ಮೂರೂವರೆ ದಶಕದ ಹಾದಿಯಲ್ಲಿ…

[ಟಿವಿ ಠೀವಿ ಪತ್ರಿಕೆಗಾಗಿ ಬಿ.ಸುರೇಶ ಅವರ “ಸಂಘಸುಖ” (ನವೆಂಬರ್ 2016)]

ಒಂದೊಮ್ಮೆ (ಎಪ್ಪತ್ತರ ದಶಕದಿಂದ ಎಂಬತ್ತರ ದಶಕದ ವರೆಗೆ) ದೃಶ್ಯಮಾಧ್ಯಮಕ್ಕೆ ಹೊಸಬರ ಪ್ರವೇಶವೇ ಅಸಾಧ್ಯ ಎಂಬಂತ ಪರಿಸ್ಥಿತಿ ಇತ್ತು. ಟಿವಿ ಎಂಬುದರ ಆಗಮನ ನಮ್ಮ ಮನೆಗಳ ಹಜಾರದಲ್ಲಿ ಒಂದು ಪೆಟ್ಟಿಗೆಯನ್ನು ತಂದುದಷ್ಟೇ ಅಲ್ಲ, ಅನೇಕ ಕನಸಿಗರಿಗೆ ತಮ್ಮ ಕತೆಗಳನ್ನು ಬಿಚ್ಚಿಡುವ ವೇದಿಕೆಯೂ ಆಯಿತು. ಸುಮಾರು 1980ರ ದಶಕದ ಆರಂಭಿಕ ಭಾಗದಲ್ಲಿ ಆರಂಭವಾದ ಈ ಪಯಣ ಇಂದು ಅನೇಕ ಖಾಸಗಿ ವಾಹಿನಿಗಳ ಜೊತೆ ಸೇರಿ ಬೃಹತ್ ಉದ್ಯಮವೊಂದನ್ನು ರೂಪಿಸಿದೆ. ಈ ಹಾದಿಯಲ್ಲಿ ಅನೇಕರು ಅವಕಾಶ ಪಡೆದು ತಮ್ಮ ಪ್ರತಿಭೆಯಿಂದ ಬೆಳೆದಿದ್ದಾರೆ. ಹಲವರು ಸಿದ್ಧ ಸೂತ್ರಗಳಿಂದಾಚೆಗೆ ಹೊಸ ಮಾದರಿಗಳನ್ನು ಸೃಷ್ಟಿಸಿದ್ದಾರೆ. ಐವತ್ತಕ್ಕೂ ಹೆಚ್ಚು ದೈನಿಕ ಧಾರಾವಾಹಿಗಳು, ಹತ್ತಾರು ಬಗೆಯ ರಿಯಾಲಿಟಿ ಷೋಗಳು, ಹಲವು ಬಗೆಯ ಟಾಕ್ ಷೋಗಳು ಇಂದು ಪ್ರಸಾರವಾಗುತ್ತಿವೆ. ಇದನ್ನೆಲ್ಲಾ ತಯಾರಿಸಲು ಹತ್ತು ಸಾವಿರಕ್ಕೂ ಹೆಚ್ಚು ಜನ ಈ ಉದ್ಯಮದಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಇದು ನಿಜಕ್ಕೂ ಜಗತ್ತಿನ ಬೃಹತ್ ಉದ್ಯಮಗಳಲ್ಲಿ ಒಂದು ಎಂಬುದರಲ್ಲಿ ಅನುಮಾನವಿಲ್ಲ.
ಈ ಬೆಳವಣಿಗೆಯ ಹಾದಿಯನ್ನು ಗಮನಿಸಿ, ಇದೇ ಉದ್ಯಮದಲ್ಲಿ ಈಗ ದುಡಿಯುತ್ತಿರುವವರ ಜೊತೆಗೆ ಸಂವಾದ ಮಾಡಿದರೆ ಕಾಣುವುದು ಮತ್ತು ಕೇಳುವುದು ಅದೇ ಹಳೆಯ ಗೊಣಗಾಟ. “ನನಗೆ ಬೇಕಾದ ಕತೆ ಮಾಡಲಾಗುತ್ತಿಲ್ಲ”, “ಯಾರದೋ ಒತ್ತಡಕ್ಕೆ ಈ ಕೆಲಸ ಮಾಡುತ್ತಾ ಇದ್ದೇನೆ”, “ಮನಸ್ಸಿಗೆ ಖುಷಿ ಇಲ್ಲ, ಆದರೆ ಹೊಟ್ಟೆಪಾಡು ನಡೆಯುತ್ತಿದೆ” “ಎಲ್ಲಿ ಸಾರ್, ಹಳಬರಿಗೆ ಅವಕಾಶವೇ ಇಲ್ಲ”, “ನಮ್ಮನ್ನ ಯಾರೂ ಕೇಳ್ತಾರೀಗಾ?” – ಈ ಬಗೆಯ ಮಾತುಗಳೇ ಕೇಳುತ್ತವೆ. ಇಷ್ಟೆಲ್ಲಾ ಅವಕಾಶಗಳು ದೊರೆತ ಮೇಲೂ ಈ ಬಗೆಯ ಗೊಣಗಾಟ ಉಳಿದಿರುವುದು ಸಂಕಟದ ವಿಷಯವೇ. ಕಳೆದ ಕೆಲವು ತಿಂಗಳುಗಳಲ್ಲಿ ನಾನು ಭೇಟಿ ಮಾಡಿದ ಬಹುತೇಕರು ಇಂತಹುದೇ ಮಾತುಗಳನ್ನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಮೂರೂವರೆ ದಶಕದ ಹಾದಿಯನ್ನು ಒಮ್ಮೆ ಪಕ್ಷಿನೋಟದ ಹಾಗೆ ಗಮನಿಸಬೇಕೆನಿಸಿ ಈ ಮಾತುಗಳನ್ನು ಬರೆಯುತ್ತಿದ್ದೇನೆ.
ಸರ್ಕಾರಿ ಸಂಸ್ಥೆಯಾದ ದೂರದರ್ಶನ ವಾಹಿನಿಯಲ್ಲಿ ಎಂಬತ್ತರ ದಶಕದಲ್ಲಿ ಕೆಲಸ ಆರಂಭಿಸಿದಾಗ ಇದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆ ಇತ್ತು. ಕಾರ್ಯಕ್ರಮ ಮಾಡಬೇಕು ಎಂಬ ಬಯಕೆ ಇರುವವರೂ ಅರ್ಜಿ ಹಾಕಿಕೊಳ್ಳಬೇಕಿತ್ತು. ಆ ಕತೆಯ ಮತ್ತು ಆ ಕತೆಯ ನಿರೂಪಣೆಯ ವಿಧಾನವನ್ನು ಸಂಪೂರ್ಣ ಅರಿತಮೇಲೆ ಅರ್ಜಿಗಳನ್ನು ಸ್ವೀಕರಿಸಿ, ಅವಕಾಶ ನೀಡಲಾಗುತ್ತಿತ್ತು. ಹಾಗೆ ಸಿಕ್ಕ ಕಾರ್ಯಕ್ರಮದಲ್ಲಿನ ಜಾಹೀರಾತು ಸಮಯವನ್ನು ಮಾರುವ ಮೂಲಕ ತಯಾರಕರು ತಮ್ಮ ಹಣವನ್ನು ಪಡೆಯಬೇಕಿತ್ತು. ಈ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿಯೂ ಮತ್ತು ಸರಳವಾಗಿಯೂ ಇತ್ತು. ಇದನ್ನು ಕಂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಹಾಕಲಾರಂಭಿಸಿದರು. ವ್ಯವಸ್ಥೆಯ ಮೇಲೆ ಒತ್ತಡ ಬೀಳತೊಡಗಿತು. ಆಗ ನಾವು ಕರೆದಾಗ ಅರ್ಜಿ ಕೊಡಿ, ಅರ್ಜಿ ಶುಲ್ಕ ಇಂತಿಷ್ಟು ಎಂಬ ನಿಯಮ ಬಂದಿತ್ತು. ಅದಕ್ಕಾಗಿ ಸೂಚಿಸಿದ ದಿನಾಂಕದಂದು ಜನ ಸರದಿಯಲ್ಲಿ ಅರ್ಜಿ ಸಲ್ಲಿಸಲಾರಂಭಿಸಿದರು. ವಾರದಲ್ಲಿ ಐದು ಅರ್ಧಗಂಟೆಯ ಹದಿಮೂರು ವಾರಗಳ ಕಾರ್ಯಕ್ರಮ ಎಂಬಂತೆ ಇದ್ದುದಕ್ಕೆ ಒಂದೇ ಸಲಕ್ಕೆ ನೂರಾರು ಅರ್ಜಿಗಳು ಬರಲಾರಂಭಿಸಿದವು. ದಿನಕ್ಕೆ ಒಂದರ ಬದಲು ಐದಾರು ಅರ್ಧ ಗಂಟೆಯ ಕಾರ್ಯಕ್ರಮ ಎಂದಾಯಿತು. ಆಗ ಸಾವಿರಾರು ಅರ್ಜಿಗಳು ಬಂದವು. ಹೀಗೆ ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯು ಕನಸು ಕಟ್ಟುವವರ ದಂಡನ್ನು ಸೃಷ್ಟಿಸಿತು. ಯಾರೋ ಪಡೆದುಕೊಂಡ ಅರ್ಜಿಯನ್ನು ಮತ್ಯಾರಿಗೋ ಮಾರಿಕೊಳ್ಳುವುದು, ಮೂಲತಃ ನೀಡಲಾದ ಕತೆಯನ್ನೇ ಬದಲಿಸಿ ಹೊಸ ಕತೆ ಮಾಡುವುದು ಹೀಗೆ ವ್ಯವಹಾರದ ಸ್ವರೂಪವು ಬದಲಾಗುತ್ತಾ ಹೋಯಿತು. ದೈನಿಕ ಧಾರಾವಾಹಿಗಳ ಪರ್ವ ತೊಂಬತ್ತರ ದಶಕದ ಅಂತ್ಯದಲ್ಲಿ ಕನ್ನಡದಲ್ಲಿಯೂ ಆರಂಭವಾಯಿತು. ಮೊದಲಿಗೆ ಮಧ್ಯಾಹ್ನ ಎರಡು ದೈನಿಕ ಧಾರಾವಾಹಿ ಆರಂಭವಾಯಿತು. ದಿನಗಳೆದಂತೆ ಆ ಸಂಖ್ಯೆ ಬೆಳೆದು ದಿನವೊಂದಕ್ಕೆ ಐದು ಸಾಪ್ತಾಹಿಕ ಐದು ದೈನಿಕ ಎಂಬ ಹಂತಕ್ಕೆ ಬೆಂಗಳೂರು ದೂರದರ್ಶನ ಬೆಳೆಯಿತು. ರಂಗಭೂಮಿಯ ಅನೇಕರು ಮತ್ತು ಸಿನಿಮಾದಲ್ಲಿ ಹೆಚ್ಚು ಅವಕಾಶ ದೊರಕದ ಪ್ರಯೋಗಶೀಲರು ಟೆಲಿವಿಷನ್ ಎಂಬ ಹೊಸ ವೇದಿಕೆಯಲ್ಲಿ ತಮ್ಮ ಬದುಕು ಕಟ್ಟಿಕೊಳ್ಳತೊಡಗಿದರು. ತೊಂಬತ್ತರ ದಶಕದ ಆರಂಭ ಕಾಲಕ್ಕೆ ಟೆಲಿವಿಷನ್ ಎಂಬುದು ಹಿರಿತೆರೆಗೆ ಸಮನಾದ ಎತ್ತರದ ಉದ್ಯಮವಾಗುವಂತಾಗಿತ್ತು.
ಇದೇ ಹೊತ್ತಿಗೆ ಖಾಸಗಿ ವಾಹಿನಿಗಳು ಸಹ ಧಾರಾವಾಹಿಗಳನ್ನು ಪ್ರಧಾನ ಆದ್ಯತೆಯನ್ನಾಗಿಸಿಕೊಂಡವು. ಕೆಲವು ವಾಹಿನಿಗಳು ಸಿನಿಮಾ ಜಗತ್ತಿನಿಂದ ಬಂದವರಿಗೆ ಮಾತ್ರ ಆದ್ಯತೆ ಎಂಬಂತೆ ತಮ್ಮ ಕಾರ್ಯಕ್ರಮ ರೂಪಿಸಿಕೊಂಡರೆ ಇನ್ನು ಕೆಲವು ವಾಹಿನಿಗಳು ದೂರದರ್ಶನದಲ್ಲಿ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದವರನ್ನು ಬಳಸಲು ಆರಂಭಿಸಿದವು. ಖಾಸಗಿ ವಾಹಿನಿಗಳ ಸಂಖ್ಯೆ ಹೆಚ್ಚಾದಂತೆ ಧಾರಾವಾಹಿಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಈಗಂತೂ ದಿನವೊಂದಕ್ಕೆ ಐವತ್ತಕ್ಕಿಂತ ಹೆಚ್ಚು ದೈನಿಕ ಧಾರಾವಾಹಿಗಳು ಹತ್ತು – ಹದಿನೈದು ಸಾಪ್ತಾಹಿಕಗಳು, ಹಲವು ಟಾಕ್ ಷೋಗಳು, ಕೆಲವು ರಿಯಾಲಿಟಿ ಷೋಗಳು ಎಂದು ದೂರದರ್ಶನ ಎಂಬ ಸರ್ಕಾರೀ ಸಂಸ್ಥೆಯನ್ನು ಮೀರುವಂತೆ ಖಾಸಗಿ ವಾಹಿನಿಗಳು ಪೈಪೋಟಿಗೆ ನಿಂತಿವೆ.
ಹೀಗೆ ಒಂದೊಮ್ಮೆ ಅವಕಾಶಗಳನ್ನು ಹುಡುಕುತ್ತಾ ಇದ್ದವರಿಗೆ ಬಾಗಿಲು ತೆರೆದ ದೂರದರ್ಶನವು ಇಂದು ಹೊಸಬರ ಆಗಮನಕ್ಕೆ ದಿಡ್ಡಿ ಬಾಗಿಲನ್ನೇ ತೆರೆದಿಟ್ಟಿದೆ. ನಿತ್ಯ ಹೊಸ ಕಲಾವಿದರು, ಹೊಸ ಬರಹಗಾರರು, ಹೊಸ ತಂತ್ರಜ್ಞರು ಈ ಪ್ರವಾಹದೊಳಗೆ ಸೇರುತ್ತಿದ್ದಾರೆ. ಇದು ಕಿರುತೆರೆಯ ಗುಣಾತ್ಮಕ ಅಂಶ. ಇಲ್ಲಿ ಋಣಾತ್ಮಕವಾದ ವಿಷಯಗಳೂ ಅನೇಕ ಇವೆ. ಅವುಗಳಲ್ಲಿ ಕೆಲವನ್ನು ಗಮನಿಸೋಣ.
ಒಂದೊಮ್ಮೆ ಅತ್ಯಂತ ಪ್ರಜಾಸತ್ತಾತ್ಮಕವಾಗಿಯೂ, ಎಲ್ಲ ಕನಸಿಗರಿಗೂ ಅವಕಾಶ ಎಂಬಂತಿದ್ದ ದೂರದರ್ಶನವು ಕಾಲಾಂತರದಲ್ಲಿ ತನ್ನ ಪ್ರಾಮುಖ್ಯತೆಯನ್ನು ಹಾಗೂ ಮಾರುಕಟ್ಟೆ ಶಕ್ತಿಯನ್ನು ತನ್ನೊಳಗಿನ ನಿಧಾನ ಹಾಗೂ ಕೆಲವು ಭ್ರಷ್ಟ ಅಧಿಕಾರಿಗಳಿಂದ ಕಳೆದುಕೊಂಡಿತು. ಸಮಾನಂತರವಾಗಿ ಬೆಳೆಯತೊಡಗಿದ ಖಾಸಗಿ ವಾಹಿನಿಗಳು ನಮ್ಮ ಸರ್ಕಾರಗಳ ಖಾಸಗೀಕರಣ ಹಾಗೂ ಉದಾರೀಕರಣ ಓಟದ ಸಂಪೂರ್ಣ ಲಾಭ ಪಡೆದು ಟೆಲಿವಿಷನ್ ಉದ್ಯಮದ ಆದಾಯದಲ್ಲಿ ಶೇಕಡ 60ಕ್ಕಿಂತ ಹೆಚ್ಚು ಪಡೆಯಲಾರಂಭಿಸಿದವು. ಇದೇ ಸಮಯದಲ್ಲಿ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾದಂತೆ ಜಾಹೀರಾತುದಾರರು ತಮ್ಮ ಹಣ ಹೂಡುವುದಕ್ಕೆ ಸರಿಯಾದ ಕಾರ್ಯಕ್ರಮವನ್ನು ಹುಡುಕಲು ಸಂಖ್ಯೆಗಳನ್ನಾಧರಿಸಿದ ಮೌಲ್ಯಮಾಪನ ಆರಂಭಿಸಿದರು. ಈ ಕಾಲಘಟ್ಟದಲ್ಲಿ ದೂರದರ್ಶನವಿನ್ನೂ ಕಾರ್ಯಕ್ರಮದ ಹೂರಣವನ್ನಾಧರಿಸಿಯೇ ಒಪ್ಪಿಗೆ ನೀಡುತ್ತಿತ್ತು. ಖಾಸಗಿ ವಾಹಿನಿಗಳು ಹೂರಣಕ್ಕಿಂತ ಸಂಖ್ಯೆ ಮುಖ್ಯ ಎಂಬ ಧೋರಣೆ ತಳೆದವು. ಇದರಿಂದಾಗಿ ನಮ್ಮ ಕಾರ್ಯಕ್ರಮ ತಯಾರಕರು ಸಹ ನಮ್ಮ ನೆಲದ ಕತೆಗಳಿಂದ ದೂರ ಸರಿದು “ಸಂಖ್ಯೆ” ಎಂಬ ಮಾಯೆಯ ಹಿಂದೆ ಓಡತೊಡಗಿದರು. ಖಾಸಗಿ ವಾಹಿನಿಗಳಲ್ಲಿ ಇದ್ದ ಅಧಿಕಾರಿಗಳು ಸಹ ಹೊಸ ಕತೆಗಳಿಗಿಂತ ಬೇರೆಡೆಯಲ್ಲಿ ಯಶಸ್ವಿಯಾದುದನ್ನು ಪುನರ್ ನಿರ್ಮಿಸುವುದು ಸುಲಭ ಎಂದು ಅತ್ತ ವಾಲತೊಡಗಿದರು. ಇದೆಲ್ಲದರ ಪರಿಣಾಮವಾಗಿ ಇಂದು ತಯಾರಾಗುತ್ತಿರುವ ಧಾರಾವಾಹಿಗಳಲ್ಲಿ ಶೇಕಡ 80ರಷ್ಟು ಪ್ರತಿರೂಪಗಳು. ಮೂಲ ಕೃತಿಗಳು ಬೆರಳೆಣಿಕೆಯವು. ಈ ಬದಲಾವಣೆಯ ಪರಿಣಾಮವಾಗಿ ಮೂಲಕೃತಿ ಬರೆಯಲು ಸಿದ್ಧರಾಗಬೇಕಿದ್ದ ಹೊಸ ತಲೆಮಾರಿನ ಬಹುತೇಕ ಬರಹಗಾರರು ಕಾರ್ಬನ್ ಪ್ರತಿ ತೆಗೆಯುವಂತಾದರು. ಕೆಲವರು ಹತಾಶೆಯಿಂದ ಬರಹ ಬಿಟ್ಟು ಇನ್ನಿತರ ವಿಭಾಗಗಳಿಗೆ ಜಾರಿದ್ದೂ ಉಂಟು. ಹೀಗಾಗಿ ಇಂದು ಮೂಲಕೃತಿ ಬರೆಯಬಲ್ಲ ಬರಹಗಾರರು ಬೆರಳೆಣಿಕೆಯಷ್ಟಾಗಿದ್ದಾರೆ ಎಂಬುದು ಮೊದಲ ಋಣಾತ್ಮಕ ವಿಷಯ.
ಒಂದೊಮ್ಮೆ ಮುಕ್ತವಾಗಿ ಒಬ್ಬರೊಡನೊಬ್ಬರು ತಮ್ಮ ಕತೆಗಳನ್ನು ಚರ್ಚಿಸುತ್ತಾ, ಒಬ್ಬರು ಮತ್ತೊಬ್ಬರಿಗೆ ಸಹಕಾರ ನೀಡುತ್ತಾ ಕೂಡು ಕುಟುಂಬದ ಹಾಗಿದ್ದ ಕಿರುತೆರೆಗೆ ದುಡಿವವರ ಗುಂಪು, ಖಾಸಗಿ ವಾಹಿನಿಗಳು ಉಚ್ಚ್ರಾಯಕ್ಕೆ ಬಂದಂತೆ ಪ್ರತಿ ವಾಹಿನಿಯಲ್ಲಿದ್ದ ಅಧಿಕಾರಿಗಳು ತಮ್ಮದೇ ಬಣಗಳನ್ನು ಸೃಷ್ಟಿಸತೊಡಗಿದರು. ಇದರಿಂದಾಗಿ ಏ ವಾಹಿನಿಗೆ ಕೆಲಸ ಮಾಡುವವರು ಬಿ ವಾಹಿನಿಗೆ ಹೋಗದ, ಬಿ ವಾಹಿನಿಯವರು ಸಿ ವಾಹಿನಿಗೆ ಹೋಗದ ವರ್ತುಲಗಳ ಸೃಷ್ಟಿಯಾಯಿತು. ಈ ವರ್ತುಲಗಳನ್ನು ಕೋಟೆ ಎನ್ನಬಹುದು. ಈ ಕೋಟೆಯೊಳಗೆ ಪ್ರವೇಶಗಳು ದೊರೆಯದು. ಒಮ್ಮೆ ಒಳಗೆ ಪ್ರವೇಶಿಸಿದರೆ ಹೊರಗೆ ಹೋಗುವಂತಿಲ್ಲ ಎಂಬ ಅಲಿಖಿತ ಕಾನೂನು ಸೃಷ್ಟಿಯಾಯಿತು. ಇದರಿಂದಾಗಿ ಇಂದು ಆಯಾ ಕೋಟೆಗಳಲ್ಲಿನ ಪುಟ್ಟ ಪುಟ್ಟ ನಾಯಕರು ತಮ್ಮ ದಂಡಿನ ಜೊತೆಗೆ ಮಾತ್ರ ಇರುವಂತಾಯಿತು. ಹೀಗೆ ಬದುಕು ವೈಯಕ್ತೀಕರಣಗೊಳ್ಳುವುದರೊಡನೆ ಸುಖ ದುಃಖ ಹಂಚಿಕೊಳ್ಳುವ ಗುಣವೂ ಕರಗತೊಡಗಿತು. ಯಾವುದೋ ದುರ್ಘಟನೆಗೆ ಮಾತ್ರ ಎಲ್ಲರೂ ಸೇರುವಂತಾಗಿ ಸಂತೋಷ ಹಂಚಿಕೊಳ್ಳಲು ಎಲ್ಲರೂ ಸೇರುವುದು ವಿರಳವಾಯಿತು. ಹೀಗೆ ದೂರತ್ವಗಳು ಸೃಷ್ಟಿಯಾದೊಡನೆ ಒಂದು ಬಣಕ್ಕೆ ಮತ್ತೊಂದು ಬಣ ಕುರಿತು ಅನುಮಾನ, ಹೊಟ್ಟೆಉರಿ, ದ್ವೇಷಗಳು ಹುಟ್ಟಿಕೊಂಡು ‘ಇದ್ದದ್ದು – ಇಲ್ಲದ್ದು’ ಎಂಬುದು ಗಾಳಿಸುದ್ದಿಗಳಾಗಿ ಹರಡಲಾರಂಭಿಸಿತು. ಇದರಿಂದಾಗಿ ನಮ್ಮ ನಡುವಿನ ಆರೋಗ್ಯಪೂರ್ಣವಾಗಿದ್ದ ಸಂಬಂಧಗಳು ಶಿಥಿಲಗೊಂಡವು. “ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?” ಎಂಬ ಕವಿವಾಣಿಯು ಕೇವಲ ಮಾತಿನ ನೆಲೆಯಲ್ಲಿ ಉಳಿಯಿತು.
ಈ ಗುಂಪುಗಳ ಸೃಷ್ಟಿಯ ಜೊತೆಗೆ ಆಯಾ ಗುಂಪಿನಲ್ಲಿ ಇರಬಹುದಾದ ಕಲಾವಿದರ ಬಣವೂ ಸೃಷ್ಟಿಯಾಯಿತು. ಒಂದು ಗುಂಪಿನ ಕಲಾವಿದರು ಮತ್ತೊಂದು ಗುಂಪಿನ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕರೂ ತಾವು ಗುರುತಿಸಿಕೊಂಡ ಗುಂಪಿನ ಬಗ್ಗೆಯೇ ಮಾತಾಡುತ್ತಾ ಮತ್ತೊಂದು ಗುಂಪಿನ ಆತ್ಮವಿಶ್ವಾಸ ಮತ್ತು ಒಗ್ಗಟ್ಟು ಕುಂದುವಂತೆ ಮಾಡತೊಡಗಿದರು. ಇದೇ ಸಮಯದಲ್ಲಿ ಖಾಸಗಿ ವಾಹಿನಿಗಳಲ್ಲಿ ಅಧಿಕಾರಿಗಳ ಅದಲು ಬದಲು ಆದಂತೆ ಆಯಾ ಗುಂಪುಗಳ ಆಯಾ ಅಧಿಕಾರಿಗಳ ಜೊತೆಗೆ ವಲಸೆ ಹೋಗತೊಡಗಿದ್ದನ್ನು ಸಹ ಕಂಡಿದ್ದೇವೆ. ಇದೇ ಸಮಯದಲ್ಲಿ ಆಯಾ ವಾಹಿನಿಗೆ ಬದ್ಧರಾಗಿದ್ದ ತಂಡಗಳು ಅಧಿಕಾರಿಗಳ ಬದಲಾವಣೆಯಿಂದ ಕೆಲಸ ಕಳಕೊಂಡಿದ್ದನ್ನು ಸಹ ಕಂಡಿದ್ದೇವೆ. ಇದೆಲ್ಲದರ ಆಚೆಗೆ ಸ್ಥಳೀಯತೆ ಮತ್ತು ಸ್ಥಳೀಯ ಕಲಾವಿದರು ಎಂಬ ಚಚ್ಚರವಿಲ್ಲದ ಅಧಿಕಾರಿಗಳಿದ್ದಲ್ಲಿ ನಮ್ಮ ಭಾಷೆಯ ಮೇಲೂ ಸಾಕಷ್ಟು ಹೊಡೆತ ಬೀಳತೊಡಗಿತು.
ಈ ಕಾಲಘಟ್ಟದಲ್ಲಿ, ಅಂದರೆ ಸುಮಾರು ಎರಡು ಮೂರು ವರ್ಷಗಳಿಂದೀಚೆಗೆ ದಿಢೀರನೆ ಪುನರ್ ನಿರ್ಮಾಣದ ಕತೆಗೆ ಹೊಸ ಮುಖಗಳನ್ನೇ ಕಲಾವಿದರನ್ನಾಗಿಸುವ ಆದ್ಯತೆ ಸಿಕ್ಕಿತು. ಹೀಗೆ ಹೊಸಬರು ಬರತೊಡಗಿದಂತೆ ಅದಾಗಲೇ ಮಾಗಿದ್ದ, ಒಂದಿಷ್ಟು ನಟನೆ ಕಲಿತಿದ್ದವರಿಗೆ ಅವಕಾಶಗಳ ಕೊರತೆ ಉಂಟಾಗತೊಡಗಿತು. ಹೀಗಾಗಿ ಅನೇಕ ಪ್ರಸಿದ್ಧ ಕಲಾವಿದರು ಸಹ “ಈಗ ನಮ್ಮನ್ನು ಯಾರೂ ಕರೆಯೋದೇ ಇಲ್ಲ” ಎಂದು ಗೊಣಗುವಂತಾಯಿತು. ಹೀಗೆ ಒಳಗೆ ಬಂದ ಹೊಸಬರಲ್ಲಿ ಬಹುತೇಕರು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತು ಕನ್ನಡ ಮಾತಾಡಲು ಪ್ರಯತ್ನಿಸುವ ಹೊಸ ತಲೆಮಾರಿನವರಾದ್ದರಿಂದ ಟಿವಿ ಕಾರ್ಯಕ್ರಮಗಳಲ್ಲಿ ಬಳಕೆಯಾಗುತ್ತಿದ್ದ ಭಾಷೆಯು ಸಹ ಕಲಗಚ್ಚಿನಂತಾಗತೊಡಗಿತು. ಈ ನೆಲದ ಸ್ಥಳೀಯತೆ ಹಾಗೂ ಸೊಗಡುಗಳು ನಾಪತ್ತೆಯಾಗತೊಡಗಿದವು. ಕೆಲವು ವಾಹಿನಿಗಳು ಉತ್ತರ ಕರ್ನಾಟಕದ ಸೊಗಡನ್ನುಳ್ಳ ಕಾರ್ಯಕ್ರಮಗಳನ್ನು ಇನ್ಯಾವುದೋ ನೆಲದಿಂದ ತಂದ ಕತೆಗೆ ತೊಡಿಸಿದ್ದು ಸಹ ಉಂಟು.
ಈ ನಡುವೆ ಈ ಉದ್ಯಮದ ಕಾರ್ಮಿಕರಂತೂ ಅಸಂಘಟಿತ ವಲಯದಲ್ಲಿಯೇ ಉಳಿದರು. ಅವರಿಗೆ ನೀಡಲಾಗುವ ಕನಿಷ್ಟ ವೇತನವು ಕಾಲಕಾಲಕ್ಕೆ ಸರಿಯಾಗಿ ಹೆಚ್ಚುವರಿಯನ್ನು ಪಡೆಯದೆ, ಆಯಾ ಕೋಟೆಯ ನಾಯಕರ ಮರ್ಜಿಯಂತೆ ವೇತನ ಪಡೆಯುತ್ತಾ, ನಾಯಕನ ಮರ್ಜಿ ಇರುವವರೆಗೆ ಕೆಲಸದಲ್ಲಿದ್ದು – ಇಲ್ಲವಾದರೆ ಕೆಲಸ ಕಳೆದುಕೊಂಡು ಪರದಾಡುವಂತಾಯಿತು. ಈ ಕಾರ್ಮಿಕ ವಲಯಕ್ಕೆ ಸಾಮಾಜಿಕ ರಕ್ಷಣೆ (ಸೋಷಿಯಲ್ ಸೆಕ್ಯುರಿಟಿ – ವಿಮೆ, ನಿವೃತ್ತಿ ವೇತನ, ಕಾರ್ಮಿಕರ ಮಕ್ಕಳಿಗೆ ವಿದ್ಯಾಥಿ ವೇತನ ಅಥವಾ ವಿದ್ಯಾರ್ಥಿ ಶುಲ್ಕ ನೀಡಲು ಸಹಾಯ, ಅನಾರೋಗ್ಯದ ವೇಳೆಯಲ್ಲಿ ಸಣ್ಣ ಬಡ್ಡಿಯ ಸಾಲ, ಇತ್ಯಾದಿಗಳು) ಒದಗಿಸಬೇಕಿದ್ದ ಉದ್ಯಮದಲ್ಲಿನ ಬಹುತೇಕರು ತಮ್ಮ ತಮ್ಮ ಬಣಗಳ ನಿರ್ವಹಣೆಯಲ್ಲಿ ಉಳಿದುಹೋದುದರಿಂದ ಕಿರುತೆರೆಯ ಕಾರ್ಮಿಕರು ಇಂದಿಗೂ ಹತಾಶರಾಗಿಯೇ ತಮ್ಮ ಪಾಲಿಗೆ ಬಂದ ಕೆಲಸವನ್ನು ನಿರ್ವಹಿಸುವಂತಾಗಿದ್ದಾರೆ.
ಒಟ್ಟಾರೆಯಾಗಿ ಅವಕಾಶಗಳ ಮಹಾಪೂರವನ್ನು ಸೃಷ್ಟಿಸಿ ಇಂದು ಹಿರಿತೆರೆಗಿಂತ ಹೆಚ್ಚು ವಹಿವಾಟು ನಡೆಸುವ ಹಾಗೂ ಹಿರಿತೆರೆಗೂ ಆಸರೆಯಾಗಿ ಬೆಳೆದಿರುವ ಕಿರುತೆರೆ ಉದ್ಯಮವು ತನ್ನೊಳಗೆ ಇರುವ ಒಳಿತುಗಳನ್ನು ಹೆಚ್ಚು ಪೋಷಿಸಿ, ಋಣಾತ್ಮಕ ವಿವರಗಳನ್ನು ಆದಷ್ಟು ಬೇಗ ತೊಲಗಿಸಿ ಮತ್ತಷ್ಟು ಕಾಲ ಈ ನಾಡಿನ ಪ್ರತಿಭೆಗಳಿಗೆ ವೇದಿಕೆಯಾಗಿ ಉಳಿಯಲಿ ಎಂದು ಹಾರೈಸುತ್ತೇನೆ.
– ಬಿ.ಸುರೇಶ
11 ನವೆಂಬರ್ 2016
ಬೆಂಗಳೂರು
bsuಡಿeshಚಿ@bsuಡಿeshಚಿ.ಛಿom

Advertisements

0 Responses to “ಮೂರೂವರೆ ದಶಕದ ಹಾದಿಯಲ್ಲಿ…”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: