ನೆಮ್ಮದಿಯನರಸುವವರ ಸುತ್ತಾ

(ಶಶಿರಾಜ್ ಕಾವೂರು ಅವರ “ನೆಮ್ಮದಿ ಅಪಾರ್ಟ್‍ಮೆಂಟ್” ನಾಟಕಕ್ಕೆ ಬರೆದ ಮುನ್ನುಡಿ)
ನವ್ಯೋತ್ತರ ಎಂದು ಗುರುತಿಸಲಾಗುವ ಹೊಸ ವಿನ್ಯಾಸದ ಬದುಕಿಗೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದೆ. ಭಾರತಕ್ಕೆ ಇದರ ಪ್ರವೇಶವಾಗಿದ್ದು ಕಳೆದ ಶತಮಾನದ ಅಂತ್ಯದಲ್ಲಿ. ಜ್ಯಾಮಿತಿಯ ರೇಖೆಗಳ ಹಾಗಿರುವ ನಗರಗಳ ಮತ್ತು ಕಟ್ಟಡಗಳ ಸೃಷ್ಟಿ ಈ ನವ್ಯೋತ್ತರ ವಿನ್ಯಾಸದ ಹೆಗ್ಗುರುತು. ಇಂದು ನಮ್ಮ ನಡುವಿನ ಬಹುತೇಕ ಮಹಾನಗರಿಗಳು ನವ್ಯೋತ್ತರ ವಿನ್ಯಾಸದ್ದೇ ಕೊಡುಗೆ. ನಮ್ಮ ದೇಶದಲ್ಲಿ ಮೊದಲು ಮುಂಬಯಿ ಶಹರದಲ್ಲಿ ಆರಂಭವಾದ ಈ ಬೃಹತ್ ಜ್ಯಾಮಿತಿಯ ನಿರ್ಮಾಣಗಳು ನವವಸಾಹತುಶಾಹಿಯ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳನ್ನೂ ತಲುಪಿವೆ. ಅಪಾರ್ಟ್‍ಮೆಂಟ್ ಎಂಬುದು ನಮ್ಮ ನಗರಗಳ ಕ್ಲಿತಿಜದ ಗೆರೆಗಳನ್ನು ಸಂಪೂರ್ಣವಾಗಿ ಬದಲಿಸಿವೆ. ಯಾವ ನಗರಕ್ಕೆ ಹೋದರೂ ಆ ನಗರವು ತನ್ನದೆಂಬ ವ್ಯಕ್ತಿತ್ವವನ್ನು ಕಳೆದುಕೊಂಡು ಸಮವಸ್ತ್ರ ತೊಟ್ಟಂತೆ ಕಾಣುತ್ತಿದೆ. ಬಹುತೇಕ ಎಲ್ಲಾ ನಗರಗಳ ಅಂಗಡಿ ಮುಂಗಟ್ಟುಗಳ ಬಣ್ಣಗಳ ಆಯ್ಕೆಯೂ ಸಹ ನವವಸಾಹತುಶಾಹಿಯ ಪ್ರಭಾವದ್ದೇ ಆಗಿವೆ. ಹೀಗಾಗಿ ನಮ್ಮ ನಗರಗಳ ವಾಸ್ತುವಿನ್ಯಾಸದ ಹಾಗೆ ಮನುಷ್ಯರ ಮನಸ್ಸುಗಳು ಕೂಡ ಸರಕು ಸಂಸ್ಕøತಿ ಜನ್ಯವಾಗಿದೆ ಹಾಗೂ ಹೃದಯಹೀನ ನೀರಸತೆಯ ಕಡೆಗೆ ವಾಲುತ್ತಿದೆ. ಜಗತ್ತಿನಾದ್ಯಂತ ಕಲಾವಿದರು ಸಹ ಈ ವಿಷಯದ ಬಗ್ಗೆ ಕಲಾಕೃತಿಗಳನ್ನು ರಚಿಸುತ್ತಾ ಇದ್ದಾರೆ ಹಾಗೂ ಅರ್ಥಹೀನ ಅಭಿವೃದ್ಧಿಯು ನಾಗರೀಕತೆಗೆ ಮಾರಕ ಎಂದು ಹೇಳುತ್ತಾ ಇದ್ದಾರೆ. ಈ ಹಾದಿಯಲ್ಲಿ ಮತ್ತೊಂದು ಪ್ರಯೋಗ “ನೆಮ್ಮದಿ ಅಪಾರ್ಟ್‍ಮೆಂಟ್ಸ್”. ಶಶಿರಾಜ್ ಕಾವೂರ್ ಅವರು ಬರೆದಿರುವ ಈ ನಾಟಕವು ಅದಾಗಲೇ ಹಲವು ರಂಗಪ್ರದರ್ಶನಗಳನ್ನು ಯಶಸ್ವ್ವಿಯಾಗಿ ಕಂಡಿದೆ. ಈಗ ಈ ನಾಟಕ ಪಠ್ಯವು ಮುದ್ರಣವೂ ಆಗಿ ರಂಗಾಸಕ್ತರನ್ನು ಮುಟ್ಟುತ್ತಿದೆ ಎಂಬುದು ಸಂತಸದ ಸಂಗತಿ.


ಕೆಲವು ತಿಂಗಳುಗಳ ಹಿಂದೆ ಶಶಿರಾಜ್ ಕಾವೂರ್ ಅವರು ನನಗೆ “ನೆಮ್ಮದಿ ಅಪಾರ್ಟ್‍ಮೆಂಟ್” ನಾಟಕದ ಪಠ್ಯವನ್ನು ಕಳಿಸಿದರು. ಮುನ್ನುಡಿ ಬರೆದುಕೊಡಿ ಎಂದು ಕೇಳಿದರು. ನಾನು ಕೂಡಲೇ ಓದಿದ್ದೆನಾದರೂ ಅಭಿಪ್ರಾಯ ಬರೆಯಲಾಗದಷ್ಟು ನನ್ನದೇ ಕೆಲಸದಲ್ಲಿ ಮುಳುಗಿ ಹೋಗಿದ್ದೆ. ಕಾವೂರರು ಬಿಡಲಿಲ್ಲ. ಮತ್ತೆ ಮತ್ತೆ ಎಡತಾಕಿದರು. ಗೆಳೆಯರ ಮೂಲಕ ನೆನಪಿಸಿದರು. ನಾನೂ ಸಹ ಈ ವಾರ – ಆ ವಾರ ಎನ್ನುತ್ತಾ ಮುಂದೂಡುತ್ತಾ ಇದ್ದೆ. ಅವರೇ ತಾಳ್ಮೆಗೆಟ್ಟು ಬೇರೆಯವರ ಕೈಯಲ್ಲಿ ಮುನ್ನುಡಿ ಬರೆಸಿಕೊಳ್ಳಲಿ ಎಂಬುದು ನನ್ನ ಒಳಗಡೆಗೆ ಇದ್ದ ಆಶಯವಾಗಿತ್ತು. ಹಾಗಾಗಲಿಲ್ಲ. ಶಶಿರಾಜ್ ಕಾವೂರರು ನನ್ನ ಪಾಲಿನ ಬೇತಾಳ ಆದರು. ಈ ಒತ್ತಡಗಳಿಂದ ನಾನು ಈ ಟಿಪ್ಪಣಿಯನ್ನು ಬರೆಯಲು ಆರಂಭಿಸಿದೆ.
ಸತ್ಯ ಹೇಳಬೇಕೆಂದರೆ, ನಾನು ಶಾಸ್ತ್ರೀಯವಾಗಿ ರಂಗಭೂಮಿ ಕಲಿತವನಲ್ಲ. ಆದರೆ ಹಲವು ವರ್ಷಗಳಿಂದ ರಂಗಭೂಮಿಯ ಜೊತೆಗೆ ಕೆಲಸ ಮಾಡುತ್ತಾ ಇರುವವನು. ನನಗಾಗಿ ನಾನು ನಾಟಕಗಳನ್ನು ಬರೆದುಕೊಂಡದ್ದೂ ಇದೆ. ಅವುಗಳಲ್ಲಿ ಕೆಲವು ನಾಟಕಗಳನ್ನು ಜನ ಮೆಚ್ಚಿಕೊಂಡದ್ದೂ ಇದೆ. ಇದೆಲ್ಲವೂ ಆಕಸ್ಮಿಕವಾಗಿ ಘಟಿಸಿದ್ದಷ್ಟೇ ಹೊರತು, ಸಿದ್ಧಾಂತಗಳನ್ನು ಅಭ್ಯಾಸ ಮಾಡಿ ಕಟ್ಟಿದ ವಿನ್ಯಾಸಗಳಲ್ಲ. ಹೀಗಾಗಿ ನಾನಿಲ್ಲಿ ಬರೆದಿರುವ ಮಾತುಗಳನ್ನು ಮುನ್ನುಡಿ ಎನ್ನುವ ಬದಲಿಗೆ ರಂಗಕರ್ಮಿಯೊಬ್ಬನ ಟಿಪ್ಪಣಿ ಎಂದು ಭಾವಿಸಿ ಓದಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ.


ಕನ್ನಡ ನಾಟಕ ಪಠ್ಯವೆಂಬುದು ಶತಮಾನದಿಂದ ಶತಮಾನಕ್ಕೆ ಹಲವು ಹತ್ತು ರೂಪಗಳನ್ನು ಪಡೆದು ಬೆಳೆದಿದೆ. ಪ್ರಾಯಶಃ 19ನೆಯ ಶತಮಾನದ ಅಂತ್ಯದಲ್ಲಿ ಎಂ.ಎಸ್.ಪುಟ್ಟಣ್ಣಯ್ಯ, ಚುರುಮುರಿ ಶೇಷಗಿರಿರಾಯರು ಬರೆದ ನಾಟಕಗಳನ್ನು ಈಗ ಓದಿದರೆ ನಾಟಕ ಪಠ್ಯವು ಬೆಳೆದು ಬಂದ ಬಗೆಯ ಕುರಿತ ವಿವರವು ಗೋಚರಿಸುತ್ತದೆ. ಒಂದೊಮ್ಮೆ ಮಾತಿನ ಮೂಲಕವೇ ಕಟ್ಟಲಾಗುತ್ತಿದ್ದ ನಾಟಕವು ನಂತರ ಪಾರ್ಸಿ ರಂಗಭೂಮಿಯ ಪ್ರಭಾವದಿಂದ ಪಡೆದುಕೊಂಡ ರೂಪ ಬೇರೆಯಾದರೆ, ಸ್ವಾತಂತ್ರ್ಯ ನಂತರ ಪಾಶ್ಚಾತ್ಯ ರಂಗಪಠ್ಯಗಳ ಪ್ರಭಾವದಿಂದ ರಚನೆಯಾದ ನಾಟಕ ಪಠ್ಯಗಳ ಸ್ವರೂಪ ಮತ್ತೊಂದು ಬಗೆಯದು. ಹಾಗೆಯೇ ನವೋದಯ ಸಾಹಿತ್ಯದ ಪ್ರಭಾವದಿಂದ ಅರಳಿದ ನಾಟಕ ಪಠ್ಯಕ್ಕೂ ನವ್ಯ ಸಾಹಿತ್ಯದ ನೆರಳಲ್ಲಿ ಹುಟ್ಟಿದ ನಾಟಕ ಪಠ್ಯ ಹಾಗೂ ವಿಷಯವನ್ನು ನೋಡಿದ ಕ್ರಮ ಭಿನ್ನ. ಎಪ್ಪತ್ತರ ದಶಕದಲ್ಲಿ ಕನ್ನಡ ರಂಗಭೂಮಿಯಲ್ಲಿ ಆದ ಹೊಸ ಪಲ್ಲಟಗಳ ಹಿನ್ನೆಲೆಯಲ್ಲಿ ಹುಟ್ಟಿದ ನಾಟಕ ಪಠ್ಯಗಳ ವಿನ್ಯಾಸವು ಮತ್ತಷ್ಟು ಭಿನ್ನ. ಇವೆಲ್ಲವುಗಳ ಆಚೆಗೆ ಇಂದಿನ ರಂಗಭೂಮಿಗೆ ನಾಟಕ ಪಠ್ಯ ರಚಿಸುವ ಕ್ರಮ ಸಹ ಬದಲಾಗಿದೆ. ರಂಗಪ್ರದರ್ಶನದಲ್ಲಿ ಆಗಿರುವ ತಾಂತ್ರಕ ಬದಲಾವಣೆಗಳು ಸಹ ಈ ಬದಲಾವಣೆಗಳಿಗೆ ಕಾರಣವಾಗಿದೆ. ಜೊತೆಗೆ ಶತಮಾನಗಳ ಹಿಂದೆ ನಾಟಕ ನೋಡುತ್ತಿದ್ದ ಪ್ರೇಕ್ಷಕನ ಮನಸ್ಥಿತಿಗೂ ಇಂದಿನ ಪ್ರೇಕ್ಷಕರ ಮನಸ್ಥಿತಿಗೂ ಸಹ ಅಗಾಧ ವ್ಯತ್ಯಾಸವಿದೆ. ಒಂದೊಮ್ಮೆ ಅಹೋರಾತ್ರಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಾ ಇದ್ದವರು ಇಂದು ಒಂದೂವರೆ ಗಂಟೆಗಿಂತ ಹೆಚ್ಚು ಕಾಲ ಒಂದೆಡೆ ಕೂರಲಾಗದಷ್ಟು ವ್ಯಸ್ತರಾಗಿದ್ದಾರೆ. ಹೀಗಾಗಿ ನಾಟಕ ರಚನೆಯು ಕಳೆದ ಒಂದು ದಶಕದಲ್ಲಿಯೇ ಬೃಹತ್ ಪಲ್ಲಟಗಳನ್ನು ಕಂಡಿದೆ. ಈ ಪಲ್ಲಟಗಳಲ್ಲಿ – ಭಾವ ನಿರ್ವಹಣೆ ಹಾಗೂ ರಂಗನಿರ್ವಹಣೆಯಲ್ಲಿ ಆಗಿರುವ ಬದಲುಗಳು ಪ್ರಧಾನವಾದವು.
ನಮ್ಮ ಸಮಕಾಲೀನ ರಂಗಭೂಮಿಯಲ್ಲಿಯೂ ಹೆಚ್ಚು ಜನಪ್ರಿಯವಾಗುವುದು ಹಾಸ್ಯ ನಾಟಕಗಳು ಮಾತ್ರ ಎಂಬಂತಾಗಿದೆ. ಇದರ ಜೊತೆಗೆ ನೋಡುಗನೊಬ್ಬ ನಾಟಕದ ಅವಧಿಯಲ್ಲಿ ಮಾತ್ರ ಅದರೊಡನೆ ಇದ್ದು ನಂತರ ಕೇವಲ ರಂಜನೆಯ ನೆನಪನ್ನು ಮಾತ್ರ ಹೊತ್ತು ಸಾಗುತ್ತಾನೆ ಎಂಬ ದೃಷ್ಟಿಕೋನವೊಂದು ಪ್ರಚಲಿತದಲ್ಲಿದೆ. ಹೀಗಾಗಿ ಈಚೆಗೆ ಬರುವ ನಾಟಕಗಳಲ್ಲಿ ಹಾಸ್ಯ ಮತ್ತು ವಿಡಂಬನೆಗೆ ಹೆಚ್ಚು ಸಮಯ ನೀಡಲಾಗುತ್ತದೆ. ಇದೂ ಸಹ ನವವಸಾಹತುಶಾಹಿಯ ಕೂಸೇ ಆಗಿದೆ. ಬಹುತೇಕರಿಗೆ ರೋಲರ್ ಕೋಸ್ಟರ್ ಸವಾರಿ ಇಷ್ಟವಾಗುತ್ತದೆ. ಅದರಲ್ಲಿ ಎಲ್ಲಾ ಥ್ರಿಲ್‍ಗಳು ಇವೆ. ಭಾಗವಹಿಸುವಾತನಿಗೆ ಮುಂಚಿತವಾಗಿಯೇ ನನಗೇನೂ ಆಗುವುದಿಲ್ಲ ಎಂದು ಗೊತ್ತಿದ್ದರೂ ಆ ರೋಲರ್ ಕೋಸ್ಟರ್‍ನ ಏರಿಳಿತಗಳಲ್ಲಿ ಆತ ಚೀರುತ್ತಾನೆ, ಕೂಗುತ್ತಾನೆ, ಕಡೆಗೆ ಎಲ್ಲಾ ಮುಗಿಸಿ ಇಳಿಯುವಾಗ ಅವನ ಮುಖದಲ್ಲಿ ವಿಚಿತ್ರ ನೆಮ್ಮದಿ ಇರುತ್ತದೆ. ಅಂತಹುದೇ ವಿನ್ಯಾಸವುಳ್ಳ ಸಿನಿಮಾ ಮತ್ತು ರಂಗಪ್ರದರ್ಶನದ ಸೃಷ್ಟಿಯೂ ಜಗತ್ತಿನಾದ್ಯಂತ ನಡೆಯುತ್ತಿದೆ. ವಿಕ್ಟರ್ ಹ್ಯೂಗೋನ `ಲೇ ಮಿಸರಬಲ್ಸ್’ ಕಾದಂಬರಿಯು 18ನೇ ಶತಮಾನದ ಬಡವರ ಕತೆಯನ್ನು ಹೇಳಲು ಪ್ರಯತ್ನಿಸಿದರೆ, ಅದೇ ಕಾದಂಬರಿಯನ್ನಾಧರಿಸಿದ ಬ್ರಾಡ್‍ವೇ ರಂಗಪ್ರದರ್ಶನವು ಬಡತನವನ್ನು ರಮ್ಯಗೊಳಿಸುವತ್ತ ಹಾಗೂ ಬಡವರ ಕಷ್ಟಗಳನ್ನು ರೋಮ್ಯಾಂಟಿಸೈಸ್ ಮಾಡುವ ಕಡೆಗೆ ಇರುತ್ತವೆ. ಹಾಗಾಗಿ ಅಲ್ಲಿ ಹಾಡೇ ಪ್ರಧಾನವಾಗಿರುತ್ತದೆ. ಅಂತಹ ಪ್ರದರ್ಶನವಾದ ನಂತರ ನೋಡುಗರು ರಂಗಮಂದಿರದ ಆಚೆಗೆ ಬಂದು ಅದೇ ನಾಟಕದ ಹಾಡುಗಳ ಕ್ಯಾಸೆಟ್ ಕೊಳ್ಳುತ್ತಾರೆ ಹೊರತು ನಾಟಕದ ವಸ್ತುವನ್ನು ಚರ್ಚಿಸುವ ಗೋಜಿಗೂ ಹೋಗುವುದಿಲ್ಲ.
ಇಂತಹ ಕಾಲಘಟ್ಟದಲ್ಲಿ ಸಮಕಾಲೀನ ಕಲಾವಿದರು ಪೋಸ್ಟ್ ಮಾಡರ್ನ್ ಕಲ್ಚರ್ ಬಗ್ಗೆ ಮತ್ತೆ ಮತ್ತೆ ಮಾತಾಡಲಾರಂಭಿಸಿದ್ದಾರೆ ಎಂಬುದು ಬಹುಮುಖ್ಯವಾಗಿ ಗಮನಿಸಬೇಕಾದ ವಿಷಯವಾಗಿದೆ. ನಮ್ಮ ಭಾಷೆಯಲ್ಲೂ ಅಂತಹ ಪ್ರಯತ್ನಗಳನ್ನು ಹಲವರು ಮಾಡುತ್ತಾ ಇದ್ದಾರೆ. ಕೆ.ವೈ.ಎನ್. ಈಚೆಗೆ ಬರೆದಿರುವ “ಮಲ್ಲಿಗೆ” ಎಂಬ ನಾಟಕ ಅಥವಾ ಎಸ್.ಆರ್.ರಮೇಶ್ ಅವರು ಬರೆದಿರುವ “ಹೀಗೊಂದು ಸಂಜೆ” ಮತ್ತು “ರಾಜ ನಗಾರಿ” ತರಹದ ನಾಟಕಗಳು ಸಮಕಾಲೀನ ಇತಿಹಾಸಕ್ಕೆ ಪ್ರತಿಕ್ರಿಯೆಯಾಗಿಯೇ ಹುಟ್ಟಿದ ಕೃತಿಗಳು. ಇಂತಹ ಕೃತಿಗಳ ಸಾಲಿಗೆ ಮತ್ತೊಂದು ಸೇರ್ಪಡೆ ಶಶಿರಾಜ್ ಕಾವೂರು ಅವರ “ನೆಮ್ಮದಿ ಅಪಾರ್ಟ್‍ಮೆಂಟ್” ಎಂದು ನನ್ನ ಅನಿಸಿಕೆ.


ಶಶಿರಾಜ್ ಕಾವೂರು ಅವರು ಆಧುನಿಕ ನಗರ ವಿನ್ಯಾಸದ ಅವಿಭಾಜ್ಯ ಅಂಗವಾದ ಅಪಾರ್ಟ್‍ಮೆಂಟ್‍ಗಳ ಸುತ್ತ ಇರುವ ಅವಘಡಗಳನ್ನು ಇಲ್ಲಿ ನಾಟಕವಾಗಿಸಿದ್ದಾರೆ. ಈ ನಾಟಕವನ್ನು ಪ್ರೋಸಿನಿಯಂ ರಂಗಮಂದಿರದ ಪ್ರದರ್ಶನಕ್ಕೆ ಹೊಂದುವ ಹಾಗೆಯೇ ಹೆಣೆದಿದ್ದಾರೆ. ಇದೂ ಕೂಡ ಇಂದಿನ ಬಹುದೊಡ್ಡ ಅಗತ್ಯವಾಗಿದೆ. ಕನ್ನಡ ರಂಗಭೂಮಿಯಲ್ಲಿ ಪ್ರೋಸಿನಿಯಂ ರಂಗಪ್ರದರ್ಶನಗಳು ಎಪ್ಪತ್ತರ ದಶಕದಿಂದಾಚೆಗೆ ಅತ್ಯಂತ ಜನಪ್ರಿಯವಾಗಿವೆ. ಆದರೆ ಹೀಗೆ ಜನಪ್ರಿಯವಾದ ರಂಗಭೂಮಿಯು ಬಹುತೇಕ ‘ಉತ್ಸವಗಳ ರಂಗಭೂಮಿ’ಯೇ. (ಪ್ರಸನ್ನ ಮತ್ತು ಇನ್ನೂ ಕೆಲವರ ನಾಟಕಗಳನ್ನು ಹೊರತುಪಡಿಸಿ) ಇಂತಹ ಉತ್ಸವಗಳು ರಂಗಮಂದಿರಕ್ಕೆ ಬರುವವರಿಗೆ ವಿಶೇಷ ಉಲ್ಲಾಸವನ್ನು ಒದಗಿಸುತ್ತವೆ ಎಂಬುದು ಸತ್ಯವೇ ಆದರೂ, ಆ ಉಲ್ಲಾಸದ ಜೊತೆಗೆ ಅಂತಹ ನಾಟಕಗಳು ನೋಡುಗನಿಗೆ ತನ್ನ ಬದುಕನ್ನು ಕುರಿತು ಆಲೋಚಿಸುವಂತೆ ಮಾಡುವುದು ಕಡಿಮೆ. ಹೀಗಾಗಿಯೇ ಇಂತಹ ‘ಉತ್ಸವ ಪ್ರಣೀತ’ ನಾಟಕಗಳು ಹಾಡು – ಸಂಗೀತ – ಜನಪದ ನೃತ್ಯಗಳನ್ನು ಪ್ರಧಾನವಾಗಿ ಇರಿಸಿಕೊಂಡು ಸಿದ್ಧವಾಗಿರುವುದನ್ನು ನೋಡಬಹುದು. ಈ ಬಗೆಯ ನಾಟಕಗಳು ಉಚ್ಚ್ರಾಯಕ್ಕೆ ಬಂದ ಬೆನ್ನಲ್ಲೇ ಹವ್ಯಾಸೀ ರಂಗಭೂಮಿಯಲ್ಲಿ ತೆಳು ನಟನೆಯ ಪರಂಪರೆಯೊಂದು ಬೆಳೆದು ಬಂದಿತು. ಆ ಮೂಲಕ ನಟ ಎಂಬುವವನು ಹಾಡು – ಕುಣಿತಗಳಲ್ಲಿ ಕಳೆದುಹೋಗಿದ್ದ. ಈ ತೆಳುತನಕ್ಕೆ ಗಟ್ಟಿತನವನ್ನು ತರುವ ಪ್ರಯತ್ನಗಳನ್ನು ಅನೇಕ ನಟರು – ನಿರ್ದೇಶಕರು – ನಾಟಕಕಾರರು ಮಾಡಿದ್ದಾರಾದರೂ ಅವು ಉತ್ಸವ ನಾಟಕಗಳಷ್ಟು ಜನಪ್ರಿಯವಾಗಲಿಲ್ಲ ಎಂಬುದು ಕನ್ನಡ ಹವ್ಯಾಸೀ ರಂಗಭೂಮಿಯ ಇತಿಹಾಸ. ಹೀಗಾಗಿ ಹಿಂದೆಂದಿಗಿಂತಲೂ ಇಂದು ‘ನಟ ಕೇಂದ್ರಿತ’ ನಾಟಕ ಪಠ್ಯಗಳು ಅನಿವಾರ್ಯವಾಗಿವೆ. ಶಶಿರಾಜ್ ಕಾವೂರ್ ಅವರ “ನೆಮ್ಮದಿ ಅಪಾರ್ಟ್‍ಮೆಂಟ್” ನಾಟಕವು ಅಂತಹುದೇ ನಟ ಪ್ರಧಾನವಾದ ನಾಟಕ ಪಠ್ಯವಾಗಿದೆ.


ಈ ನಾಟಕವು ಆಧುನಿಕ ಜೀವನ ವಿಧಾನ ಕುರಿತ ವಿಡಂಬನೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದ್ದರು ಅದನ್ನು ಅಪಹಾಸ್ಯದ ಮಟ್ಟದಲ್ಲಿ ಹೇಳುವ ಬದಲಿಗೆ ವಾಸ್ತವದ ನೆಲೆಗಟ್ಟಲ್ಲಿ ಹೇಳುತ್ತಾ ಹೋಗುತ್ತದೆ. ಒಂದು ಬೃಹತ್ ಅಪಾರ್ಟ್‍ಮೆಂಟಿನ 24ನೆಯ ಮಹಡಿಯಲ್ಲಿ ಮನೆಗೆಲಸದವಳಿಗೆ ತನ್ನ ಮನೆಯ ಯಜಮಾನ ತೀರಿಕೊಂಡಿದ್ದಾನೆ ಎಂಬ ಸತ್ಯದ ಅರಿವಿನ ಜೊತೆಗೆ ತೀರಿಕೊಂಡವನ ಸುತ್ತ ಇರುವ ಅನೇಕರ ಮನಸ್ಸುಗಳು ಮತ್ತು ಅದೇ ಅಪಾರ್ಟ್‍ಮೆಂಟಿನ ಜನ ಸಾವನ್ನು ನಿರ್ಲಿಪ್ತರಾಗಿ ನೋಡುವ ವಿವರಗಳು ಬಿಚ್ಚಿಕೊಳ್ಳುತ್ತವೆ. ಇಲ್ಲಿ ಬರುವ ಮಗಳು – ಅಳಿಯನ ಪಾತ್ರಕ್ಕೆ ಅಪ್ಪ ಬರೆದಿರಬಹುದಾದ ವಿಲ್‍ನ ಚಿಂತೆ, ಮನೆಯ ಬ್ರೋಕರ್‍ಗೆ ಖಾಲಿಯಾಗುವ ಮನೆಗೆ ಹೊಸ ಗಿರಾಕಿ ತರಬಹುದು ಎಂಬ ಚಿಂತೆ, ಅಪಾರ್ಟ್‍ಮೆಂಟ್ ಸೊಸೈಟಿಯ ಸೆಕ್ರೆಟರಿಗೆ ವಾಸನೆ ಬರುವ ಮೊದಲು ಹೆಣ ಹೊರಗೆ ಹೋಗಲಿ ಎಂಬ ಚಿಂತೆ, ಸ್ಥಳೀಯ ಕಾರ್ಪೋರೇಟರ್ಗೆ ತನ್ನ ಒಂದು ವೋಟ್ ಮಿಸ್ಸಾಯಿತು ಎಂಬ ಚಿಂತೆ – ಹೀಗೆ ಇಡಿಯ ಜಗತ್ತು ಎಂಬುದು ಸಣ್ಣ ಸಣ್ಣ ದ್ವೀಪಗಳಂತೆ ತನ್ನ ಮೂಗಿನ ನೇರಕ್ಕೆ ಚಿಂತಿಸುವುದೇ ನವ್ಯೋತ್ತರ ನವವಸಾಹತುಶಾಹಿ ಲೋಕಕ್ಕೆ ಹಿಡಿದ ಕನ್ನಡಿ. ಇವರ ನಡುವೆ ಮಾನವೀಯ ಮನಸ್ಸುಗಳು ಸಹ ಇವೆ ಎಂಬುದಕ್ಕೆ ಸಾಕ್ಷಿಯಾಗಿ ತೀರಿಕೊಂಡ ವ್ಯಕ್ತಿಯ ಗೆಳೆಯ ವರದರಾಜ್ ಹಾಗೂ ಅದೇ ಬಿಲ್ಡಿಂಗಿನ ವಾಚ್‍ಮನ್ ಇದ್ದಾರೆ. ವರದರಾಜ್‍ಗೆ ತೀರಿಕೊಂಡ ಕೇಶವ ತನ್ನ ವಾಕಿಂಗ್ ಗೆಳೆಯ ಎಂಬ ಭಾವ ಇದ್ದರೆ, ವಾಚ್‍ಮನ್‍ಗೆ ಇಡಿಯ ಬದುಕೇ ತತ್ವಪದಕ್ಕೆ ಹೊಂದುವಂತಹದು ಎಂಬ ಭಾವನೆ. ಈ ವಾಚ್‍ಮನ್ ನೋಡುಗರ ಆತ್ಮಸಾಕ್ಷಿಯನ್ನು ಕೆಣಕುತ್ತಾ ಆಗುತ್ತಿರುವ ತಪ್ಪುಗಳನ್ನು ವಿಡಂಬನೆಯ ಮೂಲಕವೇ ಹೇಳುತ್ತಾ ಹೋಗುತ್ತಾನೆ. ಆ ಪಾತ್ರಕ್ಕೆ ವಾಚ್‍ಮನ್ ಎಂಬ ಹೆಸರಿಟ್ಟಿರುವುದು ಸಹ ಮೆಟಫಾರಿಕ್. ಆತ ಕೇವಲ ಆ ಅಪಾರ್ಟ್‍ಮೆಂಟಿನ ಕಾವಲುಗಾರ ಅಲ್ಲ, ಆತ ಈ ಲೋಕದ ವಾಚ್‍ಮನ್. ಆತನಿಗೆ ಅಡಿಗರ ಕಾವ್ಯವೂ ಗೊತ್ತು, ಆಡುನುಡಿಯಲ್ಲಿನ ಗಾದೆಗಳೂ ಗೊತ್ತು, ಜೊತೆಗೆ ಕಣ್ಣೆದುರಿಗೆ ಇರುವ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬುದಕ್ಕೆ ಸಕಾಲಿಕ ಸಲಹೆ ನೀಡುವುದೂ ಗೊತ್ತು. ಆತ ಜನಸಾಮಾನ್ಯರ ಪ್ರತಿನಿಧಿಯಾಗಿ “ನೆಮ್ಮದಿಯನ್ನರಸುತ್ತಾ ಹೋಗಿ ನರಕದಲ್ಲಿ ಬದುಕುತ್ತಿರುವವರ ಲೋಕ”ದ ದರ್ಶನವನ್ನು ಮಾಡಿಸುತ್ತಾನೆ. ಈ ನಾಟಕದುದ್ದಕ್ಕೂ ಬರುವ ಇನ್ನಿತರ ಪಾತ್ರಗಳು ವೈವಿಧ್ಯಮಯ ಸ್ವಾರ್ಥಿಗಳನ್ನು ತೆರೆದಿಟ್ಟರೆ ಈ ವಾಚ್‍ಮನ್ ಮಾತ್ರ ನಿರ್ಲಿಪ್ತ ಸಂತನಂತೆ ತೋರುತ್ತಾನೆ. ಆ ಮೂಲಕ ಪ್ರೋಟೊ ಟೈಪ್ ಪಾತ್ರಗಳ ನಡುವಿನ ‘ಯುದ್ಧ’ಗಳ ನಡುವೆ ಮಧ್ಯೆ ಒಬ್ಬ ರೆಫರಿಯನ್ನು ನಾಟಕಕಾರರು ಇಡುತ್ತಾರೆ. ಷೇಕ್ಸ್‍ಪಿಯರ್ ತನ್ನ ಕಿಂಗ್‍ಲಿಯರ್ ನಾಟಕದಲ್ಲಿ ವಿದೂಷಕನ ಪಾತ್ರದ ಮೂಲಕ ಮಾಡಿಸುವ ಕೆಲಸವನ್ನು ಶಶಿರಾಜ್ ಕಾವೂರರು ಈ ವಾಚ್‍ಮನ್ ಮೂಲಕ ಮಾಡಿಸುತ್ತಾರೆ. ಇದು ವಿಶೇಷವಾಗಿ ಗಮನಿಸಬೇಕಾದ ಕ್ಲಾಸಿಕ್‍ನ ಜೊತೆಗೆ ಆಧುನಿಕದ ಅನುಸಂಧಾನ.


ಈ ನಾಟಕದ ಸಂಕಷ್ಟದ ವಿವರವನ್ನು ನಾಟಕವು ಆರಂಭವಾದ ಕೆಲವೇ ನಿಮಿಷಗಳಲ್ಲಿ ನಾಟಕಕಾರರು ತರುತ್ತಾರೆ. ಇದು ಕೂಡ ಗಮನಿಸಬೇಕಾದ ಅಂಶ. ಸಾಮಾನ್ಯವಾಗಿ ಎಲ್ಲಾ ಪಾತ್ರಗಳ ಪರಿಚಯದ ನಂತರ ಸಂಘರ್ಷದ ಪ್ರವೇಶವನ್ನು (ಇನ್‍ಸೈಟಿಂಗ್ ಪಾಯಿಂಟ್) ತರುವ ಅಭ್ಯಾಸ ಬಹುತೇಕ ನಾಟಕಕಾರರಲ್ಲಿ ಇದೆ. ಆದರೆ ನಾಟಕ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕೇಶವರಾವ್ ಕೋಣೆಯಲ್ಲಿ ಸತ್ತಿದ್ದಾರೆ ಎಂಬ ವಿವರವನ್ನು ತರುವುದರಿಂದಾಗಿ, ನಂತರ ಆಗುವ ಎಲ್ಲಾ ಮಾತುಗಳಿಗೆ ಒಂದು ಸ್ಪಷ್ಟ ವಿಷಾದದ ಹಿನ್ನೆಲೆ ಸೇರಿಕೊಳ್ಳುತ್ತದೆ. ಆದರೆ ಆಯಾ ವ್ಯಕ್ತಿಗಳು ಆಡುವ ಮಾತಿನಲ್ಲಿ ಅವರವರ ಸ್ವಾರ್ಥ ಇರುವುದರಿಂದ ನಾಟಕಕ್ಕೆ ಬ್ಲಾಕ್ ಕಾಮಿಡಿ ಎಂದು ಗುರುತಿಸಬಹುದಾದ ವಿನ್ಯಾಸ ದೊರಕುತ್ತದೆ. ಇಲ್ಲಿ ಬರುವ ಪ್ರತಿ ಹಾಸ್ಯವಿವರಕ್ಕೂ ಸಾವು ಎಂಬ ದುರಂತದ ಹಿನ್ನೆಲೆ ಇರುವುದರಿಂದಾಗಿ ನೋಡುಗನಲ್ಲಿ ವಿಶಿಷ್ಟ ಅನುಭೂತಿ ಹುಟ್ಟಿಸುವುದು ಸಾಧ್ಯವಾಗುತ್ತದೆ. ಈ ಬಗೆಯಲ್ಲಿ ಭಾವನೆಗಳ ಗ್ರಾಫ್ ಅನ್ನು ದುಡಿಸಿಕೊಳ್ಳುವುದನ್ನು ನಾವು ಮರಾಠಿಯ ಬಾಕ್ಸ್ ಸೆಟ್ ರಂಗಭೂಮಿಯಲ್ಲಿ ಕಾಣಬಹುದು. ಅಂತಹುದೇ ಪ್ರಯತ್ನವನ್ನು ಶಶಿರಾಜ್ ಕಾವೂರರು ಸಾಧಿಸಿರುವುದು ಕನ್ನಡ ರಂಗಭೂಮಿಯ ದೃಷ್ಟಿಯಿಂದ ಮೆಚ್ಚಿಕೊಳ್ಳಬೇಕಾದ ಅಂಶವಾಗಿದೆ.
ನಾಟಕ ವಿನ್ಯಾಸಕ್ಕೆ ನಮ್ಮಲ್ಲಿ ಹಲವು ಮಾದರಿಗಳಿವೆ. ಕೈಲಾಸಂ, ಶ್ರೀರಂಗರ ಮಾದರಿಯಿಂದ ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರವರೆÀಗಿನ ವಿನ್ಯಾಸ ಕ್ರಮದಲ್ಲಿನ ಬದಲಾವಣೆಗಳನ್ನು ಗಮನಿಸಬಹುದು. ಇವುಗಳಿಂದಾಚೆಗೆ ಸಿಜಿಕೆ ತಮ್ಮ ನಾಟಕಗಳನ್ನು ಕಟ್ಟುವಾಗ ನಾಟಕಕಾರರನ್ನು ತಾಲೀಮಿನಲ್ಲಿ ಜೊತೆಯಾಗಿ ಇರಿಸಿಕೊಂಡೇ ನಾಟಕ ಕಟ್ಟುತ್ತಿದ್ದ ಮಾರ್ಗವೂ ನಮ್ಮೆದುರಿಗಿದೆ. ಇವುಗಳಲ್ಲಿ ನಾಟಕ ತಂಡವನ್ನು ಗಮನದಲ್ಲಿಟ್ಟುಕೊಂಡು ನಾಟಕ ಕಟ್ಟುವ ಮಾರ್ಗವು ಹವ್ಯಾಸೀ ರಂಗತಂಡಗಳಿಗೆ ಹೆಚ್ಚು ಆಪ್ತವಾಗುತ್ತದೆ. ಆಯಾ ತಂಡದ ಮಿತಿಗಳು ಹಾಗೂ ಗುಣಾತ್ಮಕ ಶಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ಕಟ್ಟಿದ ನಾಟಕವನ್ನು ಆಯಾ ತಂಡಕ್ಕೆ ಪ್ರದರ್ಶನಕ್ಕಾಗಿ ಸಿದ್ಧಪಡಿಸುವುದು ಸಹ ಸುಲಭ ಸಾಧ್ಯವಾಗುತ್ತದೆ. ಆ ಕ್ರಮದಲ್ಲಿ ಆಲೋಚಿಸಿ ಕಟ್ಟಿದ ನಾಟಕ “ನೆಮ್ಮದಿ ಅಪಾರ್ಟ್‍ಮೆಂಟ್”. ಇಂದು ಹವ್ಯಾಸೀ ರಂಗತಂಡಗಳಿಗೆ ಎಲ್ಲರೂ ಒಟ್ಟಿಗೆ ತಾಲೀಮು ಮಾಡಲು ಸಹ ಸಿಗುವುದಿಲ್ಲ. ಬೇರೆ ಬೇರೆಯ ಪಾತ್ರಗಳಿಗೆ ಬೇರೆ ಬೇರೆಯ ಸಮಯ ಎಂದು ಗೊತ್ತುಪಡಿಸಿಕೊಂಡು ತಾಲೀಮು ಮಾಡಬೇಕಾಗುತ್ತದೆ. ಪ್ರಾಯಶಃ ಆ ಬಗೆಯ ತಾಲೀಮಿನ ಕ್ರಮವನ್ನೂ ಊಹಿಸಿಕೊಂಡೇ ಶಶಿರಾಜ್ ಕಾವೂರರು ಈ ನಾಟಕ ಕೃತಿಯನ್ನು ಸಹ ರಚಿಸಿರಬಹುದು ಎನಿಸುತ್ತದೆ. ಈ ನಿಟ್ಟಿನಲ್ಲಿಯೂ “ನೆಮ್ಮದಿ ಅಪಾರ್ಟ್‍ಮೆಂಟ್” ಕನ್ನಡ ಹವ್ಯಾಸೀ ರಂಗಭೂಮಿಗೆ ಉಪಯುಕ್ತ ಪಠ್ಯವಾಗುತ್ತದೆ.


ನವವಸಾಹತುಶಾಹಿಯ ಹೊಡೆತಗಳಲ್ಲಿ ಅತಿಹೆಚ್ಚು ಹೈಬ್ರಿಡ್‍ತನವನ್ನು ಪಡೆದುಕೊಂಡದ್ದು ಭಾಷೆ. (ಈ ವಾಕ್ಯವನ್ನು ಬರೆಯುವಾಗಲೂ ಬೇಕೆಂತಲೇ ಆಂಗ್ಲಮೂಲದ ಪದವನ್ನು ಸೇರಿಸಿ ಕಟ್ಟಲಾಗಿದೆ.) ಆಧುನಿಕ ಜಗತ್ತಿನಲ್ಲಿ ಬದುಕುವುದಕ್ಕೆ ಆಂಗ್ಲ ಭಾಷೆಯನ್ನು ಕಲಿಯಲೇ ಬೇಕು ಎಂಬ ಭ್ರಮೆಯೊಂದು ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಳೆದ ಮೂರು – ನಾಲ್ಕು ದಶಕಗಳಿಂದ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಭಾಷೆ ಕಲಿಯಲು ಕಳಿಸಿದ್ದಾರೆ. ಈ ಆಯ್ಕೆ ಖಂಡಿತಾ ಕಲಿಯುವ ಮಕ್ಕಳದ್ದಲ್ಲ ಬದಲಿಗೆ ಅವರ ಪೋಷಕರದ್ದು. ಈ ಆಂಗ್ಲ ಮಾಯೆಯ ಮೂಲಕ ನವವಸಾಹತುಶಾಹಿ ನಾಡಿನಲ್ಲಿ ಹರಡತೊಡಗಿದೊಡನೆ ನಮ್ಮ ಹೊಸ ತಲೆಮಾರು ನಮ್ಮ ಭಾಷೆಯನ್ನು ಬಳಸುವ ಕ್ರಮದಲ್ಲಿ ಪಲ್ಲಟಗಳಾಗಿವೆ. ನಮ್ಮ ಸೊಗಡುಗಳು ಹಿಂದಕ್ಕೆ ಸರಿದು ಏಕರೂಪಿ ರಾಜ್ಯಭಾಷೆಯೊಂದು ಆಂಗ್ಲಪದಗಳ ಬಳಕೆಯ ಜೊತೆಗೆ ಚಾಲ್ತಿಗೆ ಬಂದಿದೆ. ಇಂತಹ ಪರಿಸ್ಥಿತಿಯನ್ನು ತಮ್ಮ ಕಲಾಕೃತಿಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಬಹುತೇಕ ನಾಟಕ ರಚನೆಕಾರರು ಮಾಡುತ್ತಾ ಇದ್ದಾರೆ. ಕೈಲಾಸಂ ಅವರು ಹಾಸ್ಯ ಸೃಷ್ಟಿಗಾಗಿ ಮತ್ತು ಸ್ವಾತಂತ್ರಪೂರ್ವದ ಮೇಲ್ವರ್ಗದ ಜನರ ಬದುಕನ್ನು ಹಿಡಿಯಲು ಬಳಸಿದ ಭಾಷಾ ಕ್ರಮವು ನಂತರ ದ್ಯಾವನೂರು ಮಹಾದೇವ ಮುಂತಾದವರಲ್ಲಿ ದುಪ್ಟಿ ಕಮಿಷನರ್ ಆಗುವ ಮೂಲಕ ಹೊರಗಿನಿಂದ ಬಂದ ಪದಗಳನ್ನು ಸ್ಥಳೀಯಗೊಳಿಸಿಕೊಳ್ಳುವ ಪ್ರಕ್ರಿಯೆಯನ್ನು ಸಹ ಬಿಚ್ಚಿಡುತ್ತಾರೆ. ಕಳೆದ ಒಂದು ಶತಮಾನದ ನಾಟಕ ಸಾಹಿತ್ಯವನ್ನು ಗಮನಿಸದರೆ ಆಯಾ ಕಾಲಘಟ್ಟದ ಸಮಾಜವನ್ನು ಹಿಡಿಯಲು ಭಾಷೆಯನ್ನು ಬಹುಮುಖ್ಯ ಸಾಧನಾವಾಗಿ ಬಳಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಹಿನ್ನೆಲೆಯಲ್ಲಿ ನವವಸಾಹತುಶಾಹಿಯ ಅವಘಡಗಳನ್ನು ಕುರಿತೇ ಬರೆದಿರುವ ನಾಟಕದಲ್ಲಿ ಭಾಷೆಯನ್ನು ಶಶಿರಾಜ್ ಕಾವೂರರು ಬಳಸಿಕೊಂಡಂತೆ ಕಾಣುವುದಿಲ್ಲ. ಪ್ರಾಯಶಃ ಆಯಾ ನಾಟಕ ತಂಡಗಳು ಈ ಭಾಷೆಯನ್ನು ಸ್ಥಳೀಯಗೊಳಿಸಲಿ ಎಂದೆನಿಸಿರಬಹುದು. ಆದರೆ ಇಲ್ಲಿನ ಕೆಲ ಪಾತ್ರಗಳು ಮಾತ್ರ ನೇರವಾಗಿ ಕರಾವಳಿಯ ಕನ್ನಡವನ್ನೇ ಮಾತಾಡುತ್ತವೆ. ಆದರೆ ಮನೆಗೆಲಸದವಳು, ವಾಚ್‍ಮನ್ ಮತ್ತು ಇತರ ಪಾತ್ರಗಳು ಸಾಮಾನ್ಯೀಕೃತ ಕನ್ನಡವನ್ನು ಮಾತಾಡುತ್ತವೆ. ಶಶಿರಾಜ ಕಾವೂರರು ಮಾಡಿರುವ ಈ ಪ್ರಯೋಗವನ್ನು ನಾಟಕವನ್ನು ಪ್ರದರ್ಶಿಸುವಾಗ ಖಂಡಿತ ತಿದ್ದಿಕೊಳ್ಳಲು ಸಾಧ್ಯವಿದೆ. ಹಾಗೆ ಮಾಡುವಾಗ ಕರಾವಳಿಯ ಬಹುಭಾಷಾ ವಲಯವನ್ನು ಗೊತ್ತುಪಡಿಸುವಂತೆ ತುಳು, ಬ್ಯಾರಿ, ಕೊಂಕಣಿ, ಕನ್ನಡಗಳ ಹಲವು ಸೊಗಡುಗಳ ಮೂಲಕ ಈ ನಾಟಕವನ್ನು ಕಟ್ಟಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಈ ನಾಟಕ ಪಠ್ಯವನ್ನು ಕಲಾವಿದರು ಚಿಮ್ಮುಹಲಗೆಯಾಗಿ ಬಳಸಿಕೊಳ್ಳಬೇಕಿದೆ.


ಇದು ದುರಿತ ಕಾಲ. ಜನ ಸಾಮಾನ್ಯರ ಎದುರಿಗೆ ಅನೇಕ ಬಗೆಯ ವ್ಯಾಖ್ಯಾನಗಳು ಏಕಕಾಲಕ್ಕೆ ಅರಚಿಕೊಳ್ಳುತ್ತಾ ಇವೆ. ಅವುಗಳಲ್ಲಿ ಯಾವುದೋ ಸರಿ ಎಂದುಕೊಂಡು ಹಿಂಬಾಲಿಸುವಷ್ಟರಲ್ಲಿ ಅದಕ್ಕೆ ತದ್ವಿರುದ್ಧವಾದ ಮತ್ತೊಂದು ವ್ಯಾಖ್ಯಾನ ನಮ್ಮೆದುರಿಗೆ ಬಂದು ಕೂರುತ್ತಿದೆ. ಹೀಗಾಗಿ ಸಾಮಾನ್ಯ ಜನ ಯಾವುದನ್ನು ಆರಿಸಿಕೊಳ್ಳಬೇಕು ಎಂದರಿವಾಗದ ಗೊಂದಲದಲ್ಲಿ ಇದ್ದಾರೆ. ಕೆಲವೊಮ್ಮೆ ತಾವೇ ಆರಿಸಿದ್ದನ್ನು ಕುರಿತು ಬೇಸರಿಸಿಕೊಂಡು ಗೊಣಗುತ್ತಾ ಇದ್ದಾರೆ. ಈ ಕಾಲವನ್ನು 1975ರ ತುರ್ತುಪರಿಸ್ಥಿತಿಯ ಕಾಲಕ್ಕೆ ನೇರವಾಗಿ ಹೋಲಿಸಬಹುದು. ಆಗಲೂ ಸಾಮಾನ್ಯರಿಗೆ ಆಯ್ಕೆಯ ಗೊಂದಲವಿತ್ತು. ಯಾವ ಮಗ್ಗುಲಲ್ಲಿ ನಿಂತು ಮಾತಾಡಬೇಕೆಂದರಿವಾಗದ ಅಸಡ್ಡಾಳ ಸ್ಥಿತಿಯಿತ್ತು. ಇಂತಹ ಕಾಲಘಟ್ಟದಲ್ಲಿ ಜನರ ಬದುಕನ್ನು ರೂಪಿಸುವ ಮಹಾಶಕ್ತಿಯಾಗಬೇಕಾದ್ದು ಸಾಹಿತ್ಯ ಚಳುವಳಿಗಳು ಹಾಗೂ ರಂಗಚಳುವಳಿಗಳು. ಈ ಹಿನ್ನೆಲೆಯಲ್ಲಿ ಶಶಿಧರ್ ಕಾವೂರ್ ಅವರ ಪಠ್ಯವನ್ನು ನೋಡÀಬಹುದು. ನವವಸಾಹತುಶಾಹಿಯ ಶಿಶುವಾದ ಕೊಳ್ಳುಬಾಕ ಸಂಸ್ಕøತಿಯು ನವ್ಯೋತ್ತರ ವಾಸ್ತುವಿನ್ಯಾಸಕ್ಕೆ ದಾರಿಯಾಗಿ, ಆ ಮೂಲಕ ನಮ್ಮ ನಡುವೆ ಅನೇಕ ಹೊಸ ಬಗೆಯ ತಲ್ಲಣಗಳ ಹುಟ್ಟಿಗೆ ಕಾರಣವಾಗಿದೆ. “ಅಪಾರ್ಟ್‍ಮೆಂಟ್” ಎಂಬ ಹೊಸ ಸಂಸ್ಕøತಿಯು ನಮ್ಮ ನಡುವೆ ಹೊಸ ಸ್ಥಾವರಗಳನ್ನು ನಿಲ್ಲಿಸಿದೆ. ಇಂತಹ ಕಾಲಘಟ್ಟದಲ್ಲಿ ಶಶಿಧರ್ ಕಾವೂರ ಅವರ “ನೆಮ್ಮದಿ ಅಪಾರ್ಟ್‍ಮೆಂಟ್” ನಾಟಕವು ಸಮಕಾಲೀನ ಸಮಸ್ಯೆಗಳನ್ನು ಕುರಿತಂತೆ ಮಾತಾಡುವ ನಾಟಕವಾಗಿದೆ. ನೆಮ್ಮದಿಯನ್ನು ಹುಡುಕುತ್ತಾ ಹೊರಟು ಅಪಾರ್ಟ್‍ಮೆಂಟ್ ಸೇರಿದ ಸಾಮಾನ್ಯ ಜನಗಳ ಸಂಕಟವನ್ನು ಕಟ್ಟಿಕೊಡುವ ಮೂಲಕ, ಯಾವ ಸಮಾಜವು ಬಹುಮುಖಿ ಆಗಿ ಉಳಿಯುವುದಿಲ್ಲವೋ ಅದು ರೋಗಗ್ರಸ್ತ ಸಮಾಜವಾಗುತ್ತದೆ ಎಂಬುದನ್ನು ನಾಟಕವಾಗಿಸಿರುವ ಶಶಿರಾಜ್ ಕಾವೂರ್ ಅವರನ್ನು ಅಭಿನಂದಿಸುತ್ತಾ, ಪ್ರಯೋಗದಿಂದ ಪ್ರಯೋಗಕ್ಕೆ ಈ ನಾಟಕ ಬೆಳೆಯಲಿ ಎಂದು ಹಾರೈಸುತ್ತೇನೆ.
– ಬಿ.ಸುರೇಶ
18 ಡಿಸೆಂಬರ್ 2015
ಬೆಂಗಳೂರು

Advertisements

0 Responses to “ನೆಮ್ಮದಿಯನರಸುವವರ ಸುತ್ತಾ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: