“ಪ್ರತಿಭಟನೆಯಾಗಿ ಕಾವ್ಯ” (ಚಕ್ರವರ್ತಿ ಚಂದ್ರಚೂಡ ಅವರ “ಮೈಲುತುತ್ತಾ” ಕುರಿತು)

ಇದು ಪ್ರತಿಭಟನೆಯ ಕಾಲ. ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಕೂಗಿ ಕೂಗಿ ಹೇಳುವ ಕಾಲ. ಕಳೆದೆರಡು ವರ್ಷದಲ್ಲಿನ ನಮ್ಮ ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಬಗ್ಗೆ ಸಂತೋಷ ಪಡಬಹುದಾದ ಬಹುಮುಖ್ಯ ವಿಷಯವೆಂದರೆ ಈ ಕಾಲಘಟ್ಟವು ಅತಿ ಹೆಚ್ಚು ಚಳುವಳಿಗಳಿಗೆ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಗ್ರಾಸ ಒದಗಿಸಿದೆ. ಹಾಗಾಗಿಯೇ ಇವತ್ತಿನ ಕಾಲವನ್ನು ಅತಿಹೆಚ್ಚು ಹೋರಾಟದ ಹಾಡುಗಳು ಹುಟ್ಟಿದ ಕಾಲ ಎಂದು ಸಹ ನಾಳಿನವರು ಗುರುತಿಸಬಹುದೇನೋ. ಒಂದು ವ್ಯವಸ್ಥೆ ತನ್ನ ಜನರ ನಡುವೆಯೇ ಒಡಕು ಮೂಡಿಸುವ ಕೆಲಸಕ್ಕಿಳಿದಾಗ, ತಾನು ಶ್ರೇಷ್ಟ ಇತರರು ಕನಿಷ್ಟ ಎಂಬ ಭಾವದ ಪ್ರಚಾರಕ್ಕೆ ಸ್ವತಃ ನಿಂತಾಗ, ಇತರರು ತಿನ್ನುವ ಆಹಾರವನ್ನು ನಿಯಂತ್ರಿಸಲು ಹೊರಟಾಗ ಸಮಾಜ ಸುಮ್ಮನಿರುವುದಿಲ್ಲ. ಅದು ತನ್ನ ಸ್ವಾತಂತ್ರ್ಯಕ್ಕೆ ಇರಬಹುದಾದ ಎಲ್ಲಾ ಮಗ್ಗುಲುಗಳನ್ನು ಬಳಸಿಕೊಂಡು ಕೂಗಿ ಕೂಗಿ ತನ್ನ ನೋವನ್ನು ಹತಾಶೆಯನ್ನು ಮತ್ತು ಬಿಡಗಡೆಯ ಆಶಯವನ್ನು ಹೇಳುತ್ತಾ ಇರುತ್ತದೆ. ಆ ಹಿನ್ನೆಲೆಯಲ್ಲಿ ಇಂದು ಹೊರ ಬರುತ್ತಾ ಇರುವ ಸಾಹಿತ್ಯ ಕೃತಿಗಳು, ಕವನಗಳು, ನಾಟಕಗಳು, ಸಿನಿಮಾಗಳು – ಎಲ್ಲವೂ ಪ್ರತಿಭಟನೆಯ ಅಸ್ತ್ರಗಳಾಗಿಯೇ ಬರುತ್ತಿವೆ. ಸುಮಾರು ಎಪ್ಪತ್ತರ ದಶಕದಲ್ಲಿದ್ದ ಕಾವು ಮರಳಿ ನಮ್ಮ ಎಲ್ಲಾ ಮಾಧ್ಯಮಗಳಿಗೆ ದೊರೆತಿದೆ. ನಾವು ಇದಕ್ಕಾಗಿ ನಮ್ಮನ್ನಾಳಲು ಮೆಜಾರಿಟಿ ಶಕ್ತಿಯೊಂದಿಗೆ ಬಂದು ಕುಳಿತಿರುವ ಹೊಸ ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಬೇಕು.
ಇಂತಹ ಕಾಲಘಟ್ಟದಲ್ಲಿ ಗೆಳೆಯ ಚಂದ್ರಚೂಡ ಅವರು ಮತ್ತೊಂದು ಕವನ ಸಂಕಲನ ಹೊರತರುತ್ತಿದ್ದಾರೆ. “ಮೈಲುತುತ್ತಾ” – ಇದು ಈ ಕವನ ಸಂಕಲನದ ಹೆಸರು. ಮೈಲುತುತ್ತವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಅದು ನಮ್ಮ ಕುಡಿಯುವ ನೀರಿನಲ್ಲಿರುವ ಕಲ್ಮಶವನ್ನು ತೆಗೆಯುತ್ತದೆ ಎಂಬುದು ಹೇಗೆ ಸತ್ಯವೋ, ಅದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿದರೆ ಆ ನೀರು ವಿಷವಾಗುತ್ತದೆ ಎಂಬುದು ಸಹ ಸತ್ಯ. ಯಾವುದೇ ಆದರೂ ಅತಿಯಾದರೆ ವಿಷವಾಗುತ್ತದೆ ಎಂಬ ನಾಣ್ನುಡಿಯಂತೆ ಮೈಲುತುತ್ತದ ಬಳಕೆಯ ಬಗ್ಗೆ ಎಚ್ಚರಿಕೆ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ತಮ್ಮ ಕವನಗಳನ್ನು ಕಟ್ಟಿದ್ದಾರೆ. ಇಲ್ಲಿರುವ ಎಪ್ಪತ್ತೈದು ಕವನಗಳಲ್ಲಿ ಬಹುತೇಕ ಕವನಗಳು ದಮನಕ್ಕೆ ಒಳಗಾದವನ ಆಕ್ರಂದನವಾಗಿದೆ ಮತ್ತು ಬಿಡುಗಡೆಯ ಬೇಡಿಕೆಯಾಗಿದೆ.
ಚಕ್ರವರ್ತಿ ಚಂದ್ರಚೂಡ ಅವರು ನನಗೆ ಈಚೆಗಿನ ಪರಿಚಯ. ಈ ಫೇಸ್‍ಬುಕ್ ಎಂಬ ವರ್ಚುಯಲ್ ಜಗತ್ತು ಎಷ್ಟೊಂದು ಜನ ಹೊಸಬರನ್ನು ಮುಖಾಮುಖಿಯಾಗಿಸುತ್ತದೆ. ಹಾಗೆ ಮುಖಾಮುಖಿಯಾದವರೆಲ್ಲರೂ ನಂತರ ಸ್ನೇಹವಲಯದೊಳಗೆ ಬರಲಾರರು. ಆದರೆ ಕೆಲವರು ತಮ್ಮ ಸೃಜನಶೀಲ ಶಕ್ತಿಯ ಕಾರಣವಾಗಿ ಮತ್ತು ಅವರ ನಿಲುವುಗಳು ನಮ್ಮಂತೆಯೇ ಇವೆ ಎಂಬ ಕಾರಣಕ್ಕಾಗಿ ಹತ್ತಿರವಾಗುತ್ತಾರೆ. ಹಾಗೆ ಚಕ್ರವರ್ತಿ ಚಂದ್ರಚೂಡ ಅವರ ಪರಿಚಯದ ಲಾಭ ನನಗಾಯಿತು. ಚಕ್ರವರ್ತಿ ಚಂದ್ರಚೂಡ ಅವರು ಪತ್ರಕರ್ತರು, ಕವಿಗಳು, ಸಿನಿಮಾ ನಿರ್ದೇಶಕರು ಹೀಗೆ ಹಲವು ಹತ್ತು ಮುಖಗಳನ್ನು ಹೊತ್ತವರು. ಈ ಎಲ್ಲಾ ಮುಖಗಳನ್ನು ಮಾಧ್ಯಮವನ್ನಾಗಿಸಿ ತಮ್ಮ ನಿಲುವನ್ನು ಹೇಳಲು ಬಳಸುತ್ತಾ ಇರುವವರು. ಈ ಹಿಂದೆ ಅವರು ಪ್ರಕಟಿಸಿದ ಕವನ ಸಂಕಲನದ ದನಿಯಲ್ಲಿ ಸದಾ ಸಂಚಾರಿಯಾದ ಮನಸ್ಸಿನ ಪ್ರೀತಿಯ ಹುಡುಕಾಟ ಪ್ರಧಾನ ಭಾವವಾಗಿದ್ದರೆ ಈಗ ಬರುತ್ತಾ ಇರುವ ಕವನ ಸಂಕಲನದಲ್ಲಿ ಪ್ರತಿಭಟನೆ ಮತ್ತು ಬಂಧನಗಳನ್ನು ಕುರಿತ ವಿಷಾದವು ಪ್ರಧಾನವಾಗಿದೆ.
ಇಲ್ಲಿರುವ ಕವನಗಳಿಗೆ ಶೀರ್ಷಿಕೆಯಿಲ್ಲ. ಸಂಖ್ಯೆಗಳಿವೆ. ಅದೂ ಕೂಡ ಓದುಗನಿಗೊಂದು ಬಿಡುಗಡೆ. ಯಾವುದೇ ಪದ್ಯಕ್ಕೆ ಅದರ ಹೆಸರಿನ ಮೂಲಕ ದೊರೆಯಬಹುದಾದ ಪ್ರವೇಶವನ್ನು ಲೇಖಕರು ಅಲ್ಲಗಳೆಯುತ್ತಾರೆ. ಪದ್ಯ ಲೋಕದಲ್ಲಿ ಇಳಿದವನಿಗೆ ಅದರೊಳಗಿನ ಹೂರಣ ದಕ್ಕಬೇಕು ಎಂಬ ಈ ಆಶಯ ಇಲ್ಲಿ ಮುಖ್ಯವಾಗಿದೆ. ಉದಾಹರಣೆಗೆ ಪದ್ಯ 1 ಗಮನಿಸಿ. “ನಾನು ದೇಶದ್ರೋಹಿ” ಎಂದು ಆರಂಭವಾಗುವ ಪದ್ಯವಿದು. ಸಮಕಾಲೀನ ಇತಿಹಾಸದಲ್ಲಿ ದೇಶಭಕ್ತಿ ಎಂಬುದು ಪಡೆದುಕೊಂಡಿರುವ ವಿಪರೀತಾರ್ಥಗಳನ್ನು ಹೀಗಳೆಯುವುದಕ್ಕಾಗಿ ವೈರುಧ್ಯಗಳನ್ನು ಮುಖಾಮುಖಿಯಾಗಿಸುವ ಕವಿ, “ನನ್ನನ್ನು ಪಾಕಿಸ್ತಾನಕ್ಕೆ ಕಳಿಸಿಬಿಡಿ, ಅದನ್ನೂ ಭಾರತವಾಗಿಸುತ್ತೇನೆ” ಎನ್ನುವ ಮೂಲಕ ದೇಶಭಕ್ತಿಗೆ ಹೊಸ ನಿರ್ವಚನ ನೀಡುತ್ತಾರೆ.
“ಸುಳ್ಳುಗಳನ್ನು ಸತ್ಯವೆಂದು
ಸ್ಥಾಪಿಸುವವರ ಜೊತೆಗೆ
ಯಾವತ್ತೂ ಬರಲಾರದ
ಈ ದ್ರೋಹಿಯನ್ನು ಕೊಲ್ಲುವಾಗ
ಕಿವಿಗಳಿಗೆ ಕೇಳಿಸುತ್ತಿರಲಿ
‘ಶುಭ್ರಜ್ಯೋತ್ಸ್ನಾ ಪುಲಕಿತ ಯಾಮಿನಿ”
ಎನ್ನುವ ಮೂಲಕ ಕಳೆದೆರಡು ವರುಷಗಳಿಂದ ನಮ್ಮ ನಡುವೆ ಹೆಚ್ಚುತ್ತಿರುವ ಹುಸಿದೇಶಭಕ್ತರಿಗೆ ಶಾಂತಿಯ ಪಾಠವನ್ನು ದಾಟಿಸುತ್ತಾರೆ. ಈ ಪದ್ಯದ ಉದ್ದಕ್ಕೂ ಇವರು ಮುಖಾಮುಖಿಯಾಗಿಸುವ ವೈರುಧ್ಯಗಳು ಸಹ ವಿಶಿಷ್ಟವಾದುದು. ನೇಣುಹಗ್ಗ, ಬಂದೂಕಿನಿಂದ ಸ್ವಾತಂತ್ರ ಬಂದಿಲ್ಲ ಎಂದು ಸೂಚಿಸುತ್ತಾ ತುರುಕರ ತಾಯಿಯ ಹಾಲನ್ನು ಕುಡಿದವನು ಕೇವಲ ನಿಮ್ಮ ಪಾಲಿನ ದೇಶದ್ರೋಹಿ ಎಂದು, ರಾಷ್ಟ್ರಪಿತನ ಕೊಂದವನ ದೇವಸ್ಥಾನಕ್ಕೆ, ರಾಮನ ದೇವಸ್ಥಾನಕ್ಕೆ ಇಟ್ಟಿಗೆಯನ್ನು ಹೊರಲಾರೆ ಎಂದು ಹೇಳುತ್ತಾ ಜಾತಿ, ಧರ್ಮದ ಹೆಸರಲ್ಲಿ ವಿಘಟನೆಯನ್ನು ಚಾಲ್ತಿಗೆ ತಂದಿರುವ ಹೊಸ ‘ಭಕ್ತ’ರಿಗೆ ಚಾಟಿ ಬೀಸುತ್ತಾರೆ.
ಇಂತಹ ಹಲವು ಉದಾಹರಣೆಗಳು ಈ ಕವನ ಸಂಕಲನದಲ್ಲಿವೆ. ಪದ್ಯ 3 ಗಮನಿಸಿ. ಕಳೆದೆ ಅರವತ್ತು ವರ್ಷಗಳ ಕಾಲ ಅಂಬೇಡ್ಕರ್ ಅವರನ್ನು ಬಯ್ಯುತ್ತಲೇ ಓಡಾಡಿದ ಜನತೆ ಇಂದು ಹೇಗೆ ಬಾಬಾ ಓಲೈಕೆಯಲ್ಲಿ ತೊಡಗಿದೆ ಎಂದು ಹೇಳುವ ಈ ಕವನವು ಕೇವಲ ಮತಯಾಚನೆಗೆ ನಮ್ಮ ಬಾಬಾನ ಹೆಸರನ್ನು ಬಳಸದೆ ಅವರು ಬರೆದ ಸಂವಿಧಾನವನ್ನು ಧ್ಯಾನಿಸಿ ಎಂಬ ಸ್ಪಷ್ಟ ಮಾತುಗಳನ್ನು ಉದ್ಘೋಷಕವಾಗಿಯೇ ಸೂಚಿಸುತ್ತದೆ.
ಇಂತಹ ನೆನಕೆಗಳ ಹಲವು ಪದ್ಯಗಳು ಈ ಸಂಕಲನದಲ್ಲಿವೆ. ಪದ್ಯ 5ರಲ್ಲಿ ತೀರಿಕೊಂಡ ಗಿರಿಜನರ ಹುಡುಗ ಜಂಗಲ್ ಜಾಕಿಯನ್ನು ನೆನೆಸುತ್ತಾ, ನಮ್ಮ ಮಾಧ್ಯಮಗಳು ಹೇಗೆ ಬಡವರ ಹಸಿವನ್ನೂ ಮಾರಾಟದ ಸರಕಾಗಿಸುತ್ತವೆ ಎಂದು ಹೇಳುತ್ತಾರೆ. ಆ ಮೂಲಕ ನಮ್ಮ ಹಾಡಿಯ ಹುಡುಗರು ಹೆಣವಾಗುವ ಹಾದಿಯನ್ನು ಬಿಚ್ಚಿಡುತ್ತಾರೆ. ಪದ್ಯ 8ರಲ್ಲಿ ಧರ್ಮಸ್ಥಳದ ಸೌಜನ್ಯಳನ್ನು ನೆನೆಸುತ್ತಾ ಹೇಗೆ ನಮ್ಮ ಸಮಾಜ ಬಡವರನ್ನು/ದಲಿತರನ್ನು ತುಳಿದು ಸಿರಿವಂತರಿಗೆ ಕಂಠೀಹಾರದ ಉಡುಗೊರೆಯನ್ನು ಕೊಟ್ಟು ಮೆರೆಯುತ್ತದೆ ಎಂಬ ಮಾತನ್ನಾಡುತ್ತಾ “ಅಸಾರಮನ ಅಧ್ಯಾತ್ಮದ ಅಮೇಧ್ಯ” ಎಂಬ ಆದಿಪ್ರಸಾದ ಮಾತುಗಳಿಂದಲೇ ನಮ್ಮ ನಡುವಿನ ಅಸಾಡ್ಡಾಳ ವ್ಯವಸ್ಥೆಗಳನ್ನು, ಪಟ್ಟಭದ್ರರನ್ನು ಕುರಿತ ಸತ್ಯವನ್ನು ಬಿಚ್ಚಿಡುತ್ತಾರೆ. ಪದ್ಯ 13ರಲ್ಲಿ ಪಾಕಿಸ್ತಾನದಲ್ಲಿ ಶಾಲೆಯ ಮೇಲಾದ ಭಯೋತ್ಪಾದಕರ ದಾಳಿಯನ್ನು ಖಂಡಿಸುತ್ತಾರೆ. ಪದ್ಯ 16ರಲ್ಲಿ ಹುಚ್ಚವೆಂಕಟ್ ಅಂಬೇಡ್ಕರ್ ಕುರಿತು ಆಡಿದ ಮಾತಿನ ಹಿನ್ನೆಲೆಯಲ್ಲಿ ದಲಿತರ ಐಕಾನ್ ಆದ ಅಂಬೇಡ್ಕರ್ ಅವರ ವಿಗ್ರಹಭಂಜನೆ ಮಾಡುವವರಿಗೆ “ನನ್ನ ಎಕ್ಕಡ” ಎನ್ನುತ್ತಾರೆ. ಪದ್ಯ 19ರಲ್ಲಿ ಚೆನ್ನೈನ ಮಹಾಮಳೆಯನ್ನು ನೆನೆಯುತ್ತಾ “ಮನುಷ್ಯರ ನಡುವಿನ ಕಂದಕಗಳು ಸತ್ತಿವೆ” ಎಂಬುದನ್ನು ನೆನಪಿಸುತ್ತಾ “ಚಿಗುರು ಅತಿತೇವಕ್ಕೂ ಸಾಯುತ್ತದೆ” ಎಂಬ ವಿಷಾದ ವ್ಯಕ್ತಪಡಿಸುತ್ತಾರೆ, ಪದ್ಯ 30 ಲಂಕೇಶರನ್ನ ನೆನೆಯುತ್ತಾ “ನಿಮ್ಮ ಹೆಸರಿನಲಿ ನಡೆಯುವ/ ಎಲ್ಲಾ ಶ್ರದ್ಧಾಂಜಲಿಗಳನ್ನು ಧಿಕ್ಕರಿಸುತ್ತಾ/ ಈ ಗೀತಾಂಜಲಿಯಲಿ/ ನಾಲ್ಕಕ್ಷರ ಸುರಿಯುತ್ತಿದ್ದೇನೆ” ಎನ್ನುತ್ತಾರೆ. ಹೀಗೆ ಮೂಲತಃ ಅನಾರ್ಕೆಯಿಕ್ ಆಲೋಚನೆಯ ವ್ಯಕ್ತಿತ್ವವು ತನ್ನ ಕಣ್ಣ ಫಾಸಲಿನಲ್ಲಿ ಬಂದ ವ್ಯಕ್ತಿಗಳನ್ನು ನೆನೆಯುತ್ತಲೇ ನಮ್ಮ ನಡುವೆ ಇರಬೇಕಾದ ಮನುಷ್ಯತ್ವ ಎಂತಹದು ಎಂಬುದನ್ನು ಸೂಚಿಸುತ್ತದೆ.
ಚಕ್ರವರ್ತಿ ಚಂದ್ರಚೂಡರ ಪದ್ಯ ಕಟ್ಟುವ ಹಾದಿಯು ತಮ್ಮ ಕಣ್ಣೆದುರಿಗೆ ಬಂದ ಅನೇಕ ವಿವರಗಳನ್ನು ಅಕ್ಷರಗಳಲ್ಲಿ ಕಟ್ಟುತ್ತದೆ. ಇಲ್ಲಿ ಸಂಜೆಮಲ್ಲಿಗೆಯೊಬ್ಬಳನ್ನು ಕುರಿತ ಆದ್ರ್ರತೆಯ ಹಾಗೆಯೇ ಅಮ್ಮನ ಬಗೆಗಿನ ಪ್ರೀತಿಯೂ ಉಕ್ಕುತ್ತದೆ. ಇವುಗಳಿಗೆ ಸಂವಾದಿಯಾಗಿ ಬಿಡುಗಡೆ ಮತ್ತು ಸ್ವಾತಂತ್ರ್ಯದ ಬಯಕೆ ಇವರ ಬಹುತೇಕ ಪದ್ಯಗಳ ಮೂಲ ಆಶಯವಾಗಿದೆ. ಆದರೆ ಆ ಬಿಡುಗಡೆಯನ್ನು ಸೂಚಿಸಲು ಬಳಸುವ ಪ್ರತಿಮೆಗಳು ನಮ್ಮದೇ ಬೀದಿಯಿಂದ ಹೆಕ್ಕಿದ ಅಪರೂಪದ ಚಿತ್ರಗಳು. ನಾಲ್ಕು ಜನರ ಹೆಗಲ ಮೇಲೆ ಮಲಗಿದವನಿಗೆ ಸಿಕ್ಕಿದ ಬಿಡುಗಡೆಯಿಂದ ಹಿಡಿದು ಈ ದರವೇಶಿಗೆ ದಾರಿಯೂ ಬೇಡ, ಪ್ರಯಾಣವೂ ಬೇಡ ಎಂಬುವರೆಗೆ “ಅವಮಾನಗಳ ಮಳೆ ಸುರಿದಷ್ಟೂ ಶುದ್ಧನಾಗುತ್ತೇನೆ” ಎಂಬ ಮಳೆಯನ್ನು ಸಮೀಕರಿಸಿದ ಅವಮಾನದ ಇತಿಹಾಸವನ್ನು ಹೇಳುತ್ತಾ “ಕಿಟಕಿಯ ಕಣ್ಣಳತೆಯಲಿ ಸ್ವಾತಂತ್ರ್ಯ ಕುಣಿಯುತಿದೆ” ಎನ್ನುವ ಮೂಲಕ ಕೋಟೆಗಳ ನಡುವಿನ ಬದುಕನ್ನು ಪ್ರಶ್ನಿಸುತ್ತಾರೆ.
ಇವುಗಳಾಚೆಗೆ ಚಕ್ರವರ್ತಿ ಚಂದ್ರಚೂಡ ಅವರ ಮತ್ತೊಂದು ಮುಖ್ಯ ಆಶಯ ಪ್ರೀತಿ. ಇವರ ಬಹುತೇಕ ಪದ್ಯಗಳಲ್ಲಿ ಮನುಷ್ಯರ ನಡುವಣ ಪ್ರೀತಿ ಮತ್ತು ಬದುಕಿನ ಪ್ರೀತಿಯನ್ನು ಕುರಿತ ಕಾಯುವಿಕೆ ಮತ್ತು ಎಂದೋ ಆದ ಪ್ರೀತಿಯ ಕನವರಿಕೆ ಇದೆ. ನೀರಿನಲ್ಲಿ ಬಿದ್ದ ಇರುವೆಯನ್ನು ಕಾಪಾಡಿದ ಎಲೆಯನ್ನು ಕಡೆಯವರೆಗೂ ಇರುವೆ ನೆನಪಿಸಿಕೊಳ್ಳುವುದು, “ಕೋಟಿ ಕಪ್ಪೆ ಚಿಪ್ಪು/ ಹುಟ್ಟುವುದು/ ಒಂದೇ ಮುತ್ತ ತಬ್ಬುವ/ ಮಮಕಾರಕೆ” ಎಂಬ ಕಾಮ ಎಂಬುದರ ಫಲಿತವನ್ನು ಮತ್ತೊಂದು ಬಗೆಯ ಪ್ರೇಮವಾಗಿಸುವ ಪರಿ ಓದುಗನಿಗೆ ಅಚ್ಚರಿಗಳನ್ನು ದಾಟಿಸುತ್ತಲೇ ಕಾಣ್ಕೆಯನ್ನು ನೀಡುವಂತಹದು.
“ಲೋ ದೇವರೇ!
ಮನುಷ್ಯ ನಿನ್ನನ್ನು
ಅದೆಷ್ಟು ಸುಂದರವಾಗಿ
ರಮ್ಯತೆಯಿಂದ ಚಿತ್ರಿಸುತ್ತಾನೆ.

ನಿನಗೇನಯ್ಯಾ ರೋಗ?
ಮನುಷ್ಯನನ್ನ
ಇಷ್ಟು ಕೆಟ್ಟದಾಗಿ ಚಿತ್ರಿಸಿದ್ದೀಯಾ?”
ಎಂಬಂತಹ ಮಾತುಗಳ ಮೂಲಕ ತಮ್ಮೊಳಗಿನ ಸಿಟ್ಟನ್ನು ಮತ್ತು ಅಗ್ನಾಸ್ಟಿಕ್ ಸಿದ್ಧಾಂತವನ್ನು ಏಕಕಾಲಕ್ಕೆ ಬಿಚ್ಚಿಡುವ ಕವಿಗಳು, “ವಾಟ್ಸಪ್ಪು-ಫೇಸ್‍ಬುಕ್ಕುಗಳಲ್ಲಿ ಬ್ಲಾಕ್ ಮಾಡಿದ್ದೇನೆ ನಿನ್ನ” ಅನ್ನುವಂತಹ ಸಮಕಾಲೀನ ಪ್ರತಿಮೆಗಳ ಮೂಲಕವು ತಮ್ಮ ಸಿಟ್ಟನ್ನು ಹೊರಗಡೆವುತ್ತಾರೆ.
ಒಂದಂತೂ ಸತ್ಯ. ಈ ಪದ್ಯಗಳು ತಮ್ಮೊಳಗಿನ ಹೂರಣದಿಂದ ಹಾಗೂ ಪ್ರತಿಮೆಗಳ ಮೂಲಕ ಕಟ್ಟುವ ಚಿತ್ರಣದಿಂದ ಸದಾಕಾಲ ನೆನಪಲ್ಲುಳಿಯುತ್ತವೆ.
ಥ್ಯಾಂಕ್ಸ್ ಚಕ್ರವರ್ತಿಗಳೇ. ನಿಮ್ಮಿಂದ ಮತ್ತಷ್ಟು ಇಂತಹ ಪದ್ಯಗಳ ಮಳೆ ಸುರಿಯಲಿ. ಸಮಕಾಲೀನ ತಲ್ಲಣಗಳಿಗೆ ಅಕ್ಷರ ಇತಿಹಾಸದಲ್ಲಿ ಸಲ್ಲಬೇಕಾದ ತಾವು ದೊರೆಯಲಿ.
– ಬಿ.ಸುರೇಶ
21 ಜುಲೈ 2016
ಬೆಂಗಳೂರು

Advertisements

0 Responses to ““ಪ್ರತಿಭಟನೆಯಾಗಿ ಕಾವ್ಯ” (ಚಕ್ರವರ್ತಿ ಚಂದ್ರಚೂಡ ಅವರ “ಮೈಲುತುತ್ತಾ” ಕುರಿತು)”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: