ಕಾರ್ಮಿಕ ಲೋಕ ಪತ್ರಿಕೆಯವರು ನಡೆಸಿದ ಸಂದರ್ಶನ

“ಕರ್ನಾಟಕ ಕಾರ್ಮಿಕಲೋಕ” ಎಂಬುದು ರಾ.ನಂ.ಚಂದ್ರಶೇಖರ್ ಅವರ ಸಂಪಾದಕತ್ವದಲ್ಲಿ ಕಳೆದ ಏಳೆಂಟು ವರುಷಗಳಿಂದ ಬರುತ್ತಾ ಇರುವ ಮಾಸ ಪತ್ರಿಕೆ. ಈ ಪತ್ರಿಕೆಯ 2016ರ ಮೇ ತಿಂಗಳ ವಿಶೇಷಾಂಕಕ್ಕಾಗಿ ಪತ್ರಿಕೆಯವರು ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಬಯಸಿದ್ದರು. ನಾನು ಕೊಂಚ ಸುದೀರ್ಘ ಉತ್ತರಗಳನ್ನು ನೀಡಿದ್ದರಿಂದ ಪತ್ರಿಕೆಯವರು ಈ ಉತ್ತರಗಳನ್ನು ಎರಡು ಕಂತುಗಳಲ್ಲಿ ಪ್ರಕಟಿಸಿದ್ದಾರೆ. ಇಲ್ಲಿ ಅವರೆಲ್ಲಾ ಪ್ರಶ್ನೆಗಳಿಗೆ ನಾನು ನೀಡಿದ ಉತ್ತರಗಳು ಒಟ್ಟಿಗೆ ಇವೆ. ಆಸಕ್ತರು ಗಮನಿಸಬಹುದು.

1. ಅರ್ಥ, ಪುಟ್ಟಕ್ಕನ ಹೈವೇ, ಗುಬ್ಬಚ್ಚಿಗಳು, ಮುಂತಾದ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಗಳನ್ನು ಕನ್ನಡಕ್ಕೆ ತಂದುಕೊಟ್ಟ ಸಾಧಕರು ನೀವು. ಕಾರ್ಮಿಕಲೋಕದ ಪರವಾಗಿ ನಿಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಚಲನಚಿತ್ರರಂಗಕ್ಕೆ ನಿಮ್ಮ ಪ್ರವೇಶ ಹೇಗೆ ಆಯಿತು? ಈಗ ಮುಂದಿರುವ `ನೀವು ನಿಮ್ಮ ಕನಸು’ಗಳೇನು?

ಬಿ.ಸುರೇಶ: “ಕತ್ತಲಿರುವ ರಸ್ತೆಯಲ್ಲಿ ನಡೆಯಬಹುದು. ಕನಸಿಲ್ಲದ ರಸ್ತೆಯಲ್ಲಿ ನಡೆಯಲಾಗದು” ಎಂಬ ಗಿರೀಶ್ ಕಾರ್ನಾಡರ ನಾಟಕದ ಮಾತು ಅತ್ಯಂತ ಅರ್ಥಪೂರ್ಣ ಮತ್ತು ಸಮಯೋಚಿತವಾದುದು. ನಮ್ಮ ನಾಳೆಗಳನ್ನು ನಮಗೆ ಬೇಕಾದಂತೆ ಕಟ್ಟುವುದು ನಮ್ಮೆಲ್ಲರ ಎದುರಿಗಿರುವ ನಿತ್ಯಗನಸು. ನಾನು ಸಹ ನಿಮ್ಮ ಹಾಗೆಯೇ. ಈ ವರೆಗೆ ನಾನೇನು ಕೆಲಸ ಮಾಡಿದ್ದೇನೋ ಅವು ಪ್ರಶಸ್ತಿ ಪುರಸ್ಕಾರ ಪಡೆಯಲೆಂದು ಮಾಡಿದ ಕೆಲಸವಲ್ಲ, ಬದಲಿಗೆ ನಾನು ಬದುಕುವ ಸಮಾಜದ ಸಮಸ್ಯೆಗಳನ್ನು ಹೇಳುತ್ತಾ ನನ್ನ ನಾಡು ಕಟ್ಟಲು ಮಾಡಿದ ಅಳಿಲುಸೇವೆಗಳು, ಅಷ್ಟೇ.
ನನ್ನ ನಿರ್ದೇಶನದ “ಅರ್ಥ” (2002) ಚಿತ್ರದಲ್ಲಿ ಸಾಂಸಾರಿಕ ಹಿಂಸೆಯೂ ಸಾಮಾಜಿಕ ಹಿಂಸೆಗೆ ಆ ಮೂಲಕ ಕೋಮುವಾದಿ ಹಿಂಸೆಗಳಿಗೆ ದಾರಿ ಮಾಡುತ್ತವೆ ಎಂಬ ಕತೆಯನ್ನು ಹೇಳಿದ್ದೆ. ಆ ಮೂಲಕ ನಮ್ಮ ನಾಡಿನಲ್ಲಿ 1991ರ ಆಚೆಗೆ ಹೆಚ್ಚುತ್ತಾ ಬಂದಿರುವ ಕೋಮುವಾದವನ್ನು ಮತ್ತು ಸಾಮಾಜಿಕ ಹಿಂಸೆಗಳನ್ನು ತಡೆಯಲು ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಆರ್ಥಿಕ ಸ್ಥಿರತೆ ತರುವುದು ಮುಖ್ಯ ಎಂಬ ಮಾತಾಡಿದ್ದೆ. “ಪುಟ್ಟಕ್ಕನ ಹೈವೇ” (2010) ಚಿತ್ರದಲ್ಲಿ ನಮ್ಮನ್ನಾಳುವ ಸರ್ಕಾರಗಳು ಅಭಿವೃದ್ಧಿಯ ಹೆಸರಲ್ಲಿ ಹೇಗೆ ಅನಕ್ಷರಸ್ಥರು ಹಾಗೂ ದನಿಇಲ್ಲದವರನ್ನು ದಿಕ್ಕಾಪಾಲಾಗಿಸುತ್ತದೆ ಎಂಬುದನ್ನು ಹಾಗೂ ಎಲ್ಲಾ ಅಭಿವೃದ್ಧಿ ಯೋಜನೆಗಳು ನಮ್ಮ ನಾಡಿನ ಎಲ್ಲಾ ವರ್ಗದವರ ಬೆಳವಣಿಗೆ ಆಗದೆ ಕೆಲವರ ಸ್ವತ್ತಾದರೆ ಅದು ಸಮಾಜದಲ್ಲಿ ವಿಘಟನೆ ಸೃಷ್ಟಿಸುತ್ತದೆ ಎಂಬುದನ್ನು ಹೇಳಲು ಪ್ರಯತ್ನಿಸಿದೆ. “ಗುಬ್ಬಚ್ಚಿಗಳು” ಸಿನಿಮಾ ನಾನು ನಿರ್ಮಿಸಿದ ಚಿತ್ರ. ಈ ಚಿತ್ರದಲ್ಲಿ ನಮ್ಮ ನಗರಗಳಲ್ಲಿ ನಾಪತ್ತೆಯಾಗುತ್ತಿರುವ ಗುಬ್ಬಚ್ಚಿಗಳನ್ನು ಹುಡುಕುವ ಮಕ್ಕಳ ಮೂಲಕ ಪರಿಸರನಾಶದ ಕುರಿತು ಮಾತಾಡಿದ್ದೆವು. ಇತ್ತೀಚೆಗೆ ಬಿಡುಗಡೆಯಾದ “ದೇವರ ನಾಡಲ್ಲಿ” (2015) ಸಿನಿಮಾದಲ್ಲಿ ಒಂದು ಸಮಾಜದ ಒಳಗಿರುವ ಪೂರ್ವಾಗ್ರಹಗಳು ಹೇಗೆ ಅಪರಾಧಗಳ ತನಿಖೆಯ ಮೇಲೆ ಪ್ರಭಾವ ಮೂಡಿಸುತ್ತವೆ ಮತ್ತು ಅದರಿಂದ ಹೇಗೆ ಅಮಾಯಕರು ಅಪರಾಧಿಗಳಾಗಿ ನಿಜವಾದ ಅಪರಾಧಿಗಳು ಶಿಕ್ಷೆಗೊಳಪಡದೆ ಉಳಿಯುತ್ತಾರೆ ಎಂಬುದನ್ನು ಚರ್ಚಿಸಿದ್ದೆ. ಹೀಗೆಯೇ ನನ್ನ ಧಾರಾವಾಹಿಗಳಲ್ಲಿ ಕೂಡ ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸಲು ಪ್ರಯತ್ನಿಸಿದ್ದೇನೆ. “ಸಾಧನೆ” (1998-2002) ಯಲ್ಲಿ ಕಟ್ಟಿದ ಕನಸು ಮತ್ತು ವಾಸ್ತವಗಳ ನಡುವಿನ ವೈರುಧ್ಯದಿಂದ ನರಳುವ ಹಲವು ಸಾಧಕರ ಕತೆಗಳನ್ನು ಹೇಳಿದ್ದೆ. “ನಾಕುತಂತಿ” (2004-2009) ಯಲ್ಲಿ ಮಧ್ಯಮವರ್ಗದ ಹೆಂಗಸರ ಹೋರಾಟದ ಮಾದರಿಗಳನ್ನು ಕಟ್ಟಲು ಪ್ರಯತ್ನಿಸಿದ್ದೆ. “ಅಳಗುಳಿಮನೆ” (2011-2014) ಯಲ್ಲಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ಗಾಂಧೀವಾದ ಮತ್ತು ನಕ್ಸಲ್‍ವಾದಗಳ ಜೊತೆಗೆ ಸಾಮಾನ್ಯ ಜನರ ಬದುಕಿನ ತಲ್ಲಣಗಳನ್ನು, ಪರಿಹಾರದ ದಾರಿಗಳಲ್ಲಿ ದೊರೆತ ಕತೆಗಳನ್ನು ತಿಳಿಸಿದ್ದೆ.
ಹೀಗೆ ನನ್ನ ಎದುರಿಗೆ ಕಾಣುತ್ತಾ ಇರುವ ಅನೇಕ ಸಮಸ್ಯೆಗಳನ್ನು ನಾನು ನನ್ನ ನಾಟಕ ಅಥವಾ ಸಿನಿಮಾ ಅಥವಾ ಧಾರಾವಾಹಿಗಳ ಮೂಲಕ ಚರ್ಚಿಸಲು, ಆ ಮೂಲಕ ಆ ಸಮಸ್ಯೆಗೆ ಸಮಾಜವು ಒಟ್ಟಾಗಿ ಪರಿಹಾರ ಹುಡುಕಲು ಪ್ರೇರೇಪಿಸುವಂತಹ ಕೆಲಸ ಮಾಡಲು ಪ್ರಯತ್ನಿಸುತ್ತಾ ಇದ್ದೇನೆ. ಮುಂದಿನ ದಿನಗಳಲ್ಲೂ ಇಂತಹುದೇ ಪ್ರಯೋಗಗಳನ್ನು ಜಾರಿಯಲ್ಲಿಡಲು ಪ್ರಯತ್ನಿಸುತ್ತೇನೆ.
ಮುಂಬರುವ ದಿನಗಳಲ್ಲಿ ರೈತರು ಮತ್ತು ಕ್ರಿಮಿನಾಶಕ ಹಾಗೂ ಕುಲಾಂತರಿ ತಳಿಗಳ ಸುತ್ತ ಹೆಣೆದ ರೈತರನ್ನು ಕುರಿತ ಕತೆಯನ್ನು ಸಿನಿಮಾ ಮಾಡುವ ಪ್ರಯತ್ನದಲ್ಲಿ ಇದ್ದೇನೆ. ಇದಕ್ಕಾಗಿ ಸಂಶೋಧನೆಯ ಕೆಲಸಗಳು ಜಾರಿಯಲ್ಲಿದೆ. ಇದಲ್ಲದೆ ಚಳ್ಳಕೆರೆಯ ಅಮೃತಮಹಲ್ ಕಾವಲನ್ನು ಸರ್ಕಾರವು ಭೂಮಿಬ್ಯಾಂಕಿಗೆ ತೆಗೆದುಕೊಂಡ ನಂತರ ಅಲ್ಲಿನ ರೈತರ ಬವಣೆಗಳನ್ನು ಕುರಿತ ಸಿನಿಮಾ ಮಾಡುವ ಇಚ್ಛೆಯೂ ಇದೆ. ಈ ವಿಷಯದ ಬಗ್ಗೆಯೂ ಕೆಲಸ ಮಾಡುತ್ತಾ ಇದ್ದೇವೆ. ಇವುಗಳಲ್ಲದೆ ನನ್ನ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಕೆಲವು ಹೊಸ ಹುಡುಗರ ಸಿನಿಮಾಗಳನ್ನು ನಿರ್ಮಿಸುವ ಯೋಜನೆಯೂ ಇದೆ. ಇವೆಲ್ಲವೂ ಮುಂಬರುವ ದಿನಗಳಲ್ಲಿ ನಿಮ್ಮ ಎದುರಿಗೆ ಬರಲಿವೆ.
ಈಗ ನಮ್ಮ ನಡುವಿನ ಎಲ್ಲಾ ವಾಹಿನಿಗಳು ಸಹ ಜಾಗತೀಕರಣ ಮತ್ತು ಖಾಸಗೀಕರಣಕ್ಕೆ ಸಿಕ್ಕಿಬಿದ್ದು ಗ್ಲಾಮರ್ ರಹಿತ ಕತೆ ಹೇಳುವ ಅವಕಾಶಗಳನ್ನು ಮೊಟಕುಗೊಳಿಸಿರುವುದರಿಂದ ನನ್ನಂತಹ ಅನೇಕರಿಗೆ ನಮ್ಮದೇ ನೆಲದ ಕತೆ ಹೇಳುವುದು ಕಷ್ಟವಾಗಿದೆಯಾದೆ. ಆದರೂ ನನ್ನ ಪ್ರಯತ್ನಗಳು ಜಾರಿಯಲ್ಲಿವೆ. ನಮ್ಮ ಕ್ರೀಡಾಂಗಣವನ್ನು ಕಾರ್ಪೋರೇಟ್ ಸಂಸ್ಥೆಗಳು ಕಿತ್ತುಕೊಂಡಿವೆ ಎಂದು ಸುಮ್ಮನಿರಲಾಗದು, ನಾವು ನಮ್ಮದೇ ಆಟದ ಬಯಲು ಕಟ್ಟಿಕೊಳ್ಳುವುದಕ್ಕೆ ಸಿದ್ಧವಾಗಬೇಕು. ಆ ನಿಟ್ಟಿನಲ್ಲಿ ಕನಸು ಕಟ್ಟಿ ಕೆಲಸ ಮಾಡುತ್ತಾ ಇದ್ದೇನೆ.

2. ದೇಶದಲ್ಲಿಯೇ ಮರಾಠಿ ಹಾಗೂ ಕನ್ನಡ ರಂಗಭೂಮಿಗಳು ಜೀವಂತಿಕೆಯಿಂದಿವೆ ಎಂದು ಹೇಳಲಾಗುತ್ತದೆ. ಕನ್ನಡ ರಂಗಭೂಮಿ ಪ್ರಯೋಗಾತ್ಮಕವಾಗಿ ಹೇಗೆ ಬೇರೆ ರಂಗಭೂಮಿಗಳಿಗಿಂತ ವಿಭಿನ್ನವಾಗಿದೆ? ಈ ಆಧುನಿಕ, ಹೈಟೆಕ್ ಯುಗದಲ್ಲಿ ಕನ್ನಡ ರಂಗಭೂಮಿ ಇನ್ನೂ ಏನನ್ನಾದರೂ ಪಡೆದುಕೊಳ್ಳುವ, ಅಳವಡಿಸಿಕೊಳ್ಳುವ ಅಗತ್ಯತೆ; ಅನಿವಾರ್ಯತೆಗಳನ್ನು ಇದೆಯೆಂದು ನೀವು ಭಾವಿಸುವಿರಾ?

ಬಿ.ಸುರೇಶ: ದೇಶದಲ್ಲಿ ಮರಾಠಿ, ಕನ್ನಡ ರಂಗಭೂಮಿಗಳಲ್ಲದೆ ಬಂಗಾಳಿ, ಮಲೆಯಾಳಿ ಮತ್ತು ಇನ್ನೂ ಹಲವು ಪ್ರಾದೇಶಿಕ ಭಾಷಾ ರಂಗಭೂಮಿಗಳು ಈಗ ಜೀವ ಪಡೆದುಕೊಂಡಿವೆ. ಅಸ್ಸಾಮಿನಲ್ಲಿ ಕನ್ಹಯ್ಯಲಾಲ್ ಮತ್ತು ರಥನ್ ಥಿಯ್ಯಂ ಅವರ ಪ್ರಯೋಗಗಳ ಬೆನ್ನಲ್ಲೇ ಭಾಗೀರತಿ ಮತ್ತು ಇನ್ನೂ ಅನೇಕ ಹೊಸ ತಲೆಮಾರಿನವರು ಮಾಡುತ್ತಾ ಇರುವ ಪ್ರಯೋಗಳನ್ನು ಜಾಗತಿಕವಾಗಿ ಗುರುತಿಸಲಾಗಿದೆ. ಮಲೆಯಾಳ ರಂಗಭೂಮಿಯಲ್ಲಿ ಅಶೋಕ್ ವೆಂಕಟೇಶ್ವರನ್ ಮುಂತಾದವರು ಮಾಡುತ್ತಾ ಇರುವ ಪ್ರಯೋಗಗಳು ಕೂಡ ಜಗತ್ತಿನಾದ್ಯಂತ ಹೆಸರಾಗಿವೆ. ಈ ಹಾದಿಯಲ್ಲಿ ಕನ್ನಡವೂ ಸಹ ಹಿಂದೆ ಬಿದ್ದಿಲ್ಲ. ಅನೇಕ ಹೊಸ ಪ್ರಯೋಗಗಳು ಆಗುತ್ತಿವೆ. ಈಚೆಗೆ ನಾನು ನೋಡಿದ “ಅಕ್ಷಯಾಂಬರ”ದಂತಹ ನಾಟಕಗಳು – ನಟನೆಯಲ್ಲಿ ಹೊಸ ಪ್ರಯೋಗ ಎಂಬಂತೆ ಸಾಂಪ್ರದಾಯಿಕ ಜನಪದ ಶೈಲಿಯ ಮತ್ತು ಆಧುನಿಕ ಶೈಲಿಯ ಅಭಿನಯವನ್ನು ಮುಖಾಮುಖಿಯಾಗಿಸುವ ಪ್ರಯತ್ನ ಮಾಡಿ, ದೇಶದ ಅತ್ಯುನ್ನತ ರಂಗಪ್ರಶಸ್ತಿಯಾದ ಮೆಟಾ ಅವಾರ್ಡ್ ಪಡೆದಿದೆ. ಮಂಜುನಾಥ ಬಡಿಗೇರ, ಶ್ರೀಪಾದ ಭಟ್, ಮಂಡ್ಯ ರಮೇಶ್, ಮಂಜು ಕೊಡಗು, ವೆಂಕಟರಮಣ ಐತಾಳರ ನಿರ್ದೇಶನ ರಂಗಪ್ರದರ್ಶನಗಳು ಅವುಗಳ ಪ್ರಯೋಗಶೀಲತೆಯಿಂದ ಜಗತ್ತು ನಮ್ಮ ಕಡೆಗೆ ನೋಡುವಂತೆ ಮಾಡಿವೆ. ನಮ್ಮ ಬೆಂಗಳೂರಿನವರೇ ಆದ ಚಂಪಾಶೆಟ್ಟಿ, ದಾಕ್ಷಾಯಿಣಿ, ಮಂಗಳಾ, ಅರ್ಚನಾ ಶ್ಯಾಂ, ನಯನಾ ಸೂಡಾ ತರಹದ ಹೆಣ್ಣು ಮಕ್ಕಳು ತಮ್ಮ ನಾಟಕಗಳ ಮೂಲಕ ಸ್ತ್ರೀ ಸಂವೇದನೆಯನ್ನು ದಾಟಿಸಲು ಪ್ರಯತ್ನಿಸುತ್ತಾ ಇದ್ದಾರೆ. ಇವರ ಬಹುತೇಕ ಪ್ರಯೋಗಗಳು ಯಶಸ್ವಿಯೂ ಆಗಿವೆ. ಇವರ ಜೊತೆಗೆ ಹಳೆಯ ಹುಲಿಗಳಾದ ರಂಗತಂಡಗಳು ಸಹ ನಿರಂತರವಾಗಿ ರಂಗಚಟುವಟಿಕೆ ನಡೆಸುತ್ತಾ ಇವೆ. ಬಿ.ಜಯಶ್ರೀ ಅವರ ‘ಸ್ಪಂದನ’, ಡಿ.ವಿ.ರಾಜಾರಾಂ ಅವರ ‘ಕಲಾಗಂಗೋತ್ರಿ’, ಎಚ್.ವಿ.ವಿ. ಸಾರಾಥ್ಯದ ‘ಸಮುದಾಯ’, ಕೆಎಸ್‍ಡಿಎಲ್ ಚಂದ್ರು ಸಾರಥ್ಯದ ‘ರೂಪಾಂತರ’, ಅಪ್ಪಯ್ಯ ಮತ್ತು ತಂಡದವರ ‘ರಂಗನಿರಂತರ’, ಸುರೇಶ್ ಅನಗಳ್ಳಿಯವರ ‘ಅನೇಕ’, ಇನ್ನೂ ಮುಂತಾದ ತಂಡಗಳು ಹಾಗೂ ಚಿದಂಬರರಾವ್ ಜಂಬೆ, ಬಸವಲಿಂಗಯ್ಯ, ವಾಲ್ಟೇರ್ ಡಿಸೋಜಾ, ಗೋಪಾಲಕೃಷ್ಣ ನಾಯರಿ, ಸುರೇಂದ್ರನಾಥ್ ಮುಂತಾದ ಹಿರಿಯ ರಂಗನಿರ್ದೇಶಕರು ಅತ್ಯಂತ ಅಪರೂಪದ ಸಾಹಿತ್ಯ ಕೃತಿಗಳನ್ನು ರಂಗಕ್ಕೆ ತರುವ ಪ್ರಯತ್ನವನ್ನು ನಿರಂತರವಾಗಿ ತರುತ್ತಿವೆ. ಹೀಗಾಗಿ ಇಂದು ಕೇವಲ ಕನ್ನಡ ರಂಗಭೂಮಿಗೆ ಮಾತ್ರವಲ್ಲಾ ಬಹುತೇಕ ಪ್ರಾದೇಶಿಕ ರಂಗಭೂಮಿಗಳು ಖಂಡಿತಾ ಇಂದು ಅತ್ಯಂತ ಹೆಚ್ಚು ಜೀವಂತವಾಗಿವೆ.
ಕನ್ನಡ ರಂಗಭೂಮಿಗೆ ಒಲಿದ ವಿಶೇಷವೆಂದರೆ 80ರ ದಶಕದಲ್ಲಿ ಆರಂಭವಾದ ರಂಗಶಿಕ್ಷಣ ಕೇಂದ್ರಗಳು. ನೀನಾಸಂ, ಅಭಿನಯತರಂಗ, ಭಂಡಾರ್ಕರ್ಸ್ ಕಾಲೇಜಿನ ರಂಗಶಿಕ್ಷಣ ಕೇಂದ್ರ, ಸಾಣೇಹಳ್ಳಿಯ ರಂಗಶಿಕ್ಷಣ ಕೇಂದ್ರ, ರಂಗಾಯಣಗಳಲ್ಲಿ ಆಗುತ್ತಿರುವ ರಂಗಶಿಕ್ಷಣದ ಕೋರ್ಸ್‍ಗಳು, ಎನ್‍ಎಸ್‍ಡಿ ಬೆಂಗಳೂರು – ಅಲ್ಲದೇ ಅನೇಕ ವಿಶ್ವವಿದ್ಯಾಲಯಗಳು ದೃಶ್ಯ ಮಾಧ್ಯಮವನ್ನು ಕಲಿಸುವ ವಿಭಾಗಗಳನ್ನು ತೆರೆದಿವೆ. ಇವುಗಳಿಂದ ಪ್ರತೀ ವರ್ಷ ನೂರಕ್ಕಿಂತ ಹೆಚ್ಚು ಹೊಸ ಪ್ರತಿಭೆಗಳು ಪ್ರತೀ ವರ್ಷ ರಂಗಭೂಮಿಗೆ ಪ್ರವಾಹದೋಪಾದಿಯಲ್ಲಿ ಬರುತ್ತಿದ್ದಾರೆ. ಇವರೆಲ್ಲರೂ ನಾಡಿನಾದ್ಯಂತ ಹೊಸ ಪ್ರಯೋಗಳನ್ನು ನಿರಂತರವಾಗಿ ಮಾಡುತ್ತಾ ಇದ್ದಾರೆ. ಇದು ಆಯಾ ಪ್ರದೇಶದ ಜನರನ್ನು ರಂಗಸಾಂಗತ್ಯದಲ್ಲಿ ನಿರಂತರವಾಗಿ ಇರುವಂತೆ ಪ್ರೇರೇಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ನಾಡಿನ ಎಲ್ಲಾ ರಂಗಶಿಕ್ಷಣ ಕೇಂದ್ರಗಳು ಕನ್ನಡ ರಂಗಭೂಮಿಗೆ ಮಾತ್ರವಲ್ಲ ದೇಶೀಯ ರಂಗಭೂಮಿಗೆ ಕೊಟ್ಟಿರುವ ಕೊಡುಗೆ ಮೌಲ್ಯಾತೀತವಾದುದು. ಈ ಕಾರಣಕ್ಕಾಗಿಯೇ ನಮ್ಮ ಕನ್ನಡ ರಂಗಭೂಮಿ ವಿಶಿಷ್ಟವಾದುದು.
ಮುಂದಿನ ದಿನಗಳಲ್ಲಿ ಕನ್ನಡ ರಂಗಭೂಮಿಗೆ ಒದಗಬೇಕಾದ ವಿಷಯಗಳಲ್ಲಿ ಬಹುಮುಖ್ಯವಾದುದು ರಂಗಮಂದಿರಗಳ ಸಂಖ್ಯೆಯನ್ನು ಹೆಚ್ಚಿಸುವುದು. ಪ್ರತೀ ಬಡಾವಣೆಗೂ ಒಂದು ರಂಗಮಂದಿರವನ್ನು ಕಟ್ಟುವಂತೆ ಸರ್ಕಾರವನ್ನು ಮತ್ತು ದಾನಿಗಳನ್ನು ಒತ್ತಾಯಿಸುವುದು. ಹಾಗಾದಾಗ ಮಾತ್ರ ಪ್ರವಾಹದೋಪದಿಯಲ್ಲಿ ಬರುತ್ತಾ ಇರುವ ಹೊಸ ರಂಗಕರ್ಮಿಗಳಿಗೆ ಪ್ರದರ್ಶನಗಳನ್ನು ಮಾಡಲು ಸುಲಭವಾಗಿ ಸಿಗುವಂತಹ ವೇದಿಕೆಗಳಾಗಿ ಈ ರಂಗಮಂದಿರಗಳು ಸಿಗಬೇಕಾಗಿದೆ. ಅದರಿಂದ ಏಕಕಾಲಕ್ಕೆ ಈ ಹೊಸ ಚಿಗುರಿಗೆ ಜೀವ ದೊರಕುವುದಲ್ಲದೆ ಆಯಾ ಬಡಾವಣೆಯ ನೋಡುಗರ ಮನಸ್ಸನ್ನು ಸದಾ ಕಾಲ ಸ್ವಸ್ಥವಾಗಿಡಬಲ್ಲ ಶಕ್ತಿಯು ಸಹ ಒದಗಿಬರುತ್ತದೆ. ಈ ನಿಟ್ಟಿನಲ್ಲಿ ಇಡಿಯ ಸಮಾಜವು ಯೋಚಿಸಿ, ಹೊಸ ರಂಗಮಂದಿರಗಳ ನಿರ್ಮಾಣಕ್ಕೆ ತೊಡಗಬೇಕಿದೆ.
ಇದಲ್ಲದೆ ಕಳೆದ ಮೂರು ದಶಕಗಳಿಂದ ಹೆಚ್ಚುತ್ತಾ ಇರುವ ಕೋಮುವಾದಿಗಳನ್ನು ಹಾಗೂ ಆತಂಕವಾದಿಗಳನ್ನು ಸಮಾಜದಿಂದ ದೂರ ಇಡುವುದಕ್ಕೆ ಹಾಗೂ ಹೊಸ ತಲೆಮಾರು ಅಂತಹ ವಿಚ್ಚಿದ್ರಕಾರಿ ಶಕ್ತಿಗಳಿಂದ ದೂರವಿರುವಂತೆ ಮಾಡುವುದಕ್ಕೆ ರಂಗಭೂಮಿಯು ದಿವ್ಯೌಷಧವಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಿಕ ಶಾಲೆಯ ಮಟ್ಟದಿಂದ ಪ್ರೌಧ ಶಿಕ್ಷಣದವರೆಗಿನ ಹಂತದಲ್ಲಿ ರಂಗಭೂಮಿ ಚಟುವಟಿಕೆಯನ್ನು ಕಡ್ಡಾಯಗೊಳಿಸಬೇಕಿದೆ. ರಂಗಚಟುವಟಿಕೆಯಲ್ಲಿ ತೊಡಗುವ ಮಕ್ಕಳು ಖಂಡಿತವಾಗಿ “ಹುಸಿ ದೇಶಭಕ್ತಿ”ಯ ಪ್ರವಚನಕಾರರಿಂದ ದೂರ ಉಳಿಯುತ್ತಾರೆ. ರಂಗಭೂಮಿಯು ಮಕ್ಕಳಿಗೆ ಮಂದಿರ ಕಟ್ಟುವುದಕ್ಕಿಂತ ಮನಸ್ಸುಗಳನ್ನು ಮಾನವೀಯವಾಗಿಸುವುದೇ ಸರಿಯಾದ ಬದುಕುವ ಕ್ರಮ ಎಂಬುದು ತಿಳಿಯುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ರಂಗಭೂಮಿಯನ್ನು ಸರಿಯಾಗಿ ಬಳಸಿಕೊಂಡರೆ ಈ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಬಲ್ಲದು.

3. ವಿಶ್ವದ ಅತ್ಯುನ್ನತ ಮಾಹಿತಿ-ಜ್ಞಾನ-ಮನರಂಜನೆಯಾಧಾರಿತ ಚಿತ್ರಗಳನ್ನು ನೀವು-ನಾವು ನೋಡಿ ಅರ್ಥೈಸಿಕೊಳ್ಳುತ್ತೇವೆ. ಅದೇ ಚಿತ್ರಗಳನ್ನು ಓರ್ವ ಅಂಧ ಕನ್ನಡಿಗನೂ, ಕೂಲಿ ಕನ್ನಡಿಗ, ರೈತ ಕನ್ನಡಿಗ ಡಬ್ಬಿಂಗ್ ಮೂಲಕ ತಮ್ಮ ಹೃದಯದ ಭಾಷೆ ಕನ್ನಡದಲ್ಲಿಯೇ ನೋಡುವಂತಾದರೆ ಅದು ಕನ್ನಡ ವ್ಯಾಪ್ತಿಯ ಹಿಗ್ಗಿಸುವಿಕೆಯಾದಂತೆ ಅಲ್ಲವೇ? ಡಬ್ಬಿಂಗ್ ಕೃತಕ ತುಟಿ ಪರಿಚಲನೆಯ ಕೃತಕ ಅಂಕ ಎಂಬುದನ್ನು ನಿರಾಕರಿಸುವಂತಿಲ್ಲ. ಹಾಗೆಯೇ ಕನ್ನಡವನ್ನು ಕಲಿಯಬಯಸುವ ವಿದೇಶಿಯರು-ಪರಭಾಷಿಕರಿಗೆ ಡಬ್ಬಿಂಗ್ ಒಂದು ಪೂರಕ ಸಾಧನವೂ ಆಗುತ್ತದೆಂಬುದನ್ನು ನಿರಾಕರಿಸಲಾಗದು. ಏನು ಹೇಳುವಿರಿ?

ಬಿ.ಸುರೇಶ: ಈ ಡಬ್ಬಿಂಗ್ ವಿಷಯವನ್ನು ಕಳೆದ ಕೆಲವು ವರ್ಷಗಳಲ್ಲಿ ತುಂಬಾ ಮಾತಾಡಿದ್ದೇನೆ. ಆ ಕುರಿತು ಅನೇಕ ಕಡೆ ಬರೆದಿದ್ದೇನೆ. ಮತ್ತೆ ಮಾತಾಡುವುದು ಮಹಾ ಪುನರಾವರ್ತನೆಯ ಕೆಲಸ. ಇದಲ್ಲದೆ ಈ ವಿಷಯವಾಗಿ ನಾನು ಬರೆದ ಲೇಖನಗಳು ನನ್ನ ಬ್ಲಾಗಿನಲ್ಲಿ ಹಾಗೂ ಸಂಕ್ರಮಣ ವಿಶೇಷಾಂಕದಲ್ಲಿ ದೊರೆಯುತ್ತದೆ. ಆಸಕ್ತರು ಅದನ್ನು ಓದಬಹುದು. ಇಷ್ಟಾದರೂ ಕೆಲವರು ಕನ್ನಡಿಗರೇ ಈ ಡಬ್ಬಿಂಗನ್ನು ಬಯಸಿ ಮಾತಾಡುತ್ತಾ ಇರುವುದರಿಂದ ಮತ್ತು ಕಾರ್ಮಿಕಲೋಕದಂತಹ ಪತ್ರಿಕೆಯ ಓದುಗರಿಗೆ ಸತ್ಯದ ಅರಿವಾಗಬೇಕು ಎಂಬ ಕಾರಣದಿಂದ ನನಗೆ ಪುನರಾವರ್ತನೆಯಾದರೂ ಪರವಾಗಿಲ್ಲ ಎಂದು ಕೆಲವು ಮಾತಾಡುತ್ತೇನೆ.
ನೀವು ಕೇಳುತ್ತಾ ಇದ್ದೀರಿ, ಅಂಧರೂ, ಕೂಲಿಗಳು, ರೈತರು ಡಬ್ಬಿಂಗ್ ಚಿತ್ರವನ್ನು ನೋಡಿ ಜ್ಞಾನ ಪಡೆಯುತ್ತಾರೆ ಎಂದು. ಹಾಗಾದರೆ ಅವರೀಗ ಜ್ಞಾನಿಗಳಲ್ಲವೇ? ಈ ನಾಡಿನ ರೈತ ಮತ್ತು ಕುಶಲಕರ್ಮಿ ಕಾರ್ಮಿಕರ ಜ್ಞಾನವೇ ಈ ದೇಶವನ್ನು ಸಾವಿರಾರು ಶತಮಾನಗಳಿಂದ ಉಳಿಸಿದೆ ಎಂಬುದನ್ನು ತಾವು ಮರೆತಿದ್ದೀರಾ? ಇರಲಿ ಬಿಡಿ. ನಿಮ್ಮ ಪ್ರಶ್ನೆಯನ್ನು ಕೇವಲ ಡಬ್ಬಿಂಗ್ ಸಿನಿಮಾ/ ಧಾರಾವಾಹಿಗೆ ಮಿತಿಗೊಳಿಸಿಕೊಂಡು ಮಾತಾಡೋಣ.
ಡಬ್ಬಿಂಗ್ ಎಂದರೇನು? ಯಾವುದೋ ಮೂಲಭಾಷೆಯಲ್ಲಿ ಚಿತ್ರಿತವಾದ ದೃಶ್ಯ ಮಾಧ್ಯಮ ಕೃತಿಗೆ ಮಾತಿನ ಮರುಲೇಪನ ಮಾಡುವ ತಂತ್ರಗಾರಿಕೆ ಮಾತ್ರ. ಅಲ್ಲಿ ಯಾವ ಸೃಜನಶೀಲ ಚಟುವಟಿಕೆಯೂ ಇಲ್ಲ. ಕೇವಲ ಮೂಲದ ತುಟಿಚಲನೆಗೆ ಹೊಂದುವಂತೆ ಮಾತು ಕೂಡಿಸುವುದು. ಅಷ್ಟೆ. ಹೀಗೆ ತುಟಿ ಚಲನೆಗೆ ಮಾತು ಕೂಡಿಸುವವರು ಮೂಲ ಭಾಷೆಯಲ್ಲಿ ಮಾತಾಡಿದ ಕಲಾವಿದರಲ್ಲ ಬದಲಿಗೆ ಸ್ಥಳೀಯ ಭಾಷೆ ಬಲ್ಲ ಕಲಾವಿದರು. ಅಮಿತಾಭ್ ಬಚ್ಚನ್ ಅಥವಾ ಡೇನಿಯಲ್ ಕ್ರೇಗ್ ತರಹದ ನಟರಿಗೆ ಮತ್ಯಾರೋ ತಮ್ಮ ಧ್ವನಿ ಕೂಡಿಸುತ್ತಾರೆ. ಇದರಿಂದ ಮೊದಲಿಗೆ ಆಗುವುದು ರಸಾಭಾಸ. ಅಭಿನಯದ ನಾಲ್ಕು ಭಾಗಗಳಲ್ಲಿ ಪ್ರಮುಖವಾದ ವಾಚಿಕ ಎನ್ನುವುದು ಆಯಾ ಕಲಾವಿದನ ಉಸಿರಾಟದ ಗತಿಯಿಂದ, ಮಾತು ಕಟ್ಟುವ ಲಯದಿಂದ ಉಂಟಾಗುತ್ತದೆ. ಇಲ್ಲಿ ಆಯಾ ಕಲಾವಿದನ ಬದಲಿಗೆ ಇನ್ಯಾರೋ ಆ ನಟನಿಗೆ ದನಿ ಮಾತ್ರ ಕೂಡಿಸುವುದು ಎಂದರೆ ನಟನೆಯನ್ನು ಅಪೂರ್ಣವಾಗಿಸಿದಂತೆ. ಇದರಿಂದ ನೋಡುಗನಿಗೆ ದೊರಕಬೇಕಾದ ಯಾವ ಆನಂದವೂ ದೊರಕುವುದಿಲ್ಲ ಎಂಬುದು ಅದಾಗಲೇ ನಮ್ಮ ಭಾಷೆಗೆ ನಿತ್ಯ ಡಬ್ಬಿಂಗ್ ಆಗುತ್ತಾ ಇರುವ ಅನೇಕ ಜಾಹೀರಾತುಗಳನ್ನು ನೋಡಿದರೆ ತಿಳಿಯುತ್ತದೆ. ಅದರಲ್ಲೂ ಕೆಲವು ವಾಹಿನಿಯಲ್ಲಿ ಸರಿಸುಮಾರು ಒಂದು ಗಂಟೆಯ ಡಬ್ಬಿಂಗ್ ಆದ ಜಾಹೀರಾತಿನ ಕಾರ್ಯಕ್ರಮವನ್ನು ಪ್ರತಿದಿನ ತೋರಿಸುತ್ತಾ ಇರುತ್ತಾರೆ. ಜಾಕಿಷ್ರಾಫ್ ಮುಂತಾದ ಪ್ರಸಿದ್ಧ ನಟರು ಈ ಜಾಹೀರಾತಿನಲ್ಲಿ ಅಭಿನಯಿಸಿರುತ್ತಾರೆ. ಅವುಗಳಿಗೆ ಸ್ಥಳೀಯ ಭಾಷಿಕರು ಬೇರೆಯ ಭಾಷೆಯಲ್ಲಿ ಮಾತು ಮಾತ್ರ ಜೋಡಿಸಿರುತ್ತಾರೆ. ಇಂತಹ ಕಾರ್ಯಕ್ರಮಗಳಲ್ಲಿ ಯಾವುದಾದರೂ ಒಂದನ್ನು ನೋಡಿದರೂ ಸಾಕು ಡಬ್ಬಿಂಗ್ ಎಂಬುದು ನಟನೆ ಎಂಬ ಕಲೆಯನ್ನು ಹಾಳುಗೆಡವುವ ಕೆಲಸ ಎಂದು ತಿಳಿಯುತ್ತದೆ.
ಇಷ್ಟಾದರೂ ಪರವಾಗಿಲ್ಲ. ಹೇಗಿದ್ದರೂ ನಮಗೆ ಕತೆ ತಿಳಿಯುತ್ತದೆ ಎಂಬ ಹುಂಬ ವಾದ ಮಂಡಿಸುವ ಜನರಿದ್ದಾರೆ. ಅವರಿಗೆ ಈ ಜಾಹೀರಾತುಗಳಲ್ಲಿ ಬಳಕೆಯಾಗಿರುವ “ಡಬ್ಬಿಂಗ್” ಕನ್ನಡವನ್ನು ಕೇಳಿಸಿ. “ಮಮ್ಮೀಗೆ ನೋಡು, ಹೆಲ್ತ್‍ಗೆ ನೋಡು” ಎಂದು ಜಾಹೀರಾತೊಂದು ಈಚಿನ ದಿನಗಳಲ್ಲಿ ಪ್ರತಿದಿನ ಒರಲುತ್ತಿದೆ. ಇಲ್ಲಿ ಮೂಲದ “ಮಮ್ಮೀಕೋ ದೇಖೋ, ಹೆಲ್ತ್‍ಕೋ ದೇಖೋ” ಎಂಬ ಹಿಂದಿಯ ಮಾತು ಕನ್ನಡವಾಗಿದೆ. ಆ ವಾಕ್ಯದಲ್ಲಿ “ಮಮ್ಮೀಗೆ ನೋಡು” ಎಂಬುದು ಕನ್ನಡ ಜಾಯಮಾನದ ವಾಕ್ಯರಚನೆಯಲ್ಲ. ಕನ್ನಡದಲ್ಲಿ ಆ ವಾಕ್ಯವನ್ನು ‘ಅಮ್ಮನನ್ನು ನೋಡು’ ಎಂತಲೋ ಮಮ್ಮಿ ಎಂಬ ಇಂಗ್ಲೀಷ್ ಪದ ಸೇರಿಸಿ ಹೈಬ್ರಿಡ್ ಮಾಡಲೇಬೇಕೆಂದರೂ ‘ಮಮ್ಮಿಯನ್ನು ನೋಡು” ಎಂದಾಗಬೇಕು. ಆದರೆ ಅಲ್ಲಿ ‘ಮಮ್ಮಿಗೆ ನೋಡು’ ಎನ್ನುತ್ತಾ ಕನ್ನಡದ ಕೊಲೆಯನ್ನು ಮಾಡಲಾಗುತ್ತದೆ. ಇಂತಹ ಉದಾಹರಣೆಗಳಲ್ಲಿ ಮತ್ತೊಂದು; “ತೇಡಾ ಹೇ, ಮಗರ್ ಮೇರಾ ಹೇ” ಎನ್ನುವ ಜಾಹೀರಾತು ಕನ್ನಡಕ್ಕೆ ಡಬ್ ಆದಾಗ “ತಿರುಚ್ಚಾಗಿದೆ ಆದರೆ ನನ್ನದಾಗಿದೆ” ಎಂದು ಹೇಳಲಾಗಿದೆ. ಈ ‘ತಿರುಚ್ಚು” ಎನ್ನುವುದು ಯಾವ ಕನ್ನಡ ಹೇಳಿ? ಕನ್ನಡದಲ್ಲಿ ತೇಡಾ ಅನ್ನುವುದಕ್ಕೆ ತಿರುವು ಮುರುವು, ಅಂಕು ಡೊಂಕು, ಸೊಟ್ಟಂಬಟ್ಟ ಎಂಬ ಪದಗಳಿವೆ. ಆದರೆ ಇಲ್ಲಿ ತುಟಿ ಚಲನೆಯ ಅನುಕೂಲಕ್ಕೆ ತಿರುಚ್ಚಾಗಿದೆ ಎಂಬ ಪದ ಬಳಸಲಾಗಿದೆ. ಈ ಉದಾಹರಣೆಗಳ ಆಧಾರದಲ್ಲಿ ಹೇಳುವುದಾದರೆ ಕನ್ನಡದ ವಾಕ್ಯ ಕಟ್ಟುವ ಜಾಯಮಾನ, ಕನ್ನಡದ್ದೇ ಆದ ಪ್ರತ್ಯಯ ಬಳಕೆಯ ವಿಧಾನಗಳನ್ನು ಈ “ಡಬ್ಬಿಂಗ್” ಎನ್ನುವುದು ಹಾಳುಗೆಡವಲು ಆರಂಭಿಸುತ್ತದೆ. ಕನ್ನಡ ಬಲ್ಲವರಿಗೆ ಇದು ತಪ್ಪು ಎಂದು ಗೊತ್ತಾಗಿ ನಕ್ಕು ಸುಮ್ಮನಾಗಬಹುದು. ಆದರೆ ನಮ್ಮ ಮನೆಗಳಿಗೆ ಬರುವ ಹೊಸ ತಲೆಮಾರು ಅದೇ ಕನ್ನಡವನ್ನು ಕಲಿತು ನಾಳೆಗೆ ಅದನ್ನು ದಾಟಿಸುತ್ತದೆ ಎಂಬುದು ಭಾಷೆಗೆ ಒದಗಿದ ಅಪಾಯ. ಈ ಹಿನ್ನೆಲೆಯಲ್ಲಿ ಡಬ್ಬಿಂಗ್ ಎಂದರೆ ಅನುವಾದವಲ್ಲ ಎಂಬುದನ್ನು ಸಹ ನೋಡುಗರು ತಿಳಿಯಬೇಕಿದೆ.
ಈ ಮಾತನ್ನು ಆಡಿದೊಡನೆ ಅನೇಕರು “ಭಾಷೆಯು ಬೆಳೆಯುವುದೇ ಹಾಗೆ” ಎಂದು ಮತ್ತೆ ವಾದ ಹೂಡುತ್ತಾರೆ. ಆದರೆ ಕಾರ್ಮಿಕರಾದ ನೀವು ಆಲೋಚಿಸಿ, ಒಂದು ಯಂತ್ರವನ್ನು ಬಿಡಿಸಿ ಇಡುವುದಕ್ಕೆ ಯಾವಾಗಲೂ ಒಂದು ಕ್ರಮ ಇರುತ್ತದೆ. ಪ್ರತೀ ಕಾರ್ಮಿಕನೂ ಕುಶಲಕರ್ಮಿಯಾದ್ದರಿಂದ ಆತ ಅದೇ ಕ್ರಮದಲ್ಲಿ ಕೆಲಸ ಮಾಡುತ್ತಾನೆ, ಯಶಸ್ವಿಯಾಗುತ್ತಾನೆ. ಆ ಮೂಲಕ ತನ್ನ ಕೆಲಸಕ್ಕೆ ಒಂದು ನಿಯತಿಯನ್ನು ನಿಯಮವನ್ನು ಸಾಧಿಸುತ್ತಾನೆ. ಆದರೆ ಇದೇ ಕೆಲಸ ಆ ಕ್ರಮ ಗೊತ್ತಿಲ್ಲದವನು ಮಾಡಿದರೆ ಯಂತ್ರವನ್ನು ಬಿಚ್ಚಿಡಬಹುದು, ಆದರೆ ಅದನ್ನು ಕೂಡಿಸುವುದು ತಿಳಿಯದೆ ಆ ವ್ಯಕ್ತಿ ಕೈಚೆಲ್ಲುತ್ತಾನೆ. ಅದೇ ಮಾದರಿಯಲ್ಲಿ “ಡಬ್ಡ್” ಕೃತಿಗಳು ಆದಾಗ ಭಾಷೆ ಎಂಬ ಬಹುದೊಡ್ಡ ಯಂತ್ರವು ಕಲಿಕೆಯನ್ನೇ ಪಲ್ಲಟಗೊಳ್ಳುತ್ತದೆ. ಶಾಲೆಯಲ್ಲಿ ಕಲಿತದ್ದು – ಮನೆಯಲ್ಲಿ ಅವರಿವರ ಬಾಯಲ್ಲಿ ಕೇಳಿದು ಬೇರೆ ಭಾಷಾ ಕ್ರಮ, ಇಲ್ಲಿ ಕೇಳುತ್ತಿರುವುದು ಬೇರೆ ಭಾಷಾ ಕ್ರಮ ಎಂದಾಗುತ್ತದೆ. (ಈ ಹಿನ್ನೆಲೆಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತು ಬಂದ ಹಲವರು ನಮ್ಮ ಎಫ್‍ಎಂ ರೇಡಿಯೋಗಳಲ್ಲಿ ಆಡುತ್ತಾ ಇರುವ ಬಾಷೆಯನ್ನು ಗಮನಿಸಬಹುದು.) ಇಂತಹುದನ್ನು ಸರಿಪಡಿಸಲು ಹೊಸ ಸಾಫ್ಟ್ ವೇರ್‍ಗಳಿವೆ ಎನ್ನುವವರಿದ್ದಾರೆ. ಈ ಸಾಫ್ಟ್ ವೇರ್‍ಗಳು ಎಂತಹ ಕೆಲಸ ಮಾಡುತ್ತವೆ ಎಂಬುದಕ್ಕೆ ಉತ್ತಮ ಉದಾಹರಣೆಗೆ ಯಾವುದಾದರೂ ಇಂಗ್ಲೀಷ್ ವಾಕ್ಯವನ್ನು ಗೂಗಲ್ ಕನ್ನಡದಲ್ಲಿ ಅನುವಾದಿಸಿ ನೋಡಿ. ಅದರ ಅಸಾಡ್ಡಾಳ ಅನುವಾದ ನಿಮಗೆ ಅರಿವಾಗುತ್ತದೆ. ಡಬ್ಬಿಂಗಿಗಾಗಿ ತಯಾರಾಗುವ ಸಾಫ್ಟ್‍ವೇರ್‍ಗಳು ಇದಕ್ಕಿಂತ ಉತ್ತಮ ಕೆಲಸ ಮಾಡುವ ಸಾಧ್ಯತೆ ಇಲ್ಲ. ಇನ್ನೂ ಜಪಾನೀ ಭಾಷೆಯ ಮೂಲ ಸ್ವರೂಪವಾದ ಮೇಲಿನಿಂದ ಕೆಳಗೆ ಬರೆಯುವುದನ್ನೇ ಸಾಧಿಸಲಾಗದೆ ನಮ್ಮ ಸಾಫ್ಟ್‍ವೇರ್ ಜನ ತಮ್ಮ ಗಣಕಯಂತ್ರಗಳ ಮೂಲಕ/ ಸ್ಮಾರ್ಟ್ ಫೋನ್ ಮೂಲಕ ಜಪಾನೀಯರಿಗೆ ಎಡದಿಂದ ಬಲಕ್ಕೆ ಬರೆಯಲು ಕಲಿಸುತ್ತಿದ್ದಾರೆ ಎಂಬುದು ಸಹ ತಮಗೆ ನೆನಪಿರಲಿ.
ಇನ್ನೂ ಮುಂದುವರೆದು ಈ ವಿಷಯದ ಬಗ್ಗೆ ಮಾತಾಡುವುದಾದರೆ ‘ಈ ಡಬ್ಬಿಂಗ್ ಸಿನಿಮಾಗಳು ನೆರೆರಾಜ್ಯಗಳಲ್ಲಿ ಯಾವ ಹಾನಿಯನ್ನೂ ಮಾಡಿಲ್ಲ ಇಲ್ಲೇಕೆ ಮಾಡುತ್ತದೆ?’ ಎಂಬ ಮಾತಾಡುವವರಿದ್ದಾರೆ. ಅವರಿಗೆ ಆಯಾ ರಾಜ್ಯಗಳಲ್ಲಿ ಡಬ್ಬಿಂಗ್‍ನಿಂದ ಆಗಿರುವ ಹಾನಿಯ ಪರಿಚಯ ಇಲ್ಲ. ಮೊದಲಿಗೆ ಡಬ್ಬಿಂಗ್ ಆಗುವ ಸಿನಿಮಾಗಳು ನಮ್ಮ ನಾಡಿನ ಒಳಗಡೆ ಡಬ್ಬಿಂಗ್ ಆಗುವುದಿಲ್ಲ, ಬದಲಿಗೆ ಮೂಲ ಸಿನಿಮಾ ಎಲ್ಲಿ ಸೆನ್ಸಾರ್ ಪ್ರಮಾಣ ಪತ್ರ ಪಡೆಯಿತೊ ಅಲ್ಲಿಯೇ ಡಬ್ಬಿಂಗ್ ಆಗುತ್ತವೆ. ಡಬ್ಬಿಂಗ್ ಆದ ನಂತರ ಅಲ್ಲಿಯೇ ಸೆನ್ಸಾರ್ ಪ್ರಮಾಣಪತ್ರ ನೀಡಲಾಗುತ್ತದೆ. (ಆಯಾ ದೇಶಭಾಷೆಗಳಲ್ಲಿ ಇರುವ ಸೆನ್ಸಾರ್ ಮಂಡಳಿಯಲ್ಲಿ ಕನ್ನಡಿಗರು ಇರುವುದಿಲ್ಲ ಎಂಬುದು ಸಹ ನೆನಪಿರಲಿ.) ಹೀಗಾಗಿ ಇಲ್ಲಿನ ಸ್ಥಳೀಯ ಕಲಾವಿದರಿಗೆ ಇದರಿಂದ ಕೆಲಸ ಸಿಗುವುದಿಲ್ಲ. ಚೆನ್ನೈ, ಮುಂಬೈ ಅಥವಾ ಮೂಲ ಭಾಷೆಯ ಸಿನಿಮಾ ಎಲ್ಲಿ ಆಯಿತೋ ಅಲ್ಲಿನ ಕಲಾವಿದರೇ ಡಬ್ಬಿಂಗ್ ಮಾಡುತ್ತಾರೆ. ಸ್ಥಳೀಯರಿಗೆ ಇಲ್ಲಿ ತಯಾರಾಗುವ ಸಿನಿಮಾ/ಧಾರಾವಾಹಿಗಳ ಕೆಲಸಗಳೂ ಡಬ್ಬಿಂಗಿನಿಂದ ಕಡಿಮೆಯಾಗಿ, ಅವರು ನೆರೆರಾಜ್ಯಗಳಿಗೆ ಡಬ್ಬಿಂಗ್ ಕೆಲಸ ಹುಡುಕಿಕೊಂಡು ಹೋಗುವಂತಾಗುತ್ತದೆ. ಇದಕ್ಕೆ ಉದಾಹರಣೆಯಾಗಿ ಮಲೆಯಾಳದಲ್ಲಿ ನಾಲ್ಕೈದು ವರ್ಷಗಳ ಹಿಂದೆ ಡಬ್ಬಿಂಗ್‍ಗೆ ಅವಕಾಶ ಮಾಡಿಕೊಟ್ಟ ನಂತರ ಧಾರಾವಾಹಿಗಳು, ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸುತ್ತಾ ಇದ್ದ ಕಲಾವಿದರು ಚೆನ್ನೈ, ಹೈದರಾಬಾದಿಗೆ ವಲಸೆ ಹೋಗುವಂತಾಗಿದ್ದನ್ನು ಗಮನಿಸಬಹುದು. ನಾವು ಬಯಸುತ್ತಾ ಇರುವುದು ಇಂತಹ ವಲಸೆಯನ್ನೇ?
ಹೋಗಲಿ “ಡಬ್ಬಿಂಗ್” ಬೇಕು ಎನ್ನುವವರು ಹೇಳುವಂತೆ ನಮ್ಮ ನಾಡಿನಲ್ಲಿ ಕೇವಲ ಮೂಲ ಭಾಷೆಯ ಕನ್ನಡ ಡಬ್ ಆದ ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತವೆಯೇ? ಇಲ್ಲ. ಮೂಲ ಭಾಷೆಯಲ್ಲದೇ ಅದು ಅದಾಗಲೇ ಡಬ್ ಆಗಿರುವ ಇತರ ಭಾಷೆಗಳಲ್ಲೂ ಬಿಡುಗಡೆಯಾಗುತ್ತವೆ. ಇತ್ತೀಚಿನ ‘ಬಾಹುಬಲಿ’ಯಂತಹ ಚಿತ್ರ ಬಿಡುಗಡೆಯಾದಾಗ ಒಂದೇ ಮಲ್ಟಿಪ್ಲೆಕ್ಸಿನಲ್ಲಿ ತೆಲುಗು, ತಮಿಳು, ಹಿಂದಿ ಅವತರಣಿಕೆಗಳು ಬಿಡುಗಡೆಯಾಗಿದ್ದವು. ಅದರ ಜೊತೆಗೆ ಕನ್ನಡವೂ ಸೇರಿದರೆ – ಅದು ಕನ್ನಡ ಚಿತ್ರಗಳಿಗೆ ಇರುವ ತಾಣಗಳನ್ನು ಆಕ್ರಮಿಸಿಕೊಳ್ಳುತ್ತದೆ. ಆ ಮೂಲಕ ನಮ್ಮಲ್ಲಿ ತಯಾರಾಗುವ ಕನ್ನಡ ಸಿನಿಮಾಗಳಿಗೆ ಪ್ರದರ್ಶನ ಮಂದಿರ ಕೊರತೆ ಹೆಚ್ಚಾಗುತ್ತದೆ. ಅದಕ್ಕಾಗಿ ಮತ್ತೊಂದು ಚಳುವಳಿ ಮಾಡಬೇಕಾಗುತ್ತದೆ. ನಾವು ಬಯಸುವುದು ಇಂತಹ ಅನಾರೋಗ್ಯಕರ ಸ್ಪರ್ಧೆಯನ್ನೇ…? ಈಗ ಕನ್ನಡದಲ್ಲಿಯೇ ತಯಾರಾಗುತ್ತಾ ಇರುವ ವರ್ಷಕ್ಕೆ 150 ಸಿನಿಮಾಗಳು ಮತ್ತು ಸರಿಸುಮಾರು ಆರು ವಾಹಿನಿಗಳಿಂದ ಪ್ರಸಾರವಾಗುತ್ತಾ ಇರುವ 65 ಧಾರಾವಾಹಿಗಳ ಬದಲಿಗೆ ಡಬ್ ಆದ ಸಿನಿಮಾ/ಧಾರಾವಾಹಿಗಳನ್ನು ನೋಡಬೇಕೆಂಬುದು ನಿಮ್ಮ ಬಯಕೆಯೇ? ಆ ಮೂಲಕ ಸ್ಥಳೀಯ ಕಾರ್ಮಿಕರು – ಕಲಾವಿದರನ್ನು ಬದಲಿ ಉದ್ಯೋಗ ಹುಡುಕಿಕೊಳ್ಳಿ ಎಂದು ನೀವು ಹೇಳುತ್ತಿದ್ದೀರಾ?… ಯೋಚಿಸಿ…
ಇಂತಹದೊಂದು ವ್ಯವಸ್ಥೆ ಅಥವಾ ಕಟ್ಟುಪಾಡು ಕನ್ನಡದಲ್ಲಿ ಬರುವಂತೆ ಮಾಡಿದವರಾದರೂ ಯಾರು? ಕನ್ನಡ ಹೋರಾಟಗಾರರು. ಅನಕೃ, ಮ.ರಾಮಮೂರ್ತಿ, ರಾಜ್‍ಕುಮಾರ್ ಮುಂತಾದ ಅನೇಕರು ಮತ್ತು ಆಗಿನ ಕಾರ್ಮಿಕ ಬಂಧುಗಳು ‘ಡಬ್ಬಿಂಗ್ ವಿರೋಧಿ ಹೋರಾಟ’ವನ್ನು 1961 ರಿಂದ 1964ರ ವರೆಗೆ ನಿರಂತರವಾಗಿ ನಡೆಸಿ, 1965ರಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಚಿತ್ರ ಪ್ರದರ್ಶನಗೊಳ್ಳಬಾರದು ಎಂಬ ಕಟ್ಟುಪಾಡು ರೂಪಿಸಿದರು ಎಂಬುದನ್ನು ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕದಲ್ಲಿ ಓದಬಹುದು. ಆ ಹೋರಾಟಗಾರರಿಗೆ ಇಷ್ಟೆಲ್ಲಾ ಹೊಳೆಯದೆ ಈ ಕಟ್ಟುಪಾಡು ರೂಪಿಸಿದರೆ? ಐವತ್ತು ವರ್ಷಗಳಿಂದ ಜಾರಿಯಲ್ಲಿ ಇರುವ ವ್ಯವಸ್ಥೆಯೊಂದು ಇವತ್ತು ಕೆಲವರ ಬೇಡಿಕೆಯ ಕಾರಣಕ್ಕೆ ಬದಲಾಗಬೇಕೆ? ಹಾಗೆ ಬದಲಾಗುವುದರಿಂದ ನಮಗೆ ಲಾಭವಾಗುವುದಿಲ್ಲ ಎಂಬುದು ತಿಳಿದಿದ್ದರೂ ಅದನ್ನು ತರಬೇಕೆ?
ಈ ಮಾತಾಡಿದರೆ – ಆ ಕಾಲ ಬೇರೆ ಈ ಕಾಲ ಬೇರೆ ಎನ್ನುವ ಮಾತಾಡುತ್ತಾರೆ. ಕಾಲ ಯಾವುದಾದರೇನು ಕನ್ನಡ ಭಾಷೆಯ ಮತ್ತು ಅದು ಬದುಕುವ ಕ್ರಮಗಳು ಬದಲಾಗಿಲ್ಲ. ಕನ್ನಡಕ್ಕೆ ಹತ್ತು ಹಲವು ಭಾಷೆಗಳಿಂದ ಹೊಸ ಪದಗಳು ಸೇರಿಕೊಂಡಿವೆ. ಕನ್ನಡವು ಜೀವಂತವಾಗಿಯೇ ಇದೆ.
ಈ ಸಂದರ್ಭದಲ್ಲಿ “ಡಬ್ಬಿಂಗ್” ಬೇಡ ಎನ್ನುತ್ತಿರುವುದು ತುಟಿ ಚಲನೆಯನ್ನಾಧರಿಸಿ ಕಟ್ಟಿದ ಮಾತುಗಳನ್ನುಳ್ಳ ಮನರಂಜನಾ ಕಾರ್ಯಕ್ರಮಕ್ಕೆ ಮಾತ್ರ. ಮಾಹಿತಿಪೂರ್ಣ ಸಾಕ್ಷ್ಯಚಿತ್ರಗಳು, ಕಾರ್ಟೂನ್ ಚಿತ್ರಗಳು ಮೊದಲಿನಿಂದಲೂ ಡಬ್ ಆಗುತ್ತಾ ಇವೆ. ಈಗಲೂ ಆಗುತ್ತಿವೆ. ನೀವು ನಿಮ್ಮ ಪ್ರಶ್ನೆಯಲ್ಲಿ ಕೇಳಿದ ‘ಜ್ಞಾನ’ ದಾಟಿಸುವ ಕೆಲಸಕ್ಕೆ ಯಾವ ಅಡತಡೆಯೂ ಆಗಿಲ್ಲ. ಈಗಲೂ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕುರಿತ ಅನೇಕ ಸಾಕ್ಷ್ಯಚಿತ್ರಗಳು ನಿತ್ಯವೂ ಡಬ್ ಮಾಡಿಯೇ ತೋರಿಸಲಾಗುತ್ತಾ ಇದೆ. ದುರಂತವೆಂದರೆ ನಮ್ಮಲ್ಲಿನ ಬಹುತೇಕರು ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸಿರುವುದರಿಂದ ಆ ಮಕ್ಕಳು ಇಂಗ್ಲೀಷಿಗೆ ಡಬ್ ಆಗಿರುವ ಪಾಠಗಳನ್ನು ಎಜುಸ್ಯಾಟ್ ತಂತ್ರದ ಮೂಲಕ ಪ್ರತಿದಿನ ನೋಡುತ್ತಾ ಇದ್ದಾರೆ, ಅಷ್ಟೆ. ಸರ್ಕಾರೀ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಈ ಸಾಕ್ಷ್ಯ ಚಿತ್ರಗಳು ಕನ್ನಡದಲ್ಲಿಯೂ ಸಿಗುತ್ತವೆ. ಅವುಗಳನ್ನು ಒಮ್ಮೆ ನೋಡಿ. ಅದರಲ್ಲಿನ ಅಸಾಡ್ಡಾಳ ಕನ್ನಡವನ್ನು ನೀವೂ ಕೇಳಬಹುದು. ಇನ್ನೂ ಕಾರ್ಟೂನ್ ಚಿತ್ರಗಳಂತೂ ಡಬ್ ಆಗುತ್ತಲೇ ಇವೆ. ಕನ್ನಡದಲ್ಲಿ ಕಾರ್ಟೂನ್ ಚಿತ್ರಗಳನ್ನು ಪ್ರಸಾರ ಮಾಡುವ ಚಿಂಟೂ ಎಂಬ ವಾಹಿನಿಯೇ ಕಳೆದ ಹತ್ತು ವರ್ಷಗಳಿಂದ ಪ್ರಸಾರವಾಗುತ್ತಾ ಇದೆ.
ಈ ವಿಷಯವಾಗಿ ನಾನು ನಿಮ್ಮೊಡನೆ ಇನ್ನೂ ಅನೇಕ ವಿಷಯಗಳನ್ನು ಮಾತಾಡಬಹುದು. ಸಧ್ಯಕ್ಕೆ ಇಷ್ಟು ಸಾಕು. ಇನ್ನೂ ಈ ವಿಷಯದ ಬಗ್ಗೆ ಮಾಹಿತಿ ಬಯಸುವವರು ಅದಾಗಲೇ ನಾನು ತಿಳಿಸಿದ ನನ್ನ ಬ್ಲಾಗನ್ನು (bsuresha.wordpress.com) ನೋಡಬಹುದು ಒಟ್ಟಾರೆ ಭಾಷೆಯ ಮೇಲೆ “ಡಬ್ಬಿಂಗ್” ಭಾಷೆಯ ಹೇರಿಕೆಯನ್ನು ಇನ್ಯಾರಲ್ಲದಿದ್ದರೂ ಕಾರ್ಮಿಕ ಲೋಕ ವಿರೋಧಿಸಬೇಕಿದೆ.

4. ಇಂದಿನ ಕನ್ನಡಿಗ ಇಂಗ್ಲಿಷ್ ಹಾಗೂ ಪರಭಾಷೆಗಳ ಅಬ್ಬರ, ಆಕರ್ಷಣೆಗಳೆದುರು ಮಂಕಾಗಿದ್ದಾನೆ. ಪರಭಾಷಾ ಚಿತ್ರಗಳನ್ನು ನೋಡುತ್ತಾ ಕನ್ನಡ ಆಸ್ಮಿತೆಯನ್ನೇ ಮರೆಯುತ್ತಿದ್ದಾನೆ. ಬೆಂಗಳೂರಿನಲ್ಲಂತೂ ಕನ್ನಡಿಗನೇÀ ಅಲ್ಪಸಂಖ್ಯಾತ! ಕರ್ನಾಟಕವಂತೂ ಈಗಲೇ ಪರಭಾಷಾ ಚಿತ್ರಗಳ ಹುಲುಸಾದ ಮಾರುಕಟ್ಟೆಯಾಗಿದೆ. ಮುಂದೆ ಹೇಗೋ? ಏನೋ? ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಮ್ಮ ಚಿತ್ರರಂಗದ ಹಿತಕ್ಕೆ ಧಕ್ಕೆಯಾಗದಂತೆ ಜ್ಞಾನ ಹಾಗೂ ಮನರಂಜನೆ ನೀಡುವ ಪರಭಾಷಾ ಚಿತ್ರಗಳನ್ನು ಡಬ್ ಮಾಡಬೇಕೆಂಬುದು ಒಂದು ವರ್ಗದ ಕನ್ನಡಿಗರ ಕೂಗು, ಮನವಿಯಾಗಿದೆ. ಪ್ರೇಕ್ಷಕನ ಪ್ರಜಾಸತ್ತಾತ್ಮಕ ಬೇಡಿಕೆಯನ್ನು `ಹತ್ತಿಕ್ಕದೇ’ ಇತಿಮಿತಿಯೊಳಗೆ ಮಾನ್ಯ ಮಾಡುವುದು ಪ್ರೇಕ್ಷಕನ ಅಭಿವ್ಯಕ್ತಿ ಸ್ವಾತಂತ್ರ್ಯನ್ನು, ಪ್ರಜಾಪ್ರಭುತ್ವ ಮೌಲ್ಯಗಳನ್ನು, ಪ್ರಗತಿಪರತೆಯನ್ನು ಎತ್ತಿ ಹಿಡಿದಂತಾಗುವುದಲ್ಲವೇ?

ಬಿ.ಸುರೇಶ: ಮತ್ತೆ ತಿರುಗಿಸಿ ಮುರುಗಿಸಿ ಅದೇ ಪ್ರಶ್ನೆಯನ್ನು ಕೇಳುತ್ತಾ ಇದ್ದೀರಿ. ಇಲ್ಲಿ ಯಾರ ಪ್ರಜಾಸತ್ತಾತ್ಮಕ ಬೇಡಿಕೆಯನ್ನೂ ಯಾರೂ ತಡೆಹಿಡಿದಿಲ್ಲ. ತಡೆಹಿಡಿಯುವ ಆಲೋಚನೆಯೂ ಇಲ್ಲ. ಬಲಗೈಯಲ್ಲಿ ಊಟ ಮಾಡುವುದು ಒಳಿತು ಎಂದು ಹೇಳುತ್ತಾ ಇದ್ದಾಗಲೂ ಯಾರೋ ಎಡಗೈಯಲ್ಲಿ ಊಟ ಮಾಡುತ್ತೇನೆ ಎಂದರೆ ಬೇಡ ಎಂದವರುಂಟೆ? ಅವರವರ ಖುಷಿ. ನಿಮಗೆ ಬೇಕೆನಿಸಿದ್ದನ್ನು ನೀವು ಮಾಡಬಹುದು. ಕನ್ನಡ ಉಳಿಸುವುದಕ್ಕೆ “ಡಬ್ಬಿಂಗ್”ನಿಂದ ಸಾಧ್ಯವಾಗುತ್ತದೆ ಎನ್ನುವುದು “ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳಿಗೆ ಉದ್ಯೋಗ ಸಿಗುತ್ತದೆ” ಎಂಬ ಭ್ರಮೆಯ ಹಾಗೆಯೇ ಮತ್ತೊಂದು ಮರೀಚಿಕೆಯ ಮಾತಷ್ಟೇ ಎಂದು ನಾನು ಹೇಳಬಹುದಷ್ಟೇ.
ಪರಭಾಷಾ ಚಿತ್ರಗಳಿಗೆ ನಮ್ಮ ನಾಡಿನಲ್ಲಿ ಮಾರುಕಟ್ಟೆ ವಿಸ್ತಾರವಾಗಿದ್ದು ಯಾವಾಗಿನಿಂದ ಎಂದು ಗಮನಿಸಿ. ಅದಾಗಿದ್ದು 1990ರ ದಶಕದಲ್ಲಿ. ಭಾರತವು ವಿಶ್ವಬ್ಯಾಂಕ್‍ನ ಜೊತೆಗೆ ಒಪ್ಪಂದ ಮಾಡಿಕೊಂಡು, ಮುಕ್ತ ಮಾರುಕಟ್ಟೆ ವ್ಯಾಪಾರ ಆರಂಭಿಸಿದಾಗ ಎಲ್ಲಾ ಹಳ್ಳಿಗಳು ಪಟ್ಟಣಗಳಾಗತೊಡಗಿದವು, ಪಟ್ಟಣಗಳು ನಗರಗಳಾಗತೊಡಗಿದವು, ಎಲ್ಲಾ ನಗರಗಳೂ ಮಹಾನಗರ ಆಗತೊಡಗಿದವು. ಈ ಪಲ್ಲಟದ ಜೊತೆಗೆ ಎಲ್ಲಾ ಊರುಗಳಲ್ಲಿ ಮಾಲ್ ಸಂಸ್ಕøತಿ ಮತ್ತು ಐಟಿ ಬಿಟಿ ಕಂಪೆನಿಗಳು ಆರಂಭವಾದವು. ಈ ಎಲ್ಲಾ ಬದಲಾವಣೆಗಳ ಜೊತೆಗೆ ಕೆಲಸ ಹುಡುಕಿಕೊಂಡು ಪರಭಾಷಿಕರು ವಲಸೆ ಬರತೊಡಗಿದರು. ಅದರೊಡನೆ ನಮ್ಮಲ್ಲಿನ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಪರಭಾಷಿಕರು ದಂಡು ದಂಡಾಗಿ ಬಂದು ನೆಲೆಸತೊಡಗಿದರು. ಹುಬ್ಬಳ್ಳಿಯಂತಹ ಕನ್ನಡದ್ದೇ ಆಗಿದ್ದ ಪ್ರದೇಶದಲ್ಲಿ ಈಗ ತಮಿಳು, ತೆಲುಗು, ಮಲೆಯಾಳಿಗರÀ ಸಂಖ್ಯೆ ಶೇಕಡ ಹತ್ತನ್ನು ದಾಟುತ್ತದೆ. ಅವರೊಂದಿಗೆ ಹಿಮದಿನ ದಿನಗಳಿಂದ ಆ ಪ್ರದೇಶದಲ್ಲಿ ಹಿಂದಿ ಮತ್ತು ಮರಾಠಿಗರು ಸಹ ಇದ್ದರು ಎಂಬುದನ್ನು ತಾವು ಗಮನಿಸಬೇಕು. ಈ ವಲಸಿಗರು ತಮ್ಮ ಭಾಷೆಯ ಸಿನಿಮಾಗಳನ್ನು ನೋಡಲಾರಂಭಿಸಿದರು. ತಮ್ಮ ಸ್ನೇಹಿತರ ಮಾತು ಕೇಳುತ್ತಾ ಕನ್ನಡಿಗರು ಸಹ ಆಯಾ ಭಾಷೆಯ ಸಿನಿಮಾಗಳನ್ನು ನೋಡಲಾರಂಭಿಸಿದರು. ಇದಕ್ಕಾಗಿಯೇ ಈಗ ಎಲ್ಲಾ ಪ್ರಾದೇಶಿಕ ಭಾಷೆಯ ಸಿನಿಮಾಗಳು ಇಂಗ್ಲೀಷ್ ಸಬ್‍ಟೈಟಲ್ಲಿನ ಜೊತೆಗೆ ಬಿಡುಗಡೆಯಾಗುತ್ತಾ ಇವೆ ಎಂಬುದನ್ನು ಸಹ ತಾವು ಗಮನಿಸಬೇಕು.
ಈ ಪರಭಾಷೆಯ ಸಿನಿಮಾಗಳು ಕನ್ನಡ ಸಿನಿಮಾಗಳಿಗಿಂತ ಹೆಚ್ಚು ಶ್ರೀಮಂತವಾಗಿರುತ್ತವೆ ಎಂಬುದು ಸಹ ನಮ್ಮ ಜನ ಪರಭಾಷೆಯ ಸಿನಿಮಾಗಳನ್ನು ನೊಡಲು ಕಾರಣ ಎಂಬುದನ್ನು ನಾವು ಮರೆಯಬಾರದು. ಆದರೆ ನಮ್ಮಲ್ಲಿ ಅದೇ ಬಗೆಯ ಸಾಂಸ್ಕøತಿಕ ಶ್ರೀಮಂತಿಕೆ ಮತ್ತು ಇನ್ನಿತರ ಶ್ರೀಮಂತಿಕೆಯನ್ನುಳ್ಳ ಸಿನಿಮಾಗಳು ಬಂದಾಗ (ಉದಾಹರಣೆ: ರಂಗಿತರಂಗ) ಪರಭಾಷಿಕರು ಸಹ ಅಷ್ಟೇ ಸಂಖ್ಯೆಯಲ್ಲಿ ನೋಡಿದ್ದಾರೆ ಎಂಬುದನ್ನು ಸಹ ತಾವು ಮರೆಯಬಾರದು.
ಎಲ್ಲಾ ಕಾಲದಲ್ಲಿಯೂ ಒಂದು ವರ್ಗದ ಜನರು ಸಮಾಜದ ಕಟ್ಟುಪಾಡುಗಳನ್ನು ಮೀರಿದ ಹಾಗೆ ಮತ್ತೇನೋ ಬಯಸುತ್ತಲೇ ಇರುತ್ತಾರೆ. ಮಡೆಸ್ನಾನ ಬೇಕು ಎನ್ನುವವರಿದ್ದ ಹಾಗೆ, ಬೇಡ ಎನ್ನುವವರೂ ಇದ್ದಾರೆ. ದನದ ಮಾಂಸ ತಿನ್ನಬಾರದು ಎನ್ನುವವರು ಇದ್ದ ಹಾU,É ಆಹಾರ ನಮ್ಮ ಹಕ್ಕು ಎನ್ನುವವರೂ ಇದ್ದಾರೆ. ಈ ಡಬ್ಬಿಂಗ್ ಬೇಕು ಎನ್ನುವ ಕೆಲವರು ಸಹ ಅದೇ ತರಹದವರು. ಜಗತ್ತು ನಡೆಯುವುದೇ ಹಾಗೆ. ಎಲ್ಲಾ ವಾದಗಳಿಗೂ ಪ್ರತಿವಾದ ಮತ್ತು ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಆದರೆ ಆಯಾ ಸಮಾಜ ತನ್ನ ಒಳಿತನ್ನು ತಾನು ನಿರ್ಧರಿಸುತ್ತದೆ ಎಂಬ ನಂಬುಗೆ ಈಗ ಸಡಿಲವಾಗಿದೆ. ಈಗ ದುಡ್ಡಿದ್ದವರು ಅಥವಾ ಕಾರ್ಪೋರೇಟ್ ಪ್ರಭುಗಳು ನಮಗೆ ಏನು ಬೇಕು ಎಂದು ನಿರ್ಧರಿಸುತ್ತಾರೆ. ನಾವಿಂದು ನೋಡುವ ಸುದ್ದಿಗಳನ್ನು ಕೂಡ ಅದೇ ಜನ ನಿಯಂತ್ರಿಸುತ್ತಾ ಇದ್ದಾರೆ. ಹಾಗಾಗಿಯೇ ನಾವು ಡಾಕ್ಟರ್ಡ್ ವಿಡಿಯೋ ನೋಡಿ, ಆ ಮಾಧ್ಯಮಿಗಳು ಯಾರನ್ನಾದರೂ ‘ದೇಶದ್ರೋಹಿ’ ಎಂದರೆ ನಂಬುತ್ತಾ ಇದ್ದೇವೆ. ಮುಂದೆಯೂ ನಮ್ಮ ತೀರ್ಮಾನಗಳಿಂದ, ಬಯಕೆಗಳಿಂದ ಏನೂ ಆಗುವುದಿಲ್ಲ. ಕಾರ್ಪೋರೇಟ್ ಪ್ರಭುಗಳಿಗೆ ಲಾಭವಿದ್ದರೆ ನಮ್ಮೆಲ್ಲರ ಇಚ್ಛೆ ಅನಿಚ್ಛೆಗಳನ್ನು ಮೀರಿ ಏನು ಬೇಕಾದರೂ ಬರುತ್ತದೆ. ಕುಲಾಂತರಿ ತಳಿಯನ್ನೇ ಬೆಳಸಿ, ಬಡಿಸಲು ನಿಂತಿರುವ ಜನ, ಅದೇ ಮಾದರಿಯ ಡಬ್ಬಿಂಗ್ ಸಿನಿಮಾದಿಂದ ಲಾಭವಿದ್ದರೆ ಬಿಟ್ಟಾರೆಯೇ… ಇಂತಹುದನ್ನು ಬೇಡುತ್ತಾ ಇರುವ ಒಂದು ವರ್ಗದ ಜನ ಈ ವ್ಯಾಪಾರೀ ವರ್ಗದ ನೆರಳಲ್ಲೇ ಇದ್ದೂ ಅದನ್ನರಿತಿಲ್ಲವಲ್ಲ ಎಂದು ನಾನು ನಗಬಹುದಷ್ಟೇ…

5. ಬಿ. ಸುರೇಶ್ ಎಂದರೆ ಅದು ಬಹುಮುಖ ವ್ಯಕ್ತಿತ್ವದ ಸೃಜನಶೀಲತೆ, ಕ್ರಿಯಾಶೀಲತೆ, ಸದಭಿರುಚಿಗಳ ಮೂರ್ತರೂಪ. ನಿಮ್ಮೆಲ್ಲ ಚಟುವಟಿಕೆಗಳ ಹಿಂದೆ ಅಮ್ಮ ಡಾ.ವಿಜಯಮ್ಮ, ಮಡದಿ ನಿರ್ಮಾಪಕಿ ಶೈಲಜಾನಾಗ್, ಸಹೋದರ ಗುರು ಇವರುಗಳ ಪಾತ್ರದ ಬಗ್ಗೆ, ನಿಮ್ಮ ಸ್ಫೂರ್ತಿಯ ಬಗ್ಗೆ ದಯಮಾಡಿ ತಿಳಿಸಿ…

ಬಿ.ಸುರೇಶ : ನಾನು ಈಗ ಏನಾಗಿದ್ದೇನೋ ಅದಕ್ಕೆ ನನ್ನ ಸುತ್ತಲ ಪರಿಸರವೇ ಕಾರಣ. ನನಗೆ ಒದಗಿದ ಪರಿಸರವನ್ನು ಒದಗಿಸಿದಾಕೆ ನನ್ನ ಅಮ್ಮ, ಡಾ.ವಿಜಯಮ್ಮ. ಈ ಅಮ್ಮ ನನಗೆ ಮಾತ್ರವಲ್ಲ ಈ ನಾಡಿನ ಹಲವರಿಗೆ ಅಮ್ಮ. ಹಾಗಾಗಿಯೇ ನನಗೆ ಈ ನಾಡಿನಾದ್ಯಂತ ಸಹೋದರರು ಹಾಗೂ ಸಹೋದರಿಯರು ಇದ್ದಾರೆ ಎಂಬುದು ಖುಷಿಯ ಸಂಗತಿ.
ನನ್ನ ಬಾಲ್ಯದ ದಿನಗಳಲ್ಲಿ, ಅಂದರೆ ನನಗೆ ಸರಿಸುಮಾರು ಒಂಬತ್ತು ವರ್ಷಗಳಾಗಿದ್ದ ಕಾಲದಿಂದ, ನಾನು ಮನೆಯಲ್ಲಿ ಬಹುತೇಕ ಒಬ್ಬನೇ ಇರುತ್ತಿದ್ದೆ. ಏಕೆಂದರೆ ಅಮ್ಮ ಬೆಳಿಗ್ಗೆಯೇ ಕೆಲಸಕ್ಕೆ ಹೊರಟು ತಡರಾತ್ರಿಗೆ ಮನೆ ಸೇರುತ್ತಾ ಇದ್ದರು. ನನ್ನ ಅಣ್ಣ ಗುರುಮೂರ್ತಿ ಬೆಳಿಗ್ಗೆ – ಸಂಜೆ ಟ್ಯೂಟರಿಯಲ್ಸ್‍ಗೆ ಹೋಗುತ್ತಾ ಇದ್ದ. ಅವನೂ ಮನೆಗೆ ಹಿಂದಿರುಗುವುದು ತಡವಾಗುತ್ತಿತ್ತು. ಈ ಸಂದರ್ಭದಲ್ಲಿ ನನಗೆ ಸಂಗಾತಿಯಾಗಿದ್ದು ಮನೆಯ ತುಂಬ ಅಮ್ಮ ಇರಿಸಿದ್ದ ಪುಸ್ತಕಗಳು. ನಾನು ಏಳನೆಯ ತರಗತಿಗೆ ಬರುವ ಹೊತ್ತಿಗೆ ಅದೆಷ್ಟು ಓದುವ ಚಟ ಬೆಳೆಸಿಕೊಂಡಿದ್ದೆ ಎಂದರೆ ಕುವೆಂಪು ಅವರ ‘ಕಾನೂರು ಸುಬ್ಬಮ್ಮ’ ಮತ್ತು ‘ಮಲೆಗಳಲ್ಲಿ ಮಧುಮಗಳು’ ಓದಿ ಮುಗಿಸಿದ್ದೆ. ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ಈ ಕಾದಂಬರಿಗಳನ್ನು ಕುರಿತು ಭಾಷಣವನ್ನೂ ಮಾಡಿದ್ದೆ. ಅಲ್ಲಿದ್ದ ತೀರ್ಪುಗಾರರಿಗೆ ನಾನಾಡಿದ ಮಾತು ಯಾರೋ ಬರೆದುಕೊಟ್ಟದ್ದು ಎಂಬ ಅನುಮಾನ ಬಂದು ನನ್ನನ್ನು ಮತ್ತೆ ಮತ್ತೆ ಪ್ರಶ್ನಿಸಿದ್ದರು. ನನ್ನ ಉತ್ತರ ಕೇಳಿ, ಈ ಹುಡುಗ ಅದಾಗಲೇ ಕುವೆಂಪು ಅವರನ್ನು ಓದಿದ್ದಾನಲ್ಲಾ ಎಂದು ಅಚ್ಚರಿಯಿಂದ ಮಾತಾಡಿ ಬಹುಮಾನವನ್ನೂ ಕೊಟ್ಟಿದ್ದರು. ಈ ಪುಸ್ತಕದ ಜೊತೆಗೆ ಅಮ್ಮ ನನಗೆ ಒದಗಿಸಿದ್ದು ನಾಡಿನ ಹಿರಿಯರನ್ನು ಮನೆಯಲ್ಲಿಯೇ ನೋಡಬಹುದಾದ ಭಾಗ್ಯ. ಅಮ್ಮನ ಭೇಟಿಗೆ ಮತ್ತು ಅಮ್ಮನೊಂದಿಗೆ ಅನೇಕ ವಿಷಯ ಕುರಿತು ಚರ್ಚೆಗೆ ಬರುತ್ತಾ ಇದ್ದ ಕಾರ್ನಾಡರು, ಕಂಬಾರರು, ಕಾರಂತರು, ಅನಂತಮೂರ್ತಿ, ಹಾ.ಮ.ನಾ., ತ.ರಾ.ಸು., ಲಂಕೇಶರು, ಎಸ್.ಎಲ್.ಬೈರಪ್ಪ, ಬನ್ನಂಜೆ, ಕೆ.ಎಂ.ಶಂಕರಪ್ಪ, ಕಿ,ರಂ.ನಾಗರಾಜ್, ಡಿ.ಆರ್,ನಾಗರಾಜ್, ಪ್ರಸನ್ನ ಮುಂತಾದ ಹಿರಿಯರು ಮನೆಯಂಗಳದಲ್ಲಿ ಸಾಹಿತ್ಯ ಸಂಸ್ಕøತಿ ಕುರಿತು ಆಡುತ್ತಾ ಇದ್ದ ಮಾತುಗಳು ನಿರಂತರವಾಗಿ ಕಿವಿಗೆ ಬೀಳುತ್ತಾ ಇದ್ದವು. ಜೊತೆಗೆ ಆಗ ತಾನೇ ಶುರುವಾಗಿದ್ದ ಕನ್ನಡದ ಹೊಸ ಅಲೆ ಸಿನಿಮಾ ಸೃಷ್ಟಿಕರ್ತರಾದ ಗಿರೀಶ್ ಕಾಸರವಳ್ಳಿ, ಜಿ.ವಿ.ಅಯ್ಯರ್, ಉಮೇಶ್ ಕುಲಕರ್ಣಿ, ಎಸ್.ರಾಮಚಂದ್ರ ಮುಂತಾದವರು ಸಹ ತಮ್ಮ ಸಿನಿಮಾದ ಚಿತ್ರಕತೆಯನ್ನು ನಮ್ಮ ಮನೆಯ ಅಂಗಳದಲ್ಲಿ ಚರ್ಚಿಸುತ್ತಾ ಇದ್ದರು. ಇದರಿಂದಾಗಿ ನನಗೆ ಸಿನಿಮಾದ ಸಂಪರ್ಕವೂ ಒದಗಿ ಬಂದಿತು. ಇದೇ ಕಾಲದಲ್ಲಿ ಎ.ಎಸ್.ಮೂರ್ತಿಯವರ ಮನೆಯ ಎದುರಿನ ಅಂಗಳದಲ್ಲಿ ನಾವೆಲ್ಲರೂ ಚಿನ್ನಿ ದಾಂಡು, ಗೋಲಿ ಆಡುತ್ತಾ ಇದ್ದುದರಿಂದ ನಾಟಕದ ಸಂಪರ್ಕವೂ ಒದಗಿ ಬಂದಿತು. ನಾನು ಬಾಲನಟನಾಗಿಯೂ ಅನೇಕ ನಾಟಕಗಳಲ್ಲಿ 1972ರಿಂದ ಅಭಿನಯಿಸಲು ಆರಂಭಿಸಿದೆ. ಇದೆಲ್ಲವೂ ನನ್ನ ಶಾಲೆಯ ಓದಿಗಿಂತ ಹೆಚ್ಚಿನ ಆನಂದವನ್ನು ಹಾಗೂ ಜ್ಞಾನವನ್ನು ನನಗೆ ನೀಡಿದ್ದವು.
ಅದೇ ಕಾಲದಲ್ಲಿ ನಾನು ನನ್ನ ಮೊದಲ ಕತೆಯನ್ನು ಸಹ ಬರೆದಿದ್ದೆ. ಅದು ಮಲ್ಲಿಗೆ ಪತ್ರಿಕೆಯಲ್ಲಿ ಪ್ರಕಟವಾಗಿ. ನನ್ನ ಶಾಲೆಯ ವಿಳಾಸಕ್ಕೆ ಹದಿನೈದು ರೂಪಾಯಿಗಳು ಅಂಚೆಯಲ್ಲಿ ಬಂದಿತ್ತು. ನಮ್ಮ ಶಾಲೆಯ ಟೀಚರುಗಳೆಲ್ಲಾ ನನ್ನನ್ನು ಮುದ್ದಾಡಿದ್ದರು. ಜೊತೆಗೆ ಕಾರಂತರು, ಕಂಬಾರರ, ಮೂರ್ತಿಗಳ ನಾಟಕಗಳಲ್ಲಿ ಅಭಿನಯದ ಕಾರಣವಾಗಿ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು. ಇದೆಲ್ಲದರ ಬೆನ್ನಿಗೆ ಆಗ ಆರಂಭವಾಗಿದ್ದ ಚಿತ್ರ ಸಮಾಜ ಚಳುವಳಿಯಲ್ಲಿ ಅಮ್ಮ ತೊಡಗಿಕೊಂಡಿದ್ದರಿಂದ ಕುರಾಸೋವಾ, ಬರ್ಗ್‍ಮನ್, ಸತ್ಯಜಿತ್ ರೇ ಮುಂತಾದ ಜಾಗತಿಕ ಚಲನಚಿತ್ರ ನಿರ್ದೇಶಕರ ಸಿನಿಮಾಗಳನ್ನು ನೋಡುವ ಅವಕಾಶವೂ ಸಿಕ್ಕಿತ್ತು. ಹೀಗಾಗಿ ಕನ್ನಡದ ಹೊಸ ಅಲೆಯ ಚಿತ್ರ ಚಳುವಳಿಯಿಂದ ಬಂದ ಹೊಸ ಸಿನಿಮಾಗಳನ್ನು ಕುರಿತ ಸಂವಾದದಲ್ಲಿಯೂ ನಾನು ಪಾಲ್ಗೊಳ್ಳುತ್ತಿದ್ದೆ. ಇದೆಲ್ಲದರಿಂದ ನನ್ನ ವ್ಯಕ್ತಿತ್ವ/ ನನ್ನ ರಾಜಕೀಯ ಚಿಂತನೆ/ ನನ್ನ ಸಾಮಾಜಿಕ ಕಳಕಳಿಗಳು ರೂಪುಗೊಂಡವು.
ಇಷ್ಟೆಲ್ಲಾ ಆಗುವಾಗಲೇ ನನ್ನ ಓದು ಸಹ ಮುಂದುವರೆದು, ಅದರ ಫಲವಾಗಿ ನನಗೆ ಬಿಎಚ್‍ಇಎಲ್ ಸಂಸ್ಥೆಯಲ್ಲಿ ಕೆಲಸವೂ ಸಿಕ್ಕಿತು (1981 ಜೂನ್) ಅಲ್ಲಿಯೂ ರಂಗಚಟುವಟಿಕೆ ನಡೆಸುವ ಅವಕಾಶ ಒದಗಿ ಬಂದಿತು. ಆ ಹೊತ್ತಿಗೆ ನಾನೇ ನಾಟಕವನ್ನೂ ಬರೆಯಲು ಆರಂಭಿಸಿದ್ದೆ. ಆ ನಾಟಕಗಳಲ್ಲಿ ಕೆಲವನ್ನು ನಾನೇ ನಿರ್ದೇಶನವನ್ನೂ ಮಾಡುತ್ತಾ ಇದ್ದೆ. ಇವುಗಳ ಕಾರಣವಾಗಿ ಸಿನಿಮಾ ಮತ್ತು ಟಿವಿ ಉದ್ಯಮಗಳಲ್ಲಿ ಅವಕಾಶಗಳು ದೊರೆತವು. ಈ ಹೊರಗಿನ ಕೆಲಸಗಳ ಒತ್ತಡ ಹೆಚ್ಚಾದಾಗ ನಾನು ಫ್ಯಾಕ್ಟರಿ ಕೆಲಸವನ್ನು ಬಿಟ್ಟು (1988 ಅಕ್ಟೋಬರ್) ಪೂರ್ಣಾವಧಿ ದೃಶ್ಯ ಮಾಧ್ಯಮದ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಇಲ್ಲಿಂದಾಚೆಗೆ ನಿರಂತರವಾಗಿ ದೃಶ್ಯಮಾಧ್ಯಮದ ಎಲ್ಲಾ ವಿಭಾಗಗಳಲ್ಲಿ/ಪ್ರಾಕಾರಗಳಲ್ಲಿ ಕೆಲಸ ಮಾಡುತ್ತಾ ಇದ್ದೇನೆ.
ಈ ಹಾದಿಯಲ್ಲಿ ನನಗೆ ರಂಗಭೂಮಿಯು ಒದಗಿಸಿದ ಮತ್ತೊಂದು ವರ ನನ್ನ ಮಡದಿ ಶೈಲಜಾ ನಾಗ್. (ಅವಳಿಗೆ ಮನೆಯವರಿಟ್ಟ ಹೆಸರು ನಾಗಶೈಲಜಾ. ಆದರೆ ಪಾಸ್‍ಪೋರ್ಟ್ ಅರ್ಜಿಯಲ್ಲಿ ಮೊದಲ ಹೆಸರು ಎರಡನೆಯ ಹೆಸರು ಎಂದು ಬರೆಯುವಾಗ ಶೈಲಜಾ ನಾಗ್ ಆದಳು.) ಆಕೆ ಉತ್ತಮ ನಟಿಯಾಗಿದ್ದಳು. ನನ್ನ ನಿರ್ದೇಶನದ ಮ್ಯಾಕ್‍ಬೆತ್ ನಾಟಕದಲ್ಲಿ ಅಭಿನಯಿಸಿದ್ದಳು. ಅಲ್ಲಿಂದ ನಮ್ಮಿಬ್ಬರ ಪರಿಚಯ ಮತ್ತು ಪ್ರೇಮ ಇತ್ಯಾದಿಗಳು ಆರಂಭವಾದವು. ನಮ್ಮ ಮನೆಗಳವರು ಸಹ ಒಪ್ಪಿ 1992ರಲ್ಲಿ ಮದುವೆ ಮಾಡಿದರು. ಇಲ್ಲಿಂದ ನನ್ನ ಬದುಕಿನ ಎರಡನೆಯ ಮತ್ತು ಬಹುಮುಖ್ಯ ಅಧ್ಯಾಯ ಆರಂಭವಾಯಿತು. ಶೈಲಜಾ ನಾನು ಮಾಡುತ್ತಾ ಇದ್ದ ಕೆಲಸಗಳಲ್ಲಿ ತಾನೂ ತೊಡಗಿಸಿಕೊಂಡಳು. ನಂತರ ನನ್ನ ಧಾರಾವಾಹಿಗಳನ್ನು ತಾನೇ ನಿರ್ಮಿಸಲು ಮತ್ತು ಮಾರ್ಕೆಟಿಂಗ್ ಮಾಡಲು ಆರಂಭಿಸಿದಳು. ಆರಂಭದಲ್ಲಿ ಅನುಮಾನ ಪರಿಹಾರಕ್ಕೆ ನನ್ನ ಬಳಿ ಬರುತ್ತಾ ಇದ್ದಳು. ಈಗ ಅನುಮಾನ ಪರಿಹಾರಕ್ಕೆ ನಾನು ಅವಳ ಬಳಿ ಹೋಗುವ ಹಾಗೆ ಆಗಿದೆ. ಆಕೆಯಿಂದಾಗಿ ನನ್ನ ಬದುಕಿನಲ್ಲಿ ಆರ್ಥಿಕ ಸಬಲತೆ ಬಂದಿತು. ನನ್ನ ಕೆಲಸಗಳು ಸಹ ಅವಳ ಮಾರ್ಕೆಟಿಂಗ್ ಚಾಣಕ್ಷತೆಯಿಂದ ಹಣ ಮಾಡಲು ಆರಂಭಿಸಿದವು. ನಮ್ಮ ಸಾಂಸಾರಿಕ ಬದುಕು ಸುಗಮವಾಯಿತು. ಇದರಿಂದಾಗಿ ನನ್ನ ತಾಯಿಗೂ ಸಹ ನನ್ನ ಮಡದಿಯೇ ನಿಂತು ಮನೆ ಕಟ್ಟಿಕೊಟ್ಟಳು. ನಮ್ಮದೂ ಒಂದು ಸ್ವಂತ ಮನೆಯಾಯಿತು. ಇದೆಲ್ಲವೂ ಖಂಡಿತ ನನ್ನಿಂದ ಆಗುತ್ತಾ ಇರಲಿಲ್ಲ. ನನ್ನ ಈಗಿನ ಸುಸ್ಥಿತಿಗೆ ಕಾರಣ ನನ್ನ ಮಡದಿ ಶೈಲಜಾಳೇ. ಹೀಗಾಗಿ ನಾನಿಂದು ಸದಾ ಸುಖಿ, ಸದಾ ಹಸನ್ಮುಖಿ.
ಇನ್ನು ನನ್ನ ಅಣ್ಣ ಗುರುಮೂರ್ತಿಯ ವಿಷಯ. ಇವನು ಸಹ ನನಗೆ ಒಲಿದು ಬಂದ ವರವೇ. ನಾನು ಚಿಕ್ಕವನಿದ್ದಾಗಿಂದ ನನ್ನ ಪಾಲಿನ ರಕ್ಷಕನಾಗಿದ್ದವನು. ಆಟ ಆಡುವ ಕಾಲದಲ್ಲಿ ನಾನು ಯಾರೊಂದಿಗೊ ಜಗಳ ಮಾಡಿಕೊಂಡರೆ ಬಿಡಿಸುವುದರಿಂದ ಹಿಡಿದು, ನನ್ನ ಕಷ್ಟ ಕಾಲದಲ್ಲಿ ನನ್ನನ್ನು ಸ್ವತಃ ಸಾಕಿದವನು ಅಣ್ಣಾ ಗುರುಮೂರ್ತಿ. ನನ್ನ ಎಲ್ಲಾ ಚಟುವಟಿಕೆಗಳನ್ನು ದೂರದಿಂದ ನೋಡುತ್ತಾ ನಾನು ಎಡವಿದರೆ ಕೈ ಹಿಡಿದು ನಡೆಸಿದ ಕುಟುಂಬವಿದ್ದುದರಿಂದ, ಜೊತೆಗೆ ಅಮ್ಮ ನನಗೆ ನಾಡಿನಾದ್ಯಂತ ಒದಗಿಸಿದ ಸಹೋದರ-ಸಹೋದರಿಯರ ಕಾರಣದಿಂದ ನಾನು ನೆಮ್ಮದಿಯಾಗಿ ಹಾಗೂ ನಗುತ್ತಾ ಬದುಕುತ್ತಿದ್ದೇನೆ.

6. ಐಟಿಐ, ಎನ್.ಜಿಇಎಫ್, ಎಚ್.ಎಂ.ಟಿ., ಬಿಇಎಲ್, ಮೈಕೊ, ಎಚ್.ಎ.ಎಲ್., ಕಾರ್ಮಿಕ ಕಲಾವಿದರುಗಳಿಂದ ಹಿಂದೊಮ್ಮೆ ಉಚ್ರಾಯ ಸ್ಥಿತಿಯಲ್ಲಿದ್ದ ಕಾರ್ಮಿಕ ರಂಗಭೂಮಿ ಈಚೆಗೆ ನಿಸ್ತೇಜಗೊಂಡಿದೆ. ಇದರ ಲವಲವಿಕೆ, ಪುನರುಜ್ಜೀವನಕ್ಕೆ ಯಾವ ಕ್ರಮ, ಕ್ರಿಯಾಯೋಜನೆಗಳು ಇಂದು ನಡೆಯಬೇಕಾಗಿವೆ?

ಬಿ.ಸುರೇಶ : ಇದು ಬಹುಮುಖ್ಯ ವಿಷಯ. ಕಾರ್ಮಿಕ ರಂಗಭೂಮಿ ಎಂಬುದು ಈ ನಾಡಿನ ಬಹುಮುಖ್ಯ ಜೀವವಾಹಿನಿಯಾಗಿತ್ತು. ಅಲ್ಲಿಂದ ಬಂದ ಅದೆಷ್ಟೋ ಪ್ರತಿಭೆಗಳು ಈ ನಾಡಿನ ರಂಗಭೂಮಿಯನ್ನು ಬೆಳಗಿದವು. 1980ರ ದಶಕದಿಂದ 2000ದ ವರೆಗೆ ಕಾರ್ಮಿಕ ರಂಗಭೂಮಿ ನಿಜಕ್ಕೂ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅಲ್ಲಿಂದಾಚೆಗೆ ಭಾರತ ಸರ್ಕಾರವು ಮಾಡಿಕೊಂಡ ಮುಕ್ತ ಮಾರುಕಟ್ಟೆ ಒಪ್ಪಂದದಿಂದಾಗಿ ಸಾರ್ವಜನಿಕ ಉದ್ದಿಮೆಗಳ ಮೇಲೆ ಬಿದ್ದ ಪ್ರಹಾರದೇಟು ದೊಡ್ಡದು. ಹೊಸ ಕಾರ್ಮಿಕರನ್ನು ತೆಗೆದುಕೊಳ್ಳುವುದು ಬಹುತೇಕ ನಿಂತುಹೋಯಿತು. ತೆಗೆದುಕೊಂಡ ಕಾರ್ಮಿಕರಲ್ಲಿ ಕನ್ನಡಿಗರು/ ಸ್ಥಳೀಯರು ಕಡಿಮೆಯಾಗುತ್ತಾ ಹೋದರು. (ಇದರಿಂದಾಗಿ ಸ್ಥಳೀಯರಿಗೆ ಉದ್ಯೋಗ ಮತ್ತು ಸರೋಜಿನಿ ಮಹಿಷಿ ವರದಿಯನ್ನು ಕಾಲೋಚಿತಗೊಳಿಸಿ ಜಾರಿಗೆ ತರುವುದು ಮುಖ್ಯವಾಯಿತು. ಆ ಹೋರಾಟ ನಡೆಯುತ್ತಲೇ ಇದೆ.) ಕಾರ್ಖಾನೆಗಳಿಗೆ ಬಂದ ಪರಭಾಷಾ ಅಧಿಕಾರಿಗಳು ಉತ್ಪಾದಕತೆಯ ಹೆಸರಲ್ಲಿ ಕಾರ್ಮಿಕರಿಗೆ ರಂಗ ಚಟುವಟಿಕೆಗೆ ನೀಡುತ್ತಾ ಇದ್ದ ಸಮಯವೂ ಸಿಗದಂತಾಯಿತು. ಅಕಸ್ಮಾತ್ ಕಷ್ಟಪಟ್ಟು ಸಮಯ ಸಿಕ್ಕರೂ ಆಯಾ ಕಾರ್ಖಾನೆಯವರು ರಂಗಭೂಮಿ ಚಟುವಟಿಕೆಗೆ ನೀಡುವ ಅನುದಾನದ ಕೊರತೆಯಿಂದಾಗಿ ಗಂಭೀರ ಮತ್ತು ವೃತ್ತಿಪರ ನಾಟಕಗಳನ್ನು ಅಭಿನಯಿಸುವುದು ಕಷ್ಟವೆಂಬ ಸ್ಥಿತಿ ಬಂದಿತು. ಇವುಗಳಿಂದ ಕನ್ನಡ ಕಾರ್ಮಿಕ ರಂಗಭೂಮಿಗಂತೂ ಇದು ದೊಡ್ಡ ಹಿನ್ನಡೆಯಾಯಿತು ಎನ್ನಬಹುದು.
ಈ ಪರಿಸ್ಥಿತಿಯನ್ನು ತಪ್ಪಿಸಲು ಮೊದಲಿಗೆ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವ ಕಾನೂನು ಜಾರಿಗೆ ಬರಬೇಕು. ಜೊತೆಗೆ ಕಾರ್ಮಿಕರು ಸಹ ಪ್ರತಿಭಾವಂತರಾಗಿರುತ್ತಾರೆ ಎಂಬುದನ್ನ ಮನಗಂಡು ಸಾಂಸ್ಕøತಿಕ ಚಟುವಟಿಕೆಯಲ್ಲಿ ಅವರು ತೊಡಗಲು ಅನುವಾಗವಂತಹ ಪರಿಸರ ನಿರ್ಮಾಣಕ್ಕೆ ನಮ್ಮ ಮಾನವ ಸಂಪನ್ಮೂಲ ಇಲಾಖೆಗಳ ಮೇಲೆ ಒತ್ತಡ ಹೇರಬೇಕು. ಒಂದು ರಂಗ ಚಟುವಟಿಕೆಯಿಂದ ಅರಳುವ ಕಾರ್ಮಿಕರ ಮನಸ್ಸು ಉತ್ಪಾದಕತೆಯಲ್ಲಿ ಹೆಚ್ಚಳವಾಗಿಸುತ್ತದೆ ಎಂಬುದನ್ನು ನಾವು ಅವರಿಗೆ ಅಂಕಿ-ಸಂಖ್ಯೆಗಳ ಮೂಲಕ ಸಾಬೀತು ಪಡಿಸಬೇಕು.
ಇದೆಲ್ಲವೂ ನಿರಂತರವಾಗಿ ಆಗುತ್ತಲೇ ಇರಬೇಕಾದ ಚಟುವಟಿಕೆಯಾದ್ದರಿಂದ ಕರ್ನಾಟಕ ಸರ್ಕಾರದ ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹ ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಾರ್ಮಿಕರಿಗಾಗಿ ಪ್ರತೀ ವರ್ಷವೂ ನಾಟಕ ಶಿಬಿರಗಳನ್ನು ಆಯೋಜಿಸುವುದು, ಪ್ರತೀ ಕಾರ್ಖಾನೆಗೆ ಹೊಸ ತಲೆಮಾರಿನ ರಂಗಕರ್ಮಿಗಳನ್ನು ಕಳಿಸಿ ಆಧುನಿಕ ರಂಗಭೂಮಿಯ ಚಟುವಟಿಕೆಯು ಕಾರ್ಮಿಕ ರಂಗಭೂಮಿಗೆ ವಿಸ್ತರಿಸುವಂತೆ ಮಾಡುವುದು, ಕಾರ್ಮಿಕ ರಂಗಭೂಮಿಯ ನಾಟಕಗಳಿಗಾಗಿ ವಿಶೇಷ ಉತ್ಸವ ಅಥವಾ ನಾಟಕ ಸ್ಪರ್ಧೆಗಳನ್ನು ಆಯೋಜಿಸಿ ಪ್ರಶಸ್ತಿಗಳನ್ನು ನೀಡುವುದು… ಹೀಗೆ ಹತ್ತು ಹಲವು ಮಾದರಿಯಿಂದ ಕಾರ್ಮಿಕ ರಂಗಭೂಮಿಯನ್ನು ಮೊದಲು ಸಜೀವ ಹಾಗೂ ಸಶಕ್ತಗೊಳಿಸಬೇಕಾಗಿದೆ. ಈ ಕೆಲಸವನ್ನು ನಾವೆಲ್ಲರೂ ಸೇರಿ ಸರ್ಕಾರಗಳಿಗೆ ನೆನಪಿಸಬೇಕಿದೆ. ಕಾರ್ಮಿಕ ರಂಗಭೂಮಿಯ ಪುನರುಜ್ಜೀವನವಾಗುವುದರಿಂದ ನಾಡಿನ ಒಟ್ಟು ಸಾಂಸ್ಕøತಿಕ ವಾತಾವರಣ ಉತ್ತಮವಾಗುತ್ತದೆ ಹಾಗೂ ಸಮಾಜದ ಸ್ವಾಸ್ಥ್ಯವು ಸಹ ಈ ಮತೀಯವಾದಿ ಕೂಗುಮಾರಿಗಳ ಹಿಡಿತದಿಂದ ತಪ್ಪಿ ಸಹಜಸ್ಥಿತಿಗೆ ಮರಳುತ್ತದೆ ಎಂಬುದನ್ನು ಮತ್ತೆ ಮತ್ತೆ ಕೂಗಿ ಕೂಗಿ ಹೇಳಬೇಕಾಗಿದೆ.

7. ರಂಗಭೂಮಿ, ಕಿರುತೆರೆ, ಸಿನಿಮಾ ಪ್ರವೇಶಿಸುವ ಯುವ ಕಲಾವಿದರಿಗೆ ಅವರ ವೃತ್ತಿ ಬದುಕಿನ ಗುರಿ, ಯಶಸ್ಸಿನ ಬಗ್ಗೆ ನಿಮ್ಮ ಒಂದೆರಡು ಕಿವಿಮಾತು, ಸವಿಮಾತುಗಳು…

ಬಿ.ಸುರೇಶ: ಕಿವಿಮಾತು – ಸವಿಮಾತು ಹೇಳಬೇಕಾದವರು ದೊಡ್ಡವರು ಹಾಗೂ ಕಲಿತವರು. ನಾನು ಎರಡೂ ಅಲ್ಲ. ನಾನು ಆಕಸ್ಮಿಕಗಳ ಮೂಲಕ ಬೆಳೆದವನು.
ಈ ದಿನಗಳಲ್ಲಂತೂ ಹೊಸಬರು ದಂಡು ದಂಡಾಗಿ ಬರುತ್ತಾ ಇದ್ದಾರೆ. ಅವರಿಗೆ ಸರಿಯಾದ ತರಬೇತಿ ಪಡೆದುಕೊಳ್ಳಿ, ನಿಮ್ಮ ಭಾಷೆಯ ಮೇಲೆ ನಿಮಗೆ ಸಂಪೂರ್ಣ ಹಿಡಿತವಿರಲಿ… ಕುವೆಂಪು ಅವರ ರಾಮಾಯಣ ದರ್ಶನದ ಕನ್ನಡವನ್ನೂ ದ್ಯಾವನೂರು ಮಹಾದೇವ ಅವರ ಕುಸುಮಬಾಲೆಯ ಕನ್ನಡವನ್ನೂ ಸುರಳೀತವಾಗಿ ಮಾತಾಡುವ ಶಕ್ತಿಯನ್ನು ಪಡೆದುಕೊಳ್ಳಿ ಎನ್ನಬಹುದಷ್ಟೇ.
ಯಾವುದೇ ಕಲೆಯಾಗಿರಬಹುದು ನಿರಂತರ ಅಭ್ಯಾಸದಿಂದ ಮಾತ್ರ ಅದು ಒಲಿಯುತ್ತದೆ. ಈ ಒಲಿಯುವಿಕೆಯ ಹಾದಿಯಲ್ಲಿ ಅನೇಕ ಕಲಾವಿದರು ಚಪ್ಪಾಳೆಗಳಿಗೆ ಶರಣಾಗಿ ಹೊರಮುಖಿ ಅಲಂಕಾರಕ್ಕೆ ತೊಡಗಿಬಿಡುತ್ತಾರೆ. ಅದರಿಂದ ಅವರಲ್ಲಿದ್ದ ಪ್ರತಿಭೆ ಮತ್ತು ಶಕ್ತಿ ನಿಂತ ನೀರಾಗಿ ಬಿಡುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಯಾವುದೇ ಕಲಾವಿದ ತನ್ನೊಳಗೆ ತಾನು ಪ್ರಯಾಣ ಮಾಡುವುದನ್ನು ಕಲಿಯಬೇಕು. ತನ್ನೊಡನೆ ತಾನು ಮಾತಾಡುವುದನ್ನು, ತನ್ನನ್ನು ತಾನು ವಿಮರ್ಶಿಸಿಕೊಳ್ಳುವುದನ್ನು ಕಲಿಯಬೇಕು. ಯಾರಿಗೆ ಆತ್ಮವಿಮರ್ಶೆ ಇರುತ್ತದೋ ಅಂತಹವರು ಬಹುಕಾಲ ಬದುಕುತ್ತಾರೆ ಎಂಬುದು ಅನುಭವದಿಂದ ಒದಗಿದ ಸತ್ಯ.
ನಮ್ಮಲ್ಲಿ ಎಲ್ಲಾ ಕಲೆಗಳನ್ನೂ ಕಲಿಸುವ ಶಾಲೆಗಳು ಅಸಂಖ್ಯಾ ಎಂಬಷ್ಟಾಗಿವೆ. ಆದರೆ ಅಲ್ಲಿ ದೊರೆಯುವ `ಗುರು’ಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಕಲಿಯುವ ಆಸಕ್ತಿಯುಳ್ಳವರು ಸರಿಯಾದ ಗುರುವನ್ನು ಹುಡುಕಿಕೊಳ್ಳಬೇಕು. ಗುರು ಸರಿಯಿದ್ದರೆ ಗುರಿ ಸರಿಯಾಗುತ್ತದೆ. ಗುರಿ ಸರಿಯಾಗಿದ್ದರೆ ಪಯಣದ ಹಾದಿ ತಾನಾಗಿ ತೆರೆದುಕೊಳ್ಳುತ್ತದೆ.

8. ತಾವು ಕಾರ್ಮಿಕರಾಗಿ ವೃತ್ತಿ ಆರಂಭಿಸಿದವರು; ಕಾರ್ಮಿಕ ಸಂಘಟನೆಯಲ್ಲೂ ತೊಡಿಗಿ ಕೊಂಡವರು; ಜಾಗತೀಕರಣದ ಈ ಕಾಲಮಾನದಲ್ಲಿ ಕಾರ್ಮಿಕ ಸಂಘಟನೆಗಳು ದುರ್ಬಲವಾಗಿವೆ ಅನ್ನುವ ಮಾತಿದೆ. ಸಾರ್ವಜನಿಕ ಉದ್ದಿಮೆಗಳು ಮುಚ್ಚಿಹೋಗುತ್ತಿವೆ, ಕಾರ್ಮಿಕ ಕಾನೂನುಗಳನ್ನು ಮಾಲೀಕರ ಸ್ನೇಹಿಯಾಗಿದೆ. ಈ ಸನ್ನಿವೇಶದಲ್ಲಿ ಕಾರ್ಮಿಕರು ತಮ್ಮ ಹಕ್ಕನ್ನು ಕಾಪಾಡಿಕೊಳ್ಳುವುದು ಹೇಗೆ? ಕಾರ್ಮಿಕ ಸಂಘಗಳ ಬಗ್ಗೆ ಏನು ಹೇಳುತ್ತೀರಿ?

ಬಿ.ಸುರೇಶ : ಇದು ಈ ಕಾಲದ ಬಹುಮುಖ್ಯ ಪ್ರಶ್ನೆ. 1984ರಲ್ಲಿ ಆದ ಗ್ಯಾಟ್ ಒಪ್ಪಂದ. 1994ರ ಆಸುಪಾಸಲ್ಲಿ ಆದ ಮುಕ್ತ ಮಾರುಕಟ್ಟೆ ಒಪ್ಪಂದಗಳು ನಮ್ಮ ದೇಶದ ಬಂಡವಾಳಶಾಹಿಗಳನ್ನು ಸಬಲರನ್ನಾಗಿಸಿ, ದುಡಿಯುವ ವರ್ಗವನ್ನು ದುರ್ಬಲವಾಗಿಸಿದೆ. ಈಚೆಗಿನ ಹೊಸ ಸರ್ಕಾರವಂತೂ ನಿರಂತರವಾಗಿ ಜನರು ದನದ ಮಾಂಸ, ದೇಶಭಕ್ತಿ, ದೇಶದ್ರೋಹದ ವಿಷಯಗಳನ್ನು ಚರ್ಚೆಗೆ ಜಗಳಕ್ಕೆ ಒದಗಿಸಿ, ಜನದ ಕಣ್ಣಿಗೆ ಕಾಣದಂತೆ ಹೊಸ ಕಾರ್ಮಿಕ ನೀತಿಯ ಮೂಲಕ ಬಂಡವಾಳದಾರರನ್ನು ಆಹ್ವಾನಿಸುತ್ತಾ ಇದೆ. ಈಗಿನ ಸರ್ಕಾರ ಮಾಡಿರುವ ಹೊಸ ನೀತಿಯಲ್ಲಿ ಬಂಡವಾಳದಾರರು ಆರಂಭಿಸುವ ಹೊಸ ಸಂಸ್ಥೆಯಲ್ಲಿ ಎಲ್ಲಾ ಕಾರ್ಮಿಕರನ್ನೂ ಗುತ್ತಿಗೆಯ ಮೇಲೆ ತೆಗೆದುಕೊಳ್ಳಬಹುದು, ಯಾವುದೇ ಸಂದರ್ಭದಲ್ಲಿಯೂ ಆ ಕಾರ್ಮಿಕರು ಸಂಘಟನೆ ಕಟ್ಟುವಂತಿಲ್ಲ, ಯಾವುದೇ ಕಾರ್ಮಿಕನನ್ನು ಮಾಲೀಕರು ಯಾವಾಗ ಬೇಕಾದರೂ ಕೆಲಸದಿಂದ ತೆಗೆಯಬಹುದು, ಕಂಪೆನಿಗೆ ನಷ್ಟವಾದ ಸಂದರ್ಭದಲ್ಲಿ ಕಾರ್ಮಿಕರಿಗೆ ಯಾವುದೇ ಪರಿಹಾರ ನೀಡದೆ ಬಾಗಿಲು ಮುಚ್ಚಬಹುದು ಎಂಬರ್ಥದ ಷರತ್ತುಗಳಿವೆ. ಈ ಎಲ್ಲಾ ಷರತ್ತಿನ ಹಾಗೆ ಸ್ವತಃ ಸರ್ಕಾರವೇ ಮುಂದೆ ನಿಂತು ಕಾರ್ಮಿಕ ಸಂಘಟನೆಗಳಾಗದಿರುವಂತೆ ಮಾಡುವುದಾಗಿಯೂ ಒಪ್ಪಂದ ಮಾಡಿಕೊಳ್ಳುವುದಾಗಿ ತಿಳಿಸಿದೆ. ಇಂತಹ ಕಾಯಿದೆಗಳು ಲೋಕಸಭೆಯಲ್ಲಾಗಲೀ ರಾಜ್ಯಸಭೆಯಲ್ಲಿ ಚರ್ಚೆಯೂ ಆಗದೆ ಜಾರಿಗೆ ಬಂದಿವೆ. ಇಂತಹ ಪರಿಸ್ಥಿತಿ ಹಿಂದೆ ಇರಲಿಲ್ಲವೆಂದಲ್ಲ. ನಮ್ಮೆಲ್ಲ ಹೋರಾಟಗಳೂ ಇಂತಹ ಹಿಂಬಾಗಿಲ ವ್ಯವಹಾರ ಮಾಡುವ ಆಳುವ ವರ್ಗದಿಂದಲೇ ಹುಟ್ಟಿರುವುದು.
ಈ ಸಮಸ್ಯೆ ದಾಟಿಕೊಳ್ಳಲು ಕಾರ್ಮಿಕ ಸಂಘಟನೆಗಳು ಮತ್ತಷ್ಟು ಬಲಗೊಳ್ಳಬೇಕು. ಆದರೆ ಈ ಕಾರ್ಮಿಕ ಸಂಘಟನೆಗಳು ಬೇರೆ ಬೇರೆ ರಾಜಕೀಯ ಪಕ್ಷಗಳ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಹೀಗಾಗಿ ಈ ಸಂಘಟನೆಗಳು ಕಾರ್ಮಿಕರ ಹಿತರಕ್ಷಣೆಗಿಂತ ಹೆಚ್ಚು, ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಇವೆ. ಜೊತೆಗೆ ಇಂದು ಚುನಾವಣೆಗೆ ನಿಲ್ಲುವವನು ಕೋಟ್ಯಾಧಿಪತಿಯೇ ಆಗಿರಬೇಕು ಮತ್ತು ಚುನಾವಣೆಗಾಗಿ ನೀರಿನಂತೆ ಹಣ ಖರ್ಚು ಮಾಡಲು ಶಕ್ತನಾಗಿರಬೇಕು ಎಂಬ ವಾತಾವರಣವಿದೆ. ಈಚೆಗೆ ಕರ್ನಾಟಕದಲ್ಲಿ ವಿಧಾನ ಪರಿಷತ್ತಿಗೆ ಆದ ಚುನಾವಣೆಯನ್ನೇ ಗಮನಿಸಿ. ಜನಪ್ರತಿನಿಧಿ ಸಭೆಯಾಗಬೇಕಾಗಿದ್ದ ವಿಧಾನಪರಿಷತ್ತು ಇಂದು ಉದ್ಯಮಪತಿಗಳು ಹಾಗೂ ಕೋಟ್ಯಾಧಿಪತಿಗಳಿಂದ ತುಂಬಿಹೋಗಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಬಂದೊದಗಿರುವ ಆಪತ್ತು. ನಮ್ಮ ನಾಯಕರೆನಿಸಿಕೊಂಡವರೇ ನಮ್ಮವರಲ್ಲ ಎನಿಸುತ್ತಿರುವ ಹೊತ್ತಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದು ನಿಜಕ್ಕೂ ಕಷ್ಟವಾಗಿದೆ. ಅಕಸ್ಮಾತ್ ಯಾರಾದರೂ ಪ್ರಾಮಾಣಿಕರೇ ಇದ್ದರೂ ಅದನ್ನವರು ಸಾಬೀತು ಪಡಿಸಬೇಕಾದಷ್ಟು ಅನುಮಾನ ಇಂದು ಜನರಲ್ಲಿ ತುಂಬಿದೆ.
ಇನ್ನು ನಮ್ಮ ಐಟಿ ಬಿಟಿ ವಿಭಾಗದಲ್ಲಂತೂ ಅಲ್ಲಿರುವ ಉದ್ಯೋಗಿಗಳು ತಮ್ಮನ್ನು ತಾವು ಕಾರ್ಮಿಕರು ಎಂದು ಕರೆದುಕೊಳ್ಳುವುದಿಲ್ಲ. ಹಾಗಾಗಿ ಅವರಿಗೆ ತಮ್ಮ ಹಿತರಕ್ಷಣೆಗೆ ಬೇಕಾದ ಸಂಘಟನೆಗಳು ಸಹ ಇಲ್ಲ. ಒಬ್ಬ ವ್ಯಕ್ತಿ ಬುದ್ಧಿವಂತ ಎನಿಸಿದರೆ ಆತನನ್ನು ತುಳಿಯಲು ಲೈಂಗಿಕ ಆರೋಪ ಮಾಡಿ ಬಿಡುವ ವ್ಯವಸ್ಥೆಗಳು ಮಾತ್ರ ಐಟಿ ಬಿಟಿಯಲ್ಲಿವೆ. ಇನ್ನು ಅಲ್ಲಿ ದುಡಿಯುವರನ್ನು ಆಯಾ ಮಾಲೀಕರು ತೆಗೆದುಕೊಂಡಿರುವುದೇ ಗುತ್ತಿಗೆಯಾಧಾರದಲ್ಲಿ. ಹೀಗಾಗಿ ಅವರಿಗೆ ಪ್ರಶ್ನೆ ಕೇಳುವ ಮೂಲಭೂತ ಹಕ್ಕು ಸಹ ಇಲ್ಲ. ಇದು ಮುಕ್ತ ಮಾರುಕಟ್ಟೆಯ ನೀತಿಯಡಿಯಲ್ಲಿ ಬಂದಂತಹ ಖಾಸಗೀರಣದ ಫಲ. ಈಗಿನ ಕೇಂದ್ರ ಸರ್ಕಾರವಂತೂ ದೇಶಕ್ಕೆ ಹೊಸ ಬಂಡವಾಳ ತರುತ್ತೇನೆ ಎಂದು ಸೇನೆಯನ್ನು ಸಹ ಖಾಸಗೀಕರಣ ಮಾಡಲು ಹೊರಟಿದೆ. ಇನ್ನು ಮುಂಬರುವ ಕೆಲವು ವರ್ಷಗಳಲ್ಲಿ ಅದ್ಯಾವ್ಯಾವ ವಿಭಾಗ ಖಾಸಗೀಕರಣಕ್ಕೆ ಸಿಕ್ಕು ನಾಶವಾಗಬಹುದು ಎಂಬುದು ಸಹ ಊಹೆಗೆ ಸಿಕ್ಕಂದಂತಾಗಿದೆ.
ಜಾಗತೀಕರಣ ಮತ್ತು ಬಂಡವಾಳವಾದದ ಶಿಶುಗಳಾದ ಭ್ರಷ್ಟಾಚಾರ ಮತ್ತು ಕೋಮುವಾದವನ್ನು ಓಡಿಸುವುದೊಂದೇ ಇದಕ್ಕಿರುವ ಪರಿಹಾರ. ಅದಾಗುವುದಕ್ಕೆ ನಮ್ಮ ಕಾರ್ಮಿಕರು ಮತ್ತು ಅವರ ಮನೆಯವರು ಹುಂಬರ ಹಾಗೆ ಜಾತಿ – ಧರ್ಮ – ಮತದ ಹೆಸರಲ್ಲಿ ಸಮಾಜವನ್ನು ವಿಘಟಿಸುವಂತಹವರನ್ನು ತಮ್ಮ ನಾಯಕರನ್ನಾಗಿ ಆರಿಸುವುದನ್ನು ಬಿಡಬೇಕು. ನಮ್ಮ ಪ್ರತಿನಿಧಿಗಳು ನಮ್ಮವರು / ಸ್ಥಳೀಯರು / ಸ್ಥಳೀಯ ಬಾಷಿಕರು ಆಗಿರುವಂತೆ ನಾವೇ ನೋಡಿಕೊಳ್ಳಬೇಕು. ಹೊರಗಿನಿಂದ ಬಂದು, ಸ್ಥಳೀಯ ವಿಳಾಸ ಪಡೆದು ಚುನಾಯಿತರಾಗ ಬಯಸುವವರನ್ನು ಮೊದಲು ದೂರ ಇಡಬೇಕು. ನಮ್ಮಲ್ಲಿ ಮತ ಕೇಳಲು ಬರುವವರು ಜಾತಿವಾದಿ ಮತ್ತು ಕೋಮುವಾದಿಗಳಾಗಿದ್ದರೆ ಅಂತಹವರನ್ನು ಮೊದಲು ದೂರ ಅಟ್ಟಬೇಕು. ಹಾಗಾದಾಗ ಮಾತ್ರ ನಮ್ಮ ಅಳಲನ್ನು ಕೇಳುವವರು ಪ್ರತಿನಿಧಿಗಳಾಗಿ ಲೋಕಸಭೆ / ರಾಜ್ಯಸಭೆ / ವಿಧಾನಸಭೆ/ ವಿಧಾನಪರಿಷತ್ತು/ ನಗರಸಭೆಗಳಲ್ಲಿ ಇರುತ್ತಾರೆ. ನಂತರ ನಮ್ಮ ಕಾರ್ಮಿಕ ಸಂಘಟನೆಗಳಿಗೆ ಪ್ರತಿನಿಧಿಗಳನ್ನು ಆರಿಸುವಾಗಲು ಇದೇ ಮಾದರಿಯಲ್ಲಿ ಕೋಮುವಾದಿ-ಜಾತಿವಾದಿ ಭ್ರಷ್ಟರನ್ನು ದೂರ ಇಡಬೇಕು. ಆಗ ಮಾತ್ರ ನಮ್ಮ ಸಮಾಜ ಹಾಗೂ ನಮ್ಮ ಕಾರ್ಮಿಕ ಸಂಘಟನೆಗಳಿಗೆ ನಿಜವಾದ ಕಸುವು ಬರುತ್ತದೆ.
ಈ ಕಾಲಘಟ್ಟದಲ್ಲಿ ಕಾರ್ಮಿಕ ಚಳುವಳಿಗಳನ್ನು ಸಹ ಬೇರೆಯದೇ ನೆಲದಲ್ಲಿ ಕಟ್ಟಬೇಕಿದೆ. ಮೊದಲಿಗೆ ಕಾರ್ಮಿಕರು ಒಗ್ಗೂಡಬೇಕಿದೆ. ತಮ್ಮ ಅಗತ್ಯಗಳೇನು, ತಮ್ಮ ಮೂಲಭೂತ ಹಕ್ಕುಗಳೇನು, ತಮ್ಮ ಬದುಕು ಹಸನಾಗಲು ಆಗಬೇಕಾದ್ದೇನು ಎಂದು ಸ್ಪಷಟ್ಟಪಡಿಸಿಕೊಳ್ಳಬೇಕಿದೆ. ಎಲ್ಲೋ ಮಂದಿರ ಕಟ್ಟುತ್ತೇನೆ ಎನ್ನುವವರನ್ನು ಕುರಿಗಳಂತೆ ಹಿಂಬಾಲಿಸುವುದಕ್ಕಿಂತ ಮನಸ್ಸುಗಳನ್ನು ಕಟ್ಟುವಂತಹ, ಸಮಾಜವನ್ನು ಒಗ್ಗೂಡಿಸುವಂತಹ ಶಕ್ತಿಗಳನ್ನು ಕಾರ್ಮಿಕರೇ ರೂಢಿಸಬೇಕಿದೆ. ಈ ದೇಶದ ರೈತರು ಮತ್ತು ಕಾರ್ಮಿಕರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಈ ಕಾರ್ಮಿಕರು ಆಳುವ ವರ್ಗಗಳಿಗೆ ಚುರುಕು ಮುಟ್ಟಿಸಬೇಕಿದೆ. ಆ ನಿಟ್ಟಿನಲ್ಲಿ ಇಂದಿನಿಂದಲೇ ಕೆಲಸ ಆರಂಭಿಸಬೇಕಿದೆ.

9. ಕರ್ನಾಟಕ ಏಕೀಕರಣವಾಗಿ 60 ವರ್ಷಗಳಾಗುತ್ತರುವ ಸಂದರ್ಭದಲ್ಲೂ ‘ಕನ್ನಡ ಅನಾಥ; ಕನ್ನಡಿಗ ಸ್ಥಳೀಯ ನಿರಾಶ್ರಿತ’ ಅನ್ನುವ ವಾತಾವರಣ ಮುಂದುವರೆದಿದೆ. ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಈ ಪರಿಸ್ಥಿತಿಯಿಂದ ಹೊರಬರಲು ಕನ್ನಡ ಸಂಘಟನೆಗಳು, ಕಾರ್ಯಕರ್ತರ ಏನು ಮಾಡಬಹುದು?

ಬಿ.ಸುರೇಶ: ಅಬ್ಬಬ್ಬಾ! ಎಂತಹ ಪ್ರಶ್ನೆ ಕೇಳಿದಿರಿ… ನಾನು ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಯೋಗ್ಯತೆ ಹೊಂದಿದ್ದೇನೆಯೇ ಎಂಬುದೇ ಇನ್ನೂ ನನಗೆ ಖಾತ್ರಿಯಾಗಿಲ್ಲ. ಆದರೂ ನನ್ನ ತಿಳುವಳಿಕೆಯ ಅಳವಿನಲ್ಲಿ ಉತ್ತರಿಸಲು ಯತ್ನಿಸುತ್ತೇನೆ.
ಮೊದಲಿಗೆ ಈ ದೇಶದಲ್ಲಿ ಆದ ಭಾಷಾವಾರು ಪ್ರಾಂತ್ಯ ವಿಂಗಡಣೆಯು ಅವೈಜ್ಞಾನಿಕವಾಗಿ ಆಯಿತು. ಇದರಿಂದಾಗಿ ಕನ್ನಡ ಮಾತಾಡುವ ಹಲವರು ಕರ್ನಾಟಕದ ಆಚೆಗೂ ಕೆಲವು ಪರಭಾಷಿಕರು ಕರ್ನಾಟಕದಲ್ಲೂ ಉಳಿಯುವಂತಾಯಿತು. ಹೀಗಾಗಿ ಕರ್ನಾಟಕದ ರಾಜಕೀಯ ಭೂಪಟದ ಒಳಗೆ ಹಲವು ಮಾತೃಭಾಷಿಕರು ಕೂಡಿಕೊಂಡರು. ಇದರಿಂದಾಗಿ ನಮ್ಮಲ್ಲಿ ಕನ್ನಡವನ್ನು ಮಾಧ್ಯಮವಾಗಿ ಕಲಿಸಬೇಕೆಂದು ಮಾಡಿದ ಮಾತೃಭಾಷಾ ಶಿಕ್ಷಣ ಎಂಬ ಕಾಯಿದೆಗೂ ಸಹ ಹಿನ್ನಡೆಯಾಯಿತು. ಎಲ್ಲಾ ಮಾತೃಭಾಷಿಕರೂ ತಮ್ಮ ತಮ್ಮ ಭಾಷೆಯಲ್ಲಿ ಕಲಿಸಿ ಎಂದರೆ ನಾಡು ಕಟ್ಟುವುದು ಹೇಗೆ ಎಂದು ರಾಜ್ಯಭಾಷಾ ಶಿಕ್ಷಣ ಎಂಬುದಕ್ಕೆ ಪ್ರಯತ್ನಿಸಲಾಯಿತು. ಇದಕ್ಕೆ ಮೂಲಭೂತ ಹಕ್ಕುಗಳಡಿಯಲ್ಲಿ ನ್ಯಾಯಾಲಯಕ್ಕೆ ಹೋದ ಜನರಿಂದ ಮತ್ತೆ ಹಿನ್ನಡೆಯಾಯಿತು. ಹೀಗೆ ನಾವು ನಮ್ಮ ಕನ್ನಡವನ್ನು ನಮ್ಮ ನಾಡಲ್ಲಿ ಉಳಿಸಿಕೊಳ್ಳುವುದಕ್ಕೆ ಮತ್ತೆ ಮತ್ತೆ ಹೋರಾಡುತ್ತಲೇ ಇರಬೇಕಾದ ಸಂದರ್ಭ ಬಂದಿರುವುದೇ ದೊಡ್ಡ ದುರಂತ.
ಇನ್ನು ಪ್ರತ್ಯೇಕತಾವಾದ ಎನ್ನುವುದು ಹುಟ್ಟುವುದೇ ಬಂಡವಾಳಶಾಹಿ ರಾಜಕಾರಣದ ನೆರಳಲ್ಲಿ. ಉತ್ತರ ಕರ್ನಾಟಕದವರು ಆಡುತ್ತಾ ಇರುವ ಪ್ರತ್ಯೇಕತೆಯ ಮಾತು, ಕೊಡಗಿನಲ್ಲಿ ಹುಟ್ಟಿರುವ ಪತ್ಯೇಕತೆಯ ಮಾತು ಇದೇ ಬಗೆಯದು. ಇದಕ್ಕೆ ಉದಾಹರಣೆಯಾಗಿ ನೆರೆಯ ಆಂಧ್ರಪ್ರದೇಶವು ಎರಡಾದೊಡನೆ ಅಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗಿದ್ದನ್ನು ಗಮನಿಸಬಹುದು. ಇಲ್ಲಿ ಪ್ರತ್ಯೇಕತೆಯ ಮಾತಾಡುತ್ತಾ ಇರುವವರು ಸಹ ಹಾಗೆಯೇ ಅಧಿಕಾರದ ಮತ್ತು ಅದರೊಂದಿಗೆ ಸಿಗುವ ಖಜಾನೆಯ ಕೀಲಿಕೈನ ಆಸೆಗೆ ಮಾತಾಡುತ್ತಾ ಇದ್ದಾರೆ. ಅನುಮಾನವಿಲ್ಲ. ಇಂತಹ ಜನಗಳ ಜೊತೆಗೆ ನಮ್ಮ ಆಳುವ ಸರ್ಕಾರಗಳು ಸಹ ಜಾತಿ ಒಲೈಕೆಗೆ ನಿಂತಾಗ ಸರ್ಕಾರವು ಹಂಚುವ ಹಣವು ರಾಜ್ಯದ ಎಲ್ಲಾ ಜನರಿಗೆ ಸಮಾನವಾಗಿ ತಲುಪುತ್ತಿಲ್ಲ ಎಂಬುದೂ ಸತ್ಯ. ಬೆಂಗಳೂರು – ಮೈಸೂರುಗಳಿಗೆ ಸಿಗುವಷ್ಟು ಸವಲತ್ತು ಖಂಡಿತವಾಗಿ ಉತ್ತರ ಕರ್ನಾಟಕಕ್ಕೆ/ ಕೋಲಾರ/ ಚಾಮರಾಜನಗರ ಭಾಗಕ್ಕೆ ಸಿಕ್ಕಿಲ್ಲ. ಅಲ್ಲಿನ ಪ್ರಾಥಮಿಕ ಶಾಲೆಗಳಿಗೆ ಹೋದರೆ ಕಣ್ಣಿಗೆ ರಾಚುವಂತೆ ವ್ಯತ್ಯಾಸ ಗೋಚರಿಸುತ್ತದೆ. ಬಯಲಲ್ಲಿ ಶೌಚ ಮಾಡುತ್ತಾ, ಬಿಸಿಯೂಟ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಶಾಲೆಗೆ ಬರುತ್ತಾ ಇರುವ ಮಕ್ಕಳಿಗೆ ಪಠ್ಯದಲ್ಲಿ ಷವರ್‍ನಲ್ಲಿ ಸ್ನಾನ ಮಾಡುವ ಪಾಠಗಳನ್ನು ಇರಿಸಲಾಗಿದೆ (ನೋಡಿ ನಾಲ್ಕನೆಯ ತರಗತಿಯ ಇಂಗ್ಲೀಷಿನ ಮೊದಲ ಪಾಠ) ಇಂತಹ ವೈರುಧ್ಯಗಳಲ್ಲಿ ಪ್ರತ್ಯೇಕತೆಯ ವಾದಗಳು ಹುಟ್ಟುವುದು ಸಹಜ. ಆದರೆ ಈ ಪ್ರತ್ಯೇಕತೆಯಿಂದ ಆಯಾ ಭಾಗದ ಬೆಳವಣಿಗೆಗೆ ದೊಡ್ಡ ಲಾಭಗಳಾಗುವುದಿಲ್ಲ ಎಂಬದೂ ಸಹ ಸತ್ಯ. ಈ ಸತ್ಯವನ್ನು ನಮ್ಮ ಜನರಿಗೆ ಮನಗಾಣಿಸಿ, ಸರ್ಕಾರಗಳು ತಮ್ಮ ಸಂಪನ್ಮೂಲಗಳನ್ನು ಸಮಾನವಾಗಿ ಹಂಚುವಂತಹ ವ್ಯವಸ್ಥೆ ರೂಢಿಸಲು ಪ್ರಯತ್ನಿಸಬೇಕಿದೆ. ಅದಾಗುವುದಕ್ಕೆ ನಾವು ಸರಿಯಾದ ಜನ ಪ್ರತಿನಿಧಿಗಳನ್ನು (ಕನಿಷ್ಟ ನಾವಾಡುವ ಮಾತುಗಳನ್ನು ಕೇಳುವಷ್ಟು ಸೌಜನ್ಯ ಇರುವವರನ್ನು) ಆರಿಸಬೇಕಾಗಿದೆ.
ಇನ್ನು ನಾವು ಯಾರನ್ನು ನಾಯಕರು ಎಂದುಕೊಂಡಿದ್ದೆವೋ ಅವರಲ್ಲಿ ಅನೇಕರು ಆಳುವ ಪಕ್ಷಗಳನ್ನು ಮೆಚ್ಚಿಸುವ ಮಾತಾಡುವುದರಲ್ಲಿ ಮುಳುಗಿದ್ದಾರೆ ಎಂಬುದು ಮತ್ತೊಂದು ಕಷ್ಟ. ನಮ್ಮ ನಡುವೆ ಅನೇಕ ಕನ್ನಡ ಹೋರಾಟಗಾರರು ಇದ್ದಾರೆ. ಅವರು ಕನ್ನಡದ ಕೆಲಸಕ್ಕಾಗಿ ನಿರಂತರ ಕೆಲಸ ಮಾಡಿದವರು. ಆದರೆ ಅವರು ಇಂದು ಅನೇಕ ವಿಷಯಗಳ ಬಗ್ಗೆ ತೆಗೆದುಕೊಳ್ಳುತ್ತಿರುವ ನಿಲುವುಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯವಿದೆ. ಅದನ್ನು ಅವರ ಜೊತೆಗೆ ಚರ್ಚೆ ಮಾಡಲು ಸಹ ಆಗದಂತೆ ಅವರ ಸುತ್ತ ಓಲೈಸುವ ಜನ ಸೇರಿದ್ದಾರೆ. ಇನ್ನೂ ಕೆಲವು ಕನ್ನಡ ಸಂಘಟನೆಗಳು ಕನ್ನಡದ ಹೆಸರಲ್ಲಿ ವಸೂಲಿ ಸಂಘಟನೆಗಳಾಗಿವೆ. ಪರಿಷತ್ತಿನಂತಹ ಸಂಸ್ಥೆಗಳು ಸಹ ಜಾತಿ ರಾಜಕೀಯದ ತಾಣಗಳಾಗಿವೆ. ಈಚೆಗೆ ಇಲ್ಲಿಗೆ ನಡೆದ ಚುನಾವಣೆಯಲ್ಲಿ ಜಾತಿಯಾಧಾರದಲ್ಲಿಯೇ ಮತ ಯಾಚನೆಯನ್ನು ನಡೆಸಿದ್ದನ್ನು ಗಮನಿಸಬಹುದು. ಅದಾಗಲೇ ವ್ಯಾಪಾರಿಗಳು ತಮ್ಮ ಕಬ್ಜಾಗೆ ತೆಗೆದುಕೊಂಡಿದ್ದ ಪರಿಷತ್ತಿನಿಂದ ಕನ್ನಡದ ಕೆಲಸ ಆಗುತ್ತದೆಯೇ ಎಂಬುದೇ ಅನುಮಾನ. ಅದು ಪ್ರಾಯಶಃ ಕೇವಲ ವರ್ಷಕ್ಕೊಮ್ಮೆ ಮಾಡುವ ಜಾತ್ರೆಗೆ ಸೀಮಿತವಾಗಿ ಬಿಡಬಹುದಾದ ಅಪಾಯವಿದೆ. ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳು ಆಯಾ ಕಾಲಕ್ಕೆ ಬರುವ ಸರ್ಕಾರಗಳನ್ನಾಧರಿಸಿ ಕೆಲಸ ಮಾಡುತ್ತಿವೆಯೇ ಹೊರತು ಕನ್ನಡದ ಕಾರಣಕ್ಕೆ ಸಾರ್ವತ್ರಿಕ ಕೆಲಸ ಮಾಡುತ್ತಿಲ್ಲ. ಹೀಗಿರುವಾಗ ಕನ್ನಡದ ಕೆಲಸ ನಡೆಸುವುದಾದರೂ ಹೇಗೆ? ಹೀಗಾಗಿಯೇ ಇಂದು “ಕನ್ನಡಿಗ ಅನಾಥ ಮತ್ತು ಸ್ಥಳೀಯ ನಿರಾಶ್ರಿತ” ಎಂಬಂತಹ ಸ್ಥಿತಿ ಒದಗಿದೆ.
ಈ ಹಿಂದಿನ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದಂತೆ; ಕಾರ್ಮಿಕರು ಹೇಗೆ ತಮ್ಮ ಕ್ಷೇಮಕ್ಕಾಗಿ ತಮ್ಮ ನಾಯಕರನ್ನು ಹುಟ್ಟಿಸಬೇಕಿದೆಯೋ ಹಾಗೆಯೇ ಕನ್ನಡದ ಕೆಲಸಕ್ಕೆ ಕೂಡ ಕನ್ನಡಿಗರೇ ಹೊಸ ನಾಯಕರನ್ನು ಸೃಷ್ಟಿಸಿಕೊಳ್ಳಬೇಕಿದೆ. ಜೆಎನ್‍ಯುದಲ್ಲಿ ಕನ್ಹಯ್ಯ ಕುಮಾರ್‍ರಂತಹ ಯುವ ಹೊಸ ನಾಯಕರು ಬಂದಂತೆ ಕನ್ನಡಿಗರ ನಡುವೆಯೂ ಅಂತಹ ಹೊಸ ನಾಯಕರು ಖಂಡಿತ ಬಂದೇ ಬರುತ್ತಾರೆ ಎಂಬ ನಂಬಿಕೆಯಂತೂ ನನಗಿದೆ.
ಕನ್ನಡ ಕಟ್ಟುವ ಕೆಲಸವನ್ನು ವಿದ್ಯಾರ್ಥಿ ಕನ್ನಡಿಗ, ಕಾರ್ಮಿಕ ಕನ್ನಡಿಗ, ಗಡಿನಾಡ ಕನ್ನಡಿಗ, ಒಳನಾಡ ಕನ್ನಡಿಗ, ಹೊರನಾಡ ಕನ್ನಡಿಗ, ಗಣಕಲೋಕದ ಕನ್ನಡಿಗ ಎಂದು ಪ್ರತ್ಯೇಕವಾಗಿ ಗುರುತಿಸಿ, ಯಾವ ಯಾವ ವಿಭಾಗಕ್ಕೆ ಯಾವುದು ಆದ್ಯತೆಯ ವಿಷಯ ಎಂದು ಪಟ್ಟಿಮಾಡಿಕೊಂಡು – ಅದೇ ಕ್ರಮದಲ್ಲಿ ಕನ್ನಡ ಸಂಘಟನೆಗಳು ಕೆಲಸ ಮಾಡಬೇಕಿದೆ. ಈ ಕನ್ನಡ ಸಂಘಟನೆಗಳು ಕೇವಲ ಕನ್ನಡ ಎಂದು ಭಾಷೆಯನ್ನಾಗಿಷ್ಟೇ ನೋಡದೆ ಕನ್ನಡಿಗ ಎಂಬರ್ಥದಲ್ಲಿ ಎಲ್ಲಾ ಸಮಸ್ಯೆಗಳನ್ನು ಗಮನಿಸಿ, ಕನ್ನಡಿಗನ ಸರ್ವತೋಮುಖ ನೆಮ್ಮದಿಗೆ ನೀರಾವರಿ, ವಿದ್ಯುತ್, ಹೀಗೆ ಎಲ್ಲಾ ಸಮಸ್ಯೆಗಳಿಗೂ ಕೂಡಿಕೊಂಡೇ ಪರಿಹಾರ ಹುಡುಕಬೇಕಿದೆ. ಅಗತ್ಯ ಬಿದ್ದಲ್ಲಿ ಮಹದಾಯಿ ಚಳುವಳಿಯ ಹಾಗೆ ನಿರಂತರ ಚಳುವಳಿಯ ಮೂಲಕ ನಾಡು ಕಟ್ಟುವ ಕೆಲಸ ಮಾಡಬೇಕಿದೆ. ಇವು ದೂರಗಾಮಿ ದೃಷ್ಟಿಯಿಂದ ಕಟ್ಟಬೇಕಾದ ಚಳುವಳಿಗಳಾಗಬೇಕು. ಆಗ ಮಾತ್ರ ಕನ್ನಡಿಗರ ನಾಳೆಗಳು ಸುಂದರವಾಗಬಹುದು.

10. ಕನ್ನಡ-ಕಾರ್ಮಿಕ ಜಗೃತಿಯಲ್ಲಿ “ಕಾರ್ಮಿಕಲೋಕ” ದಂತಹ ಪತ್ರಿಕೆಗಳ ಪಾತ್ರದ ಬಗ್ಗೆ ನಿಮ್ಮ ಅನಿಸಿಕೆ

ಬಿ.ಸುರೇಶ : ಹಿಂದೆಂದಿಗಿಂತ ಇಂದು ಸಣ್ಣ ಪತ್ರಿಕೆಗಳ ಕೆಲಸ ದೊಡ್ಡದು. ಏಕೆಂದರೆ ಇಂದು ಬಹುತೇಕ ಮಾಧ್ಯಮಗಳು ಹಾಗೂ ದಿನಪತ್ರಿಕೆಗಳು ಕಾರ್ಪೋರೇಟ್ ಜಗತ್ತಿಗೆ ಸೇರಿಬಿಟ್ಟಿವೆ. ಹೀಗಾಗಿ ಇಲ್ಲಿ ಜನರ ಸಮಸ್ಯೆಯ ಚರ್ಚೆಗಿಂತ ಜನರಂಜನೆ ಮತ್ತು ಸೆನ್ಸೇಷನಲಿಸಂಗೆ ಮಾತ್ರ ಜಾಗವಿರುತ್ತದೆ. ಹೀಗಾಗಿ ನಮಗೆ ಬೇಕಾದ ಮಾಹಿತಿಯನ್ನು, ನಮ್ಮ ಹೋರಾಟಗಳ ಹಾದಿಯನ್ನು ದಾಖಲಿಸುವುದಕ್ಕೆ ಸಾಧ್ಯವಿರುವುದು ಸಣ್ಣ ಪತ್ರಿಕೆಗಳಿಗೆ ಮಾತ್ರ ಸಾಧ್ಯ. ಈ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಒಂದು ಪ್ರಸಂಗವನ್ನು ಹೇಳುತ್ತೇನೆ. ಮಾರ್ಚ್ 12ರಂದು ಬೆಂಗಳೂರಿನಲ್ಲು ಬೃಹತ್ ಕಾರ್ಮಿಕ ಸಮಾವೇಶ ನಡೆಸಲಾಯಿತು. ಕಾರ್ಮಿಕರು ಕನಿಷ್ಟ ವೇತನಕ್ಕಾಗಿ ಮತ್ತು ಸಾಮಾಜಿಕ ಭದ್ರತೆಗಾಗಿ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಸೇರಿದ್ದರು. ಸರಿಸುಮಾರು ಹತ್ತು ಹನ್ನೆರಡು ಸಾವಿರ ಜನ ಕಾರ್ಮಿಕರು ಈ ಸಮಾವೇಶಕ್ಕಾಗಿ ರಾಜ್ಯದ ಎಲ್ಲಾ ಮೂಲೆಗಳಿಂದ ಬಂದಿದ್ದರು. ಸಮಾವೇಶ ಬಹುತೇಕ ಯಶಸ್ವಿಯಾಯಿತು. ಸರ್ಕಾರ ಕಾರ್ಮಿಕರ ಬೇಡಿಕೆಯನ್ನು ಪಡೆದು ಶೀಘ್ರವಾಗಿ ಪರಿಹಾರ ಮಾರ್ಗ ಹುಡುಕುವುದಾಗಿಯೂ ಹೇಳಿತು. ಆದರೆ ಆ ದಿನ ಪೂರ್ತಿ ನಮ್ಮ ಸುದ್ದಿ ಮಾಧ್ಯಮಗಳಲ್ಲಿ ಬಂದದ್ದು ಈ ಕಾರ್ಮಿಕರ ಬೇಡಿಕೆಯ ವಿಷಯವಲ್ಲ. ಬದಲಿಗೆ ಈ ಸಮಾವೇಶದಿಂದ ಆದ ಟ್ರಾಫಿಕ್ ಜಾಮ್ ಸುದ್ದಿ, ಅದರಿಂದ ಸಾರ್ವಜನಿಕರಿಗೆ ಆದ ತೊಂದರೆಯ ವಿವರ ಪ್ರಸಾರವಾದವು. ದಿನಪತ್ರಿಕೆಗಳಂತೂ (ಒಂದೆರಡನ್ನು ಹೊರತು ಪಡಿಸಿ) ಈ ಕಾಮೀಖ ಸಮಾವೇಶದ ಸುದ್ದಿಯನ್ನೇ ಹಾಕಲಿಲ್ಲ. ಹೀಗೆ ಸುದ್ದಿ ನಿರ್ವಹಣೆ ಮಾಡುವುದರ ಹಿಂದೆ ಇರುವುದು, ಬಂಡವಾಳ ಹೂಡುವವರಿಗಾಗಿ ಮಾಡಿರುವ ಕಾರ್ಮಿಕ ನೀತಿಯಂತಹುದೇ ಮನಸ್ಸು. ಆ ಜನರಿಗೆ ಕಾರ್ಮಿಕರು ಒಗ್ಗೂಡುವ ವಿಷಯಕ್ಕಿಂತ, ಅವರ ಸಮಸ್ಯೆಗಳನ್ನು ಕುರಿತು ಮಾತಾಡುವುದಕ್ಕಿಂತ ಸಾರ್ವಜನಿಕರಲ್ಲಿ ಇಂತಹ ಸಮಾವೇಶ ಕುರಿತಂತೆ ಹೇವರಿಕೆ ಮೂಡಿಸುವುದೇ ಉದ್ದೇಶ. ಹೀಗಿರುವಾಗ ಕಾರ್ಮಿಕರು ತಮ್ಮ ಅಭಿಪ್ರಾಯ ಹೇಳಿಕೊಳ್ಳುವುದಕ್ಕೆ ತಮ್ಮದೇ ತಾಣ ಮಾಡಿಕೊಳ್ಳುವುದು ಅನಿವಾರ್ಯ. ಆ ಹಿನ್ನೆಲೆಯಲ್ಲಿ “ಕಾರ್ಮಿಕ ಲೋಕ” ದಂತಹ ಸಣ್ಣ ಪತ್ರಿಕೆಗಳು ಅತ್ಯಗತ್ಯ.
“ಕಾರ್ಮಿಕ ಲೋಕ” ಪತ್ರಿಕೆಯು ಸಹ ಈ ನಿಟ್ಟಿನಲ್ಲಿ ವಿಶೇಷವಾದ ಕೆಲಸ ಮಾಡಬೇಕು. ಇಂತಹ ಪತ್ರಿಕೆಗಳ ಮೂಲ ಜವಾಬ್ದಾರಿ ಮೂರು ಬಗೆಯದು. ಮೊದಲಿಗೆ ಸಂಘಟನೆಯನ್ನು ಬಲಪಡಿಸುವ ಕೆಲಸ. ಅಂದರೆ ಕಾರ್ಮಿಕರು ತಮಗಾಗಿ ಮಾಡಿಕೊಂಡಿರುವ ಸಂಘಟನೆಯ ಸಧ್ಯದ ನಡೆಯನ್ನು ತಿಳಿಸುವುದಲ್ಲದೆ, ಮುಂಬರುವ ದಿನಗಳಲ್ಲಿ ಸಂಘಟನೆ ಏನು ಮಾಡಬೇಕೆಂಬ ದಿಕ್ಸೂಚಿಯೂ ಸಹ ಈ ಪತ್ರಿಕೆಯಿಂದ ಸಿಗುವಂತಾಗಬೇಕು. ಎರಡನೆಯದು ಜಾಗತಿಕವಾಗಿ ಕಾರ್ಮಿಕರ ಜಗತ್ತು ಏನು ಸಮಸ್ಯೆ ಎದುರಿಸುತ್ತಿದೆ ಎಂಬ ವಿವರದ ಜೊತೆಗೆ ಸ್ಥಳೀಯವಾಗಿ ಕಾರ್ಮಿಕರು ಅನುಭವಿಸುವ ಸಮಸ್ಯೆಗಳು, ವಿಶೇಷವಾಗಿ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಕುರಿತು ವಿಸ್ತøತ ಚರ್ಚೆಗಳು ಇಂತಹ ಪತ್ರಿಕೆಗಳಲ್ಲಿ ಆಗಬೇಕು. ಮೂರನೆಯದು ಮತ್ತು ಬಹುಮುಖ್ಯವಾದುದು ನಮ್ಮ ನಡುವಿನ ಸಣ್ಣ ಪುಟ್ಟ ಸಾಧಕರನ್ನು ಗುರುತಿಸುವುದು, ಗೌರವಿಸುವುದು. ಒಬ್ಬ ಕಾರ್ಮಿಕನಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಬಂದಿದ್ದರೆ ಆತನ ಸಂದರ್ಶನ, ಅವನ ಕುಟುಂಬದವರ ಜೊತೆಗೆ ಆತ ನಗುತ್ತಾ ನಿಂತಿರುವ ಫೋಟೊ ಪತ್ರಿಕೆಯಲ್ಲಿ ಇರಬೇಕು. ಹಾಗೆಯೇ ಯಾವುದೋ ಕಾರ್ಮಿಕ ಕ್ರೀಡೆಯಲ್ಲಿ ಅಥವಾ ಸಾಂಸ್ಕೃತಿಕವಾಗಿ ವಿಶಿಷ್ಟ ಸಾಧನೆ ಮಾಡಿದ್ದರೆ ಅಂತಹರನ್ನು ಪರಿಚಯಿಸುವ, ಆ ಮೂಲಕ ಇನ್ನಿತರ ಕಾರ್ಮಿಕರಲ್ಲಿ ಅಂತಹ ಕ್ರೀಡೆ ಅಥವಾ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಆಸಕ್ತಿ ಹುಟ್ಟಿಸುವ ಕೆಲಸವನ್ನು ಸಹ ಪತ್ರಿಕೆ ಮಾಡಬೇಕು. ಇದಲ್ಲದೆ ಕಾರ್ಮಿಕರ ಮಕ್ಕಳ ಸಾಧನೆಯನ್ನು ಸಹ ಗುರುತಿಸಿ, ಗೌರವಿಸುವ ಮೂಲಕ ಇನ್ನಿತರ ಕಾರ್ಮಿಕರಿಗೆ ತಮ್ಮ ಮಕ್ಕಳು ಸಹ ಇಂತಹ ಸಾಧನೆ ಮಾಡಲು ಸಾಧ್ಯ ಎಂದು ಸೂಚಿಸಬೇಕು. ಅಂದರೆ ಸಂಘ, ನಾಡು ಮತ್ತು ಸದಸ್ಯ ಎಂಬ ತ್ರಿಮೂಲೆಯ ಕೆಲಸವನ್ನು ಪತ್ರಿಕೆಯು ನಡೆಸಿದಾಗ ಆ ಸಂಘಟನೆಯು ಮತ್ತಷ್ಟು ಬಲಗೊಳ್ಳುವುದು ಸಾಧ್ಯ.
“ಕಾರ್ಮಿಕಲೋಕ” ಪತ್ರಿಕೆಯೂ ತುಂಬಾ ವಿಶಿಷ್ಟ ಬಗೆಯ ಪತ್ರಿಕೆಯೂ ಹೌದು. ಇದು ಕಾರ್ಮಿಕರ ಲೋಕವನ್ನಲ್ಲದೆ ಸಾಹಿತ್ಯ ಪರಿಚಾರಕರ, ಸಾಂಸ್ಕೃತಿಕ ಲೋಕದ ಹಿರಿಯರ, ಕನ್ನಡ ಹೋರಾಟಗಾರರ ಪರಿಚಯ ಮತ್ತು ಹೋರಾಟದ ಮಾದರಿಗಳನ್ನು ಸೂಚಿಸುವ ಕೆಲಸವನ್ನು ಸಹ ಮಾಡುತ್ತಿದೆ. ಇದು ಸಹ ಅತ್ಯಂತ ಮುಖ್ಯವಾದ ಕೆಲಸವೇ. ಹೊರಗಿನ ಲೋಕದಲ್ಲಿನ ವಿಶೇಷಗಳನ್ನು/ಮಾದರಿಗಳನ್ನು ತೋರಿಸಿಕೊಡುವ ಮೂಲಕ ನಮ್ಮ ಕಾರ್ಮಿಕರ ಲೋಕವನ್ನು ಬಲಗೊಳಿಸುವುದು ಸಾಧ್ಯ. ಈ ಕಾರಣಗಳಿಗಾಗಿಯೇ ನನಗೆ ಈ ಪತ್ರಿಕೆಯ ಬಗ್ಗೆ ವಿಶೇಷ ಆದರಾಭಿಮಾನವಿದೆ. ಈ ಪತ್ರಿಕೆಯನ್ನು ನಡೆಸುತ್ತಾ ಇರುವ ಕಾರ್ಮಿಕರು ತಮ್ಮ ಸ್ವಂತ ಆದಾಯದಿಂದ ಈ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಹೀಗೆ ಯಾವ ಲಾಭವಿಲ್ಲದೆ ನಾಲ್ಕು ಜನರಿಗಾಗಿ ಕೆಲಸ ಮಾಡುವವರು ಈ ದಿನಗಳಲ್ಲಿ ವಿರಳ. ಹಾಗಾಗಿ ಈ ಪತ್ರಿಕೆಯನ್ನು ನಡೆಸುತ್ತಾ ಇರುವ ಬಳಗಕ್ಕೆ ಯಶ ಸಿಗಲಿ ಎಂದು ಹಾರೈಸುತ್ತೇನೆ.

* * *
ಬಿ.ಸುರೇಶ
30 ಮಾರ್ಚ್ 2016
ಬೆಂಗಳೂರು

Advertisements

0 Responses to “ಕಾರ್ಮಿಕ ಲೋಕ ಪತ್ರಿಕೆಯವರು ನಡೆಸಿದ ಸಂದರ್ಶನ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 60,851 ಜನರು
Advertisements

%d bloggers like this: