ಗೆಲುವು ಯಾವತ್ತಿಗೂ ಒಳ್ಳೆಯದಕ್ಕೆ ಮಾತ್ರ

(“ಸಿನಿಮಾ ಟಿವಿ ಎಂಬ ಮಾಯಾ – ಗಾಯ” ಕುರಿತ ಲೇಖನ ಪ್ರಜಾವಾಣಿ ಉಗಾದಿ 2016ಕ್ಕೆ ಬರೆದುದು)

ಅದು 1992-93ರ ಅವಧಿ. ದಿಢೀರನೆ ನನ್ನನ್ನು ದೂರದರ್ಶನದ ಗೆಳೆಯರೊಬ್ಬರು ಸಂಪರ್ಕಿಸಿ, ಕೂಡಲೇ ನಳಿನಿ ರಾಮಣ್ಣ (ದೂರದರ್ಶನದ ಅಧಿಕಾರಿಗಳು) ಅವರನ್ನು ಭೇಟಿ ಮಾಡು ಎಂದರು. ಯಾಕೆ ಭೇಟಿ ಮಾಡಬೇಕು ಎಂಬ ಕಾರಣದ ಅರಿವಿಲ್ಲದ ನಾನು ದೂರದರ್ಶನಕ್ಕೆ ಭೇಟಿ ಕೊಟ್ಟೆ. ನಳಿನಿ ರಾಮಣ್ಣ ಅವರು ನನ್ನನ್ನು ಕಂಡ ಕೂಡಲೇ ಅವರ ಸಹಾಯಕಿಯಾಗಿದ್ದ ಉಷಾ ಕಿಣಿ ಅವರನ್ನು ಭೇಟಿ ಮಾಡು ಎಂದರು. ಸರಿ ಎಂದು ಆಕೆಯನ್ನು ಭೇಟಿ ಮಾಡಿದೆ. ಉಷಾ ಕಿಣಿಯವರು ದೂರದರ್ಶನವು ಆರಂಭಿಸಿದ್ದ ಹೊಸ ಯೋಜನೆಯೊಂದರ ಬಗ್ಗೆ ತಿಳಿಸುತ್ತಾ, “ಉತ್ತಮ ಸಣ್ಣ ಕತೆಗಳನ್ನು ನೀವು ಎರಡು ಪ್ರಕರಣಕ್ಕೆ ಆಗುವಂತೆ ಚಿತ್ರಕತೆ ಬರೆದು ಕಳಿಸಿ. ನಿಮ್ಮ ಚಿತ್ರಕತೆ ಒಪ್ಪಿಗೆಯಾದಲ್ಲಿ ದೂರದರ್ಶನವೇ ಹಣ ನೀಡುತ್ತದೆ. ನೀವು ನಿರ್ದೇಶಿಸಬಹುದು” ಎಂದರು. ಆಗ ಜನಪ್ರಿಯ ಸಿನಿಮಾ ಮಾದರಿಗಳಿಗಿಂತ ಭಿನ್ನವಾಗಿ ಆಲೋಚಿಸುತ್ತಿದ್ದ ಬೃಹತ್ ಪಡೆಯೊಂದು ಈ ಯೋಜನೆಯ ಲಾಭ ಪಡೆಯಿತು. ನನ್ನನ್ನು ಸೇರಿದಂತೆ ಅನೇಕರು ಈ ಎರಡು ಪ್ರಕರಣಗಳ ಕತೆಗಳನ್ನು ಹೆಣೆದು ನಿರ್ದೇಶಕರಾದರು. ದಿಢೀರನೆ ನಮ್ಮ ಕನಸುಗಳಿಗೆ ವೇದಿಕೆಯೊಂದು ಒದಗಿ ಬಂದಿತ್ತು. ಹೀಗೆ ಕಳೆದ ಶತಮಾನದ ಕಡೆಯ ದಶಕದಲ್ಲಿ ಆದ ಬೆಳವಣಿಗೆಯೊಂದು ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ದೇಶದಾದ್ಯಂತ ಅನೇಕರಿಗೆ ಕಿರುತೆರೆಯ ಮೂಲಕ ತಮ್ಮ ಸೃಜನಶೀಲ ಶಕ್ತಿಗಳನ್ನು ಪರಿಚಯಿಸಲು ಸಾಧ್ಯವಾಯಿತು. ಇಲ್ಲಿಂದಾಚೆಗೆ ಹಲವರು ಕಿರುತೆರೆಯಲ್ಲಿ ಆರಂಭವಾದ ದೈನಿಕ ಧಾರಾವಾಹಿಗಳನ್ನು ತಯಾರಿಸಲು ಮುಂದಾದರೆ, ಇನ್ನು ಹಲವರು ಹಿರಿತೆರೆಗೂ ಕೆಲಸ ಮಾಡಲು ಆರಂಭಿಸಿದರು.
ಈ ಪೀಠಿಕೆಯನ್ನು ಮೊದಲಿಗೆ ಬರೆಯಲು ಕಾರಣವಿದೆ. ಹಿರಿತೆರೆಯೆಂಬುದು ಕನ್ನಡದಲ್ಲಿ ಮಾತ್ರವಲ್ಲ ದೇಶದಾದ್ಯಂತ ಕೆಲವರಿಗೆ ಮಾತ್ರ ಸೀಮಿತವಾಗಿ ಹೋಗಿದ್ದ ಕಾಲಘಟ್ಟದಲ್ಲಿ ಕಿರುತೆರೆಯು ತೆರೆದ ಬಾಗಿಲಿಂದ ಅನೇಕ ಹೊಸಬರು ಪ್ರವಾಹದಂತೆ ದೃಶ್ಯಮಾಧ್ಯಮದ ಜಗತ್ತಿಗೆ ಬಂದದ್ದು ಇತಿಹಾಸದ ಸತ್ಯ.
ಆದರೆ ಇಂದು ಕಿರುತೆರೆಯು ಹಿರಿತೆರೆಯನ್ನು ನುಂಗಿತು ಎಂಬ ಆರೋಪದಿಂದ ಹಿಡಿದು, ಹಿರಿತೆರೆಯ ಅನೇಕ ಅವಘಡಗಳಿಗೆ ಕಿರುತೆರೆಯ ಕಡೆಗೆ ಬೊಟ್ಟು ಮಾಡುವವರಿದ್ದಾರೆ. ಇದು ಆರೋಪ ಮಾತ್ರ. ವಾಸ್ತವದಲ್ಲಿ ಹಾಗಿಲ್ಲ. ಇವೆರಡೂ ಮಾಧ್ಯಮಗಳು ಒಂದಕ್ಕೊಂದು ಆತುಕೊಂಡೇ ಬೆಳೆದಿವೆ. ಕಿರುತೆರೆಯಂತೂ ಒಂದೇ ಒಂದು ವಾಹಿನಿಯ ಕಾಲದಿಂದ ಕೈ ಬೆರಳಿನ ಲೆಕ್ಕಕ್ಕೆ ಸಿಗದಷ್ಟು ವಾಹಿನಿಗಳಾಗುವಷ್ಟು ಬೆಳೆದಿದೆ. ಅವುಗಳಲ್ಲಿ ಸುದ್ದಿ ವಾಹಿನಿಗಳ ಸಂಖ್ಯೆ ದೊಡ್ಡದು. ಮನರಂಜನಾ ಉಪಗ್ರಹ ವಾಹಿನಿಗಳ ಸಂಖ್ಯೆಯು (ಈ ಲೇಖನ ಬರೆಯುವ ಕಾಲಕ್ಕೆ) ಆರೇಳಾಗಿದೆ. ಮುಂಬರುವ ದಿನಗಳಲ್ಲಿ ಆರಂಭವಾಗುತ್ತಿವೆ ಎಂದು ಹೇಳಲಾಗಿರುವ ವಾಹಿನಿಗಳ ಸಂಖ್ಯೆಯನ್ನೂ ಗಮನಿಸಿದರೆ ಇದು ಹತ್ತರ ಸಂಖ್ಯೆಯನ್ನು ದಾಟುವ ಸಾಧ್ಯತೆಯೂ ಇದೆ. ಈ ಎಲ್ಲಾ ಮನರಂಜನಾ ವಾಹಿನಿಗಳೂ ಹಿರಿತೆರೆಯು ಸೃಷ್ಟಿಸುವ ಪ್ರಾಡಕ್ಟ್‍ಗಳ ಮೂಲಕವೇ ಬದುಕುತ್ತಾ ಇರುವುದು ಕಣ್ಣಿಗೆ ಕಾಣುತ್ತಾ ಇರುವ ಸತ್ಯ. ಈ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಸಿನಿಮಾ ಆಧರಿತ ಕಾರ್ಯಕ್ರಮಗಳೇ ಆಗಿವೆ. ಹೀಗಿದ್ದೂ ಕಿರುತೆರೆಯು ಹಿರಿತೆರೆಯನ್ನು ನುಂಗುತ್ತಿದೆ ಎಂಬ ಆರೋಪ ಬರಲು ಕಾರಣಗಳೇನು? ಅಥವಾ ಈ ಆರೋಪಕ್ಕಿಂತ ಭಿನ್ನವಾದುದುದು ಏನಾದರೂ ಇದೆಯೇ ಎಂಬುದನ್ನು ಗಮನಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

ಹಿರಿತೆರೆ ಎಂಬ ಮಾಯಾಲೋಕ
ನಮ್ಮಲ್ಲಿನ ಬಹುತೇಕರ ಬಾಲ್ಯವನ್ನು ಸಿನಿಮಾ ಆವರಿಸಿತ್ತು. ನಾವು ಆಗ ನೋಡಿದ ಚಿತ್ರಗಳು ಇಂದಿಗೂ ನಮ್ಮ ನೆನಪಿನಕೋಶದಲ್ಲಿ ಭದ್ರವಾಗಿ ಕೂತಿವೆ. ನನಗಂತೂ “ಬಂಗಾರದ ಮನುಷ್ಯ”, “ಬೂತಯ್ಯನ ಮಗ ಅಯ್ಯು”, “ನಾಗರಹಾವು” ತರಹದ ಸಿನಿಮಾಗಳನ್ನು ನೋಡಿದ್ದಕ್ಕಿಂತ, ಆ ಸಿನಿಮಾ ನೋಡಲು ದುಡ್ಡು ಹೊಂದಿಸಿದ್ದೇ ಒಂದು ಬೃಹತ್ ಸಾಹಸದ ಹಾಗೆ ಕಣ್ಣೆದುರಿಗೆ ಇದೆ. ಆ ಸಿನಿಮಾಗಳನ್ನು ನೋಡಿದ್ದಷ್ಟೇ ಅಲ್ಲದೆ, ಆ ಸಿನಿಮಾಗಳ ಹಾಡುಗಳನ್ನು ಕೂಡ ನಾವು ಕಂಠಪಾಠ ಮಾಡಿಕೊಂಡಿದ್ದೆವು. ನಮ್ಮ ಕೋಪ ತೋರಿಸುವುದಕ್ಕೆ “ಹಾವಿನ ದ್ವೇಷ” ಎಂದು ಹಾಡಿದರೆ, ನಮ್ಮಲ್ಲಿನ ಗುಣಾತ್ಮಕ ಶಕ್ತಿಯನ್ನು ತೋರಿಸಿಕೊಳ್ಳಲು “ಆಗದು ಎಂದು ಕೈ ಕಟ್ಟಿ ಕುಳಿತರೆ” ಎಂದು ಹಾಡುತ್ತಿದ್ದೆವು. ನಮ್ಮ ಬೇಸರಗಳನ್ನು ಸೂಚಿಸಲು “ವಿರಸವೆಂಬ ವಿಷಕೆ” ಎಂದು ಹಾಡಿಕೊಳ್ಳುತ್ತಾ ಇದ್ದೆವು. ಒಟ್ಟಾರೆಯಾಗಿ ಈ ಸಿನಿಮಾಗಳು ನಮಗೆ ಕೇವಲ ಮನರಂಜನೆಯಾಗಿರಲಿಲ್ಲ, ಬದಲಿಗೆ ಬದುಕಿನ ಭಾಗವೇ ಆಗಿದ್ದವು. ಇಂತಹ ವಿವರಗಳ ಮೂಲಕ ಕಟ್ಟಿಕೊಂಡ ಬಾಲ್ಯ ನಮ್ಮನ್ನು ಜೀವನ್ಮುಖಿ ಮಾಡಿದ್ದವು. ಎಂಬತ್ತರ ದಶಕದ ಮಧ್ಯಭಾಗಕ್ಕೆ ತಲುಪುವ ಹೊತ್ತಿಗೆ ನನ್ನಂತಹ ಅನೇಕರಿಗೆ ಸಿನಿಮಾ ಎಂಬುದು ದೊಡ್ಡ ದುಡ್ಡಿನವರ ಕೆಲಸ. ನಮ್ಮ ಕೈಗೆಟುಕದ ವಿಷಯ ಎಂಬುದರಿವಾಗಿತ್ತು. ಜೊತೆಗೆ ನನ್ನಂತಹವರು ಬೆಳೆದ ಪರಿಸರವೇ ಕಾರಣವಾಗಿ ಸಿನಿಮಾ ಮಾಯಾಲೋಕಕ್ಕಿಂತ ರಂಗಭೂಮಿಯೇ ಚೇತೋಹಾರಿ ಎನಿಸಿದ್ದೂ ಹೌದು.

ಹೀಗೆ ಮಾಯೆ ಎಂದುಕೊಂಡ ಸಿನಿಮಾ ಲೋಕಕ್ಕೆ ಸಂವಾದಿಯಾಗಿ ದೂರದರ್ಶನವು ಮಧ್ಯಮವರ್ಗದ ಜಗತ್ತಿಗೆ ನಿತ್ಯ ಕತೆಗಳನ್ನು ನೀಡುವ ತಾಣವಾಗಿದ್ದು ಮತ್ತು ನಮ್ಮ ಸಂಜೆಗಳನ್ನು ಮತ್ತಷ್ಟು ಸಹನೀಯವಾಗಿಸಿದ್ದೂ ಸಹ ಮತ್ತೊಂದು ಮುಖ್ಯ ಸಂಗತಿಯಾಗಿತ್ತು. ಆಗ ದೂರದರ್ಶನದಲ್ಲಿನ್ನೂ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಸಮಯವಿರಲಿಲ್ಲ. ಅದಕ್ಕಾಗಿ 1985ರವರೆಗೆ ಕಾಯಬೇಕಾಯಿತು. ಆದರೂ ಪ್ರೇಮಚಂದರ ಕತೆಗಳು, ಬುನಿಯಾದ್, ನುಕ್ಕಡ್ ತರಹದ ಸಾಪ್ತಾಹಿಕ ಕತೆಗಳು ನಮಗೆ ಸಿನಿಮಾದಷ್ಟೇ ಸುಖವನ್ನು ಒದಗಿಸಿದ್ದವು. ಈ ಕಾಲಘಟ್ಟದಲ್ಲಿ ಜನಪ್ರಿಯ ಸಿನಿಮಾದಲ್ಲಿ ಇದೇ ಮಾದರಿಯ ಗಟ್ಟಿ ಹೂರಣವಿರಲಿಲ್ಲ. ಬದಲಿಗೆ ನಾಯಕನ ವೈಭವೀಕರಣದ ಸಿನಿಮಾಗಳು ಹೆಚ್ಚಾಗತೊಡಗಿದ್ದವು. ಅಲ್ಲಿ ಇಲ್ಲಿ ಎಂಬಂತೆ ಒಂದೊಂದು ಸಿನಿಮಾಗಳು ನಮ್ಮನ್ನು ತಾಗುತ್ತಾ ಇದ್ದವು. ಕನ್ನಡ ಸಿನಿಮಾದಲ್ಲಿಯಂತೂ ರಿಮೇಕ್ ಪರ್ವ ಶುರುವಾಗಿತ್ತು. ಆಗೀಗ ಮೂಲಕಥೆಯನ್ನುಳ್ಳ ಸಿನಿಮಾಗಳು ಬರುತ್ತಿದ್ದವು. ಹೀಗಾಗಿ ಕನ್ನಡದ ಬಡಮಧ್ಯಮ ವರ್ಗವು ಹೊಸದಕ್ಕೆ ಕಾಯುತ್ತಾ ಇತ್ತು. ಆಗಲೇ ದೂರದರ್ಶನದಲ್ಲಿ ಸಾಪ್ತಾಹಿಕ ಧಾರಾವಾಹಿಗಳು ಆರಂಭವಾದವು. ಎಪ್ಪತ್ತು ಎಂಬತ್ತರ ದಶಕದಲ್ಲಿ ಸಿನಿಮಾದಲ್ಲಿ ಸಿಗುತ್ತಿದ್ದ ಸುಖವನ್ನು `ಮಾಯಾಮೃಗ’, `ಜನನಿ’, `ಮನೆತನ’, `ಸಾಧನೆ’ಯಂತಹ ಧಾರಾವಾಹಿಗಳು ನೀಡಿದವು. ಸಾಪ್ತಾಹಿಕವಾಗಿ ಬರುತ್ತಾ ಇದ್ದ `ನಮ್ಮ ನಮ್ಮಲ್ಲಿ’, `ಕಂಡಕ್ಷರ್ ಕರಿಯಪ್ಪ’, `ಕ್ರೇಜಿ ಕರ್ನಲ್’, `ಬದುಕು ಬಣ್ಣದ ಚಿತ್ತಾರ’, `ಕ್ಷಮಯಾ ಧರಿತ್ರಿ’ ಮುಂತಾದ ಧಾರಾವಾಹಿಗಳು ಕನ್ನಡದ ಮಧ್ಯಮ ವರ್ಗದ ಜನ ಮೆಚ್ಚಿಕೊಂಡು ನೋಡಿದರು. ಕನ್ನಡಿಗರಿಗೆ ಒಳ್ಳೆಯ ಸಿನಿಮಾಗಳು ನೀಡುತ್ತಿದ್ದ ಸುಖವನ್ನು ಈ ಧಾರಾವಾಹಿಗಳು ನೀಡಿದ್ದವು.

ಹಾಗಾದರೆ ಈ ಧಾರಾವಾಹಿಗಳು ಕನ್ನಡ ಸಿನಿಮಾ ಪ್ರೇಕ್ಷಕರನ್ನು ಸಂಪೂರ್ಣ ಸೆಳೆದವೇ? ಎಂದರೆ ಇಲ್ಲ ಎಂದೇ ಉತ್ತರಿಸಬೇಕು. ಏಕೆಂದರೆ ಎಲ್ಲಾ ಕಾಲದಲ್ಲಿಯೂ ಒಳ್ಳೆಯದನ್ನು ನೋಡುಗರು ಮೆಚ್ಚಿಕೊಳ್ಳುತ್ತಲೇ ಇದ್ದರು. ಆಯಾ ಕಾಲದಲ್ಲಿ ಬಂದ ಒಳಿತುಗಳನ್ನು ಬೆಂಬಲಿಸಿ ಪೋಷಿಸಿದರು. ಸುಮ್ಮನೇ ಕೋಷ್ಟಕದ ಹಾಗೆ ಪಟ್ಟಿ ಮಾಡಿ ನೋಡಿದರೆ 90ರ ದಶಕದಿಂದ ಈ ಶತಮಾನದ ಮೊದಲ ದಶಕದ ವರೆಗೆ ಬಂದ ಸಿನಿಮಾಗಳ ಮೂಲಕವೇ ರಮೇಶ್ ಅರವಿಂದ್, ರಾಘವೇಂದ್ರ ರಾಜಕುಮಾರ್, ವಿಜಯ್ ರಾಘವೇಂದ್ರ, ಸುದೀಪ್, ಪುನೀತ್, ದರ್ಶನ್, ಗಣೇಶ್, ವಿಜಿ, ಮುಂತಾದವರು ಪ್ರಧಾನ ನಾಯಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇನ್ನೂ ಅನೇಕ ನಾಯಕರ ಸಿನಿಮಾಗಳು ಈ ಅವಧಿಯಲ್ಲಿ ಗೆದ್ದಿರುವ ದಾಖಲೆಯೂ ಇದೆ. ಹೀಗಾಗಿ ಕಿರುತೆರೆಯು ಸಿನಿಮಾ ನೋಡುಗರನ್ನು ಸಿನಿಮಾದಿಂದ ದೂರ ಮಾಡಿತು ಎಂಬ ವಾದದಲ್ಲಿ ಸಂಪೂರ್ಣ ಸತ್ಯವಿಲ್ಲ. ಆದರೆ ಸಿನಿಮಾದಲ್ಲಿ ಸಿಗದ ಬೌದ್ಧಿಕ ಆನಂದವನ್ನು ಮತ್ತು ಜೀವನ್ಮುಖಿ ಕಥನಗಳನ್ನು ಸಾಮಾನ್ಯ ಜನ ಕಿರುತೆರೆಯಿಂದ ಪಡೆದರು ಎಂಬುದು ಸತ್ಯ.

ಹಾಗೆಂದು ಕಿರುತೆರೆಯಲ್ಲಿ ಬಂದುದೆಲ್ಲಾ ಶ್ರೇಷ್ಟವಾಗಿತ್ತು ಎಂದೇನೂ ಅಲ್ಲ. ಅಲ್ಲಿಯೂ ಎಲ್ಲ ಉದ್ಯಮಗಳಲ್ಲಿ ಇರುವಂತೆ ಜೊಳ್ಳುಗಳು ಇದ್ದವು. ಅವುಗಳನ್ನು ನೋಡುಗ ನಿರಾಕರಿಸಿದ್ದು ಸಹ ಇತ್ತು. ಆದರೆ ಕಿರುತೆರೆಯು ಹೊಸ ಮಾರುಕಟ್ಟೆಯಾಗಿ ತೆರೆದುಕೊಂಡಿದ್ದು ಹೌದು. ಇದರಿಂದಾಗಿ ಕೇವಲ ದೂರದರ್ಶನವೊಂದೇ ಇದ್ದ ಕಾಲದಿಂದ ಹೊಸ ಶತಮಾನದ ಮೊದಲ ದಶಕದಲ್ಲಿಯೇ ಅನೇಕ ಖಾಸಗಿ ವಾಹಿನಿಗಳು ಸೇರ್ಪಡೆಯಾದವು. ಈ ವಾಹಿನಿಗಳು ಸಹ ಧಾರಾವಾಹಿಗಳನ್ನು, ದೈನಿಕಗಳನ್ನು ಪ್ರಸಾರ ಮಾಡಿದವು. ನಿಧಾನವಾಗಿ ವಾಹಿನಿಗಳ ಸಂಖ್ಯೆ ಹೆಚ್ಚಾಯಿತು. ಹಿರಿತೆರೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಅನೇಕ ಕಲಾವಿದರು – ತಂತ್ರಜ್ಞರಿಗೆ ಈ ವಾಹಿನಿಗಳು ಆರ್ಥಿಕ ನೆಮ್ಮದಿ ಮಾತ್ರವೇ ಅಲ್ಲದೆ ಸಾಮಾಜಿಕ ಗೌರವ ಸಿಗುವಂತೆ ಮಾಡಿದವು. ಸಿಹಿಕಹಿ ಚಂದ್ರು, ಸೀತಾರಾಂ, ರವಿಕಿರಣ್, ಎಸ್ ನಾರಾಯಣ್, ಫಣಿ ರಾಮಚಂದ್ರ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರ ಪ್ರಯೋಗಗಳು ಖಾಸಗಿ ವಾಹಿನಿಗಳಲ್ಲಿ ಸಾಕಷ್ಟು ಯಶಸ್ಸು ಪಡೆದವು. ಇಂತಹ ಯಶಸ್ಸುಗಳು ಆಯಾ ವ್ಯಕ್ತಿಗಳನ್ನು ಮಾತ್ರವೇ ಅಲ್ಲದೇ ಆಯಾ ವಾಹಿನಿಗಳನ್ನು ಸಹ ಬೆಳೆಸಿತು, ಉಳಿಸಿತು. ಇದರಿಂದಾಗಿ ಕನ್ನಡ ಕಿರುತೆರೆಯು ಒಂದು ಗಟ್ಟಿಯಾದ ನೆಲೆಯನ್ನು ಸಹ ಕಂಡುಕೊಂಡಿತು.

ಖಾಸಗಿ ವಾಹಿನಿಗಳು ಮತ್ತು ಸಿನಿಮಾ ಕೊಳ್ಳುವ ವ್ಯಾಪಾರ
ಹೊಸ ಶತಮಾನದ ಆರಂಭಕ್ಕೆ ನಮ್ಮ ನಾಡಲ್ಲಿ ಮೂಡಿದ ಮತ್ತೊಂದು ವ್ಯಾಪಾರದ ಕ್ರಮ; ಸಿನಿಮಾಗಳ ಹಕ್ಕುಗಳನ್ನು ಕೊಳ್ಳುವುದು. ಯಾವುದೋ ಸಿನಿಮಾದ ತಯಾರಿಕೆಯ ಸುದ್ದಿ ಸಿಕ್ಕರೂ ಅದನ್ನು ಮುಂಗಡ ಕೊಟ್ಟು ಕಾದಿರಿಸುವ ಸ್ಪರ್ಧೆಯು ಖಾಸಗಿ ವಾಹಿನಿಗಳ ನಡುವೆ ಹುಟ್ಟಿತು. ಇದರಿಂದ ಸಿನಿಮಾ ತಯಾರಾಕರು ಹೊಸ ಆನಂದಕ್ಕೆ ಹಾಗೂ ಸಂಕಟಕ್ಕೆ ಏಕಕಾಲಕ್ಕೆ ಬಿದ್ದರು. ಒಂದು ಕಾಲದಲ್ಲಿ ಕತೆಯನ್ನಾಧರಿಸಿ ಚಿತ್ರ ತಯಾರಿಸುತ್ತಾ ಇದ್ದವರು ದಿಢೀರನೆ ಯಾವ ನಟನಿಗೆ ಯಾವ ವಾಹಿನಿ ಎಷ್ಟು ಹಣ ಕೊಡುತ್ತದೆ ಎಂಬುದನ್ನಾಧರಿಸಿ ಸಿನಿಮಾ ಮಾಡಲು ಶುರುಮಾಡಿದರು. ಇದರ ಫಲಿತವೆಂಬಂತೆ ಹೊಸ ಶತಮಾನದಲ್ಲಿ ಚಿತ್ರ ತಯಾರಿಕೆಯ ಸಂಖ್ಯೆಯು ವಾರ್ಷಿಕವಾಗಿ ನೂರರ ಗಡಿ ದಾಟಿತ್ತು. ಜೊತೆಗೆ ನೂರರಲ್ಲಿ ಶೇಕಡಾ ಹತ್ತು ಹದಿನೈದು ಮಾತ್ರ ಸ್ವರಚಿತ ಕೃತಿಗಳು ಎನ್ನುವ ಮಟ್ಟಿಗೆ ಆಗಿಹೋಗಿತ್ತು. ಇದರೊಂದಿಗೆ ಕೇವಲ ವಾಹಿನಿಯವರು ಕೊಡುವ ಹಣಕ್ಕಾಗಿಯೇ ಸಿನಿಮಾ ಮಾಡುವ ಸಣ್ಣ ಮಾಫಿಯಾ ಸಹ ಹುಟ್ಟಿಕೊಂಡಿತ್ತು. ಕನ್ನಡದ್ದು ಎನ್ನುವ ಸಿನಿಮಾಕ್ಕಿಂತ ಕನ್ನಡ ವಾತಾವರಣದಲ್ಲಿ ಚಿತ್ರಿತವಾದ ಪರದೇಶಿ ಕತೆಗಳು ಅಷ್ಟೇ ಎಡವಟ್ಟಾದ ರೀತಿಯಲ್ಲಿ ಚಿತ್ರಿತವಾಗಲು ಶುರುವಾಯಿತು.

ಈ ಪರಿಸ್ಥಿತಿಯಿಂದ ನಿಜವಾದ ದೊಡ್ಡ ಹೊಡೆತ ಬಿದ್ದದ್ದು ವಾಹಿನಿಗಳಿಗೆ. ಅವರು ಹೂಡುತ್ತಿದ್ದ ಹಣಕ್ಕೆ ತಕ್ಕ ಕೃತಿಗಳು ಇಲ್ಲದೆ ಮಾರುಕಟ್ಟೆಯು ಕುಸಿಯತೊಡಗಿತು. ಅದರ ಪರಿಣಾಮ ಎಂಬಂತೆ ಹೊಸ ಶತಮಾನದ ಎರಡನೆಯ ದಶಕದ ಹೊತ್ತಿಗೆ ಕೆಲವು ವಾಹಿನಿಗಳು ಸಂಪೂರ್ಣವಾಗಿ ಸಿನಿಮಾ ಕೊಳ್ಳುವುದನ್ನು ನಿಲ್ಲಿಸಿದವು ಮತ್ತೆ ಕೆಲವು ವಾಹಿನಿಗಳು ಸಿನಿಮಾಗಾಗಿ ತೆಗೆದಿಟ್ಟುಕೊಳ್ಳುತ್ತಿದ್ದ ಇಡುಗಂಟನ್ನು ಕಡಿತಗೊಳಿಸಿದವು. ಇತ್ತೀಚೆಗೆ ಸಿನಿಮಾಗಳಿಗೆ ವಾಹಿನಿಗಳ ಬೆಂಬಲ ಸಿಗುವುದು ಸಹ ದುಸ್ತರ ಎಂಬ ಹಂತ ತಲುಪಿದೆ. ಆದರೆ ಸಿನಿಮಾ ತಯಾರಿಕೆ ಮಾತ್ರ ವಾರ್ಷಿಕವಾಗಿ ಎರಡು ಶತಕ ಮುಟ್ಟುವ ಹಂತಕ್ಕೆ ಬಂದಿದೆ. ಅವುಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆಯು ಸಹ ಈಗ ಸರಿಸುಮಾರು ನೂರೈವತ್ತರ ಹಂತಕ್ಕೆ ಬಂದಿದೆ. ಇದರಿಂದಾಗಿ ಒಂದೊಮ್ಮೆ ವಾರಕ್ಕೊಂದು ಎಂಬಂತೆ ಬಿಡುಗಡೆಯಾಗುತ್ತಿದ್ದ ಕನ್ನಡ ಸಿನಿಮಾಗಳು ಈಗ ವಾರಕ್ಕೆ ಆರು – ಏಳರ ಹಂತ ತಲುಪಿವೆ. 2016ರ ಫೆಬ್ರವರಿಯ ಹೊತ್ತಿಗೆ ಬಿಡುಗಡೆಯಾದ ಸಂಖ್ಯೆ 60 ದಾಟಿದೆ. ಇನ್ನೂ ಹತ್ತು ತಿಂಗಳಲ್ಲಿ ಬಿಡುಗಡೆಯಾಗಬಹುದಾದ ಸಿನಿಮಾದ ಅಂದಾಜು ಮಾಡಬಹುದಾಗಿದೆ. ಒಟ್ಟಾರೆಯಾಗಿ ಸಿನಿಮಾ ತಯಾರಕರಿಗೆ ಆಸರೆಯಾಗಬೇಕಿದ್ದ ಟೆಲಿವಿಷನ್ ಹಕ್ಕು ಕೊಳ್ಳುವ ಮಾರುಕಟ್ಟೆಯು ಸಿನಿಮಾ ತಯಾರಕರನ್ನು ಮಾತ್ರವೇ ಅಲ್ಲದೆ ತನ್ನ ಮಾರುಕಟ್ಟೆಯನ್ನು ಸಹ ತಾನೇ ಕೆಡವಿಕೊಂಡಿತು ಎನ್ನಬಹುದು.

ಈ ಹಾದಿಯಲ್ಲಿ ಒಳ್ಳೆಯದೇನೂ ಬಂದೇ ಇಲ್ಲ ಎನ್ನುವ ಹಾಗಿಲ್ಲ. ಪ್ರತಿ ನೂರರಲ್ಲಿ ಏಳೆಂಟು ಜನ ನೋಡುವ ಸಿನಿಮಾಗಳು ಬಂದಿವೆ. ಹೊಸ ಶತಮನದ ಮೊದಲ ದಶಕದಲ್ಲಿಯೇ “ಮುಂಗಾರು ಮಳೆ”, “ದುನಿಯಾ”, “ಆ ದಿನಗಳು” ತರಹದ ಸಿನಿಮಾಗಳು ಕನ್ನಡ ಚಿತ್ರಗಳ ಚಿಂತನೆಯ ದಿಕ್ಕನ್ನೇ ಬದಲಿಸಿದವು. ಅಲ್ಲಿಯವರೆಗೆ ರಿಮೇಕ್ ಮಾತ್ರ ಗೆಲ್ಲುತ್ತದೆ ಎಂಬಂತಿದ್ದ ಜಾಗದಲ್ಲಿ ಸ್ವತಂತ್ರ ಕೃತಿಗಳು ಬರಲಾರಂಭಿಸಿದವು. ಯೋಗ್ರಾಜ್ ಭಟ್, ಸೂರಿ, ಶಶಾಂಕ್, ಚೈತನ್ಯ, ಸುಮನಾ ಕಿತ್ತೂರು ತರಹದ ಹೊಸ ಹುಡುಗರು ಹೊಸ ಮಾದರಿ ಕಥನ ವಿನ್ಯಾಸಗಳನ್ನು ಪರಿಚಯಿಸಿದರು. ನಂತರ ಪವನ್‍ಕುಮಾರ್, ರಕ್ಷಿತ್ ಶೆಟ್ಟಿಯಂತಹವರು ಡಿಜಿಟಲ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡರು. ಹೀಗೆ ನಮ್ಮ ಜನಪ್ರಿಯ ಸಿನಿಮಾಗಳಲ್ಲಿ ಒಳಿತುಗಳ ಸಂಖ್ಯೆಯೂ ದೊಡ್ಡದಿದೆ. ಅಂತಹ ಒಳ್ಳೆಯದೆನ್ನುವುದನ್ನು ಕನ್ನಡಿಗರು ತಮ್ಮದೇ ಎಂಬಂತೆ ಆರಾಧಿಸಿ ಪೋಷಿಸಿಯೂ ಇದ್ದಾರೆ.

ಜನಪ್ರಿಯ ಸಿನಿಮಾಗಳಿಗೆ ಸಮಾನಂತರವಾಗಿ ತಯಾರಾಗುತ್ತಿದ್ದ ಸದಭಿರುಚಿಯ ಚಿತ್ರ ಚಳುವಳಿಯೂ ಸಹ ಟೆಲಿವಿಷನ್ನಿನಿಂದ ಸಾಕಷ್ಟು ಪಡೆದುಕೊಂಡಿದೆ. ಪಿ.ಶೇಷಾದ್ರಿ, ಲಿಂಗದೇವರು ಮುಂತಾದವರು ತಮ್ಮ ಟೆಲಿವಿಷನ್ ತಯಾರಿಕೆಯ ಅನುಭವವನ್ನು ಬಳಸಿಯೇ ಚಿತ್ರ ತಯಾರಿಕೆಯ ಮಾದರಿಯನ್ನು ಸುಲಭಗೊಳಿಸಿಕೊಂಡಿದ್ದಾರೆ. ಒಂದು ನಿಗದಿತ ಬಜೆಟ್‍ನಲ್ಲಿ ಸಿನಿಮಾ ತಯಾರಿ ಮಾಡುವಾಗ ಟೆಲಿವಿಷನ್ ಅನುಭವ ವೈಯಕ್ತಿಕವಾಗಿ ನನಗೂ ಅನೇಕ ಸಲ ಸಹಾಯಕ್ಕೆ ಬಂದಿದೆ. ಹೀಗಾಗಿ ಕಿರುತೆರೆಯು ಹಿರಿತೆರೆಗೂ – ಹಿರಿತೆರೆಯೂ ಕಿರುತರೆಗೂ ಸಂವಾದಿಯಾಗಿಯೇ ಬೆಳೆದು ಬರುತ್ತಾ ಇವೆ.

ಡಿಜಿಟಲ್ ತಂತ್ರಜ್ಞಾನದ ಆಗಮನ
ಡಿಜಿಟಲ್ ತಂತ್ರಜ್ಞಾನವು ಕಳೆದ ಶತಮಾನದ ಅಂತ್ಯದಲ್ಲಿಯೇ ಪ್ರವೇಶ ಪಡೆಯಿತಾದರೂ ಕನ್ನಡ ಸಿನಿಮಾ ಮತ್ತು ಟೆಲಿವಿಷನ್ ತಯಾರಿಕೆಯಲ್ಲಿ ಹಂತ ಹಂತವಾಗಿ ಪ್ರವೇಶ ಪಡೆಯಿತು. ಇಂದು ಅನಲಾಗ್ ವ್ಯವಸ್ಥೆಯೇ ಎಲ್ಲಿಯೂ ಇಲ್ಲ ಎಂಬಷ್ಟರ ಮಟ್ಟಿಗೆ ಡಿಜಿಟಲ್ ತಂತ್ರವು ಬಳಕೆಗೆ ಬಂದಿದೆ. ಈ ಹಾದಿಯಲ್ಲಿ ಚಿತ್ರ ತಯಾರಿಕೆ ಮತ್ತು ಟೆಲಿವಿಷನ್ ಕತೆಗಳ ತಯಾರಿಕೆಯಲ್ಲೂ ಪಲ್ಲಟಗಳಾಗುತ್ತಿವೆ. ಈ ಎಲ್ಲಾ ಪಲ್ಲಟಗಳು ಇವೆರಡೂ ಮಾಧ್ಯಮಗಳ ನಡುವೆ ಕೊಡುಕೊಳುವಿಕೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಡಿಜಿಟಲ್ ತಂತ್ರಜ್ಞಾನವು ಸಿನಿಮಾದ ಕಥನ ಕಟ್ಟುವ ಕ್ರಮವನ್ನು ಸಂಪೂರ್ಣವಾಗಿ ಬದಲಿಸಿದೆ. ಒಂದೊಮ್ಮೆ ಹೊರಾಂಗಣ ಚಿತ್ರೀಕರಣಕ್ಕೆ ಹಚ್ಚು ಒತ್ತು ಕೊಟ್ಟು ಮಾಡಲಾಗುತ್ತಿದ್ದ ಸಿನಿಮಾ ತಯಾರಿಕೆ ಇಂದು ಒಳಾಂಗಣದಲ್ಲಿ ಹೆಚ್ಚು ಎಂಬಂತಾಗಿದೆ. ಇದಕ್ಕೆ ಗ್ರೀನ್ ಮ್ಯಾಟ್ ತಂತ್ರಜ್ಞಾನದಿಂದ ನಮಗೆ ಬೇಕಾದ ಹಿನ್ನೆಲೆಯನ್ನು ಸೃಷ್ಟಿಸುವುದು ಸುಲಭ ಎಂಬುದು ಮೊದಲ ಕಾರಣ. ಯಾವುದೇ ಕಲಾವಿದರನ್ನ ಹಸಿರು ಪರದೆಯ ಮುಂದೆ ನಿಲ್ಲಿಸಿ ಅವರ ಹಿನ್ನೆಲೆಯಲ್ಲಿ ಯಾವ ದೇಶದ ಯಾವ ಸುಂದರ ತಾಣವನ್ನಾದರೂ ಇಡಬಹುದಾಗಿದೆ. ಇದಲ್ಲದೆ ಸಾಹಸ ದೃಶ್ಯಗಳಲ್ಲಿ ರೋಪ್ ಟ್ರಿಕ್ ಮುಂತಾದವುಗಳನ್ನು ಬಳಸಿ ನಂತರ ಅಂತಿಮ ದೃಶ್ಯಕ್ಕೆ ಬೇಡದ ವಿವರಗಳನ್ನು ಸಲೀಸಾಗಿ ಅಳಿಸಬಹುದಾದ ತಂತ್ರಜ್ಞಾನವೂ ಸಹ ಒಳಾಂಗಣ ಚಿತ್ರೀಕರಣಕ್ಕೆ ಕಾರಣವಾಗಿದೆ. ಹೀಗಾಗಿ ಇಂದು ಬರಹಗಾರ ಕಲ್ಪಿಸಿಕೊಂಡದ್ದೆಲ್ಲವನ್ನೂ ತೆರೆಯ ಮೇಲೆ ತರುವುದು ಸಾಧ್ಯ. ತಯಾರಕನ ಬಳಿ ಹೆಚ್ಚು ಹಣ ಹೂಡವ ಶಕ್ತಿ ಇದ್ದರೆ ಕನ್ನಡದಲ್ಲಿಯೂ “ಬಾಹುಬಲಿ”ಗಳು, “ಅವತಾರ್”ಗಳು ಬರುವುದಕ್ಕೆ ಸಾಧ್ಯ ಎನ್ನುವಂತೆ ಈ ತಂತ್ರಜ್ಞಾನವು ತಯಾರಕನಿಗೆ ಸ್ವಾತಂತ್ರ್ಯ ಕೊಟ್ಟಿದೆ. ಟೆಲಿವಿಷನ್ ತಯಾರಿಕೆಯಲ್ಲಿಯೂ ಈಗ ಅತೀ ಕಡಿಮೆ ವಿದ್ಯುತ್ ಬಳಸಿ ಚಿತ್ರಿಸುವುದು ಸಾಧ್ಯವಾಗಿರುವುದು ಇದೇ ಡಿಜಿಟಲ್ ತಂತ್ರಜ್ಞಾನದಿಂದ. ಈಗಂತೂ ಬೆಳಕು ವ್ಯವಸ್ಥೆಯೂ ಸಂಪೂರ್ಣವಾಗಿ ಎಲ್‍ಇಡಿ ದೀಪಗಳನ್ನು ಬಳಸುವ ಮಟ್ಟಕ್ಕೆ ಬಂದಿವೆ. ಈ ದೀಪಗಳಿಗಾಗಿ ಬೃಹತ್ ಜನರೇಟರ್ ಅಗತ್ಯವಿಲ್ಲ. ಒಂದೊಮ್ಮೆ ಬೃಹತ್ ತಂಡವನ್ನು ಕಟ್ಟಿಕೊಂಡು ಮಾಡುತ್ತಾ ಇದ್ದ ಕೆಲಸವನ್ನು ಈಗ ಅತೀ ಸಣ್ಣ ತಂಡದಿಂದ ಮಾಡುವುದು ಸಾಧ್ಯ. ಆ ಮೂಲಕ ತಯಾರಿಕೆಯ ಬಜೆಟ್‍ನ ಮೇಲೆಯೂ ನಿಯಂತ್ರಣ ಸಾಧಿಸಬಹುದು. ಒಂದೊಮ್ಮೆ ಬಹುಸಮಯ ತೆಗೆದುಕೊಳ್ಳುತ್ತಾ ಇದ್ದದ್ದು ಈ ಹೊಸ ತಂತ್ರಜ್ಞಾನದಿಂದ ಬೇಗ ಮುಗಿಯುತ್ತದೆ. ಇದರಿಂದಲೂ ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ.

ಇದೆಲ್ಲವೂ ತಂತ್ರಜ್ಞಾನ ಒದಗಿಸಿರುವ ಲಾಭವಾದರೆ ಅದಕ್ಕೆ ಸಂವಾದಿಯಾಗಿ ಡಿಜಿಟಲ್ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳಬಲ್ಲ ಕತೆಗಳನ್ನು ಮಾಡುವವರ ಸಂಖ್ಯೆ ಸಿನಿಮಾ ಮತ್ತು ಟಿವಿಯಲ್ಲಿ ಇನ್ನೂ ಕಡಿಮೆಯೇ ಇದೆ. ಟಿವಿಯ ಬಹುತೇಕ ಧಾರಾವಾಹಿಗಳು ಇಂದಿಗೂ ಮಾತಿನ ಮೇಲೆ ನಿಂತಿವೆ. ಸಿನಿಮಾದಲ್ಲಿ ಸಹ ದೊಡ್ಡ ವ್ಯತ್ಯಾಸವಿಲ್ಲ. ಇದಕ್ಕೆ ಅಪವಾದ ಎಂಬಂತೆ ಹೊಸ ತಲೆಮಾರಿನ ಕೆಲವರು ಈ ತಂತ್ರಜ್ಞಾನದ ಸದ್ಬಳಕೆಯಾಗುವಂತಹ ಕತೆಗಳನ್ನು ಕಟ್ಟುತ್ತಾ ಇದ್ದಾರೆ. ಮುಂಬರುವ ದಿನಗಳಲ್ಲಿ ಎಲ್ಲ ಕೊರತೆಗಳನ್ನೂ ನೀಗಬಹುದು ಎನಿಸುತ್ತಿದೆ.

ಇದೇ ಕಾಲದಲ್ಲಿ ನಮ್ಮ ಖಾಸಗಿ ವಾಹಿನಗಳು ಸಂಪೂರ್ಣ ಕಾರ್ಪೋರೇಟ್ ಅಧಿಕಾರಶಾಹಿಯನ್ನು ರೂಢಿಸಿಕೊಳ್ಳುತ್ತಾ ಇವೆ. ಹೀಗಾಗಿ ಕಳೆದ ಐದು ವರ್ಷಗಳಲ್ಲಿ ಸ್ವತಂತ್ರ ಕೃತಿಗಳನ್ನು ಧಾರಾವಾಹಿಯಾಗಿಸುವವರ ಸಂಖ್ಯೆಯೇ ಇಳಿಮುಖವಾಗಿದೆ. ಇದಕ್ಕೆ ಆಯಾ ವಾಹಿನಿಗಳಲ್ಲಿನ ಹಣ ಹೂಡುವ ತೀರ್ಮಾನ ತೆಗೆದುಕೊಳ್ಳುವವರು ಪರಭಾಷಿಕರು ಎಂಬುದು ಪ್ರಧಾನ ಕಾರಣವಾದರೆ, ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆ ವ್ಯವಸ್ಥೆಯು ಭಾರತೀಯರ ಮೂಲ ಸೆಲೆಯಾದ ಕಥನ ಕ್ರಮಗಳನ್ನು ರಿಯಾಲಿಟಿ ಷೋಗಳಿಗೆ ಬದಲಿಸುವ ನಿರಂತರ ಪ್ರಯತ್ನ ಮಾಡಿ ಈಗೀಗ ಯಶಸ್ವಿಯೂ ಆಗಿದೆ. ಹೀಗಾಗಿ ಇಂದು ಕನ್ನಡ ವಾಹಿನಿಗಳಲ್ಲಿ ರಿಯಾಲಿಟಿ ಷೋ ಎಂದು ಕರೆಯಲ್ಪಡುವ ಅಸಡ್ಡಾಳ ಕಾರ್ಯಕ್ರಮಗಳು ಬರುತ್ತಾ ಇರುತ್ತವೆ. ಈ ಕಾರ್ಯಕ್ರಮಗಳು ಸಹ ತಮ್ಮ ಹೂರಣವನ್ನು ಪರಭಾಷೆಯ ಯಶಸ್ವೀ ರಿಯಾಲಿಟಿ ಷೋಗಳಿಂದ ಎತ್ತಿಕೊಂಡದ್ದಾಗಿರುತ್ತವೆ ಎಂಬುದು ಇನ್ನೊಂದು ಸಂಕಟದ ಸಂಗತಿ. ಹೀಗಾಗಿ ಇಂದು ಬಹುತೇಕ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಷೋಗಳು ಮತ್ತು ಧಾರಾವಾಹಿಗಳು ಭಾಷೆಯ ಬಳಕೆಯನ್ನು ಹೊರತು ಪಡಿಸಿ ನಮ್ಮ ಸಂಸ್ಕೃತಿಯ ಸಣ್ಣ ಗುರುತನ್ನು ಸಹ ಉಳಿಸಿಕೊಂಡಿರುವುದಿಲ್ಲ ಎಂಬುದು ಮುಕ್ತಮಾರುಕಟ್ಟೆ ಆರ್ಥಿಕ ನೀತಿಯ ಗೆಲುವು ಮತ್ತು ಸ್ಥಳೀಯ ಸಂಸ್ಕೃತಿಗಳ ಮೇಲೆ ಬಿದ್ದ ಘನವಾದ ಹೊಡೆತ ಎಂದೇ ಹೇಳಬೇಕು.

ಕಿರುತೆರೆಯಂತೆಯೇ ಹಿರಿತೆರೆಯಲ್ಲಿಯೂ ಸಿನಿಮಾ ತಯಾರಿಕೆಯೂ ಸ್ಥಳೀಯತೆಯನ್ನು ತೊರೆದಿರುವುದು ಮತ್ತು ಕೆಲವು ಸಿನಿಮಾಗಳಲ್ಲಂತೂ ಮೂಲ ಸಿನಿಮಾದ ಗ್ರಾಫಿಕ್‍ಗಳನ್ನೇ ಬಳಸಿರುವುದು ಸಹ ಕಾಣಬಹುದು. ಕೆಲವು ರಿಮೇಕ್ ಸಿನಿಮಾಗಳಲ್ಲಿ ನಾಯಕ ಉಡುವ ಕಚ್ಚೆ ಪಂಚೆಯೂ ಸಹ ನೆರೆರಾಜ್ಯಗಳ ಮಾದರಿಯದ್ದಾಗಿರುತ್ತದೆ ಎಂಬುದು ಈ ರಿಮೇಕಗಳು ಕಾಣಿಕೆ. ಇದು ಕಿರುತೆರೆಯನ್ನೂ ಬಿಟ್ಟಿಲ್ಲ ಮೂಲ ಧಾರಾವಾಹಿಯಲ್ಲಿನ ಕರವಾ ಚೌತ್‍ನಂತಹದನ್ನು ನಮ್ಮ ನೋಡುಗರಿಗೂ ಉಣಬಡಿಸುವ ತಯಾರಕರಿದ್ದಾರೆ. ಇದರೊಂದಿಗೆ ಮಾತಿನ ಮರುಲೇಪನ (ಡಬ್ಬಿಂಗ್)ನಂತಹದು ಸಹ ಬಂದು ಸೇರಿಕೊಂಡರೆ ಕನ್ನಡ ದೃಶ್ಯೋದ್ಯಮವು “ನಮ್ಮತನ” ಎಂಬುದಿಲ್ಲದ ಎಡಬಿಡಂಗಿಯಾಗುವ ಸಾಧ್ಯತೆಯೇ ಹೆಚ್ಚು.

ಇವೆಲ್ಲವುಗಳ ನಡುವೆ ಎಲ್ಲವೂ ಕೆಡುಕು ಎನ್ನಲಾಗದ ಹಾಗೆ ಒಳಿತುಗಳನ್ನು ಕೆಲವರು ಅಪವಾದವೆಂಬಂತೆ ಮಾಡುತ್ತಾ ಇದ್ದಾರೆ. ಕೆಲವರು ತಮ್ಮ ಕಥನಗಳನ್ನು ಅನೇಕ ಪ್ರಾದೇಶಿಕ ಸೊಗಡುಗಳ ಮೂಲಕ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ಡಿಜಿಟಲ್ ತಂತ್ರಜ್ಞಾನದ ಸದ್ಬಳಕೆಯಿಂದ “ಲೂಸಿಯಾ”, “ಉಳಿದವರು ಕಂಡಂತೆ” ತರಹದ ಸಿನಿಮಾಗಳನ್ನೂ ಮಾಡುತ್ತಾ ಇದ್ದಾರೆ. ಆ ನಿಟ್ಟಿನಲ್ಲಿ ಗಿರೀಶ್ ಕಾಸರವಳ್ಳಿಯವರು ಈಚೆಗೆ ತಯಾರಿಸಿದ ಎರಡು ಸಾಕ್ಷ್ಯಚಿತ್ರಗಳು ಸಹ ಡಿಜಿಟಲ್ ತಂತ್ರಜ್ಞಾನವನ್ನು ಅತಿ ಎಚ್ಚರಿಕೆಯಿಂದ ನಿರ್ವಹಿಸಿರುವುದನ್ನು ಕಾಣಬಹುದು. ನಮ್ಮ ನಡುವಿನ ಹೊಸ ತಲೆಮಾರಿನ ಕಿರುಚಿತ್ರ ತಯಾರಕರಂತೂ ಡಿಜಿಟಲ್ ತಂತ್ರಜ್ಞಾನವನ್ನು ಅತ್ಯಂತ ಚಂದವಾಗಿ ಬಳಸುತ್ತಾ ಇದ್ದಾರೆ. ಈ ಬಗೆಯಲ್ಲಿ ಯೋಚಿಸುವುದಾದರೆ ಕಿರುತೆರೆಯ ಕಥನಕ್ರಮದಲ್ಲಂತೂ ಅಗಾಧ ಸಾಧ್ಯತೆಗಳಿವೆ. ಅವುಗಳನ್ನು ವಿಶೇಷವಾಗಿ ಧಾರಾವಾಹಿ ತಯಾರಕರು ಸಾಧಿಸಿಕೊಳ್ಳಬೇಕಿದೆ.

ಮುಂಬರುವ ದಿನಗಳು
ತಂತ್ರಜ್ಞಾನ ಬದಲಾದಂತೆ ಕಿರುತೆರೆ ಎಂಬುದು ಕಳೆದ ಎರಡೂವರೆ ದಶಕಗಳಲ್ಲಿ ಸಾಧಿಸಿದ ಎತ್ತರವನ್ನಿರಲಿ, ಆ ತಂತ್ರಜ್ಞಾನವೇ ಕಳೆದುಹೋಗಬಹುದು. ಅದರ ಬದಲಿಗೆ ಮೊಬೈಲ್ ಫೋನಿಗಾಗಿ ಟಿವಿ ಸರಣಿಗಳು ತಯಾರಾಗಬೇಕಾಗಬಹುದು. ಅದಕ್ಕಾಗಿ ಅತ್ಯಂತ ಸಣ್ಣ ಅವಧಿಯ ಕಥನಗಳನ್ನು ತಯಾರಕರು ಕಟ್ಟಬೇಕಾಗಬಹುದು. ಆದರೆ ಹಿರಿತೆರೆ ಎಂಬುದು ಇನ್ನೂ ಬಹುಕಾಲ ಇರುವ ಮಾಧ್ಯಮ. ಈಗ ಬಳಕೆಯಲ್ಲಿರುವ ಪರದೆಗಳಿಗಿಂತ ಭಿನ್ನ ಪರದೆಗಳ ಮೇಲೆ ಚಿತ್ರಗಳನ್ನು ತೋರಿಸುವ ಕ್ರಮಗಳು ಬರಬಹುದು. ಈಗಿರುವ ಐಮ್ಯಾಕ್ಸ್ನಂತಹ ಪರದೆಗಳು ಹೆಚ್ಚಾಗಬಹುದು. ಆ ತಂತ್ರಜ್ಞಾನಕ್ಕೆ ಹೊಂದುವ ಹಾಗೆ ಕಥನಗಳನ್ನು ಕಟ್ಟುವ ಕ್ರಮದ ಜೊತೆಗೆ ಕಲಾತ್ಮಕ ಮತ್ತು ಸದಭಿರುಚಿಯ ಚಿತ್ರಗಳನ್ನು ರೂಪಿಸುವವರಿಗೆ ಹೊಸ ಸಾಧ್ಯತೆÀಗಳ ಲೋಕವು ತೆರೆದುಕೊಳ್ಳಬಹುದು. ಅದಾಗಲೇ ಸಬ್‍ಟೈಟಲಿಂಗ್ ಮುಂತಾದ ತಂತ್ರಜ್ಞಾನದ ಸಹಾಯದಿಂದ ದೊರಕಿರುವ ಲಾಭದಿಂದ ವಿಸ್ತರಣೆಗೊಂಡಿರುವ ಮಾರುಕಟ್ಟೆಯು ಸದಭಿರುಚಿಯ ಚಿತ್ರತಯಾರಕರಿಗೆ ವರದಾನವೇ ಆಗಲಿದೆ.

ಒಟ್ಟಂದದಲ್ಲಿ ಕಿರುತೆರೆ ಮತ್ತು ಹಿರಿತೆರೆಗಳು ಜೊತೆಯಾಗಿ ಸಾಗಬೇಕಾದ ದೋಣಿಗಳು ಎನ್ನಬಹುದು. ಒಂದು ಮತ್ತೊಂದನ್ನು ಸ್ವತಂತ್ರವಾಗಿ ಬೆಳೆಯಲನುವಾಗವಂತೆ ಈಸಬೇಕಿದೆ. ನಮ್ಮದೆಂಬ ಅಸ್ಮಿತೆಯನ್ನು ಕಳಕೊಳ್ಳದೆ ಹೊಸ ತಂತ್ರಜ್ಞಾನವನ್ನು ಬಳಸುವುದನ್ನು ಅಭ್ಯಾಸ ಮಾಡಬೇಕಿದೆ.
– ಬಿ.ಸುರೇಶ
3 ಮಾರ್ಚ್ 2015

Advertisements

0 Responses to “ಗೆಲುವು ಯಾವತ್ತಿಗೂ ಒಳ್ಳೆಯದಕ್ಕೆ ಮಾತ್ರ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: