ಗೆಳೆಯಾ ಕೇಶವಮೂರ್ತಿ ಅವರಿಗೊಂದು ಪತ್ರ (“ಗೇಟ್‍ಕೀಪರ್” ಪುಸ್ತಕ ಕುರಿತು)

ಪ್ರಿಯ ಕೇಶವಮೂರ್ತಿ,
ನೀವು ಬರೆದ ಹೊಸ ಪುಸ್ತಕವನ್ನು ಕುರಿತಂತೆ ಅಭಿಪ್ರಾಯ ಕಳಿಸಿ ಎಂದು “ಗೇಟ್‍ಕೀಪರ್” ಪುಸ್ತಕದ ಕರಡು ಕಳಿಸಿದ್ದಿರಿ. ನನ್ನ ಕೆಲಸದ ಒತ್ತಡದಲ್ಲಿ ಓದುವುದು ಸಾಧ್ಯವಾಗಿರಲಿಲ್ಲ. ಈಚೆಗೆ ಯಾರಿಗೋ ಕಾಯುವ ಹೊತ್ತಲ್ಲಿ ನಿಮ್ಮ ಲೇಖನ ಸಂಗ್ರಹವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಹೀಗೆ ಹಿಡಿದ ಪುಸ್ತಕವನ್ನು ಕೆಳಗಿಳಿಸದಂತೆ ಬರೆದಿದ್ದೀರಿ ಎಂಬುದೇ ನಿಜಕ್ಕೂ ಮೆಚ್ಚತಕ್ಕ ವಿಷಯ.
ಓದುವುದು ಒಂದು ಕೆಲಸವಾದರೆ. ಓದಿದ್ದರ ಕುರಿತು ಅಭಿಪ್ರಾಯ ಬರೆಯುವುದು ಸಹ ಸಮಯ ಬೇಡುವ ಕೆಲಸ. ಹೇಗೆ ಹೇಗೋ ಸಮಯ ಹೊಂದಿಸಿಕೊಂಡು, ಕಂತುಗಳಲ್ಲಿ ಈ ಪತ್ರದ ಮೂಲಕವೇ ನನ್ನ ಅಭಿಪ್ರಾಯ ದಾಟಿಸುತಿದ್ದೇನೆ. ಈ ಕಂತುಗಳ ಬರವಣಿಗೆಯಲ್ಲಿ ಇರಬಹುದಾದ ಮಿತಿಗಳ ಜೊತೆಗೆ ಇದನ್ನು ಒಪ್ಪಿಸಿಕೊಳ್ಳಿ.


ಸಿನಿಮಾ ಎಂಬುದು ಮಾಯಕವೂ ಹೌದು, ನಮ್ಮ ಸಮಕಾಲೀನ ಚರಿತ್ರೆಯ ಬಹುಮುಖ್ಯ ದಾಖಲೆಯೂ ಹೌದು. ಒಂದು ಸಿನಿಮಾ ತಾನು ತಯಾರಾದ ಕಾಲದಲ್ಲಿದ್ದ ನೋಡುಗನಿಗೆ ತಾಗಿದಂತೆ ಎಷ್ಟೋ ವರ್ಷಗಳ ನಂತರ ಅದೇ ಸಿನಿಮಾ ನೋಡಿದವನಲ್ಲಿಯೂ ಹೊಸ ಅನುಭೂತಿಯನ್ನು ಹಾಗೂ ಹೊಸ ಆಲೋಚನೆಗಳನ್ನು ಹುಟ್ಟಿಸುತ್ತದೆ. ಸಿನಿಮಾ ಒಂದರ ನಿಜವಾದ ಮೌಲ್ಯಮಾಪನ ದೊರೆಯುವುದೇ ಅದು ಎಷ್ಟು ಕಾಲ ತನ್ನ ನೋಡುಗರನ್ನು ಹುಟ್ಟಿಸಿಕೊಳ್ಳುತ್ತದೆ ಮತ್ತು ತನ್ನೊಂದಿಗೆ ನೋಡುಗರನ್ನು ಕರೆದೊಯ್ಯುತ್ತದೆ ಎಂಬುದರಿಂದ. ಹಾಗಾಗಿಯೇ ಸಿನಿಮಾ ಎಂಬ ಮಾಯಕವು ಹುಟ್ಟಿದ ಕಾಲದಿಂದ ಇಲ್ಲಿಯವರೆಗೆ ಬೆಸ್ಟ್ ಟೆನ್, ಬೆಸ್ಟ್ ಹಂಡ್ರೆಡ್ ಹೀಗೆ ಸಿನಿಮಾಗಳ ಪಟ್ಟಿಯನ್ನು ಮಾಡುವ ಅಭ್ಯಾಸವೂ ಚಾಲ್ತಿಗೆ ಬಂದಿದೆ. ಹೀಗೆ ಪಟ್ಟಿ ಮಾಡುವಾಗ ಅತಿ ಹೆಚ್ಚು ಹಣ ಗಳಿಸಿದ, ಅತಿ ಹೆಚ್ಚು ಕಾಲ ಓಡಿದ ಎಂದೆಲ್ಲಾ ಅನೇಕ ಪಟ್ಟಿಗಳು ತಯಾರಾಗುವುದನ್ನು ಸಹ ನಾವು ನೋಡಿದ್ದೇವೆ. ಆದರೆ ಆಯಾ ಸಿನಿಮಾಗಳು ನಮ್ಮಲ್ಲಿ ವಿಶಿಷ್ಟ ಅನುಭೂತಿಯನ್ನು ಹುಟ್ಟಿಸಲು ಕಾರಣವಾದುದು ಏನು ಎಂಬುದನ್ನು ತಿಳಿಯಲು ಸಿನಿಮಾ ವಿಮರ್ಶೆಗೆ ಮೊರೆಹೋಗಬೇಕು. ಆದರೆ ಆ ಬಗೆಯ ವಿಶ್ಲೇಷಣಾತ್ಮಕ ಸಿನಿಮಾ ವಿಮರ್ಶೆ ನಮ್ಮ ಭಾಷೆಯಲ್ಲಿಯೇ ನಮಗೆ ಸಿಗುವುದು ಅಪರೂಪ. ಗುಣಾತ್ಮಕ ವಿಶ್ಲೇಷಣೆಗೆ ಜಾಗ ದೊರೆಯುವುದೇ ಕಷ್ಟ ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ.
ನನ್ನ ಬಾಲ್ಯದ ದಿನಗಳಲ್ಲಿ (ಎಪ್ಪತ್ತರ ದಶಕದಿಂದ ಎಂಬತ್ತರ ದಶಕದ ಕಡೆಯ ವರೆಗಿನ ಕಾಲಘಟ್ಟ) ದಿನಪತ್ರಿಕೆಗಳಲ್ಲಿ ಸಿನಿಮಾ, ನಾಟಕ, ಸಂಗೀತ, ಸಾಹಿತ್ಯ, ರಸಗ್ರಹಣ ಕುರಿತು ವಿಸ್ತೃತ ಲೇಖನಗಳು ಬರುತ್ತಿದ್ದವು. ಪುರವಣೆಗಳಲ್ಲಿ ಉತ್ತಮ ಸಿನಿಮಾ ಕುರಿತ ಭರಪೂರ ಚರ್ಚೆಗಳು ನಡೆಯುತ್ತಿದ್ದವು. ನನ್ನಂತಹ ಅನೇಕರಿಗೆ ಹುಟ್ಟಿದ ಸಿನಿಮಾ, ನಾಟಕದ ಆಸಕ್ತಿಗೆ ನಮ್ಮ ದಿನಪತ್ರಿಕೆಗಳು ಹಾಗೂ ಸಿನಿಮಾ ಪುರವಣೆಗಳೇ ಮೂಲ ಕಾರಣವಾಗಿದ್ದವು. ತೊಂಬತ್ತರ ದಶಕದಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳ ಆಗಮನದ ಜೊತೆಗೆ ಪತ್ರಿಕೆಗಳಲ್ಲಿ ಇಂತಹ ಲೇಖನಗಳಿಗೆ ಸಿಗುತ್ತಿದ್ದ ಜಾಗ ಮೊಟಕಾಗುತ್ತಾ ಬಂದು, ಈಗ ಅದು ಬಹುತೇಕ ಇಲ್ಲವೇ ಇಲ್ಲ ಎಂಬಂತಾಗಿದೆ. ಸಿನಿಮಾ ಸಂಸ್ಕೃತಿ ಕುರಿತ ಸುದ್ದಿಗಳೇನಿದ್ದರೂ ಗ್ಲಾಮರ್ ವಿಷಯಕ್ಕೆ ಮಾತ್ರ ಪ್ರಾಧಾನ್ಯ ಎಂಬಂತಾಗಿದೆ. ಈ ಬದಲಾವಣೆಯ ಜೊತೆಗೆ ಸಿನಿಮಾ ವಿಮರ್ಶೆ ಎಂಬುದು ನೂರೈವತ್ತು ಪದಗಳ ಒಳಗೆ ಮುಗಿಯಬೇಕಾದ ಪರಿಸ್ಥಿತಿ ತಲುಪಿದೆ. ನನ್ನ ಬಹುತೇಕ ಪತ್ರಕರ್ತ ಮಿತ್ರರು ತಾವು ಹೇಳಬೇಕಾದ್ದನ್ನು ಹೇಳಲು ಜಾಗ ಸಾಲುತ್ತಿಲ್ಲ ಎಂದು ಬೇಸರಿಸಿಕೊಳ್ಳುವುದನ್ನು ನಾನು ಸ್ವತಃ ಕೇಳಿದ್ದೇನೆ. ಇದರೊಂದಿಗೆ ನಮ್ಮ ಓದುಗರು ಸಹ ವಿಮರ್ಶೆಯನ್ನು ಓದುವುದಕ್ಕಿಂತ ಆ ಸಿನಿಮಾಕ್ಕೆ ದೊರೆತಿರುವ ನಕ್ಷತ್ರಗಳೆಷ್ಟು ಎಂಬುದನ್ನಷ್ಟೇ ಗಮನಿಸುವ ಹಂತಕ್ಕೆ ಬಂದಿದ್ದಾರೆ. ಈ ಪಲ್ಲಟವು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರಿಗೆ ವರವಾಗಿ ಪರಿಣಮಿಸಿದೆ. ಅನೇಕ ಸಿನಿಮಾ ಚಿಂತಕರು ತಮ್ಮ ಅಭಿಪ್ರಾಯಗಳನ್ನು ಬ್ಲಾಗ್‍ಗಳಲ್ಲಿ ಬರೆಯುತ್ತಾ ಇದ್ದಾರೆ. ಆ ಮೂಲಕ ಸಿನಿಮಾ ಕುರಿತ ಚರ್ಚೆಗಳು ಇಂದಿಗೂ ಜೀವಂತವಾಗಿದೆ. ಇಂಥಾ ಕಾಲದಲ್ಲಿ ನೀವು ಕಂಡ “ಶ್ರೇಷ್ಟ” ಸಿನಿಮಾಗಳನ್ನು ಕುರಿತು “ಕನ್ನಡಪ್ರಭ” ಪತ್ರಿಕೆಯ ಪುರವಣೆಗೆ ನಿರಂತರವಾಗಿ ಬರೆಯುತ್ತಾ ಇದ್ದೀರಿ ಎಂಬುದು ಸಂತಸದ ಸಂಗತಿ. ಇದಕ್ಕಾಗಿ ನಿಮ್ಮ ಪತ್ರಿಕೆಯ ಪುರವಣೆಯ ಸಂಪಾದಕ ಬಳಗವನ್ನೂ ಸಹ ಅಭಿನಂದಿಸಲೇಬೇಕು.


“ಗೇಟ್‍ಕೀಪರ್” ಎಂಬ ಹೆಸರೇ ಸ್ವತಃ ಅನೇಕ ಧ್ವನ್ಯಾರ್ಥಗಳಿರುವ ಪದ. ನಮ್ಮ ದೇಶದ ಪುರಾಣಗಳ ಪ್ರಕಾರ ಈ ಗೇಟ್‍ಕೀಪರ್‍ಗಳ ಕಾರಣವಾಗಿ ದಶಾವತಾರವಾಗಿದೆ. ಯಾವುದೇ ವ್ಯವಸ್ಥೆಯಲ್ಲಿ ಈ ಗೇಟ್‍ಕೀಪರ್ ಅನ್ನುವ ಪಾತ್ರದದ್ದು ಅತೀ ಮುಖ್ಯದ ಕೆಲಸ. ಆತ ಹೊರಗಿನವರನ್ನು ಯೋಗ್ಯತೆಯನುಸಾರ ಒಳಗೆ ಬಿಡುವ ಹಾಗೆಯೇ ಒಳಗಿನವರಿಗೆ ಹೊರಗೂ ಕಳಿಸುತ್ತಾ ಇರುವವನು. ಅದು ಬಂದೀಖಾನೆಯಾಗಿದ್ದರೆ ಅದೇ “ಗೇಟ್‍ಕೀಪರ್” ಒಳಗೆ ಬರುವವನಿಗೆ ‘ಯಾಕೆ ಬಂದ್ಯಪ್ಪಾ?’ ಎನ್ನುತ್ತಾ ಹೊರಗೆ ಹೋಗುವವರಿಗೆ ‘ಮತ್ತೆ ಬರಬೇಡಪ್ಪ’ ಎನ್ನುತ್ತಾನೆ. ಸಿನಿಮಾ ಥಿಯೇಟರ್‍ನಲ್ಲಿ ಈ ಗೇಟ್‍ಕೀಪರ್ ಟಿಕೇಟ್ ಇದೆಯಾ ಎಂದು ಪರಿಶೀಲಿಸುತ್ತಾ, ಸಿನಿಮಾದ ಪ್ರಮಾಣಪತ್ರವನ್ನಾಧರಿಸಿ ಸರಿಯಾದ ವಯಸ್ಸಿನವರನ್ನು ಸಿನಿಮಾ ಮಂದಿರದೊಳಗೆ ಕಳಿಸುತ್ತಾ, ಅನಗತ್ಯವಾದವರನ್ನು ಹೊರಗುಳಿಸುತ್ತಾ ಇರುವ ಬಹುಮುಖ್ಯ ವ್ಯಕ್ತಿ. ಆ ನಿಟ್ಟಿನಲ್ಲಿ ನಮ್ಮ ಕೇಶವಮೂರ್ತಿಯವರು ಸಿನಿಮಾ ವಿದ್ಯಾರ್ಥಿಗಳಿಗೆ “ಗೇಟ್‍ಕೀಪರ್” ಆಗಿ ಯಾವ ಸಿನಿಮಾ ಯಾಕೆ ನೋಡಬೇಕು ಎಂಬುದನ್ನು ತಿಳಿಸುವ ಪುಸ್ತಕ ಸಿದ್ಧಪಡಿಸಿದ್ದಾರೆ. ಇದು ಅಗತ್ಯವಾಗಿ ಆಗಬೇಕಾದ ಕೆಲಸ. ಇಂದು ನಮ್ಮೆದುರಿಗೆ ಆಯ್ಕೆಗೆ ಒಂದೆರಡು ಮಾರ್ಗಗಳಿಲ್ಲ. ಹಲವು ದಾರಿಗಳಿವೆ. ಅವುಗಳಲ್ಲಿ ಯಾವ ಮಾರ್ಗದಲ್ಲಿ ಸಾಗಿದರೆ ಏನು ಸಿಗುತ್ತದೆ ಎಂಬಂತಹ ಗೈಡ್ ಆಗಿ ಈ ಪುಸ್ತಕ ಸಹಾಯ ಮಾಡುತ್ತದೆ.
ಇಲ್ಲಿರುವುದು ನೀವು (ಕೇಶವಮೂರ್ತಿಯವರು) ಕಂಡ “ಶ್ರೇಷ್ಟ” ಸಿನಿಮಾ ಕುರಿತ ವಿಸ್ತೃತ ಚರ್ಚೆಯಲ್ಲ. ವಿಶಿಷ್ಟ ಸಿನಿಮಾಗಳ ಸ್ಥೂಲ ಪರಿಚಯ. ಈ ಹಿಂದೆ “ಗಾಂಧೀಸೀಟು” ಎಂಬ ಪುಸ್ತಕದ ಮೂಲಕ ತಾವು ನೋಡಿದ ಜಾಗತಿಕ ಸಿನಿಮಾಗಳಲ್ಲಿ ವಿಶಿಷ್ಟ ಎನಿಸಿದ 31 ಸಿನಿಮಾಗಳನ್ನು ಪರಿಚಯಿಸಿದ್ದ ನೀವು ಈ ಸಲ “ಗೇಟ್‍ಕೀಪರ್” ಮೂಲಕ ತಮಗೆ ಶ್ರೇಷ್ಟ ಎನಿಸಿದ ಇನ್ನೂ 25 ಸಿನಿಮಾಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದೀರಿ. ಇಲ್ಲಿ ಕನ್ನಡ, ಮಲೆಯಾಳಂ, ಬೆಂಗಾಲಿ, ರಾಜಸ್ಥಾನೀ, ಹಿಂದಿ, ಚೀನಿ, ಇಟಲಿ, ಫ್ರೆಂಚ್, ಇರಾನಿ, ಕೊರಿಯಾ, ಯು.ಕೆ., ಯು.ಎಸ್.ಎ. ಚಿತ್ರಗಳನ್ನು ಕುರಿತ ಮಾಹಿತಿ ಹಾಗೂ ವಿಶ್ಲೇಷಣೆಗಳಿವೆ. ಸಿನಿಮಾಸಕ್ತರಿಗೆ ಈ ಪುಸ್ತಕದ ಲೇಖನಗಳು ಆಯಾ ಸಿನಿಮಾಗಳ ಪ್ರವೇಶಿಕೆಯಂತೆ ಸಹಾಯ ಮಾಡುತ್ತವೆ.
ಇವು ಮೂಲತಃ ಅಂಕಣ ಬರಹಗಳು. ಭಾನುವಾರದ ಪುರವಣೆಯಲ್ಲಿ ಸಿಕ್ಕ ಅವಕಾಶದ ಸದ್ಬಳಕೆಯಾಗಿ ಸಿದ್ಧವಾದಂತಹ ಲೇಖನಗಳು. ಇಂತಹ ಅಂಕಣದ ಮೊದಲ ಮಿತಿ ಎಂದರೆ ಪದ ಬಳಕೆಯದು. ನೂರಿನ್ನೂರು ಪದಗಳ ಒಳಗೆ ಒಂದು ಶ್ರೇಷ್ಟ ಸಿನಿಮಾ ಕುರಿತ ವಿಶ್ಲೇಷಣೆಗೆ ತೊಡಗುವುದು ನಿಜಕ್ಕೂ ಕ್ಲಿಷ್ಟ ಕೆಲಸ. ವಿಶ್ಲೇಷಣೆ ಎಂದಾಗ ಆಯಾ ಸಿನಿಮಾದ ತಯಾರಿಕೆಯ ಹಿಂದಿನ ರಾಜಕೀಯ ಕಾರಣಗಳನ್ನು ತಿಳಿಸಿ, ಅದರಲ್ಲಿನ ಹೂರಣವನ್ನು ತಿಳಿಸಿ ನಂತರ ದೃಶ್ಯಭಾಷೆಯ ಬಳಕೆಯನ್ನು ಕುರಿತು ಚರ್ಚೆ ಆರಂಭಿಸಬೇಕಾಗುತ್ತದೆ. ಈ ಅಂಕಣ ಬರಹಗಳಲ್ಲಿ ಆ ಬಗೆಯ ಪೂರ್ಣಪ್ರಮಾಣದ ವಿಶ್ಲೇಷಣೆ ಮತ್ತು ವಿಮರ್ಶಕನ ದೃಷ್ಟಿಕೋನದಲ್ಲಿ ಆ ಸಿನಿಮಾ ಸಾಧಿಸಿದ್ದೇನು ಎಂಬ ವಿವರ ಸಿಗುವುದಿಲ್ಲ. ಆದರೆ ಆಯಾ ಸಿನಿಮಾದ ಕತೆಯ ಹೂರಣ ಖಂಡಿತ ಸಿಗುತ್ತದೆ. ಸಿನಿಮಾ ವಿದ್ಯಾರ್ಥಿಗಳಿಗೆ ಇದು ಸಾಕಷ್ಟು ಅನುಕೂಲ ಒದಗಿಸುತ್ತದೆ.
ನೀವಿಲ್ಲಿ ಪರಿಚಯಿಸಿರುವ “ಅಮೋರ್”, “ಅಟೋನ್ಮೆಂಟ್” ಎಂಬ ಎರಡು ಸಿನಿಮಾ ಹೊರತುಪಡಿಸಿ ಇನ್ನೆಲ್ಲ ಸಿನಿಮಾಗಳನ್ನು ನಾನೂ ನೋಡಿದ್ದೇನೆ. ಗಿಸೊಪ್ಪೆ ಟಾರ್ನಟೋರ್‍ನ “ಸಿನಿಮಾ ಪ್ಯಾರಡಿಸೋ”, ಟಾಮ್ ಟ್ವೈಕರ್‍ನ “ಪರ್‍ಫ್ಯೂಮ್”, ಮಕ್ಮುಲ್‍ಬಫ್‍ನ “ಸೈಲನ್ಸ್”. ಮಜೀದಿಯ “ವಿಲ್ಲೋ ಟ್ರೀ”, ಥ್ರೂಫೆÇೀನ “ಫೆÇೀರ್ ಹಂಡ್ರೆಡ್ ಬ್ಲೋಸ್” ತರಹದ ಸಿನಿಮಾಗಳನ್ನು ನಾನು ಮತ್ತೆ ಮತ್ತೆ ನೋಡುತ್ತಾ ಇರುತ್ತೇನೆ. ಈ ಸಿನಿಮಾ ಕುರಿತು ನಿಮ್ಮ ನಿಲುವಿಗೂ ನನ್ನ ನಿಲುವಿಗೂ ದೊಡ್ಡ ವ್ಯತ್ಯಾಸವಿಲ್ಲ. ಹಾಗಾಗಿಯೇ ನಾನು ಈ ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವುದು ಸಹ ಸಾಧ್ಯವಾಯಿತು.


ಇಲ್ಲಿರುವ ಸತ್ಯಜಿತ್ ರೇ ಅವರ “ಚಾರುಲತ” ಸಿನಿಮಾದ ಪರಿಚಯವನ್ನೇ ಗಮನಿಸಿ. ಇದು ರವೀಂದ್ರನಾಥ್ ಠಾಗೋರರ ಕಾದಂಬರಿಯೊಂದರಲ್ಲಿ ಬರುವ ಸಣ್ಣ ವಿವರ. ಅದನ್ನು ಸತ್ಯಜಿತೆ ರೇ ಅವರು ಸಿನಿಮಾ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೂ ಸುಮಾರು ಅರವತ್ತರ ದಶಕದ ಆದಿಕಾಲದಲ್ಲಿ. ನೆಹರೂವೀಯನ್ ಎಕಾನಮಿಕ್ಸ್‍ನ ಉಚ್ಛ್ರಾಯದ ಕಾಲದಲ್ಲಿ ಬಂಗಾಲಿ ಪುನರುತ್ಥಾನ ಕಾಲದ ಕತೆಯನ್ನು ಆರಿಸಿಕೊಳ್ಳುವುದು ಮತ್ತು ಆ ಮೂಲಕ ಹೆಣ್ಣಿನ ಮನಸ್ಸಿನ ತುಮುಲಗಳನ್ನು ಹೇಳುತ್ತಲೇ ಭಾರತದ ಸಮಕಾಲೀನ ರಾಜಕೀಯ ಕುರಿತು ಮಾತಾಡುವುದು ಸತ್ಯಜಿತ್ ರೇ ಅವರಿಗೆ ಯಾಕೆ ಮುಖ್ಯವಾಯಿತು ಎಂಬ ಚರ್ಚೆಯಾಗದೆ “ಚಾರುಲತ” ಸಿನಿಮಾ ಕುರಿತ ಮಾತು ಮುಗಿಯಲಾರದು. ಭಾರತವು ತೂಗುಯ್ಯಾಲೆಯಲ್ಲಿದ್ದ ಸ್ಥಿತಿಯನ್ನ ರೇ ಉಯ್ಯಾಲೆಯ ಬಳಕೆಯಿಂದ, ನೆರಳು ಬೆಳಕಿನ ವಿನ್ಯಾಸದಿಂದ ಸಾಧಿಸುತ್ತಾ ಹೋಗುತ್ತಾರೆ. ತಾನು ಕಟ್ಟಿಕೊಂಡದ್ದಕ್ಕಿಂತ ಹೊರಗಿನಿಂದ ಬಂದುದನ್ನು ಕುರಿತು ಪ್ರೀತಿ ವ್ಯಕ್ತಪಡಿಸುವ ನಾಯಕಿಯ ಪಾತ್ರವು ಭಾರತದ ಒಟ್ಟೂ ಜನರ ಅಂದಿನ ಮನಸ್ಥಿತಿಗೆ ಮಾತ್ರವಲ್ಲ ಇವತ್ತಿನ ಮನಸ್ಸಿಗೂ ಸಂಕೇತವಾಗಿಯೇ ಕಾಣಿಸುತ್ತದೆ. ಹೀಗಾಗಿಯೇ ಸತ್ಯಜಿತ್ ರೇ ಅವರ “ಚಾರುಲತ” ಇಂದಿಗೂ ನೋಡುಗರನ್ನು ಕಾಡುತ್ತದೆ. ನೆಹರು ಮಾದರಿಯ ಅಭಿವೃದ್ಧಿಗೂ ಇಂದು ನಾವು ಕಾಣುತ್ತಾ ಇರುವ ಉದಾರವಾದಿ ನೀತಿಯ ಅಭಿವೃದ್ಧಿಗೂ ತಾತ್ವಿಕವಾಗಿ ಬೃಹತ್ ವ್ಯತ್ಯಾಸಗಳಿವೆ. ಆದರೆ ಭಾರತೀಯರ ಮನಸ್ಸಿನ ತುಯ್ದಾಟದಲ್ಲಿ ಬದಲಾವಣೆಯಾಗಿಲ್ಲ. ನಾವು ಈಗಲೂ ಆಯ್ಕೆಗಳ ಗೊಂದಲದಲ್ಲಿ ಇದ್ದೇವೆ. ನಮಗೆ ಒದಗಿ ಬಂದುದಕ್ಕಿಂತ ನಮ್ಮ ಕೈಗೆಟುಕದೆ ಇದ್ದ ವಿವರವು ನಮ್ಮನ್ನು ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಸತ್ಯಜಿತ್ ರೇ ಅವರ “ಚಾರುಲತ” ಇವತ್ತಿಗೂ ಪ್ರಸ್ತುತವಾದ ಸಿನಿಮಾ. ಹಾಗಾಗಿಯೇ “ಗೇಟ್‍ಕೀಪರ್”ನ ಮೊದಲ ಲೇಖನವಾಗಿ ಇಂತಹ ಸಿನಿಮಾವನ್ನು ನೀವು ಆರಿಸಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. “ಚಾರುಲತಾ” ಸಿನಿಮಾ ವಿದ್ಯಾರ್ಥಿಗಳು ಕಥನ ನಿರ್ವಹಣೆಗೆ, ಕ್ಯಾಮೆರಾ ಬಳಕೆಗೆ, ಕ್ಯಾಮೆರಾ ಕೋನಗಳ ಬಳಕೆಗೆ ಸದಾ ನೋಡುತ್ತಲೇ ಇರಬೇಕಾದ ಸಿನಿಮಾ. ಹೀಗಾಗಿ ನೀವಿಲ್ಲಿ ಬರೆದ ಆರಂಭಿಕ ಮಾತುಗಳನ್ನು ಓದಿದ ಸಿನಿಮಾ ವಿದ್ಯಾರ್ಥಿಯು ನಂತರ ರೇ ಅವರ ಜಗತ್ತನ್ನು ಪ್ರವೇಶಿಸಿ, ಅಲ್ಲಿಂದಾಚೆಗೆ ರೇ ಅವರ ಬಗ್ಗೆ ಇರುವ ಬೃಹತ್ ವಿಮರ್ಶೆಗಳ ಗಂಟನ್ನು ಪ್ರವೇಶಿಸಬಹುದು ಎನಿಸುತ್ತದೆ. ಆದ್ದರಿಂದ ಕನ್ನಡ ಸಿನಿಮಾ ವಿದ್ಯಾರ್ಥಿಗೆ ನಿಮ್ಮ ಈ ಪುಸ್ತಕವು ಬೃಹತ್ ಖಜಾನೆಯ ಕೀಲಿಕೈಯಾಗಿ ಕೆಲಸ ಮಾಡುತ್ತದೆ.
ಈ ಹಿಂದೆ ಬಿ.ವಿ.ವೈಕುಂಠರಾಜು ಅವರು ಹೊರ ತಂದಿದ್ದ “ಘಟಶ್ರಾದ್ಧ” ಚಿತ್ರದ ಕುರಿತ ಪುಸ್ತಕ, ಕೆ.ವಿ.ಸುಬ್ಬಣ್ಣ ಅವರ “ರಾಶೋಮನ್” ಕುರಿತ ಪುಸ್ತಕ, ಟಿ.ಜಿ.ವೈದ್ಯನಾಥನ್ ಅವರು ಹೊರತಂದ ಅನೇಕ ಸಿನಿಮಾಗಳ ವಿಮರ್ಶೆ, ಮನುಚಕ್ರವರ್ತಿ ಅವರ “ಮಾಧ್ಯಮ ಮಾರ್ಗ” ಮುಂತಾದವು ಆಯಾ ಸಿನಿಮಾಗಳ ತಿರುಳನ್ನು ಮಾತ್ರ ಹೇಳದೇ ಆ ಸಿನಿಮಾಗಳ ಜಕ್ಸ್‍ಟಪೆÇಸಿಷನ್ ರಾಜಕೀಯ ಮತ್ತು ಸಿಮಿಯಾಟಿಕ್ಸ್ ರಾಜಕೀಯವನ್ನು ಕುರಿತು ಕೂಡ ಮಾತಾಡಿದ್ದವು. ಇಂತಹ ಲೇಖನಗಳಿಂದ ಸಿನಿಮಾಸಕ್ತರಿಗೆ ಒಂದು ಸಿನಿಮಾದೊಳಗಣ ಕತೆಯ ಆಚೆಗೆ ಸಿನಿಮಾ ಎಂಬ ಕಥನ ಕಲೆಯ ರಸೋತ್ಪತ್ತಿಯ ನೆಲೆಗಳು ಮತ್ತು ಅದರ ಪರಿಣಾಮಗಳು ತಿಳಿಯುತ್ತಿದ್ದವು. ಆ ಲೇಖನಗಳ ಹಾಗೆ ನಿಮ್ಮ ಬರಹ ಬೌದ್ಧಿಕ ಕಸರತ್ತನ್ನು ಬೇಡುವುದಿಲ್ಲ. ಇಲ್ಲ್ಲಿನ ಭಾಷೆ ಸರಳ. ಅಭಿಪ್ರಾಯ ನೇರ ಮತ್ತು ಕ್ಲುಪ್ತ. ಇದು ಸ್ವತಃ ನಿಮ್ಮ ವ್ಯಕ್ತಿತ್ವವೂ ಹೌದು. ಅದೇ ಕಾರಣಕ್ಕೆ ನೀವು ನನಗೂ ಮಿತ್ರರಾಗಿ ಬಹುಕಾಲದಿಂದ ಜೊತೆಗಿದ್ದೀರಿ.


ಕನ್ನಡ ಚಲನಚಿತ್ರ ವಿಮರ್ಶೆಗೆ ಸಿನಿಮಾಕ್ಕಿರುವಷ್ಟೇ ದೊಡ್ಡ ಇತಿಹಾಸವಿದೆಯಾದರೂ ಈ ವಿಮರ್ಶೆಯು ನಿಜಾರ್ಥದಲ್ಲಿ ಸಿನಿಮಾ ವಿಮರ್ಶೆಯಾಗಿ ಬೆಳೆಯಲಿಲ್ಲ. ಇದಕ್ಕಿರಬಹುದಾದ ಕೆಲವು ಕಾರಣಗಳನ್ನು ಈ ಹಿಂದೆ ಹೇಳಿದ್ದೆ. ಮತ್ತೊಂದು ಪ್ರಮುಖ ಕಾರಣ ನಮ್ಮಲ್ಲಿನ ಸಿನಿಮಾ ವಿಮರ್ಶಕರಲ್ಲಿ ದೃಶ್ಯಭಾಷೆಯನ್ನು ಅದರಾಳ ವಿಸ್ತಾರಗಳನ್ನರಿತುಬರೆಯುತ್ತಿದ್ದವರು ಕಡಿಮೆ ಅಥವಾ ಇಲ್ಲವೇ ಇಲ್ಲ ಎಂತಲೂ ಹೇಳಬಹುದು. ಈಚೆಗೆ ‘ಚಲನಚಿತ್ರ ಪತ್ರಕರ್ತರಿಗೆ ರಸಗ್ರಹಣ ಶಿಬಿರ’ ಎಂಬುದು ನಡೆದ ಹಿನ್ನೆಲೆಯಲ್ಲಿ ಈ ಮಾತು ಆಡಬೇಕಿದೆ. ಆದರೆ ಆ ಶಿಬಿರದಲ್ಲಿ ಪಾಲ್ಗೊಂಡಿದ್ದವರಲ್ಲಿ ವೃತ್ತಿನಿರತ ಪತ್ರಕರ್ತರ ಸಂಖ್ಯೆ ಕಡಿಮೆ ಇತ್ತಂತೆ. ಇರಲಿ ಬಿಡಿ. ನಮ್ಮ ನಡುವೆ ಇಂತಹ ರಸ್ಗ್ರಹಣ ಶಿಬಿರಗಳು ಎಷ್ಟಾದರೂ ತಪ್ಪೇನಿಲ್ಲ. ಮತ್ತು ಅಂತಹ ಶಿಬಿರಗಳು ಕೇವಲ ಪತ್ರಕರ್ತರಿಗೆ ಎಂದಲ್ಲದೆ ನಾಡಿನ ಎಲ್ಲರನ್ನೂ ಒಳಗೊಂಡಂತೆ ಆಗಬೇಕಿದೆ. ಅಂತಹ ಕೆಲಸಕ್ಕೆ ನಿಮ್ಮ “ಗಾಂಧೀ ಸೀಟು” ಮತ್ತು “ಗೇಟ್ ಕೀಪರ್” ಪುಸ್ತಕಗಳು ಖಂಡಿತ ಮೊದಲ ಮೆಟ್ಟಿಲಾಗುತ್ತವೆ.
ಸಿನಿಮಾ ಒಂದನ್ನು ಅದರ ಎಲ್ಲಾ ಕೋನಗಳಿಂದ ಗ್ರಹಿಸಬೇಕೆಂದು ಬಯಸುವ ವಿದ್ಯಾರ್ಥಿಗೆ ಮೊದಲು ಆ ಸಿನಿಮಾದ ನೆಲೆಗಟ್ಟೇನು? ಆ ಸಿನಿಮಾದ ಹೂರಣವೇನು ಎಂದು ತಿಳಿಯುವುದು ಮುಖ್ಯವಾಗುತ್ತದೆ. ಇಂತಹ ಪರಿಚಯಾತ್ಮಕ ಕೆಲಸವನ್ನು ನಿಮ್ಮ ಲೇಖನಗಳು ಮಾಡುತ್ತಿವೆ. ಟಾಮ್ ಟ್ವೈಕರ್‍ನ “ಪರ್‍ಫ್ಯೂಮ್” ತರಹದ ಸಿನಿಮಾಗಳನ್ನು ನೋಡುವ ಬಹುತೇಕರು ಅದನ್ನು ಕೊಲೆಗಳ ಮತ್ತು ಕೊಲೆಗಾರನ ಹುಡುಕಾಟದ ‘ಥ್ರಿಲ್ಲರ್’ ಎಂದು ಭಾವಿಸಿ ನೋಡುವುದೇ ಹೆಚ್ಚು. ಆದರೆ ಆ ಸಿನಿಮಾದ ಬಗೆಗಿನ ನಿಮ್ಮ ಹೂರಣವನ್ನೋದಿದವರಿಗೆ ಅದು ‘ವಾಸನೆ’ಗಳನ್ನು ಕುರಿತ ಸಿನಿಮಾ ಎಂಬುದು ತಿಳಿಯುತ್ತದೆ. ಆ ಸಿನಿಮಾದ ಆರಂಭದಲ್ಲಿ ಹುಟ್ಟುವ ಮಗು ದಾದಿಯ ಬೆರಳು ಹಿಡಿದು ವಾಸನೆ ನೋಡುವ ಕ್ರಮದಿಂದಲೇ ಇದು ಕಣ್ಣುಗಳ ಮೂಲವೇ ವಾಸನೆಯ ಜಗತ್ತನ್ನು ಕುರಿತು ಮಾತಾಡುವ ಸಿನಿಮಾ ಎಂದು ತಿಳಿಯುತ್ತದೆ. ಆ ಮೂಲಕ ಟಾಮ್ ಟ್ವೈಕರ್ ರೀತಿಯ ಚಿತ್ರ ನಿರ್ದೇಶಕನು ಕತೆಯನ್ನು ನಿರೂಪಿಸುವ ಬಗೆಯು ಸಹ ಪರಿಚಿತವಾಗುತ್ತದೆ. ಒಂದು ಪುಸ್ತಕ ಮಾಡಬೇಕಾದ ಮಹತ್ತರವಾದ ಕೆಲಸವೇ ಇದು.


ನಿಮ್ಮ ಪುಸ್ತಕವು ಯಾವ ಅಗತ್ಯ ಪೂರೈಸಲು ಅಂಕಣವಾಗಿ ಬಂದಿತೋ ಆ ಅಗತ್ಯದಾಚೆಗೆ ಕನ್ನಾಡಿಗರಿಗೆ ಉಪಯುಕ್ತವಾಗುತ್ತದೆ ಎಂದು ಭಾವಿಸಿದ್ದೇನೆ. ಇಂತಹದೊಂದು ಪುಸ್ತಕ ಬರೆದು, ಅದಕ್ಕೆ ನನ್ನ ಅಭಿಪ್ರಾಯ ಕೇಳಿದ್ದಕ್ಕೆ ಧನ್ಯವಾದಗಳು.
ನಾನು ಬರೆದಿರುವುದು ಪರಿಪೂರ್ಣ ಮತ್ತು ಇದೇ ಸರಿ ಎಂಬ ಭ್ರಮೆಯೇನು ನನಗಿಲ್ಲ. ನಿಮ್ಮ ಅಗತ್ಯವನ್ನು ಈ ನನ್ನ ಬರಹ ಪೂರೈಸದಿದ್ದರೆ ಇದನ್ನು ಬಳಸದೆಯೂ ಕೈ ಬಿಡಬಹುದು. ನನಗೇನೂ ಬೇಸರವಿಲ್ಲ. ಅದರಿಂದ ನಮ್ಮ ಸ್ನೇಹಕ್ಕೆ ಯಾವ ಚ್ಯುತಿಯೂ ಆಗುವುದಿಲ್ಲ.
ಹೀಗೇ ಬರೆಯುತ್ತೀರಿ. ನಿಮಗೆ ಒಳಿತಾಗಲಿ ಎನ್ನುತ್ತಾ ವಿರಮಿಸುತ್ತೇನೆ.
– ಬಿ.ಸುರೇಶ
25 ಜುಲೈ 2016
ಬೆಂಗಳೂರು

Advertisements

0 Responses to “ಗೆಳೆಯಾ ಕೇಶವಮೂರ್ತಿ ಅವರಿಗೊಂದು ಪತ್ರ (“ಗೇಟ್‍ಕೀಪರ್” ಪುಸ್ತಕ ಕುರಿತು)”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: