“ಒಂದು ಸಾಹಸಪೂರ್ಣ ಪ್ರಯತ್ನ”

ರಾಣಾ ಆಯೂಬ್ ಅವರು ಬರೆದು, ಸ್ವತಃ ಪ್ರಕಟಿಸಿರುವ “ಗುಜರಾತ್ ಫೈಲ್ಸ್- ಅನಾಟಮಿ ಆಫ್ ಎ ಕವರ್ ಅಪ್” ಪುಸ್ತಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಈಚೆಗೆ ತೀವ್ರ ಚರ್ಚೆ ನಡೆದಿತ್ತು. ಪರ-ವಿರೋಧಗಳ ತೀವ್ರ ಹಣಾಹಣಿಯು ಮೂಡಿಸಿದ ಕುತೂಹಲದಿಂದ ಈ ಪುಸ್ತಕವನ್ನು ಓದಿದೆ.
ಇದೊಂದು ಪತ್ರಿಕಾ ವರದಿಯ ರೀತಿಯಲ್ಲಿರುವ ಆದರೆ ಪತ್ರಿಕಾ ವರದಿ ಮಾತ್ರವೇ ಅಲ್ಲದೆ ಲೇಖಕರ ಕಾಳಜಿಯನ್ನೂ ಸ್ಪಷ್ಟವಾಗಿ ಸೂಚಿಸುವಂತಹ ಪುಸ್ತಕ. 2002ರಿಂದ ಆಚೆಗೆ ಗುಜರಾತ್ ರಾಜ್ಯದಲ್ಲಿ ಆದ ನರಮೇಧಗಳನ್ನು ಹಾಗೂ ಅವುಗಳ ತನಿಖೆಯು ನಡೆದ ಬಗೆಯನ್ನು ಕುರಿತು ಆಯಾ ತನಿಖೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಆಡಿದ ಮಾತುಗಳ ಮೂಲಕವೇ ರಾಣಾ ಆಯೂಬ್ ಅವರು ಈ ಪುಸ್ತಕದಲ್ಲಿ ಯಥಾವತ್ ದಾಖಲಿಸುತ್ತಾರೆ. ಇವುಗಳನ್ನು ಪ್ರಕಟಿಸಲು ಬಹುತೇಕ ಮಾಧ್ಯಮಗಳು ಹಿಂಜರಿದ ಕಾರಣವಾಗಿ ತಾವೇ ಸ್ವತಃ ಈ ವಿವರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದಾಗಿ ಮುನ್ನುಡಿಯಲ್ಲಿ ಹೇಳಿಕೊಳ್ಳುತ್ತಾರೆ. ಇಂತಹ ಸ್ಫೋಟಕವೆನಿಸುವ ವಿವರಗಳನ್ನುಳ್ಳ ವಿವರವನ್ನು ಸದಾ ಸ್ಫೋಟ ಸುದ್ದಿಯನ್ನೇ ಪ್ರಕಟಿಸುವ ಮಾಧ್ಯಮಗಳು ಪ್ರಕಟಿಸದೆ ಹಿಂದೆ ಉಳಿದುದರ ಹಿಂದಿರುವ ಕಾರಣಗಳು ಸಹ ಇಂದು ನಾವು ಚರ್ಚಿಸಬೇಕಾದ ವಿಷಯವೇ ಆಗಿದೆ. ಅದರ ಜೊತೆಗೆ ಇಂತಹ ಪುಸ್ತಕದಲ್ಲಿನ ಮಾಹಿತಿಯಿಂದ ಮುಂದೆ ನಮ್ಮ ಸಮಾಜ ಕಟ್ಟುವಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನಗಳೇನು ಎಂಬುದನ್ನು ಸಹ ಗಮನಿಸಬೇಕಿದೆ. ಆ ಹಿನ್ನೆಲೆಯಲ್ಲಿ ಈ ಪುಸ್ತಕ ಕುರಿತ ನನ್ನ ಟಿಪ್ಪಣಿಗಳು ಇಲ್ಲಿವೆ.
ರಾಣಾ ಆಯೂಬ್ ಅವರು ‘ತೆಹಲ್ಕಾ’ ಎಂಬ ಪ್ರಖ್ಯಾತ ಪತ್ರಿಕೆಯ ವರದಿಗಾರ್ತಿ ಆಗಿದ್ದವರು. ನಕ್ಸಲೈಟ್ ಹಾವಳಿಯಿದ್ದ ಪ್ರದೇಶಗಳಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿ ಹಿಂದಿರುಗಿದ ನಂತರ ತಮ್ಮ ಸ್ನೇಹಿತರೊಬ್ಬರು ಎನ್‍ಕೌಂಟರ್ ಹೆಸರಲ್ಲಿ ತೀರಿಕೊಂಡದ್ದು ಅವರನ್ನು ಖಿನ್ನರಾಗಿಸಿದ್ದಾಗಲೇ ಅವರಿಗೆ ಗುಜರಾತ್‍ನ ನರಮೇಧದ ಹಿನ್ನೆಲೆಯಲ್ಲಿ ಕೆಲವರನ್ನು ಸಂದರ್ಶಿಸುವ ಆಲೋಚನೆ ಬರುತ್ತದೆ. ಅದಕ್ಕಾಗಿ ತಮ್ಮ ಪತ್ರಿಕೆಯ ಸಂಪಾದಕ ಬಳಗದ ಜೊತೆಗೆ ಮಾತಾಡಿ ಒಪ್ಪಿಗೆ ಪಡೆದು ಗುಜರಾತ್‍ಗೆ ಹೋಗುತ್ತಾರೆ. ಆದರೆ ಒಬ್ಬ ಮುಸಲ್ಮಾನ ವ್ಯಕ್ತಿಗೆ ಅಲ್ಲಿದ್ದ ವಾತಾವರಣವೂ ಯಾವುದೇ ಮಾಹಿತಿ ಕೊಡುವುದಿರಲಿ, ಸತ್ಯವನ್ನು ಬಿಚ್ಚಿಡದು ಎಂಬ ಹಿನ್ನೆಲೆಯಲ್ಲಿ ತಮ್ಮ ಹೆಸರನ್ನು ಮೈಥಿಲಿ ತ್ಯಾಗಿ ಎಂದು ಕರೆದುಕೊಂಡು, ತಾನು ಅಮೇರಿಕಾದಿಂದ ಬಂದಿರುವ ಸಿನಿಮಾ ತಯಾರಕಿ ಎಂದು ಹೇಳಿಕೊಂಡು ಗುಜರಾತ್ ರಾಜ್ಯದ ಅನೇಕ ಮುಖ್ಯರನ್ನು ಭೇಟಿಯಾಗುತ್ತಾರೆ. ಈ ಕೆಲಸದಲ್ಲಿ ಈಕೆಯ ಜೊತೆಗೆ ಮೈಕ್ ಎಂಬ ಹೆಸರಿನ ಫ್ರೆಂಚ್ ಮಾಧ್ಯಮ ವಿದ್ಯಾರ್ಥಿ ಸಹ ಜೊತೆಯಾಗುತ್ತಾನೆ. ‘ಅಂಡರ್ ಕವರ್’ ಆಗಿದ್ದುಕೊಂಡು ಅನೇಕರನ್ನು ಭೇಟಿ ಮಾಡುತ್ತಾರೆ. ಅವರು ಭೇಟಿ ಮಾಡಿದ ಅನೇಕ ಪೊಲೀಸ್ ಆಫೀಸರ್‍ಗಳು ಮತ್ತು ರಾಜಕೀಯ ನಾಯಕರ ಜೊತೆಗೆ ಆಡಿದ ಮಾತುಗಳನ್ನು ತಮ್ಮ ಗಡಿಯಾರದಲ್ಲಿ, ಡೈರಿಯಲ್ಲಿ ಬಚ್ಚಿರಿಸಿಕೊಂಡಿದ್ದ ಕ್ಯಾಮೆರಾದ ಮೂಲಕ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಆ ಮಾತುಗಳ ಅಕ್ಷರರೂಪ ಮತ್ತು ಆಯಾ ಸಂದರ್ಶನ ಪಡೆಯಲು ರಾಣಾ ಆಯೂಬ್ ಹಿಡಿದ ಹಾದಿ “ಗುಜರಾತ್ ಫೈಲ್ಸ್ – ಅನಾಟಮಿ ಆಫ್ ಎ ಕವರ್ ಅಪ್” ಪುಸ್ತಕದಲ್ಲಿ ಇದೆ.
ಪುಸ್ತಕದಲ್ಲಿನ ವಿವರಗಳು 2002ರ ಗೋಧ್ರಾ ಪ್ರಕರಣದ ನಂತರ ಗುಜರಾತ್ ರಾಜ್ಯದಲ್ಲಿ ಆದ ಘಟನೆಗಳನ್ನು ಮತ್ತು ಮುಸ್ಲಿಮ್ ವಿರೋಧಿ ನಿಲುವಿನ ಸಹಾಯದಿಂದಲೇ ನರೇಂದ್ರಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದುದನ್ನು ದಾಖಲಿಸುತ್ತಾ, 2002ರಿಂದ 2006ರವರೆಗೆ ನಿರಂತರವಾಗಿ ಆದ ಅನೇಕ ಎನ್‍ಕೌಂಟರ್ ಹೆಸರಿನಲ್ಲಾದ ಸಾವುಗಳನ್ನು ಕುರಿತು ಮಾತಾಡುತ್ತಾ, ಈ ಸಂದರ್ಭದಲ್ಲಿ ಆಡಳಿತರೂಢ ಮಂತ್ರಿಗಳು, ಆಡಳಿತಯಂತ್ರ ಹಾಗೂ ಪೊಲೀಸರು ಕೈಜೋಡಿಸಿದ್ದನ್ನು, ಕೆಲವೊಮ್ಮೆ ನಿಷ್ಕ್ರಿಯರಾಗಿದ್ದನ್ನು ಮತ್ತು ಕೋಮು ಧೃವೀಕರಣಗೊಂಡ ಬಗೆಯನ್ನು ರಾಜನ್ ಪ್ರಿಯದರ್ಶಿ (2002 ರಿಂದ 2007ರ ವರೆಗೆ ಗುಜಾರತಿನ ಎಟಿಎಸ್‍ನ ನಿರ್ದೇಶಕರು), ಜಿ.ಎಲ್.ಸಿಂಘಾಲ್ (2002ರಲ್ಲಿ ಗುಜರಾತ್ ಎಟಿಎಸ್ ಮುಖ್ಯಸ್ಥರು), ಅಶೋಕ್ ನಾರಾಯಣ್ (2002ರಲ್ಲಿ ಗುಜರಾತಿನ ಗೃಹಕಾರ್ಯದರ್ಶಿ ಆಗಿದ್ದವರು), ಜಿ.ಸಿ.ರಾಯ್ಗರ್ (2002ರಲ್ಲಿ ಗುಜಾರತಿನ ಗುಪ್ತಚರದಳದ ಮುಖ್ಯಸ್ಥರು), ಪಿ.ಸಿ.ಪಾಂಡೆ (2002ರಲ್ಲಿ ಅಹಮದಬಾದ್‍ನ ಕಮಿಷನರ್ ಆಫ್ ಪೊಲೀಸ್), ಚಕ್ರವರ್ತಿ (2002ರಲ್ಲಿ ಗುಜರಾತಿನ ಪೊಲೀಸ್ ಮಹಾನಿರ್ದೇಶಕರು), ಗೀತಾ ಜೋಹ್ರಿ (2006ರಲ್ಲಿ ಸೊಹ್ರಾಬುದ್ದೀನ್ ಮತ್ತು ಕೌಸರ್ ಬಾಯ್ ಎನ್‍ಕೌಂಟರ್ ಕುರಿತ ತನಿಖಾಧಿಕಾರಿ) ತರಹದ ಪೊಲೀಸ್ ಅಧಿಕಾರಿಗಳು ಹಾಗೂ ಮಾಯಾ ಕೊಂಡ್ನಾನಿ (ಗುಜಾರತ್ ಸರ್ಕಾರದ ಮಕ್ಕಳ ಕಲ್ಯಾಣ ಮತ್ತು ಆರೋಗ್ಯ ಸಚಿವರಾಗಿದ್ದವರು) ತರಹದ ರಾಜಕೀಯ ನಾಯಕರ ಮಾತಿನಲ್ಲಿಯೇ ದಾಖಲಿಸುತ್ತದೆ. ಪುಸ್ತಕದಲ್ಲಿರುವ ಹನ್ನೊಂದು ಅಧ್ಯಾಯಗಳಲ್ಲಿ ಈ ಸಂದರ್ಶನಗಳು ಮತ್ತು ಅವುಗಳು ನಡೆದ ಬಗೆಯನ್ನು ವಿವರಿಸುವ ಒಂಬತ್ತು ಅಧ್ಯಾಯಗಳಿವೆ.
ಈ ಕೆಲಸಗಳನ್ನು ರಾಣಾ ಆಯೂಬ್ ಅತ್ಯಂತ ಅಪಾಯಕರ ಎನಿಸುವ ಸ್ಥಿತಿಯಲ್ಲಿಯೇ ನಡೆಸಿದ್ದಾರೆ. ಅವರ ಪ್ರತಿ ಹೆಜ್ಜೆಯಲ್ಲೂ ಆಕೆ ಸಿಕ್ಕಿಬೀಳಬಹುದಾದ ಸಂದರ್ಭಗಳು ಇದ್ದರೂ ಧೈರ್ಯವಾಗಿ ಮುನ್ನಡೆದಿದ್ದಾರೆ. ಪತ್ರಕರ್ತರ ವೃತ್ತಿ ಎಷ್ಟು ಅಪಾಯಕರವಾದ್ದು ಎಂಬುದನ್ನು ಸೂಚಿಸುತ್ತಲೇ ಆ ವೃತ್ತಿಯಲ್ಲಿ ಯಾವುದೇ ಒಂದು ಬಣಕ್ಕೆ ಒಲಿದು ಕೆಲಸ ಮಾಡಿದರೆ ಸಮಾಜ ಎದುರಿಸುವ ಸಂಕಟವೇನು ಎಂಬುದನ್ನು ಸಹ ರಾಣಾ ಆಯೂಬ್ ದಾಖಲಿಸಿದ್ದಾರೆ.
ರಾಜನ್ ಪ್ರಿಯದರ್ಶಿ ಮತ್ತು ಸಿಂಘಾಲ್ ತರಹದವರು ಮಾತಾಡುವಾಗ ಹೇಗೆ ದಲಿತ ಹಿನ್ನೆಲೆಯುಳ್ಳ ಅಧಿಕಾರಿಗಳನ್ನ ಮಾತ್ರ ಎನ್‍ಕೌಂಟರ್‍ಗೆ ಬಳಸಲಾಯಿತು ಎಂಬುದನ್ನು ಹೇಳುತ್ತಾರೆ. ಆ ಮೂಲಕ ನಮ್ಮ ಆಡಳಿತ ಯಂತ್ರದ ಪ್ರಮುಖ ಸ್ಥಾನಗಳಲ್ಲಿರುವ ಮೇಲ್ವರ್ಗದ ಜನ ಹಿಂದುಳಿದ ವರ್ಗದವರನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತಾರೆ. ರಾಜನ್ ಪ್ರಿಯದರ್ಶಿಯವರು ಮಾತಾಡುತ್ತಾ, “ಒಬ್ಬ ದಲಿತ ಅಧಿಕಾರಿಗಳ ಕೈಯಲ್ಲಿ ಇಂತಹ ಕೊಲೆಗಳನ್ನು ಮಾಡಿಸುವುದು ಸುಲಭ. ಏಕೆಂದರೆ ಆತನಿಗೆ ಸ್ವಯಂ ಮರ್ಯಾದೆ ಇಲ್ಲ, ಯಾವುದೇ ಆದರ್ಶವಿಲ್ಲ. ಹೀಗಾಗಿ ಮೇಲ್ವರ್ಗದಿಂದ ಬಂದಂತಹ ಅಧಿಕಾರಿಗಳು ಸದಾ ಎಲ್ಲರಿಗೂ ಒಳ್ಳೆಯವರಾಗಿ ಉಳಿಯುತ್ತಾರೆ. ದಲಿತರು ಮಾತ್ರ ಮೇಲಿನವರನ್ನು ಮೆಚ್ಚಿಸಲು ಇಂತಹ ಕೃತ್ಯಗಳನ್ನು ಮಾಡಿ ಮಸಿ ಬಳಿದುಕೊಳ್ಳುತ್ತಾರೆ” ಎಂದೆನ್ನುತ್ತಾರೆ. ಇದೆಲ್ಲದರ ನಡುವೆ ರಾಜಕಾರಣಿಗಳು ತಮ್ಮ ಕೆಲಸ ಮುಗಿದ ನಂತರ ಅದೇ ಅಧಿಕಾರಿಗಳನ್ನು ಹೇಗೆ ಮೂಲೆಗೆ ತಳ್ಳುತ್ತಾರೆ ಎಂಬುದನ್ನು ಸಹ ಅನೇಕ ಅಧಿಕಾರಿಗಳು ಮಾತಾಡುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ರಾಜಕಾರಣಿಗಳ ನಿರ್ಧಾರಗಳನ್ನು ವಿರೋಧಿಸಿದ ಅಥವಾ ರಾಜಕಾರಣಿಗಳ ವಿರುದ್ಧವೇ ಸಾಕ್ಷಿಗಳನ್ನು ಒದಗಿಸಿದ ಅಧಿಕಾರಿಗಳು ಹೇಗೆ ಎಲ್ಲಾ ಬಡ್ತಿಗಳನ್ನೂ ಕಳಕೊಂಡು ಮೂಲೆಗುಂಪಾಗುತ್ತಾರೆ ಅಥವಾ ಯಾವುದೋ ಮಾಡದ ತಪ್ಪನ್ನು ಹೊರಿಸಿ ಅಂತಹವರನ್ನು ಹೇಗೆ ಕೆಲಸದಿಂದ ತೆಗೆಯಲಾಗುತ್ತದೆ ಎಂಬುದನ್ನು ಸ್ವತಃ ಅಧಿಕಾರಿಗಳು ತಮ್ಮ ಮಾತಲ್ಲಿ ದಾಖಲಿಸುತ್ತಾರೆ.
ಇಲ್ಲಿರುವ ಪ್ರತಿ ಸಂದರ್ಶನದಲ್ಲಿನ ಮಾತುಗಳು ಇಂದು ಅಧಿಕಾರದಲ್ಲಿ ಇರುವ ಅನೇಕ ರಾಜಕೀಯ ನಾಯಕರನ್ನು ಕುರಿತು ನೇರ ಆರೋಪಗಳನ್ನು ಮಾಡುತ್ತವೆ. ಅವು ಸಾಬೀತಾಗುವುದಕ್ಕೆ ರಾಣಾ ಆಯೂಬ್ ಅವರು ರೆಕಾರ್ಡ್ ಮಾಡಿರುವ ಪ್ರತಿ ಮಾತುಗಳ ವಿಡಿಯೋಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕೃತ ಎಂದು ದೃಢಪಡಿಸುವ ಕೆಲಸ ಆಗಬೇಕಾಗುತ್ತದೆ. ಅದು ಸಧ್ಯದ ಪರಿಸ್ಥಿತಿಯಲ್ಲಿ ಆಗುವುದು ಅನುಮಾನ. ಹೀಗಾಗಿ ಈ ಪುಸ್ತಕದಲ್ಲಿರುವ ಬಹುತೇಕ ವಿವರಗಳನ್ನು ಓದಿದ ಜನತೆ ಅಧಿಕಾರಕ್ಕೆ ಬರುವುದಕ್ಕೆ ಮತ್ತು ತಮ್ಮ ವಿರುದ್ಧ ಇರುವವರನ್ನು ಹಣಿಯುವುದಕ್ಕೆ ರಾಜಕಾರಣಿಗಳು ಯಾವೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂದು ನಮ್ಮ ಜನಪ್ರಿಯ ಸಿನಿಮಾಗಳಲ್ಲಿ ತೋರಿಸುವ ವಿವರವನ್ನುಳ್ಳ ಪುಸ್ತಕವಾಗಿಯೇ ಓದುತ್ತಾರೇನೋ ಎನ್ನುವ ಅನುಮಾನ ನನ್ನದು. ಹಾಗೆಂದು ಇದು ರೋಚಕ ಓದಿಗೆ ಸಿಗುವ ಪುಸ್ತಕವಲ್ಲ. ಇದು ಓದುಗನ ಮನಸ್ಸನ್ನು ಪ್ರತಿ ಸಂದರ್ಶನದ ಮೂಲಕ ಸತ್ಯಗಳ ಎದುರಿಗೆ ನಿಲ್ಲಿಸುವ ಪುಸ್ತಕ. ಇಂತಹದೊಂದು ಪುಸ್ತಕವು ಪ್ರಕಟವಾಗಿದೆ ಎಂಬುದೇ ಕಳೆದೆರಡು ವರ್ಷಗಳಲ್ಲಿ ನಾವು ಕಾಣುತ್ತಿರುವ ವ್ಯವಸ್ಥೆಯಲ್ಲಿ ಅಸಾಧ್ಯವಾದುದೊಂದು ಸಾಧ್ಯವಾಗಿರುವುದಕ್ಕೆ ಸಾಕ್ಷಿ. ಇಂತಹ ಸಾಹಸಕ್ಕೆ ಕೈ ಹಾಕಿ ಯಾರೂ ಪ್ರಕಟಣೆಗೆ ಮುಂದಾಗದ ವಿವರವನ್ನು ರಾಣಾ ಆಯೂಬ್ ಸ್ವತಃ ಪ್ರಕಟಿಸಿರುವುದಕ್ಕೆ ಆಕೆಯನ್ನು ಮೆಚ್ಚಲೇ ಬೇಕು.
ಈ ಪುಸ್ತಕದಲ್ಲಿನ ವಿವರಗಳು ‘ಸರಿಯಾದ, ರಾಜಕೀಯ ಲೇಪವಿಲ್ಲದ, ಅಧಿಕಾರದಲ್ಲಿರುವವರ ಹಸ್ತಕ್ಷೇಪವಿಲ್ಲದ ತನಿಖೆ’ಗೆ ಒಳಪಡುವಂತಾಗಬೇಕು. ಆಗ ಮಾತ್ರ ಇಂತಹ ಪುಸ್ತಕಗಳು ಉಪಯುಕ್ತವಾಗುತ್ತವೆ. ಆದರೆ ಅಂತಹದೊಂದು ನಿಷ್ಪಕ್ಷಪಾತ ತನಿಖೆ ಆಗುತ್ತದೆ ಎಂಬ ನಂಬಿಕೆಯು ಮರೀಚಿಕೆ ಎನಿಸುವ ಕಾಲದಲ್ಲಿ ನಾವಿರುವುದಂತೂ ಸತ್ಯ.
– ಬಿ.ಸುರೇಶ
10 ಜುಲೈ 2016
ಬೆಂಗಳೂರು

0 Responses to ““ಒಂದು ಸಾಹಸಪೂರ್ಣ ಪ್ರಯತ್ನ””



  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s




ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 38,193 ಜನರು

%d bloggers like this: