ಈ ವರ್ಷದ ಇಷ್ಟವಾದ ಹೊತ್ತಿಗೆ

(ಪ್ರಜಾವಾಣಿ ಪತ್ರಿಕೆಯ ಮುಕ್ತಛಂದ ವಿಭಾಗಕ್ಕಾಗಿ ಬರೆದ ಟಿಪ್ಪಣಿ)

ಒಂದು ವರ್ಷದ ಅವಧಿಯಲ್ಲಿ ಓದಿರಬಹುದಾದ ಪುಸ್ತಕದಲ್ಲಿ ಒಂದು ಇಷ್ಟವಾದುದನ್ನು ಆರಿಸುವುದು ಕಷ್ಟದ ಕೆಲಸ. ಅದೂ ಓದುವ ಚಟವಿದ್ದೂ ಪ್ರತಿ ತಿಂಗಳು ಕನಿಷ್ಟ ಹತ್ತಾದರೂ ಹೊಸ ಪುಸ್ತಕ ಓದುವವನಿಗೆ ನಿಜಕ್ಕೂ ತ್ರಾಸಿನ ಕೆಲಸ. ವಾಸ್ತವವಾಗಿ ನಾನು ಓದುವ ಎಲ್ಲಾ ಪುಸ್ತಕಗಳನ್ನೂ ನಾನು ಇಷ್ಟ ಪಡುತ್ತೇನೆ. ಇಷ್ಟವಾಗದೆ ಇರುವುದನ್ನು ಓದುವುದು ಸಹ ಸಾಧ್ಯವಿಲ್ಲ. ಅಂತಹವುಗಳು ಕಿವಿ ಸಹ ಮುದುರಿಕೊಳ್ಳದೇ ಗೂಡು ಸೇರಿಬಿಡುತ್ತವೆ. ಈ ಹಾದಿಯಲ್ಲಿ ಪ್ರತೀವರ್ಷವೂ ಶತಕ, ಕೆಲವೊಮ್ಮೆ ದ್ವಿಶತಕದ ಹತ್ತಿರಕ್ಕೆ ಬಂದಿರುವುದುಂಟು. ಹಾಗೆ ಓದಿದ್ದೆಲ್ಲವೂ ನನ್ನ ನೆನಪಿನ ಕಣಜದಲ್ಲಿ ಉಳಿಯುವುದಿಲ್ಲ. ಉಳಿದಿದ್ದರೆ ನಾನೀಗ ಏನಾಗಿದ್ದೇನೋ ಅದಾಗುತ್ತಿರಲಿಲ್ಲ ಎಂಬುದು ಕುಶಾಲಿನ ಮಾತು. 
ಆದರೆ ಈ ವರ್ಷ ನಾನು ಓದಿದ ಪುಸ್ತಕದಲ್ಲಿ ನನ್ನ ಗಮನ ಸೆಳೆದ ಹಲವು ಪುಸ್ತಕಗಳಿವೆ. ಅದರಲ್ಲೂ ತೀರಾ ಈಚೆಗೆ ಓದಿದ ಪಂಡಿತ ತಾರಾನಾಥರ “ದೇವರ ಮಗು” ವಿಶೇಷವಾದುದು ಅನೇಕ ಕಾರಣಗಳಿಗೆ. ಇದು ಪಂಡಿತ ತಾರಾನಾಥರ ಸಮಗ್ರ ಸಾಹಿತ್ಯ ಸಂಪುಟದ ಮೂರನೆಯ ಪುಸ್ತಕ. ಈ ಹಿಂದೆ ಪಂಡಿತ ತಾರಾನಾಥರ “ಧರ್ಮ ಸಂಭವ” ಎಂಬ ಪುಸ್ತಕದ ಮರುಮುದ್ರಣವನ್ನು ಓದಿದ್ದೆ. ಅದು ಕಬ್ಬಿಣದ ಕಡಲೆ ಎನಿಸತ್ತು. ನನ್ನ ತಲೆಗೆ ಹತ್ತಿರಲಿಲ್ಲ. ಆದರೆ ಈ “ದೇವರ ಮಗು” ಹಾಗಲ್ಲ. ಇಲ್ಲಿ ಏಳು ಕತೆಗಳಿವೆ. ಎರಡು ಕಿರು ನಾಟಕವಿದೆ. ಈ ಪುಸ್ತಕ ಇಷ್ಟವಾಗಲು ಮೊದಲ ಕಾರಣ. ಇಲ್ಲಿ ಬಳಸಲಾಗಿರುವ ಭಾಷೆ. ಇಲ್ಲಿನ ಕತೆಗಳು ಸ್ವಾತಂತ್ರ್ಯ ಪೂರ್ವದ್ದಾದರೂ ಕತೆಯನ್ನು ಹೇಳಲು ಬಳಸಿರುವ ಭಾಷೆಯು ಹಿಂದಿನದೆನಿಸುವುದಿಲ್ಲ. ಓದುಗರಿಗೆ ಸಲೀಸಾಗಿ ತಲುಪುವ ಕ್ಲಿಷ್ಟವಲ್ಲದ ವಾಕ್ಯ ರಚನೆ. ಹೇಳಬೇಕೆಂದಿರುವ ವಿಷಯ ಕುರಿತು ಸ್ಪಷ್ಟತೆ. ಇವು ಪಂಡಿತ ತಾರಾನಾಥರ ಈ ಕತೆಗಳನ್ನು ಮತ್ತೆ ಮತ್ತೆ ಓದಲು ಪ್ರೇರೇಪಿಸುತ್ತವೆ. ಇಲ್ಲಿರುವ “ಯಾರು ಕೆಟ್ಟರು?”, “ನಿಸರ್ಗಾವಮಾನ”, “ದೇವರ ಮಗು” ತರಹದ ಕತೆಗಳು ಆಧುನಿಕ ಚಿಂತನೆಗಳು (ನಮ್ಮ ಕಾಲದ ಎಂಬರ್ಥದಲ್ಲಿ) ಎಂದೆನಿಸುವಷ್ಟು ಹೊಸತಾಗಿವೆ.
ಇದೇ ಮಾತುಗಳನ್ನು ಇಲ್ಲಿರುವ ಎರಡು ಕಿರು ನಾಟಕಗಳ ಬಗ್ಗೆ ಹೇಳಲಾಗದು. ಆದರೂ ಈ ನಾಟಕಗಳ ವಸ್ತು ಪಂಡಿತ ತಾರಾನಾಥರ ಕಾಲಕ್ಕೆ ಮಾತ್ರವಲ್ಲ ಇಂದು ಹೆಚ್ಚುತ್ತಿರುವ ಹುಸಿದೇಶಭಕ್ತಿಯ ಕಾಲದಲ್ಲಿ ಮುಖ್ಯವಾಗುತ್ತದೆ. ಆ ಕಾಲದಲ್ಲಿನ ನಾಟಕ ಪ್ರದರ್ಶನದ ತೊಡಕುಗಳಿಗೆ ಹೊಂದುವಂತೆ ಪಂಡಿತ ತಾರಾನಾಥರು ಈ ನಾಟಕಗಳನ್ನು ಕಟ್ಟಿರಬಹುದು. ಪ್ರಾಯಶಃ ಈ ನಾಟಕಗಳ ಎಳೆಯನ್ನು ಹಿಡಿದುಕೊಂಡು ಈ ಕಾಲದ ಪ್ರದರ್ಶನಾನುಕೂಲಕ್ಕೆ ಹೊಂದಿಸಿ ಹಿಗ್ಗಿಸಿದರೆ ಇವು ಖಂಡಿತ ಉತ್ತಮ ನಾಟಕಗಳಾಗಬಲ್ಲವು.
“ದೇವರ ಮಗು” ತರಹದ ಪುಸ್ತಕಗಳ ಮೂಲಕ ಪಂಡಿತ ತಾರಾನಾಥರ ಮರುಪರಿಚಯ ಮಾಡಿಕೊಳ್ಳಲು ಕಾರಣರಾದ ಈ ಮಾಲಿಕೆಯ ಸಂಪಾದಕರಾದ ಎಂ.ಧ್ರುವನಾರಾಯಣ ಮತ್ತು ಕಿ.ರಂ.ನಾಗರಾಜ ಅವರಿಗೆ ಮತ್ತು ಪ್ರಕಾಶಕರಿಗೆ ಅಭಿನಂದನೆ ಸಲ್ಲಿಸುತ್ತಾ ನೀವೂ ಈ ಪುಸ್ತಕ ಓದಿರಿ ಎಂದು ಕೋರುತ್ತೇನೆ.
– ಬಿ.ಸುರೇಶ
16 ಡಿಸೆಂಬರ್ 2016
ಬೆಂಗಳೂರು

ದೇವರ ಮಗು
ಪಂಡಿತ ತಾರಾನಾಥರ ಸಮಗ್ರ ಸಾಹಿತ್ರ ಸಂಪುಟ – 3
ಸಂಪಾದಕರು: ಎಂ.ಧ್ರುವನಾರಾಯಣ/ ಕಿ.ರಂ.ನಾಗರಾಜ
ಪ್ರಕಟಣೆಯ ವರ್ಷ: 2016
ಪ್ರಕಾಶಕರು: ಅಭಿನವ

Advertisements

0 Responses to “ಈ ವರ್ಷದ ಇಷ್ಟವಾದ ಹೊತ್ತಿಗೆ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 60,851 ಜನರು
Advertisements

%d bloggers like this: