ಎಡಿನ್ಬರಾ ಷೋಕೇಸ್ 2015 – ದಿನಚರಿ – ಮೊದಲ ದಿನ

ಇದೇ ಮೊದಲಬಾರಿಗೆ ನನಗೆ ಎಡಿನ್ಬರಾ ಫ್ರಿಂಜ್ ಮತ್ತು ಷೋಕೇಸ್ ನಾಟಕೋತ್ಸವಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ಈ ಹಿಂದೆ ಯು.ಎಸ್.ಎ. ಮತ್ತು ಸಿಂಗಾಪುರ, ಮಲೇಷಿಯಾ ದೇಶಗಳಿಗೆ ಹೋಗಿದ್ದೆ. ಆದರೆ ಯು.ಕೆ.ಗೆ ಹೋಗುವ ಅವಕಾಶ ಸಿಕ್ಕಿರಲಿಲ್ಲ. ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯವರು ಆಗಸ್ಟ್ ತಿಂಗಳಲ್ಲಿ ನಡೆಯುವ ಎಡಿನ್ಬರಾ ಉತ್ಸವಕ್ಕೆ ಬರುವುದಕ್ಕೆ ಆಹ್ವಾನ ನೀಡಿದಾಗ ನನ್ನ ಕೆಲಸದ ಒತ್ತಡಗಳನ್ನು ದಾಟಿಕೊಂಡು ಹೋಗಬಹುದೇ ಎಂಬ ಭಯವಿತ್ತು. ಆದರೂ ಹೊಸ ಆನಂದಕ್ಕಾಗಿ ಒಪ್ಪಿಕೊಂಡೆ. ಎರಡು ತಿಂಗಳು ಸಿದ್ಧತೆ. ಹಗಲಿರುಳೆನ್ನದೆ ನನ್ನ ಧಾರಾವಾಹಿಗಳಿಗೆ ದುಡಿದು ಹದಿನೈದು ದಿನಗಳ ರಜೆಗೆ ವ್ಯವಸ್ಥೆ ಮಾಡಿಕೊಂಡೆ. ಚಳಿದೇಶಕ್ಕೆ ಹೋಗಲು ಬೇಕಾದ ಬೆಚ್ಚಗಿನ ಬಟ್ಟೆಗಳ ಖರೀದಿ ಮಾಡಿಕೊಂಡು ಅಂತೂ ಆಗಸ್ಟ್ 22ರ ರಾತ್ರಿ ಬೆಂಗಳೂರಿನಿಂದ ಹೊರಟೆ. ಜೊತೆಗೆ ಸಮುದಾಯದ ವೆಂಕಟೇಶ್ ಪ್ರಸಾದ್ ಮತ್ತು ರಂಗಶಂಕರದ ಸೂರಿ. ಜೊತೆಗಾರರಿದ್ದಾಗ ಇಂತಹ ಪ್ರಯಾಣಗಳು ನಿಜಕ್ಕೂ ಆನಂದ ಕೊಡುತ್ತವೆ. ಅದರಲ್ಲೂ ಸೂರಿ ಉತ್ಸವಕ್ಕೆ ಹಳಬ. ಹೀಗಾಗಿ ಅನುಭವಿ ಒಬ್ಬಾತ ದಾರಿ ತೋರಿಸುತ್ತಾ ಇರುವಾಗ ಜೊತೆಯಲ್ಲಿ ನಡೆಯುವುದು ಒಂದು ಆನಂದ.

ಆಗಸ್ಟ್ 22ರ ರಾತ್ರಿ 12ಕ್ಕೆ ಮನೆ ಬಿಟ್ಟೆವು. ಒಂದೆರಡು ಧಾರಾವಾಹಿ/ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನನ್ನ ಮುಖವನ್ನು ಗುರುತು ಹಿಡಿಯುವವರು ವಿಮಾನ ನಿಲ್ದಾಣದ ಇಮಿಗ್ರೇಷನ್ ವಿಭಾಗದಲ್ಲಿ ಇದ್ದುದರಿಂದ ಕೆಲಸಗಳು ಬೇಗ ಆದವು. ಬೆಂಗಳೂರು ವಿಮಾನ ನಿಲ್ದಾಣದಿಂದ ಆಗಸ್ಟ್ 23ರ ಹಗಲಿನ 4 ಗಂಟೆಯ ವಿಮಾನ ಏರಿದೆವು. ದೋಹಾದಲ್ಲಿ ವಿಮಾನ ಬದಲಿಸಿ ಎಡಿನ್ಬರಾಕ್ಕೆ ನೇರ ವಿಮಾನ ಏರಿದೆವು. ಯು.ಕೆ.ಯ ಇಮಿಗ್ರೇಷನ್ ಕೇಂದ್ರದಲ್ಲಿಯೂ ಆಹ್ವಾನ ಪತ್ರಗಳು ಇದ್ದ ಕಾರಣ ಎಲ್ಲವೂ ಸಲೀಸಾಯಿತು. ಎಡಿನ್ಬರಾ ನಗರದಲ್ಲಿ ಆಗಸ್ಟ್ 23ರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಇದ್ದೆವು.

23 ಆಗಸ್ಟ್ 2015

ಎಡಿನ್ಬರಾ ಒಂದು ಸುಂದರ ನಗರ. ವರ್ಷದಲ್ಲಿ ಮೂರು – ನಾಲ್ಕು ತಿಂಗಳು ಉತ್ಸವಗಳಲ್ಲಿ ಬದುಕುವ ನಗರ. ಇಲ್ಲಿ ರಂಗೋತ್ಸವ, ಸಿನಿಮೋತ್ಸವ, ಪುಸ್ತಕೋತ್ಸವ, ಸಂಗೀತೋತ್ಸವ, ನೃತ್ಯೋತ್ಸವ, ಹೀಗೆ ಅನೇಕ ವಾರ್ಷಿಕ ಉತ್ಸವಗಳು ನಡೆಯುತ್ತವೆ. ಇಲ್ಲಿನ ಸಂಸ್ಕೃತಿ ಇಲಾಖೆಯು ಉತ್ಸವಗಳಿಗೆ ಅತಿಹೆಚ್ಚು ಅನುದಾನವನ್ನು ಸಹ ನೀಡುತ್ತದೆ. ಜಗತ್ತಿನ ಎಲ್ಲಾ ಮೂಲೆಗಳಿಂದ ಎಲ್ಲಾ ಬಗೆಯ ಜನ ನಿತ್ಯವು ಇಲ್ಲಿಗೆ ಬರುತ್ತಾರೆ. ಹೀಗಾಗಿ ಇಲ್ಲಿನ ಜನರಿಗೆ ಊರಿಗೆ ಬಂದ ಹೊಸಬರ ಜೊತೆಗೆ ಮಾತಾಡುವ ಮತ್ತು ದಾರಿ ತೋರುವುದು ಅಭ್ಯಾಸವಾಗಿ ಹೋಗಿದೆ. ಆ ಜನ ನಮ್ಮನ್ನು ಅತಿಥಿಗಳು ಎಂಬ ಪ್ರೀತಿ ಮತ್ತು ಸೌಜನ್ಯ ತೋರುತ್ತಾ ನಮ್ಮ ಗುರಿಗಳ ಕಡೆಗೆ ದಾಟಿಸುತ್ತಾರೆ.

ನನಗಂತೂ ವಿಮಾನ ನಿಲ್ದಾಣದಲ್ಲಿ ಇದ್ದ ನೀರು ಕೊಳ್ಳುವ ಮೆಷಿನಿನ್ನಲ್ಲಿ ಮೊದಲ ದಿನವೇ ಹತ್ತು ಪೌಂಡುಗಳ ನೋಟು ಸಿಕ್ಕಿಕೊಂಡಾಗ ಸ್ಥಳೀಯರೊಬ್ಬರು ಸಹಾಯಕ್ಕೆ ನಿಂತು, ಸಿಕ್ಕಿ ಬಿದ್ದ ಹಣವನ್ನು ಹೊರತೆಗೆದು ಕೊಟ್ಟದ್ದಲ್ಲದೆ, ನನಗೆ ಬೇಕಿದ್ದ ನೀರಿನ ಬಾಟಲಿಗಳು ಆ ಮೆಷಿನ್ನಿಗಿಂತ ಸೋವಿಗೆ ಸಿಗುವ ಜಾಗವನ್ನೂ ತೋರಿಸಿ ಸಹಾಯ ಮಾಡಿದರು. ಮೊದಲ ದಿನವೇ ಕಕ್ಕಾವಿಕ್ಕಿಯಾಗಿದ್ದ ನನಗೆ ಸಿಕ್ಕ ಆ ಸಹಾಯವನ್ನು ಮರೆಯುವಂತಿಲ್ಲ.

ನಂತರ ವಿಮಾನ ನಿಲ್ದಾಣದಿಂದ ನಗರಕ್ಕೆ ಡಬಲ್ ಡೆಕ್ಕರ್ ಬಸ್ಸಿನಲ್ಲಿ ಪ್ರಯಾಣ. ಆಸುಪಾಸಿನಲ್ಲಿ ಕಾಣುವ ನಗರದ ಹೊರಭಾಗದ ವಿವರವನ್ನು ಗಮನಿಸುತ್ತಾ ಬಂದೆ. ಬಹುತೇಲ ನಮ್ಮೂರುಗಳ ಹಾಗೆಯೇ ಇರುವ ಈ ಊರಿನ ಸೌಂದರ್ಯ ಕಾಪಾಡಲು ಆ ನಗರಿಗರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ, ಯಶಸ್ವಿಯೂ ಆಗಿದ್ದಾರೆ. ನಗರದಾಚೆ ಯಾವುದೇ ಮನೆಗೆ ಎರಡಂತಸ್ತಿಗಿಂತ ಹೆಚ್ಚಿನ ಎತ್ತರದ ಮನೆ ಕಟ್ಟಲು ಅವಕಾಶ ನೀಡಿಲ್ಲ. ಎಲ್ಲಾ ಮನೆಗಳನ್ನು ಹೆಂಚಿನ ಮಾಡಲ್ಲೇ ಕಟ್ಟಲಾಗಿದೆ. ಹೀಗಾಗಿ ಇಡಿಯ ಊರಿಗೆ ಒಂದು ಸಮವಸ್ತ್ರ ತೊಟ್ಟ ಗುಣವಿದೆ. ಎಲ್ಲಾ ಮನೆಗೂ ಇರುವ ಚಿಮಣಿಗಳು ಸಹ ನಗರಕ್ಕೆ ಒಂದು ವಿಶಿಷ್ಟ ವಿನ್ಯಾಸವನ್ನು ನೀಡಿವೆ. ಬಸ್ಸು ಮತ್ತು ಸರಕು ಸಾಗಣಿಕೆಯ ವಾಹನಗಳು ಓಡಾಡುವ ರಸ್ತೆಗಳಿಗೆ ಮಾತ್ರ ಡಾಂಬರು ಹಾಕಲಾಗಿದೆ. ಅದು ಸಹ ಹೆಚ್ಚು ದಪ್ಪ ಕಲ್ಲುಗಳ ನಡುವೆ ಮಟ್ಟಸವಾಗಿ ಸುರಿದ ಡಾಂಬರು. ಆ ಕಲ್ಲುಗಳು ವಾಹನಗಳನ್ನು ಚಳಿಗಾಲ, ಮಳೆಗಾಲದಲ್ಲೂ ಜಾರದಂತೆ ತಡೆಯುತ್ತವೆ. ಉಳಿದ ರಸ್ತೆಗಳಿಗೆ ಇಟ್ಟಿಗೆಯ ಆಕಾರದ ಕಲ್ಲುಗಳನ್ನು ಒಂದಂಗುಲದ ಅಂತರದಲ್ಲಿ ಇರಿಸಲಾಗಿದೆ. ನಡುವೆ ಮಣ್ಣಿದೆ. ಇದರಿಂದಾಗಿ ಮಳೆಯ ನೀರು ರಸ್ತೆಯಲ್ಲಿ ಇಂಗುತ್ತದೆ. ಅಂತರ್ಜಲ ಬತ್ತದಂತೆ ರಸ್ತೆಗಳು ಸಹ ಕಾಪಾಡುತ್ತವೆ. (ನಮ್ಮ ದೇಶದಲ್ಲಿ ಇಂತಹ ರಸ್ತೆಗಳನ್ನು ಮಾಡಿ, ನಿರ್ವಹಿಸುವುದು ಕಷ್ಟ. ನಮ್ಮಲ್ಲಿನ ಮಳೆ, ನಮ್ಮಲ್ಲಿನ ಅತಿ ಹೆಚ್ಚು ಭಾರೀ ವಾಹನಗಳ ಸಂಚಾರದ ಕಾರಣವಾಗಿ ಈ ಮಾದರಿಯನ್ನು ನಮ್ಮಲ್ಲಿ ಬಳಸಲಾಗದು.) ನಗರದ ಮಧ್ಯಭಾಗದಲ್ಲಿ ಹಲೆಯ ಕಾಲದ ಬಹುತೇಕ ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ತೀರಾ ವಿಶಾಲ ಎನಿಸುವ ರಸ್ತೆಗಳೇನಿಲ್ಲ. ಆದರೆ ಟ್ರಾಫಿಕ್ ಜಾಮ್ ಆಗಿದ್ದು ಕಾಣುವುದಿಲ್ಲ. ರಸ್ತೆಯಲ್ಲಿ ವಾಹನಗಳ ಓಡಾಟವು ಥೇಟ್ ಭಾರತದ ಹಾಗೆ. (ವಾಸ್ತವವಾಗಿ ಇಲ್ಲಿನವರ ಹಾಗೆ ನಾವು ಆದದ್ದು ಎಂದರೆ ಸರಿಯಾಗುತ್ತದೆ. ನಮ್ಮ ದೇಶದ ತುಂಬಾ ವಸಾಹತುಶಾಹಿಯ ನೆನಪು ಸದಾ ಕಾಲ ಜೀವಂತವಾಗಿ ಇರುತ್ತದೆ.)

ಎಡಿನ್ಬರಾ ಉತ್ಸವಗಳಿಂದ ಬದುಕುವ ಊರು ಅನ್ನಬಹುದು. ಇಲ್ಲಿ ವರ್ಷದ ಆರು ತಿಂಗಳು ಒಂದಲ್ಲ ಒಂದು ಉತ್ಸವ ನಡೆಯುತ್ತದೆ. ಹೀಗಾಗಿ ಇಲ್ಲಿನ ಜನ ಸೌಜನ್ಯಪರರು. ಯಾರು ಯಾವ ಸಹಾಯ ಕೇಳಿದರೂ ತಟ್ಟನೆ ಸಹಾಯಕ್ಕೆ ಬರುತ್ತಾರೆ. ನಾವು ಭಾರತೀಯರು ಯಾವುದಕ್ಕಾದರೂ ಖರ್ಚು ಮಾಡುವಾಗೆಲ್ಲಾ ಭಾರತೀಯ ದುಡ್ಡಿಗೆ ಹೊಂದಿಸಿ ಆಲೋಚಿಸುವವರು. ಇಲ್ಲಿ ಒಂದು ಬಾಟಲಿ ನೀರಿಗೆ 1.5 ಪೌಂಡ್ ಎಂದಾಗ ಭಾರತೀಯ ಹಣಕ್ಕೆ ಪರಿವರ್ತಿಸಿ ನೀರಿಗೂ ಇಷ್ಟೊಂದು ದುಡ್ಡಾ ಎಂದು ಬೆರಗಾಗುವುದು ಸಹಜ. ನಮ್ಮ ದೇಶದ ಹಣ ನಿರಂತರವಾಗಿ ಪೌಂಡು ಮತ್ತು ಡಾಲರ್ ಎದುರಿಗೆ ಕುಬ್ಜವಾಗುತ್ತಾ ಇರುವುದರ ಹಿಂದಿನ ಅಸಡ್ಡಾಳ ಆರ್ಥಿಕ ನೀತಿಗಳನ್ನು ಕುರಿತು ನಾವು ಯೋಚಿಸುವುದು ಕಡಿಮೆ. ಎಲ್ಲಾ ಕುರಿಗಳು ಒಂದು ವಾದದ ಹಿಂದೆ ಬಿದ್ದು ಯಾರೊ ಒಬ್ಬ ನಾಯಕನನ್ನು ಆಡಳಿತದ ಕುರ್ಚಿಯಲ್ಲಿ ಕೂರಿಸಿದಾಗ, ಮುಂದೆ ಆಗಬಹುದಾದ ಪರಿಣಾಮಗಳ ಕಲ್ಪನೆಯೂ ನಮಗಿರುವಿದಿಲ್ಲ. ಇರಲಿ ಬಿಡಿ. ಎಡಿನ್ಬರಾ ಕುರಿತು ಮಾತಾಡುವಾಗ ನಮ್ಮ ದೇಶದ ರಾಜಕೀಯ ವ್ಯವಸ್ಥೆಯ ಮಾತೇಕೆ?

ನಾವು ಆ ದಿನ ಸಂಜೆ 4ರ ಒಳಗೆ ಬ್ರಿಟಿಷ್ ಕೌನ್ಸಿಲ್‍ನವರಲ್ಲಿ ನೋಂದಣಿ ಮಾಡಿಸಬೇಕಿತ್ತು. ಹೀಗಾಗಿ ಊರು ತಲುಪಿದ ಕೂಡಲೇ ನಮಗೆಂದು ಗೊತ್ತುಪಡಿಸಿದ್ದ ಹೋಟೆಲಿನಲ್ಲಿ ಲಗೇಜುಗಳನ್ನು ಇರಿಸಿ, ರೂಮು ನಂತರ ತೆಗೆದುಕೊಳ್ಳುತ್ತೇವೆ ಎಂದು ಎಡಿನ್ಬರಾ ಯೂನಿವರ್ಸಿಟಿಯ ಕಾರ್ಬನ್ ಸ್ಟಡಿ ಸೆಂಟರ್ನಲ್ಲಿ ಬ್ರಿಟಿಷ್ ಕೌನ್ಸಿಲ್‍ನವರು ಮಾಡಿಕೊಂಡಿದ್ದ ಕಚೇರಿಯನ್ನರಸಿ ಹೊರಟೆವು. ಹೊಸ ನಗರಗಳಲ್ಲಿ ನಮ್ಮ ಸ್ಮಾರ್ಟ್ ಫೋನ್ ಸಹಾಯ ಪಡೆದೇ ರಸ್ತೆ ಹುಡುಕುವ ಪರಿಪಾಟ ಇರುವವರಿಗೆ ಎಡಿನ್ಬರಾದ ನಗರಿಗರನ್ನು ಕೇಳುವ ವ್ಯವಧಾನ ಇರಲಿಲ್ಲ. ಹೀಗಾಗಿ ನಾವು ಹೋಗಬೇಕಿದ್ದ ಕಟ್ಟಡವು ಆಸುಪಾಸಲ್ಲೇ ಇದ್ದರೂ ನಾಲ್ಕಾರು ರಸ್ತೆಗಳನ್ನು ಅಡ್ಡಡ್ಡ ಉದ್ದುದ್ದ ತಿರುಗಿ, ಕಡೆಗೂ ನಾವು ತಲುಪಬೇಕಿದ್ದ ಜಾಗ ತಲುಪಿದೆವು. ನಾವಿರುವ ಹೋಟೆಲಿನಿಂದ ಸಾಕಷ್ಟು ಹತ್ತಿರವಿದ್ದ ಜಾಗ ಹುಡುಕಲು ಸಾಕಷ್ಟು ಸಾಹಸ ಮಾಡಿದ್ದೆವು. ಅಂತೂ ತಲುಪಬೇಕಾದ ಜಾಗ ತಲುಪಿ, ನೋಂದಣಿ ಪ್ರಕ್ರಿಯೆ ಮುಗಿಸಿ, ನಾವು ನೋಡಬೇಕಿದ್ದ ನಾಟಕಗಳ ಟಿಕೀಟು ತೆಗೆದುಕೊಂಡು ಹೊರಟೆವು. ಆ ಹೊತ್ತಿಗೆ ಸಂಜೆ 6. ಆದರೆ ನಮ್ಮಲ್ಲಿನ ಸಂಜೆ 4ರ ಹಾಗಿತ್ತು ಹಗಲು. ವಾಪಸ್ ಹೋಟೆಲ್ಲಿಗೆ ಬರುವಾಗ ನಾವು ಎಷ್ಟು ಹತ್ತಿರದಲ್ಲಿದ್ದೆವು. ನಾವು ನಗರಿಗರನ್ನು ಕೇಳಿದ್ದರೆ ಸುಲಭವಾಗಿ ನಮ್ಮ ಜಾಗ ತಲುಪಬಹುದಿತ್ತಲ್ಲವೇ ಎಂದು ನಮ್ಮನ್ನು ನಾವೇ ಗೇಲಿ ಮಾಡಿಕೊಂಡು ನಕ್ಕೆವು.

ನಗರಕ್ಕೆ ನಗರವೇ ರಂಗಭೂಮಿಯಾಗಿರುವುದು…!

ಎಡಿನ್ಬರಾ ನಗರವು ಈ ಉತ್ಸವಕ್ಕಾಗಿ ಸಡಗರದಿಂದ ಸಿದ್ಧವಾಗಿತ್ತು. ಪ್ರತಿ ಅಂಗಡಿಯ ಎದುರಲ್ಲಿಯೂ ಪ್ರದರ್ಶನವಾಗುತ್ತಾ ಇರುವ ನಾಟಕಗಳ ಪ್ರಚಾರಪತ್ರಗಳು ಭಿತ್ತಿಚಿತ್ರಗಳು ಇದ್ದೇ ಇರುತ್ತವೆ. ನಮ್ಮಲ್ಲಿ ಯಾವುದಾದರೂ ನಾಟಕದ ಭಿತ್ತಿ ಚಿತ್ರ ಅಂಟಿಸಲು ಹೋಟೆಲಿನವರ ಬಳಿ ಎಷ್ಟು ಗೋಗರೆಯಬೇಕು ಎಂಬುದನ್ನು ನೆನೆದಾಗ ಈ ನಗರದ ಪ್ರತಿ ಹೋಟೆಲ್ ಬಗ್ಗೆ ಪ್ರೀತಿ ಹೆಚ್ಚಾಯಿತು. ರಸ್ತೆಯ ನಡುವೆ ಇರುವ (ವಿಶೇಷವಾಗಿ ರಾಯಲ್ ಮೈಲ್ ರಸ್ತೆಯಲ್ಲಿ) ಪುಟ್ಟ ವೇದಿಕೆಯಲ್ಲಿ ಜಗತ್ತಿನ ಎಲ್ಲಾ ಮೂಲೆಗಳಿಂದ ಬಂದಿರುವ ಕಲಾವಿದರು ಸಣ್ಣ ನಾಟಕಗಳ ಪ್ರದರ್ಶನ, ಜಾದೂ ಪ್ರದರ್ಶನ, ಸಂಗೀತ ಮೇಳ ಮಾಡುತ್ತಾ ಇರುತ್ತವೆ. ನಮ್ಮೂರುಗಳ ಸಂತೆಯಂತೆ ಕಾಣುವ ಈ ವಾತಾವರಣದ ತುಂಬ ಪ್ರತಿ ಮೂಲೆಯಲ್ಲೂ ಒಂದು ರಂಗಮಂದಿರವೂ ಇದೆ. ಸರಿಸುಮಾರು 136 ಪ್ರದರ್ಶನ ಮಂದಿರಗಳಲ್ಲಿ ದಿನವೆಲ್ಲಾ ಪ್ರದರ್ಶನಗಳಿವೆ. ಎಲ್ಲೆಲ್ಲಿಯೂ ಜನ. ಪ್ರತಿ ನಾಟಕ ಪ್ರದರ್ಶನ ನೊಡುವುದಕ್ಕೂ ಉದ್ದಾನುದ್ದ ಸಾಲುಗಟ್ಟಿ ನಿಂತ ನೋಡುಗರು. ರಂಗಭೂಮಿಯವರಿಗೆ ನಿಜಕ್ಕೂ ಮಹದಾನಂದ ಕೊಡುವ ತಾಣವಿದು. ಕಳಪೆ ಎಂಬ ನಾಟಕವೇ ಇಲ್ಲದ ಬೃಹತ್ ಪಟ್ಟಿಯಲ್ಲಿ ನಿಮ್ಮದೆಂಬ ಆಯ್ಕೆ ಮಾಡಿಕೊಳ್ಳುವುದೇ ಬೃಹತ್ ಕಷ್ಟ. ಅವರಿವರ ಸಹಾಯ ಪಡೆದು ನಾವು ದಿನವೊಂದಕ್ಕೆ ಕನಿಷ್ಟ ಮೂರು – ಗರಿಷ್ಟ ಐದು ಎಂದು ಒಟ್ಟು 20 ನಾಟಕಗಳಿಗೆ ಟಿಕೀಟು ತೆಗೆದುಕೊಂಡೆವು. ಅವುಗಳನ್ನು ನಾಳೆಯಿಂದ (ಆಗಸ್ಟ್ 24, 2015ರಿಂದ) ನೋಡುವುದಿದೆ.

ನೋಂದಣಿ ಕೆಲಸ ಮುಗಿಸಿದ ಮೇಲೆ ಎಡಿನ್ಬರಾ ನಗರದಲ್ಲಿನ ಬೀದಿಗಳಲ್ಲಿ ರಾತ್ರಿ 1ರ ವರೆಗೂ ಓಡಾಡಿದೆವು. ಅದೊಂದು ಅದ್ಭುತ ಅನುಭವ. ರಸ್ತೆಗೆ ರಸ್ತೆಯೇ ರಂಗಮಂದಿರವಾಗುವುದನ್ನ ನೋಡುವುದೇ ಆನಂದ. ನಾಳೆ ಏನಾಯಿತೆಂದು ನಾಳೆ ಹೇಳುತ್ತೇನೆ.

– ಬಿ.ಸುರೇಶ

23 ಆಗಸ್ಟ್ 2015

ಎಡಿನ್ಬರಾ, ಮೊಟೆಲ್ ಒನ್

Advertisements

0 Responses to “ಎಡಿನ್ಬರಾ ಷೋಕೇಸ್ 2015 – ದಿನಚರಿ – ಮೊದಲ ದಿನ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: