ಎಡಿನ್ಬರಾ ದಿನಚರಿ 27th Aug 2015

ಐದನೆಯ ದಿನ

ಎಡಿನ್ಬರಾ ನಗರದಲ್ಲಿ ಹಗಲಿನಾರಂಭಕ್ಕೆ ಓಡಾಡುವುದೇ ಒಂದು ಆನಂದ. ಬೆಳಗಿನ ಕಿರಣಗಳು ಇಲ್ಲಿ ಮೂಡಿಸುವ ಸ್ವರ್ಗವನ್ನು ಸ್ವತಃ ಇದ್ದೇ ಆನಂದಿಸಬೇಕು. ಇಂತಹ ಹಗಲಿನಲ್ಲಿ ಏರು ತಗ್ಗುಗಳ ರಸ್ತೆಯಲ್ಲಿ ನಡೆಯುತ್ತಾ ನಡೆಯುತ್ತಾ ಹಗಲಿನ ನಡಿಗೆಯಲ್ಲಿ ಇದ್ದೇವೋ ಅಥವಾ ಯಾವುದೋ ರಮ್ಯ ತಾಣಕ್ಕೆ ಬಂದಿದ್ದೇವೋ ಎಂಬುದನ್ನು ಮರೆತುಬಿಡುವುದು ಸಹಜ. ರಾತ್ರಿಯಿಡೀ ಉತ್ಸವದಲ್ಲಿದ್ದ ನಗರ ಹಗಲಿಗೆ ತೆರೆದುಕೊಳ್ಳುವಾಗ ಕಾಣುವ ನೆಮ್ಮದಿಯನ್ನು ನಾನೂ ಸಹ ಅನುಭವಿಸಿದೆ. ಆ ಮೂಲಕ ದಿನದಾರಂಭವಾಯಿತು.

ಇಂದು ಹಗಲಿನಾರಂಭಕ್ಕೆ ನಿರ್ಮಾಪಕರುಗಳ ಸಭೆಯೊಂದು ಎಡಿನ್ಬರಾ ಫೆಸ್ಟಿವಲ್ ಸೆಂಟರ್‍ನಲ್ಲಿ ಶುರುವಾಯಿತು. ನೂರಾರು ಜನ ನಾಟಕದ ನಿರ್ಮಾಪಕರು, ಬೇರೆ ಬೇರೆ ದೇಶದಿಂದ ಉತ್ಸವಕ್ಕಾಗಿ ಬಂದಿದ್ದ ಪ್ರತಿನಿಧಿಗಳು… ಎಲ್ಲರೂ ಒಂದೆಡೆ ಸೇರಿದ್ದರು. ಪ್ರತಿಯೊಬ್ಬರೂ ತಮ್ಮ ನಾಟಕ ಕಟ್ಟಿದ ಕ್ರಮ ಕುರಿತು ಮಾತಾಡುತ್ತಾ, ಆ ನಾಟಕವನ್ನು ನಿಮ್ಮ ದೇಶಕ್ಕೆ ಕರೆಸಿಕೊಳ್ಳಿ ಎಂಬ ಆಹ್ವಾನ ನೀಡುತ್ತಾ ಇದ್ದರು. ನಾನೂ ಸಹ ಹಲವರ ಜೊತೆಗೆ ಮಾತಾಡಿದೆ. ಅವರಲ್ಲಿ ಕೆಲವರನ್ನಾದರೂ ನಮ್ಮಲ್ಲಿಗೆ ಕರೆಸಿ ನಾಟಕ ಶಿಬಿರಗಳನ್ನು ಹಾಗೂ ಪ್ರದರ್ಶನಗಳನ್ನು ಏರ್ಪಡಿಸಬೇಕು ಎಂಬ ಆಸೆಯಿದೆ. ಆ ಬಗೆಗಿನ ಮಾತುಗಳನ್ನು ಹಲವರಲ್ಲಿ ಹಂಚಿಕೊಂಡೆ. ಹೀಗೆ ವಿದೇಶದಿಂದ ಕರೆಸಿಕೊಳ್ಳುವುದಕ್ಕೆ ತಗಲುವ ಖರ್ಚನ್ನು ನಿಭಾಯಿಸಲು ಇರುವ ಮಾರ್ಗಗಳನ್ನು ಸಹ ನಾವಿನ್ನೂ ತಿಳಿಯಬೇಕಿದೆ.

ಈ ಸಭೆಯ ನಂತರ “ಕಲೆ ಮತ್ತು ರಾಜಕೀಯ” ಎಂಬ ವಿಷಯ ಕುರಿತು ಸಂವಾದ ನಡೆಯಿತು. ಬೇರೆ ಬೇರೆ ದೇಶಗಳಲ್ಲಿ ಇರುವ ಸರ್ಕಾರಗಳ ನಿಲುವುಗಳು ಹೇಗೆ ಆ ದೇಶದ ಸಾಂಸ್ಕೃತಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿಷಯ ಕುರಿತು ಹಲವರು ಅಭಿಪ್ರಾಯ ಮಂಡಿಸಿದರು. ಸ್ವತಃ ಅಂತಹ ರಾಜಕೀಯ ಒತ್ತಡಗಳನ್ನು ಅನುಭವಿಸುತ್ತಾ ಇರುವ ನಮ್ಮ ದೇಶದವರಿಗೆ ಇಲ್ಲಾದ ಬಹುತೇಕ ಮಾತುಗಳು ನೇರವಾಗಿ ಅನ್ವಯವಾಗುವಂತಹದು.

ಕನ್‍ಫರ್ಮೇಷನ್

ಸಮ್ಮರ್‍ಹಾಲ್‍ನ ಡಿಸೆಕ್ಷನ್ ರೂಂ ಜಾಗದಲ್ಲಿ ವಾರ್‍ವಿಕ್ ಆರ್ಟ್ಸ್ ಸೆಂಟರ್ ಮತ್ತು ಚೈನಾ ಪ್ಲೇಟ್ ಸಂಸ್ಥೆಗಳ ಸಹಯೋಗದೊಡನೆ ಕ್ರಿಸ್ ಥಾರ್ಪೆ ರೂಪಿಸಿದ “ಕನ್‍ಫರ್ಮೇಷನ್” ಎಂಬ ನಾಟಕದ ನಡು ಮಧ್ಯಾಹ್ನದ ಪ್ರದರ್ಶನ ನೋಡಿದೆವು. ಕ್ರಿಸ್ ಥಾರ್ಪೆ ಯುಕೆಯ ಪ್ರಧಾನ ಕಲಾವಿದರಲ್ಲಿ ಒಬ್ಬರು. ಆತ ಮನುಷ್ಯನ ನಡವಳಿಕೆಗಳನ್ನು ಕುರಿತು ಪ್ರಶ್ನೆಗಳನ್ನೆತ್ತುವ ಅನೇಕ ನಾಟಕಗಳನ್ನು ರೂಪಿಸಿದ್ದಾರೆ. ಪ್ರತಿ ಮನುಷ್ಯನ ವರ್ತನೆಗೆ ಮತ್ತು ಸಮಕಾಲೀನ ರಾಜಕೀಯಕ್ಕೂ ಇರುವ ಸಂಬಂಧಗಳನ್ನು ಸೂಕ್ಷ್ಮವಾಗಿ ಗಮನಿಸುವ ಯತ್ನ ಇಲ್ಲಿ ಮುಖ್ಯವಾದುದು. ಹಾಗಾಗಿಯೇ ಕ್ರಿಸ್ ಥಾರ್ಪೆ ತನ್ನ ನಾಟಕಗಳನ್ನು “Performance lecture” ಎಂದು ಕರೆಯುತ್ತಾರೆ. “Confirmation” ಸಹ ಅಂತಹುದೇ ಪ್ರಯತ್ನ. ಸರಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಲಾವಿದ ನೋಡುಗರ ಜೊತೆಗೆ ನೇರ ಸಂವಾದದಲ್ಲಿ ತೊಡಗುತ್ತಾರೆ. ಈ ಸಂವಾದದ ಮೂಲಕ ಮನುಷ್ಯ ಮನುಷ್ಯರ ನಡುವೆ ಇರುವ ಅಂತರಗಳನ್ನು, ವ್ಯಕ್ತಿಯು ತನ್ನದೇ ಪೂರ್ವಾಗ್ರಹದಿಂದ ತನ್ನ ನಡವಳಿಕೆಯನ್ನು ನೋಡುವ ಕ್ರಮವನ್ನು ಚರ್ಚಿಸುತ್ತಾ ಅಂತಿಮವಾಗಿ ಒಂದೇ ಸಮಾಜದ ನಡುವೆ ಅದೆಷ್ಟು ಗೋಡೆಗಳೆದ್ದಿವೆ ಎಂಬ ವಿವರವನ್ನು ಬಿಚ್ಚಿಡುತ್ತಾರೆ. ಈ ಪ್ರದರ್ಶನದಲ್ಲಿ ಭಾಗವಹಿಸುವ ನೋಡುಗ ಮುಕ್ತವಾಗಿದ್ದಾಗ ಇದೊಂದು ಅದ್ಭುತ ಪ್ರಯೋಗವಾಗುತ್ತದೆ. ಹಾಗಲ್ಲದೆ ತನ್ನನ್ನು ತಾನು ತೆರೆದುಕೊಳ್ಳಲಾಗದ ಸಮೂಹ ಎದುರಿಗಿದ್ದರೆ ಅಭಿನಯಿಸುತ್ತ, ಪ್ರಶ್ನೆಗಳನ್ನು ಎಸೆಯುತ್ತಾ ಇರುವ ನಟನಿಗೆ ಜಂಪು ಹಲಗೆ ಸಿಗುವುದು ಕಷ್ಟ. ನಮಗಂತೂ ವೆಲ್ಷಿಯನ್ ಇಂಗ್ಲೀಷನ್ನು ಅರ್ಥ ಮಾಡಿಕೊಳ್ಳುವುದೇ ತ್ರಾಸು. ಹೀಗಾಗಿ ಆತ ಕೇಳುವ ಪ್ರಶ್ನೆಗಳನ್ನರಿತು ಪ್ರತಿಕ್ರಿಯೆ ನೀಡುವಂತಾಗುವಷ್ಟರಲ್ಲಿ ನಟ ಮತ್ತೊಂದು ವಿಷಯಕ್ಕೆ ಸಾಗಿಬಿಟ್ಟಿರುತ್ತಾನೆ. ಆದರೆ ಆಪ್ತರಂಗಮಂದಿರದಲ್ಲಿ ವೃತ್ತದ ನಡುವೆ ನಡೆವ ಇಂತಹ ಪ್ರಯೋಗಗಳು ನಿಜಕ್ಕೂ ನಮ್ಮಲ್ಲಿಯೂ ಮಾಡಬಹುದಾದ್ದು. ಇಂತಹುದನ್ನು ಮಾಡುವುದಕ್ಕೆ ಕಲಾವಿದರ ರಾಜಕೀಯ/ ಸಾಮಾಜಿಕ/ ಆರ್ಥಿಕ ತಿಳುವಳಿಕೆಗಳು ಗಟ್ಟಿಯಾಗಿರಬೇಕು. ಇಲ್ಲವಾದರೆ ನೋಡುಗನು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಾಗ ಕಲಾವಿದ ಕಕ್ಕಾವಿಕ್ಕಿಯಾಗಿಬಿಡಬಹುದು ಎನಿಸಿದ್ದು ಹೌದು.

20150827_124657

A still from the play “Confirmation”

ಗಿವ್ ಮಿ ಎ ರೀಸನ್ ಟು ಲೀವ್

ಡ್ಯಾನ್ಸ್ ಬೇಸ್‍ನ ಸ್ಟುಡಿಯೋ 3ರಲ್ಲಿ ಕ್ಲೇರ್ ಕನ್ನಿಂಗ್‍ಹ್ಯಾಮ್ ಅವರ ಅಭಿನಯದ “Give Me A Reason To Live” ಪ್ರದರ್ಶನವಿತ್ತು. ಈ ಡ್ಯಾನ್ಸ್ ಬೇಸ್ ಸ್ಟುಡಿಯೋ ಇರುವುದೇ ಗ್ರಾಸ್ ಮಾರ್ಕೆಟ್ ರಸ್ತೆ ಎಂಬ ವಿಶಿಷ್ಟ ಜಾಗದಲ್ಲಿ. ಇಲ್ಲಿ ಮುಖ್ಯ ರಸ್ತೆಯ ಬದಿಗೆ ಒಂದು ವಿಶಾಲ ಜಾಗವಿದೆ. ಈ ಜಾಗದುದ್ದಕ್ಕೂ ಅನೇಕ ಹೊಸ ಕಲಾವಿದರು ತಮ್ಮ ಸಂಗೀತದ, ನೃತ್ಯದ, ಮ್ಯಾಜಿಕ್ಕಿನ ಪ್ರದರ್ಶನ ಮಾಡುತ್ತಾ ಇರುತ್ತಾರೆ. ಅದರ ಮತ್ತೊಂದು ಬದಿಗೆ ಉದ್ದಕ್ಕೆ ಹೋಟೆಲುಗಳು. ಈ ರಸ್ತೆಯಲ್ಲಿನ ಪ್ರದರ್ಶನಗಳನ್ನು ನೋಡುತ್ತಾ ನಿಲ್ಲುವ ಜನ ಸಂತೆಯಾಚೆಗೆ ಡ್ಯಾನ್ಸ್ ಬೇಸ್ ಥಿಯೇಟರ್. ಅಲ್ಲಿ ನಾಲ್ಕು ನೃತ್ಯ ಪ್ರದರ್ಶನದ ವೇದಿಕೆಗಳಿವೆ. ಇಲ್ಲಿ ಅಪರಾಹ್ನ 3 ಗಂಟೆಗೆ ಕ್ಲೇರ್ ಕನ್ನಿಂಗ್‍ಹ್ಯಾಮ್ ಅವರ ನೃತ್ಯದ ಪ್ರದರ್ಶನವಿತ್ತು.

ಕ್ಲೇರ್ ಕನ್ನಿಂಗ್‍ಹ್ಯಾಮ್ ಪೊಲಿಯೋದಿಂದಾಗಿ ಕಾಲುಗಳ ಮೇಲೆ ಸ್ವಾಧೀನ ಇಲ್ಲದ ಕಲಾವಿದೆ. ಗ್ಲಾಸ್‍ಗೋ ನಗರದವರದ ಕ್ಲೇರ್ ಬಹುಮಾಧ್ಯಮಗಳನ್ನು ಬಳಸಿಕೊಳ್ಳುವ ಪ್ರದರ್ಶನಗಳಿಂದಾಗಿ ಜನಪ್ರಿಯರಾದವರು. ತಮ್ಮ ಅಂಗವೈಕಲ್ಯವನ್ನೇ ಪ್ರಧಾನ ಸಾಧನವಾಗಿಸಿಕೊಂಡು ಸಾಂಪ್ರದಾಯಿಕ ನೃತ್ಯದ ಕ್ರಮಗಳನ್ನು ಬಳಸದೆ ವಿಶಿಷ್ಟ ಎನಿಸುವ ನೃತ್ಯ ಪ್ರದರ್ಶನ ನೀಡುವುದು ಕ್ಲೇರ್ ಅವರ ಪ್ರದರ್ಶನದ ವೈಶಿಷ್ಟ್ಯ. ಮಧ್ಯಕಾಲೀನ ಯುಗದ ಹೀರೊನಮಸ್ ಬೋಷ್‍ನ “ಗಿವ್ ಮಿ ಎ ರೀಸನ್ ಟು ಲೀವ್” ಎಂಬ ಭಿತ್ತಿಚಿತ್ರದಿಂದ ಪ್ರೇರಿತರಾಗಿ ಕ್ಲೇರ್ ಕನ್ನಿಂಗ್‍ಹ್ಯಾಮ್ ಈ ಪ್ರದರ್ಶನವನ್ನು ಕಟ್ಟಿದ್ದಾರೆ. ಧಾರ್ಮಿಕ ಹಿನ್ನೆಲೆಗಳು ವ್ಯಕ್ಯಿಯ ದೇಹವನ್ನು ನೋಡುವ ಕ್ರಮ, ಅಂಗವೈಕಲ್ಯವನ್ನು ವಿಭಿನ್ನ ಮನೋಧರ್ಮದವರು ಹೇಗೆ ತೊಂದರೆಗೆ ಒಳಪಡಿಸುತ್ತಾರೆ ಎಂಬುದನ್ನು ಹೇಳುತ್ತಾ ಕ್ಲೇರ್ ಅವರು ನಾಜಿ಼ ಸರ್ಕಾರಗಳು ದಯಾಮರಣದ ಹೆಸರಲ್ಲಿ ಮಾಡಿದ ಘೋರಗಳನ್ನು ಕುರಿತು ಮಾತಾಡುತ್ತಾ ಅಂಗವೈಕಲ್ಯ ಎಂಬುದೇ ಶಾಪ ಎನಿಸುವಂತಹ ಸಮಾಜವು ಎಂದಿಗೂ ಅಪಾಯಕಾರಿ ಎಂದು ತಮ್ಮ ದೇಹವನ್ನು ಬಳಸುವ ಕ್ರಮದಿಂದಲೇ ಸೂಚಿಸುತ್ತಾ ಹೋಗುತ್ತಾರೆ. ಆ ಮೂಲಕ ಅಂಗವಿಕಲರಿಗೂ ಬದುಕುವ ಅವಕಾಶ ಕೊಡಿ ಎಂಬ ಸ್ಪಷ್ಟ ಸಂದೇಶವನ್ನು ದಾಟಿಸುತ್ತಾರೆ.

ಇದೊಂದು ತಟ್ಟನೆ ಮನಸ್ಸನ್ನು ತುಂಬುವ ಪ್ರಯೋಗ. ಎಂತಹ ನೋಡುಗನಿಗಾದರೂ ತಟ್ಟನೆ ಅಂಗವಿಕಲರ ಬಗ್ಗೆ ಅನುಕಂಪ ಮೂಡುವುದು ಸಹಜ. ಆದರೆ ಪ್ರದರ್ಶನದ ಹಾದಿಯಲ್ಲಿ ಅಂಗವಿಕಲರು ಅನುಭವಿಸುವ ಸಂಕಷ್ಟಗಳು ತೆರೆದುಕೊಂಡಂತೆ ಹುಟ್ಟುವ ಅನುಭೂತಿ ದೈಹಿಕ ಅಂಗವೈಕಲ್ಯಕ್ಕಿಂತ ಅಂಗವಿಕಲರನ್ನು ನೋಡುವವರ ಮನಸ್ಸಿನ ಅಂಗವೈಕಲ್ಯ ಅಪಾಯಕಾರಿ ಎನಿಸುವಂತೆ ಮಾಡುವುದು ಈ ಪ್ರದರ್ಶನದ ಯಶಸ್ಸು. ಇದೊಂದು ಏಕವ್ಯಕ್ತಿ ನೃತ್ಯ ಪ್ರದರ್ಶನ. ಹಿನ್ನೆಲೆಗೆ ಬಳಸಿದ್ದ ಸಂಗೀತ ಮತ್ತು ಬೆಳಕಿನ ವಿನ್ಯಾಸವು ಮೂಡಿಸುತ್ತಾ ಇದ್ದ ಬೃಹತ್ ನೆರಳುಗಳು ಮರೆಯಲಾಗದ ಚಿತ್ರಗಳನ್ನು ಮನಸ್ಸಲ್ಲಿ ನಿಲ್ಲಿಸಿದ್ದಂತೂ ಸತ್ಯ.

“ಓ ನೋ”

ಅಸೆಂಬ್ಲಿ ರಾಕ್ಸಿ ಎಂಬುದು ಎಡಿನ್ಬರಾದ ಮತ್ತೊಂದು ಪ್ರಮುಖ ರಂಗಕೇಂದ್ರ. ಇಲ್ಲಿ ಒಟ್ಟು ಮೂರು ರಂಗಮಂದಿರಗಳಿವೆ. ಅವುಗಳಲ್ಲಿ ಡೌನ್ ಸ್ಟೇರ್ಸ್ ಎಂದೇ ಗುರುತಿಸಲಾಗುವ ಸುಮಾರು ನೂರೈವತ್ತು ಜನ ಕೂರಬಹುದಾದ ರಂಗಮಂದಿರದಲ್ಲಿ ನಾವು ಜೇಮಿ ಉಡ್ ಅಭಿನಯದ “ಓ! ನೋ!” ಎಂಬ ನಾಟಕ ನೋಡಿದೆವು. ಲ್ಯೂಕ್ ಎಮ್ರಿ ನಿರ್ಮಾಣದ, ವೆಂಡಿ ಹಬ್ಬಂಡ್ ನಿರ್ದೇಶನದ ಈ ನಾಟಕವು ಜೇಮಿ ಉಡ್ ಅವರ ಏಕವ್ಯಕ್ತಿ ಪ್ರದರ್ಶನ. ಕ್ಲೌನಿಂಗ್ ಎಂದು ಗುರುತಿಸಲಾಗುವ ತಮಾಷೆಯ ಪ್ರಧಾನವಾದ ರಂಗಪ್ರಸ್ತುತಿ ಇದು.

20150827_185757

Jamie Wood’s “Oh No!”

ಈ ನಾಟಕದಲ್ಲಿ ಯೂಕೋ ಓನೋ ಬರೆದಿರುವ Principles of art ಪುಸ್ತಕವನ್ನು ಓದುತ್ತಾ ಅದರಂತೆಯೇ ನಾಟಕ ಬೆಳೆಸುವ ಜೇಮಿ ಉಡ್ ನಾಟಕದಲ್ಲಿ ಪ್ಲಾಸ್ಟಿಕ್ ಬಾಲನ್ನು ಸೂರ್ಯ ಎಂದು ಭಾವಿಸುತ್ತಾ ಮಾಡುವ ಅಭಿನಯ, ನಂತರ ಅದೇ ಚೆಂಡನ್ನು ಪ್ರೇಕ್ಷಕರತ್ತ ಕಳಿಸಿ, ಸೂರ್ಯನನ್ನು ಅನುಭವಿಸಿ ಎನ್ನುವುದು, ವೇದಿಕೆಗೆ ನೋಡುಗನೊಬ್ಬನನ್ನು ಕರೆದು ತನ್ನ ಬಟ್ಟೆಯನ್ನು ಕತ್ತರಿಸಿ ಎನ್ನುವುದು, ಮತ್ತೊಬ್ಬ ನೋಡುಗನ ಜೀವನದ ಬಗ್ಗೆ ಬಟ್ಟೆಯೊಂದರ ಮರೆಯಲ್ಲಿ ಕೂತು ಆತ ಮತ್ತು ಜೇಮಿ ಉಡ್ ಬೆತ್ತಲಾಗುವುದು, ಕಡೆಯಲ್ಲಿ ಜಾನ್ ಲೆನನ್‍ನನ್ನು ನೆನಪಿಸುತ್ತಾ ಗನ್ ಸದ್ದಿಗೆ ನೋಡುಗರಲ್ಲಿ ಆರಿಸಿದವರನ್ನು ಸಾಯುವಂತೆ ಬೀಳಿಸುವುದು… ಹೀಗೆ ನಿರಂತರವಾಗಿ ನೋಡುಗರನ್ನು ತೊಡಗಿಸಿಕೊಳ್ಳುತ್ತಾ ಸಾಗುವ ಜೇಮಿ ಉಡ್ ಪ್ರೀತಿಯೆಂಬುದು ಹೇಗೆ ವ್ಯಕ್ತಿಗಳನ್ನು ಒಂದುಗೂಡಿಸುವ ಪ್ರಧಾನ ಸಾಧನ ಎಂದು ಹೇಳುತ್ತಾರೆ. ಜೇಮಿ ಉಡ್ ಅವರ ನಟನೆಯ ಕ್ರಮವೇ ವಿಶಿಷ್ಟ. ನೋಡುಗರು ಅಂಗಳದೊಳಗೆ ಹೋಗುವಾಗಲೇ ಸ್ವತಃ ಬಾಗಿಲಲ್ಲಿ ನಿಂತು, “Let’s be positive” ಎನ್ನುತ್ತಲೇ ಜೇಮಿ ಉಡ್ ಆಹ್ವಾನಿಸುತ್ತಾರೆ. ಆತನ ಗಡ್ಡ, ಆತನ ದಿರಿಸು ಇತ್ಯಾದಿಗಳು ಯೇಸು ಕ್ರಿಸ್ತನನ್ನು ನೆನಪಿಸುವಂತೆ ಕಾಣುತ್ತಿದೆ ಎಂದು ತಮಾಷೆ ಮಾಡುತ್ತಲೇ ನಾಟಕ ನೋಡಲು ಬರುವ ನೋಡುಗ ನಾಟಕದಂತ್ಯಕ್ಕೆ ಅದೇ ನಗುಮುಖದ ಜೊತೆಗೆ ಉಳಿಯುತ್ತಾನೆ.

ಇದು ಪ್ರಾಯಶಃ ನನ್ನ ಜೀವನದುದ್ದಕ್ಕೂ ನೆನಪಲ್ಲಿ ಉಳಿಯುವಂತಹ ನಾಟಕ. ಜೇಮಿ ಉಡ್‍ ನೋಡುಗರನ್ನು ನಿರಂತರವಾಗಿ ತೊಡಗಿಸಿಕೊಳ್ಳುವ ಕ್ರಮ ನಿಜಕ್ಕೂ ಬೆರಗು ಹುಟ್ಟಿಸುವಂತಹದು. ನಾಟಕದ ಮಾರನೆಯ ದಿನ ಮತ್ತೆ ಜೇಮಿ ಉಡ್‍ ಅವರನ್ನು ಭೇಟಿ ಮಾಡಿ ಮಾತಾಡಿದೆ. ಆತನ ಉತ್ಸಾಹ ರಂಗಾದಿಂದಾಚೆಗೂ ಅದೇ ಕ್ರಮದಲ್ಲಿ ಇತ್ತೆನ್ನುವುದು ವಿಶೇಷ

ಆಮ್ ಐ ಡೆಡ್‍ ಯೆಟ್

ಟ್ರಾವರ್ಸ್ ಥಿಯೇಟರ್‍ನ ಎರಡನೆಯ ರಂಗಮಂದಿರದಲ್ಲಿ ರಾತ್ರಿ 11ಕ್ಕೆ ನಾವು ನೋಡಿದ ನಾಟಕ “ಆಮ್ ಐ ಡೆಡ್ ಯೆಟ್”.

20150827_205141

ಟ್ರಾವರ್ಸ್ ಥಿಯೇಟರ್‍ನಲ್ಲಿ ಮೂರು ರಂಗಮಂದಿರಗಳಿವೆ. ಇಡಿಯಾಗಿ ಆ ರಂಗಮಂದಿರವನ್ನು ವಿನ್ಯಾಸಗೊಳಿಸಿರುವ ಕ್ರಮವೇ ವಿಶಿಷ್ಟವಾದುದು. ಅಲ್ಲಿ ಬಂದವರಿಗೆ ಕೂರಲು ಮಾಡಿರುವ ಜಾಗ, ರಂಗಮಂದಿರದ ಬಳಿ ಇರುವ ಕೆಫೆಟೇರಿಯಾ/ಬಾರ್ ಇತ್ಯಾದಿಗಳು ಒಳಗೆ ಬಂದವರನ್ನು ಆಕರ್ಷಿಸುತ್ತವೆ.

20150827_222403 20150827_222444

20150827_230851

ರಂಗಮಂದಿರವೂ ಅಷ್ಟೇ ಚೆನ್ನಾಗಿ ವಿನ್ಯಾಸವಾಗಿದೆ. ವೇದಿಕೆಯ ಮೂರು ಬದಿಗೆ ಸರಿಸುಮಾರು ಇನ್ನೂರು ಜನ ನೋಡುಗರು ಕೂರುವಂತಹ ವ್ಯವಸ್ಥೆ. ಯಾರು ಎಲ್ಲೇ ಕೂತರೂ ನಾಟಕದ ಯಾವ ಭಾಗವೂ ಕಾಣಿಸದ ಹಾಗೆ ಆಗುವುದಿಲ್ಲ. ಇದರಿಂದಾಗಿ ಇಲ್ಲಿ ನಾಟಕ ನೋಡುವುದರಿಂದ ಸಿಗುವ ಅನುಭವವೇ ವಿಭಿನ್ನ. ಪ್ರಾಯಶಃ ನಮ್ಮಲ್ಲಿಯೂ ಈ ಬಗೆಯ ರಂಗಮಂದಿರಗಳನ್ನು ಕಡಿಮೆ ಖರ್ಚಿನಲ್ಲಿ ಕಟ್ಟುವುದಕ್ಕೆ ಸಾಧ್ಯವಿದೆ.

ಅನ್‍ಲಿಮಿಟೆಡ್ ಥಿಯೇಟರ್ ಎಂಬುದು ಕ್ಲೇರ್ ಡಫ್ಫಿ, ಜಾನ್ ಸ್ಪೂನರ್ ಮತ್ತು ಕ್ರಿಸ್ ಥಾರ್ಪೆ ಎಂಬ ಕಲಾವಿದರು ಸೇರಿಕೊಂಡು ಆರಂಭಿಸಿರುವ ಸಂಸ್ಥೆ. ಇಂದು ಬೆಳಿಗ್ಗೆ “ಕನ್‍ಫರ್ಮೇಷನ್” ನಾಟಕದಲ್ಲಿ 85 ನಿಮಿಷ ಮಾತಾಡಿದ್ದ ಅದೇ ಕ್ರಿಸ್ ಥಾರ್ಪೆ ಈ ನಾಟಕದಲ್ಲೂ ಪ್ರಧಾನ ಪಾತ್ರಧಾರಿ. ಇದು ಇಬ್ಬರು ಸ್ನೇಹಿತರ ನಡುವೆ ಆಗುವ ಸಾವನ್ನು ಕುರಿತ ಸಂವಾದವಿರುವ ನಾಟಕ. ಪ್ರತಿಯೊಬ್ಬರೂ ಸಾವನ್ನು ಕುರಿತು ಯೋಚಿಸುವ ಕ್ರಮ, ಮತ್ತು ಸತ್ತಾಗ ಏನಾಗುತ್ತದೆ ಎಂಬುದನ್ನು ಹಾಡು ಮತ್ತು ಕತೆಗಳ ಮೂಲಕ ಇಬ್ಬರು ಪಾತ್ರಧಾರಿಗಳು ಬಿಚ್ಚಿಡುತ್ತಾ ಹೋಗುತ್ತಾರೆ. ನಾಟಕದ ಅಂತ್ಯದಲ್ಲಿ ನೋಡುಗರು ಕೂಡ ಸಾವಿನ ಬಗ್ಗೆ ಮಾತಾಡುವ ಹಾಗೆ ಮಾಡುವುದು ಇಲ್ಲಿನ ವಿಶೇಷ. ಇಬ್ಬರು ಅದ್ಭುತ ನಟರು ಸ್ವತಃ ವಾದ್ಯಗಳನ್ನು ನುಡಿಸುತ್ತಾ, ಹಾಡುತ್ತಾ ಆಪ್ತರಂಗಮಂದಿರದಂತಹ ವೇದಿಕೆಯಲ್ಲಿ ನೀಡಿದ ಪ್ರದರ್ಶನ ನಿಜಕ್ಕೂ ಅದ್ಭುತ.

ಇಡಿಯ ದಿನ ನಿರಂತರರವಾಗಿ ರಂಗಭೂಮಿಯ ಜೊತೆಗಿದ್ದು ರಾತ್ರಿ ನಮ್ಮ ಗೂಡು ಸೇರಿದಾಗ ರಾತ್ರಿ ಒಂದು ದಾಟಿತ್ತು. ಇಷ್ಟಾದರೂ ಇದೊಂದು ಸಾರ್ಥಕ ದಿನವಾಗಿತ್ತು.

– ಬಿ.ಸುರೇಶ

27 ಆಗಸ್ಟ್ 2015

Advertisements

0 Responses to “ಎಡಿನ್ಬರಾ ದಿನಚರಿ 27th Aug 2015”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: