ಎಡಿನ್ಬರಾ ದಿನಚರಿ – 24 ಆಗಸ್ಟ್ 2015

ಎರಡನೇ ದಿನ

ಭಾರತೀಯ ಕಾಲಮಾನಕ್ಕೆ ಹೊಂದಿಕೊಂಡಿದ್ದ ದೇಹವಿದು. ಹೀಗಾಗಿ ಭಾರತದ ಐದು ಗಂಟೆಗೆಲ್ಲಾ ಎಚ್ಚರವಾಯಿತು. ಆದರಲ್ಲಿ ಇನ್ನೂ ನಡುರಾತ್ರಿ. ಮತ್ತೆ ಮಲಗುವ ಪ್ರಯತ್ನ ಮಾಡಿದೆ. ಅಲ್ಲಿನ ಆರು ಗಂಟೆಗೆ ಗಡಿಯಾರದಲ್ಲಿ ಅಲಾರಂ ಇರಿಸಿಯೇ ಮಲಗಿದೆ. ಆದರೆ ಚಳಿ ದೇಶದಲ್ಲಿ ನಿದ್ದೆ ಬಂದವನನ್ನು ಅಲಾರಂ ಸದ್ದು ಎಬ್ಬಿಸುವುದುಂಟೇ? ಹೇಗೋ ಅಲ್ಲಿನ ಏಳು ಗಂಟೆಗೆ ಎದ್ದು, ಸಿದ್ಧನಾಗಿ ನಾವಿದ್ದ ಹೋಟೆಲಿನಲ್ಲಿಯೇ ಇದ್ದ ಮುಂಜಾನೆಯ ತಿಂಡಿ ವ್ಯವಸ್ಥೆಯನ್ನು ಸೇರಿಕೊಂಡೆ. ಅಲ್ಲಿ ನಮ್ಮ ಹಾಗೆಯೇ ಜಗತ್ತಿನ ಅನೇಕ ದೇಶಗಳಿಂದ ಬಂದಿದ್ದ ಪ್ರತಿನಿಧಿಗಳಿದ್ದರು. ಬ್ರಿಟಿಷ್ ಕೌನ್ಸಿಲ್‍ನ ವಿವೇಕ್ ಮನ್ಸುಖಾನಿ ಅವರನ್ನು ಆವರೆಗೆ ಬರಿ ಪತ್ರಗಳಲ್ಲಿ ಮಾತಾಡಿಸಿದ್ದೆ. ಈಗ ಖುದ್ದು ಭೇಟಿ ಸಾಧ್ಯವಾಯಿತು.

ಅದೇ ದಿನ ಬೆಳಗಿನ ಒಂಬತ್ತು ಗಂಟೆಗೆ ಎಡಿನ್ಬರಾ ಯೂನಿವರ್ಸಿಟಿಯ ಕಾರ್ಬನ್ ಸೆಂಟರ್‍ನಲ್ಲಿ ಎಲ್ಲಾ ಭಾರತೀಯ ಪ್ರತಿನಿಧಿಗಳ ಪುಟ್ಟ ಸಭೆ. ಕ್ಯಾಥಿ ಗೋಮೆಜ್‍಼ ಅವರು ಈ ಸಭೆಯಲ್ಲಿ ಪ್ರಾಸ್ತವಿಕವಾಗಿ ಮಾತಾಡಿದರು. ಎಡಿನ್ಬರಾ ಫ್ರಿಂಜ್ ಉತ್ಸವದಲ್ಲಿನ ಭಾಗವಾಗಿರುವ ಬ್ರಿಟಿಷ್ ಕೌನ್ಸಿಲ್‍ನ ಷೋಕೇಸ್ ಅಂದರೆ ಏನು ಎಂದು ತಿಳಿಸಿದರು. ಈ ಷೋಕೇಸ್‍ನಲ್ಲಿ ಒಟ್ಟು 27 ನಾಟಕಗಳಿರುತ್ತವೆ. ಇವು ವಿದೇಶಗಳಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಬಹುದಾದ ನಾಟಕಗಳು ಮಾತ್ರ. ಇವುಗಳನ್ನು ಬ್ರಿಟಿಷ್ ಕೌನ್ಸಿಲ್ ನಿಯೋಜಿಸಿದ ಸಮಿತಿಯೇ ಆರಿಸಿರುತ್ತದೆ. ಈ ನಾಟಕಗಳನ್ನು ನೋಡಿ ನಮ್ಮಲ್ಲಿಗೆ ಕರೆಸಿಕೊಳ್ಳಬಹುದಾದವನ್ನು ಗುರುತಿಸಿ, ಸಂಬಂಧಪಟ್ಟವರ ಜೊತೆಗೆ ಮಾತಾಡಿ ಮುಂದಿನ ಯೋಜನೆ ಮಾಡಿಕೊಳ್ಳಬೇಕಾದ್ದು ಭಾರತದಿಂದ ಬಂದ ಪ್ರತಿನಿಧಿಗಳ ಮೂಲ ಉದ್ದೇಶ. ಈ ವಿವರಗಳನ್ನು ಕ್ಯಾಥಿ ಗೋಮೆಜ಼್ ಮತ್ತು ನೀಲ್ ವೆಬ್ ಅವರು ನೀಡಿದರು. ಯಾವ ಯಾವ ನಾಟಕಗಳು ಎಲ್ಲೆಲ್ಲಿ ನಡೆಯುತ್ತಿವೆ, ಹೇಗೆ ಆ ಜಾಗವನ್ನು ತಲುಪಬಹುದು ಎಂದು ತಿಳಿಸಿದರು. ಒಟ್ಟು ಹದಿನೈದು ಪ್ರದರ್ಶನ ಮಂದಿರದಲ್ಲಿ ಷೋಕೇಸ್‍ನ ನಾಟಕಗಳು ನಡೆಯುತ್ತಾ ಇದ್ದವು. ಅದಲ್ಲದೆ ಒಟ್ಟು ಉತ್ಸವದ ನಾಟಕಗಳು ಬೀದಿ ಬೀದಿಗಳಲ್ಲಿ, ಸಣ್ಣ ಸಣ್ಣ ರಂಗಮಂದಿರಗಳಲ್ಲೂ ನಡೆಯುತ್ತಾ ಇತ್ತು. ನಾವು ಮೊದಲ ತಿಳುವಳಿಕೆಯ ಸಭೆ ಮುಗಿದ ಕೂಡಲೇ ಸಮ್ಮರ್‍ಹಾಲ್‍ ಪ್ರದರ್ಶನ ಮಂದಿರದಲ್ಲಿ 10 ಗಂಟೆಗೆ ಪ್ರದರ್ಶನವಾಗಲಿದ್ದ ನಾಟಕವನ್ನು ನೋಡಲು ಓಡಿದೆವು.

ಎ ಸ್ಟ್ರಿಂಗ್ ಸೆಕ್ಷನ್

At the beginning

At the beginning

ರೆಕ್‍ಲೆಸ್‍ ಸ್ಲೀಪರ್ಸ್ ಎಂಬುದು ಆಂಗ್ಲೋ ಬೆಲ್ಜಿಯಂ ತಂಡ. ಈ ತಂಡವು ಎರಡು ದಶಕಗಳಿಂದ ನಿರಂತರವಾಗಿ ಪ್ರಾಯೋಗಿಕ ನಾಟಕಗಳನ್ನು ಅಭಿನಯಿಸುತ್ತಾ ಇದೆ. “ಎ ಸ್ಟ್ರಿಂಗ್ ಸೆಕ್ಷನ್” ಈ ತಂಡದ ಇತ್ತೀಚಿನ ಪ್ರಯೋಗ. ನೃತ್ಯ ಸಂಯೋಜಕ ಲೀನ್ ಡೆ ವೈಲ್ಡ್ ಮತ್ತು ಸೆಲ್ಲೋ ಸಂಗೀತಗಾರ ಸೂ ಆ ಲೀ ಅವರಿಬ್ಬರ ಪ್ರಯತ್ನವಾಗಿ ಈ ನಾಟಕ ಸಿದ್ಧವಾಗಿದೆ. ವೇದಿಕೆಯ ಮೇಲೆ ಆರು ಚೇರುಗಳು ಮಾತ್ರ ಇರುತ್ತವೆ. ಅವುಗಳ ಮೇಲೆ ಆರು ಜನ ಕಪ್ಪು ಬಟ್ಟೆ ಧರಿಸಿದ ಹೆಂಗಸರು ಬಂದು ಕೂರುತ್ತಾರೆ. ಅವರ ಕೈಯಲ್ಲಿ ಗರಗಸವಿದೆ. ಅವರಷ್ಟೂ ಜನ ನಾಟಕದುದ್ದಕ್ಕೂ ತಾವು ಕುಳಿತ ಕುರ್ಚಿಗಳ ಕಾಲುಗಳನ್ನು ಕತ್ತರಿಸುತ್ತಾ ಹೋಗುತ್ತಾರೆ. ಈ ಹಾದಿಯಲ್ಲಿ ಯಾವುದೇ ಕ್ಷಣದಲ್ಲೂ ಕುರ್ಚಿಯಿಂದ ಏಳದೆ, ನಿರಂತರವಾಗಿ ಮರದ ಕುರ್ಚಿಯನ್ನು ಕತ್ತರಿಸುತ್ತಾ ಹೋಗುವುದು ಅನೇಕ ಧ್ವನಿ ಸಾಧ್ಯತೆಗಳನ್ನು ಪಡೆಯುತ್ತದೆ. ಮೊದಲಿಗೆ ಎನ್‍ಸೆಂಬಲ್‍ನ ಹಾಗೆ ಕಾಣುವ ಈ ಕ್ರಿಯೆ ನಿಧಾನವಾಗಿ ಇಡಿಯ ಜಗತ್ತನ್ನು ಕುರಿತ ವ್ಯಂಗ್ಯ ಎನಿಸುತ್ತದೆ. ಆಧುನಿಕ ಜೀವನ ಎಂಬುದು ಹೇಗೆ ನಿರಂತರವಾಗಿ ಎಲ್ಲವನ್ನೂ ನಾಗರೀಕತೆಯ ಹೆಸರಲ್ಲಿಯೇ ಕೆಡವುತ್ತದೆ ಎಂದು ಸೂಚಿಸುವ ಈ ನಾಟಕದಲ್ಲಿ ಮಾತು ಎಂಬುದು ಇಲ್ಲವೇ ಇಲ್ಲ. ನಾಟಕದುದ್ದಕ್ಕೂ ಕೇವಲ ಗರಗಸವು ಮರ ಕುಯ್ಯುವ ಶಬ್ದ ಮಾತ್ರ. ಅಂತಿಮವಾಗಿ ಎಲ್ಲಾ ಕುರ್ಚಿಗಳನ್ನು ಕತ್ತರಿಸಿ ಮುಗಿಸಿದ ಮೇಲೆ ಆರು ಜನ ಪಾತ್ರಧಾರಿಗಳು ಯಾವುದೇ ಮಾತಾಡದೆ ವೇದಿಕೆಯಿಂದ ನಿರ್ಗಮಿಸುತ್ತಾರೆ. ಇದು ನೋಡುಗನಿಗೆ ಒಂದು ಬೃಹತ್ ಷಾಕ್ ಕೂಡ ಹೌದು. ನಾಟಕವು ಏಕಕಾಲಕ್ಕೆ ರಾಜಕೀಯ ಮತ್ತು ಸಾಮಾಜಿಕ ಎನಿಸುವ ಒಂದು ಬೃಹತ್ ಸಂದೇಶವನ್ನು ಮಾತಿಲ್ಲದೆ ದಾಟಿಸಿ ಮುಗಿದುಹೋಗುತ್ತದೆ. ಸುಮಾರು ಒಂದು ಗಂಟೆಯ ಅವಧಿಯ ಈ ನಾಟಕವು ದೃಶ್ಯವಾಗಿಯೇ ಕಾಡುವಂತಹದು.

ಆದರೆ ಹಿಂದಿನ ದಿನವಷ್ಟೇ ಬಹುದೂರದಿಂದ ಪ್ರಯಾಣ ಮಾಡಿ ಬಂದ ನಮ್ಮಂತಹ ಭಾರತೀಯ ಮನಸ್ಸುಗಳಿಗೆ ಇಂತಹ (ಕತೆ, ಸಂಘರ್ಷ ಇಲ್ಲದ) ನಾಟಕಗಳು ತಾಗುವುದು ಕಷ್ಟವಾಯಿತು. ಇಂತಹ ಕೆಡವುವಿಕೆ ಆಧುನಿಕ ಸಮಾಜದಲ್ಲಿ ಇದೆ ಎಂಬುದನ್ನು ವಾಚ್ಯವಾಗಿ ಹೇಳಿಬಿಟ್ಟರೂ ಸಾಕು. ಅದಕ್ಕಾಗಿ ಆರು ಚೇರುಗಳನ್ನು ಕುಯ್ದು ಬಿಸಾಡಬೇಕೆ ಎಂದು ನಮಗನ್ನಿಸಿದ್ದು ಸುಳ್ಳಲ್ಲ.

20150824_104622

ನಾಟಕದ ಕೊನೆಯಲ್ಲಿ

ಎಡ್ಮಂಡ್ ದ ಲರ್ನೆಡ್ ಪಿಗ್

ಮೊದಲ ನಾಟಕ ಮುಗಿಸಿಕೊಂಡು ಅದೇ ರಂಗಮಂದಿರದಲ್ಲಿ ನಡೆದ ಮತ್ತೊಂದು ನಾಟಕ ನೋಡಿದೆವು. 11.30ಕ್ಕೆ ಆರಂಭವಾದ ಇದು ಎಪ್ಪತ್ತು ನಿಮಿಷಗಳ ನಾಟಕ. ಫಿಟ್ಟಿಂಗ್ಸ್ ಮಲ್ಟಿಮೀಡಿಯಾ ಆರ್ಟ್ಸ್, ಕ್ರೇಜಿ ಕ್ಯಾಟ್ ಥಿಯೇಟರ್ ಮತ್ತು ರಾಯಲ್ ಎಕ್ಸ್‍ಚೇಂಜ್ ಥಿಯೇಟರ್ ಸಂಸ್ಥೆಗಳು ಸೇರಿ ಈ ನಾಟಕವನ್ನು ಪ್ರಸ್ತುತ ಪಡಿಸಿದ್ದವು. ಇದು ವಿಶೇಷವಾಗಿ ಕಿವುಡರಿಗೆ ಸುಲಭವಾಗಿ ಅರ್ಥವಾಗಲೆಂದು ಸಿದ್ಧವಾದ ನಾಟಕ. ನಾಟಕದ ಹೆಸರು “ಎಡ್ಮಂಡ್ ದ ಲರ್ನೆಡ್ ಪಿಗ್”. ಈ ನಾಟಕವು ಪ್ರಾಯೋಗಿಕ ರಂಗಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಾ ಜೊತೆಗೆ ಕೈಗೊಂಬೆಯಾಟ, ನೆರಳುಗೊಂಬೆಯಾಟ ಮತ್ತು ಕಾಮಿಡಿಯಾ ಡೆಲ್ ಆರ್ಟೆಯ ಕೆಲವು ತಂತ್ರಗಳನ್ನು ಬಳಸಿಕೊಂಡಿತ್ತು.

ನಾಟಕಾರಂಭಕ್ಕೆ ಮೊದಲು ಕಂಡ ವೇದಿಕೆ.

ನಾಟಕಾರಂಭಕ್ಕೆ ಮೊದಲು ಕಂಡ ವೇದಿಕೆ.

ಎಡ್ಮಂಡ್ ಎಂಬುದು ಒಂದು ಪುಟ್ಟ ಹಂದಿಯ ಹೆಸರು. ತನ್ನ ತಾಯಿ ತಂದೆಯ ಹನ್ನೊಂದನೆಯ ಮಗುವಾಗಿ ಹುಟ್ಟಿದ ಈ ಮರಿ ಹಂದಿಗೆ ಮಾತು ಬರುತ್ತದೆ. ಹಾಗಾಗಿ ಇದು ಎಲ್ಲರನ್ನೂ ಪ್ರಶ್ನೆ ಕೇಳುತ್ತಾ ಹೋಗುತ್ತದೆ. ತಾನಿದ್ದ ಸರ್ಕಸ್ ಕಂಪೆನಿಯ ಜನರನ್ನು ತನ್ನ ತಂದೆ – ತಾಯಿ ಮತ್ತು ಸೋದರರು ಎಲ್ಲಿ ಎಂದು ಪ್ರಶ್ನಿಸುವ ಈ ಪುಟ್ಟ ಹಂದಿಗೆ ಅವರನ್ನೆಲ್ಲ ಕತ್ತರಿಸಿ ತಿನ್ನಲಾಗಿದೆ ಎಂಬ ಸತ್ಯ ತಿಳಿದ ನಂತರ, ಇಂತಹ ಹಿಂಸೆ ಸಲ್ಲ, ತಿನ್ನುವ ಮೊದಲು ಯೋಚಿಸಿ ಎಂಬ ಸಂದೇಶ ಈ ನಾಟಕದ್ದು.

ನಾಟಕದುದ್ದಕ್ಕು ಪ್ರತಿ ಪಾತ್ರಧಾರಿಯ ಮಾತನ್ನು ಮತ್ತೊಬ್ಬ ಪಾತ್ರಧಾರಿಯು ನಾಟಕದ ಓಘಕ್ಕೆ ಮತ್ತು ಸಂಯೋಜನೆಗೆ ಚ್ಯುತಿ ಬರದಂತೆ ಕಿವುಡ-ಮೂಕರ ಭಾಷೆಯಲ್ಲಿ ಸನ್ನೆಗಳಿಂದ ತಿಳಿಸುತ್ತಾ ಇದ್ದದ್ದು ವಿಶೇಷ. ಇಡಿಯ ತಂಡದ ನಟರು ವೃತ್ತಿಪರರು. ಅವರು ಸ್ವತಃ ಹಾಡಬಲ್ಲ, ಬೊಂಬೆಗಳನ್ನು ಆಡಿಸಬಲ್ಲವರು. ಹೀಗಾಗಿ ಪುಟ್ಟ ಹಂದಿಮರಿ ಬೊಂಬೆಯನ್ನು ಈ ತಂಡದವರು ನಿರ್ವಹಿಸಿದ ಕ್ರಮ ವಿಶಿಷ್ಟವಾದುದು. ನಿರಂತರವಾಗಿ ನೋಡುಗರನ್ನು ಒಳಗೊಳ್ಳುವ ಇಂತಹ ನಟ ಪ್ರಧಾನವಾದ ನಾಟಕವು ಮನಸ್ಸಿಗೆ ತಾಗಿತು.

ನಾಟಕಾಂತ್ಯದಲ್ಲಿ

ನಾಟಕಾಂತ್ಯದಲ್ಲಿ

ನಂತರ ಹಾದಿಯಲ್ಲಿದ್ದ ಅಂಗಡಿಗಳಲ್ಲಿ ಸ್ಯಾಂಡ್‍ವಿಚ್ ಮತ್ತು ಹಣ್ಣುಗಳನ್ನು ಊಟದ ಹೆಸರಲ್ಲಿ ಮುಗಿಸಿ ಬೇರೆ ಬೇರೆ ದೇಶಗಳ ಪ್ರತಿನಿಧಿಗಳೊಡನೆ ನಿರ್ಮಾಪಕರ ಭೇಟಿ ಎಂಬ ಕಾರ್ಯಕ್ರಮಕ್ಕೆ ಹೋದೆವು. ವಿಭಿನ್ನ ನಾಟಕಗಳ ನಿರ್ಮಾಪಕರು ತಮ್ಮ ನಾಟಕ, ತಮ್ಮ ತಂಡ ಇತ್ಯಾದಿಗಳನ್ನು ಕುರಿತು ಪರಿಚಯಿಸುತ್ತ, ಹೊರದೇಶಗಳಿಗೆ ನಾವು ಪ್ರವಾಸ ಬರುವುದಕ್ಕೆ ಯಾವ ಮಾರ್ಗಗಳಿಂದ  ಸಹಾಯಗಳನ್ನು ಪಡೆಯಬಹುದು ಎಂದು ತಿಳಿಸಿದರು. ಅನೇಕ ಹೊಸ ರಂಗತಜ್ಞರ ಪರಿಚಯವಾಯಿತು. ಆಯಾ ರಂಗಭೂಮಿಗಳಿಗೆ ಇರುವ ಸವಾಲುಗಳನ್ನು ಕುರಿತು ಸುಮಾರು ಸಮಯ ಮಾತಾಡಿದೆವು. ನಂತರ ಎಡಿನ್ಬರಾದ ನ್ಯಾಷನಲ್ ಮ್ಯೂಸಿಯಂ ಆಫ್ ಸ್ಕಾಟ್‍ಲ್ಯಾಂಡ್‍ನಲ್ಲಿ ಷೋಕೇಸ್ ನಾಟಕಗಳ ಉದ್ಘಾಟನಾ ಸಮಾರಂಭ ನಡೆಯಿತು. ಎಡಿನ್ಬರಾ ನಗರದ ಸಂಸ್ಕೃತಿ ವಿಭಾಗದ ಮುಖ್ಯಸ್ಥರು, ಬ್ರಿಟಿಷ್ ಕೌನ್ಸಿಲ್‍ನ ಮುಖ್ಯಸ್ಥರು ಹಾಗೂ ಫ್ರಿಂಜ್ ಉತ್ಸವದ ಮುಖ್ಯಸ್ಥರು ಕ್ಲುಪ್ತವಾಗಿ ಮಾತಾಡಿ ಉದ್ಘಾಟಿಸಿದರು.

ಈ ಉದ್ಘಾಟನಾ ಸಮಾರಂಭವು ನಿಯೋಜಿಸಿದ್ದಂತೆ ಆರು ಗಂಟೆಗೆ ಶುರುವಾಗದೆ ಆರೂವರೆಗೆ ಶುರುವಾಯಿತು. ಇದಕ್ಕೆ ಆ ಮ್ಯೂಸಿಯಂನ ಕಾರ್ಮಿಕ ಸಂಘಟನೆಯವರು ಹೆಚ್ಚಿನ ಸಂಬಳದ ಬೇಡಿಕೆಯಿಟ್ಟು ಮುಷ್ಕರ ಹೂಡಿದದ್ದು ಕಾರಣ. ವಿದೇಶಿ ಅತಿಥಿಗಳ ಎದುರಿಗೆ ಮುಷ್ಕರ ಬೇಡವೆಂದು ಕಾರ್ಮಿಕ ಸಂಘಟನೆಯವರನ್ನು ಒಪ್ಪಿಸಿ, ನಂತರ ಸಮಾರಂಭ ನಡೆಸಲಾಯಿತು. ಆದರೆ ಉತ್ಸವ ಮುಗಿಯುವ ವರೆಗೂ ಕಾರ್ಮಿಕರ ಬೇಡಿಕೆಗಳು ಪರಿಹಾರವಾದಂತೆ ಕಾಣಲಿಲ್ಲ.

ಬಟರ್‍ಫ್ಲೈ

ಸಿಂಗಪುರದವರಾದ ಈಗ ಗ್ಲಾಸ್‍ಗೋ ನಿವಾಸಿಯಾದ ರಮೇಶ್ ಮಯ್ಯಪ್ಪನ್ ನಿರ್ದೇಶಿಸಿದ ನಾಟಕ “ಬಟರ್‍ ಫ್ಲೈ” ನಾಟಕವು ಫಾರೆಸ್ಟ್ ಥಿಯೇಟರ್‍ನ ಗ್ರೀನ್‍ಸೈಡ್ ರಂಗಮಂದಿರದಲ್ಲಿ 8 ಗಂಟೆಗೆ ಪ್ರದರ್ಶನವಾಯಿತು. ಇದು ಸಹ ಕಿವುಡು ಪ್ರೇಕ್ಷಕರಿಗಾಗಿ ಎಂದೇ ಸಿದ್ಧವಾದ ನಾಟಕ. ಸ್ವತಃ ರಮೇಶ್ ಸಹ ಇದೇ ವೈಕಲ್ಯ ಉಳ್ಳವರು. ಹೀಗಾಗಿ ಇದು ದೃಶ್ಯವೇ ಪ್ರಧಾನವಾದ ನಾಟಕ. ಜಾನ್ ಲೂಥರ್ ಲಾಂಗ್‍ನ ಮೇಡಂ ಬಟರ್‍ಫ್ಲೈ ಎಂಬ ಕಾದಂಬರಿಯ ಮಾತಿಲ್ಲದ ರೂಪ ಈ ನಾಟಕ. ಪ್ರೀತಿ ಮತ್ತು ಪ್ರೀತಿಯನ್ನು ಕಳಕೊಳ್ಳುವ ಸ್ಥಿತಿಯನ್ನು ಭಾವನಾತ್ಮಕವಾಗಿ ಕಟ್ಟಲಾಗಿದೆ. ಮೂರೇ ಜನ ಕಲಾವಿದರು. ಒಬ್ಬ ಹುಡುಗಿಯನ್ನು ಇಬ್ಬರು ಹುಡುಗರು ಪ್ರೀತಿಸುತ್ತಾರೆ. ಇದರಿಂದೊದಗುವ ಆಕೆಯ ಬದುಕಿನ ವಿವರಗಳು ಈ ನಾಟಕದಲ್ಲಿದೆ. ಭಾರತೀಯ ಮನಸ್ಸುಗಳಿಗೆ ತಟ್ಟನೆ ತಾಗುವ ಮೆಲೋಡ್ರಾಮ ಅಂಶಗಳು ಹೆಚ್ಚಾಗಿರುವ ಈ ನಾಟಕ ಬಹುದಿನ ನೆನಪಲ್ಲಿ ಉಳಿಯುವಂತಹದು. ನಾಟಕದಲ್ಲಿ ಬಳಸಲಾದ ನಟನೆಯ ಪ್ರಯೋಗ ಹೊಸದು. ಮಾತಿಲ್ಲದೆಯೇ ಮಾತನ್ನು ದಾಟಿಸುವ ಕ್ರಮವದು.

ನಾಟಕವಾದ ಮಾರನೆಯ ದಿನ ಕೇರಳದ ಗೆಳೆಯ ಶಂಕರ್ ಮತ್ತು ರಮೇಶ್ ಮಯ್ಯಪ್ಪನ್ ಇಬ್ಬರು ಅಕ್ಷರಗಳ ಮೂಲಕ ಹಂಚಿಕೊಂಡ ಮಾತುಗಳು ನಿಜಕ್ಕೂ ಆನಂದ ಕೊಟ್ಟವು.

ನಾವು ಇಡೀ ದಿನ ನಾಟಕಗಳನ್ನು ನೋಡಿದ್ದು ನೂರು ನೂರೈವತ್ತು ಜನ ಮಾತ್ರ ಕೂರಲಾಗಬಹುದಾದ ಆಪ್ತ ರಂಗಮಂದಿರದಲ್ಲಿ. ಎಲ್ಲ ರಂಗವೇದಿಕೆಗಳನ್ನು ಈ ಉತ್ಸವಕ್ಕಾಗಿ ಸಿದ್ಧಪಡಿಸಲಾಗಿತ್ತು. ಅಲ್ಲಿನ ಪ್ರೇಕ್ಷಾಂಗಣಗಳು ಮಡಚಿದರೆ ಹಿಂದೆ ಸರಿದು ಅದೇ ಜಾಗವನ್ನು ದೊಡ್ಡ ಅಂಗಳವಾಗಿಸುವಂತಹದು. ಇಂತಹ ಪುಟ್ಟ ರಂಗಮಂದಿರಗಳನ್ನು ನಮ್ಮಲ್ಲಿಯೂ ಮಾಡಬೇಕೆನಿಸಿದ್ದು ಹೌದು. ಆದರೆ ಅಂತಹ ಕನಸು ಅದೆಂದು ಸಾಧಿತವಾದೀತೋ ಅರಿಯೆ.

ಒಟ್ಟಾರೆಯಾಗಿ ಒಂದಿಡೀ ದಿನದ ರಂಗಸಂಗ. ಮುಂದೇನಾಯಿತು ಎಂದು ನಂತರ ತಿಳಿಸುವೆ.

– ಬಿ.ಸುರೇಶ

24 ಆಗಸ್ಟ್ 2015

Advertisements

0 Responses to “ಎಡಿನ್ಬರಾ ದಿನಚರಿ – 24 ಆಗಸ್ಟ್ 2015”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: