ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ

ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ

ವಿಶಾಖ ಎನ್ ಅವರ ಪ್ರಶ್ನೆಗಳು:

೧. ರಂಗಭೂಮಿ, ಹಿರಿತೆರೆ, ಕಿರುತೆರೆ ಮತ್ತೆ ಸಿನಿಮಾ….ನಿಮ್ಮ ಈ ಪಯಣದ ತಂತುವನ್ನೊಮ್ಮೆ ಮೆಲುಕು ಹಾಕಿ….

– ಅದೊಂದು ಹಲವು ಆಕಸ್ಮಿಕಗಳ ಸಂತೆ.
೧೯೭೨ರಲ್ಲಿ, ನಾನು ಒಂಬತ್ತು ವರ್ಷದವನಿದ್ದಾಗ, ಬಿ.ವಿ. ಕಾರಂತರ ನಿರ್ದೇಶನದ ಈಡಿಪಸ್ ನಾಟಕ ನೋಡಲು ತಾಯಿಯ ಜೊತೆಗೆ ಹೋಗಿದ್ದೆ. ಕುರುಡನನ್ನು ವೇದಿಕೆಗೆ ಕರೆದೊಯ್ಯುವ ಮಾತಿಲ್ಲದ ಸಣ್ಣ ಪಾತ್ರ ಮಾಡುತ್ತಿದ್ದ ಹುಡುಗನಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಸಭಾಂಗಣದಲ್ಲಿ ಅಮ್ಮನ ಪಕ್ಕದಲ್ಲಿದ್ದ ನಾನು ಆಕಸ್ಮಿವಾಗಿ ಆ ಪಾತ್ರ ಮಾಡುವಂತಾಗಿ, ಆ ಮೂಲಕ ರಂಗಪ್ರವೇಶ ಆಯಿತು. ಅಲ್ಲಿಂದಾಚೆಗೆ ಎಎಸ್‌ ಮೂರ್ತಿಯವರ ತಂಡದ ಹಲವು ನಾಟಕಗಳಲ್ಲಿ ಸಣ್ಣ, ದೊಡ್ಡ ಪಾತ್ರಗಳನ್ನು ಮಾಡುವ ಮೂಲಕ ರಂಗಸಾಂಗತ್ಯ ಮುಂದುವರೆಯಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಐದು ದಶಕಗಳ ರಂಗಭೂಮಿ ಒಡನಾಟ. ಇವತ್ತಿಗೂ ರಂಗಭೂಮಿ ನನ್ನ ಮೊದಲ ಆದ್ಯತೆ. ನಾನು ನಟ ಆಗಲು, ನಾಟಕಕಾರ ಮತ್ತು ನಿರ್ದೇಶಕ ಆಗಲು ದಾರಿ ಮಾಡಿಕೊಟ್ಟಿದೆ. ನನ್ನ ವ್ಯಕ್ತಿತ್ವ ರೂಪಿಸಿದೆ. ಹಾಗಾಗಿ ರಂಗಭೂಮಿ ಯಾವತ್ತಿಗೂ ನನ್ನ ತವರು ಮನೆ ಅನ್ನಬಹುದು.



೧೯೭೫ರಲ್ಲಿ ನಾನು ಅಭಿನಯಿಸಿದ ಒಂದು ನಾಟಕವನ್ನು ಮತ್ತು ಬಿ.ವಿ. ಕಾರಂತರನ್ನು ದೆಹಲಿಯ ಎನ್‌ಎಸ್‌ಡಿಗೆ ಬೀಳ್ಕೊಡುವ ಸಮಾರಂಭದಲ್ಲಿ ನಾನು ಮಾಡಿದ ಭಾಷಣವನ್ನು ಕೇಳಿದ ಗಿರೀಶ್ ಕಾಸರವಳ್ಳಿ ಅವರು ತಮ್ಮ ನಿರ್ದೇಶನದ ಮೊದಲ ಚಿತ್ರ “ಘಟಶ್ರಾದ್ಧ” ದಲ್ಲಿ ಒಂದು ಪಾತ್ರಕ್ಕೆ ನನ್ನನ್ನು ಆರಿಸಿದರು. ಅಲ್ಲಿಂದ ನನ್ನ ಚಿತ್ರರಂಗದ ಸಾಂಗತ್ಯ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಚಿತ್ರೋದ್ಯಮ ನನ್ನನ್ನು ನಟನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಲವು ವೇಷ ತೊಡುವ ಅವಕಾಶ ಒದಗಿಸಿದೆ.

ಕಿರುತೆರೆಗೆ ಪ್ರವೇಶ ಆಗಿದ್ದು ನಟನಾಗಿ. ನಾನು ಅಭಿನಯಿಸಿದ್ದ ʼಮ್ಯಾಕ್‌ಬೆತ್‌ʼ ನಾಟಕದ ಪಾತ್ರವನ್ನು ಕಂಡ ಶ್ಯಾಮಸುಂದರ್‌ ಮತ್ತು ಗುರುದತ್ ಅವರು (ಚಲನಚಿತ್ರ ಕಲಾವಿದೆ ಮೈನಾವತಿ ಅವರ ಮಕ್ಕಳು) ತಮ್ಮ “ಬಿಸಿಲುಕುದುರೆ” ಧಾರಾವಾಹಿಯಲ್ಲಿ ಪಾತ್ರ ಮಾಡಲು ಆಹ್ವಾನಿಸಿದರು. ಆ ಮೂಲಕ, ೧೯೮೭ರಲ್ಲಿ ಕಿರುತೆರೆಗೆ ಆಕ್ಸಮಿಕ ಎಂಬಂತೆ ಪ್ರವೇಶಿಸಿದೆ. ನಂತರ ರಂಗಾನುಭವದ ಹಿನ್ನೆಲೆಯು ಕಿರುತೆರೆಯ ಹಲವು ವಿಭಾಗದಲ್ಲಿ ದುಡಿಯುವ ಅವಕಾಶ ಒದಗಿಸಿತು. ಹಲವು ಹೊಸ ಪ್ರಯೋಗ ಮಾಡಲು ಕಿರುತೆರೆಯೇ ಅವಕಾಶ ನೀಡಿತು. ಕಿರುತೆರೆಯು ನನ್ನನ್ನು ಕೇವಲ ನಟನಾಗಿ ಉಳಿಸದೆ, ಬರಹಗಾರನನ್ನಾಗಿ ಮತ್ತು ನಿರ್ದೇಶಕನನ್ನಾಗಿ ಮಾಡಿದ್ದಲ್ಲದೆ ನಿರ್ಮಾಪಕನಾಗಿಯೂ ಬೆಳೆಸಿತು.

೨. ಶಂಕರ್‌ನಾಗ್, ರವಿಚಂದ್ರನ್ ಜತೆಗಿನ ನೆನಪು… ಕಲಿಕೆ
– ಶಂಕರ್‌ ನಾಗ್‌ ಅವರು ತಮ್ಮ ತಂಡದ ನಾಟಕದ ಕರಪತ್ರ, ಪ್ರಚಾರ ಸಾಮಗ್ರಿ, ಟಿಕೀಟುಗಳನ್ನು ಮುದ್ರಿಸಲು ನನ್ನಮ್ಮ ನಡೆಸುತ್ತಿದ್ದ ಮುದ್ರಣಾಲಯಕ್ಕೆ ಬರುತ್ತಿದ್ದರು. ಅಲ್ಲಿ ಅವರ ಪರಿಚಯ ಆಯಿತು. ನಂತರ ಕರಪತ್ರದ ಕರಡು ಪ್ರತಿಯನ್ನು ಅವರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೆನಾಗಿ ಅರುಂಧತಿ ನಾಗ್‌, ಪಿಂಟಿ ರಾವ್‌ ಹೀಗೆ ಹಲವರ ಪರಿಚಯ ಅವರ ಮನೆಯಲ್ಲಿ ಆಯಿತು. ನಾನೂ ಸಹ ರಂಗ ಸಾಂಗತ್ಯ ಇರುವವನು ಎಂದು ಗೊತ್ತಾದ ಶಂಕರ್‌ ನಾಗ್‌ ಅವರು ತಮ್ಮ ತಂಡದ ನಾಟಕಗಳಿಗೆ ಕೆಲಸ ಮಾಡಲು ಹಚ್ಚಿದರು. ಹಾಗೆ ನನ್ನ ಮತ್ತು ಶಂಕರ್ ನಾಗ್ ಅವರ ನಂಟು ಬೆಳೆಯಿತು, ಬಲಿಯಿತು. ಅವರು ಮಾಡುತ್ತಿದ್ದ ಆ್ಯಕ್ಸಿಡೆಂಟ್ ಮತ್ತು ಮಾಲ್ಗುಡಿ ಡೇಸ್‌ ತರಹದ ಯೋಜನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಅವಕಾಶ ದೊರಕಿತು. ಆಕ್ಸಿಡೆಂಟ್‌ ಸಿನಿಮಾದ ಚಿತ್ರಕಥಾ ರಚನೆಯ ಹಂತದಲ್ಲಿ ಶಂಕರ್‌ನಾಗ್‌, ವಸಂತ ಮೊಕಾಶಿ, ನರಸಿಂಹನ್‌, ಕಾಶಿ, ರಂಗಣ್ಣಿ ಮುಂತಾದ ಗೆಳೆಯರು ಆಡುತ್ತಿದ್ದ ಮಾತುಗಳನ್ನು ಅಕ್ಷರಿಸುವ ಕೆಲಸ ಮಾಡಿದ್ದೆ. ಅವು ನನಗೆ ಸಿನಿಮಾ ಕಲಿಕೆಯ ಆರಂಭಿಕ ಪಾಠಗಳಾದವು ಎನ್ನಬಹುದು. ಆದರೆ ಅದು ಕಲಿಕೆ ಎಂದು ತಿಳಿಯದ ಕಾಪಿ ರೈಟರ್‌ ಕೆಲಸ ಆಗಿತ್ತು. ಅದಾದ ನಂತರ ಮಾಲ್ಗುಡಿ ಡೇಸ್‌ ಹಿಂದಿಯ ಧಾರಾವಾಹಿ ಶುರುವಾಯಿತು. ನನಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಆ ಧಾರಾವಾಹಿಯ ಚಿತ್ರೀಕರಣದ ಕೆಲವು ಕಂತುಗಳಲ್ಲಿ ಜಾನ್‌ ದೇವರಾಜ್‌ ಎಂಬ ಬಾಲ್ಯ ಗೆಳೆಯನ ಜೊತೆಗೆ ಕಲಾ ನಿರ್ದೇಶನದ ತಂಡದಲ್ಲಿ ಸಹಾಯಕ ಆಗಿ ಕೆಲಸ ಮಾಡಿದ್ದೆ. ಜೊತೆಗೆ ಮತ್ತೊಬ್ಬ ಬಾಲ್ಯ ಗೆಳೆಯ ಸುರೇಶ್‌ ಅರಸ್‌ ಈ ಧಾರಾವಾಹಿಯ ಸಂಕಲನಕಾರ ಆಗಿದ್ದರು. ಅವರ ಸಂಕಲನ ತಂಡದಲ್ಲಿಯೂ ಸಹಾಯಕನಾಗಿ ಕೆಲಸ ಮಾಡಿದ್ದೆ. ಇದೆಲ್ಲವೂ ನನ್ನ ಬಿಡುವಿನ ವೇಳೆಯಲ್ಲಿ ಮಾಡಿದ ಕೆಲಸಗಳಾಗಿದ್ದವು. ಆದರೆ ನನಗೇ ತಿಳಿಯದಂತೆ ನಾನು ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂದಿತ್ತು. ಆ ಅನುಭವ ಇವತ್ತಿಗೂ ನನಗೆ ಸಹಾಯ ಮಾಡುತ್ತಿದೆ. ವಿಶೇಷವಾಗಿ ಶಂಕರ್‌ ನಾಗ್‌ ಅವರು ಕೆಲಸವನ್ನು ಯೋಜಿಸುತ್ತಿದ್ದ ರೀತಿ, ನಿರ್ಧಾರ ತೆಗೆದುಕೊಳ್ಳುವ ವೇಗ, ಎಲ್ಲರನ್ನೂ ಸಮಾನರೆಂದು ಭಾವಿಸಿ ಸಾಗುತ್ತಿದ್ದ ನಾಯಕತ್ವದ ಗುಣವು ನಾನು ಮಾಡುವ ಕೆಲಸಗಳಲ್ಲಿಯೂ ಇಳಿದು ಬಂದಿದೆ. ನಾನು ಕೆಲಸ ಮಾಡುವ ತಂಡದಲ್ಲಿ ಹೈರಾರ್ಕಿಯನ್ನು ಪಾಲಿಸದೆ ಕೆಲಸ ಮಾಡುವ ಅಭ್ಯಾಸ ಈವರೆಗೆ ಉಳಿದ ಬಂದಿದೆ.  

ರವಿಚಂದ್ರನ್‌ ಅವರು ಎಂಇಎಸ್‌ ಕಾಲೇಜಿನಲ್ಲಿ ಓದುತ್ತಿದ್ದರು. ನಾನು ಆ ಕಾಲೇಜಿನಲ್ಲಿ ಹಲವು ನಾಟಕ ಶಿಬಿರ ಮಾಡಿ, ನಾಟಕಗಳನ್ನು ನಿರ್ದೇಶಿಸುತ್ತಿದ್ದೆ. ಆ ನಾಟಕಗಳ ತಾಲೀಮಿನ ಸಮಯದಲ್ಲಿ ರವಿಚಂದ್ರನ್‌ ಅವರು ಅಲ್ಲಿಗೆ ಬರುತ್ತಿದ್ದರು. ಸಣ್ಣಪುಟ್ಟ ಮ್ಯಾಜಿಕ್‌ ಮಾಡಿ ತೋರಿಸುತ್ತಿದ್ದರು. ನಾಟಕದಲ್ಲಿ ಪಾತ್ರ ಸಹ ಕೇಳುತ್ತಿದ್ದರು. ಆದರೆ ಅವರು ನಾಟಕ ಶಿಬಿರದಲ್ಲಿ ಇರುತ್ತಿರಲಿಲ್ಲವಾಗಿ ಅವರಿಗೆ ಪಾತ್ರ ಕೊಡುವುದು ಸಾಧ್ಯವಾಗುತ್ತಿರಲಿಲ್ಲ. ಆಗೀಗ ಕಾಲೇಜಿನ ಹತ್ತಿರದ ಹೋಟೆಲ್ಲಿನಲ್ಲಿ ನಾವು ಕಾಫಿ ಕುಡಿಯುವಾಗ ರವಿಚಂದ್ರನ್‌ ಸಹ ಸೇರಿಕೊಳ್ಳುತ್ತಿದ್ದರು. ಹಾಗಾಗಿ ನನಗೆ ಅವರು ಸ್ನೇಹಿತರೂ ಆಗಿದ್ದರು. ನಂತರ ಅವರು ಪ್ರೇಮಲೋಕ ಸಿನಿಮಾ ಮಾಡುವಾಗ ರೂಪತಾರ ಪತ್ರಿಕೆಗಾಗಿ ರವಿಚಂದ್ರನ್‌ ಅವರ ಸಂದರ್ಶನ ಮಾಡಿದ್ದೆ. ಆಗ ನನ್ನನ್ನು ಅವರ ತಂಡಕ್ಕೆ ಸೇರಲು ಕರೆದಿದ್ದರು. ನಾನು ಆಗ ರಂಗಮೂಖೇನ ಶಿಕ್ಷಣ ಎಂಬ ನನ್ನದೇ ರೆಪರ್ಟರಿ ಮಾದರಿಯ ರಂಗತಂಡ ನಡೆಸುತ್ತಿದ್ದೆ. ಹಾಗಾಗಿ ಬರಲಾಗದು ಎಂದಿದ್ದೆ. ಅದಾದ ಮೇಲೆ ನಾನು ಪೂರ್ಣಾವಧಿಗೆ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ದುಡಿಯುವ ತೀರ್ಮಾನ ಮಾಡಿಕೊಂಡು, ಹೆಚ್ಚಾಗಿ ಕಲಾತ್ಮಕ ಎಂದು ಮಾಧ್ಯಮದವರು ಹಣೆಪಟ್ಟಿ ಹಚ್ಚಿದ ಸಿನಿಮಾಗಳಲ್ಲಿ ದುಡಿಯುತ್ತಿದ್ದೆ. ಅವು ಹೆಚ್ಚು ಆದಾಯ ನೀಡುತ್ತಿರಲಿಲ್ಲ. ನಾನು ಬೇರೆ, ಪ್ರೀತಿಸಿ ಮದುವೆಯೂ ಆಗಿಬಿಟ್ಟಿದ್ದೆ. ಜೀವನ ಸಾಗಿಸಲು ಆದಾಯ ಬೇಕೇಬೇಕು ಎಂಬ ಸಂದರ್ಭ ಇತ್ತು. ಆಗ, “ಸ್ವಾಮಿ ವಿವೇಕಾನಂದ” ಸಿನಿಮಾಗಾಗಿ ಕಂಠೀರವ ಸ್ಟುಡಿಯೋದಲ್ಲಿ ನಾನೇ ನಿಂತು ಸೆಟ್‌ ಹಾಕಿಸುತ್ತಿದ್ದಾಗ, ಹಂಸಲೇಖ ಮತ್ತು ಎಂ.ಕೆ. ಸುಬ್ರಹ್ಮಣ್ಯ ಎಂಬ ಗೆಳೆಯರ ಕಾರಣವಾಗಿ ರವಿಚಂದ್ರನ್‌ ಅವರು ಸಹ ಆ ಸೆಟ್‌ ನೋಡಲು ಬಂದಿದ್ದರು. ಅಲ್ಲಿ ನನ್ನನ್ನು ಕಂಡು, ನಮ್ಮ ತಂಡಕ್ಕೆ ಬಾ ಎಂದು ಮತ್ತೆ ಕರೆದರು, ಮುಂಗಡವಾಗಿ ಹಣ ಸಹ ಕೊಟ್ಟರು. ದೊಡ್ಡ ಮೊತ್ತದ ಹಣ ಸಿಕ್ಕ ಕಾರಣಕ್ಕಾಗಿಯೇ ನಾನು ರವಿಚಂದ್ರನ್‌ ಅವರ ತಂಡ ಸೇರಿಕೊಂಡೆ. ಅಲ್ಲಿಂದ ಸುಮಾರು ಹನ್ನೆರಡು ವರುಷಗಳ ಕಾಲ ರವಿಚಂದ್ರನ್‌ ಅವರು ನಾಯಕರಾಗಿದ್ದ ಹಲವು ಸಿನಿಮಾಗಳಿಗೆ ಮತ್ತು ಅವರು ನಿರ್ದೇಶಿಸಿದ ಹಲವು ಸಿನಿಮಾಗಳಿಗೆ ಚಿತ್ರಕತೆ ವಿಭಾಗದಲ್ಲಿ ಸಹಾಯ ಮಾಡಿದೆ. ಸಂಭಾಷಣೆ ಬರೆದೆ. ಸಹನಿರ್ದೇಶಕನಾಗಿಯೂ ಕೆಲಸ ಮಾಡಿದೆ. ಆಗ ನಾನು ಕೆಲಸ ಮಾಡಿದ ಸಿನಿಮಾಗಳ ಬಗ್ಗೆ ವೈಯಕ್ತಿಕವಾಗಿ ನನಗೆ ಅಂತಹ ಪ್ರೀತಿ ಆಗಲೂ ಇರಲಿಲ್ಲ, ಈಗಲೂ ಇಲ್ಲ. ಆದರೆ ಅವು ನನ್ನ ಬದುಕಿಗೆ ಆರ್ಥಿಕ ನೆಮ್ಮದಿ ಒದಗಿಸಿದವು ಎಂಬುದಂತೂ ಸತ್ಯ. ಹೀಗಾಗಿ ಆ ಸಿನಿಮಾಗಳ ನಡುವಿನ ಬಿಡುವಿನಲ್ಲಿ ಹಲವು ನಾಟಕ ಬರೆದೆ, ನಿರ್ದೇಶಿಸಿದೆ. ಅಲ್ಲದೆ ಟೆಲಿವಿಷನ್ನಿಗಾಗಿ ಹಲವು ಕೆಲಸ ಮಾಡಿದೆ. ರವಿಚಂದ್ರನ್‌ ಅವರ ಜೊತೆಗಿನ ಸಿನಿಮಾಗಳಲ್ಲಿ ವಿಶೇಷವಾಗಿ ಕಲಿತದ್ದು ಸಿನಿಮಾ ತಂತ್ರದ ಹಲವು ಮಗ್ಗುಲುಗಳು, ಚಮತ್ಕಾರಿ ದೃಶ್ಯಗಳನ್ನು ಚಿತ್ರಿಸುವ ಕೆಲಸ ಮತ್ತು ಕಡೆಯ ನಿಮಿಷದಲ್ಲಿ ಕತೆಯನ್ನೇ ಬದಲಿಸಿ ಹೊಸದನ್ನು ಎಡಿಟಿಂಗ್‌ ಟೇಬಲ್ಲಿನ ಮೇಲೆ ಸೃಷ್ಟಿಸುವ ಹುಂಬ ಧೈರ್ಯ. ಇವುಗಳಿಗೆ ಹಲವು ಉದಾಹರಣೆ ಹೇಳಬಹುದು. ʻಸಿಪಾಯಿʼಯಂತಹ ಅತ್ಯಂತ ಜನಪ್ರಿಯ ಸಿನಿಮಾವನ್ನು ಬಿಡುಗಡೆಯ ಹಿಂದಿನ ದಿನ ನೋಡಿ, ಉದ್ದ ಹೆಚ್ಚಾಯಿತೆಂದು, ರಾತೋರಾತ್ರಿ ಮರುಸಂಕಲನ ಮಾಡಿ, ಬೆಳಿಗ್ಗೆ ಹತ್ತರ ಪ್ರದರ್ಶನಕ್ಕೆ ಸಿನಿಮಾ ಒದಗಿಸಿದ್ದು ಮರೆಯಲಾಗದ ಸಾಹಸ. ಈ ಬಗೆಯ ಹಲವು ಕೆಲಸ ಮಾಡಿದ ಅನುಭವಗಳು ನನಗೆ ಇಂದಿಗೂ ಸಹಾಯಕ್ಕೆ ಬರುತ್ತಿವೆ. ರವಿಚಂದ್ರನ್‌ ಅವರಿಂದ ಯಾವುದೇ ತೆಳುವಾದ ಕತೆ ಅಥವಾ ಕತೆಯೇ ಇಲ್ಲದ ಸಿನಿಮಾಕ್ಕೂ ಶ್ರೀಮಂತ ಚೌಕಟ್ಟನ್ನು ಒದಗಿಸಿ ಮಾರಾಟ ಮಾಡಬಹುದು ವಿವರವನ್ನು ಕಲಿತೆ.

. ಮೆಗಾ ಧಾರಾವಾಹಿಯ ಹಿಡಿದಿಡುವ ತತ್ತ್ವ…ಅದರ ಪಲ್ಲಟಗಳು…
– ದೈನಿಕ ಧಾರಾವಾಹಿಗಳನ್ನು ಹಿಡಿದಿಡುವ ತತ್ವವನ್ನು ಸರಳವಾಗಿ ಹೇಳುವುದು ಕಷ್ಟ. ಈ ಬಗ್ಗೆ ನಾನು ಬರೆದಿರುವ ಅನೇಕ ಲೇಖನಗಳಿವೆ. ಜೊತೆಗೆ ಈ ಟೆಲಿವಿಷನ್‌ ಎಂಬ ಮಾಧ್ಯಮವು ಕಾಲಾಂತರದಲ್ಲಿ ಪಲ್ಲಟಗೊಳ್ಳುತ್ತಲೇ ಬಂದಿರುವ, ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಲೇ ಇರುವ ವ್ಯಾಪಾರೀ ಮಾಧ್ಯಮ. ಆಯಾ ಕಾಲಕ್ಕೆ ತಕ್ಕಂತೆ ದೈನಿಕ ಧಾರಾವಾಹಿಯನ್ನು ತಯಾರಿಸುವ ಮತ್ತು ನೋಡುಗರನ್ನು ಆ ಕಾರ್ಯಕ್ರಮದ ಜೊತೆಗೆ ಹಿಡಿದಿಡುವ ಕ್ರಮವೂ ಸಹ ಬದಲಾಗುತ್ತಲೇ ಇದೆ. ನಾನು ದೈನಿಕ ಧಾರಾವಾಹಿಗಳನ್ನು ತಯಾರಿಸಲು ಆರಂಭಿಸಿದ ಕಾಲದಲ್ಲಿ ಒಂದೋ ಎರಡೋ ವಾಹಿನಿಗಳಿದ್ದವು. ಸ್ಪರ್ಧೆ ಎಂಬುದು ಬಹುತೇಕ ಇರಲೇ ಇಲ್ಲ. ಜನ ಸಣ್ಣ ಪ್ರಯೋಗಗಳನ್ನೂ ಗಮನಿಸುತ್ತಾ ಇದ್ದರು, ಬೆನ್ನು ತಟ್ಟುತ್ತಾ ಇದ್ದರು. ಹೀಗಾಗಿ ಹಲ ಬಗೆಯ ಪ್ರಯೋಗಗಳನ್ನು ಮಾಡುವುದು ಸಾಧ್ಯವಿತ್ತು. ನಂತರ ಒಂದೊಂದಾಗಿ ಖಾಸಗಿ ವಾಹಿನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅದರೊಂದಿಗೆ ಅನಾರೋಗ್ಯಕರ ಸ್ಪರ್ಧೆಯು ಹೆಚ್ಚಾಯಿತು. ಕತೆ-ಕಥನಕ್ಕಿಂತ ಟಿಆರ್‌ಪಿ ಮುಖ್ಯ ಎಂಬ ಕಾಲಕ್ಕೆ ಬಂದು ತಲುಪಿದೆವು. ಅದರೊಂದಿಗೆ ದೈನಿಕಗಳನ್ನು ಕಟ್ಟುವ ಕ್ರಮವೂ ಸಂಪೂರ್ಣ ಪಲ್ಲಟವಾಯಿತು. ಪ್ರತಿ ಎಂಟು ನಿಮಿಷಕ್ಕೊಂದು ನಾಟಕೀಯ ತಿರುವನ್ನು ತರುವಂತೆ ಚಿತ್ರಕತೆ ಬರೆಯುವಂತಾಯಿತು. ಅದೀಗ ಇನ್ನೂ ಭಿನ್ನಾಗಿ ಹೋಗಿದೆ. ಒಂದು ಕಾಲಕ್ಕೆ ಕಥಾವಸ್ತುವಿನ ಮೇಲೆ ಕಥನ ಕಟ್ಟಡ ಹೆಣೆಯುತ್ತಿದ್ದವರು, ನಂತರ ಭಾವ ಪ್ರಧಾನ ಎಂಬ ಕಥನಕ್ಕೆ ಹೊರಳಿ, ಈಗ ಕತೆಯೂ ಇಲ್ಲ, ಭಾವವೂ ಇಲ್ಲ ಕೇವಲ ಗ್ಲಾಮರ್‌ ಎಂಬ ಕಾಲಕ್ಕೆ ಬಂದಿದ್ದೇವೆ. ಅಂತೆಯೇ ಅವರವರಿಗೆ ಬೇಕಾದ್ದನ್ನು ಜನ ನೋಡುತ್ತಾ ಇದ್ದಾರೆ. ಹೆಚ್ಚು ಟಿಆರ್‌ಪಿ ಬಂದದ್ದು ಹೆಚ್ಚು ಕಾಲ ಪ್ರಸಾರದ ಅವಕಾಶ ಪಡೆಯುತ್ತದೆ. ಕತೆ, ಹೂರಣ, ಕಥನ ಚೆನ್ನಾಗಿರಬಹುದಾದ ಹಲವು ಧಾರಾವಾಹಿಗಳು/ಕಾರ್ಯಕ್ರಮಗಳು ನಂಬರ್‌ ಇಲ್ಲ ಎಂಬ ಕಾರಣಕ್ಕೆ ಬಹುಬೇಗ ನಿಂತಿರುವುದು ಸಹ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮೆಗಾ ಧಾರಾವಾಹಿಯ ತಯಾರಿಗೆ ಇದಮಿತ್ತಂ ಎಂದು ಯಾವುದೇ ಸೂತ್ರ ಹೇಳಲು ಆಗುವುದಿಲ್ಲ. ಆಯಾ ಕಾಲಕ್ಕೆ ತಕ್ಕಂತೆ ಆ ಸಮುದ್ರದಲ್ಲಿ ಈಸುವುದನ್ನು ಕಲಿಯಬೇಕಷ್ಟೇ. ಆದರೆ ಒಂದೊಮ್ಮೆ ಅಪರೂಪದ ಕತೆಗಳನ್ನು ಹೇಳುವ ಅವಕಾಶ ಟೆಲಿವಿಷನ್ನಿನಿಂದಾಗಿ ನನ್ನಂತಹ ಹಲವರಿಗೆ ಸಿಕ್ಕಿತ್ತು ಎಂಬುದಷ್ಟೇ ನನ್ನ ಪಾಲಿಗೆ ಒದಗಿದ ಲಾಭ ಎನ್ನಬಹುದು. ಈಗ ಆ ಬಗೆಯ ಕತೆ ಅಥವಾ ಕಥನಕ್ಕೆ ಅವಕಾಶ ಸಿಗುವುದೇ ಇಲ್ಲ ಎಂಬಂತಾಗಿದೆ.


ನಿಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಮತೀಯವಾದದ ಸಂಗತಿಯನ್ನು ಪದೇಪದೇ ಪ್ರಸ್ತಾಪಿಸಿರುವಿರಿ. ಇದಕ್ಕೆ ಮೂಲ ಕಾರಣವೇನು?
– ನನ್ನ ಕಣ್ಣೆದುರಿಗೆ ಇರುವ ಸಮಾಜದಲ್ಲಿ ಕಳೆದ ಮುವ್ವತ್ತು ವರ್ಷಗಳಿಂದ ಉಲ್ಬಣವಾಗಿರುವ ಖಾಯಿಲೆ ಇದು. ಮತೀಯವಾದ, ಮೆಜಾರಿಟಿಯು ಮೈನಾರಿಟಿಯನ್ನು ತುಚ್ಛವಾಗಿ ನೋಡುವುದು, ಮೇಲ್ಜಾತಿಗಳು ದಲಿತರ ಮೇಲೆ ಮಾಡುವ ದೌರ್ಜನ್ಯ ಉಚ್ಚ್ರಾಯ ಸ್ಥಿತಿಯಲ್ಲಿದೆ. ಇದರಿಂದಾಗಿ ಆಗುವ ತಲ್ಲಣಗಳನ್ನು ನನ್ನ ಕತೆಯಲ್ಲಿ ಮತ್ತೆ ಮತ್ತೆ ಹೇಳುವ ಪ್ರಯತ್ನ ಮಾಡಿದ್ದೇನೆ. ಕೇವಲ ಹಿರಿತೆರೆ ಮಾತ್ರವಲ್ಲ, ನನ್ನ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ಸಹ ಧಾರ್ಮಿಕ ಅಸಹಿಷ್ಣುತೆಯನ್ನು ಕುರಿತು ಮಾತಾಡಿದ್ದೇನೆ. “ನಾಕುತಂತಿ” ಧಾರಾವಾಹಿಯಲ್ಲಿ ಅಂತರ್ಜಾತೀಯ ವಿವಾಹವನ್ನು ಕತೆಯಾಗಿಸಿದ ಉದಾಹರಣೆಯೂ ಇದೆ. ಇಂದು ಅಂತಹ ಕತೆ ಮಾಡಿದ್ದರೆ ʼಲವ್‌ ಜಿಹಾದ್ ಬೆಂಬಲಿಸಿದರು” ಎಂದು ನನ್ನ ಮೇಲೆ ದಾಳಿ ಆಗಬಹುದು. ಆದರೆ ಇಂದಿಗೂ ದಿನಕ್ಕೆ ಒಂದರಂತೆ ಇಂತಹ ಪ್ರಕರಣಗಳ ಸುದ್ದಿ ಬರುತ್ತಲೇ ಇವೆ. ಅವುಗಳನ್ನು ಕತೆಯಾಗಿಸುವ ಸಾಧ್ಯತೆಗಳು ಕಣ್ಣೆದುರು ಬಿಚ್ಚಿಕೊಳ್ಳುತ್ತವೆ.

ನೀವೇ ಗಮನಿಸಿ. ಒಂದೊಮ್ಮೆ ನಾವು ಯಾವುದೇ ನಾಟಕ ಅಥವಾ ಸಿನಿಮಾ ತಂಡ ಕಟ್ಟಿದರೂ ಅದರಲ್ಲಿ ಕನಿಷ್ಟ ಇಬ್ಬರು, ಮೂವರೂ ಮೈನಾರಿಟಿ ಧರ್ಮದವರು ಕೆಲಸಗಾರರಾಗಿಯೋ ನಟರಾಗಿಯೋ ಇರುತ್ತಿದ್ದರು. ಈಗ ಆ ಸಂಖ್ಯೆಯೇ ನಗಣ್ಯ ಎನ್ನುವ ಹಂತಕ್ಕೆ ತಲುಪಿದೆ. ಬಹುತೇಕ ನಾಟಕ ತಂಡಗಳಲ್ಲಿ ಮುಸ್ಲಿಮರು ಇಲ್ಲವೇ ಇಲ್ಲ ಎಂಬಂತಾಗಿದೆ. ನಮ್ಮ ನಡುವೆ ಹದಿಮೂರು ಹದಿನಾಲ್ಕು ಶೇಕಡದಷ್ಟು ಇರುವ ಒಂದು ಸಮುದಾಯದ ಜನ ಇಂತಹ ಸಾಂಸ್ಕೃತಿಕ ಚಟುವಟಿಕೆಯ ಭಾಗವಾಗುವುದೇ ಅಪರೂಪ ಎಂಬಂತಾಗಿರುವುದು ನಮ್ಮಲ್ಲಿ ಪ್ರಶ್ನೆಗಳನ್ನು ಎತ್ತಬೇಕಲ್ಲವೇ? ಈ ಖಾಯಿಲೆಗೆ ಔಷಧಿ ಹುಡುಕಬೇಕು ಎಂದು ಅನಿಸಬೇಕಲ್ಲವೇ? ಈ ಪ್ರಶ್ನೆಗೆ ಉತ್ತರವನ್ನು ನಾನು ಮಾಡಿರುವ ಕೆಲವು ಸಿನಿಮಾಗಳು, ನಾಟಕಗಳು, ಧಾರಾವಾಹಿಗಳು ಹುಡುಕಲು ಪ್ರಯತ್ನಿಸಿವೆ. ಅಷ್ಟೇ.


. ದರ್ಶನ್ ಅವರಂತಹ ನಟನನ್ನು ಹಾಕಿಕೊಂಡು ಸಿನಿಮಾ ಮಾಡುವ ಮಟ್ಟಕ್ಕೆ ನೀವು ನಿಮ್ಮ ನಿರ್ಮಾಣ ಸಂಸ್ಥೆಯನ್ನು ಬೆಳೆಸಿದಿರಿ. ಎಲ್ಲ ಬಗೆಯ ಸಿನಿಮಾಗಳಲ್ಲಿನ ನಿಮ್ಮ ಇರುವಿಕೆಗೂ ಇದಕ್ಕೂ ಇರುವ ಸಂಬಂಧವನ್ನು ವಿವರಿಸಿ.

– ನಾನು ಅರಂಭಿಸಿದ ಪುಟ್ಟ ಸಂಸ್ಥೆ ಬೆಳೆಯಲು ನಾನೊಬ್ಬ ಕಾರಣವಲ್ಲ. ನನ್ನ ಮಡದಿ ಶೈಲಜಾ ನಾಗ್‌ ಅವರ ಕಾಣಿಕೆ ದೊಡ್ಡದು. ಆಕೆ ನಾನು ತಯಾರಿಸಿದ್ದೆಲ್ಲವನ್ನು ಮಾರ್ಕೆಟಿಂಗ್‌ ಮಾಡಿದ್ದರಿಂದಾಗಿ ಅವು ಹಾಕಿದ ಹಣವನ್ನು ಹಿಂದಿರುಗಿಸಿದವು. ನಮ್ಮ ಸಂಸ್ಥೆ ಮತ್ತಷ್ಟು ಹೊಸ ಕಾರ್ಯಕ್ರಮ/ಯೋಜನೆಗಳನ್ನು ಮಾಡುವುದು/ ಮಾಡುತ್ತಿರುವುದು ಸಾಧ್ಯವಾಯಿತು. ನಾವು ಏನನ್ನೇ ಕನಸಬಹುದು. ಆದರೆ ಆ ಕನಸುಗಳನ್ನು ಮಾರುಕಟ್ಟೆಗೆ ತಲುಪಿಸುವುದು ಸಹ ಬೃಹತ್‌ ಸಾಹಸ. ನಾನು ಮಾಡಿದ ಮೊದಲ ದೈನಿಕ ಧಾರಾವಾಹಿ “ಸಾಧನೆ” ಯನ್ನು ಒಂದು ಕಂಪೆನಿಗೆ ಕೊಟ್ಟಿದ್ದೆವು. ಆ ಕಂಪೆನಿ ದಿಢೀರನೆ ಬಾಗಿಲು ಹಾಕಿಕೊಂಡು ದಿಕ್ಕಾಪಾಲಾಗಿದ್ದ ಸಂದರ್ಭದಲ್ಲಿ ನನ್ನ ನಿರ್ದೇಶನ ತಂಡದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಡದಿ ಶೈಲಜಾ ನಾಗ್‌ಗೆ ನಾನು, ʻಮಾರುಕಟ್ಟೆ ಸಂಸ್ಥೆಯನ್ನು ನಾವೇ ಆರಂಭಿಸೋಣʼ ಎಂದೆ. ಅರ್ಥಶಾಸ್ತ್ರದ ವಿದ್ಯಾರ್ಥಿ ಆಗಿದ್ದ ಅವಳು ಮೊದಲಿಗೆ ಹೆದರಿದಳು. ನನಗೆ ಪರಿಚಿತವಿದ್ದ ಜಾಹೀರಾತು ಸಂಸ್ಥೆಗಳವರ ಜೊತೆಗೆ ಮಾತಾಡಿ ಅವಳನ್ನು ಕಳಿಸಲು ತೊಡಗಿದೆ. ನಂತರ ಅವಳ ಜೊತೆಗೆ ನನ್ನ ಕಾರ್ಯಕ್ರಮಗಳಿಗೆ ಪಾಲುದಾರರಾಗಿದ್ದ ಶಿವಕುಮಾರ್‌ ಅವರು ಸಹ ನನ್ನ ಮಡದಿ ಜೊತೆಗೆ ಸೇರಿಕೊಂಡರು. ಕಾಲಾಂತರದಲ್ಲಿ ಅವರಿಬ್ಬರೂ ನಾನು ಆರಂಭಿಸಿದ ಸಂಸ್ಥೆಯನ್ನು ಗೆಲುವಿನತ್ತ ಕರೆದೊಯ್ದರು. ನಾನು ಬರೆದ ಕತೆಯೂ ಶಕ್ತಿಯುತವಾಗಿತ್ತು. ಒಳ್ಳೆಯ ಟಿಆರ್‌ಪಿ ಸಹ ಬರುತ್ತಿತ್ತು. ಜೊತೆಗೆ ಶೈಲಜಾನಾಗ್‌ ಅವರ ಅಗ್ರೆಸಿವ್‌ ಮಾರ್ಕೆಟಿಂಗ್‌ ನಮ್ಮ ಪ್ರಯತ್ನಗಳನ್ನು ಉಳಿಸಿತು.

ಇನ್ನು ನಿಮ್ಮ ಪ್ರಶ್ನೆಯ ಮತ್ತೊಂದು ಭಾಗ ಸ್ಟಾರ್‌ ನಟರ ಸಿನಿಮಾಗಳಲ್ಲಿ ನನ್ನ ಪಾತ್ರವೇನು ಎಂಬುದು. ಇನ್ನಿತರ ಸಿನಿಮಾಗಳಲ್ಲಿ ನಾನೇನು ಮಾಡುತ್ತೇನೋ ಅದೆಲ್ಲ ಕೆಲಸಗಳನ್ನೂ ಇಲ್ಲಿಯೂ ಮಾಡುತ್ತೇನೆ. ಕತೆಯನ್ನು ಆರಿಸುವುದರಿಂದ, ಚಿತ್ರಕತೆ ರಚನೆಯಲ್ಲಿ, ಸಂಭಾಷಣೆಯನ್ನು ಅಂತಿಮಗೊಳಿಸುವುದರಲ್ಲಿ ಮತ್ತು ಚಿತ್ರೀಕರಣದ ಯೋಜನೆ ಮಾಡುವುದು, ಪಾತ್ರಧಾರಿಗಳ ಆಯ್ಕೆ ಎಲ್ಲದರಲ್ಲಿಯೂ ನಾನು ಪಾಲ್ಗೊಳ್ಳುತ್ತೇನೆ. ನಾನು ಯೆಸ್‌ ಅನ್ನದೆ ಯಾವ ಕೆಲಸವೂ ಆಗುವುದಿಲ್ಲ. ನಮ್ಮ ಸಂಸ್ಥೆಯ ಎಲ್ಲಾ ತಯಾರಿಗಳಲ್ಲಿ ಕ್ರಿಯೇಟಿವ್‌ ನಿರ್ಧಾರಗಳನ್ನು ಅಂತಿಮಗೊಳಿಸುವವನು ನಾನೇ. ಆದರೆ ಸ್ಟಾರ್‌ ನಟರ ಅಭಿನಯದ ಸಿನಿಮಾಗಳಲ್ಲಿ ನಾನು ಹೆಚ್ಚು ಮುಂಚೂಣಿಗೆ ಬಂದು ಕಾಣಿಸಿಕೊಳ್ಳುವುದಿಲ್ಲ. ಹಿನ್ನೆಲೆಯಲ್ಲಿದ್ದು ಸೂತ್ರಧಾರಿ ಆಗಿರುತ್ತೇನೆ. ಇದಕ್ಕೆ ಕಾರಣವೂ ಇದೆ. ನಾನು ಕೊಂಚ ನೇರಾನೇರ ಮಾತಾಡುವವನು. ನನ್ನ ನೇರ ಮಾತು ಒಂದು ಬೃಹತ್‌ ಪ್ರಾಜೆಕ್ಟ್‌ಗೆ ತೊಂದರೆ ತರಬಾರದು ಎಂದು ಹಿನ್ನೆಲೆಯಲ್ಲಿ ಇರುತ್ತೇನೆ. ಮೀಡಿಯಾಗಳ ಎದುರಿಗೆ ಇಂತಹ ಪ್ರಾಜೆಕ್ಟ್‌ ಬಗ್ಗೆ ಮಾತಾಡುವಾಗಲೂ ನನಗಿಂತ ಹೆಚ್ಚು ನನ್ನ ಮಡದಿಯನ್ನು ಮುಂದೆ ಇರುವಂತೆ ತಿಳಿಸುತ್ತೇನೆ. ನಾನು ಮಾತಾಡಲೇಬೇಕಾದ ಸಂದರ್ಭ ಬಂದರೆ ಅತ್ಯಂತ ಎಚ್ಚರಿಕೆಯಿಂದ ಮಾತಾಡಲು ಪ್ರಯತ್ನಿಸುತ್ತೇನೆ. ಒಟ್ಟಾರೆ ನನ್ನ ನೇರನುಡಿಯು ದೊಡ್ಡ ಪ್ರಾಜೆಕ್ಟ್‌ಗೆ ತೊಂದರೆ ತರಬಾರದು ಎಂಬುದಷ್ಟೇ ಮುಖ್ಯವಾಗಿರುತ್ತದೆ. ಇನ್ನೂ ನಾನೇ ಪ್ರಧಾನವಾಗಿ ನಿಂತು ನಿರ್ದೇಶಿಸುವ ಸಿನಿಮಾದಲ್ಲಿ ಎಲ್ಲ ಕಡೆಯೂ ನಾನೊಬ್ಬನೇ ಕಾಣುತ್ತಾ ಇರುತ್ತೇನೆ. ಮಾಧ್ಯಮದವರ ಜೊತೆಗೂ ನಾನೇ ಮೊದಲಿಗನಾಗಿ ಮಾತಾಡುತ್ತೇನೆ. ಅಂತಹ ಸಿನಿಮಾಗಳ ಸಂವಾದಕ್ಕೆ ನಾನೇ ಮುಂಚೂಣಿಯಲ್ಲಿ ಇರುತ್ತೇನೆ.   

ಹಾಗಾದರೆ ಇಂತಹ ಸಿನಿಮಾ ಮಾಡುವ ಉದ್ದೇಶವೇನು ಎಂಬ ಪ್ರಶ್ನೆಗೆ ನನ್ನ ಸರಳ ಉತ್ತರವಿಷ್ಟೇ. ಮೊದಲಿನಿಂದಲೂ ಸಹ ನಾನು ನಿರ್ದೇಶಿಸುವಂತಹ ಸಿನಿಮಾಗಳಿಗೆ ಹಣ ಹೂಡುವವರು ಸಿಗುತ್ತಿರಲಿಲ್ಲ. ನಾನು ನಿರ್ದೇಶಕನಾಗಲೂ ಪ್ರಯತ್ನಿಸಿದಾಗೆಲ್ಲಾ ಹಲವು ನಿರ್ಮಾಪಕರು ನಡುಹಾದಿಯಲ್ಲಿ ಹಿಂದೆ ಸರಿದು ನಾಲ್ಕು ಯೋಜನೆಗಳು ಅರ್ಧಂಬರ್ಧ ಆದವು. ಹಾಗಾಗಿ ನಾನು ದೈನಿಕ ಧಾರಾವಾಹಿಗಳಲ್ಲಿ ಬಂದ ಲಾಭವನ್ನು ಇಂತಹ ಸಿನಿಮಾ, ನಾಟಕ ತಯಾರಿಗೆ ತೊಡಗಿಸಲು ಆರಂಭಿಸಿದೆ. “ಸಾಧನೆ” ಧಾರಾವಾಹಿಯಿಂದ ಬಂದ ಹಣದಲ್ಲಿ “ಅರ್ಥ” ಸಿನಿಮಾ ತಯಾರಿಸಿದೆ. “ನಾಕುತಂತಿ”, “ತಕಧಿಮಿತ” ದಾರಾವಾಹಿಗಳಿಂದ ಬಂದ ಲಾಭವು “ಗುಬ್ಬಚ್ಚಿಗಳು”, “ನಾನು ನನ್ನ ಕನಸು” ಎಂಬ ಸಿನಿಮಾಗಳ ನಿರ್ಮಾಣಕ್ಕೆ ಹಾಗೂ ನನ್ನ ನಿರ್ದೇಶನದ “ಪುಟ್ಟಕ್ಕನ ಹೈವೇ” ಆಗಲು ಕಾರಣವಾದವು. ನಂತರ ಮಾಡಿದ “ಅಳಗುಳಿ ಮನೆ” ಹಾಗೂ “ಮದರಂಗಿ” ಧಾರಾವಾಹಿಗಳು ನನ್ನ ನಿರ್ದೇಶನದ “ದೇವರ ನಾಡಲ್ಲಿ” ಮತ್ತು “ಉಪ್ಪಿನ ಕಾಗದ” ಸಿನಿಮಾ ತಯಾರಾಗಲು ಸಹಾಯ ಮಾಡಿದವು. ಆದರೆ ಈಗ ಟೆಲಿವಿಷನ್‌ ವ್ಯಾಪಾರದಿಂದ ಆ ಬಗೆಯ ಲಾಭ ಬರುವುದಿಲ್ಲ. ಹಾಗಾಗಿ ಸ್ಟಾರ್‌ ನಟರ ಸಿನಿಮಾಗಳನ್ನು ತಯಾರಿಸಿ ಅದರಲ್ಲಿ ಬರುವ ಲಾಭಾಂಶವನ್ನು ನನ್ನ ಪ್ರಯೋಗಗಳಿಗೆ ಬಳಸುವಂತಾಗಿದೆ. ಹಾಗೆಂದು ಸ್ಟಾರ್‌ ನಟರ ಸಿನಿಮಾಗಳಲ್ಲಿ ಲಾಭ ಗಳಿಕೆಯನ್ನೇ ಪ್ರಧಾನವಾಗಿಸದೆ, ಸಾಮಾಜಿಕ ಕಳಕಳಿ ಇರುವ ಕತೆಗಳನ್ನು ಆರಿಸಿಕೊಂಡು, ನಮ್ಮ ಬದ್ಧತೆಯಲ್ಲಿ ರಾಜಿ ಮಾಡಿಕೊಳ್ಳದೆ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಈ ವರೆಗೆ ನಾನು ನನ್ನ ಸಂಸ್ಥೆ ತಯಾರಿಸಿರುವ ಸಿನಿಮಾಗಳು ಉದಾಹರಣೆಗಳಾಗಿ ನಿಮ್ಮ ಮುಂದಿವೆ. ಒಟ್ಟಾರೆ ಒಳಿತು ಎಂಬುದಕ್ಕೆ ಆಧಾರವಾಗಲು ಜನಪ್ರಿಯವಾದುದನ್ನು ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ.

. ಪುಟ್ಟಕ್ಕನ ಹೈವೇಯನ್ನು ಇವತ್ತಿಗೆ ಅನ್ವಯಿಸಿ ಬರೆದರೆ….
– “ಪುಟ್ಟಕ್ಕನ ಹೈವೇ” ಯಾವತ್ತಿಗೂ ಪ್ರಸ್ತುತವಾಗಬಹುದಾದ ಕತೆಯೇ. ಅಭಿವೃದ್ಧಿಯೇ ಓಘದಲ್ಲಿ ಅನಕ್ಷರಸ್ಥರು ಮತ್ತು ಹಿಂದುಳಿದವರು ತಬ್ಬಲಿಗಳಾಗುವುದು ಇವತ್ತಿಗೂ ಕಾಣುತ್ತಿರುವ ಸತ್ಯವೇ. ಮೂಲ ಕತೆ ನಾಗತಿಹಳ್ಳಿ ಚಂದ್ರಶೇಖರ್‌ ಅವರ “ಪುಟ್ಟಕ್ಕನ ಮೆಡಿಕಾಲ್‌ ಕಾಲೇಜು”. ಅದರಲ್ಲಿ ಕಣ್ಣಿಗೆ ಕಾಣುವಂತೆ ಇದ್ದ ಮಠಾಧೀಶನೇ ಖಳ ಎಂಬುದನ್ನು ನಾನು ವ್ಯವಸ್ಥೆಯೇ ಖಳ ಎಂಬಂತೆ ಬದಲಿಸಿದ್ದೆ. ಹಾಗಾಗಿ ಈಗಲೂ ಪುಟ್ಟಕ್ಕನ ಹೈವೇ ಸಿನಿಮಾ ನೋಡಿದವರು ತಾವು ಓಡಾಡುವ ಹೆದ್ದಾರಿಯಲ್ಲಿನ ಸೇತುವೆ ದಾಟುವಾಗ ಕೆಳಗೆ ಯಾವ ಘೋರಗಳು ನಡೆಯುತ್ತಿದೆಯೋ ಎಂದು ಯೋಚಿಸುವಂತಾಗುತ್ತದೆ. ನಾನು ʻಪುಟ್ಟಕ್ಕನ ಹೈವೇʼ ತಯಾರಿಸಿದ್ದು ೨೦೧೦ರಲ್ಲಿ. ಅಂದರೆ ೨೦೦೨ರಿಂದ ಬರೆದ ಹಲವು ಆವೃತ್ತಿಗಳು ರಚನೆಯಾಗಿ ಅದು ಸರಿ ಎನಿಸದೆ, ೨೦೦೭ರಲ್ಲಿ ನಾನು ನೋಡಿದ ಮೈನಾ ಚಂದ್ರು ನಿರ್ದೇಶನದ “ಪುಟ್ಟಕ್ಕನ ಮೆಡಿಕಲ್‌ ಕಾಲೇಜು” ನಾಟಕ ನೋಡಿದ ನಂತರ, ನಾನು ಯೋಚಿಸಿದ ಕತೆಗೆ ಇದು ಸರಿಯಾದ ರೂಪ ಎನಿಸಿ ಅಂತಿಮ ರೂಪ ಸಿದ್ಧ ಮಾಡಿ, ಕತೆಗಾರರಿಂದ ಹಕ್ಕು ಪಡೆದು ಆ ಸಿನಿಮಾ ಸಿದ್ಧ ಮಾಡಿದೆ. ಅಲ್ಲಿಂದ ಇವತ್ತಿಗೆ ಮತ್ತೊಂದು ದಶಕದ ಅನುಭವ ಸೇರಿದೆ. ಈಗ ಅದೇ ಕತೆ ಮಾಡಿದ್ದರೆ ಇನ್ನಷ್ಟು ಅನುಭವಗಳು ಕಥನದೊಳಗೆ ಸೇರುತ್ತಿದ್ದವು. ಈ ಸಿನಿಮಾದ ಮೂಲ ಆಶಯದಲ್ಲಿ ಇರುವ ʼದುರ್ಬಲರು, ಅನಕ್ಷರಸ್ಥರು ಈ ಬಗೆಯ ಅಭಿವೃದ್ಧಿಯ ಯೋಜನೆಗಳಲ್ಲಿ ನ್ಯಾಯ ದೊರೆಯದೆ ತಬ್ಬಲಿಗಳಾಗುತ್ತಾರೆʼ ಎಂಬ ವಿವರವಂತೂ ಸಧ್ಯಕ್ಕೆ ಬದಲಾಗುವ ಸೂಚನೆ ಕಾಣುತ್ತಿಲ್ಲ. ನಮ್ಮಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಬರುತ್ತಿರುವ ಸರ್ಕಾರಗಳು, ಆಡಳಿತ ಯಂತ್ರಗಳು ಬಡವರನ್ನು ಬಳಸಿಕೊಂಡು ಕುರ್ಚಿ ಹಿಡಿದು, ನಂತರ ಅವರನ್ನು ಮರೆತಂತೆ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ “ಪುಟ್ಟಕ್ಕನ ಹೈವೇ” ಚಿತ್ರವು ಯಾವತ್ತಿಗೂ ಪ್ರಸ್ತುತವಾಗುತ್ತದೆ ಎಂದು ಭಾವಿಸುತ್ತೇನೆ.


. ಉಪ್ಪಿನ ಕಾಗದದಲ್ಲಿನ ಕೇಂದ್ರ ಪಾತ್ರದ ಹುಡುಕಾಟ ನಿಮ್ಮದೂ ಹುಡುಕಾಟವೆ?
– ಉಪ್ಪಿನ ಕಾಗದದ ಕೇಂದ್ರ ಪಾತ್ರ ಕೇವಲ ಒಂದಲ್ಲ. ಅಲ್ಲಿ ತನ್ನ ತಂದೆಯನ್ನು ಹುಡುಕುವ ಮಗಳು ಮತ್ತು ನಿನ್ನೆಯ ನೋವುಗಳನ್ನು – ಗಾಯಗಳನ್ನು ನೆನಪಿಸಿಕೊಳ್ಳುತ್ತಾ ಮಾತು ಮರೆತಂತೆ ಬದುಕುತ್ತಿರುವ ಶಿಲ್ಪಿ ಸಹ ಇದೆ. ಇವೆರಡೂ ಪಾತ್ರಗಳು ನನ್ನನ್ನು ಯಾವತ್ತಿಗೂ ಕಾಡುತ್ತವೆ. ಮಗಳಿಗೆ ತನ್ನನ್ನು ತಂದೆಯಾದವನು ಯಾಕೆ ದೂರ ಮಾಡಿದ ಎಂಬ ಪ್ರಶ್ನೆಗೆ ಉತ್ತರ ಬೇಕಿದೆ. ಶಿಲ್ಪಿಗೆ ತನ್ನ ಕಣ್ಣೆದುರಿಗೆ ಕೋಮುಗಲಭೆಯಲ್ಲಿ ತನ್ನ ಮಡದಿ, ಮಗಳು, ಗೆಳೆಯನನ್ನು ಕಳೆದುಕೊಂಡ ಸಂಕಟವು ನಿದ್ರೆ ಇಲ್ಲದಂತೆ ಮಾಡಿದೆ. ಇದು ಕೇವಲ ಆ ಪಾತ್ರದ ಸಂಕಟವಲ್ಲ. ಒಟ್ಟಾರೆಯಾಗಿ ಈ ಬಗೆಯ ಮತೀಯ ಅಥವಾ ಧಾರ್ಮಿಕ ಕಲಹಗಳಲ್ಲಿ ಮುಳುಗಿರುವ ಯಾವುದೇ ದೇಶದ ಯಾರನ್ನಾದರೂ ಕಾಡುವ ಪ್ರಶ್ನೆಗಳು. ಒಂದರ್ಥದಲ್ಲಿ ಇಡೀ ಜಗತ್ತಿನ ಯಾವುದೇ ಮೂಲೆಯಲ್ಲಿ ಇರುವ ವ್ಯಕ್ತಿಗೆ ಇಂತಹ ಕತೆ ಹಾಗು ಪಾತ್ರಗಳು ಕಾಡುತ್ತವೆ. ಹಾಗಾಗಿ ಇದು ನನ್ನೊಬ್ಬನ ಹುಡುಕಾಟವಲ್ಲ. ಸಮಾಜ ಒಂದರಲ್ಲಿ ಸದಾ ಸೌಹಾರ್ದ ಇರಬೇಕೆಂದು ಬಯಸುವ ಯಾವುದೇ ವ್ಯಕ್ತಿಯ ಹುಟಕಾಟ ಎನ್ನಬಹುದು.  


. ಮಲಯಾಳದಲ್ಲಿ ಸಿನಿಮಾ ಸಮಾಜ, ಸಿನಿಮಾ ನಿರ್ಮಾಣದ ಆರ್ಥಿಕ ವ್ಯವಸ್ಥೆಗಾಗಿ ಹುಟ್ಟಿಕೊಂಡ ಸಹಕಾರ ಪದ್ಧತಿಯ ಹಿಂದೆ ಅಡೂರ್ ಗೋಪಾಲಕೃಷ್ಣನ್ ಅವರ ದೊಡ್ಡ ವ್ಯವಸಾಯವಿದೆ. ಅವರು ಒಟಿಟಿ ಸಿನಿಮಾವನ್ನು ನುಂಗುತ್ತಿದೆ ಎಂದಿದ್ದಾರೆ. ಇದನ್ನು ನೀವು ಹೇಗೆ ವ್ಯಾಖ್ಯಾನಿಸುವಿರಿ?

– ಮಲೆಯಾಳ ಚಿತ್ರರಂಗದ ಸಹಕಾರಿ ವ್ಯವಸ್ಥೆ ಯಾವುದೇ ಚಿತ್ರರಂಗಕ್ಕೆ ಮಾದರಿಯಾಗಬಲ್ಲಂತಹ ವ್ಯವಸ್ಥೆ. ಅಲ್ಲಿ ಸಾಹಿತಿಗಳ, ಬುದ್ಧಿಜೀವಿಗಳ ಬೃಹತ್‌ ಸೇನೆಯು ಉತ್ತಮ ಅಭಿರುಚಿಯ ಸಿನಿಮಾ ನಿರ್ಮಾಣವು ನಿರಂತರವಾಗಿ ನಡೆಯಲು ಕಾರಣವಾಗಿದೆ. ಆ ಉದ್ಯಮವು ಹೊಸ ಬರಹಗಾರರನ್ನು, ತಂತ್ರಜ್ಞರನ್ನು ತರಲು ಕಾರಣವಾಗಿದೆ. ಹೀಗೆ ಬಂದ ಹೊಸ ತಲೆಮಾರುಗಳು ಸಿನಿಮಾ ಕಥನದಲ್ಲಿ ಮಾಡುತ್ತಿರುವ ಪ್ರಯೋಗಗಳು ಅಪರೂಪದ್ದು ಮತ್ತು ಸಾರ್ಥಕ ಭಾವ ಮೂಡಿಸುವಂತಹದು.

ಇನ್ನು ನಿಮ್ಮ ಪ್ರಶ್ನೆಯ ಎರಡನೇ ಭಾಗದಲ್ಲಿ ಒಟಿಟಿ ಕುರಿತು ಕೇಳಿದ್ದೀರಿ. ಈ ಒಟಿಟಿ ಎಂಬುದು ಹೊಸ ಮಾದರಿಯ ವೇದಿಕೆ. ಇದು ಅತಿ ಹೆಚ್ಚು ಹಣ ಹೂಡಿಕೆ ಬೇಡುವ ವೇದಿಕೆಯೂ ಹೌದು. ಯಾವುದೇ ಒಟಿಟಿಗೆ ಹೆಚ್ಚು ಚಂದಾದಾರರು ಯಾವಾಗ ಸಿಗುತ್ತಾರೆ ಎಂದರೆ ಆ ಷೋಕೇಸಿನಲ್ಲಿ ಅತಿಹೆಚ್ಚು ಬೇಡಿಕೆಯುಳ್ಳ ಸಿನಿಮಾಗಳು ಇದ್ದಾಗ. ಹಾಗಾಗಿ ಈ ಒಟಿಟಿಗಳು ಜನಪ್ರಿಯ ಸಿನಿಮಾಗಳನ್ನು ಕೊಂಡು, ಅವುಗಳ ಮೂಲಕ ತಮ್ಮ ಚಂದಾದಾರರ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುತ್ತವೆ. ಇಂತಲ್ಲಿ ಸಿನಿಮಾ ಎಂಬುದರ ಸರ್ವತೋಮುಖ ಬೆಳವಣಿಗೆಗಿಂತ ಆಯಾ ಒಟಿಟಿಗೆ ಲಾಭ ಗಳಿಕೆಯೇ ಪ್ರಧಾನವಾದ ಉದ್ದೇಶವಾಗಿರುತ್ತದೆ. ಹಾಗಾಗಿ ಈ ಒಟಿಟಿಗಳು ಪ್ರಯೋಗಾತ್ಮಕ ಅಥವಾ ಜನಪ್ರಿಯವಲ್ಲದ ಸರಕುಗಳಿಗೆ ಹಣ ಹೂಡುವುದಿಲ್ಲ. ಆಕಸ್ಮಿಕವಾಗಿ ಹಣ ಹೂಡಿದರೂ ಅಂತಹ ಸಿನಿಮಾಗಳಲ್ಲಿ ಯಾರೋ ಜನಪ್ರಿಯ ನಟ ಇದ್ದಾಗ ಮಾತ್ರ ಹಣ ಹೂಡುತ್ತವೆ. ಈ ಹಿನ್ನೆಲೆಯಲ್ಲಿ ಅಡೂರ್‌ ಗೋಪಾಲಕೃಷ್ಣನ್‌ ಅವರ ಮಾತುಗಳನ್ನು ಗಮನಿಸಬೇಕು. ಅಡೂರ್‌ ಅವರು ಅಥವಾ ನಮ್ಮವರೇ ಆದ ಗಿರೀಶ್‌ ಕಾಸರವಳ್ಳಿ ಅವರು ಮಾಡುವ ಪ್ರಯೋಗಗಳಲ್ಲಿ ಜನಪ್ರಿಯ ನಟರ ಭಾಗವಹಿಕೆ ಕಡಿಮೆ. ಆದರೆ ಅವು ಸಿನಿಮಾದ ದೃಷ್ಟಿಯಿಂದ ಶ್ರೇಷ್ಟ ಪ್ರಯೋಗಗಳು. ಇವುಗಳಿಗೆ ಈ ಹಿಂದೆಯೂ ಮಾರುಕಟ್ಟೆ ಇರಲಿಲ್ಲ. ಈಗಲೂ ಇಲ್ಲ. ಸರ್ಕಾರ ಕೊಡಮಾಡುವ ಪ್ರಶಸ್ತಿಗಳು ಅಥವಾ ಸಬ್ಸಿಡಿಗಳಿಂದಲೇ ಈ ಬಗೆಯ ಪ್ರಯೋಗಗಳು ಬದುಕಲು ಸಾಧ್ಯ. ಆದರೆ ಸರ್ಕಾರಗಳು ಮುಕ್ತ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಒಪ್ಪಿಕೊಂಡಿವೆ. ಅವು ಎಲ್ಲಾ ಬಗೆಯ ಸಬ್ಸಿಡಿಯನ್ನು ಕತ್ತರಿಸುತ್ತಿವೆ. ಪ್ರಶಸ್ತಿಗಳಿಗೆ ಕೆಲವು ಚಿತ್ರೋತ್ಸವಗಳು ಹೆಚ್ಚಿನ ಹಣ ನೀಡುತ್ತವೆ. ಆದರೆ ಅಲ್ಲಿಯೂ ಪ್ರಶಸ್ತಿಗಳು ಸಿಗುವುದು ಜನಪ್ರಿಯ ಸಿನಿಮಾಗಳಿಗೆ ಎಂಬಂತಾಗಿದೆ. ಅಪರೂಪಕ್ಕೊಮ್ಮೆ ಪ್ರಯೋಗಾತ್ಮಕ ಸಿನಿಮಾಗಳು ಇಂತಹ ಪ್ರಶಸ್ತಿ ತೆಗೆದುಕೊಳ್ಳುವುದೂ ಉಂಟು. ಇಂತಹ ಸನ್ನಿವೇಶದಲ್ಲಿ ಈ ಬಗೆಯ ಪ್ರಯೋಗಾತ್ಮಕ ಅಥವಾ ಸಮಾನಂತರ ಚಿಂತನೆಯ ಸಿನಿಮಾ ತಯಾರಿಕೆಗೆ ಹಣ ಹೂಡುವುದು ಮತ್ತು ಆ ಹೂಡಿಕೆಯನ್ನು ಹಿಂದಕ್ಕೆ ಪಡೆಯುವುದು ಬೃಹತ್‌ ಸಾಹಸವಾಗಿದೆ. ದು ಕಾಲದಲ್ಲಿ ಈ ಬಗೆಯ ಸಿನಿಮಾ ಬಿಡುಗಡೆ ಆದರೆ ಚಿತ್ರಮಂದಿರಕ್ಕೆ ಬಂದು ನೋಡುತ್ತಿದ್ದವರು ಇಂದು ಎಂದಾದರೊಂದು ದಿನ ಒಟಿಟಿಯಲ್ಲಿ ಬರುತ್ತದೆ ಎಂದು ಚಿತ್ರಮಂದಿರಗಳಲ್ಲಿ ಈ ಬಗೆಯ ಸಿನಿಮಾ ಬಿಡುಗಡೆ ಆದಾಗ ಹೋಗುವುದಿಲ್ಲ. ಹಾಗಾಗಿ ಸಿನಿಮಾ ಮಂದಿರದಲ್ಲಿ ಈ ಚಿತ್ರಗಳಿಗೆ ಗಳಿಕೆಯೇ ಆಗುವುದಿಲ್ಲ. ಒಟಿಟಿಯವರು ಈ ಸಿನಿಮಾಗಳಿಂದ ತಮಗೆ ಹೆಚ್ಚು ಚಂದಾದರರು ಬರಲಾರರು ಎಂಬ ಕಾರಣ ನೀಡಿ ಕೊಳ್ಳುವುದಿಲ್ಲ. ಹೀಗಾಗಿ ಈ ಬಗೆಯ ಸಿನಿಮಾಗಳು ಯಾವತ್ತಿಗೂ ತಬ್ಬಲಿಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಅಡೂರ್‌ ಗೋಪಾಲಕೃಷ್ಣನ್‌ ಅವರ ಹೇಳಿಕೆಯನ್ನು ಗಮನಿಸಿದರೆ ಅದು ಸತ್ಯ ಎನ್ನಬೇಕಾಗುತ್ತದೆ.

ಈ ಪರಿಸ್ಥಿತಿಯನ್ನು ದಾಟಲು ಇರುವುದು ಒಂದೇ ಮಾರ್ಗ. ಅದು ಸಹಕಾರಿ ತತ್ವದಲ್ಲಿ ಚಿತ್ರಗಳ ತಯಾರಕರು ಸೇರಬೇಕು. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಣ್ಣ ಇನ್ನೂರು, ಮುನ್ನೂರು ಜನ ಕೂರುವ ಪ್ರದರ್ಶನ ಮಂದಿರಗಳನ್ನು ತೆರೆಯಬೇಕು. ಹಾಗೂ ಅಲ್ಲಿಗೆ ಪ್ರವೇಶ ದರ ಕಡಿಮೆ ಇಟ್ಟು ಸಾಮಾನ್ಯ ಜನ ಬರುವಂತೆ ಮಾಡಬೇಕು. ಈ ಬಗೆಯ ಕೆಲಸ ಮಾಡಲು ಸರ್ಕಾರಗಳು ಸಬ್ಸಿಡಿಗಳನ್ನು ನೀಡಿ ಸಹಾಯ ಮಾಡಬೇಕಾಗುತ್ತದೆ. ಆ ಬಗೆಯಲ್ಲಿ ಸಹಾಯ ಮಾಡುವಂತಹ ಮನಸ್ಸುಳ್ಳ ಜನಸ್ನೇಹಿ ಸರ್ಕಾರಗಳನ್ನು ಮೊದಲಿಗೆ ಜನರೇ ಆರಿಸಬೇಕಿದೆ. ಇಲ್ಲವಾದರೆ ಆಯಾ ಸರ್ಕಾರಗಳು ತಮ್ಮ ಅಜೆಂಡಾಗಳಿಗೆ ಹೊಂದುವಂತಹ ಯೋಜನೆಗಳಿಗೆ ಮಾತ್ರ ಹಣ ಸಹಾಯ ನೀಡುತ್ತವೆ. ಅವುಗಳು ಆಡೂರು ಅಥವಾ ಗಿರೀಶ್‌ ಕಾಸರವಳ್ಳಿಯಂತವರು ತಯಾರಿಸುವ ಸಮಾನಂತರ ಚಿತ್ರ ಚಳುವಳಿಗೆ ಸಹಾಯ ಆಗುವುದು ಅನುಮಾನ. ಅಕಸ್ಮಾತ್‌ ಸಹಾಯ ಸಿಕ್ಕರೂ ಆಯಾ ಸರ್ಕಾರದ ಅಜೆಂಡಾಗಳಿಗೆ ಹೊಂದುವ ಹೂರಣ ಉಳ್ಳ ಸಿನಿಮಾಗಳಿಗೆ ಸಹಾಯ ಸಿಗಬಹುದು. ನನ್ನಂತಹವರು ತಯಾರಿಸುವ ಆಳುವ ಸರ್ಕಾರಗಳನ್ನು ಪ್ರಶ್ನಿಸುವ ಕತೆಗಳಿಗೆ ಯಾವತ್ತಿಗೂ ನೆರವು ಸಿಗುವುದು ಕಷ್ಟವೇ. ಹಾಗಾಗಿಯೇ ನಾನು ಜನಪ್ರಿಯ ಸಿನಿಮಾ ತಯಾರಿಸಿ ಅದರ ಲಾಭವನ್ನು ಈ ಬಗೆಯ ಸಿನಿಮಾ, ನಾಟಕಗಳಿಗೆ ತೊಡಗಿಸುವ ಪ್ರಯತ್ನ ಮಾಡುತ್ತಾ ಇದ್ದೇನೆ.
ನನ್ನ “ಉಪ್ಪಿನ ಕಾಗದ” ಸಿನಿಮಾ ತಯಾರಾದದ್ದು ೨೦೧೬ರಲ್ಲಿ. ಇವತ್ತಿನ ವರೆಗೆ ಆ ಸಿನಿಮಾವನ್ನು ಯಾವುದೇ ಒಟಿಟಿಗೆ ಮಾರಾಟ ಮಾಡುವುದು ಸಾಧ್ಯವಾಗಿಲ್ಲ. ಬಿಡುಗಡೆ ಮಾಡಿದರೆ ಪ್ರಚಾರದ ದುಡ್ಡು ಮತ್ತು ಪ್ರದರ್ಶನ ಮಂದಿರದ ಬಾಡಿಗೆ ಎತ್ತುವಷ್ಟು ಜನ ಬರುವ ಸೂಚನೆಯೂ ಕಾಣುತ್ತಿಲ್ಲ. ಇದಕ್ಕೆ ಕಾರಣವನ್ನೂ ಈ ಹಿಂದೆ ಚರ್ಚಿಸಿದ್ದೇವೆ. ಹಾಗಾಗಿ ʻಒಳ್ಳೆಯ ಸಿನಿಮಾʼ ತಯಾರಿಕೆ ಕಷ್ಟವಲ್ಲ. ಅದನ್ನು ಜನರ ಬಳಿಗೆ ಕೊಂಡೊಯ್ಯುವುದು ಕಷ್ಟವಾಗಿದೆ. “ಪುಟ್ಟಕ್ಕನ ಹೈವೇ” ಮಾಡಿದಾಗ ʻಟೂರಿಂಗ್‌ ಟಾಕೀಸ್‌ʼ ಎಂಬ ಸಂಸ್ಥೆ ಆರಂಭಿಸಿ ಈ ನಾಡಿನ ೫೦೦ಕ್ಕೂ ಹೆಚ್ಚು ನಗರಗಳಲ್ಲಿ ಶಾಲೆಗಳಲ್ಲಿ ಅಥವಾ ಸಣ್ಣ ಸಭಾಂಗಣದಲ್ಲಿ ಟಿಕೆಟ್‌ ಇರಿಸಿ ಪ್ರದರ್ಶನ ಮಾಡಿದ್ದೆವು. ಅದನ್ನೊಂದು ಅಭಿಯಾನ ಎಂಬಂತೆ ನಾಲ್ಕು ವರ್ಷ ಮಾಡಿದ್ದರಿಂದ ಆ ಸಿನಿಮಾ ಹಲವು ಜನರಿಗೆ ತಲುಪಿತು. ನಮಗೂ ನೋಡುಗರಿಂದ ಒಳ್ಳೆಯ ಮೊತ್ತ ಹಿಂದಿರುಗಿತು. ಪ್ರತೀ ಸಿನಿಮಾ ಮಾಡಿದಾಗಲೂ ಹೀಗೆ ಅದನ್ನು ಹೊತ್ತು ತಿರುಗುವುದು ಯಾವುದೇ ಚಿತ್ರ ತಯಾರಕನಿಗೆ ಕಷ್ಟಸಾಧ್ಯ. ಹಾಗಾಗಿ ಈ ಬಗೆಯ ಹೋರಾಟ ಎಷ್ಟು ಕಾಲ ನಡೆಸಲಾದೀತು ಎಂಬ ಆತಂಕ ಸದಾ ಕಾಡುತ್ತಲೇ ಇರುತ್ತದೆ. ಅದೇ ಹಿನ್ನೆಲೆಯಲ್ಲಿ ಅಡೂರು ಗೋಪಾಕೃಷ್ಣನ್‌ ಅವರು ಆಡಿರುವ ಮಾತನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ.


. ತಮಿಳಿನಲ್ಲಿ ದ್ರಾವಿಡ ಸಂಸ್ಕೃತಿ ಇದೆ. ಅಲ್ಲಿ ಮುಖ್ಯವಾಹಿನಿಯ ಸಿನಿಮಾಗಳಲ್ಲಿಯೂ ಪ್ರಯೋಗಮುಖಿಗಳನ್ನು ಸಲೀಸಾಗಿ ಸ್ವೀಕರಿಸುವುದನ್ನು ನೋಡಬಹುದು. ನಮ್ಮಲ್ಲಿ ಈ ವಿಷಯದಲ್ಲಿ ಕಂದಕ ಇರುವುದು ಯಾಕೆ?
– ದ್ರಾವಿಡ ಸಂಸ್ಕೃತಿ ಕೇವಲ ತಮಿಳಿಗೆ ಸೀಮಿತವಲ್ಲ. ಅದು ಇಡಿಯಾಗಿ ದಕ್ಷಿಣ ಭಾರತದ್ದು. ಎಲ್ಲಾ ಭಾಷೆಯಲ್ಲಿ ಆ ಬಗೆಯ ಸಿನಿಮಾಗಳು ಬರುತ್ತಿವೆ. ಆದರೆ ತಮಿಳು ಚಿತ್ರರಂಗದಲ್ಲಿ ವೆಟ್ರಿಮಾರನ್‌ ಮತ್ತು ಪ. ರಂಜಿತ್‌ ಬಳಗ ಕೇವಲ ದ್ರಾವಿಡ ಸಂಸ್ಕೃತಿಯನ್ನು ಮಾತ್ರವಲ್ಲ ಅಂಬೇಡ್ಕರ್‌ ಫಿಲಾಸಫಿಯನ್ನು ಸಹ ಪ್ರಧಾನ ವಾಹಿನಿಗೆ ತರುವ ನಿರಂತರ ಪ್ರಯೋಗ ಮಾಡುತ್ತಿವೆ. ಇದು ನಿಜಕ್ಕೂ ಮೆಚ್ಚತಕ್ಕ ಕೆಲಸ. ಇಡಿಯಾಗಿ ಕಳೆದ ಏಳು ದಶಕಗಳಿಂದ ಪ್ರಾತಿನಿಧ್ಯ ಸಿಗದ ಜಗತ್ತೊಂದು ಈ ಕಥನಗಳ ಮೂಲಕ ತೆರೆದುಕೊಳ್ಳುತ್ತಿದೆ. ಈ ಸಿನಿಮಾಗಳಲ್ಲಿ ಜನಪ್ರಿಯ ನಾಯಕರು ಸಹ ಭಾಗವಹಿಸುತ್ತಾ ಇರುವುದರಿಂದ ಇಂತಹ ಪ್ರಯೋಗಳಿಗೆ ಜನ ಬೆಂಬಲ ಸಹ ದೊರಕುತ್ತಿದೆ. ಅದೇ ಬಗೆಯಲ್ಲಿ ನಮ್ಮಲ್ಲಿಯೂ ಜನಪ್ರಿಯ ನಟರು ಇಂತಹ ಪ್ರಯೋಗಗಳಿಗೆ ತೆರೆದುಕೊಂಡಾಗ ಇಲ್ಲಿಯೂ ಆ ಬಗೆಯ ಸಿನಿಮಾಗಳು ಬರುವುದು ಸಾಧ್ಯವಾಗಬಹುದು. ಸಧ್ಯಕ್ಕೆ ಆ ಬಗೆಯ ಪ್ರಯೋಗಕ್ಕೆ ತೆರೆದುಕೊಳ್ಳಬಹುದಾದ ಜನಪ್ರಿಯ ನಾಯಕರು ನಮ್ಮಲ್ಲಿ ಕಡಿಮೆ. ಹಾಗಾಗಿ ನಮ್ಮಲ್ಲಿ ಆ ಬಗೆಯ ಕಥನಗಳು ಸಮಾನಂತರ ಪ್ರಯೋಗಗಳಲ್ಲಿ ಆಗುತ್ತಿವೆ. ಅವು ಹಣ ಸಂಗ್ರಹ ಮಾಡುವುದರಲ್ಲಿ ಹಿಂದಿವೆ. ಅದಕ್ಕೆ ಕಾರಣಗಳನ್ನು ಈ ಹಿಂದಿನ ಉತ್ತರದಲ್ಲಿ ಕೊಂಚ ಚರ್ಚಿಸಿದ್ದೇನೆ. ಯಾವುದು ಹಣ ಸಂಗ್ರಹದಲ್ಲಿ ಹಿಂದಿರುತ್ತದೋ ಆ ಬಗೆಯ ಪ್ರಯೋಗಕ್ಕೆ ಹೂಡಿಕೆದಾರರು ಬರುವುದು ಅಪರೂಪ. ಹಾಗಾಗಿ ನಮ್ಮಲ್ಲಿ ಆ ಬಗೆಯ ಪ್ರಯೋಗ ಅತ್ಯಲ್ಪ ಅನ್ನಬಹುದು. ಆ ಅತ್ಯಲ್ಪ ಸಂಖ್ಯೆಯ ಪ್ರಯೋಗದಲ್ಲಿ ಮಂಸೋರೆ ಅವರ ಕೆಲವು ಸಿನಿಮಾಗಳು, ಪಾಲಾರ್‌ ಮುಂತಾದ ಸಿನಿಮಾಗಳು, ಕೃಷ್ಣಮೂರ್ತಿ ಚಾಮರಂ ಅವರ ಪ್ರಯೋಗ – ಹೀಗೆ ಇನ್ನೂ ಹಲವು ಉದಾಹರಣೆ ಗುರುತಿಸಬಹುದು. ಆದರೆ ಇಂತಹ ಸಿನಿಮಾಗಳ ಸಂಖ್ಯೆ ಅತ್ಯಲ್ಪ ಮತ್ತು ಇವುಗಳಿಗೆ ಹೂಡಿದ ಹಣ ಹಿಂದಿರುಗುವುದು ತ್ರಾಸದಾಯಕ ಎಂಬುದು ಸಹ ನೀವು ಹೇಳುತ್ತಾ ಇರುವ ಕಂದಕಕ್ಕೆ ಕಾರಣವಾಗಿರಬಹುದು.

ಈ ಕಂದಕಕ್ಕೆ ಸೇತುವೆಯಾಗಬಲ್ಲದು ಕೇವಲ ಫಿಲ್ಮ್‌ ಕ್ಲಬ್‌ ಮಾದರಿಯ ಚಟುವಟಿಕೆ ಮಾತ್ರ. ಪ್ರತೀ ಊರಿನಲ್ಲೂ ಇರುವ ಆಸಕ್ತರು ಆಯಾ ಊರಲ್ಲಿ ಫಿಲ್ಮ್‌ ಕ್ಲಬ್‌ ಆರಂಭಿಸಿ, ಈ ಬಗೆಯ ಸಿನಿಮಾಗಳನ್ನು ಹಣ ಕೊಟ್ಟು ನೋಡುವ ವ್ಯವಸ್ಥೆಯನ್ನು ರೂಪಿಸಬೇಕು. ಆ ಬಗೆಯಲ್ಲಿ ನಮ್ಮ ನಾಡಲ್ಲಿ ಇರುವ ಐನೂರಕ್ಕೂ ಹೆಚ್ಚು ಸಣ್ಣ ನಗರಗಳಲ್ಲಿ ಫಿಲ್ಮ್‌ ಕ್ಲಬ್‌ ಆರಂಭವಾದರೆ, ಅವು ಈ ಬಗೆಯ ಸಿನಿಮಾಗಳಿಗೆ ಕನಿಷ್ಟ ಪ್ರತಿ ಸಿನಿಮಾಗೆ ಇಪ್ಪತ್ತು ಅಥವಾ ಇಪ್ಪತ್ತೈದು ಸಾವಿರದಷ್ಟು ಹಣವನ್ನು ಚಿತ್ರ ತಯಾರಕನಿಗೆ ನೀಡುವುದು ಸಾಧ್ಯವಾದರೆ, ಆಗ ಈ ಬಗೆಯ ಸಿನಿಮಾಗಳಿಗೆ ಹಣ ಹೂಡುವವರು ಬರುತ್ತಾರೆ. ಬರಬಹುದಾದ ಆದಾಯದೊಳಗೆ ಸಿನಿಮಾ ತಯಾರಿಸುವ ಯೋಜನೆ ಹಾಕಿಕೊಳ್ಳಲು ನಿರ್ದೇಶಕರು ಸಹ ಸಿದ್ಧವಾಗುತ್ತಾರೆ. ಆ ಬಗೆಯಲ್ಲಿ ಸಮಾನಂತರ ಚಿತ್ರಗಳನ್ನು ಬೆಂಬಲಿಸುವವರು ಹೆಚ್ಚಲಿ ಎಂದು ಹಾರೈಸೋಣ. “ಒಳ್ಳೆಯ ಸಿನಿಮಾ ನೋಡುಗರು ಇದ್ದಾಗ ಮಾತ್ರ ಒಳ್ಳೆಯ ಸಿನಿಮಾಗಳು ತಯಾರಾಗುತ್ತವೆ” ಎಂಬ ಆಂದ್ರೆ ಮಾರ್ಲಕ್ಸ್‌ ಎಂಬ ಚಿತ್ರ ವಿಮರ್ಶಕನ ಮಾತನ್ನು ನೆನಪಿಸಿಕೊಳ್ಳೋಣ.


೧೦. ಹೊಸಕಾಲದ ಸಶಕ್ತ ಸಿನಿಮಾಗಳು ಯಾವುವು?

– ಸಮಕಾಲೀನ ಕಾಲಘಟ್ಟದಲ್ಲಿ ಹಲವು ಹೊಸ ಗಟ್ಟಿ ಪ್ರಯೋಗಳಾಗುತ್ತಿವೆ. ʻಪೆಡ್ರೊʼ, ʼಪಿಂಕಿ ಎಲ್ಲಿʼ, ʻಹದಿನೇಳೆಂಟುʼ, ʻನಾನು ಕುಸುಮʼ ತರಹದ ಸಿನಿಮಾಗಳು ಶಕ್ತ ಪ್ರಯೋಗಳೇ ಆಗಿವೆ. ಇದಲ್ಲದೆ ಇನ್ನೂ ಹಲವು ಪ್ರಯೋಗಗಳು ಆಗಿರಬಹುದು. ಅವು ನನ್ನ ಕಣ್ಣಿಗೆ ಬಿದ್ದಿಲ್ಲದೆ ಇರಬಹುದು. ಆದರೆ ಹೊಸ ಕಾಲದ ಚಿತ್ರತಯಾರಕರು ಎಲ್ಲಾ ಮಿತಿಗಳ ನಡುವೆಯೂ ಹೋರಾಟ ಮಾಡುತ್ತಲೇ ಇದ್ದಾರೆ. ಅವರೆಲ್ಲರೂ ಈ ಚಿತ್ರೋದ್ಯಮದ ಆಶಾಕಿರಣಗಳು. ಅವರನ್ನು ಗೆಲ್ಲಿಸಬೇಕಾದ್ದು, ಆ ಸಿನಿಮಾಗಳ ಬಗ್ಗೆ ಒಳ್ಳೆಯ ಮಾತಾಡಿ ಹೆಚ್ಚು ಜನ ಆ ಸಿನಿಮಾಗಳನ್ನು ನೋಡುವಂತೆ ಮಾಡುವುದು ನಮ್ಮೆಲ್ಲರ ಹಾಗೂ ಒಳ್ಳೆಯದನ್ನು ಬಯಸುವ ಸಮಾಜದ ಜವಾಬ್ದಾರಿ. ಇಂತಹ ಸಿನಿಮಾಗಳನ್ನು ವಿಮರ್ಶಕರು ಸಹ ಪ್ರೀತಿಯಿಂದ ನೋಡಬೇಕು ಮತ್ತು ಪ್ರೋತ್ಸಾಹಿಸಬೇಕು.

ಇಲ್ಲಿಗೆ ವಿಶಾಖ ಎನ್. ಅವರ ಪ್ರಶ್ನೆಗಳಿಗೆ ಉತ್ತರಗಳು ಮುಗಿದವು. ಮುಂದೆ ಯೋಗೇಶ ಪಾಟೀಲರ ಪ್ರಶ್ನೆಗಳಿಗೆ ಉತ್ತರಗಳಿವೆ.

ಯೋಗೇಶ ಪಾಟೀಲ ಅವರಿಂದ ರಂಗಭೂಮಿ ಕುರಿತ ಪ್ರಶ್ನೆಗಳು…  

1. ರಂಗಭೂಮಿ ಕುರಿತು ನಿಮ್ಮ ವ್ಯಾಖ್ಯಾನ?

– ರಂಗಭೂಮಿಯನ್ನು ಕುರಿತು ಸಂವಾದ ಒಂದರ ಸಣ್ಣ ಅವಧಿಯಲ್ಲಿ ನನ್ನ ವ್ಯಾಖ್ಯಾನವನ್ನು ಇಡಿಯಾಗಿ ತಿಳಿಸುವುದು ಕಷ್ಟಸಾಧ್ಯ ಕೆಲಸ. ಅದಕ್ಕೆ ಪ್ರತ್ಯೇಕವಾಗಿ ಸರಣಿ ಉಪನ್ಯಾಸ ನಡೆಸಬೇಕಾಗಬಹುದು. ಆದರೆ ಸಧ್ಯದ ಮಟ್ಟಿಗೆ ಕ್ಲುಪ್ತವಾಗಿ ಹೀಗೆ ಹೇಳಬಹುದು: “ರಂಗಭೂಮಿ ನನ್ನ ಪಾಲಿಗೆ ಪ್ರತಿರೋಧದ ಅಸ್ತ್ರ. ನನ್ನ ರಂಗ ಪ್ರಯೋಗಗಳು ಪ್ರಧಾನವಾಗಿ ಆಳುವವರನ್ನು ಪ್ರಶ್ನೆ ಮಾಡಲೆಂದೇ ಕಟ್ಟಿದಂತವು. ಯಾವುದೇ ವ್ಯಕ್ತಿ ರಂಗ ಚಳವಳಿಯಲ್ಲಿ ತೊಡಗಿದ್ದಾನೆಂದರೆ ಆತ ಆಳುವ ಶಕ್ತಿಗಳ ತಪ್ಪುಗಳನ್ನು ತೋರಲೆಂದೇ ಆ ಕೆಲಸ ಮಾಡುತ್ತಿದ್ದಾನೆ ಎಂದು ನಾನು ನಂಬುತ್ತೇನೆ. ಆದರೆ ಈಚಿನ ದಿನಗಳಲ್ಲಿ ಇಂತಹ ಮಾಧ್ಯಮಗಳನ್ನು ಆಳುವ ವರ್ಗದ ಹಿತ ಕಾಯುವ ಅಥವಾ ವಂದಿಮಾಗಧ ಸಂಸ್ಕಾರಿಗರು ತಮ್ಮ ಕೈವಶ ಮಾಡಿಕೊಂಡಿರುವುದು ಕಾಣುತ್ತಿದೆ. ಅಂತಹವರು ಮಾಡುವ ಯಾವ ಪ್ರಯೋಗವನ್ನೂ ನಿಜವಾದ ರಂಗಭೂಮಿ ಎನ್ನಲು ಸಾಧ್ಯವಿಲ್ಲ. ಅವು ಕೇವಲ ಭಜನಾ ಮಂಡಳಿಗಳು ಅಷ್ಟೇ. ಅಂತಹವು ಬಹುಬೇಗ ಶಿಥಿಲವಾಗುತ್ತವೆ ಎಂಬುದನ್ನು ನಾವು ಚರಿತ್ರೆಯುದ್ದಕ್ಕೂ ನೋಡಿದ್ದೇವೆ ಮತ್ತು ನೋಡುತ್ತೇವೆ.” 

2. ರಂಗಭೂಮಿಗೆ ನೀವು ಬಂದದ್ದು ಹೇಗೆ

– ಅದು ಆಕಸ್ಮಿಕ. ನಾನು ಎಳೆಯನಾಗಿದ್ದ ಕಾಲದಲ್ಲಿ ಬೀದಿಯಲ್ಲಿ ಗೋಲಿ, ಬುಗರಿ ಆಡುತ್ತಾ ಇದ್ದವರನ್ನು ಅ ನ ಸುಬ್ಬರಾಯರು ಚಿತ್ರಕಲೆಗೆ ಕೈ ಹಿಡಿದು ಕರೆದೊಯ್ದರು. ಅವರ ಮಗ ಎ ಎಸ್‌ ಮೂರ್ತಿಯವರು ರಂಗಭೂಮಿಗೆ ಕರೆದೊಯ್ದರು. ನಂತರ ರಂಗಭೂಮಿಯೇ ನನ್ನ ಮನೆ ಎಂಬಂತೆ ಆಗಿಹೋಯಿತು. ನಾನು ಶಾಲೆಯಲ್ಲಿ ಕಲಿತದ್ದಕ್ಕಿಂತ ಹೆಚ್ಚನ್ನು ನಾಟಕಗಳ ತಾಲೀಮಿನಲ್ಲಿ ಮತ್ತು ವೇದಿಕೆಯ ಮೇಲೆ ಕಲಿಯುವುದು ಸಾಧ್ಯವಾಯಿತು. ಈ ಹಾದಿಯಲ್ಲಿ ನನ್ನ ಆರಂಭ ಕಾಲದ ರಂಗ ನಿರ್ದೇಶಕರಾಗಿದ್ದ ಚಂದ್ರಶೇಖರ ಕಂಬಾರರು, ಬಿವಿ ಕಾರಂತರು, ಎಎಸ್‌ ಮೂರ್ತಿ ಅವರು ಸೇರಿದಂತೆ ಹಲವರು ನನ್ನ ಪಾಲಿನ ನಿಜವಾದ ಗುರುಗಳೆಂದರೆ ತಪ್ಪಾಗಲಾರದು.

3. ನಾಟಕಗಳು ರಾಜಕೀಯವಾಗಿರಬೇಕೆ

– ರಾಜಕೀಯ ಅನ್ನುವುದಿಲ್ಲದೆ ಈ ಜಗತ್ತಿನ ಯಾವ ಕೆಲಸವೂ ನಡೆಯುವುದಿಲ್ಲ. ಯಾವುದೇ ವ್ಯಕ್ತಿ ಯಾವುದೇ ಅಂಗಡಿಗೆ ಹೋಗಿ ಅಲ್ಲಿರುವ ಹತ್ತು ಹಲವು ಬಗೆಯ ಸಾಮಗ್ರಿಯಲ್ಲಿ ತನಗೆ ಬೇಕಾದ ಸಾಮಗ್ರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಆ ಆಯ್ಕೆ ಎನ್ನುವುದೇ ರಾಜಕೀಯ. ತಿಂಡಿಗೆ, ಊಟಕ್ಕೆ ಮಾಡಿಕೊಳ್ಳುವ ಆಯ್ಕೆ ಅನ್ನುವುದು ಆಯಾ ವ್ಯಕ್ತಿಯ ಆಹಾರ ರಾಜಕೀಯ. ಕಣ್ಣೆದುರು ಇರುವ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಯಾವ ಶಾಲೆ ಆಯ್ಕೆ ಮಾಡಿಕೊಳ್ಳುತ್ತೇವೆ, ಅವರಿಗೆ ಯಾವ ಬಗೆಯ ಸಮವಸ್ತ್ರ ಹಾಕುತ್ತೇವೆ ಎಂಬುದು ಆಯ್ಕೆಯ ರಾಜಕೀಯ. ಹೀಗಾಗಿ ಯಾರೇನೇ ಬೇಡವೆಂದರೂ ಪ್ರತಿಕ್ಷಣ ಆಯ್ಕೆ ಎಂಬ ರಾಜಕೀಯ ನಮ್ಮ ಬದುಕಲ್ಲಿ ಹಾಸುಹೊಕ್ಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಂಗಭೂಮಿ ಮಾತ್ರ ಅಲ್ಲ, ನಾವು ಆಯ್ದುಕೊಳ್ಳುವ ಯಾವುದೇ ಮಾಧ್ಯಮ ಎಂಬುದು ರಾಜಕೀಯವೇ. ಇನ್ನು ನಾಟಕಗಳಲ್ಲಿ ಕಥಾವಸ್ತುವಿನ ಆಯ್ಕೆ, ಪಾತ್ರಧಾರಿಗಳ ಆಯ್ಕೆ, ಯಾರ ಬಾಯಲ್ಲಿ ಯಾವ ಮಾತಾಡಿಸುತ್ತೇವೆ ಎಂಬುದು ಸಹ ರಾಜಕೀಯವೇ. ಅದು ಕೈಲಾಸಂ ಅವರ ನಾಟಕವಾದರೂ ಸರಿ, ಶ್ರೀರಂಗರ ನಾಟಕವಾದರೂ ಸರಿ. ನೀವು ಮಾಡಿಕೊಳ್ಳುವ ಆಯ್ಕೆ ನಿಮ್ಮ ರಾಜಕೀಯ ಆಯ್ಕೆ ಆಗಿರುತ್ತದೆ. ರಾಜಕೀಯ ಹೊರತುಪಡಿಸಿ ರಂಗಭೂಮಿ ಮಾತ್ರ ಅಲ್ಲ ಯಾವುದೇ ಮಾಧ್ಯಮ ಇರುವುದು ಸಾಧ್ಯವಿಲ್ಲ. ಯಾರಾದರೂ ನನ್ನದು ಅರಾಜಕೀಯ ಅನ್ನುತ್ತಿದ್ದರೆ ಅಂತಹವರು ಅನಾರ್ಕಿ (ಅರಾಜಕತೆ) ಎಂಬ ರಾಜಕೀಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದೇ ಅರ್ಥ. ಒಟ್ಟಾರೆ, ರಾಜಕೀಯ ನಮ್ಮ ಬದುಕಿನ ಅವಿಭಾಜ್ಯ ಅಂಗ. ನಾವು ಬೇಡವೆಂದರೂ ಅದು ಯಾವಾಗಲೂ ನಮ್ಮ ನಡುವೆ ಇದ್ದೇ ಇರುತ್ತದೆ.

4. ಸಿದ್ದಾಂತಗಳ ಅಡಿಯಲ್ಲಿ ನಾಟಕಗಳನ್ನು ಕಟ್ಟಬೇಕೆ

– ಈ ಹಿಂದಿನ ನಿಮ್ಮ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ಪ್ರಶ್ನೆಗೂ ಉತ್ತರವಿದೆ. ಯಾವುದು ರಾಜಕೀಯ ಎಂದು ಕರೆಸಿಕೊಳ್ಳುತ್ತದೋ ಅದರ ಹಿಂದೆ ಒಂದು ಸಿದ್ಧಾಂತ ಇದ್ದೇ ಇರುತ್ತದೆ. ನೀವು ನಿಮ್ಮ ಮನೆಯಲ್ಲಿ ಮಾಡುವ ಆಹಾರ ಹೇಗೆ ನಿಮ್ಮ ಬದುಕಿನ ಸಿದ್ಧಾಂತದಿಂದ ರೂಪಿತವಾಗಿದೆಯೋ ಹಾಗೆಯೇ ನಾವು ಮಾಡುವ ನಾಟಕಗಳು ಸಹ ನಮ್ಮ ರಾಜಕೀಯ ನಿಲುವು ಮತ್ತು ನಮ್ಮ ಸಿದ್ಧಾಂತದ ಮೂಲಕವೇ ಸಿದ್ಧವಾಗುತ್ತದೆ. ನೋಡುಗರಿಗೆ ಆಯಾ ಸಿದ್ಧಾಂತವನ್ನು ದಾಟಿಸುವುದೇ ನಾಟಕದ ಪ್ರಧಾನ ಆಶಯವಾಗಿರುತ್ತದೆ. ಯಾವುದೇ ಸಿದ್ಧಾಂತದ ಸಹಾಯದಿಂದ ಹುಟ್ಟಿದ ಹೂರಣವಿಲ್ಲದೆ ಕಟ್ಟಿದ ನಾಟಕವು (ಬಹುತೇಕ) ಎಲ್ಲಿಯೂ ಇರಲಾರದು. ಸರ್ಕಸ್ಸಿನಂತಹ ಕೇವಲ ಮನರಂಜನೆ ಎಂದು ಮಾಡುವ ಕಾರ್ಯಕ್ರಮ ಸಹ ಒಂದು ಬಗೆಯ ನಾಟಕವೇ. ಅದರ ಹಿಂದೆಯೂ ಯಾವ ವಿವರ ಜನರಿಗೆ ರಂಜನೆ ನೀಡುತ್ತದೆ ಎಂಬ ಆಯ್ಕೆ ಇದ್ದೇ ಇರುತ್ತದೆ. ಹಾಗಾಗಿ ಅದೂ ಸಹ ರಾಜಕೀಯವೇ. ರಾಜಕೀಯ ಎಂದರೆ ಯಾವುದೋ ಸಿದ್ಧಾಂತಕ್ಕೆ ಬದ್ಧವಾಗಿರುವುದೇ ಆಗಿರುತ್ತದೆ.

ಈ ಮಾತನ್ನು ವಿಸ್ತರಿಸುತ್ತಾ ಗಮನಿಸೋಣ; ನೀವು ಒಂದು ಕೈಲಾಸಂ ನಾಟಕವನ್ನು ಆರಿಸಿಕೊಂಡಿದ್ದೀರಿ ಎಂದರೆ ಆ ನಾಟಕದಲ್ಲಿ ನೀವು ಕರ್ಮಠ ಬ್ರಾಹ್ಮಣ ಕುಟುಂಬದ ಒಳಗಿನ ರಾಜಕೀಯವನ್ನು ತಮಾಷೆಯ ಹೆಸರಲ್ಲಿ ಹೀಗಳೆಯುತ್ತಾ ಇರುತ್ತೀರಿ ಮಾತ್ರವಲ್ಲ, ಆ ಮೂಲಕ ಈ ಸಮಾಜದ ಕೆಳವರ್ಗದ ಬಹುಸಂಖ್ಯಾತ ಜನರ ಮತ್ತು ಮೈನಾರಿಟಿ ಜನರ ಬದುಕನ್ನು ನಿಮ್ಮ ನೋಡುಗರಿಂದ ಮರೆಸುತ್ತಾ ಇರುತ್ತೀರಿ. ಅಕಸ್ಮಾತ್‌ ಈ ಮರೆಸುವುದನ್ನು ಆ ನಾಟಕದ ಒಳಗಡೆಗೆ ನೀವು ತಂದಿರಾದರೆ ಆಗ ನಿಮ್ಮ ಕಥನವು ಅದೇ ಕೈಲಾಸಂ ನಾಟಕಕ್ಕೇ ನಿಮ್ಮ ರಾಜಕೀಯ ವ್ಯಾಖ್ಯಾನವನ್ನು ಸೇರಿಸಿದಂತೆ ಆಗಬಲ್ಲದು. ಆದರೆ ಆ ಬಗೆಯಲ್ಲಿ ಮುರಿದು ಕಟ್ಟುವ ಸಾಹಸ ಮಾಡುವ ಧೈರ್ಯಸ್ಥರು ನಮ್ಮಲ್ಲಿ ಬಹಳ ಕಡಿಮೆ. ನನ್ನ ನೆನಪಲ್ಲಿ ಇರುವಂತೆ ಇಕ್ಬಾಲ್‌ ಅಹ್ಮದ್‌ ಅವರು ನಿರ್ದೇಶಿಸಿದ್ದ ಕೈಲಾಸಂ ಅವರ “ಪೋಲಿಕಿಟ್ಟಿ” ಒಂದೇ ಆ ಬಗೆಯ ಪ್ರಯೋಗ ಮಾಡಿದ್ದು.

ಒಟ್ಟಾರೆಯಾಗಿ ನಿಮ್ಮ ಪ್ರಶ್ನೆಗೆ ಹೇಳಬಹುದಾದ ಮಾತು ಇಷ್ಟೇ: ಯಾವುದೇ ನಾಟಕ, ಸಿನಿಮಾ ಅಥವಾ ಮತ್ತಾವುದೇ ಮಾಧ್ಯಮದ ಮೂಲಕ ಯಾರಾದರೂ ಏನಾದರೂ ಹೇಳಹೊರಟಿದ್ದಾರೆ ಎಂದರೆ ಅದು ಯಾವುದೋ ಸಿದ್ಧಾಂತದ ಮೇಲೆ ನಿಂತಿರುವ ರಾಜಕೀಯವೇ ಆಗಿರುತ್ತದೆ. ಹಾಗಾಗಿ ಸಿದ್ಧಾಂತವಿಲ್ಲದ ಯಾವುದೇ ಮಾತು ಇರಲು ಸಾಧ್ಯವಿಲ್ಲ. ಹರಟೆ, ಹಾಸ್ಯಮೇಳ ಎಂಬ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದ ಪ್ರತೀ ಮಾತಿಗೂ, ಪ್ರತೀ ಜೋಕಿಗೂ ಸಹ ಈ ಸಿದ್ಧಾಂತಗಳ ಮತ್ತು ರಾಜಕೀಯದ ಛಾಯೆ ಇದ್ದೇ ಇರುತ್ತದೆ ಎಂಬುದನ್ನು ಮರೆಯಬಾರದು.

5. ಇಂದು ನಾಟಕಗಳನ್ನು ಮಾಡಲು ಭಯದ ವಾತಾವರಣವಿದೆ ಎಂದು ನಿಮಗೆ ಅನಿಸುವುದಿಲ್ಲವೆ? ಅಂತಹ ವಾತಾವರಣವಿದ್ದರೆ ಅದನ್ನು ಹೇಗೆ ಎದುರಿಸಬೇಕು

– ಇಂದು ಮಾತ್ರವಲ್ಲ, ಎಲ್ಲಾ ಕಾಲದಲ್ಲಿಯೂ ಪ್ರತಿರೋಧವನ್ನು ದಮನಿಸುವ ಶಕ್ತಿಗಳು ಇದ್ದೇ ಇರುತ್ತದೆ. ಹಾಗೆಂದು ಹೋರಾಟ ನಿಲ್ಲುತ್ತದೆಯೇ. ಅದೂ ಸಹ ಜೀವಂತವಾಗಿಯೇ ಇರುತ್ತದೆ. ಬ್ರೆಕ್ಟ್‌ ಹೇಳಿದಂತೆ “ದುರಿತ ಕಾಲದಲ್ಲಿ ಏನು ಮಾಡುವುದು/ ದುರಿತ ಕಾಲವನ್ನು ಕುರಿತೇ ಹಾಡುವುದು” ಎಂಬುದು ನಮ್ಮ ಧ್ಯೇಯ ವಾಕ್ಯ ಆಗಿರಬೇಕಷ್ಟೇ. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಹುತೇಕ ವೃತ್ತಿ ನಾಟಕ ಕಂಪೆನಿಗಳು ತಮ್ಮ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲಿ ಸ್ವಾತಂತ್ರ್ಯ ಹೋರಾಟದ ವಿವರವನ್ನು ಹೇಗಾದರೂ ಸೇರಿಸುತ್ತಿದ್ದವು. ಈ ಹಿನ್ನೆಲೆಯಲ್ಲಿಯೇ ಆಗಿನ ಬ್ರಿಟಿಷ್‌ ಸರಕಾರ ನಾಟಕಗಳ ಸೆನ್ಸಾರ್‌ ಮಾಡುವ ಅಭ್ಯಾಸವನ್ನು ಆರಂಭಿಸಿತು. ನಾಟಕ ಪ್ರದರ್ಶನಕ್ಕೆ ಲೈಸನ್ಸ್‌ ತೆಗೆದುಕೊಳ್ಳಬೇಕು ಮತ್ತು ಪ್ರದರ್ಶನ ಆಗುವ ನಾಟಕದ ಪ್ರತಿಯನ್ನು ಮುಂಚಿತವಾಗಿ ದಂಡಾಧಿಕಾರಿಗೆ ಸಲ್ಲಿಸಿ ಒಪ್ಪಿಗೆ ಪಡೆಯಬೇಕು ಎಂಬ ಕಾನೂನು ತರಲಾಯಿತು. ಆ ಅಭ್ಯಾಸ ಇಂದಿಗೂ ಜೀವಂತವಾಗಿದೆ ಎಂಬುದು ನಾವು ಸಂಪೂರ್ಣ ಸ್ವಾತಂತ್ರ್ಯ ಪಡೆದಿಲ್ಲ ಎಂಬುದಕ್ಕೆ ಸಾಕ್ಷಿ. ಈಚೆಗೆ ರಂಗಶಂಕರದಲ್ಲಿ ಪಾಂಡಿಚೆರಿಯ ರಂಗತಂಡವೊಂದು ಅಭಿನಯಿಸಲು ಹೊರಟಿದ್ದ ಶಿವಪುರಾಣ ಎಂಬ ನಾಟಕವನ್ನು ಬಲಪಂಥೀಯರು ಕೆಲವರು ಗಲಾಟೆ ಮಾಡಿ, ಪೊಲೀಸರನ್ನು ಕರೆಸಿ ಪ್ರದರ್ಶನ ನಿಲ್ಲಿಸಲು ಮಾಡಿದ ಪ್ರಯತ್ನವನ್ನು ಇಲ್ಲಿ ನೆನೆಯಬಹುದು. ನಾವು ಬೇಕಾದವರು ಹಣ ಕೊಟ್ಟು ಟಿಕೇಟ್‌ ಕೊಂಡು ನಾಟಕ ನೋಡುತ್ತಾರೆ ಎಂದು ವಾದ ಮಾಡಿ ಪ್ರದರ್ಶನ ನಿಲ್ಲದಂತೆ ಪ್ರಯತ್ನಿಸಿದೆವಾದರೂ ನಾಟಕವನ್ನೇ ನೋಡದ ಬಲಪಂಥೀಯರು ಮಾಡಿದ ಗಲಾಟೆಯಿಂದ ರಂಗಮಂದಿರದ ಹೊರಗೆ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಟಿಕೇಟ್‌ ಕೊಂಡಿದ್ದ ಹಲವರು ಒಳ ಬರದೆ ಉಳಿದದ್ದು ಮುಂತಾದ ಹಲವು ಅಪದ್ಧಗಳು ಅಲ್ಲಿ ನಡೆದವು. ಮತ್ತೊಮ್ಮೆ ನಾವೇ ಆಯೋಜಿಸಿದ್ದ ಗಿರೀಶ್‌ ಕಾರ್ನಾಡರ ನಾಟಕದ ಉತ್ಸವದಲ್ಲಿ ಮಲೆಯಾಳದ ರಂಗನಿರ್ದೇಶಕರೊಬ್ಬರು ಗಿರೀಶರ ನಾಟಕದ ಉದ್ದೇಶವನ್ನೇ ಬಿಟ್ಟು ತಮ್ಮ ಆಖ್ಯಾನವನ್ನು ಸೇರಿಸಿ ನಾಟಕ ಕಟ್ಟಿದ್ದರು. ಪ್ರದರ್ಶನದ ನಂತರ ನೀವು ಮಾಡಿದ್ದು ಸರಿಯಲ್ಲ ಎಂಬ ವಾದ ವಿವಾದ ನಡೆಯಿತು. ಆ ನಿರ್ದೇಶಕರು ರೈಟ್‌ ಟು ಫ್ರೀಡಂ ಆಫ್‌ ಎಕ್ಸ್‌ಪ್ರೆಷನ್‌ ಎಂಬ ಸಾಂವಿಧಾನಿಕ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ವ್ಯಾಖ್ಯಾನ ಸಮರ್ಥಿಸಿಕೊಂಡದ್ದೂ ಉಂಟು. ನಾವು ೧೯೭೫ರಿಂದ ೭೭ರ ವರೆಗಿನ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಡುತ್ತಿದ್ದ ಪ್ರಭುತ್ವ ವಿರೋಧಿ ಬೀದಿ ನಾಟಕಗಳಿಗಾಗಿ ನಮ್ಮನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿದ್ದೂ ಉಂಟು. ಆಗಿದ್ದ ದೇವರಾಜ ಅರಸು ಸರ್ಕಾರ ದೇಶದ್ರೋಹದ ಕಾನೂನು ಬಳಸುವಂತಹ ಒತ್ತಡ ಹೇರಲಿಲ್ಲವಾದರೂ ಹಲವು ಪ್ರದರ್ಶನಗಳಿಗೆ ಅರಸು ಅವರೇ ರಚಿಸಿದ್ದ ಯುವಬ್ರಿಗೇಡ್‌ ತೊಂದರೆ ಕೊಟ್ಟದ್ದನ್ನು, ಪ್ರದರ್ಶನ ನಡೆಯುವಾಗ ಕಲ್ಲು ಹೊಡೆದದ್ದನ್ನು ಮರೆಯಲಾರೆ. ಸಮುದಾಯ ತಂಡದ ಗೆಳೆಯರು ಕೋಲಾರ ಜಿಲ್ಲೆಯಲ್ಲಿ ಬೀದಿ ನಾಟಕ ಮಾಡುವಾಗ ಕಲಾವಿದ ಗುಂಡಣ್ಣ ಅವರ ಮೇಲೆ ಆದ ದಾಳಿ, ಅವರ ತಲೆಗೆ ಬಿದ್ದ ಪೆಟ್ಟು ಕಣ್ಣೆದುರು ಇನ್ನೂ ಇದೆ. ಇಷ್ಟೆಲ್ಲದರ ಜೊತೆಗೆ ಸಫ್ದರ್‌ ಹಷ್ಮಿ ತರಹದ ಕಲಾವಿದರನ್ನು ಬೀದಿ ನಾಟಕ ಪ್ರದರ್ಶನ ಆಗುವಾಗಲೇ ದಾಳಿ ಮಾಡಿ ಕೊಂದದ್ದು ಈ ದೇಶದ ರಾಜಧಾನಿಯಲ್ಲೇ.

ಒಟ್ಟಾರೆಯಾಗಿ ಹೇಳಬಹುದಾದ್ದು ಇಷ್ಟೇ; ಈ ಬಗೆಯ ಬೆದರಿಕೆಗಳಿಗೆ ಬಗ್ಗದೆ ನಾವು ಹೇಳಬೇಕಾದ್ದನ್ನು ಹೇಳುತ್ತಾ ಹೋಗುವುದೇ ನಿಜವಾದ ರಂಗತಂಡದ ಜವಾಬ್ದಾರಿ. ಬದಲಿಗೆ ಯಾವುದೇ ರಂಗತಂಡ ಅಥವಾ ರಂಗಕರ್ಮಿಯು ಯಾವುದೇ ಆಳುವ ಸರ್ಕಾರದ ಮುಖವಾಣಿ ಆಗಿಬಿಟ್ಟಿದ್ದರೆ ಅಲ್ಲಿಂದಾಚೆಗೆ ಅಂತವರನ್ನು ರಂಗಕರ್ಮಿ ಎಂದು ಗುರುತಿಸುವುದು ರಂಗಚಳವಳಿಗೆ ಮಾಡುವ ಅವಮಾನ ಎನ್ನಬೇಕಾಗುತ್ತದೆ. ಇಂದು ಆ ಬಗೆಯಲ್ಲಿ ತಮ್ಮನ್ನು ತಾವು ಮಾರಿಕೊಂಡ ಹಲವರು ನಮ್ಮ ದೇಶದ ತುಂಬಾ ಇದ್ದಾರೆ. ಅವರೆಲ್ಲರನ್ನೂ ಕೇವಲ ಅವಕಾಶವಾದಿಗಳು ಎನ್ನಬಾರದು. ಮಾರಿಕೊಂಡವರು ಎಂತಲೇ ಗುರುತಿಸಬೇಕು. ಆಗ ಮಾತ್ರ ನಮ್ಮ ಮುಂದಿನ ತಲೆಮಾರು ಈ ಬಗೆಯ ಮಾರಿಕೊಳ್ಳುವುದರಿಂದ ದೂರ ಉಳಿಯಬಹುದು.

6. ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ನೇರವಾಗಿ ಹೇಳಬೇಕಾದ ವಿಷಯವನ್ನು ಹಲವರು ರೂಪಕದಲ್ಲಿ ಹೇಳುತ್ತಾರೆ? ಇದಕ್ಕೆ ನಿಮ್ಮ ಅಭಿಪ್ರಾಯ

– ರೂಪಕಗಳ ಮೂಲಕ ನಾಟಕ ಕಟ್ಟುವ ಅಭ್ಯಾಸ ತುಂಬಾ ಹಳೆಯದು. ಅದು ಆಯಾ ನಾಟಕಕಾರ ಅಥವಾ ನಿರ್ದೇಶಕರ ಆಯ್ಕೆ. ಒಂದು ವಿಷಯವನ್ನು ದಾಟಿಸಲು ಯಾವುದೋ ಪುರಾಣದ ಕತೆಯನ್ನು ಬಳಸುವುದು ಒಂದರ್ಥದಲ್ಲಿ ಸಮಕಾಲೀನವಾಗಿರುವ ಹಲವು ನೇರ ವಿರೋಧಗಳನ್ನು ತಪ್ಪಿಸಿಕೊಳ್ಳುವ ಜಾಣತನವೂ ಹೌದು. ಆ ಜಾಣತನವನ್ನು ತಪ್ಪು ಎನ್ನಲಾಗದು. ಅದು ಕಲಾಭಿವ್ಯಕ್ತಿಯ ಮಾದರಿಯಾಗಿಯೂ ನಾಳೆಗೆ ಉಳಿಯಬಹುದು. ನಾನು ಈ ಬಗೆಯಲ್ಲಿ ರೂಪಕಗಳ ಮೂಲಕ ನಾಟಕ ಕಟ್ಟುವವನಲ್ಲ. ನನ್ನದು ನೇರವಾದ ಮಾತು. ಅದನ್ನು ಅರಗಿಸಿಕೊಳ್ಳದೆ ವಿರೋಧಿಸುವ, ಕೊಂಕು ಮಾತಾಡುವ, ನನ್ನ ನಾಟಕದ ವಿರುದ್ಧ ವಾಟ್ಸಪ್‌ ಅಥವಾ ಇನ್ನಿತರ ಸಮಾಜಿಕ ಜಾಲತಾಣಗಳಲ್ಲಿ ಬರೆದು, ಇಂತಹ ನಾಟಕ, ಸಿನಿಮಾ ನೋಡಬೇಡಿ ಎಂದು ಪ್ರಚಾರ ಮಾಡಿರುವ ಉದಾಹರಣೆಗಳು ಸಹ ಇದೆ. ಇವೆಲ್ಲವೂ ಬದುಕಿನ ಭಾಗ ಎಂದುಕೊಂಡು, ವಿರೋಧಿಗಳ ಜೊತೆಗೆ ಚರ್ಚೆ ಸಾಧ್ಯವಿದ್ದರೆ ಮುಂದುವರೆಸಬೇಕು, ಇಲ್ಲವಾದರೆ ಅಂತಹವರನ್ನು ನಿರ್ಲಕ್ಷಿಸಿ ನಮ್ಮ ಕೆಲಸ ನಾವು ಮಾಡುತ್ತಿರಬೇಕು. ಒಟ್ಟಾರೆಯಾಗಿ ನಿಮ್ಮ ಪ್ರಶ್ನೆಗೆ ಹೀಗೆನ್ನಬಹುದು; ನಾಟಕವೊಂದರ ನಿರೂಪಣೆ, ಕಥನ ಶೈಲಿ ಆಯಾ ನಾಟಕಕಾರನ/ನಿರ್ದೇಶಕನ ಆಯ್ಕೆ. ಆಯಾ ವ್ಯಕ್ತಿಗಳು ರೂಪಕಾತ್ಮಕ ಅಭಿವ್ಯಕ್ತಿಯನ್ನು ಮಾಡುವ ಮೂಲಕವೇ ತಾವು ದಾಟಿಸಬೇಕಾದ ಹೂರಣವನ್ನು ದಾಟಿಸಲು ಶಕ್ತರಾದರೆ ಅದು ಮೆಚ್ಚತಕ್ಕ ವಿಷಯವೇ. ಆದರೆ ಈ ಬಗೆಯ ರೂಪಕಾತ್ಮಕ ಕಟ್ಟೋಣವು ಆಳುವವರ ಓಲೈಕೆಗೆ ಬಳಕೆಯಾದರೆ ಅಥವಾ ಈ ಕಾಲದ ದೊಡ್ಡ ಖಾಯಿಲೆಯಾದ ಅಸತ್ಯಗಳನ್ನು ಹೇಳುವುದಕ್ಕೆ ಇಳಿದರೆ ಅಂತಹವುಗಳನ್ನು ನಾವು ಖಂಡಿಸಲೇಬೇಕಾಗುತ್ತದೆ.

7. ಇಂದು ಉತ್ತಮ ನಾಟಕಗಳು ಸುಸಜ್ಜಿತವಾದ ಭವನದಲ್ಲಿ, ಉತ್ತಮ ಲೈಟಿಂಗ್ ಇರುವಲ್ಲಿ ನಡೆದು, ನಗರಗಳಿಗೆ ಸೀಮಿತವಾಗುತ್ತಿವೆ. ಇಂತಹ ನಾಟಕಗಳು ಎಲ್ಲ ತರಹದ ಜನಸಾಮಾನ್ಯರನ್ನು ತಲುಪುವುದು ಹೇಗೆ

– ಉತ್ತಮ ಎಂಬುದು ಯಾವತ್ತಿಗೂ ಸಾಪೇಕ್ಷವಾದುದು. ಒಬ್ಬರಿಗೆ ಉತ್ತಮ ಎನಿಸಿದ್ದು ಮತ್ತೊಬ್ಬರಿಗೆ ಹಾಗೆ ತೋರದಿರಬಹುದು. ರಂಗಭೂಮಿ ಎಂಬುದನ್ನು ಚಮತ್ಕಾರಿಕವಾಗಿ ಮಾಡುವವರು ಎಷ್ಟು ಜನ ಇದ್ದಾರೋ ಅಷ್ಟೇ ಸರಳವಾಗಿ ಯಾವ ಪರಿಕರಗಳ (ಲೈಟಿಂಗ್‌, ಸಜ್ಜಿಕೆ) ಇಲ್ಲದೆ ಪ್ರಯೋಗ ಮಾಡುವವರೂ ಇಂದಿಗೂ ಇದ್ದಾರೆ. ಇತ್ತೀಚೆಗೆ ಪ್ರಸನ್ನ ಅವರು ನಿರ್ದೇಶಿಸಿದ ಅಯೋಧ್ಯಾಕಾಂಡ, ಶ್ರೀಪಾದಭಟ್‌ ನಿರ್ದೇಶಿಸಿದ ಸುಂದರಕಾಂಡ ಈ ಬಗೆಯ ಸರಳತೆಯನ್ನು ಒಳಗೊಂಡಿದ್ದ ನಾಟಕಗಳು. ಆಯಾ ರಂಗತಂಡವು ತಾನು ಎಲ್ಲಿ ಮತ್ತು ಯಾವ ನೋಡುಗರಿಗೆ ನಾಟಕ ಪ್ರದರ್ಶನ ಮಾಡಬೇಕೆಂದು ತೀರ್ಮಾನಿಸುತ್ತದೆಯೋ ಆ ಬಗೆಯಲ್ಲಿ ಆಯಾ ನಾಟಕ ಸಿದ್ಧವಾಗುತ್ತದೆ, ಅಷ್ಟೇ. ನಿಮ್ಮೂರಿನ ರಂಗ ಪ್ರದರ್ಶನದ ವ್ಯವಸ್ಥೆ ಹೇಗಿದೆಯೋ ಅದೇ ಕ್ರಮದಲ್ಲಿ ನಿಮ್ಮ ನಾಟಕ ಕಟ್ಟಿಕೊಳ್ಳಿ. ಅವಕಾಶ ಇದ್ದಾಗ ಉಳಿದ ಅಲಂಕಾರಗಳನ್ನು ಯಾವತ್ತಿಗೂ ಸೇರಿಸಿಕೊಳ್ಳಬಹುದು. ನಿಜ ಹೇಳಬೇಕೆಂದರೆ ಎಲ್ಲಾ ಅಲಂಕಾರ, ಒಗ್ಗರಣೆ ಬಳಸಿದ ರಂಗ ಪ್ರದರ್ಶನ ಕಟ್ಟುವುದಕ್ಕಿಂತ ಸರಳವಾದ ರಂಗ ಪ್ರದರ್ಶನ ಕಟ್ಟುವುದೇ ಕಷ್ಟದ ಕೆಲಸ.

8. ಎಪಿಕ್ ರಂಗಭೂಮಿ ಮತ್ತು ಅಸಂಗತ ನಾಟಕಗಳ ಪ್ರಸ್ತುತತೆ ಇಂದಿನ ಕಾಲಕ್ಕೆ ಎಷ್ಟು ಮುಖ್ಯ

– ಎಪಿಕ್‌ ರಂಗಭೂಮಿ ಎಂಬುದಾಗಲೀ ಅಥವಾ ಅಸಂಗತ ನಾಟಕ ಚಳುವಳಿ ಆಗಲಿ ಎರಡೂ ಹುಟ್ಟಿದ್ದು ಮಹಾಯುದ್ಧಗಳ ಹಿನ್ನೆಯಲ್ಲಿ ಮತ್ತು ಸರ್ವಾಧಿಕಾರಿ ಪ್ರಭುತ್ವಗಳ ಆಳ್ವಿಕೆಯ ಹಿನ್ನೆಲೆಯಲ್ಲಿ. ಜರ್ಮನಿಯಲ್ಲಿನ ಹಿಟ್ಲರ್‌ ಆಡಳಿತವು ಬ್ರೆಕ್ಟ್‌ಗೆ ಎಪಿಕ್‌ ರಂಗಭೂಮಿ ಎಂಬುದನ್ನು ಕಟ್ಟಲು ದಾರಿ ಆಯಿತು. ಯುದ್ಧಗಳಲ್ಲಿ ತಮ್ಮವರನ್ನು ಕಳಕೊಂಡ ಜನ ಮತ್ತು ಯುದ್ಧಗಳಿಂದ ಉಂಟಾದ ಹತಾಶೆ, ಹಪಾಪಿತನ ಮತ್ತು ಬದುಕಿನ ಅಸ್ಪಷ್ಟತೆಯು ಅಸಂಗತ ನಾಟಕಗಳ ಹುಟ್ಟಿಗೆ ಕಾರಣವಾಯಿತು. ಇಂದು ಆ ಸ್ಥಿತಿ ನಮಗಿದೆಯೇ ಇಲ್ಲವೇ ಎಂಬ ನಿಲುವಿನ ಆಧಾರದಲ್ಲಿ ಎರಡೂ ಪ್ರಸ್ತುತವಾಗುತ್ತದೆ. ಭಾರತದಂತಹ ದೇಶದಲ್ಲಿಯಂತೂ ಸರ್ಕಾರದ ಅಲಕ್ಷ್ಯಕ್ಕೆ ಒಳಗಾದ, ಈಗಿನ ಸಂದರ್ಭದಲ್ಲಿ ಬುಲ್ಡೋಜರ್‌ ದಾಳಿಯ ಭಯದಲ್ಲಿ ಬದುಕುವ ಜನರ ಸಂಖ್ಯೆ ದೊಡ್ಡದಿದೆ. ಅಂತಹ ಜನರನ್ನು ಪ್ರತಿನಿಧಿಸಲು, ಅವರ ಸಂಕಟವನ್ನು ಬಿಚ್ಚಿಡಲು ಅಸಂಗತ ನಾಟಕಗಳ ಕ್ರಮವನ್ನು ಇಂದಿಗೂ ಬಳಸಬಹುದು. ವೆಯ್ಟಿಂಗ್‌ ಫಾರ್‌ ಗಾಡೋ ನಾಟಕವನ್ನು ತೀರಾ ಈಚೆಗೆ ಶಕೀಲ್‌ ಅಹ್ಮದ್‌ ಅವರು ಕಟ್ಟಿದ್ದನ್ನು ನೋಡಿದ್ದೇನೆ. ಆ ನಾಟಕದಲ್ಲಿ ಇರುವ ನಮ್ಮನ್ನು ಬಿಡುಗಡೆಗೊಳಿಸುವ ನಾಯಕನೊಬ್ಬ ಬರಲಿದ್ದಾನೆ ಎಂದು ಕಾಯುವವರು ಇಂದಿಗೂ ನಮ್ಮ ಸಮಾಜದಲ್ಲಿ ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಇನ್ನು ಎಪಿಕ್‌ ರಂಗಭೂಮಿಯ ಮೂಲ ಉದ್ದೇಶವೇ ಆಳುವ ಸರ್ಕಾರಗಳನ್ನು ಪ್ರಶ್ನಿಸುವುದು ಮತ್ತು ನೋಡುಗರನ್ನು ಸಮಕಾಲೀನ ಸ್ಥಿತಿಯನ್ನು ಕುರಿತಂತೆ ಜಾಗೃತರನ್ನಾಗಿಸುವುದು. ಭಾವಪರವಶತೆಯಲ್ಲಿ ಮುಳುಗದೆ, ತನ್ಮಯರಾಗದೆ ನೋಡುಗರಿಗೆ ಪ್ರಶ್ನಿಸುವುದನ್ನು ಕಲಿಸುವ ಅವಕಾಶವನ್ನು ಒದಗಿಸುವ ಎಪಿಕ್‌ ರಂಗಭೂಮಿ ಹಿಂದಿನಷ್ಟೇ ಇಂದಿಗೂ ಪ್ರಸ್ತುತ ಮತ್ತು ಅಗತ್ಯವಾದುದೇ ಆಗಿದೆ. ಇವತ್ತಿನ ಆಳುವ ವರ್ಗವನ್ನು ಪ್ರಶ್ನಿಸಿದರೆ ಸೆಡಿಷನ್‌ ಕಾನೂನನ್ನು ಅಥವಾ UAPA ತರಹದ ಕಾನೂನು ಹಾಕಿ ಜೈಲಿಗಟ್ಟುವ ಉದಾಹರಣೆಗಳು ಹೇರಳವಾಗಿವೆ. ಇಂತಹ ಸನ್ನಿವೇಶದಲ್ಲಿ ಬ್ರೆಕ್ಟ್‌ನ ಕ್ರಮದಲ್ಲಿ ನಾಟಕ ಕಟ್ಟುವ ಮೂಲಕ ನೋಡುಗರಲ್ಲಿ ಪ್ರಶ್ನೆ ಕೇಳುವ ಮನೋಭಾವವನ್ನು ಉದ್ದೀಪಿಸುವುದು ರಂಗಭೂಮಿಯ ಪ್ರಧಾನ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ.

9. ಪಾಶ್ಚಾತ್ಯ ಮತ್ತಿತರ ದೇಶಗಳ ರಂಗಭೂಮಿಯ ಬೆಳವಣಿಗೆ ಮತ್ತು ಭಾರತೀಯ, ಕನ್ನಡ ರಂಗಭೂಮಿಯ ಬೆಳವಣಿಗೆ ನೋಡಿದಾಗ ನಿಮಗೆ ಏನೆನಿಸುತ್ತದೆ?

– ಪಾಶ್ಚಾತ್ಯ ರಂಗಭೂಮಿಯಲ್ಲಿ ಆಗುವುದೆಲ್ಲವೂ ಶ್ರೇಷ್ಟವಲ್ಲ. ಹಾಗೆಯೇ ನಮ್ಮ ಕನ್ನಡ ರಂಗಭೂಮಿಯಲ್ಲಿ ಮತ್ತು ಭಾರತೀಯ ರಂಗಭೂಮಿಯಲ್ಲೂ ಜೊಳ್ಳುಗಳ ಸಂಖ್ಯೆಯೂ ಅಧಿಕವೇ. ಹಾಗೆಯೇ ಪಾಶ್ಚಾತ್ಯ ರಂಗಭೂಮಿಯಲ್ಲಿನ ಶ್ರೇಷ್ಟವಾದುದಕ್ಕೆ ಹೋಲಿಸಬಹುದಾದ ಅಥವಾ ಅದಕ್ಕಿಂತ ಉತ್ತಮ ಎನಿಸುವ ಪ್ರಯೋಗಗಳು ನಮ್ಮಲ್ಲಿಯೂ ಆಗುತ್ತಲೇ ಇವೆ. ಕೆ.ಪಿ. ಲಕ್ಷ್ಮಣ, ವಿದು ಉಚ್ಚಿಲ, ಗಣೇಶ್‌ ಮಂದಾರ್ತಿ, ಮೇಘಾ ಸಮೀರ, ಆದಿಶಕ್ತಿ ತಂಡ ಮುಂತಾದ ಹೊಸ ತಲೆಮಾರಿನ ನಾಟಕ ನಿರ್ದೇಶಕರು ತುಂಬಾ ಅಪರೂಪದ ಹೊಸ ನಾಟಕಗಳನ್ನು ಕಟ್ಟಿದ್ದಾರೆ. ಅವರ ನಾಟಕಗಳು ಇವತ್ತಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತ ಎಂಬಂತಿವೆ. ಕೆಲವು ನಾಟಕಗಳಂತೂ ʻಅರೆ! ಇಷ್ಟು ಚಂದದ ಅಭಿವ್ಯಕ್ತಿಯ ನಾಟಕವನ್ನು ನಮ್ಮ ತಲೆಮಾರಿನ ಯಾರೇ ಆಗಲೀ ಮಾಡಲಿಲ್ಲವಲ್ಲʼ ಎನಿಸುವಷ್ಟು ಅದ್ಭುತ ಪ್ರಯೋಗಗಳು. ಇನ್ನೂ ಪಾಶ್ಚಾತ್ಯ ರಂಗಭೂಮಿಯಲ್ಲಿ ಇರುವ ವೃತ್ತಿಪರತೆಯನ್ನು ಇಲ್ಲಿಯೂ ಹಲವು ರಂಗತಂಡಗಳಲ್ಲಿ ಕಾಣಬಹುದು. ಮರಾಠಿ ರಂಗಭೂಮಿ ಮತ್ತು ಮಲೆಯಾಳದ ರಂಗಭೂಮಿಯಲ್ಲಂತೂ ಪಾಶ್ಚಾತ್ಯ ರಂಗಭೂಮಿಯಂತೆ ಪೂರ್ಣಾವಧಿ ರಂಗಕರ್ಮಿಗಳಾಗಿಯೇ ತಮ್ಮ ಬದುಕು ಸಾಗಿಸುವ ದೊಡ್ಡ ಸಂಖ್ಯೆಯ ಜನರಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಂದರ್ಭದಲ್ಲಿಯೂ ಈ ಬಗೆಯಲ್ಲಿ ರಂಗಭೂಮಿಯನ್ನು ಪೂರ್ಣಾವಧಿಗೆ ಮಾಡುತ್ತಿರುವ ಹಲವರು ಬಂದಿದ್ದಾರೆ. ಅವರ ಬದುಕಿಗೆ ಇನ್ನೂ ನಿಯಮಿತವಾದ ಆದಾಯ ಬರುವಂತಾಗಬೇಕು ಮತ್ತು ಕೆಲವು ಸಾಮಾಜಿಕ ಭದ್ರತೆಯ ವ್ಯವಸ್ಥೆಗಳು ಆಗಬೇಕು. ಅದಕ್ಕಾಗಿ ಹಲವರು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೈದರಾಬಾದ್‌ ಕರ್ನಾಟಕದ ರಂಗಕರ್ಮಿಗಳೆಲ್ಲ ಸೇರಿ ಸಹಕಾರ ಸಂಘ ತೆರೆದಿದ್ದಾರೆ. ಬೆಂಗಳೂರಿನ ರಂಗಕರ್ಮಿಗಳು ಸಹ ಒಂದು ಸಹಕಾರ ಸಂಘ ಆರಂಭಿಸಿದ್ದಾರೆ. ಈ ಬಗೆಯ ಸಂಘಟನೆಗಳು ಪೂರ್ಣಾವಧಿ ರಂಗಚಟುವಟಿಕೆಯಲ್ಲಿ ಇರುವವರಿಗೆ ಸಾಮಾಜಿಕ ಭದ್ರತೆ ಒದಗಿಸುವಂತಾಗುವ ಕಾಲ ಬೇಗ ಬರಲಿ ಎಂದು ಹಾರೈಸೋಣ.

ಉಳಿದಂತೆ ನಿಮ್ಮ ಪ್ರಶ್ನೆಗೆ ಸರಳವಾಗಿ ಇಷ್ಟು ಹೇಳಬಹುದು. ಪಾಶ್ಚಾತ್ಯ ರಂಗಚಟುವಟಿಕೆಗೂ ನಮ್ಮಲ್ಲಿನ ರಂಗ ಚಟುವಟಿಕೆಗೂ ದೊಡ್ಡ ವ್ಯತ್ಯಾಸವಿಲ್ಲ. ರಂಗಭೂಮಿ ಎಂಬುದು ತನ್ನೆದುರಿನ ಸಮಾಜಕ್ಕೆ ಕನ್ನಡಿ ಹಿಡಿಯುವ ಮತ್ತು ಆಯಾ ಸಮಾಜದಲ್ಲಿನ ಹುಳುಕುಗಳನ್ನು ಪ್ರಶ್ನಿಸುವ ಮಾಧ್ಯಮ. ಅದು ಆರೋಗ್ಯಕರವಾಗಿದ್ದಾಗ ಮಾತ್ರ ಒಂದು ಸಮಾಜವೂ ಆರೋಗ್ಯಕರವಾಗಿದೆ ಎನ್ನಬಹುದು.

10. ಬೇರೆ ದೇಶದ, ಬೇರೆ ಭಾಷೆಯ ನಾಟಕಗಳನ್ನು ಅನುವಾದ ಮಾಡುವಾಗ, ನಿರ್ದೇಶನ ಮಾಡುವಾಗ ಹೇಗೆ ಬದಲಾವಣೆ ಮಾಡಿಕೊಳ್ಳುತ್ತೀರಿ?

– ಅನುವಾದ ಎಂಬುದು ಸಾಂಸ್ಕೃತಿಕ ಅನುಸಂಧಾನ. ಒಂದು ಸಂಸ್ಕೃತಿಗಾಗಿ ರಚಿತವಾದುದನ್ನು ಮತ್ತೊಂದು ಸಂಸ್ಕೃತಿಗೆ ತಾಗುವ ಹಾಗೆ ಮಾಡುವ ಕೆಲಸ ಯಾವತ್ತಿಗೂ ಸವಾಲಿನದು. ನಾನು ಹಲವು ನಾಟಕಗಳನ್ನು ಅನುವಾದ ಮಾಡಿರುವುದು ಹೌದು. ಅವುಗಳ ಯಶಸ್ಸಿನ ಪ್ರಮಾಣ ಗಮನಿಸದರೆ ನಾನಿನ್ನೂ ಕಲಿಯಬೇಕಾದ್ದು ತುಂಬಾ ಇದೆ ಎನಿಸುತ್ತದೆ.

ನಾನು ಮಾಡಿರುವ ಅನುವಾದಿತ ನಾಟಕಗಳ ನಿರ್ದೇಶನ ಮಾಡುವಾಗ ಆ ನಾಟಕದ ನೋಡುಗರಿಗೆ ಉದ್ದೇಶ ತಲುಪಲು ಬೇಕಾದ ಹಲವು ಸಣ್ಣಪುಟ್ಟ ಪ್ರಯೋಗಗಳನ್ನು ಮಾಡುತ್ತೇನೆ. ಕೋರಿಯೋಲೇನಸ್‌ ತರಹದ ಕ್ಲಿಷ್ಟ ನಾಟಕ ಮಾಡುವಾಗ ಕೋರಸ್‌ ಬಳಕೆಯ ಮೂಲಕ ವಿಷಯ ದಾಟಿಸುವ ಪ್ರಯತ್ನ ಮಾಡಿದ್ದೆ. ಹಾಗೆಯೇ ಮತ್ತೆ ಕೆಲವು ನಾಟಕಗಳಲ್ಲಿ ಆಯಾ ನಾಟಕವೇ ಬೇಡುವ ಹಲವು ಪ್ರಯೋಗಗಳನ್ನು ಮಾಡಿದ್ದೆ. ಕಿರವಂತದಂತಹ ನಾಟಕವನ್ನು ನಿರ್ದೇಶಿಸುವಾಗ ವಾಸ್ತವಕ್ಕೆ ಮತ್ತು ಭಾವಾಭಿನಯಕ್ಕೆ ಹೆಚ್ಚು ಅವಕಾಶ ನೀಡಿ, ಮೌನಗಳೇ ಹಲವು ವಿವರವನ್ನು ದಾಟಿಸುವಂತಹ ಪ್ರಯೋಗ ಮಾಡಿದ್ದೆ. ಹೀಗೆ ಪ್ರತೀ ನಾಟಕ ಕಟ್ಟುವಾಗ ಆಯಾ ಕಾಲಘಟ್ಟದ ನೋಡುಗರನ್ನು ತಾಗಲು ಬೇಕಾದ ಹಲವು ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಇಂತಹುದಕ್ಕೆ ಇದೇ ಮಾದರಿ ಅಥವಾ ಸೂತ್ರ ಎಂದೇನೂ ಇಲ್ಲ. ಆಯಾ ಸಂದರ್ಭಗಳು ಮತ್ತು ಆಯಾ ರಂಗತಂಡದ ಇತಿಮಿತಿಗಳು ಮತ್ತು ಬಜೆಟ್ಟಿನ ಮಿತಿಗಳು ನಾಟಕದ ಕಟ್ಟೋಣವನ್ನು ನಿರ್ದೇಶಿಸುತ್ತವೆ.

ಈ ವಿಷಯದಲ್ಲಿ ಫ್ರಿಟ್ಜ್‌ ಬೆನವಿಟ್ಜ್‌ ನನಗೆ ಹೆಚ್ಚು ಇಷ್ಟವಾಗುತ್ತಾರೆ. ಅವರು ಬೋಪಾಲ್‌ ರಂಗಮಂಡಲಕ್ಕೆ ಮಾಡಿಸಿದ ಮಿಡ್‌ ಸಮ್ಮರ್‌ ನೈಟ್‌ ಡ್ರೀಮ್ಸ್‌ ನಾನು ಮೆಚ್ಚುವ ನಾಟಕಗಳಲ್ಲಿ ಒಂದು. ಹಾಗೆಯೇ ಸಿ. ಬಸವಲಿಂಗಯ್ಯ, ಸುರೇಶ್‌ ಅನಗಳ್ಳಿ ಅವರ ಹಲವು ಪ್ರಯೋಗಗಳನ್ನು ಉದಾಹರಿಸಬಹುದು. ಈಚಿನ ತಲೆಮಾರಿನವರಾದ ಕೆಪಿ ಲಕ್ಷ್ಮಣ್‌ ಅವರು ನಿರ್ದೇಶಿಸಿದ್ದ ಕೋರ್ಟ್‌ ಮಾರ್ಷಲ್‌ ಸಹ ಅನುವಾದಿತವಾಗಿ ಕನ್ನಡಕ್ಕೆ ಬಂದದ್ದು. ಆದರೆ ಆ ನಾಟಕವನ್ನು ಲಕ್ಷ್ಮಣ್‌ ಕಟ್ಟಿದ್ದ ಕ್ರಮ ಮತ್ತು ವಿಷಯವನ್ನು ದಾಟಿಸಿದ ಕ್ರಮ ಬಹುಕಾಲ ಮನಸ್ಸಲ್ಲಿ ನಿಲ್ಲುತ್ತದೆ. ಎಸ್. ಸುರೇಂದ್ರನಾಥ್‌ ನಮ್ಮಲ್ಲಿನ ಬಹುತೇಕ ನಿರ್ದೇಶಕರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಅವರು ತಾವು ಅನುವಾದಿಸಿದ ನಾಟಕವನ್ನು ತಾವೇ ನಿರ್ದೇಶಿಸುತ್ತಾರೆ. ಹಾಗೆ ಕಟ್ಟಿದ ನಾಟಕವು ಅನುವಾದಿತ ಎಂದೆನಿಸದ ಹಾಗೆ ನೋಡುಗರನ್ನು ತಲುಪುವಲ್ಲಿ ಅವರು ಬಹುತೇಕ ಯಶಸ್ವಿ ಆಗುತ್ತಾರೆ. ಸುರೇಂದ್ರನಾಥ್‌ ನಿರ್ದೇಶನದ ಕಾಮಿಡಿ ಆಫ್‌ ಎರರ್ಸ್‌ನ ಕನ್ನಡ ಅನುವಾದ ಕನ್ನಡ ರಂಗಭೂಮಿಯ ಅತೀ ಯಶಸ್ವಿ ರಂಗಪ್ರಯೋಗಗಳಲ್ಲಿ ಒಂದು. ಕೆವಿ ಅಕ್ಷರ ಸಹ ತಾವು ಅನುವಾದಿಸಿದ್ದನ್ನು ತಾವೇ ನಿರ್ದೇಶಿಸುತ್ತಾರೆ. ಅವರ ರಂಗಸಂಯೋಜನೆ ಹಾಗೂ ಹಿನ್ನೆಲೆ ಸಂಗೀತ ಬಳಸುವ ಕ್ರಮ ಅತ್ಯಂತ ಪರಿಣಾಮಕಾರಿಯಾದುದು. ಈ ಬಗೆಯಲ್ಲಿ ಹಲವರ ಉದಾಹರಣೆ ಕೊಡಬಹುದು.

ಆದರೆ ನನ್ನ ವಿಷಯದಲ್ಲಿ ನಾನೇ ಹಾಕಿಕೊಂಡ ಒಂದು ಪಾಲಿಸಿ ಇದೆ. ನಾನು ಬರೆದ ಅಥವಾ ಅನುವಾದಿಸಿದ ನಾಟಕ ನಾನು ನಿರ್ದೇಶಿಸುವುದಿಲ್ಲ. ಬೇರೆಯವರು ಅನುವಾದಿಸಿದ ನಾಟಕದ ಪ್ರತಿಯನ್ನು ನಾನು ರಂಗಕೃತಿಯಾಗಿ ತರುತ್ತೇನೆ. ಹೀಗಾಗಿ ನನ್ನ ಅನುಭವ ತೀರಾ ಭಿನ್ನವಾದುದು. ನಾನು ಅನುವಾದಿಸಿದ ನಾಟಕವನ್ನು ಬೇರೆಯವರ ನಿರ್ದೇಶನದಲ್ಲಿ ನೋಡುತ್ತಾ ಹಲವು ವಿಷಯ ಕಲಿತಿದ್ದೇನೆ ಎನ್ನಬಹುದು.

11. ರಂಗ ಸಂಘಟಕರು ಮತ್ತು ರಂಗ ಸಂಘಟನೆ ಎಷ್ಟು ಮುಖ್ಯ

– ರಂಗಭೂಮಿ ಎಂದರೆ ಅದು ಸಾಮೂಹಿಕ ಚಟುವಟಿಕೆ. ನಾಟಕ ಒಂದು ಆಗಬೇಕೆಂದರೆ ನಟ ಮಾತ್ರ ಅಲ್ಲ, ನಾಟಕಕಾರನೂ ಬೇಕು, ನಿರ್ದೇಶಕನೂ ಬೇಕು, ಬೆಳಕು ವಿನ್ಯಾಸಕ – ವಸ್ತ್ರ ವಿನ್ಯಾಸಕರೂ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆ ನಾಟಕವನ್ನು ನೋಡುವ ಜನರೂ ಬೇಕು. ಹಾಗಾಗಿ ರಂಗಭೂಮಿಯ ಪ್ರತಿ ಹಂತದ ಕೆಲಸವೂ ಸಂಘಟನಾತ್ಮಕ ಕೆಲಸವೇ. ಈ ಕೆಲಸ ಮಾಡಲು ಸಂಘಟಕರೊಬ್ಬರೂ ಸದಾ ಕಾಲ ಬೇಕಾಗುತ್ತಾರೆ. ಅದು ಸಣ್ಣ ಪಟ್ಟಣವಾಗಲಿ ಬೃಹತ್‌ ನಗರವಾಗಲಿ ಅಂತಲ್ಲಿ ರಂಗ ಚಳವಳಿಯನ್ನು ಉಳಿಸಲು ಸಂಘಟನಾತ್ಮಕ ಶಿಸ್ತು ಮತ್ತು ರಂಗಸಂಘಟಕರ ನಿಸ್ವಾರ್ಥದ ಕೆಲಸ ಪ್ರಮುಖ ಅಗತ್ಯವಾಗುತ್ತದೆ.

12. ಒಬ್ಬ ವ್ಯಕ್ತಿ ಒಂದು ಪಾತ್ರವಾಗಬೇಕಾದರೆ ಅವನ ತಯಾರಿ ಹೇಗಿರಬೇಕು

– ಓಹ್…!‌ ಇದು ಇಡಿಯಾಗಿ ನಟನೆಯ ಸಂಪೂರ್ಣ ಪಾಠವನ್ನು ಹೇಳಬೇಕಾಗುವಂತಹ ಪ್ರಶ್ನೆ. ಇಂತಹ ಸಂವಾದದಲ್ಲಿ ಈ ಬಗ್ಗೆ ಮಾತಾಡಲು ಬೇಕಾಗುವಷ್ಟು ಸಮಯ ದೊರೆಯುವುದು ಕಷ್ಟ. ಆದರೆ ಕ್ಲುಪ್ತವಾಗಿ ಕೆಲವು ಮಾತುಗಳನ್ನು ಹೇಳುತ್ತೇನೆ. ಒಬ್ಬ ವ್ಯಕ್ತಿಯೂ ತಾನಲ್ಲದ ಮತ್ತೊಂದಾಗುವುದು ಮತ್ತು ಆ ಮತ್ತೊಬ್ಬನ, ಅಂದರೆ ಆಯಾ ಪಾತ್ರದ ತಿರುಳನ್ನು ನೋಡುಗರ ಮನಸ್ಸಿಗೆ ದಾಟುವಂತೆ ಅಭಿನಯಿಸುವುದನ್ನು ನಟನೆ ಎನ್ನುತ್ತೇವೆ. ಈ ಮತ್ತೊಬ್ಬರಾಗುವ ಪ್ರಕ್ರಿಯೆ ತೀರಾ ಸಂಕೀರ್ಣವಾದುದು. ಅದಕ್ಕೆ ಆ ಪಾತ್ರವನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು. ಪಾತ್ರ ಅಡುವ ಸಣ್ಣ ಮಾತೇ ಇದ್ದರೂ ಅದರ ಹಿನ್ನೆಲೆಯನ್ನು ಮತ್ತು ಆ ಮಾತು, ಚಲನೆ ನಾಟಕದ ಮುಂದಿನ ಕಥನಕ್ಕೆ ಏನು ಮಾಡುತ್ತದೆ ಎಂಬ ಸ್ಪಷ್ಟ ತಿಳುವಳಿಕೆ ಇರಬೇಕು. ನಿರ್ದೇಶಕನೊಬ್ಬನು ಇದ್ದು ಆತ ನಟರನ್ನು ವಿಭಿನ್ನ ಪಾತ್ರಗಳಿಗೆ ಹೊಂದುವಂತೆ ರೂಪಿಸುವ ಅಭ್ಯಾಸ ನಮ್ಮಲ್ಲಿದೆ. ಆದರೆ ವಾಸ್ತವವಾಗಿ ಹೀಗೆ ಮತ್ತೊಬ್ಬರಿಂದ ರೂಪಿತವಾಗುವುದಕ್ಕಿಂತ ಒಬ್ಬ ಚಿಂತನಶೀಲ ನಟರು ತಾವು ಅಭಿನಯಿಸುವ ಪಾತ್ರವನ್ನು ತಮ್ಮದೇ ಕ್ರಮದಲ್ಲಿ ಅನುಭವಿಸಿ ನಟನೆಯನ್ನು ರೂಪಿಸಿಕೊಂಡಾಗ ಅಂತದು ಹೆಚ್ಚು ಶಕ್ತಿಯುತವಾಗಿ, ಪರಿಣಾಮಕಾರಿಯಾಗಿ ನೋಡುಗನಿಗೆ ತಾಗುತ್ತದೆ. ಈ ಬಗೆಯ ನಟನೆಯನ್ನು ಸಾಧಿಸುವುದಕ್ಕೆ ನಿರಂತರ ರಿಯಾಜ್‌ ಮತ್ತು ತಾಲೀಮು ಬೇಕಾಗುತ್ತದೆ. ಅಲ್ಲಿ ದೇಹ ಮತ್ತು ಧ್ವನಿಗೆ ಮಾತ್ರವೇ ಅಲ್ಲ ಬುದ್ಧಿಗೆ ಬೃಹತ್‌ ಕಸರತ್ತು ಇರುತ್ತದೆ. ಜೊತೆಗೆ ಪಾತ್ರಧಾರಿಯ ಜೊತೆಗೆ ಆಯಾ ಪಾತ್ರವು ನಿರಂತರವಾಗಿ ಸಂಭಾಷಿಸುತ್ತಾ ಇರುತ್ತದೆ. ಕಥನದ ವಿಭಿನ್ನ ಘಟ್ಟಗಳಲ್ಲಿ ಒಂದು ಪಾತ್ರವು ಸಾಗುವ ವಿವರಗಳು ನಟನನ್ನು ಕಾಡುತ್ತವೆ. ನಿದ್ದೆಗೆಡಿಸುತ್ತವೆ. ಕೆಲವೊಮ್ಮೆ ರೇಷ್ಮೆ ಹುಳವು ಗೂಡು ಕಟ್ಟುವಲ್ಲಿ ಆಗುವ ಹಾಗೆ ಹಲವು ಜ್ವರಗಳು ಬರುತ್ತವೆ. ಗಂಟಲು ಕೈ ಕೊಡುತ್ತದೆ, ದೇಹ ತಾಳ ತಪ್ಪುತ್ತದೆ. ಮನಸ್ಸು ಎಲ್ಲೆಲ್ಲೋ ಓಡುತ್ತದೆ. ಇದೆಲ್ಲವನ್ನೂ ನಿಯಂತ್ರಿಸಿ ಒಬ್ಬ ವ್ಯಕ್ತಿಯು ನಾಟಕದಲ್ಲಿನ ಮತ್ತೊಬ್ಬ ವ್ಯಕ್ತಿಯಾಗಿ ಪರಿವರ್ತನೆ ಆಗಬೇಕು ಮತ್ತು ನಾಟಕದ ಪ್ರದರ್ಶನದ ಉದ್ದಕ್ಕೂ ಪಾತ್ರವಾಗದೆಯೇ ಆ ಪಾತ್ರ ಎಂಬಂತೆ ಆಗಿ (ಮೇಕ್‌ ಬಿಲೀವ್‌ ಎಂಬರ್ಥದಲ್ಲಿ) ನಟಿಸುತ್ತಾ ಕಥನವನ್ನು ನೋಡುಗನಿಗೆ ದಾಟಿಸುತ್ತಾ, ನಾಟಕ ಮತ್ತು ನೋಡುಗರ ನಡುವಿನ ಸೇತುಬಂಧ ಸಾಧಿಸಬೇಕು.

ಈ ಮಾತುಗಳ ಸಂಕೀರ್ಣತೆಯೇ ನಟನೆ ಎಂಬುದರ ದುರ್ಗಮ ದಾರಿಯನ್ನು ತಿಳಿಸುತ್ತದೆ ಎಂದು ಭಾವಿಸುತ್ತೇನೆ. ಈ ನಟನೆಯ ಹಾದಿಯಲ್ಲಿ ಪೂರ್ಣ ಗೆಲುವು ಸಾಧಿಸಿದವರು ಸಹ ಅತ್ಯಂತ ವಿರಳ. ಕನ್ನಡ ರಂಗಭೂಮಿಯಲ್ಲಿ ಆ ಬಗೆಯ ಸಂಪೂರ್ಣ ನಟರು ಎನಿಸಿಕೊಂಡವರು ಬೆರಳೆಣಿಕೆಯ ಜನ ಮಾತ್ರ.       

13. ನೀವು ಅಭಿನಯಿಸಿದ ನಾಟಕಗಳಲ್ಲಿ ನಿಮಗೆ ತುಂಬಾ ಕಾಡಿದ ಪಾತ್ರಗಳು ಯಾವುವು

– ನಾನು ಅಭಿನಯಿಸಿದ ಎಲ್ಲಾ ನಾಟಕಗಳೂ ನನ್ನನ್ನು ಕಾಡಿದ ಕಾರಣಕ್ಕೆ ಆಯಾ ಪಾತ್ರಗಳನ್ನು ಒಪ್ಪಿಕೊಂಡು ಮಾಡಿದ್ದೇನೆ. ಆದರೆ ಅಂತಹ ಪ್ರಯೋಗಗಳಲ್ಲಿ ಅತಿಹೆಚ್ಚು ತೃಪ್ತಿ ಕೊಟ್ಟ ಪ್ರಯೋಗ ಎಂದು ಹೆಸರಿಸಲು ಸಿಗುವುದು ತುಂಬಾ ಕಡಿಮೆ. ಜುಟ್ಟಿ ಸತೀಶ್‌ ನಿರ್ದೇಶನದ “ಮಾಯಾಲೋಕ” ನಾಟಕದ ವೃದ್ಧನ ಪಾತ್ರ, ಸುರೇಂದ್ರನಾಥ್‌ ನಿರ್ದೇಶನದ “ನಾ ತುಕಾರಾಂ ಅಲ್ಲ” ನಾಟಕದ ಪಾತ್ರ, ಸುರೇಂದ್ರನಾಥ್‌ ಅವರ ನಿರ್ದೇಶನದ “ಮ್ಯಾಕ್‌ಬೆತ್”‌ ನಾಟಕದ ಮ್ಯಾಕ್‌ಬೆತ್‌ ಪಾತ್ರ, ನನ್ನದೇ ನಿರ್ದೇಶನದ “ಕಿಂಗ್‌ ಲಿಯರ್”‌ ನಾಟಕದಲ್ಲಿನ ಗ್ಲಾಸ್ಟರ್‌ ಎಂಬ ಪಾತ್ರ, ಶ್ರೀನಿವಾಸ ಪ್ರಭು ನಿರ್ದೇಶನದ “ಬಂದ ಬಂದ ಸರದಾರ” ನಾಟಕದಲ್ಲಿನ ಫೇಕ್‌ ಸರ್ಕಾರಿ ಅಧಿಕಾರಿಯ ಪಾತ್ರ ಹೀಗೆ ಕೆಲವು ಪಾತ್ರಗಳು ನನ್ನನ್ನು ಇಂದಿಗೂ ಆವರಿಸಿಕೊಂಡಿವೆ. ವಿಶೇಷವಾಗಿ “ನಾ ತುಕಾರಂ ಅಲ್ಲ” ನಾಟಕದಲ್ಲಿ ಏಣಗಿ ನಟರಾಜ್ ಜೊತೆಗೆ ವೇದಿಕೆಯ ಮೇಲೆ ಆಗುತ್ತಿದ್ದ ಜುಗಲ್‌ ಬಂಧಿ ಮರೆಯಲಾಗದ ಅನುಭವ ಎನ್ನಬಹುದು. ಇಷ್ಟಾದರೂ ನಾನಿನ್ನೂ ಪರಿಪೂರ್ಣ ನಟನೆ ಸಾಧಿಸಿದ್ದೇನೆ ಎಂದು ಹೇಳಲಾರೆ. ತಾಲೀಮಿನ ನಡುವೆಯೇ ಅಭಿನಯಿಸುವವನನ್ನು ಮೀರಿಸುವಂತೆ ಒಳಗಿರುವ ನಿರ್ದೇಶಕ ಕಾಡಬಹುದು ಅಥವಾ ಪ್ರದರ್ಶನ ನಡೆಯುವಾಗಲೇ ಒಳಗಿರುವ ಸಂಘಟಕ ಮುಂದಿನ ದೃಶ್ಯದ ಪ್ರಾಪರ್ಟಿ ಸಿದ್ಧವಿದೆಯೇ ಎಂದು ನೆನಪಿಸುತ್ತಾ ನಟನೆಯ ತಾಳ ತಪ್ಪಿಸಬಹುದು. ಇವೆಲ್ಲವನ್ನೂ ಮೀರಿ ಪೂರ್ಣ ತೃಪ್ತಿ ಕೊಡುವ ನಟನೆಯನ್ನು ನಾನಿನ್ನೂ ಮಾಡಬೇಕಿದೆ,

14. ಏಣಗಿ ನಟರಾಜರ ಅಭಿನಯದ ವಿಶೇಷತೆ ಕುರಿತು ತಿಳಿಸಿ. 

– ಏಣಗಿ ನಟರಾಜ ನನ್ನ ಬದುಕಿನಲ್ಲಿ ಕಂಡ ಶ್ರೇಷ್ಟ ನಟರ ಪಟ್ಟಿಯಲ್ಲಿ ಸದಾಕಾಲ ಇರುವ ಹೆಸರು. ಆತ ತನ್ನ ಧ್ವನಿಯನ್ನು ಮತ್ತು ದೇಹವನ್ನು ಯಾವುದೇ ಪಾತ್ರಕ್ಕೆ ಒಗ್ಗಿಸಿಕೊಳ್ಳುತ್ತಿದ್ದ ಕ್ರಮವೇ ಯಾವುದೇ ಕಲಾವಿದರಿಗೆ ಪಾಠವಾಗುವಂತಹದು. ಆತನ ಅಭಿನಯದ ʻವಿಗಡ ವಿಕ್ರಮರಾಯʼದ ಖಳನ ಪಾತ್ರ ಒಂದು ಎತ್ತರವಾದರೆ ʻಸಾಂಬಶಿವ ಪ್ರಹಸನʼದ ಹಾಸ್ಯ ಪಾತ್ರ ಮತ್ತೊಂದು ಎತ್ತರ. ʻತದ್ರೂಪಿʼಯ ಸರ್ವಾಧಿಕಾರಿ ಹಾಗೂ ಸರಳ ವ್ಯಕ್ತಿಯ ಪಾತ್ರಗಳಂತೂ ಮತ್ತೂ ಹಿರಿದು. ʻನಟಸಾಮ್ರಾಟ್‌ʼ ತರಹದ ನಾಟಕವನ್ನು ಸ್ವತಃ ನಿರ್ದೇಶಿಸಿ, ನಟಿಸಿ ನೋಡುಗರನ್ನೆಲ್ಲಾ ಭಾವ ಪ್ರವಾಹದಲ್ಲಿ ಕರೆದೊಯ್ದದ್ದನ್ನು ಮರೆಯಲಾಗದು. ಇಂತಹ ಏಣಗಿ ನಟರಾಜ ನನ್ನ ಜೀವದ ಗೆಳೆಯನೂ ಆಗಿದ್ದ. ಆತನ ಜೊತೆಗೆ “ನಾ ತುಕಾರಾಂ ಅಲ್ಲ” ನಾಟಕದ ೪೮ ಪ್ರದರ್ಶನಗಳಲ್ಲಿ ಅಭಿನಯಿಸಿದ್ದು ನನ್ನ ಪಾಲಿಗೆ ಒದಗಿದ ಬೃಹತ್‌ ಕಲಿಕೆಯ ಸೌಭಾಗ್ಯ. ಆತ ಯಾವುದೇ ಪಾತ್ರದ ಮಾತುಗಳನ್ನು ಕಂಠಪಾಠ ಮಾಡಿಕೊಳ್ಳುತ್ತಾ ಇರಲಿಲ್ಲ. ಬದಲಿಗೆ ಪಾತ್ರವೇ ತಾನಾಗಿ ಬಿಡುತ್ತಿದ್ದ. ಹಾಗಾಗಿ ಮಾತುಗಳು ಕೂಡ ಆ ಪಾತ್ರವನ್ನು ನೋಡುಗರಿಗೆ ದಾಟಿಸುವ ಸಾಧನವಾಗುತ್ತಿತ್ತು. ಮಾತಿಲ್ಲದ ಕ್ಷಣಗಳಲ್ಲಿ ಆತ ಬಳಸುತ್ತಿದ್ದ ದೇಹ ಭಾಷೆಯೂ ಸಹ ಆ ಪಾತ್ರದ ಹಲವು ಮಾತುಗಳನ್ನು ದಾಟಿಸುವಂತೆ ಇರುತ್ತಿತ್ತು. “ನಾ ತುಕಾರಾಂ ಅಲ್ಲ” ನಾಟಕದಲ್ಲಿ ನನ್ನದು ಲೇಖಕರ ಸಹಾಯ ದೊರೆತ (author backed) ಪಾತ್ರ. ಆ ನಾಟಕದ ಶೇಕಡ ೮೦ ರಷ್ಟು ಮಾತುಗಳು ನನ್ನ ಪಾತ್ರದ್ದು. ಏಣಗಿ ನಟರಾಜನಿಗೆ ಕಡಿಮೆ ಮಾತು. ಸುದೀರ್ಘ ಮೌನದ ಹಲವು ಕ್ಷಣಗಳು ಆತನಿಗೆ ಇದ್ದವು. ಇಂತಹ ಪಾತ್ರವನ್ನು ಆತ ಅದೆಷ್ಟು ಸಮತೂಕದಿಂದ ನಿರ್ವಹಿಸುತ್ತಿದ್ದ ಎಂದರೆ ಅದು ಜೊತೆಯಲ್ಲಿ ಅಭಿನಯಿಸುವ ಯಾರಿಗೆ ಆದರೂ ಆ ಮಟ್ಟಕ್ಕೆ ಹತ್ತಿರ ಆಗುವ ಹಾಗೆ ನಟಿಸಬೇಕೆಂಬ ಒತ್ತಡ ಹಾಕುತ್ತಿತ್ತು. ಆ ಒತ್ತಡದ ಕಾರಣವಾಗಿ ನನ್ನೊಳಗಿನ ನಟನಿಗೆ ದೊರೆತ ಕಲಿಕೆಯನ್ನು ಪದಗಳಲ್ಲಿ ಹಿಡಿಯವುದು ಕಷ್ಟ.

ನಾಟಕ ಆರಂಭವಾಗುವುದಕ್ಕೆ ಮೊದಲು ಆತನನ್ನು ನೋಡಿದರೆ ಅನಾರೋಗ್ಯದಿಂದ ಇದ್ದಾನೆ ಎಂಬಂತೆ ಕಾಣುತ್ತಿದ್ದವನು, ಸದಾ ಗೂನು ಬೆನ್ನು ಮಾಡಿಕೊಂಡು ನಿದ್ದೆಗೆ ಜಾರುವಂತೆ ಇರುತ್ತಿದ್ದವನು, ವೇದಿಕೆಯನ್ನು ಪ್ರವೇಶಿಸಿದ ಕೂಡಲೇ ಅದೆಲ್ಲಿಂದ ಅಷ್ಟು ಎನರ್ಜಿಯನ್ನು ತಂದುಕೊಳ್ಳುತ್ತಿದ್ದನೋ ಅರಿಯೇ. ವನ ಪ್ರವೇಶ ಆದೊಡನೆ ಇಡೀ ರಂಗಮಂದಿರದಲ್ಲಿ ವಿದ್ಯುತ್‌ ಸಂಚಾರ ಆಗುತ್ತಿತ್ತು. “ನಾ ತುಕಾರಾಂ ಅಲ್ಲ” ನಾಟಕದ ತಾಲೀಮು ಸುಮಾರು ಎರಡು ತಿಂಗಳ ಕಾಲದ್ದಾಗಿತ್ತು. ಈ ಅವಧಿಯಲ್ಲಿ ಅತಿ ಹೆಚ್ಚು ತಿದ್ದುವಿಕೆಯನ್ನು ನಿರ್ದೇಶಕ ಸುರೇಂದ್ರ ಮಾಡುತ್ತಾ ಇದ್ದದ್ದು ನನಗೆ. ಪ್ರತೀ ಸಲ ಬಯ್ಯಿಸಿಕೊಳ್ಳುವಾಗಲೂ ʻಆ ನಟರಾಜನ ಹಾಗೆ ಪಾತ್ರದ ಒಳಗೆ ಇಳಿಯೋ… ಮಾತುಗಳನ್ನು ನಿನ್ನದು ಮಾಡಿಕೊಳ್ಳೋʼ ಎನ್ನುತ್ತಿದ್ದ ಸುರೇಂದ್ರನ ಮಾತುಗಳು ಈಗಲೂ ಕಿವಿಯಲ್ಲಿ ಗುಂಯ್‌ಗುಡುತ್ತದೆ.

ಮೈಸೂರಿನ ಒಂದು ಪ್ರದರ್ಶನದಲ್ಲಿ ನಾಟಕದ ಮೊದಲ ಬೆಲ್‌ ಆದಾಗ ಏಣಗಿ ನಟರಾಜ ಕಾಣಿಸಲಿಲ್ಲ. ಇವನಿಗೆ ಏನಾಯಿತು ಎಂದು ಹುಡುಕಿದರೆ ಆತನ ಪ್ರವೇಶ ಇದ್ದ ಸೈಡ್‌ ವಿಂಗ್‌ನಲ್ಲಿ ನೆಲದ ಮೇಲೆ ಮಲಗಿ ಬಿಟ್ಟಿದ್ದ. ʻಏನಾಯಿತೋ ನಟʼ ಎಂದರೆ ʻನನ್ನ ಕೈಯಲ್ಲಿ ಆಗುತ್ತಿಲ್ಲ. ಸುಸ್ತುʼ ಎಂದ. ಸುರೇಂದ್ರ ಅವರು ಅಂದಿನ ಪ್ರದರ್ಶನ ಕ್ಯಾನ್ಸಲ್‌ ಮಾಡಿ ಟಿಕೆಟ್‌ ದುಡ್ಡು ವಾಪಸ್‌ ಕೊಟ್ಟುಬಿಡೋಣ ಎಂಬ ತೀರ್ಮಾನಕ್ಕೆ ಬಂದಾಗ ಎರಡನೆಯ ಬೆಲ್‌ ಆಗಿ ಜನ ರಂಗಮಂದಿರವನ್ನು ತುಂಬಿದ್ದರು. ಅಂದು ನಾಟಕ ಹೌಸ್‌ಫುಲ್‌ ಆಗಿ ಜನ ಓಡಾಡಬೇಕಾದ ಜಾಗದಲ್ಲಿಯೂ ನೋಡುಗರು ಕುಳಿತಿದ್ದರು. ನಾನು ನಟರಾಜನಿಗೆ ತೆರೆ ಸರಿಸಿ ಜನರನ್ನು ತೋರಿಸಿದೆ. ಬಂದಿರುವ ಜನರನ್ನು ವಾಪಸ್‌ ಕಳಿಸಬಾರದು ಎಂದು ಮಾತಾಡಿದೆ. ಅದೆಲ್ಲಿಂದ ಶಕ್ತಿ ಅವನೊಳಗಡೆ ಪ್ರವೇಶಿಸಿತೊ ಅರಿಯೆ. ನಾನು ಪ್ರದರ್ಶನ ಮಾಡುತ್ತೇನೆ ಎಂದು ನಟ ಎದ್ದು ನಿಂತ, ಹನುಮಂತ ಸಮುದ್ರೋಲ್ಲಂಘನಕ್ಕೆ ನಿಂತ ಹಾಗೆ. ಅಂದಿನ ಪ್ರದರ್ಶನ ನನ್ನ ಜೀವನ ಪೂರ ಮರೆಯಲಾಗದ ಪ್ರದರ್ಶನ. ಏಣಗಿ ನಟರಾಜ ಅದೆಷ್ಟು ಚೆನ್ನಾಗಿ ಅಭಿನಯಿಸಿದ ಎಂದರೆ ಅದೊಂದು ಅಪರೂಪದ ಅನುಭವ. ನಾಟಕ ಮುಗಿದ ನಂತರ ಕೈಕುಲುಕಲು ಬಂದ ಪ್ರತೊಯೊಬ್ಬರ ಕಣ್ಣುಗಳು ಸಹ ತುಂಬಿದ್ದವು. ನಾಟಕದ ತಿರುಳನ್ನು ಸಾರ್ಥಕವಾಗಿ ದಾಟಿಸಿದ ನೆಮ್ಮದಿ ಇಡೀ ತಂಡಕ್ಕೆ ಬಂದಿತ್ತು. ನಿರ್ದೇಶಕ ಸುರೇಂದ್ರ ನನ್ನ ನಟನೆಯನ್ನು ಓವರ್‌ ಆಕ್ಟಿಂಗ್‌ ಎಂದು ಬೈದ. ಆದರೆ ನಟರಾಜನನ್ನು ಹಾಡಿ ಹೊಗಳಿದ. ಒಬ್ಬ ನಿರ್ದೇಶಕನ ಕೈಯಲ್ಲಿ ಆ ಬಗೆಯ ಹೊಗಳಿಕೆ ಪಡೆಯುವುದು ಯಾವುದೇ ನಟನ ಪಾಲಿಗೆ ಅವಿಸ್ಮರಣೀಯ ಆನಂದ. ನಟರಾಜ ಅಂದು ಭಾರೀ ಖುಷಿಯಲ್ಲಿ ನನ್ನನ್ನು ಅಪ್ಪಿಕೊಂಡು, ತಾನು ಮರೆತ ಮಾತುಗಳನ್ನೆಲ್ಲಾ ವೇದಿಕೆಯ ಮೇಲೆ ಜಾಣತನದಿಂದ ನೆನಪಿಸಿದ್ದಕ್ಕೆ ಥ್ಯಾಂಕ್ಸ್‌ ಹೇಳಿದ. ನಟರಾಜನ ಪಾತ್ರ ಕುಸಿದ ಬೀಳುವ ದೃಶ್ಯದಲ್ಲಿ ಆತನಿಗೆ ಏಟಾಗದಂತೆ ನಾನು ಹಿಡಿದುಕೊಂಡದ್ದನ್ನು, ದೃಶ್ಯವೊಂದು ಮುಗಿದ ನಂತರ ಕತ್ತಲಲ್ಲಿ ಆತನ ಕೈ ಹಿಡಿದು ನಾನೇ ಹೊರಗೆ ಕರೆದೊಯ್ದದ್ದನ್ನು ನೆನೆಸಿಕೊಂಡು ತಬ್ಬಿಕೊಂಡ. “ನೀನು ನಿಜವಾಗಲು ಸಹನಟ ಅಲ್ಲ, ರಂಗದ ಮೇಲೂ ರಂಗದ ಹೊರಗೂ ಜೀವದ ಮಿತ್ರ” ಎಂದಿದ್ದ. ಆ ಮಾತು ಕೇಳಿ ನಿರ್ದೇಶಕರು ನನಗೆ ಬೈದುದ್ದನ್ನೆಲ್ಲ ಮರೆತು ಮುಂದಿನ ಪ್ರದರ್ಶನಕ್ಕೆ ಸಿದ್ಧವಾಗುವುದು ಸಾಧ್ಯವಾಯಿತು.

ಇಂತಹ ಅಪರೂಪದ ಕಲಾವಿದ ಏಣಗಿ ನಟರಾಜ ಇನ್ನೂ ಬಹಳ ಕಾಲ ನಮ್ಮ ಜೊತೆಗೆ ಇರಬೇಕಿತ್ತು. ಆತನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗು ನನ್ನನ್ನು ಸದಾ ಕಾಡುತ್ತದೆ.

15. ಇಂದಿನ ಆಧುನಿಕತೆಯ ಸಂದರ್ಭದ ರಂಗಭೂಮಿಯಲ್ಲಿ ಆಗಬೇಕಾದ ತುರ್ತು ಬದಲಾವಣೆ ಏನು

– ಆಧುನಿಕ ಎಂದರೆ ಏನು? ಎರಡೂವರೆ ಸಾವಿರ ವರ್ಷಗಳಷ್ಟು ಹಳತಾದ ಋಗ್ವೇದದ ಮೊದಲ ಸರ್ಗದಲ್ಲಿ ಸಹ ನೂತನ ಕಾಲ ಏಂಬ ಪದ ಬಳಕೆ ಆಗಿದೆ. ಹಾಗಾಗಿ ಆಧುನಿಕ ಎಂಬುದು ಕೈಗೆ ಸಿಗದ, ಸಿಕ್ಕರೂ ನಮ್ಮ ಅರಿವಿಗೆ ಬರದ ಕಾಲ. ಹಾಗಾಗಿ ನಿಮ್ಮ ಪ್ರಶ್ನೆಯನ್ನು ಸಮಕಾಲೀನ ಸಂದರ್ಭದಲ್ಲಿ ಎಂದು ಅರ್ಥ ಮಾಡಿಕೊಳ್ಳುವುದು ಉತ್ತಮ ಎಂದು ಭಾವಿಸುತ್ತೇನೆ. ರಂಗ ಚಳವಳಿಯಲ್ಲಿ ಎಲ್ಲಾ ಕಾಲದಲ್ಲಿಯೂ ಆಯಾ ಕಾಲಘಟ್ಟದ ಸಮಸ್ಯೆಗಳನ್ನು ಕುರಿತು ನಾಟಕ ಮಾಡುವ ತುರ್ತು ಇದ್ದೇ ಇರುತ್ತದೆ. ಸಮಕಾಲೀನ ಘಟ್ಟ ಎಂದರೆ ಸತ್ಯೋತ್ತರ ಕಾಲ. ಪ್ರಾಯಶಃ ಇದನ್ನು ನಾವು ಸುಳ್ಳುಗಳ ವಿಜೃಂಭಣೆಯ ಕಾಲ ಎಂತಲೂ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳಾಗುತ್ತಿರುವ ಕಾಲ ಎಂತಲೂ ಗುರುತಿಸಬೇಕಾಗುತ್ತದೆ. ಈ ಕಾಲಘಟ್ಟದಲ್ಲಿ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಕುರಿತು, ಜಾತಿ ಧರ್ಮದ ಹೆಸರಲ್ಲಿ ಆಗುತ್ತಿರುವ ವಿಘಟನೆಯನ್ನು ತಪ್ಪಿಸುವ ಸಲುವಾಗಿ ನಾಟಕಗಳನ್ನು ಕಟ್ಟಬೇಕಿದೆ. ಆಳುವವರ ಮುಖವಾಡಗಳನ್ನು ಕಳಚಿ ಅದರ ಹಿಂದಿರುವ ವ್ಯಾಘ್ರಗಳನ್ನು ಅನಾವರಣಗೊಳಿಸಿ ನೋಡುಗರನ್ನು, ಆ ಮೂಲಕ ಒಟ್ಟು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಸಮಕಾಲೀನ ಘಟ್ಟವನ್ನು ನಾವು ಕಡುಭ್ರಷ್ಟ ಕಾಲ ಎಂತಲೂ ಕರೆಯಬೇಕಿದೆ. ಭ್ರಷ್ಟಚಾರ ಎಂದರೆ ಕೇವಲ ಲಂಚಗುಳಿತನ ಮಾತ್ರ ಅಲ್ಲ, ಸಮಾಜವನ್ನು ಒಡೆಯುವ ದ್ವೇಷಪೂರಿತ ಭಾಷಣಗಳನ್ನು ಆಡುತ್ತಲೇ ತಮ್ಮ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುವ, ಬೆಲೆ ಏರಿಕೆ ಕುರಿತು ಮಾತಾಡಿದರೆ ಸಿಯಾಚಿನ್ನಿನ ಚಳಿಯಲ್ಲಿರುವ ಸೈನಿಕರನ್ನು ನೋಡಿ ನಿಮ್ಮ ಕಷ್ಟ ಸಹಿಸಿಕೊಳ್ಳಿ ಎಂಬ ಅಪದ್ಧವನ್ನಾಡುವ ಆಳುವ ವರ್ಗದವರನ್ನು ಅವರ ಭಕ್ತರನ್ನು ತಿದ್ದುವ ಜಲಗಾರರಾಗಬೇಕಾದ ಜವಾಬ್ದಾರಿ ಎಲ್ಲಾ ಮಾಧ್ಯಮಗಳಲ್ಲಿ ಕೆಲಸ ಮಾಡುವವರ ಮೇಲಿದೆ. ಅದರಲ್ಲೂ ಇಂದಿನ ಟೆಲಿವಿಸನ್‌ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಶೇಕಡ ಎಂಬತ್ತರಷ್ಟು ಜನರು ಆಳುವ ಪಕ್ಷದ ಎದುರು ಮಂಡಿಯೂರಿ ಕೂತು, ಸ್ವತಃ ತಾವೇ ವಿರೋಧ ಪಕ್ಷಗಳನ್ನು ಬಯ್ಯುವುದರಲ್ಲಿ ಸಮಯ ಕಳೆಯುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ರಂಗಭೂಮಿಯ ಜವಾಬ್ದಾರಿ ಇನ್ನೂ ಹೆಚ್ಚಿನದಾಗುತ್ತದೆ. ವಿಘಟನೆಯಾಗುತ್ತಿರುವ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಹಿಂದಿನ ಎಲ್ಲಾ ಕಾಲಕ್ಕಿಂತ ಈಗ ಹೆಚ್ಚು ಮಾಡಬೇಕಿದೆ.

16. ಶಂಕರನಾಗ್ ನಿಮಗೆ ಹೇಗೆ ಸ್ಫೂರ್ತಿ? ರಂಗಭೂಮಿ ಕುರಿತು ಅವರಿಗೆ ಇದ್ದ ಬದ್ಧತೆ ಕುರಿತು ತಿಳಿಸಿ. 

– ಶಂಕರನಾಗ್‌ ಕನಸುಗಾರ. ದಿನದ ಇಪ್ಪತ್ನಾಲ್ಕು ಗಂಟೆಯೂ ಕನಸುತ್ತಾ ಆ ಕನಸುಗಳನ್ನು ಸಾಕಾರಗೊಳಿಸಲು ದುಡಿಯುತ್ತ ಇದ್ದ ಅಪರೂಪದ ವ್ಯಕ್ತಿ. ನನ್ನ ಬಾಲ್ಯ ಕಾಲದಲ್ಲಿಯೇ ಅಂತಹ ವ್ಯಕ್ತಿಯ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನಗೊದಗಿದ ಲಾಭ. ಆತ ಸದಾ ನೆಲದ ಮೇಲೆ ನಿಂತಿರುತ್ತಿದ್ದರು. ತಮ್ಮ ಜೊತೆಗೆ ಕೆಲಸ ಮಾಡುವ ಎಲ್ಲರನ್ನೂ ಸಮಾನ ಗೌರವದಿಂದ ಕಾಣುತ್ತಿದ್ದರು. ಎಲ್ಲರಿಗೂ ಸಮಾನ ಅವಕಾಶ ಕೊಡುತ್ತಿದ್ದರು. ಎಲ್ಲಿ ಯಾವ ಹೊತ್ತಿನಲ್ಲಿ ಸಿಕ್ಕಿದರೂ ಅದೇ ಪ್ರೀತಿಯಿಂದ ಮಾತಾಡಿಸುತ್ತಿದ್ದರು. ಅವರು ತೋರಿಸುತ್ತಿದ್ದ ಪ್ರೀತಿಯಿಂದಾಗಿ ಅವರು ನೀಡುತ್ತಿದ್ದ ಕೆಲಸಗಳನ್ನು ಚಂದಗಾಣಿಸುವುದಕ್ಕೆ ಪ್ರೇರಣೆ ಒದಗುತ್ತಿತ್ತು.

ರಂಗಭೂಮಿ ಶಂಕರ್‌ ಅವರ ಅವರ ಮೊದಲ ಆದ್ಯತೆ ಆಗಿತ್ತು. ಆದರೆ ಸಿನಿಮಾದಲ್ಲಿ ಅವರು ಜನಪ್ರಿಯರಾಗಿದ್ದರು. ಆ ಜನಪ್ರಿಯತೆಯನ್ನು ರಂಗಭೂಮಿಯನ್ನು ಕಟ್ಟಲು ಅವರು ಬಳಸಿಕೊಳ್ಳುತ್ತಿದ್ದರು. ಅತ್ಯಂತ ಅಪರೂಪದ, ನಟನೆಯ ಪ್ರಧಾನವಾದ ಸಹಜ ಹಾಗೂ ವಾಸ್ತವಾದಿ ರಂಗಪ್ರಯೋಗಗಳನ್ನು ಮಾಡಿಸುತ್ತಿದ್ದರು. ಅವರ ನಿರ್ದೇಶನದ “ಬ್ಯಾರಿಸ್ಟರ್”‌, “ಸಂಧ್ಯಾಛಾಯಾ”, “ನಾಗಮಂಡಲ” ನಾಟಕಗಳಲ್ಲಿ ಚಮತ್ಕಾರಗಳಿರಲಿಲ್ಲ. ಆದರೆ ನೋಡುಗರ ಮನಸ್ಸನ್ನವಾರಿಸುವಂತಹ ಸಹಜಾಭಿನಯ ಇರುತ್ತಿತ್ತು. ಈ ಬಗೆಯ ಮತ್ತಷ್ಟು ನಾಟಕಗಳನ್ನು ಮಾಡಿಸಬೇಕೆಂಬ ಕನಸನ್ನು ನನಸಾಗಿಸುವ ಮೊದಲೇ ಅವರು ಆಕಸ್ಮಿಕವಾಗಿ ನಿರ್ಗಮಿಸಿದ್ದು ನನ್ನಂತಹ ಹಲವರ ಪಾಲಿಗೆ ದೊಡ್ಡ ಆಘಾತದ ವಿಷಯ. ಇಂದಿಗೂ ಶಂಕರ್‌ ಅವರನ್ನು ನೆನೆಯದೆ ಯಾವುದೇ ಕೆಲಸ ಮಾಡುವುದು ಕಷ್ಟ. ಅವರು ಯಾವುದೇ ಕೆಲಸವನ್ನು ಯೋಜಿಸುತ್ತಿದ್ದ ರೀತಿ, ಅದನ್ನು ಆಗುಗೊಳಿಸುತ್ತಿದ್ದ ರೀತಿ ಯಾವತ್ತಿಗೂ ಎಲ್ಲರಿಗೆ ಮಾದರಿಯಾಗಿಯೇ ಇರುತ್ತದೆ.

17. ರಂಗಶಂಕರ ಕಟ್ಟಿದ ಬಗೆ ಹೇಗೆ? ಎದುರಿಸಿದ ತೊಡಕುಗಳು ಯಾವವು? ಬೇರೆ ನಗರ ಮತ್ತು ಜಿಲ್ಲೆಗಳಿಗೆ ಇದನ್ನು ವಿಸ್ತರಿಸುವ ಬಗ್ಗೆ ಯೋಚನೆ ಇತ್ತೆ

– ರಂಗಶಂಕರ ಕಟ್ಟುವ ಕನಸು ಕಂಡದ್ದು ಮತ್ತು ಕಟ್ಟಲು ಬೇಕಾದ ಹಣ ಹೊಂದಿಸಲು ಛಲ ಬಿಡದಂತೆ ಓಡಾಡಿದ್ದು ಅರುಂಧತಿ ನಾಗ್‌ ಅವರು. ನಾವೆಲ್ಲರೂ ಅವರು ಕರೆದಾಗ ಹೋಗಿ ಸಣ್ಣಪುಟ್ಟ ಕೆಲಸ ಮಾಡಿದ್ದು ಬಿಟ್ಟರೆ, ನಾಲ್ಕು ಕೋಟಿ ಹಣ ಹೊಂದಿಸಿ ರಂಗಮಂದಿರ ಕಟ್ಟುವುದು ಅಸಾಧ್ಯ ಎಂಬುದೇ ನಮ್ಮೆಲ್ಲರ ಭಾವನೆ ಆಗಿತ್ತು. ಆದರೆ ಅರುಂಧತಿ ಅವರು ಶಂಕರ್ ಹೆಸರಿನಲ್ಲಿ ಈ ಕೆಲಸ ಆಗಲೇಬೇಕು ಎಂದು ಅದರ ಹಿಂದೆ ನಿಂತರು. ಸುಮಾರು ಐದು ವರ್ಷಗಳಲ್ಲಿ ರಂಗಮಂದಿರ ಕಟ್ಟಿ ನಿಲ್ಲಿಸಿಯೇ ಬಿಟ್ಟರು.

ಇಂತಹ ಕೆಲಸ ಮಾಡಲು ಇರುವ ಮೊದಲ ತೊಡಕು ಆರ್ಥಿಕವಾದುದು. ಸರ್ಕಾರಗಳು ಆಗೀಗ ಸಣ್ಣ ಪುಟ್ಟ ಸಹಾಯ ಮಾಡುತ್ತವೆ. ಆದರೆ ಆ ಸಹಾಯದಿಂದ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ನೋಡುಗರೆಲ್ಲರೂ ಒಂದಾಗಿ ತಮ್ಮ ಕೈಯಲ್ಲಾಗುವ ಸಹಾಯ ಮಾಡಿದಾಗ ಮಾತ್ರ ಇಂತಹ ಕನಸುಗಳು ನನಸಾಗುವುದು. ಆ ಹಿನ್ನೆಲೆಯಲ್ಲಿ ರಂಗಶಂಕರ ಆಗಲು ಕಾರಣ ಆದ ದಾನಿಗಳ ಸಂಖ್ಯೆ ದೊಡ್ಡದು. ಅವರೆಲ್ಲರ ಹೆಸರುಗಳನ್ನು ಎಸ್‌ ಜಿ ವಾಸುದೇವ್‌ ಅವರು ತಾಮ್ರದಲ್ಲಿ ಮಾಡಿದ ಮರವೊಂದರ ಭಿತ್ತಿ ಚಿತ್ರದ ಎಲೆಗಳ ಮೇಲೆ ಬರೆಸಿ ರಂಗಶಂಕರದ ಪ್ರಾಂಗಣದಲ್ಲಿ ಹಾಕಲಾಗಿದೆ. ಆ ಹೆಸರುಗಳ ಪಟ್ಟಿಯ ಯಾವುದೋ ಮೂಲೆಯಲ್ಲಿ ನನ್ನ ಹೆಸರೂ ಇದೆ. ನಾನಾಗ ತಿಂಗಳಿಗೆ ಇಂತಿಷ್ಟು ಎಂಬಂತೆ ನಾಲ್ಕು ವರ್ಷಗಳ ಕಾಲ ಸಣ್ಣ ಮೊತ್ತದ ಹಣ ದೇಣಿಗೆಯಾಗಿ ಕಳಿಸುತ್ತಿದೆ. ಅದಕ್ಕಾಗಿ ಅರುಂಧತಿ ನಾಗ್‌ ಅವರು ಇಂದಿಗೂ ನಾನು ಸಿಕ್ಕಾಗೆಲ್ಲ ಅಭಿನಂದಿಸುತ್ತಾರೆ. ಅದು ಅವರ ದೊಡ್ಡಗುಣ. ಆದರೆ ಅತಿ ಹೆಚ್ಚು ಸಹಾಯ ಮಾಡಿದವರು ಅಂಬರೀಶ್‌ ಅವರು. ಆತ ಸರ್ಕಾರದ ಎಲ್ಲಾ ಶಕ್ತಿಗಳನ್ನು ಬಳಸಿ ಹಲವು ಶ್ರೀಮಂತರಿಂದ ದೇಣಿಗೆ ಪಡೆದು ಅರುಂಧತಿ ಅವರಿಗೆ ಬೆನ್ನೆಲುಬಾಗಿ ನಿಂತರು. ಜೊತೆಗೆ ಆಗ ಇದ್ದ ಎಸ್‌ ಎಂ ಕೃಷ್ಣ ಅವರ ಸರಕಾರವೂ ಸಹ ಸಹಾಯ ಮಾಡಿತು. ಹೀಗಾಗಿ ಹಲವು ವರ್ಷಗಳ ಶ್ರಮದ ಫಲವಾಗಿ ರಂಗಶಂಕರದಂತಹ ಅಂತಾರಾಷ್ಟ್ರೀಯ ಗುಣಮಟ್ಟದ ರಂಗಮಂದಿರವೊಂದು ನಮ್ಮೆದುರು ಎದ್ದು ನಿಲ್ಲಲು ಸಾಧ್ಯವಾಯಿತು.

ಹೀಗೆ ರಂಗಮಂದಿರ ಕಟ್ಟಿದರೆ ಕೆಲಸ ಮುಗಿಯುವುದಿಲ್ಲ. ಅದು ಸ್ಥಾವರವೇ ಆದರೂ ಅಲ್ಲಿ ಆಗುವ ಚಟುವಟಿಕೆಗಳ ಜಂಗಮತ್ವದಿಂದ ಅದು ಉಳಿಯಬೇಕು. ಅದು ತುಂಬಾ ಕಷ್ಟದ ಕೆಲಸ. ರಂಗಮಂದಿರವೆಂದರೆ ಕೇವಲ ನಾಟಕ ಅಭಿನಯಿಸುವವರಿಗೆ ವೇದಿಕೆ ಒದಗಿಸುವುದಷ್ಟೇ ಅಲ್ಲ, ಅದು ಒಂದು ರಂಗಚಳವಳಿಯನ್ನು ಕಟ್ಟುವ ಕೆಲಸವೂ ಹೌದು. ಹಾಗಾಗಿ ಯಾವ ಬಗೆಯ ನಾಟಕ? ಆ ನಾಟಕಗಳ ಗುಣಮಟ್ಟ ಹೇಗಿರಬೇಕು? ಆ ನಾಟಕಗಳನ್ನು ನೋಡಲು ನಿಯಮಿತವಾಗಿ ಬರುವ ನೆಚ್ಚಿನ ನೋಡುಗರ (loyal audience) ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ? ಈ ಬಗೆಯ ಹಲವು ಪ್ರಶ್ನೆಗಳನ್ನು ಉತ್ತರಿಸಬೇಕಾಗುತ್ತದೆ. ಈ ಹುಡುಕಾಟದಲ್ಲಿ ಹಲವರು ಶತ್ರುಗಳಾಗುತ್ತಾರೆ, ಹಲವರು ದೂರುವವರಾಗುತ್ತಾರೆ, ಹಲವರು ಎಲ್ಲರನ್ನು ಮುಚ್ಚಿಸಬೇಕು ಎಂತಲೇ ಮಾತಾಡುವ ಜನರೂ ಇರುತ್ತಾರೆ. ಅವರೆಲ್ಲರ ಜೊತೆಗಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳುತ್ತಲೇ ನಮ್ಮ ಕನಸಿನ ರಂಗಚಳವಳಿಯನ್ನು ಕಟ್ಟಬೇಕಾಗುತ್ತದೆ. ಅದು ನಿರಂತರ ಸಮಯ ಬೇಡುವ ಕೆಲಸ

ಇಂತಲ್ಲಿ ರಂಗಚಳವಳಿಯನ್ನು ಬೆಳೆಸುವ ಕೆಲಸ ಮಾಡುವುದಕ್ಕಿಂತ ಕಷ್ಟದ ವಿಷಯ ಆಗುವುದು ಆ ಸಂಸ್ಥೆಯನ್ನು ಮತ್ತು ಚಟುವಟಿಕೆಗಳನ್ನು ನಡೆಸಲು ಬೇಕಾದ ಹಣ ಹೊಂದಿಸುವುದು. ರಂಗಶಂಕರದಲ್ಲಿ ಆಗುವ ನಾಲ್ಕು ನಾಟಕೋತ್ಸವಗಳು ಮತ್ತು ರಂಗಶಂಕರವೇ ಸಿದ್ಧಪಡಿಸುವ ಹಲವು ನಾಟಕಗಳ ಖರ್ಚು ದೊಡ್ಡದು. ಅದಕ್ಕಾಗಿ ಮತ್ತೆ ಮತ್ತೆ ದೇಣಿಗೆ ಕೊಡುವವರ ಮುಂದೆ ನಿಂತು ದೇಹಿ ಎನ್ನಬೇಕಾಗುತ್ತದೆ. ಆ ಕೆಲಸವನ್ನು ಅರುಂಧತಿ ನಾಗ್‌ ಅವರು ನಿರಂತರವಾಗಿ ಮಾಡುತ್ತಾ ಇದ್ದಾರೆ. ಸರ್ಕಾರಗಳು ಒಂದೊಂದು ಪಕ್ಷ ಬಂದಾಗ ಒಂದೊಂದು ರೀತಿಯ ಸಿದ್ಧಾಂತದ ಹಿಂದೆ ಬಿದ್ದು, ಒಂದೊಂದು ಹಣೆ ಪಟ್ಟಿ ಹಚ್ಚಿ ಸಂಸ್ಕೃತಿ ಇಲಾಖೆಯಿಂದ ಕೊಡ ಮಾಡುವ ದೇಣಿಗೆಯನ್ನು ತಪ್ಪಿಸುತ್ತವೆ. ಎಸ್‌ ಎಂ ಕೃಷ್ಣ ಅವರ ನಂತರ ಉಮಾಶ್ರೀ ಅವರು ಸಂಸ್ಕೃತಿ ಇಲಾಖೆಯಲ್ಲಿದ್ದ ಅವಧಿಯನ್ನು ಬಿಟ್ಟರೆ ಮತ್ತೆ ಯಾವತ್ತೂ ರಂಗಶಂಕರದ ಚಟುವಟಿಕೆಗೆ ಸರ್ಕಾರದ ಸಹಾಯ ಸಿಕ್ಕಿಲ್ಲ. ಅಕಸ್ಮಾತ್‌ ಸಿಕ್ಕದ್ದು ಸಹ ಯಾವತ್ತಿಗೂ ವಾರ್ಷಿಕ ಹದಿನೈದು ಲಕ್ಷ ಮೀರಿದ್ದಿಲ್ಲ. ಆದರೆ ರಂಗಶಂಕರದಂತಹ ಜಾಗ ನಡೆಸಲು ವಾರ್ಷಿಕವಾಗಿ ಬೇಕಾದ ಹಣ ಐದಾರು ಕೋಟಿ ಮೀರುತ್ತದೆ. ಈ ಹಣವನ್ನು ಹೊಂದಿಸಲು ಸಧ್ಯಕ್ಕೆ ಇನ್ಫೋಸಿಸ್‌ ಪೌಂಡೇಷನ್‌, ನಿಲೇಕಣಿ ಫೌಂಡೇಷನ್‌, ಸುಧಾಮೂರ್ತಿ ಅವರು, ಕಿರಣ್‌ ಮಜುಂದಾರ್‌ ಮತ್ತು ಇನ್ನೂ ಕೆಲವರು ನಿರಂತರವಾಗಿ ಸಹಾಯ ಒದಗಿಸಿದ್ದಾರೆ, ಒದಗಿಸುತ್ತಾ ಇದ್ದಾರೆ. ಈ ಬಗೆಯ ಸಿಎಸ್‌ಆರ್‌ ಹಣದ ಸಹಾಯವಿಲ್ಲದೆ ಹೋದರೆ ರಂಗಶಂಕರವನ್ನು ನಡೆಸುವುದು ಸಹ ಕಷ್ಟವಾಗುತ್ತಿತ್ತು. ಅದರಲ್ಲಿಯೂ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ರಂಗಮಂದಿರ ಒದಗಿಸುವ ಏಕೈಕ ತಾಣವಿದು. ಇಲ್ಲಿ ದಿನವೊಂದಕ್ಕೆ ರಂಗತಂಡಗಳು ನೀಡುವುದು ಕೇವಲ ರೂ ಎರಡು ಸಾವಿರದ ಏಳುನೂರು. ಇಷ್ಟು ಕಡಿಮೆ ಹಣಕ್ಕೆ ರಂಗಮಂದಿರ ಇತರರಿಗೆ ಕೊಟ್ಟು ಆ ಸಂಸ್ಥೆ ನಡೆಸುವುದು ಯಾವತ್ತಿಗೂ ಸಾಹಸದ ಕೆಲಸವೇ. ಆ ಕೆಲಸ ಈ ವರೆಗೆ ಹಲವರ ಸಹಕಾರದಿಂದ ಆಗಿದೆ, ಆಗುತ್ತಿದೆ. ಮುಂದೆ ಇಂತಹ ಸಹಕಾರಗಳು ಸಿಗುವವರೆಗೆ ಅದು ನಡೆಯುತ್ತದೆ.

ಇನ್ನೂ ಇತರ ನಗರಗಳಿಗೆ ರಂಗಶಂಕರದ ಚಟುವಟಿಕೆ ವಿಸ್ತರಿಸುವ ಹಿನ್ನೆಲೆಯಲ್ಲಿ ಹಲವು ಪ್ರಯತ್ನ ಮಾಡಿದ್ದೇವೆ. “ರಂಗಶಂಕರ ಲೋಕಸಂಚಾರ” ಎಂಬ ಹೆಸರಿನಲ್ಲಿ ರಂಗಶಂಕರ ಸಿದ್ಧಪಡಿಸಿದ ನಾಟಕಗಳನ್ನು ಕರ್ನಾಟಕದ ಮತ್ತು ಭಾರತದ ಹಲವು ನಗರಗಳಲ್ಲಿ (ಕೆಲವೊಮ್ಮೆ ವಿದೇಶದಲ್ಲಿ ಸಹ) ಪ್ರದರ್ಶಿಸುವ ಪ್ರಯತ್ನ ಹಲವು ವರ್ಷಗಳಿಂದ ಮಾಡುತ್ತಿದ್ದೇವೆ. ಇದಲ್ಲದೆ ರಾಜ್ಯದ ಮುವ್ವತ್ತು ಜಿಲ್ಲೆಗಳಿಂದ ಆಯ್ದ ರಂಗಕರ್ಮಿಗಳಿಗೆ ನಾಟಕ ರಚನೆ, ನೇಪಥ್ಯ ಹಾಗೂ ನಿರ್ದೇಶನದ ಇಂಟೆನ್ಸಿವ್‌ ವರ್ಕ್‌ಷಾಪ್‌ ನಡೆಸಿ, ಜಗತ್ತಿನ ಅತ್ಯುತ್ತಮ ರಂಗಕರ್ಮಿಗಳಿಂದ ಕಲಿಸುವ ಪ್ರಯತ್ನ ಆಗಿದೆ. ಈ ಬಗೆಯ ಶಿಬಿರದಲ್ಲಿ ಕಲಿತವರಲ್ಲಿ ಪ್ರತೀ ವರ್ಷ ಕನಿಷ್ಟ ಆರು ಗರಿಷ್ಟ ಹತ್ತು ಜನರನ್ನು ಆರಿಸಿ, ಅವರ ಊರಿನ ತಂಡಗಳಿಗೆ ಹೊಸ ನಾಟಕಗಳನ್ನು ಸಿದ್ಧಪಡಿಸಲು ರಂಗಶಂಕರವೇ ಹಣ ನೀಡುತ್ತದೆ. ಹೀಗೆ ಸಿದ್ಧವಾದ ನಾಟಕಗಳ ಮೊದಲ ಆರು ಪ್ರದರ್ಶನವನ್ನು ರಂಗಶಂಕರವೇ ಏರ್ಪಡಿಸುತ್ತದೆ. ನಂತರ ಆ ನಾಟಕವು ಆಯಾ ತಂಡದ್ದಾಗುತ್ತದೆ. ಅವರಿಗೆ ಶಕ್ತಿ ಇರುವವರೆಗೆ ಆ ನಾಟಕ ಉಳಿಸಿಕೊಳ್ಳಬಹುದು. ಈ ಬಗೆಯಲ್ಲಿ ಹಲವು ಹೊಸ ರಂಗಕರ್ಮಿಗಳನ್ನು ಕಳೆದ ಹತ್ತು ವರ್ಷಗಳಿಂದ ತರುವ ಪ್ರಯತ್ನ ಆಗುತ್ತಿದೆ. ಇದೊಂದು ಅಭಿಯಾನ. ನಿರಂತರವಾಗಿ ನಡೆಯುತ್ತಾ ಇರಬೇಕು. ಅದರಿಂದ ಒದಗುವ ಫಲಗಳು ಮುಂದಿನ ತಲೆಮಾರಿಗೆ ಸಹಾಯ ಆಗಬಹುದು ಎಂದು ರಂಗಶಂಕರದ ಟ್ರಸ್ಟಿಗಳಲ್ಲಿ ಒಬ್ಬನಾದ ನನ್ನ ನಂಬಿಕೆ.

ರಂಗಶಂಕರದ ಹಾಗೆ ಅದೇ ಗುಣಮಟ್ಟದ ರಂಗಮಂದಿರಗಳನ್ನು ರಾಜ್ಯದ ಇನ್ನೂ ಕೆಲವು ಊರುಗಳಲ್ಲಿ ಕಟ್ಟಬೇಕೆಂಬ, ಸ್ಥಳೀಯರು ಅದನ್ನು ನಿರ್ವಹಿಸುವಂತೆ ತಯಾರಿಗಳನ್ನು ಮಾಡಬೇಕು ಎಂಬ ಕನಸಿದೆ. ಮುಂಬರುವ ದಿನಗಳಲ್ಲಿ ಆ ಕನಸು ನನಸಾದೀತು ಎಂದು ಭಾವಿಸಿದ್ದೇನೆ.

18. ರಂಗಕರ್ಮಿಗಳು ಆರ್ಥಿಕವಾಗಿ ಸಬಲರಾಗಲು ನಿಮ್ಮ ಸಲಹೆ

– ರಂಗಕರ್ಮಿಗಳು ಆರ್ಥಿಕವಾಗಿ ಸಬಲರಾದರೆ ಸೋಮಾರಿಗಳಾಗಬಹುದು ಎಂಬ ಮಾತಿದೆ. ಹಾಗಾಗಿ ನಾವದನ್ನು ಆರ್ಥಿಕ ಸಬಲತೆ ಎಂದು ಕರೆಯುವುದಕ್ಕಿಂತ ಸಾಮಾಜಿಕ ಭದ್ರತೆ ಎಂದು ಕರೆಯೋಣ. ಅಂದರೆ ರಂಗಕರ್ಮಿಗಳ ಮಕ್ಕಳ ಓದಿಗೆ ವ್ಯವಸ್ಥೆ, ಅವರು ಇರಲು ಬೇಕಾದ ಮನೆಯ ವ್ಯವಸ್ಥೆ, ಆರೋಗ್ಯ ವಿಮೆ, ಜೀವವಿಮೆ, ಅವರ ಕುಟುಂಬವರ್ಗದವರಿಗೆ ಬದುಕಲು ಬೇಕಾದ ಕನಿಷ್ಟ ಸಹಾಯ – ಈ ಬಗೆಯ ಸೋಷಿಯಲ್‌ ಸೆಕ್ಯುರಿಟಿಗಳನ್ನು ಒದಗಿಸುವ ಕೆಲಸಗಳನ್ನು ಆಯಾ ವಲಯದಲ್ಲಿ ಆರಂಭಿಸುವ ರಂಗಕರ್ಮಿಗಳ ಸಹಕಾರ ಸಂಘದಿಂದ ಒದಗಿಸಬೇಕು. ಆಗ ಅವರು ಮತ್ತಷ್ಟು ಉತ್ಸಾಹದಿಂದ ರಂಗಚಳವಳಿಯನ್ನು ಕಟ್ಟಲು ಮುನ್ನುಗ್ಗುತ್ತಾರೆ. ಅಂತಹ ಹಲವು ಯೋಜನೆಗಳನ್ನು ಹಾಕಿಕೊಂಡು ಹಲವು ರಂಗ ಗೆಳೆಯರು ಕೆಲವು ಸಂಘಟನೆಗಳನ್ನು ಕಟ್ಟುತ್ತಿದ್ದಾರೆ. ಅದರಲ್ಲಿ ಮಂಜು ನಾರಾಯಣ್‌ ಮತ್ತು ಡಿಂಗ್ರಿ ನರೇಶ್‌, ಮಹದೇವ ಹಡಪದ ಮುಂತಾದವರು ಮಾಡುತ್ತಿರುವ ಪ್ರಯತ್ನಗಳು ಸಫಲವಾದೀತು ಎಂಬ ಭರವಸೆಯ ಆಶಾಕಿರಣವಿದೆ. ನಾಳೆಗಳು ಮತ್ತಷ್ಟು ಉತ್ತಮವಾದೀತು. ನಮ್ಮ ರಂಗಚಟಳವಳಿ ಸಶಕ್ತವಾದೀತು ಎಂಬ ಆಸೆಯೊಂದಿಗೆ ಕಾಯೋಣ.

19. ರಂಗಭೂಮಿ ಆಯ್ಕೆ ಮಾಡಿಕೊಳ್ಳುತ್ತಿರುವ ಯುವಕರಿಗೆ ನಿಮ್ಮ ಸಲಹೆ ಏನು

– ಹೊಸ ಯುವಕರಿಗೆ ಹೇಳಬಹುದಾದ ಬಹುಮುಖ್ಯ ಮಾತೆಂದರೆ; ಮನುಷ್ಯತ್ವವನ್ನು, ಸೌಹಾರ್ದತೆಯನ್ನು, ಸಮಾಜವೊಂದರಲ್ಲಿ ಎಲ್ಲ ಜನರೊಂದಿಗೆ ಬದುಕುವುದನ್ನು ಕಲಿಯಬೇಕೆಂಬ ಬಯಕೆ ಇದ್ದರೆ ರಂಗಭೂಮಿಗೆ ಬನ್ನಿ. ರಂಗಭೂಮಿ ಯಾರನ್ನಾದರೂ ದೊಡ್ಡ ನಟನೋ ಕಲಾವಿದನೋ ಮಾಡುತ್ತದೆಯೋ ಇಲ್ಲವೋ ಆದರೆ ಅದು ಎಂತಹವರನ್ನೂ ಮನುಷ್ಯರನ್ನಾಗಿಸುತ್ತದೆ, ವಿನೀತರನ್ನಾಗಿಸುತ್ತದೆ, ಸಮಾಜ ಕಟ್ಟಲು ಅಗತ್ಯವಾದ ಕಾಲಾಳುಗಳನ್ನಾಗಿಸುತ್ತದೆ. ಈ ಹಿನ್ನೆಲೆಯಲ್ಲಿ ರಂಗ ತರಬೇತಿಯನ್ನು ಶಾಲಾಮಟ್ಟದಲ್ಲಿಯೇ ತರುವುದು ಒಂದು ಆರೋಗ್ಯಕರ ಸಮಾಜ ಕಟ್ಟಲು ಅಗತ್ಯ. ಯಾವು ಯಾವುದೋ ಕೋಮುದ್ವೇಷ ಬಿತ್ತುವ ಸಂಘಟನೆಗಳಿಗೆ ನಮ್ಮ ಮಕ್ಕಳು ಹೋಗಬಾರದು ಎಂಬ ಪೋಷಕರು ಅವರ ಮಕ್ಕಳನ್ನು ರಂಗತಂಡಗಳಿಗೆ ಸೇರಿಸಬೇಕು. ಒಂದು ಊರಿನ ಎಲ್ಲ ಯುವಕರು ರಂಗ ಚಳವಳಿಯ ಭಾಗವಾದರೆ ಆಗ ಅಂತಹ ಊರಿನಲ್ಲಿ ಮತೀಯವಾದ, ಕೋಮುವಾದ, ಧಾರ್ಮಿಕ ದ್ವೇಷಗಳು ಹರಡುವುದು ಸಂಪೂರ್ಣವಾಗಿ ನಿಲ್ಲುತ್ತದೆ ಮತ್ತು ಆ ಊರು ಜಗತ್ತಿನ ಅತೀ ಆರೋಗ್ಯಕರ ಊರುಗಳಲ್ಲಿ ಒಂದು ಎನಿಸಿಕೊಳ್ಳುತ್ತದೆ.

ಇನ್ನು ರಂಗಭೂಮಿಗೆ ಬರಲಿಚ್ಛಿಸುವ ಯುವಕರಿಗೆ ಹೇಳಬಹುದಾದ ಮಾತೆಂದರೆ; ರಂಗಭೂಮಿ ಒಂದು ಅಪರೂಪದ ಮಾಧ್ಯಮ. ಅದನ್ನು ಮತ್ಯಾವುದೋ ಮಾಧ್ಯಮಕ್ಕೆ ಹೋಗು ಏಣಿ ಎಂದು ಭಾವಿಸಿ ಬರಬೇಡಿ. ರಂಗಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಕಲಿತು, ತೊಡಗುವ ಇಚ್ಛೆ ಇದ್ದರೆ ಮಾತ್ರ ಇತ್ತ ಬನ್ನಿ. ಇಲ್ಲಿಂದ ಅಲ್ಲಿಗೆ ಜಿಗಿದು ಜನಪ್ರಿಯ ಸಿನಿಮಾ ನಟ ಆಗುತ್ತೇನೆ ಎಂಬ ಭ್ರಮೆ ಬೇಡ. ಎಲ್ಲಾ ರಂಗನಟರು ಸಿನಿಮಾ ನಟರಾಗಿ ಗೆದ್ದಿಲ್ಲ. ಕೆಲವು ಅಪವಾದಗಳಿದ್ದಾವೆ, ಅಷ್ಟೇ. ಹಾಗೆ ಆಕಸ್ಮಿಕವಾಗಿ ಸಿನಿಮಾ, ಕಿರುತೆರೆ ಎಂದು ಅವಕಾಶ ಸಿಕ್ಕು ಹೋದರು ರಂಗಭೂಮಿಯ ನಂಟು ಕಳಕೊಳ್ಳದೆ ಮುಂದುವರೆಸಿದರೆ ಮಾತ್ರ ಪರಿಪೂರ್ಣ ಕಲಾವಿದರಾಗಲು ಸಾಧ್ಯ. ಮತ್ತೊಂದು ನೆನೆಪಿಡಬೇಕಾದ ಅಂಶ. ರಂಗಭೂಮಿ ಬದುಕಲು ಬೇಕಾದ ಆದಾಯ ನೀಡುವುದಿಲ್ಲ. ಆದರೆ ರಂಗಚಳವಳಿಯಲ್ಲಿ ಮುಂದುವರೆದಂತೆ ಬದುಕುವ ದಾರಿಗಳು ತಾನಾಗಿ ತೆರೆದುಕೊಳ್ಳುತ್ತವೆ. ಯುವಕರು ವೃತ್ತಿಪರ ರಂಗಕರ್ಮಿಗಳಾಗಿ ದೊಡ್ಡ ಸಂಖ್ಯೆಯಲ್ಲಿ ಬಂದಾಗ ನಮ್ಮ ರಂಗಚಳವಳಿಗೂ ಹೊಸ ಕಸುವು ಬರುತ್ತದೆ.

20. ನಿಮ್ಮ ಮುಂದಿನ ರಂಗಭೂಮಿಯ ಕನಸುಗಳು ಏನು?

– ತುಘಲಕ್‌ ನಾಟಕದಲ್ಲಿ ಗಿರೀಶ್‌ ಕಾರ್ನಾಡರು ಬರೆದಿರುವ ಮಾತಿದೆಯಲ್ಲ; “ಕತ್ತಲಿರುವ ದಾರಿಯಲ್ಲಿ ನಡೆಯಬಹುದು, ಕನಸಿಲ್ಲದ ದಾರಿಯಲ್ಲಿ ನಡೆಯಲಾದೀತೇ?” ಎಂದು. ಅದು ನನ್ನಂತಹ ಅನೇಕರಿಗೆ ಘೋಷಾವಾಕ್ಯ ಇದ್ದಂತೆ. ಕನಸುಗಳು ಅನೇಕ. ಅವುಗಳನ್ನು ನನಸು ಮಾಡುವ ಹಾದಿಯಲ್ಲಿ ನಮ್ಮೆಲ್ಲರ ಪ್ರಯತ್ನಗಳು ನಡೆದಿವೆ. ರಂಗಚಳವಳಿಯಲ್ಲಿ ಅಪರೂಪದ ಪ್ರಯೋಗಗಳನ್ನು ಮಾಡಲು ಅನುವಾಗುವಂತೆ ಅದಾಗಲೇ ರಂಗತರಬೇತಿ ಪಡೆದ ಹುಡುಗರಿಗೆ ಸಣ್ಣ ಮಟ್ಟದ ಆರ್ಥಿಕ ಸಂಪನ್ಮೂಲ ಒದಗಿಸಿ, ಐದಾರು ತಂಡಗಳನ್ನು ಕಟ್ಟಲು ಅವರನ್ನು ಪ್ರೇರೇಪಿಸುವ ಮತ್ತು ಆ ತಂಡವು ತನ್ನ ಕಾಲಮೇಲೆ ತಾನು ನಿಲ್ಲುವಂತೆ ಮಾಡುವ ಹಲವು ಯೋಜನೆಗಳನ್ನು ನಾನೂ ಮತ್ತು ಪ್ರಕಾಶ್‌ ರೈ ಹಾಕಿಕೊಂಡಿದ್ದೇವೆ. ಪ್ರಕಾಶ್‌ ರೈ ಕಟ್ಟಿರುವ ನಿರ್ದಿಗಂತ ಎಂಬ ಜಾಗದಲ್ಲಿ ಈ ಕೆಲಸಗಳನ್ನು ಮಾಡಲು ಬೇಕಾದ ವ್ಯವಸ್ಥೆ ಸಿದ್ಧವಾಗುತ್ತಿದೆ. ನಮ್ಮ ಕನಸುಗಳನ್ನು ನನಸು ಮಾಡುವ ಮೊದಲ ಹಂತದ ಕೆಲಸಗಳು ಒಂದೆರಡು ತಿಂಗಳುಗಳಲ್ಲಿ ಆರಂಭ ಆಗಬಹುದು. ಅಲ್ಲಿ ಹೊಸ ನಾಟಕಕಾರರನ್ನು, ಹೊಸ ರಂಗ ನಿರ್ದೇಶಕರನ್ನು, ಹೊಸ ನೇಪಥ್ಯ ಕೌಶಲಿಗಳನ್ನು, ನಟರನ್ನು ಬೆಳೆಸುವ ಆಸೆ ಇದೆ. ನೋಡುವ. ಪಯಣ ಎಲ್ಲಿಯವರೆಗೆ ಒಯ್ಯುತ್ತದೋ ಅಲ್ಲಿಯವರೆಗೆ ಹೋಗುವ.

* * *

0 Responses to “ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ”



  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s




ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 109,884 ಜನರು

%d bloggers like this: