ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ: ಬಿ. ಸುರೇಶ
ಪ್ರತಿ ವರ್ಷ ಇಂಟರ್‌ನ್ಯಾಷನಲ್ ಥಿಯೇಟರ್ ಇನ್ಸ್‌ಟಿಟ್ಯೂಟ್‌ನ ಕಾರ್ಯಕಾರಿ ಸಮಿತಿಯು ಶ್ರೇಷ್ಟ ರಂಗಕರ್ಮಿಯೊಬ್ಬರನ್ನು ಗುರುತಿಸಿ ಅವರಿಗೆ ವಿಶ್ವ ರಂಗದಿನದ ಸಂದೇಶವನ್ನು ಬರೆಯಲು ಸೂಚಿಸುತ್ತದೆ. ಪ್ರತೀ ವರ್ಷ ಮಾರ್ಚ್ ೨೭ರಂದು ನಡೆಯುವ ವಿಶ್ವ ರಂಗದಿನದಂದು ಈ ಸಂದೇಶವನ್ನು ಜಗತ್ತಿನಾದ್ಯಂತ ರಂಗಕರ್ಮಿಗಳ ಮೂಲಕ ರಂಗಪ್ರೇಮಿಗಳಿಗೆ ತಲುಪಿಸಲಾಗುತ್ತದೆ.
೨೦೨೧ರ ವಿಶ್ವ ರಂಗದಿನದ ಸಂದೇಶ ಬರೆದ ರಂಗಕರ್ಮಿ ಯುನೈಟಡ್ ಕಿಂಗ್‌ಡಮ್‌ನವರಾದ ಹೆಲೆನ್ ಮಿರ್ರೇನ್
ಹೆಲೆನ್ ಮಿರ್ರೇನ್ ಅವರ ವಿಶ್ವ ರಂಗದಿನದ ಸಂದೇಶ
“ಇದು ಪ್ರದರ್ಶನ ಕಲೆಗಳಿಗೆ ಹಾಗೂ ಕಲಾವಿದರಿಗೆ ದುರಿತ ಕಾಲ. ರಂಗತಂತ್ರಜ್ಙರು ಮತ್ತು ರಂಗಕರ್ಮಿಗಳು ವಿಶೇಷವಾಗಿ ಮಹಿಳೆಯರು, ಸ್ವತಃ ಅಭದ್ರತೆ ಇರುವ ಪ್ರದರ್ಶನ ಕಲೆಯ ವೃತ್ತಿಯಲ್ಲಿ, ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಈ ವೃತ್ತಿಯಲ್ಲಿನ ಅಭದ್ರತೆಯೇ ಇವೆರೆಲ್ಲರಿಗೆ ಈ ವೈರಾಣುವಿನಿಂದ ಒದಗಿದ ಸವಾಲನ್ನು ಎದುರಿಸುವ ಶಕ್ತಿ-ಸ್ಥೈರ್ಯ ಒದಗಿಸಿದೆ ಎನ್ನಬಹುದು.
ಈ ಕಾಲದಲ್ಲಿ ರಂಗಕರ್ಮಿಗಳ ಕಲ್ಪನಾಶಕ್ತಿ ಮತ್ತಷ್ಟು ಹುರಿಗೊಂಡಿದೆ. ಅದರಿಂದಾಗಿ ಹೊಸ ಮಾದರಿಯ, ಹೊಸ ಮಾಧ್ಯಮಗಳ ಮೂಲಕ ರಂಜನೆಯ ಜೊತೆಗೆ ನೋಡುಗರ ಮನಮುಟ್ಟುವ ಹಲವು ಹೊಸ ದಾರಿಗಳನ್ನು ರಂಗಕರ್ಮಿಗಳು ಕಂಡುಕೊಂಡಿದ್ದಾರೆ. ಇದಕ್ಕಾಗಿ ನಾವು ಅಂತರ್ಜಾಲ ಎಂಬ ಹೊಸ ತಂತ್ರಜ್ಞಾನಕ್ಕೂ ಧನ್ಯವಾದ ಹೇಳಬೇಕು.
ಈ ಭೂಮಿಯ ಮೇಲೆ ಮನುಷ್ಯ ಕಾಣಿಸಿಕೊಂಡ ಕಾಲದಿಂದ ಒಬ್ಬರಿಗೊಬ್ಬರು ಕತೆಗಳನ್ನು ಹೇಳುವ ಕೇಳುವ ಅಭ್ಯಾಸ ಚಾಲ್ತಿಯಲ್ಲಿದೆ. ಹಾಗಾಗಿ ರಂಗಭೂಮಿ ಎಂಬ ಅತ್ಯಂತ ಸುಂದರವಾದ ಕಲೆಯೂ ಸಹ ಈ ಜಗತ್ತು ಇರುವವರೆಗೆ ಜೀವಂತವಾಗಿ ಇರುತ್ತದೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.
ನಾಟಕಕಾರರ, ವಿನ್ಯಾಸಕಾರರ, ನೃತ್ಯಗಾರರ, ಹಾಡುಗಾರರ, ನಟ ನಟಿಯರ ಕ್ರಿಯಾಶಕ್ತಿಯು ಎಂದಿಗೂ ಉಸಿರುಗಟ್ಟುವುದಿಲ್ಲ. ಮತ್ತೆ ಮತ್ತೆ ಹೊಸ ಚೈತನ್ಯದ ಜೊತೆಗೆ ಹೊಸ ವ್ಯಾಖ್ಯಾನಗಳ ಜೊತೆಗೆ ಈ ಜಗತ್ತನ್ನು ಹೊಸದಾಗಿ ಅರ್ಥೈಸುವ ರಂಗಪ್ರಯೋಗಗಳು ಬರುತ್ತಲೇ ಇರುತ್ತವೆ ಮತ್ತು ಅವು ನೋಡುಗರ ತಿಳುವಳಿಕೆಯನ್ನು ಹೆಚ್ಚಿಸುತ್ತಲೇ ಇರುತ್ತವೆ.
ನಾನು ಆ ದಿನಗಳಿಗಾಗಿ ಕಾಯುತ್ತಲೇ ಇರುತ್ತೇನೆ.”
– ಹೆಲೆನ್ ಮಿರ್ರೇನ್
ವಿಶ್ವರಂಗದಿನದ ಸಂದೇಶಕಾರರಾದ ಹೆಲೆನ್ ಮಿರ್ರೇನ್ ಪರಿಚಯ
ಹೆಲೆನ್ ಮಿರ್ರೇನ್ ಅವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅತಿಹೆಚ್ಚು ಮನ್ನಣೆ ಗೌರವಗಳನ್ನು ಪಡೆದಿರುವ ಕಲಾವಿದೆ. ರಂಗಭೂಮಿ, ಹಿರಿತೆರೆ, ಕಿರುತೆರೆಗಳಲ್ಲಿ ನಟನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಹೆಲೆನ್ ಅವರಿಗೆ ೨೦೦೭ರ ಅಕಾಡೆಮಿ ಗೌರವವು “ಕ್ವೀನ್” ಅಭಿನಯಕ್ಕಾಗಿ ದೊರೆತಿದೆ.
ರಂಗಭೂಮಿ
ನ್ಯಾಷನಲ್ ಯೂತ್ ಥಿಯೇಟರ್‌ಗಾಗಿ ಕ್ಲಿಯೋಪಾತ್ರ ಅಭಿನಯಿಸುವ ಮೂಲಕ ರಂಗ ಜಗತ್ತಿಗೆ ಪರಿಚಿತರಾದ ಹೆಲೆನ್ ನಂತರ ಮ್ಯಾಂಚೆಸ್ಟರ್‌ನ ರೆಪ್ ತಂಡದಲ್ಲಿ, ರಾಯಲ್ ಷೇಕ್ಸ್‌ಪಿಯರ್ ಕಂಪೆನಿಯಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದರು. ಆರ್‌ಎಸ್‌ಸಿಯಲ್ಲಿ ಅವರು ಕಳೆದ ನಾಲ್ಕು ವರ್ಷಗಳ ಕಾರಣವಾಗಿ ಅವರಿಗೆ ಪೀಟರ್ ಬ್ರೂಕ್‌ನ ಸೆಂಟರ್ ಡಿ ರಿಸರ್ಚೆ ಥಿಯೇಟ್ರಲ್ ಸಂಸ್ಥೆಯಲ್ಲಿ ಅವಕಾಶ ದೊರೆಯಿತು. ಆ ತಂಡದ ಜೊತೆಗೆ ಆಫ್ರಿಕ ಮತ್ತು ಅಮೇರಿಕಾದ ಹಲವು ದೇಶಗಳಲ್ಲಿ ಪ್ರದರ್ಶನ ನೀಡುವುದು ಸಾಧ್ಯವಾಯಿತು.
ನಂತರ ವೆಸ್ಟ್ಎಂಡ್, ದಿ ಫ್ರಿಂಜ್, ಆರ್‌ಎಸ್‌ಸಿ, ನ್ಯಾಷನಲ್ ಥಿಯೇಟರ್ ಮತ್ತು ಯುಎಸ್‌ನ ಬ್ರಾಡ್‌ವೇಯಲ್ಲಿ ಸಹ ಹೆಲೆನ್ ಹಲವು ರಂಗಪ್ರಯೋಗಗಳಲ್ಲಿ ನಟಿಸಿದರು. “ಮಂಥ್ ಇನ್ ದ ಕಂಟ್ರಿ”ಗಾಗಿ ಟೋನಿ ಪ್ರಶಸ್ತಿಗೆ ನಾಮ ನಿರ್ದೇಶನ, “ಡ್ಯಾನ್ಸ್ ಆಫ್ ಡೆತ್”ನಲ್ಲಿ ಇಯಾನ್ ಮೆಕಲನ್ ಅವರೊಂದಿಗೆ ಬ್ರಾಡ್‌ವೇ ಥಿಯೇಟರ್‌ನಲ್ಲಿ ಅಭಿನಯಿಸಿದ್ದಾರೆ. ನಂತರ ಡಾನರ್ ವೇರ್ ಹೌಸ್‌ನಲ್ಲಿ “ಆರ್ಷಿಯನ್ ಡಿಸೆಂಡಿಂಗ್” ಮತ್ತು ನ್ಯಾಷನಲ್ ಥಿಯೇಟರ್‌ನಲ್ಲಿ “ಮಾರ್ನಿಂಗ್ ಬಿಕಮ್ಸ್ ಎಲೆಕ್ಟ್ರಾ” ನಟನೆಗಾಗಿ ಒಲಿವಿಯರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮ ನಿರ್ದೇಶನ ಪಡೆದಿದ್ದಾರೆ.
೨೦೦೯ರಲ್ಲಿ ಮರಳಿ ನ್ಯಾಷನಲ್ ಥಿಯೇಟರ್‌ಗೆ ಬಂದು ನಿಕೊಲಸ್ ಹೈಟ್ನರ್ ನಿರ್ದೇಶನದ “ರೆಸಿನ್ಸ್ ಫೆಡ್ರೆ”ಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದರು. ಈ ನಾಟಕವು ಎನ್‌ಟಿ ಲೈವ್ ಮೂಲಕ ಚಿತ್ರಿತವಾಗಿ ಜಗತ್ತಿನಾದ್ಯಂತ ಏಕಕಾಲದಲ್ಲಿ ಪ್ರದರ್ಶನ ಕಂಡ ಮೊದಲ ನಾಟಕ ಎಂದು ಚರಿತ್ರೆಯಲ್ಲಿ ದಾಖಲಾಯಿತು.
೨೦೧೩ರಲ್ಲಿ ಪೀಟರ್ ಮಾರ್ಗನ್ ರಚಿಸಿ ಸ್ಟೀಫನ್ ಡೌಲ್ಟ್ರಿ ನಿರ್ದೇಶಿಸಿದ “ಕ್ವೀನ್ ಎಲಿಜಬೆತ್ ಟೂ” ನಾಟಕದಲ್ಲಿ ಹೆಲೆನ್ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಂಡರು.
ಹೆಲೆನ್ ಅವರಿಗೆ ಆಲಿವಿಯರ್ ಪ್ರಶಸ್ತಿ, ವಾಟ್ಸ್ ಆನ್ ಸ್ಟೇಜ್ ಪ್ರಶಸ್ತಿಗಳು ಅತ್ಯುತ್ತಮ ನಟನೆಗಾಗಿ ದೊರೆತಿದೆ. ೨೦೧೫ರಲ್ಲಿ ಅತ್ಯುತ್ತಮ ನಟಿ ಎಂದು ಟೋನಿ ಪ್ರಶಸ್ತಿ ಸಹ ದೊರೆತಿದೆ.
ಸಿನಿಮಾ ಮತ್ತು ಟಿವಿ
ಹೆಲೆನ್ ಅವರು ಹಿರಿತೆರೆ ಮತ್ತು ಕಿರುತೆರೆಗಳಲ್ಲಿ ಸಹ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ದಾರೆ.
೨೦೦೩ರಲ್ಲಿ “ಡೇಮ್ ಆಫ್ ದಿ ಬ್ರಿಟಿಷ್ ಎಂಪೈರ್” ಗೌರವವನು ಹೆಲೆನ್ ಮಿರ್ರೇನ್ ಅವರಿಗೆ ದೊರೆತಿದೆ.
ಆಕೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ http://www.helenmirren.com ನೋಡಿರಿ.
ಇತ್ತೀಚಿನ ಪ್ರತಿಕ್ರಿಯೆಗಳು…