ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ
ವಿಶಾಖ ಎನ್ ಅವರ ಪ್ರಶ್ನೆಗಳು:
೧. ರಂಗಭೂಮಿ, ಹಿರಿತೆರೆ, ಕಿರುತೆರೆ ಮತ್ತೆ ಸಿನಿಮಾ….ನಿಮ್ಮ ಈ ಪಯಣದ ತಂತುವನ್ನೊಮ್ಮೆ ಮೆಲುಕು ಹಾಕಿ….
– ಅದೊಂದು ಹಲವು ಆಕಸ್ಮಿಕಗಳ ಸಂತೆ.
೧೯೭೨ರಲ್ಲಿ, ನಾನು ಒಂಬತ್ತು ವರ್ಷದವನಿದ್ದಾಗ, ಬಿ.ವಿ. ಕಾರಂತರ ನಿರ್ದೇಶನದ ಈಡಿಪಸ್ ನಾಟಕ ನೋಡಲು ತಾಯಿಯ ಜೊತೆಗೆ ಹೋಗಿದ್ದೆ. ಕುರುಡನನ್ನು ವೇದಿಕೆಗೆ ಕರೆದೊಯ್ಯುವ ಮಾತಿಲ್ಲದ ಸಣ್ಣ ಪಾತ್ರ ಮಾಡುತ್ತಿದ್ದ ಹುಡುಗನಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಸಭಾಂಗಣದಲ್ಲಿ ಅಮ್ಮನ ಪಕ್ಕದಲ್ಲಿದ್ದ ನಾನು ಆಕಸ್ಮಿವಾಗಿ ಆ ಪಾತ್ರ ಮಾಡುವಂತಾಗಿ, ಆ ಮೂಲಕ ರಂಗಪ್ರವೇಶ ಆಯಿತು. ಅಲ್ಲಿಂದಾಚೆಗೆ ಎಎಸ್ ಮೂರ್ತಿಯವರ ತಂಡದ ಹಲವು ನಾಟಕಗಳಲ್ಲಿ ಸಣ್ಣ, ದೊಡ್ಡ ಪಾತ್ರಗಳನ್ನು ಮಾಡುವ ಮೂಲಕ ರಂಗಸಾಂಗತ್ಯ ಮುಂದುವರೆಯಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಐದು ದಶಕಗಳ ರಂಗಭೂಮಿ ಒಡನಾಟ. ಇವತ್ತಿಗೂ ರಂಗಭೂಮಿ ನನ್ನ ಮೊದಲ ಆದ್ಯತೆ. ನಾನು ನಟ ಆಗಲು, ನಾಟಕಕಾರ ಮತ್ತು ನಿರ್ದೇಶಕ ಆಗಲು ದಾರಿ ಮಾಡಿಕೊಟ್ಟಿದೆ. ನನ್ನ ವ್ಯಕ್ತಿತ್ವ ರೂಪಿಸಿದೆ. ಹಾಗಾಗಿ ರಂಗಭೂಮಿ ಯಾವತ್ತಿಗೂ ನನ್ನ ತವರು ಮನೆ ಅನ್ನಬಹುದು.
೧೯೭೫ರಲ್ಲಿ ನಾನು ಅಭಿನಯಿಸಿದ ಒಂದು ನಾಟಕವನ್ನು ಮತ್ತು ಬಿ.ವಿ. ಕಾರಂತರನ್ನು ದೆಹಲಿಯ ಎನ್ಎಸ್ಡಿಗೆ ಬೀಳ್ಕೊಡುವ ಸಮಾರಂಭದಲ್ಲಿ ನಾನು ಮಾಡಿದ ಭಾಷಣವನ್ನು ಕೇಳಿದ ಗಿರೀಶ್ ಕಾಸರವಳ್ಳಿ ಅವರು ತಮ್ಮ ನಿರ್ದೇಶನದ ಮೊದಲ ಚಿತ್ರ “ಘಟಶ್ರಾದ್ಧ” ದಲ್ಲಿ ಒಂದು ಪಾತ್ರಕ್ಕೆ ನನ್ನನ್ನು ಆರಿಸಿದರು. ಅಲ್ಲಿಂದ ನನ್ನ ಚಿತ್ರರಂಗದ ಸಾಂಗತ್ಯ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಚಿತ್ರೋದ್ಯಮ ನನ್ನನ್ನು ನಟನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಲವು ವೇಷ ತೊಡುವ ಅವಕಾಶ ಒದಗಿಸಿದೆ.
ಕಿರುತೆರೆಗೆ ಪ್ರವೇಶ ಆಗಿದ್ದು ನಟನಾಗಿ. ನಾನು ಅಭಿನಯಿಸಿದ್ದ ʼಮ್ಯಾಕ್ಬೆತ್ʼ ನಾಟಕದ ಪಾತ್ರವನ್ನು ಕಂಡ ಶ್ಯಾಮಸುಂದರ್ ಮತ್ತು ಗುರುದತ್ ಅವರು (ಚಲನಚಿತ್ರ ಕಲಾವಿದೆ ಮೈನಾವತಿ ಅವರ ಮಕ್ಕಳು) ತಮ್ಮ “ಬಿಸಿಲುಕುದುರೆ” ಧಾರಾವಾಹಿಯಲ್ಲಿ ಪಾತ್ರ ಮಾಡಲು ಆಹ್ವಾನಿಸಿದರು. ಆ ಮೂಲಕ, ೧೯೮೭ರಲ್ಲಿ ಕಿರುತೆರೆಗೆ ಆಕ್ಸಮಿಕ ಎಂಬಂತೆ ಪ್ರವೇಶಿಸಿದೆ. ನಂತರ ರಂಗಾನುಭವದ ಹಿನ್ನೆಲೆಯು ಕಿರುತೆರೆಯ ಹಲವು ವಿಭಾಗದಲ್ಲಿ ದುಡಿಯುವ ಅವಕಾಶ ಒದಗಿಸಿತು. ಹಲವು ಹೊಸ ಪ್ರಯೋಗ ಮಾಡಲು ಕಿರುತೆರೆಯೇ ಅವಕಾಶ ನೀಡಿತು. ಕಿರುತೆರೆಯು ನನ್ನನ್ನು ಕೇವಲ ನಟನಾಗಿ ಉಳಿಸದೆ, ಬರಹಗಾರನನ್ನಾಗಿ ಮತ್ತು ನಿರ್ದೇಶಕನನ್ನಾಗಿ ಮಾಡಿದ್ದಲ್ಲದೆ ನಿರ್ಮಾಪಕನಾಗಿಯೂ ಬೆಳೆಸಿತು.
೨. ಶಂಕರ್ನಾಗ್, ರವಿಚಂದ್ರನ್ ಜತೆಗಿನ ನೆನಪು… ಕಲಿಕೆ
– ಶಂಕರ್ ನಾಗ್ ಅವರು ತಮ್ಮ ತಂಡದ ನಾಟಕದ ಕರಪತ್ರ, ಪ್ರಚಾರ ಸಾಮಗ್ರಿ, ಟಿಕೀಟುಗಳನ್ನು ಮುದ್ರಿಸಲು ನನ್ನಮ್ಮ ನಡೆಸುತ್ತಿದ್ದ ಮುದ್ರಣಾಲಯಕ್ಕೆ ಬರುತ್ತಿದ್ದರು. ಅಲ್ಲಿ ಅವರ ಪರಿಚಯ ಆಯಿತು. ನಂತರ ಕರಪತ್ರದ ಕರಡು ಪ್ರತಿಯನ್ನು ಅವರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೆನಾಗಿ ಅರುಂಧತಿ ನಾಗ್, ಪಿಂಟಿ ರಾವ್ ಹೀಗೆ ಹಲವರ ಪರಿಚಯ ಅವರ ಮನೆಯಲ್ಲಿ ಆಯಿತು. ನಾನೂ ಸಹ ರಂಗ ಸಾಂಗತ್ಯ ಇರುವವನು ಎಂದು ಗೊತ್ತಾದ ಶಂಕರ್ ನಾಗ್ ಅವರು ತಮ್ಮ ತಂಡದ ನಾಟಕಗಳಿಗೆ ಕೆಲಸ ಮಾಡಲು ಹಚ್ಚಿದರು. ಹಾಗೆ ನನ್ನ ಮತ್ತು ಶಂಕರ್ ನಾಗ್ ಅವರ ನಂಟು ಬೆಳೆಯಿತು, ಬಲಿಯಿತು. ಅವರು ಮಾಡುತ್ತಿದ್ದ ಆ್ಯಕ್ಸಿಡೆಂಟ್ ಮತ್ತು ಮಾಲ್ಗುಡಿ ಡೇಸ್ ತರಹದ ಯೋಜನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಅವಕಾಶ ದೊರಕಿತು. ಆಕ್ಸಿಡೆಂಟ್ ಸಿನಿಮಾದ ಚಿತ್ರಕಥಾ ರಚನೆಯ ಹಂತದಲ್ಲಿ ಶಂಕರ್ನಾಗ್, ವಸಂತ ಮೊಕಾಶಿ, ನರಸಿಂಹನ್, ಕಾಶಿ, ರಂಗಣ್ಣಿ ಮುಂತಾದ ಗೆಳೆಯರು ಆಡುತ್ತಿದ್ದ ಮಾತುಗಳನ್ನು ಅಕ್ಷರಿಸುವ ಕೆಲಸ ಮಾಡಿದ್ದೆ. ಅವು ನನಗೆ ಸಿನಿಮಾ ಕಲಿಕೆಯ ಆರಂಭಿಕ ಪಾಠಗಳಾದವು ಎನ್ನಬಹುದು. ಆದರೆ ಅದು ಕಲಿಕೆ ಎಂದು ತಿಳಿಯದ ಕಾಪಿ ರೈಟರ್ ಕೆಲಸ ಆಗಿತ್ತು. ಅದಾದ ನಂತರ ಮಾಲ್ಗುಡಿ ಡೇಸ್ ಹಿಂದಿಯ ಧಾರಾವಾಹಿ ಶುರುವಾಯಿತು. ನನಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಆ ಧಾರಾವಾಹಿಯ ಚಿತ್ರೀಕರಣದ ಕೆಲವು ಕಂತುಗಳಲ್ಲಿ ಜಾನ್ ದೇವರಾಜ್ ಎಂಬ ಬಾಲ್ಯ ಗೆಳೆಯನ ಜೊತೆಗೆ ಕಲಾ ನಿರ್ದೇಶನದ ತಂಡದಲ್ಲಿ ಸಹಾಯಕ ಆಗಿ ಕೆಲಸ ಮಾಡಿದ್ದೆ. ಜೊತೆಗೆ ಮತ್ತೊಬ್ಬ ಬಾಲ್ಯ ಗೆಳೆಯ ಸುರೇಶ್ ಅರಸ್ ಈ ಧಾರಾವಾಹಿಯ ಸಂಕಲನಕಾರ ಆಗಿದ್ದರು. ಅವರ ಸಂಕಲನ ತಂಡದಲ್ಲಿಯೂ ಸಹಾಯಕನಾಗಿ ಕೆಲಸ ಮಾಡಿದ್ದೆ. ಇದೆಲ್ಲವೂ ನನ್ನ ಬಿಡುವಿನ ವೇಳೆಯಲ್ಲಿ ಮಾಡಿದ ಕೆಲಸಗಳಾಗಿದ್ದವು. ಆದರೆ ನನಗೇ ತಿಳಿಯದಂತೆ ನಾನು ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂದಿತ್ತು. ಆ ಅನುಭವ ಇವತ್ತಿಗೂ ನನಗೆ ಸಹಾಯ ಮಾಡುತ್ತಿದೆ. ವಿಶೇಷವಾಗಿ ಶಂಕರ್ ನಾಗ್ ಅವರು ಕೆಲಸವನ್ನು ಯೋಜಿಸುತ್ತಿದ್ದ ರೀತಿ, ನಿರ್ಧಾರ ತೆಗೆದುಕೊಳ್ಳುವ ವೇಗ, ಎಲ್ಲರನ್ನೂ ಸಮಾನರೆಂದು ಭಾವಿಸಿ ಸಾಗುತ್ತಿದ್ದ ನಾಯಕತ್ವದ ಗುಣವು ನಾನು ಮಾಡುವ ಕೆಲಸಗಳಲ್ಲಿಯೂ ಇಳಿದು ಬಂದಿದೆ. ನಾನು ಕೆಲಸ ಮಾಡುವ ತಂಡದಲ್ಲಿ ಹೈರಾರ್ಕಿಯನ್ನು ಪಾಲಿಸದೆ ಕೆಲಸ ಮಾಡುವ ಅಭ್ಯಾಸ ಈವರೆಗೆ ಉಳಿದ ಬಂದಿದೆ.
ಇತ್ತೀಚಿನ ಪ್ರತಿಕ್ರಿಯೆಗಳು…