೆ ಸೃಷ್ಟಿಸಲು ದೀಪದ ಮುಂದೆ ಬಿದಿರಿನ ಬುಟ್ಟಿಯನ್ನು ಇಟ್ಟು ತಿರುಗಿಸಿ ಅಲೆಗಳನ್ನು ಮಾಡಿದ್ದಿರಬಹುದು, ತೆಳು ಬಣ್ಣದ ಕಾಗದಗಳನ್ನು ಬಳಸಿ ಬೆಂಕಿಯನ್ನು ಸೃಷ್ಟಿಸಿದ್ದರಬಹುದು, ಇಂತಹ ಹಲವು ಪ್ರಯೋಗಗಳು ನೃತ್ಯರೂಪಕಗಳಿಗೆ ಹೊಸ ಜೀವ ನೀಡಿದ್ದವು. ಈಗ ಇಂತಹ ಪ್ರಯೋಗಗಳನ್ನು ಅನೇಕರು ಮಾಡುತ್ತಾ ಇರುವುದಕ್ಕೆ ಚಂದ್ರಕುಮಾರ್ ಸಿಂಗ್ ಅವರು ಎಂಬತ್ತರ ದಶಕದಲ್ಲಿ ಮಾಡಿದ ಪ್ರಯೋಗಗಳು ಸಹಕಾರಿಯಾಗಿವೆ ಎಂಬುದಂತೂ ಸತ್ಯ.

ಚಳುವಳಿ ಸಿಂಗ್

ಚಂಕು ಸಿಂಗ್ ಅವರು ಕಾಲೇಜು ದಿನಗಳಿಂದಲೇ ಅನೇಕ ಚಳುವಳಿಗಳಲ್ಲಿ ಭಾಗವಹಿಸಿದ್ದವರು ಎಂದು ಕೇಳಿಬಲ್ಲೆ. ಆದರೆ ನನಗೆ ಅವರ ಚಳುವಳಿಗಳ ನೇರ ಪರಿಚಯ ಆದದ್ದು ಎಂಬತ್ತರ ದಶಕದ ಆಚೆಗೆ. ಆಗ ಗೋಕಾಕ್ ವರದಿ ಜಾರಿಗೆ ಬರಬೇಕು ಎಂಬ ಚಳುವಳಿಯು ಶುರುವಾಗಿತ್ತು. ಚಂಕುಸಿಂಗ್ ನಮಗೆಲ್ಲರಿಗೂ ಮಾತಾಡಿ ಇಂತಹ ವಿಷಯವೊಂದನ್ನು ಇಟ್ಟುಕೊಂಡು ಬೀದಿ ನಾಟಕ ಬರೆಸಿದರಲ್ಲದೆ, ತಾವೇ ನಿಂತು ಅನೇಕ ಕಡೆ ಈ ಬೀದಿ ನಾಟಕಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಿದರು. ಚಾಮರಾಜಪೇಟೆಯ ರಾಮನ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ನಾವು ಈ ಬೀದಿ ನಾಟಕ ಅಭಿನಯಿಸುತ್ತಾ ಇದ್ದಾಗ ಪೊಲೀಸರು ನಾಟಕ ನಿಲ್ಲಿಸಿ ಎಂದರು. ನಾವು ನಿಲ್ಲಿಸಲಿಲ್ಲ ಮುಂದುವರೆಸಿದೆವು. ಸ್ವತಃ ಚಂದ್ರಕುಮಾರ್ ಸಿಂಗ್ ಅವರೇ ಆ ಪೊಲೀಸರ ಜೊತೆ ವಾಗ್ವಾದ ನಡೆಸುತ್ತಾ ಇದ್ದರು. ನಮ್ಮ ನಾಟಕ ಮುಗಿಯುವವರೆಗೆ ಅವರ ವಾಗ್ವಾದ ನಡೆಯುತ್ತಾ ಇತ್ತು. ಕಡೆಗೆ ನಾಟಕ ಮುಗಿದ ಮೇಲೆ ನಾವೂ ಎಲ್ಲಾ ಅದೇ ಮಾತಿನ ಯುದ್ಧದಲ್ಲಿ ಜೊತೆಯಾದೆವು. ಆ ಹೊತ್ತಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೇರಿಕೊಂಡರು. ಅವರು ಎಲ್ಲರನ್ನೂ ಬಂಧಿಸಿ ಎಂದು ಆಜ್ಞೆ ಕೊಟ್ಟು ಹೊರಟರು. ಒಂದು ದಿನ ನಾವೆಲ್ಲರೂ ಚಾಮರಾಜಪೇಟೆಯ ಪೊಲೀಸ್ ಸ್ಟೇಷನ್‍ನಲ್ಲಿ ಕಳೆದೆವು. ಆಗ ನಮ್ಮಗೆಲ್ಲರಿಗೂ ಈ ಹೋರಾಟದ ಅಗತ್ಯ ಕುರಿತು ಮಾತಾಡಿ ಹುರಿದುಂಬಿಸುತ್ತಾ ಇದ್ದದ್ದು ನಮ್ಮ ಸಿಂಗಣ್ಣನವರೇ.

ರಂಗಭೂಮಿಯೆಂಬುದು ಕಾಲದ ಪ್ರವಾಹದಲ್ಲಿ ಅನೇಕ ಬದಲುಗಳನ್ನು ಕಂಡಿದೆ. ಆ ಬದಲುಗಳಲ್ಲಿ ನಿಷ್ಕ್ರಿಯ ಅಧಿಕಾರಿಗಳ ಪಾಲು ದೊಡ್ಡದು. ಅಂತಹವರಿಂದಾಗಿ ರವೀಂದ್ರ ಕಲಾಕ್ಷೇತ್ರವು ರಿಪೇರಿಯಾಗಿ ಬಾಗಿಲು ಹಾಕಿದಾಗ “ರಂಗಭೂಮಿ ಕ್ರಿಯಾ ಸಮಿತಿ”ಯ ಮೂಲಕ ಹೊಸ ಚಳುವಳಿ ಆರಂಭಿಸಿ ಈಗ ಕನ್ನಡ ಭವನ ಇರುವಲ್ಲಿ ತಾತ್ಕಾಲಿಕ ಷೆಡ್‍ ಸರ್ಕಾರವೇ ನಿರ್ಮಿಸಲು ಸಾಧ್ಯಾವಾಗುವಂತೆ ಮಾಡಿದವರಲ್ಲಿ ಚಂದ್ರಕುಮಾರ್ ಸಿಂಗ್ ಸಹ ಒಬ್ಬರು. ಆ ತಾತ್ಕಾಲಿಕ ಷೆಡ್‍ನಲ್ಲಿ ನಿರಂತರವಾಗಿ ನಾಟಕಗಳ ಪ್ರದರ್ಶನಗಳಾಗುವಂತೆಯೂ ನೋಡಿಕೊಂಡವರಲ್ಲಿ ಸಿಂಗಣ್ಣ ಒಬ್ಬರಾಗಿದ್ದರು. ಆ ಅರೆಕಾಲಿಕ ರಂಗವೇದಿಕೆಯಲ್ಲಿ ಕನ್ನಡದ ಶ್ರೇಷ್ಟ ನಾಟಕಗಳೆನಿಸಿಕೊಂಡ “ಟಿಪಿಕಲ್ ಟಿಪಿ ಕೈಲಾಸಂ”, “ಒಡಲಾಳ”, “ಹುಲಿಯ ನೆರಳು” ಮುಂತಾದ ನಾಟಕಗಳ ಪ್ರಥಮ ಪ್ರದರ್ಶನ ನಡೆಯಿತು ಎಂಬುದು ಮರೆಯಲಾಗದ ವಿಷಯ.

ಹೀಗೆಯೇ ನಾಟಕ ಅಕಾಡೆಮಿಯಲ್ಲಿ ತಪ್ಪುಗಳಾದಾಗಾ ಚಂದ್ರಕುಮಾರ್ ಸಿಂಗ್ ನೇರವಾಗಿ ಪ್ರತಿಭಟಿಸಿದ್ದನ್ನು ಕಂಡದ್ದಿದೆ. ಸಂಸ್ಕೃತಿ ಇಲಾಖೆಯಲ್ಲಿ ಭ್ರಷ್ಟರು ಸೇರಿಕೊಂಡಾಗ ಸಿಂಗಣ್ಣ ಮೆರವಣಿಗೆ ತೆಗೆದದ್ದನ್ನು ನೋಡಿದ್ದಿದೆ. ಒಟ್ಟಾರೆಯಾಗಿ ರಂಗಭೂಮಿ ಚಟುವಟಿಕೆಯಲ್ಲಿ ಯಾವಾಗ ಯಾವ ಅರೆಕೊರೆಗಳು ವ್ಯವಸ್ಥೆಯ ಕಾರಣದಿಂದ ಆದರೂ ಸಿಂಗಣ್ಣ ಮುಂಚೂಣಿಯಲ್ಲಿ ನಿಂತು ಹೋರಾಟಕ್ಕೆ ಇಳಿದಿದ್ದಾರೆ. ಇದರಿಂದಾಗಿ ರಂಗಭೂಮಿಗೆ ಆದ ಲಾಭಗಳು ಸಹ ಕಡಿಮೆ ಏನಲ್ಲ. “ಸಾರ್ಕ್ ಉತ್ಸವ”ದಲ್ಲಿ ಸ್ಥಳೀಯ ರಂಗಕರ್ಮಿಗಳಿಗೆ ಸ್ವಯಂಸೇವಕರ ಕೆಲಸವಾದರೂ ಸಿಗಬೇಕು ಎಂದು ಸಿಂಗಣ್ಣ ಮಾಡಿದ ಪ್ರಯತ್ನದಿಂದ ನನ್ನಂತಹ ಅನೇಕ ಹೊಸ ಹುಡುಗರು ಜಗತ್ಪ್ರಸಿದ್ಧ ಪ್ರದರ್ಶನಕಾರರ ಕಾರ್ಯಕ್ರಮಗಳನ್ನು ಮುಫತ್ತಾಗಿ ನೋಡುವುದು ಸಾಧ್ಯವಾಯಿತು ಎಂಬುದನ್ನಂತೂ ನಾನು ಮರೆಯಲಾರೆ.

 

ಬೆನಕ ಸಿಂಗಣ್ಣ

ಬೆನಕ ಕನ್ನಡದ ಪ್ರಖ್ಯಾತ ಹವ್ಯಾಸೀ ರಂಗತಂಡಗಳಲ್ಲಿ ಒಂದು. ಎಂಬತ್ತರ ದಶಕದಲ್ಲಿ ಈ ಸಂಘಟನೆಗೆ ಸಿಂಗಣ್ಣ ಮೊದಲು ಕಾರ್ಯದರ್ಶಿಯಾಗಿ ನಂತರ ಅಧ್ಯಕ್ಷರಾಗಿ ದುಡಿದುದ್ದನ್ನು ಕಂಡವ ನಾನು. ಬಿ.ವಿ.ಕಾರಂತರ ಕನಸಿನ ಕೂಸುಗಳಲ್ಲಿ ಒಂದಾಗಿದ್ದ ಈ ತಂಡಕ್ಕೆ ಕಾರಂತರ ನಾಟಕಗಳು ಮಾತ್ರವೇ ಅಲ್ಲದೇ ಬೇರೆಯ ನಿರ್ದೇಶಕರ ನಾಟಕಗಳು ಸಹ ಆಗಬೇಕು ಎಂದು ಬಯಸಿ ಅನೇಕ ಹೊಸ ನಿರ್ದೇಶಕರು ಮತ್ತು ತಂತ್ರಜ್ಞರನ್ನು ಕರೆದು ನಾಟಕಗಳನ್ನು ತಯಾರಿಸಲು ಚಂಕು ಸಿಂಗ್ ಅವಕಾಶ ನೀಡಿದ್ದರು. ಹಾಗಾಗಿಯೇ “ಹ್ಯಾಮ್ಲೆಟ್” ನಂತಹ ಜನಪ್ರಯತೆ ಗಳಿಸಿದ ನಾಟಕವಲ್ಲದೆ ಇನ್ನೂ ಅನೇಕ ನಾಟಕಗಳು ಬೆನಕ ತಂಡದಿಂದ ಆಗಿತ್ತು. ಬೆಂಗಳೂರಿನ ಮಿನರ್ವ ಸರ್ಕಲ್ಲಿನ ಬಳಿ ಇದ್ದ ಬೆನಕ ತಂಡದ ಕಛೇರಿಯನ್ನೇ ಪ್ರದರ್ಶನ ಮಂದಿರವಾಗಿಸಿ ಸ್ಟುಡಿಯೋ ಥಿಯೇಟರ್ ಅಥವಾ ಆಪ್ತ ರಂಗಮಂದಿರ ಎಂದು ಕರೆಯಬಹುದಾದ ಅನೇಕ ನಾಟಕಗಳನ್ನು ಚಂಕು ಸಿಂಗ್ ಪ್ರದರ್ಶಿಸಿದ್ದರು. ಈಗ ಆಸ್ಟ್ರೇಲಿಯಾ ವಾಸಿಯಾಗಿರುವ ಸುದರ್ಶನ್ ಮುಂತಾದ ಗೆಳೆಯರು ಅಭಿನಯಿಸಿದ “ಚೇರ್ಸ್” ಮುಂತಾದ ನಾಟಕಗಳು ಪ್ರತಿ ಶನಿವಾರ ಇಲ್ಲಿ ಪ್ರದರ್ಶನವಾಗುತ್ತಾ ಇತ್ತು. ಈ ನಾಟಕಗಳು ಹೊಸಬರಿಗೆ ಅವಕಾಶ ಕೊಟ್ಟುದಷ್ಟೇ ಅಲ್ಲದೇ ಹೊಸ ಮಾದರಿಯ ಪ್ರಯೋಗಗಳಾಗಿ ರಂಗಾಸಕ್ತರಿಗೆ ವಿಶೇಷ ಅನುಭವ ನೀಡಿದ್ದವು. ಚಂಕು ಸಿಂಗ್ ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಬೆನಕ ತಂಡವನ್ನು ಅತ್ಯಂತ ಸಕ್ರಿಯವಾಗಿ ಇರಿಸಿದ್ದರು.

ನಂತರ ಅದ್ಯಾಕೋ ಈ ತಂಡ ಹೋಳಾಯಿತು. ಎರಡೂ ಬಣಗಳೂ ನಮ್ಮದೇ ನಿಜವಾದ ಬೆನಕ ಎಂದು ಜಗಳವಾಡುತ್ತಾ ಒಂದು ತಂಡ ಕಾರಂತರ ಹಳೆಯ ನಾಟಕಗಳ ಪುನರ್‍ ಪ್ರದರ್ಶನ ಮಾಡಿದರೆ ಮತ್ತೊಂದು ಹೊಸ ನಾಟಕಗಳ ಪ್ರದರ್ಶನ ಮಾಡತೊಡಗಿತು. ಎರಡನೆಯ ಬಣದಲ್ಲಿದ್ದ ಚಂಕು ಸಿಂಗ್ ಈ ವಿಷಯವಾಗಿ ಅನೇಕ ಸಲ ಹೇಳಿಕೊಂಡಿದ್ದರು. ನಾಟಕ ಚಳುವಳಿಯನ್ನು ಕಟ್ಟುವಾಗ  ಇಂತಹ ಭಿನ್ನಾಭಿಪ್ರಾಯಗಳು ಸಹಜ. ಆದರೆ ಬಿ ವಿ ಕಾರಂತರ ವಾರಾಸುದಾರರಂತೆ ವರ್ತಿಸಿದ ಕೆಲವರು ಬೆನಕದಂತಹ ತಂಡವನ್ನು ಬಹುಕಾಲ ಚಟುವಟಿಕೆಯಿಂದ ಇಟ್ಟಿದ್ದ ಚಂಕು ಸಿಂಗ್ ಅವರನ್ನು ಮೂಲೆಗುಂಪು ಮಾಡಿದ್ದು ಮಾತ್ರ ನಿಜಕ್ಕೂ ಬೇಸರದ ಸಂಗತಿ.

ಗೆಳೆಯ ಸಿಂಗಣ್ಣ

ಚಂಕು ಸಿಂಗ್ ಅವರ ಈ ಎಲ್ಲಾ ದಶಾವತಾರಗಳ ನಡುವೆ ಆತ ಒಳ್ಳೆಯ ಗೆಳೆಯರು ಕೂಡ. ಯಾವುದೋ ರಂಗತಂಡ ಸಮಸ್ಯೆಯಲ್ಲಿ ಇದೆ ಎಂದರೆ ತಾವೇ ಖುದ್ದಾಗಿ ಹೋಗಿ ಪರಿಹರಿಸಲು ಪ್ರಯತ್ನಿಸುತ್ತಿದ್ದರು. ಹೀಗೆ ಒಡೆದ ಅನೇಕ ತಂಡಗಳನ್ನು ಮತ್ತೆ ಕೂಡಿಸಿ ರಂಗಚಟುವಟಿಕೆ ನಡೆಸುವಂತೆ ಮಾಡುವ ಪ್ರಯತ್ನ ಸಿಂಗ್ ಅವರದ್ದಾಗಿರುತ್ತಾ ಇತ್ತು. ನನಗೆ ವೈಯಕ್ತಿಕವಾಗಿ ಆದ ಅನುಭವವನ್ನು ಹೇಳುಬಿಡುವೆ. ನಾನಾಗ ಬಿಎಚ್‍ಇಎಲ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಇದ್ದೆ. ಅಲ್ಲಿನ ಕಾರ್ಮಿಕರಿಗೆ ನಿರಂತರ ನಾಟಕಗಳನ್ನು ಮಾಡಿಸುತ್ತಾ ಇದ್ದೆ. ಒಂದು ಸಂದರ್ಭದಲ್ಲಿ ನನಗೆ ಕಾರ್ಖಾನೆಯ ಜೀವನ ಹೊಸ ಸವಾಲುಗಳಿಂದ ಕೂಡಿಲ್ಲ ಎನಿಸಿ ಕೆಲಸ ಬಿಡುವ ತೀರ್ಮಾನ ಮಾಡಿದೆ. “ರಂಗಮುಖೇನ ಶಿಕ್ಷಣ” ಎಂಬ ಯೋಜನೆಯೊಡನೆ ಹದಿನೈದು ಜನ ಹುಡುಗರನ್ನು ಕಟ್ಟಿಕೊಂಡು ಕಾಲೇಜುಗಳಿಂದ ಕಾಲೇಜುಗಳಿಗೆ ಹೋಗಿ ನಾಟಕ ಮಾಡುವ ಕೆಲಸ ಶುರು ಮಾಡಿದೆ. ಇದೊಂದು ಅರೆಕಾಲಿಕ ರೆಪರ್ಟರಿ ಆಗಿತ್ತು. ಇಲ್ಲಿ ದುಡಿಯುವ ಪ್ರತಿಯೊಬ್ಬರಿಗೂ ಪ್ರದರ್ಶನಕ್ಕೆ ಇಂತಿಷ್ಟು ಎಂದು ಸಂಬಳ ನಿಗದಿಯಾಗಿತ್ತು. ಈ ಯೋಜನೆಯನ್ನು ರೂಪಿಸಿದ ಮೊದಲ ದಿನಗಳಲ್ಲಿ ಎಡೆಯೂರು ಕೆರೆಯ ಬಳಿ ಇದ್ದ ಸಿಂಗಣ್ಣನ ಮನೆಗೆ ಹೋದೆ. “ನಾನು ಕೆಲಸ ಬಿಡುತ್ತಾ ಇದ್ದೇನೆ” ಎಂದೆ. ಸಿಂಗಣ್ಣ, “ನಿನಗೆ ಬುದ್ಧಿ ಇಲ್ಲ, ಕೇಂದ್ರ ಸರ್ಕಾರದ ಕೆಲಸ ಬಿಟ್ಟವರುಂಟಾ?” ಎಂದೆಲ್ಲಾ ಬೈದರು. ನಂತರ ನಾನು ಮಾಡಹೊರಟಿರುವ ಯೋಜನೆಯನ್ನು ತಿಳಿಸಿದೆ. ಆವರೆಗೆ ಬೈಯ್ಯುತ್ತಾ ಇದ್ದವರು ಪೂರಾ ಖುಷಿಯಾದರು. “ಇದು ಅದ್ಭುತ ಕೆಲಸ” ಎಂದರು. “ನಿನಗೆ ಯಾವ ಸಹಾಯ ಬೇಕು ಹೇಳು?” ಎಂದರು. ತಟ್ಟನೆ ಮಡದಿಯನ್ನು ಕರೆದು “ಈ ಹುಡುಗ ನೋಡು, ಎಂತಹ ಸಾಹಸ ಮಾಡಲು ಹೊರಟಿದ್ದಾನೆ. ಇವನಿಗೆ ನಾವು ಸಹಾಯ ಮಾಡಬೇಕು” ಎಂದರು ಮನೆಯೊಳಗಿನಿಂದ ಐದು ನೂರು ರೂಪಾಯಿಗಳನ್ನು ತಂದು ಎದುರಿಗಿಟ್ಟರು. “ಈ ದುಡ್ಡು ನಿನ್ನ ಖರ್ಚಿಗೆ ಸಾಲುವುದಿಲ್ಲ. ಆದರೆ ಈ ದುಡ್ಡನ್ನು ಬೆಳೆಸುವ ಸಾಮರ್ಥ ನಿನಗಿದೆ. ಇದು ಸೀಡ್ ಮನಿ. ಇಟ್ಟುಕೋ” ಎಂದರು. ಆ ಸೀಡ್ ಮನಿ ನಂತರ ವರ್ಷಕ್ಕೆ ನಾಲ್ಕು ಲಕ್ಷ ರೂಪಾಯಿ ದುಡಿಯುವ ಸಂಸ್ಥೆಗೆ ದಾರಿಯಾಯಿತು. ಸಿಂಗಣ್ಣನ ಗೆಳೆತನ ಈ ಮಾದರಿಯದು. ಆಗ ಕರ್ನಾಟಕದಲ್ಲಿ ಯಾರೂ ರೆಪರ್ಟರಿ ಎಂಬುದನ್ನು ಮಾಡಿರಲಿಲ್ಲ. ನನಗೂ ಅದರ ಅನುಭವ ಇರಲಿಲ್ಲ. ಸಿಂಗಣ್ಣ ಸ್ವತಃ ಜೀವರಾಜ್ ಆಳ್ವ ಅವರ ಬಳಿ ಕರೆದೊಯ್ದರು. ಅವರಿಂದಾಗಿ ಅನೇಕ ಕಾಲೇಜುಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಕ್ಕಿತು. ಕಾಲೇಜುಗಳಲ್ಲಿ ನಮ್ಮ ನಾಟಕಕ್ಕೆ ಸಿಕ್ಕ ಪ್ರತಿಕ್ರಿಯೆ ಕಂಡ ಜೀವರಾಜ್ ಆಳ್ವ ಅವರ ಸಹಾಯ ಪಡೆದು ಸಿಂಗಣ್ಣ ನನ್ನನ್ನು ರಾಮಕೃಷ್ಣ ಹೆಗಡೆಯವರ ಬಳಿ ಕರೆದೊಯ್ದರು. ಅವರು ತಾವು ಚುನಾವಣೆಗೆ ಉಪಯೋಗಿಸುತ್ತಾ ಇದ್ದ ಮಿನಿ ಬಸ್ಸನ್ನು ಮುಂದಿನ ವರ್ಷದಿಂದ ಬಳಸು ಎಂದರು. ನಾನು ಎರಡು ವರ್ಷ ಈ ಕೆಲಸ ಯಶಸ್ವಿಯಾಗಿಯೇ ಮಾಡಿದ್ದೆ. ಮೊದಲ ವರ್ಷ ಕೊಂಚ ನಷ್ಟವಾಗಿತ್ತು. ಎರಡನೆಯ ವರ್ಷ ಲೆಕ್ಕ ಸರಿದೂಗಿತ್ತು. ಮೂರನೆಯ ವರ್ಷದ ಹೊತ್ತಿಗೆ ನಾವು ಕಟ್ಟಿದ ತಂಡವನ್ನು ಕಂಡು ನಮಗೆ ಆಶ್ರಯವಿತ್ತಿದ್ದ ಅನೇಕರು ಜಗಳಕ್ಕೆ ಇಳಿದರು. ಇನ್ನು ಮುಂದೆ ನಾವೆಲ್ಲಾ ಜೊತೆಯಾಗಿರುತ್ತೇವೆ ಎಂದರು. ನಾನು ಈ ಎಲ್ಲಾ ಹಿರಿಯರ ಜೊತೆ ಹೋದರೆ ನನ್ನ ಕನಸು ನಾಶವಾಗುತ್ತದೆ ಎಂದು ಮತ್ತೆ ಸಿಂಗಣ್ಣನ ಮನೆಗೆ ಬಂದೆ. ಬೆಳವಣಿಗೆಯನ್ನು ತಿಳಿಸಿದೆ. ಸಿಂಗಣ್ಣ, “ಮಾತಾಡದೆ ಹೊರಗೆ ಬಾ” ಎಂದರು. ನಾನು ಅದೇ ಕೆಲಸ ಮಾಡಿದೆ. ನಾನು ಬಿಟ್ಟ ನಂತರ ನಾನೇ ಆರಂಭಿಸಿದ್ದ ಸಂಸ್ಥೆಯ ಚುಕ್ಕಾಣಿ ಹಿಡಿದವರು ಒಂದೇ ವರ್ಷದಲ್ಲಿ ಅದನ್ನು ಹಳ್ಳ ಹಿಡಿಸಿದರು. ಹೀಗೆ ಕರ್ನಾಟಕದಲ್ಲಿ ಮೊದಲ ರೆಪರ್ಟರಿ ಹುಟ್ಟುಹಾಕಲು ಸೀಡ್ ಮನಿ ಕೊಟ್ಟು ಬೆನ್ನು ತಟ್ಟಿದ್ದ ಸಿಂಗಣ್ಣ, ದೋಣಿಯು ಜನಜಾಸ್ತಿ ಆಗಿ ಮುಳುಗುತ್ತದೆ ಎಂದಾಗ ನನ್ನನ್ನು ಅಲ್ಲಿಂದ ದೂರಕ್ಕೆ ಕರೆತಂದ ಗೆಳೆಯರೂ ಆದರು.

ಸಿಂಗಣ್ಣನ ಗೆಳೆತನ ಮಿಥ್ ಎನ್ನುವಂತೆ ರಂಗಭೂಮಿಯಲ್ಲಿ ಹರಡಿದೆ. ಸಿಂಗಣ್ಣ ಅನೇಕ ಪ್ರೇಮಪ್ರಕರಣಗಳು ಸುಖಾಂತವಾಗುವಂತೆ ಮಾಡಿದ್ದಾರೆ. ಅನೇಕ ಒಡೆವ ಹಂತದಲ್ಲಿದ್ದ ಕುಟುಂಬಗಳು ಮತ್ತೆ ಕೂಡಿ ಬದುಕುವಂತೆ ಮಾಡಿದ್ದಾರೆ. ಹೊಸ ನಾಟಕಗಳನ್ನು ಮಾಡುವವರಿಗೆ ಪಕ್ಕದಲ್ಲಿ ನಿಂತು ಹೇಗೆ ನಾಟಕ ಕಟ್ಟಬೇಕು ಎಂದು ಹೇಳಿದ್ದಾರೆ. ಹೀಗಾಗಿ ಸಿಂಗಣ್ಣ ಅವರನ್ನು ನಾನು “ಚಮತ್ಕಾರದ ಗೆಳೆಯ ಸಿಂಗ್” ಎನ್ನುವುದಕ್ಕೆ ಸಮಾನಾಂತರವಾಗಿ “ಚಮಕ್ ಚಮಕ್ ಸಿಂಗ್” ಎನ್ನುವುದು ಸರಿಯಲ್ಲವೇ…!

* * *

ಬಿ.ಸುರೇಶ

ಮೀಡಿಯಾ ಹೌಸ್, #1162, 22ನೇ ಕ್ರಾಸ್, 23ನೇ ಮೇನ್,

ಬನಶಂಕರಿ ಎರಡನೇ ಹಂತ, ಬೆಂಗಳೂರು – 560070

bsuresha@bsuresha.com

Advertisements

0 Responses to “ಚಂಕು ಸಿಂಗ್ – ಚಮಕ್ ಚಮಕ್ ಸಿಂಗ್”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: