ಅನುಭವವು ಅಕ್ಷರವಾದಾಗ…

ರೇಣುಕಪ್ಪ ಅವರಿಗೊಂದು ಪತ್ರ
(ರೇಣುಕಪ್ಪ ಅಂಕಣ ಬರಹಕ್ಕೆ ಮುನ್ನುಡಿ)

ಪ್ರಿಯ ರೇಣುಕಪ್ಪ,
ನಮನಗಳು.
ನೀವು ಎರಡು ವಾರಗಳ ಹಿಂದೆ ನಿಮ್ಮ ಲೇಖನಗಳ ಕಂತನ್ನು ನನಗೆ ಇಮೇಲ್ ಮೂಲಕ ಕಳಿಸಿದ್ದಿರಿ. ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಊರೂರು ತಿರುಗುತ್ತಿರುವ ನಾನು ಅದನ್ನು ಓದುವುದು ತಡವಾಯಿತು. ಊರು ತಲುಪಿದ ಕೂಡಲೇ ನಿಮ್ಮ ಬರಹಗಳನ್ನೆಲ್ಲಾ ಓದಿದೆ. ಖುಷಿಯಾಯಿತು. ಈವರೆಗೆ ನನಗೆ ತಿಳಿಯದಿದ್ದ ನಿಮ್ಮ ಮತ್ತೊಂದು ಮಗ್ಗುಲು ಪರಿಚಯವಾಯಿತು.
ಈ ನಿಮ್ಮ ಬರಹಗಳ ಸಂಗ್ರಹಕ್ಕೆ ಒಂದು ಮುನ್ನುಡಿಯನ್ನು ಬರೆದುಕೊಡಿ ಎಂದು ಸಹ ನೀವು ಕೇಳಿದ್ದಿರಿ. ಆದರೆ ಸತ್ಯ ಹೇಳುತ್ತೇನೆ, ನಾನು ಮುನ್ನುಡಿ ಬರೆಯುವಷ್ಟು ದೊಡ್ಡವನಲ್ಲ. ಹಾಗಾಗಿ ನಿಮಗೊಂದು ಪತ್ರ ಬರೆಯುತ್ತಾ ಇದ್ದೇನೆ. ಈ ಮಾತು ಯೋಗ್ಯ ಎನಿಸಿದರೆ ನೀವಿದನ್ನು ಬಳಸಿಕೊಳ್ಳಬಹುದು.
ನನಗೆ ನೆನಪಿದೆ, ನಾನಾಗ “ಸಾಧನೆ” ಎಂಬ ಧಾರಾವಾಹಿ ಮಾಡುತ್ತಾ ಇದ್ದೆ. ಶಿವಮೊಗ್ಗೆಯ ಜನರಿಗೆ ಆ ಧಾರಾವಾಹಿಯ ಮೇಲೆ ವಿಶೇಷ ಪ್ರೀತಿ ಇತ್ತು. ಹೀಗಾಗಿ ಆ ಊರಿನ ಜನರೆಲ್ಲರೂ ಸೇರಿ ನಮ್ಮ ಧಾರಾವಾಹಿಯ ತಂಡಕ್ಕೆ ಸನ್ಮಾನ ಇಟ್ಟುಕೊಂಡಿದ್ದರು. ನಾವೆಲ್ಲರೂ ಆ ಊರಿನಲ್ಲಿ ಇಳಿದಾಗ ಗೆಳೆಯ ಮಂಜುನಾಥ ಹೆಗಡೆಯು ನನಗೆ ಪರಿಚಯಿಸಿದ್ದು ಇಬ್ಬರು ಗೆಳೆಯರನ್ನು. ಒಬ್ಬರು ನೀವು. ಮತ್ತೊಬ್ಬರು ಸೀತಾರಾಂ. ನಿಮ್ಮಿಬ್ಬರ ಸ್ನೇಹ ಅಂದಿನಿಂದ ಇಂದಿನವರೆಗೆ ನನಗೂ ಶಿವಮೊಗ್ಗೆ ನಗರಕ್ಕೂ ನಂಟು ಎಂಬಂತೆ ಉಳಿದುಕೊಂಡಿದೆ. ಇಷ್ಟು ಕಾಲವಾದ ಮೇಲೆ ಇದನ್ನು ಕೇವಲ ಗೆಳೆತನ ಎನ್ನಲಾಗದ ಹಾಗೆ ನೀವು ನನ್ನ ಬಂಧುಗಳಾಗಿದ್ದೀರಿ, ಹಿತೈಷಿಗಳಾಗಿದ್ದೀರಿ. ನನ್ನ ಸಿನಿಮಾ “ಅರ್ಥ”ವನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಿದಾಗಲೂ ನೀವಿಬ್ಬರೂ ತೆಗೆದುಕೊಂಡ ಶ್ರಮದಿಂದ ಹಿಡಿದು, ತೀರಾ ಈಚೆಗೆ ನಾನು ಶಿವಮೊಗ್ಗಕ್ಕೆ ಹೋದಾಗಲೂ ಇಡೀ ದಿನ ನಿಮ್ಮೆಲ್ಲ ಕೆಲಸ ಬದಿಗಿಟ್ಟು ನನ್ನ ಜೊತೆಗಿದ್ದ ನಿಮ್ಮಂತಹ ಗೆಳೆಯರಿಗೆ ನಾನು ಸದಾ ಋಣಿ. ‘ಕಾಮ್ರೇಡ್’ ಸೀತಾರಾಂ ಈಗ ಶಿವಮೊಗ್ಗದ ಅತ್ಯಂತ ಬಿಜಿó ಲಾಯರ್‍ಗಳಲ್ಲಿ ಒಬ್ಬರು. ಆದರೆ ನೀವು ಮಾತ್ರ ಇನ್ನೂ ರಂಗಭೂಮಿಯ ಜೊತೆಗೆ ಗುದ್ದಾಡುತ್ತಾ, ಕಿರುತೆರೆ – ಹಿರಿತೆರೆಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ಸದಾ ನಗುತ್ತಾ ಇರುವ ಜೀವನೋತ್ಸಾಹಿ.
ನೀವು ಉತ್ತಮ ಕಲಾವಿದರೂ ಹೌದು, ರಂಗನಿರ್ದೇಶಕರೂ ಹೌದು. ಶಿವಮೊಗ್ಗ ಜಿಲ್ಲೆಯ ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ನಾಟಕ ಕಲಿಸುತ್ತಾ ಇದ್ದೀರಿ. ಜೊತೆಗೆ ನಮ್ಮ ಕೆಲವು ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿಯೂ ಇದ್ದೀರಿ. ನಿಮ್ಮ ಎತ್ತರದ ಕಾರಣವಾಗಿ ನಮಗೂ ತುಂಬಾ ಪಾತ್ರಗಳನ್ನು ಇವರಿಗೆ ಕೊಡಲಾಗಿಲ್ಲ ಎಂಬುದು ಸತ್ಯವೇ ಆದರೂ ನೀವು ಮಾತ್ರ ತಪ್ಪದೇ ಸದಾ ಜೊತೆಗಿದ್ದು ನಾವು ಮಾಡಿರಬಹುದಾದ ತಪ್ಪುಗಳನ್ನು ಮಾತಾಡದೆಯೇ ನೆನಪಿಸುತ್ತಾ ಇರುತ್ತೀರಿ.
ಇಂತಹ ರೇಣುಕಪ್ಪ ಆದ ನೀವು, ಈಗ ನಿಮ್ಮ ಅನುಭವಗಳನ್ನೆಲ್ಲಾ ಒಂದೆಡೆ ಸೇರಿಸಿ ಪ್ರಕಟಿಸುತ್ತಾ ಇದ್ದೀರಿ. ಇದು ವೈಯಕ್ತಿಕವಾಗಿ ನನಗೆ ಸಂತೋಷದ ವಿಷಯ. ರಂಗಭೂಮಿಯ ಅನುಭವಗಳು ಅಕ್ಷರವಾಗುವುದು ಇವತ್ತಿನ ತುರ್ತು. ರಂಗಭೂಮಿಯಷ್ಟು ಜಾತ್ಯಾತೀತವಾದ ಮಾಧ್ಯಮ ಮತ್ತೊಂದಿಲ್ಲ. ಅದು ಸಮಾಜದ ಎಲ್ಲಾ ಒಡಕುಗಳನ್ನು ಕೂಡಿಸಿ, ಏಕತೆಯನ್ನು ಸಾಧಿಸಬಲ್ಲ ಶಕ್ತಿಯುಳ್ಳದ್ದು. ಹಾಗಾಗಿಯೇ ಇಲ್ಲಿರುವ ಲೇಖನಗಳು ರಂಗಪ್ರೀತಿಯುಳ್ಳವರಿಗೆ ಖಂಡಿತ ಆಪ್ತವಾಗಬಲ್ಲದು ಎಂದು ನನ್ನ ಅನಿಸಿಕೆ.
ಅಂಕಣ ಬರಹ
ನೀವು ಶಿವಮೊಗ್ಗೆಯ ಜಿಲ್ಲಾ ಪತ್ರಿಕೆಯೊಂದರಲ್ಲಿ ನಿರಂತರವಾಗಿ ಬರೆಯುತ್ತಾ ಇದ್ದ ಅಂಕಣಗಳನ್ನು ಇಲ್ಲಿ ಸಂಗ್ರಹ ಯೋಗ್ಯ ಪುಸ್ತಕವಾಗಿಸುತ್ತಾ ಇದ್ದೀರಿ. ಅದಕ್ಕಾಗಿ ಅಭಿನಂದನೆಗಳು. ಈ ಅಂಕಣ ಬರಹದ ಪ್ರಧಾನ ಸಮಸ್ಯೆ ಎಂದರೆ ಇದಕ್ಕೆ ಸಿಗುವ ಜಾಗದ ಕೊರತೆ. ಅದೂ ರಂಗಭೂಮಿ ಮತ್ತು ಸಾಂಸ್ಕøತಿಕ ವಿವರವನ್ನುಳ್ಳ ಲೇಖನ ಎಂದರೆ ವಾರಕ್ಕೆ ಐನೂರು ಪದಗಳ ಒಳಗಿನ ಲೇಖನವೇ ಆಗಬೇಕು. ಹೀಗಾಗಿ ಅಂಕಣ ಬರಹವೊಂದಕ್ಕಾಗಿ ಆರಿಸಿಕೊಂಡ ವಿಷಯವೊಂದರ ಎಲ್ಲಾ ಮಗ್ಗುಲುಗಳನ್ನು ತಾಗಿ, ವಿಶ್ಲೇಷಿಸುವಷ್ಟು ಜಾಗವಿರುವುದಿಲ್ಲ. ಇಂತಲ್ಲಿ ಅನುಭವೀ ಪತ್ರಕರ್ತರು ಆ ಮಿತಿಯನ್ನೇ ಒಂದು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ. ಅದು ಎಲ್ಲರಿಗೂ ಸಾಧ್ಯವಾಗುವಂತಹದಲ್ಲ. ಈ ಪುಸ್ತಕದಲ್ಲಿನ ಅಂಕಣ ಬರಹಗಳಲ್ಲೂ ನೀವು ಅಂತಹ ಸಮಸ್ಯೆಗಳನ್ನೆದುರಿಸಿರುವುದು ಕಾಣುತ್ತದೆ. ಆದರೂ ಪಟ್ಟುಬಿಡದೆ ಅನೇಕ ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸಲು ಪ್ರಯತ್ನಿಸಿದ್ದೀರಿ. ಇಲ್ಲಿ ಶಾಲೆಗಳಲ್ಲಿ ಮಕ್ಕಳನ್ನು ರಂಗಚಟುವಟಿಕೆಗೆ ಕಳಿಸಿದ ಪೋಷಕರನ್ನು ಕುರಿತ ಲೇಖನವಲ್ಲದೆ, ಜಾತಿಗಣತಿ, ಡಬ್ಬಿಂಗ್, ಆಧುನಿಕ ನಟರ ಅಬ್ಬರದ ಸಿನಿಮಾಗಳು, ಶಿವಮೊಗ್ಗೆಯ ರಂಗಚಟುವಟಿಕೆಯ ವಿವರಗಳು, ಒಳ್ಳೆಯ ಅಧಿಕಾರಿಗಳು – ಹೀಗೆ ಹಲವು ಹತ್ತು ವಿಷಯಗಳನ್ನು ಲೇಖನವಾಗಿಸಿದ್ದೀರಿ. ಇವು ಪೂರ್ಣ ಪ್ರಮಾಣದ ಲೇಖನಗಳಲ್ಲ. ಆದರೆ ಒಬ್ಬ ಪ್ರಮಾಣಿಕ ರಂಗಕರ್ಮಿಯ ಮನದಳಲು ಎಂದು ಖಂಡಿತ ಗುರುತಿಸಬಹುದು. ಹಾಗಾಗಿ ಈ ಪುಸ್ತಕವು ಓದುಗನಿಗೆ ನಮ್ಮದೇ ಮಾತನ್ನು ಮತ್ಯಾರೋ ಆಡುತ್ತಾ ಇದ್ದಾರೆ ಎಂದೆನಿಸಬಹುದು. ಆ ಮೂಲಕ ನಿಮ್ಮ ಉದ್ದೇಶವು ಗೆದ್ದಿದೆ ಎನ್ನಬಹುದು.
ಯಾವುದೇ ಲೇಖನದ ಉದ್ದೇಶವೇ ಓದುಗನನ್ನು ಅರೆಕ್ಷಣ ಚಿಂತಿಸುವಂತೆ ಮಾಡುವುದು ಮತ್ತು ಅರೆಕ್ಷಣ ತಾನೂ ಸಹ ಇದೇ ಬಗೆಯ ಆಲೋಚನೆಯವನಲ್ಲವೇ ಎಂಬ ಭಾವಕ್ಕೆ ತರುವುದಾಗಿರುತ್ತದೆ. ಆ ಹಿನ್ನೆಲೆಯಲ್ಲಿ ನಿಮ್ಮÀ ಮಾತು ಈ ಸಮಾಜದ ಆಳುವ ವರ್ಗದಲ್ಲಿ ಪಾತಿನಿಧ್ಯ ಸಿಗದ ಬಡವರ ಮಾತಾಗಿದೆ. ಇಂದಿನ ಚುನಾವಣೆಗಳು ಹೇಗೆ ದುಡ್ಡಿರುವವರು ಮಾತ್ರ ಭಾಗವಹಿಸಬಹುದಾದ ದಂಧೆಯಾಗಿದೆ ಎಂಬುದನ್ನು ಹೇಳುತ್ತಲೇ ನಮ್ಮ ಸಂವಿಧಾನದ ಮೂಲಭೂತ ಆಶಯವಾದ ಸಮಾಜದ ಸಕಲ ವರ್ಗಗಳ ಪ್ರತಿನಿಧಿಗಳು ನಡೆಸುವ ಸರ್ಕಾರ ರಚನೆಯಾಗಬೇಕೆಂಬುದನ್ನು ನಮ್ಮ ಆಳುವ ವರ್ಗಗಳು ಹೇಗೆ ಬದಲಿಸುತ್ತಾ ದುಡ್ಡುಳ್ಳವರ ಹಿಡಿತಕ್ಕೆ ತೆಗೆದುಕೊಂಡಿದೆ ಎಂಬುದನ್ನು ನಿಮ್ಮ ಹಲವು ಲೇಖನಗಳು ಸೂಚಿಸುತ್ತಿವೆ. ಇದು ನಮ್ಮ ದೇಶದ ಸಧ್ಯದ ಸಮಸ್ಯೆಗಳಲ್ಲಿ ಪ್ರಧಾನವಾದುದು. ಈ ವಿಷಯವಾಗಿ ಅಂಗಡಿ – ಮುಂಗಟ್ಟುಗಳಲ್ಲಿ, ಕಾಫಿ ಕಟ್ಟೆಗಳಲ್ಲಿ ಪ್ರತಿನಿತ್ಯ ಚರ್ಚೆಯಾಗುತ್ತಿದೆ. ಇಂದು ವಿಧಾನಪರಿಷತ್ತಿನ ಚುನಾವಣೆಗೂ ಕೋಟ್ಯಾಂತರ ಖರ್ಚುಮಾಡುವಂತಾಗಿರುವುದು ಮತ್ತು ಅಲ್ಲಿ ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧ್ಯ ಇಲ್ಲದಂತಾಗಿರುವುದು, ಕೇವಲ ಶ್ರೀಮಂತ ಉದ್ಯಮಿಗಳು ಮಾತ್ರ ಇರುವಂತಾಗಿರುವುದು ಈ ದೇಶಕ್ಕೆ ಅಂಟಿರುವ ದೊಡ್ಡ ರೋಗವೇ. ಇದರಿಂದಾಗಿ ನಮ್ಮಲ್ಲಿ ಬರುತ್ತಾ ಇರುವ ಹೊಸ ಕಾನೂನುಗಳು ಬಡವರ ರಕ್ತ ಹೀರುತ್ತಿವೆಯೇ ಹೊರತು ಶ್ರೀಮಂತರು ಸುಲಭವಾಗಿ ನುಣುಚಿಕೊಳ್ಳುವಂತಾಗಿದೆ. ಇದು ನಮ್ಮೆಲ್ಲರನ್ನೂ ಕಾಡುತ್ತಾ ಇರುವಂಥಹ ವಿಷಯ. ಈ ವಿಷಯವಾಗಿಯೇ ನೀವು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಲೇಖನ ಬರೆದಿದ್ದೀರಿ. ಅದರಲ್ಲೂ ಕೆಲವು ಸಹಕಾರೀ ಸಂಘಗಳು ಹೇಗೆ ತಮ್ಮ ತಮ್ಮಲ್ಲೇ ಮಾತಾಡಿಕೊಂಡು ಚುನಾವಣೆ ಆಗದೇ ಸರ್ವಾನುಮತದ ಆಯ್ಕೆಯಾಗುವಂತೆ ಮಾಡಿದವು ಎಂಬುದನ್ನು ಸೂಚಿಸುತ್ತಿದ್ದೀರಿ. ಮೇಲ್ನೋಟಕ್ಕೆ ಇಂತಹದು ಭಾರೀ ದುಡ್ಡು ಉಳಿಸುವ ಕೆಲಸವಾಗಿ, ಆದರ್ಶಮಯವಾಗಿ ಕಂಡರೂ ಇದರ ಹಿಂದೆ ಇರುವುದು ಅದೇ ಹಳೆಯ ಯಾಜಮಾನ್ಯ ಸಂಸ್ಕøತಿ. ಪ್ರಜಾಪ್ರಭುತ್ವದ ಗೆಲುವಿರುವುದು ಚುನಾವಣೆಯ ಮಾರ್ಗದಲ್ಲಿ ಮಾತ್ರ. ಅದಕ್ಕೆ ಹೆಚ್ಚು ಖರ್ಚಾಗುತ್ತದೆ ಎನ್ನುತ್ತಾ ಚುನಾವಣೆಯನ್ನೇ ತಪ್ಪಿಸಿ, ತಮಗೆ ಬೇಕಾದ ಗುಂಪನ್ನು ಸೇರಿಸಿಕೊಂಡು ಸಹಕಾರಿ ಸಂಘಗಳು ನಡೆಯುವಂತಾಗುವುದು ಸಹಕಾರಿ ತತ್ವಕ್ಕೂ ಅಪಾಯಕಾರಿ. ನಿಮ್ಮ ಲೇಖನ ನನ್ನ ನಿಲುವಿನದಲ್ಲ. ಅವರು ಚುನಾವಣೆಯಲ್ಲಿ ಹಣ ಉಳಿಸಿದರು ಎಂಬುದನ್ನು ನೀವು ಹೊಗಳುತ್ತೀರಿ. ಆ ಮೂಲಕ ನಾಯಕರನ್ನು ಗೌರವಿಸುತ್ತೀರಿ. ನಿಮ್ಮ ಇಡೀ ಅಂಕಣ ಬರಹವು ಸಹಕಾರೀ ತತ್ವದಲ್ಲಿ ಹೀಗೆ ಹಣ ಉಳಿದರೆ ಆಗುವ ಲಾಭವನ್ನು ಕುರಿತು ಮಾತಾಡುತ್ತದೆ. ಅದಾಗಲೇ ನಾನು ಪ್ರಸ್ತಾಪಿಸಿದ ಲೇಖನಕ್ಕೆ ಇರುವ ಪದಗಳ ಮಿತಿಯ ಹಿನ್ನೆಲೆಯಲ್ಲಿ ಇಂತಹ ವಿಷಯದ ಎಲ್ಲಾ ಮಗ್ಗುಲುಗಳನ್ನು ಚರ್ಚಿಸದೆ ಮೇಲ್‍ಸ್ತರದಲ್ಲಿ ಉಳಿಯುತ್ತದೆ.
ಇದೇ ಮಾದರಿಯ ಲೇಖನ ಈ ರಾಜ್ಯದಲ್ಲಿ ಆದ ಜಾತಿಗಣತಿಯನ್ನು ಕುರಿತಂತೆಯೂ ಇದೆ. ಇದಕ್ಕಾಗಿ ಸರ್ಕಾರವು ಕನಕದಾಸರ ಹಾಡನ್ನು ಬಳಸಿ ಪ್ರಚಾರ ಮಾಡಿದ್ದರ ವೈರುಧ್ಯವನ್ನು ಸೂಚಿಸುತ್ತಲೇ ಜಾತಿಯೇ ಬೇಡ ಎಂಬ ಕಾಲಘಟ್ಟದಲ್ಲಿ ಜಾತಿಗಣತಿ ಬೇಕೇ? ಎಂದು ನೀವು ಪ್ರಶ್ನಿಸುತ್ತೀರಿ. ಮೇಲ್ನೋಟಕ್ಕೆ ಈ ವಾದ ಸರಿಯೇ. ಬಲಪಂಥೀಯ ಶಕ್ತಿಗಳು ಸಹ ಇಂತಹುದನ್ನೇ ಬಯಸುತ್ತವೆ. ಆದರೆ ಈ ದೇಶದಲ್ಲಿ ಮೀಸಲಾತಿ ವ್ಯವಸ್ಥೆ ಬಂದು ಇಷ್ಟು ದಶಕಗಳಾದರೂ ಆ ಯೋಜನೆಯ ನಿಜವಾದ ಲಾಭ ಪಡೆದವರು ಯಾರು, ಮತ್ತು ಪಡೆಯಲಾಗದೆ ಉಳಿದವರು ಯಾರು ಎಂಬುದನ್ನು ಪ್ರಾಕ್ಟಿಕಲ್ ನೆಲೆಯಲ್ಲಿ ಗಮನಿಸಿದರೆ ಕಾಣುವ ಸಂಗತಿ ನಿಜಕ್ಕೂ ಬೇಸರ ತರಿಸುತ್ತದೆ. ಈಗಲೂ ಭಾರತದ ಶೇಕಡಾ 70ರಷ್ಟು ಜನ ದಿನಕ್ಕೆ 20ರೂಪಾಯಿ ಆದಾಯದಲ್ಲಿ ಬದುಕುತ್ತಾ ಇದ್ದಾರೆ ಎಂಬುದು, ಮತ್ತು ಅಂತಹವರನ್ನು ಮತ್ತಷ್ಟು ಕೆಳಕ್ಕೆ ತಳ್ಳುವಂತಹ ಯೋಜನೆಗಳನ್ನೇ ನಮ್ಮ ಸರ್ಕಾರಗಳು ಮಾಡುತ್ತಾ ಇರುವುದು ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಜಾತಿಗಣತಿಯ ಅವಶ್ಯಕತೆ ಇದೆ. ಸರಿಯಾದ ಅಂಕಿ-ಸಂಖ್ಯೆ ದೊರೆತಾಗ ಮಾತ್ರ ಮೀಸಲಾತಿ ಯೋಜನೆಯ ಅನುಷ್ಠಾನದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಸಾಧ್ಯ. ಹೀಗಾಗಿ ನೀವು ಬಯಸುವ ಜಾತಿಯನ್ನು ಮೀರಿದ ವ್ಯವಸ್ಥೆಯೊಂದನ್ನು ಸೃಷ್ಟಿಸಬೇಕೆಂದರೆ ಜಾತಿಯನ್ನೇ ಮತರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ರಾಜಕೀಯ ನಾಯಕರುಗಳನ್ನು ಮೊದಲು ದೂರ ಕಳಿಸಬೇಕಾಗಿದೆ. ಅಂತಹ ಹಲವು ನಾಯಕರುಗಳು ಕಳೆದ ಎರಡು ದಶಕದಲ್ಲಿ ನಮ್ಮ ರಾಜ್ಯವನ್ನೂ ಹರಿದು ಮುಕ್ಕಿದ್ದಾರೆ. ಇನ್ನು ಮುಂದಾದರೂ ಸಾಮಾಜಿಕ ನ್ಯಾಯವೆಂಬುದು ಅದರ ನಿಜವಾದ ಅರ್ಥದಲ್ಲಿ ಹಿಂದುಳಿದ ಮತ್ತು ದಲಿತರ ಕುಟುಂಬಗಳಿಗೆ ದೊರೆಯಬೇಕು. ಮೀಸಲಾತಿ ಯೋಜನೆಯು ಇನ್ನೊಂದೆರಡು ದಶಕದ ಒಳಗೆ ಸಮಾನತೆಯನ್ನು ಮೂಡಿಸಿ, ಮುಂದೊಂದು ದಿನ ಅದು ಯಶಸ್ವಿಯಾಯಿತು ಎಂದು ಹೇಳುವಂತಾಗಬೇಕು. ಆ ಹಿನ್ನೆಲೆಯಲ್ಲಿ ಜಾತಿ ಮತ್ತು ಉಪಜಾತಿಗಳ ಗಣತಿಯ ಅಗತ್ಯವಿದೆ. ಪ್ರಾಯಶಃ ಸಮಾಜೋ ಸಂಸ್ಕøತಿ ಅಧ್ಯಯನದ ಹಿನ್ನೆಲೆಯಿಂದ ಜಾತಿಗಣತಿಯ ವಿಷಯವನ್ನು ಗಮನಿಸದೆ ಜನಪ್ರಿಯ ಪ್ರವಚನಕಾರರ ಮಾತುಗಳ ಪ್ರಭಾವದಿಂದ ನೀವು ನಿಮ್ಮ ಲೇಖನವನ್ನು ಕಟ್ಟಿದ ಹಾಗಿದೆ. ಹಾಗಾಗಿ ನಿಮ್ಮ ಲೇಖನದ ಮಾತುಗಳು ಜಾತಿಗಣತಿ ಅನಗತ್ಯ ಎಂದು ಹೇಳುತ್ತಿದೆ. ಇರಲಿ… ಪ್ರಾಯಶಃ ಮುಂಬರುವ ದಿನಗಳಲ್ಲಿ ನೀವು ಬರೆವ ಲೇಖನಗಳು ಒಂದು ವಿಷಯದ ಎಲ್ಲಾ ಮಗ್ಗುಲುಗಳನ್ನೂ ನೋಡುವ ಹಾಗಾಗಬಹುದು ಎಂದು ಭಾವಿಸುತ್ತೇನೆ.
ಈ ಲೇಖನಗಳಿಗೆ ವೈರುಧ್ಯ ಎಂಬಂತೆ ತೀರ್ಥಹಳ್ಳಿಯ ಹತ್ತಿರದ ಪುಟ್ಟ ಜಾಗವೊಂದರಲ್ಲಿ ರಂಗಭೂಮಿ ಕಟ್ಟಲು ಅಲ್ಲಿನ ನಾಯಕರು ಸಮಾನತೆ ಮತ್ತು ಸಹಕಾರ ತತ್ವವನ್ನು ಬಳಸಿದ್ದನ್ನು, ನಾಟಕ ಶಿಬಿರಕ್ಕೆ ಬರುವವರು ಆರು ಕೆಜಿ ಅಕ್ಕಿಯನ್ನು ಶುಲ್ಕವಾಗಿ ನೀಡಬೇಕಿದ್ದುದನ್ನು ಸಹ ನಿಮ್ಮ ಒಂದು ಲೇಖನ ಪ್ರಸ್ತಾಪಿಸುತ್ತದೆ. ಇಂತಹ ಪ್ರಯತ್ನದ ಮೂಲಕ ಆ ನಾಟಕ ಶಿಬಿರವು ಹೇಗೆ ಜನರನ್ನು ಒಗ್ಗೂಡಿಸಿತು ಎಂದು ಸಹ ಆ ಲೇಖನ ತಿಳಿಸುತ್ತದೆ. ಇಂತಹವು ಈ ನಾಡಿನ ಪ್ರತೀ ವಲಯದಲ್ಲೂ, ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಿದೆ. ನಮ್ಮ ನಾಡಿಗರು ತಮಗೆ ಬೇಕಾದಂತಹ ಶಾಲೆಗಳನ್ನು ತಾವೇ ನಡೆಸುವಂತಾದಾಗ ಮಾತ್ರ ನಮ್ಮ ಮಕ್ಕಳು ನಮ್ಮವರಾಗುತ್ತಾರೆ. ಇಲ್ಲವಾದರೆ ಬಹುತೇಕ ರಾಜಕಾರಣಿಗಳು ಕೇವಲ ಲಾಭಕ್ಕಾಗಿ ನಡೆಸುತ್ತಾ ಇರುವ ವಿದ್ಯಾಸಂಸ್ಥೆಗಳು ಈ ನಾಡಲ್ಲಿ ಮತ್ತಷ್ಟು ಬಡವ – ಬಲ್ಲಿದರ ನಡುವಿನ ಕಂದರವನ್ನು ಹೆಚ್ಚಿಸುತ್ತವೆ ಎಂಬುದನ್ನು ನಾವು ನೆನಪಲ್ಲಿ ಇಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಈ ಸಣ್ಣ ಲೇಖನ ನಮ್ಮ ನಾಡು ಕಟ್ಟುವುದಕ್ಕೆ ಅತ್ಯದ್ಭುತ ಔಷಧವಾಗಬಲ್ಲ ಮಾದರಿಯೊಂದನ್ನು ಸಹ ನೀಡುತ್ತದೆ.
ಪಯಣದ ಹಾದಿಯಲ್ಲಿ
ನಿಮ್ಮಂತಹ ಕಿರಿಯ (ದೇಹದ ಲೆಕ್ಕದಿಂದ?) ರಂಗಕರ್ಮಿಗಳ ರಂಗಪಯಣ ಸುಲಭದ್ದಲ್ಲ. ಇಂದು ಜಿಲ್ಲಾ ಕೇಂದ್ರಗಳಲ್ಲಿ ನಾಟಕಗಳನ್ನು ಮಾಡಿಸುವುದಕ್ಕೆ ಇರುವ ಅನೇಕ ತಾಪತ್ರಯಗಳಿವೆ. ಅವುಗಳಲ್ಲಿ ಕೆಲವು ವಿವರಗಳನ್ನು ನಿಮ್ಮ ಲೇಖನಗಳಲ್ಲಿ ದಾಖಲಿಸಿದ್ದೀರಿ. ಸರ್ಕಾರೀ ರಂಗಮಂದಿರಗಳು ಹೇಗೆ ಅಧಿಕಾರಿಗಳ ಹಿಡಿತದಲ್ಲಿ ಇರುತ್ತವೆ. ಇದರಿಂದಾಗಿ ಪ್ರದರ್ಶನಗಳಿಗೆ ಆಗುವ ಅಡೆತಡೆಗಳೇನು ಎಂಬುದು ನಿಮ್ಮ ಲೇಖನದಿಂದ ಸ್ಪಷ್ಟವಾಗುತ್ತದೆ. ಸರ್ಕಾರ ಎಂದರೇ ಜನರದ್ದು ಎಂಬುದನ್ನು ಮರೆತ ಅಧಿಕಾರಿಗಳಿರುವವರು ಇರುವವರೆಗೆ ಇಂತಹ ಸಮಸ್ಯೆಗಳು ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಇರುತ್ತದೆ. ಈ ಅಧಿಕಾರಿಗಳನ್ನು ಮಣಿಸಬಲ್ಲ ನಾಯಕರುಗಳ ಕೊರತೆಯೂ ಈ ನಾಡಿಗಿದೆ. ಅಪರೂಪಕ್ಕೊಮ್ಮೆ ಜನರ ಸಮಸ್ಯೆಗೆ ಸ್ಪಂದಿಸುವ ಅಧಿಕಾರಿಗಳು ಸಹ ಇರುತ್ತಾರೆ ಎಂಬುದನ್ನು ನಿಮ್ಮ ಮತ್ತೊಂದು ಲೇಖನ ದಾಖಲಿಸುತ್ತದೆ. ಅಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಬೇಕಿದೆ. ಈ ಹಿನ್ನೆಲೆಯಲ್ಲಿ ನೀವು ದಾಖಲಿಸುವ ವಿದ್ಯುತ್ ಕೈಕೊಟ್ಟಾಗ ಬಳಸಿದ ಬಸ್ಸುಗಳ ದೀಪದ ಪ್ರಯೋಗ ನಿಜಕ್ಕೂ ವಿಶಿಷ್ಟವಾದುದು. ಅದೇ ಮಾದರಿಯ ಸಹಾಯ ಸರ್ಕಾರವೇ ನಡೆಸುವ ಕಾರ್ಯಕ್ರಮಕ್ಕೆ ಸಿಗಲಿಲ್ಲ ಎಂದು ಸಹ ನೀವು ದಾಖಲಿಸುವಾಗ ನಮ್ಮ ಸರ್ಕಾರೀ ವ್ಯವಸ್ಥೆಯಲ್ಲಿ ಇರುವ ಕೊರತೆಗಳು ಕಾಣುತ್ತವೆ. ಇಂತಹವುಗಳಿಗೆ ನಿಮ್ಮ ಲೇಖನಗಳಲ್ಲಿ ಪರಿಹಾರಗಳನ್ನು ಸಹ ಸೂಚಿಸಲಾಗಿದೆ. ಪ್ರಾಯಶಃ ಈ ಲೇಖನಗಳನ್ನು ಓದಿದ ಜನರೇ ನಮ್ಮ ಸರ್ಕಾರೀ ವ್ಯವಸ್ಥೆಯಲ್ಲಿ ಆಗಬೇಕಾದ ಮಾರ್ಪಾಡುಗಳನ್ನು ಮಾಡಬಲ್ಲರು ಎಂಬಾಸೆ ನನ್ನದು.
ಈ ಹಾದಿಯಲ್ಲಿ ದೇವಸ್ಥಾನವೊಂದರ ಸುವರ್ಣ ಮಹೋತ್ಸವವನ್ನು ನೆನೆಯುತ್ತಾ ಅಲ್ಲಿ ತಮ್ಮ ಬಾಲ್ಯದಲ್ಲಿ ಮಾಡಿದ ಕ್ಯಾಂಪ್ ಒಂದನ್ನು ನಿಮ್ಮ ಲೇಖನ ಒಂದರಲ್ಲಿ ನೆನಪಿಸಿಕೊಂಡಿದ್ದೀರಿ. ಆ ದಿನಗಳಲ್ಲಿ ನೀವು ಮಾಡಿದ ‘ಹಸಿವಿ’ನ ಅಭಿನಯ ಕಂಡ ಮುದುಕಿಯೊಬ್ಬಳು ತೋರಿದ ಕಕ್ಕುಲಾತಿಯನ್ನು ನೆನೆಯುತ್ತಾರೆ. ರಂಗಪ್ರದರ್ಶನದ ನಿಜವಾದ ಸುಖ ಇರುವುದು ಇಂತಹ ಪ್ರಸಂಗಗಳಲ್ಲಿ. ನೋಡುಗರೊಬ್ಬರು ನಟನನ್ನು ಪಾತ್ರವಾಗಿಯೇ ಭ್ರಮಿಸಿ ಮಾತಾಡಿಸಿದ್ದಾರೆ ಎಂಬುದು ಆಯಾ ಪ್ರದರ್ಶನದ ಗೆಲುವು ಮತ್ತು ಯಶಸ್ಸಿನ ಸೂಚಿಯೇ ಆಗಿರುತ್ತದೆ. ನಿಮ್ಮ ಈ ಲೇಖನಗಳು ನನಗೂ ನನ್ನ ಬಾಲ್ಯಕಾಲದ ರಂಗಭೂಮಿಯ ಒಡನಾಟವನ್ನು ನೆನಪಿಗೆ ತಂದಿದ್ದು ಹೌದು. ನಮ್ಮ ಬಾಲ್ಯದ ಪರಿಸರವೇ ನಮ್ಮನ್ನು ರೂಪಿಸುವ ದೊಡ್ಡ ಸಾಧನ. ಆ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಿಗೂ ಸಹ ಅಂತಹ ಆರೋಗ್ಯಕರ ಪರಿಸರವನ್ನು ಕಟ್ಟಿಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದನ್ನು ಸಹ ನಿಮ್ಮ ಲೇಖನಗಳು ತಿಳಿಸುತ್ತಿವೆ. ಈ ಮಾತುಗಳು ನಮಗೆಲ್ಲರಿಗೂ ಮಾದರಿಯಾಗಬೇಕಿದೆ.
ನೀವಾದರೂ ಬದುಕುತ್ತಾ ಇರುವುದು ಕನ್ನಡದ ಸಾಂಸ್ಕøತಿಕ ನಗರಿ ಎಂದೇ ಪ್ರಖ್ಯಾತವಾಗಿರುವ ಶಿವಮೊಗ್ಗೆಯಲ್ಲಿ. ಒಂದು ಕಾಲಕ್ಕೆ ಈ ನಾಡಿನ ಬಹುತೇಕ ಸಾಹಿತ್ಯಿಕ ಮತ್ತು ರಾಜಕೀಯ ಚಳುವಳಿಗೆ ಕೇಂದ್ರವಾಗಿದ್ದ ಶಿವಮೊಗ್ಗ ಇಂದು ಬಲಪಂಥೀಯ ರಾಜಕಾರಣಿಗಳ ಪ್ರಯೋಗಶಾಲೆಯಾಗಿದೆ ಎಂಬುದು, ಅದರಿಂದಾಗಿ ಶಿವಮೊಗ್ಗದ ಸಾಂಸ್ಕøತಿಕ ಚಳುವಳಿಗೆ ಈ ಹಿಂದೆ ಇದ್ದ ಬಿರುಸು ಕಾಣೆಯಾಗಿದೆ ಎಂಬುದು ಕಣ್ಣಿಗೆ ಕಾಣುತ್ತಿದೆ. ಇಂತಹುದನ್ನು ದಾಟಿಕೊಳ್ಳುವ ಹಿನ್ನೆಲೆಯಲ್ಲಿ ನಿಮ್ಮಂತಹ ಅನೇಕ ರಂಗಕರ್ಮಿಗಳು ಒಟ್ಟಾಗಬೇಕಿದೆ. ಪ್ರಾಯಶಃ ನಿಮ್ಮ ಈ ಪುಸ್ತಕದಲ್ಲಿನ ಅನೇಕ ಲೇಖನಗಳು ಆ ಕಾರ್ಯವನ್ನು ಮಾಡಬಲ್ಲವು ಎಂದು ನಾನು ಭಾವಿಸುತ್ತೇನೆ.
ಇಂತಹ ಲೇಖನಗಳನ್ನು ಅಂಕಣವಾಗಿ ಬರೆದು ಈಗ ಪ್ರಕಟಿಸುವ ಮೂಲಕ ನಿಮ್ಮ ಬದುಕಿನ ಬಹುದೊಡ್ಡ ದಾಖಲಾತಿಯನ್ನು ಸಹ ನೀವು ಮಾಡಿಕೊಂಡಿದ್ದೀರಿ ಎಂದರೆ ತಪ್ಪಾಗಲಾರದು. ಇದು ನಿಮಗೆ ಈ ಪುಸ್ತಕದಿಂದ ದೊರೆಯಬಹುದಾದ ಆನಂದ ಎಂದು ನಾನು ಭಾವಿಸಿದ್ದೇನೆ. ಈ ಪುಸ್ತಕಕ್ಕೆ ನಾಲ್ಕು ಮಾತು ಬರೆಯಲು ಅವಕಾಶ ನೀಡಿ ನನಗೂ ನಿಮ್ಮ ಆನಂದದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟಿದ್ದೀರಿ. ಅದಕ್ಕಾಗಿ ನಿಮಗೆ ಮತ್ತು ಈ ಪುಸ್ತಕದ ಪ್ರಕಾಶಕರಿಗೆ ನಾನು ಋಣಿ.
– ಬಿ.ಸುರೇಶ
11 ಮಾರ್ಚ್ 2016

Advertisements

0 Responses to “ಅನುಭವವು ಅಕ್ಷರವಾದಾಗ…”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: