ನಡೆದ ಹಾದಿಯ ನೆನಪು

(ಕೆ.ಎಸ್.ಎಲ್.ಸ್ವಾಮಿ (ರವೀ) ಅವರನ್ನು ಕುರಿತ ನುಡಿಚಿತ್ರ)

(2015ರ ಡಿಸೆಂಬರ್ ತಿಂಗಳ “ಮಯೂರ” ಸಂಚಿಕೆಯಲ್ಲಿ ಪ್ರಕಟವಾಗಿದೆ)

ನಾನವರನ್ನು ಸಣ್ಣವನಿದ್ದಾಗಿಂದ ನೋಡುತ್ತಾ ಇದ್ದೆ. ಬಿಳಿ ದಿರಿಸು ತೊಟ್ಟು ತಮ್ಮದೇ ಕಾರಿನಲ್ಲಿ ಓಡಾಡುತ್ತಿದ್ದ ಈ ಚಿತ್ರನಿರ್ದೇಶಕರು ನಮ್ಮ ಗುಂಪಿನವರಲ್ಲ ಎಂದುಕೊಂಡಿದ್ದೆ. ಆದರೆ ಕಾಲ ಹೇಗೆ ನಮ್ಮಲ್ಲಿ ಬದಲುಗಳನ್ನು ತರುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಾನವರ ಸಹಾಯಕನಾಗಿ ದುಡಿದೆ. ಅವರ ಕೆಲವು ಸಿನಿಮಾಗಳಿಗೆ ಬರೆದೆ. ಸರಿಸುಮಾರು ಎರಡು ದಶಕಗಳ ಕಾಲ ಅವರ ಶಿಷ್ಯನಾಗಿ ಜೊತೆಯಲ್ಲಿ ನಡೆದೆ. ಈಗ ಅವರಿಲ್ಲ. ಅವು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ತೀರ್ಮಾನ ಮಾಡಿ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ.

ಕೆ.ಎಸ್.ಎಲ್.ಸ್ವಾಮೀ (ರವೀ) (1939 – 2015) ಅವರ ವ್ಯಕ್ತಿತ್ವವೇ ಹಾಗಿತ್ತು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕ್ಲಾಸಿಗೆ ಚಕ್ಕರ್ ಹೊಡೆದು ನಾಟಕಗಳಲ್ಲಿ ಅಭಿನಯಿಸೋಕ್ಕೆ, ಹಾಡುವುದಕ್ಕೆ ಓಡುತ್ತಿದ್ದವರು, ಪದವಿ ಪರೀಕ್ಷೆ ಬರೆದ ಕೂಡಲೇ ಮೈಸೂರಿನ ಪ್ರೀಮಿಯರ್ ಸ್ಟುಡಿಯೋಗೆ ನುಗ್ಗಿ ಜಿ.ವಿ.ಅಯ್ಯರ್ ಅವರನ್ನು ಪರಿಚಯಿಸಿಕೊಂಡು ಸಹಾಯಕ ನಿರ್ದೇಶಕರಾಗಿ ದುಡಿಯಲಾರಂಭಿಸಿದ್ದು ಐವತ್ತರ ದಶಕದ ಅಂತ್ಯದಲ್ಲಿ. ಅಲ್ಲಿಂದಾಚೆಗೆ 1966ರಲ್ಲಿ “ತೂಗುದೀಪ” ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಇಲ್ಲಿಯವರೆಗೆ ಸರಿಸುಮಾರು 40 ಚಿತ್ರಗಳನ್ನು ನಿರ್ದೇಶಿಸಿ, ಹಲವು ಚಿತ್ರಗಳನ್ನು ನಿರ್ಮಿಸಿದ ರವೀ ಅವರ ಜೀವನದ ಹಾದಿಯೇ ಹಲವು ಬಣ್ಣಗಳ ಸಂತೆ.

Ravee Singing

ಅವರ ಪೂರ್ಣ ಹೆಸರು ಕಿಕ್ಕೇರಿ ಶಾಮಣ್ಣ ಲಕ್ಷೀನರಸಿಂಹ ಸ್ವಾಮಿ. ಅವರು ಬೆಳೆದದ್ದು ಸಂಪೂರ್ಣ ವೈದಿಕ ಕುಟುಂಬದಲ್ಲಿ. ಆದರೆ ಕೆ.ಎಸ್.ಎಲ್.ಸ್ವಾಮಿ ಅವರು ತಮ್ಮ ಮನೆಯವರಿಗಿಂತ ಭಿನ್ನರಾಗಿ ಬದುಕಿದವರು. ಅವರಿಗೆ ವೈದಿಕಾಚಾರಣೆಗಳೆಲ್ಲವೂ ಕರತಲಮಲಕವಾಗಿದ್ದರೂ ಅವರದನ್ನು ಎಂದೂ ಯಾರ ಮೇಲೂ ಹೇರಲಿಲ್ಲ. ತಾವು ಪ್ರೀತಿಸಿದ ಹುಡುಗಿ ಅನ್ಯ ಜಾತಿಯವಳೆಂಬುದನ್ನು ಒಪ್ಪಿಕೊಂಡೇ ಆಕೆಯ ಕೈ ಹಿಡಿದರು. ಕಡೆಯವರೆಗೂ ಅದೇ ಪ್ರೀತೊಯೊಡನೆ ಜೊತೆಯಾಗಿ ಜೀವಿಸಿದರು. “ಮನಸ್ಸು ಉದಾರವಾಗಿಲ್ಲದೆ ಕರ್ಮಠವಾದರೆ ಬದುಕು ಕಮಟು ಹಿಡಿಯುತ್ತದೆ.” ಎಂದವರು ಹೇಳಿದ್ದು ಇಂದಿಗೂ ನನ್ನ ನೆನಪಲ್ಲಿ ಹಸಿರಾಗಿದೆ. ಇಂತಹ ಆಲೋಚನೆಯ ಕಾರಣವಾಗಿಯೇ ಅವರು ಸಿನಿಮಾ ಮಾಡಲು ಆರಿಸಿಕೊಂಡ ವಿಷಯಗಳು ಸಹ ಕೇವಲ ಜನರಂಜನೆಯದ್ದಾಗದೇ ಸಮಾಜಮುಖಿಯಾಗಿ ಇರುತ್ತಿದ್ದವು. 1970ರಲ್ಲಿ ಅವರು ತಯಾರಿಸಿದ ಆರು ಮೂರು ಒಂಬತ್ತು”, 1975ರಲ್ಲಿ ತಯಾರಿಸಿದ ಭಾಗ್ಯಜ್ಯೋತಿ”, 1977ರಲ್ಲಿ ತಯಾರಿಸಿದ “ಮಾಗಿಯ ಕನಸು”, 1988ರಲ್ಲಿ ತಯಾರಿಸಿದ ಮಿಥಿಲೆಯ ಸೀತೆಯರು” – ಹೀಗೆ ರವೀ ಅವರ ಎಲ್ಲಾ ಚಿತ್ರಗಳೂ ಅವರು ಬದುಕನ್ನು ನೋಡುತ್ತಾ ಇದ್ದ ಉದಾರವಾದೀ ನೀತಿಗೆ ಸಾಕ್ಷಿಯಾಗಿ ಇಂದಿಗೂ ನಮ್ಮೆದುರಿಗೆ ಇವೆ. ಅವರ ಕನಸುಗಳು ಇನ್ನೂ ಅನೇಕವಿದ್ದವು. ಅವುಗಳಲ್ಲಿ ಕೆಲವನ್ನು ಕೈಗೆತ್ತಿಕೊಂಡು ಕೆಲಸ ಮಾಡುತ್ತಾ ಇದ್ದರು (ಸದ್ಭೋದ ಚಂದ್ರೋದಯ, ಶಂಕರ ವಿಜಯ). ಅವು ಅರ್ಧ ಹಾದಿ ಮುಟ್ಟಿದ್ದಾಗಲೇ ಅವರು ಅಗಲಿದ್ದು ನಿಜಕ್ಕೂ ಸಂಕಟದ ವಿಷಯವೇ.

ಹಾಗೆ ನೋಡಿದರೆ ಅವರಿಗೆ ಯಾವ ದೊಡ್ಡ ಆರೋಗ್ಯದ ತೊಂದರೆಗಳೂ ಇರಲಿಲ್ಲ. ಯಾವ ಬೆಟ್ಟವನ್ನಾದರೂ ಹತ್ತುತ್ತಿದ್ದರೂ, ಯಾವ ಚಳಿಯನ್ನಾದರೂ ಸಹಿಸುತ್ತಿದ್ದರು. ಒಂದು ತಿಂಗಳ ಹಿಂದೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರನ್ನು ನೋಡಿದಾಗ ನಾನು ರಾಧಮ್ಮ ಅವರ ಬಳಿ ಹೇಳಿದ್ದೆ, “ನಮ್ಮ ಮೇಷ್ಟರು, ವಾರದೊಳಗೆ ಎದ್ದು ಬರುತ್ತಾರೆ. ನಮಗೆ ಗೊತ್ತಿಲ್ಲದ ಅನೇಕ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಾರೆ, ನೋಡುತ್ತಿರಿ” ಎಂದಿದ್ದೆ. ಆದರೆ ಶ್ವಾಸಕೋಶದ ಸೋಂಕು ಅವರ ಉಸಿರಾಟಕ್ಕೆ ತೊಂದರೆ ಮಾಡಿ ಅವರನ್ನು ಸೆಳೆದೊಯ್ಯಿತು ಎನ್ನುವುದು ಇಂದಿಗೂ ನನಗೆ ನಂಬಲಾಗದ ವಿಷಯವೇ ಆಗಿದೆ. ನನ್ನಂತಹ ಅವರ ಶಿಷ್ಯರಿಗಂತೂ ನಮ್ಮ ಗುರುಗಳು ಇನ್ನೂ ಇಲ್ಲೇ ಎಲ್ಲೋ ಇದ್ದಾರೆ. ತಟ್ಟನೆ ಬಂದು ನಮಗೆ ಬುದ್ಧಿ ಹೇಳಿ ಸರಿದಾರಿ ತೋರಿಸುತ್ತಾರೆ ಎಂಬ ಭಾವ ಇದೆ.

Ravee & Radha

* * *

ನಾನವರನ್ನು ಅರ್ಥ ಮಾಡಿಕೊಳ್ಳುವಂತಹ ಸಂದರ್ಭ ಒದಗಿದ್ದು 1987ರಲ್ಲಿ. ನಾನಾಗ ರಂಗಕರ್ಮಿಯೂ ಆಗಿದ್ದೆ ಮತ್ತು ಕಾರ್ಖಾನೆಯೊಂದರಲ್ಲಿ ದುಡಿಯುತ್ತಲೇ ಕೆಲವು ಪತ್ರಿಕೆಗಳಿಗೆ ಸಣ್ಣ ಪುಟ್ಟ ಬರಹಗಳನ್ನು ಬರೆದುಕೊಡುತ್ತಿದೆ. ಹಾಗೆ ಸಿನಿಮಾ ಪತ್ರಿಕೆಯೊಂದರ ಅಗತ್ಯಕ್ಕಾಗಿ ರವೀ ಅವರನ್ನು ಸಂದರ್ಶಿಸುವ ಅವಕಾಶ ನನಗೆ ಸಿಕ್ಕಿತ್ತು. ಅಂದು ಕಾರ್ಖಾನೆಯ ಕೆಲಸ ಮುಗಿಸಿ ಇಳಿ ಸಂಜೆಯಲ್ಲಿ ಅವರ ಮನೆಗೆ ತಲುಪಿ, ಮಾತಿಗಿಳಿದೆ. ಸಾಮಾನ್ಯವಾಗಿ ಅರ್ಧಗಂಟೆಯಲ್ಲಿ ಮುಗಿಯುವ ಇಂತಹ ಮಾತುಗಳು ಆ ದಿನ ಮೂರು ಗಂಟೆಗಳನ್ನು ದಾಟಿತು. ರವೀ ಅವರು ನನ್ನ ಜೊತೆಗೆ ಕೇವಲ ತಮ್ಮ ಸಿನಿಮಾ ಅಲ್ಲದೆ ಒಟ್ಟಾರೆಯಾಗಿ ಜೀವನದ ಬಗ್ಗೆ ಕೂಡ ಅನೇಕ ವಿಷಯಗಳನ್ನು ಹೇಳುತ್ತಾ ಹೋದರು. ಸಂದರ್ಶಕನಾಗಿ ಹೋಗಿದ್ದವನು ಶಿಷ್ಯನಾಗಿ ಮರಳಿದ್ದೆ. ಅವರ ಬಗೆಗ ನಾನು ಬರೆದ ಲೇಖನವನ್ನು ಮುದ್ರಣಕ್ಕೆ ಮೊದಲು ಅವರಿಗೆ ತೋರಿಸಲು ಹೋದಾಗ ಅದನ್ನೋದಿ ಅವರಾಡಿದ ಮಾತುಗಳನ್ನು ನಾನೆಂದಿಗೂ ಮರೆಯಲಾರೆ. ಆಗಲೇ ಅವರು ನನ್ನನ್ನು ಸಿನಿಮಾಕ್ಕೆ ಬರೆಯಲು ಕರೆದದ್ದು. ಆದರೆ ನಾನು ಕೇವಲ ನಕ್ಕು ಬಿಟ್ಟಿದ್ದೆ.

ಅಲ್ಲಿಂದಾಚೆಗೆ ನನ್ನ ರವೀ ಅವರ ಭೇಟಿ ಮತ್ತೆ ಮತ್ತೆ ಆಗಲಾರಂಭಿಸಿತು. ನಾನು ನಿರ್ದೇಶಿಸಿದ ನಾಟಕಗಳಿಗೆ ಅವರು ತಪ್ಪದೇ ಬರುತ್ತಾ ಇದ್ದರು. ನಾನು ಬರೆಯುತ್ತಿದ್ದ ನಾಟಕ ಕುರಿತು ಅವರ ಜೊತೆಗೆ ಚರ್ಚಿಸುತ್ತಾ ಇದ್ದೆ. ಹೀಗೆ ನನ್ನ ಚಟುವಟಿಕೆಯ ಭಾಗವಾದ ರವೀ ಅವರು ನಂತರ ಅವರ ಸಿನಿಮಾ ಒಂದಕ್ಕೆ ಸಂಭಾಷಣೆ ಬರೆಯುವದಕ್ಕೂ ನನ್ನನ್ನು ಕರೆದರು. ಆ ವರೆಗೆ ಸಿನಿಮಾ ಎಂದರೆ ಹೀಗಳೆಯುತ್ತಾ ಇದ್ದ ಮತ್ತು ಯಾರೂ ಕರೆದರೂ ಹೋಗದಿದ್ದ ನಾನು 1987ರಲ್ಲಿ ರವೀ ಅವರ ಒತ್ತಾಯಕ್ಕೆ ಸೋತು ಸಿನಿಮಾ ಕೆಲಸಕ್ಕೆ ಪೂರ್ಣಾವಧಿಗೆ ಎಂದು ಬಂದೆ. (ಇದಕ್ಕೆ ಮುಂಚೆ ಅರೆಕಾಲಿಕವಾಗಿ ಕೆಲವು ಸಿನಿಮಾಗಳಿಗೆ ಕೆಲಸ ಮಾಡಿದ್ದೆ. ಅದಕ್ಕೆ ರಂಗಭೂಮಿಯ ಜೊತೆಗಾರರಾಗಿದ್ದ ಶಂಕರ್‍ನಾಗ್ ಮತ್ತು ಎ.ಎಸ್‍.ಮೂರ್ತಿ ಅಂತಹವರು ಜೊತೆಯಾಗಿದ್ದುದು ಕಾರಣವಾಗಿತ್ತು.) ನಾನು ಕೆಲಸ ಒಪ್ಪಿಕೊಂಡ ಕೂಡಲೇ ರವೀ ಅವರು ನನ್ನ ಕೈಗೆ ಗೀತಾ ನಾಗಭೂಷಣ ಅವರ “ಚುಕ್ಕಿ ಚಂದ್ರಮರ ನಾಡಲ್ಲಿ” ಕಾದಂಬರಿಯನ್ನು ಕೊಟ್ಟು ಇದನ್ನಾಧರಿಸಿ ಚಿತ್ರಕತೆ ಬರಿ ಅಂದರು. ಸಿನಿಮಾ ಅಂದರೇನು ಎಂಬುದರ ಸ್ಪಷ್ಟ ಕಲ್ಪನೆ ಇಲ್ಲದ ನನಗೆ ಗೊಂದಲವಾಗಿತ್ತು. ಕಾದಂಬರಿ ಓದಿದೆ. ನಾಟಕದ ಹಾಗೆ ಏನೇನೋ ಬರೆದುಕೊಟ್ಟೆ. ನಾನು ಬರೆದ ಪ್ರತೀ ಅಕ್ಷರವನ್ನು ಓದಿ ರವೀ ತಿದ್ದಿದರು. ಸಿನಿಮಾಗಾಗಿ ಕತೆಯೊಂದನ್ನು ನೋಡುವುದು ಹೇಗೆ ಎಂಬುದನ್ನು ಆಯಾ ದೃಶ್ಯವನ್ನು ಹಿಡಿದು ವಿವರಿಸಿದರು. ನಾನು ಬರೆದುದು ಯಾಕೆ ಸರಿಯಾಗದು ಎಂದು ಕಲಿಸಿದರು. ಅವರ ಮಾತಿನಂತೆ ತಿದ್ದುಪಡಿಗಳನ್ನು ಮಾಡಿ ಚಿತ್ರಕತೆ (ಈಗ ನೆನಪಿಸಿಕೊಂಡರೆ ಅದಿನ್ನೂ ಚಿತ್ರಕತೆ ಆಗಿರಲಿಲ್ಲ ಅನ್ನುವುದು ಖಂಡಿತ) ಸಂಭಾಷಣೆ ಎಂಬುದೊಂದನ್ನು ಬರೆದುಕೊಟ್ಟೆ. ಹಣಕಾಸಿನ ಕಾರಣಗಳಿಗಾಗಿ ಅದು ಸಿನಿಮಾ ಆಗಲಿಲ್ಲ. ಅಲ್ಲಿಗೆ ನನ್ನ ಸಿನಿಮಾ ಸಂಬಂಧ ಮುರಿದುಬಿತ್ತು ಎಂದು ಮರಳಿ ನನ್ನ ರಂಗಕಾಯಕದಲ್ಲಿ ತೊಡಗಿದ್ದೆ. ಆದರೆ ರವೀ ಅವರು ಬಿಡಲಿಲ್ಲ. ಮತ್ತೆ ಕರೆದರು. ಯಾವುದೋ ಸಾಕ್ಷ್ಯಚಿತ್ರಕ್ಕೆ ನನ್ನಿಂದ ಬರೆಸಿದರು. ನಂತರ, “ಅನುರಾಧಾ ರಮಣನ್ ಅವರ ತಮಿಳು ಕಾದಂಬರಿಯನ್ನು ಸಿನಿಮಾ ಮಾಡುತ್ತಾ ಇದ್ದೇನೆ. ನನ್ನ ಮಡದಿ ಕಾದಂಬರಿಯನ್ನು ತಮಿಳಿನಲ್ಲಿ ಓದಿ ಹೇಳುತ್ತಾರೆ. ಕೇಳಿ. ತಿಳಿದು. ಬರಿ.” ಎಂದರು. ಬಿ.ವಿ.ರಾಧಾ ಅವರು ಪ್ರತಿದಿನ ನನಗೆಂದು ಒಂದು ಗಂಟೆಗಳ ಕಾಲ ಆ ಕಾದಂಬರಿಯನ್ನು ಓದುತ್ತಾ ಇದ್ದರು. ಅವರು ಓದಿದ್ದನ್ನು ರೆಕಾರ್ಡ್ ಮಾಡಿಕೊಂಡು ನಾನು ಬರೆಯತೊಡಗಿದೆ. ಆ ಹಾದಿಯಲ್ಲಿ ರವೀ ಅವರು ಮಾತ್ರವಲ್ಲದೆ ರಾಧಾ ಅವರು ಸಹ ಸಿನಿಮಾಗಾಗಿ ಕಾದಂಬರಿಯೊಂದನ್ನು ಬಳಸುವಾಗ ಗಮನಿಸಬೇಕಾದ ಅಂಶಗಳೇನು ಎಂದು ತಿಳಿಸತೊಡಗಿದರು. ಈ ಹಾದಿಯಲ್ಲಿ “ಮಿಥಿಲೆಯ ಸೀತೆಯರು” ಸಿನಿಮಾ ಸಿದ್ಧವಾಯಿತು. ನಾನೂ ಸಹ ಸಿನಿಮಾದವನಾದೆ.

Meethileya Seetheyaru

ಇಲ್ಲಿಂದಾಚೆಗೆ ನಾನು ರವೀ ಅವರ “ಜಂಬೂಸವಾರಿ”, “ಹರಕೆಯಕುರಿ” ಸಿನಿಮಾಗಳಿಗೆ ಮತ್ತು ಧಾರಾವಾಹಿಯೊಂದಕ್ಕೆ ಕೆಲಸ ಮಾಡಿದೆ. ಈ ಹಾದಿಯಲ್ಲಿ ನಾನು ಕಂಡ ನನ್ನ ಗುರುಗಳನ್ನು ಈ ಲೇಖನದಲ್ಲಿ ಬಿಡಿಸಿಡುವ ಪ್ರಯತ್ನ ಮಾಡುತ್ತೇನೆ.

ರವೀ ಅವರು ಕತೆಯನ್ನು ಕಂಡ ಬಗೆ

ಸಾಮಾನ್ಯವಾಗಿ ಸಿನಿಮಾ ನಿರ್ದೇಶಕರು ಸಾಹಿತ್ಯ ಕೃತಿಯೊಂದನ್ನು ಆರಿಸಿಕೊಳ್ಳುವಾಗ ಅದರಲ್ಲಿ ದೃಶ್ಯವಾಗುವ ವಿವರಗಳನ್ನು ಯೋಚಿಸುತ್ತಾರೆ. ಆ ಹೂರಣವನ್ನು ಸಿನಿಮಾ ಭಾಷೆಗೆ ಒಗ್ಗಿಸಲು ಪ್ರಯತ್ನಿಸುತ್ತಾರೆ. ಆದರೆ ರವೀ ಅವರು ಕೊಂಚ ಭಿನ್ನ. ಅವರು ಆ ಸಾಹಿತ್ಯದಲ್ಲಿನ ಹೂರಣಕ್ಕಿಂತ ಭಾವ ನಿರ್ವಹಣೆ ಹಾಗೂ ಆ ಕತೆಯು ನೋಡುಗರ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ಯೋಚಿಸುತ್ತಾ ಇದ್ದರು. “ಮಿಥಿಲೆಯ ಸೀತೆಯರು” ಕಾದಂಬರಿಯನ್ನು ಅವರು ಸಿನಿಮಾ ಮಾಡಲು ಆರಿಸಿಕೊಂಡಾಗ ನನ್ನ ಜೊತೆಗೆ ಆ ಕತೆಯ ಭಾವನಿರ್ವಹಣೆಯನ್ನು ಕುರಿತೇ ಮತ್ತೆ ಮತ್ತೆ ಮಾತಾಡಿದ್ದರು. ಹೊಸಬನಾದ ಮತ್ತು ಬೀದಿ ನಾಟಕ ಚಳುವಳಿಯ ಹಿನ್ನೆಲೆಯಿಂದ ಬಂದಿದ್ದ ನನಗೆ ಆ ಕಾದಂಬರಿಯು ದುಡಿಯುವ ಹೆಣ್ಣು ಮಕ್ಕಳ ಮೇಲೆ ಗಂಡಸರ ಸವಾರಿ ಎಂಬರ್ಥದಲ್ಲಿ ದಕ್ಕಿತ್ತು. ನನ್ನ ಗ್ರಹಿಕೆಯ ಕ್ರಮದಿಂದ ಎಲ್ಲವೂ ಕೇವಲ ಕಪ್ಪು-ಬಿಳುಪು ಮಾತ್ರವಾಗಿ ಕಾಣುತ್ತದೆ ಎಂದು ವಿವರಿಸುತ್ತಾ, ಪ್ರತೀ ವ್ಯಕ್ತಿಯಲ್ಲೂ ಇರುವ ಹಲವು ಬಣ್ಣಗಳನ್ನು ಗಮನಿಸಬೇಕು ಎಂದು ರವೀ ವಿವರಿಸಿದ್ದರು. ಹಾಗಾಗಿಯೇ ಕತೆಯ ಪ್ರಕಾರ ಖಳನಾದರೂ ಕಥಾನಾಯಕಿಗೆ ಅಪ್ಪ ಆಗಿರುವ ಪಾತ್ರವೊಂದನ್ನು ಆ ಚಿತ್ರದಲ್ಲಿ ಸೃಷ್ಟಿಸಲು ಸಾಧ್ಯವಾಯಿತು. ಹಲವು ಬಣ್ಣಗಳಿರುವ ಪಾತ್ರವೊಂದನ್ನು ಕಟ್ಟುವಾಗ ಮಾತು ಬರೆಯುವುದಕ್ಕೆ ಅನೇಕ ಸಾಧ್ಯತೆಗಳು ಸಿಗುತ್ತವೆ ಎಂಬುದನ್ನು ಸಹ ರವೀ ಅವರು ಪ್ರತೀ ದೃಶ್ಯದ ಚಿತ್ರೀಕರಣದಲ್ಲಿ ತೋರಿಸಿಕೊಡುತ್ತಾ ಇದ್ದರು. ಆ ಮೂಲಕ ಸಾಹಿತ್ಯಕೃತಿಯೊಂದನ್ನು ದೃಶ್ಯವಾಗಿಸುವಾಗ ನಿರ್ದೇಶಕನಿಗೆ ಇರಬೇಕಾದ ಜವಾಬ್ದಾರಿ ಕೇವಲ ಹೂರಣವನ್ನು ಮತ್ತೊಂದು ಮಾಧ್ಯಮಕ್ಕೆ ತರುವುದಲ್ಲ ಎಂಬುದನ್ನು, ನಿರ್ದೇಶಕನಾದವನು ತನ್ನ ಕಾಣ್ಕೆಯ ಜೊತೆಗೆ ಅದೇ ಕತೆಯನ್ನು ಕಟ್ಟಿದಾಗ ಮಾತ್ರ ಸಾಹಿತ್ಯವಾಗಿದ್ದದ್ದು ದೃಶ್ಯವಾಗಿಯೂ ನೋಡುಗರಿಗೆ ತಾಗುತ್ತದೆ ಎಂಬುದನ್ನು ಸೋದಾಹರಣವಾಗಿ ತಿಳಿಸಿಕೊಟ್ಟಿದ್ದರು.

ಈ ಯೋಚನೆ ಇದ್ದ ಕಾರಣಕ್ಕಾಗಿಯೇ ಅವರು ನಿರ್ದೇಶಿಸಿದ್ದ “ತೂಗುದೀಪ”, “ಮಾಗಿಯಕನಸು”, “ಭಾಗ್ಯಜ್ಯೋತಿ” ತರಹದ ಸಿನಿಮಾಗಳು ಮೂಲ ಕಾದಂಬರಿಯ ಆಶಯವನ್ನು ವಿಸ್ತರಿಸಿ ನಿಂತ ಸಿನಿಮಾಗಳಾಗಿ ನಮ್ಮೆದುರಿಗೆ ಇಂದಿಗೂ ಜೀವಂತವಾಗಿವೆ. ಅದೇ ಬಗೆಯಲ್ಲಿ ಉರಿಶಿಕ್ಷೆ ಎಂಬುದು ಅಮಾನವೀಯ ಎಂಬ ಆಶಯವನ್ನು ಮತ್ತು ಅಪರಾಧೀಕರಣವು ಹೇಗೆ ಸಮಾಜದ ಒಳಗಿನಿಂದಲೇ ಹುಟ್ಟು ಪಡೆಯುತ್ತದೆ ಎಂಬುದನ್ನು ಹೇಳಲು “ಜಿಮ್ಮೀಗಲ್ಲು” ತರಹದ ಚಿತ್ರವನ್ನು ರವೀ ಅವರು ಮಾಡಿದ್ದರು. ಈ ಸಿನಿಮಾ ಕುರಿತು ವಿಷ್ಣುವರ್ಧನ್ ಅವರು ನನ್ನೊಂದಿಗೆ ಹಲವು ಸಲ ಮಾತಾಡಿದ್ದರು. ಆ ಸಿನಿಮಾದ ಹೂರಣವನ್ನು ದಾಟಿಸಲು ರವೀ ಅವರು ಶಿವರಂಜನಿ ರಾಗವನ್ನು ಬಳಸಿ ಮಾಡಿಸಿದ್ದ “ದೇವಮಂದಿರದಲ್ಲಿ ದೇವರು ಕಾಣಲೇ ಇಲ್ಲ” ಹಾಡಿನ ಸಾಹಿತ್ಯವನ್ನು ಹಾಗೂ ಅದನ್ನು ದೃಶ್ಯ ಮಾಡುವಾಗ ನೆರಳನ್ನು ಪ್ರಧಾನವಾಗಿಸಿ ಚಿತ್ರಿಸಿದ ಕ್ರಮವನ್ನು ನಟರಾಗಿ ವಿಷ್ಣುವರ್ಧನ್ ಅವರು ಸದಾಕಾಲ ನೆನಸುತ್ತಿದ್ದರು.

“ಜಂಬೂಸವಾರಿ” ಚಿತ್ರವನ್ನು ನಾನು ಸ್ವತಃ ನಿರ್ದೇಶಿಸಬೇಕೆಂದು ಬರೆದುಕೊಂಡಿದ್ದೆ. ಆದರೆ ನನಗೆ ಹಣಹೂಡುವವರು ಸಿಗಲಿಲ್ಲ. ಹಾಗಾಗಿ ಹತಾಶನಾಗಿ ಗಾಂಧೀನಗರದಲ್ಲಿ ಕಛೇರಿಗಳಿಂದ ಕಛೇರಿಗೆ ನಾನು ಚಿತ್ರಕತೆಯನ್ನು ಹಿಡಿದುಕೊಂಡು ಓಡಾಡುತ್ತಾ ಇದ್ದಾಗೊಮ್ಮೆ ರವೀ ಅವರು ಸಂಕಲನ ಕೇಂದ್ರವೊಂದರ ಬಳಿ ಸಿಕ್ಕಿದರು. ಅವರಲ್ಲಿ ತಮ್ಮ ಗುರುಗಳಾದ ಜಿ.ವಿ.ಅಯ್ಯರ್ ಅವರ ಸಿನಿಮಾ ಒಂದಕ್ಕೆ ಕೆಲಸ ಮಾಡುತ್ತಾ ಇದ್ದರು. ನನ್ನ ಕೈಯಲ್ಲಿದ್ದ ಚಿತ್ರಕತೆಯ ಬಗ್ಗೆ ತಿಳಿದು, ತಟ್ಟನೆ ಅದನ್ನು ನನ್ನಿಂದ ಪಡೆದು ಅಲ್ಲಿಯೇ ಒಂದು ಗಂಟೆಯ ಒಳಗೆ ಇಡೀ ಚಿತ್ರಕತೆಯನ್ನು ಓದಿದರು. ನಾನು ನಿರ್ಮಿಸುತ್ತೇನೆ ಎಂದು ತೀರ್ಮಾನಿಸಿದರು. ಆದರೆ ಅವರ ಪ್ರಯತ್ನದ ಫಲವಾಗಿಯೂ ಹೊಸ ನಿರ್ದೇಶಕನಿಗೆ ದುಡ್ಡು ಹಾಕುವವರು ಸಿಗಲಿಲ್ಲ. ಹೀಗಾಗಿ ರವೀ ಅವರು ತಾವೇ ನಿರ್ಮಿಸಿ ನಿರ್ದೇಶಿಸುವ ಜವಾಬ್ದಾರಿ ಹೊತ್ತುಕೊಂಡರು. ನಾನು ಸಹಾಯಕನಾಗಿ ದುಡಿದೆ.

Jambu Savari Poster

ಈ ಕತೆಯನ್ನು ನಾನು ಎ.ಎಸ್.ಮೂರ್ತಿ ಅವರ ಅದೇ ಹೆಸರಿನ ನಾಟಕದಿಂದ ಆಯ್ದುಕೊಂಡಿದ್ದೆ. ನನ್ನ ಚಿತ್ರಕಥಾ ರಚನಾ ಶೈಲಿಯಲ್ಲೂ ನಾಟಕೀಯತೆ ಇತ್ತು. ಇದನ್ನು ಸಿನಿಮಾ ಆಗಿಸಲು ರವೀ ಅವರು ಇಡೀ ಕತೆಯನ್ನು ನೋಡಿದ ಕ್ರಮ ನನ್ನಂತಹ ಹೊಸಬರಿಗೆ ಸಿಕ್ಕ ದೊಡ್ಡ ಪಾಠವಾಗಿತ್ತು. ಮಾತು ಹೆಚ್ಚಾದ ದೃಶ್ಯವೊಂದನ್ನು ಸಿನಿಮಾ ಆಗಿ ರೂಪಿಸಿವುದು ಸುಲಭವಲ್ಲ. ಅಲ್ಲಿ ಅನೇಕ ಮೌನಗಳನ್ನು ಸೃಷ್ಟಿಸಿ, ಮಾಹಿತಿಯ ನಡುವೆ ಭಾವವನ್ನು ದಾಟಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ರವೀ ಅವರು ನಾನು ಬರೆದುದನ್ನು ಪುನರ್‍ಸೃಷ್ಟಿಸಿದ ಕ್ರಮ ವಿಶಿಷ್ಟವಾದ್ದಾಗಿತ್ತು. ಹಾಗಾಗಿಯೇ ಆ ಸಿನಿಮಾಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತು. ರವೀ ಅವರಿಗೂ ಆ ಸಿನಿಮಾದ ಮೂಲಕ ಹಲವು ದೇಶಗಳನ್ನು ನೋಡಿಬರುವ ಅವಕಾಶ ಒದಗಿ ಬಂದಿತು.

ರವೀ ಅವರು ನಟರನ್ನು ರೂಪಿಸುತ್ತಾ ಇದ್ದ ಕ್ರಮ

ರವೀ ಅವರು ಸ್ವತಃ ನಟರಾಗಬೇಕೆಂದು ಸಿನಿಮಾಕ್ಕೆ ಬಂದವರು. ಅವರು ಕಾಲೇಜಿನಲ್ಲಿ ಓದುತ್ತಾ ಇದ್ದ ಕಾಲದಲ್ಲಿ “ರತ್ನಮಂಜರಿ” ಸಿನಿಮಾದಲ್ಲಿ ಅಭಿನಯಿಸುತ್ತಲೇ ಈ ಜಗತ್ತಿಗೆ ಪ್ರವೇಶ ಪಡೆದವರು. ಅವರ ನಿರ್ದೇಶನದ “ಆರು ಮೂರು ಒಂಬತ್ತು” ಚಿತ್ರದಲ್ಲಿಯೂ ಅವರು ಪ್ರಧಾನ ಪಾತ್ರ ಮಾಡಿದ್ದರು. ನಂತರ ಹಲವು ಚಿತ್ರಗಳಲ್ಲಿ ಅವರು ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು. “ಜಂಬೂಸವಾರಿ”ಯಲ್ಲಿಯೂ ಅವರು ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು. ಆದರೆ ರವೀ ಅವರ ನಟನೆಗೆ ಹೆಚ್ಚು ಜನಮನ್ನಣೆ ದೊರೆತದ್ದು “ಮೂಡಲಮನೆ” ಧಾರಾವಾಹಿಯಿಂದ. ಹೀಗೆ ನಟನೆ ಬಲ್ಲ ಒಬ್ಬ ನಿರ್ದೇಶಕನಿದ್ದಾಗ ನಟರಿಗೆ ಅಭಿನಯಿಸುವುದು ಸುಲಭವೂ ಹೌದು, ಕಷ್ಟವೂ ಹೌದು. ರವೀ ಅವರು ಆಯಾ ದೃಶ್ಯದ ಮಾತುಗಳನ್ನ ಚಲನೆಯನ್ನ ಸ್ವತಃ ತಾವೇ ಅಭಿನಯಿಸಿ ತೋರಿಸುತ್ತಾ ಇದ್ದರು. ಇದರಿಂದ ಹೊಸಬರಿಗೆ ಸುಲಭವಾದರೆ ನಟನೆ ಬಲ್ಲವರ ಜೊತೆಗೆ ಜಗಳವೂ ಆಗುತ್ತಿತ್ತು. “ಸ್ವಾಮಿ ವಿವೇಕಾನಂದ” ಚಿತ್ರಕ್ಕೆ ಜಿ.ವಿ.ಅಯ್ಯರ್ ಅವರಿಗೆ ನಾನು ಮತ್ತು ರವೀಯವರು ಸಹಾಯಕರಾಗಿದ್ದೆವು. ಆಗ ನಸೀರುದ್ದೀನ್ ಶಾ ಅವರು ರಾಮಕೃಷ್ಣರ ಪಾತ್ರದಲ್ಲಿ ಅಭಿನಯಿಸಿದ್ದರು. (ಅಂತಿಮ ಚಿತ್ರದಲ್ಲಿ ಆ ಪಾತ್ರವನ್ನು ಮಿಥುನ್ ಚಕ್ರವರ್ತಿ ಮಾಡಿದ್ದರು. ಆ ಪಾತ್ರ ಬದಲಾವಣೆ ಮತ್ತೊಂದು ಕತೆ.) ಆಗ ರವೀ ಅವರೇ ಅಭಿನಯಿಸಿ ತೋರಿಸುವುದನ್ನು ನಸೀರುದ್ದೀನ್ ಶಾ ಒಪ್ಪುತ್ತಾ ಇರಲಿಲ್ಲ. ಆಗ ಆಗುತ್ತಾ ಇದ್ದ ವಾದ ವಿವಾದ ತಪ್ಪಿಸಲು ಅಯ್ಯರ್ ಅವರು ಹೆಣಗುತ್ತಾ ಇದ್ದರು. ಆದರೆ ಸ್ವತಃ ರವೀ ಅವರೇ ನಿರ್ದೇಶಕರಾಗಿದ್ದಾಗ “ಮಿಥಿಲೆಯ ಸೀತೆಯರು” ಚಿತ್ರದಲ್ಲಿ ಎಚ್.ಜಿ.ಸೋಮಶೇಖರ್ ರಾವ್ ಅವರಿಂದ ಕೆಲಸ ತೆಗೆದ ಕ್ರಮ, “ಹರಕೆಯಕುರಿ”ಯಲ್ಲಿ ಪ್ರಕಾಶ್ ರೈ ತರಹದ ಹೊಸಬನನ್ನು ಪಳಗಿಸಿದ ಕ್ರಮ ಮೆಚ್ಚುವಂತಹದು. ಒಂದೆಡೆ ಸೋಮಣ್ಣ ಅದಾಗಲೇ ಸಿನಿಮಾ, ರಂಗಭೂಮಿ ಅನುಭವ ಇದ್ದವರು. ಅಂತಹವರಇಗೆ ಇರುವ ಸಿದ್ಧ ಮಾದರಿಯಿಂದ ಬಿಡಿಸುವುದು ಸುಲಭವಲ್ಲ. ಪ್ರಕಾಶ್ ರೈ ತರಹದ ಹೊಸಬರಿಗೆ ಇರುವ ಚಳಿಯನ್ನು ಬಿಡುಸುವುದು ಸಹ ಸುಲಭವಲ್ಲ. ಇದೆರಡು ಬಗೆಯ ಕೆಲಸವನ್ನು ರವೀ ಅವರು ನಿರ್ವಹಿಸಿದ ರೀತಿಗೆ ಸಾಕ್ಷಿಯಾಗಿ ಇವೆರಡೂ ಸಿನಿಮಾಗಳು ನಮ್ಮೆದುರಿಗೆ ಇವೆ. “ಜಂಬೂಸವಾರಿ”ಯಂತಹ ಚಿತ್ರದಲ್ಲಿ ಮಕ್ಕಳನ್ನು ಬಳಸಿಕೊಂಡ ರೀತಿಯೂ ಸಹ ವಿಶಿಷ್ಟವಾದುದು. ಮಕ್ಕಳಿಗೆ ನಟನೆಯನ್ನು ಕಲಿಸುವುದಕ್ಕೆ ತುಂಬಾ ತಾಳ್ಮೆ ಬೇಕು. ನಿರ್ದೇಶಕ ಸ್ವತಃ ಮಗುವಾಗಬೇಕು. ರವೀ ಅವರು ಈ ಸಿನಿಮಾದುದ್ದಕ್ಕೂ ಹುಡುಗರನ್ನು ತಮಗೆ ಬೇಕಾದ ಭಾವ ಬರುವ ಹಾಗೆ ಸಿದ್ಧಪಡಿಸಿದ ರೀತಿಯನ್ನು ಸ್ವತಃ ನಾನು ಕಂಡವನು. ಒಂದು ಮಗುವನ್ನು ರಮಿಸುತ್ತಾ, ಮತ್ತೊಂದು ಮಗುವನ್ನು ಹುಸಿಕೋಪದಿಂದ ಒಲಿಸುತ್ತಾ, ಮಗದೊಂದು ಮಗುವನ್ನು ಹೊಗಳಿ ಹೊಗಳಿ ದಾರಿಗೆ ತರುತ್ತಾ ಇದ್ದ ಕ್ರಮದಿಂದಾಗಿಯೇ “ಜಂಬೂಸವಾರಿ”ಯಲ್ಲಿದ್ದ ಅಷ್ಟೊಂದು ಮಕ್ಕಳು ಕತೆಯನ್ನು ನೋಡುಗರಿಗೆ ದಾಟಿಸುವಲ್ಲಿ ಯಶಸ್ವಿಯಾದರು ಎನಿಸುತ್ತದೆ.

ದೊಡ್ಡನಟರನ್ನು ರವೀ ಅವರು ನಿರ್ವಹಿಸುತ್ತಾ ಇದ್ದ ಕ್ರಮವೂ ವಿಶೇಷವಾದುದಾಗಿತ್ತು. ಅವರು ಕನ್ನಡದ ಎಲ್ಲಾ ಪ್ರಧಾನ ನಾಯಕರ ಚಿತ್ರಗಳನ್ನೂ ನಿರ್ದೇಶಿಸಿದ್ದರು. ನಾನೇ ಕಂಡಂತೆ ವಿಷ್ಣವರ್ಧನ್ ಅವರು “ಮಿಥಿಲೆಯ ಸೀತೆಯರು” ಹಾಗೂ “ಹರಕೆಯಕುರಿ”ಯಲ್ಲಿ ಅಭಿನಯಿಸಿದ್ದರು. ಇಂತಹ ನಟರನ್ನು ಸದಾ ಕಾಲ ಮಾತಾಡಿಸುತ್ತಾ ಅವರನ್ನು ಕಥೆಯ ಲೋಕದಲ್ಲಿ ಇರಿಸುತ್ತಿದ್ದರು. ಯಾವುದೇ ಷಾಟ್ ತೆಗೆಯುವ ಮುನ್ನ ಆ ನಟರಿಗೆ ಕತೆಯ ಆ ಕ್ಷಣದ ಭಾವವನ್ನು ರಸವತ್ತಾಗಿ ವರ್ಣಿಸುತ್ತಾ ಇದ್ದರು. ಆ ಮೂಲಕ ದೊಡ್ಡ ನಟರೊಬ್ಬರು ಸಣ್ಣ ಪಾತ್ರ ಮಾಡುತ್ತಾ ಇದ್ದರೂ ಆ ಕತೆಯೊಳಗೆ ಅವರ ಪಾತ್ರದ ಪ್ರಾಮುಖ್ಯತೆಯನ್ನು ಅರಿಯುವ ಹಾಗೆ ಮಾಡುತ್ತಾ ಇದ್ದರು. ಇದರಿಂದಾಗಿ ಆ ಚಿತ್ರಕ್ಕಾಗಿ ಬರೆದುಕೊಂಡ ಯಾವುದೇ ಮಾತು ಅಥವಾ ದೃಶ್ಯ ಯಾವ ಬದಲಾವಣೆಯೂ ಇಲ್ಲದೆ ತೆರೆಯ ಮೇಲೆ ಬರುವುದು ಸಾಧ್ಯವಾಗುತ್ತಿತ್ತು. “ಹರಕೆಯಕುರಿ” ಚಿತ್ರದಲ್ಲಿ ವಿಷ್ಣುವರ್ಧನ್ ಅವರದ್ದು ಕ್ರಾಂತಿಕಾರಿಯ ಪಾತ್ರ. ಆ ಪಾತ್ರವು ಬಡಮಧ್ಯಮವರ್ಗದವರಾದ ಪ್ರಕಾಶ್ ಮತ್ತು ಗೀತಾ ಅವರ ಪಾತ್ರಕ್ಕೆ ಸುದೀರ್ಘವಾಗಿ ಮಾತಾಡುತ್ತಾ ರಾಜಕಾರಣಿಗಳು ಹೇಗೆ ಅವರನ್ನು ದಾಳವಾಗಿಸಿಕೊಳ್ಳುತ್ತಾರೆ ಎಂದು ಹೇಳುವ ದೃಶ್ಯವೊಂದಿದೆ. ಅದೊಂದು ಐದು ನಿಮಿಷದ ಅವಧಿಯ ಒಂದೇ ಷಾಟ್. ಆ ಕಾಲದಲ್ಲಿ ಚಿತ್ರದ ನೆಗೆಟಿವ್ ಕೊಳ್ಳುವುದೇ ಕಷ್ಟವಾಗಿತ್ತು. ಹಾಗಾಗಿ ಬಹುತೇಕ ನಿರ್ದೇಶಕರು ಇಷ್ಟು ಸುದೀರ್ಘ ಷಾಟ್ ತಪ್ಪಾದರೆ ಮತ್ತೆ ರೀಲು ಹೊಂದಿಸುವುದು ಕಷ್ಟ ಎಂದು ಸಣ್ಣ ಷಾಟ್‍ಗಳನ್ನು ರೂಪಿಸುತ್ತಾ ಇದ್ದರು. ಆದರೆ ರವೀಯವರು ಇಂತಹದೊಂದು ಸುದೀರ್ಘ ಷಾಟ್ ಯೋಜಿಸಿ, ವಿಷ್ಣು ಅವರಿಗೆ ತಿಳಿಸಿದರು. ವಿಷ್ಣು ಸಹ ಇಷ್ಟು ದೊಡ್ಡ ಷಾಟ್ ಮತ್ತು ಇಷ್ಟೊಂದು ಚಲನೆ ಹಾಗೂ ಮಾತು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ರವೀ ಅವರು ವಿಷ್ಣು ಅವರನ್ನು ಒಪ್ಪಿಸಿ, ಹಲವು ಬಾರಿ ತಾಲೀಮು ಮಾಡಿಸಿ, ನಂತರ ಯೋಜಿಸಿದ ಕ್ರಮದಲ್ಲಿಯೇ ಚಿತ್ರಿಸಿದರು. ಇಂದಿಗೂ ಆ ನೆರಳು ಬೆಳಕಿನಾಟದ ನಡುವೆ ಕ್ರಾಂತಿಕಾರಿ ಪಾತ್ರವೊಂದು ಮನೆಯ ತುಂಬಾ ಓಡಾಡುತ್ತಾ ಆಡುವ ಮಾತಿನ ದೃಶ್ಯವನ್ನು ನೋಡುವುದೇ ಒಂದು ಆನಂದ. ರವೀ ಅವರು ಇಂತಹ ಷಾಟ್ ಚಿತ್ರಿಸುವಾಗ ತಾವೇ ಟ್ರಾಲಿಯನ್ನು ತಳ್ಳುತ್ತಾ ಇದ್ದರು. ಆ ಮೂಲಕ ಹಿನ್ನೆಲೆ ಸಂಗೀತ ಮಾಡುವವರಿಗೂ ಲಯ ಒದಗಿ ಬರುವಂತೆ ಮಾಡುತ್ತಾ ಇದ್ದರು. ಇದೆಲ್ಲವೂ ಯಾವತ್ತಿಗೂ ಮಾದರಿ ಎನಿಸುವಂತಹದ್ದಾಗಿತ್ತು.

Harakeya Kuri poster

ನಿರ್ಮಾಪಕರಾಗಿ ರವೀ

ರವೀ ಅವರ ಗೆಳೆಯರ ಬಳಗ ದೊಡ್ಡದಿತ್ತು. ಯಾರಿಗೇನೇ ಸಮಸ್ಯೆಯಾದರೂ ಸ್ವತಃ ಇವರು ಅಲ್ಲಿಗೆ ಹೋಗುತ್ತಾ ಇದ್ದರು. ತೊಂದರೆಯಲ್ಲಿರುವ ಗೆಳೆಯನಿಗೆ ಹೇಗಾದರೂ ಸಹಾಯ ಒದಗಿಸುತ್ತಾ ಇದ್ದರು. ಗೆಳೆಯ ಪುಟ್ಟಣ್ಣನವರಿಗೆ “ಶುಭಮಂಗಳ” ಕಾದಂಬರಿಯನ್ನು ಸಿನಿಮಾ ಮಾಡಲು ನಿರ್ಮಾಪಕರು ಸಿಗಲಿಲ್ಲ ಎಂದಾಗ ಸ್ವತಃ ನಿರ್ಮಾಪಕರಾದರು. ಆ ಮೂಲಕ ನಟ ಶ್ರೀನಾಥ್ ಅವರಿಗೆ ಮರಳಿ ಯಶಸ್ಸು ಸಿಕ್ಕಿತು ಎಂದು ಸಂಭ್ರಮ ಪಟ್ಟರು. ತಮ್ಮಲ್ಲಿ ಸಹಾಯಕರಾಗಿ ದುಡಿಯುತ್ತಿದ್ದ ಚಂದ್ರಶೇಖರ ಶರ್ಮ ಅವರಿಗೆ ಆರ್ಥಿಕ ಸಮಸ್ಯೆಯಾದಾಗ ತಾವೇ ನಿರ್ಮಾಪಕರಾಗಿ “ಮುತ್ತೈದೆ ಭಾಗ್ಯ” ಸಿನಿಮಾ ತಯಾರಿಸಿದರು. ಒಟ್ಟಾರೆಯಾಗಿ ರವೀ ಅವರು ಸ್ವತಃ ಲಾಭಗಳಿಸುವುದಕ್ಕೆ ನಿರ್ಮಾಪಕರಾಗುವುದಕ್ಕಿಂತ ಇತರರಿಗೆ ಸಹಾಯವಾಗಲಿ ಎಂದೇ ನಿರ್ಮಾಪಕರಾಗಿದ್ದರು. ಅವರ ವೃತ್ತಿ ಜೀವನದ ಕಡೆಯ ಕೆಲವು ಸಿನಿಮಾಗಳಿಗೆ ಹೊರಗಿನ ನಿರ್ಮಾಪಕರು ದೊರೆಯದೆ ಇದ್ದಾಗ ತಾವೇ ಅವುಗಳನ್ನು ನಿರ್ಮಿಸಲು ಹೊರಟರು. ಜೇಬಲ್ಲಿ ಹಣವಿಲ್ಲದೆ ಇದ್ದರೂ ಅವರಿಗಿದ್ದ ಅಪಾರ ಗೆಳೆಯರ ಕಾರಣವಾಗಿ ತಾವು ಆರಂಭಿಸಿದ ಬಹುತೇಕ ಯೋಜನೆಗಳನ್ನು ಪೂರೈಸಿದರು.

ರವೀ ಅವರು ತಮ್ಮ ಸಿನಿಮಾಗಳನ್ನು ತಾವೇ ನಿರ್ಮಿಸಿಕೊಳ್ಳುವ ನಿರ್ಧಾರಕ್ಕೆ ಬಂದಮೇಲೆ ಎಲ್ಲಾ ನಿರ್ಧಾರಗಳನ್ನೂ ಭಾವುಕ ನೆಲೆಯಲ್ಲಿಯೇ ತೆಗೆದುಕೊಳ್ಳುತ್ತಾ ಇದ್ದರು. ಜೇಬಲ್ಲಿ ನಾಲ್ಕು ಕಾಸು ಇಲ್ಲದೆ ಇದ್ದರೂ ಇಂತಹದೊಂದು ಸಿನಿಮಾ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದು ಓಡಾಡುತ್ತಾ ಇದ್ದರು. ಇದೇ ಹಂತದಲ್ಲಿ ನನ್ನಂತಹ ಹಲವರು ಅವರಲ್ಲಿ ಕೆಲಸ ಮಾಡುತ್ತಾ ಇದ್ದೆವು. ನಮಗೆ ಒಪ್ಪಿಕೊಂಡ ಹಣ ಕೊಡುವಷ್ಟು ಹಣ ಅವರ ಬಳಿ ಇರುತ್ತಾ ಇರಲಿಲ್ಲ. ಅದಕ್ಕಾಗಿ ನಾವು ಅವರ ಮನೆಯ ಬಳಿ ಹೋದಾಗ ಅವರೆಂದು ನಮ್ಮನ್ನು ಬಯ್ಯುವ, ಸಿಟ್ಟಾಗುವ ಹಾಗೆ ನಡೆದುಕೊಳ್ಳುತ್ತಾ ಇರಲಿಲ್ಲ. ಬದಲಿಗೆ ಪ್ರೀತಿಯಿಂದ ತಮ್ಮ ಕಷ್ಟ ಹೇಳಿಕೊಳ್ಳುತ್ತಾ ಇದ್ದರು. ಅವರು ತೋರಿಸುತ್ತಾ ಇದ್ದ ಪ್ರೀತಿಯಿಂದಾಗಿಯೇ ನನ್ನಂತಹ ಹಲವರು ರವೀ ಅವರು ಒಪ್ಪಿಕೊಂಡ ಹಣ ಕೊಡದೆ ಇದ್ದರೂ ದುಡಿಯುತ್ತಿದ್ದೆವು. ಆದರೆ ಹಣವಿಲ್ಲದೆ ಆರಂಭವಾದ ಇಂತಹ ಯೋಜನೆಗಳು ಅನೇಕ ಸಲ ರವೀ ಅವರನ್ನು ಕಂಗೆಡಿಸುತ್ತಾ ಇದ್ದವು. ಅಂತಹ ಸಮಯದಲ್ಲಿ ಅವರು ಹತಾಶರಾಗುತ್ತಿದ್ದರು.

ತನ್ನ ಸಮಕಾಲೀನ ನಿರ್ದೇಶಕರನ್ನೆಲ್ಲಾ ಸೇರಿಸಿ ಸಹಕಾರಿ ಸಂಘವೊಂದನ್ನು ಸ್ಥಾಪಿಸಿ ಸಿನಿಮಾ ತಯಾರಿಕೆ ಮಾಡುವ ಆಲೋಚನೆ ಅವರಿಗಿತ್ತು. ಅದಕ್ಕಾಗಿ ಎನ್.ಲಕ್ಷ್ಮೀನಾರಾಯಣ್ ಅವರ ಜೊತೆ ಸೇರಿ ಸಂಘವನ್ನು ನೋಂದಣಿ ಮಾಡಿಸಿದ್ದರು. ಆ ಸಂಘದ ಬೈ ಲಾ ನನ್ನ ಕೈಯಲ್ಲೇ ಬರೆಸಿದ್ದರು. ನಂತರ ಸಂಘದ ಸದಸ್ಯರೆಲ್ಲರನ್ನೂ ಕರೆದು ಏಕಕಾಲಕ್ಕೆ ಸಿನಿಮಾ ಮಾಡುವುದಕ್ಕೆ ಚಿತ್ರಕತೆ ಬರೆಯಲು ತಿಳಿಸಿದರು. ಸುಮಾರು ಮೂರು ತಿಂಗಳ ಅವಧಿಯಲ್ಲಿ ನಮ್ಮೆದುರು ಹದಿನೈದು ವಿಭಿನ್ನ ಚಿತ್ರಕತೆಗಳಿದ್ದವು. ಅವುಗಳಲ್ಲಿ ಮೊದಲಿನದು ಯಾವುದಾಗಬೇಕು ಎಂಬ ವಿಷಯ ನಿರ್ಧಾರವಾಗಲೇ ಇಲ್ಲ. ರವೀ ಅವರ ಎಲ್ಲಾ ಪ್ರಯತ್ನಗಳು ಸಹ ಆ ಸಂಘವನ್ನು ಮುಂದುವರೆಸಲು ಸಹಕಾರಿಯಾಗಲಿಲ್ಲ. ಆದರೆ ಎನ್‍ಎಫ್‍ಡಿಸಿ ಮಾದರಿಯಲ್ಲಿ ಚಿತ್ರ ನಿರ್ದೇಶಕ ತನಗೆ ಬೇಕಾದ ರೀತಿಯ ಸಿನಿಮಾ ತಯಾರಿಸಲು ಹಣ ಒದಗಿಸುವ ಸಂಸ್ಥೆಯೊಂದನ್ನು ಮಾಡಬೇಕೆಂಬ ಅವರ ಕನಸು ಇಂದಿಗೂ ನನಸಾಗಲಿಲ್ಲ ಎಂಬುದಂತು ಸತ್ಯ.

ಆಧುನಿಕ ಸಿನಿಮಾ ತಯಾರಿಕೆಯ ಸ್ಥಿತಿಯು ಅವರನ್ನು ಕಂಗಾಲಾಗಿಸಿತ್ತು. “ಈ ಕಾಲದಲ್ಲಿ ಒಬ್ಬರಿಗೊಬ್ಬರ ಮೇಲೆ ಪ್ರೀತಿ ಇರಲಿ, ಗೌರವವೂ ಇಲ್ಲ. ಇಂತಹ ಕಾಲದಲ್ಲಿ ಯಾವ ಕೆಲಸ ಮಾಡುವುದೂ ಕಷ್ಟ” ಎಂದು ಬೇಸರಿಸಿಕೊಳ್ಳುತ್ತಾ ಇದ್ದರು. ಆದರೆ ತಾವು ಎಲ್ಲರಿಗೂ ತೋರಿಸುತ್ತಾ ಇದ್ದ ಪ್ರೀತಿಯಲ್ಲಿ ಮಾತ್ರ ಯಾವುದೇ ಕೊರೆ ಮಾಡಲಿಲ್ಲ.

ಗಾಯಕರಾಗಿ ರವೀ

ರವೀ ಅವರಿಗೆ ಕಾಲೇಜಿನಲ್ಲಿ ಓದುವ ಕಾಲದಿಂದಲೂ ಹಾಡುವುದರ ಬಗ್ಗೆ ಒಲವು. ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಹಾಡಿ ಪದಕಗಳನ್ನು ಸಹ ಗಳಿಸಿದ್ದರಂತೆ. ಹೀಗಾಗಿ ರವೀ ಅವರ ಬಾಲ್ಯ ಗೆಳೆಯರಾಗಿದ್ದ ವಿಜಯಭಾಸ್ಕರ್ ಮತ್ತು ಇನ್ನೂ ಕೆಲವು ಸಂಗೀತ ನಿರ್ದೇಶಕರು ರವೀ ಅವರನ್ನು ಟ್ರಾಕ್ ಹಾಡುಗಾರರಾಗಿ ಬಳಸಿಕೊಂಡದ್ದಿದೆ. ಹಾಗೇ ಅವರು ಹಾಡಿದ “ಸೂರ್ಯಂಗೂ ಚಂದ್ರಂಗೂ” ಹಾಡು ಕೇಳಿದ ಪುಟ್ಟಣ್ಣ ಅವರು ಬೇರೆಯ ಧ್ವನಿ ಬೇಡ. ಇದೇ ಇರಲಿ ಎಂದದ್ದು, ಆ ನಂತರ ಆ ಹಾಡು ಜನಪ್ರಿಯವಾದುದು ಈಗ ಇತಿಹಾಸ. ಈ ಹಾಡು ಯಶ ಪಡೆದ ಬೆನ್ನಿಗೆ ರವೀ ಅವರಿಗೆ ಸಿನಿಮಾಗಳಲ್ಲಿ ಹಾಡುವ ಹಲವು ಅವಕಾಶಗಳು ಸಿಕ್ಕವು. ಅದರಲ್ಲಿ “ಯೌವ್ವನದ ಹೊಳೆಯಲ್ಲಿ” “ಇಲ್ಲೇ ಸ್ವರ್ಗ, ಇಲ್ಲೇ ನರಕ” ಮುಂತಾದ ಹಾಡುಗಳು ಇಂದಿಗೂ ಜನಪ್ರಿಯ. ಆದರೆ ತಾವೇ ನಿರ್ದೇಶಿಸಿದ ಸಿನಿಮಾದಲ್ಲಿ ಹಾಡಲು ಅವರು ಹಿಂಜರಿಯುತ್ತಿದ್ದದ್ದು ಹೌದು. ನಮ್ಮೆಲ್ಲರ ಒತ್ತಾಯಕ್ಕೆ “ಜಂಬೂ ಸವಾರಿ” ಚಿತ್ರದಲ್ಲಿ “ದೇಹವ ನೀನು ಬಂಧಿಸಬಲ್ಲೆ” ಎಂಬ ಹಾಡನ್ನು ಅಳುಕುತ್ತಲೇ ಹೇಳಿದ್ದರು. ಆ ಹಾಡು ಆ ಸಿನಿಮಾದ ಅಂತ್ಯದಲ್ಲಿ ಬರುವಂತಹದು. ಇಡಿಯ ಸಿನಿಮಾದ ತಿರುಳನ್ನು ಕಟ್ಟಿಕೊಡುವ ಸಾಹಿತ್ಯ. ಅದನ್ನು ಕನ್ನಡ ಬಲ್ಲವರು ಹೇಳಿದಾಗ ಮಾತ್ರ ಅಂದುಕೊಂಡದ್ದನ್ನು ನೋಡುಗರಿಗೆ ದಾಟಿಸಲು ಸಾಧ್ಯವಾಗುತ್ತಾ ಇತ್ತು. ಹಾಗಾಗಿ ನಾವು ರವೀ ಅವರಿಗೆ ಒತ್ತಾಯ ಮಾಡಿದೆವು. ಇಂದಿಗೂ ಆ ಸಿನಿಮಾ ನೋಡಿದರೆ ರವೀ ಅವರ ದನಿಯಿಂದಾಗಿ ಮೂಡುವ ಅನುಭೂತಿ ಅಪರೂಪದ್ದು ಎನಿಸುತ್ತದೆ.

Ravee with Ilayaraja and Yesudas

ರವೀ ಅವರು ಶಾಸ್ತ್ರೀಯ ಸಂಗೀತವನ್ನು ಕಲಿತವರಾಗಿರಲಿಲ್ಲ. ಆದರೆ ಅವರಿಗೆ ಸಂಗೀತ ಲೋಕದಲ್ಲಿ ಸಾಕಷ್ಟು ಪ್ರವೇಶವಿತ್ತು. ಯಾವುದೇ ಸಿನಿಮಾದ ಹಾಡುಗಳ ಸಂಯೋಜನೆ ಮಾಡುವಾಗ ಆ ಹಾಡು ಇಂತಹದೇ ರಾಗದಲ್ಲಿ ಇರಬೇಕು ಎಂದು ಆ ರಾಗದ ಕೆಲವು ಹಾಡುಗಳನ್ನು ಸಹ ಹಾಡಿ ತೋರಿಸುತ್ತಾ ಇದ್ದರು. ಇದರಿಂದಾಗಿ ಸಂಗೀತ ಸಂಯೋಜನೆ ಮಾಡುತ್ತಾ ಇದ್ದವರಿಗೆ ಸಹಾಯವಾಗುತ್ತಾ ಇತ್ತು. “ಮಿಥಿಲೆಯ ಸೀತೆಯರು” ಚಿತ್ರದ ಉದ್ದಕ್ಕೂ “ರಾಮನು ಬರಲಿಲ್ಲ” ಎಂಬ ಹಾಡೊಂದು ಬಳಕೆಯಾಗಿದೆ. ಈ ಹಾಡನ್ನು ವಿಜಯಭಾಸ್ಕರ್ ಅವರು ಸಂಯೋಜಿಸುವಾಗ ಮತ್ತು ದೊಡ್ಡರಂಗೇಗೌಡರು ಬರೆಯುವಾಗ ರವೀ ಅವರು ನೀಡುತ್ತಿದ್ದ ಸೂಚನೆಗಳಿಂದಾಗಿ ಹಾಡು ಕಟ್ಟುವ ಕ್ರಿಯೆಯು ತೆರೆಯ ಮೇಲೆ ಸಿನಿಮಾ ಮೂಡುವ ಭಾವದಲ್ಲಿಯೇ ಆಗುವುದಕ್ಕೆ ಸಹಾಯ ದೊರೆಯುತ್ತಾ ಇತ್ತು. ಈ ಸಂದರ್ಭದಲ್ಲೆಲ್ಲಾ ಸಂಯೋಜಕರ ಜೊತೆಗೂ ಮತ್ತು ಹಾಡು ಬರೆಯುವವರ ಜೊತೆಗೂ ತಾವೇ ಕೂತು ಹಾಡುತ್ತಾ ಇದ್ದ ರವೀ ಅವರಿಂದಾಗಿ ಆ ಕೆಲಸ ಹಗುರವೂ ಆಗುತ್ತಿತ್ತು. ಹೀಗೆ ಕೇವಲ ಖುಷಿಗಾಗಿ ಹಾಡುತ್ತಿದ್ದ ವ್ಯಕ್ತಿ ಜನಪ್ರಿಯ ಗಾಯಕರಾದದ್ದು ಮತ್ತು ಅನೇಕರಿಂದ ಹಾಡಿಸುವಂತಾಗಿದ್ದನ್ನು ಸ್ವತಃ ರವೀ ಅವರು “ಬದುಕೆಂಬ ಮಾಂತ್ರಿಕನ ಕೆಲಸ” ಎಂದು ನಗುತ್ತಿದ್ದರು.

ವ್ಯಕ್ತಿಯಾಗಿ ರವೀ

ರವೀ ಅವರನ್ನು ಮಹಾನ್ ಮಾತುಗಾರ ಎನ್ನಬಹುದು. ಯಾವುದೇ ವಿಷಯ ಕುರಿತು ಹಲವು ಗಂಟೆಗಳ ಕಾಲ ಚರ್ಚಿಸುವಷ್ಟು ಮಾಹಿತಿ ಮತ್ತು ತಿಳುವಳಿಕೆ ಅವರಿಗಿತ್ತು. ಯಾವುದೋ ಉಪನಿಷತ್ತಿನ ಕುರಿತಾದರೂ ಸರಿ ಅಥವಾ ಸಾಹಿತ್ಯ ಕೃತಿಯಾದರೂ ಸರಿ, ರವೀ ಅವರು ಸಮೂಲಾಗ್ರವಾಗಿ ಆ ಬಗ್ಗೆ ಮಾತಾಡುತ್ತಿದ್ದರು. ಕರ್ಮಠ ವೈದಿಕರ ಮನೆಯವರಾದರೂ ಸ್ವತಃ ಮಹಾನ್ ಉದಾರವಾದಿಯಾಗಿದ್ದರು. ತಾವು ಪ್ರೀತಿಸಿದ್ದು ಮನೆಯವರು ಒಪ್ಪದ ಜಾತಿಯ ಹುಡುಗಿಯನ್ನು ಎಂದರಿತಾಗ ಮನೆಯವರಿಗೆ ನೋವಾಗದಂತೆ ಎಲ್ಲರಿಂದ ಹಲವು ವರ್ಷಗಳ ಕಾಲ ದೂರವೇ ಬದುಕಿದ್ದರು. ಹಲವು ಹೋಟೆಲ್ಲುಗಳು ಅವರ ಮನೆಯಾಗಿದ್ದವು. ಮನೆಯವರ ಕೋಪ ತಾಪಗಳು ಕಡಿಮೆಯಾದ ಮೇಲೆ ಮರಳಿ ಮನೆಯವರ ಸಮಸ್ಯೆಗಳಿಗೆ ತಲೆಕೊಟ್ಟು ತಂಗಿಯರ ಸಂಸಾರಗಳ ರಥಕ್ಕಾಗಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಇದ್ದರು. ಈ ನಡುವೆ ನಮ್ಮಂತಹ ಹುಡುಗರ ಪ್ರೇಮ ಕತೆಗಳನ್ನು ಸರಿದಾರಿಗೆ ತರಲು ಸ್ವತಃ ಸಂಬಂಧಪಟ್ಟವರ ಜೊತೆಗೆ ಮಾತಾಡಿ ವ್ಯವಸ್ಥೆ ಮಾಡುತ್ತಾ ಇದ್ದರು. ನನ್ನ ಮದುವೆಯಲ್ಲಂತೂ ಅವರೇ ಮಂತ್ರಮಾಂಗಲ್ಯವನ್ನು ಹಾಗೂ ಋಗ್ವೇದದಲ್ಲಿನ ಸಂಸಾರ ನಡೆಸುವ ಕುರಿತ ಶ್ಲೋಕಗಳನ್ನು ಓದಿ ಮದುವೆ ಮಾಡಿಸಿದ್ದರು.

ಅವರಿಗಿದ್ದ ಒಂದೇ ದೌರ್ಬಲ್ಯ ಎಂದರೆ ಸಿಟ್ಟು. ಸಣ್ಣ ತಪ್ಪಾದರೂ ಕೂಗಾಡಿಬಿಡುತ್ತಿದ್ದರು. ಅವರ ನಿಲುವನ್ನು ಯಾರಾದರೂ ಪ್ರಶ್ನಿಸಿದರೂ ಕುಪಿತರಾಗುತ್ತಾ ಇದ್ದರು. ಇದರಿಂದಾಗಿ ಅನೇಕ ಸಲ ಅವರು ಸಂಕಟದಲ್ಲಿ ಬಿದ್ದದ್ದೂ ಇದೆ. “ಜಂಬೂಸವಾರಿ” ತರಹದ ಸಿನಿಮಾದ ಚಿತ್ರೀಕರಣವು ದುಡ್ಡೇ ಇಲ್ಲದೆ ನಡೆಸುತ್ತಾ ಇದ್ದೆವು. ಇನ್ನೊಂದು ದಿನ ಚಿತ್ರೀಕರಣವಾಗಿದ್ದರೆ ಸಿನಿಮಾದ ಕೆಲಸ ಮುಗಿಯುತ್ತಿತ್ತು. ಆಗ ರವೀ ಅವರ ಸಿಟ್ಟಿನಿಂದಾಗಿ ಇಡೀ ತಂಡವೇ ದೂರ ಸರಿದುಬಿಟ್ಟಿತು. ಆ ಒಂದು ದಿನದ ಚಿತ್ರೀಕರಣ ಮತ್ತೆ ಆಗುವುದಕ್ಕೆ ಮೂರುತಿಂಗಳು ಎಲ್ಲರ ಜೊತೆ ಮಾತಾಡಿ ಒಪ್ಪಿಸಬೇಕಾಯಿತು. ಹಾಗೆಯೇ ಅವರು ನಿರ್ದೇಶಕರ ಸಂಘದ ಅಧ್ಯಕ್ಷರಾಗಿದ್ದಾಗಲೂ ಸಿಟ್ಟಾಗಿ ಇಡೀ ತಂಡ ಅವರ ಮೇಲೆ ಹರಿಹಾಯ್ದಿತ್ತು. ಈ ಕೋಪವಾದರೂ ರವೀ ಅವರಿಗೆ ಆ ಕ್ಷಣದ್ದಾಗಿರುತ್ತಿತ್ತು. ಇಂದು ರಾತ್ರಿ ಕೋಪಿಸಿಕೊಂಡವರು ಮಾರನೆಯ ದಿನ ಎಂದಿನಂತೆ ಪ್ರೀತಿಯಿಂದ ನಗುತ್ತಾ ಮಾತಾಡಿಸುತ್ತಿದ್ದರು.

ನಿರಂತರವಾಗಿ ಸಮಾಜದ ಒಳಿತಿಗಾಗಿ ಏನನ್ನಾದರೂ ಮಾಡಲು ಯೋಚಿಸುತ್ತಾ ಇದ್ದ ರವೀ ಅವರಿಗೆ ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಕಲಾವಿದರಿಗೆ ಸಹಾಯ ಮಾಡುವ ಯೋಚನೆ ಇತ್ತು. ಅದಕ್ಕಾಗಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿ, ಅದರಲ್ಲಿ ಬಂದ ಆದಾಯವನ್ನು ಟ್ರಸ್ಟ್ ಒಂದಕ್ಕೆ ನೀಡಿ, ಅಶಕ್ತರಿಗೆ ಸಹಾಯ ಮಾಡುವ ಸಂಸ್ಥೆಯನ್ನು ಆರಂಭಿಸಿದ್ದರು. ಆ ಟ್ರಸ್ಟ್ ಈಗಲೂ ನಡೆಯುತ್ತಾ ಇದೆ. ಹಲವರಿಗೆ ಈಗಲೂ ಸಹಾಯ ದೊರೆಯುತ್ತಾ ಇದೆ.

ಕಳೆದ ಮೂರು ನಾಲ್ಕು ವರ್ಷ ಅವರ ಮಡದಿಗೆ ಅನಾರೋಗ್ಯವಾದಾಗ ರವೀ ಅವರು ಆಕೆಗಾಗಿ ತಮ್ಮ ಜೀವವನ್ನೇ ಮೀಸಲಿಟ್ಟವರಂತೆ ಓಡಾಡಿದರು. ರವೀ ಅವರಿಗೆ ಮಡದಿಯ ಮೇಲಿದ್ದ ಪ್ರೀತಿ ಎಂತಹದು ಎಂಬುದಕ್ಕೆ ಸಾಕ್ಷಿ ಎನ್ನುವಂತೆ ಸ್ವತಃ ಮಡದಿಯ ಪಕ್ಕದಲ್ಲಿ ಇದ್ದು, ತಾವು ಮಾಡುತ್ತಾ ಇದ್ದ ಎಲ್ಲಾ ಕೆಲಸಗಳನ್ನೂ ನಿಲ್ಲಿಸಿ ಸೇವೆ ಮಾಡಿದರು. ಈ ಅವಧಿಯಲ್ಲಿ ಸಿಕ್ಕಾಗ, “ಇವತ್ತು ಅವಳು ಸ್ವಲ್ಪ ಚೇತರಿಸಿಕೊಂಡಿದ್ದಾಳೆ…. ಇಂದು ನನ್ನ ಜೊತೆ ನಗುತ್ತಾ ಮಾತಾಡಿದಳು” ಎನ್ನುವಾಗ ಅವರ ಕಣ್ಣು ಸ್ವತಃ ಆನಂದದಿಂದ ಹೊಳೆಯುತ್ತಾ ಇತ್ತು. ಮಡದಿ ಗುಣಮುಖರಾಗಿ ಮನೆಗೆ ಮರಳಿದ ಕೆಲವೇ ದಿನದಲ್ಲಿ ರವೀ ಅವರು ಆಸ್ಪತ್ರೆ ಸೇರಿದ್ದು ಮಾತ್ರ ಸಂಕಟದ ವಿಷಯವಾಗಿತ್ತು. ತಮ್ಮ ದೇಹಾಂತ್ಯದ ನಂತರ ಏನೇನು ಮಾಡಬೇಕು ಎಂಬುದನ್ನು ಒಂದು ಕೋಟಿ ಸಲ ಮಾತಾಡುತ್ತಾ ಇದ್ದರು. ನಾವೆಲ್ಲರೂ ಇದ್ಯಾಕೆ ಸದಾ ಈ ವಿಷಯ ಮಾತಾಡುತ್ತೀರಿ ಎಂದರೆ, “ನಾನು ಹೋದಾಗ ಅನುಮಾನಗಳಿರಬಾರದು” ಎನ್ನುತ್ತಾ ಇದ್ದರು. ರಾಧಾ ಅವರಂತೂ ತಮ್ಮ ಪ್ರೀತಿಯ ಜೀವ ಬಯಸಿದ ಹಾಗೆಯೇ ಅವರ ಕಣ್ಣುಗಳನ್ನು ದೇಹದ ಇತರ ಅಂಗಗಳನ್ನು ದಾನ ಮಾಡಿದರು. ಇದಕ್ಕೆ ರವೀ ಅವರ ಕುಟುಂಬದವರು ಬೇಸರಗೊಂಡಿದ್ದರು. ಆದರೆ ರವೀ ಅವರ ಬಯಕೆಯಂತೆ ಸಾಗುವುದಷ್ಟೇ ನನ್ನ ಜವಾಬ್ದಾರಿ ಎಂದು ರಾಧ ಅವರು ಅದೇ ಹಾದಿಯಲ್ಲಿ ನಡೆದರು.

Radha Ravee smiling

ಇದೆಲ್ಲದರ ಆಚೆಗೆ ರವೀ ಅವರು ನನ್ನಂತಹ ಅನೇಕರ ಕೈ ಹಿಡಿದು ನಡೆಸಿದ ಗುರುಗಳಾಗಿದ್ದರು. ನಮಗೆ ಬದುಕಲು ಕಲಿಸಿದವರಾಗಿದ್ದರು. ಅವರ ಅಗಲಿಕೆ ನನ್ನಂತಹ ಅವರ ಶಿಷ್ಯರಿಗೆ ಎಂದಿಗೂ ತುಂಬಲಾಗದ ನಷ್ಟ. ನಾವೀಗ ರವೀ ಅವರಂತೆಯೇ ಜಗತ್ತನ್ನು ಪ್ರೀತಿಯಿಂದ ನೋಡುತ್ತಾ, ಎಲ್ಲರ ಸಂಸ್ಕøತಿಯನ್ನು ಗೌರವಿಸುತ್ತಾ, ಬಹುತ್ವದ ಜೊತೆಗೆ ಬದುಕುವುದನ್ನು ರೂಢಿಸಿಕೊಳ್ಳುವುದೇ ಗುರುಗಳಿಗೆ ನಾವು ನೀಡುವ ನಮನ ಆಗಬಹುದು.

ನನಗಂತೂ ಅವರೊಂದಿಗಿನ ಪಯಣ ಎಂದಿಗೂ ಮುಗಿಯುವುದಿಲ್ಲ. ಅವರು ನನ್ನ ಬೆನ್ನ ಹಿಂದೆ ಇದ್ದರೆ ಎಂಬ ನಂಬುಗೆಯಲ್ಲಿಯೇ ಕೆಲಸಗಳನ್ನು ಮಾಡುತ್ತಾ ಇರುತ್ತೇನೆ.

– ಬಿ.ಸುರೇಶ

4 ನವೆಂಬರ್ 2015

ಬೆಂಗಳೂರು

Advertisements

2 Responses to “ನಡೆದ ಹಾದಿಯ ನೆನಪು”


  1. 1 balu November 22, 2015 at 3:18 pm

    ತುಂಬಾ ಚೆನ್ನಾಗಿ ರವಿಯವರನ್ನು ಕಟ್ಟಿ ಕೊಟ್ಟಿದ್ದಿರಿ ಧನ್ಯವಾದಗಳು

  2. 2 ramanna gp November 23, 2015 at 5:34 am

    Geleya, gurugalige chendada akshara namana


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: