Posts Tagged 'ಸಿನಿಮಾ'

ನಾಗಮಂಡಲದ ಕಪ್ಪಣ್ಣ – ಕನ್ನಡ ಸಾಂಸ್ಕೃತಿಕ ಲೋಕದ ಕಪ್ಪಣ್ಣ

ಗಿರೀಶ್‌ ಕಾರ್ನಾಡರ “ನಾಗಮಂಡಲ” ನಾಟಕದಲ್ಲಿ ಅಪ್ಪಣ್ಣ-ಕಪ್ಪಣ್ಣ ಎಂಬ ಎರಡು ಪಾತ್ರಗಳು ಬರುತ್ತವೆ.  ಆ ಕಪ್ಪಣ್ಣ ಮೇಲ್ನೋಟಕ್ಕೆ ಹುಂಬನಂತೆ ಕಾಣುವವನು. ತನ್ನ ಕಣ್ಣಿಲ್ಲದ ತಾಯಿಯನ್ನು ಬೆನ್ನ ಮೇಲೆ ಹೊತ್ತು ಇಡೀ ಊರಿನ ತುಂಬಾ ಓಡಾಡುವವನು. ಊರಿನ ಎಲ್ಲರ ಬಗ್ಗೆ ಕಕ್ಕುಲಾತಿ ಇರುವವನು. ಎಲ್ಲರ ಸಮಸ್ಯೆಗಳನ್ನು ಕಣ್ಣಿಲ್ಲದ ತಾಯಿಗೆ ತಿಳಿಸುವವನು. ತಾಯಿ ಸೂಚಿಸಿದ ಪರಿಹಾರವನ್ನು ಜಾರಿಗೆ ತರಲು ಪ್ರಯತ್ನಿಸುವವನು. ಒಟ್ಟಾರೆಯಾಗಿ ಇಡೀ ಊರಿನ ಎಲ್ಲರ ಸುಖವನ್ನೂ ಚಿಂತಿಸುವವನು. ಒಡೆದು ಹೋದ ರಾಣಿಯ ಕುಟುಂಬವನ್ನು ಒಂದು ಮಾಡಲು ತನ್ನ ಕೈಲಾದ ಪ್ರಯತ್ನ ಮಾಡುವವನು.

ನಮ್ಮ ನಡುವಿನ ಅಪರೂಪದ ಸಂಘಟಕ, ಬೆಳಕು ವಿನ್ಯಾಸಕ, ರಂಗ ನೇಪಥ್ಯ ಪ್ರವೀಣ, ಜನಪದ ಜಾತ್ರೆಗಳ ಆಯೋಜಕ ಹೀಗೆ ಹಲವು ಬಿರುದುಗಳನ್ನು ನೀಡಬಹುದಾದ ಶ್ರೀನಿವಾಸ್‌ ಜಿ ಆಲಿಯಾಸ್‌ ಕಪ್ಪಣ್ಣ ಅವರು ಗಿರೀಶ್‌ ಕಾರ್ನಾಡರ ನಾಗಮಂಡಲದಲ್ಲಿ ಬರುವ ಕಪ್ಪಣ್ಣನ ಪಾತ್ರಕ್ಕೆ ಅನ್ವರ್ಥಕ. ಕಪ್ಪಣ್ಣ ಕರ್ನಾಟಕದ ಸಾಂಸ್ಕೃತಿಕ ಚಳವಳಿ ಎಂಬ ತಾಯಿಯನ್ನು ಬೆನ್ನ ಮೇಲೆ ಹೊತ್ತು ನಾಡೆಲ್ಲಾ ತಿರುಗಿದ್ದಾರೆ, ತಿರುಗುತ್ತಿದ್ದಾರೆ. ಸಮಸ್ಯೆಗಳು ಕಂಡಾಗ ತಮ್ಮ ಬೆನ್ನ ಮೇಲಿರುವ ತಾಯಿಯ ಮಾತಿನಂತೆ ಪರಿಹಾರಗಳನ್ನು ರೂಪಿಸಿದ್ದಾರೆ. ಅವುಗಳೆಲ್ಲವೂ ಎಲ್ಲರ ಮೆಚ್ಚುಗೆ ಪಡೆದಿಲ್ಲದೆ ಇರಬಹುದು. ಹಲವರು ಕಪ್ಪಣ್ಣನವರು ರೂಪಿಸಿದ ಪರಿಹಾರಗಳಿಗೆ ತದ್ವಿರುದ್ಧ ನಿಲುವಿನವರು ಇರಬಹುದು. ಆದರೆ ಕಪ್ಪಣ್ಣ ಅವರ ಪ್ರಯತ್ನವನ್ನು ಯಾರೂ ಅಲ್ಲಗಳೆಯಲಾರರು. ಹೀಗಾಗಿಯೇ ಈಗ ಎಪ್ಪತ್ತೈದರ ಹಂತ ತಲುಪಿರುವ ಕಪ್ಪಣ್ಣ ಕನ್ನಡ ಸಾಂಸ್ಕೃತಿಕ ಲೋಕದ ಸಾಕ್ಷಿಪ್ರಜ್ಞೆಗಳಲ್ಲಿ ಒಬ್ಬರಾಗಿ ನಡೆದಾಡುವ ರಂಗಚರಿತ್ರಕಾರರಾಗಿ ನಮ್ಮ ನಡುವೆ ಇದ್ದಾರೆ ಎಂದರೆ ತಪ್ಪಾಗಲಾರದು.

ನಾನವರನ್ನು ನನ್ನ ಬಾಲ್ಯ ಕಾಲದಿಂದ ನೋಡುತ್ತಾ ಬೆಳೆದಿದ್ದೇನೆ. ಎಪ್ಪತ್ತರ ದಶಕದಲ್ಲಿನ ನಿರಂತರ ರಂಗಚಟುವಟಿಕೆಯಲ್ಲಿ ದಡಬಡನೆ ಓಡಾಡುತ್ತಾ ಹಲವು ಕೆಲಸಗಳನ್ನು ಮಾಡುತ್ತಿದ್ದ ಶ್ರೀನಿವಾಸ್‌ ಜಿ ಕಪ್ಪಣ್ಣ ನಾನು ಎಂಬತ್ತರ ದಶಕದಲ್ಲಿ ಸ್ವತಃ ರಂಗಚಟುವಟಿಕೆ ಮಾಡುವ ಕಾಲಕ್ಕೆ ವಾರ್ತಾ ಇಲಾಖೆಯಲ್ಲಿ ಕಲಾವಿದರನ್ನು ಕಟ್ಟಿಕೊಂಡು ನಾಡಿನಾದ್ಯಂತ ರಂಗಪ್ರದರ್ಶನಗಳನ್ನು ಸಂಘಟಿಸುತ್ತಿದ್ದರು. ಮೊದಲಿಗೆ ಇವರೊಬ್ಬ ಸರ್ಕಾರಿ ಅಧಿಕಾರಿ ಎಂದು ಭಾವಿಸಿದ್ದ ನನ್ನಂತಹವರಿಗೆ ಅಚ್ಚರಿಯಾಗುವಂತೆ ಹವ್ಯಾಸೀ ರಂಗಭೂಮಿಯ ಹಲವು ಕಾರ್ಯಕ್ರಮಗಳ ಹಿಂದೆ ಕಪ್ಪಣ್ಣ ಇರುತ್ತಿದ್ದರು. ಅಷ್ಟು ಯಾಕೆ ಸಿನಿಮಾಗಳಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಕೊಡುವ ಕಾರ್ಯಕ್ರಮದಲ್ಲೂ ಇವರದೇ ಕೆಲಸ. ಎಂಎಸ್‌ಐಎಲ್‌ ನವರು ನಡೆಸುವ ಸುಗಮ ಸಂಗೀತದ ಕಾರ್ಯಕ್ರಮದ ರೂವಾರಿ ಕಪ್ಪಣ್ಣ. ವಿಧಾನಸೌಧದ ಮುಂದೆ ವಾರಾಂತ್ಯದಲ್ಲಿ ಆಗುತ್ತಿದ್ದ ಜನಪದ ಜಾತ್ರೆಯ ರೂವಾರಿಯೂ ಕಪ್ಪಣ್ಣ. ಹಲವು ಊರುಗಳಲ್ಲಿ ಹಲವು ಹೆಸರುಗಳಲ್ಲಿ ಆಗುತ್ತಿದ್ದ ಉತ್ಸವಗಳ ಬೆನ್ನೆಲುಬು ಕಪ್ಪಣ್ಣ. ಸರ್ಕಾರದ ಯಾವುದೋ ನಿಲುವು ಅಥವಾ ಯಾವುದೋ ಸಮಕಾಲೀನ ಕೇಡಿನ ವಿರುದ್ಧ ಟೌನ್‌ಹಾಲ್‌ ಎದುರು ಸಾಹಿತಿ ಕಲಾವಿದರು ಒಟ್ಟಿಗೆ ಸೇರಿ ಧಿಕ್ಕಾರ ಕೂಗಿದರೆ ಅದರ ವ್ಯವಸ್ಥೆಯ ಹಿಂದೆ ಇರುತ್ತಿದ್ದವರು ಕಪ್ಪಣ್ಣ. ಹೀಗೆ ವರುಷದ ಎಲ್ಲಾ ದಿನವೂ ಕರುನಾಡಿನ ಸಾಂಸ್ಕೃತಿಕ ಚಟುವಟಿಕೆಗೆ ತಮ್ಮ ಜೀವವನ್ನು ಮುಡಿಪಾಗಿಟ್ಟ ಅಪರೂಪದ ಮಾನವೀಯ ಹೃದಯಿ ನಮ್ಮ ಕಪ್ಪಣ್ಣ.

ಸಂಘಟಕ ಕಪ್ಪಣ್ಣ

ಎಂಬತ್ತರ ದಶಕದ ಬಹುಮುಖ್ಯ ನಾಟಕೋತ್ಸವಗಳಲ್ಲಿ ನಾಟ್ಯಸಂಘ ಥಿಯೇಟರ್‌ ಸೆಂಟರ್‌ ವ್ಯವಸ್ಥೆ ಮಾಡುತ್ತಿದ್ದ ರಂಗೋತ್ಸವ ಮುಖ್ಯವಾದುದು. ನನಗೆ ವೈಯಕ್ತಿಕವಾಗಿ ಈ ನಾಟಕೋತ್ಸವ ಇಷ್ಟವಾಗಲು ಇದ್ದ ಕಾರಣ ಈ ಉತ್ಸವಲದಲ್ಲಿ ನಾಟಕಗಳಿಗೆ ನಗದು ಬಹುಮಾನ ಕೊಡುತ್ತಿದ್ದರು ಮತ್ತು ನಗದು ಬಹುಮಾನ ನಮಗಾಗ ಬಹುಮುಖ್ಯ ವಿಷಯವಾಗಿತ್ತು. ನಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿದ್ದ ನಾಟಕ ತಂಡದ ಮೂಲಕ ನಾನು ಎರಡು ಸಲ ಈ ರಂಗೋತ್ಸವದಲ್ಲಿ ಪಾಲ್ಗೊಂಡು ಬೇರೆ ಬೇರೆ ಬಗೆಯ ಬಹುಮಾನ ಪಡೆದಿದ್ದೆ. ಆಗೆಲ್ಲ ಈ ಉತ್ಸವಕ್ಕೆ ಅರ್ಜಿ ಸಲ್ಲಿಸಲು ಹೋದರೆ ಎದುರಾಗುತ್ತಿದ್ದವರು ಕಪ್ಪಣ್ಣ. ಅವರ ನಿಜವಾದ ಹೆಸರು ಶ್ರೀನಿವಾಸ್‌ ಎಂಬುದು ಅರಿವಾಗುವ ಹೊತ್ತಿಗೆ ನನ್ನಂತಹ ಹಲವರಿಗೆ ಈ ಕಪ್ಪಣ್ಣ ಎಂಬ ಹೆಸರು ಎಷ್ಟು ಬಾಯಿಪಾಠ ಆಗಿತ್ತೆಂದರೆ ಈಗಲೂ ಯಾರಾದರೂ ಕಪ್ಪಣ್ಣ ಅನ್ನುವ ಬದಲಿಗೆ ಬೇರೆ ಹೆಸರಿಂದ ಅವರನ್ನು ಕರೆದರೆ ನಮಗೆ ಗುರುತು ಹತ್ತದೆ ಹೋಗಬಹುದು.

ನಾನು ಆಗಷ್ಟೇ ಅಭಿನಯತರಂಗ ಶಾಲೆಯಲ್ಲಿ ರಂಗತರಬೇತಿ ಪಡೆದಿದ್ದವನು ಹೀಗಾಗಿ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಬಗ್ಗೆ ಮಹಾ ಅಂಜಿಕೆ, ಹಿಂಜರಿಕೆ. ಆದರೆ ಹೇಗಾದರೂ ಈ ನಾಟ್ಯಸಂಘದ ನಾಟಕೋತ್ಸವದಲ್ಲಿ ನನ್ನ ನಾಟಕ ಪ್ರದರ್ಶನ ಆಗುವಂತೆ ಮಾಡಬೇಕೆಂಬ ಹಂಬಲ. ಆ ದಿನದ ಫ್ಯಾಕ್ಟರಿಯ ಕೆಲಸ ಮುಗಿಸಿ ಸಂಜೆ ನಾಲ್ಕರ ಸುಮಾರಿಗೆ ಹೆದರುತ್ತಲೇ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲು ಹತ್ತುತ್ತಿದೆ. ಬಾಗಿಲಲ್ಲೇ ಎದುರಾದವರು ಕಪ್ಪಣ್ಣನವರೇ. ನಗೆ ಅವರು ಯಾರೆಂದು ಗೊತ್ತು. ಅವರಿಗೆ ನಾನ್ಯಾರು ಎಂದು ತಿಳಿದಿಲ್ಲದ ಕಾಲ ಅದು. ನಾನು ಅಂಜುತ್ತಾ ಅವರ ಬಳಿ ನಾಟ್ಯಸಂಘ, ಅರ್ಜಿ ಎಂದು ತೊದಲುತ್ತಾ ಹೇಳಿದೆನೆಂದೆನಿಸುತ್ತದೆ. ಅವರು ಕಲಾಕ್ಷೇತ್ದ ಆವರಣದಲ್ಲಿ ಮಾಡಿದ್ದ ಹಂಗಾಮಿ ಕಚೇರಿಯ ದಿಕ್ಕು ತಿಳಿಸಿದರು. ಅಲ್ಲಿಗೆ ದಡಬಡಿಸಿ ಹೋದೆ. ಅಲ್ಲಿದ್ದವರು ಚಂದ್ರಶೇಖರ ಉಷಾಲ ಮತ್ತು ವಿಶ್ವಪ್ರಸಾದ್‌ ಎಂಬ ಆನಂತರ ನನ್ನ ಗೆಳೆಯರಾದವರು. ಅವರು ನೀಡಿದ ಅರ್ಜಿ ಎಲ್ಲಾ ತುಂಬಿಸಿ ಕೊಟ್ಟೆ. ಅದನ್ನೋದಿದ ಚಂದ್ರಶೇಖರ ಉಷಾಲ ಅವರು “ಸಾರ್‌, ಸಾರ್”‌ ಎಂದು ಯಾರನ್ನೋ ಕರೆದರು. ಬಂದದ್ದು ಕಪ್ಪಣ್ಣ ಅವರು. ಅವರಿಗೆ ನನ್ನ ಅರ್ಜಿ ಕೊಟ್ಟು ಈ ಹುಡುಗ ನಾಟಕ ತಾನೇ ಬರೆದು ನಿರ್ದೇಶನ ಕೂಡ ಮಾಡ್ತಾ ಇದಾನೆ ಎಂದು ಉಷಾಲ ಅವರು ಹೇಳಿದ್ದಷ್ಟೇ ಕಪ್ಪಣ್ಣ ಅವರು ಅತೀವ ಕಾಳಜಿಯಿಂದ ಏನು ನಾಟಕ? ಹೇಗೆ ಮಾಡಿಸುತ್ತಾ ಇದ್ದೀಯ? ಎಂದೆಲ್ಲಾ ಕೇಳಿದರು. ನಾನು ನನ್ನ ಬಗಲ ಚೀಲದಲ್ಲಿದ್ದ ಅರೆಬರೆ ನಾಟಕದ ಸ್ಕ್ರಿಪ್ಟು ಮತ್ತು ಆ ನಾಟಕದ ಸಜ್ಜಿಕೆಗೆ ಮತ್ತು ಪಾತ್ರಗಳಿಗೆ ಎಂದು ಜೋಡಿಸಿಟ್ಟುಕೊಂಡಿದ್ದ ಫೋಟೊಗಳು, ಇತರೆ ಸಿದ್ಧತೆಗಳನ್ನು ತೋರಿಸಿದೆ. ಅವರದನ್ನೆಲ್ಲಾ ನೋಡುತ್ತಾ ನೋಡುತ್ತಾ “ಏಯ್‌ ಈ ಹುಡುಗಂಗೆ ಕಾಫಿ ಕೊಡುಸ್ರೊ” ಎಂದು ಸಂಭ್ರಮಿಸುತ್ತಾ ಸುತ್ತಲೂ ಇದ್ದವರಿಗೆಲ್ಲಾ ಇವನು ನಾಟಕಕಾರ, ನಿರ್ದೇಶಕ ಎಂದು ಪರಿಚಯಿಸಿದರು. ಅವರು ಸಂಭ್ರಮ ಪಡುತ್ತಾ ಇದ್ದಾಗ ನಾನು ನಾಟಕ ಹೇಗೆ ಮಾಡಿಸುತ್ತೇನೋ ಎಂಬ ಭಯ ನನಗಿತ್ತು ಎಂಬ ಮಾತು ಬೇರೆ. ಆದರೆ ಕಪ್ಪಣ್ಣ ಅವರು ಹೀಗೆ ನನ್ನಂತಹವನಿಗೆ ಮಾತ್ರ ಅಲ್ಲ ಯಾವುದೇ ಹೊಸ ಕಲಾವಿದ, ನಾಟಕಕಾರ, ಜನಪದ ಅಭ್ಯಾಸಿ ಸಿಕ್ಕರೆ ಇದೇ ಬಗೆಯಲ್ಲಿ ಸಂಭ್ರಮಿಸುತ್ತಾರೆ. ಅಂತಹವರನ್ನು ವೇದಿಕೆಗೆ ಹತ್ತಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಇದು ಕಪ್ಪಣ್ಣ ಅವರ ವಿಶಾಲ ಹೃದಯಿ ಗುಣ.

ಹಲವು ವರ್ಷಗಳ ನಂತರ ನಾನು ಮೈನಾ ಚಂದ್ರು ಅವರ ತಂಡಕ್ಕೆ ರಂ.ಶ್ರೀ. ಮುಗಳಿ ಅವರ ಕಾದಂಬರಿ ಆಧರಿಸಿದ “ಅಗ್ನಿವರ್ಣ” ಎಂಬ ನಾಟಕ ಮಾಡಿಸಲು ಸಿದ್ಧತೆ ಮಾಡುತ್ತಿದ್ದೆ. ಆ ನಾಟಕದಲ್ಲಿ ತೊಗಲುಗೊಂಬೆ ಆಟವನ್ನು ಬಳಸಬೇಕಿತ್ತು. ಯಾರನ್ನು ಸಂಪರ್ಕಿಸುವುದು? ಹೇಗೆ ತಂಡಕ್ಕೆ ಅದನ್ನು ಕಲಿಸುವುದು ಎಂಬ ಗೊಂದಲದಲ್ಲಿದ್ದೆ. ಆಗ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್‌ ಆಗಿದ್ದವರು ಕಪ್ಪಣ್ಣ. ಕಾರಂತರ ಕ್ಯಾಂಟೀನ್‌ ಬಳಿ ನಾನು ಇನ್ಯಾರ ಜೊತೆಗೊ ಆಡುವ ಮಾತು ಕೇಳಿಸಿಕೊಂಡಿದ್ದರು ಅನಿಸುತ್ತದೆ. ರೇವಣ್ಣ ಅವರನ್ನು ನಮ್ಮ ತಾಲೀಮಿನ ಜಾಗಕ್ಕೆ ಕಳಿಸಿ ನನ್ನನ್ನು ಬರಹೇಳಿದರು. ಆಗ ರವೀಂದ್ರ ಕಲಾಕ್ಷೇತ್ರ ಕಟ್ಟದಲ್ಲಿಯೇ ಇದ್ದ ಅಕಾಡೆಮಿಯ ಕಚೇರಿಗೆ ಹೋದವನಿಗೆ ಬೆಳಗಲ್‌ ವೀರಣ್ಣ ಅವರ ಬಗ್ಗೆ ತಿಳಿಸಿ, ಅವರು ಇಂತಹ ದಿನದಿಂದ ಇಂತಹ ದಿನಕ್ಕೆ ಬೆಂಗಳೂರಿಗೆ ಬರುತ್ತಾರೆ. ನಿಮ್ಮ ತಂಡಕ್ಕೆ ತೊಗಲುಗೊಂಬೆ ಕಲಿಸುತ್ತಾರೆ ಎಂದರು. ನಾನು ಹಣದ ವ್ಯವಸ್ಥೆಗೆ ಏನು ಮಾಡುವುದು ಎಂಬ ಗೊಂದಲದಲ್ಲಿದ್ದಾಗ ಈ ತೊಗಲುಗೊಂಬೆ ಶಿಬಿರವನ್ನು ನಿಮ್ಮ ತಂಡಕ್ಕಾಗಿ ನಾಟಕ ಅಕಾಡೆಮಿ ವ್ಯವಸ್ಥೆ ಮಾಡಿದೆ ಎಂದು ನಮ್ಮ ತಂಡದ ಸಂಕಷ್ಟ ನಿವಾರಿಸಿದ್ದರು. ಹೀಗೆ ಯಾವುದೇ ರಂಗತಂಡವು ಮಾಡುವ ಹೊಸ ಪ್ರಯೋಗಗಳಿಗೆ ಕಪ್ಪಣ್ಣ ಬೆಂಬಲವಾಗಿ ನಿಲ್ಲುತ್ತಿದ್ದರು ಎಂಬುದಕ್ಕೆ ಹಲವು ಉದಾಹರಣೆಗಳನ್ನು ಆಯಾ ತಂಡದವರು ನೀಡಬಹುದು.

ಕೆಲ ವರ್ಷಗಳ ಹಿಂದೆ ನಾನು ಬಳ್ಳಾರಿಯ ಮಾರ್ಗವಾಗಿ ದರೋಜಿ ಈರಮ್ಮ ಅವರ ಊರಿಗೆ ಹೋಗಿದ್ದೆ. ಅಲ್ಲಿ ಸಿಕ್ಕ ಹಲವು ಜನಪದ ಕಲಾವಿದರ ಜೊತೆಗೆ ಮಾತುಕತೆ ಆಡುವಾಗ ಪ್ರತಿಯೊಬ್ಬರೂ ಹೇಳಿದ್ದು ಒಂದೇ ಹೆಸರು. “ಕಪ್ಪಣ್ಣ ಅವರಿಂದ ನಮಗೆ ನಿಯಮಿತ ಆದಾಯ ಬರುವಂತಾಯಿತು. ಅವರು ವ್ಯವಸ್ಥೆ ಮಾಡಿದ ಜನಪದ ಜಾತ್ರೆಗಳು ನಮ್ಮ ಬದುಕಿಗೆ ನೆಮ್ಮದಿ ಒದಗಿಸದವು. ಈಗ ನಮಗೆ ಯಾವುದೇ ಕಾರ್ಯಕ್ರಮವಾದರೂ ಆಹ್ವಾನ ಬರುತ್ತದೆ. ಜೊತೆಗೆ ನಮ್ಮ ಗೌರವಧನ ಕೂಡ ನಿಗದಿಯಾಗಿದೆ.” ಹೀಗೆ ಯಾವುದೋ ಮೂಲೆಯಲ್ಲಿ ಇರುವ ಜನಪದ ಕಲಾವಿದರಿಗೆ ಅವಕಾಶ ಸಿಗುವಂತೆ ಮಾಡುವುದಷ್ಟೇ ಅಲ್ಲ, ಅವರ ಬದುಕಿಗೆ ನೆಮ್ಮದಿಯನ್ನು ಸಹ ಒದಗಿಸುವ ಕೆಲಸ ಯೋಜಿಸುವುದು ಸಣ್ಣ ವಿಷಯವಲ್ಲ. ಕಪ್ಪಣ್ಣ ಅವರು ಹಾಕಿಕೊಟ್ಟ ಮಾರ್ಗ ಮುಂದೆ ಹಲವು ಸಂಘಟಕರಿಗೆ ಜನಪದ ಮೇಳಗಳನ್ನು ಮಾಡಲು ದಾರಿ ಆಯಿತು. ಅಷ್ಟೇ ಅಲ್ಲ, ಹಲವು ರಾಜಕೀಯ ಪಕ್ಷಗಳು ಸಹ ಈ ಜನಪದ ಕಲಾವಿದರನ್ನು ತಮ್ಮ ಮೆರವಣಿಗೆಗೆ, ಮೇಳಕ್ಕೆ ಬಳಸಿಕೊಳ್ಳುವಂತಾಯಿತು. ಒಂದೊಳ್ಳೆಯದು ಹಲವು ದಾರಿಗಳನ್ನು ತೆರೆಯುತ್ತದೆ ಎಂಬುದಕ್ಕೆ ಇದೂ ಒಂದು ಉದಾಹರಣೆಯಷ್ಟೇ.

ನಾನಾಗ ಟಿವಿ ಕಾರ್ಮಿಕರ ಸಂಘಟನೆಗೆ ಕಾರ್ಯದರ್ಶಿಯಾಗಿದ್ದೆ. ಟಿವಿ ಎಂಬ ಮಾಧ್ಯಮಕ್ಕೆ ಕರುನಾಡಲ್ಲಿ ೨೫ ವರ್ಷ ತುಂಬಿದಾಗ ಅದನ್ನು ಸಂಭ್ರಮಿಸಲು ಹಲವು ಊರುಗಳಲ್ಲಿ ಕಾರ್ಯಕ್ರಮ ಯೋಜಿಸಿದ್ದೆ. ಬಾಗಲಕೋಟೆ, ಬಳ್ಳಾರಿ, ಮೈಸೂರು, ದಾವಣಗೆರೆಗಳಲ್ಲಿ ಬೃಹತ್‌ ಕಾರ್ಯಕ್ರಮಗಳು. ಆ ಊರುಗಳಿಗೆ ಹೋಗುವ ಮುನ್ನ ನಾನು ಭೇಟಿಯಾದದ್ದು ಕಪ್ಪಣ್ಣ ಅವರನ್ನ. ಅವರು ಆಯಾ ಊರಿನಲ್ಲಿ ಯಾರನ್ನು ಸಂಪರ್ಕಿಸಬೇಕು? ಯಾರು ನೇಪಥ್ಯಕ್ಕೆ ಒದಗುತ್ತಾರೆ? ಯಾರು ಸಂಘಟನಾ ಕೆಲಸಕ್ಕೆ ಆಗುತ್ತಾರೆ? ಯಾರು ಕುರ್ಚಿ, ಪೆಂಡಾಲು ವ್ಯವಸ್ಥೆ ಮಾಡುತ್ತಾರೆ? ಯಾರು ಊಟ, ವಸತಿ ನೋಡಿಕೊಳ್ಳುತ್ತಾರೆ ಎಂದು ಪ್ರತಿ ಊರಿನ ಜನರ ಪಟ್ಟಿ ಕೊಟ್ಟರು. ಆ ಎಲ್ಲಾ ಹೆಸರುಗಳ ಪಟ್ಟಿ ಹಿಡಿದು ಆಯಾ ಊರಿಗೆ ಹೋಗಿ ನಮ್ಮ ಕಾರ್ಯಕ್ರಮ ಆಯೋಜಿಸುವಾಗಲೇ ತಿಳಿದದ್ದು ಅವರೆಲ್ಲರೂ ಕಪ್ಪಣ್ಣನವರ ಜೊತೆಗೆ ಕೆಲಸ ಮಾಡಿ ತಯಾರಾದ ಸಂಘಟನಾ ಪಡೆ ಎಂಬುದು. ಈ ಬಗೆಯಲ್ಲಿ ಎಲ್ಲಾ ಊರುಗಳಲ್ಲಿ ರಂಗಭೂಮಿಗೆ ಮಾತ್ರವಲ್ಲ ಯಾವುದೇ ಕಾರ್ಯಕ್ರಮ ಮಾಡುವುದಕ್ಕೆ ಬೃಹತ್‌ ಪಡೆ ತಯಾರು ಮಾಡುವುದು ಸಣ್ಣ ಮಾತಲ್ಲ. ಇದು ಕಪ್ಪಣ್ಣ ಎಷ್ಟು ಕೆಲಸ ಮಾಡಿದ್ದಾರೆ ಎಂಬುದಕ್ಕೆ ಸ್ಪಷ್ಟವಾದ ಕನ್ನಡಿ ಎನ್ನಬಹುದು.

ಕರ್ನಾಟಕ ಸರ್ಕಾರವು ಸಿನಿಮಾಗಳಿಗೆ ಪ್ರಶಸ್ತಿಗಳನ್ನು ಕೊಡುವ ವಾರ್ಷಿಕ ಚಟುವಟಿಕೆ ಬಹುಕಾಲದಿಂದ ಮಾಡುತ್ತಿದೆ. ಆದರೆ ಅದು ಯಾವಾಗಲೂ ಅವ್ಯವಸ್ಥೆಯ ಆಗರವಾಗಿರುತ್ತಿತ್ತು. ಯಾರಿಗೋ ಹೋಗಬೇಕಾದ ಫಲಕ ಇನ್ಯಾರಿಗೋ? ಯಾರದೋ ಪ್ರಶಸ್ತಿ ಮತ್ಯಾರಿಗೋ? ಪ್ರಶಸ್ತಿ ವಿಜೇತರಿಗೆ ವೇದಿಕೆಯಲ್ಲಿ ಜಾಗವಿಲ್ಲ? ಹೀಗೆಲ್ಲಾ ಆಗುತ್ತಿತ್ತು. ಸುಮಾರು ಎಂಬತ್ತರ ದಶಕದಲ್ಲಿ ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಕಪ್ಪಣ್ಣ ನೋಡಿಕೊಳ್ಳಲು ಆರಂಭಿಸಿದರು. ಅಲ್ಲಿಂದಾಚೆಗೆ ಈ ಕಾರ್ಯಕ್ರಮಕ್ಕೆ ಅಚ್ಚುಕಟ್ಟುತನ, ಶಿಸ್ತು ಬಂದಿತು. ಯಾರು ಎಲ್ಲಿ ಕೂರಬೇಕು? ಪ್ರಶಸ್ತಿ ಫಲಕಗಳು ಎಲ್ಲಿರಬೇಕು? ಯಾರ ಬಗ್ಗೆ ನಿರೂಪಕರು ಏನು ಮಾತಾಡಬೇಕು? ವೇದಿಕೆಯ ಹಿನ್ನೆಲೆ ಹೇಗಿರಬೇಕು? ಈ ಎಲ್ಲ ವಿವರಗಳನ್ನು ಸ್ವತಃ ಹಿಂದೆಯೇ ನಿಂತು ಸರಿಪಡಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಕ್ಕೆ ಒಂದು ಘನತೆ ಬರುವಂತೆ ಮಾಡಿದವರು ಕಪ್ಪಣ್ಣ. ಅವರು ವಾರ್ತಾ ಇಲಾಖೆಯಲ್ಲಿಯೇ ಎಪ್ಪತ್ತರ ದಶಕದಿಂದ ಕೆಲಸ ಮಾಡುತ್ತಿದ್ದರು. ಆದರೆ ಈ ಕೆಲಸದ ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ಕಪ್ಪಣ್ಣ ಅವರ ಹೆಗಲೇರಿದ್ದು ಬಹಳ ತಡವಾಗಿ. ಅದರಿಂದಾಗಿ ಪ್ರಶಸ್ತಿ ಪಡೆದವರಿಗೂ ಮತ್ತು ಕೊಡುವವರಿಗೂ ಘನತೆ ಸಿಕ್ಕಂತಾಯಿತು. ಕಪ್ಪಣ್ಣ ಅವರ ನಿವೃತ್ತಿಯ ನಂತರ ರಾಜ್ಯ ಸರ್ಕಾರ ನೀಡಿದ ಪ್ರಶಸ್ತಿ ಪ್ರದಾನದಲ್ಲಿ ಮತ್ತೆ ಕಾಣಿಸಿಕೊಂಡ ಅದೇ ಅವ್ಯವಸ್ಥೆಯು ಕಪ್ಪಣ್ಣ ಅವರ ಕೊಡುಗೆ ಎಂತಹದು ಎಂಬುದನ್ನು ನೆನಪಿಸಿತ್ತು.

ಹೀಗೇ ಕಪ್ಪಣ್ಣನವರ ವಿಶ್ವರೂಪವನ್ನು ಅರಿಯಲು ನನ್ನ ಬದುಕಿನ ಕೆಲವು ಉದಾಹರಣೆ ಹೇಳಬಹುದು. ಸಮಕಾಲೀನ ರಂಗಭೂಮಿಯ ಯಾರನ್ನಾದರೂ ಕೇಳಿದರೆ ಈ ವಿಶ್ವರೂಪದ ಇನ್ನೂ ಹಲವು ಹತ್ತುಮುಖಗಳು ದೊರೆಯಬಹುದು. ಇಂತಹ ನಮ್ಮ ಕಪ್ಪಣ್ಣ ಆಲಿಯಾಸ್‌ ಜಿ. ಶ್ರೀನಿವಾಸ್‌ಗೆ ಎಪ್ಪತ್ತೈದಾಗಿದೆ. ಅವರ ಉಳಿದ ಅವಧಿಯಲ್ಲಿ ಮತ್ತಷ್ಟು ದರ್ಶನಗಳನ್ನು ನೀಡುವ ಭಾಗ್ಯ ನಮಗೆ ದೊರೆಯಲಿ. ಕಪ್ಪಣ್ಣ ಕನ್ನಡದ ಸಾಂಸ್ಕೃತಿಕ ಚಳವಳಿಗಳನ್ನು “ನಾಗಮಂಡಲ” ನಾಟಕದಂತೆ ಬೆನ್ನ ಮೇಲೆ ಹೊತ್ತು ಕಾಪಾಡುತ್ತಿರಲಿ. ಆ ಹಾದಿಯಲ್ಲಿ ಮತ್ತಷ್ಟು ಜನ ಮರಿ ಕಪ್ಪಣ್ಣಗಳನ್ನು ಸೃಷ್ಟಿಸುವಂತಾಗಲಿ.

– *** –

ಸಿನಿಮಾ ತಯಾರಕರ ತಲೆಯ ಮೇಲೆ ತೂಗಲಿರುವ ಹೊಸ ಕತ್ತಿ

“ಹಾಗಾದರೆ ನಾನೀಗ ದುಡ್ಡು ಹೂಡಿ ಬಿಡುಗಡೆ ಮಾಡುವ ಸಿನಿಮಾವು ಪ್ರದರ್ಶನ ಮಂದಿರದಲ್ಲಿ ಉಳಿಯುತ್ತದೆ ಎಂಬುದಕ್ಕೆ ಖಾತ್ರಿ ಕೊಡುವವರು ಯಾರು” ಎಂದು ಪ್ರಶ್ನೆ ಕೇಳಿದವರು ಮಹೇಶ್‌ ಮೆಹತಾ, ತಮಿಳು-ಮಲೆಯಾಳಿ ಚಿತ್ರಗಳ ನಿರ್ಮಾಪಕರು ಹಾಗೂ ವಿತರಕರು. ಈ ಪ್ರಶ್ನೆ ಅವರು ಕೇಳಿದ್ದು ಸಿಐಐ (ಸೆಂಟ್ರಲ್‌ ಕಾನ್‌ಫಿಡೆರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರೀಸ್‌) ನ ಮಾಧ್ಯಮ ವಲಯದ ಸಭೆಯಲ್ಲಿ. ಈ ಪ್ರಶ್ನೆ ಬರುವವರೆಗೆ ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಸಿನಿಮಾಟೋಗ್ರಾಫ್‌ ಆಕ್ಟ್‌ಗೆ ಸಂಬಂಧಿಸಿದ ತಿದ್ದುಪಡಿ ಕುರಿತು ಮಾತಾಡುತ್ತಾ ಇದ್ದ ಎಲ್ಲರೂ ಹಲವು ನಿಮಿಷಗಳ ಕಾಲ ಮೌನವಾಗಿದ್ದು ಸುಳ್ಳಲ್ಲ. ಇಂತಹ ಪ್ರಶ್ನೆ ಎದುರಾಗಲು ಕಾರಣವಾಗಿದ್ದು, ೧೯೫೨ರ ಸಿನಿಮಾಟೋಗ್ರಾಫ್‌ ಕಾಯ್ದೆಯ ತಿದ್ದುಪಡಿಗಳನ್ನು ಮಾಡಿ, ಜನರ ಅಭಿಪ್ರಾಯ/ಭಿನ್ನಾಭಿಪ್ರಾಯ ಮಂಡಿಸಲು ಜುಲೈ ೫ನೇಯ ತಾರೀಖನ್ನು ಗೊತ್ತುಪಡಿಸಿದ ಒಕ್ಕೂಟ ಸರ್ಕಾರದ ಆದೇಶ.  

ಭಾರತದಲ್ಲಿ ಚಲಿಸುವ ಚಿತ್ರಗಳನ್ನು ನಿರ್ವಹಿಸಲು/ನಿಯಂತ್ರಿಸಲು ೧೯೫೨ರಲ್ಲಿಯೇ ಸಿನಿಮಾಟೋಗ್ರಾಫ್‌ ಆಕ್ಟ್‌ ಎಂಬುದು ಜಾರಿಗೆ ಬಂದಿತ್ತು. ಆ ಕಾಯಿದೆಯೂ ಈ ಹಿಂದೆ ಇದ್ದ ವಸಾಹತುಶಾಹಿ ಸರ್ಕಾರವು ಮಾಡಿದ್ದ ಕಾಯಿದೆಗಳಿಗೆ ಸಣ್ಣಪುಟ್ಟ ತಿದ್ದುಪಡಿ ಮಾಡಿ ಹೊಸ ಹೆಸರಲ್ಲಿ ಜಾರಿಗೆ ಬಂದಿತ್ತು. ಅದಾಗಿ ಅರವತ್ತು ವರ್ಷಗಳ ನಂತರ ಅಂದರೆ ೨೦೧೩ರಲ್ಲಿ ಮುಕುಂದ್‌ ಮುದ್ಗಲ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಸದರಿ ಕಾಯಿದೆಯನ್ನು ಕಾಲೋಚಿತಗೊಳಿಸಲು ಸಲಹೆಗಳನ್ನು ನೀಡಲು ಸೂಚಿಸಲಾಯಿತು. ನಂತರ ೨೦೧೬ರಲ್ಲಿ ಶ್ಯಾಮ್‌ಬೆನಗಲ್‌ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿ ಸಲಹೆಗಳನ್ನು ಆಹ್ವಾನಿಸಿತ್ತು. ಸದರಿ ಸಮಿತಿಗಳು ೨೦೧೮ರಲ್ಲಿಯೇ ವರದಿಗಳನ್ನು ನೀಡಿತ್ತಾದರೂ ಆ ವರದಿಯ ಬಗ್ಗೆ ಗಮನ ಹರಿಸದೆ ಸರ್ಕಾರಗಳು ಸುಮ್ಮನಿದ್ದವು. ಈಗ ೨೦೨೧ರಲ್ಲಿ ದಿಢೀರನೆ ಆ ವರದಿಯಲ್ಲಿನ ಕೆಲವು ಸಲಹೆಗಳನ್ನು ಸ್ವೀಕರಿಸಿ, ಮತ್ತಷ್ಟು ಹೊಸ ವಿಚಾರಗಳನ್ನು ಸೇರಿಸಿ “ಸಿನಿಮಾಟೋಗ್ರಾಫ್‌ ಆಕ್ಟ್‌ ೨೦೨೧” ಎಂಬ ತಿದ್ದುಪಡಿಯನ್ನು ಸಾರ್ವಜನಿಕರ ಮತ್ತು ಫಲಾನುಭವಿಗಳ ಸಲಹೆಗೆ ಎಂದು ಹೊರಡಿಸಲಾಗಿದೆ. ಅದಾಗಲೇ ಗೊತ್ಥಾಗಿರುವಂತೆ ಬರಲಿರುವ ಸಂಸತ್ತಿನ ಸಭೆಯಲ್ಲಿ ಈ ಕಾಯಿದೆ ಜಾರಿಗೆ ಬರಲಿದೆ.

ಕಾಯಿದೆಯಲ್ಲಿ ಏನಿದೆ

ಈ ತಿದ್ದುಪಡಿಯನ್ನು ಕುರಿತಂತೆ ಅದಾಗಲೇ ದೇಶಾದ್ಯಂತ ಎದ್ದಿರುವ ವಾದ, ವಿವಾದಗಳು ತಿಳಿದಿರುತ್ತವೆಯಾದರೂ, ಈ ಲೇಖನದ ಕಾರಣಕ್ಕಾಗಿ, ಸ್ಥೂಲವಾಗಿ ತಿದ್ದುಪಡಿಗಳಲ್ಲಿನ ಕೆಲವು ಅಂಶಗಳನ್ನು ತಿಳಿಯೋಣ.

೧. ಸಿನಿಮಾಟೋಗ್ರಾಫ್‌ ಕಾಯಿದೆ ಸೆಕ್ಷನ್‌ (೬)ರ ಸೆಕ್ಷನ್‌ ಒಂದನ್ನು ಸಂಪೂರ್ಣವಾಗಿ ತೆಗೆದುಹಾಕುವುದು.

೨.‌ ಸೆಕ್ಷನ್ (೬)ರ ಉಪವಿಭಾಗಕ್ಕೆ ಹೊಸ ವಿವರ ಸೇರಿಸಿ, ಕಾಯಿದೆಯ ಸೆಕ್ಷನ್‌ ೫೮ (೧)ರ ಉಲ್ಲಂಘನೆಯನ್ನು ತಡೆಯಲು ಸಿಬಿಎಫ್‌ಸಿಯು ನೀಡಿದ ಪ್ರಮಾಣಪತ್ರವನ್ನು ಹಿಂಪಡೆಯುವ ಅಧಿಕಾರವು ಸರ್ಕಾರಕ್ಕೆ ಇರುವಂತೆ ಮಾಡುವುದು ಅಥವಾ ಸಿಬಿಎಫ್‌ಸಿಯ ಅಧ್ಯಕ್ಷರ ಮೂಲಕ ಸದರಿ ಪ್ರಮಾಣೀಕರಣವನ್ನು ಮರುಪರಿಶೀಲಿಸಲು ಸೂಚಿಸುವುದು.

೩. ಪೈರಸಿ ತಡೆಗಟ್ಟಲು ಕಾನೂನುಬಾಹಿರವಾಗಿ ಯಾವುದೇ ಚಿತ್ರದ ನಕಲು ಮಾಡುವುದನ್ನು ಅಪರಾಧ ಎಂದು ಗುರುತಿಸುವುದು ಮತ್ತು ಆ ಬಗೆಯ ನಕಲುಗಳನ್ನು ಹಂಚುವ, ಪ್ರಸಾರ ಮಾಡುವವರಿಗೆ ದಂಡ ವಿಧಿಸುವುದು.

ಮೇಲ್ನೋಟಕ್ಕೆ ಈ ತಿದ್ದುಪಡಿಗಳು ಅಡ್ಡಿಇಲ್ಲ ಎನಿಸಿದರೂ ಇದರೊಳಗಡೆ ಯಾವುದೇ ಬಿಡುಗಡೆ ಆದ ಸಿನಿಮಾವನ್ನು, ಯಾವುದೇ ವ್ಯಕ್ತಿ/ಸಂಸ್ಥೆಯ ದೂರು ಬಂದಲ್ಲಿ, ಅಂತಹ ಸಿನಿಮಾದ ಸಿಬಿಎಫ್‌ಸಿ ಪ್ರಮಾಣ ಪತ್ರವನ್ನು ಹಿಂಪಡೆವ ಅಥವಾ ಮರುಪರಿಶೀಲಿಸುವ ಅಧಿಕಾರವನ್ನು ಒಕ್ಕೂಟ ಸರ್ಕಾರ ಪಡೆಯಲಿದೆ. ಇದು ಅಪಾಯ. ಮೊದಲಿಗೆ ಸರ್ಕಾರವೇ ನೇಮಿಸಿಸ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಎಂಬ ಸ್ವಾಯತ್ತ ಸಂಸ್ಥೆಯ ನೆತ್ತಿಯ ಮೇಲೆ ಸ್ವತಃ ಸರ್ಕಾರವೇ ಕೂರುವುದು ಒಂದು ವಿಷಯವಾದರೆ, ಸಿನಿಮಾ ಒಂದರ ಬಗ್ಗೆ ಯಾರದ್ದೇ ಕ್ಲುಲಕ ಭಿನ್ನಾಭಿಪ್ರಾಯ ಇದ್ದರೂ ಸರ್ಕಾರ ಆ ಸಿನಿಮಾಕ್ಕೆ ನೀಡಿದ ಸರಾವಜನಿಕ ಪ್ರದರ್ಶನ ಪ್ರಮಾಣ ಪತ್ರವನ್ನು ಹಿಂಪಡೆಯುವ ಅಥವಾ ಮರುಪರಿಶೀಲಿಸುವ ಅಧಿಕಾರ ಪಡೆಯುತ್ತಿದೆ ಎಂಬುದು ನೇರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒದಗಿದ ಹೊಸ ಆತಂಕವೇ ಆಗಿದೆ.

ಈ ಹಿಂದೆ “ಪದ್ಮಾವತ್”‌ ತರಹದ ಚಿತ್ರಗಳನ್ನು ಕುರಿತು ಬಂದಂತಹ ಒಂದು ಗುಂಪಿನ ವಿರೋಧವನ್ನೇ ಗಮನಿಸಿ. ಆ ಸಿನಿಮಾವನ್ನು ಸ್ವತಃ ನೋಡದೆ ಸಿನಿಮಾ ಬಿಡುಗಡೆಗೆ ಅಡ್ಡಿ ಉಂಟು ಮಾಡಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಸದರಿ ವಿರೋಧಿಗಳು ತಿಳಿಸಿದ್ದ ಯಾವ ವಿವರಗಳೂ ಇರಲಿಲ್ಲ. ಇದರಿಂದಾಗಿ ಆ ಸಿನಿಮಾದ ವ್ಯಾಪಾರದಲ್ಲಿ ಅದೆಷ್ಟು ದೊಡ್ಡ ನಷ್ಟವಾಯಿತು ಎಂಬುದು ಅಂತರ್ಜಾಲ ತಾಣಗಳಲ್ಲಿ ಎಲ್ಲರಿಗೂ ಸಿಗುತ್ತದೆ. ಇಲ್ಲಿ ಪ್ರದರ್ಶನ ಪ್ರಮಾಣ ಪಡೆದು ಸಿನಿಮಾ ಬಿಡುಗಡೆ ಮಾಡಲಾಗಿದೆ ಎಂಬ ರಕ್ಷಣೆಯಾದರೂ ಆ ಸಿನಿಮಾ ತಯಾರಕರಿಗೆ ಇತ್ತು. ಈಗ ಆ ರಕ್ಷಣೆಯ ನೆತ್ತಿಯ ಮೇಲೆ ಸ್ವತಃ ಸರ್ಕಾರವೇ ಬಂದು ಕೂರಲು ಹೊರಟಿದೆ.  ಬಿಡುಗಡೆಯಾದ ಸಿನಿಮಾ ಒಂದು ಪ್ರದರ್ಶನ ಮಂದಿರದಲ್ಲಿ ಇರುವಾಗಲೇ ಸರ್ಕಾರವೂ ಆ ಸಿನಿಮಾವನ್ನು ಹಿಂಪಡೆಯಬಹುದು ಎಂದಾದರೆ ಆಗ ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಲ್ಲ ಜೊತೆಗೆ ಸಿನಿಮಾ ತಯಾರಕನಿಗೆ ಹೂಡಿದ ಹಣಕ್ಕೆ ಸಿಗುವ ರಕ್ಷಣೆಯಾದರೂ ಏನು ಎಂಬ ಪ್ರಶ್ನೆ ಬರುತ್ತದೆ. ಕೋಟ್ಯಾಂತರ ರೂಪಾಯಿ ಹಣ ಹೂಡಿ, ಸಿನಿಮಾ ತಯಾರಿಸಿ, ವಿತರಕರು/ಪ್ರದರ್ಶಕರಿಂದ ಮುಂಗಡ ಹಣ ಪಡೆದು ಸಿನಿಮಾ ಬಿಡುಗಡೆ ಮಾಡುವ ತಯಾರಕನು ಈಗ ಸಿಬಿಎಫ್‌ಸಿಯ ಪ್ರಮಾಣ ಪತ್ರ ಸಿಕ್ಕಿದೊಡನೆ ಬಿಡುಗಡೆ ಮಾಡಬೇಕು ಅಥವಾ ಸಾರ್ವಜನಿಕರು ಯಾರೂ ದೂರು ಸಲ್ಲಿಸದಿರಲಿ ಎಂದು ಪ್ರಾರ್ಥನೆ ಮಾಡುತ್ತಾ ಕೂರಬೇಕೋ? ಹಾಗೆಯೇ ಗಮನಿಸಿದರೆ ಕಳೆದ ಏಳು ವರ್ಷಗಳಲ್ಲಿ ಇಡೀ ದೇಶವೇ ಹಲವು ಬಣಗಳಾಗಿ ಒಡೆದಿದೆ. ಹೀಗಾಗಿ ಒಂದು ಬಣದವರು ತಯಾರಿಸಿದ ಸಿನಿಮಾ ಕುರಿತು ಮತ್ತೊಂದು ಬಣದವರು ವಿರೋಧ ಮಾಡುತ್ತಲೇ ಇರುತ್ತಾರೆ. ಇದರ ಜೊತೆಗೆ ಅಂತಹ ಭಿನ್ನಾಭಿಪ್ರಾಯ ಆಧರಿಸಿ ಸರ್ಕಾರವೂ ಸಹ ಬಿಡುಗಡೆ ಆದ ಸಿನಿಮಾ ಹಿಂಪಡೆಯುವ ಅಧಿಕಾರ ಪಡೆದರೆ ಏನಾಗಬಹುದು ಎಂದು ಊಹಿಸಲು ಭಾರೀ ಕಲ್ಪನೆ ಏನೂ ಬೇಕಾಗಿಲ್ಲ. ಈ ಹಿಂದೆ ವಿಶ್ವರೂಪಂ ಸಿನಿಮಾಕ್ಕೆ ಬಂದ ವಿರೋಧಗಳು, ಈಚೆಗೆ ಪೊಗರು ಎಂಬ ಸಿನಿಮಾಕ್ಕೆ ಒಂದು ಜಾತಿಯ ಜನ ವ್ಯಕ್ತಪಡಿಸಿದ ವಿರೋಧಗಳು ಆಯಾ ಸಿನಿಮಾಗಳ ವ್ಯಾಪಾರಕ್ಕೆ ಮಾಡಿದ ಹಾನಿ ದೊಡ್ಡದು. ಪೊಗರು ಸಿನಿಮಾದವರಂತೂ ತಮ್ಮ ಸಿನಿಮಾವನ್ನು ಮರುಸಂಕಲಿಸಿ ಬಿಡುಗಡೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೆನ್ಸಾರ್‌ ಪ್ರಮಾಣ ಪತ್ರವಿದ್ದೂ ತೊಂದರೆ ಅನುಭವಿಸಿದವರ ಪಾಡು ಹೀಗಿರುವಾಗ ಯಾರದ್ದೇ ದೂರು ಬಂದರು ಸಾರ್ವಜನಿಕ ಪ್ರದರ್ಶನದಿಂದ ಸಿನಿಮಾ ಹಿಂತೆಗೆದುಕೊಳ್ಳುವ ಅಧಿಕಾರ ಸರ್ಕಾರದ ಕೈಗೆ ಬಂದರೆ…?

ಈ ನಿಲುವು ಮೂಲತಃ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹೊಡೆತವಾದರೂ ಅದಕ್ಕಿಂತ ದೊಡ್ಡ ಆಘಾತವಾಗುವುದು ಮೀಡಿಯಾ ಮತ್ತು ಮನರಂಜನೆಯ ಮಾಧ್ಯಮಗಳಿಗೆ. ಇಲ್ಲಿ ತಾರೆಯರನ್ನು ಇಟ್ಟುಕೊಂಡು ಕೋಟ್ಯಾಂತರ ಹಣ ಸುರಿದು ಸಿನಿಮಾ ಅಥವಾ ಯಾವುದಾದರೂ ರಿಯಾಲಿಟಿ ಷೋ ತಯಾರಿಸಿದವರಿಗೆ, ಅದು ಪ್ರದರ್ಶನವಾಗಿ ಹೂಡಿದ ಹಣ ಸಂಪೂರ್ಣ ಬರುವುದೇ ಖಾತ್ರಿ ಇಲ್ಲ ಎಂಬ ವ್ಯಾಪಾರದಲ್ಲಿ ತೊಡಗಿರುವವರಿಗೆ, ಅವರ ಕೆಲಸ ಜನರ ಹತ್ತಿರಕ್ಕೆ ಹೋಗಲು ಆರಂಭಿಸಿದಾಗಲೇ ಸರ್ಕಾರವು ಅದನ್ನು ಹಿಂಪಡೆಯುವಂತಾದರೆ ಆಗುವ ನಷ್ಟ ಎಂತಹದು ಎಂದು ಯೋಚಿಸಿ. ಕನ್ನಡದ ಒಬ್ಬ ಸ್ಟಾರ್‌ ನಟರು ಇರುವ ಸಿನಿಮಾ ಎಂದರೆ ಅದು ಬಿಡುಗಡೆಗೆ ಕೆಲವು ದಿನ ಮುಂಚಿತವಷ್ಟೇ ವ್ಯಾಪಾರಗಳು ನಿಕ್ಕಿಯಾಗಿ, ನಾನ್ನೂರರಿಂದ ಆರುನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ. ನಂತರ ಡಿಜಿಟಲ್‌ ವೇದಿಕೆಗಳಿಗೆ ಹಾಗೂ ಸ್ಯಾಟಿಲೈಟ್‌ ಟಿವಿ ವಾಹಿನಿಗಳಿಗೆ ಒಪ್ಪಂದ ಮಾಡಿಕೊಂಡು ಬಿಡುಗಡೆ ಆಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಸಿನಿಮಾ ಬಿಡುಗಡೆಯ ಒಂದೆರಡು ದಿನ ಮುಂಚಿತವಾಗಿ ಒಪ್ಪಂದವಾಗಿ ವ್ಯವಹಾರ ನಡೆಯುತ್ತಾ ಇರುತ್ತದೆ. ಇಂತಹದೊಂದ ವ್ಯಾಪಾರಕ್ಕೆ “ಸರ್ಕಾರದಿಂದ ಸದರಿ ಸಿನಿಮಾದ ಹಿಂತೆಗೆತ” ಎಂಬ ಕಾಯಿದೆ ಜಾರಿಯಾದರೆ ಆಗಬಹುದಾದ ಸಂಕಟ ಯೋಚಿಸಿ. ಅದಾಗಲೇ ಒಪ್ಪಂದ ಮಾಡಿಕೊಳ್ಳುವಾಗ ಶೇಕಡ ಐವತ್ತರಷ್ಟು ಹಣ ನೀಡುವ ವ್ಯಾಪಾರಿಗಳು, ಈಗ ಶೇಕಡ ಹತ್ತು ಹದಿನೈದರಷ್ಟು ಮಾತ್ರ ಮುಂಗಡ ನೀಡಬಹುದು. ಉಳಿದ ಹಣ ಅದೇ ವ್ಯಾಪಾರಿಗಳಿಂದ ಸಿನಿಮಾ ಬಿಡುಗಡೆಯ ನಂತರ ಪಡೆಯುವುದು ಮಹಾ ದೊಡ್ಡ ಸರ್ಕಸ್ಸು ಆಗಿಬಿಡಬಹುದು. ಕರಾರುಗಳಲ್ಲಿ ಈ ʻಹಿಂತೆಗೆತʼದ ವಿವರವನ್ನು ಸಹ ಸೇರಿಸಿಕೊಂಡು, ಅದಕ್ಕೆ ಸಿನಿಮಾ ನಿರ್ಮಾಪಕನೇ ಜವಾಬ್ದಾರಿ ಎಂದು ಷರಾ ಬರೆಯಬೇಕಾಗಬಹುದು. ಆಕಸ್ಮಿಕವಾಗಿ ಯಾವುದಾದರೂ ಸಿನಿಮಾ ತಯಾರಕ ಬಿಡುಗಡೆಗೆ ಮುನ್ನ ಶೇಕಡ ನೂರು ಹಣ ಪಡೆದಿದ್ದು, ಅಂತಹ ಸಿನಿಮಾಕ್ಕೆ ಈ ʻಹಿಂತೆಗೆತʼದ ಹೊಡೆತ ಬಿದ್ದರೆ ಆ ನಿರ್ಮಾಪಕನ ಮೇಲೆ ಬೀಳುವ ಹೊರೆ ಎಂತಹದು ಎಂದು ಯೋಚಿಸಿ. ಇಂತಹ ಸ್ಥಿತಿ ಬಂದರೆ ಯಾವುದೇ ನಿರ್ಮಾಪಕನಾದರೂ ಅದ್ಯಾಕೆ ಸಿನಿಮಾ ಅಥವಾ ಇನ್ಯಾವುದೇ ಷೋ ಮಾಡಲು ಹಣ ಹೂಡಲು ಹಿಂಜರಿಯುವುದು ಸಹಜ. ಹಾಗಾಗಿ ಈ ಲೇಖನದ ಆರಂಭದಲ್ಲಿ ನಾನು ತಿಳಿಸಿದ ಮೆಹತಾ ಅವರ ಹೇಳಿಕೆ ಬಹುಮುಖ್ಯವಾದುದು.

ಪೈರಸಿ ಕಾಯಿದೆ ಎಂಬ ಬೇಕಾದ ಹಲ್ಲುಗಳಿಲ್ಲದ ಕಾಯಿದೆ

ಇನ್ನು ಇದೇ ಕಾಯಿದೆಯಲ್ಲಿ ಇರುವ ಪೈರಸಿಯ ವಿಷಯ ಗಮನಿಸಿ. ಅಲ್ಲಿ ಪೈರಸಿ ಮಾಡುವವರಿಗೆ ಶಿಕ್ಷೆ, ದಂಡ ವಿಧಿಸಲಾಗಿದೆ. ಆದರೆ ಈಗ ಸಿನಿಮಾಗಳು ಅಥವಾ ಟಿವಿ ಸೀರೀಸ್‌ಗಳು ಯಾವುದೋ ಸಿನಿಮಾ ಮಂದಿರದಲ್ಲಿ ನಕಲಾಗುತ್ತಿಲ್ಲ. ಅದು ಯಾವುದೋ ಮನೆಯಲ್ಲಿ, ಯಾವುದೋ ಕಂಪ್ಯೂಟರಿನಲ್ಲಿ ನಕಲಾಗುತ್ತವೆ. ಕ್ಲೌಡ್‌ ಸಾಧನ ಬಳಸಿ ಸಿನಿಮಾಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಬಂದಿರುವಾಗ ಆ ಕ್ಲೌಡ್‌ ಎಂಬ ಮಾಹಿತಿಗಳ ಕಣಜಕ್ಕೆ ಖನ್ನ ಹಾಕುವವರು ಅತಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಟೆಲಿಗ್ರಾಮ್‌ ತರಹದ ಆಪ್‌ಗಳಲ್ಲಿ ಬಹುತೇಕ ಸಿನಿಮಾಗಳು ಮತ್ತು ಟಿವಿ ಸೀರೀಸ್‌ಗಳು ಬಿಡುಗಡೆಯಾದ ಮರುಕ್ಷಣವೇ ದೊರೆಯುತ್ತದೆ. ಇವುಗಳನ್ನು ತಡೆಯುವ ವಿವರ ಈ ಪೈರಸಿ ಕಾಯಿದೆಯಲ್ಲಿ ಸೇರಿಲ್ಲ. ಅದು ಸೇರದೆ ಈಗಿರುವಂತೆ ಕಾಯಿದೆ ಜಾರಿಗೆ ಬಂದರೆ ನಿಜವಾಗಿ ಕಳ್ಳತನ ಮಾಡಿದವನು ಯಾವುದೋ ದೇಶದಲ್ಲಿ ಆರಾಮಾಗಿ ಇರುತ್ತಾನೆ. ಅದನ್ನು ಹಂಚುವ ಪ್ರಯತ್ನ ಮಾಡಿದ ನಮ್ಮೂರಿನ ಹುಂಬ ಹುಡುಗರು ಜೈಲು ಸೇರುತ್ತಾರೆ. ʻಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ತಿಂದವ ಸಿಕ್ಕಿಬಿದ್ದʼ ಎಂಬ ಗಾದೆ ಮಾತಿನಂತಾಗುತ್ತದೆ.

ಮತ್ತೆರಡು ಹೊಸ ಕಾಯಿದೆ, ಕಟ್ಟಳೆಗಳು

ಇದಲ್ಲದೆ ಈಗಿನ ಒಕ್ಕೂಟ ಸರ್ಕಾರವು ಅದಾಗಲೇ “ಡಿಜಿಟಲ್‌ ಮೀಡಿಯಾ ನಿಯಂತ್ರಣ ಕಾಯಿದೆ” ಎಂಬುದನ್ನು ಜಾರಿಗೆ ತಂದಿದೆ. ಜೊತೆಗೆ ಮೂಲದಲ್ಲಿ ತೆರಿಗೆ ಕಡಿತ ಮಾಡುವ (ಟಿಡಿಎಸ್)‌ ಕಾನೂನಿಗೆ ಶೇಕಡ ೨ರಷ್ಟು ಇದ್ದ ಮಿತಿಯನ್ನು ಶೇಕಡ ೧೦ಕ್ಕೆ ಏರಿಸಿದೆ. ಅದರಿಂದಾಗುವ ಸಮಸ್ಯೆಗಳೇನು ಎಂಬುದನ್ನು ಸಹ ಈ ಲೇಖನದಲ್ಲಿ ಚರ್ಚಿಸಲು ಪ್ರಯತ್ನಿಸುವೆ.

ಡಿಜಿಟಲ್‌ ಮೀಡಿಯಾ ಎಂಬುದು ಕಳೆದ ಒಂದು ದಶಕದಿಂದ ಪರಿಚಿತವಾಗಿ ಈಗ ಹೆಚ್ಚುಪ್ರಖರವಾಗಿ ಬಳಕೆಯಾಗುತ್ತಿರುವ ಮಾಧ್ಯಮ. ಬಹುತೇಕ ಇತರ ಮಾಧ್ಯಮಗಳು ಸರ್ಕಾರಿ ಕೃಪಪೋಷಿತ ಎಂಬಂತೆ ಕಾಣುತ್ತಿರುವ ಹೊತ್ತಲ್ಲಿ ಯಾವುದೇ ಸುದ್ದಿಯ ನಿಖರ ಮಾಹಿತಿ ಮತ್ತು ವಿಶ್ಲೇಷಣೆ ದೊರೆಯುತ್ತಾ ಇರುವುದು ಡಿಜಿಟಲ್‌ ಮಾಧ್ಯಮದಲ್ಲಿ ಮಾತ್ರ. ಆದರೆ ಈ ಡಿಜಿಟಲ್‌ ಮಾಧ್ಯಮಗಳನ್ನು ನಿಯಂತ್ರಿಸಲು ಒಕ್ಕೂಟ ಸರ್ಕಾರ ಹೊಸ ಕಾಯಿದೆ ತಂದಿದೆ. ದೇಶದ ಘನತೆಗೆ ಏಕತೆಗೆ ಧಕ್ಕೆ ಬರುವ ಯಾವುದೇ ವಿವರ ಪ್ರಕಟಿಸುವ ಮಾಧ್ಯಮದವನ್ನು ತಡೆಯುವ ಪರಮಾಧಿಕಾರ ಸರ್ಕಾರಕ್ಕೆ ದೊರಕಿದೆ. ಸಂಸತ್ತಿನಲ್ಲಿ ಆಗಲಿ, ಸಾರ್ವಾಜನಿಕ ವೇದಿಕೆಗಳಲ್ಲಿ ಆಗಲಿ ಚರ್ಚಿಸದೆ ಜಾರಿಗೆ ಬರುವ ಇಂತಹ ಕಾಯಿದೆಗಳು ಜನರಿಗೆ ಅಧಿಕೃತ ಮಾಹಿತಿ ಪಡೆಯಲು ಇರುವ ಎಲ್ಲಾ ಮಾರ್ಗಗಳನ್ನು ಮುಚ್ಚುವ ಪ್ರಯತ್ನವಾಗಿಯೇ ಕಾಣುತ್ತಿದೆ. ಇದೇ ಡಿಜಿಟಲ್‌ ಮೀಡಿಯಾ ನಿಯಂತ್ರಣ ಕಾಯಿದೆ ಬಳಸಿ ಒಟಿಟಿಗಳಲ್ಲಿ ಬರುವ ಸರಣಿಗಳನ್ನು, ಸಿನಿಮಾಗಳನ್ನು ಸಹ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಪ್ರಹಾರವಷ್ಟೇ ಅಲ್ಲ ಸಾರ್ವಜನಿಕರ ಮಾಹಿತಿ ಮತ್ತು ಮನರಂಜನಾ ಹಕ್ಕಿನ ಮೇಲೂ ನಿಯಂತ್ರಣ ಸಾಧಿಸುವ ಯತ್ನವಾಗಿದೆ.

ಇನ್ನೂ ಟಿಡಿಎಸ್‌ ಸಂಗ್ರಹ ಕುರಿತ ನಿಯಮಗಳಲ್ಲಿ ಆಗಿರುವ ಬದಲಾವಣೆ ಗಮನಿಸಿ. ಈ ವರೆಗೆ ಇದ್ದ ನಿಯಮದಂತೆ ಒಪ್ಪಂದ (ಕಾಂಟ್ರಕ್ಚುಯಲ್‌ ಆಬ್ಲಿಗೇಷನ್)‌ ಕರಾರಿನ ಪ್ರಕಾರ ನಡೆಯುವ ಕೆಲಸಗಳಿಗೆ ಯಾವುದೇ ವ್ಯಕ್ತಿ/ಕಂಪೆನಿಯು ಶೇಕಡ ೨ರಂತೆ ಟಿಡಿಎಸ್‌ ಮುರಿದುಕೊಳ್ಳುವ ವ್ಯವಸ್ಥೆ ಇತ್ತು. ಈಗ ಆ ಮಿತಿಯನ್ನು ಶೇಕಡ ೧೦ಕ್ಕೆ ಏರಿಸಲಾಗಿದೆ. ಜೊತೆಗೆ ಮತ್ತೊಂದು ಕರಾರು ಸೇರಿಸಲಾಗಿದೆ, ಹಣ ಸ್ವೀಕರಿಸವ ವ್ಯಕ್ತಿಯು ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಗೆ ವಿವರ ನೀಡದೆ ಇದ್ದಲ್ಲಿ ಶೇಕಡ ೨೦ರಂತೆ ಟಿಡಿಎಸ್‌ ಮುರಿದುಕೊಳ್ಳಲು ಸೂಚಿಸಲಾಗಿದೆ. ಇದರಿಂದ ಸಿನಿಮಾ ಮತ್ತು ಟೆಲಿವಿಷನ್‌ ವ್ಯಾಪಾರದಲ್ಲಿ ಆಗುವ ತೊಂದರೆಗಳು ಅಪಾರ. ಸಿನಿಮಾ ತಯಾರಿಕೆಯಲ್ಲಿ ಈವರೆಗೆ ಕ್ಯಾಮೆರಾ, ಇನ್ನಿತರ ಸಲಕರಣೆ/ಸಾಮಗ್ರಿಗಳನ್ನು ಒದಗಿಸುತ್ತಾ ಇದ್ದವರಿಗೆ ಸಿನಿಮಾ ತಯಾರಕ ಶೇಕಡ ೨ರ ಮಿತಿಯಲ್ಲಿ ಟಿಡಿಎಸ್‌ ಮುರಿಯುವ ಬದಲಿಗೆ ಶೇಕಡ ೧೦ರಲ್ಲಿ ಮುರಿದುಕೊಳ್ಳುವುದು ಮತ್ತು ಸಾಮಗ್ರಿ ನೀಡುವಾಗ ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಕೆ ವಿವರ ನೀಡದೆ ಇದ್ದಲ್ಲಿ ಶೇಕಡ ೨೦ರಷ್ಟು ಟಿಡಿಎಸ್‌ ಮುರಿದುಕೊಳ್ಳುವುದು ಆರಂಭವಾಗುತ್ತದೆ. ಇದು ಸಿನಿಮಾ ತಯಾರಿಕೆ ಮಾಡಲು ಹೊರಟ ನಿರ್ಮಾಪಕನಿಗೆ ಹೊಸ ತಲೆನೋವೇ ಸರಿ. ಆತ ಹಣ ಕೊಡುವ ಪ್ರತಿಯೊಬ್ಬರ ಬಳಿ ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಕೆ ವಿವರ ಕೊಡಿ ಎನ್ನಬೇಕು. ಅದನ್ನವರು ಕೊಟ್ಟರೆ ಸರಿ. ಇಲ್ಲವಾದರೆ ಶೇಕಡ ೨೦ರ ತೆರಿಗೆ ಮುರಿದುಕೊಂಡದ್ದಕ್ಕೆ ಆ ಹಣ ಪಡೆಯುವವರ ಜೊತೆಗೆ ಆಗುವ ವಾಗ್ವಾದಕ್ಕೆ ಸಿದ್ಧವಾಗಬೇಕು. ಒಂದು ದೊಡ್ಡ ತಾರೆಯ ಸಿನಿಮಾದಲ್ಲಿ ಈ ಬಗೆಯಲ್ಲಿ ಟಿಡಿಎಸ್‌ ಮೂಲಕ ಹಣ ಪಡೆಯುವವರ ಸಂಖ್ಯೆ ಅದೆಷ್ಟು ದೊಡ್ಡದು ಎಂದು ಗೊತ್ತಿರುವವರಿಗೆ ಸಿನಿಮಾ ತಯಾರಕನಿಗೆ ಎದುರಾಗಿರುವ ಸಮಸ್ಯೆ ಎಂತಹದು ಎಂದು ತಿಳಿದೀತು. ಇನ್ನು ಕ್ಯಾಮೆರಾ, ಮುಂತಾದ ಸಿನಿಮಾ ತಯಾರಿಕೆಗೆ ಬೇಕಾದ ಯಂತ್ರಗಳನ್ನು ಕೊಂಡು ಬಾಡಿಗೆಗೆ ನೀಡುವವನಿಗೆ, ಹಾಕಿದ ಬಂಡವಾಳ ಹಿಂದಿರುಗುವುದು ಎಷ್ಟೋ ವರ್ಷಗಳಾದೀತು. ಈಗ ಆ ಹಣ ಸಂಗ್ರಹಕ್ಕೆ ಈ ಟಿಡಿಎಸ್‌ ಎಂಬುದು ಶೇಕಡ ೧೦ ಅಥವಾ ೨೦ರಂತೆ ಕಡಿತವಾದರೆ ಆ ವ್ಯಾಪಾರಿಯು ಹೂಡಇದ ಹಣ ಹಿಂಪಡೆಯುವುದಕ್ಕೆ ಮತ್ತಷ್ಟು ವರ್ಷಗಳು ಹೆಚ್ಚಾಗುತ್ತವೆ ಅಷ್ಟೇ. ಇನ್ನು ಟೆಲಿವಿಷನ್‌ ಲೋಕದಲ್ಲಿ ಸಹ ಕಲಾವಿದರು, ಕಾರ್ಮಿಕರು ಈ ಶೇಕಡ ೧೦ರ ಟಿಡಿಎಸ್‌ ಕಡಿತವಾಗದಗಲೇ ಗೊಣಗುತ್ತಾರೆ. ಅವರೆಲ್ಲರೂ ಹಿಂದಿನ ಆದಾಯ ತೆರಿಗೆ ವಿವರ ಸಲ್ಲಿಸದೆ ಹೋದರೆ ಟಿಡಿಎಸ್‌ ಕಡಿತ ಶಖಡ ೨೦ ಎಂದಾದರೆ ಟಿವಿ ಕಾರ್ಯಕ್ರಮ ತಯಾರಕರ ಕಚೇರಿಯ ಮುಂದೆ ರಣರಂಪದ ಜಗಳಗಳು ಆಗುವುದು ಖಚಿತ. ಇನ್ನೂ ಟೆಲಿವಿಷನ್‌ ವಾಹಿನಿಯವರು ಧಾರಾವಾಹಿಗಳ ನಿರ್ಮಾಪಕರಿಗೆ (ರಾಯಲ್ಟಿ ಕಾರ್ಯಕ್ರಮ ಮಾಡುವವರಿಗೆ) ಈಗ ಟಿಡಿಎಸ್‌ ಎಂದು ಶೇಕಡ ೨ರಷ್ಟು ಹಣ ಕಡಿತಗೊಳಿಸಿ ಕೊಡುತ್ತಾ ಇದ್ದಾರೆ. ಅದೂ ಸಹ ಶೇಕಡ ೧೦ಕ್ಕೆ ಏರುತ್ತದೆ. ಇಲ್ಲಿರುವ ಸಂಕಟ ಏನೆಂದರೆ ಕಾರ್ಯಕ್ರಮ ಒಂದರ ತಯಾರಿಕೆಗೆ ಬೇಕಾದ ಒಟ್ಟು ಹಣದಲ್ಲಿ ಶೇಕಡ ೯೦ರಷ್ಟು ಹಣವನ್ನೇ ವಾಹಿನಿಯವರು ನೀಡುವುದು. ಇನ್ನು ಶೇಕಡ ಹತ್ತರಷ್ಟು ನಷ್ಟ ಮುಂಚಿತವಾಗಿಯೇ ಖಚಿತ. ಅದನ್ನು ತುಂಬಿಕೊಳ್ಳುವುದು ಟಿವಿ ಕಾರ್ಯಕ್ರಮ ತಯಾರಕ ತನ್ನ ಕಾರ್ಯಕ್ರಮವು ನೂರಿನ್ನೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಬಂದಾಗ ಮಾತ್ರ ಸಾಧ್ಯ. ಇದರ ಜೊತೆಗೆ ಟಿಡಿಎಸ್‌ ಕಡಿತದ ಲೆಕ್ಕವೂ ಕೂಡಿದರೆ ಆತನ ನಷ್ಟದ ಲೆಕ್ಕ ಹೆಚ್ಚುತ್ತಾ ಹೋಗುತ್ತದೆ. ವರ್ಕಿಂಗ್‌ ಕ್ಯಾಪಿಟಲ್‌ ಹೆಚ್ಚಾಗುತ್ತಾ ಸಾಗುತ್ತದೆ. ಅಂತಿಮವಾಗಿ ಆ ಟೆಲಿವಿಷನ್‌ ಕಾರ್ಯಕ್ರಮ ಮಾಡುವ ವ್ಯಕ್ತಿ/ಕಂಪೆನಿಯು ಹೂಡಿಕೆ ಮತ್ತು ಆದಾಯಗಳ ಅಂತರ ಹೆಚ್ಚಾದಂತೆ ಮುಳುಗುವ ಹಡಗಾಗುತ್ತದೆ.

ಒಟ್ಟಾರೆಯಾಗಿ ಹೀಗೆನ್ನಬಹುದು. ಆಡಳಿತದ ಚುಕ್ಕಾಣಿ ಹಿಡಿಯುವಾಗ “ಲೆಸ್‌ ಗವರ್ನಮೆಂಟ್‌, ಮೋರ್‌ ಗವರ್ನೆನ್ಸ್”‌ ಎಂದ ಘೋಷಣೆ ಮಾಡಿದ ಸರ್ಕಾರವು ಅತಿ ಹೆಚ್ಚು ಕಾಯಿದೆಗಳನ್ನು ತಂದಿರಿಸುತ್ತಾ ಅತಿ ಹೆಚ್ಚು ಸರ್ಕಾರಿ ನಿಯಂತ್ರಣವನ್ನು ತರುತ್ತಿದೆ. ಇದರಿಂದಾಗಿ ಈ ದೇಶದ ಬಹುಮುಖ್ಯ ಉದ್ಯಮಗಳಲ್ಲಿ ಒಂದಾದ ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳು ದೊಡ್ಡ ಸಂಕಟಕ್ಕೆ ಒಳಗಾಗಲಿವೆ ಅಥವಾ ಕಳೆದೆರಡು ದಶಕದಿಂದ ಕಡಿಮೆ ಆಗಿದ್ದ ಮನರಂಜನಾ ಮಾಧ್ಯಮದಲ್ಲಿನ ಕಾಳಧನ ವ್ಯವಹಾರ ದುಪ್ಪಟ್ಟು ಅಥವಾ ಮುಪ್ಪಟ್ಟು ಹೆಚ್ಚಾಗಲಿದೆ. ಇದರ ಜೊತೆಗೆ ಸಿನಿಮಾ ತಯಾರಕರ ಮೇಲೆ “ಸರ್ಕಾರದ ಹಿಂತೆಗೆತ” ಎಂಬ ತೂಗುಕತ್ತಿಯು ಸದಾ ತೂಗಲಿದೆ.

* * *

– ಬಿ. ಸುರೇಶ

೪ ಜುಲೈ ೨೦೨೧

ಏಳುಬೀಳುಗಳ ನಡುವೆ ಯಶಸ್ಸಿನತ್ತ ಚಲಿಸಿದವರ ಕತೆ

(ವಿನಾಯಕರಾಮ್ ಕಲಾಗಾರ್ ಅವರ “ತೂಗುದೀಪ ದರ್ಶನ” ಪುಸ್ತಕಕ್ಕೆ ಒಂದು ಮುನ್ನುಡಿ)

ಇದೊಂದು ಅಪರೂಪದ ಪುಸ್ತಕ. ಕೊಡಗಿನ ಪುಟ್ಟ ಊರಿನಲ್ಲಿ ಬೆಳೆದ ಹುಡುಗಿಯೊಬ್ಬಳು ಹಲವು ಬಗೆಯ ಸವಾಲುಗಳನ್ನು ಎದುರಿಸಿ ಕಡೆಗೆ ಗೆಲುವಿನರಮನೆಯಲ್ಲಿ ನಗುತ್ತಾ ನಿಂತ ಕತೆ ಇಲ್ಲಿದೆ. ಹೀಗೆ ಎರಡು ಸಾಲಿನಲ್ಲಿ ಹೇಳಿದರೆ ಪುಸ್ತಕದ ಪರಿಚಯ ಪೂರ್ಣವಾಗುವುದಿಲ್ಲ. ಇದು ಮೀನ, ಮೀನಮ್ಮ, ಮೀನಾಕ್ಷಿ, ಮೀನಾಕ್ಷಿ ತೂಗುದೀಪ ಶ್ರೀನಿವಾಸ್ ಅವರ ಜೀವನ ಗಾಥೆ. ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನ ಅವರ ಜೀವನಯಾನದ ವಿವರಗಳು ಈ ಪುಸ್ತಕದ ಹೂರಣವಾಗಿದೆ. Continue reading ‘ಏಳುಬೀಳುಗಳ ನಡುವೆ ಯಶಸ್ಸಿನತ್ತ ಚಲಿಸಿದವರ ಕತೆ’

ಎರಡಲುಗಿನ ಖಡ್ಗದ ಎದುರು…!

(ನ್ಯಾಯಪಥ (ನಾನುಗೌರಿ) ಪತ್ರಿಕೆಗಾಗಿ ಬರೆದ ಲೇಖನ)

ಕಳೆದ ಕೆಲವು ವಾರಗಳಿಂದ ಡಬ್ಬಿಂಗ್ ಕುರಿತ ಚರ್ಚೆ ಮರಳಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾದುದು ಕೋವಿಡ್ 19 ಕಾರಣವಾಗಿ ಹುಟ್ಟಿದ ಹೊಸ ಪರಿಸ್ಥಿತಿ. ಸರಿಸುಮಾರು 75 ಧಾರಾವಾಹಿಗಳು ಚಿತ್ರೀಕರಣವಾಗಿ ಪ್ರಸಾರವಾಗುತ್ತಿದ್ದ, ಆ ಮೂಲಕ ಸರಿಸುಮಾರು ಆರು ಸಾವಿರ ಜನರಿಗೆ ಉದ್ಯೋಗ ಒದಗಿಸಿದ್ದ ಕನ್ನಡ ಟೆಲಿವಿಷನ್ ಉದ್ಯಮವು ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣಗಳನ್ನು ಮಾಡಲಾಗದ ಪರಿಸ್ಥಿತಿ ಉಂಟಾಯಿತು. ಆ ಲಾಕ್‍ಡೌನ್ ತೆರೆದಾಗ 26 ಧಾರಾವಾಹಿಗಳನ್ನು ನಿಲ್ಲಿಸಿ ಆ ಜಾಗದಲ್ಲಿ ಕನ್ನಡಕ್ಕೆ ಡಬ್ ಆದ ಇತರ ಭಾಷೆಯ ಧಾರಾವಾಹಿಗಳನ್ನು ಪ್ರಸಾರ ಮಾಡಲು ಹಲವು ವಾಹಿನಿಗಳು ಆರಂಭಿಸಿದವು. ಈ ವರೆಗೆ ಸಿನಿಮಾಗೆ ಇದ್ದ ಡಬ್ಬಿಂಗ್ ಎಂಬುದು ಧಾರಾವಾಹಿಗೂ ಬಂದುದರ ಹಿನ್ನೆಲೆಯಲ್ಲಿ ಡಬ್ಬಿಂಗ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. Continue reading ‘ಎರಡಲುಗಿನ ಖಡ್ಗದ ಎದುರು…!’

ಕಿರುತೆರೆ – ಸಾಮಾಜಿಕ ಜವಾಬ್ದಾರಿ

(೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ೭ ಫೆಬ್ರವರಿ ೨೦೨೦, ಶುಕ್ರವಾರ ಬೆಳಗಿನ ೯.೩೦ರಿಂದ ೧೧ ಗಂಟೆವರೆಗೆ ನಡೆದ ಚಲನಚಿತ್ರ: ಕನ್ನಡ ಸಾಹಿತ್ಯ ಎಂಬ ಗೋಷ್ಟಿಯಲ್ಲಿ ಮಂಡಿಸಲಾದ ಪ್ರಬಂಧ.)

ಎಲ್ಲ ಕನ್ನಡ ಮನಸ್ಸುಗಳಿಗೆ ನಮಸ್ಕಾರಗಳು.

೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸುವ ಅವಕಾಶ ನನಗೆ ಎರಡನೆಯ ಸಲ ಒದಗಿ ಬಂದಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೆ. ಆಗ ಕಡೆಯ ನಿಮಿಷದಲ್ಲಿ ಬರಬೇಕಾದವರು ಬಾರದೆ ಹೋದುದರಿಂದ ಪ್ರೀತಿಯ ಗುರುಗಳಾದ ಚಂಪಾ ಅವರು ನನ್ನನ್ನು `ಬದಲಿ ಆಟಗಾರ’ ಎಂದು ಕರೆದಿದ್ದರು. ಮಾಧ್ಯಮ ಕುರಿತ ಗೋಷ್ಟಿಯಲ್ಲಿ ಗೌರಿ ಲಂಕೇಶ್ ಅವರ ಜೊತೆಗೆ ನಾನೂ ಸಹ ಇದ್ದೆ, ಕಿರುತೆರೆಯ ಬಗ್ಗೆ ಮಾತಾಡಿದ್ದೆ. ಈ ಸಲ ಅಪರೂಪಕ್ಕೆ ನಾನು ಬದಲಿ ಆಟಗಾರ ಅಲ್ಲ. ಅಧ್ಯಕ್ಷರಾದ ಮನು ಬಳಿಗಾರ್ ಅವರು ಖುದ್ದಾಗಿ ನನಗೆ ಕರೆ ಮಾಡಿ ಬರಲು ಸೂಚಿಸಿದರು. ಈ ಆಹ್ವಾನಕ್ಕಾಗಿ ಮನು ಬಳಿಗಾರ್ ಅವರಿಗೆ, ಸಮ್ಮೇಳನಾಧ್ಯಕ್ಷರು ಮತ್ತು ಗುರುಗಳಾದ ಎಚ್ಚೆಸ್ವಿ ಅವರಿಗೆ ಮತ್ತು ಈ ಆಯ್ಕೆಗೆ ಕಾರಣರಾದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸಮಿತಿಗಳ ಸದಸ್ಯರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತೇನೆ.
ಇಲ್ಲಿ ಮಾಡುತ್ತಿರುವ ಪ್ರಬಂಧ ಮಂಡನೆಗಾಗಿ ದೊರೆವ ಗೌರವಧನವನ್ನಾಗಲಿ ನನ್ನ ಪ್ರಯಾಣದ ಖರ್ಚನ್ನಾಗಲಿ ನಾನು ಪಡೆಯುವುದಿಲ್ಲ. ಆ ಹಣವನ್ನು ಕನ್ನಡ ನಿಧಿ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕೋರುತ್ತೇನೆ.
ಇಂದಿನ ನನ್ನ ಮಾತುಗಳನ್ನು ಮಂಡಿಸುವ ಮುಂಚೆ ಕೆಲವು ವಿಷಯಗಳನ್ನು ಹೇಳಬೇಕಿದೆ. Continue reading ‘ಕಿರುತೆರೆ – ಸಾಮಾಜಿಕ ಜವಾಬ್ದಾರಿ’


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 109,445 ಜನರು