ಎಡಿನ್ಬರಾ ದಿನಚರಿ 28th Aug 2015

ಆರನೆಯ ದಿನ

ಇಂದು ಇಲ್ಲಿ ಹಗಲಾಗುವ ಹೊತ್ತಿಗೆ ಬರೀ ಫೋನು ಕರೆಗಳ ಮತ್ತು ಸಂದೇಶಗಳ ಭರಾಟೆ. ನನ್ನ ಬಗ್ಗೆ ಪ್ರೀತಿಯುಳ್ಳ ಅನೇಕರು ಶುಭಾಶಯ ಕೋರಿದ್ದರು. ನಾನು ಸಾಮಾನ್ಯವಾಗಿ ಇಂತಹ ಕರೆಗಳನ್ನು ಸ್ವೀಕರಿಸುವವನಲ್ಲ. ನಾನು ಹುಟ್ಟಿದ ದಿನವನ್ನೂ ಗೋಪ್ಯವಾಗಿ ಇರಿಸುತ್ತೇನೆ. ಆದರೆ ಈ ಮುಖಪುಸ್ತಕ ಮತ್ತು ಗೂಗಲ್ ಪ್ಲಸ್ ಮುಂತಾದವುಗಳು ಬಂದ ನಂತರ ನಮ್ಮ ವೈಯಕ್ತಿಕ ವಿವರಗಳು ಜಗಜ್ಜಾಹೀರಾಗಿಬಿಡುತ್ತದೆ. ಹೀಗಾಗಿ ಪ್ರೀತಿಯ ಮಹಾಪೂರದಿಂದ ತಪ್ಪಿಸಿಕೊಳ್ಳುವುದು ಸ್ವಲ್ಪ ಕಷ್ಟ. ಜೊತೆಯಲ್ಲಿ ಇರುವವನಿಗೆ ಇಷ್ಟೆಲ್ಲಾ ಕರೆಗಳು ಬರುವಾಗ ಜೊತೆಗಾರರಿಗೂ ವಿಷಯ ಗೊತ್ತಾಗಿ, ಅವರೂ ಕೈ ಕುಲುಕುವ – ಶುಭಾಶಯ ಹೇಳುವ ಕೆಲಸ ಮಾಡಿದಾಗ, ಅಷ್ಟೆಲ್ಲಾ ಪ್ರೀತಿಯು ಒಟ್ಟಿಗೆ ಸಿಕ್ಕವನು ಕಂಗಾಲಾಗುವಂತೆ ನಾನೂ ಕಕ್ಕಾವಿಕ್ಕಿಯಾಗಿದ್ದೆ. ನಾನು ಈ ದೇಶಕ್ಕೆ ಒಂದು ಸ್ಪಷ್ಟ ಕಾರಣಕ್ಕಾಗಿ ಬಂದಿದ್ದೇನೆ ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ರಂಗಜಾತ್ರೆಯ ಕಡೆಗೆ ನಡೆದೆ.

ಫೇಕ್ ಇಟ್ ಟಿಲ್ ಯೂ ಮೇಕ್ ಇಟ್

ಟ್ರಾವರ್ಸ್ ರಂಗಸಮುಚ್ಛಯದ ಎರಡನೇಯ ರಂಗಮಂದಿರದಲ್ಲಿ ಬೆಳಗಿನ ಹನ್ನೊಂದಕ್ಕೆ ಮೊದಲ ನಾಟಕ ನೋಡಿದೆವು. ಬ್ರಿಯೋನಿ ಕಿಮ್ಮಿಂಗ್ಸ್ ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿ. ಆಕೆ ಈ ಹಿಂದೆ ಸೃಷ್ಟಿಸಿದ ಪೂರ್ಣಾವಧಿ ನಾಟಕಗಳು, ವಾಚಿಕೆಗಳು, ಸಾಕ್ಷ್ಯಚಿತ್ರಗಳು ಜಗತ್ತಿನಾದ್ಯಂತ ಚರ್ಚಿತವಾಗಿವೆ. ಆಕೆ ತನ್ನ ಎಲ್ಲಾ ಕೆಲಸಗಳನ್ನು ಆತ್ಮಚರಿತ್ರೆಯ ಮಾದರಿಯಲ್ಲಿ ಕಟ್ಟುವವರು. ಈ ಹಿಂದೆ ಆಕೆ ತಯಾರಿಸಿದ್ದ ಲೈಂಗಿಕವಾಗಿ ಹರಡುವ ರೋಗಗಳನ್ನು ಕುರಿತ ನಾಟಕವಂತೂ ಸಂಚಲನವನ್ನೇ ಉಂಟು ಮಾಡಿತ್ತಂತೆ. ನಮಗೆ ಇದು ಆಕೆಯ ಪ್ರದರ್ಶನಗಳ ಮೊದಲ ಪರಿಚಯ. ಕಿಕ್ಕಿರಿದ ಸಭಾಂಗಣದಲ್ಲಿ ಈ ನಾಟಕದ ಪ್ರದರ್ಶನವಾಗುತ್ತಾ ಇತ್ತು.

20150827_230607

“ಫೇಕ್ ಇಟ್ ಟಿಲ್ ಯೂ ಮೇಕ್ ಇಟ್” ಇಬ್ಬರೇ ನಟರು ಅಭಿನಯಿಸಿದ್ದ ನಾಟಕ. ಈ ನಾಟಕವು ಸಾಮಾನ್ಯವಾಗಿ ಬಹುತೇಕ ಜನರು ನಿರ್ಲಕ್ಷಿಸಿ, ಸರಿಯಾದ ವೈದ್ಯಕೀಯ ಸಹಾಯ ಪಡೆಯದ ಮಾನಸಿಕ ಖಿನ್ನತೆಯಿಂದ ಸಂಸಾರ ಮತ್ತು ಸಂಬಂಧಗಳ ನಡುವೆ ಉಂಟಾಗುವ ಸಮಸ್ಯೆಗಳನ್ನು ಕುರಿತು ಮಾತಾಡುತ್ತದೆ. ಬ್ರಿಯೋನಿ ಕಿಮ್ಮಿಂಗ್ಸ್ ಸ್ವತಃ ಅಭಿನಯಿಸಿರುವ ಈ ನಾಟಕದಲ್ಲಿ ಆಕೆಯ ಜೀವನ ಸಂಗಾತಿಯೇ ಅಭಿನಯಿಸಿದ್ದಾನೆ. ಜಾಹೀರಾತು ಉದ್ಯಮದಲ್ಲಿ ಕೆಲಸ ಮಾಡುವ ಜೊತೆಗಾತಿಯನ್ನು ಮದುವೆಯಾದ ಆರು ತಿಂಗಳ ಅವಧಿಯ ಒಳಗೆ ತನ್ನ ಜೊತೆಗಾರನಿಗೆ ಇರುವ ಸಮಸ್ಯೆಯನ್ನು ಗುರುತಿಸಿದ್ದ ಬ್ರಿಯೋನಿ, ತಾನು ಅನುಭವಿಸಿದ ಸಂಕಟಗಳನ್ನೇ ಇಲ್ಲಿ ನಾಟಕವಾಗಿಸಿದ್ದಾರೆ. ಇಂತಹ ಖಿನ್ನತೆಯನ್ನು ಅನುಭವಿಸುವ ಜನ ಹೇಗೆ ಆ ವಿಷಯ ಕುರಿತು ಚರ್ಚಿಸಲು ಮತ್ತು ಅದನ್ನು ಗುಣಪಡಿಸಲು ಹಿಂಜರಿಯುತ್ತಾರೆ ಎಂಬುದನ್ನು ಕಟ್ಟಿಕೊಡುತ್ತಾ, ಈ ಸಮಸ್ಯೆಯನ್ನು ಎದುರಿಸುವುದನ್ನು ಕುರಿತು ನಾಟಕ ಮಾತಾಡುತ್ತದೆ. ಸ್ವತಃ ಜೀವನ ಸಂಗಾತಿಗಳಾಗಿದ್ದವರು, ತಮ್ಮದೇ ಜೀವನದ ಅನುಭವವನ್ನು ನಾಟಕವಾಗಿಸಿ ಅಭಿನಯಿಸಿದ್ದರಿಂದ ಪ್ರತಿ ದೃಶ್ಯವು ನೋಡುಗನಿಗೆ ಆಪ್ತವಾಗುತ್ತಾ ಹೋಗುತ್ತದೆ. ನಾಟಕವು ಅಂತ್ಯದಲ್ಲಿ ಗಂಡನಾದವನ್ನು ತಾನು ಮಾಡಿದ ತಪ್ಪುಗಳನ್ನು ಗ್ರಹಿಸಿ ಅದನ್ನು ಸರಿಪಡಿಸಿಕೊಳ್ಳಲು ನಿರ್ಧರಿಸುವ ಹೊತ್ತಿಗೆ ಪ್ರತಿಯೊಬ್ಬ ನೋಡುಗರನ್ನು ತನ್ನೊಳಗೆ ಕರೆದುಕೊಳ್ಳುವ ಅಭಿನಯದ ಶಕ್ತಿಯಿಂದಾಗಿ ಬಹುತೇಕರ ಕಣ್ಣು ತೇವವಾಗಿರುತ್ತದೆ. ಸ್ವತಃ ಆರೇಳು ತಿಂಗಳ ಗರ್ಭಿಣಿಯಾಗಿದ್ದ ಬ್ರಿಯೋನಿಯ ಅಭಿನಯವಂತೂ ನಾಟಕದ ಮೊದಲರ್ಧವನ್ನು ಆವರಿಸಿಕೊಳ್ಳುತ್ತದೆ. ನಾಟಕ ಮುಗಿಯುವ ಹೊತ್ತಿಗೆ ಆಕೆಯ ಜೊತೆಗಾರ ಟಿಮ್‍ ತನ್ನ ತಪ್ಪುಗಳನ್ನು ಹೇಳಿಕೊಳ್ಳುವ ಮೂಲಕ ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತೆ ಉಳಿದುಬಿಡುತ್ತಾನೆ.

ಸರಿ ಸುಮಾರು ಒಂದು ಗಂಟೆಯ ಈ ನಾಟಕವು ಅಭಿನಯ ಶೈಲಿಯಿಂದಾಗಿ ಮತ್ತು ಕಲಾವಿದರು ತಮ್ಮದೇ ಜೀವನವನ್ನು ಅಭಿವ್ಯಕ್ತಿಸಿದ್ದರಿಂದಾಗಿ ಬಹುಕಾಲ ನನ್ನ ನೆನಪಲ್ಲಿ ಉಳಿಯುತ್ತದೆ.

ಟುಮಾರೋಸ್ ಪಾರ್ಟೀಸ್

ಸಮ್ಮರ್‍ಹಾಲ್‍ನ ಓಲ್ಡ್ ಲ್ಯಾಬ್ ಸಭಾಂಗಣದಲ್ಲಿ ನಡುಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಾವು “ಟುಮಾರೋಸ್ ಪಾರ್ಟೀಸ್” ಎಂಬ ನಾಟಕವನ್ನು ನೋಡಿದೆವು.

ಫೋರ್ಸ್‍ಡ್ ಎಂಟರ್‍ಟೈನ್ಮೆಂಟ್ ಎಂಬುದು ಆರು ಜನ ಕಲಾವಿದರು ಸೇರಿ ಕಟ್ಟಿದ ಸಂಸ್ಥೆ. 1984ರಿಂದ ವಿಶಿಷ್ಟ ರಂಗಪ್ರಯೋಗಳನ್ನು ಈ ತಂಡ ಮಾಡುತ್ತಾ ಇದೆ. ಈ ತಂಡದ ತಾಲೀಮು ಎಂಬುದೇ ಒಂದು ಪ್ರಯೋಗಾಲಯ ಎಂದು ಹೇಳಲಾಗುತ್ತದೆ. ಬದುಕು ಮತ್ತು ಕಲೆಯನ್ನು ಕುರಿತಂತೆ ಏಳುವ ಪ್ರಶ್ನೆಗಳನ್ನು ತಾಲೀಮಿನ ಹಾದಿಯಲ್ಲಿ ಚರ್ಚಿಸುತ್ತಾ ವಿಸ್ತರಿಸುತ್ತಾ ನಾಟಕವಾಗಿಸುವುದು ಈ ಕಲಾವಿದರ ತಂಡದ ವಿಶೇಷ.

20150828_131817

ಟುಮಾರೋಸ್ ಪಾರ್ಟೀಸ್ ಸಹ ಬದುಕಿನ ಅನೇಕ ಕ್ಲೀಷೆಗಳನ್ನು ಮತ್ತು ನಮ್ಮ ನಾಳೆಗಳನ್ನು ಕುರಿತಂತೆ ನಮ್ಮಲ್ಲಿ ಇರಬಹುದಾದ ವಿರುದ್ಧಾಭಿಪ್ರಾಯಗಳನ್ನು ಚರ್ಚಿಸುವ ಇಬ್ಬರು ಕಲಾವಿದರು ಅಭಿನಯಿಸಿದ ನಾಟಕ. ಇಲ್ಲಿ ಗಂಡು ಪಾತ್ರಧಾರಿಯು ನಾಳೆ ಬರಬಹುದಾದ ಆಘಾತ ಕುರಿತು ಮಾತಾಡಿದರೆ ಹೆಣ್ಣು ಪಾತ್ರಧಾರಿಯು ನಾಳೆಯು ತರಬಹುದಾದ ಒಳಿತುಗಳನ್ನು ಕುರಿತು ಮಾತಾಡುತ್ತಾ ಹೋಗುತ್ತದೆ. ಸುಮಾರು 80 ನಿಮಿಷಗಳ ಕಾಲ ಇಬ್ಬರು ಕಲಾವಿದರೂ ಪುಟ್ಟ ವೇದಿಕೆಯ ಮೇಲೆ ನಿಂತು ಒಬ್ಬರ ನಂತರ ಒಬ್ಬರಂತೆ ಭವಿಷ್ಯ ಕುರಿತ ವೈರುಧ್ಯಗಳನ್ನು ಇರಿಸುತ್ತಾ ಹೋಗುತ್ತಾರೆ. ಆ ಮೂಲಕ ನಾಳೆಯಲ್ಲಿ ಇರಬಹುದಾದ ವಿಷಾದಗಳನ್ನು ಮತ್ತು ಆನಂದಗಳನ್ನು ಚಿತ್ರವತ್ತಾಗಿ ಬಿಚ್ಚಿಡುತ್ತಾರೆ.

ಆದರೆ ಮಾತುಗಳ ಮೂಲಕವೇ ಕಟ್ಟಿದ ನಾಟಕವಾದ್ದರಿಂದ ಮೊದಲ ಹತ್ತು ನಿಮಿಷಗಳ ನಂತರ ನೋಡುಗನಿಗೆ ಏಕತಾನತೆ ಆವರಿಸಿಕೊಳ್ಳುತ್ತದೆ. ನೋಡುಗನ ಮನಸ್ಸು ಮಾತುಗಳನ್ನು ಕೇಳದಂತೆ ಕಿವಿಗೆ ಚಿಲಕ ಜಡಿದು ಬಿಡುತ್ತದೆ. ಆದರೆ ಒಟ್ಟು ನಾಟಕದ ವಸ್ತು ಕಾಡುವಂತಹದು. ನಾವು ನಮ್ಮ ನಾಳೆಗಳನ್ನು ನೋಡುವ ಕ್ರಮ ಗುಣಾತ್ಮಕವಾಗದೆ ಹೋದರೆ ನಮ್ಮ ಈ ಕ್ಷಣಗಳು ಸಹ ನರಳುತ್ತವೆ ಎಂಬುದನ್ನು ಬಿಚ್ಚಿಡುವ ಕ್ರಮ ನೆನಪಲ್ಲಿ ಉಳಿಯುವಂತಹದು.

ದಿಸ್ ಈಸ್ ಹವ್ ವಿ ಡೈ

ಫಾರೆಸ್ಟ್ ಫ್ರಿಂಜ್ ಎಂಬ ರಂಗಮಂದಿರವು ಎಡಿನ್ಬರಾದ ಬಹುತೇಕ ರಂಗಮಂದಿರಗಳಿಂದ ಬಹುದೂರ ಇರುವ ಜಾಗ. ಆ ಮೂಲಕ ನಗರವನ್ನು ನೋಡುವುದು ಸಹ ಸಾಧ್ಯವಾಗುತ್ತದೆ ಎಂದು ನಾವು ನಡೆದುಕೊಂಡೇ ಅಲ್ಲಿಗೆ ಹೊರಟೆವು. ಈ ಊರಿನ ವಿಶೇಷ ಎಂದರೆ ಕಾಲು ದಾರಿ ಬಳಸುವವರಿಗೆ ವಿಶೇಷ ಆದ್ಯತೆಯನ್ನು ನೀಡಿ ರಸ್ತೆಗಳನ್ನು ಮಾಡಿರುವುದು. ಯಾವುದೇ ಪಾದಾಚಾರಿ ಮಾರ್ಗದಲ್ಲಿ ನಿಮಗೆ ಎಡವುವಂತಹ ಏರು ತಗ್ಗುಗಳು ಇರುವುದಿಲ್ಲ. ಮೆಟ್ಟಿಲು ಕಟ್ಟಬಹುದಾದ ಜಾಗದಲ್ಲಿಯೂ ಗಾಲಿಕುರ್ಚಿಗಳು ಹೋಗಲನುವಾಗವಂತೆ ಇಳಿಜಾರು ಮಾಡಲಾಗಿರುತ್ತದೆ. ಹೀಗಾಗಿ ನಡೆದು ಓಡಾಡುವವರಿಗೆ ತ್ರಾಸುಗಳಾಗುವುದು ಕಡಿಮೆ. ಅಲ್ಲಿನ ಹವೆಯು ತಣ್ಣಗಿದ್ದುದರಿಂದ ನಾವು ಏಳೆಂಟು ಕಿ.ಮೀ. ದೂರವನ್ನು ನಡೆದರೂ ನಾಟಕವನ್ನು ನೋಡುವಷ್ಟು ಉತ್ಸಾಹ ಉಳಿದಿತ್ತು.

20150828_192706

ಫಾರೆಸ್ಟ್ ಫ್ರಿಂಜ್ ಎಂಬುದು ಸ್ಥಳೀಯರೇ ಸೇರಿ ನಡೆಸುವ ಸಾಂಸ್ಕೃತಿಕ ಸಮುಚ್ಚಯ. ಇಲ್ಲಿ ರಂಗಭೂಮಿ, ಸಂಗೀತ, ನೃತ್ಯ ಎಲ್ಲವನ್ನೂ ಕಲಿಸುವ ಪ್ರತ್ಯೇಕ ಸಭಾಂಗಣಗಳಿವೆ. ಜೊತೆಗೆ ನಾಟಕವನ್ನು ಅಭಿನಯಿಸಲು ಬೇಕಾದ ವಿಶಾಲ ಜಾಗವೂ ಇದೆ. ಹಗಲಿನಲ್ಲಿ ಕ್ರೀಡಾಂಗಣವಾಗಿರುವ ಆ ಜಾಗ ನಾಟಕವಿದ್ದಾಗ ರಂಗವೇದಿಕೆಯಾಗಿಯೂ ಕೆಲವೇ ನಿಮಿಷದಲ್ಲಿ ಮಾರ್ಪಾಡಾಗುತ್ತದೆ. ಇಂತಹ ವೇದಿಕೆಗಳು ನಮ್ಮಲ್ಲಿಯೂ ಇದೆ. ಆದರೆ ಇಷ್ಟೇ ವೃತ್ತಿಪರವಾಗಿ ನಾವು ನಮಗೊದಗಿದ ವೇದಿಕೆಗಳನ್ನು ರಂಗವೇದಿಕೆಯಾಗಿ ಸಿದ್ಧಪಡಿಸುವುದಿಲ್ಲ ಅಷ್ಟೇ.

ಕ್ರಿಸ್ಟೋಫರ್ ಬ್ರೆಟ್ ಬೈಯ್ಲಿ ಯು.ಕೆ.ಯ ಪ್ರಖ್ಯಾತ ಕಲಾವಿದರಲ್ಲಿ ಒಬ್ಬರು. ಈ ಹಿಂದೆ ಅವರು ಪ್ರಸ್ತುತಿ ಪಡಿಸಿದ್ದ “ಮೇಡ್ ಇನ್ ಚೈನಾ” ಎಂಬ ಪ್ರದರ್ಶನವೂ ಸಹ ಭಾರಿ ಸುದ್ದಿ ಮಾಡಿತ್ತು. ಹೀಗಾಗಿ ಬೈಯ್ಲಿಯ ಹೊಸ ಪ್ರದರ್ಶನಕ್ಕೂ ಜನಸಂದಣಿ ಇತ್ತು. ಇದೊಂದು ವಿಚಿತ್ರ ಪ್ರದರ್ಶನ. ನಾಟಕದಾರಂಭಕ್ಕೆ ವೇದಿಕೆಯ ಮೇಲೆ ಒಂದು ಬರಹಗಾರನ ಟೇಬಲ್ ಮೇಲೆ ಕೂರುವ ಕಲಾವಿದ ಒಂದು ಬೃಹತ್ ಪುಸ್ತಕವನ್ನು ಓದಲು ಆರಂಭಿಸುತ್ತಾನೆ. Ranting ಎಂದು ಕರೆಯಲಾಗುವ ಶೈಲಿಯಲ್ಲಿ ತನ್ನೆದುರಿನ ಪುಟಗಳನ್ನು ಓದತೊಡಗುವ ಬೈಯ್ಲಿಯು ಒಂದು ಕೊಲೆಯ ವಿವರವನ್ನು ಕತೆಯಾಗಿ ಓದುತ್ತಾ ಹೋಗುತ್ತಾನೆ. ನೋಡುಗ ಆತನ ಓದನ್ನು ಕೇಳುತ್ತಾ ಹೋದಂತೆ ಒಂದು ಮಾತಿಗೂ ಮತ್ತೊಂದಕ್ಕೂ ನೇರವಾಗಿ ಸಂಬಂಧವಿಲ್ಲ ಎಂಬುದು ಮತ್ತು ಎಲ್ಲವೂ ಅಸಂಗತ ಎಂಬುದು ಗೊತ್ತಾಗುತ್ತಾ ಹೋಗುತ್ತದೆ. ಇದೊಂದು ಶಬ್ದಗಳ ವಾಕರಿಕೆ ಎಂದು ತಿಳಿಯುತ್ತಾ ಹೋಗಿ ನೋಡುಗ ನಾಟಕದಿಂದ ಹೊರಗೆ ಬರುವಷ್ಟರಲ್ಲಿ ನಾಟಕದ ಕಟ್ಟ ಕಡೆಯ ದೃಶ್ಯವೂ ನೋಡುಗನನ್ನು ಬಡಿದೆಚ್ಚರಿಸುತ್ತದೆ. ಅಲ್ಲಿಯವರೆಗೆ ಮಾತುಗಳ ಪ್ರವಾಹದಲ್ಲಿ ಇದ್ದವರಿಗೆ ಸರಿಸುಮಾರು ಇಪ್ಪತ್ತು ನಿಮಿಷಗಳ ಸಂಗೀತ ಕೇಳುತ್ತದೆ. ಆ ಕಡೆಯ ಹತ್ತು ನಿಮಿಷವು ನೋಡುಗನನ್ನು ಬೇರೆಯದೇ ಜಗತ್ತಿಗೇ ಕರೆದೊಯ್ಯುತ್ತದೆ.

ನಾಟಕಾಂತ್ಯದಲ್ಲಿ ಟಿಕೇಟಿಲ್ಲದ ಈ ಪ್ರದರ್ಶನಕ್ಕಾಗಿ ಆಸಕ್ತರು ದಾನ ಮಾಡಬಹುದು ಎಂದು ಹುಂಡಿ ಹಿಡಿಯಲಾಗಿತ್ತು. ಆಗಷ್ಟೇ ನಾಟಕ ನೋಡಿದ್ದ ಪ್ರತಿಯೊಬ್ಬರೂ ಸಂತೃಪ್ತಿಯಿಂದ ಹುಂಡಿಗೆ ಹಣ ಹಾಕಿದ್ದು ಮಾತ್ರವಲ್ಲ ನಾಟಕದ ಪ್ರತಿಯನ್ನೂ ಕೊಂಡರು. ದಿನದಂತ್ಯಕ್ಕೆ ಮನದುಂಬುವ ಒಂದು ಪ್ರದರ್ಶನ ನೋಡಿದ ಸುಖ ನಮ್ಮದಾಗಿತ್ತು.

ನಾಟಕ ಮುಗಿಸಿ ಹಿಂದಕ್ಕೆ ಬರುವಾಗ ನಗರ ಸಂಚಾರ ನಿಗಮದ ಬಸ್ಸಿನಲ್ಲಿ ಕೋಣೆಯ ಕಡೆಗೆ ಬಂದೆವು. ಅದೂ ಸಹ ಮರೆಯಲಾಗದ ಅನುಭವ. ಬಸ್ಸುಗಳ ಒಳಗೆ ಪುಕ್ಕಟೆ ವೈಫೈ ಇದೆ. ಹೀಗಾಗಿ ನಾವು ಅಂತರ್ಜಾಲದ ಮೂಲಕ ನಮ್ಮವರನ್ನು ಸಂಪರ್ಕಿಸಿ ಮಾತಾಡಬಹುದು. ಜೊತೆಗೆ ಆ ಬಸ್ಸುಗಳು ಅದೆಷ್ಟು ಚೊಕ್ಕಟವಾಗಿರುತ್ತದೆ. ಬಸ್ಸಿನ ಚಾಲಕನೇ ಸ್ವತಃ ನಿರ್ವಾಹಕನೂ ಆಗಿರುತ್ತಾನೆ. ಹೀಗಾಗಿ ಇಡಿಯ ಬಸ್ ಪ್ರಯಾಣವೂ ಸಹ ಹಿತಕರ ನೆನಪಾಗಿ ಉಳಿದಿದೆ. ರಾತ್ರಿಯಲ್ಲಿ ಎಡಿನ್ಬರಾ ನಗರವೂ ಸಹ ನೋಡುವುದಕ್ಕೆ ಚೆನ್ನ.

20150828_230540

ರಾತ್ರಿ ಸುಮಾರು ಒಂದು ಗಂಟೆಗೆ ಕೋಣೆ ತಲುಪಿದಾಗ ಮತ್ತೊಂದು ಸಂತೃಪ್ತ ರಂಗದಿನ ಕಳೆದ ಆನಂದವಿತ್ತು.

– ಬಿ.ಸುರೇಶ,

28 ಆಗಸ್ಟ್ 2015

Advertisements

0 Responses to “ಎಡಿನ್ಬರಾ ದಿನಚರಿ 28th Aug 2015”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 57,460 ಜನರು
Advertisements

%d bloggers like this: