ಎಡಿನ್ಬರಾ ದಿನಚರಿ 29th Aug 2015

ಏಳನೆಯ ದಿನ

ಇಂದು ಹಗಲಿನ ಎಂಟಕ್ಕೆ ಭಾರತದಿಂದ ಇಲ್ಲಿಗೆ ಬ್ರಿಟಿಷ್ ಕೌನ್ಸಿಲ್‍ನ ಪ್ರತಿನಿಧಿಗಳಾಗಿ ಬಂದಿರುವ ಎಲ್ಲರ ಸಭೆ ನಡೆಯಿತು. ಇದನ್ನು “ನೆಟ್‍ವರ್ಕ್‍” ಎಂದು ಹೆಸರಿಸಲಾಗಿದೆ. ಈ ಮೂಲಕ ಇಲ್ಲಿ ಪ್ರದರ್ಶನ ಕಂಡ ನಾಟಕಗಳನ್ನು ಭಾರತಾದ್ಯಂತ ಪ್ರದರ್ಶನ ಕಾಣುವಂತೆ ಮಾಡುವುದು ಹಾಗೂ ಭಾರತದ ಪ್ರದರ್ಶನಗಳನ್ನು ಅಲ್ಲಿಗೆ ಕೊಂಡೊಯ್ಯುವಂತೆ ಒಂದು ಸಂಬಂಧ ಬೆಳೆಸಿಕೊಳ್ಳುವುದು ಉದ್ದೇಶ. ಅದಕ್ಕಾಗಿಯೇ ಇಲ್ಲಿ ಪ್ರದರ್ಶಿತವಾದ ಬಹುತೇಕ ನಾಟಕಗಳು ಅತ್ಯಂತ ಕಡಿಮೆ ಜನರ ತಂಡವನ್ನು ಹೊಂದಿದ್ದ ನಾಟಕಗಳಾಗಿದ್ದವು. ಅವುಗಳ ನಿರ್ಮಾಪಕರುಗಳ ಜೊತೆ ಹಾಗೂ ಅಭಿನಯಿಸಿದ ತಂಡದ ಜೊತೆಗೆ ಪ್ರತ್ಯೇಕ ಸಭೆಗಳು ಉತ್ಸವದ ಉದ್ದಕ್ಕೂ ಆಗಿದ್ದು ಇದೇ ಕಾರಣಕ್ಕೆ. ಈ ನಿಟ್ಟಿನಲ್ಲಿ ವಿಭಿನ್ನ ಪ್ರತಿನಿಧಿಗಳ ಅಭಿಪ್ರಾಯ ಹಾಗೂ ನಿರ್ಧಾರ ತಿಳಿಯುವುದಕ್ಕೆ ಇಂದು ಹಗಲಿನಲ್ಲಿಯೇ ಸುದೀರ್ಘ ಸಭೆಯನ್ನು ಏರ್ಪಡಿಸಲಾಗಿತ್ತು. ಕ್ಯಾಥಿ ಗೋಮ್ಸ್ ಮತ್ತು ನೀಲ್ ವೆಬ್‍ ಅವರು ಪ್ರತಿಯೊಬ್ಬರ ಅಭಿಪ್ರಾಯ ಕೇಳಿ ಮುಂಬರುವ ಉತ್ಸವಗಳಲ್ಲಿ ಏನಾಗಬೇಕು ಎಂದು ಟಿಪ್ಪಣಿ ಮಾಡಿಕೊಳ್ಳುತ್ತಾ ಇದ್ದರು.

20150829_084916   ಭಾರತದಿಂದ ಬಂದಿದ್ದ ಬ್ರಿಟಿಷ್‍ ಕೌನ್ಸಿಲ್‍ನ ಪ್ರತಿನಿಧಿಗಳು

ಪ್ರತಿನಿಧಿಗಳ ಪರವಾಗಿ ಮೊದಲು ಮಾತಾಡುವ ಸರದಿ ನನ್ನದಾಗಿತ್ತು. ನಾನು ಈ ವರೆಗೆ 16 ನಾಟಕಗಳನ್ನು ನೋಡಿದ್ದೆ. ಇಂದು ಎರಡು ನಾಟಕ ನೋಡುವುದು ಭಾಕಿ ಇತ್ತು. ಇವುಗಳಲ್ಲಿ ನನಗೆ ಮೆಚ್ಚುಗೆಯಾದ ನಾಟಕಗಳ ಪಟ್ಟಿಯನ್ನು ಮತ್ತು ಅವು ಮೆಚ್ಚುಗೆಯಾಗಲು ಕಾರಣಗಳನ್ನು ಸಭೆಯ ಎದುರಿಗೆ ಇರಿಸಿದೆ. ಈ ವರೆಗೆ ನೋಡಿದ್ದರಲ್ಲಿ ನನಗಿಷ್ಟವಾದ ಮತ್ತು ನಮ್ಮ ದೇಶಕ್ಕೂ ಕರೆಸಿಕೊಳ್ಳಬಹುದಾದ 8 ಪ್ರಯೋಗಗಳಿದ್ದವು. ಆ ತಂಡಗಳ ಜೊತೆಗೆ ಮಾತುಕತೆ ಸಹ ಸಣ್ಣ ಮಟ್ಟದಲ್ಲಿ ನಡೆಸಿದ್ದನ್ನು ತಿಳಿಸಿದೆ. ಆದರೆ ನಾವು ನೋಡಿದ ಬಹುತೇಕ ನಾಟಕಗಳಲ್ಲಿ ಮಾತು ಪ್ರಧಾನವಾಗಿದ್ದುದನ್ನು ವಿವರಿಸಿ, ನಾಟಕ ಎಂಬುದು ಕೇವಲ ವಾಚಿಕವಾದಾಗ ಭಾರತದ ನೋಡುಗರಿಗೆ ಪಡೆದುಕೊಳ್ಳುವುದಕ್ಕೆ ಏನೂ ಸಿಗದು ಎಂದು ತಿಳಿಸುತ್ತಾ, “ಬಟರ್‍ಫ್ಲೈ”, “ಎಡ್ಮಂಡ್‍ ದ ಲರ್ನೆಡ್ ಪಿಗ್” “ಓ! ನೋ!” ತರಹದ ಭಾಷೆಯನ್ನು ಮೀರಿದ ರಂಗಪ್ರಯೋಗಗಳ ಬಗ್ಗೆ ವಿವರಿಸಿದೆ. ನನ್ನ ಮಾತುಗಳ ನಂತರ ಉಳಿದ ಗೆಳೆಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಬಹುತೇಕರ ಅಭಿಪ್ರಾಯಗಳಲ್ಲಿ ನನಗೆ ಸಹಮತವಿತ್ತು. ಕೇರಳದ ಶಂಕರ್ ವೆಂಕಟೇಶ್ವರನ್ ಮತ್ತು ಗುಜರಾತಿನ ಚಿಂತನ್ ಪಾಂಡ್ಯ ಅದಾಗಲೇ ತಮ್ಮ ತಮ್ಮ ಊರುಗಳಲ್ಲಿ ಪ್ರತೀ ವರ್ಷವೂ ಅಂತಾರಾಷ್ಟ್ರೀಯ ನಾಟಕೋತ್ಸವವನ್ನು ನಡೆಸುತ್ತಾ ಇರುವವರು. ಹೀಗಾಗಿ ಇವರಿಬ್ಬರೂ ತಮ್ಮ ಉತ್ಸವಗಳಿಗೆ ಕರೆಸುವ ತಂಡವನ್ನು ನಮ್ಮಲ್ಲಿಗೂ ಕರೆಸುವ ಮಾತುಗಳನ್ನಾಡಿದೆವು. ಕ್ಯಾಥಿ ಗೋಮ್ಸ್ ಮತ್ತು ನೀಲ್ ವೆಬ್‍ ಅವರು ಹೀಗೆ ನಾವು ಕರೆಸಿಕೊಳ್ಳುವ ತಂಡದ ನಿರ್ವಹಣೆಗೆ ತಗಲುವ ವೆಚ್ಚವನ್ನು ಆರ್ಟಿಸ್ಟ್ಸ್ ಇಂಟರ್‍ನ್ಯಾಷನಲ್, ಕ್ರಿಯೇಟಿವ್ ಸ್ಕಾಟ್ಲೆಂಡ್ ಮತ್ತು ವೆಲ್ಷ್ ಆರ್ಟ್ಸ್ ಕೌನ್ಸಿಲ್ ಮುಂತಾದವುಗಳ ಸಹಾಯದಿಂದ ನಿರ್ವಹಿಸಬಹುದು. ಈ ಎಲ್ಲಾ ಸಹಾಯಗಳನ್ನೂ ಬ್ರಿಟಿಷ್ ಕೌನ್ಸಿಲ್‍ನ ಸಹಯೋಗದೊಂದಿಗೆ ಪಡೆಯಬಹುದು ಎಂಬುದನ್ನು ವಿವರಿಸಿದರು. ನಮ್ಮೂರಿನ ರಂಗಪ್ರೇಮಿಗಳಿಗೆ ವಿಶಿಷ್ಟ ನಾಟಕಗಳನ್ನು ತೋರಿಸುವ ಬಯಕೆ ಪೂರೈಸಲು ಇರುವ ಮಾರ್ಗಗಳನ್ನು ತಿಳಿದು ಖುಷಿಯಾಯಿತು. ಮುಂದೆ ನಾವಿಡಬಹುದಾದ ಹೆಜ್ಜೆಗಳನ್ನು ಕುರಿತು ಕನಸುತ್ತಾ ಮುಂದಿನ ಕೆಲಸಗಳಿಗೆ ಹೊರಟೆವು.

ಜೋಆನ್, ಬೇಬ್ಸ್ ಅಂಡ್ ಷೀಲಾ ಟೂ

ಗೀಮ್‍ಸ್ಕಿ ಎಂಬ ನಟಿ ಅನೇಕ ಸಲ ನಮಗೆ ಸಿಕ್ಕು, ತಮ್ಮ ನಾಟಕಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಆದರೆ ನಮಗೆ ಸಮಯ ಹೊಂದಿಸುವುದು ಕಷ್ಟವಾಗಿತ್ತು. ಇನ್ನು ತಡಮಾಡಿದರೆ ನಮಗೆ ಈ ನಾಟಕ ತಪ್ಪಿಹೋಗುತ್ತದೆ ಎಂದು ಕಡೆಯ ದಿನದ ಮಧ್ಯಾಹ್ನ ಎರಡು ಗಂಟೆಯ ಪ್ರದರ್ಶನಕ್ಕೆ ಟಿಕೇಟ್ ಕಾದಿರಿಸಿದೆವು.

ಜೂ಼ ಸ್ಟುಡಿಯೋ ಎಂಬುದು ಮತ್ತೊಂದು ರಂಗಸಮುಚ್ಚಯ. ಒಂದು ಕಾಲದಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾಮಂದಿರವಾಗಿದ್ದನ್ನು ಸಂಪೂರ್ಣ ರಂಗಸಮುಚ್ಛಯವಾಗಿ ಪರಿವರ್ತಿಸಲಾಗಿದೆ. ಇಲ್ಲಿ ನಾಲ್ಕು ರಂಗಮಂದಿರಗಳಿವೆ. ಇಲ್ಲಿನ ಸ್ಟುಡಿಯೋ 2 ರಲ್ಲಿ ಗೀಮ್‍ಸ್ಕಿಯ ನಾಟಕವನ್ನು ನೋಡಿದೆವು.

20150829_155132

ಜೋಆನ್ ಲೀಟಲ್‍ವುಡ್ ಯುಕೆಯ ಪ್ರಸಿದ್ಧ ನಟಿ. ಆಕೆಯ ಜೀವನವೇ ವಿಕ್ಷಿಪ್ತವಾದುದು. ಆಕೆ ತನ್ನ ಜೀವನದುದ್ದಕ್ಕೂ ತಳೆದ ಎಡಪಂಥೀಯ ನಿಲುವುಗಳಿಂದಾಗಿ ಜೈಲಿಗೂ ಹೋಗಿ ಬಂದಾಕೆ. ತನ್ನ ಎಲ್ಲಾ ಕೃತಿಗಳು ದುಡಿಯುವ ವರ್ಗವನ್ನು ಕುರಿತಂತೆ ಆಕೆ ಮಾತಾಡಿದ್ದಾರೆ. ಹಾಗಾಗಿಯೇ ಅರವತ್ತು ಎಪ್ಪತ್ತರ ದಶಕದ ಆಕೆಯ ಪ್ರಯೋಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಅಂತಹದೊಂದು ಜೀವನವನ್ನು ರಂಗದ ಮೇಲೆ ತರುವ ಪ್ರಯತ್ನವನ್ನು ನಟಿ ಗಿಮ್ಸ್‍ಕೀ ಮಾಡಿದ್ದರು.

20150829_145403

ಪ್ರದರ್ಶನಕ್ಕೆ ಕೊಂಚ ಮೊದಲು, ಗಿಮ್ಸ್‍ಕೀ (ಕೆಂಪು ಟೀ ಷರಟಿನಾಕೆ) ಪ್ರೇಕ್ಷಕರ ನಡುವೆ

ಇದೊಂದು ಏಕವ್ಯಕ್ತಿ ಪ್ರದರ್ಶನ. ಬಹುತೇಕ ಸಾಕ್ಷ್ಯ ಚಿತ್ರದ ಹಾಗೆ. ಜೋಆನ್‍ಲಿಟಲ್‍ಉಡ್‍ ಅವರ ಜೀವನ ಕ್ರಮವನ್ನು ಕುರಿತಂತೆ ಬೇರೆ ಬೇರೆಯವರ ಅಭಿಪ್ರಾಯಗಳ ವಿಡಿಯೋ ದೃಶ್ಯಾವಳಿಯನ್ನು ತೋರಿಸುತ್ತಲೇ ಸ್ವತಃ ಗಿಮ್ಸ್‍ಕೀ ಆ ನಟಿಯಾಗಿ ಹಲವು ದೃಶ್ಯಗಳನ್ನು ಅಭಿನಯಿಸುತ್ತಾ ಇದ್ದರು. ಲಿಟಲ್‍ವುಡ್‍ ಅವರ ಪ್ರಸಿದ್ಧ ಹಾಡುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿತ್ತು. ಸುಮಾರು ಎಪ್ಪತ್ತು ನಿಮಿಷಗಳ ಈ ಪ್ರಯೋಗ ನೋಡುಗರನ್ನು ಹಿಡಿದಿರಿಸಿಕೊಳ್ಳುವ ಕ್ರಮವೇ ವಿಶಿಷ್ಟವಾದುದು. ಗಿಮ್ಸ್‍ಕೀ ಸ್ವತಃ ಅದ್ಭುತ ನಟಿ. ಕತೆಯೆಂಬುದಿಲ್ಲದ, ಪ್ರಸಿದ್ಧ ವ್ಯಕ್ತಿಯ ಜೀವನದ ಘಟನೆಗಳಿಂದ ಆಯ್ದ ವಿಶಿಷ್ಟ ವಿವರಗಳನ್ನು ಮಾತ್ರವೇ ಇರುವ ಪ್ರದರ್ಶನವೊಂದನ್ನು ಗಿಮ್ಸ್‍ಕೀ ತಮ್ಮ ಅಭಿನಯ ಶಕ್ತಿಯಿಂದಲೇ ಹಿಡಿದಿಟ್ಟುಕೊಂಡಿದ್ದರು. ಒಟ್ಟಾರೆಯಾಗಿ ಒಂದು ಉತ್ತಮ ನಾಟಕವನ್ನು ನೋಡಿದ ಸುಖ ನಮ್ಮದಾಯಿತು.

ಸಿಟಿಜನ್ ಪಪೆಟ್  

ಪ್ಲೆಸನ್ಸ್ ಎನ್ನುವುದು ಎಡಿನ್ಬರಾದ ಮತ್ತೊಂದು ರಂಗ ಸಮುಚ್ಚಯ. ಇಲ್ಲಿ ಒಟ್ಟು ಆರು ರಂಗಮಂದಿರಗಳಿವೆ. ನಾವಿಲ್ಲಿಗೆ ಕಾಲಿಟ್ಟ ದಿನವಂತೂ ಇಲ್ಲಿ ಜನ ಸಂತೆಯೇ ನೆರೆದಿತ್ತು. ಪ್ರತೀ ನಾಟಕಕ್ಕೂ ಬೃಹತ್ ಸರದಿಯ ಸಾಲು. ನಿಜಕ್ಕೂ ಅದೊಂದು ಹಬ್ಬದ ವಾತಾವರಣ.

20150829_161436 20150829_161439

ಇಲ್ಲಿನ ಗೋಡೆಗಳ ತುಂಬಾ ಅನೇಕ ನಾಟಕಗಳಿಂದ ಆಯ್ದ ಸಾಲುಗಳನ್ನು ಹಾಕಲಾಗಿದೆ. ಅದನ್ನೋದುತ್ತಾ ಸಾಲು ಹಿಡಿದು ನಾವು ತಲುಪಬೇಕಾದ ರಂಗಮಂದಿರವನ್ನು ತಲುಪುವುದು ವಿಶೇಷ ಅನುಭವ.

20150829_161542 20150829_161622 20150829_161713 20150829_161750

ಇಲ್ಲಿನ “ಕೋರ್ಟ್ ಯಾರ್ಡ್” ರಂಗಮಂದಿರದಲ್ಲಿ ನಾವು “ಸಿಟಿಜನ್ ಪಪೆಟ್” ಎಂಬ ನಾಟಕ ನೋಡಿದೆವು. ಬ್ಲೈಂಡ್ ಸಮ್ಮಿಟ್ ಎಂಬ ಪ್ರಖ್ಯಾತ ರಂಗತಂಡ ಸಿದ್ಧಪಡಿಸಿದ ನಾಟಕವಿದು. ಇಡಿಯ ನಾಟಕ ಆರ್ಥಿಕ ಯುದ್ಧವೊಂದನ್ನೆದುರಿಸಲು ಒಂದು ಹಳ್ಳಿಯ ಜನ ಏನು ಮಾಡಬೇಕು ಎಂಬ ಚರ್ಚೆಯಿಂದ ಶುರುವಾಗುತ್ತದೆ. ಸಮಕಾಲೀನ ರಾಜಕೀಯ ವ್ಯವಸ್ಥೆಯನ್ನು ನೇರವಾಗಿ ಪ್ರಶ್ನಿಸುತ್ತಾ, ಹೇಗೆ ಜನರೆಲ್ಲಾ ಆಳುವ ವರ್ಗದ ಬೊಂಬೆಗಳಾಗಿದ್ದಾರೆ ಎಂಬ ವಸ್ತುವನ್ನು ಪ್ರಹಸನವಾಗಿ ಕಟ್ಟಲಾಗಿದೆ. ಇಂತಹ ವಸ್ತುವನ್ನು ಕಟ್ಟಲು ಅವರು ಬಳಸಿರುವುದು ಬೊಂಬೆಗಳನ್ನ. ಐದಾರು ಜನರ ತಂಡವು ಹ್ಯಾಂಡ್ ಪಪೆಟ್‍ಗಳನ್ನು ಆಡಿಸುತ್ತಾ ಇಡಿಯ ನಾಟಕವನ್ನು ಕಟ್ಟುತ್ತದೆ. ಬೊಂಬೆಯಾಡಿಸುವವರು ಮುಖ ಕಾಣದಂತೆ ಕಪ್ಪು ದಿರಿಸು ಹಾಕಿಕೊಂಡಿರುತ್ತಾರೆ. ಆಯಾ ಬೊಂಬೆಗಳ ಮಾತುಗಳನ್ನು ಆಯಾ ಬೊಂಬೆ ಆಡಿಸುವವರೇ ಮಾತಾಡುತ್ತಾರೆ. ಕೊಂಚ ಹತ್ತಿರದಲ್ಲಿ ಕೂತವರಿಗೆ ಬೊಂಬೆ ಆಡಿಸುವವರೇ ಮಾತಾಡುತ್ತಾ ಇದ್ದಾರೆ ಎಂದು ತಿಳಿಯುತ್ತದೆ. ಆದರೆ ಹಿಂದೆ ಕೂತವರಿಗೆ ಅದಾವುದೂ ಗೊತ್ತಾಗದಂತೆ ಬೆಳಕು ಬೊಂಬೆಗಳ ಮೇಲೆ ಮಾತ್ರ ಬೀಳುವ ಹಾಗೇ ವಿನ್ಯಾಸ ಮಾಡಲಾಗಿರುತ್ತದೆ.

ಈ ನಾಟಕದ ಸ್ಕ್ರಿಪ್ಟ್ ಎಷ್ಟು ಗಟ್ಟಿಯಾದುದು ಎಂದರೆ ನೋಡುಗ ನಾಟಕದುದ್ದಕ್ಕೂ ನಗುತ್ತಾ ತಾನೂ ಸಹ ಇದೇ ಮಾದರಿಯಲ್ಲಿ ಆಳುವವರ ಕೈಯಲ್ಲಿ ಬೊಂಬೆಯಾಗಿದ್ದೇನೆ ಎಂಬುದನ್ನು ತಿಳಿಯುತ್ತಾ ಹೋಗುತ್ತಾನೆ. ಬೊಂಬೆ ಆಡಿಸುವ ತಂಡದ ಚುರುಕುತನ. ದೃಶ್ಯದಿಂದ ದೃಶ್ಯಕ್ಕೆ ಸುಲಭವಾಗಿ ಸಾಗುತ್ತಾ ಇದ್ದ ಕ್ರಮ, ಬೆಳಕು ವಿನ್ಯಾಸ ಮತ್ತು ನಾಟಕದ ಹರಿವು ಎಲ್ಲವೂ ವೃತ್ತಿಪರವಾಗಿತ್ತು.

ನಮ್ಮಲ್ಲಿಯೂ ಹೀಗೆಯೇ ಬೊಂಬೆಗಳನ್ನು ಬಳಸಿ ನಾಟಕ ಮಾಡಲಾಗಿವೆಯಾದರೂ ಅವೆಲ್ಲಾ ನಾಟಕಗಳು ಕೇವಲ ತಮಾಷೆಗೆ ಸೀಮಿತವಾಗಿವೆ. ಕೆಲವರಂತೂ ಮಾತಿನ ಗೊಂಬೆ ಇತ್ಯಾದಿಗಳ ಹೆಸರಲ್ಲಿ ತೀರ ಕ್ಷುಲಕ ಎನಿಸುವ ಪ್ರಯೋಗ ಮಾಡಿರುವುದೂ ಉಂಟು. ಆದರೆ “ಸಿಟಿಜನ್ ಪಪೆಟ್‍” ನಾಟಕದಂತೆ ಬೊಂಬೆಗಳನ್ನ ಬಳಸಿ ರಾಜಕೀಯ ವಿಡಂಬನೆಗಳನ್ನು ಕಟ್ಟಿದ ಉದಾಹರಣೆ ನಾಲ್ಕು ದಶಕದ ಹಿಂದೆ “ಟಿಂಗರ ಬುಡ್ಡಣ್ಣ” ನಾಟಕವನ್ನು ಸೂತ್ರದಗೊಂಬೆಗಳ ಮೂಲಕ ಮಾಡಿದ್ದನ್ನು ಬಿಟ್ಟರೆ ನಾನು ಕಂಡಿಲ್ಲ. ಪ್ರಾಯಶಃ ಈ ಬಗೆಯ ಬೊಂಬೆಗಳ ಬಳಕೆಯನ್ನು ಕುರಿತಂತೆ ನಮ್ಮ ರಂಗಕರ್ಮಿಗಳಿಗೆ ವಿಶೇಷ ತರಬೇತಿ ಕೊಡಬೇಕಾದ ಅಗತ್ಯವೂ ಇದೆ.

ನಂತರ

ಹೀಗೆ  ಆರು ದಿನಗಳಲ್ಲಿ 18 ನಾಟಕ ನೋಡಿದೆವು. ಅವುಗಳಲ್ಲಿ ಸರಿಸುಮಾರು ಹತ್ತು ನಾಟಕಗಳು ಬಹುಕಾಲ ನೆನಪಲ್ಲಿ ಉಳಿಯುವಂತಹದಾಗಿತ್ತು. ಕಡೆಯ ನಾಟಕ ಮುಗಿದ ನಂತರ ಇದ್ದ ಮುಕ್ತಾಯ ಸಮಾರಂಭಕ್ಕೆ ಗೈರುಹಾಜರಾಗಿ ಮರಳಿ ಗೂಡು ಸೇರಲು ನಮ್ಮ ಗಂಟು ಕಟ್ಟಲು ಆರಂಭಿಸಿದೆವು.

– ಬಿ.ಸುರೇಶ

29 ಆಗಸ್ಟ್ 2015

ಕೊನೆಯ ಮಾತು

ಮಾರನೆಯ ಬೆಳಿಗ್ಗೆಯೇ ನಾವು ಎಡಿನ್ಬರಾದಿಂದ ಹೊರಟು ಲಂಡನ್ ತಲುಪಿದೆವು. ಅಲ್ಲಿ ಷೇಕ್ಸ್‍ಪಿಯರ್‍ನ ಗ್ಲೋಬ್‍ನಲ್ಲಿ “ಆಸ್‍ ಯೂ ಲೈಕ್ ಇಟ್”, “ಹಿಯರ್ ಸೇ ಆಫ್ ಲವ್”, ಪ್ರಿನ್ಸ್ ಎಡ್ವರ್ಡ್ ಥಿಯೇಟರ್‍ನಲ್ಲಿ “ಮಿಸ್ ಸೈಗಾನ್”, ಕ್ವೀನ್ಸ್ ಥಿಯೇಟರ್‍ನಲ್ಲಿ “ಲೇ ಮಿಸರಬಲ್ಸ್”, ನ್ಯೂ ಲಂಡನ್ ಥಿಯೇಟರ್‍ನಲ್ಲಿ “ವಾರ್ ಹಾರ್ಸ್”, ಹರ್ ಮೆಜಸ್ಟೀಸ್ ಥಿಯೇಟರ್‍ನಲ್ಲಿ “ಫ್ಯಾಂಟಮ್ ಆಫ್ ದ ಅಪೇರಾ” ನಾಟಕಗಳನ್ನು ನೋಡಿದೆವು. ಇವು ವೃತ್ತಿಪರ ನಟರು ಮಾಡಿದ ನಾಟಕಗಳು. ಇವುಗಳನ್ನು ಕುರಿತಂತೆ ಅದಾಗಲೇ ಅಂತರ್ಜಾಲದಲ್ಲಿ ಅನೇಕ ವಿಮರ್ಶೆಗಳು ದೊರೆಯುತ್ತವೆ. ಆದ್ದರಿಂದ ನಾನು ಈ ನಾಟಕಗಳನ್ನು ಕುರಿತು ಹೆಚ್ಚೇನು ಹೇಳದೆ ವಿರಮಿಸುತ್ತೇನೆ. ಆದರೆ ಸರಿಸುಮಾರು ಹದಿನೈದು ದಿನಗಳ ಈ ರಂಗಪಯಣದ ಅನುಭವ ಸದಾ ನೆನಪಲ್ಲಿ ಇರುತ್ತದೆ.

20150831_121524_001 20150831_191030

20150831_191003

Advertisements

0 Responses to “ಎಡಿನ್ಬರಾ ದಿನಚರಿ 29th Aug 2015”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 60,851 ಜನರು
Advertisements

%d bloggers like this: