“ಹಾಗಾದರೆ ನಾನೀಗ ದುಡ್ಡು ಹೂಡಿ ಬಿಡುಗಡೆ ಮಾಡುವ ಸಿನಿಮಾವು ಪ್ರದರ್ಶನ ಮಂದಿರದಲ್ಲಿ ಉಳಿಯುತ್ತದೆ ಎಂಬುದಕ್ಕೆ ಖಾತ್ರಿ ಕೊಡುವವರು ಯಾರು” ಎಂದು ಪ್ರಶ್ನೆ ಕೇಳಿದವರು ಮಹೇಶ್ ಮೆಹತಾ, ತಮಿಳು-ಮಲೆಯಾಳಿ ಚಿತ್ರಗಳ ನಿರ್ಮಾಪಕರು ಹಾಗೂ ವಿತರಕರು. ಈ ಪ್ರಶ್ನೆ ಅವರು ಕೇಳಿದ್ದು ಸಿಐಐ (ಸೆಂಟ್ರಲ್ ಕಾನ್‌ಫಿಡೆರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ನ ಮಾಧ್ಯಮ ವಲಯದ ಸಭೆಯಲ್ಲಿ. ಈ ಪ್ರಶ್ನೆ ಬರುವವರೆಗೆ ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಸಿನಿಮಾಟೋಗ್ರಾಫ್ ಆಕ್ಟ್‌ಗೆ ಸಂಬಂಧಿಸಿದ ತಿದ್ದುಪಡಿ ಕುರಿತು ಮಾತಾಡುತ್ತಾ ಇದ್ದ ಎಲ್ಲರೂ ಹಲವು ನಿಮಿಷಗಳ ಕಾಲ ಮೌನವಾಗಿದ್ದು ಸುಳ್ಳಲ್ಲ. ಇಂತಹ ಪ್ರಶ್ನೆ ಎದುರಾಗಲು ಕಾರಣವಾಗಿದ್ದು, ೧೯೫೨ರ ಸಿನಿಮಾಟೋಗ್ರಾಫ್ ಕಾಯ್ದೆಯ ತಿದ್ದುಪಡಿಗಳನ್ನು ಮಾಡಿ, ಜನರ ಅಭಿಪ್ರಾಯ/ಭಿನ್ನಾಭಿಪ್ರಾಯ ಮಂಡಿಸಲು ಜುಲೈ ೫ನೇಯ ತಾರೀಖನ್ನು ಗೊತ್ತುಪಡಿಸಿದ ಒಕ್ಕೂಟ ಸರ್ಕಾರದ ಆದೇಶ.
ಭಾರತದಲ್ಲಿ ಚಲಿಸುವ ಚಿತ್ರಗಳನ್ನು ನಿರ್ವಹಿಸಲು/ನಿಯಂತ್ರಿಸಲು ೧೯೫೨ರಲ್ಲಿಯೇ ಸಿನಿಮಾಟೋಗ್ರಾಫ್ ಆಕ್ಟ್ ಎಂಬುದು ಜಾರಿಗೆ ಬಂದಿತ್ತು. ಆ ಕಾಯಿದೆಯೂ ಈ ಹಿಂದೆ ಇದ್ದ ವಸಾಹತುಶಾಹಿ ಸರ್ಕಾರವು ಮಾಡಿದ್ದ ಕಾಯಿದೆಗಳಿಗೆ ಸಣ್ಣಪುಟ್ಟ ತಿದ್ದುಪಡಿ ಮಾಡಿ ಹೊಸ ಹೆಸರಲ್ಲಿ ಜಾರಿಗೆ ಬಂದಿತ್ತು. ಅದಾಗಿ ಅರವತ್ತು ವರ್ಷಗಳ ನಂತರ ಅಂದರೆ ೨೦೧೩ರಲ್ಲಿ ಮುಕುಂದ್ ಮುದ್ಗಲ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಸದರಿ ಕಾಯಿದೆಯನ್ನು ಕಾಲೋಚಿತಗೊಳಿಸಲು ಸಲಹೆಗಳನ್ನು ನೀಡಲು ಸೂಚಿಸಲಾಯಿತು. ನಂತರ ೨೦೧೬ರಲ್ಲಿ ಶ್ಯಾಮ್‌ಬೆನಗಲ್ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿ ಸಲಹೆಗಳನ್ನು ಆಹ್ವಾನಿಸಿತ್ತು. ಸದರಿ ಸಮಿತಿಗಳು ೨೦೧೮ರಲ್ಲಿಯೇ ವರದಿಗಳನ್ನು ನೀಡಿತ್ತಾದರೂ ಆ ವರದಿಯ ಬಗ್ಗೆ ಗಮನ ಹರಿಸದೆ ಸರ್ಕಾರಗಳು ಸುಮ್ಮನಿದ್ದವು. ಈಗ ೨೦೨೧ರಲ್ಲಿ ದಿಢೀರನೆ ಆ ವರದಿಯಲ್ಲಿನ ಕೆಲವು ಸಲಹೆಗಳನ್ನು ಸ್ವೀಕರಿಸಿ, ಮತ್ತಷ್ಟು ಹೊಸ ವಿಚಾರಗಳನ್ನು ಸೇರಿಸಿ “ಸಿನಿಮಾಟೋಗ್ರಾಫ್ ಆಕ್ಟ್ ೨೦೨೧” ಎಂಬ ತಿದ್ದುಪಡಿಯನ್ನು ಸಾರ್ವಜನಿಕರ ಮತ್ತು ಫಲಾನುಭವಿಗಳ ಸಲಹೆಗೆ ಎಂದು ಹೊರಡಿಸಲಾಗಿದೆ. ಅದಾಗಲೇ ಗೊತ್ಥಾಗಿರುವಂತೆ ಬರಲಿರುವ ಸಂಸತ್ತಿನ ಸಭೆಯಲ್ಲಿ ಈ ಕಾಯಿದೆ ಜಾರಿಗೆ ಬರಲಿದೆ.
ಕಾಯಿದೆಯಲ್ಲಿ ಏನಿದೆ
ಈ ತಿದ್ದುಪಡಿಯನ್ನು ಕುರಿತಂತೆ ಅದಾಗಲೇ ದೇಶಾದ್ಯಂತ ಎದ್ದಿರುವ ವಾದ, ವಿವಾದಗಳು ತಿಳಿದಿರುತ್ತವೆಯಾದರೂ, ಈ ಲೇಖನದ ಕಾರಣಕ್ಕಾಗಿ, ಸ್ಥೂಲವಾಗಿ ತಿದ್ದುಪಡಿಗಳಲ್ಲಿನ ಕೆಲವು ಅಂಶಗಳನ್ನು ತಿಳಿಯೋಣ.
೧. ಸಿನಿಮಾಟೋಗ್ರಾಫ್ ಕಾಯಿದೆ ಸೆಕ್ಷನ್ (೬)ರ ಸೆಕ್ಷನ್ ಒಂದನ್ನು ಸಂಪೂರ್ಣವಾಗಿ ತೆಗೆದುಹಾಕುವುದು.
೨. ಸೆಕ್ಷನ್ (೬)ರ ಉಪವಿಭಾಗಕ್ಕೆ ಹೊಸ ವಿವರ ಸೇರಿಸಿ, ಕಾಯಿದೆಯ ಸೆಕ್ಷನ್ ೫೮ (೧)ರ ಉಲ್ಲಂಘನೆಯನ್ನು ತಡೆಯಲು ಸಿಬಿಎಫ್‌ಸಿಯು ನೀಡಿದ ಪ್ರಮಾಣಪತ್ರವನ್ನು ಹಿಂಪಡೆಯುವ ಅಧಿಕಾರವು ಸರ್ಕಾರಕ್ಕೆ ಇರುವಂತೆ ಮಾಡುವುದು ಅಥವಾ ಸಿಬಿಎಫ್‌ಸಿಯ ಅಧ್ಯಕ್ಷರ ಮೂಲಕ ಸದರಿ ಪ್ರಮಾಣೀಕರಣವನ್ನು ಮರುಪರಿಶೀಲಿಸಲು ಸೂಚಿಸುವುದು.
೩. ಪೈರಸಿ ತಡೆಗಟ್ಟಲು ಕಾನೂನುಬಾಹಿರವಾಗಿ ಯಾವುದೇ ಚಿತ್ರದ ನಕಲು ಮಾಡುವುದನ್ನು ಅಪರಾಧ ಎಂದು ಗುರುತಿಸುವುದು ಮತ್ತು ಆ ಬಗೆಯ ನಕಲುಗಳನ್ನು ಹಂಚುವ, ಪ್ರಸಾರ ಮಾಡುವವರಿಗೆ ದಂಡ ವಿಧಿಸುವುದು.
ಮೇಲ್ನೋಟಕ್ಕೆ ಈ ತಿದ್ದುಪಡಿಗಳು ಅಡ್ಡಿಇಲ್ಲ ಎನಿಸಿದರೂ ಇದರೊಳಗಡೆ ಯಾವುದೇ ಬಿಡುಗಡೆ ಆದ ಸಿನಿಮಾವನ್ನು, ಯಾವುದೇ ವ್ಯಕ್ತಿ/ಸಂಸ್ಥೆಯ ದೂರು ಬಂದಲ್ಲಿ, ಅಂತಹ ಸಿನಿಮಾದ ಸಿಬಿಎಫ್‌ಸಿ ಪ್ರಮಾಣ ಪತ್ರವನ್ನು ಹಿಂಪಡೆವ ಅಥವಾ ಮರುಪರಿಶೀಲಿಸುವ ಅಧಿಕಾರವನ್ನು ಒಕ್ಕೂಟ ಸರ್ಕಾರ ಪಡೆಯಲಿದೆ. ಇದು ಅಪಾಯ. ಮೊದಲಿಗೆ ಸರ್ಕಾರವೇ ನೇಮಿಸಿಸ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಎಂಬ ಸ್ವಾಯತ್ತ ಸಂಸ್ಥೆಯ ನೆತ್ತಿಯ ಮೇಲೆ ಸ್ವತಃ ಸರ್ಕಾರವೇ ಕೂರುವುದು ಒಂದು ವಿಷಯವಾದರೆ, ಸಿನಿಮಾ ಒಂದರ ಬಗ್ಗೆ ಯಾರದ್ದೇ ಕ್ಲುಲಕ ಭಿನ್ನಾಭಿಪ್ರಾಯ ಇದ್ದರೂ ಸರ್ಕಾರ ಆ ಸಿನಿಮಾಕ್ಕೆ ನೀಡಿದ ಸರಾವಜನಿಕ ಪ್ರದರ್ಶನ ಪ್ರಮಾಣ ಪತ್ರವನ್ನು ಹಿಂಪಡೆಯುವ ಅಥವಾ ಮರುಪರಿಶೀಲಿಸುವ ಅಧಿಕಾರ ಪಡೆಯುತ್ತಿದೆ ಎಂಬುದು ನೇರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒದಗಿದ ಹೊಸ ಆತಂಕವೇ ಆಗಿದೆ.
ಈ ಹಿಂದೆ “ಪದ್ಮಾವತ್” ತರಹದ ಚಿತ್ರಗಳನ್ನು ಕುರಿತು ಬಂದಂತಹ ಒಂದು ಗುಂಪಿನ ವಿರೋಧವನ್ನೇ ಗಮನಿಸಿ. ಆ ಸಿನಿಮಾವನ್ನು ಸ್ವತಃ ನೋಡದೆ ಸಿನಿಮಾ ಬಿಡುಗಡೆಗೆ ಅಡ್ಡಿ ಉಂಟು ಮಾಡಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಸದರಿ ವಿರೋಧಿಗಳು ತಿಳಿಸಿದ್ದ ಯಾವ ವಿವರಗಳೂ ಇರಲಿಲ್ಲ. ಇದರಿಂದಾಗಿ ಆ ಸಿನಿಮಾದ ವ್ಯಾಪಾರದಲ್ಲಿ ಅದೆಷ್ಟು ದೊಡ್ಡ ನಷ್ಟವಾಯಿತು ಎಂಬುದು ಅಂತರ್ಜಾಲ ತಾಣಗಳಲ್ಲಿ ಎಲ್ಲರಿಗೂ ಸಿಗುತ್ತದೆ. ಇಲ್ಲಿ ಪ್ರದರ್ಶನ ಪ್ರಮಾಣ ಪಡೆದು ಸಿನಿಮಾ ಬಿಡುಗಡೆ ಮಾಡಲಾಗಿದೆ ಎಂಬ ರಕ್ಷಣೆಯಾದರೂ ಆ ಸಿನಿಮಾ ತಯಾರಕರಿಗೆ ಇತ್ತು. ಈಗ ಆ ರಕ್ಷಣೆಯ ನೆತ್ತಿಯ ಮೇಲೆ ಸ್ವತಃ ಸರ್ಕಾರವೇ ಬಂದು ಕೂರಲು ಹೊರಟಿದೆ. ಬಿಡುಗಡೆಯಾದ ಸಿನಿಮಾ ಒಂದು ಪ್ರದರ್ಶನ ಮಂದಿರದಲ್ಲಿ ಇರುವಾಗಲೇ ಸರ್ಕಾರವೂ ಆ ಸಿನಿಮಾವನ್ನು ಹಿಂಪಡೆಯಬಹುದು ಎಂದಾದರೆ ಆಗ ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಲ್ಲ ಜೊತೆಗೆ ಸಿನಿಮಾ ತಯಾರಕನಿಗೆ ಹೂಡಿದ ಹಣಕ್ಕೆ ಸಿಗುವ ರಕ್ಷಣೆಯಾದರೂ ಏನು ಎಂಬ ಪ್ರಶ್ನೆ ಬರುತ್ತದೆ. ಕೋಟ್ಯಾಂತರ ರೂಪಾಯಿ ಹಣ ಹೂಡಿ, ಸಿನಿಮಾ ತಯಾರಿಸಿ, ವಿತರಕರು/ಪ್ರದರ್ಶಕರಿಂದ ಮುಂಗಡ ಹಣ ಪಡೆದು ಸಿನಿಮಾ ಬಿಡುಗಡೆ ಮಾಡುವ ತಯಾರಕನು ಈಗ ಸಿಬಿಎಫ್‌ಸಿಯ ಪ್ರಮಾಣ ಪತ್ರ ಸಿಕ್ಕಿದೊಡನೆ ಬಿಡುಗಡೆ ಮಾಡಬೇಕು ಅಥವಾ ಸಾರ್ವಜನಿಕರು ಯಾರೂ ದೂರು ಸಲ್ಲಿಸದಿರಲಿ ಎಂದು ಪ್ರಾರ್ಥನೆ ಮಾಡುತ್ತಾ ಕೂರಬೇಕೋ? ಹಾಗೆಯೇ ಗಮನಿಸಿದರೆ ಕಳೆದ ಏಳು ವರ್ಷಗಳಲ್ಲಿ ಇಡೀ ದೇಶವೇ ಹಲವು ಬಣಗಳಾಗಿ ಒಡೆದಿದೆ. ಹೀಗಾಗಿ ಒಂದು ಬಣದವರು ತಯಾರಿಸಿದ ಸಿನಿಮಾ ಕುರಿತು ಮತ್ತೊಂದು ಬಣದವರು ವಿರೋಧ ಮಾಡುತ್ತಲೇ ಇರುತ್ತಾರೆ. ಇದರ ಜೊತೆಗೆ ಅಂತಹ ಭಿನ್ನಾಭಿಪ್ರಾಯ ಆಧರಿಸಿ ಸರ್ಕಾರವೂ ಸಹ ಬಿಡುಗಡೆ ಆದ ಸಿನಿಮಾ ಹಿಂಪಡೆಯುವ ಅಧಿಕಾರ ಪಡೆದರೆ ಏನಾಗಬಹುದು ಎಂದು ಊಹಿಸಲು ಭಾರೀ ಕಲ್ಪನೆ ಏನೂ ಬೇಕಾಗಿಲ್ಲ. ಈ ಹಿಂದೆ ವಿಶ್ವರೂಪಂ ಸಿನಿಮಾಕ್ಕೆ ಬಂದ ವಿರೋಧಗಳು, ಈಚೆಗೆ ಪೊಗರು ಎಂಬ ಸಿನಿಮಾಕ್ಕೆ ಒಂದು ಜಾತಿಯ ಜನ ವ್ಯಕ್ತಪಡಿಸಿದ ವಿರೋಧಗಳು ಆಯಾ ಸಿನಿಮಾಗಳ ವ್ಯಾಪಾರಕ್ಕೆ ಮಾಡಿದ ಹಾನಿ ದೊಡ್ಡದು. ಪೊಗರು ಸಿನಿಮಾದವರಂತೂ ತಮ್ಮ ಸಿನಿಮಾವನ್ನು ಮರುಸಂಕಲಿಸಿ ಬಿಡುಗಡೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೆನ್ಸಾರ್ ಪ್ರಮಾಣ ಪತ್ರವಿದ್ದೂ ತೊಂದರೆ ಅನುಭವಿಸಿದವರ ಪಾಡು ಹೀಗಿರುವಾಗ ಯಾರದ್ದೇ ದೂರು ಬಂದರು ಸಾರ್ವಜನಿಕ ಪ್ರದರ್ಶನದಿಂದ ಸಿನಿಮಾ ಹಿಂತೆಗೆದುಕೊಳ್ಳುವ ಅಧಿಕಾರ ಸರ್ಕಾರದ ಕೈಗೆ ಬಂದರೆ…?
ಈ ನಿಲುವು ಮೂಲತಃ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹೊಡೆತವಾದರೂ ಅದಕ್ಕಿಂತ ದೊಡ್ಡ ಆಘಾತವಾಗುವುದು ಮೀಡಿಯಾ ಮತ್ತು ಮನರಂಜನೆಯ ಮಾಧ್ಯಮಗಳಿಗೆ. ಇಲ್ಲಿ ತಾರೆಯರನ್ನು ಇಟ್ಟುಕೊಂಡು ಕೋಟ್ಯಾಂತರ ಹಣ ಸುರಿದು ಸಿನಿಮಾ ಅಥವಾ ಯಾವುದಾದರೂ ರಿಯಾಲಿಟಿ ಷೋ ತಯಾರಿಸಿದವರಿಗೆ, ಅದು ಪ್ರದರ್ಶನವಾಗಿ ಹೂಡಿದ ಹಣ ಸಂಪೂರ್ಣ ಬರುವುದೇ ಖಾತ್ರಿ ಇಲ್ಲ ಎಂಬ ವ್ಯಾಪಾರದಲ್ಲಿ ತೊಡಗಿರುವವರಿಗೆ, ಅವರ ಕೆಲಸ ಜನರ ಹತ್ತಿರಕ್ಕೆ ಹೋಗಲು ಆರಂಭಿಸಿದಾಗಲೇ ಸರ್ಕಾರವು ಅದನ್ನು ಹಿಂಪಡೆಯುವಂತಾದರೆ ಆಗುವ ನಷ್ಟ ಎಂತಹದು ಎಂದು ಯೋಚಿಸಿ. ಕನ್ನಡದ ಒಬ್ಬ ಸ್ಟಾರ್ ನಟರು ಇರುವ ಸಿನಿಮಾ ಎಂದರೆ ಅದು ಬಿಡುಗಡೆಗೆ ಕೆಲವು ದಿನ ಮುಂಚಿತವಷ್ಟೇ ವ್ಯಾಪಾರಗಳು ನಿಕ್ಕಿಯಾಗಿ, ನಾನ್ನೂರರಿಂದ ಆರುನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ. ನಂತರ ಡಿಜಿಟಲ್ ವೇದಿಕೆಗಳಿಗೆ ಹಾಗೂ ಸ್ಯಾಟಿಲೈಟ್ ಟಿವಿ ವಾಹಿನಿಗಳಿಗೆ ಒಪ್ಪಂದ ಮಾಡಿಕೊಂಡು ಬಿಡುಗಡೆ ಆಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಸಿನಿಮಾ ಬಿಡುಗಡೆಯ ಒಂದೆರಡು ದಿನ ಮುಂಚಿತವಾಗಿ ಒಪ್ಪಂದವಾಗಿ ವ್ಯವಹಾರ ನಡೆಯುತ್ತಾ ಇರುತ್ತದೆ. ಇಂತಹದೊಂದ ವ್ಯಾಪಾರಕ್ಕೆ “ಸರ್ಕಾರದಿಂದ ಸದರಿ ಸಿನಿಮಾದ ಹಿಂತೆಗೆತ” ಎಂಬ ಕಾಯಿದೆ ಜಾರಿಯಾದರೆ ಆಗಬಹುದಾದ ಸಂಕಟ ಯೋಚಿಸಿ. ಅದಾಗಲೇ ಒಪ್ಪಂದ ಮಾಡಿಕೊಳ್ಳುವಾಗ ಶೇಕಡ ಐವತ್ತರಷ್ಟು ಹಣ ನೀಡುವ ವ್ಯಾಪಾರಿಗಳು, ಈಗ ಶೇಕಡ ಹತ್ತು ಹದಿನೈದರಷ್ಟು ಮಾತ್ರ ಮುಂಗಡ ನೀಡಬಹುದು. ಉಳಿದ ಹಣ ಅದೇ ವ್ಯಾಪಾರಿಗಳಿಂದ ಸಿನಿಮಾ ಬಿಡುಗಡೆಯ ನಂತರ ಪಡೆಯುವುದು ಮಹಾ ದೊಡ್ಡ ಸರ್ಕಸ್ಸು ಆಗಿಬಿಡಬಹುದು. ಕರಾರುಗಳಲ್ಲಿ ಈ ʻಹಿಂತೆಗೆತʼದ ವಿವರವನ್ನು ಸಹ ಸೇರಿಸಿಕೊಂಡು, ಅದಕ್ಕೆ ಸಿನಿಮಾ ನಿರ್ಮಾಪಕನೇ ಜವಾಬ್ದಾರಿ ಎಂದು ಷರಾ ಬರೆಯಬೇಕಾಗಬಹುದು. ಆಕಸ್ಮಿಕವಾಗಿ ಯಾವುದಾದರೂ ಸಿನಿಮಾ ತಯಾರಕ ಬಿಡುಗಡೆಗೆ ಮುನ್ನ ಶೇಕಡ ನೂರು ಹಣ ಪಡೆದಿದ್ದು, ಅಂತಹ ಸಿನಿಮಾಕ್ಕೆ ಈ ʻಹಿಂತೆಗೆತʼದ ಹೊಡೆತ ಬಿದ್ದರೆ ಆ ನಿರ್ಮಾಪಕನ ಮೇಲೆ ಬೀಳುವ ಹೊರೆ ಎಂತಹದು ಎಂದು ಯೋಚಿಸಿ. ಇಂತಹ ಸ್ಥಿತಿ ಬಂದರೆ ಯಾವುದೇ ನಿರ್ಮಾಪಕನಾದರೂ ಅದ್ಯಾಕೆ ಸಿನಿಮಾ ಅಥವಾ ಇನ್ಯಾವುದೇ ಷೋ ಮಾಡಲು ಹಣ ಹೂಡಲು ಹಿಂಜರಿಯುವುದು ಸಹಜ. ಹಾಗಾಗಿ ಈ ಲೇಖನದ ಆರಂಭದಲ್ಲಿ ನಾನು ತಿಳಿಸಿದ ಮೆಹತಾ ಅವರ ಹೇಳಿಕೆ ಬಹುಮುಖ್ಯವಾದುದು.
ಪೈರಸಿ ಕಾಯಿದೆ ಎಂಬ ಬೇಕಾದ ಹಲ್ಲುಗಳಿಲ್ಲದ ಕಾಯಿದೆ
ಇನ್ನು ಇದೇ ಕಾಯಿದೆಯಲ್ಲಿ ಇರುವ ಪೈರಸಿಯ ವಿಷಯ ಗಮನಿಸಿ. ಅಲ್ಲಿ ಪೈರಸಿ ಮಾಡುವವರಿಗೆ ಶಿಕ್ಷೆ, ದಂಡ ವಿಧಿಸಲಾಗಿದೆ. ಆದರೆ ಈಗ ಸಿನಿಮಾಗಳು ಅಥವಾ ಟಿವಿ ಸೀರೀಸ್‌ಗಳು ಯಾವುದೋ ಸಿನಿಮಾ ಮಂದಿರದಲ್ಲಿ ನಕಲಾಗುತ್ತಿಲ್ಲ. ಅದು ಯಾವುದೋ ಮನೆಯಲ್ಲಿ, ಯಾವುದೋ ಕಂಪ್ಯೂಟರಿನಲ್ಲಿ ನಕಲಾಗುತ್ತವೆ. ಕ್ಲೌಡ್ ಸಾಧನ ಬಳಸಿ ಸಿನಿಮಾಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಬಂದಿರುವಾಗ ಆ ಕ್ಲೌಡ್ ಎಂಬ ಮಾಹಿತಿಗಳ ಕಣಜಕ್ಕೆ ಖನ್ನ ಹಾಕುವವರು ಅತಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಟೆಲಿಗ್ರಾಮ್ ತರಹದ ಆಪ್‌ಗಳಲ್ಲಿ ಬಹುತೇಕ ಸಿನಿಮಾಗಳು ಮತ್ತು ಟಿವಿ ಸೀರೀಸ್‌ಗಳು ಬಿಡುಗಡೆಯಾದ ಮರುಕ್ಷಣವೇ ದೊರೆಯುತ್ತದೆ. ಇವುಗಳನ್ನು ತಡೆಯುವ ವಿವರ ಈ ಪೈರಸಿ ಕಾಯಿದೆಯಲ್ಲಿ ಸೇರಿಲ್ಲ. ಅದು ಸೇರದೆ ಈಗಿರುವಂತೆ ಕಾಯಿದೆ ಜಾರಿಗೆ ಬಂದರೆ ನಿಜವಾಗಿ ಕಳ್ಳತನ ಮಾಡಿದವನು ಯಾವುದೋ ದೇಶದಲ್ಲಿ ಆರಾಮಾಗಿ ಇರುತ್ತಾನೆ. ಅದನ್ನು ಹಂಚುವ ಪ್ರಯತ್ನ ಮಾಡಿದ ನಮ್ಮೂರಿನ ಹುಂಬ ಹುಡುಗರು ಜೈಲು ಸೇರುತ್ತಾರೆ. ʻಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ತಿಂದವ ಸಿಕ್ಕಿಬಿದ್ದʼ ಎಂಬ ಗಾದೆ ಮಾತಿನಂತಾಗುತ್ತದೆ.
ಮತ್ತೆರಡು ಹೊಸ ಕಾಯಿದೆ, ಕಟ್ಟಳೆಗಳು
ಇದಲ್ಲದೆ ಈಗಿನ ಒಕ್ಕೂಟ ಸರ್ಕಾರವು ಅದಾಗಲೇ “ಡಿಜಿಟಲ್ ಮೀಡಿಯಾ ನಿಯಂತ್ರಣ ಕಾಯಿದೆ” ಎಂಬುದನ್ನು ಜಾರಿಗೆ ತಂದಿದೆ. ಜೊತೆಗೆ ಮೂಲದಲ್ಲಿ ತೆರಿಗೆ ಕಡಿತ ಮಾಡುವ (ಟಿಡಿಎಸ್) ಕಾನೂನಿಗೆ ಶೇಕಡ ೨ರಷ್ಟು ಇದ್ದ ಮಿತಿಯನ್ನು ಶೇಕಡ ೧೦ಕ್ಕೆ ಏರಿಸಿದೆ. ಅದರಿಂದಾಗುವ ಸಮಸ್ಯೆಗಳೇನು ಎಂಬುದನ್ನು ಸಹ ಈ ಲೇಖನದಲ್ಲಿ ಚರ್ಚಿಸಲು ಪ್ರಯತ್ನಿಸುವೆ.
ಡಿಜಿಟಲ್ ಮೀಡಿಯಾ ಎಂಬುದು ಕಳೆದ ಒಂದು ದಶಕದಿಂದ ಪರಿಚಿತವಾಗಿ ಈಗ ಹೆಚ್ಚುಪ್ರಖರವಾಗಿ ಬಳಕೆಯಾಗುತ್ತಿರುವ ಮಾಧ್ಯಮ. ಬಹುತೇಕ ಇತರ ಮಾಧ್ಯಮಗಳು ಸರ್ಕಾರಿ ಕೃಪಪೋಷಿತ ಎಂಬಂತೆ ಕಾಣುತ್ತಿರುವ ಹೊತ್ತಲ್ಲಿ ಯಾವುದೇ ಸುದ್ದಿಯ ನಿಖರ ಮಾಹಿತಿ ಮತ್ತು ವಿಶ್ಲೇಷಣೆ ದೊರೆಯುತ್ತಾ ಇರುವುದು ಡಿಜಿಟಲ್ ಮಾಧ್ಯಮದಲ್ಲಿ ಮಾತ್ರ. ಆದರೆ ಈ ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಲು ಒಕ್ಕೂಟ ಸರ್ಕಾರ ಹೊಸ ಕಾಯಿದೆ ತಂದಿದೆ. ದೇಶದ ಘನತೆಗೆ ಏಕತೆಗೆ ಧಕ್ಕೆ ಬರುವ ಯಾವುದೇ ವಿವರ ಪ್ರಕಟಿಸುವ ಮಾಧ್ಯಮದವನ್ನು ತಡೆಯುವ ಪರಮಾಧಿಕಾರ ಸರ್ಕಾರಕ್ಕೆ ದೊರಕಿದೆ. ಸಂಸತ್ತಿನಲ್ಲಿ ಆಗಲಿ, ಸಾರ್ವಾಜನಿಕ ವೇದಿಕೆಗಳಲ್ಲಿ ಆಗಲಿ ಚರ್ಚಿಸದೆ ಜಾರಿಗೆ ಬರುವ ಇಂತಹ ಕಾಯಿದೆಗಳು ಜನರಿಗೆ ಅಧಿಕೃತ ಮಾಹಿತಿ ಪಡೆಯಲು ಇರುವ ಎಲ್ಲಾ ಮಾರ್ಗಗಳನ್ನು ಮುಚ್ಚುವ ಪ್ರಯತ್ನವಾಗಿಯೇ ಕಾಣುತ್ತಿದೆ. ಇದೇ ಡಿಜಿಟಲ್ ಮೀಡಿಯಾ ನಿಯಂತ್ರಣ ಕಾಯಿದೆ ಬಳಸಿ ಒಟಿಟಿಗಳಲ್ಲಿ ಬರುವ ಸರಣಿಗಳನ್ನು, ಸಿನಿಮಾಗಳನ್ನು ಸಹ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಪ್ರಹಾರವಷ್ಟೇ ಅಲ್ಲ ಸಾರ್ವಜನಿಕರ ಮಾಹಿತಿ ಮತ್ತು ಮನರಂಜನಾ ಹಕ್ಕಿನ ಮೇಲೂ ನಿಯಂತ್ರಣ ಸಾಧಿಸುವ ಯತ್ನವಾಗಿದೆ.
ಇನ್ನೂ ಟಿಡಿಎಸ್ ಸಂಗ್ರಹ ಕುರಿತ ನಿಯಮಗಳಲ್ಲಿ ಆಗಿರುವ ಬದಲಾವಣೆ ಗಮನಿಸಿ. ಈ ವರೆಗೆ ಇದ್ದ ನಿಯಮದಂತೆ ಒಪ್ಪಂದ (ಕಾಂಟ್ರಕ್ಚುಯಲ್ ಆಬ್ಲಿಗೇಷನ್) ಕರಾರಿನ ಪ್ರಕಾರ ನಡೆಯುವ ಕೆಲಸಗಳಿಗೆ ಯಾವುದೇ ವ್ಯಕ್ತಿ/ಕಂಪೆನಿಯು ಶೇಕಡ ೨ರಂತೆ ಟಿಡಿಎಸ್ ಮುರಿದುಕೊಳ್ಳುವ ವ್ಯವಸ್ಥೆ ಇತ್ತು. ಈಗ ಆ ಮಿತಿಯನ್ನು ಶೇಕಡ ೧೦ಕ್ಕೆ ಏರಿಸಲಾಗಿದೆ. ಜೊತೆಗೆ ಮತ್ತೊಂದು ಕರಾರು ಸೇರಿಸಲಾಗಿದೆ, ಹಣ ಸ್ವೀಕರಿಸವ ವ್ಯಕ್ತಿಯು ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಗೆ ವಿವರ ನೀಡದೆ ಇದ್ದಲ್ಲಿ ಶೇಕಡ ೨೦ರಂತೆ ಟಿಡಿಎಸ್ ಮುರಿದುಕೊಳ್ಳಲು ಸೂಚಿಸಲಾಗಿದೆ. ಇದರಿಂದ ಸಿನಿಮಾ ಮತ್ತು ಟೆಲಿವಿಷನ್ ವ್ಯಾಪಾರದಲ್ಲಿ ಆಗುವ ತೊಂದರೆಗಳು ಅಪಾರ. ಸಿನಿಮಾ ತಯಾರಿಕೆಯಲ್ಲಿ ಈವರೆಗೆ ಕ್ಯಾಮೆರಾ, ಇನ್ನಿತರ ಸಲಕರಣೆ/ಸಾಮಗ್ರಿಗಳನ್ನು ಒದಗಿಸುತ್ತಾ ಇದ್ದವರಿಗೆ ಸಿನಿಮಾ ತಯಾರಕ ಶೇಕಡ ೨ರ ಮಿತಿಯಲ್ಲಿ ಟಿಡಿಎಸ್ ಮುರಿಯುವ ಬದಲಿಗೆ ಶೇಕಡ ೧೦ರಲ್ಲಿ ಮುರಿದುಕೊಳ್ಳುವುದು ಮತ್ತು ಸಾಮಗ್ರಿ ನೀಡುವಾಗ ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಕೆ ವಿವರ ನೀಡದೆ ಇದ್ದಲ್ಲಿ ಶೇಕಡ ೨೦ರಷ್ಟು ಟಿಡಿಎಸ್ ಮುರಿದುಕೊಳ್ಳುವುದು ಆರಂಭವಾಗುತ್ತದೆ. ಇದು ಸಿನಿಮಾ ತಯಾರಿಕೆ ಮಾಡಲು ಹೊರಟ ನಿರ್ಮಾಪಕನಿಗೆ ಹೊಸ ತಲೆನೋವೇ ಸರಿ. ಆತ ಹಣ ಕೊಡುವ ಪ್ರತಿಯೊಬ್ಬರ ಬಳಿ ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಕೆ ವಿವರ ಕೊಡಿ ಎನ್ನಬೇಕು. ಅದನ್ನವರು ಕೊಟ್ಟರೆ ಸರಿ. ಇಲ್ಲವಾದರೆ ಶೇಕಡ ೨೦ರ ತೆರಿಗೆ ಮುರಿದುಕೊಂಡದ್ದಕ್ಕೆ ಆ ಹಣ ಪಡೆಯುವವರ ಜೊತೆಗೆ ಆಗುವ ವಾಗ್ವಾದಕ್ಕೆ ಸಿದ್ಧವಾಗಬೇಕು. ಒಂದು ದೊಡ್ಡ ತಾರೆಯ ಸಿನಿಮಾದಲ್ಲಿ ಈ ಬಗೆಯಲ್ಲಿ ಟಿಡಿಎಸ್ ಮೂಲಕ ಹಣ ಪಡೆಯುವವರ ಸಂಖ್ಯೆ ಅದೆಷ್ಟು ದೊಡ್ಡದು ಎಂದು ಗೊತ್ತಿರುವವರಿಗೆ ಸಿನಿಮಾ ತಯಾರಕನಿಗೆ ಎದುರಾಗಿರುವ ಸಮಸ್ಯೆ ಎಂತಹದು ಎಂದು ತಿಳಿದೀತು. ಇನ್ನು ಕ್ಯಾಮೆರಾ, ಮುಂತಾದ ಸಿನಿಮಾ ತಯಾರಿಕೆಗೆ ಬೇಕಾದ ಯಂತ್ರಗಳನ್ನು ಕೊಂಡು ಬಾಡಿಗೆಗೆ ನೀಡುವವನಿಗೆ, ಹಾಕಿದ ಬಂಡವಾಳ ಹಿಂದಿರುಗುವುದು ಎಷ್ಟೋ ವರ್ಷಗಳಾದೀತು. ಈಗ ಆ ಹಣ ಸಂಗ್ರಹಕ್ಕೆ ಈ ಟಿಡಿಎಸ್ ಎಂಬುದು ಶೇಕಡ ೧೦ ಅಥವಾ ೨೦ರಂತೆ ಕಡಿತವಾದರೆ ಆ ವ್ಯಾಪಾರಿಯು ಹೂಡಇದ ಹಣ ಹಿಂಪಡೆಯುವುದಕ್ಕೆ ಮತ್ತಷ್ಟು ವರ್ಷಗಳು ಹೆಚ್ಚಾಗುತ್ತವೆ ಅಷ್ಟೇ. ಇನ್ನು ಟೆಲಿವಿಷನ್ ಲೋಕದಲ್ಲಿ ಸಹ ಕಲಾವಿದರು, ಕಾರ್ಮಿಕರು ಈ ಶೇಕಡ ೧೦ರ ಟಿಡಿಎಸ್ ಕಡಿತವಾಗದಗಲೇ ಗೊಣಗುತ್ತಾರೆ. ಅವರೆಲ್ಲರೂ ಹಿಂದಿನ ಆದಾಯ ತೆರಿಗೆ ವಿವರ ಸಲ್ಲಿಸದೆ ಹೋದರೆ ಟಿಡಿಎಸ್ ಕಡಿತ ಶಖಡ ೨೦ ಎಂದಾದರೆ ಟಿವಿ ಕಾರ್ಯಕ್ರಮ ತಯಾರಕರ ಕಚೇರಿಯ ಮುಂದೆ ರಣರಂಪದ ಜಗಳಗಳು ಆಗುವುದು ಖಚಿತ. ಇನ್ನೂ ಟೆಲಿವಿಷನ್ ವಾಹಿನಿಯವರು ಧಾರಾವಾಹಿಗಳ ನಿರ್ಮಾಪಕರಿಗೆ (ರಾಯಲ್ಟಿ ಕಾರ್ಯಕ್ರಮ ಮಾಡುವವರಿಗೆ) ಈಗ ಟಿಡಿಎಸ್ ಎಂದು ಶೇಕಡ ೨ರಷ್ಟು ಹಣ ಕಡಿತಗೊಳಿಸಿ ಕೊಡುತ್ತಾ ಇದ್ದಾರೆ. ಅದೂ ಸಹ ಶೇಕಡ ೧೦ಕ್ಕೆ ಏರುತ್ತದೆ. ಇಲ್ಲಿರುವ ಸಂಕಟ ಏನೆಂದರೆ ಕಾರ್ಯಕ್ರಮ ಒಂದರ ತಯಾರಿಕೆಗೆ ಬೇಕಾದ ಒಟ್ಟು ಹಣದಲ್ಲಿ ಶೇಕಡ ೯೦ರಷ್ಟು ಹಣವನ್ನೇ ವಾಹಿನಿಯವರು ನೀಡುವುದು. ಇನ್ನು ಶೇಕಡ ಹತ್ತರಷ್ಟು ನಷ್ಟ ಮುಂಚಿತವಾಗಿಯೇ ಖಚಿತ. ಅದನ್ನು ತುಂಬಿಕೊಳ್ಳುವುದು ಟಿವಿ ಕಾರ್ಯಕ್ರಮ ತಯಾರಕ ತನ್ನ ಕಾರ್ಯಕ್ರಮವು ನೂರಿನ್ನೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಬಂದಾಗ ಮಾತ್ರ ಸಾಧ್ಯ. ಇದರ ಜೊತೆಗೆ ಟಿಡಿಎಸ್ ಕಡಿತದ ಲೆಕ್ಕವೂ ಕೂಡಿದರೆ ಆತನ ನಷ್ಟದ ಲೆಕ್ಕ ಹೆಚ್ಚುತ್ತಾ ಹೋಗುತ್ತದೆ. ವರ್ಕಿಂಗ್ ಕ್ಯಾಪಿಟಲ್ ಹೆಚ್ಚಾಗುತ್ತಾ ಸಾಗುತ್ತದೆ. ಅಂತಿಮವಾಗಿ ಆ ಟೆಲಿವಿಷನ್ ಕಾರ್ಯಕ್ರಮ ಮಾಡುವ ವ್ಯಕ್ತಿ/ಕಂಪೆನಿಯು ಹೂಡಿಕೆ ಮತ್ತು ಆದಾಯಗಳ ಅಂತರ ಹೆಚ್ಚಾದಂತೆ ಮುಳುಗುವ ಹಡಗಾಗುತ್ತದೆ.
ಒಟ್ಟಾರೆಯಾಗಿ ಹೀಗೆನ್ನಬಹುದು. ಆಡಳಿತದ ಚುಕ್ಕಾಣಿ ಹಿಡಿಯುವಾಗ “ಲೆಸ್ ಗವರ್ನಮೆಂಟ್, ಮೋರ್ ಗವರ್ನೆನ್ಸ್” ಎಂದ ಘೋಷಣೆ ಮಾಡಿದ ಸರ್ಕಾರವು ಅತಿ ಹೆಚ್ಚು ಕಾಯಿದೆಗಳನ್ನು ತಂದಿರಿಸುತ್ತಾ ಅತಿ ಹೆಚ್ಚು ಸರ್ಕಾರಿ ನಿಯಂತ್ರಣವನ್ನು ತರುತ್ತಿದೆ. ಇದರಿಂದಾಗಿ ಈ ದೇಶದ ಬಹುಮುಖ್ಯ ಉದ್ಯಮಗಳಲ್ಲಿ ಒಂದಾದ ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳು ದೊಡ್ಡ ಸಂಕಟಕ್ಕೆ ಒಳಗಾಗಲಿವೆ ಅಥವಾ ಕಳೆದೆರಡು ದಶಕದಿಂದ ಕಡಿಮೆ ಆಗಿದ್ದ ಮನರಂಜನಾ ಮಾಧ್ಯಮದಲ್ಲಿನ ಕಾಳಧನ ವ್ಯವಹಾರ ದುಪ್ಪಟ್ಟು ಅಥವಾ ಮುಪ್ಪಟ್ಟು ಹೆಚ್ಚಾಗಲಿದೆ. ಇದರ ಜೊತೆಗೆ ಸಿನಿಮಾ ತಯಾರಕರ ಮೇಲೆ “ಸರ್ಕಾರದ ಹಿಂತೆಗೆತ” ಎಂಬ ತೂಗುಕತ್ತಿಯು ಸದಾ ತೂಗಲಿದೆ.
* * *
– ಬಿ. ಸುರೇಶ
೪ ಜುಲೈ ೨೦೨೧
ಇತ್ತೀಚಿನ ಪ್ರತಿಕ್ರಿಯೆಗಳು…