“ಬಿಡಿ, ಬಿಟ್ಟುಬಿಡಿ”

“ಬಿಡಿ, ಬಿಟ್ಟುಬಿಡಿ”
(ಮೂಲ: ರವೀಂದ್ರನಾಥ ಠಾಗೋರ್ / ಭಾವನುವಾದ: ಬಿ. ಸುರೇಶ)

ಬಿಡಿ, ಬಿಟ್ಟುಬಿಡಿ
ಮಣಮಣ ಮಂತ್ರಗಳ ಗೊಣಗಾಟ,
ಜಪಮಣಿಗಳ ಎಣಿಕೆಯ ಆಟ
ಬಿಡಿ, ಬಿಟ್ಟುಬಿಡಿ…

ಬಾಗಿಲುಗಳ ಮುಚ್ಚಿಕೊಂಡು,
ಕತ್ತಲ ಕೋಣೆಯಲ್ಲಿ ಕೂತುಕೊಂಡು,
ಆರಾಧಿಸುವುದಾರನ್ನಣ್ಣಾ?
ಕಣ್ಣು ತೆರೆಯಿರಣ್ಣ,
ನಿಮ್ಮೆದುರು ನಿಮ್ಮ ದೇವರು ಇಲ್ಲವಣ್ಣ!

ಅವನಿರುವನಲ್ಲಿ,
ನೇಗಿಲು ಹಿಡಿದು ಉಳುವ ರೈತನ ನೆಲದಲ್ಲಿ.
ಅವನಿರುವನಲ್ಲಿ,
ಕಲ್ಲೊಡೆದು ಹಾದಿ ಕೊರೆಯುವವನ ಬಳಿಯಲ್ಲಿ.
ಮಳೆಯಲ್ಲಿ, ಬಿಸಿಲಲ್ಲಿ ಅವನಿರುವನಲ್ಲಿ
ದುಡಿವವರ ಬೆವರಿನ ಜೊತೆಯಲ್ಲಿ.
ಮತ್ ಅವನ ದಿರಿಸಿಗೂ ಧೂಳು ಮುಸುಕಿದೆಯಲ್ಲಿ.

ಆ ಕತ್ತಲಕೋಣೆಯ ದೀಪ ನಂದಿಸಿರಿ,
ಆ ರೈತನಂತೆ ತುಳಿಯಿರಿ ಧೂಳು ತುಂಬಿದ ಮಣ್ಣನ್ನು,
ಕಾಯಕವು ತೆರೆಯಲಿ ನಿಮ್ಮ ಕಣ್ಣನ್ನು.
ದುಡಿಮೆಯು ನೀಡಲಿ ನಿಮ್ಮ ಬಾಳಿಗೆ ಬೆಳಕನ್ನು.


(೩೧ ಡಿಸೆಂಬರ್ ೨೦೨೩ – ರಾತ್ರಿ ೧೨)

ಭರವಸೆಯು ಹಕ್ಕಿಯಂತೆ

ಭರವಸೆಯು ಹಕ್ಕಿಯಂತೆ
(ಮೂಲ: ಎಮಿಲಿ ಡಿಕಿನ್ಸನ್ “Hope is the thing with feathers”)
(ಭಾವಾನುವಾದ: ಬಿ. ಸುರೇಶ)

“ಭರವಸೆ” ಅನ್ನೋದು ರೆಕ್ಕೆಯುಳ್ಳ ಹಕ್ಕಿಯಂತೆ,
ನಮ್ಮೆದೆಯೊಳಗೆ ಇರುವುದಂತೆ.
ಮತ್ತೆ ಮತ್ತೆ ಪದಗಳಿಲ್ಲದ ರಾಗ ಒಂದನು ಹಾಡುತ್ತಲೇ ಇರುವುದಂತೆ.
ಮತ್ತೆ ಅದು ನಿಲ್ಲಿಸದಂತೆ,
ಎಂದಿಗೂ ಅದು ಹಾಡುವುದನು ನಿಲ್ಲಿಸದಂತೆ…!

ಬಿರುಗಾಳಿಗೂ ಈಗ ಹುಸಿಮುನಿಸಿನ ರಾಗವಂತೆ,
ಪುಟ್ಟ ಹಕ್ಕಿಯ ಭರವಸೆಯ ದನಿ ಕೇಳಿ ನಾಚಿಕೆಯಿಂದ ಹಾಡಿತಂತೆ.
ಅದೇ ನಮ್ಮನು ಯಾವತ್ತಿಗೂ ನಚ್ಚಗಿರಿಸಿದೆಯಂತೆ.

ಅತೀವ ಥಂಡಿಯಲೂ ಹಕ್ಕಿಯ ಹಾಡು ಕೇಳುವುದಂತೆ.
ಅಂತೇ ಅಪರೂಪದ ಬಾಳಸಾಗರದ ಉಬ್ಬರದಲೂ ಹಕ್ಕಿಯ ರಾಗ ಇಹುದಂತೆ.
ಆದರೂ ಯಾವ ತುರೀಯ ಸ್ಥಿತಿಯಲೂ ಹಕ್ಕಿ ಕೇಳಲಿಲ್ಲವಂತೆ,
ಅದು ಒಂದು ತುಂಡು ರೊಟ್ಟಿಯನೂ ಬೇಡಲಿಲ್ಲವಂತೆ.

ಅದಕೆ ಭರವಸೆಯ, ನಂಬಿಕೆಯ ಆ ಹಕ್ಕಿ ಸದಾ ಎಲ್ಲರ ಮನಸಿನೊಳಗೇ ಇರಲಂತೆ…!

(ಏಳು ಜನವರಿ ಇಪ್ಪತ್ತನಾಲ್ಕು)

ಠಾಗೋರರ “ದೇವರಿಲ್ಲ ಅಲ್ಲಿ”

“ದೇವರಿಲ್ಲ ಅಲ್ಲಿ”

(ಮೂಲ: ರವೀಂದ್ರನಾಥ ಠಾಗೋರ್
ಭಾವಾನುವಾದ: ಬಿ. ಸುರೇಶ)

“ಇಲ್ಲ… ದೇವರಿಲ್ಲ, ಆ ದೇವಾಲಯದಲಿ ದೇವರಿಲ್ಲ ಇನ್ನು”
ಎಂದನೊಬ್ಬ ಸಂತನು.
ಆ ಮಾತ ಕೇಳಿದ ಅರಸ ಸಿಟ್ಟಾದನು,
“ನೀನು ನಾಸ್ತಿಕನೇನು?
ಅದಕೆ ಹೀಗೆ ಒರಲುತಿರುವೆಯೇನು?
ಅನರ್ಘ್ಯ ರತ್ನಗಳಿಂದ,
ಸ್ವರ್ಣಖಚಿತ ವಿಗ್ರಹದಿಂದ
ಭವ್ಯ ದೇವುಳವ ಕಟ್ಟಿಸಿಹೆನು.
ಆದರೂ ಇದನು ಶೂನ್ಯ ಎನ್ನಬಹುದೇನು?”

ಸಂತನಾಗಲೇ ನುಡಿದನು,
“ಶೂನ್ಯವಲ್ಲ, ಅದು ಅರಸನ ಅಹಮ್ಮಿನ ಮೊಟ್ಟೆ,
ಅದರೊಳಗೆ ದೇವರೆಂದು ನಿನ್ನ ವಿಗ್ರಹವೇ ಇಟ್ಟೆ
ಜನರ ಎದೆಯ ಒಳಗಿನ ದೇವನನು ಅಲ್ಲಿಂದ ಓಡಿಸಿಬಿಟ್ಟೆ”

ಸಿಂಡರಿಸಿ ಸಿಟ್ಟಲ್ಲಿ ಅರಸ ಅರಚಿದನು,
“ಇಪ್ಪತ್ತು ಲಕ್ಷ ಸುವರ್ಣ ವರಹ ಸುರಿದಿಹೆನು,
ದೇವುಳದ ಕಳಶ ಗಗನ ಚುಂಬಿಸುವುದು ಕಾಣದೇನು?
ಸಂಪ್ರದಾಯದಂತೆ ಎಲ್ಲಾ ಕಾರ್ಯ ಮಾಡಿ ಮುಗಿಸಿಹೆನು.
ಈಗ ದೇವರಿಲ್ಲ ಎನ್ನುವುದು ಸರಿಯೇನು?”

ಸಂತ ತಣ್ಣಗೆ ಉತ್ತರಿಸಿದನು,
“ನಾಡಿನವರು ಬರದಲಿ ಬೇಯುವಾಗ,
ನೀರು – ನೆರಳಿಲ್ಲದೆ ನರಳುವಾಗ,
ನಿನ್ನ ಬಾಗಿಲಿಗೆ ಬಂದು ಸಹಾಯಕೆ ಬೇಡಿದಾಗ,
ಅಟ್ಟಿದೆಯಲ್ಲಾ ಎಲ್ಲರನೂ ದೂರಕೆ ನೀನಾಗ,
ಆಗ ಅವರು ಹೊರಟರು ಅಲ್ಲಿಗೆ;
ಗುಹೆಗಳಿಗೆ, ಕಾಡಿಗೆ, ಮರಗಳಡಿಯ ನೆರಳಿಗೆ, ಪಾಳುಬಿದ್ದ ಗುಡಿಗಳಿಗೆ.
ಮತ್ತೆ ನೀನಷ್ಟೈಷರ್ಯ ಸುರಿದು ದೇವುಳವ ನಿಲ್ಲಿಸಿದಾಗ
ಆ ದೇವನು ಹೀಗೆಂದನಲ್ಲ ಆಗ,
‘ನನ್ನಿರವು ಅಲ್ಲಿ,
ಸಾಸಿರ ದೀಪಗಳ ಬೆಳಕಲ್ಲಿ.
ನೀಲ ಗಗನದ ಅಡಿಯಲ್ಲಿ,
ಸತ್ಯ, ಪ್ರೀತಿ, ಕರುಣೆಯ ಕುಟುಂಬ ಇರುವಲ್ಲಿ.
ಇನ್ನು ಬಡವರಿಗೆ ಕರಗದ ಜಿಪುಣನು
ಮನೆ ಕಟ್ಟಿ ನನ್ನ ಬಂಧಿಸುವನೇನು’
ಎಂದು ದೇವನು ಹೊರಟನು,
ಬಡಜನರ ಜೊತೆಗವನು ನೆಲೆಸಿಹನು.
ಈ ನಿನ್ನ ದೇವುಳವು ಇನ್ನು ಖಾಲಿಯಂತೆ
ನಿನ್ನ ಅಹಂಕಾರದಲ್ಲಿ ಉಬ್ಬಿದ ಪುಗ್ಗದಂತೆ”

ಅರಸನ ನೆತ್ತಿ ಸಿಡಿಯಿತು ಸಿಟ್ಟಿಂದಲೇ,
“ಎಲವೋ ಎಲುಬಿನ ಹಂದರವೇ, ತೊಲಗೆಲೆ
ತೊಲಗು ನನ್ನ ಗಡಿಯಿಂದಾಚೆ ಈಗಲೇ”

ಸಂತ ನಗುತ್ತಾ ನುಡಿದನು,
“ನಿನ್ನೆ ದೂಡಿದೆ ನಿನ್ನ ದೇವರನು,
ಇಂದು ಹೊರಗಟ್ಟಿದೆ ಆ ದೇವರ ಭಕ್ತನನು,
ಮತ್ತೆ ನಿನ್ನ ಗುಡಿ ಖಾಲಿಯೇ ಅಲ್ಲವೇನು?
ಅಲ್ಲಿ ದೇವರಿಲ್ಲ ಎಂಬುದೇ ಸತ್ಯವಿನ್ನು.”


(೨೨ ಜನವರಿ ೨೦೨೪)

ವಿನೋದ್ ರಾವ್ ಅವರ ಪ್ರಶ್ನೆಗಳಿಗೆ ಬಿ.ಸುರೇಶ ಉತ್ತರ

(ತಮ್ಮ ಡಾಕ್ಟರಲ್ ಪ್ರಬಂಧಕ್ಕಾಗಿ ಸಂಶೋಧನೆ ಮಾಡುತ್ತಿರುವ ವಿನೋದ್ ರಾವ್ ಅವರು ಕೇಳಿದ ಪ್ರಶ್ನೆಗಳು)

  1. ಕನ್ನಡ ಚಿತ್ರಗಳಲ್ಲಿ ಚಿತ್ರಕಥೆ ಅಥವಾ ಸಿನಿ ಬರಹಗಾರರಿಗೆ ಇರುವ ಪ್ರಾಮುಖ್ಯತೆ ಕುರಿತು ನಿಮ್ಮ ಅಭಿಪ್ರಾಯ ಹಾಗೂ ಬರಹಗಾರರಿಲ್ಲಿನ ಸಾಮಾಜಿಕ ಸಂವೇದನೆ ಅಗತ್ಯತೆ ಕುರಿತು ನಿಮ್ಮ ಅಭಿಪ್ರಾಯವೇನು?
  • ಕನ್ನಡ ಚಿತ್ರರಂಗದಲ್ಲಿ ‌ಬರಹಗಾರರಿಗೆ ಇರುವ ಪ್ರಾಮುಖ್ಯತೆ ತೀರಾ ಕ್ಷೀಣವಾದುದು. ಇದಕ್ಕೆ ಹಲವು ಕಾರಣಗಳಿರಬಹುದು.‌ ಆರಂಭದ ದಿನಗಳಲ್ಲಿ ನಾಟಕ ಕೃತಿಗಳನ್ನು ಯಥಾವತ್ತಾಗಿ ಚಿತ್ರಿಸುವ ಪ್ರಯತ್ನಗಳು‌ ಆಗುತ್ತಿದ್ದವು. ಹಾಗಾಗಿ ಆ ಕಾಲದಲ್ಲಿ ಚಿತ್ರಕತೆ ಬರೆಯುವವ ಪ್ರತ್ಯೇಕವಾದವನು ಮತ್ತು ಆ ವ್ಯಕ್ತಿಯ “ಸರಿಯಾದ” ಕೊಡುಗೆಯಿಂದ ಚಿತ್ರವೊಂದು ಅಂದಗಟ್ಟುತ್ತದೆ ಎಂಬ ತಿಳುವಳಿಕೆ ಕನ್ನಡ ಚಿತ್ರ ತಯಾರಕರಲ್ಲಿ ಕೆಲವರಿಗೆ ಬಂದುದು ಐವತ್ತರ ದಶಕದ ಅಂತ್ಯದಲ್ಲಿ. ‌ಹಾಗಾಗಿ ಎನ್. ಲಕ್ಷ್ಮೀನಾರಾಯಣ್, ಎಂ.ವಿ. ಕೃಷ್ಣಸ್ವಾಮಿ ಮತ್ತು ಎಂ.ಆರ್.ವಿಠಲ್ ತರಹದ ಚಿತ್ರಕಥಾ ಲೇಖಕರು ಸ್ವತಃ ನಿರ್ದೇಶಕರು ಆಗಿ, ಹಲವು ಸಿನಿಮಾಗಳ ತಯಾರಿಕೆಗೆ ಕಾರಣರಾದರು. ಆದರೂ ಪ್ರಧಾನ ವಾಹಿನಿ ಕನ್ನಡ ಚಿತ್ರ ತಯಾರಕರಲ್ಲಿ ಬಹುಪಾಲು ಜನರು ಸಂಭಾಷಣೆ ಬರೆಯುವವರನ್ನೇ ಚಿತ್ರಕಥಾ ಲೇಖಕರಾಗಿ ಬಳಸುತ್ತಿದ್ದರು. 

ಹೊಸಅಲೆಯ ಚಿತ್ರ ಚಳವಳಿಯಿಂದಾಗಿ ಈ‌ ಪರಿಸ್ಥಿತಿ ಕೊಂಚ ಬದಲಾಯಿತಾದರೂ ಅಲ್ಲಿಯೂ ಬಹುತೇಕ ನಿರ್ದೇಶಕರೇ ತಮ್ಮ ಚಿತ್ರಗಳ ಚಿತ್ರಕಥೆಯನ್ನು ರಚಿಸುತ್ತಿದ್ದರು. ಹೀಗಾಗಿ ಚಿತ್ರಕತೆ ರಚನೆ ಎಂಬುದು ಒಂದು ಕೌಶಲವಾಗಿ ಮತ್ತು ಪ್ರತ್ಯೇಕ ವ್ಯಕ್ತಿಯ ಕೆಲಸವಾಗಿ ಕನ್ನಡ ಚಿತ್ರರಂಗದಲ್ಲಿ ಬೆಳೆಯಲೇ ಇಲ್ಲ. ಈಗಲೂ ಅತ್ಯುತ್ತಮ ಚಿತ್ರಕಥಾ ಲೇಖಕರಾದವರು ತಾವೇ ಸ್ವತಃ ಆಯಾ ಚಿತ್ರದ ನಿರ್ದೇಶಕರಾಗಿರುವುದನ್ನು ಕಾಣಬಹುದು. ತೀರಾ ಅಪರೂಪ ಎಂಬಂತೆ ತಜ್ಞ ಚಿತ್ರಕಥಾ ಲೇಖಕರ ಬಳಕೆ ಆಗುತ್ತದೆ. ಉದಾಹರಣೆಗೆ “ಅನ್ವೇಷಣೆ” “ಬರ” ಚಿತ್ರಗಳಲ್ಲಿ ಶಮಾ ಜೈದಿ ಅವರನ್ನು ಬಳಸಲಾಯಿತು. “ಆ ದಿನಗಳು” ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ಅವರನ್ನು ಚಿತ್ರಕತೆ ಲೇಖಕ ಎಂದು ಗುರುತಿಸಲಾಯಿತು. “ಆ್ಯಕ್ಸಿಡೆಂಟ್” ಚಿತ್ರದ ಚಿತ್ರಕತೆ ಬರೆದ ವಸಂತ ಮೊಕಾಶಿ ಅವರು ಸಹ ನಂತರ ನಿರ್ದೇಶನದ ಕಡೆಗೆ ಸಾಗಿದರು ಎಂದು ಗಮನಿಸಬಹುದು.

ನನ್ನ ತಲೆಮಾರಿನವರು ಚಿತ್ರರಂಗಕ್ಕೆ ಬರುವ ಕಾಲದಲ್ಲಿ ಪ್ರಧಾನ ವಾಹಿನಿಯ ಚಿತ್ರಗಳಲ್ಲಿ ರಿಮೇಕ್ ಹಾವಳಿ ಅದೆಷ್ಟಿತ್ತೆಂದರೆ ಅಲ್ಲಿ ಮೂಲ ಚಿತ್ರದ ಅನುವಾದಕರನ್ನೇ ಚಿತ್ರಕಥಾ ಲೇಖಕ ಎಂದು ಗುರುತಿಸಿರುವುದನ್ನು, ಕೆಲವೊಮ್ಮೆ ಆಯಾ ಚಿತ್ರ ನಿರ್ದೇಶಕರೇ ಆ ಪದವಿ ಪಡೆದುಕೊಂಡಿರುವುದನ್ನು ಗಮನಿಸಬಹುದು.

ಇಂದಿಗೂ ಆ ಪರಿಸ್ಥಿತಿ ಬದಲಾದಂತೆ ಕಾಣುತ್ತಿಲ್ಲ. ಚಿತ್ರಕತೆ ಮತ್ತು ನಿರ್ದೇಶನ ಎರಡೂ ಕೆಲಸ ಒಬ್ಬರದೇ ಎಂಬ ಅಭ್ಯಾಸ ಬಹುತೇಕ ಚಾಲ್ತಿಯಲ್ಲಿದೆ. ಈ ಮಾತಿಗೆ ಅಪವಾದ ಎಂಬಂತೆ (“ಕಳವು”, “ಲಾಸ್ಟ್ ಬಸ್” ಮುಂತಾದ) ಕೆಲವು ಚಿತ್ರಗಳಲ್ಲಿ ಪ್ರತ್ಯೇಕ ಚಿತ್ರಕಥಾ ಲೇಖಕರು ಇದ್ದಾರಾದರೂ ಅಂತಹ ಪ್ರಯೋಗಗಳು ನಗಣ್ಯ ಎಂಬಷ್ಟು ಕಡಿಮೆ ಎನ್ನಬಹುದು.

ಇನ್ನೂ ನಿಮ್ಮ ಪ್ರಶ್ನೆಯ ಎರಡನೆಯ ಭಾಗಕ್ಕೆ ಬಂದರೆ ಚಲನಚಿತ್ರ ಬರಹಗಾರರಲ್ಲಿ ಸಾಮಾಜಿಕ ಸಂವೇದನೆ ಮತ್ತು ಕಳಕಳಿಯು ಅತ್ಯಗತ್ಯವಾದುದು. ಇವುಗಳಿಲ್ಲದ ಚಿತ್ರವಾಗಲಿ ಯಾವುದೇ ದೃಶ್ಯ ಮಾಧ್ಯಮದ ಕಟ್ಟುವಿಕೆ ಆಗಲಿ ಆಯಾ ದೇಶ ಕಾಲದ ಸಮಾಜಕ್ಕೆ ನಿರುಪಯುಕ್ತ ಆಗಬಹುದು. ಚಿತ್ರ ತಯಾರಿಕೆಗೆ ಬೇಕಾದ ಮೂಲಭೂತ ಅಗತ್ಯವೇ ಸಾಮಾಜಿಕ ಜವಾಬ್ದಾರಿ. ಹಾಗಾಗಿ ಸಮಾಜದ ಎಲ್ಲಾ ವರ್ಗದ, ಜಾತಿಯ ಪ್ರಾತಿನಿಧ್ಯ ಚಲನಚಿತ್ರವಾಗಿ ಮೂಡಲು ಅಗತ್ಯ. ಎಲ್ಲಾ ವರ್ಗದ, ಜಾತಿಯ, ಧರ್ಮದ ಜನರು ಚಲನಚಿತ್ರದ ಎಲ್ಲಾ ಅಂಗಗಳಲ್ಲಿ, ವಿಶೇಷವಾಗಿ ಚಿತ್ರಕತೆ ರಚನೆಯಲ್ಲಿ ಪಾಲ್ಗೊಳ್ಳಬೇಕಿದೆ. ಈಗಿರುವಂತೆ ಮೇಲ್ಜಾತಿಯ ಜನರೇ ಚಿತ್ರಕತೆ ರಚನೆಯಲ್ಲಿ ಮತ್ತು ಚಲನಚಿತ್ರ ನಿರ್ದೇಶನದಲ್ಲಿ ತೊಡಗಿದ್ದರೆ ಆಯಾ ಚಿತ್ರರಂಗದ “ಸರಿಯಾದ” ಮತ್ತು “ಸರ್ವತೋಮುಖ” ಬೆಳವಣಿಗೆ ಆಗುವುದಿಲ್ಲ.

  1. ಸಾಮಾಜಿಕ ಸಮಸ್ಯೆಗಳನ್ನು  ವಾಣಿಜ್ಯ ಸಿನಿಮಾದಲ್ಲಿ ಪ್ರಸ್ತುತ ಪಡಿಸುವಾಗ ಎದುರಾಗುವ ಕೆಳಗಿನ ಸವಾಲುಗಳನ್ನು ಚರ್ಚಿಸಿ. 

ಅ. ಮನೋರಂಜನೆಯೆ ಮುಖ್ಯ ಉದ್ದೇಶವಾದ ಕಾರಣ ಸಾಮಾಜಿಕ ಸಮಸ್ಯೆಗಳನ್ನು ವಾಣಿಜ್ಯ ಸಿನಿಮಾದಲ್ಲಿ ಅಳವಡಿಸುವುದರಿಂದ ಕಥೆಯ ಗುಣಮಟ್ಟ ವೃದ್ಧಿಯಾಗುತ್ತದೆಯೆ?

  • ಸಿನಿಮಾ ಎಂಬುದು ಮೂಲತಃ ವ್ಯಾಪಾರ. ಅಲ್ಲಿ ಯಾವ ಪ್ರಯೋಗ ಯಾರು ಮಾಡಿದರೂ ಅದು ಆಯಾ ಚಿತ್ರ ತಯಾರಕರ ವ್ಯಾಪಾರದ ಉದ್ದಿಶ್ಯ ಸಾಧನೆ ಎಂಬುದು ಸದಾ ಹಿನ್ನೆಲೆಯಲ್ಲಿ ಇರುತ್ತದೆ. ಇನ್ನೂ ವಾಣಿಜ್ಯ ಇಲ್ಲದೆ ಸಿನಿಮಾ ತಯಾರಿಕೆಯೇ ಅಸಾಧ್ಯ. ಹೀಗಾಗಿ ವಾಣಿಜ್ಯ ಸಿನಿಮಾಗಳು, ಕಲಾತ್ಮಕ ‌ಸಿನಿಮಾಗಳು ಎಂಬ ವರ್ಗೀಕರಣವೇ ಅತಾರ್ಕಿಕ ಹಾಗೂ ಅನಗತ್ಯ.
    ಆದರೆ ನಿಮ್ಮ ಪ್ರಶ್ನೆಯನ್ನು ಪ್ರಧಾನ ವಾಹಿನಿಯ ಅಥವಾ ಬಹು ಜನಪ್ರಿಯ ಚಿತ್ರಗಳು ಎಂಬ ಹಿನ್ನೆಲೆಯಲ್ಲಿ ತರ್ಕಿಸಿ ಉತ್ತರಿಸಬಹುದು.

ಮೊದಲಿಗೆ, ಸಿನಿಮಾ ಎಂಬುದು ಆಯಾ ಸಮಾಜದಿಂದಲೇ ಹುಟ್ಟುವ ಬೈಪ್ರಾಡಕ್ಟು. ಹಾಗಾಗಿ ಆಯಾ ಸಮಾಜ ಆಯಾ ಚಿತ್ರ ತಯಾರಕನ ಮೇಲೆ ಮೂಡಿಸಿರುವ ಪರಿಣಾಮದ ಫಲವಾಗಿ ಆಯಾ ವ್ಯಕ್ತಿಯು ತಯಾರಿಸುವ ಸಿನಿಮಾ ಸಿದ್ಧವಾಗುತ್ತದೆ. ಹೀಗೆ ತಯಾರಾದ ಕೃತಿಯೊಂದು ರಂಜನೆಯನ್ನೇ ಪ್ರಧಾನವಾಗಿ ಇರಿಸಿಕೊಂಡಾಗಲೂ ಅದರ ಸಬ್ ಟೆಕ್ಸ್ಟ್‌ಗಳಲ್ಲಿ ಕೃತಿಯ ಹಿಂದಿರುವ ಸಮಾಜದ ಪ್ರಭಾವ ಕಾಣುತ್ತವೆ. ಆ ಪ್ರಭಾವಗಳ ಕಾರಣವಾಗಿ ಆಯಾ ಕೃತಿಯ ಸಂದೇಶಗಳು ನೋಡುಗರಿಗೆ ದಾಟುತ್ತವೆ.

ನಿಮ್ಮ ಪ್ರಶ್ನೆಯ ಕಡೆಯ ಭಾಗವಾದ ಕತೆಯ ಗುಣಮಟ್ಟ ಎಂಬುದು ಸಾಪೇಕ್ಷವಾದುದು. (ರಿಲೇಟಿವ್ ಟು ಈಚ್ ಇಂಡಿವಿಜುಯಲ್). ಹಾಗಾಗಿ ಯಾರಿಗೆ ಯಾವ ಕೃತಿಯಿಂದ ಏನು ದಕ್ಕಿತು ಎಂಬುದು ರೀಡರ್ಸ್ ರೆಸ್ಪಾನ್ಸ್ ಥಿಯರಿ ಇದ್ದಂತೆ ಒಬ್ಬೊಬ್ಬರಿಗೆ ಒಂದು ಬಗೆ. ಒಬ್ಬರಿಗೆ ಇಷ್ಟ ಆದದ್ದು ಮತ್ತೊಬ್ಬರಿಗೆ ದರಿದ್ರವೋ, ಅಸಹ್ಯವೋ, ಅಸಭ್ಯವೋ, ಅಸಡ್ಡಾಳವೋ ಆಗಬಹುದು. ಹೀಗಾಗಿ ಕತೆಯ ಗುಣಮಟ್ಟದ ಚರ್ಚೆ ಯಾವತ್ತಿಗೂ ಅಪೂರ್ಣವೇ ಆಗಿರುತ್ತದೆ. ಮತ್ತು ಇಂತಲ್ಲಿ ಯಾವುದೇ ಒಂದು ಮಾತನ್ನು ಸಾರ್ವತ್ರಿಕ (ಜನರಲೈಸ್) ಗೊಳಿಸಿ ಹೇಳುವುದು ಅಕೆಡೆಮಿಕ್ ಚಿಂತನೆಯ ದೃಷ್ಟಿಯಿಂದ ತಪ್ಪಾಗುತ್ತದೆ.
ಈ ಮಾತುಗಳನ್ನು ಸರಳೀಕರಣಗೊಳಿಸಿ ಹೀಗೆನ್ನಬಹುದು: “ಯಾವುದೇ ಕತೆಯು ಈ ಸಮಾಜದಿಂದಲೇ ಬಂದುದಾದ್ದರಿಂದ ಆಯಾ ಕತೆಯ ಹುಟ್ಟಿಗೆ ಕಾರಣವಾದ ಸಾಮಾಜಿಕ ಸಮಸ್ಯೆಯು, ಆಯಾ ಕತೆಯನ್ನು ಸಾಂದ್ರಗೊಳಿಸಲು ಅಥವಾ ಸಮಸ್ಯೆಯನ್ನು ಅತೀ ಸರಳೀಕರಿಸಿ ಸಮಸ್ಯೆಯ ದಟ್ಟತೆಯನ್ನು ಮರೆಯಾಗಿಸಲು ಸಹ ಕಾರಣವಾಗಬಹುದು.”

ಈ ವಿಷಯ ಮಾತಾಡಿದಷ್ಟೂ ಬೆಳೆಯುವಂತಹದು. ಸಧ್ಯಕ್ಕೆ ಇಷ್ಟು ಸಾಕು. ನಿಮ್ಮ ಮುಂದಿನ ಪ್ರಶ್ನೆಗಳಿಗೆ ಉತ್ತರಿಸುವ ಹಾದಿಯಲ್ಲಿ ಮತ್ತಷ್ಟು ವಿವರ ಇದೇ ವಿಷಯದ ಬಗ್ಗೆ ವಿಸ್ತರಿಸೋಣ.

ಆ. ಪಾತ್ರಗಳನ್ನ ಸೃಷ್ಟಿಸಬೇಕಾದರೆ ಈಗಾಗಲೇ ಇರುವಂತಹ ಸಿದ್ಧ ಕಲ್ಪನೆಗಳು ಎಷ್ಟರ ಮಟ್ಟಿಗೆ ನಿಮ್ಮ ಮೇಲೆ ಪ್ರಭಾವ ಬೀರುತ್ತೆ ಹಾಗೂ ಅದನ್ನ ಬ್ರೇಕ್ ಮಾಡಿ ವಿಭಿನ್ನ ರೀತಿನಲ್ಲಿ ಕಟ್ಟಿಕೊಡಲು ಸಾಧ್ಯವೆ? ಹಾಗೂ ನಾಯಕಿ ಪಾತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತಿಲ್ಲ, ನಿಮ್ಮ ಅಭಿಪ್ರಾಯ ತಿಳಿಸಿ.

  • ಪಾತ್ರ ಸೃಷ್ಟಿ ಎಂಬುದು ಕತೆಯನ್ನು ಕಟ್ಟುವ ಹಂತದಲ್ಲಿಯೇ ಆಗಿರುತ್ತದೆ. ಹಾಗೆ ಪಾತ್ರ ಸೃಷ್ಟಿ ಮಾಡುವಾಗ ಅದಾಗಲೇ ಬಂದಿರಬಹುದಾದ/ಬಳಸಿರಬಹುದಾದ ಹಿನ್ನೆಲೆ ತೊರೆದು ಹೊಸ ಹಿನ್ನೆಲೆ ಹುಡುಕುವುದೇ ಬರಹಗಾರನ ಆದ್ಯತೆಯ ಕೆಲಸ. ಹೀಗೆ ಸಿದ್ಧವಾದ ಕತೆಯನ್ನು ಚಿತ್ರ (ಸಿನಿಮಾ) ಮಾಡಲೆಂದು ನಿರ್ಧರಿಸಿ, ವಿಭಿನ್ನ ಕಲಾವಿದರನ್ನು ಸಂಪರ್ಕಿಸುವಾಗ, ಆಯಾ ಕಲಾವಿದರಿಗೆ ಮಾರುಕಟ್ಟೆಯಲ್ಲಿ ದೊರೆಯುವ ಬೆಂಬಲದ ಹಿನ್ನೆಲೆಯಲ್ಲಿ ಪಾತ್ರಗಳಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಈ ಬದಲಾವಣೆ ಮಾಡುವಾಗಲೂ ಸಿದ್ಧ ಸೂತ್ರಗಳನ್ನು ಬಿಟ್ಟು ಹೊಸತು ಕಟ್ಟುವ ಉದ್ದೇಶವೇ ಇರುತ್ತದೆ. ಆದರೆ ಆಯಾ ಕಲಾವಿದರನ್ನು ಪ್ರೀತಿಸುವ, ಆರಾಧಿಸುವ ಜನರ ಸಂಖ್ಯೆ ಆಧರಿಸಿ, ಆ ನೋಡುಗರನ್ನು ಮೆಚ್ಚಿಸಲು ಕೆಲವು ವಿವರಗಳನ್ನು ಮೂಲ ಕತೆಗೆ ಧಕ್ಕೆ ಆಗದಂತೆ ಸೇರಿಸಲು ಪ್ರಯತ್ನಿಸಲಾಗುತ್ತದೆ. ಅದಾಗಲೇ ಹಿಂದಿನ ಪ್ರಶ್ನೆಗೆ ಉತ್ತರಿಸುತ್ತಾ ಸಿನಿಮಾ ಎಂಬುದು ವಾಣಿಜ್ಯ ಪ್ರಧಾನ ಚಟುವಟಿಕೆ ಎಂದು ತಿಳಿಸಲಾಗಿತ್ತು. ಅದೇ ಕಾರಣಕ್ಕಾಗಿ ಆಯಾ ಕಲಾವಿದರ ಅಭಿಮಾನಿಗಳ ಮನತಣಿಸುವ ವಿವರಗಳು ಕಥನದೊಳಗೆ ಸೇರುತ್ತವೆ. ಇಂತಹ ಸೇರುವಿಕೆಯನ್ನು ರಾಜಿ ಎಂದು ಗುರುತಿಸಬೇಕಿಲ್ಲ. ಇವು ಆಯಾ ಮಾರುಕಟ್ಟೆಯಲ್ಲಿ ಆಯಾ ಚಿತ್ರ ತಯಾರಕ ತಾನು ತೊಡಗಿಸಿದ ಹಣವನ್ನು ಹಿಂಪಡೆಯಲು ಮಾಡುವ ಪ್ರಯತ್ನಗಳಷ್ಟೇ.

ಈ ಎಲ್ಲಾ ಪ್ರಯತ್ನಗಳಲ್ಲೂ ಈ ವರೆಗೆ ಬಳಕೆ ಆಗಿಲ್ಲದ್ದನ್ನು, ಹೊಸದೆನಿಸುವುದನ್ನು ತರುವ ಪ್ರಯತ್ನವೇ ಇರುತ್ತದೆ. ಆದರೆ ಒಬ್ಬ ಭಾರೀ ಜನಪ್ರಿಯ ನಾಯಕನ ಚಿತ್ರ ತಯಾರಿಕೆಯ ಅವಧಿ ಕೂಡ ದೊಡ್ಡದಾದ್ದರಿಂದ, ಈ ಚಿತ್ರ ಬರುವಷ್ಟರಲ್ಲಿ ಮತ್ಯಾರೋ ಮಾಡಿದ ಚಿತ್ರದಲ್ಲಿ ಅಂತದೇ ವಿವರ ಬಂದು ಬಿಡುವ ಸಾಧ್ಯತೆ ಹೆಚ್ಚು. ಆದರೂ ಬಹುತೇಕ ಚಿತ್ರ ತಯಾರಕರು ಸಿದ್ಧ ಸೂತ್ರಗಳನ್ನು ಮುರಿಯುವ ಪ್ರಯತ್ನ ನಿರಂತರವಾಗಿ ಮಾಡುತ್ತಲೇ ಇರುತ್ತಾರೆ.

ಇನ್ನೂ ಪ್ರಶ್ನೆಯ ಎರಡನೆಯ ಭಾಗವಾದ ನಾಯಕ ನಟಿಯ ಪಾತ್ರ ಪೋಷಣೆ ಕುರಿತ ಮಾತು: ಇದು ಕೂಡ ಮಾರುಕಟ್ಟೆ ನಿರ್ದೇಶಿತ. ಅತ್ಯಂತ ಜನಪ್ರಿಯ ನಾಯಕ ನಟಿ ಇದ್ದರೆ ಆಕೆಯ ಸುತ್ತಲೂ ಕತೆ ಬೆಳೆದಿರುವ ಉದಾಹರಣೆಗಳಿಗೆ ಕೊರತೆ ಇಲ್ಲ. ಹಾಗೆಯೇ ಅಪರೂಪದ ಕಲಾವಿದೆ ಎನಿಸಿದ ನಾಯಕ ನಟಿ ಇದ್ದರೆ ಆಕೆಯೇ ಕತೆಯ ಪ್ರಧಾನ ಪಾತ್ರ ಆಗಿರುವ ಹಲವು ಉದಾಹರಣೆಗಳು ಇವೆ. ಆದರೆ ಕೇವಲ ಗ್ಲಾಮರ್ ಕಾರಣಕ್ಕಾಗಿ ಬಳಕೆಯಾಗುವ ನಟಿಯು ನಾಯಕಿ ಆಗಿದ್ದಲ್ಲಿ, ಅಂತಹ ಪಾತ್ರಗಳು ಕೇವಲ ಅಲಂಕಾರಿಕ ಕಾರಣಕ್ಕಾಗಿ ಮಾತ್ರ ಬಳಕೆ ಆಗಿರುತ್ತವೆ. ಈ ಎಲ್ಲಾ ತೀರ್ಮಾನಗಳು ಮಾರುಕಟ್ಟೆ ನಿರ್ದೇಶಿತ ಎಂಬುದೆಷ್ಟು ಸತ್ಯವೋ, ಅವು ಆಯಾ ಕೃತಿಕಾರರ ಕ್ರಿಯಾಶೀಲ ನಿರ್ಧಾರಗಳಿಂದಲೇ ಆಗಿರುತ್ತವೆ ಎಂಬುದು ಸಹ ಅಷ್ಟೇ ಸತ್ಯ.

ಇ. ನಿರ್ದೇಶಕ ಅಥವಾ ನಿರ್ಮಾಪಕರ ಬೆಂಬಲ ಯಾವ ರೀತಿ ಇದೆ?

  • ಈ ಹಿಂದಿನ ನಿಮ್ಮ ಪ್ರಶ್ನೆಗಳ ಆಧಾರದಲ್ಲಿ ಈ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಉತ್ತರಿಸುತ್ತೇನೆ.
    ನಿರ್ಮಾಪಕ, ನಿರ್ದೇಶಕ ಒಂದು ಕಲಾಕೃತಿಯ ಎರಡು ಆಧಾರ ಸ್ತಂಭಗಳು. ಆದರೆ ಎರಡು ಕಂಬಗಳಿಂದ ಯಾವ ಕಟ್ಟಡವೂ ನಿಲ್ಲದು. ಅವುಗಳಿಗೆ ಜೊತೆಯಾಗಿ ಕಲಾಕೃತಿಯ ವಿತರಕ ಮತ್ತು ಪ್ರದರ್ಶಕ ಸಹ ಬೇಕು. ಈ ನಾಲ್ಕೂ ಕಂಬಗಳೂ ಕೈಕೈ ಹಿಡಿದು ನಡೆದಾಗಲೇ ಒಂದು ಕಲಾಕೃತಿಯು ಹೆಚ್ಚು ಜನರನ್ನು ತಲುಪುವುದು ಸಾಧ್ಯ. ಯಾರೊಬ್ಬರು ಇಲ್ಲ ಎಂದಾದರೂ ಆಯಾ ಕಲಾಕೃತಿಯು ಜನರ ಎದುರಿಗೆ ಹೋಗುವುದು ತ್ರಾಸಿನ ಪ್ರಯಾಣ ಆಗುತ್ತದೆ.

ಕಳೆದ ಎರಡು ಮೂರು ದಶಕಗಳಿಂದ ಈ ನಾಲ್ಕು ಕಂಬಗಳ ನಡುವಣ ಹೊಂದಾಣಿಕೆಯು ಸಡಿಲವಾಗುತ್ತಾ ಬರುತ್ತಿದೆ. ಕಳೆದ ದಶಕದಲ್ಲಿ ಪ್ರದರ್ಶನ ವಲಯದಲ್ಲಿ ಅತಿಹೆಚ್ಚು ಕಾರ್ಪೋರೆಟ್ ಬಂಡವಾಳಿಗರು ಬಂದಿದ್ದಾರೆ. ಹೀಗಾಗಿ ನಾಲ್ಕೂ ವಲಯದ ನಡುವಿನ ಹೊಂದಾಣಿಕೆಗೆ ಹಲ ಬಗೆಯ ಸಮಸ್ಯೆ ಬಂದಿವೆ. ಮೊದಲಿನದು ಕಾರ್ಪೊರೇಟ್ ಸಂಸ್ಕೃತಿಯದು. ಅಲ್ಲಿ ಬಂಡವಾಳ ಹೂಡಿದವ ಎಂಬ ಒಬ್ಬ ವ್ಯಕ್ತಿ ಕಾಣುವುದಿಲ್ಲ. ಬೇರೆ ಬೇರೆ ಹುದ್ದೆಯಲ್ಲಿ ಇರುವ ಜನ ಇರುತ್ತಾರೆ. ಅದರಿಂದಾಗಿ ಮೊದಲಿದ್ದ ಕೂಡು ಕುಟುಂಬ ಎಂಬ ವ್ಯವಸ್ಥೆ ಸಿಗುವುದಿಲ್ಲ. ಎಲ್ಲವೂ ಅಂಕಿ ಸಂಖ್ಯೆ ಮೇಲೆ ನಿರ್ಧಾರ. ಹೀಗಾಗಿ ಒಂದು ಕಲಾಕೃತಿ ನೋಡಲು ಮೊದಲ ವಾರವೇ ಎಷ್ಟು ಜನ ಬಂದರು ಎಂಬುದನ್ನು ಆಧರಿಸಿ ಮುಂದಿನ ವಾರಕ್ಕೆ ಸಿನಿಮಾ ಉಳಿಯುವಂತಾಗುತ್ತದೆ. ಹೀಗಾಗಿ ಬಹುತೇಕ ಸಣ್ಣ ಬಜೆಟ್ಟಿನ ಸಿನಿಮಾಗಳು ಆ ಲೆಕ್ಕಾಚಾರದಲ್ಲಿ ಸೋತು ಹಿನ್ನಡೆ ಅನುಭವಿಸುವುದನ್ನು ಕಾಣುತ್ತೇವೆ ಮತ್ತು ದೊಡ್ಡ ಹಿಂಬಾಲಕರಿರುವ ನಟರ/ನಟಿಯರ ಸಿನಿಮಾ ಹೆಚ್ಚು ಕಾಲ ಉಳಿಯುವ, ಹೆಚ್ಚು ಹಣ ಸಂಗ್ರಹಿಸುವ ವಿವರ ಕಾಣುತ್ತೇವೆ.
ಇದರ ಜೊತೆಗೆ ಮೊದಲಿನಂತೆ ಒಬ್ಬ ಮಾಲೀಕ ನೇರ ಸಂಪರ್ಕದ ಮೂಲಕ ನಡೆಸುತ್ತಿದ್ದ ಪ್ರದರ್ಶನ ಮಂದಿರಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಹಲವು ಪ್ರದರ್ಶನ ಮಂದಿರಗಳನ್ನು ಕೆಲವೇ ವಿತರಕರು ಗುತ್ತಿಗೆ ಆಧಾರದಲ್ಲಿ ನಡೆಸುತ್ತಿರುವ ವ್ಯವಸ್ಥೆ ಬಂದಿದೆ. ಇಂತಲ್ಲಿ ಆಯಾ ವಿತರಕ ತಾನು ಹೆಚ್ಚು ಹಣ ತೊಡಗಿಸಿರುವ ಸಿನಿಮಾ ಉಳಿಸಿಕೊಂಡು ಉಳಿದವುಗಳನ್ನು ಕಡೆಗಣಿಸಿರುವುದೂ ಉಂಟು.
ಈ ಎಲ್ಲಾ ಕಾರಣಗಳಿಗಾಗಿ ಇಂದು ಸಿನಿಮಾ ತಯಾರಿಕೆ ಎಂಬುದು ಹಿಂದೆಂದಿಗಿಂತಲೂ ಕಷ್ಟದ್ದು ಮತ್ತು ಸಂಕೀರ್ಣವಾದುದು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಅಧರಿಸಿದ ಸಿನಿಮಾ ತಯಾರಿ ಅತ್ಯಂತ ಸವಾಲಿನದ್ದಾಗಿದೆ.

  1. ಕನ್ನಡ ಸಿನಿಮಾ ವೀಕ್ಷಕರು ವಾಣಿಜ್ಯ ಸಿನಿಮಾದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಹೇಳಿದ್ರೆ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುವ ಕುರಿತು ನಿಮ್ಮ ಅಭಿಪ್ರಾಯವೇನು?
  • ಯಾವುದೇ ಕೃತಿ ನೋಡುಗನ ಜೊತೆಗೆ “ಸರಿಯಾದ” ಅನುಸಂಧಾನ (ಕನೆಕ್ಟ್) ಸಾಧಿಸಿದರೆ, ಆ ಕೃತಿಯಲ್ಲಿ ಇರುವ ವಿವರಗಳನ್ನು ನೋಡುಗರು ಸ್ವೀಕರಿಸುತ್ತಾರೆ. ಇಲ್ಲಿ “ಸರಿಯಾದ” ಎಂಬುದೇ ಕಷ್ಟಸಾಧ್ಯವಾದ ಮೌಲ್ಯ. ಸಮಸ್ಯೆಯೇ ಪ್ರಧಾನವಾಗಿ ಭಾವವಿಹೀನ ಆದರೆ, ನೋಡುಗರು ಅಂತಹ ಕೃತಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ನೋಡುವುದಿಲ್ಲ. ಭಾವವೇ ಪ್ರಧಾನವಾಗಿ ಸಾಮಾಜಿಕ ಸಮಸ್ಯೆ ಅಸ್ಪಷ್ಟವಾದರೆ ಆಯಾ ಕೃತಿ ತಯಾರಿಕೆಯ ಹಿಂದಿನ ಉದ್ದೇಶವೂ ಅಸಫಲವಾಗಬಹುದು. ಹೀಗಾಗಿ ಇದೊಂದು ಕತ್ತಿಯ ಮೇಲಿನ ನಡಿಗೆ. ಕತೆಯ ಉದ್ದೇಶ ಹಾಗೂ ಕತೆಯನ್ನು ನೋಡುಗರಿಗೆ ತಾಗುವಂತೆ ಕಟ್ಟುವುದು ಎಲ್ಲಾ ಕಾಲಕ್ಕೂ ಸವಾಲಿನ ಕೆಲಸವೇ. ಉದಾಹರಣೆಗೆ ನಮ್ಮ ಸಂಸ್ಥೆ ತಯಾರಿಸಿದ “ಸಕ್ಕರೆ” ಎಂಬ ಸಿನಿಮಾದ ಉದ್ದೇಶವು ಖಿನ್ನತೆಯ ಕಾರಣದಿಂದ ಆತ್ಮಹತ್ಯೆಗೆ ಪ್ರಯತ್ನಿಸುವ ಸೂಕ್ಷ್ಮ ಮನಸ್ಸಿನವರನ್ನು ಅದರಿಂದ ಹೊರತರುವುದು ಒಂದು ಸಮಾಜದ ಜವಾಬ್ದಾರಿ ಎಂದು ಹೇಳುವುದಾಗಿತ್ತು. ಆದರೆ ಸಿದ್ಧವಾದ ಕೃತಿಯಲ್ಲಿ ಈ ಉದ್ದೇಶಕ್ಕಿಂತ ರಂಜನೆಯೇ ಪ್ರಧಾನವಾಗಿ, ಆ ರಂಜನೆಯೂ ಪೇಲವ ಅಥವಾ ಕ್ಲೀಷೆ ಎನಿಸಿ ನಾವು ಸೋತದ್ದಿದೆ. “ಯಜಮಾನ” ದಂತಹ ಸಿನಿಮಾದಲ್ಲಿ ಸಾಮಾಜಿಕ ಸಮಸ್ಯೆಯನ್ನೂ ದಾಟಿಸಿ, ಭಾವತೀವ್ರತೆ ಸಹ ಸಾಧಿಸಿ ಗೆದ್ದ ಉದಾಹರಣೆಯೂ ಇದೆ. “ಕ್ರಾಂತಿ” ತರಹದ ಚಿತ್ರದಲ್ಲಿ ಸರ್ವರಿಗೆ ಉಚಿತ ಶಿಕ್ಷಣ ಸಿಗಬೇಕು ಎಂಬುದು ಪ್ರಧಾನವಾಗಿ ಕಥನವು (narrative) ಸಡಿಲವಾದ ಉದಾಹರಣೆಯೂ ಇದೆ. ಈ ಎಲ್ಲಾ ಉದಾಹರಣೆಯ ಮೂಲಕ ಹೇಳಬಹುದಾದ್ದು ಇಷ್ಟೇ: ಸಿನಿಮಾ ತಯಾರಿಕೆಯಲ್ಲಿ ಗೆಲುವಿಗೆ ಸಿದ್ಧ ಸೂತ್ರ ಎಂಬುದಿಲ್ಲ. ಆಯಾ ದೇಶಕಾಲದ ನೋಡುಗರ ಮನಸ್ಸನ್ನು ಗೆಲ್ಲುವುದು ಯಾವತ್ತಿಗೂ ಕೃತಿಕಾರನಿಗೆ ಸವಾಲಾಗಿಯೇ ಇರುತ್ತದೆ. ನಿನ್ನಿನ ಗೆಲುವು ಅಥವಾ ಸೋಲನ್ನು ನಿನ್ನೆಗೆ ಬಿಟ್ಟು, ಮತ್ತೆ ಅದರಲ್ಲಿ ಮುಳುಗದೆ ಹೊಸ ಕೃತಿ ಕಟ್ಟಲು ತೊಡಗಬೇಕಾಗುತ್ತದೆ. ನೋಡುಗರು ಮೆಚ್ಚಿದರೆ ಅದು ಯಶಸ್ಸು, ಇಲ್ಲವಾದರೆ ಪ್ರಯೋಗ ಎಂದುಕೊಂಡು ಮುಂದಡಿ ಇಡಬೇಕಷ್ಟೇ.
  1. ಈ ಸಾಮಾಜಿಕ ಅಂಶಗಳನ್ನು ನೀವು ಸೇರಿಸುವ ಉದ್ದೇಶವೇನು (ನಾಯಕನನ್ನು ವಿಜೃಂಭಿಸುವುದು ಅಥವಾ ಖಳನಾಯಕ ಪಾತ್ರದ ಸೃಷ್ಟಿಗೆ ಮಾತ್ರ ಸೀಮಿತವಾಗುತ್ತಿದೆಯೇ )
  • ಯಾವುದೇ ಕೃತಿ/ಕತೆ ಹುಟ್ಟುವುದೇ ಆಯಾ ಸಾಮಾಜಿಕ ಸಮಸ್ಯೆಯ ಕಾರಣವಾಗಿ. ಆ ಸಮಸ್ಯೆಯೇ ಕತೆಯೊಂದರ inciting point. ಬೀಜದೊಳಗಣ ಮರದಂತೆ ಎಂಬ ವಚನಕಾರರ ಮಾತಿನಂತೆ ಆಯಾ ಹೂರಣವೇ ಅದಕ್ಕೆ ತಕ್ಕ ಪಾತ್ರಧಾರಿಯನ್ನು ಆರಿಸಿಕೊಳ್ಳುತ್ತದೆ. ಕತೆಯೊಳಗಣ ಸಮಸ್ಯೆಯ ಅನಾವರಣವೇ ಕಥನ (narrative) ಆಗುತ್ತದೆ.
    ಕತೆ ಯಾವುದಾದರೂ ನೋಡುಗನು ಅದರೊಡನೆ ಪ್ರಯಾಣ ಮಾಡುವುದಕ್ಕೆ, ನೋಡುಗನ ಅನುಭೂತಿಯನ್ನು, ಅನುಕಂಪವನ್ನು ಗಳಿಸಬಲ್ಲ ಪ್ರಧಾನ ಪಾತ್ರ ಇರಲೇಬೇಕು. ಅಂತಹ ಪಾತ್ರವನ್ನು ನಾಯಕ/ನಾಯಕಿ/protagonist ಎಂದು ಹೆಸರಿಸಬಹುದು. ಆ ಪಾತ್ರದ ಕನಸು, ಅದನ್ನು ಸಾಧಿಸಲು ಇರುವ ಅಡ್ಡಿ, ಸವಾಲುಗಳ ಮೂಲಕವೇ ಖಳ ಅಥವಾ antagonist ಪಾತ್ರ ಸೃಷ್ಟಿಯಾಗುತ್ತದೆ. ಇವೆರಡೂ ಇಲ್ಲದೆ ಕತೆಯೊಂದು ನೋಡುಗನ ಜೊತೆಗೆ ಕನೆಕ್ಟ್ ಸಾಧಿಸುವುದಿಲ್ಲ. ಈ ಎರಡೂ ಪಾತ್ರಗಳ ಜೊತೆಗೆ; ಪ್ರೊಟಾಗಾನಿಸ್ಟ್ ಪಾತ್ರದ ಜೊತೆಯಾಗಿ – ಬೆಂಬಲವಾಗಿ ನಿಲ್ಲುವ ಸಪೋರ್ಟಿಂಗ್ ಪಾತ್ರಗಳಿ ಮತ್ತು ಆ ನಾಯಕ/ನಾಯಕಿ ಪಾತ್ರದ ಪಯಣದಲ್ಲಿ ಸವಾಲುಗಳನ್ನು ತಂದೊಡ್ಡುವ ಆ್ಯಂಟಗನಿಸ್ಟ್ ಪಾತ್ರಗಳೂ ಇದ್ದಾಗಲೇ ಕತೆಯು ಪೂರ್ಣ ಎನಿಸುವುದು. ಅದಿಲ್ಲದೆ ಇರುವ ಕತೆಗಳು ನೋಡುಗರನ್ನು ಗೆದ್ದ ಉದಾಹರಣೆಯೇ ಇಲ್ಲ.
  1. ಸಾಮಾಜಿಕ ಅಂಶಗಳನ್ನು ಸೇರಿಸುವಾಗ ನೈಜತೆಗೆ ಎಷ್ಟು ಒತ್ತು ನೀಡುತ್ತೀರಿ (ನೈಜ ಘಟನೆ ಆಧಾರದ ಮೇಲೆ, ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಅಥವಾ ಪಾತ್ರದ ಅನಿವಾರ್ಯತೆ)
  • “ನೈಜ” (ರಿಯಲ್) ಅನಿಸದಿದ್ದರೆ ಅದೆಂತಹ ಕತೆಯಾದರೂ ನೋಡುಗರಿಗೆ ತಾಗುವುದಿಲ್ಲ. ಚಿತ್ರ ಅಥವಾ ದೃಶ್ಯ ಮಾಧ್ಯಮದ ಯಾವುದೇ ಕೃತಿ ತಯಾರಿಕೆಗೆ ಬೇಕಾದ ಮೂಲ ದ್ರವ್ಯವು ನೈಜತೆ. ಆ ಕೃತಿಯು ಪುರಾಣದ್ದಾದರೂ, ಐತಿಹಾಸಿಕ ಆದರೂ, ಜನಪದೀಯ ಆದರೂ ಸರಿ ತೆರೆಯ ಮೇಲೆ ಮೂಡುವ ದೃಶ್ಯವು “ನಿಜ” ಅನಿಸದಿದ್ದರೆ ನೋಡುಗ ವಿಮುಖನಾಗುತ್ತಾನೆ. ಅದಕ್ಕೆ ಹಲವು ಇತ್ತೀಚಿನ ಉದಾಹರಣೆ (ಆದಿಪುರುಷ್, ಇತ್ಯಾದಿ) ಗಮನಿಸಬಹುದು.

ಈ ವರೆಗೆ ಕೇಳಿರುವ ಪ್ರಶ್ನೆಗಳ ಹಿನ್ನೆಲೆಯಲ್ಲಿ ಗಮನಿಸಿ, ನನ್ನ ಹಾಗೂ ನನ್ನ ಸಂಸ್ಥೆಯ ಈ ವರೆಗಿನ ಕೆಲಸಗಳನ್ನು ಗಮನಿಸುವುದಾದರೆ; ನಾವು ಚಿತ್ರ ತಯಾರಿಕೆಗೆ ಆರಿಸಿಕೊಳ್ಳುವ ಎಲ್ಲಾ ಕತೆಗಳು ನೈಜ ಘಟನೆಗಳನ್ನು ಆಧರಿಸಿ ಕಟ್ಟಿದ ಕಥನಗಳೇ ಆಗಿವೆ. “ಅರ್ಥ” (೨೦೦೨) ಸಿನಿಮಾವು ಮುಂಬಯಿಯ ಟ್ಯಾಕ್ಸಿ ಡ್ರೈವರ್ ಒಬ್ಬಾತನ ಬದುಕಿನಲ್ಲಿ, ೧೯೯೨ರ ಬಾಬ್ರಿ ಮಸೀದಿ ಕೆಡವಿದ ನಂತರದ ಗಲಭೆಗಳಲ್ಲಿ ನಡೆದದ್ದು. ಆ ಘಟನೆಯ ಮತ್ತು ಆ ವ್ಯಕ್ತಿಯ ಕುರಿತ ದಿನಪತ್ರಿಕೆಯೊಂದರ (ಟೈಮ್ಸ್ ಆಫ್ ಇಂಡಿಯಾ/ ವರದಿಗಾರ: ಖಾಲಿದ್ ಮೊಹಮ್ಮದ್) ವರದಿಯನ್ನು ಆಧರಿಸಿದ ಕತೆಯೊಂದನ್ನು ೨೦೦೨ರ ಗಲಭೆಗಳ ಜೊತೆಗೆ ಸಮೀಕರಿಸಿ ಬರೆದದ್ದು. ೨೦೦೨-೩ರಲ್ಲಿ ಹೊಸದಾಗಿ ಆರಂಭವಾಗಿದ್ದ ಚತುಷ್ಪಥ ಹೈವೇ ಪ್ರಯಾಣದಲ್ಲಿ ಸ್ವತಃ ಆದ ಅನುಭವಗಳನ್ನು ಜೋಡಿಸಿ, ನಾಗತಿಹಳ್ಳಿ ಚಂದ್ರಶೇಖರ್ ಅವರ ಮೂಲ ಕತೆಗೆ ನನ್ನದೇ ಅಕಾರ ಕೊಟ್ಟು ೨೦೧೦ರಲ್ಲಿ ರೂಪಿಸಿದ್ದು “ಪುಟ್ಟಕ್ಕನ ಹೈವೇ”. ೧೯೯೬ರಲ್ಲಿ ಕರಾವಳಿಯ ಒಂದು ಊರಲ್ಲಿ ನಡೆದ ಘಟನೆ ಆಧರಿಸಿ ೨೦೧೫ರಲ್ಲಿ “ದೇವರ ನಾಡಲ್ಲಿ” ಸಿನಿಮಾ ಕಟ್ಟಿದೆವು. ೨೦೦೭-೮ರಲ್ಲಿ ಬಾಗಲಕೋಟೆ – ಬಾದಾಮಿ ರಸ್ತೆಯಲ್ಲಿ ಕಣ್ಣಾರೆ ಕಂಡ ವಿವರವು ೨೦೧೬ರಲ್ಲಿ “ಉಪ್ಪಿನ ಕಾಗದ” ಎಂಬ ಸಿನಿಮಾ ಆಯಿತು. ಹೊಸ ಶತಮಾನದ ಆರಂಭದಲ್ಲಿ ಚಳ್ಳಕೆರೆ – ಚಿತ್ರದುರ್ಗದ ನಡುವಿನ ಗಾಣಗಳು ಮುಚ್ಚಲು ಶುರುವಾದ ಕಾಲದಲ್ಲಿ ನಡೆದ ಹೋರಾಟಗಳ ಹಿನ್ನೆಲೆಯಲ್ಲಿ ೨೦೧೯ರಲ್ಲಿ “ಯಜಮಾನ” ಚಿತ್ರ ರೂಪಿಸಲಾಯಿತು. ೨೦೧೩-೧೪ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಂಡ ವಿದ್ಯಮಾನಗಳು ೨೦೨೩ರಲ್ಲಿ ಬಿಡುಗಡೆಯಾದ “ಕ್ರಾಂತಿ” ಸಿನಿಮಾಗೆ ಕಥಾ ಹೂರಣ ಒದಗಿಸಿತ್ತು.

ಹೀಗೆ ನೈಜ ಘಟನೆ ಆಧರಿಸಿ ಕಥನ ರೂಪಿಸಲು ಇರುವ ಪ್ರಧಾನ ಕಾರಣ ಹೋರಾಟಗಳ ಮೂಲಕವೇ ರೂಪುಗೊಂಡ ನನ್ನ ವ್ಯಕ್ತಿತ್ವ. ಈ ಬಗೆಯ ಘಟನೆಗಳ ನಡುವೆಯೇ ಕತೆಯ ಹೂರಣ ಹಾಗೂ ಕಥಾನಾಯಕ ಸಿಗುತ್ತಿರುವುದು ಎರಡನೆಯ ಕಾರಣ. ಮೂರನೆಯ ಬಹುಮುಖ್ಯ ಕಾರಣ; ನನ್ನ ಕಾಲದ ನೋಡುಗರಿಗೆ ನನ್ನ ತಿಳುವಳಿಕೆಯನ್ನು ದಾಟಿಸಬೇಕೆಂಬ ಅಪೇಕ್ಷೆ. ಈ ಕಡೆಯ ಕಾರಣವೇ ಉಳಿದೆಲ್ಲ ಕೆಲಸಗಳಿಗೂ ಪ್ರೇರಣೆ.

  1. ಸಾಮಾಜಿಕ ಅಂಶಗಳನ್ನು ಚಲನಚಿತ್ರದಲ್ಲಿ ಸೇರಿಸಲು ನಿಮಗೆ ಪ್ರೇರೇಪಣೆ/ಪ್ರಭಾವಿಸಿದ ಅಂಶಗಳು ಯಾವುವು? 
  • ಈ ಪ್ರಶ್ನೆಗೆ ಅದಾಗಲೇ ನೀಡಿರುವ ಉತ್ತರಗಳಲ್ಲಿಯೇ ಉತ್ತರ ಅಡಗಿದೆ. ಆದರೂ ಮಾತಿಗಾಗಿ ಕೆಲ ವಿವರ ಹೇಳುವೆ.

ಯಾವುದೇ ಕೃತಿಕಾರ ಆಯಾ ಸಮಾಜದ ಸಾಂಸ್ಕೃತಿಕ ವಾತಾವರಣದ ಶಿಶು ಆಗಿರುತ್ತಾನೆ. ತನ್ನ ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿಯೇ ತನ್ನ ಕೃತಿಗಳನ್ನು ಸಿದ್ಧಪಡಿಸುತ್ತಾನೆ. ಆ ಮಾತಿಗೆ ಎಲ್ಲಾ ಸಿದ್ಧಾಂತಗಳ ಬೆಂಬಲಿಗರಾದವರ ಕೃತಿಗಳೂ ಹೊರತಲ್ಲ. ವಿವೇಕ್ ಅಗ್ನಿಹೋತ್ರಿಯ “ಕಾಶ್ಮೀರ್ ಫೈಲ್ಸ್” ಆತನ ಸಿದ್ಧಾಂತದ ಫಲವಾದರೆ, ರಾಹುಲ್ ದೋಲಾಕಿಯಾನ “ಪರ್ಝಾನಿಯ” ಆತನ ನಿಲುವುಗಳನ್ನು ದಾಟಿಸುವ ಕೃತಿ.

ನಾನು ಅಥವಾ ನನ್ನ ಸಂಸ್ಥೆ ತಯಾರಿಸುವ ಕೃತಿಗಳೂ ಸಹ ನನ್ನ ರಾಜಕೀಯ ಸಾಮಾಜಿಕ ನಿಲುವುಗಳಿಂದ ಪ್ರೇರಿತ. ಈ ಕೃತಿಗಳು ತಮ್ಮ ನಿಲುವುಗಳ ಮೂಲಕವೇ ನಮ್ಮ ಸುತ್ತಲಿನ ವಿದ್ಯಮಾನ ಕುರಿತು ಸ್ಪಷ್ಟ ಸಂದೇಶ/ಮಾಹಿತಿಯನ್ನು ನೋಡುಗರಿಗೆ ದಾಟಿಸುತ್ತವೆ. ಅದರ ಪರಿಣಾಮ ಸಹ ಅದೇ ಕ್ರಮದಲ್ಲಿ ಸಮಾಜದಲ್ಲಿ ಕಾಣಿಸುತ್ತದೆ. “ಯಜಮಾನ” ದಂತಹ ಸಿನಿಮಾವು ನಮ್ಮ ನಾಡಿನಲ್ಲಿ ನೈಜವಾಗಿ ಎಣ್ಣೆ ತೆಗೆಯುವ ಗಾಣಗಳನ್ನು ಹಲವರು ಆರಂಭಿಸಲು ಕಾರಣವಾದಂತೆ, “ಕ್ರಾಂತಿ” ಸಿನಿಮಾ ಕಂಡ ಅನಿವಾಸಿಯರು ಹಾಗೂ ಶ್ರೀಮಂತರು ಸರ್ಕಾರಿ ಶಾಲೆಗಳ ನವೀಕರಣಕ್ಕೆ, ಅಭಿವೃದ್ಧಿಗೆ ಬೆಂಬಲ ನೀಡುವುದು ಹೆಚ್ಚಾಗಿರುವುದನ್ನು ಸಹ ಕಾಣಬಹುದು.

ಹೀಗೆ ಒಂದು ಸಮಾಜದಲ್ಲಿ ಸಣ್ಣ ಬದಲಾವಣೆ ತರುವುದಕ್ಕೆ ರಂಜನೆಯೇ ಪ್ರಧಾನವಾದ ಮಾಧ್ಯಮವನ್ನು ಬಳಸಿಕೊಳ್ಳುವ ಆನಂದ ಕೃತಿಕಾರನದ್ದಾಗಿರುತ್ತದೆ.

  1. ಸಾಮಾಜಿಕ ಅಂಶಗಳನ್ನು ಚಲನಚಿತ್ರದಲ್ಲಿ ಸೇರಿಸಲು ನಾಯಕ ಅಥವಾ ನಾಯಕಿ ನಿಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತಾರೆ?
  • ಯಾವುದೇ ಅಂಶಗಳನ್ನು ತೆರೆಗೆ ತರಲು ಕಲಾವಿದರಿಂದ ಪ್ರಭಾವ, ಒತ್ತಡ ಬರುವುದು ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಆದರೆ ಒಂದು ಚಿತ್ರಕತೆ ಸಿದ್ಧವಾದ ನಂತರ ಆ ಬಗ್ಗೆ ತಿಳಿದ ಗೆಳೆಯರು ತಮಗೆ ಇಂತಹ ಪಾತ್ರ ಸಿಗಬೇಕು ಎಂದು ಹಲ ಬಗೆಯ ಒತ್ತಡ ತರುವುದುಂಟು. ಉದಾಹರಣೆಗೆ ನನ್ನ ನಿರ್ದೇಶನದ “ಪುಟ್ಟಕ್ಕನ ಹೈವೇ” ಚಿತ್ರದಲ್ಲಿ ಶನಿಕತೆ ಹೇಳುವ ಕೃಷ್ಣ ಎಂಬ ಪಾತ್ರಕ್ಕಾಗಿ ನಾನು ಕರಿಬಸವಯ್ಯ ಅವರನ್ನು ಆಯ್ದುಕೊಂಡಿದ್ದೆ. ಆದರೆ ಚಿತ್ರಕತೆ ಓದಿದ ನಂತರ ಆ ಪಾತ್ರ ತಾನೇ ಮಾಡುವುದಾಗಿ ಪ್ರಕಾಶ್ ರೈ ನಿರ್ಮಾಣ ಪಾಲುದಾರರಾಗಿಯೂ ಬಂದಿದ್ದು ಕಂಡಿದ್ದೇನೆ. ಹಾಗೆಯೇ ಹಲವು ಉದಾಹರಣೆಗಳು ಹಲವು ಸಿನಿಮಾಗಳ ಹಿನ್ನೆಲೆಯಲ್ಲಿ ಸಿಗಬಹುದು.
    ಈ ಒತ್ತಡಗಳು ‘ಇಂತಹದೇ ಕತೆಯನ್ನು ಚಿತ್ರ ಮಾಡಬೇಕು’ ಎಂದು ಬಂದುದು ಕನ್ನಡ ಚಿತ್ರಗಳ ಇತಿಹಾಸದಲ್ಲಿ ಇದ್ದಂತಿಲ್ಲ. ರಾಜಕುಮಾರ್ ಅವರು ತಾವು ಕಂಡಿದ್ದ, ಅಭಿನಯಿಸಿದ್ದ ಕೆಲವು ವೃತ್ತಿ ರಂಗಭೂಮಿಯ ನಾಟಕಗಳನ್ನು ತೆರೆಗೆ ತರಲು ಬಿನ್ನೈಸುತ್ತಿದ್ದರು ಎಂದು ಕೇಳಿದ್ದೇನೆ. ಇಂತಹ ಅಪರೂಪದ ಸ್ವಾನುಭವ ನನಗಾಗಿಲ್ಲ.

8.ಸಾಮಾಜಿಕ ಅಂಶಗಳನ್ನೊಳಗೊಂಡ ಚಲನಚಿತ್ರಗಳಿಗೆ ಸರಕಾರ ಅಥವಾ ಸಂಬಂಧಪಟ್ಟ ಇಲಾಖೆ/ ಸಂಸ್ಥೆಗಳ ಸಹಕಾರ ಯಾವ ರೀತಿ ಇದೆ.

  • ಕರ್ನಾಟಕ ಸರ್ಕಾರವು ೧೯೬೦ರ ದಶಕದಿಂದ ಒಳ್ಳೆಯ ಚಿತ್ರಗಳಿಗೆ ಪ್ರಶಸ್ತಿ ಕೊಡುವ ಅಭ್ಯಾಸ ಇದೆ. ಅದರಲ್ಲಿ ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರಕ್ಕೆ ಪ್ರತ್ಯೇಕ ಪ್ರಶಸ್ತಿ ಸಹ ಇದೆ. ಹಾಗೆಯೇ ಪ್ರತಿ ವರ್ಷ ತಯಾರದ ಚಿತ್ರಗಳಲ್ಲಿ ನೂರ ಇಪ್ಪತ್ತೈದು ಚಿತ್ರಗಳಿಗೆ ಹತ್ತು ಲಕ್ಷ ರೂ. ಸಹಾಯಧನ ನೀಡುವ, ಸಾಹಿತ್ಯ ಕೃತಿ ಅಧಾರಿತ ನಾಲ್ಕು ಚಿತ್ರಕ್ಕೆ ರೂ. ಇಪ್ಪತ್ತೈದು ಲಕ್ಷ ಸಹಾಯಧನ ನೀಡುವ ಪರಿಪಾಠ ಇದೆ. (ಈ ವಿಷಯ ದಾಖಲಿಸುವಾಗ ೨೦೧೯ರ ನಂತರ ಪ್ರಶಸ್ತಿ ಗಳನ್ನು ಕೊಡಮಾಡಿಲ್ಲ. ೨೦೧೮ ರಿಂದ ಸಹಾಯಧನವನ್ನು ನೀಡಿಲ್ಲ ಎಂಬುದು ಸಹ ನೆನಪಲ್ಲಿರಬೇಕು.)

ಅದರೆ, ನಿಮ್ಮ ಪ್ರಶ

ಸಂಘಸುಖ – ಕೃತ್ರಿಮಗಳ ನಡುವೆ ವಾಸ್ತವಗಳ ನರಳಾಟ – ೨೦೨೩ರ ಆಗಸ್ಟ್‌ ತಿಂಗಳ ಟಿವಿಠೀವಿ ಪತ್ರಿಕೆಗಾಗಿ ಬರೆದ ಲೇಖನ

ಸಂಗಾತಿಗಳೇ,

ನಿಮ್ಮೊಡನೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವ ಈ ವೇದಿಕೆಯನ್ನು ಅವಕಾಶ ಸಿಕ್ಕಾಗೆಲ್ಲಾ ಬಳಸಿಕೊಳ್ಳುವ ಇರಾದೆ ನನ್ನದು. ನನಗೆ ಬಿಡುವು ದೊರೆತಂತೆಲ್ಲಾ ನಿಮ್ಮಡನೆ ಸಮಕಾಲೀನವಾಗಿ ಈ ಉದ್ಯಮದಲ್ಲಿ ಜಾಗತಿಕವಾಗಿ ಆಗುತ್ತಾ ಇರುವ ಬೆಳವಣಿಗೆಗಳು ಮತ್ತು ಅವುಗಳು ನಮ್ಮ ಮೇಲೆ ಮಾಡಬಹುದಾದ ಪರಿಣಾಮಗಳನ್ನು ಕುರಿತು ಕೆಲವು ಟಿಪ್ಪಣಿಗಳನ್ನು ಹಂಚಿಕೊಳ್ಳುತ್ತಾ ಇರುತ್ತೇನೆ. ಎಂದಾದರೊಂದು ತಿಂಗಳು ನನ್ನ ಕೆಲಸದ ಒತ್ತಡದಿಂದ ಈ ಟಿಪ್ಪಣಿ ಹಂಚುವಿಕೆ ಸಾಧ್ಯವಾಗದೆ ಹೋದಲ್ಲಿ ಬೇಸರಿಸಿಕೊಳ್ಳಬೇಡಿ.

Continue reading ‘ಸಂಘಸುಖ – ಕೃತ್ರಿಮಗಳ ನಡುವೆ ವಾಸ್ತವಗಳ ನರಳಾಟ – ೨೦೨೩ರ ಆಗಸ್ಟ್‌ ತಿಂಗಳ ಟಿವಿಠೀವಿ ಪತ್ರಿಕೆಗಾಗಿ ಬರೆದ ಲೇಖನ’

ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 111,092 ಜನರು