ಎಡಿನ್ಬರಾ ದಿನಚರಿ 26th Aug 2015

ನಾಲ್ಕನೆಯ ದಿನ

ಹೊಸ ದೇಶದ ಗಡಿಯಾರಕ್ಕೆ ದೇಹವನ್ನು ಹೊಂದಿಕೊಂಡಿತ್ತು. ಅಲಾರಂ ಕೂಗಿದಾಗ ಎಚ್ಚರವೂ ಆಗುತ್ತಿತ್ತು. ನಮ್ಮ ದಿನಚರಿಗೆ ಒಂದು ನಿಯಮಿತತೆ ಬಂದಿತ್ತು. ಹಗಲಿನ ತಿಂಡಿಯ ಜೊತೆಗೆ ಜೊತೆಗಾರರ ಜೊತೆಗೆ ಹಿಂದಿನ ದಿನ ಕಂಡದ್ದನ್ನು ಕುರಿತು ಚರ್ಚೆ, ನಾವು ನೋಡದ – ಮತ್ತೊಬ್ಬರು ನೋಡಿರುವ ನಾಟಕಗಳನ್ನು ಕುರಿತು ಮಾತು, ಇತ್ಯಾದಿಗಳು ನಡೆಯುತ್ತಾ ಇದ್ದವು. ಜೊತೆಗೆ ಬೇರೆ ಬೇರೆಯ ಪ್ರದರ್ಶನ ಮಂದಿರಗಳನ್ನು ತಲುಪುವ ಮಾರ್ಗಗಳು ಏನು ಎಂಬ ಮಾತು. ಇವುಗಳ ನಡುವೆಯೇ ನಾವು ನೋಡಿದ ನಾಟಕಗಳಲ್ಲಿ ಯಾವುದಾದರೂ ತಂಡವನ್ನು ನಮ್ಮ ದೇಶಕ್ಕೆ ಕರೆಸಬಹುದೇ? ಅದಕ್ಕೆ ತಗಲುವ ಖರ್ಚೇನು? ಆ ದುಡ್ಡನ್ನು ಹುಟ್ಟಿಸುವುದು ಹೇಗೆ? ಎಂಬುದರ ಮಾತಾಗುತ್ತಾ ಇತ್ತು. ಕೇರಳದ ಶಂಕರ್ (“ವಾಟರ್ ಸ್ಟೇಷನ್” ನಾಟಕವನ್ನು ನಿರ್ದೇಶಿಸಿದ್ದವರು) ಈ ವಿಷಯದಲ್ಲಿ ಅದಾಗಲೇ ಒಂದಷ್ಟು ಮುಂದುವರೆದಿದ್ದರು. ಅವರು ಫೆಬ್ರವರಿಯಲ್ಲಿ ಮಾಡುತ್ತಾ ಇದ್ದ ಉತ್ಸವಕ್ಕೆ ಹಲವು ತಂಡಗಳನ್ನು ಆಹ್ವಾನಿಸುವ ಪ್ರಕ್ರಿಯೆ ಶುರುಮಾಡಿದ್ದರು. ಆತ ಕರೆಸುತ್ತಾ ಇದ್ದ ತಂಡಗಳನ್ನು ನಮ್ಮಲ್ಲಿಗೂ ಕರೆಸಬಹುದೇ ಎಂಬ ಪ್ರಯತ್ನ ಮಾಡುತ್ತಾ ಈ ದಿನದ ನಾಟಕಗಳನ್ನು ನೋಡಲು ಹೊರಟೆವು.

ಡೌಗ್ಲಾಸ್

ಪ್ಲೆಸನ್ಸ್ ರಸ್ತೆಯಲ್ಲಿರು ಜೂ ರಂಗಮಂದಿರ ಸಮುಚ್ಚಯದ ಸ್ಯಾಂಕ್ಚುಯರಿ ಹಾಲ್‍ನಲ್ಲಿ ಈ ನಾಟಕ ಪ್ರದರ್ಶನ ಇತ್ತು. ನಾವು ಅರ್ಧ ಗಂಟೆ ಮುಂಚಿತವಾಗಿಯೇ ಜಾಗ ತಲುಪಿದ್ದೆವು. ಆಗಿನ್ನೂ ಆ ತಂಡಕ್ಕೆ ರಂಗಮಂದಿರವನ್ನು ಪ್ರದರ್ಶನಕ್ಕೆ ಬಿಟ್ಟುಕೊಟ್ಟಿದ್ದರು. ಆ ತಂಡವು ಕೇವಲ ಹತ್ತು ನಿಮಿಷದಲ್ಲಿ ಆ ನಾಟಕಕ್ಕೆ ಬೇಕಾದುದನ್ನು ಸಿದ್ಧಪಡಿಸಿಕೊಂಡ ಕ್ರಮ ಕಂಡು ಖುಷಿಯಾಯಿತು. ಕೇವಲ ಮೂರು ಜನರ ತಂಡ ಒಂದು ವೇದಿಕೆ ಬೇಕಾದ ರಂಗಸಜ್ಜಿಕೆ, ಬೆಳಕು ವ್ಯವಸ್ಥೆ ಮತ್ತು ಧ್ವನಿ ವ್ಯವಸ್ಥೆಯನ್ನು ಹತ್ತು ನಿಮಿಷದಲ್ಲಿ ಪರ್‍ಫೆಕ್ಟ್ ಎನ್ನುವಂತೆ ಜೋಡಿಸಿಕೊಳ್ಳುವುದನ್ನು ಕಂಡಾಗ, ಇಂತಹುದೇ ಕೆಲಸಕ್ಕೆ ನಾವು ಎಷ್ಟು ಜನ ಇರುತ್ತೇವಲ್ಲಾ ಎನಿಸಿದ್ದು ಹೌದು.

ರಾಬ್ಬೀ ಸಿಂಜ್ ವಿನ್ಯಾಸಗೊಳಿಸಿದ್ದ “ಡೌಗ್ಲಾಸ್” ಮುವ್ವತ್ತು ನಿಮಿಷಗಳ ನಾಟಕ. ರಾಬ್ಬೀ ಸಿಂಜ್ ಸ್ಕಾಟಿಷ್ ಹೈಲ್ಯಾಂಡ್ಸ್ನ ನಿವಾಸಿ. ಆತ ತನ್ನ ಸುತ್ತಲ ವಾಸ್ತು ವಿನ್ಯಾಸವನ್ನು ಬಳಸಿಕೊಂಡು ಕೋರಿಯೊಗ್ರಾಫ್ ಮಾಡಿರುವ ಅನೇಕ ಪ್ರಯೋಗಗಳು ಜನಪ್ರಿಯವಾಗಿವೆ. ಕಲಾವಿದನ ದೇಹ ಮತ್ತು ಪರಿಕರಗಳನ್ನು ಬಳಸಿ ಆತ ಸೃಷ್ಟಿಸುವ ವಿವರಗಳು ಬೆರಗುಗೊಳಿಸುವಂತಹದು. ನಮಗೆ ಒಂದು ವಸ್ತು ಅಥವಾ ಪರಿಕರವನ್ನು ಕುರಿತಂತೆ ಇರುವ ನಂಬಿಕೆಗಳನ್ನೇ ಬದಲಿಸುವ ಹಾಗೆ ಅದೇ ಪರಿಕರವನ್ನು ಆತ ಬಳಸುತ್ತಾನೆ. ಇಂತಹ ಪ್ರಯೋಗಗಳಿಗಾಗಿ ರಾಬ್ಬೀ ಸಿಂಜ್‍ಗೆ ಅನೇಕ ಪ್ರಶಸ್ತಿಗಳು ಸಹ ಸಿಕ್ಕಿವೆ.

20150826_114945 ಡೌಗ್ಲಾಸ್ ನಾಟಕದ ಆರಂಭದ ದೃಶ್ಯ

“ಡೌಗ್ಲಾಸ್”ನಲ್ಲಿಯೂ ಅಂತಹುದೇ ಪ್ರಯೋಗವಿದೆ. ವೇದಿಕೆಯಲ್ಲಿರುವ ಏಕೈಕ ನಟ ತನ್ನ ಸುತ್ತಲೂ ಇರುವ ಕುರ್ಚಿ, ಕಾರ್ಪೆಟ್, ದೀಪ ಇತ್ಯಾದಿಗಳ ಜೊತೆಗೆ ತನ್ನ ಸಂಬಂಧವನ್ನು ಗುರುತಿಸಿಕೊಳ್ಳುತ್ತಾ ಹೋಗುತ್ತಾನೆ. ದೇಹ – ಪರಿಕರ – ಬೆಳಕಿನ ಬಳಕೆಯಿಂದ ಕಲಾವಿದ ಸೃಷ್ಟಿಸುವ ಇಮೇಜ್‍ಗಳು ಮಾತು ಎಂಬುದನ್ನು ಬಳಸದೆಯೇ ಅನೇಕ ಧ್ವನ್ಯಾರ್ಥಗಳನ್ನು ನೀಡತೊಡಗುತ್ತವೆ. ಇದಕ್ಕಾಗಿ ಸ್ಪಷ್ಟವಾದ ಕತೆ ಅಥವ ಕಥನ ಕ್ರಮವನ್ನು ಬಳಸದೆಯೇ ನಿರ್ವಾತದಲ್ಲಿ ಭಾವ ಸೃಷ್ಟಿಯ ಮೂಲಕ ನೋಡುಗನನ್ನು ಹಿಡಿದಿಡುವ ಕಲಾವಿದ ಈ ನಾಟಕದಲ್ಲಿದ್ದಾನೆ. ನಾಟಕವೊಂದಕ್ಕೆ ಕ್ಯಾಥರ್ಸಿಸ್ ಎಂಬುದು ಇರಲೇಬೇಕು ಎಂಬ ರಂಗ ಸಿದ್ಧಾಂತವನ್ನು ಮೀರಿ ಅಂತಹ ಯಾವ ಸಂದೇಶವನ್ನೂ ನೇರವಾಗಿ ಹೇಳದ “ಡೌಗ್ಲಾಸ್‍” ಅದರೊಳಗಿನ ಪ್ರತಿಮೆಗಳ ಕಾರಣವಾಗಿ ನೆನಪಲ್ಲಿ ಉಳಿಯುವ ನಾಟಕ.

ಆನ್ ಇನ್ವಿಟೇಷನ್

ಎಡಿನ್ಬರಾ ಗ್ರಾಸ್‍ ಮಾರ್ಕೆಟ್‍ ಬಳಿ ಇರುವ ಡ್ಯಾನ್ಸ್ ಬೇಸ್ ರಂಗ ಸಮುಚ್ಚಯದ ಸ್ಟುಡಿಯೋ 2 ನಲ್ಲಿ ಆನ್ ಇನ್‍ವಿಟೇಷನ್ ಪ್ರಯೋಗ ನೋಡಿದೆವು. ಇದೊಂದು ನೋಡುಗ ಮತ್ತು ಕಲಾವಿದರು ಸೇರಿ ಕಟ್ಟುವ ನೃತ್ಯ ಪ್ರದರ್ಶನ. ಕಾರ್ಡಿಫ್ನಲ್ಲಿ ವಾಸಿಸುವ ಜೋ ಫಾಂಗ್ ನೃತ್ಯ ಸಂಯೋಜಕಿ ಮತ್ತು ಸ್ವತಃ ಕಲಾವಿದೆ. ಈಕೆ ಸಿನಿಮಾ ಮತ್ತು ನಾಟಕಗಳೆರಡರಲ್ಲೂ ಕೆಲಸ ಮಾಡುತ್ತಾ ಇರುವಾಕೆ. ಆಕೆಗೆ ವೇದಿಕೆಯ ಮೇಲೆ ಇರುವ ಚುರುಕುತನ ಮತ್ತು ದೇಹವನ್ನು ಬಳಸುವ ಶಕ್ತಿಯಿಂದಾಗಿಯೇ ಜೋ ಫಾಂಗ್ ಯುಕೆಯ ಪ್ರಸಿದ್ಧ ರಂಗತಂಡಗಳು ಮತ್ತು ನೃತ್ಯ ತಂಡಗಳಲ್ಲಿ ಕೆಲಸ ಮಾಡುವುದು ಸಾಧ್ಯವಾಗಿದೆ.

Friends waiting for An invitation ನಾಟಕದ ಸಭಾಂಗಣದಲ್ಲಿ ಗೆಳೆಯರು

ಆನ್ ಇನ್‍ವಿಟೇಶನ್ ನೋಡುಗ ಮತ್ತು ಕಲಾವಿದರ ನಡುವಿನ ಗೋಡೆಯನ್ನು ಇಲ್ಲವಾಗಿಸಲು ಮಾಡಿರುವ ಪ್ರಯೋಗ. ಒಂದು ವಿಶಾಲ ಕೋಣೆಯ ಎರಡೂ ಬದಿಯಲ್ಲಿ ಹಾಕಿರುವ ಸಾಲು ಕುರ್ಚಿಗಳಲ್ಲಿ ನೋಡುಗರ ಜೊತೆಗೆ ಮೂವರು ಕಲಾವಿದರು ಸಹ ಕೂತಿರುತ್ತಾರೆ. ಈ ಮೂವರು ನೃತ್ಯ ಮತ್ತು ಚಲನೆಯನ್ನು ಕುರಿತು ಸುಮ್ಮನೆ ಮಾತಾಡುತ್ತಾ ಇದ್ದಾರೋ ಎಂಬಂತೆ ಆರಂಭವಾಗುವ ಪ್ರಯೋಗದಲ್ಲಿ ನೋಡುಗರನ್ನೆಲ್ಲಾ ಬಳಸಿಕೊಳ್ಳುತ್ತಾ ನೃತ್ಯವೊಂದನ್ನು ಕಟ್ಟತೊಡಗುತ್ತಾರೆ. ಆ ಹಾದಿಯಲ್ಲಿ ಪ್ರತೀ ಪ್ರೇಕ್ಷಕನು ಸಹ ತನ್ನ ಅಕ್ಕಪಕ್ಕದಲ್ಲಿ ಇರುವವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಮತ್ತು ಪ್ರತಿಯೊಬ್ಬರು ಮತ್ತೊಬ್ಬರನ್ನು ಅವರು ಇರುವಂತೆಯೇ ಒಪ್ಪಿಕೊಳ್ಳುವ ಹಾಗೆ ಮಾಡುವುದು ಈ ಪ್ರಯೋಗದ ಹಿಂದಿನ ಉದ್ದೇಶ. ನೋಡುತ್ತಾ ನೋಡುತ್ತಾ ನೋಡುಗನೂ ನೃತ್ಯ ಮಾಡುವಂತೆ ತನ್ನ ದೇಹವನ್ನು ತೊನೆಯುವಂತೆ ಮಾಡುವ ಮೂವರು ಕಲಾವಿದರು ಒಬ್ಬ ನೋಡುಗನನ್ನು ಸಹ ತಮ್ಮ ನೃತ್ಯದೊಳಗೆ ಸೇರಿಸಿಕೊಂಡು ಯಾವುದೋ ಸಂಗೀತಕ್ಕೆ ನರ್ತಿಸುವುದೂ ಇದೆ. ನಮ್ಮ ನಡುವಿನ ಗೋಡೆಗಳನ್ನು ಕಳಚಿಕೊಳ್ಳದೆ ನಮ್ಮ ಬದುಕು ಸಹ ಸುಂದರ ಎನಿಸದು ಎಂದು ಸರಳವಾಗಿ ಹೇಳುವ ಈ ಪ್ರಯೋಗವು ಬಹುಕಾಲ ನೆನಪಲ್ಲಿ ಉಳಿಯುವಂತಹದು,

ಗಾಡ್ಸ್ ಆರ್ ಫಾಲನ್ ಅಂಡ್ ಆಲ್ ಸೇಫ್ಟಿ ಗಾನ್

ಗ್ರೇಸ್ಕೇಲ್ ಥಿಯೇಟರ್ ಕಂಪೆನಿಯವರು ಅಭಿನಯಿಸಿದ ಈ ನಾಟಕ ಸಮ್ಮರ್ ಹಾಲ್ ಸಮುಚ್ಛಯದ ಕೇರ್ನ್ಸ್ ಲೆಕ್ಚರ್ ಹಾಲ್‍ನಲ್ಲಿ ಸಿದ್ಧವಾಗಿದ್ದ ತಾತ್ಕಾಲಿಕ ವೇದಿಕೆಯಲ್ಲಿ ನೂರು ಜನ ಮಾತ್ರ ಕೂರಬಹುದಾದ ಅಂಗಳದಲ್ಲಿ ಪ್ರದರ್ಶನವಾಯಿತು. ಗ್ರೇಸ್ಕೇಲ್ ಥಿಯೇಟರ್ ಕಂಪೆನಿಯವರು ಬಹುಕಾಲದಿಂದ ನಾಟಕ ಕಟ್ಟುವ ಶೈಲಿ, ಫಾರ್ಮ್, ಪಾತ್ರರಚನೆ ಮತ್ತು ಕಥನ ಕ್ರಮಗಳಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡುತ್ತಾ ಇರುವವರು. “ಬೋರ್ ಆಗುವುದರಿಂದ ಬಿಡುಗಡೆ ಕೊಡಿ” ಎನ್ನುವ ನೋಡುಗರಿಗಾಗಿಯೇ ನಾಟಕ ಕಟ್ಟುವ ಉದ್ದೇಶ ಇವರದ್ದು.

“ಗಾಡ್ಸ್ ಆರ್ ಫಾಲನ್ ಅಂಡ್ ಆಲ್ ಸೇಫ್ಟಿ ಗಾನ್” 55 ನಿಮಿಷಗಳ ನಾಟಕ. ಇದು ಒಬ್ಬ ತಾಯಿ ಮತ್ತು ಮಗಳ ನಡುವೆ ಆಗುವ ಸಂವಾದವನ್ನು ಹೊಂದಿರುವ ನಾಟಕ. ಇವೆರಡೂ ಪಾತ್ರಗಳನ್ನು ಅಭಿನಯಿಸುವವರು ಮಾತ್ರ ಗಂಡಸರೇ. ಹೆಣ್ಣಿನ ಪಾತ್ರವೆಂದು ನಟಿಸುವವರು ಹೆಣ್ಣಿನ ವೇಷ ಧರಿಸುವ ಬದಲಿಗೆ ಗಂಡಸರೇ ದಿರಿಸಲ್ಲೇ ಇರುತ್ತಾರೆ. ನಾಟಕ ನೋಡುತ್ತಾ ನೋಡುತ್ತಾ ಅದು ಹೆಣ್ಣು ಪಾತ್ರಗಳು ಎಂಬುದು ನೋಡುಗನಿಗೆ ತಿಳಿಯತೊಡಗುತ್ತದೆ. ಇದಕ್ಕೆ ಸಂವಾದಿಯಾಗಿ ಎಂಬಂತೆ ಅದೇ ವೇದಿಕೆಯಲ್ಲಿ ನೋಡುಗರಾಗಿ ಬಂದ ಅಥವಾ ಸ್ಥಳೀಯ ತಾಯಿ – ಮಗಳನ್ನು ಸಹ ಕೂರಿಸಿರುತ್ತಾರೆ. ಅವರು ನಾಟಕದ ನೋಡುಗರಾಗುವದಲ್ಲದೆ, ನಾಟಕದ ಭಾಗವೂ ಆಗಿ ವೇದಿಕೆಯ ಒಂದು ಮೂಲೆಯಲ್ಲಿ ಕಾಫಿ ಕುಡಿಯುತ್ತಾ ಕೂತಿರುತ್ತಾರೆ. ಸಾಮಾನ್ಯವಾಗಿ ತಾಯಿ – ಮಗಳ ನಡುವೆ ಪ್ರತಿದಿನ ನಡೆಯುವ ಅವೇ ಮಾತುಗಳು ಮತ್ತೆ ಮತ್ತೆ ಆಗುತ್ತಾ ಹೋದಂತೆ ಮಗಳಿಗೆ ತಾಯಿಯ ಬಗ್ಗೆ ಇರುವ ಸಿಟ್ಟು ಗೊತ್ತಾಗುತ್ತಾ ಹೋಗುತ್ತದೆ. ಆದರೆ ಅದೇ ತಾಯಿಯನ್ನು ಆಕೆ ಕಳಕೊಂಡ ಕಾಲದ ನಂತರವೂ ಅವೇ ಮಾತುಗಳ ಪುನರಾವರ್ತನೆಯಲ್ಲಿ ಮಗಳು ತಾಯಿಯೊಡನೆ ಆಡುವ ಅವೇ ಮಾತುಗಳ ಧ್ವನಿಯೇ ಬೇರೆಯಾಗಿ, ನಾವು ಕಳಕೊಂಡದ್ದೆಲ್ಲವೂ ನೆನಪಿಗೆ ಬಂದು ಕಣ್ಣು ತುಂಬಿಕೊಳ್ಳುತ್ತದೆ. ತೀರಾ ಸರಳವಾದ ರಂಗಸಜ್ಜಿಕೆಯಲ್ಲಿ ಮನೆ ಎಂಬುದನ್ನು ದಾಖಲಿಸುತ್ತಾ ಪ್ರತಿ ಜೀವಕ್ಕೂ ಸಂಬಂಧಗಳು ಹೇಗೆ ಅನಿವಾರ್ಯ ಹಾಗೂ ಅಗತ್ಯ ಎಂದು ದಾಖಲಿಸುವ ಈ ನಾಟಕವು ಅಭಿನಯ ಪ್ರಧಾನವಾದ ನಾಟಕ. ಸ್ವಲ್ಪ ಎಡವಿದರೂ ಮೆಲೋಡ್ರಾಮ ಆಗಿಬಿಡಬಹುದಾದ ವಿವರವನ್ನು ಈ ನಟರು ನಿರ್ವಹಿಸಿದ ರೀತಿ ಅದ್ಭುತ. ನಾಟಕವು ಮುಗಿದ ನಂತರವು ನಿರಂತರವಾಗಿ ನಮ್ಮನ್ನು ಕಾಡುತ್ತಾ ಇರುತ್ತದೆ. ನಮ್ಮ ಸುತ್ತಲ ಸಂಬಂಧಗಳನ್ನು ನಾವು ನೋಡುವ ಮತ್ತು ಅವರೊಂದಿಗೆ ನಾವು ನಡೆದುಕೊಳ್ಳುವ ಕ್ರಮವನ್ನೇ ಬದಲಿಸುವಂತಹ ಪ್ರಯೋಗವಿದು. (ಕಳೆದ ವರ್ಷ ತನ್ನ ತಾಯಿಯನ್ನು ಕಳಕೊಂಡಿದ್ದ ಗೆಳೆಯ ವೆಂಕಟೇಶ್ ಪ್ರಸಾದ್ ಈ ನಾಟಕವನ್ನು ನೋಡಿದ ನಂತರ ಕಣ್ಣು ತುಂಬಿಕೊಂಡು ನಿಂತದ್ದನ್ನು ಸಹ ಮರೆಯಲಾಗದು.

ಈ ದಿನ ನೋಡಿದ ಮೂರು ಭಿನ್ನ ಪ್ರಯೋಗಗಳೂ ವಿಶಿಷ್ಟವಾದುದು. ಕಡೆಯ ಪ್ರಯೋಗ ಮರೆಯಲಾಗದ್ದು. ನಾಳೆ ಮತ್ತೇನೋ ಕಾದಿದೆಯೋ ನಾಳೆಗೆ ಬಿಡುವ

– ಬಿ.ಸುರೇಶ

26 ಆಗಸ್ಟ್ 2015

Advertisements

0 Responses to “ಎಡಿನ್ಬರಾ ದಿನಚರಿ 26th Aug 2015”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: