“ಬಿಡಿ, ಬಿಟ್ಟುಬಿಡಿ”

“ಬಿಡಿ, ಬಿಟ್ಟುಬಿಡಿ”
(ಮೂಲ: ರವೀಂದ್ರನಾಥ ಠಾಗೋರ್ / ಭಾವನುವಾದ: ಬಿ. ಸುರೇಶ)

ಬಿಡಿ, ಬಿಟ್ಟುಬಿಡಿ
ಮಣಮಣ ಮಂತ್ರಗಳ ಗೊಣಗಾಟ,
ಜಪಮಣಿಗಳ ಎಣಿಕೆಯ ಆಟ
ಬಿಡಿ, ಬಿಟ್ಟುಬಿಡಿ…

ಬಾಗಿಲುಗಳ ಮುಚ್ಚಿಕೊಂಡು,
ಕತ್ತಲ ಕೋಣೆಯಲ್ಲಿ ಕೂತುಕೊಂಡು,
ಆರಾಧಿಸುವುದಾರನ್ನಣ್ಣಾ?
ಕಣ್ಣು ತೆರೆಯಿರಣ್ಣ,
ನಿಮ್ಮೆದುರು ನಿಮ್ಮ ದೇವರು ಇಲ್ಲವಣ್ಣ!

ಅವನಿರುವನಲ್ಲಿ,
ನೇಗಿಲು ಹಿಡಿದು ಉಳುವ ರೈತನ ನೆಲದಲ್ಲಿ.
ಅವನಿರುವನಲ್ಲಿ,
ಕಲ್ಲೊಡೆದು ಹಾದಿ ಕೊರೆಯುವವನ ಬಳಿಯಲ್ಲಿ.
ಮಳೆಯಲ್ಲಿ, ಬಿಸಿಲಲ್ಲಿ ಅವನಿರುವನಲ್ಲಿ
ದುಡಿವವರ ಬೆವರಿನ ಜೊತೆಯಲ್ಲಿ.
ಮತ್ ಅವನ ದಿರಿಸಿಗೂ ಧೂಳು ಮುಸುಕಿದೆಯಲ್ಲಿ.

ಆ ಕತ್ತಲಕೋಣೆಯ ದೀಪ ನಂದಿಸಿರಿ,
ಆ ರೈತನಂತೆ ತುಳಿಯಿರಿ ಧೂಳು ತುಂಬಿದ ಮಣ್ಣನ್ನು,
ಕಾಯಕವು ತೆರೆಯಲಿ ನಿಮ್ಮ ಕಣ್ಣನ್ನು.
ದುಡಿಮೆಯು ನೀಡಲಿ ನಿಮ್ಮ ಬಾಳಿಗೆ ಬೆಳಕನ್ನು.


(೩೧ ಡಿಸೆಂಬರ್ ೨೦೨೩ – ರಾತ್ರಿ ೧೨)

0 Responses to “<em>“ಬಿಡಿ, ಬಿಟ್ಟುಬಿಡಿ”</em>”



  1. Leave a Comment

Leave a comment




ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 111,120 ಜನರು