ಏಳುಬೀಳುಗಳ ನಡುವೆ ಯಶಸ್ಸಿನತ್ತ ಚಲಿಸಿದವರ ಕತೆ

(ವಿನಾಯಕರಾಮ್ ಕಲಾಗಾರ್ ಅವರ “ತೂಗುದೀಪ ದರ್ಶನ” ಪುಸ್ತಕಕ್ಕೆ ಒಂದು ಮುನ್ನುಡಿ)

ಇದೊಂದು ಅಪರೂಪದ ಪುಸ್ತಕ. ಕೊಡಗಿನ ಪುಟ್ಟ ಊರಿನಲ್ಲಿ ಬೆಳೆದ ಹುಡುಗಿಯೊಬ್ಬಳು ಹಲವು ಬಗೆಯ ಸವಾಲುಗಳನ್ನು ಎದುರಿಸಿ ಕಡೆಗೆ ಗೆಲುವಿನರಮನೆಯಲ್ಲಿ ನಗುತ್ತಾ ನಿಂತ ಕತೆ ಇಲ್ಲಿದೆ. ಹೀಗೆ ಎರಡು ಸಾಲಿನಲ್ಲಿ ಹೇಳಿದರೆ ಪುಸ್ತಕದ ಪರಿಚಯ ಪೂರ್ಣವಾಗುವುದಿಲ್ಲ. ಇದು ಮೀನ, ಮೀನಮ್ಮ, ಮೀನಾಕ್ಷಿ, ಮೀನಾಕ್ಷಿ ತೂಗುದೀಪ ಶ್ರೀನಿವಾಸ್ ಅವರ ಜೀವನ ಗಾಥೆ. ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನ ಅವರ ಜೀವನಯಾನದ ವಿವರಗಳು ಈ ಪುಸ್ತಕದ ಹೂರಣವಾಗಿದೆ.

ಈ ಪುಸ್ತಕವನ್ನು ಕನಸಿ, ಬೇಕಾದ ಸಂದರ್ಶನಗಳನ್ನು ಮಾಡಿ ರೂಪಿಸಿರುವವರು ನನ್ನ ಪ್ರಿಯಮಿತ್ರರಾದ ವಿನಾಯಕರಾಮ್ ಕಲಾಗಾರು. ಈ ವಿನಾಯಕರಾಮ್ ನನಗೆ ಎರಡು ದಶಕದ ಗೆಳೆಯರು. ಅವರು ಪತ್ರಿಕಾವೃತ್ತಿಯ ಆರಂಭದ ದಿನಗಳಿಂದಲ್ಲವಾದರೂ ಅವರು ವಿಜಯ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದ ಕಾಲದಿಂದ ನನಗೆ ಪರಿಚಿತರು. ಅದಕ್ಕೆ ಮುಂಚೆ ಈ ವಿನಾಯಕ್‍ರಾಮ್ ಹಲವು ಸಾಹಸಗಳನ್ನು ಮಾಡಿದ್ದಾರೆ. ಬರೆಯುವ ಹುಕಿಯೊಂದನ್ನು ಇಟ್ಟುಕೊಂಡು, ಸಾಗರ ತಾಲೂಕಿನ ಸಣ್ಣ ಗ್ರಾಮ ಕಲಗಾರುವಿನಿಂದ ಬೆಂಗಳೂರು ಪಟ್ಟಣ ಸೇರಿ, ಅಕ್ಷರ ಹೊಸೆಯುತ್ತ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತೇನಲ್ಲ. ಆ ಹಾದಿಯಲ್ಲಿ ವಿನಾಯಕ್‍ರಾಮ್ ಅವರದ್ದೂ ಸಹ ದೊಡ್ಡ ಸಾಹಸಗಾಥೆ. ಬಿಡಿಗಾಸಲ್ಲಿ ಬೆಂಗಳೂರು ನಗರ ಸೇರಿ ಇಂದು ನಾಡಿನ ಬಹುತೇಕ ಜನಪ್ರಿಯ ರಿಯಾಲಿಟಿ ಷೋಗಳ ಹಿಂದೆ ಅವುಗಳನ್ನು ರೂಪಿಸುವ ತಂಡಗಳಲ್ಲಿ ಕೆಲಸ ಮಾಡುತ್ತಾ ಇರುವ ವಿನಾಯಕ್‍ರಾಮ್ ಅವರ ಬರವಣಿಗೆಯ ಕೌಶಲಗಳಿಗಿಂತ ಹೆಚ್ಚು ಪ್ರಿಯವಾಗುವುದು ಅವರ ಮಾನವೀಯತೆಗೆ ಮತ್ತು ನಗುಮುಖಕ್ಕೆ. ವಿನಾಯಕ್‍ರಾಮ್ ಅವರ ನಗುಮುಖ ಕಂಡರೆ ನಮ್ಮ ಹಲವು ನೋವುಗಳನ್ನು ಮರೆತು ಮಾತಿಗೆ ಕೂರಬೇಕೆಂದು ಯಾರಿಗಾದರು ಅನಿಸುವುದು ಖಂಡಿತ ಉತ್ಪ್ರೇಕ್ಷೆಯ ಮಾತಲ್ಲ. ನಾನು ಸಹ ನನ್ನ ಸಿನಿಮಾ “ಪುಟ್ಟಕ್ಕನ ಹೈವೇ”ಯನ್ನು ಹೊತ್ತುಕೊಂಡು ಜನರಿಗೆ ತೋರಿಸಲೆಂದು ಊರೂ ತಿರುಗುತ್ತಾ ಇದ್ದಾಗ ತಾಳಗುಪ್ಪ ತಲುಪಿದ್ದೆ. ಆ ಚಿತ್ರ ಪ್ರದರ್ಶನಕ್ಕೆ ಬಂದಿದ್ದ ವಿನಾಯಕನ ತಂದೆ ತಾಯಿಯ ಪರಿಚಯವಾಗಿತ್ತು. ಅವರಿಬ್ಬರ ಜೊತೆಗೆ ಕಲಾಗಾರು ಗ್ರಾಮಕ್ಕೆ ಹೋಗಿ ಅವರ ಮನೆಯಲ್ಲಿ ಕಾಫಿ, ಫಲಹಾರ ಸೇವಿಸಿದ ನೆನಪು ಇನ್ನೂ ಹಸಿರಾಗಿದೆ. ಅಂತಹ ಪುಟ್ಟ ಗ್ರಾಮದಲ್ಲಿ ವ್ಯವಸಾಯದ ಆದಾಯ ಸಾಲುವುದಿಲ್ಲ ಎಂದು ಪುಟ್ಟ ಕಿರಾಣಿ ಅಂಗಡಿಯನ್ನು ಮನೆಯ ಮುಂಭಾಗದಲ್ಲಿಯೇ ನಡೆಸುವ ಕುಟುಂಬ ಅದು. ಅಂತಹ ಬಡಕೃಷಿಕರ ಕುಟುಂಬದಿಂದ ಬಂದ ವಿನಾಯಕ ಇಂದು ಬೆಂಗಳೂರಿನಲ್ಲಿರುವ ಪ್ರಮುಖ ಪತ್ರಕರ್ತರಲ್ಲಿ ಒಬ್ಬರು ಎಂಬುದು ನನಗೆ ವೈಯಕ್ತಿಕವಾಗಿ ಸಂತಸದ ವಿಷಯ. ವಿನಾಯಕ್‍ರಾಮ್ ಅವರ ಮಡದಿ ಸಹ ಅತ್ಯುತ್ತಮ ಲೇಖಕಿ. ಆಕೆ ಬರೆದಿರುವ ಬಾಣಂತಿಯರನ್ನು ನೋಡಿಕೊಳ್ಳುವ ವಿವರ ಇರುವ ಪುಸ್ತಕವನ್ನು ನಾನು ಮತ್ತೆ ಮತ್ತೆ ಓದುತ್ತಾ ಇರುತ್ತೇನೆ. ಇಂತಹ ಗೆಳೆಯರಾದ ವಿನಾಯಕ್‍ರಾಮ್ ಅವರು ಹಲವು ವರ್ಷಗಳ ಕಾಲ ಮೀನಾ ತೂಗುದೀಪ ಅವರ ಜೊತೆಗೆ ಕೂತು ಅವರ ಬದುಕಿನ ಹಾದಿಯನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಂತಹದೊಂದು ಅಪರೂಪದ ವ್ಯಕ್ತಿಯ ಜೀವನಗಾಥವನ್ನು ಕನ್ನಡದ ಓದುಗರಿಗಾಗಿ ದಾಟಿಸುತ್ತಾ ಇರುವ ವಿನಾಯಕ್‍ರಾಮ್ ಅವರಿಗೆ ಅಭಿನಂದನೆಗಳು.

ಈ ಹೊತ್ತಿಗೆಯ ನಿರೂಪಣಾ ವಿನ್ಯಾಸವೇ ವಿಶಿಷ್ಟವಾದುದು. ಇಲ್ಲೊಂದು ಸರಳ ರೇಖಾತ್ಮಕವಾದ ಕಥನವಿಲ್ಲ. ಬದಲಿಗೆ ಮೀನಾ ಅವರ ಬದುಕಿನ ಹಲವು ಮಜಲುಗಳ ಮೂಲಕ ಹಳೆಯ ಮತ್ತು ಹೊಸದರ ನಡುವೆ ಸಂವಾದವಿದೆ. ಅನಾರೋಗ್ಯದಿಂದ ಮಲಗಿ ಯಾರನ್ನೂ ಗುರುತಿಸದಂತೆ ಆಗಿದ್ದ ಪಾರ್ವತಮ್ಮ ರಾಜ್‍ಕುಮಾರ್ ಅವರು ಮೀನಮ್ಮ ಅವರನ್ನು ಕೇವಲ ಸ್ಪರ್ಶದಿಂದ ಗುರುತಿಸುವ ಭಾವುಕ ವಿವರದಿಂದ ಈ ಕಥನ ಆರಂಭ ಆಗುತ್ತದೆ. ಅಂತಿಮವಾಗಿ ಒಂಟಿ ಹೆಣ್ಣು ನಡೆಸಿದ ಬದುಕಿನ ಹೋರಾಟಗಳ ಫಲ ಎಂಬಂತೆ ಮಕ್ಕಳಿಬ್ಬರೂ ದೈತ್ಯಶಕ್ತಿಗಳಾಗಿ ಕರುನಾಡಿನ ಕಣ್ಮಣಿಗಳಾಗಿ ನಿಂತ ಹಂತವನ್ನು ಆ ತಾಯಿಯು ಧನ್ಯತೆಯಿಂದ ನೆನೆಸುವವರೆಗೆ ಸಾಗುತ್ತದೆ. ಇದು ಮುಕ್ತಾಯ ಎಂದಲ್ಲ, ಬದಲಿಗೆ ಸಶೇಷ ಎಂಬಂತೆ ನಿರೂಪಣೆಯು ಕೊನೆ ತಲುಪುತ್ತದೆ. ಆ ಮೂಲಕ ಮುಂದೆ ಬರಬಹುದಾದ ಭಾಗಗಳ ಸೂಚನೆಯೂ ಸಿಗುತ್ತದೆ.

ಈ ಕೆಲಸ ಮಾಡುವುದಕ್ಕೆ ವಿನಾಯಕ್‍ರಾಮ್ ತಾವು ಸಂದರ್ಶಿಸಿದ ಪ್ರತಿಯೊಬ್ಬರೂ ನೀಡುವ ವಿವರಗಳನ್ನು ದಾಖಲಿಸುತ್ತಲೇ, ಮನಸ್ಸಿಗೆ ತಾಗುವ ಅನೇಕ ವಿವರಗಳನ್ನು ಸೇರಿಸುತ್ತಾರೆ. ಹೀಗಾಗಿ ಇಲ್ಲಿರುವ ನಲ್ವತ್ತಮೂರು ಅಧ್ಯಾಯಗಳು ಪ್ರತ್ಯೇಕವಾಗಿಯೂ ಓದಬಹುದಾದ, ಒಟ್ಟಂದದಲ್ಲಿಯೂ ಓದಬಹುದಾದ ಬರಹಗಳು. ಓದಿನ ಆಸಕ್ತಿಯಿದ್ದವರು ಇಂತಹ ಪುಸ್ತಕಗಳನ್ನು ಒಂದೇ ಗುಕ್ಕಿನಲ್ಲಿ ಓದಬಹುದು. ರಸಸ್ವಾದನೆಯ ಮನಸ್ಸಿರುವವರು ಪ್ರತಿ ಅಧ್ಯಾಯದ ವಿವರವನ್ನು ಓದಿ, ಮೆಲುಕು ಹಾಕಿ ನಿಧಾನವಾಗಿ ಮುಂದುವರೆಯಬಹುದು. ಒಟ್ಟಾರೆಯಾಗಿ ಇದು ನಮ್ಮ ನಡುವಿನ ಸ್ಟಾರ್ ನಟನ ಜೀವನ ಕಥನವೂ ಹೌದು, ಆ ಸ್ಟಾರ್ ನಟನ ಹೆತ್ತವರ ಬದುಕಿನ ಕಥನವೂ ಹೌದು, ಆ ಸ್ಟಾರ್ ಆಗಿರುವ ನಟ ಸಹ ತಾನು ಆ ಸ್ಥಾನ ತಲುಪುವವರೆಗೆ ಪಟ್ಟಿರುವ ಪಡಿಪಾಟಲುಗಳ ವಿವರದಿಂದಲೇ ಇಂದಿಗೂ ಅತ್ಯಂತ ಆದ್ರ್ರ ಹೃದಯಿಯಾಗಿದ್ದಾರೆ ಎಂಬ ಸತ್ಯದ ದೃಢೀಕರಣವೂ ಹೌದು.

ನನಗೆ ಈ ಪುಸ್ತಕದಲ್ಲಿರುವ ಕುಟುಂಬದ ಪರಿಚಯ ತುಂಬಾ ಹಳತು. ಪತ್ರಕರ್ತೆ ಆಗಿದ್ದ ನನ್ನ ತಾಯಿ ವಿಜಯಮ್ಮನವರ ಕಾರಣವಾಗಿ ತೂಗುದೀಪ ಶ್ರೀನಿವಾಸ್ ಅವರನ್ನು ಹಲವು ಸಲ ಹೈಲ್ಯಾಂಡ್ಸ್ ಹೋಟೆಲಿನಲ್ಲಿ ಭೇಟಿಯಾಗಿದ್ದೆ. ಒಮ್ಮೆ ಸಂದರ್ಶನ ಮಾಡಿದ್ದಲ್ಲದೆ ಅವರ ಕೆಲವು ಫೋಟೊ ಸಹ ತೆಗೆದಿದ್ದೆ. ತೂಗುದೀಪ ಶ್ರೀನಿವಾಸ್ ಅವರು ಆ ದಿನಗಳಲ್ಲಿ ನನ್ನಂತಹ ಬಾಲಕನ ಮೇಲೆ ತೋರಿದ ಪ್ರೀತಿ ಎಂದಿಗೂ ಮರೆಯಲಾಗದ್ದು. ನಂತರ ನಾನು ಕೆ.ಎಸ್.ಎಲ್.ಸ್ವಾಮಿ (ರವೀ) ಅವರಿಗೆ ಸಹಾಯಕನಾಗಿ ದುಡಿಯುವಾಗ, ಮೈಸೂರಿಗೆ ಯಾವುದೇ ಕಾರಣಕ್ಕೆ ಹೋದರು, ನಮ್ಮ ನಿರ್ದೇಶಕರಾದ ರವೀ ಅವರು ಗೆಳೆಯ ತೂಗುದೀಪ ಅವರ ಮನೆ `ಮುಪಾಕೃಪ’ಗೆ ಕರೆದೊಯ್ಯುತ್ತಿದ್ದರು. ಹೀಗಾಗಿ ಮೀನಮ್ಮ ಅವರ ಮನೆಯ ಮುದ್ದೆ, ಬಸ್ಸಾರು ತಿನ್ನುವ ಅವಕಾಶ ನನಗೆ ಒಂದೆರಡು ಸಲ ಒದಗಿತ್ತು. ಆದರೆ ಮೀನಮ್ಮನವರ ಮಕ್ಕಳ ಸಂಪರ್ಕ ನನಗಿರಲಿಲ್ಲ. ದರ್ಶನ್ ಅವರು ಕ್ಯಾಮೆರಾಮನ್ ಗೌರಿಶಂಕರ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾಗ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಗ ಒಂದೆರಡು ಸಲ ಭೇಟಿಯಾಗಿದ್ದೆನಾದರೂ ಸರಿಯಾದ ಪರಿಚಯ ಎಂಬುದು ಆಗಿದ್ದು ಅವರು ನಾಯಕ ನಟರಾದ ಮೇಲೆಯೇ. ನಮ್ಮ ಸಂಸ್ಥೆ ನಿರ್ಮಿಸಿದ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾಗ ಕೆಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದುಂಟು. ನಾವಿಬ್ಬರೂ ಬಹುಕಾಲದ ಗೆಳೆಯರಂತೆ ರಂಗಭೂಮಿ ಮತ್ತು ಇತರ ವಿವರಗಳನ್ನು ಮಾತಾಡುವುದು ಕಂಡು ನಮ್ಮ ಸುತ್ತಲಿದ್ದವರು ಇವರು ಜನ್ಮಾಂತರದ ಗೆಳೆಯರಿರಬೇಕು ಎಂದುಕೊಂಡಿರಲಿಕ್ಕೂ ಸಾಕು. ಆದರೆ ವಾಸ್ತವವಾಗಿ ನನಗೆ ದರ್ಶನ್ ಅವರ ಅಥವಾ ಅವರ ತಾಯಿಯವರ ಬದುಕಿನ ಎಲ್ಲ ವಿವರಗಳೂ ಗೊತ್ತಿರಲಿಲ್ಲ. ವಿನಾಯಕ್‍ರಾಮ್ ಅವರ ಈ ಪುಸ್ತಕ ನನ್ನ ಆತ್ಮೀಯ ಬಂಧುಗಳೊಬ್ಬರನ್ನು ಕುರಿತು ನಾನು ಮತ್ತಷ್ಟು ವಿಶದವಾಗಿ ತಿಳಿದುಕೊಳ್ಳುವಂತೆ ಮಾಡಿದೆ. ಅದಕ್ಕಾಗಿ ವಿನಾಯಕ್‍ರಾಮ್ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಹೇಳಬೇಕು.

ಮೀನಾ ತೂಗುದೀಪ ಅವರ ಬದುಕಿನ ಕತೆಯಂತೂ ಒಂದು ಬೃಹತ್ ಸಾಹಸಗಾಥೆ. ಆಕೆ ಕಡಿಮೆ ಆದಾಯದ ಗಂಡನ ಜೊತೆಗೆ ಸಂಸಾರ ಕಟ್ಟುವಾಗ ಹಲವು ಸಾಹಸಗಳನ್ನು ಮಾಡುತ್ತಾರೆ. ಸಂಸಾರ ರಥ ತೂಗಿಸುತ್ತಾರೆ. ನಂತರ ಗಂಡನಿಗೆ ಅನಾರೋಗ್ಯವಾದಾಗ ತಾವೇ ನಿಂತು ಹಣ ಹೊಂದಿಸಿ ಆರೈಕೆ ಮಾಡುತ್ತಾರೆ. ಅಗತ್ಯ ಬಿದ್ದಾಗ ತಮ್ಮ ಒಂದು ಅಂಗವನ್ನು ದಾನ ಮಾಡಿ ಗಂಡನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇಷ್ಟಾದರೂ ಗಂಡ ಅಗಲಿದಾಗ ಹತಾಶರಾಗಿದ್ದಾಗಲೇ ಹಲವು ಹೊಸ ದಾರಿಗಳು ಕಂಡು ಮನೆಯ ಅಂಗಲದಲ್ಲಿಯೇ ಮೆಸ್ ನಡೆಸುತ್ತಾರೆ. ಹಸು ಕಟ್ಟಿ ಹಾಲು ಮಾರುತ್ತಾರೆ. ಇಷ್ಟೆಲ್ಲದರ ನಡುವೆ ಮಕ್ಕಳಿಗೆ ಸಿನಿಮಾ ವೃತ್ತಿ ದೊರೆಯಲಿ ಎಂದು ತಾವೇ ಪ್ರಯತ್ನಿಸುತ್ತಾರೆ. ಇದೆಲ್ಲ ಕಷ್ಟಗಳನ್ನು ಎದುರಿಸಿ ಮಕ್ಕಳು ನೆಲೆ ನಿಂತ ಮೇಲೆ ಎರಡನೆಯ ಮಗನ ಮೊದಲ ನಿರ್ದೇಶನದ ಸಿನಿಮಾ ಆಗುವಾಗ ಸ್ವತಃ ತಾವೇ ಮುಂದೆ ನಿಂತು ಎಲ್ಲಾ ಉಸ್ತುವಾರಿ ನೊಡಿಕೊಳ್ಳುತ್ತಾರೆ. ಎಲ್ಲಾ ಮುಗಿಯಿತು, ಇನ್ನು ನೆಮ್ಮದಿಯ ಬದುಕು ನಡೆಸುಬಹುದು ಎನ್ನುವಾಗಲೇ ಸ್ವತಃ ಕ್ಯಾನ್ಸರ್‍ನಂತಹ ಖಾಯಿಲೆ ಎಡತಾಗಿ, ಅದಕ್ಕೂ ಸೋಲದೆ ಜಯಿಸುವ ಹೆಣ್ಣು ಮಗಳೀಕೆ. ಆರಡಿ ಎತ್ತರದ ಮೀನಮ್ಮ ಎದುರಿಗೆ ನಿಂತಾಗ ಅವರ ಬೆನ್ನ ಹಿಂದೆ ಇಷ್ಟೆಲ್ಲಾ ಸಾಹಸಗಳಿದ್ದವು ಎಂದು ಊಹೆ ಮಾಡಿಕೊಳ್ಳುವುದು ಖಂಡಿತ ಸಾಧ್ಯವಿಲ್ಲ. ಅಂತಹ ಒಬ್ಬ ಹೆಣ್ಣುಮಗಳು ಒಂದು ಕುಟುಂಬವನ್ನು ಸೊನ್ನೆಯಿಂದ ಸಿಂಹಾಸನದವರೆಗೆ ಎಳೆದು ತಂದ ಕತೆ ಇದು. ಇಂತಹ ತಾಯಿ ಜೀವದ ಕತೆ ಅನೇಕ ಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಮಾದರಿ.

ಆ ಹಿನ್ನೆಲೆಯಲ್ಲಿ ವಿನಾಯಕರಾಮ್ ಅವರು ಬರೆದಿರುವ, ಜೋಹರ್ ಪ್ರಕಾಶನದವರು ಪ್ರಕಟಿಸಿರುವ ಈ ಪುಸ್ತಕ ಕೇವಲ ಒಬ್ಬ ಸ್ಟಾರ್ ನಟನ ಹೆತ್ತವರ ಕತೆ ಅಲ್ಲ, ಒಂದು ಸಮಾಜದಲ್ಲಿ ಧೈರ್ಯಗೆಡದೆ ಬದುಕಲು ಹಾದಿ ತೋರುವ ಕೈಪಿಡಿ. ಇಂತಹ ಪುಸ್ತಕ ಬರೆದ ನನ್ನ ಪ್ರಿಯ ಮಿತ್ರರಾದ ವಿನಾಯಕರಾಮ್ ಅವರಿಗೂ ಮತ್ತು ಪ್ರಕಾಶಕರಿಗೂ ಮತ್ತೊಮ್ಮೆ ನಮಿಸುತ್ತಾ ಕನ್ನಡಿಗರು ಈ ಪುಸ್ತಕವನ್ನು ತಮ್ಮ ಬದುಕಿಗೆ, ತಮ್ಮ ಸುತ್ತಲು ಇರಬಹುದಾದ ಕಷ್ಟದಲ್ಲಿ ಬದುಕುತ್ತಿರುವವರಿಗೆ ಬದುಕು ಕಟ್ಟುವ ಮಾದರಿಯಾಗಿ ಬಳಸಲಿ ಎಂದು ಹಾರೈಸುತ್ತೇನೆ. ವಿನಾಯಕ್‍ರಾಮ್ ಅವರು ಮುಂಬರುವ ದಿನಗಳಲ್ಲಿ ಮತ್ತಷ್ಟು ಅಪರೂಪದ ಕತೆಗಳನ್ನು ನಮಗೆ ಪುಸ್ತಕ ರೂಪದಲ್ಲಿ ದಾಟಿಸಲಿ ಎಂದು ಆಶಿಸುತ್ತೇನೆ.

– ಬಿ.ಸುರೇಶ
8 ಮೇ 2020

0 Responses to “ಏಳುಬೀಳುಗಳ ನಡುವೆ ಯಶಸ್ಸಿನತ್ತ ಚಲಿಸಿದವರ ಕತೆ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 103,492 ಜನರು

%d bloggers like this: