“ಡಬ್ಬಿಂಗ್” ಸಂಸ್ಕೃತಿಯಲ್ಲ – ಖಾಯಿಲೆ

ಈಚೆಗೆ ಪ್ರಜಾವಾಣಿಯ ಸಂಗತದಲ್ಲಿ ನಿರಂತರವಾಗಿ ಡಬ್ಬಿಂಗ್ ಸಂಸ್ಕೃತಿ ಕನ್ನಡಕ್ಕೆ ಬರಬೇಕೆ ಬೇಡವೇ ಎಂಬ ವಿಷಯವಾಗಿ ಚರ್ಚೆಯಾಗುತ್ತಾ ಇದೆ. ನಮ್ಮ ಪ್ರಜಾಪ್ರಭುತ್ವದ ದೊಡ್ಡ ಲಾಭವೆಂದರೆ ಇದೇ. ಇಲ್ಲಿ ಪ್ರತಿ ವಿಷಯದ ಅನೇಕ ಮಗ್ಗುಲುಗಳು ಅನೇಕ ಧ್ವನಿಗಳು ಏಕಕಾಲಕ್ಕೆ ಕೇಳುತ್ತವೆ ಎನ್ನುವುದೇ ಬಹುತ್ವವು ಕೊಟ್ಟಿರುವ ಬಹುದೊಡ್ಡ ಕಾಣಿಕೆ. ನಾನು ಈ ಎಲ್ಲಾ ವಾದಗಳನ್ನೂ ಗಮನಿಸುತ್ತಾ ಇದ್ದೇನೆ ಹಾಗೂ ನನಗೆ ಈ ಎಲ್ಲರ ಅಭಿಪ್ರಾಯಗಳ ಬಗೆಗೆ ಗೌರವವಿದೆ. ಅದೇ ನೆಲೆಯಲ್ಲಿ ನನ್ನ ಅಭಿಪ್ರಾಯವನ್ನೂ ಸಹ ಮಂಡಿಸುತ್ತೇನೆ.

ಡಬ್ಬಿಂಗ್ ಅನುವಾದವಲ್ಲ

ಡಬ್ಬಿಂಗ್ ಎಂಬುದನ್ನು ಮಾತಿನ ಮರುಲೇಪನ ಎಂದು ಕರೆಯುತ್ತಾರೆ. ಮೂಲದಲ್ಲಿ ಯಾವುದೋ ಭಾಷೆಯಲ್ಲಿ ತಯಾರಾದ ಮತ್ತು ಬೇರೆ ಬೇರೆಯ ಪ್ರಾಂತ್ಯ – ದೇಶಗಳ ಕಲಾವಿದರು ಬೇರೆಯದೇ ಭಾಷೆಯಲ್ಲಿ ನಟಿಸಿದ ಮಾತುಗಳ ಬದಲಿಗೆ ಮತ್ಯಾರೋ ತಮಗೆ ಬೇಕಾದ ಭಾಷೆಯನ್ನು ಅದಕ್ಕೆ ಮರುಲೇಪನ ಮಾಡುತ್ತಾರೆ. ಇದೊಂದು ತಾಂತ್ರಿಕ ವಿವರ ಮಾತ್ರ. ಇಲ್ಲಿ ತುಟಿ ಚಲನೆಗೆ ತಕ್ಕಂತೆ ಮಾತು ಕುಡಿಸುವುದನ್ನು ಹೊರತ ಪಡಿಸಿ ಮತ್ಯಾವ ಸೃಜನಶೀಲ ಚಟುವಟಿಕೆಯೂ ಆಗುವುದಿಲ್ಲ. ಇಂತಹದನ್ನು ನೋಡುವುದು ವೈಯಕ್ತಿಕವಾಗಿ ರೇಜಿಗೆಯ ವಿಷಯ. ಇದಕ್ಕೆ ಎರಡು ಕಾರಣಗಳಿವೆ. ಮೊದಲಿಗೆ – ತುಟಿ ಚಲನೆಗೆ ಕೂಡಿಸಿದ ಮಾತುಗಳು ಕೃತಕವಾಗುತ್ತವೆ. ಇದನ್ನು ಅದಾಗಲೇ ಜಾಹೀರಾತುಗಳಿಗೆ ಆಗಿರುವ ಮಾತಿನ ಮರುಲೇಪನದಲ್ಲಿ ಕಾಣುತ್ತಾ ಇದ್ದೇವೆ. “ನೀವೂ ವಿಮೆ ಇಳಿಸಿ” ಎಂದು ಡಬ್ ಮಾಡಿದ್ದು ಕನ್ನಡಿಗರಿಗೆ ಯಾವುದೋ ಅಟ್ಟದಿಂದ ಏನನ್ನೋ ಇಳಿಸಬೇಕೆಂದು ಧ್ವನಿಸುತ್ತದೆ. ಕನ್ನಡಿಗರಿಗೆ ವಿಮೆ ಎಂಬುದು ಯಾವತ್ತಿಗೂ “ಮಾಡಿಸುವುದು” ಇಳಿಸುವುದಲ್ಲ. ಹಿಂದಿಯಲ್ಲಿ ಬಳಕೆಯಾಗಿರುವ “ವಿಮಾ ಉತರ್ನಾ” ಎನ್ನುವುದು “ವಿಮೆ ಇಳಿಸುವುದು” ಎಂದಾದಾಗ ಕನ್ನಡದ್ದಾಗುವುದಿಲ್ಲ. ಇಂತಹ ಮಾತಿನ ಮರುಲೇಪನದ ಘೋರಗಳ ಹಲವು ಉದಾಹರಣೆಗಳನ್ನು ನಮ್ಮಲ್ಲಿ ಪ್ರಸಾರವಾಗುತ್ತಾ ಇರುವ ಹಲವು ಜಾಹೀರಾತುಗಳಲ್ಲಿ ಗಮನಿಸಬಹುದು. ಈ ಕಾರಣಕ್ಕಾಗಿ ಯಾವುದೇ ಭಾಷೆಯ ನೋಡುಗನಿಗೆ ಮತ್ತೊಂದು ಬಾಷೆಯಿಂದ ತುಟಿ ಚಲನೆಗೆ ಮಾತು ಕೂಡಿಸಿದ ವಿವರವು ರೇಜಿಗೆಯೇ ಆಗುತ್ತದೆ. ಎರಡನೆಯದಾಗಿ – ಅದಾಗಲೇ ಸೂಚಿಸಿದಂತೆ ಮತ್ತೊಂದು ಭಾಷೆಯ ಕಲಾವಿದನು ನಟಿಸಿದ್ದಕ್ಕೆ ಮತ್ಯಾರೋ ದನಿ ಕೂಡಿಸುವುದು ವಿಗ್ರಹ ಭಗ್ನಗೊಂಡ ಸ್ಥಿತಿ. ಯಾರದೋ ಆಂಗಿಕ ನಟನೆಗೆ ಮತ್ಯಾರದೋ ವಾಚಿಕವನ್ನು ಕೂಡಿಸಿದೊಡನೆ ಆ ನಟನೆಯು ವಿಕೃತಗೊಳ್ಳುತ್ತದೆ. ಅದೂ ಸಹ ನೋಡುಗನನ್ನು ತೆರೆಯಿಂದ ವಿಮುಖನನ್ನಾಗಿಸುತ್ತದೆ. ಇವೆರಡೂ ಕಾರಣಗಳಿಂದಾಗಿಯೇ ಯಾವುದೇ ಭಾಷೆಯಿಂದ ಮತ್ಯಾವುದೇ ಭಾಷೆಗೆ ದೃಶ್ಯ ಮಾಧ್ಯಮ ಕೃತಿಯು ಮಾತಿನ ಮರುಲೇಪನವಾಗಿ ಬರುವುದನ್ನು ನಾನು ವಿರೋಧಿಸುತ್ತೇನೆ.

ನಮ್ಮಲ್ಲಿ ನಿಷೇಧವಿಲ್ಲ, ಆದರೆ ನಮ್ಮಲ್ಲಿ ಡಬ್ಬಿಂಗ್‍ನ ಅಭ್ಯಾಸವಿಲ್ಲ

ಹಲವರು ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧ ಎನ್ನುವುದು ಅಸಂವಿಧಾನಿಕ ಎನ್ನುತ್ತಾ ಇದ್ದಾರೆ. ಆದರೆ ಕರ್ನಾಟಕದಲ್ಲಿ ಇರುವುದು ಸಾಮಾಜಿಕ ಕಟ್ಟುಪಾಡಾಗಿ ಜಾರಿಯಲ್ಲಿದೆಯೇ ಹೊರತು ನಿಷೇಧವಾಗಿ ಅಲ್ಲ. ಮತ್ತು ಈ ಸಾಮಾಜಿಕ ಕಟ್ಟುಪಾಡನ್ನು ಹೀಗೆಯೇ ಪಾಲಿಸಿ ಎಂದು ಸಿನಿಮಾದ ಪ್ರದರ್ಶಕರ ಜೊತೆಗೆ ಮೌಖಿಕ ಒಪ್ಪಂದವನ್ನು 1965ರಲ್ಲಿ ಮಾಡಿಕೊಂಡವರು ಆ ಕಾಲದ ಕನ್ನಡ ಹೋರಾಟಗಾರರೇ ಹೊರತು ಬೇರಾರೋ ಅಲ್ಲ. ನಂತರ ಬೆಂಗಳೂರಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿ.ವೆಂಕಟಸುಬ್ಬಯ್ಯನವರ ಅಧ್ಯಕ್ಷತೆಯಲ್ಲಿ ತೆಗೆದುಕೊಂಡ ನಿರ್ಣಯ, ಬಿಜಾಪುರದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋ.ಚೆನ್ನಬಸಪ್ಪನವರ ಅಧ್ಯಕ್ಷ ಭಾಷಣ ಇವುಗಳೆಲ್ಲವೂ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಮತ್ತು ಧಾರಾವಾಹಿಗಳು ಬರದಂತೆ ತಡೆಗೋಡೆ ಒಡ್ಡಿವೆ ಅಷ್ಟೇ. ಹೀಗಾಗಿ ಈ ಸಾಮಾಜಿಕ ಕಟ್ಟುಪಾಡು ಮುಂದುವರಿಯೇ ಬೇಕೆ ಬೇಡವೇ ಎಂಬುದು ಸಾರ್ವಜನಿಕರೇ ತೀರ್ಮಾನಿಸಬೇಕೇ ಹೊರತು ಮತ್ಯಾರೋ ಅಲ್ಲ. ಸಾಮಾಜಿಕ ಕಟ್ಟುಪಾಡುಗಳಿಗೆ ಸಂವಿಧಾನಾತ್ಮಕ ಪ್ರಮಾಣೀಕರಣ ಮಾಡುವ ಅಭ್ಯಾಸ ಈ ವರೆಗೆ ಇರಲಿಲ್ಲ. ಇನ್ನು ಮುಂದೆ ಪ್ರಾಯಶಃ ಅಂತಹುದನ್ನು ಮಾಡಬೇಕಾಗಬಹುದು ಮತ್ತು ಈ ವರೆಗೆ “ನಮ್ಮಲ್ಲಿ ಇಂತಹ ಅಭ್ಯಾಸ ಇಲ್ಲ” ಎನ್ನುವ ಬದಲಿಗೆ ನಿಷೇಧ ಎಂಬ ಪದವನ್ನೇ ಬಳಸುವ ದಿನ ಬರಬೇಕಾಗಬಹುದು.

ಡಬ್ಬಿಂಗ್ ಯಾವತ್ತಿಗೂ ಯಾರಿಗೂ ಸ್ಪರ್ಧೆಯೊಡ್ಡುವುದಿಲ್ಲ

ಅರ್ಥಶಾಸ್ತ್ರೀಯ ನೆಲೆಯಲ್ಲಿ ಈ ವಿವರವನ್ನು ನೋಡುತ್ತಾ ಎಲ್ಲ ರೀತಿಯ ಸ್ಪರ್ಧೆಗಳಿಗೂ ನಾವು ಮುಕ್ತರಾಗಬೇಕು ಎಂದು ಡಬ್ಬಿಂಗ್ ಬರಲಿ ಎನ್ನುವವರೂ ನಮ್ಮಲ್ಲಿ ಇದ್ದಾರೆ. ಮೊದಲಿಗೆ ಡಬ್ಬಿಂಗ್ ಆದ ಸಿನಿಮಾ ಧಾರಾವಾಹಿಗಳು ಯಾರಿಗೂ ಯಾವ ಸ್ಪರ್ಧೆಯನ್ನೂ ಒಡ್ಡುವುದಿಲ್ಲ ಎಂಬುದನ್ನರಿಯಬೇಕು. ಕೃತ್ರಿಮವನ್ನು ಸಾಮಾನ್ಯ ಜನರು ಎಂದಿಗೂ ನೋಡುವುದಿಲ್ಲ. ಆದರೆ ಸ್ಪರ್ಧೆಗಾಗಿ ಡಬ್ಬಿಂಗ್ ಅಭ್ಯಾಸವನ್ನು ಬಳಕೆಗೆ ತರುವುದು ಚೈನಾದ ರೇಷ್ಮೆಗೆ ಮುಕ್ತ ಮಾರುಕಟ್ಟೆಯಲ್ಲಿ ಅವಕಾಶ ನೀಡಿದಾಗ ಕರ್ನಾಟಕದ ರೈತರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಗೆ ಸಮಾನವಾದುದು. ದೇಶಕ್ಕೆ ಮತ್ತು ರಾಜ್ಯಕ್ಕೆ ಗಡಿಗಳಿದ್ದ ಹಾಗೆ ಸಾಂಸ್ಕೃತಿಕ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಾಗಲೂ ನಿರ್ಬಂಧಗಳು ಅತ್ಯಗತ್ಯ. ಪವರ್ಲೂಮ್‍ನವರ ಆಟಾಟೋಪಕ್ಕೆ ಕೈಮಗ್ಗದವರು ಕೊರಗುತ್ತಾ ಇರುವಂತೆ, ಚೀನಾದ ರೇಷ್ಮೆಯನ್ನು ಬಹುತೇಕ ನೇಯ್ಗೆಯ ಕಂಪೆನಿಗಳು ಕೊಳ್ಳುತ್ತಾ ಇರುವುದರಿಂದ ಕರ್ನಾಟಕದ ರೇಷ್ಮೆ ಬೆಳೆಗಾರ ನರಳುತ್ತಾ ಇರುವಂತೆ ಸಾಂಸ್ಕೃತಿಕ ಉತ್ಪನ್ನಗಳ ತಯಾರಿಗೂ ಸ್ಪರ್ಧೆಯನ್ನು ತರಬಾರದು. ಅದಲ್ಲದೆ ಕರ್ನಾಟಕದಲ್ಲಿಯಂತೂ ಬಹು ಭಾಷೆಗಳ ಸಿನಿಮಾಗಳು ಆಯಾಯ ಭಾಷೆಯಲ್ಲಿಯೇ ಬಿಡುಗಡೆಯಾಗುತ್ತಾ ಇವೆ. ನೋಡುಗನಿಗೆ ತನಗೆ ಬೇಕಾದ ಭಾಷೆಯ ಸಿನಿಮಾವನ್ನು ಮೂಲಭಾಷೆಯಲ್ಲಿ ನೋಡುವ ಅನುಕೂಲವಿದೆ. ಇದರಿಂದಾಗಿ ಇತರ ಭಾಷೆಯ ಸಿನಿಮಾಗಳು ಸ್ಥಳೀಯ ಭಾಷೆಯ ಸಿನಿಮಾಗಳಿಗೆ ನೇರ ಸ್ಪರ್ಧೆಯಾಗಿಯೇ ಬದುಕುತ್ತಿವೆ. ಈ ಹೊತ್ತಿನಲ್ಲಿ ಡಬ್ಬಿಂಗ್ ಎನ್ನುವುದು ಬಂದರೆ ಅದು ಖಂಡಿತಾ ಯಾರಿಗೂ ಸ್ಪರ್ಧೆಯಾಗುವ ಬದಲಿಗೆ ಕನ್ನಡಿಗರಿಗಿರುವ ತಮ್ಮ ಸಾಂಸ್ಕೃತಿಕ ಉತ್ಪನ್ನಗಳನ್ನು ಕಿತ್ತುಕೊಳ್ಳುವ ಅವಕಾಶದಲ್ಲಿ ಪಾಲು ಪಡೆಯುತ್ತವೆ ಅಷ್ಟೆ. ಹೀಗಾಗಿ ಕಳೆದ ಐದು ದಶಕಗಳಿಂದ ಬಳಕೆಯಲ್ಲಿ ಇಲ್ಲದ ಇಂತಹ ಕೃತ್ರಿಮವನ್ನು ಇನ್ನು ಮುಂದೆಯೂ ದೂರವಿಟ್ಟು, ಈಗಿರುವ ಬಹುಭಾಷೆಗಳ ಕೃತಿ ಪ್ರದರ್ಶನದ ಅವಕಾಶವನ್ನು ಉಳಿಸಿಕೊಳ್ಳುವುದು ಆರೋಗ್ಯಕರವಾದುದು.

ಡಬ್ಬಿಂಗ್‍ನಿಂದಾಗಿ ಭಾಷೆಯನ್ನು ಕಟ್ಟುವ ಕೆಲಸ ಆಗುವುದಿಲ್ಲ

ಕನ್ನಡ ಕೇಂದ್ರಿತ ಆಲೋಚನೆಯಿಂದ ಹಲವರು ಡಬ್ಬಿಂಗ್‍ನಿಂದ ಕನ್ನಡ ಕಟ್ಟುವ ಕೆಲಸಕ್ಕೆ ಸಹಾಯವಾಗುತ್ತದೆ ಎಂದು ಮಾತಾಡುತ್ತಾ ಇದ್ದಾರೆ. ಇದೂ ಸಹ ಸುಳ್ಳು. ಯಾವುದೇ ಸಿನಿಮಾ/ಧಾರಾವಾಹಿಯನ್ನು ಯಾವ ಭಾಷೆಯಲ್ಲಿ ತಯಾರಿಸಬೇಕೆಂಬ ಆಯ್ಕೆ ಆಯಾ ಕೃತಿಯನ್ನು ತಯಾರಿಸುವ ಕಲಾವಿದನ ಆಯ್ಕೆ ಆಗಿರುತ್ತದೆ. ಕಲಾವಿದನ ಆಯ್ಕೆಯನ್ನು ಮೀರಿ, ವ್ಯಾಪಾರದ ಕಾರಣ ನೀಡಿ, ಯಾವುದೇ ಭಾಷೆಯ ಕೃತಿಯನ್ನು ಮತ್ತೊಂದು ಭಾಷೆಗೆ ಮಾತನ್ನು ಮಾತ್ರ ಲೇಪಿಸುವುದು ಮೂಲ ಕಲಾವಿದನಿಗೆ ಆಗುವ ಅಪಚಾರ ಅಥವಾ ಅತ್ಯಾಚಾರವೇ ಎಂದಾಗುತ್ತದೆ. ಈ ಹಿಂದೆ ತೆಲುಗಿನ ಹಿರಿಯ ನಟರಾದ ಎಂ.ರಂಗಾರಾವು ಅವರು ಮತ್ತು ಹಿರಿಯ ನಟಿ ಜಮುನ ಅವರು ತಮ್ಮ ಸಿನಿಮಾಗಳನ್ನು ಬೇರಾವುದೇ ಭಾಷೆಗೆ ಡಬ್ ಮಾಡಬಾರದು ಎಂದು ಕರಾರು ಪತ್ರದಲ್ಲಿಯೇ ಬರೆಯುವ ಅಭ್ಯಾಸವನ್ನು ಜಾರಿಗೆ  ತಂದಿದ್ದರು. ಮುಂಬರುವ ದಿನಗಳಲ್ಲಿ ಎಲ್ಲಾ ಭಾಷೆಯ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರು ಮೂಲದಲ್ಲಿ ಯಾವ ಭಾಷೆಯಲ್ಲಿ ಸಿನಿಮಾ/ಧಾರಾವಾಹಿ ತಯಾರಾಗುತ್ತದೋ ಅದರಿಂದ ಬೇರೆ ಭಾಷಗೆ ಡಬ್ ಆಗಬಾರದು ಎಂದು ತಮ್ಮ ಕರಾರಿನಲ್ಲಿ ಬರೆಸಬೇಕಾಗುತ್ತದೆ. ಆಗ ಮಾತ್ರ ಯಾವುದೇ ಸ್ಥಳೀಯ ಭಾಷೆ ಮತ್ತು ಸ್ಥಳೀಯ ಭಾಷೆಯ ಕಲಾವಿದನ ಮೇಲೆ ಆಗುವ ಅಪಾಚಾರ/ ಅತ್ಯಾಚಾರವನ್ನು ತಡೆಯಲು ಸಾಧ್ಯ. ಡಬ್ಬಿಂಗ್ ಸಿನಿಮಾಗಳಿಂದ ಖಂಡಿತವಾಗಿ ಕನ್ನಡವನ್ನು ಕಟ್ಟುವ ಕೆಲಸ ಆಗುವುದಿಲ್ಲ. ಬದಲಿಗೆ ಕನ್ನಡ ಕಲಾವಿದರನ್ನು ತುಳಿಯುವ ಕೆಲಸ ಮಾತ್ರ ಆಗುತ್ತದೆ. ಯಾವುದೋ ಬಹು ಜನಪ್ರಿಯವಾದ ಬೇರೆ ಭಾಷೆಯ ಸಿನಿಮಾವನ್ನು ಕನ್ನಡಿಗರು ಕನ್ನಡದಲ್ಲಿಯೇ ನೋಡಲಿ ಎಂಬ ಆಸೆಯು ಅಂತಹ ಸಿನಿಮಾಗಳ ಡಬ್ ಆದ ಆವೃತ್ತಿಯಿಂದ ಮೂಡುವ ಅದಾಗಲೇ ವಿವರಿಸಿದ ಕೃತ್ರಿಮ ಭಾಷಾ ಬಳಕೆಯಿಂದಾಗಿ ಭಾಷೆ ಬಲ್ಲವರಿಗೆ ಹೇವರಿಕೆಯನ್ನು ತಂದರೆ, ಹೊಸ ತಲೆಮಾರಿನವರಿಗೆ ಅದೇ ಸರಿಯಾದ ಭಾಷೆಯೇನೋ ಎಂದೆನಿಸಿ, ಹೊಸಬರು ಅದೇ ಕೃತ್ರಿಮವನ್ನು ತಮ್ಮ ಭಾಷೆಯಾಗಿಸಿಕೊಳ್ಳುವ ಸಾಧ್ಯತೆ ಇದೆ. ಮುಕ್ತ ಮಾರುಕಟ್ಟೆಯ ವ್ಯವಸ್ಥೆಯಿಂದಾಗಿ ಅದಾಗಲೇ ನಮ್ಮ ಮೂಲ ಬೇರುಗಳಿಂದ ದೂರಕ್ಕೆ ಬಂದಿರುವ ಸಮಾಜವು, ಭಾಷೆಯ ಬೇರುಗಳನ್ನೂ ಕಳೆದುಕೊಂಡು “ಥಿಂಗ್ಸ್ ಫಾಲ್ ಅಪಾರ್ಟ್” ಕಾದಂಬರಿಯಲ್ಲಿ ಚಿನುವಾ ಅಚಿಬೆ ಚರ್ಚಿಸುವ ನೆಲೆಗೆ ಬಂದು ತಲುಪುತ್ತದೆ. ಈ ಸ್ಥಿತಿಯನ್ನು ಭಾಷಾ ಬೆಳವಣಿಗೆ ಎನ್ನುವುದಿಲ್ಲ ಬದಲಿಗೆ ಭಾಷೆಯ ಕೊಳೆಯುವಿಕೆ ಎನ್ನುತ್ತಾರೆ. ಇಂತಹ ಕೊಳಕನ್ನು, ಖಾಯಿಲೆಯನ್ನು ಭಾಷೆಯ ಬೆಳವಣಿಗೆಯ ಹೆಸರಲ್ಲಿ ಬಳಕೆಗೆ ತರುವುದು ತರವಲ್ಲ.

ಮತ್ತೊಂದು ಭಾಷೆಯ ಪ್ರಸಿದ್ಧ ನಟನ ಸಿನಿಮಾಕ್ಕೆ ನಮ್ಮ ಭಾಷೆಯವರೊಬ್ಬರು ದನಿ ಕೊಟ್ಟು ಮೂಲಭಾಷೆಯನ್ನು ಮತ್ತೊಂದು ಭಾಷೆಯವರು ನೋಡುವ ಹಾಗೆ ಮಾಡುವುದರಿಂದ ಆ ಕಲಾವಿದ ಎಂದಿಗೂ ಅದೇ ಭಾಷೆಯವನಾಗುವುದಿಲ್ಲ. (ಮೂಲದಲ್ಲಿ ಹಿಂದಿ ಭಾಷೆಯ ಮೂಲಕ ಅಭಿನಯಿಸಿದ ಅಮಿತಾಭ್ ಬಚ್ಚನ್‍ ಅವರಿಗೆ ನಮ್ಮವರಾದ ಸಾಯಿಕುಮಾರ್ ಕನ್ನಡದಲ್ಲಿ ದನಿ ಕೊಟ್ಟರೆ ಅಮಿತಾಭ್ ಕನ್ನಡಿಗರಾಗುವುದಿಲ್ಲ.) ಬದಲಿಗೆ ಅಂತಹ ಮೂಲಭಾಷೆಯ ಜಾಗದಲ್ಲಿ ಮತ್ತೊಂದು ಭಾಷೆಯನ್ನು ಕೂಡಿಸಿಕೊಂಡ ಕೃತಿಯನ್ನು ನೋಡುವವನು ಆ ಕಲಾವಿದ ಕನ್ನಡದವನೇ ಎಂದು ಭ್ರಮಿಸುವ ಸಾಧ್ಯತೆ ಇದೆಯಷ್ಟೇ. ಇದಕ್ಕಿಂತ ಆ ಮೂಲ ಕಲಾವಿದನು ನಮ್ಮ ಭಾಷೆಯನ್ನು ಕಲಿತು ಮಾತಾಡುವಂತೆ ಮಾಡುವುದು ಭಾಷಾ ಬೆಳವಣಿಗೆಗೆ ಮತ್ತು ಪ್ರಸರಣಕ್ಕೆ ಉಪಯುಕ್ತವಾದ ಮಾರ್ಗವಾಗಿದೆ. (ಅಮಿತಾಭ್ ಅವರೇ ಕನ್ನಡದಲ್ಲಿ ಮಾತಾಡುವಂತೆ ಪ್ರೇರೇಪಿಸುವುದು ಅವರ ದನಿಯನ್ನು ಬೇರೆಯವರಿಂದ ಅನುಕರಿಸುವುದಕ್ಕಿಂತ ಆರೋಗ್ಯಕರವಾದುದು ಎಂಬರ್ಥದಲ್ಲಿ.) ಈ ಹಿನ್ನೆಲೆಯಲ್ಲಿ ಭಾಷಾ ಬೆಳವಣಿಗೆಯ ಚಳುವಳಿಗಳು ಯೋಚಿಸಬೇಕು. ಪ್ರಸಿದ್ಧ ನಟನ ಸಿನಿಮಾವನ್ನು ಕನ್ನಡದ ಮಾರುಕಟ್ಟೆಯಲ್ಲಿ ಬಿಡಬೇಕು ಎಂದು ಬಯಸುವ ಹಣಹೂಡಿಕೆದಾರರು ಸಹ ಇಂತಹ ಪ್ರಯೋಗಕ್ಕೆ ಪ್ರಯತ್ನಿಸಬೇಕು. ಮೂಲ ಭಾಷೆಯಲ್ಲಿ ಅಭಿನಯಿಸಿದ ಕಲಾವಿದನೇ ಇತರ ಭಾಷೆಗಳ ಆವೃತ್ತಿಗೂ ಮತ್ತೊಮ್ಮೆ ಅಭಿನಯಿಸಬೇಕು ಎಂಬಂತಾದರೆ ಸ್ಥಳೀಯ ಭಾಷೆಗಳ ಉಳಿವಿಗೆ ದೊಡ್ಡ ಲಾಭವಾಗುತ್ತದೆ. ಆ ಮೂಲಕ ದೇಶದ ಮಟ್ಟದಲ್ಲಿ ಪ್ರಸಿದ್ಧರಾದ ಕಲಾವಿದರು ಸ್ಥಳೀಯ ಭಾಷೆಗಳನ್ನು ಕಲಿತು ನಮ್ಮವರಾಗುವುದು ದೊಡ್ಡ ಸುಖವೂ ಹೌದು. ಚುನಾವಣಾ ರಾಜಕೀಯದಲ್ಲಿ ಪ್ರಸಿದ್ಧ ರಾಜಕಾರಣಿಯು ಭಾಷಣದ ಮೊದಲೆರಡು ವಾಕ್ಯಗಳನ್ನು ಸ್ಥಳೀಯ ಭಾಷೆ ಕಲಿತು ಆಡಿದಾಗ ಸಾಮಾನ್ಯ ಜನರಿಗೆ ಯಾವ ಬಗೆಯ ಆನಂದ ಸಿಗುತ್ತದೋ ಅಂತಹ ಆನಂದ ಪ್ರಸಿದ್ಧ ನಟ ನಮ್ಮ ಭಾಷೆಯನ್ನು ಆಡಿದಾಗಲೂ ಸಿಗುತ್ತದೆ. (ಕಮಲ್ ಹಾಸನ್ ತರಹದ ನಟರು ಕನ್ನಡವನ್ನು ಕಲಿತು ತಮ್ಮ ಅಭಿನಯದ ಕನ್ನಡ ಸಿನಿಮಾಗಳಲ್ಲಿ ಮಾತಾಡಿದ್ದು, ಪ್ರಕಾಶ್ ರೈ, ಊರ್ವಶಿ, ಸರಿತಾ ತರಹದ ನಟರು ತಾವು ಅಭಿನಯಿಸುವ ಯಾವುದೇ ಭಾಷೆಯ ಸಿನಿಮಾದಲ್ಲಿ ತಮ್ಮದೇ ದನಿ ಬಳಸುವ ಅಭ್ಯಾಸ ಮಾಡಿಕೊಮಡಿರುವುದರಿಂದಾಗಿ ಅಂತಹ ನಟರಿಗೆ ಸ್ಥಳೀಯರ ಗೌರವ ಮನ್ನಣೆಗಳು ಸಹ ಸಿಗುತ್ತವೆ ಎಂಬುದನ್ನು ನಾವು ಗಮನಿಸಬೇಕು.)

ಹತಾಶ ನಿರ್ಮಾಪಕ ಮಿತ್ರರು

ನನ್ನ ಸಹೋದ್ಯೋಗಿಗಳಾದ ಹಲವು ನಿರ್ಮಾಪಕ ಮಿತ್ರರು “ಡಬ್ಬಿಂಗ್” ಬೇಕು ಎಂದು ಮಾತಾಡುತ್ತಾ ಇದ್ದಾರೆ. ಕೆಲವರು ಅದಕ್ಕಾಗಿ ಸಂಘಟನೆಯನ್ನು ಸಹ ಆರಂಭಿಸಿದ್ದಾರೆ. ಇವರಲ್ಲಿ ಅನೇಕರು ನನ್ನ ಮಿತ್ರರೂ ಆಗಿದ್ದಾರೆ. ಇವರೆಲ್ಲರ ಮಾತಿನಲ್ಲಿ ನಮ್ಮ ನಡುವಿನ ಸ್ಟಾರ್ ನಟರ ಸಂಬಳ ಹೆಚ್ಚಾಗಿರುವುದು ಮತ್ತು ಆ ಸ್ಟಾರ್‍ಗಳು ಕೆಲವರಿಗೆ ಮಾತ್ರ ದಿನಾಂಕ ಕೊಡುತ್ತಾ ಇರುವುದು ಮತ್ತು ಕೆಲವು ನಿರ್ಮಾಪಕರಿಗೆ ಸಿಗಬೇಕಾದಷ್ಟು ಗೌರವ ಸಿಗುತ್ತಾ ಇಲ್ಲ ಎನ್ನುವ ಹತಾಶೆಯಿದೆ. ಈ ಹತಾಶೆಗಳನ್ನು ದಾಟಿಕೊಳ್ಳಲು ಡಬ್ಬಿಂಗ್ ಇಲ್ಲದೆಯೇ ಹಲವು ಮಾರ್ಗಗಳಿವೆ. ನಮ್ಮ ಎದುರಿಗೆ ಇತ್ತೀಚಿನ ಚಿತ್ರವಾದ “ರಂಗಿತರಂಗ”ದಂತಹ ಉದಾಹರಣೆ ಇದೆ. ಯಾವ ದೊಡ್ಡ ನಟರಿಲ್ಲದೆಯೂ ಕಥನ ಚೆನ್ನಾಗಿದ್ದರೆ ಸಿನಿಮಾ ಯಶಸ್ವಿಯಾಗಬಲ್ಲದು ಎಂಬುದನ್ನ ಈ ಸಿನಿಮಾ ತೋರಿಸಿದೆ. ಹೀಗಿರುವಾಗ ಯಾವುದೋ ನಟ ದಿನಾಂಕ ಕೊಡಲಿಲ್ಲ ಎಂದಾಗ ಉತ್ತಮ ಚಿತ್ರ ಕಟ್ಟಬಲ್ಲ ಹೊಸಬರ ತಂಡ ಕಟ್ಟಿ ಕಡಿಮೆ ಹಣದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾ ಮಾಡಬಹುದು. ಅದನ್ನು ಬಿಟ್ಟು ಪರಭಾಷೆಯ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ತರುತ್ತೇವೆ ಎನ್ನುವುದು ಸರಿಯಲ್ಲ. ಬೇಲೂರಿನ ಶಿಲ್ಪಕಲೆಗೆ ಬಣ್ಣ ಹಚ್ಚುವುದು ಹೇಗೆ ಸಂಸ್ಕೃತಿ ವಿನಾಶವೋ ಅದೇ ಬಗೆಯದು ಯಾವುದೇ ಭಾಷೆಯ ಸಿನಿಮಾವನ್ನು ಮತ್ತಾವುದೇ ಭಾಷೆಗೆ ಡಬ್ ಮಾಡುವುದು ಸಹ ಅಂತಹುದೇ ಖಾಯಿಲೆಯಾಗಿದೆ. ನನ್ನ ಗೆಳೆಯರು ತಮ್ಮ ಸಿನಿಮಾ ಪ್ರೀತಿಯನ್ನು ತೋರಲು ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ ಎಂಬ ಆಸೆಯೂ ನನಗಿದೆ.

ಇದೇ ಸಂದರ್ಭದಲ್ಲಿ ನಮ್ಮ ಸಿನಿಮಾಗಳು/ ಧಾರಾವಾಹಿಗಳು ಮಾನಸಿಕವಾಗಿ – ಬೌದ್ಧಿಕವಾಗಿ ದರಿದ್ರವಾಗಿವೆ ಎಂಬ ಮಾತನ್ನೂ ಅನೇಕರು ಆಡುತ್ತಾ ಇದ್ದಾರೆ. ಇದು ಕೇವಲ ನಮ್ಮ ಸಿನಿಮಾ/ಧಾರಾವಾಹಿಗಳ ಪ್ರಶ್ನೆಯಲ್ಲ. ಜಗತ್ತಿನಾದ್ಯಂತ ಎಲ್ಲಾ ಭಾಷೆಯ ದೃಶ್ಯ ಮಾಧ್ಯಮ ಕೃತಿಗಳಲ್ಲಿಯೂ “ಯಶಸ್ವಿ”ಯಾಗುವುದು ಶೇಕಡ 2ರಷ್ಟು ಮಾತ್ರ. ಉಳಿದವು “ಸಾಮಾನ್ಯ” ಮತ್ತು “ಸೋತ” ಪಟ್ಟಿಯಲ್ಲಿಯೇ ಇರುತ್ತವೆ. ಸಂಖ್ಯಾ ಬಾಹುಳ್ಯದ ದೃಷ್ಟಿಯಿಂದ ನಮ್ಮಲ್ಲಿ ಕಳೆದ ವರ್ಷ (2014ರಲ್ಲಿ) 200 ಸಿನಿಮಾಗಳು ಸೆನ್ಸಾರ್ ಆಗಿವೆ, 150ರಷ್ಟು ಬಿಡುಗಡೆಯಾಗಿವೆ. ಅವುಗಳಲ್ಲಿ ಯಶ ಕಂಡದ್ದು ಮೂರೋ – ನಾಲ್ಕೋ ಮಾತ್ರ. ಈ ವರ್ಷದ ಎಂಟು ತಿಂಗಳ ಓಟದಲ್ಲಿ ಈ ವರೆಗೆ ಯಶ ಕಂಡ ಪಟ್ಟಿಯಲ್ಲಿ “ಕೃಷ್ಣಲೀಲ”, “ವಜ್ರಕಾಯ”, “ರಂಗಿತರಂಗ” “ರನ್ನ” ಮುಂತಾದ  ಸಿನಿಮಾಗಳಿವೆ. ಮತ್ತಷ್ಟು ಯಶಸ್ಸುಗಳು ಈ ಬಾರಿ ದೊರೆಯಲಿದೆ. ನೆರೆಯ ತಮಿಳು ಮತ್ತು ತೆಲುಗಿನ ಸಿನಿಮಾಗಳ ಸಂಖ್ಯೆಯಲ್ಲಿ ಇದಕ್ಕಿಂತ ಉತ್ತಮ ಫಲಿತಾಂಶವೇನಿಲ್ಲ. ಈ ನಿಟ್ಟಿನಲ್ಲಿ ನನಗೆ ನಮ್ಮ ನಾಳೆಗಳ ಬಗ್ಗೆ ವಿಶೇಷ ನಂಬಿಕೆ ಇದೆ. ನಮ್ಮಲ್ಲಿ ಅನೇಕ ಹೊಸ ಹುಡುಗರು ಹೊಸ ಪ್ರಯತ್ನ ಮಾಡುತ್ತಾ ಇದ್ದಾರೆ. ಬರುವ ದಿನಗಳಲ್ಲಿ ನಮ್ಮಲ್ಲಿಯೂ ಯಶಸ್ವಿ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತದೆ. ಆ ಬಗ್ಗೆ ಅನುಮಾನ ಬೇಕಾಗಿಲ್ಲ. ಆದರೆ “ನಮ್ಮದೆಲ್ಲ ಕಳಪೆ, ಬೇರೆಯವರದ್ದೆಲ್ಲ ಶ್ರೇಷ್ಟ” ಎಂಬ ವಾದವನ್ನು ಒಪ್ಪಲಾಗದು. ಜಗತ್ತಿನ ಯಾವುದೇ ಮೂಲೆಯಲ್ಲಿಯೂ “ಕಳಪೆ ಚಿತ್ರ ಮಾಡುತ್ತೇನೆ” ಎಂದು ಯಾವ ತಯಾರಕನೂ ಹೊರಡುವುದಿಲ್ಲ. ಪ್ರತಿಯೊಬ್ಬರ ಉದ್ದೇಶವೂ ಒಳ್ಳೆಯ ಚಿತ್ರ ಮಾಡಬೇಕು ಎಂಬುದೇ ಆಗಿರುತ್ತದೆ ಮತ್ತು ಆಯಾ ತಯಾರಕ ತನ್ನ ಮಿತಿಯಲ್ಲಿ ಸಿನಿಮಾ ಮಾಡಿರುತ್ತಾನೆ ಅಷ್ಟೆ. ಅವುಗಳಲ್ಲಿ ಕೆಲವು ಜನಮಾನಸದ ಮೆಚ್ಚುಗೆ ಪಡೆಯುತ್ತವೆ. ಕೆಲವು ಗುರುತಿಲ್ಲದಂತೆ ಮರೆಯಾಗುತ್ತವೆ. ಇವುಗಳಲ್ಲಿ ಇರುವ ಒಳಿತನ್ನು ಮೆಚ್ಚಿಕೊಂಡು ಬೆನ್ನು ತಟ್ಟಿದರೆ ಮತ್ತಷ್ಟು ಒಳಿತನ್ನು ಈ ಜನ ಮಾಡಬಲ್ಲರು.

ಪರಭಾಷೆಯ ಬೃಹತ್ ಚಿತ್ರಗಳ ಜೊತೆಗೆ ನಮ್ಮ ಭಾಷೆಯ ಚಿತ್ರಗಳನ್ನು ಹೋಲಿಸಿ ಮಾತಾಡುವವರು ಸಹ ಇದ್ದಾರೆ. ಆ ಸಿನಿಮಾಗಳ ದೃಶ್ಯ ವೈಭವ ಇತ್ಯಾದಿಗಳು ನಮ್ಮಲ್ಲಿ ಇಲ್ಲ ಎಂದು ಬಹುತೇಕರು ಗೊಣಗುತ್ತಾರೆ. ನೀವು ಗುರುತಿಸಿರುವ ಈ ಎಲ್ಲಾ ಕೊರತೆಗಳನ್ನು ನೀಗುವ ಅನೇಕ ಸಿನಿಮಾಗಳು ತಯಾರಾಗುತ್ತಾ ಇರುವುದನ್ನು ನಾನು ಬಲ್ಲೆ. ಆ ಸಿನಿಮಾಗಳು ಇಡೀ ಜಗತ್ತಿನ ಕಣ್ಣನ್ನು ನಮ್ಮ ಕಡೆಗೆ ತಿರುಗಿಸಬಲ್ಲವು ಎಂತಲೂ ನನಗನ್ನಿಸುತ್ತದೆ. ಹಾಗಾಗಿ ನಿಮ್ಮ ಗೊಣಗುಗಳಿಗೆ ಬೇಗ ಮುಕ್ತಿ ಸಿಗುತ್ತದೆ ಎಂದು ಹೇಳಬಲ್ಲೆ. ಆದರೆ ಈ ಗೊಣಗುಗಳಿಗೆ ಪ್ರತಿಯಾಗಿ ಡಬ್ಬಿಂಗ್ ಸಿನಿಮಾಗಳನ್ನು ತರಲು ಕೇಳಬೇಡಿ/ಪ್ರಯತ್ನಿಸಬೇಡಿ ಎಂದು ಕೋರುತ್ತೇನೆ.

ರಿಮೇಕ್ ಹಾವಳಿ

ನಮ್ಮಲ್ಲಿ ರಿಮೇಕ್ ಎಂಬ ಮತ್ತೊಂದು ಅಪದ್ಧವೂ ಚಾಲ್ತಿಯಲ್ಲಿದೆ. ಪರಭಾಷೆಯ ಯಶಸ್ವಿ ಚಿತ್ರಗಳನ್ನು ಯಥಾವತ್ತಾಗಿ ನಕಲು ತೆಗೆಯುವ ಈ ಅಭ್ಯಾಸವೂ ಕೇವಲ ಸಿನಿಮಾದಲ್ಲಿ ಅಲ್ಲ ಧಾರಾವಾಹಿಗಳಲ್ಲೂ ತುಂಬಿಹೋಗಿದೆ. ಮೂಲತಃ ಅನುವಾದದ ಗುಣ ಹೊಂದಿರುವ ಪುನರವತರಣಿಕೆ ಎಂಬ ಪ್ರಕ್ರಿಯೆಯು ಒಳ್ಳೆಯ ಕೃತಿಗಳನ್ನು ನಾಡಿಗರಿಗೆ ನೀಡುವ ಶಕ್ತಿಯುಳ್ಳದ್ದು. ಆದರೆ ಈ ರಿಮೇಕ್ ಹೆಸರಿನಲ್ಲಿ ನಮ್ಮಲ್ಲಿ ನೆರಳಚ್ಚು ಪ್ರತಿಗಳು ಬರುತ್ತಾ ಇವೆ. ಅದಾಗಲೇ ಮೂಲಭಾಷೆಯಲ್ಲಿ ಆ ಸಿನಿಮಾ ನೋಡಿರುವವರು ನಮ್ಮಲ್ಲಿ ಇರುವುದರಿಂದ ಈ ನೆರಳಚ್ಚು ಪ್ರತಿಯನ್ನು ನೋಡುವುದು ಹಿಂಸೆಯಾಗುತ್ತದೆ ಎಂಬುದು ಸತ್ಯ ಸಂಗತಿ. ಇಂತಹವುಗಳನ್ನು ಅದಾಗಲೇ ನೆರೆಯ ರಾಜ್ಯಗಳು ಮೂಲದಲ್ಲಿ ನೋಡಿರುತ್ತಾರಾದ್ದರಿಂದ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಕೆಲಸಕ್ಕೂ ಹಿನ್ನಡೆಯಾಗಿದೆ ಎಂಬುದು ಮತ್ತೊಂದು ಮುಖ್ಯ ಸಂಗತಿ. ಕಳೆದ ಕೆಲವು ವರುಷಗಳಲ್ಲಿ ತಯಾರಾದ ಒಟ್ಟು ಚಿತ್ರಗಳಲ್ಲಿ ಶೇಕಡ 50ರಷ್ಟು ರಿಮೇಕ್ ಚಿತ್ರಗಳು. ಈಗಂತೂ ನಮ್ಮ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ 58 ಧಾರಾವಾಹಿಗಳಲ್ಲಿ 48 ರಿಮೇಕ್ ಧಾರಾವಾಹಿಗಳು. ಇದು ನಿಜಕ್ಕೂ ಹಾವಳಿಯೇ.

ಈ ರಿಮೇಕ್‍ಗಳ ಹಾವಳಿ ಉಂಟಾಗುವುದಕ್ಕೆ ಅನೇಕ ಆರ್ಥಿಕ ಮತ್ತು ವ್ಯಾಪಾರೀ ಕಾರಣಗಳಿರಬಹುದು. ಆದರೆ ಇದು ಕನ್ನಡ ನೆಲದ ಸೊಗಡಿನ ಕತೆಗಳನ್ನು ಕಟ್ಟಲು ಇರುವ ಅವಕಾಶಗಳನ್ನು ಕಡಿಮೆ ಮಾಡುತ್ತಿದೆ. ಕನ್ನಡದ ಬರಹಗಾರರು ಬೆಳೆಯುವುದಕ್ಕೂ ಇದು ಹಿನ್ನಡೆ ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ಸಿನಿಮಾ ರಂಗದಲ್ಲಿರುವ ಎಲ್ಲರೂ ಮನಸ್ಸು ಮಾಡಬೇಕು ಮತ್ತು ನಮ್ಮ ಟಿವಿ ವಾಹಿನಿಯವರು ಸಹ ಪ್ರಯತ್ನ ಪಡಬೇಕು. ಜೊತೆಗೆ ಇಂತಹ ರಿಮೇಕುಗಳು ನೆರಳಚ್ಚು ಪ್ರತಿಯಾಗದಂತೆ, ಆಯಾ ನಿರ್ದೇಶಕ ಮತ್ತು ಬರಹಗಾರರ ಸೃಜನಶೀಲತೆಗೆ ಹೆಚ್ಚು ಅವಕಾಶ ಸಿಗುವಂತಹ ಪ್ರಯತ್ನಗಳಾಗಬೇಕು.

ಆದರೆ ಇದನ್ನು ಕಾರಣ ಮಾಡಿಕೊಂಡು “ಡಬ್ಬಿಂಗ್” ಎಂಬ ವಿಕೃತಿಯನ್ನು ತರಲು ಮಾತಾಡುವುದು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗುತ್ತದೆಯಷ್ಟೆ. ನಾವು ಕನ್ನಡವನ್ನು ಕಟ್ಟಲು ಹೊಸ ಹುಡುಗರನ್ನು ಪ್ರೋತ್ಸಾಹಿಸುವ, ಅವರು ಬರೆದ ಹೊಸ ಕೃತಿಗಳನ್ನು, ತಯಾರಿಸಿದ ಹೊಸ ಚಿತ್ರಕತೆಗಳನ್ನು ಬೆಂಬಲಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು. ನಮ್ಮ ನಾಡಿಗರು ಬೆನ್ನು ತಟ್ಟುವವರಿದ್ದರೆ ಅಪರೂಪದ ಕೆಲಸ ಮಾಡಬಲ್ಲರು ಎಂಬುದಂತೂ ಸತ್ಯ.

ಜ್ಞಾನವಾಹಿನಿಗಳು ಮತ್ತು ಕಾರ್ಟೂನುಗಳು

ಜಗತ್ತಿನ ಎಲ್ಲಾ ಜ್ಞಾನ ವಾಹಿನಿಗಳು ಕನ್ನಡದಲ್ಲಿ ಸಿಗಬೇಕು ಎಂದು ಹಲವರು ಕೇಳುತ್ತಾ ಇದ್ದಾರೆ. ಇದನ್ನು ಯಾರಾದರೂ ಬೇಡ ಎನ್ನಲು ಸಾಧ್ಯವೆ. ನಮ್ಮ ನಾಡಿಗರಿಗೆ ಎಲ್ಲಾ ಜ್ಞಾನವಾಹಿನಿಗಳನ್ನು ಮತ್ತು ಮಕ್ಕಳ ಮನರಂಜನೆಯಾದ ಕಾರ್ಟೂನುಗಳನ್ನು ಕನ್ನಡಕ್ಕೆ ಡಬ್ಬಿಂಗ್‍ನಲ್ಲಿ ತರಬಹುದು. ಈ ಪ್ರಯತ್ನವನ್ನು ಹಲವರು ಮಾಡುತ್ತಲೂ ಇದ್ದಾರೆ. ಯುಜಿಸಿಯ ಎಲ್ಲಾ ಪಾಠಗಳು ಪ್ರತಿದಿನ ಕನ್ನಡಕ್ಕೆ ಡಬ್ ಆಗಿಯೇ ವಿದ್ಯಾರ್ಥಿಗಳಿಗೆ ದೂರದರ್ಶನದ ಮೂಲಕ ಪ್ರಸಾರವಾಗುತ್ತಿದೆ. ಪ್ರಾಣಿಗಳು ಮತ್ತು ಪರಿಸರ ಕುರಿತ ಸಾಕ್ಷ್ಯಚಿತ್ರಗಳನ್ನು ಸಹ ಹಲವರು ಡಬ್ ಮಾಡುತ್ತಾ ಇದ್ದಾರೆ. ಕನ್ನಡದಲ್ಲಿ ಹೀಗೆ ಡಬ್ ಮಾಡಿದ ಕಾರ್ಟೂನ್ ಪ್ರಸಾರ ಮಾಡುವ ಚಿಂಟು ಎಂಬ ವಾಹಿನಿಯೇ ಇದೆ. ಜನರಿಗೆ ಜ್ಞಾನ ಹಂಚುವ ಕೆಲಸ ನಿರಂತರವಾಗಿ ಆಗಬೇಕು. ಅದನ್ನು ಯಾರೂ ಬೇಡ ಎನ್ನಲಾರರು. ಆ ಮಾದರಿಯಲ್ಲಿ ನನ್ನ ಬಂಧುಗಳು ಬಯಸುತ್ತಾ ಇರುವ ಎನ್‍ಜಿಸಿ, ಡಿಸ್ಕವರಿ, ಅನಿಮಲ್ ಪ್ಲಾನೆಟ್ ಎಲ್ಲಾ ವಾಹಿನಿಗಳು ಕನ್ನಡದಲ್ಲಿ ದೊರೆಯಲು ನಾಡಿಗರು ಆಯಾ ವಾಹಿನಿಗಳ ಮೇಲೆ ಒತ್ತಡ ಹೇರಬಹುದು. ಅಂತಹದೊಂದು ಮನವಿಗೆ ನಾನೂ ಸಹ change.org ಯಲ್ಲಿ ಸಹಿ ಹಾಕಿದ್ದೇನೆ. ನೀವೂ ಸಹಿ ಮಾಡಿ. ಕನ್ನಡಿಗರಿಗೆ ಜಗತ್ತಿನ ಎಲ್ಲಾ ಮೂಲೆಗಳಿಂದ ಜ್ಞಾನ ದೊರೆಯಲಿ. ಅದಕ್ಕಾಗಿ ನಾವು ಎಲ್ಲಾ ಕಿಟಕಿಗಳನ್ನೂ ತೆರೆದಿಡೋಣ.

ವಿಶ್ವಸಂಸ್ಥೆಯು ಸೂಚಿಸಿದ ವಿಭಿನ್ನ ಆಯ್ಕೆಗಳು

ಯಾವುದೇ ಭಾಷೆಯ ಕೃತಿಯನ್ನು ಮತ್ತೊಂದು ಭಾಷೆಗೆ ತಲುಪಿಸುವುದಕ್ಕೆ ವಿಶ್ವಸಂಸ್ಥೆಯು 1996ರಲ್ಲಿ ರೂಪಿಸಿದ ಬಾರ್ಸಿಲೋನ ಒಪ್ಪಂದವು ನಾಲ್ಕು ಮಾರ್ಗಗಳನ್ನು ಸೂಚಿಸುತ್ತದೆ. ಅದು 1. ಪುನರವತರಣಿಕೆ (ರಿಮೇಕ್) 2. ಉಪಶೀರ್ಷಿಕೆ (ಸಬ್‍ಟೈಟಲಿಂಗ್), 3. ಕನ್ನಡಾನುವಾದದ ದನಿಯನ್ನು ಮೇಲ್ಪದರದಲ್ಲಿ ಇರಿಸುವುದು (ಪ್ಯಾರಾಫ್ರೇಸಿಂಗ್, 4. ತುಟಿಚಲನೆಗೆ ತಕ್ಕಂತೆ ಮಾತಿನ ಮರುಲೇಪನ (ಡಬ್ಬಿಂಗ್). ಸ್ವತಃ ವಿಶ್ವಸಂಸ್ಥೆಯು ಪ್ರಾದೇಶಿಕ ಭಾಷೆಗಳ ಉಳಿವನ್ನು ಕುರಿತು ಮಾತಾಡುವಾಗ ಮಾತಿನ ಮರುಲೇಪನವನ್ನು ನಾಲ್ಕನೆಯ ಆಯ್ಕೆಯಾಗಿ ಇಡುತ್ತದೆ. ಇನ್ನುಳಿದ ಮಾರ್ಗಗಳು ಬಳಕೆಯಾಗದೆ ನಾಲ್ಕನೆಯದನ್ನು ಆಯ್ಕೆ ಮಾಡಿಕೊಳ್ಳುವುದು ಸರಿಯಲ್ಲ. ಇದೇ ವಿಶ್ವಸಂಸ್ಥೆಯು 2001ರಲ್ಲಿ ಮಾಡಿದ ಮತ್ತೊಂದು ಒಪ್ಪಂದದಲ್ಲಿ ಪ್ರಾದೇಶಿಕ ಭಾಷೆಗಳನ್ನು ಕುರಿತು ಮಾತಾಡುತ್ತಾ ಡಬ್ಬಿಂಗ್ ಎಂಬುದು ದೋಷ ಎಂಬ ಫ್ರಾನ್ಸ್ ದೇಶದ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತದೆ ಮತ್ತು ಸಾಂಸ್ಕೃತಿಕ ಉತ್ಪನ್ನಗಳಾದ ಭಾಷೆ, ಚಲಿಸುವ ಚಿತ್ರಗಳನ್ನು ಕುರಿತ ಚರ್ಚೆಯು ಯಾವತ್ತಿಗೂ ಯುನೆಸ್ಕೋದಡಿಯಲ್ಲಿಯೇ ಆಗಬೇಕು, ಯಾವುದೇ ಕಾರಣಕ್ಕೂ ಡಬ್ಲ್ಯುಟಿಓ ಸಂಸ್ಥೆಯು ಸಾಂಸ್ಕೃತಿಕ ಉತ್ಪನ್ನಗಳನ್ನು ಇತರೆ ಉದ್ಯಮಗಳ ಉತ್ಪನ್ನಗಳಂತೆ ನೋಡಬಾರದು ಎಂದು ಸ್ಪಷ್ಟವಾಗಿ ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತವು ಡಬ್ಲ್ಯುಟಿಒ ಒಪ್ಪಂದದ ಅಡಿ ಆರಂಭಿಸಿದ ಸ್ಪರ್ಧಾತ್ಮಕ ಆಯೋಗವು ಈ ವಿಷಯವನ್ನು ಕುರಿತು ತೀರ್ಪು ನೀಡಲು ಹೊರಡುವುದು ಸಹ ಭಾರತವೇ ಸಹಿ ಹಾಕಿದ ಒಪ್ಪಂದಕ್ಕೆ ವಿರೋಧಿಯಾದುದು. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಆಯೋಗದಿಂದಲೇ ಸಾಂಸ್ಕೃತಿಕ ಉತ್ಪನ್ನಗಳನ್ನು ಕುರಿತ ಚರ್ಚೆಯನ್ನು ಹೊರಗಿಡಬೇಕಿದೆ.

ಈ ಎಲ್ಲಾ ಕಾರಣಗಳಾಚೆಗೆ ನಾನು ಎಲ್ಲಾ ಕಾಲಕ್ಕೂ “ಡಬ್ಬಿಂಗ್ ಸಂಸ್ಕೃತಿಯಲ್ಲ, ಖಾಯಿಲೆ” ಎಂದು ಹೇಳುತ್ತಲೇ ಇರುತ್ತೇನೆ. ಅದಕ್ಕಾಗಿ ಪ್ರಾಣ ಕಳಕೊಳ್ಳುತ್ತೇನೆ, ಬೆಂಕಿ ಹಚ್ಚುತ್ತೇನೆ ಎಂಬ ಉದ್ರೇಕದ ಮಾತಾಡದೆ ನನ್ನ ಕಡೆಯ ದಿನದವರೆಗೂ ನನ್ನ ನಿಲುವನ್ನು ನಾಡಿನ ಜೊತೆಗೆ ಹಂಚಿಕೊಳ್ಳುತ್ತಾ ಇರುತ್ತೇನೆ.

– ಬಿ.ಸುರೇಶ

12 ಆಗಸ್ಟ್ 2015

ರಂಗಕರ್ಮಿ ಹಾಗೂ ಚಲನಚಿತ್ರ ನಿರ್ಮಾಪಕ/ನಿರ್ದೇಶಕ   

Advertisements

1 Response to ““ಡಬ್ಬಿಂಗ್” ಸಂಸ್ಕೃತಿಯಲ್ಲ – ಖಾಯಿಲೆ”


  1. 1 balu August 21, 2015 at 11:00 am

    Sir, we are not for dubbing , against for BAN , as you said around 10 to 15 movies from tamil/hindi/telugu only will be hit movies , let it come and go in dubbed version , who are we to stop , once people rejects slowly it will die, in democracy any BAN is not acceptable.

    Still I remember when computer comes in 1985-86 a big protest from LIC/Bank people – If govt. accepts those arguments … ..

    Sir our request we are not for Dubbing – against BAN


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: