ಎಡಿನ್ಬರಾ ದಿನಚರಿ – 25 ಆಗಸ್ಟ್ 2015

ಮೂರನೆಯ ದಿನ

ಹೊಸ ದೇಶ ಕಾಲಕ್ಕೆ ಹೊಂದಿಕೊಳ್ಳುವುದು ಯಾವಾಗಲೂ ಕಷ್ಟ. ಭಾರತದ ದಿನಚರಿಗೆ ಹೊಂದಿಕೊಂಡವನಿಗೆ ಅಲ್ಲಿನ ಐದು-ಆರುಗಂಟೆಗೆ ಎಚ್ಚರವಾದರೆ ಇಲ್ಲಿನ್ನೂ ಬೆಳಗು ಮೂಡಿರುವುದಿಲ್ಲ. ಕಿಟಕಿಯಾಚೆಗಿನ ಕತ್ತಲು ನೋಡುತ್ತಾ ಕಣ್ಣು ಬಿಟ್ಟಿದ್ದವನಿಗೆ ಮತ್ತೆ ಯಾವಾಗ ಕಣ್ಣು ಮುಚ್ಚಿತ್ತೋ ಗೊತ್ತಿಲ್ಲ. ಎಚ್ಚರವಾದಾಗ ಇಲ್ಲಿನ ಏಳಾಗಿತ್ತು. ಗಡಬಡಿಸಿ ಎದ್ದು ಸಿದ್ಧನಾದೆ. ಎಂದಿನಂತೆ ನಾವು ಉಳಿದುಕೊಂಡ ಮೋಟೆಲ್ ಒನ್‍ನಲ್ಲಿ ಬೆಳಗಿನ ತಿಂಡಿಗೆ ನಮ್ಮ ತಂಡದ ಎಲ್ಲರೂ ಸೇರಿದ್ದರು. ದಿನ ಬೆಳಗು ಇಡ್ಲಿ ಸಾಂಬಾರು ಹುಡುಕುವ ನಾಲಿಗೆಗೆ ಬ್ರೆಡ್ಡು ಮಾತ್ರ ದಕ್ಕುವಾಗ ತಿಂಡಿಯೂ ಬೋರಾಗುತ್ತದೆ. ಹೀಗಾಗಿ ಹಗಲಿನಲ್ಲೇ ನಾಲಿಗೆಯ ಆನಂದವನ್ನು ಮರೆತು ಹೊಟ್ಟೆ ತುಂಬಿಸಿಕೊಳ್ಳುವ ಹಾದಿಯಲ್ಲಿ ಕರಿ ಮೆಣಸಿನ ಪುಡಿಯ ಸಹಾಯದಿಂದ ಹಸಿರು ಸೇಬನ್ನು ತಿನ್ನುವುದಾಯಿತು.

ಬೆಳಗಿನ ಹತ್ತೂವರೆಗೆ ಕಾರ್ಬನ್ ಸೆಂಟರ್‍ನಲ್ಲಿ ಪಿಚ್ ಸೆಷನ್ ಎಂಬ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆಯ ತಂಡದವರು ತಾವು ಪ್ರಸ್ತುತಿ ಪಡಿಸುತ್ತಾ ಇರುವ ಕಾರ್ಯಕ್ರಮ ಮತ್ತು ತಮ್ಮ ಹಿನ್ನೆಲೆಯನ್ನು ತಿಳಿಸುತ್ತಾರೆ. ಏಳು ತಂಡದ ಮುಖ್ಯಸ್ಥರು ತಮ್ಮ ಪ್ರಯೋಗಗಳ ಹಿಂದಿನ ಸಿದ್ಧಾಂತಗಳನ್ನು ಕುರಿತು ಮಾತಾಡಿ, ತಮ್ಮ ತಂಡದ ಕಾರ್ಯಕ್ರಮಗಳ ತುಣುಕುಗಳನ್ನು ತಿಳಿಸಿದರು. ಅವುಗಳಲ್ಲಿ OFF STAGE THEATRE ತಂಡದವರು ಮೂರು ತುಣುಕುಗಳನ್ನು ತಮ್ಮ ತಂಡದವರಿಂದಲೇ ಅಭಿನಯಿಸಿ ತೋರಿಸಿದ್ದು ಕುತೂಹಲ ಕೆರಳಿಸುವಂತಿತ್ತು. ವರ್ಣಭೇದ, ಸ್ಥಳೀಯ ಆರ್ಥಿಕ ತೊಂದರೆಗಳು, ಮಹಿಳಾ ವಿಷಯಗಳನ್ನು ಇಟ್ಟುಕೊಂಡು ಕಿರು ನಾಟಕ ಕಟ್ಟುವ ಈ ತಂಡದ ನಟರು ವೃತ್ತಿಪರರು. ತಾವು ಪ್ರಸ್ತುತ ಪಡಿಸುವ ಸಿದ್ಧಾಂತಗಳನ್ನು ಅತ್ಯಂತ ಕ್ಲುಪ್ತವಾಗಿ ನೋಡುಗರಿಗೆ ದಾಟಿಸಲು ಶಕ್ತರು. ಸುಮಾರು ಮಧ್ಯಾಹ್ನ 12ರ ವರೆಗೆ ಈ ಸಭೆಯಲ್ಲಿದ್ದು ನಂತರ Pleassance dome ರಂಗಮಂದಿರಕ್ಕೆ ಹೊರಟೆವು. ಈ ಷೋಕೇಸ್ ಉತ್ಸವವನ್ನು ಒಟ್ಟು ಐದಾರು ಮೈಲಿ ಫಾಸಲಿನಲ್ಲಿಯೇ ಯೋಜಿಸಲಾಗಿದೆ. ಕೈಯಲ್ಲೊಂದು ಮ್ಯಾಪ್ ಸಹ ಇದೆಯಾದರೂ ಸ್ಥಳೀಯರು ಅದೇ ಸ್ಥಳಕ್ಕೆ ಕರೆವ ಹೆಸರು ಬೇರೆಯದಾಗಿರುತ್ತದೆ. ಹೀಗಾಗಿ ರಂಗಮಂದಿರಗಳು ಅಕ್ಕ ಪಕ್ಕದ ರಸ್ತೆಯಲ್ಲಿಯೇ ಇದ್ದರೂ ಹುಡುಕುವುದು ಕಷ್ಟ. ಅಂತೂ ಸಕಾಲಕ್ಕೆ ನಾವು ತಲುಪಬೇಕಿದ್ದ ಜಾಗ ತಲುಪಿದೆವು.

ಇಫಿಜೀನಿಯಾ ಇನ್ ಸ್ಪ್ಲಾಟ್

ಪ್ಲೆಸನ್ಸ್ ಎನ್ನುವುದು ನಮ್ಮಲ್ಲಿನ ಮಾಲ್‍ಗಳ ಹಾಗೆ ಇರುವ ಜಾಗ. ಅಲ್ಲಿ ಒಟ್ಟು ಆರು ರಂಗಮಂದಿರಗಳಿವೆ. ಎಲ್ಲವೂ ಗರಿಷ್ಟ ಇನ್ನೂರು ಜನ ಕೂರಬಹುದಾದ ರಂಗಮಂದಿರ. ಈ ರಂಗಮಂದಿರದ ಸುತ್ತಾ ಮತ್ತಷ್ಟು ಪ್ರದರ್ಶನ ಮಂದಿರಗಳಿವೆ. ವಿಶೇಷವಾಗಿ ಆಧುನಿಕ ಸಂಗೀತಗಾರರು ಹಾಗೂ ಯುವಕರು ಸೇರುವ ಜಾಗವಿದು. ಜನ ಸಂತೆಯ ನಡುವೆ ನಾವು ನಮ್ಮ ರಂಗಮಂದಿರವನ್ನು ಹುಡುಕಿ ಜಾಗವರಸಿ ಕೂತೆವು.

ಇದೊಂದು ಎಪ್ಪತ್ತು ನಿಮಿಷಗಳ ಏಕ ಮಹಿಳಾ ಪ್ರದರ್ಶನ. ಷೆರ್ಮನ್ ಸಿಮ್ರು ಎನ್ನುವುದು ಕಾರ್ಡಿಫ್‍ನಲ್ಲಿ 1973ರಿಂದ ಕೆಲಸ ಮಾಡುತ್ತಾ ಇರುವ ತಂಡ. ವಿಶೇಷವಾಗಿ ವೆಲ್ಷ್ ಭಾಷೆಯ ನಾಟಕಕಾರರು ಮತ್ತು ಕಲಾವಿದರನ್ನು ಬೆಂಬಲಿಸಲು ಈ ಸಂಸ್ಥೆಯು ಪ್ರಯತ್ನಿಸುತ್ತದೆ. ವೇಲ್ಸ್ ನಾಡಿನ ಪ್ರಸಿದ್ಧ ನಾಟಕಕಾರ ಗ್ಯಾರಿ ಒವನ್‍ನ ನಾಟಕವನ್ನೇ “ಇಫಿಜೀನಿಯಾ ಇನ ದ ಸ್ಪ್ಲಾಟ್” ನಾಟಕದಲ್ಲಿ ಬಳಸಲಾಗಿದೆ. ರಾಚೆಲ್ ಓರಿಯಾಡಾನ್ ಈ ನಾಟಕದ ನಿರ್ದೇಶಕರು. ಈ ನಾಟಕದ ಕತೆಗೆ ಯೂರಿಪೀಡಿಸ್‍ನ ಪುರಾಣವನ್ನು ಆಧಾರವಾಗಿ ಇರಿಸಿಕೊಳ್ಳಲಾಗಿದೆ. ಸೋಫಿ ಮೆಲ್‍ವಿಲೆ ಎಂಬ ವೇಲ್ಸ್‍ನ ಪ್ರಸಿದ್ಧ ನಟಿ ಈ ನಾಟಕದಲ್ಲಿ ಅಭಿನಯಿಸಿದ್ದಾರೆ.

ಎಫಿ ಎಂಬಾಕೆ ಹೆಚ್ಚು ಓದಿಲ್ಲದವಳು. ಆಕೆಯ ಬಳಿ ಹೆಚ್ಚು ಹಣವೂ ಇಲ್ಲ. ಆಕೆಗೆ ತನ್ನ ನಾಳೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇಂತಹ ಪಾತ್ರವೊಂದು ಕುಡಿತ, ಡ್ರಗ್ ಮತ್ತು ರಾತ್ರಿಗಳ ಜೀವನದಲ್ಲಿ ಕಳೆದುಹೋಗಿರುತ್ತದೆ. ಈ ಹಾದಿಯಲ್ಲಿ ಆ ಪಾತ್ರಕ್ಕೆ ಸಿಗುವ ಸಣ್ಣ ಅವಕಾಶವು ಆಕೆಯ ಬದುಕಿಗೆ ಹೊಸ ಆಶಾಕಿರಣವಾಗುತ್ತದೆ ಎಂಬುದು ಈ ನಾಟಕದ ತಿರುಳು.

ಸೋಫಿ ಮೆಲ್‍ವಿಲೆ ಅದ್ಭುತ ನಟಿ. ಆದರೆ ಈ ನಾಟಕ ಕೃತಿಯಲ್ಲಿ ಮಾತುಗಳೇ ಹೆಚ್ಚು. ಅದನ್ನೂ ವೇಗವಾಗಿ ಮಾತಾಡುವ ಹೊಸ ಶೈಲಿಯೊಂದು ಈಚೆಗಿನ ಪಾಶ್ಚಾತ್ಯ ಅಭಿನಯದಲ್ಲಿ ಬಳಕೆಗೆ ಬಂದಿದೆ. ಇದು ಆ ಭಾಷೆಗೆ ಹೊಸಬರಾದ ನಮ್ಮಂತಹವರಿಗೆ ವಿಷಯವಾಗಿ ತಲುಪುವುದು ಕಷ್ಟ. ಕಿವಿಗಳಿಗೆ ಹೆಚ್ಚು ಕೆಲಸವಾಗಿ ಕಣ್ಣು ಸೋಲುತ್ತದೆ. ಈ ನಾಟಕದಲ್ಲಿ ಬಳಸಿದ್ದದ್ದು ಕೂಡ ವೆಲ್ಷಿಯನ್ ಬೆರೆತ ಇಂಗ್ಲೀಷ್. ನಮಗೆ ಗೊತ್ತಿರುವ ಅವೇ ಪದಗಳ ಉಚ್ಚಾರವೇ ಇಲ್ಲಿ ಬೇರೆಯ ಬಗೆಯದು. ಹೀಗಾಗಿ ನಾಟಕದ ತಿರುಳು ಚೆನ್ನಾಗಿದ್ದರೂ ಈ ನಾಟಕವು ನಮಗೆ ತಾಗಲಿಲ್ಲ. ಎಪ್ಪತ್ತು ನಿಮಿಷದ ಓತಪ್ರೋತ ಮಾತು ಸಹ ನಮ್ಮನ್ನು ಹೈರಾಣಾಗಿಸಿತ್ತು.

ನಾಟಕದ ರಂಗಸಜ್ಜಿಕೆ

ನಾಟಕದ ರಂಗಸಜ್ಜಿಕೆ

ಇಫಿಜೀನಿಯಾ ನಾಟಕದ ಸೆಟ್. ಲೈಟ್‍ಗಳನ್ನು ಬಳಸಿರುವ ಕ್ರಮವನ್ನು ರಂಗತಜ್ಞರು ಗಮನಿಸಬಹುದು.

ರಂಗಮಂದಿರದಲ್ಲಿ ಗೆಳೆಯರು

ರಂಗಮಂದಿರದಲ್ಲಿ ಗೆಳೆಯರು

ದಿ ಅಸೆಂಬ್ಲಿ ಆಫ್ ಅನಿಮಲ್ಸ್

ಸಮ್ಮರ್‍ ಹಾಲ್‍ ರಂಗಮಂದಿರದಲ್ಲಿ ಒಟ್ಟು ಎಂಟು ಪ್ರದರ್ಶನ ಮಂದಿರಗಳಿವೆ. ಅವುಗಳಲ್ಲಿ ನಾಲ್ಕು ನಿಯಮಿತವಾಗಿ ಪ್ರದರ್ಶನಗಳು ನಡೆಯುವ ಜಾಗ. ಉಳಿದದ್ದು ತಾತ್ಕಾಲಿಕವಾಗಿ ಈ ಉತ್ಸವಕ್ಕೆಂದು ಸಿದ್ಧಮಾಡಿಕೊಂಡ ಜಾಗ. ಇಲ್ಲಿರುವ ಸಣ್ಣ ಪ್ರಾಣಿಗಳ ಆಸ್ಪತ್ರೆಯನ್ನು “ದಿ ಅಸೆಂಬ್ಲಿ ಆಫ್ ಅನಿಮಲ್ಸ್” ನಾಟಕದ ಪ್ರದರ್ಶನಕ್ಕಾಗಿ ಬಳಸಲಾಗಿತ್ತು. ಟಿಮ್ ಸ್ಪೂನರ್ ಎಂಬ ಕಲಾವಿದ ಈ ಪ್ರದರ್ಶನವನ್ನು ಸೃಷ್ಟಿಸಿದ್ದಾರೆ. ಆತ ತನ್ನ ಪ್ರದರ್ಶನಗಳನ್ನು ಪರ್ಫಾರ್ಮಿಂಗ್ ಸ್ಕಲ್ಪ್ಚರ್ ಎಂದೇ ಗುರುತಿಸುತ್ತಾನೆ. ಆತ ಗೊಂಬೆಯಾಟದ ಕಲೆಯನ್ನು ನಿರ್ಜೀವ ವಸ್ತುಗಳಿಗೆ ಆರೋಪಿಸಿ ಮಾತಿಲ್ಲದ, ಕೇವಲ ಶಬ್ದಗಳನ್ನು ಬಳಸಿದ ವಿಶಿಷ್ಟ ಎನಿಸುವ ಪ್ರದರ್ಶನಗಳನ್ನು ಸೃಷ್ಟಿಸುತ್ತಾನೆ.

ದಿ ಅಸೆಂಬ್ಲಿ ಆಫ್ ಅನಿಮಲ್ಸ್ ಹತ್ತು ವರ್ಷದ ಒಳಗಿನ ಮಕ್ಕಳಿಗಾಗಿ ರೂಪಿಸಿದ ಪ್ರದರ್ಶನ. ಕೇವಲ ಹದಿನೈದು ಜನ ಪ್ರೇಕ್ಷಕರು ಕೂರಬಹುದಾದ ರಂಗಮಂದಿರದಲ್ಲಿ ಇಬ್ಬರು ಕಲಾವಿದರು ವಿಭಿನ್ನ ಆಕಾರಗಳಿಗೆ ಮತ್ತಷ್ಟು ತುಂಡುಗಳನ್ನು ಜೋಡಿಸಿ, ಪ್ರಾಣಿಗಳ ಹಾಗೆ ಕಾಣುವಂತೆ ಮಾಡಿ, ಆಯಸ್ಕಾಂತ, ಪುಗ್ಗ ಊದುವ ಯಂತ್ರ, ಹೊಗೆ ಮುಂತಾದುವನ್ನು ಬಳಸಿ ಅವುಗಳು ಚಲಿಸುವಂತೆ ಮಾಡುತ್ತಾರೆ. ವಿಭಿನ್ನ ವಾತಾವಾರಣದಲ್ಲಿ, ವಿಭಿನ್ನ ಶಬ್ದಗಳ ಮೂಲಕ ನಿರ್ಜಿವ ವಸ್ತಗಳ ಚಲನೆಯು ಮಕ್ಕಳಲ್ಲಿ ಮೂಡಿಸುವ ಆನಂದ ಮತ್ತು ವಿಜ್ಞಾನ ಕುರಿತು ತಿಳುವಳಿಕೆ ಕೊಡುವುದು ಈ ಪ್ರದರ್ಶನದ ಉದ್ದೇಶ. ನಾಟಕ ಪ್ರದರ್ಶನದ ನಂತರ ನೋಡುಗರು ಸ್ವತಃ ಆ ನಿರ್ಜೀವ ವಸ್ತುಗಳನ್ನು ಮುಟ್ಟಿ, ತಡವಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ಸಹ ಒದಗಿಸಲಾಗುತ್ತದೆ.

ನಾಟಕದಲ್ಲಿ ಕತೆಯನ್ನೇ ಹುಡುಕುವ ಭಾರತೀಯ ಮನಸ್ಸುಗಳಿಗೆ ಇದು ಒಗ್ಗುವ ಪ್ರದರ್ಶನವಲ್ಲ. ಪ್ರಾಯಶಃ ಸಣ್ಣ ಮಕ್ಕಳಿಗೆ ಇದು ಇಷ್ಟವಾಗಬಹುದು. ಕೇವಲ ಮುವ್ವತ್ತು ನಿಮಿಷಗಳ ಈ ಪ್ರಯೋಗವು ನನ್ನ ಪಾಲಿಗೆ ಒಂದು ವಿಶಿಷ್ಟ ಅನುಭವ ಎನಿಸಿದ್ದಂತೂ ಹೌದು.

ಡೈರಿ ಆಫ್ ಎ ಮ್ಯಾಡ್ ಮ್ಯಾನ್

ಜೂ಼ ಆವಿಯರಿ ರಂಗಮಂದಿರದಲ್ಲಿ ಲಿವಿಂಗ್ ಪಿಕ್ಚರ್ಸ್ ತಂಡದವರು ಅಭಿನಯಿಸಿದ ಡೈರಿ ಆಫ್ ಎ ಮ್ಯಾಡ್‍ ಮ್ಯಾನ್ ನಾಟಕದ ಪ್ರದರ್ಶನವಿತ್ತು. ಈ ರಂಗಮಂದಿರದ ಬೆನ್ನಿಗೆ ಎಡಿನ್ಬರಾದ ಪ್ರಸಿದ್ಧ ಪ್ರವಾಸಿತಾಣವಾದ ಬೆಟ್ಟವಿದೆ. ಒಂದು ಕಾಲಕ್ಕೆ ಜೂ ಮತ್ತು ಚರ್ಚ್ ಸಹ ಆಗಿದ್ದ ಜಾಗವನ್ನು ರಂಗಮಂದಿರವಾಗಿ ಪರಿವರ್ತಿಸಲಾಗಿದೆ. ಇದೊಂದು ನೂರು ಜನ ಕೂರಬಹುದಾದ ರಂಗಮಂದಿರ.

20150825_172953

ಮೂವರು ರಂಗಗೆಳೆಯರು ಜೂ ರಂಗಮಂದಿರದ ಹೊರಗೆ… ಹಿನ್ನೆಲೆಯಲ್ಲಿ ಎಡಿನ್ಬರಾದ ಪ್ರಖ್ಯಾತ ಬೆಟ್ಟ…

ರಾಬರ್ಟ್ ಮತ್ತು ಎಲೆನ್ ಬೋಮ್ಯಾನ್ ಸೇರಿ 1999ರಲ್ಲಿ ಆರಂಭಿಸಿದ ಲಿವಿಂಗ್ ಪಿಕ್ಚರ್ಸ್ ಅಭಿನಯ ಪ್ರಧಾನವಾದ ನಾಟಕಗಳನ್ನು ಕಟ್ಟುವ ತಂಡ. ಇವರಿಬ್ಬರಿಗೂ ಇರುವ ರಂಗನಿರ್ದೇಶನದ ಮತ್ತು ನಟನೆಯ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ಇವರಿಬ್ಬರೂ ರಷ್ಯಾದ ಪ್ರಖ್ಯಾತ ಅಭಿನಯ ಶಿಕ್ಷಕ ಮೈಕೆಲ್ ಚೋಕಾವ್‍ನ ಪದ್ಧತಿಯನ್ನು ಬಳಸಿಕೊಂಡು ಕಟ್ಟಿದ ನಾಟಕವಿದು. ನಿಕೋಲಾಯ್ ಗೋಗೊಲ್‍ನ ಇದೇ ಹೆಸರಿನ ಕತೆಯನ್ನು ಬದುಕಿನ ವ್ಯಂಗ್ಯಗಳನ್ನು ಲೇವಡಿ ಮಾಡಲೆಂದು, ಆಮೂಲಕ ಮನುಷ್ಯನ ಬದುಕಿನ ಸೂಕ್ಷ್ಮಗಳನ್ನು ಬಯಲಿಗಿಡುವುದು ಈ ಪ್ರದರ್ಶನದ ಉದ್ದೇಶ.

ಬೋಮ್ಯಾನ್ ಸ್ವತಃ ಅಭಿನಯಿಸಿರುವ ಈ ಏಕವ್ಯಕ್ತಿ ಪ್ರದರ್ಶನವು ರಂಗಸಾಧ್ಯತೆಗಳನ್ನು ಬಳಸಿಕೊಂಡ ಕ್ರಮ, ರಂಗಸಜ್ಜಿಕೆ, ಬೆಳಕು ನಿರ್ವಹಣೆ ಈ ಎಲ್ಲಾ ಕಾರಣಗಳಿಂದ ಮನಸ್ಸಿಗೆ ತಾಗಿದ ನಾಟಕವಾಗಿತ್ತು. ನಿಕೋಲಾಯ್ ಗೋಗೊಲ್‍ನ ಕತೆಗಳೇ ಹಾಗೆ. ಆತ ಮಧ್ಯಮವರ್ಗದ ಬದುಕಿನ ವ್ಯಂಗ್ಯವನ್ನು ಕಟ್ಟಿಕೊಡುವ ಕ್ರಮ ತಟ್ಟನೆ ತಾಗುವಂತಹದು. ಅದನ್ನು ಒಬ್ಬ ಶ್ರೇಷ್ಟ ನಟ ಅಭಿನಯಿಸಿದರೆ ಏನಾಗಬಹುದೋ ಆ ಆನಂದವು ಈ ನಾಟಕದಲ್ಲಿ ಸಿಕ್ಕಿದಂತೂ ಸತ್ಯ. ಎಲೆನ್ ಬೋಮ್ಯಾನ್ ಭಾಷೆಯು ತೊಡಕಾಗದ ಹಾಗೆ ತನ್ನ ಪ್ರೇಕ್ಷಕರನ್ನು ನಾಟಕದ ಜೊತೆಗೆ ಕೊಂಡೊಯ್ಯುವ ಪರಿಯೇ ವಿಶಿಷ್ಟವಾದುದು. ಪ್ರಾಯಶಃ ಈ ಬಗೆಯ ಅಭಿನಯ ಪದ್ಧತಿಯನ್ನು ರೂಢಿಸಿಕೊಂಡರೆ ಎಂತಹ ನಾಟಕವನ್ನಾದರೂ ನೋಡುಗನಿಗೆ ತಲುಪಿಸುವುದು ಸುಲಭ.

ಒಟ್ಟಾರೆಯಾಗಿ ಫ್ರಿಂಜ್ ಉತ್ಸವದಲ್ಲಿ ಮೂರನೆಯ ದಿನದ ಅನುಭವವು ಮರೆಯಲಾಗದ್ದು. ಇದೇ ವಾರ ನಡೆದ ಸಭೆಯಲ್ಲಿ ಸಿಕ್ಕಿದ ಎಲೆನ್ ಬೋಮ್ಯಾನ್‍ನನ್ನು ನಮ್ಮ ನಾಡಿನಲ್ಲಿ ಅಭಿನಯ ಶಿಬಿರಗಳನ್ನು ನಡೆಸಲು ಹಾಗೂ ಇದೇ ನಾಟಕವನ್ನು ಪ್ರದರ್ಶಿಸಲು ಸಹ ಆಹ್ವಾನಿಸಿದೆವು. ಎಲ್ಲವೂ ಕೂಡಿಬಂದರೆ ಎಲ್ಲಾ ರಂಗ ಗೆಳೆಯರಿಗೆ ನಮಗೆ ದೊರೆತ ಆನಂದವನ್ನು ದಾಟಿಸಲು ಪ್ರಯತ್ನಿಸುತ್ತೇವೆ.

– ಬಿ. ಸುರೇಶ

25 ಆಗಸ್ಟ್ 2015

ಕ್ಯಾಂಪ್: ಎಡಿನ್ಬರಾ

Advertisements

0 Responses to “ಎಡಿನ್ಬರಾ ದಿನಚರಿ – 25 ಆಗಸ್ಟ್ 2015”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 60,851 ಜನರು
Advertisements

%d bloggers like this: