ಹೊಸ ನಿರೀಕ್ಷೆ ಹಾಗೂ ಭರವಸೆಗಳ ಜೊತೆ ಹೊಸ ವರುಷಕ್ಕೆ ಹೆಜ್ಜೆ ಇಡೋಣ, ಬನ್ನಿ!

(ಕನ್ನಡಪ್ರಭ ಪತ್ರಿಕೆಯ ಸಂಪಾದಕರ ಕೋರಿಕೆಯಂತೆ ಬರೆದ ಲೇಖನ  – 2016ರ ನಿರೀಕ್ಷೆಗಳನ್ನು ಕುರಿತಾದ್ದು)

ಕ್ಯಾಲೆಂಡರುಗಳು ಬದಲಾಗುತ್ತಲೇ ಇರುತ್ತವೆ. ನಾಳೆಗಳನ್ನು ಕುರಿತ ಕನಸುಗಳು ಹೆಚ್ಚುತ್ತಲೇ ಇರುತ್ತವೆ. ಅದಕ್ಕೇ ಅಲ್ಲವೇ “ಕತ್ತಲಿರುವ ದಾರಿಯಲ್ಲಾದರೂ ನಡೆಯಬಹುದು, ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು” ಎಂಬ ತುಘಲಕ್ ನಾಟಕದ ಗಿರೀಶ್ ಕಾರ್ನಾಡರ ಮಾತು ನಮಗೆ ಸದಾ ಇಷ್ಟವಾಗುವುದು. ಸಿನಿಮಾ ಜಗತ್ತೂ ಸಹ ಸೇರಿದಂತೆ, ಯಾವ ಜಗತ್ತೂ ಈ ಕನಸುಗಳಿಂದ ಹೊರತಲ್ಲ. ಕನ್ನಡ ಸಿನಿಮಾ ಬಗ್ಗೆ ನಮಗೆ ಕನಸುಗಳಿರುವುದೂ ಅಷ್ಟೇ ಸಹಜ. ಬರಲಿರುವ 2016 ನಮಗೆ ಏನೇನೋ ಹೊಸದು ತರಲಿದೆ ಎಂಬ ಆಸೆ ಕನಸುಗಳ ಮಹಾಪೂರವೇ ನಮ್ಮ ಜೊತೆಗಿದೆ. ಆ ಕನಸಿನ ಕಾರಣವಾಗಿಯೇ ಅನೇಕರು ಸಿನಿಮಾ ನಿರ್ಮಿಸುತ್ತಾ ಇದ್ದಾರೆ. ಹಾಗೆ ತಯಾರಿಕೆಯಲ್ಲಿ, ಬಿಡುಗಡೆಯ ನಿರೀಕ್ಷೆಯಲ್ಲಿ ಇರುವ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಅವುಗಳಲ್ಲಿ ವೈಯಕ್ತಿಕವಾಗಿ ನನ್ನ ಗಮನ ಸೆಳೆದ ಮತ್ತು ಈ ಸಿನಿಮಾ ಕನ್ನಡಕ್ಕೆ ಒಳಿತು ಮಾಡಬಹುದು ಎನಿಸುವ ಸಿನಿಮಾಗಳದೊಂದು ಸಣ್ಣ ಪಟ್ಟಿ ಇಲ್ಲಿದೆ. ಇಲ್ಲಿರುವ ಪಟ್ಟಿಯು ಕೇವಲ ನನ್ನ ಗಮನಕ್ಕೆ ಬಂದ ಸಿನಿಮಾಗಳದ್ದು ಮಾತ್ರ. ಈ ಪಟ್ಟಿಯಲ್ಲಿ ಬಾರದ ಆದರೆ ನಾಳೆಗಳನ್ನು ಬೆಳಗಬಹುದಾದ ಮತ್ತಷ್ಟು ಸಿನಿಮಾಗಳು ಇರಬಹುದು. ಹಾಗೆ ನೋಡಿದರೆ ಇಂತಹುದೇ ಸಿನಿಮಾ ನಮಗೊಳಿತು ಮಾಡುತ್ತದೆ ಎಂದು ಹೇಳುವುದು ಸಹ ಕಷ್ಟವೇ. ಈ ಪಟ್ಟಿಯನ್ನು ಕೇವಲ ಬಯಕೆಗಳ ಪಟ್ಟಿ ಎನ್ನಲೂ ಬಹುದು.

ಗೋಧಿಬಣ್ಣ ಸಾಧಾರಣ ಮೈಕಟ್ಟು

ಹೇಮಂತ್‍ ರಾವ್ ಎಂಬ ಹೊಸ ನಿರ್ದೇಶಕರು ತಮ್ಮ ಸಿನಿಮಾದ ಟ್ರೈಲರನ್ನು ಈ ವರ್ಷದ ಆರಂಭದಲ್ಲಿಯೇ ತೋರಿಸಿದ್ದರು. ತುಂಬ ವಿಶಿಷ್ಟವಾದ ಟ್ರೈಲರ್ ಅದು. ನನ್ನಂತಹ ಅನೇಕರು ಈ ಪ್ರೋಮೊ ನೋಡಿ ಆನಂದ ಪಟ್ಟಿದ್ದೇವೆ. ಈ ಸಿನಿಮಾದಲ್ಲಿ ವೃದ್ಧನೊಬ್ಬನ ನೆನಪು ಮಾಸುತ್ತಾ ಇರುವುದರ ಹಿನ್ನೆಲೆಯಲ್ಲಿ ಕತೆಯನ್ನು ಕಟ್ಟಲಾಗಿದೆಯಂತೆ. ಆ ವೃದ್ಧನ ಪಾತ್ರದಲ್ಲಿ ನಾವೆಲ್ಲರೂ ಮೆಚ್ಚುವ ಅನಂತನಾಗ್ ಅಭಿನಯಿಸುತ್ತಾ ಇದ್ದಾರೆ ಎಂಬುದು ನಮ್ಮ ಕುತೂಹಲಕ್ಕೆ ಮತ್ತಷ್ಟು ಇಂಬುಕೊಡುತ್ತದೆ.

ಈ ಕುತೂಹಲಕ್ಕೆ ಕಾರಣವೂ ಇದೆ. ರಕ್ಷಿತ್ ಶೆಟ್ಟಿ ನಮ್ಮ ನಡುವೆ ಇರುವ ಅಪರೂಪದ ಸಿನಿಮಾ ತಂತ್ರಜ್ಞ. ಈತ ಈ ಸಿನಿಮಾದ ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ. ಜೊತೆಗೆ ಹೇಮಂತ್ ಅವರ ಮೊದಲ ನಿರ್ದೇಶನ. ಈ ಸಿನಿಮಾದ ತಂಡದಲ್ಲಿ ಇರುವ ಬಹುತೇಕ ತಂತ್ರಜ್ಞರು ಹೊಸಬರು. ಈ ಹೊಸ ತಲೆಮಾರಿನ ಜನ ಹೊಸ ರೀತಿಯ ಮಾಯಕ ಸೃಷ್ಟಿಬಹುದು ಎಂಬಾಸೆ ನನಗಿದೆ.

ಕಿರಗೂರಿನ ಗಯ್ಯಾಳಿಗಳು

ನಮ್ಮ ನಡುವಿನ ಮಹಿಳಾ ನಿರ್ದೇಶಕಿಯರಲ್ಲಿ ಗಮನ ಸೆಳೆದ ನಿರ್ದೇಶಕಿ ಸುಮನಾ ಕಿತ್ತೂರು. ಸಾಮಾನ್ಯವಾಗಿ ಮಹಿಳೆಯರು ಆಲೋಚಿಸುವ ಕತೆಗಳಿಗಿಂತ ಭಿನ್ನ ಮಾದರಿಯ ಕತೆಗಳನ್ನು ಈ ವರೆಗೆ ನಿರ್ದೇಶಿಸಿದವರು. ಈ ಬಾರಿ ಅವರು ಪೂರ್ಣಚಂದ್ರತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದಾದ “ಕಿರಗೂರಿನ ಗಯ್ಯಾಳಿಗಳು” ನಿರ್ದೇಶಿಸುತ್ತಾ ಇದ್ದಾರೆ. ಈ ಕಾದಂಬರಿಯೇ ತನ್ನೊಳಗಿನ ಹೂರಣದಿಂದಾಗಿ ವಿಶಿಷ್ಟವಾದುದು. ಇಂತಹ ಹೂರಣವನ್ನು ಸಿನಿಮಾಕ್ಕಾಗಿ ನಾನು ಬಹುವಾಗಿ ಇಷ್ಟಪಡುವ ಚಿತ್ರಕಥಾ ಲೇಖಕರಲ್ಲಿ ಒಬ್ಬರಾದ ಅಗ್ನಿಶ್ರೀಧರ್ ಬರೆದಿದ್ದಾರೆ. ನಮ್ಮ ಸಮಕಾಲೀನ ಲೋಕವನ್ನು ಕುರಿತು ಕಕ್ಕುಲಾತಿಯುಳ್ಳ ಇಂತಹ ವ್ಯಕ್ತಿಗಳು “ಕಿರಗೂರಿನ ಗಯ್ಯಾಳಿಗಳು” ಸಿನಿಮಾದ ಹಿಂದಿದ್ದಾರೆ ಎಂಬುದೇ ಈ ಸಿನಿಮಾ ಕುರಿತು ಕುತೂಹಲ ಮತ್ತು ಇದು ಬರುವ ವರ್ಷಗಳಲ್ಲಿ ಕನ್ನಡ ಸಿನಿಮಾ ಜಗತ್ತಿಗೆ ಒಳಿತು ಮಾಡಬಹುದೆಂಬ ನಂಬಿಕೆ ಮೂಡಿಸಿದೆ. ಜೊತೆಗೆ ಈ ನಾಡಿನ ಅಪರೂಪದ ಅನೇಕ ಪ್ರತಿಭೆಗಳು, ವಿಶೇಷವಾಗಿ ಬೃಹತ್ ಮಹಿಳಾ ನಟರ ಪಡೆ ಈ ಸಿನಿಮಾದಲ್ಲಿದೆ. ಇವರೆಲ್ಲರೂ ತಮ್ಮ ಗ್ಲಾಮರ್ ಬಿಟ್ಟುಕೊಟ್ಟು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಈ ಸಿನಿಮಾದ ಪೋಸ್ಟರ್‍ಗಳು ಸಹ ನಮ್ಮನ್ನು ಸೆಳೆಯುತ್ತಾ ಇದೆ. ಜೊತೆಗೆ ಕಿಶೋರ್, ಅಚ್ಯುತ, ಲೋಹಿತಾಶ್ವ ಮುಂತಾದ ಉತ್ತಮ ನಟರ ದಂಡು ಸಹ ಇದೆ. ಸುಮನಾ ಅವರ “ಗಯ್ಯಾಳಿಗಳು” ಜಗತ್ತಿನಾದ್ಯಂತ ಸದ್ದು ಮಾಡುತ್ತದೆ ಎಂಬ ನಂಬಿಕೆ ನನ್ನದು.

ಯೂ ಟರ್ನ್

ಪವನ್‍ಕುಮಾರ್ ನಮ್ಮ ನಡುವಿನ ಅತ್ಯಂತ ಪ್ರಯೋಗಶೀಲ ನಿರ್ದೇಶಕರಲ್ಲಿ ಒಬ್ಬರು. ಅವರು ಈ ಹಿಂದೆ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿ ನಿರ್ಮಿಸಿದ “ಲೂಸಿಯಾ” ಕನ್ನಡ ಸಿನಿಮಾ ಜಗತ್ತಿನಲ್ಲಿ ಹೊಸ ಪ್ರಯೋಗದ ಅಲೆಯನ್ನೇ ಸೃಷ್ಟಿಸಿತ್ತು. ಈಗ ಪವನ್‍ಕುಮಾರ್ ಅವರು ತಮ್ಮ ಕೆಲವು ಗೆಳೆಯರ ಜೊತೆ ಸೇರಿಕೊಂಡು “ಯೂ ಟರ್ನ್” ನಿರ್ದೇಶಿಸಿದ್ದಾರೆ. ತುಂಬಾ ವಿಶಿಷ್ಟವಾಗಿ ಕತೆಗಳನ್ನು ಹೆಣೆಯುವ ಪವನ್ ಅವರು ಈ ಸಲ ಏನು ಹೊಸದನ್ನು ನಮಗೆ ಉಣಬಡಿಸುತ್ತಾರೋ ಎಂಬ ಕುತೂಹಲ, ಜೊತೆಗೆ ಈ ಸಿನಿಮಾ ಕೂಡ “ಲೂಸಿಯಾ”ದ ಹಾಗೆ ಜಗತ್ತಿನಾದ್ಯಂತ ಸುದ್ದಿ ಮಾಡೀತು ಎಂಬ ಕನಸು ನನ್ನದು.

ದೊಡ್ಮನೆ ಹುಡ್ಗ

ಸೂರಿ ದುನಿಯಾ ಸೂರಿಯೆಂದೇ ಪ್ರಖ್ಯಾತರು. ಆದರೆ ಅವರು ಸಿನಿಮಾ ಕಟ್ಟುವ ಕ್ರಮ ಚಿತ್ರಕಲೆಯಿಂದ ಬಂದುದು. ಹೀಗಾಗಿ ಇವರ ಸಿನಿಮಾಗಳಲ್ಲಿ ದೃಶ್ಯ ಸಂಯೋಜನೆ ಕಣ್ಣು ತುಂಬುವಂತಹದು. ಹೀಗಾಗಿಯೇ ಇವರ ಎಲ್ಲಾ ಸಿನಿಮಾಗಳೂ ಸಹ ಸಿನಿಮಾ ಪ್ರೇಮಿಗಳಿಗೆ ‘ಚಿತ್ರ’ವಾಗಿ (Painting) ನೆನಪಿನಲ್ಲಿ ಉಳಿದಿರುತ್ತದೆ. ಈಚೆಗೆ ಸೂರಿ ತಯಾರಿಸಿದ “ಕೆಂಡಸಂಪಿಗೆ” ಕೂಡ ಕಥನ ನಿರ್ವಹಣೆ ಮತ್ತು ದೃಶ್ಯ ಸಂಯೋಜನೆಯ ಕಾರಣವಾಗಿಯೇ ಸಿನಿಮಾ ಜಗತ್ತಿನ ಎಲ್ಲರನ್ನೂ ಸೆಳೆದಿತ್ತು. ಈಗ ಸೂರಿಯವರು “ದೊಡ್ಮನೆ ಹುಡ್ಗ” ಎಂಬ ಬೃಹತ್ ಸಿನಿಮಾ ತಯಾರಿಸುತ್ತಾ ಇದ್ದಾರೆ. ಜೊತೆಗೆ ಪುನೀತ್ ರಾಜ್‍ಕುಮಾರ್‍ ಅವರ ನಟನೆ. ಈ ಸಿನಿಮಾದ ಕೆಲವು ದೃಶ್ಯಗಳನ್ನು (ನಂಜನಗೂಡಿನ ದೇವಸ್ಥಾನದ ಬಳಿ ಚಿತ್ರಿಸಿದ್ದು) ನೋಡುವ ಅವಕಾಶ ನನಗೆ ಸಿಕ್ಕಿತ್ತು. ಆ ದೃಶ್ಯ ನಿರ್ಮಿತಿಯೇ ರೋಮಾಂಚನಗೊಳಿಸುವಂತಹದು. ಹೀಗಾಗಿ ಸೂರಿ ಈ ಸಲ “ದೊಡ್ಮನೆ ಹುಡ್ಗ”ದ ಮೂಲಕ ನಮಗೆ ಯಾವ ಬಗೆಯ ‘ಚಿತ್ರ’ನೆನಪುಗಳನ್ನು ರವಾನಿಸುತ್ತಾರೆ ಎಂಬ ಕುತೂಹಲದ ಜೊತೆಗೆ ಈ ಸಿನಿಮಾವು ಕನ್ನಡ ಸಿನಿಮಾ ಜಗತ್ತಿನಲ್ಲಿ ನೆನಪಲ್ಲುಳಿಯುವ ಸಿನಿಮಾ ಆಗಬಹುದು ಎನಿಸುತ್ತದೆ.

ಹರಿಕಥಾಪ್ರಸಂಗ

ಅನನ್ಯ ಕಾಸರವಳ್ಳಿಯವರು ಪ್ರಸಾದ್ ಇನ್ಸ್‍ಟಿಟ್ಯೂಟ್‍ನಲ್ಲಿ ವಿದ್ಯಾರ್ಥಿಯಾಗಿದ್ದಾಗೆ ತಯಾರಿಸಿದ್ದ ಮೂರು ಕಿರುಚಿತ್ರಗಳನ್ನು ನಾನು ನೋಡಿ ಮೆಚ್ಚಿಕೊಂಡಿದ್ದೆ. ಈ ಹುಡುಗಿಗೆ ದೃಶ್ಯಭಾಷೆ ಒಲಿದಿದೆ. ಈಕೆ ತನ್ನ ದೃಶ್ಯ ಕಟ್ಟುವ ಶಕ್ತಿಯನ್ನು ಅದಾಗಲೇ ಈ ಕಿರುಚಿತ್ರಗಳಲ್ಲಿ ಪ್ರದರ್ಶಿಸಿದ್ದಾರೆ. ಹಾಗಾಗಿ ಈಕೆ ನಿರ್ದೇಶಿಸುತ್ತಾ ಇರುವ ಮೊದಲ ಸಿನಿಮಾ “ಹರಿಕಥಾ ಪ್ರಸಂಗ” ಕುರಿತು ಕನಸಿದೆ. ಸಮಾನಂತರ ಚಿತ್ರಚಳುವಳಿಗೆ ಅನನ್ಯ ಅವರ ಕೊಡುಗೆಯು ಖಂಡಿತಾ ಅಪರೂಪದ್ದೇ ಆಗಿರುತ್ತದೆ ಎಂಬುದು ನನ್ನ ನಂಬಿಕೆ.

ಆಕ್ಟರ್

ದಯಾಳ್‍ ಪದ್ಮನಾಭ್‍ ಅವರ ನಿರ್ದೇಶನದ ನವೀನ್ ಕೃಷ್ನ ನಟನೆಯ ಮತ್ತೊಂದು ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ನವೀನ್ ಅವರು ಏಕ ನಟ. ಒಬ್ಬ ನಟ ಒಂದಿಡೀ ಸಿನಿಮಾವನ್ನು ತನ್ನ ಭುಜದ ಮೇಲೆ ಹೊತ್ತು ಸಾಗಿಸುವುದು ಸುಲಭಸಾಧ್ಯವಲ್ಲ. ಇಂತಹ ಕತೆಯನ್ನು ತೆರೆಯ ಮೇಲೆ ಹೇಗೆ ರೂಪಿಸಿರುತ್ತಾರೆ ಎಂಬ ಕುತೂಹಲವಿದೆ. ಅದಾಗಲೇ ಈ ಸಿನಿಮಾ ನೋಡಿರುವ ಕೆಲವು ಗೆಳೆಯರು ಹೇಳಿರುವಂತೆ ಇದೊಂದು ಅಪರೂಪದ ಪ್ರಯತ್ನವಂತೆ. ಈ ಸಿನಿಮಾ ಸಹ ಕನ್ನಡ ಚಿತ್ರಜಗತ್ತಿಗೆ ವಿಶಿಷ್ಟ ಕಾಣಿಕೆ ನೀಡುತ್ತದೆ ಎಂಬ ಕನಸಿದೆ.

ಮಾರಿಕೊಂಡವರು

ದ್ಯಾವನೂರು ಮಹಾದೇವ ಕನ್ನಡದ ಅಪರೂಪದ ಕತೆಗಾರರು. ಅವರು ಕಟ್ಟಿಕೊಡುವ ದಲಿತ ಲೋಕದ ವಿವರಗಳು ಕನ್ನಡ ಸಾಹಿತ್ಯದಲ್ಲಿ ಆ ವರೆಗೆ ದಾಖಲಾಗಿರದ, ನನ್ನಂತಹ ಅನೇಕರ ಕಣ್ಣು ತೆರೆಸಿದ ಸತ್ಯಗಳು. ಇಂತಹ ದ್ಯಾವನೂರರ ಕತೆಯನ್ನು ಮತ್ತೊಬ್ಬ ಅಪರೂಪದ ಚಿಂತಕ/ನಿರ್ದೇಶಕ ಶಿವರುದ್ರಯ್ಯ ಸಿನಿಮಾ ಆಗಿಸುತ್ತಾ ಇದ್ದಾರೆ. ಈ ಹಿಂದೆ ಇವರ ನಿರ್ದೇಶನದ “ದಾಟು” ಮುಂತಾದ ಸಿನಿಮಾ ನೋಡಿರುವವನಾಗಿ “ಮಾರಿಕೊಂಡವರು” ಮುಂಬರಲಿರುವ ವರ್ಷದ ಭರವಸೆಯ ಚಿತ್ರಗಳಲ್ಲಿ ಒಂದು.

ರಾಜಕುಮಾರ ಮತ್ತು ಭರ್ಜರಿ

ಸಂತೋಷ್‍ ಆನಂದರಾಮ್ ತಮ್ಮ ಮೊದಲ ಸಿನಿಮಾ “ಮಿ & ಮಿಸೆಸ್ ರಾಮಚಾರಿ”ಯಿಂದಲೇ ಭರವಸೆ ಮೂಡಿಸಿದ್ದ ನಿರ್ದೇಶಕರು. ಇವರು ಕತೆ ಕಟ್ಟುವ ಕ್ರಮ ಮತ್ತು ಅದನ್ನು ದೃಶ್ಯವಾಗಿ ಪರಿವರ್ತಿಸುವ ಕ್ರಮ ನಿಜಕ್ಕೂ ಬೆರಗು ಹುಟ್ಟಿಸುವಂತಹದು. ಇವರೇ ಬರೆದು ನಿರ್ದೇಶಿಸುತ್ತಾ ಇರುವ “ರಾಜಕುಮಾರ” 2016ರಲ್ಲಿ ವಿಶಿಷ್ಟ ಛಾಪು ಮೂಡಿಸುತ್ತದೆ ಎಂಬ ಕನಸಿದೆ ನನಗೆ.

ಹಾಗೆಯೇ “ಬಹದ್ದೂರ್‍” ಚಿತ್ರ ನಿರ್ದೇಶಿಸಿದ ಚೇತನ್ “ಭರ್ಜರಿ” ಎಂಬ ಎರಡನೆಯ ಚಿತ್ರ ಸಿದ್ಧಮಾಡುತ್ತಾ ಇದ್ದಾರೆ. ನೋಡುಗರನ್ನು ಕೂರಿಸಿಕೊಳ್ಳುವಂತೆ ಕತೆ ಕಟ್ಟುವ ಶಕ್ತಿಯುಳ್ಳ ಈ ಹೊಸಬರು ತಮ್ಮ ಎರಡನೆಯ ಸಿನಿಮಾದಲ್ಲಿಯೂ ಗೆಲ್ಲಬಹುದು ಎಂಬ ನಿರೀಕ್ಷೆಯಿದೆ.

ಇವಿಷ್ಟಲ್ಲದೆ ಆರ್‍ಜಿವಿ ನಿರ್ದೇಶನದ “ಕಿಲ್ಲಿಂಗ್ ವೀರಪ್ಪನ್” ತರಹದ ಕನ್ನಡಕ್ಕೆ ಹೊಸದೆನಿಸುವ ನಿರೂಪಣಾ ಕ್ರಮವಿರುವ ಚಿತ್ರ ಹಾಗೂ ಯೋಗರಾಜ್‍ಭಟ್‍ ನಿರ್ದೇಶನದ ಬ್ಲಾಕ್ ಕಾಮಿಡಿ “ದನ ಕಾಯೋನು” ಸಹ 2016ರ ಬಹು ನಿರೀಕ್ಷೆಯ ಸಿನಿಮಾಗಳು…

ಈ ಕಥಾ ಚಿತ್ರಗಳಲ್ಲದೆ ಆಕರ್ಷ ಕಮಲ, ರಾಘೂ ಶಿವಮೊಗ್ಗ, ಮದನ್ ರಾಮ್‍ವೆಂಕಟೇಶ್ ಮುಂತಾದ ಗೆಳೆಯರು ವಿಶಿಷ್ಟವೆನಿಸುವ ಕಿರುಚಿತ್ರಗಳನ್ನು ಮಾಡಿದ್ದಾರೆ. ಈ ಚಿತ್ರಗಳೂ ಸಹ ಮುಂಬರುವ ವರ್ಷದಲ್ಲಿ ಕನ್ನಡ ಸಿನಿಮಾ ಜಗತ್ತಿಗೆ ವಿಶಿಷ್ಟ ಗೌರವಗಳನ್ನು ತಂದುಕೊಡುತ್ತವೆ ಎಂಬ ನಂಬಿಕೆ ನನ್ನದು.

ಈ ಎಲ್ಲಾ ಸಿನಿಮಾಗಳು ಗೆಲ್ಲಲಿ. ಆ ಮೂಲಕ ಮತ್ತಷ್ಟು ಹೊಸಬರು ಹೊಸ ಕತೆಗಳ ಜೊತೆಗೆ ಸಿನಿಮಾ ಕಟ್ಟಲಿ ಎಂಬುದು ನನ್ನ ಹಾರೈಕೆ. ನಾನು ಆಶಾವಾದಿಯೂ ಹೌದು, ಕೆಲವು ಗೆಳೆಯರು ಆರೋಪಿಸುವ ಹಾಗೆ ಅವಕಾಶವಾದಿಯೂ ಹೌದು. ನನ್ನ ಗೆಳೆಯರ ಸಿನಿಮಾಗಳೆಲ್ಲಾ ಗೆಲ್ಲಲಿ ಎಂಬುದು ಆಶಾವಾದ. ಆ ಸಿನಿಮಾಗಳು ಗೆದ್ದರೆ ಮತ್ತಷ್ಟು ಹೊಸಬರಿಗೆ ಮೂಲಕೃತಿಗಳನ್ನು ಸಿನಿಮಾ ಆಗಿಸುವ ಅವಕಾಶ ಒದಗಬಹುದೆಂಬುದು ಅವಕಾಶವಾದ. ಅದೇ ನೆಲೆಯಿಂದ ಈ ನನ್ನ ಗೆಳೆಯರ ಸಿನಿಮಾಗಳನ್ನು ಗೆಲ್ಲಿಸುವ ಜವಾಬ್ದಾರಿ ಕನ್ನಡಿಗರದು ಎಂದು ನೆನಪಿಸುತ್ತೇನೆ.

– ಬಿ.ಸುರೇಶ

28 ಡಿಸೆಂಬರ್ 2015

 

Advertisements

0 Responses to “ಹೊಸ ನಿರೀಕ್ಷೆ ಹಾಗೂ ಭರವಸೆಗಳ ಜೊತೆ ಹೊಸ ವರುಷಕ್ಕೆ ಹೆಜ್ಜೆ ಇಡೋಣ, ಬನ್ನಿ!”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: